ಹಚ್ಚೇವು ಕನ್ನಡದ ದೀಪ
ಕರುನಾಡದೀಪ
ಸಿರಿನುಡಿ ಯದೀಪ
ಒಲವೆತ್ತಿ ತೋರುವಾ ದೀಪ | ಹಚ್ಚೇವು
ಇಂದಿನ ಕಥೆ
ಆಶ್ವಯುಜಮಾಸ,ಶುಕ್ಲಪಕ್ಷ,ತ್ರಯೋದಶೀ.

ಆಂಡ್ರೋಕ್ಲೀಸ್ ಮತ್ತು ಸಿಂಹ

ಆಂಡ್ರೋಕ್ಲೀಸ್ ಎಂಬ ಗುಲಾಮನ ಯಜಮಾನ ಕ್ರೂರಿ. ಒಂದು ದಿನ ರಾತ್ರಿ ಮನೆಯಿಂದ ತಪ್ಪಿಸಿಕೊಂಡು ಆಂಡ್ರೋಕ್ಲೀಸನು ಕಾಡಿಗೆ ಓಡಿಹೋದ. ಬೆಳಗಾದಂತೆ ಸಿಂಹವೊಂದು ನರಳುತ್ತಾ ಕುಳಿತಿರುವುದು ಅವನಿಗೆ ಕಾಣಿಸಿತು. ``ನಿನಗೇನಾಗಿದೆ ಸಿಂಹ?" ಎಂದು ಕೇಳಿದ ಆಂಡ್ರೋಕ್ಲೀಸ್. ಸಿಂಹ ತನ್ನ ಊದಿದ ಕಾಲನ್ನು ಅವನ ಮುಂದೆ ಹಿಡಿಯಿತು. ಆಂಡ್ರೋಕ್ಲೀಸನು ಅದರಲ್ಲಿ ನೆಟ್ಟಿದ್ದ ಮುಳ್ಳನ್ನು ತೆಗೆದುಹಾಕಿದ.

ಸಿಂಹ ಕೃತಜ್ಞತೆಯಿಂದ ಅವನನ್ನು ತನ್ನ ಗವಿಗೆ ಕರೆದುಕೊಂಡು ಹೋಯಿತು. ಅಲ್ಲಿ ಅವನಿಗೆ ಬೇಕಾದ ಆಹಾರವನ್ನು ತಂದುಕೊಟ್ಟಿತು. ಆ ರೀತಿ ಅವರಿಬ್ಬರೂ ಬಹಳ ಸ್ನೇಹದಿಂದ ಇದ್ದರು.

ಒಂದು ದಿನ ರಾಜನೊಬ್ಬ ಬೇಟೆಗೆ ಬಂದಾಗ ಸಿಂಹವೂ ಆಂಡ್ರೋಕ್ಲೀಸನೂ ಅವನಿಗೆ ಸೆರೆ ಸಿಕ್ಕಿದರು. ಊರು ತಲುಪಿದ ಬಳಿಕ ರಾಜ ಆಜ್ಞೆಮಾಡಿದ.

``ಆ ಸಿಂಹಕ್ಕೆ ಮೂರು ದಿನ ಆಹಾರ ಕೊಡ್ಬೇಡಿ. ಅನಂತರ ಅದನ್ನು ಪಂದ್ಯಕಣಕ್ಕೆ ಬಿಡಿ. ಅಲ್ಲಿ ಇರುವ ಗುಲಾಮನನ್ನು ಅದು ತಿಂದುಹಾಕಲಿ."

ಅದರಂತೆಯೇ ಹಸಿದ ಸಿಂಹ ಆಕಾಶ ಬಿರಿಯುವಂತೆ ಗರ್ಜಿಸುತ್ತಾ ಕಣದೊಳಗೆ ಬಂತು. ಹೆದರುತಾ ನಿಂತಿದ್ದ ಆಂಡ್ರೋಕ್ಲೀಸನನ್ನು ನೋಡಿದೊಡನೆಯೇ ಅವನು ತನ್ನ ಸ್ನೇಹಿತ ಎಂಬುದು ಅದಕ್ಕೆ ತಿಳಿಯಿತು. ಸಿಂಹ ಅವನ ಹತ್ತಿರ ಬಂದು ಅವನ ಕೈಯನ್ನು ನೆಕ್ಕಿತು.

ಇದನ್ನು ಕಂಡ ರಾಜ ತುಂಬಾ ಆಶ್ಚರ್ಯಪಟ್ಟ. ಅವನು ಸಿಂಹವನ್ನೂ ಆಂಡ್ರೋಕ್ಲೀಸನನ್ನೂ ಬಿಡುಗಡೆ ಮಾಡಿದ.