ಹಚ್ಚೇವು ಕನ್ನಡದ ದೀಪ
ಕರುನಾಡದೀಪ
ಸಿರಿನುಡಿ ಯದೀಪ
ಒಲವೆತ್ತಿ ತೋರುವಾ ದೀಪ | ಹಚ್ಚೇವು
ಇಂದಿನ ಕಥೆ
ಚೈತ್ರ ಮಾಸ, ಶುಕ್ಲ ಪಕ್ಷ, ದಶಮಿ.

ಮೆದುಳಿಲ್ಲದ ಕತ್ತೆ

ಒಂದು ಕಾಡಿನಲ್ಲಿ ಮುದಿ ಸಿಂಹವೊಂದಿತ್ತು. ಪ್ರಾಣಿಗಳನ್ನು ಬೇಟೆ ಆಡಲು ಮೈಯಲ್ಲಿ ಶಕ್ತಿಯಿಲ್ಲವಾದುದರಿಂದ ತನ್ನ ಹಸಿವನ್ನು ಇಂಗಿಸಿಕೊಳ್ಳಲು ಅದು ಒಂದು ಉಪಾಯ ಮಾಡಿತು. ನರಿಯನ್ನು ಹತ್ತಿರ ಕರೆದು, ``ನರಿರಾಯಾ, ನೀನು ತುಂಬಾ ಜಾಣ. ಇವತ್ತಿನಿಂದ ನೀನು ನನ್ನ ಮುಖ್ಯಮಂತ್ರಿಯಾಗಿರು"ಎಂದಿತು. ಅದಕ್ಕೆ ಇದಿರು ಉತ್ತರ ಹೇಳಲಾರದೆ ನರಿ, ``ಆಗಲಿ ಮಹಾಪ್ರಭೂ" ಎಂದಿತು. ಸಿಂಹ ನುಡಿಯಿತು: ``ರಾಜನಾದ ನಾನು ಪ್ರಾಣಿಗಳ ಬೇಟೆಗೆ ಹೋಗೋದು ಚೆನ್ನಾಗಿ ಕಾಣಿಸೊಲ್ಲ. ಆದ್ದರಿಂದ ಮಂತ್ರಿಯಾದ ನಿನ್ನ ಕರ್ತವ್ಯವೆಂದರೆ ದಿನವೂ ಒಂದೊಂದು ಪ್ರಾಣೀನ ನಂಗೆ ತಂದು ಕೊಡೋದು."

ನರಿ ಸಿಂಹಕ್ಕೆ ಆಹಾರ ಹುಡುಕಿಕೊಂಡು ಕಾಡಿನೊಳಗೆ ಹೋಯಿತು. ಸ್ವಲ್ಪದೂರ ಹೋಗುವುದರೊಳಗೆ ಕೊಬ್ಬಿದ ಕತ್ತೆಯೊಂದು ಅದರ ಕಣ್ಣಿಗೆ ಬಿತ್ತು. ನರಿ ಅದರ ಹತ್ತಿರ ಹೋಗಿ ``ಕತ್ತೆರಾಯಾ, ನಿನ್ನನ್ನು ಹುಡುಕಿಕೊಂಡು ಕಾಡೆಲ್ಲಾ ಸುತ್ತಿದೆ. ನಮ್ಮ ಸಿಂಹರಾಜ ನಿನ್ನನ್ನು ಮುಖ್ಯಮಂತ್ರಿಯಾನ್ನಾಗಿ ನೇಮಕ ಮಾಡ್ಕೊಂಡಿದ್ದಾರೆ ನಿನ್ನನ್ನ ನೋಡ್ಬೇಕೂಂತ ಅವ್ರು ತುಂಬಾ ಆಸೆಪಡ್ತಿದ್ದಾರೆ ಬಾ"ಎಂದಿತು. ಕತ್ತೆ ಬೆದರಿ "ಅಯ್ಯೋ ಸಿಂಹ ರಾಜನೇ? ಅವರನ್ನು ಕಂಡರೆ ನಂಗೆ ಪ್ರಾಣಭಯವಪ್ಪಾ, ನಾನು ಬರೋಲ್ಲ" ಎಂದಿತು "ಮುರ್ಖ, ಭಾಗ್ಯದ ಲಕ್ಷ್ಮಿ ಬಾಗಿಲಿಗೆ ಬಂದಿರೋವಾಗ ಒದೀತಾರೇನಯ್ಯಾ? ಹೇದರ್ಕೋಬೇಡ. ಬಾ ನಾನಿದೀನಿ"ಎಂದು ಉಪಾಯವಾಗಿ ನರಿ ಕತ್ತೆಯನ್ನು ಕರೆದು ಕೊಂಡು ಹೋಯಿತು.

ಸಿಂಹ ಕಣ್ಣಿಗೆ ಬೀಳುತ್ತಲೇ ಕತ್ತೆ ನಿಂತಲ್ಲಿಯೇ ನಿಂತಿತು. ``ಹೊಸ ಮುಖ್ಯಮತ್ರಿಗಳಿಗೆ ನಿಮ್ಮನ್ನು ಕಂಡರೆ ನಾಚಿಕೆ,ಭಯ, ಸಿಂಹರಾಜ" ಎಂದಿತು. ನರಿ. ``ಭಯವೇಕೆ ನಾನೇ ಮಂತ್ರಿಯ ಹತ್ತಿರ ಬರ್ತೀನಿ"ಎಂದು ಸಿಂಹ ಎಗರಿದಾಗ ಕತ್ತೆ ಕಾಲಿಗೆ ಬುದ್ಧಿ ಹೇಳಿತು.

ತನ್ನ ಆಹಾರ ಮಾಯವಾದದ್ದನ್ನು ಕಂಡು ಸಿಂಹಕ್ಕೆ ವಿಪರೀತ ಸಿಟ್ಟು ಬಂತು. ನರಿಯು ``ನೀವು ಅವಸರ ಮಾಡಬಾರ್ದಾಗಿತ್ತು. ಕತ್ತೇನ ಉಪಾಯವಾಗಿ ನಾನು ನಿಮ್ಮ ಹತ್ತಿರ ಕರೆದುಕೊಂಡು ಬರ್ತಿದ್ದೆ" ಎಂದು ನಿಷ್ಠುರವಾಗಿ ನುಡಿದು ಮತ್ತೆ ಕತ್ತೆಯನ್ನು ಹುಡುಕಿಕೊಂಡು ಹೋಯಿತು. ಅದು ಕಾಣಿಸಿದೊಡನೆ ``ಎಂಥ ಮೂರ್ಖತನದ ಕೆಲಸ ಮಾಡಿದೆ ಕತ್ತೆರಾಯ, ರಾಜರು ನಿನ್ನ ಹತ್ತಿರ ಏನೋ ಗುಟ್ಟು ಹೇಳಲು ಬಂದರೆ ನೀನು ಓಡಿಬಿಡೋದೆ? ಬಾ, ಬಾ" ಎಂದು ಅದನ್ನು ಮತ್ತೆ ಕರೆದುಕೊಂಡು ಬಂದಿತು.

ಈ ಬಾರಿ ಕತ್ತೆ ಧೈರ್ಯವಾಗಿ ಸಿಂಹದ ಹತ್ತಿರ ಬಂತು. ರಾಜನ ಬಳಿ ಮಾತನಾಡಲೆಂದು ಅದು ಇನ್ನೇನು ಬಾಯಿ ತೆಗೆಯಬೇಕು,ಅಷ್ಟರಲ್ಲಿ ಸಿಂಹ ಚಂಗನೆ ಹಾರಿ ಅದರ ಕೊರಳನ್ನು ಕಚ್ಚಿ ಸಾಯಿಸಿತು.

ಸಿಂಹಕ್ಕೆ ತುಂಬಾ ಹಸಿವಾಗಿದ್ದುದರಿಂದ ಕತ್ತೆಯನ್ನು ತಿನ್ನಲು ಅದು ಸಿದ್ಧವಾಗುತ್ತಿದ್ದ ಹಾಗೆಯೇ ನರಿ ಹೇಳಿತು: ``ರಾಜರು ಊಟಕ್ಕೆ ಮುಂಚೆ ಸ್ನಾನ ಮಾಡೋದು ಧರ್ಮ." ``ಹೌದಲ್ಲವೆ? ಈ ಕತ್ತೆಯನ್ನು ಯಾರೂ ಮುಟ್ಟದ ಹಾಗೆ ನೋಡ್ಕೋ ನರಿರಾಯ"ಎಂದು ಹೇಳಿ ಸಿಂಹ ಸ್ನಾನಕ್ಕೆಂದು ನದಿಗೆ ಹೋಯಿತು.

ಇತ್ತ ನರಿ ಕತ್ತೆಯ ಮೆದುಳನ್ನು ಬಗೆದು, ಅದು ತುಂಬಾ ರುಚಿಯಾಗಿದ್ದುದರಿಂದ ಚಪ್ಪರಿಸಿಕೊಂಡು ತಿಂದಿತು. ಸ್ನಾನ ಮುಗಿಸಿ ಬಂದ ಸಿಂಹ ಕತ್ತೆಯ ಮೆದುಳನ್ನು ಮೊದಲು ತಿನ್ನುವ ಉದ್ದೇಶದಿಂದ ಅದರ ತಲೆಯನ್ನು ಬಗೆದಾಗ ಆ ಜಾಗ ಖಾಲಿ ಯಾಗಿತ್ತು. ಆಗ ಸಿಂಹ ಸಿಟ್ಟಿನಿಂದ, ``ಕತ್ತೆಯ ಮೆದುಳನ್ನು ತಿಂದೋರು ಯಾರು?"ಎಂದು ಅಬ್ಬರಿಸಿತು.

ನರಿ ವಿನೀತವಾಗಿ ಮೆಲ್ಲನೆ ಹೇಳಿತು: ``ಕತ್ತೆಗೆ ಮೆದುಳಿಲ್ಲ ಅನ್ನೋದು ನಿಮಗೆ ಗೊತ್ತಿಲ್ಲವೇ ಸಿಂಹರಾಜ? ಅದಕ್ಕೆ ಮೆದುಳಿದ್ದಿದ್ದರೆ ಅದು ಎರಡನೆಯ ಸಾರೆ ನಿಮ್ಮ ಹತ್ತಿರ ಬರ್ತಿತ್ತೆ?"
``ಹೌದು, ನೀನು ಹೇಳುವುದು ಸರಿ"ಎನ್ನುತ್ತಾ ಉಳಿದ ಮಾಂಸವನ್ನು ತಿಂದಿತು ಸಿಂಹರಾಜ.