ಹಚ್ಚೇವು ಕನ್ನಡದ ದೀಪ
ಕರುನಾಡದೀಪ
ಸಿರಿನುಡಿ ಯದೀಪ
ಒಲವೆತ್ತಿ ತೋರುವಾ ದೀಪ | ಹಚ್ಚೇವು
ಇಂದಿನ ಕಥೆ
ಚೈತ್ರ ಮಾಸ, ಶುಕ್ಲ ಪಕ್ಷ, ತ್ರಯೋದಶಿ.

ಧನವಂತ-ಸತ್ಯವಂತ

ಒಂದು ಸಣ್ಣ ಹಳ್ಳಿ. ಅಲ್ಲಿ ಒಬ್ಬ ಮುದುಕಿಯೂ ಅವಳ ಮೊಮ್ಮಗಳೂ ವಾಸವಾಗಿದ್ದರು. ಈಗ ಮುದುಕಿಗೆ ಬಡತನವಿದ್ದರೂ ಒಂದಾನೊಂದು ಕಾಲದಲ್ಲಿ ಆಕೆ ಸಿರಿವಂತ ಕುಟುಂಬಕ್ಕೆ ಸೇರಿದ್ದಳು.

ಒಂದು ದಿನ ಬಣ್ಣದ ಆಟದ ಸಾಮಾನು, ಬೆಳ್ಳಿಯ ಸಾಮಾನುಗಳನ್ನು ಗಾಡಿಯಲ್ಲಿಟ್ಟುಕೊಂಡು ನೂಕುತ್ತಾ ವ್ಯಾಪಾರಕ್ಕಾಗಿ ಆ ಹಳ್ಳಿಗೆ ವರ್ತಕನೊಬ್ಬ ಬಂದ. ಅವನ ಹೆಸರು ಧನವಂತ. ಅವನು ತುಂಬಾ ದುರಾಸೆಯವನಾಗಿದ್ದನು. ಅವನ ಗಾಡಿ ಮುದುಕಿಯ ಮನೆ ಮುಂದೆ ಬಂದಾಗ ಮೊಮ್ಮಗಳು ಹೊರಗೆ ಹೋಗಿ ನೋಡಿದಳು. ಒಳಗೆ ಬಂದು, ``ಅಜ್ಜಿ, ನನಗೆ ಆಟದ ಕುದುರೆ ಕೊಡಿಸು"ಎಂದು ಕೇಳಿದಳು.
``ಅದನ್ನು ಕೊಂಡುಕೊಳ್ಳೋದಕ್ಕೆ ನಮ್ಮ ಹತ್ತಿರ ದುಡ್ದಿಲ್ಲ ಮಗು"ಎಂದಳು ಮುದುಕಿ. ಆಗ ಮೊಮ್ಮಗಳು:``ದುಡ್ದಿಲ್ಲದಿದ್ದರೆ ಮೂಲೆಯಲ್ಲಿ ಬಿದ್ದಿರೋ ಆ ಹಳೇತಟ್ಟೇನ ಕೊಟ್ಟುಬಿಡೋಣ"ಎಂದು ಸಲಹೆ ಮಾಡಿದಳು.

ಮುದುಕಿಗೂ ಅದು ಸರಿಯೆನಿಸಿತು. ಅವಳು ಆ ತಟ್ಟೆ ತಂದು ಧನವಂತನ ಕೈಲಿ ಕೊಟ್ಟು ``ಅಪ್ಪಾ, ಈ ತಟ್ಟೆ ತೆಗೆದುಕೊಂಡು ಆಟದ ಕುದುರೆ ಕೊಡಪ್ಪಾ"ಎಂದು ಕೇಳಿದಳು.

ಧನವಂತನಿಗೆ ಆ ತಟ್ಟೆ ಭಾರವಾಗಿ ಕಂಡಿತು. ಅದರ ಮೇಲೆ ಉಗುರಿನಿಂದ ಗೀರು ಹಾಕಿದ. ಹಳದಿ ಬಣ್ಣದ ಗೆರೆ ಮೂಡಿದುದರಿಂದ ಅದು ಚಿನ್ನದ್ದು ಎಂದು ಅವನಿಗೆ ಖಚಿತವಾಯಿತು. ಈ ಮುದುಕಿಗೆ ತಟ್ಟೆ ಚಿನ್ನದ್ದು ಎಂದು ಗೊತ್ತಿಲ್ಲ. ಇವಳಿಗೆ ಮೋಸ ಮಾಡೋಣ ಎಂದುಕೊಳ್ಳುತ್ತಾ ಅವನೆಂದ:
``ಮುದುಕಮ್ಮ, ಈ ಹಳೇ ತಟ್ಟೆಗೆ ಆಟದ ಕುದುರೆ ಬರೋಲ್ಲ. ಬೇಕಾದರೆ ಈ ಸಣ್ಣ ಆಟದ ಗುಬ್ಬಚ್ಚೀನ ಕೊಡ್ತೀನಿ." ಮೊಮ್ಮಗಳು ``ನಂಗೆ ಗುಬ್ಬಚ್ಚಿ ಬೇಡ. ಕುದುರೇನೇ ಬೇಕು"ಎಂದು ಹಟ ಹಿಡಿದಳು. ಧನವಂತ ಮುಂದೆ ಹೋದ.

ಸ್ವಲ್ಪ ಹೊತ್ತಾದ ಮೇಲೆ ಸತ್ಯವಂತನೆಂಬ ವ್ಯಾಪಾರಿ ಆ ಹಳ್ಳಿಗೆ ಬಂದ.
``ಅಜ್ಜಿ, ಇವನನ್ನೂ ಕೇಳೋಣವಾ?"ಎಂದು ಕೇಳಿದಳು ಮೊಮ್ಮಗಳು.

ಮುದುಕಿಯು ಸತ್ಯವಂತನನ್ನು ನೋಡಿ ``ಅಯ್ಯಾ, ಈ ಮಗು ಆಟದ ಕುದುರೆ ಬೇಕು ಅನ್ನುತ್ತಾಳೆ. ಈ ಹಳೇ ತಟ್ಟೆ ತೆಗೆದು ಕೊಂಡು ಅದನ್ನು ಕೊಡ್ತೀಯಾ?"ಎಂದು ಪ್ರಶ್ನಿಸಿದಳು.

ಸತ್ಯವಂತ ತಟ್ಟೆಯನ್ನು ಎತ್ತಿಕೊಂಡ. ಅದು ಭಾರ ಆಗಿದ್ದುದರಿಂದ ಗೀರು ಹಾಕಿ ಪರೀಕ್ಷಿಸಿದ. ಅದು ಚಿನ್ನದ್ದೆಂದು ತಿಳಿದಾಗ ಅವನೆಂದ;
``ಅಜ್ಜೀ, ಈ ತಟ್ಟೆ ಚಿನ್ನದ್ದು. ನನ್ನ ಗಾಡಿಯಲ್ಲಿರೋ ಸಾಮಾನನ್ನೆಲ್ಲಾ ಕೊಟ್ಟರೂ ಅದರ ಬೆಲೆಗೆ ಸಮನಾಗೋಲ್ಲ. ನನ್ನ ಗಾಡಿ ನಿಮ್ಮಲ್ಲೇ ಇರಲಿ. ನಾನು ಊರಿಗೆ ಹೋಗಿ ಉಳಿದ ಹಣ ತಂದುಕೊಟ್ಟು ತಟ್ಟೆ ತೆಗೆದುಕೊಂಡು ಹೋಗುತ್ತೇನೆ."

ಮುದುಕಿಯ ಬಾಯಿ ಕಟ್ಟಿ ಹೋಯಿತು. ``ಪುಣ್ಯಾತ್ಮ ನೂರು ವರ್ಷ ಬಾಳಪ್ಪಾ" ಎಂದು ಆಶೀರ್ವದಿಸಿದಳು.

ಸತ್ಯವಂತ ಅತ್ತ ಹೋದೊಡನೆ ಧನವಂತ ಬಂದ.
``ಅಜ್ಜಿ, ಎಲ್ಲಿ ಆ ತಟ್ಟೆ ಕೊಡು. ಮಗು ಕೇಳಿದ ಆಟದ ಕುದುರೇನ ತಕೋ"ಎಂದ.

ಮುದುಕಿ ಸಿಟ್ಟಿನಿಂದ ``ಮೋಸಗಾರ ವಂಚಕ ಹೋಗು ಹೋಗು. ಸಾವಿರಾರು ರೂಪಾಯಿ ಬೆಲೆಬಾಳುವ ತಟ್ಟೆಗೆ ಆಟದ ಕುದುರೇನ ಕೊಡ್ತಾನಂತೆ ಸತ್ಯವಂತ ಬರದೇ ಇದಿದ್ದರೆ ನಾವು ನಿನ್ನಿಂದ ಮೋಸ ಹೋಗ್ತಿದ್ದೆವು. ನಿನ್ನಂಥವರಿಗೆ ದೇವರು ಒಳ್ಳೇದು ಮಾಡೋದಿಲ್ಲ" ಎಂದು ಶಪಿಸಿಬಿಟ್ಟಳು.