ಹಚ್ಚೇವು ಕನ್ನಡದ ದೀಪ
ಕರುನಾಡದೀಪ
ಸಿರಿನುಡಿ ಯದೀಪ
ಒಲವೆತ್ತಿ ತೋರುವಾ ದೀಪ | ಹಚ್ಚೇವು
ಇಂದಿನ ಕಥೆ

ಸಿಂಪಿಗ ಮತ್ತು ಪಿಶಾಚಿಗಳು

ಒಂದೂರಿನಲ್ಲಿ ಒಬ್ಬ ಸಿಂಪಿಗನೂ ಒಬ್ಬ ನೇಕಾರನೂ ಇದ್ದರು. ಅವರಿಗೊಮ್ಮೆ ಆ ಊರು ಬೇಸರ ಬಂದು ಪ್ರಪಂಚ ಸುತ್ತಿಬರಲು ತೀರ್ಮಾನಿಸಿದರು. ನೇಕಾರ ಬರಿ ಕೈಲಿ ಹೊರಟ. ಸಿಂಪಿಗ ತನ್ನ ಗಜ ಕಡ್ದಿಯನ್ನೂ, ಕತ್ತರಿಯನ್ನೂ ತೆಗೆದುಕೊಂಡು ಹೊರಟ.

ಅವರು ಒಂದೆರಡು ದಿನ ನಡೆದರು. ನೇಕಾರನಿಗೆ ತನ್ನ ಮನೆಯ ನೆನಪಾಯಿತು. ``ನನ್ನ ಹೆಂಡತಿ ಮಕ್ಕಳು ಕನಸಿನಲ್ಲಿ ಬಂದಿದ್ದರಪ್ಪಾ, ನಾನು ಊರಿಗೆ ವಾಪ್ಸು ಹೋಗ್ತೀನಿ" ಎನ್ನುತ್ತಾ, ಅವನು ಹಿಂತಿರುಗಿ ಹೊರಟೇ ಹೋದ.

ಸಿಂಪಿಗನೊಬ್ಬನೇ ಮುಂದುವರೆದ. ಕತ್ತಲಾಗುವ ಹೊತ್ತಿಗೆ ಅವನು ಒಂದು ಗೊಡಾರಣ್ಯಕ್ಕೆ ಬಂದಿದ್ದ. ರಾತ್ರಿಯ ಹೊತ್ತು ಕೆಳಗೆ ಮಲಗುವುದಕ್ಕಿಂತ ಮರದ ಮೇಲಿದ್ದರೆ ವಾಸಿ ಎಂದು ಕೊಳ್ಳುತ್ತಾ ದಟ್ಟವಾದ ಮರದ ಬಳಿಗೆ ಹೋದ. ಆ ಮರಕ್ಕೆ ಏಣಿಯೊಂದನ್ನು ಒರಗಿಸಿ ಇಟ್ಟಿದ್ದರು. ಅನುಕೂಲವೇ ಆಯಿತು ಎಂದು ಸಿಂಪಿಗ ಏಣಿಯ ಮೆಟ್ಟಲುಗಳನ್ನು ಹತ್ತಿದ. ಹತ್ತಿದ, ಹತ್ತಿದ. ಆದರೆ ಮೆಟ್ಟಲು ಮುಗಿಯುವ ಸೂಚನೆಯೇ ಕಾಣಲಿಲ್ಲ. ಅವನ ಕಾಲು ಸೋಲುವ ಹೊತ್ತಿಗೆ ಗಟ್ಟಿ ನೆಲ ಸಿಕ್ಕಿತು. `ಸದ್ಯಕ್ಕೆ ಬದುಕಿದೆ. ಇನ್ನು ಮಲಗಿಬಿಡುತ್ತೇನೆ' ಎಂದುಕೊಂಡಾಗ ಬೆಳಕಿದ್ದ ಗುಡಿಸಲೊಂದು ಕಾಣಿಸಿತು.

ಸಿಂಪಿಗನನ್ನು ಕಂಡ ಕೂಡಲೇ ತಟ್ಟೆಮುಖದ, ಕೋರೆದಾಡೆಗಳಿದ್ದ ಪಿಶಾಚಿಯೊಂದು ಅಬ್ಬರಿಸುತ್ತಾ ಬಂತು. ಸಿಂಪಿಗನ ಎದೆ ನಡುಗಿತು. ಆದರೆ ಅವನು ಯುಕ್ತಿಗಾರ. ತಕ್ಷಣ ತನ್ನ ಕೈಯಲ್ಲಿದ್ದ ಕತ್ತರಿಯನ್ನು ಝಳಪಿಸುತ್ತಾ ನುಡಿದ:
``ಎಲೈ ಪಿಶಾಚಿ, ಬೇಗ ನನ್ನ ಹತ್ತಿರ ಬಾ. ದೇವರಿಗೆ ಚಳಿಗಾಲಕ್ಕೆ ಒಂದು ಕೋಟು ಹೊಲಿದುಕೊಡಬೇಕಂತೆ. ನಿನ್ನ ಚರ್ಮ ಸುಲಿದು, ಕೋಟಿನ ಅಳತೆಗೆ ಎಷ್ಟು ಬೇಕೋ ಅಷ್ಟನ್ನು ಕತ್ತರಿಸಿಕೋತೇನೆ"

ಪಿಶಾಚಿ ಆಕೃತಿ ದೊಡ್ಡದಾದರೂ ಬುದ್ಧಿ ಸೊನ್ನೆ. ಅದಕ್ಕೇ ಅದು ಹೆದರಿ ``ಅಯ್ಯಾ ಸಿಂಪಿಗನಿಂಗೆ ಒಂದು ಚೀಲ ಮುತ್ತು ರತ್ನ ಕೊಡ್ತೀನಿ. ದಮ್ಮಯ್ಯ, ನನ್ನನ್ನು ಬಿಟ್ಬಿಡು. ಬೇರೆ ಪಿಶಾಚೀನ ಹುಡುಕಿಕೋ ಹೋಗು"ಎನ್ನುತ್ತಾ ಗುಡಿಸಲಿನೊಳಗೆ ಹೋಗಿ ಒಂದು ಚೀಲವನ್ನು ತಂದುಕೊಟ್ಟಿತು. ಸಿಂಪಿಗ ಅದನ್ನು ತೆಗೆದು ಕೊಂಡು `ಜೀವ ಉಳಿಯಿತಲ್ಲಾ'ಎಂದುಕೊಳ್ಳುತ್ತಾ ಊರು ಸೇರಿದ.

ಅವನ ಸಾಹಸವನ್ನು ಕೇಳಿದ ನೇಕಾರ ``ಸಿಂಪಿಗ, ಈ ಸಾರಿ ನಾವಿಬ್ಬರೂ ಅಲ್ಲಿಗೆ ಹೋಗೋಣ ಬಾ"ಎಂದು ಕರೆದ.

ಸರಿ, ಇಬ್ಬರೂ ಮತ್ತೆ ಕಾಡಿಗೆ ಹೊರಟರು. ಏಣಿ ಹತ್ತಿ ಮೇಲೆ ಹೋದರು. ಈ ಸಾರೆ ಅಲ್ಲಿ ಗುಡಿಸಲಿಗೆ ಬದಲು ಮರವೊಂದಿತ್ತು. ಅದರ ಕೆಳಗೆ ಸುಮಾರು ಇಪ್ಪತ್ತು ಪಿಶಾಚಿಗಳು ಕುಳಿತು ಬೆಂಕಿ ಕಾಯಿಸಿಕೊಳ್ಳುತ್ತಾ ಏನನ್ನೋ ಪಠಸುತ್ತಿದ್ದುವು. ಅವನ್ನು ನೋಡುತ್ತಲೇ ನೇಕಾರ ಥರಥರ ನಡುಗುತ್ತಾ ಉರುಳುತ್ತಾ ಹೋಗಿ ಪಿಶಾಚಿಗಳ ಮಧ್ಯೆ ಬಿದ್ದ. ಸಿಂಪಿಗ ಧೈರ್ಯ ತಂದುಕೊಂಡು ಇದ್ದಕ್ಕಿದ್ದ ಹಾಗೆ ಕೂಗಿದ: ``ಹಿಡಿಹಿಡಿ ಅವನನ್ನ. ಇಗೋ ಗಜಕಡ್ಡಿ ಕತ್ತರಿ ತಗೊಂಡು ಬಂದೆ." ಪಿಶಾಚಿಗಳು ``ಅಯ್ಯೋ ಅಯ್ಯೋ"ಎಂದು ಕೂಗುತ್ತಾ ಚೆಲ್ಲಾಪಿಲ್ಲಿಯಾಗಿ ಓಡಿಹೋದುವು.

ಸಿಂಪಿಗ ಮತ್ತು ನೇಕಾರ ಮರದ ಕೆಳಗೆ ನೋಡಿದಾಗ ನಗ ನಾಣ್ಯಗಳ ಹತ್ತಾರು ಚೀಲಗಳಿದ್ದುವು. ಅವನ್ನಲ್ಲಾ ಹೊತ್ತು ಕೊಂಡು ಅವರಿಬ್ಬರೂ ಹಿಂತಿರುಗಿದರು. ಅಲ್ಲಿದ ಮುಂದೆ ಪಿಶಾಚಿಗಳ ನಿಧಿ ಅರಸಿಕೊಂಡು ಹೋಗದೆ ತಮ್ಮ ಊರಲ್ಲಿ ಸುಖವಾಗಿದ್ದರು.