ಹಚ್ಚೇವು ಕನ್ನಡದ ದೀಪ
ಕರುನಾಡದೀಪ
ಸಿರಿನುಡಿ ಯದೀಪ
ಒಲವೆತ್ತಿ ತೋರುವಾ ದೀಪ | ಹಚ್ಚೇವು
ಇಂದಿನ ಕಥೆ
ಚೈತ್ರ ಮಾಸ, ಶುಕ್ಲ ಪಕ್ಷ, ಬಿದಿಗೆ.

ಚಿನ್ನದ ಹೂಗಳ ಮರ

ಒಂದಾನೊಂದು ಕಾಲದಲ್ಲಿ ಒಂದೂರಿನಲ್ಲಿ ಏಳು ಜನ ಅಕ್ಕ ತಂಗಿಯರು ವಾಸವಾಗಿದ್ದರು. ಅವರಿಗೆ ತಂದೆ ತಾಯಿ ಇರಲಿಲ್ಲ. ಎಲ್ಲರಿಗಿಂತ ಹಿರಿಯಳಾದ ಅಕ್ಕ ಎಲ್ಲರನ್ನೂ ಆಳುತ್ತಿದ್ದಳು. ಆದರೆ ಕೆಲಸದ ಹೊರೆಯೆಲ್ಲಾ ಸಣ್ಣವಳ ಪಾಲಿಗೆ ಬೀಳುತ್ತಿತ್ತು. ಅವಳು ಪ್ರತಿದಿನವೂ ಮೈಲುಗಟ್ಟಲೆ ದೂರವಿದ್ದ ಕಾಡಿಗೆ ಹೋಗಿ ಮರಗಳಿಂದ ಸೌದೆ ಕಡಿದು ಅದನ್ನು ಹೊತ್ತುಕೊಂಡು ಮನೆಗೆ ಬರಬೇಕಾಗಿತ್ತು.

ಒಂದು ದಿನ ಕೆಲಸದಿಂದ ಆಯಸವಾಗಿ ಸಣ್ಣ ತೊರೆಯ ಬಳಿ ಮೈಮರೆತು ಕುಳಿತಾಗ ಕಾಮನಬಿಲ್ಲಿನ ಬಣ್ಣದ ಮೀನೊಂದು ಅವಳಿಗೆ ಕಾಣಿಸಿತು. ಅವಳು ಅದನ್ನು ಹಿಡಿದುಕೊಂಡು ಬಂದು ತನ್ನ ಮನೆಯ ಹತ್ತಿರವಿದ್ದ ಪುಟ್ಟ ತೊರೆಯಲ್ಲಿ ಅದನ್ನು ಬಿಟ್ಟಳು. "ಜಲಂಧರ, ಮನೆಯಿಂದ ನಿನಗೆ ಊಟ ತರ್ತೀನಿ" ಎಂದು ಹೇಳಿ ಮನೆಗೆ ಓಡಿದಳು. ತನ್ನ ಪಾಲಿನ ಊಟದಲ್ಲಿ ಅರ್ಧದಷ್ಟನ್ನೆ ತಿಂದು ಉಳಿದ ಅನ್ನವನ್ನು ತಂದು ಜಲಂಧರನಿಗೆ ಕೊಟ್ಟಳು. ದಿನವೂ ಅವಳು ಆ ರೀತಿ ಮಾಡಿದಾಗ ಮೀನು ಪುಷ್ಟವಾಗಿ ಬೆಳೆಯಿತು. ಹುಡುಗಿ ಮಾತ್ರ ಸಣ್ಣಗಾಗತೊಡಗಿದಳು.

ದಿನನಿತ್ಯದ ಕೆಲಸ ಮಾಡಲು ಅವಳ ಕೈಲಿ ಸಾಧ್ಯವಿಲ್ಲವಾಯಿತು ಇದಕ್ಕೆ ಕಾರಣವೇನೆಂದು ತಿಳಿಯಬೇಕೆಂದು ಒಂದು ದಿನ ಅವಳ ಸೋದರಿಯೊಬ್ಬಳು ಅವಳನ್ನು ಹಿಂಬಾಲಿಸಿದಳು. ತೊರೆಯಲ್ಲಿದ್ದ ದಪ್ಪ ಮೀನನ್ನು ನೋಡಿ ಅವಳು ಸಂತೋಸದಿಂದ ಹಿರಿಯಕ್ಕನಿಗೆ ಹೇಳಿದಳು. ಹುಡುಗಿ ಕಾಡಿಗೆ ಹೋದ ಬಳಿಕ ಹಿರಿಯಕ್ಕ ತೊರೆಯಿಂದ ಮೀನನ್ನೆತ್ತಿಕೊಂಡು ಹೋಗಿ ಅಡುಗೆ ಮಾಡಿ ಬಡಿಸಿದಳು. ಹುಡುಗಿ ಎಂದಿನಂತೆ ತನ್ನ ಪಾಲಿನ ಅನ್ನವನ್ನು ತೆಗೆದುಕೊಂಡು ಹೋಗಿ "ಜಲಂಧರ, ಜಲಂಧರ"ಎಂದು ಕರೆದಾಗ ಮೀನು ಬರಲಿಲ್ಲ. ಅವಳು ಸುತ್ತಮುತ್ತಲೆಲ್ಲಾ ಮೀನಿಗಾಗಿ ಹುಡುಕಿ ನಿರಾಶೆಗೊಂಡಳು. ಕಡೆಗೆ ಬೇಸರದಿಂದ ಮನೆಗೆ ಬಂದು ಮಲಗಿಕೊಂಡುಬಿಟ್ಟಳು. ಮರುದಿನ ಬೆಳಗ್ಗೆ ಹುಂಜ ಕುಗುತ್ತಾ, ಜಲಂಧರನನ್ನು ಅವಳ ಅಕ್ಕಂದಿರು ತಿಂದಿರುವುದಾಗಿಯೂ ಅದರ ಮೂಳೆಗಳನ್ನು ಬೂದಿಯಲ್ಲಿ ಬಿಸಾಡಿರುವರೆಂದೂ ತಿಳಿಸಿತು.

ಹುಡುಗಿ ಬೂದಿಯಲ್ಲಿ ಹುಡುಕಿದಾಗ ಜಲಂಧರನ ಮೂಳೆಗಳು ಸಿಕ್ಕವು. ಅವಳು ಅದನ್ನು ತೊರೆಯ ಬಳಿ ಹುಗಿದು "ಜಲಂಧರ ಇರೋ ಜಾಗದಲ್ಲಿ ಆಕಾಶದೆತ್ತರ ಅಪರೂಪವಾದ ಮರ ಬೆಳೀಲಿ"ಎಂದು ಪ್ರಾರ್ಥಿಸಿದಳು.

ಜಲಂಧರ ಇಲ್ಲದ ಕಾರಣ ಅವಳಿಗೆ ಹೊಟ್ಟೆ ತುಂಬುತ್ತಿದ್ದುದರಿಂದ ಹುಡುಗಿ ಮುಂದೆ ಚೆನ್ನಾಗಿ ಬೆಳೆದಳು. ಅತ್ಯಂತ ಸುಂದರಿಯೂ ಆದಳು. ಪ್ರತಿ ದಿನ ಬೆಲೆಯುತ್ತಿದ್ದ ಜಾಗಕ್ಕೆ ಬಂದು ನೀರು ಹಾಕುತ್ತಿದ್ದಳು. ಸ್ವಲ್ಪ ದಿನಗಳಲ್ಲಿಯೇ ಅದು ಆಕಾಶದಷ್ಟು ಎತ್ತರ ಬೆಳೆಯಿತು. ಅದೊಂದು ಅಪರೂಪವಾದ ಮರ. ಅದರ ಕಾಂಡ ಕಬ್ಬಿಣದ್ದು. ಎಲೆಗಳು ರೇಷ್ಮೆಯವು. ಹೂಗಳು ಚಿನ್ನದ್ದು. ಹಣ್ಣುಗಳು ವಜ್ರಗಳು.

ಒಂದು ದಿನ ಗಾಳಿ ಬೀಸಿದಾಗ ಅದರ ಎಲೆಯೊಂದು ಹಾರಿ ರಾಜನೊಬ್ಬನ ಉದ್ಯಾನವನದಲ್ಲಿ ಬಿತ್ತು. ಅದನ್ನು ಕಂಡ ರಾಜಕುಮಾರ "ಈ ಎಲೆಯಿದ್ದ ಮರಾನ ಹುಡುಕೋವರ್ಗೂ ನಾನು ವಾಪ್ಸು ಬರೋದಿಲ್ಲ" ಎಂದು ಪ್ರಯಾಣ ಹೊರಟ.

ರಾಜಕುಮಾರ ಪ್ರಯಾಣ ಮಾಡುತ್ತಾ ಬಂದಾಗ ರೇಷ್ಮೆ ಎಲೆಗಳಿದ್ದ ಕಬ್ಬಿಣದ ಕಾಂದದ ಮರ ಸಿಕ್ಕಿತು. ಅವನು ಅದನ್ನು ನೋಡಿ ಆಶ್ಚರ್ಯದಿಂದ ಅಲ್ಲಿ ಆಡುತ್ತಿದ್ದ ಹಳ್ಳಿಯ ಹುಡುಗ ನನ್ನು ಕೇಳಿದ: "ಇದು ಎಂಥ ಮರ? ಇದು ಇಲ್ಲಿ ಹ್ಯಾಗೆ ಬೆಳೀತು?" "ನನಗ್ಗೊತ್ತಿಲ್ಲ. ಇಲ್ಲಿಗೆ ಸ್ವಲ್ಪ ದೂರದಲ್ಲಿ ಗುಡಿಸಲೊಂದರಲ್ಲಿ ಏಳು ಜನ ಸೋದರಿಯರಿದಾರೆ. ಅವರ್ನ ಕೇಳಿದ್ರೆ ತಿಳೀಬಹುದು" ಎಂದ ಹುಡುಗ. ರಾಜಕುಮಾರನ ಆಣತಿಯಂತೆ ಗುಡಿಸಲಿಗೆ ಹೋಗಿ ಹುಡುಗಿಯರನ್ನು ಕರೆದ. "ಒಬ್ಬ ದೊಡ್ದ ರಾಜಕುಮಾರ ಬಂದಿದಾನೆ. ನಿಮ್ಹತ್ರ ಮಾತಾಡ್ಬೇಕಂತೆ. ಬೇಗ್ಬನ್ನಿ"ಎಂದ. ಕಿರಿಯವಳನ್ನು ಮನೆಯಲ್ಲೇ ಬಿಟ್ಟು ಉಳಿದವರು ಸಿಂಗರಿಸಿಕೊಂಡು ರಾಜಕುಮಾರನ ಬಳಿಗೆ ಹೋದರು. ಅವರು ಚಿನ್ನದ ಹೂಗಳ ಮರದ ವಿಚಾರ ಕೇಳಿದಾಗ, ತಾವು ಅದನ್ನು ಅದುವರೆಗೆ ನೋಡಿಯೇ ಇರಲಿಲ್ಲವೆಂದರು. ಆಗ ರಾಜಕುಮಾರ ಪ್ರಶ್ನಿಸಿದ: "ಆ ಹುಡುಗ ನೀವು ಏಳು ಜನ ಇದೀರೀಂತ ಹೇಳ್ದ. ಇಲ್ಲಿ ನೀವು ಆರು ಜನ ಮಾತ್ರ ಇದೀರಲ್ಲ?" ಹಿರಿಯಕ್ಕ ಉತ್ತರಿಸಿದಳು: "ನನ್ನ ಕಿರೀ ತಂಗಿ ಒಬ್ಳಿದಾಳೆ. ಅವಳು ಯಾವುದಕ್ಕೂ ಉಪಯೋಗವಿಲ್ಲ." ರಾಜಕುಮಾರ ಅಸಹನೆಯಿಂದ "ಆದ್ರೇನು?ಅವಳ್ನ ಕರೀರಿ. ಈ ಮರದ ವಿಷ್ಯ ಅವ್ಳಿಗೇನಾದ್ರೂಗೊತ್ತೇ ಕೇಳೋಣ"ಎಂದ.

ಹಳ್ಳಿಯ ಹುಡುಗ ಹೋಗಿ ಕಿರಿಯವಳನ್ನು ಕರೆತಂದ. ಅವಳು ಹತ್ತಿರ ಬರುತ್ತಲ್ಲೆ ಎತ್ತರಕ್ಕೆ ಏರಿದ್ದ ಮರ ಅವಳ ಕೈಗೆಟಕುವಂತೆ ಬಾಗಿತು. ಅವಳು. ಎಲೆ, ಹೂ, ಹಣ್ಣುಗಳನ್ನು ಕಿತ್ತು ರಾಜಕುಮಾರನಿಗೆ ಅರ್ಪಿಸಿದಳು.

"ಇಷ್ಟು ಬುದ್ಧಿವಂತೆ ಹಾಗೂ ಸುಂದರಿಯಾದ ಹುಡುಗಿ ರಾಣಿಯಾಗೋಕೆ ಅರ್ಹಳು. ನನ್ನನ್ನ ಮದುವೆ ಆಗ್ತೀಯಾ?"ಎಂದು ಕೇಳಿದ ರಾಜಕುಮಾರ.

ಅವರಿಬ್ಬರ ಮದುವೆ ಸಂಭ್ರಮದಿಂದ ನಡೆಯಿತು. ಅಲ್ಲಿಂದ ಮುಂದೆ ಅವರು ಸುಖವಾಗಿದ್ದರು.


© 2009-2010 sirinudi.org. All rights reserved.