ಹಚ್ಚೇವು ಕನ್ನಡದ ದೀಪ
ಕರುನಾಡದೀಪ
ಸಿರಿನುಡಿ ಯದೀಪ
ಒಲವೆತ್ತಿ ತೋರುವಾ ದೀಪ | ಹಚ್ಚೇವು
ಇಂದಿನ ಕಥೆ

ಕೆಂಪುರಾಣಿ

ಒಂದೂರಿನಲ್ಲಿ ಮುದ್ದಾದ ಹುಡುಗಿಯೊಬ್ಬಳಿದ್ದಳು. ಅವಳು ಯಾವಾಗಲೂ ಕೆಂಪು ಲಂಗವನ್ನೇ ತೊಡುತ್ತಿದ್ದುದರಿಂದ ಎಲ್ಲರೂ ಅವಳನ್ನು ``ಕೆಂಪುರಾಣಿ"ಎಂದು ಕರೆಯುತ್ತಿದ್ದರು.

ಒಂದು ದಿನ ಕೆಂಪುರಾಣಿಯ ತಾಯಿ ಅವಳನ್ನು ಹತ್ತಿರ ಕರೆದು, ``ನಿಮ್ಮ ಅಜ್ಜಿಗೆ ಮೈಹುಷಾರಿಲ್ವಂತೆ, ನೋಡ್ಕೊಂಡು ಬರ್ತೀಯಾ?"ಎಂದು ಕೇಳಿದಳು. ಅಜ್ಜಿಯನ್ನು ಕಂಡರೆ ಕೆಂಪುರಾಣಿಗೆ ತುಂಬಾ ಇಷ್ಟ. ಆದುದರಿಂದ ಅವಳು `ಹೂ'ಎಂದಳು. ತಾಯಿ, ಅಜ್ಜಿಗೆ ಪ್ರಿಯವಾದ ಸಿಹಿ ತಿಂಡಿಗಳನ್ನು ಮಾಡಿ ಒಂದು ಬುಟ್ಟಿಯಲ್ಲಿರಿಸಿ ಮಗಳಿಗೆ ಕೊಟ್ಟಳು. ``ಮಗೂ ದೊಡ್ಡ ರಸ್ತೆ ಬಿಟ್ಟು, ಆ ಕಡೆ ಹೋಗ್ಬೇಡ. ಕಾಡ್ನಲ್ಲಿ ತೋಳ ಇರುತ್ತೆ" ಎಂದು ಎಚ್ಚರಿಕೆ ಕೊಟ್ಟಳು.

ಕೆಂಪುರಾಣಿ ಸಂತೋಷದಿಂದ ರಸ್ತೆಯಲ್ಲಿ ಹೊರಟಳು. ಸ್ವಲ್ಪ ದೂರ ನಡೆಯುವ ಹೊತ್ತಿಗೆ ಕಾಡಿನೊಳಗೆ ಗುಲಾಬಿ ಹೂಗಳು ಕಂಡವು. ಅವು ಅಜ್ಜಿಗೆ ಇಷ್ಟವೆಂದು ಗೊತ್ತಿದ್ದುದರಿಂದ ಅವಳು ಕಾಡಿನೊಳಗೆ ಹೋಗಿ ಹತ್ತಾರು ಹೂಗಳನ್ನು ಕಿತ್ತಳು. ಒಂದು ಗುಚ್ಛ ಮಾಡಿಕೊಂಡಳು. ಅಷ್ಟರಲ್ಲಿ ತೋಳವೊಂದು ಅವಳನ್ನು ಕಂಡು ಹೇಳಿತು: ``ಎಷ್ಟು, ಚೆನ್ನಾಗಿದೆ ಹೂಗುಚ್ಛ." ``ಹೌದು ನಮ್ಮಜ್ಜಿಗೆ ಹುಶಾರಿಲ್ಲ. ಅವಳಿಗೆ ಇದನ್ನು ತಕೊಂಡು ಹೋಗ್ತಿದ್ದೇನೆ" ಎಂದಳು ಕೆಂಪುರಾಣಿ. ``ಎಲ್ಲಿದೆ ನಿಮ್ಮಜ್ಜಿ ಮನೆ?"ಎಂದು ತೋಳ ಕೇಳಿದುದಕ್ಕೆ ಕೆಂಪುರಾಣಿ ದೂರದಲ್ಲಿ ಕಾಣುತ್ತಿದ್ದ ಕೆಂಪು ಹೆಂಚಿನ ಮನೆಯನ್ನು ತೋರಿಸಿದಳು. ``ಆಗ್ಲಮ್ಮ, ಹೋಗ್ಬಾ.ನಿಂಗೆ ಒಳ್ಳೇದಾಗ್ಲಿ"ಎನ್ನುತ್ತಾ ತೋಳ ಓಡಿ ಹೋಯಿತು.

ಅಲ್ಲಿಂದ ಅದು ನೇರವಾಗಿ ಅಜ್ಜಿಯ ಮನೆಗೆ ಹೋಗಿ ಬಾಗಿಲು ಬಡಿಯಿತು.

``ಯಾರು?"ಎಂದು ಕೇಳಿದಳು ಅಜ್ಜಿ.

``ನಾನು ಕೆಂಪುರಾಣಿ"ಎಂದಿತು ತೋಳ. "ಬಾಗಿಲಿಗೆ ಕಟ್ಟಿರೋ ದಾರ ಎಳಿ, ಬಾಗಿಲು ತೆಗೆದುಕೊಳ್ಳುತ್ತೆ.ಎಂದು ಅಜ್ಜಿ ಹೇಳಿದೊಡನೆ ತೋಳ ಒಳ್ಳನುಗ್ಗಿ ಅಜ್ಜಿಯನ್ನು ಕಬಳಿಸಿತು.

ಅನಂತರ ಅಜ್ಜಿಯ ಸೀರೆ ಉಟ್ಟುಕೊಂಡು ತಲೆಗೆ ಒಂದು ಬಟ್ಟೆ ಕಟ್ಟಿಕೊಂಡು, ಕಂಬಳಿ ಹೊದೆದು ಹಾಸಿಗೆಯಲ್ಲಿ ಮಲಗಿಬಿಟ್ಟಿತು.

ಅಷ್ಟರಲ್ಲಿ ಕೆಂಪುರಾಣಿ "ಅಜ್ಜೀ ಅಜ್ಜೀ ಬಾಗಿಲು ತೆಗಿ ಎಂದು ಕೂಗಿದಳು.

"ಬಾಗಿಲಿಗೆ ಕಟ್ಟಿರೋ ದಾರ ಎಳಿ. ತೆಗೆದುಕೊಳ್ಳುತ್ತೆ"ಎಂದಿತು ತೋಳ,ಅಜ್ಜಿಯ ಸ್ವರವನ್ನು ಅನುಕರಿಸಿ.

ಕೆಂಪುರಾಣಿ ಒಳಗೆ ಬಂದು ವಿಚಿತ್ರವಾಗಿ ಕಾಣುತ್ತಿದ್ದ ಅಜ್ಜಿಯ ಮುಖ ನೋಡಿ:

``ಅಜ್ಜಿ ನಿನ್ನ ಕಿವಿ ಯಾಕೆ ಇಷ್ಟು ದೊಡ್ಡದು?"ಎಂದು ಕೇಳಿತು.

``ನೀನು ಮಾತಾಡಿದ್ದು, ಸರಿಯಾಗಿ ಕೇಳಲೀಂತ"ಎಂದಿತು ತೋಳ.

``ಅಜ್ಜೀ, ನಿನ್ನ ಕಣ್ಣು ಯಾಕೆ ಇಷ್ಟು ದೊಡ್ಡದಾಗಿದೆ?"

``ನಿನ್ನನ್ನು ಸರಿಯಾಗಿ ನೋಡೋಕ್ಕೇಂತ."

``ಅಜ್ಜೀ ನಿನ್ನ ಬಾಯಿ ಯಾಕೆ ಇಷ್ಟು ದೊಡ್ಡದಾಗಿದೆ?"

``ನಿನ್ನನ್ನು ತಿನ್ನೋಕೇಂತ" ಎನ್ನುತ್ತಾ ತೋಳ ಕೆಂಪುರಾಣಿಯನ್ನು ನುಂಗಿಬಿಟ್ಟಿತು.

ಅನಂತರ ಅದಕ್ಕೆ ನಿದ್ದೆ ಬಂದು ಹಾಸಿಗೆಯ ಮೇಲೆ ಮಲಗಿ ಗೊರಕೆ ಹೊಡೆಯಲಾರಂಭಿಸಿತು.

ದಾರಿಯಲ್ಲಿ ಹೋಗುತ್ತಿದ್ದ ಬೇಡನೊಬ್ಬನಿಗೆ ಆ ಗೊರಕೆ ಕೇಳಿಸಿ, ಅಜ್ಜಿಗೆ ಮೈ ಹುಶಾರಿಲ್ಲವೇನೋ ನೋಡಿ ಹೋಗೋಣ ಎಂದು ಒಳಗೆ ಬಂದ. ಅಲ್ಲಿ ಮಲಗಿದ್ದ ತೋಳವನ್ನು ನೋಡಿದ ಕೂಡಲೇ ನಡೆದುದೆಲ್ಲಾ ಅವನಿಗೆ ಹೊಳೆಯಿತು. ಅವನು ತನ್ನ ಭರ್ಜಿಯಿಂದ ತೋಳನ ಹೊಟ್ಟೆ ಸೀಳಿದ. ಅಜ್ಜಿ ಮತ್ತು ಕೆಂಪುರಾಣಿ ಯಾವ ಅಪಾಯವೂ ಇಲ್ಲದೆ ಹೊರಬಂದರು. ಅಜ್ಜಿ ಮೊಮ್ಮಗಳನ್ನು ಅಪ್ಪಿಕೊಂಡಳು. ಬೇಡನು ಎರಡು ದೊಡ್ಡ ಕಲ್ಲುಗಳನ್ನು ತೋಳದ ಹೊಟ್ಟೆಗೆ ಹಾಕಿ ಹೊಲಿದು ಅದನ್ನೆತ್ತಿ ಕೊಳದೊಳಗೆ ಹಾಕಿಬಿಟ್ಟ.