ಹಚ್ಚೇವು ಕನ್ನಡದ ದೀಪ
ಕರುನಾಡದೀಪ
ಸಿರಿನುಡಿ ಯದೀಪ
ಒಲವೆತ್ತಿ ತೋರುವಾ ದೀಪ | ಹಚ್ಚೇವು
ಇಂದಿನ ಕಥೆ

ಗಿಡುಗರಾಜ

ಒಂದೂರಿನಲ್ಲಿ ಒಬ್ಬ ಆಸೆಬುರುಕ ರಾಜನಿದ್ದ. ಗಿಡುಗರಾಜನ ಗರಿ ಸಿಕ್ಕಿದರೆ ತನ್ನೆಲ್ಲ ಇಷ್ಟಾರ್ಥಗಳೂ ಸಿದ್ಧಿಯಾಗುವುದೆಂದು ಅವನಿಗೆ ತಿಳಿಯಿತು. ಆದುದರಿಂದ ಅವನು ಡಂಗೂರ ಹೊಡೆಸಿದ: ``ಗಿಡುಗ ರಾಜನ ಗರಿ ತಂದು ಕೊಟ್ಟೋರಿಗೆ ನನ್ನ ಮಗಳ್ನ ಕೊಟ್ಟು ಮದುವೆ ಮಾಡ್ತೀನಿ"ಎಂದು.

ಅನೇಕ ಯುವಕರು ಈ ಕೆಲಸಕ್ಕೆ ಪ್ರಯತ್ನಿಸಿ ಸೋತರು.

ಕಡೆಗೆ ನಹುಲನೆಂಬ ಸತ್ಯವಂತ ಗರಿಯನ್ನು ತರಲು ಹೊರಟ.

ಅವನು ನಡೆದು ನಡೆದು ಸಂಜೆಯಾಗುವ ವೇಳೆಗೆ ಅರಮನೆಯೊಂದನ್ನು ತಲುಪಿದ. ಅಲ್ಲಿನ ರಾಜ ಅವನಿಗೆ ಕುಶಲ ಪ್ರಶ್ನೆ ಮಾಡಿ ಭೋಜನ ನೀಡಿ, ಅವನೆಲ್ಲಿಗೆ ಹೋಗುತ್ತಿದ್ದಾನೆಂದು ಪ್ರಶ್ನಿಸಿದನು.

``ಗಿಡುಗರಾಜನ ಹತ್ರಕ್ಕೆ"ಎಂದು ಉತ್ತರಿಸಿದ ನಹುಲ.

``ಗಿಡುಗರಾಜನ ಹತ್ರಕ್ಕಾ?"ಒಳ್ಳೇದಾಯ್ತು. ಗಿಡುಗರಾಜನಿಗೆ ಎಲ್ಲಾ ತಿಳಿದಿರುತ್ತೇ ಅಂತಾರೆ. ನನ್ನ ಖಜಾನೆಯ ಬೀಗದಕೈ ಕಳೆದ್ಹೋಗಿದೆ. ಹುಡುಕಿ ಹುಡುಕಿ ಸಾಕಾಯ್ತು. ಎಲ್ಲೂ ಸಿಗಲಿಲ್ಲ. ಅದೆಲ್ಲಿದೆ ಅಂತ ಕೇಳ್ಕೊಂಡು ಬರ್ತೀಯಾ" ಎಂದ ರಾಜ.

``ಆಗ್ಲಿ, ಅದಕ್ಕೇನು?"ಎಂದ ನಹುಲ.

ಮಾರನೆಯ ದಿವಸವೆಲ್ಲಾ ನಡೆದು ರಾತ್ರಿಯ ಹೊತ್ತಿಗೆ ಇನ್ನೊಂದು ಅರಮನೆಯ ಹತ್ತಿರ ಬಂದ. ಅಲ್ಲಿನ ರಾಜ ಅವನಿಗೆ ಊಟ ಕೊಟ್ಟು ಸತ್ಕರಿಸಿ, ``ಹೇಗೊ ಗಿಡುಗರಾಜನಲ್ಲಿಗೆ ಹೋಗ್ತೀಯ. ನನ್ನ ಮಗಳು ಹತ್ತಾರು ವರ್ಷಗಳಿಂದ ಕಾಯಿಲೆ ಮಲಗಿದಾಳೆ. ಆ ರೋಗ ವಾಸಿ ಆಗೋದು ಹೇಗೆ ಅಂತ ಕೇಳ್ಕೊಂಡು ಬರ್ತೀಯಾ?"ಎಂದ.

``ಆಗ್ಲಿ, ಅದಕ್ಕೇನು?"ಎಂದ ನಹುಲ.

ಮರುದಿನ ಹೊರಟಾಗ ದಾರಿಯಲ್ಲಿ ದೊಡ್ಡ ನದಿಯೊಂದು ಸಿಕ್ಕಿತು. ಅದನ್ನು ದಾಟಲು ದೋಣಿಯಿರಲಿಲ್ಲ. ಅದರ ಬದಲಿಗೆ ರಾಕ್ಷಸನೊಬ್ಬನಿದ್ದ. ಅವನು ನಹುಲನನ್ನು ತನ್ನ ಬೆನ್ನ ಮೇಲೆ ಕೂಡಿಸಿಕೊಂಡು ನದಿ ದಾಟಿಸಿ, ``ಯಾರು ಬಂದ್ರೂ ನಾನು ಈ ನದಿ ದಾಟಿಸ್ಬೇಕು. ನನ್ನ ಶಾಪ ಹೋಗೋದು ಹ್ಯಾಗೆ ಕೇಳ್ಕೊಂಡು ಬಾ"ಎಂದ ರಾಕ್ಷಸ. ಅದಕ್ಕೂ ``ಹೂ"ಎಂದ ನಹುಲ.

ಕಡೆಗೆ ಅವನು ಗಿಡುಗರಾಜನ ಅರಮನೆಗೆ ಹೋದ. ಅಲ್ಲಿ ಗಿಡುಗರಾಜನ ಅರಮನೆಗೆ ಹೋದ. ಅಲ್ಲಿ ಗಿಡುಗರಾಜನ ಹೆಂಡತಿಯಿದ್ದಳು. ಅವಳಿಗೆ ತಾನು ಅಲ್ಲಿಗೆ ಬಂದ ಉದ್ದೇಶ ಹೇಳಿದ. ಅವಳೆಂದಳು: ``ಗಿಡುಗರಾಜ ಮನುಷ್ಯರನ್ನು ಕಂಡಕೂಡ್ಲೇ ತಿಂದುಬಿಡ್ತಾನೆ. ನೀನು ಹೊರಟುಹೋಗಪ್ಪ."

ನಹುಲ ಹಟದಿಂದ ಅಲ್ಲೇ ಉಳಿದ. ಗಿಡುಗರಾಜನ ಹೆಂಡತಿ ಕನಿಕರದಿಂದ:

``ನಿಂಗೆ ಅಷ್ಟು ಹಟ ಇದ್ರೆ ರಾಜನ ಹಾಸಿಗೆಯ ಕೆಳಗೆ ಕೂತ್ಕೋ. ಅವನು ನಿದ್ದೆ ಮಾಡಿದಾಗ ಒಂದು ಗರೀನೂ ಕಿತ್ಕೊ. ಆದ್ರೆ ಅವನೆದ್ದು ನಿನ್ನನ್ನು ತಿಂದುಹಾಕಿದ್ರೆ ಮಾತ್ರ ನಾನು ಜವಾಬ್ದಾರಳಲ್ಲ"ಎಂದಳು.

ಅಷ್ಟುಹೋತ್ತಿಗೆ ಗಿಡುಗರಾಜ ಬಂದ: ``ಹಾ ಮನುಷ್ಯ ರಕ್ತದ ವಾಸನೆ ಬರ್ತಿದೆ. ಎಲ್ಲಿದಾನೆ ಅವನು?"ಎಂದು ಕಿರುಚಿದ.

``ಮನುಷ್ಯನೊಬ್ಬ ಬಂದಿದ್ದ. ಆದ್ರೆ ನೀನಿಲ್ಲಿದೀಯ ಅಂತ ಹೇಳಿದ್ಕೂಡ್ಲೆ ಹೊರಟ್ಹೋದ"ಎಂದಳು ಹೆಂಡತಿ.

ಗಿಡಗರಾಜ ಹೆಂಡತಿ ತಯಾರಿಸಿದ ಊಟ ಮುಗಿಸಿ ಮಲಗಿ ಗೊರಕೆ ಹೊಡೆಯಲಾರಂಭಿಸಿದ. ಆಗ ಮಂಚದ ಕೆಳಗಿದ್ದ ನಹುಲ ಒಂದು ಗರಿ ಕಿತ್ತುಕೊಂಡ. ಗಿಡುಗನಿಗೆ ಎಚ್ಚರವಾಗಿ, "ಯಾರೋ ನನ್ನ ಗರಿ ಕಿತ್ಕೊಂಡ್ರು"ಎಂದು ಬೊಬ್ಬೆ ಹಾಕಿದ.

ಅವನ ಹೆಂಡತಿ ``ಅಯ್ಯೋ ನೀವೆಲ್ಲೋ ಕನಸು ಕಾಣ್ತಿದೀರ. ನಾನಾಗ್ಲೇ ಮನುಷ್ಯನ ವಿಷಯ ಹೇಳಿದ್ನಲ್ಲಾ. ಅವನು ಹೇಳ್ತಾಯಿದ್ದ: ``ರಾಜನೊಬ್ಬನ ಖಜಾನೆ ಬೀಗದ ಕೈ ಕಳೆದ್ಹೋಗಿದೆ. ಸಿಕ್ಕಿಲ್ಲವಂತೆ ಪಾಪ"ಎಂದಳು.

ಗಿಡುಗರಾಜ ನಗುತ್ತಾ ``ಮೂರ್ಖರು ಬೀಗದ ಕೈ ಸೌದೆ ಕೆಳಗೆ ಬಿದ್ದಿದೆ"ಎಂದ. ಹೆಂಡತಿ ಮುಂದುವರಿಸಿದಳು: ``ಆ ಮನುಷ್ಯ ಇನ್ನೂ ಒಂದು ವಿಚಿತ್ರ ಸಂಗತಿ ಹೇಳ್ದ. ರಾಜನೊಬ್ಬನ ಮಗಳಿಗೆ ಎಷ್ಟೋ ವರ್ಷದಿಂದ ಕಾಯಿಲೆಯಂತೆ"

``ಇವರಿನ್ನೂ ದೊಡ್ಡ ಮೂರ್ಖರು. ರಾಜಕುಮಾರಿ ಕೂದಲ್ನಿಂದ ಕಪ್ಪೆಯೊಂದು ಮೆಟ್ಟಿಲ ಕೆಳಗೆ ಗೂಡು ಕಟ್ಕೊಂಡಿದೆ. ಆ ಕೂದಲನ್ನು ತೆಗೆದುಕೊಂಡ್ರೆ ರಾಜಕುಮಾರಿ ಹುಶಾರಾಗ್ತಾಳೆ."

``ಆ ಮನುಷ್ಯ ನದೀ ದಾಟಿಸೋ ರಾಕ್ಷಸನ ವಿಚಾರವೂ ಹೇಳ್ದ. ಅವನಿಗೆ ಶಾಪವಿದ್ಯಂತೆ."

``ನಂಗೆ ನಿದ್ದೆ ಬರ್ತಾ ಇದೆ. ಸುಮ್ನ ಮಾತಾಡಿಸ್ತೀಯ ಆ ರಾಕ್ಷಸ ಪ್ರಯಾಣಿಕನೊಬ್ಬನನ್ನು ನದೀಲಿ ಎತ್ತಿ ಹಾಕಿದ್ರೆ ಶಾಪದಿಂದ ವಿಮುಕ್ತನಾಗ್ತಾನೆ" ಎನ್ನುತ್ತಾ ಗಿಡುಗರಾಜ ನಿದ್ದೆ ಮಾಡಿದ.

ನಹುಲ ಮೇಲೆದ್ದು ನುಸುಳಿ ಹೊರಬಂದ. ಅವನು ನಡೆಯುತ್ತಾ ಹೊರಟಾಗ ರಾಕ್ಷಸ ಸಿಕ್ಕಿದ. ನದಿ ದಾಟಿಸಿದ ಮೇಲೆ ಅವನ ಶಾಪವಿಮುಕ್ತಿಯ ಬಗ್ಗೆ ಹೇಳಿದಾಗ ರಾಕ್ಷಸ ``ನೀನು ನಂಗೆ ತುಂಬಾ ಉಪಾಕಾರ ಮಾಡ್ಡೆ. ಇನ್ನೊಂದ್ಸಾರಿ ನದೀಲಿ ಕರ್ಕೊಂಡು ಹೋಗ್ತೀನಿ ಬಾ"ಎಂದ. ``ಬೇಡಾಪ್ಪ ಸದ್ಯ" ಎನ್ನುತ್ತಾ ನಹುಲ ರಾಜನಲ್ಲಿಗೆ ಬಂದು ಅವನ ಮಗಳ ಕಾಯಿಲೆ ಗುಣವಾಗುವ ಬಗೆ ಹೇಳಿದ. ಆತ ಕೊಟ್ಟ ರತ್ನಗಳನ್ನು ತೆಗೆದುಕೊಂಡು ಇನ್ನೊಬ್ಬ ರಾಜನಲ್ಲಿಗೆ ಹೋದ. ಆತನ ಖಜಾನೆಯ ಬೀಗದ ಕೈ ಸಿಕ್ಕಿದುದರಿಂದ ಅವನಿಗೆ ಹೇರಳ ನಾಣ್ಯಗಳು ದೊರಕಿದುವು. ಅವೆಲ್ಲವುಗಳೊಡನೆ ರಾಜಧಾನಿ ತಲುಪಿ ರಾಜನಿಗೆ ಗರಿಕೊಟ್ಟ. ರಾಜ ಅಸೂಯೆಯಿಂದ, ``ಇಷ್ಟೊಂದು ಹಣಕಾಸು ಎಲ್ಲಿ ಸಿಕ್ತು?"ಎಂದು ಕೇಳಿದ.

``ಗಿಡಗರಾಜ ಕೊಟ್ಟ"ಎಂದ ನಹುಲ.

ಆಸೆಬುರುಕ ರಾಜ ಗಿಡುಗರಾಜನನ್ನು ಹುಡುಕಿಕೊಂಡು ಹೊರಟಾಗ, ರಾಕ್ಷಸ ಅವನನ್ನು ನದಿಯಲ್ಲಿ ಎತ್ತಿ ಹಾಕಿ ಶಾಪ ವಿಮುಕ್ತನಾದ.

ನಹುಲರಾಜಕುಮಾರಿಯನ್ನು ಮದುವೆಯಾಗಿ ಸುಖದಿಂದಿದ್ದ.