ಹಚ್ಚೇವು ಕನ್ನಡದ ದೀಪ
ಕರುನಾಡದೀಪ
ಸಿರಿನುಡಿ ಯದೀಪ
ಒಲವೆತ್ತಿ ತೋರುವಾ ದೀಪ | ಹಚ್ಚೇವು
ಇಂದಿನ ಕಥೆ
ಚೈತ್ರ ಮಾಸ, ಶುಕ್ಲ ಪಕ್ಷ, ತದಿಗೆ.

ಶಾಮ ಮತ್ತು ಜಲಪಿಶಾಚಿ

ಒಂದೂರಿನಲ್ಲಿ ರೈತನೊಬ್ಬನಿದ್ದ. ಅವನಿಗೆ ಮೂರು ಜನ ಗಂಡು ಮಕ್ಕಳಿದ್ದರು. ರೈತ ಸಾಯುವಾಗ ಮಕ್ಕಳಿಗೆ ಗುಡಿಸಲನ್ನು ಮಾತ್ರ ಬಿಟ್ಟುಹೋದ.
"ಗುಡಿಸಲು ನನಗೆ"ಎಂದು ದೊಡ್ಡವನು.
"ಗುಡಿಸಲೊಳಗಿನ ಸಾಮಾನುಗಳೆಲ್ಲಾ ನನಗೆ"ಎಂದ ಎರಡನೆಯವ.
ಮೂರನೆಯವನಾದ ಶಾಮನಿಗೆ ಯಾವ ಸಾಮಾನುಗಳೂ ಉಳಿಯಲಿಲ್ಲ. ಅವನು ಮೂಲೆಯಲ್ಲಿದ್ದ ಹಗ್ಗದ ಕಟ್ಟೊಂದನ್ನು ತೆಗೆದುಕೊಂಡು ಬೇಸರದಿಂದ ಮನೆ ಬಿಟ್ಟು ಹೊರಟುಹೋದ.

ಶಾಮ ಕಷ್ಟ ಬಂದಾಗಲೂ ಧೈರ್ಯದಿಂದಿರುವಂಥವನು. ಅವನು ಮರವೊಂದರ ಕೆಳಗೆ ಕುಳಿತು ಮುಂದೇನು ಮಾಡ ಬೇಕೆಂದು ಯೋಚಿಸುತ್ತಿರುವಾಗ, ಎದುರಿಗೆ ಅಳಿಲೊಂದು ಕಂಡಿತು. ಹಗ್ಗದ ಬಲೆ ಬೀಸಿ ಶಾಮ ಅದನ್ನು ಹಿಡಿದ. ಸಣ್ಣ ಪಂಜರವೊಂದನ್ನು ಮಾಡಿ ಅದರಲ್ಲಿ ಅಳಿಲನ್ನಿಟ್ಟ.
"ಬೇಜಾರು ಮಾಡ್ಕೋಬೇಡ, ಅಳಿಲೇ. ನಿನಗೊಬ್ಬ ಜೊತೆಗಾರನನ್ನು ಹುಡುಕ್ತೀನಿ"ಎಂದ.

ಸ್ವಲ್ಪ ಹೊತ್ತಿಗೆಲ್ಲಾ ಮೊಲವೊಂದು ಕುಪ್ಪಳಿಸುತ್ತಾ ಅಲ್ಲಿಗೆ ಬಂತು. ಶಾಮ ಅದನ್ನು ಹಿಡಿದು ಪಂಜರದೊಳಗೆ ಹಾಕಿದ. ಮತ್ತೆ ಯಾವ ಪ್ರಾಣಿಯನ್ನು ಹಿಡಿಯಬೇಕೆಂದು ಅವನು ಯೋಚಿಸುತ್ತಾ ನಡೆದ. ಕೊಳದ ಹತ್ತಿರ ಗವಿಯೊಂದರಲ್ಲಿ ಕರಡಿಯೊಂದು ನಿದ್ರಿಸುತ್ತಿತ್ತು.

"ಈ ಕರಡೀನ ಹಿಡಿಯೋಕೆ ಬಲೆ ಮಾಡ್ಬೇಕು"ಎಂದುಕೊಳ್ಳುತ್ತಾ ಹಗ್ಗದಿಂದ ಬಲೆ ಹಣೆಯುತ್ತಾ ಕುಳಿತ. ಆಗ ನೀರಿನಿಂದ ಹೊರಬಂದ ಸಣ್ಣ ಜಲಪಿಶಾಚಿಯೊಂದು ಕುತೂಹಲದಿಂದ ಕೇಳಿತು:
"ಅದೇನು ಹೆಣೀತಾ ಕೂತಿದೀಯಾ?"
"ನಿಮ್ಮ ಕೊಳವನ್ನ ಸುತ್ತುವರಿಯುವಂಥ ಬಲೆ ಮಾಡ್ತಿದೀನಿ, ಅದರ ಕುಣಿಕೆ ಎಳೆದಾಗ ನಿಮ್ಮ ಕೊಳಾನ ನಾನೆಲ್ಲಿ ಬೇಕಾದ್ರೂ ಎತ್ತಿಕೊಂಡು ಹೋಗಬಹುದು" ಎಂದ ಶಾಮ.
"ಅಯ್ಯೋ ಕೊಳ ಹೋದ್ರೆ ನಮ್ಮ ಗತಿಯೇನು?" ಎಂದು ಕೊಳ್ಳುತ್ತಾ ಜಲಪಿಶಾಚಿ ತನ್ನ ತಂದೆಯ ಹತ್ತಿರ ಹೋಗಿ ಆ ವಿಷಯ ಹೇಳಿತು. ಆಗ ತಂದೆ ಹೇಳಿತು:
"ಒಂದು ಉಪಾಯ ಮಾಡೋಣ. ಆ ಹುಡುಗನ ಹತ್ರ ನೀನು ಮತ್ತೆ ಹೋಗು. ಕೊಳದ ಪಕ್ಕದಲ್ಲಿರೋ ಮರಾನ ಯಾರು ಮೊದಲು ಹತ್ತುತ್ತಾರೋ ನೋಡೋಣ ಅನ್ನು. ಅವನು ಅರ್ಧ ಹತ್ತಿದಾಗ ಮೇಲಿನಿಂದ ನೀನು ಅವನನ್ನ ಕೊಳದೊಳಗೆ ನೂಕು. ಮುಂದಿನದನ್ನು ನಾನು ನೋಡ್ಕೋತೀನಿ." .

ಸಣ್ಣ ಜಲಪಿಶಾಚಿ ಶಾಮನ ಬಳಿಗೆ ಬಂದು "ನಾವು ಇಬ್ಬರೂ ಪಂದ್ಯ ಕಟ್ಟೋಣ. ಯಾರು ಮರ ಮೊದಲು ಹತ್ತುತ್ತಾರೋ ನೋಡೋಣ " ಎಂದಿತು.
ಶಾಮನು "ನಂಗೆ ಈಗ ಸಮಯವಿಲ್ಲ. ಪಂದ್ಯಕ್ಕೆ ನನ್ನ ಸಣ್ಣ ತಮ್ಮನನ್ನು ಕಳಿಸ್ತೀನಿ"ಎಂದು ಪಂಜರದಿಂದ ಅಳಿಲನ್ನ ತೆಗೆದು "ಓಡು ಅಳಿಲೇ"
ಎಂದ. ಜಲಪಿಶಾಚಿ ಕಣ್ಣು ಮಿಟುಕಿಸುವುದರೊಳಗೆ ಅಳಿಲು ಮರದ ತುದಿಯನ್ನು ಮುಟ್ಟಿತು.
ಜಲಪಿಶಾಚಿಯು ಬೇಸರದಿಂದ ತಂದೆಯ ಬಳಿಗೆ ಹೋಯಿತು. ತಂದೆ "ಪರವಾಯಿಲ್ಲ ಮಗು. ನೀವಿಬ್ಬರೂ ಓಡುವ ಪಂದ್ಯ ಕಟ್ಟಿ. ಅವನ ಕಾಲು ಸೋತಾಗ ನೀನವನನ್ನು ಕೊಳದೊಳಕ್ಕೆನೂಕು" ಎಂದು ಸಲಹೆ ಮಾಡಿತು.
ಜಲಪಿಶಾಚಿಯ ಹೊಸ ಆಹ್ವಾನ ಕೇಳಿ ಶಾಮ, "ನಂಗೀಗ ತುಂಬಾ ಕೆಲ್ಸವಿದೆ. ನನ್ನ ಇನ್ನೊಬ್ಬ ತಮ್ಮನನ್ನು ಕಳಿಸ್ತೀನಿ" ಎಂದು ಪಂಜರದ ಬಾಗಿಲು ತೆಗೆದು "ಓಡು ಮೊಲವೇ ಓಡು"ಎಂದ. ಜಲಪಿಶಾಚಿ ಪಂದ್ಯ ಆರಂಭಿಸುವುದರಲ್ಲಿದ್ದಾಗಲೇ ಮೊಲ ಓಡಿ ದೃಷ್ಟಿಯಿಂದ ಮರೆ ಆಯಿತು. ಜಲಪಿಶಾಚಿ ಸಪ್ಪೆ ಮೋರೆಯಿಂದ ತಂದೆಯನ್ನು ಸಮೀಪಿಸಿತು

"ಈ ಸಾರೆಯೂ ಸೋತೆಯಾ ಮಗನೇ? ಪರವಾಗಿಲ್ಲ. ಈ ಬಾರಿ ಅವನನ್ನು ಕುಸ್ತಿಗೆ ಕರಿ. ನೀನೇ ಗೆಲ್ತೀಯಾ" ಎಂದಿತು ತಂದೆ.

ಅದನ್ನು ಕೇಳಿದ ಶಾಮನೆಂದ : "ನಂಗ್ಯಾಕೋ ಇವತ್ತು ಕುಸ್ತಿ ಮಾಡೋಕೆ ಮನಸ್ಸಿಲ್ಲ. ನಿಂಗೆ ಯುದ್ಧ ಬೇಕೇಬೇಕೂಂತ ಇದ್ದರೆ ಮುಂದಿನ ಗವೀಲಿ ನನ್ನಜ್ಜ ಮಲಗಿದಾನೆ. ಅವನಿಗೆ ಒಂದೆರಡೇಟು ಹಾಕು. ನಿದ್ದೆಯಿಂದ ಎಚ್ಚರವಾಗಿ ಕುಸ್ತಿಗೆ ಬರ್ತಾನೆ."

ಜಲಪಿಶಾಚಿ ಕರಡಿಯ ಬಳಿಗೆ ಹೋಗಿ ಏಟು ಹಾಕಿತು. ಕರಡಿ ಸಿಟ್ಟಿನಿಂದ ಮೈ ಪರಚಿ ಓಡಿಸಿಬಿಟ್ಟಿತು.

ಅದನ್ನು ಕೇಳಿದ ಶಾಮ ನಗುತ್ತಾ "ನನ್ನ ಟೋಪಿಯ ತುಂಬಾ ಬಂಗಾರದ ನಾಣ್ಯ ಕೊಟ್ಟರೆ ನಾನಿಲ್ಲಿಂದ ಹೊರಟು ಹೋಗುತೀನಿ"ಎಂದ. ಜಲಪಿಶಾಚಿ ಅತ್ತ ಹೋಗುತ್ತಲೇ ಟೋಪಿಗೆ ತೂತು ಮಾಡಿದ. ನೆಲದಲ್ಲಿ ಹೊಂಡವೊಂದನ್ನು ತೋಡಿ ಟೋಪಿಯನ್ನು ಅದರ ಮೇಲಿಟ್ಟ. ಜಲಪಿಶಾಚಿ ನಾಣ್ಯಗಳನ್ನು ತಂದು ಸುರಿಯಿತು. ಸುರಿದಷ್ಟೊ ಟೋಪಿ ತುಂಬುತ್ತಲೇ ಇರಲಿಲ್ಲ. ನಾಲ್ಕಾರು ಬುಟ್ಟಿ ಗಳನ್ನು ಸುರಿದು "ಇಷ್ಟೇನಪ್ಪ ನಮ್ಮ ಹತ್ರ ಇರೋದು ಕೃಪೆತೋರು"ಎಂದು ಬೇಡಿಕೊಂಡಿತು.

"ಪರವಾಗಿಲ್ಲ ಬಿಡು" ಎನ್ನುತ್ತಾ ಶಾಮ ನಾಣ್ಯಗಳನ್ನೆಲ್ಲಾಗಂಟು ಕಟ್ಟಿಕೊಂಡು ನೆರೆಯೂರಿಗೆ ಹೋದ. ಸೊಗಸಾದ ಮನೆಯನ್ನು ಕಟ್ಟಿಸಿಕೊಂದು ಸುಖವಾಗಿ ಬಾಳಿ ಬದುಕಿದ.


© 2009-2010 sirinudi.org. All rights reserved.