ಹಚ್ಚೇವು ಕನ್ನಡದ ದೀಪ
ಕರುನಾಡದೀಪ
ಸಿರಿನುಡಿ ಯದೀಪ
ಒಲವೆತ್ತಿ ತೋರುವಾ ದೀಪ | ಹಚ್ಚೇವು
ಇಂದಿನ ಕಥೆ
ಚೈತ್ರ ಮಾಸ, ಶುಕ್ಲ ಪಕ್ಷ, ಷಷ್ಠಿ.

ಬಾವಿಯ ಭೂತ

ಒಂದೂರಿನಲ್ಲಿ ಒಬ್ಬ ಬಡ ಮನುಷ್ಯನಿದ್ದ. ಅವನಿಗೆ ಬಹು ಬಜಾರಿಯಾದ ಹೆಂಡತಿಯೊಬ್ಬಳಿದ್ದಳು. ಅವಳು ಅವನಿಗೆ ಬಹಳ ಕಿರುಕುಳ ಕೊಡುತ್ತಿದ್ದುದು, ಮಾತ್ರವಲ್ಲದೆ ಅವನು ಮಾಡಿದ ಕೆಲಸದಲ್ಲೆಲ್ಲಾ ತಪ್ಪು ಕಂಡುಹಿಡಿಯುತ್ತಿದ್ದಳು. ಇದರಿಂದ ಬೇಸರಗೊಂಡ ಬಡ ಮನುಷ್ಯನು ಒಂದು ದಿನ ದೊಡ್ಡದೊಂದು ಹಗ್ಗವನ್ನು ತೆಗೆದುಕೊಂಡು ಮನೆಯಿಂದ ಹೊರಬಿದ್ದ.
``ಎಲ್ಲಿ ಹೋಗ್ತಿದೀಯ? ಆ ಹಗ್ಗದಿಂದ ಪ್ರಾಣ ತೆಗೆದು ಕೊಳ್ತೀಯಾ?"ಎಂದು ಕೇಳಿದಳು ಹೆಂಡತಿ.
``ಹೌದು. ನಿನ್ನ ಜೊತೆ ಜಗಳವಾಡಿ ನನಗೆ ಸಾಕಾಗಿ ಹೋಗಿದೆ" ಎನ್ನುತ್ತಾ ಗಂಡ ಹೊರಟೇಬಿಟ್ಟ.
``ಇವನೇನು ಮಾಡ್ತಾನೋ ನೋಡಿಯೇಬಿಡ್ತೀನಿ" ಎನ್ನುತ್ತಾ ಹೆಂಡತಿಯೂ ಅವನನ್ನು ಹಿಂಬಾಲಿಸಿದಳು.

ಗಂಡ ಮುಂದೆ; ನಲವತ್ತು ಐವತ್ತು ಮಾರು ಹಿಂದೆ ಹೆಂಡತಿ; ಹೀಗೆ ನಡೆದರು. ಒಂದು ಸಾರೆ ಗಂಡ ತಿರುಗಿ ಹೇಳಿದ: ``ಲೇ, ನೀನು ನಡೀತಿರೋ ಜಾಗದಲ್ಲಿ ಬಾವಿಯೊಂದಿದೆ ಜೋಪಾನ
``ಅದು ಸುಳ್ಳು ಎಂದು ನಂಬಿದ ಹೆಂಡತಿ ಅವನ ಮಾತಿಗೆ ಕಿವಿಗೊಡದೆ ಬಾವಿಯಲ್ಲಿ ಕಾಲಿಟ್ಟೇಬಿಟ್ಟಳು. ಸರಿ, ಆ ಹೆಂಗಸು ಬಾವಿ ಪಾಲಾದಮೇಲೆ 'ಪೀಡೆ ಕಳೆಯಿತು'ಎಂದು ಬಡಮನುಷ್ಯ ಮುಂದೆ ಹೋದ. ಆದರೆ ಮರುದಿನ ಅವನಿಗೆ ``ಅಯ್ಯೋ ಪಾಪ ಎಷ್ಟಾದರೂ ಅವಳು ನನ್ನ ಹೆಂಡತಿಯಲ್ಲವೇ?" ಎಂದೆನಿಸಿ ಹಿಂತಿರುಗಿ ಬಂದ. ಕೈಯಲ್ಲಿದ್ದ ಹಗ್ಗವನ್ನು ಬಾವಿಯೊಳಗೆಸೆದು ``ಲೇ, ಈ ಹಗ್ಗ ಹಿಡಿದುಕೊಂಡು ಮೇಲೆ ಬಾ"ಎಂದು ಕೂಗಿದ. ಯಾರೋ ಹಗ್ಗ ಹಿಡಿದ ಹಾಗಾಯಿತು. ಇವನು ಪ್ರಯಾಸದಿಂದ ಮೇಲೆಳೆದು, ``ಕಡೆಗೂ ಮೇಲೆ ಬಂದೆಯಾ?"ಎಂದ.

ಆದರೆ ಆಶ್ಚರ್ಯ ಮೇಲೆ ಬಂದವಳು ಅವನ ಹೆಂಡತಿ ಅಲ್ಲ. ಒಂದು ಭೂತ. ಕೋರೆದಾಡೆಗಳೂ, ಮುಕ್ಕಣ್ಣೂ ಇದ್ದ ಭಯಂಕರ ಆಕೃತಿ. ಮನುಷ್ಯ ನಡುಗತೊಡಗಿದ. ಭೂತ ಹೇಳಿತು:
``ಅಯ್ಯಾ, ನಿನ್ನಿಂದ ತುಂಬಾ ಉಪಕಾರವಾಯ್ತು. ಯಾಕೇಂದ್ರೆ ನಿನ್ನೆಯವರೆಗೂ ನಾನು ಆ ಹಾಳು ಬಾವೀಲಿ ಹಾಯಾಗಿದ್ದೆ. ನಿನ್ನೆ ಒಬ್ಬಳು ಧಡೂತಿ ಹೆಂಗಸು ಒಳಗೆ ಬಿದ್ದಳು. ಅವಳ ಕಾಟ ತಡೀಲಾರದೆ ನಾನು ಕಂಗಾಲಾಗಿದ್ದೆ. ಅಷ್ಟರಲ್ಲಿ ಪುಣ್ಯವಂತ ನೀನು ನನನ್ನು ಮೇಲೆತ್ತಿದೆ. ನಿನ್ನ ಉಪಕಾರಕ್ಕೆ ಪ್ರತಿಯಾಗಿ ನಾನೂ ಒಂದು ಉಪಕಾರ ಮಾಡ್ತೀನಿ. ಮುಂದಿನ ರಾಜನ ಊರಿಗೆ ಹೋಗು. ಅವನ ಮಗಳಿಗೆ ಇದುವರೆಗೂ ಕಾಯಿಲೆಯಾಗಿರ್ಲಿಲ್ಲ. ನಾನು ಅವಳನ್ನು ಹೀಡಿತೀನಿ. ಅವಳಿಗೆ ತುಂಬಾ ಕಾಯಿಲೆ ಯಾಗುತ್ತೆ " ಅದನ್ನು ವಾಸಿ ಮಾಡೋಕೆ ಯಾರ ಕೈಲೂ ಆಗೋಲ್ಲ. ನೀನು ಅವಳಿಗೆ ಗುಣಪಡಿಸಬೇಕು."
``ನಾನು ಹೇಗೆ ಗುಣಪಡಿಸೋದು? ನಾನು ವೈದ್ಯನಲ್ಲವಲ್ಲ" ಎಂದ ಮನುಷ್ಯ.
``ನಾನು ನಿನಗೆ ಮೂರು ಕಟ್ಟಿಗೆಯ ಮಾತ್ರೆ ಕೊಡ್ತೀನಿ. ಅದನ್ನು ನೀರಿನಲ್ಲದ್ದಿ ರಾಜಕುಮಾರಿಯ ಕೆನ್ನೆಗೂ, ಹಣೆಗೂ ಮುಟ್ಟಿಸು. ನಾನು ಅವಳನ್ನು ಬಿಟ್ಟು ಹೋಗುತ್ತೇನೆ. ಆಗ ನಿನಗೆ ರಾಜ ಮರ್ಯಾದೆ ಮಾಡುತ್ತಾನೆ"ಎಂದಿತು ಭೂತ.
ಬಡಮನುಷ್ಯ ಸಂತೋಷದಿಂದ ಮುಂದಿನ ರಾಜ್ಯಕ್ಕೆ ಹೋದ. ಅಷ್ಟು ಹೊತ್ತಿಗಾಗಲೇ ರಾಜಕುಮಾರಿಗೆ ಕಾಯಿಲೆ ಆಗಿರುವ ವಿಷಯ ಊರ ತುಂಬಾ ಹಬ್ಬಿತ್ತು. ಊರಿನ ವೈದ್ಯರೆಲ್ಲಾ ಚಿಕಿತ್ಸೆ ಮಾಡಲು ಹೋಗಿ ಸೋತಿದ್ದರು.
``ರಾಜಕುಮಾರಿಯನ್ನು ನಾನು ಗುಣಪಡಿಸುತ್ತೀನಿ"ಎಂದು ಬಡಮನುಷ್ಯ ರಾಜನ ಮುಂದೆ ಹೇಳಿ ರಾಜಕುಮಾರಿಯ ಬಳಿಗೆ ಹೋದೊಡನೆ ಅವನು ಮಾತ್ರೆಗಳನ್ನು ನೀರಿನಲ್ಲದ್ದಿ ಅವಳ ಕೆನ್ನೆ ಹಣೆಗಳಿಗೆ ತೀಡಿದ. ತಕ್ಷಣ ರಾಜಪುತ್ರಿ ಆರೋಗ್ಯವಾಗಿ ಮೇಲೆ ಎದ್ದಳು. ರಾಜ ಸಂತೋಷದಿಂದ ಅವಳನ್ನು ಬಡಮನುಷ್ಯನಿಗೆ ಕೊಟ್ಟು ಮದುವೆ ಮಾಡಿ ಅವನನ್ನು ಮನೆ ಅಳಿಯನನ್ನಾಗಿ ಇರಿಸಿ ಕೊಂಡ.

ಹೀಗೆ ಸುಖವಾಗಿ ಕಾಲ ಕಳೆಯುತ್ತಿರಲು ಒಂದು ದಿನ ನೆರೆ ರಾಜ್ಯದ ರಾಜಪುತ್ರಿಗೂ ಅಂಥದೇ ರೋಗ ಉದ್ಭವಿಸಿತು. ಸಹಜವಾಗಿಯೇ ಅವನನ್ನು ನೆರೆ ರಾಜನೂ ಬರಮಾಡಿಕೊಂಡ. ಮಾತ್ರೆಗಳನ್ನು ಅವನು ನೀರಿನಲ್ಲಿ ಅದ್ದುತ್ತಿರುವಾಗ ರಾಕಪುತ್ರಿಯ ಮೇಲಿದ್ದ ಭೂತ ಕೇಳಿತು: "ನೀನ್ಯಾಕೆ ಇಲ್ಲಿಗೆ ಬಂದೆ ನಿನಗೊಬ್ಬಳು ರಾಜಕುಮಾರಿ ಸಾಲದಾ?"

ಮನುಷ್ಯ ಒಂದು ಗಳಿಗೆ ಯೋಚಿಸಿ ಅಂದ:
``ನಾನಿಲ್ಲಿಗೆ ಬರ್ತಾ ಇರ್ಲಲ್ಲ. ಆ ಬಾವಿಯಲ್ಲಿ ಬಿದ್ದಿದ್ದಳು ನೋಡು ಅವಳು ನನ್ನ ಮೊದಲ್ನೇ ಹೆಂಡತಿ. ಅವಳು ನನ್ನನ್ನು ಅಟ್ಟಿಸಿಕೊಂಡು ಬರ್ತಿದಾಳೆ. ಅವಳಿಗೆ ಹೆದರ್ಕೊಂಡು ನಾನು ಇಲ್ಲಿಗೆ ಓಡಿಬಂದೆ."

ಭೂತ ಹೆದರಿ ಕೇಳಿತು: "ಎಲ್ಲಿದ್ದಾಳೆ ಅವಳು?"
``ಇಲ್ಲೇ ಬಾಗಿಲ ಹೊರಗೆ, ಯಾವ ಘಳಿಗೆ ಬೇಕಾದರೂ ಅವಳು ಒಳಗೆ ಬರಬಹುದು"

ಭೂತ ನಡುಗುತ್ತಾ ರಾಜಕುಮಾರಿಯನ್ನು ಬಿಟ್ಟು ಓಡಿ ಹೋಯಿತು.

ರಾಜಕುಮಾರಿ ಮೊದಲಿನಂತಾದಳು. ಆ ರಾಜ ಸಕಲ ಮರ್ಯಾದೆಗಳೊಡನೆ ಉಡುಗೊರೆಗಳನ್ನಿತ್ತು ಬುದ್ಧಿವಂತನನ್ನು ರಥದಲ್ಲಿ ಕಳುಹಿಸಿಕೊಟ್ಟ.


© 2009-2010 sirinudi.org. All rights reserved.