ಹಚ್ಚೇವು ಕನ್ನಡದ ದೀಪ
ಕರುನಾಡದೀಪ
ಸಿರಿನುಡಿ ಯದೀಪ
ಒಲವೆತ್ತಿ ತೋರುವಾ ದೀಪ | ಹಚ್ಚೇವು
ಇಂದಿನ ಕಥೆ
ಚೈತ್ರ ಮಾಸ, ಶುಕ್ಲ ಪಕ್ಷ, ಸಪ್ತಮಿ.

ನಾಲ್ವರು ಸಂಗೀತಗಾರರು

ಒಂದೂರಿನಲ್ಲಿ ಒಂದು ಕತ್ತೆಯಿತ್ತು. ಅದು ಮುದಿಯಾದುದರಿಂದ ತನ್ನ ಕೆಲಸಕ್ಕೆ ಪ್ರಯೋಜನವಿಲ್ಲವೆಂದು ತಿಳಿದ ಅದರ ಯಜಮಾನ ಕತ್ತೆಯನ್ನು ಸಾಯಿಸಿಬಿಡಬೇಕೆಂದು ಯೋಚನೆ ಮಾಡಿದ. ಹೇಗೋ ಅದರ ಸುಳಿವು ತಿಳಿದ ಕತ್ತೆ ರಾತ್ರಿ ಮನೆಯನ್ನು ಬಿಟ್ಟು ಪಲಾಯನ ಮಾಡಿತು. ``ನಾನೀಗ ಆವಂತೀ ರಾಜ್ಯಕ್ಕೆ ಹೋಗಿ ಅಲ್ಲಿ ದೊಡ್ಡ ಸಂಗೀತಗಾರನಾಗ್ತೀನಿ" ಎಂದು ಮನಸ್ಸಿನಲ್ಲಿ ಮಂಡಿಗೆ ಹಾಕಿತು. ಮರುದಿನ ಬೆಳಿಗ್ಗೆ ದಾರಿಯಲ್ಲಿ ಏದುಸಿರುಬಿಡುತ್ತಾ ಕುಳಿತಿದ್ದ ನಾಯಿಯೊಂದು ಅದರ ಕಣ್ಣಿಗೆ ಬಿತ್ತು. ಕತ್ತೆ ಅದರ ಹತ್ತಿರ ಬಂದು ``ಯಾಕೆ ಸ್ನೇಹಿತ?ಮೈಗೆ ಹುಷಾರಿಲ್ವಾ?"ಎಂದು ಕೇಳಿತು. ನಾಯಿ, ``ಹುಷಾರಿಲ್ದೆ ಏನು? ನಾನು ಮುದಿಯಾದೇಂತ ನನ್ನ ಯಜಮಾನ ಸಾಯಿಸ್ಬೇಕೂಂತ ಅನ್ಕೊಂಡಿದ್ದ. ಅದಕ್ಕೆ ಮನೆಯಿಂದ ತಪ್ಪಿಸಿಕೊಂಡು ಓಡ್ಬಂದೆ" ಎಂದಿತು. ``ಹಾಗಾದ್ರೆ ನಮ್ಮಿಬ್ರ ಹಣೆಬರಹಾನೂ ಒಂದೇ ಆಯ್ತು. ನಾನು ಆವಂತೀ ರಾಜ್ಯಕ್ಕೆ ಹೋಗ್ತಿದೀನಿ. ನೀನೂ ಬಾ" ಎಂದಿತು ಕತ್ತೆ. ನಾಯಿ ಸಂತೋಷದಿಂದ ಅದರ ಹಿಂದೆ ಹೊರಟಿತು.

ಅವರಿಬ್ಬರೂ ಸ್ವಲ್ಪ ದೂರ ಹೋಗುವ ಹೊತ್ತಿಗೆ ದಾರಿಯ ಮಗ್ಗುಲಲ್ಲಿ ಕುಳಿತ ಬೆಕ್ಕೊಂದು ಸಿಕ್ಕಿತು. ``ಯಾಕೆ ಬೆಕ್ಕೇ ಸಪ್ಪಗಿದ್ದೀ?" ಎಂದು ಕೇಳಿತು ಕತ್ತೆ. ``ಸಪ್ಪಗಿಲ್ದೆ ಏನು ಮಾಡ್ಲಿ? ನಾನು ಮುದಿಯಾದೇಂತ ನನ್ನ ಯಜಮಾನಿ ನೀರ್ನಲ್ಲಿ ಮುಳುಗಿಸೋಕೆ ಹೊರಟಿದ್ಲು "ಎಂದು ದುಃಖದಿಂದ ಹೇಳಿತು ಬೆಕ್ಕು. ಕತ್ತೆ ನಸುನಕ್ಕು:
``ನೀನು ರಾತ್ರಿ ಹೊತ್ನಲ್ಲಿ ಬಹಳ ಚೆನ್ನಾಗಿ ಹಾಡ್ತೀಯ. ಆವಂತೀ ರಾಜ್ಯದ ಯಾವುದಾದ್ರೂ ಭೋಜನಶಾಲೇಲಿ ನಿಂಗೆ ಹಾಡೋ ಕೆಲ್ಸ ಸಿಗ್ಬಹುದು. ನಮ್ಜೊತೆ ಬಾ"ಎಂದು ಕರೆಯಿತು.

ಅವರು ಮತ್ತಷ್ಟು ದಾರಿ ಕ್ರಮಿಸುವ ವೇಳೆಗೆ ಗೇಟೊಂದರ ಮೇಲೆ ಕುಳಿತು ಒರಲುತ್ತಿದ್ದ ಹುಂಜ ಕಾಣಸಿಕ್ಕಿತು. ``ಹುಂಜ, ಹುಂಜ, ಯಾಕೆ ಹಾಗೆ ಕಿರುಚ್ಕೋತಿದ್ದೀ?"ಎಂದು ಕೇಳಿತು ಕತ್ತೆ. ``ಕಿರಿಚ್ಕೊಳ್ದೆ ಏನ್ಮಾಡ್ಲಿ? ಭಾನುವಾರ ಬರೋ ಅತಿಥಿಗಳ ಊಟ ಕ್ಕೋಸ್ಕರ ನನ್ನ ಕೊರಳು ಕುಯ್ಯೋ ಯೋಚನೆ ಮಾಡ್ತಿದ್ದಾಳೆ ನನ್ನ ಯಜಮಾನಿ"ಎಂದು ನುಡಿಯಿತು ಹುಂಜ. "ಹಾಗಾದ್ರೆ ನಮ್ಜೊತೆ ಬಾ. ನಾವೆಲ್ರೂ ಸೇರಿ ಚೆನ್ನಾಗಿ ಹಾಡೋದು ಕಲಿತ್ರೆ ಒಳ್ಳೆ ಸಂಗೀತ ಸಭೆ ಏರ್ಪಡಿಸಬಹುದು" ಎನ್ನುತ್ತಾ ಕತ್ತೆ ಹುಂಜನನ್ನೂ ತಮ್ಮ ಜೊತೆಗೆ ಸೇರಿಕೊಂಡಿತು.

ಕತ್ತಲಾಗುವುದರೊಳಗೆ ಆವಂತೀ ರಾಜ್ಯ ಸಿಗಲಿಲ್ಲವಾಗಿ ಅವರೆಲ್ಲರೂ ಕಾಡಿನ ಒಂದು ದಟ್ಟ ಮರದ ಕೆಳಗೆ ಬೀಡುಬಿಟ್ಟರು. ಕತ್ತೆ ಮತ್ತು ನಾಯಿ ಹುಲ್ಲಿನ ಮೇಲೆ ಮಲಗಿದುವು. ಬೆಕ್ಕು ಮರದ ರೆಂಬೆಯ ಮೇಲೆ ಪವಡಿಸಿತು. ಹುಂಜ ಮರದ ತುತ್ತತುದಿಗೇರಿ ಸುತ್ತಲೂ ವೀಕ್ಷಿಸಿದಾಗ ದೂರದಲ್ಲೊಂದು ಬೆಳಕು ಕಾಣಿಸಿತು. ಹುಂಜ ಉತ್ಸಾಹದಿಂದ ಕೆಳಗಿಳಿದು, ``ದೂರದಲ್ಲೊಂದು ಮನೆ ಇರ್ಬೇಕು. ಬೆಳಕು ಕಾಣುತ್ತೆ, ಬನ್ನಿ ಹೋಗೋಣ" ಎಂದಿತು ``ಮನೆ ಎಂದ್ಮೇಲೆ ತಿನ್ನೋಕೂ ಏನಾದ್ರೂ ಸಿಗುತ್ತೆ" ಎಂದಿತು ನಾಯಿ.

ನಾಲ್ವರೂ ನಡೆಯುತ್ತಾ, ಮನೆಯ ಸಮೀಪಕ್ಕೆ ಬಂದರು. ಎಲ್ಲರಿಗಿಂತ ಎತ್ತರವಾದ ಕತ್ತೆ ಕಿಟಕಿಗೆ ಮುಖ ಇಟ್ಟು ಒಳಗೆ ನೋಡಿ ``ದೊಡ್ಡ ಮೇಜಿನ ಮೇಲೆ ಬಗೆ ಬಗೆಯ ಭಕ್ಷ್ಯಗಳಿವೆ. ಕಳ್ಳರು ಕೂತು ತಿನ್ತಾ ಮಜಾ ಮಾಡ್ತಿದಾರೆ"ಎಂದಿತು.
``ಹಾಗಾದ್ರೆ ನಾವಿರೋಕೆ ಇದು ಪ್ರಶಸ್ತವಾದ ಜಾಗ" ಎಂದಿತು ಹುಂಜ. ಪ್ರಾಣಿಗಳೆಲ್ಲಾ ಒಟ್ಟಿಗೆ ಕುಳಿತು ಒಂದು ಹಂಚಿಕೆ ಹೂಡಿದುವು. ಅದರ ಪ್ರಕಾರ ಕತ್ತೆ ಕಿಟಕಿಯ ಮೇಲೆ ತನ್ನ ಮುಂಗಾಲುಗಳನ್ನಿಟ್ಟುಕೊಂಡು ನಿಂತಿತು. ಅದರ ಬೆನ್ನ ಮೇಲೆ ತನ್ನ ಮುಂಗಾಲುಗಳನ್ನಿಟ್ಟಿತು ನಾಯಿ.ನಾಯಿಯ ಬೆನ್ನ ಮೇಲೆ ಬೆಕ್ಕು ಕುಳಿತುಕೊಂಡಿತು. ಅದರ ತಲೆಯ ಮೇಲೆ ಹುಂಜ. ಎಲ್ಲ ಪ್ರಾಣಿಗಳೂ ಒಟ್ಟಿಗೆ ಸಂಗೀತ ಆರಂಭಿಸಿದವು. ಕತ್ತೆ ಅರಚಿತು, ನಾಯಿ ಬಗುಳಿತು. ಬೆಕ್ಕು ಮಿಯಗುಟ್ಟಿತು, ಹುಂಜ ಒರಲಿತು. ಅನಂತರ ಒಂದೇ ಉಸುರಿನಲ್ಲಿ ಅವೆಲ್ಲವೂ ಕಿರುಚುತ್ತಾ ಕಿಟಕಿಯ ಮುಖಾಂತರ ಒಳನುಗ್ಗಿದುವು. ಕಳ್ಳರು ಹೆದರಿ ಚೆಲ್ಲಾ ಪಿಲ್ಲಿಯಾಗಿ ಓಡಿಹೋದರು.

ಆಗ ಪ್ರಾಣಿಗಳು ಸಂತೋಷದಿಂದ ಕಳ್ಳರು ಉಳಿಸಿದ್ದ ತಿಂಡಿಯನ್ನು ಗಬಗಬನೆ ತಿಂದವು. ಹೊಟ್ಟೆ ತುಂಬಿದ ಬಳಿಕ ಮನೆಯ ದೀಪಗಳನ್ನು ಆರಿಸಿ ನಿದ್ದೆಗೆ ತಮಗೆ ಪ್ರಿಯವಾದ ಜಾಗಗಳನ್ನು ಆರಿಸಿಕೊಂಡುವು. ಕತ್ತೆ ಹಿತ್ತಲಿನ ಒಣ ಹುಲ್ಲಿನ ಮೇಲೆ ಮಲಗಿತು. ನಾಯಿ ಹಿಂಬಾಗಿಲಲ್ಲಿ, ಬೆಕ್ಕು ಒಲೆಯ ಬದಿಯಲ್ಲಿ, ಹುಂಜ ತೊಲೆಯ ಮೇಲೆ ನಿದ್ದೆ ಮಾಡಿದುವು.

ಇತ್ತ ಕಳ್ಳರು ``ಎಲ್ಲವೂ ನಿಶ್ಶಬ್ದವಾಗಿದೆ. ನೋಡಿ ಬರೋಣ"ಎಂದು ಮನೆಯತ್ತ ಬಂದರು. ಅವರಲ್ಲಿ ಧೈರ್ಯವಂತನೊಬ್ಬನು ಮನೆಯೊಳಗೆ ಹೋಗಿ ದೀಪ ಹೊತ್ತಿಸಲೆಂದು ಬೆಂಕಿಕಡ್ದಿ ಹಿಡಿದು ಒಲೆಯ ಬಳಿಗೆ ಹೋದ. ಅಲ್ಲಿ ಮಿನುಗುತ್ತಿದ್ದ ಬೆಕ್ಕಿನ ಕಣ್ಣುಗಳನ್ನು ನೋಡಿ, ಅವು ಕೆಂಡ ಎಂದು ಭಾವಿಸಿ ಕಡ್ಡಿಯನ್ನಿಟ್ಟಾಗ, ಬೆಕ್ಕು ಸಿಟ್ಟಿನಿಂದ ಅವನ ಮುಖ ಪರಚಿತು. ಕಳ್ಳ ಗಾಬರಿಯಾಗಿ ಹಿಂಬಾಗಿಲಿಗೆ ಓಡಿದಾಗ ನಾಯಿ ಅವನ ಕಾಲನ್ನು ಕಚ್ಚಿತು. ಅಲ್ಲಿಂದ ಅವನು ಹಿತ್ತಲಿಗೆ ಹಾರಿದಾಗ ಕತ್ತೆ ಒದೆಯಿತು. ಕಳ್ಳ ಹೆದರಿ ಓಡುತ್ತಿರುವುದನ್ನು ಗಮನಿಸಿದ ಹುಂಜ ಒಂದೇ ಸಮನೆ ಕೊ ಕೊ ಕೋ ಎಂದು ಕಿರಿಚಲಾರಂಭಿಸಿತು.

ಜೀವ ಉಳಿದರೆ ಸಾಕು ಎಂದು ಏಳುತ್ತಾ ಬೀಳುತ್ತಾ ತನ್ನ ಸಂಗಡಿಗರನ್ನು ಕೂಡಿಕೊಂಡ ಕಳ್ಳ ``ಅಯ್ಯೋ, ಆ ಮನೆಯ ತುಂಬ ದೆವ್ವಗಳಿವೆಯಪ್ಪ. ನಾನು ದೀಪ ಹತ್ತಿಸೋಕೆ ಒಲೆ ಹತ್ರ ಹೋದ್ರೆ ಒಂದು ದೆವ್ವ ನನ್ನ ಪರಚ್ತು. ಬಾಗಿಲ ಹತ್ರ ಇನ್ನೊಂದು ಮಾಯಾವಿ ಚಾಕಿನಿಂದ ಕಾಲಿಗೆ ಇರೀತು. ಹಿತ್ಲಲ್ಲಿ ಕಪ್ಪು ದೆವ್ವವೊಂದು ಕೋಲು ತಕೊಂಡು ಹೋಡೀತು. ತೊಲೆಯ ಮೇಲೆ ಕುಳಿತಿದ್ದ ಪಿಶಾಚಿ `ಅವನನ್ನಿತ್ಲಾಗೆ ಹಾಕು' ಎಂತ ಅರಚ್ತು. ನಾನು ಹೆದರ್ಕೊಂಡು ಓಡ್ಬಂದೆ"ಎಂದ.

ಅದನ್ನು ಕೇಳಿದ ಕಳ್ಳರು ದೆವ್ವದ ಮನೆ ಸಹವಾಸ ಬೇಡ ಎಂದು ಅಲ್ಲಿಂದ ಪಲಾಯನ ಮಾಡಿದರು. ಆದರೆ ಪ್ರಾಣಿಗಳು ತಮ್ಮ ಹೊಸ ಮನೆಯಲ್ಲಿ ಸಂತೋಷವಾಗಿ ದಿನ ಕಳೆದುವು. ಇವತ್ತೂ ಕೂಡ ನೀವು ಅಲ್ಲಿಗೆ ಹೋದ್ರೆ ಆ ಪ್ರಾಣಿಗಳನ್ನು ಕಾಣಬಹುದು.