ಹಚ್ಚೇವು ಕನ್ನಡದ ದೀಪ
ಕರುನಾಡದೀಪ
ಸಿರಿನುಡಿ ಯದೀಪ
ಒಲವೆತ್ತಿ ತೋರುವಾ ದೀಪ | ಹಚ್ಚೇವು
ಇಂದಿನ ಕಥೆ
ಚೈತ್ರ ಮಾಸ, ಶುಕ್ಲ ಪಕ್ಷ, ನವಮಿ.

ಕಪ್ಪೇ ರಾಜಕುಮಾರಿ

ಒಂದಾನೊಂದು ಕಾಲದಲ್ಲಿ ವೃದ್ಧ ಹೆಂಗಸೊಬ್ಬಳಿದ್ದಳು. ಅವಳಿಗೆ ಮೂರು ಜನ ಗಂಡುಮಕ್ಕಳಿದ್ದರು. ಅವರು ಪ್ರಾಪ್ತ ವಯಸ್ಕರಾದಾಗ ಮದುವೆ ಮಾಡಿಕೊಳ್ಳಬೇಕೆಂದು ತಾಯಿ ಸೂಚಿಸಿದಳು. ದೊಡ್ಡವರಿಂದ ತಮ್ಮ ಪ್ರಿಯತಮೆಯರನ್ನು ಆಗಲೇ ಗೊತ್ತು ಮಾಡಿಕೊಂಡಿದ್ದರಿಂದ ತಾಯಿಯ ಸೂಚನೆಗೆ ಸಂತೋಷದಿಂದ ಒಪ್ಪಿಕೊಂಡರು. ಕಿರಿಯವನು ನಾಚಿಕೆಯ ಸ್ವಭಾವದವನಾಗಿದ್ದುದರಿಂದ ಅದುವರೆಗೆ ಯಾವ ಹುಡುಗಿಯನ್ನೂ ಮಾತನಾಡಿಸಿರಲಿಲ್ಲ. ತಾಯಿಯೆಂದಳು: ``ನಿಮ್ಮ ಹೆಂಡತಿ ಆಗುವವಳಿಗೆ ಎಲ್ಲ ಕುಶಲಕಲೆಗಳೂ ತಿಳಿದಿದ್ದರೆ ಚೆನ್ನ. ಅವರ ಪರೀಕ್ಷೆ ಮಾಡೋದಕ್ಕೆ ನಾನು ಕೊಡೋ ನೂಲಿನ ಉಂಡೆಗಳನ್ನು ನಿಮ್ಮ ಪ್ರಿಯತಮೆಯರಿಗೆ ಕೊಡಿ. ಯಾರು ಅದರಿಂದ ಚೆನ್ನಾಗಿ ಬಟ್ಟೆನೆಯ್ತಾರೋ ಆಕೆ ನನ್ನ ಮೆಚ್ಚಿನ ಸೊಸೆಯಾಗ್ತಾಳೆ." ದೊಡ್ಡವರಿಬ್ಬರೂ ಆನಂದ ದಿಂದ ನೂಲಿನ ಉಂಡೆಗಳನ್ನು ತೆಗೆದುಕೊಂಡು ಹೊರಟರು. ಕಿರಿಯವನು ದುಃಖದಿಂದ ಕೆರೆಯೊಂದರ ಬದಿಯಲ್ಲಿ ಕುಳಿತ. ಆಗ ಇದ್ದಕ್ಕಿದ್ದ ಹಾಗೆ ಒಂದು ದೊಡ್ಡ ಕಪ್ಪೆ ಕೆರೆಯಿಂದ ಹೊರಗೆ ಜಿಗಿದು, ``ಯಾಕೆ ಸಪ್ಪಗಿದ್ದೀ ಯುವಕ?" ಎಂದು ಕೇಳಿತು, ಕಿರಿಯವನು ತನ್ನ ಕಥೆ ಎಲ್ಲವನ್ನೂ ಹೇಳಿಕೊಂಡಾಗ ಕಪ್ಪೆ, ``ನೀನೇನೂ ಯೋಚಿಸ್ಬೇಡ, ಉಂಡೇನ ಇಲ್ಕೊಡು. ನಾನು ನೆಯ್ದು ಕೊಡ್ತೀನಿ" ಎಂದಿತು.

ಹಲವು ದಿನಗಳ ಬಳಿಕ ದೊಡ್ಡವರಿಬ್ಬರೂ ತಮ್ಮ ಪ್ರಿಯತಮೆಯರು ನೆಯ್ದ ಬಟ್ಟೆಗಳನ್ನು ತಂದು ತಾಯಿಗೆ ತೋರಿಸಿದರು. ಕಿರಿಯವನು ಕೆರೆಯ ಬಳಿಗೆ ಹೋದಾಗ ಕಪ್ಪೆ ತಾನು ಸಿದ್ಧಪಡಿಸಿದ ಬಟ್ಟೆಯನ್ನು ಕೊಟ್ಟಿತು. ಅದನ್ನು ಕಂಡ ತಾಯಿ ``ಅಬ್ಬಾ ಎಷ್ಟು ಸೊಗಸಾಗಿದೆ ಕಿರಿಯ ಸೊಸೇನೇ ನಂಗೆ ಅಚ್ಚು ಮೆಚ್ಚು. ಆದರೆ ಇದೊಂದು ಪರೀಕ್ಷೆ ಸಾಲದು. ನಾನು ಮೂರು ನಾಯಿಮರಿಗಳ್ನ ಕೊಡ್ತೀನಿ. ಯಾರು ಅವಕ್ಕೆ ಒಳ್ಳೇ ನಡತೆ ಆಟಗಳ್ನ ಕಲಿಸ್ತಾರೋ ಅವರೇ ನಂಗೆ ಅಚ್ಚು ಮೆಚ್ಚಾಗ್ತಾರೆ"ಎಂದಳು. ದೊಡ್ಡವರಿಬ್ಬರೂ ಹಲವು ತಿಂಗಳುಗಳ ಬಳಿಕ ವಾಪ್ಸು ತಂದ ನಾಯಿಮರಿಗಳು ಅವಿಧೇಯ ಮರಿಗಳಾಗಿ ಇದ್ದುವು; ಮುದುಕಿಯನ್ನು ಹೆದರಿಸಿದುವು. ಕಿರಿಯವನ ನಾಯಿಮರಿ ಮುದ್ದಾಗಿಯೂ ಅನೇಕ ಆಟಗಳನ್ನು ಆಡುವಂಥದ್ದಾಗಿಯೂ ಇದ್ದಿತು. ಅದನ್ನು ನೋಡಿದ ತಾಯಿ ಮೆಚ್ಚುಗೆಯಿಂದ ``ಈ ಸಾರೀನೂ ಕಿರಿ ಸೊಸೆ ನಂಗೆ ಮೆಚ್ಚಾಗಿದ್ದಾಳೆ. ಇರ್ಲಿ. ನೀವೆಲ್ಲಾ ಹೋಗಿ ನಿಮ್ಮ ಹೆಂಡ್ತೀರನ್ನ ಕರ್ಕೊಂಡ್ಬನ್ನಿ. ನಾನು ಮದ್ವೆಗೆ ಎಲ್ಲಾ ಸಿದ್ಧ ಮಾಡ್ತೀನಿ" ಎಂದು ನುಡಿದಳು.

ದೊಡ್ಡವರಿಬ್ಬರೂ ಸಂಭ್ರಮದಿಂದ ಕುಣಿಯುತ್ತಾ ಓಡಿದರು. ಕಿರಿಯವನು ಸಪ್ಪೆ ಮುಖ ಹಾಕಿಕೊಂಡು ಕೆರೆಯ ಬಳಿಗೆ ಬಂದನು. ``ಯಾಕೆ ಸಪ್ಪಗಿದ್ದಿ ಯುವಕ?"ಎಂದು ಕೇಳಿತು ಕಪ್ಪೆ. ಯುವಕ ತನ್ನ ಸಂಕಟವನ್ನು ವಿವರಿಸಿದಾಗ ``ನನ್ನನ್ನ ನಿನ್ನ ಹೆಂಡ್ತಿ ಮಾಡ್ಕೊಳ್ತೀಯಾ?"ಎಂದು ಕಪ್ಪೆ ಕೇಳಿತು. ``ನೀನು ಹೆಂಡ್ತಿ ಆದ್ರೆ ನಂಗೇನು ಉಪಯೋಗ?"ಎಂದು ಕೇಳಿದ ಯುವಕ. ``ನನ್ನ ಮದ್ವೆ ಮಾಡ್ಕೊಳ್ತಿಯೊ ಇಲ್ವೊ ಅಷ್ಟು ಹೇಳು"ಎಂದು ಹಟದಿಂದ ಕೇಳಿತು ಕಪ್ಪೆ.

``ಆಗ್ಲೀ, ಇಲ್ಲ ಅಂತ ಹ್ಯಾಗನ್ಲಿ? ನೀನು ನಂಗೆ ತುಂಬಾ ಸಹಾಯ ಮಾಡಿದೀಯ"ಎಂದು ಯುವಕ ನುಡಿದೊಡನೆ ಕಪ್ಪೆ ಕೆರೆಯೊಳಗೆ ಹಾರಿ ಮಾಯವಾಯಿತು. ಸ್ವಲ್ಪ ಹೊತ್ತಿನಲ್ಲೇ ಸುಂದರವಾದ ಸಾರೋಟಿನಲ್ಲಿ ಕುಳಿತು ಬಂದ ಕಪ್ಪೆ ಅವನನ್ನೂ ಅದರಲ್ಲಿ ಕುಳಿತುಕೊಳ್ಳುವಂತೆ ಸೂಚಿಸಿ, ಸಾರೋಟನ್ನು ಹಳ್ಳಿಯ ಕಡೆ ನಡೆಸಲಾರಂಭಿಸಿತು.

ಹಾಗೆ ಅವರು ಹೋಗುತ್ತಿದ್ದಾಗ ದಾರಿಯಲ್ಲಿ ಮೂರು ಜನ ವಿಕಾರರೂಪದ ಮುದುಕಿಯರು ಎದುರಿಗೆ ಸಿಕ್ಕಿದರು. ಅವರಲ್ಲೊಬ್ಬಳು ಕುರುಡು. ಇನ್ನೊಬ್ಬಳಿಗೆ ಬೆನ್ನಿನ ಮೇಲೆ ದೊಡ್ಡ ಡುಬ್ಬವಿತ್ತು. ಮೂರನೆಯವಳ ಗಂಟಲಲ್ಲಿ ಮುಳ್ಳೊಂದು ಸಿಕ್ಕಿಕೊಂಡಿತ್ತು.

ಸಾರೋಟಿನ ಮೆತ್ತಗಿನ ದಿಂಬುಗಳ ಮೇಲೆ ಕುಳಿತು ಚಾಟಿಯಿಂದ ಕುದುರೆಗಳನ್ನು ಓಡಿಸುತ್ತಾ ಕುಳಿತಿದ್ದ ಕಪ್ಪೆಯನ್ನು ನೋಡಿ ಅವರು ಮೂವರೂ ಬಿದ್ದು ಬಿದ್ದು ನಗಲಾರಂಭಿಸಿದರು.ಅದರಿಂದ ಕುರುಡಿಯ ಕಣ್ಣು ಗುಡ್ಡೆಗಳು ಹೊರಬಂದು ಅವಳಿಗೆ ಮತ್ತೆ ಕಣ್ಣು ಕಾಣುವಂತಾಯಿತು. ಹೊರಳಾಟದಿಂದ ಗೂನುಬೆನ್ನಿನವಳ ಡುಬ್ಬ ಮಂಗಮಾಯವಾಯಿತು. ಮೂರನೆಯವಳ ಗಂಟಲಲ್ಲಿದ್ದ ಮುಳ್ಳು ಹಾರಿ ಹೊರಗೆ ಬಿತ್ತು. ಹೀಗೆ ಶಾಪದಿಂದ ವಿಮುಕ್ತರಾದ ಆ ಮೂವರು ಕಿನ್ನರಿಯರು ಕಪ್ಪೆಗೆ ಬಹುಮಾನ ಕೊಡಲು ನಿರ್ಧರಿಸಿ ಅದರ ಹತ್ತಿರ ಬಂದರು.

ಮೊದಲ ಕಿನ್ನರಿ ತನ್ನ ಮಾಯಾದಂಡದಿಂದ ಕಪ್ಪೆಯನ್ನು ಮುಟ್ಟಿದಿಡನೆ ಅದು ಅತ್ಯಂತ ಸುಂದರಿಯಾದ ರಾಜಕುಮಾರಿ ಆಯಿತು. ಎರಡನೆಯ ಕಿನ್ನರಿ ತನ್ನ ದಂಡವನ್ನು ಆಡಿಸಿದೊಡನೆ ಸಾರೋಟು ಬಂಗಾರದ್ದಾಯಿತು; ಭವ್ಯ ಅಶ್ವಗಳೆರಡು ಹುಟ್ಟಿದವು. ಮೂರನೆಯ ಕಿನ್ನರಿಯ ಮಾಯಾದಂಡದಿಂದ ರಾಜಕುಮಾರಿಯ ಮಡಿಲಲ್ಲಿ ಯಾವಾಗಲೂ ಬಂಗಾರದ ನಾಣ್ಯಗಳಿಂದ ತುಂಬಿದ ಕೈ ಚೀಲವೊಂದು ಬಿತ್ತು. ಅನಂತರ ಮೂವರು ಕಿನ್ನರಿಯರೂ ಅವರನ್ನು ಹರಸಿ ಮಾಯವಾದರು.

ಕಿರಿಯ ಮಗನೂ ರಾಜಕುಮಾರಿಯೂ ಸಾರೋಟಿನಲ್ಲಿ ಬಂದಿಳಿದಾಗ ತಾಯಿಗೆ ಅತ್ಯಂತ ಸಂತೋಷವಾಯಿತು. ಅವರ ವಿವಾಹ ವೈಭವದಿಂದ ನಡೆದು ಎಲ್ಲರೂ ಸುಖದಿಂದಿದ್ದರು.