ಹಚ್ಚೇವು ಕನ್ನಡದ ದೀಪ
ಕರುನಾಡದೀಪ
ಸಿರಿನುಡಿ ಯದೀಪ
ಒಲವೆತ್ತಿ ತೋರುವಾ ದೀಪ | ಹಚ್ಚೇವು
ಇಂದಿನ ಕಥೆ
ಕಾರ್ತಿಕಮಾಸ,ಶುಕ್ಲಪಕ್ಷ, ಪಂಚಮೀ.

ಬಲೀಂದ್ರ

ಬಲೀಂದ್ರನೆಂಬ ಮಹಾರಾಜನು ಭೂಲೋಕವನ್ನು ಆಳುತ್ತಿದ್ದ. ಅವನು ಮಹಾಪರಾಕ್ರಮಿಯೂ ಆಗಿದ್ದ. ಅವನು ಶೌರ್ಯದಿಂದ ದೇವತೆಗಳನ್ನು ಜಯಿಸಲೂ ಸಿದ್ಧತೆ ಮಾಡಿಕೊಳ್ಳುತ್ತಿದ್ದ.

ಆಗ ದೇವತೆಗಳಲ್ಲಾ ಹೆದರಿ ವಿಷ್ಣುವಿನ ಬಳಿಗೆ ಬಂದು:

``ಮಹಾಪ್ರಭೂ, ಬಲೀಂದ್ರನಿಂದ ನಮಗೆ ಉಳಿಗಾಲವಿಲ್ಲ. ನಮ್ಮನ್ನು ರಕ್ಷಿಸು" ಎಂದು ಬೇಡಿಕೊಂಡರು.

``ಆಗಲಿ, ಹೆದರಬೇಡಿ" ಎಂದು ಅಭಯವನ್ನಿತ್ತ ವಿಷ್ಣು ವಾಮನನ ಅವತಾರ ಧರಿಸಿ ಭೂಲೋಕಕ್ಕೆ ಬಂದ.

ಬಲೀಂದ್ರ ಪೂಜೆ ಮಾಡುತ್ತಿದ್ದ ಜಾಗಕ್ಕೆ ಹೋಗಿ ``ನಾನು ಬಡ ಬ್ರಾಹ್ಮಣ. ನನಗೇನಾದರೂ ಭಿಕ್ಷೆ ನೀಡಿ" ಎಂದು ಕೇಳಿದ.

``ನಿನಗೇನುಬೇಕೋ ಕೇಳು ಕೊಡ್ತೇನೆ" ಎಂದ ಬಲೀಂದ್ರ.

``ನನಗೆ ಮೂರು ಪಾದ ಜಾಗ ಬೇಕು."

``ಅಷ್ಟೇನೇ? ಅಳೆದುಕೋ" ಎಂದು ನುಡಿದ ಬಲೀಂದ್ರ.

ಬಲೀಂದ್ರ ನೋಡನೋಡುತ್ತಿದ್ದ ಹಾಗೆಯೇ ವಾಮನನ ಆಕೃತಿ ಬೆಳೆದು ಆಕಾಶವನ್ನೇ ಮುಟ್ಟಿತು. ವಾಮನ ಒಂದು ಪಾದವನ್ನು ಇಡೀ ಭೂಲೋಕದ ಮೇಲಿಟ್ಟ. ಎರಡನೆಯ ಪಾದ ಸುರಲೋಕವನ್ನು ತುಂಬಿತು.

``ಮೂರನೆಯ ಪಾದವನ್ನೆಲ್ಲಿಡಲಿ?" ಎಂದು ಕೇಳಿದ ವಾಮನ. ಅವನು ಸರ್ವಶಕ್ತನಾದ ಪರಮಾತ್ಮ ಎಂದು ತಿಳಿದ ಬಲೀಂದ್ರ ತಲೆಬಾಗಿ:

``ಪ್ರಭೂ, ಆ ಪಾದವನ್ನು ನನ್ನ ತಲೆಯ ಮೇಲಿಡು" ಎಂದ. ವಾಮನ ತನ್ನ ಪಾದವನ್ನು ಬಲೀಂದ್ರನ ತಲೆಯ ಮೇಲಿಟ್ಟು ಅವನನ್ನು ಪಾತಾಳಕ್ಕೆ ತುಳಿದ.

ಆಗ ಬಲೀಂದ್ರನ ಉದಾರತೆಗೆ ಮೆಚ್ಚಿ ವಿಷ್ಟು ಹೇಳಿದ:

``ಬಲೀಂದ್ರನೇ, ನಿನ್ನ ಉದಾರಚರಿತೆ ಜಗತ್ತಿರುವವರೆಗೂ ಬದುಕಲಿ. ನಿನಗೇನು ವರ ಬೇಕು ಕೇಳು."

``ಪರಮಾತ್ಮ, ಭೂಲೋಕದ ಜನ ವರ್ಷಕ್ಕೊಂದು ದಿನ ತಮ್ಮ ಮನೆಗಳಲ್ಲೆಲ್ಲಾ ದೀಪ ಹಚ್ಚಿ ನನ್ನನ್ನು ಸ್ಮರಿಸಲಿ. ಇದೇ ನಾನು ಬೇಡುವ ವರ."

``ತಥಾಸ್ತು" ಎಂದ ನಾರಾಯಣ.

ಅಂದಿನಿಂದ ಪ್ರತಿ ಬಲಿಪಾಡ್ಯಮಿಯಂದು ಭಾರತೀಯರು ಮನೆಯ ತುಂಬಾ ದೀಪ ಹಚ್ಚಿಟ್ಟು ಬಲಿಮಹಾರಾಜನನ್ನು ಸ್ಮರಿಸುತ್ತಾರೆ.