ಹಚ್ಚೇವು ಕನ್ನಡದ ದೀಪ
ಕರುನಾಡದೀಪ
ಸಿರಿನುಡಿ ಯದೀಪ
ಒಲವೆತ್ತಿ ತೋರುವಾ ದೀಪ | ಹಚ್ಚೇವು
ಇಂದಿನ ಕಥೆ
ಮಾರ್ಗಶಿರಮಾಸ,ಶುಕ್ಲಪಕ್ಷ,ಅಷ್ಟಮೀ.

ಸಮುದ್ರ ಮಥನ

ಒಂದು ದಿನ ದೇವೇಂದ್ರನು ಅಮರಾವತಿಯ ಬೀದಿಯಲ್ಲಿ ತನ್ನ ಪಟ್ಟದ ಆನೆಯ ಮೇಲೆ ಕುಳಿತು ಹೋಗುತ್ತಿದ್ದ. ಆಗ ಅವನಿಗೆ ಎದುರಾಗಿ ಬಂದ ದೂರ್ವಾಸಮುನಿಗಳು ಆಶೀರ್ವಾದಪೂರ್ವಕವಾಗಿ ತಮ್ಮ ಕೊರಳಲ್ಲಿದ್ದ ಮಾಲೆಯನ್ನು ಅವನಿಗೆ ಕೊಟ್ಟರು. ಇಂದ್ರ ಅಸಡ್ಡೆಯಿಂದ ಆ ಮಾಲೆಯನ್ನು ಆನೆಯ ನೆತ್ತಿಯ ಮೇಲೆಸೆದ. ಅದು ಕೆಳಗೆ ಬಿದ್ದಾಗ ಅದನ್ನು ಆನೆ ಕಾಲಿನಿಂದ ಹೊಸಕಿ ಹಾಕಿತು. ಇದರಿಂದ ಸಿಟ್ಟಾದ ದೂರ್ವಾಸರು, ``ದೇವೇಂದ್ರ, ನಿನ್ನ ಅಧಿಕಾರ, ಐಶ್ವರ್ಯ ಹಾಳಾಗಿ ಹೋಗಲಿ" ಎಂದು ಶಪಿಸಿದರು. ಅದರಂತೆಯೇ ರಾಕ್ಷಸರು ಇಂದ್ರನನ್ನು ಸೋಲಿಸಿಬಿಟ್ಟರು. ದೇವೇಂದ್ರ ತನ್ನ ಐಶ್ವರ್ಯವನ್ನೆಲ್ಲಾ ಕಳೆದುಕೊಂಡ. ಆಗ ದುಃಖದಿಂದ ಅವನು ಇತರ ದೇವತೆಗಳೊಂದಿಗೆ ವಿಷ್ಣುವಿನಲ್ಲಿಗೆ ಹೋಗಿ ``ಲೋಕನಾಥ, ನಮ್ಮನ್ನು ರಕ್ಷಿಸು" ಎಂದು ಬೇಡಿಕೊಂಡ.

ವಿಷ್ಣು ``ಇಂದ್ರನೇ, ನೀವೀಗ ಹೋಗಿ ರಾಕ್ಷಸರೊಂದಿಗೆ ಸಂಧಾನಮಾಡಿಕೊಳ್ಳಿರಿ. ಸಕಲ ಮೂಲಿಕೆಗಳನ್ನು ಹಾಲಿನ ಸಮುದ್ರದಲ್ಲಿ ಹಾಕಿ ಕಡೆಯಿರಿ. ಮಂದರಪರ್ವತ ನಿಮ್ಮ ಕಡೆ ಗೋಲಾಗಲಿ. ಸರ್ಪರಾಜ ವಾಸುಕಿ ಹಗ್ಗವಾಗಲಿ. ನೀವೂ ರಾಕ್ಷಸರೂ ಸಮುದ್ರವನ್ನು ಕಡೆದ ಹಾಗೆ ಅದರಿಂದ ಅನೇಕ ದಿವ್ಯ ವಸ್ತುಗಳು ಹುಟ್ಟುತ್ತವೆ. ನೀವು ಅವೊಂದನ್ನೂ ಬಯಸಬೇಡಿ. ಕಟ್ಟಕಡೆಯಲ್ಲಿ ಅಮೃತ ಹುಟ್ಟುತ್ತದೆ. ಅದನ್ನು ಕುಡಿದವರಿಗೆ ಮುಪ್ಪು ಸಾವುಗಳಿಲ್ಲ. ಅಮೃತವನ್ನು ನಿಮಗೆ ನಾನು ದೊರಕಿಸಿಕೊಡ್ತೇನೆ" ಎಂದು ಅಭಯವಿತ್ತ.

ಅಮೃತದ ವಿಷಯ ಕೇಳಿದ ಕೂಡಲೇ ರಾಕ್ಷಸರೂ ಕಡೆಯಲು ಬಂದರು. ಕಡೆಗೋಲು ಬೀಳದಂತೆ ಅದಕ್ಕೆ ಆಧಾರವಾಗಿ ವಿಷ್ಣು ಆಮೆಯಾಗಿ ಸಮುದ್ರದೊಳಗೆ ನಿಂತ. ದೇವತೆಗಳು ವಾಸುಕಿಯ ಬಾಲವನ್ನೂ ರಾಕ್ಷಸರು ತಲೆಯ ಆಗವನ್ನೂ ಹಿಡಿದು ಹಾಲ್ಗಡಲನ್ನು ಕಡೆಯಲಾರಂಭಿಸಿದರು.

ಮೊಟ್ಟಮೊದಲು ವಿಷ ಹುಟ್ಟಿತು. ಅದರ ಬೇಗೆ ತಾಳಲಾರದೆ ಎಲ್ಲರೂ ತತ್ತರಿಸಿದರು. ಆಗ ಪರಮೇಶ್ವರ ಪ್ರತ್ಯಕ್ಷನಾಗಿ ಆ ಹಾಲಾಹಲವನ್ನು ಕುಡಿದು ನೀಲಕಂಠನಾದ.

ಅನಂತರ ಕಾಮಧೇನುವೆಂಬ ಹಸು ಹುಟ್ಟಿತು. ಅದನ್ನು ಋಷಿಗಳು ತೆಗೆದುಕೊಂಡರು. ಉಚ್ಚೈಶ್ರವಸ್ಸು ಎಂಬ ಬಿಳಿ ಕುದುರೆಯನ್ನು ರಾಕ್ಷಸರಾಜ ತೆಗೆದುಕೊಂಡ. ಐರಾವತ ಎಂಬ ಆನೆ ಹುಟ್ಟಿದಾಗ ದೇವೇಂದ್ರ ಅದನ್ನು ಸ್ವೀಕರಿಸಿದ. ಕೌಸ್ತುಭರತ್ನವನ್ನು ಶ್ರೀಹರಿ ತನ್ನ ಎದೆಯಲ್ಲಿ ಧರಿಸಿದ. ಪಾರಿಜಾತ, ಕಲ್ಪವೃಕ್ಷಗಳು, ಅಪ್ಸರೆಯರು ಅನಂತರ ಜನಿಸಿದರು. ಆ ಬಳಿಕ ಕಮಲದ ಮೇಲೆ ಲಕ್ಷ್ಮೀದೇವಿ ಕಂಡಳು. ಅವಳನ್ನು ಶ್ರೀಹರಿ ವರಿಸಿದ. ಕಟ್ಟಕಡೆಯದಾಗಿ ದೇವವೈದ್ಯ ಧನ್ವಂತರಿ ಅಮೃತ ಕಲಶವನ್ನು ಹಿಡಿದುಕೊಂಡು ಮೇಲೆದ್ದ. ದೇವತೆಗಳೂ ದಾನವರೂ ``ಅಮೃತ ನಮಗೆ ನಮಗೆ" ಎಂದು ಹೋರಾಡಲಾರಂಭಿಸಿದರು.

ಆಗ ಶ್ರೀಹರಿಯು ಮೋಹಿನಿಯ ರೂಪ ಧರಿಸಿ ಅಲ್ಲಿ ಪ್ರತ್ಯಕ್ಷನಾದ. ಆ ಮೋಹಿನಿ ಭುವನಮೋಹನ ಸುಂದರಿಯಾಗಿದ್ದುದರಿಂದ ಎಲ್ಲರಿಗೂ ಅವಳನ್ನು ಪಡೆಯುವ ಆಸೆ ಆಯಿತು. ಕಡೆಗೆ ಅವರೆಲ್ಲ ಸೇರಿ ``ಮೋಹಿನಿ, ಈ ಅಮೃತದ ಪಾತ್ರೆಯನ್ನು ನಿನಗೆ ಕೊಡ್ತೇವೆ. ನೀನು ಯಾರಿಗೂ ಅನ್ಯಾಯವಾಗದಂತೆ ಎಲ್ಲರಿಗೂ ಹಂಚು" ಎಂದರು.

``ಆಗಲಿ. ಅದರೆ ನಾನು ಮಾಡಿದುದನ್ನು ನೀವು ಒಪ್ಪಿಕೊಳ್ಳಬೇಕು" ಎಂದು ಶರತ್ತು ಹಾಕಿದಳು ಮೋಹಿನಿ.

ದೇವತೆಗಳು ಒಂದು ಸಾಲಿನಲ್ಲೂ, ದಾನವರು ಇನ್ನೊಂದು ಸಾಲಿನಲ್ಲೂ ಕುಳಿತರು. ಮೋಹಿನಿ ಮೊದಲು ರಾಕ್ಷಸರ ಕಡೆಗೆ ಬಂದು ತನ್ನ ಮಾತಿನಿಂದಲೇ ಅವರನ್ನು ಉಪಚರಿಸಿದಳು. ಅನಂತರ ದೇವತೆಗಳ ಸಾಲಿಗೆ ಬಂದು ಅವರಿಗೆ ಅಮೃತ ಹಂಚಿದಳು.

ಹೀಗೆ ದೇವಾನುಗ್ರಹವಿದ್ದ ದೇವತೆಗಳಿಗೆ ಅಮೃತ ಸಿಕ್ಕಿತು.