ಪರಿವಿಡಿ

This book is available at Ramakrishna Ashrama, Mysore.

ಆದಿಪರ್ವ

ಮಹಾಭಾರತವನ್ನು ಲೋಕಕ್ಕೆ ಕೊಟ್ಟವರು ಪರಾಶರ ಮಹರ್ಷಿಯ ಮಗನಾದ ವೇದವ್ಯಾಸರು. ವೇದಗಳನ್ನು ನಾಲ್ಕಾಗಿ ವಿಂಗಡಿಸಿದ್ದರಿಂದ ಅವರಿಗೆ ವೇದವ್ಯಾಸರೆಂದು ಹೆಸರು. ಮಹಾಭಾರತ ಕಥೆಯನ್ನು ಮನಸ್ಸಿನಲ್ಲಿ ಕಲ್ಪಿಸಿಕೊಂಡ ಅವರು, ಅದನ್ನು ಕಾವ್ಯವಾಗಿ ಬರೆಸುವ ಉದ್ದೇಶದಿಂದ, ಸೃಷ್ಟಿಕರ್ತನಾದ ಬ್ರಹ್ಮನನ್ನು ಕುರಿತು ಧ್ಯಾನಿಸಿದರು. ಬ್ರಹ್ಮನ ಸಲಹೆಯಂತೆ ಈ ಕಾರ್ಯಕ್ಕೆ ವಿದ್ಯಾಧಿದೇವತೆಯಾದ ಗಣಪತಿಯೇ ಸರಿಯೆಂದು ನಿರ್ಧರಿಸಿ, ಆತನನ್ನು ಕುರಿತು ತಪಸ್ಸು ಮಾಡಿದರು. ಪ್ರತ್ಯಕ್ಷನಾದ ಆತನನ್ನು ಸೂಕ್ತ ರೀತಿಯಲ್ಲಿ ಪೂಜಿಸಿ ಉಪಚರಿಸಿದ ವ್ಯಾಸರು, `ವಿಘ್ನೇಶ, ನಾನು ಮಹಾಭಾರತ ಕಥೆಯನ್ನು ಬಾಯಿಂದ ಹೇಳುತ್ತ ಹೋಗುತ್ತೇನೆ. ಲೋಕಹಿತಾರ್ಥವಾಗಿ ನೀನು ಅದನ್ನು ಬರೆದುಕೊಳ್ಳಬೇಕೆಂದು ನನ್ನ ಪ್ರಾರ್ಥನೆ' ಎನ್ನಲು, ಗಣಪತಿಯು, `ಮಹರ್ಷಿ, ಹಾಗೇ ಆಗಲಿ. ಆದರೆ ಬರೆಯುವಾಗ ಮಧ್ಯೆ ನಿಲ್ಲಿಸದಂತೆ ನೀನು ಹೇಳಬೇಕು' ಎಂಬ ತನ್ನ ನಿಬಂಧನೆಯನ್ನು ಮುಂದಿಟ್ಟನು. ವ್ಯಾಸರು ಆತ್ಮರಕ್ಷಣಾರ್ಥವಾಗಿ `ನಾನು ಹೇಳಿದುದನ್ನು ನೀನು ಅರ್ಥಮಾಡಿಕೊಂಡೇ ಬರೆಯಬೇಕು' ಎಂದು ತಮ್ಮ ಒಂದು ನಿಬಂಧನೆಯನ್ನೂ ಗಣಪತಿಗೆ ವಿಧಿಸಿದರು. ಗಣಪತಿಯು ಮುಸಿನಗುತ್ತ, `ಸರಿ!' ಎಂದು ಒಪ್ಪಲು, ವ್ಯಾಸರು ಮಹಾಭಾರತ ಕಥೆಯನ್ನು ಕಾವ್ಯರೂಪದಲ್ಲಿ ಹಾಡಲಾರಂಭಿಸಿದರು. ಆಗಾಗ್ಗೆ ಕಷ್ಟವಾದ ಸಂಕೀರ್ಣ ಶ್ಲೋಕಗಳನ್ನು ಹೇಳುವರು. ಗಣಪತಿಯು ಬರೆಯುವುದನ್ನು ನಿಲ್ಲಿಸಿ ಶ್ಲೋಕದ ಅರ್ಥವೇನೆಂದು ಪರಿಭಾವಿಸುತ್ತಿರುವಾಗ ವ್ಯಾಸರು ಮುಂದಿನ ಶ್ಲೋಕಗಳನ್ನು ರಚಿಸಿಕೊಳ್ಳುವರು. ಹೀಗೆ, ವ್ಯಾಸರು ರಚಿಸಿ ಹೇಳಿ ಗಣಪತಿಯು ಬರೆದುಕೊಂಡ ಮಹಾಭಾರತವೆಂಬ ಮಹಾಕಾವ್ಯದ ಉದಯವಾಯಿತು.ಅದು ಗ್ರಂಥಗಳೆಲ್ಲ ವಿದ್ಯಾವಂತ ಜನರಿಗೆ ಕೇವಲ ಜ್ಞಾಪಕಶಕ್ತಿಯಿಂದ ಕಂಠಸ್ಥವಾಗಿರುತ್ತಿದ್ದ, ಮುದ್ರಣಯುಗಕ್ಕಿಂತ ತುಂಬ ಹಿಂದಿನ ಕಾಲ. ವ್ಯಾಸರು ಈ ಮಹಾಕಾವ್ಯವನ್ನು ಮೊದಲು ತಮ್ಮ ಮಗನಾದ ಶುಕನಿಗೆ ಬೋಧಿಸಿದರಲ್ಲದೆ, ಅನಂತರ ಇತರ ಶಿಷ್ಯರಿಗೂ ಕಲಿಸಿಕೊಟ್ಟರು. ಇಲ್ಲವಾಗಿದ್ದರೆ ಈ ಗ್ರಂಥವು ಮುಂದಿನ ತಲೆಮಾರುಗಳಿಗೆ ಉಳಿದುಬರುತ್ತಿರಲಿಲ್ಲ. ಸಂಪ್ರದಾಯದ ಪ್ರಕಾರ ಈ ಮಹಾಕಾವ್ಯವನ್ನು ವ್ಯಾಸರ ಶಿಷ್ಯರುಗಳಾದ ನಾರದರು ದೇವತೆಗಳಿಗೂ, ಶುಕನು ಗಂಧರ್ವ ಯಕ್ಷರಾಕ್ಷಸಾದಿಗಳಿಗೂ, ವೈಶಂಪಾಯನನು ಮಾನವರಿಗೂ ಬೋಧಿಸಿದರು. ಪರೀಕ್ಷಿತ್ ಮಹಾರಾಜನ ಮಗನಾದ ಜನಮೇಜಯನು ಹನ್ನೆರಡು ವರ್ಷಗಳ ಸತ್ರಯಾಗವೊಂದನ್ನು ಮಾಡುತ್ತಿದ್ದ ಸಂದರ್ಭದಲ್ಲಿ, ಅವನ ಅಪೇಕ್ಷೆಯಂತೆ ವೈಶಂಪಾಯನನು ಅಲ್ಲಿ ನೆರೆದಿದ್ದ ಜನರ ಮನರಂಜನೆಗಾಗಿ ಮೊದಲು ಈ ಕಥೆಯನ್ನು ಹೇಳಿದನು. ಅನಂತರ, ವೈಶಂಪಾಯನ ಮಹರ್ಷಿ ಹೇಳಿದ್ದನ್ನು ಕೇಳಿಸಿಕೊಂಡಿದ್ದ ಸೂತನು, ನೈಮಿಷಾರಣ್ಯದಲ್ಲಿ ಶೌನಕನೆಂಬ ಋಷಿಯ ನೇತೃತ್ವದಲ್ಲಿ ಸಭೆ ಸೇರಿದ್ದ ಋಷಿಸಮೂಹದ ಮುಂದೆ ಇದನ್ನು ಮತ್ತೊಮ್ಮೆ ನಿರೂಪಿಸಿದನು. ``ಮಹಾಜನರೇ, ಮಾನವರಿಗೆ ಚತುರ್ವಿಧ ಪುರುಷಾರ್ಥಗಳನ್ನು ತಿಳಿಸಿಕೊಡುವ ಉದ್ದೇಶವಿಟ್ಟುಕೊಂಡು ವ್ಯಾಸಮಹರ್ಷಿಗಳು ರಚಿಸಿದ ಮಹಾಭಾರತವನ್ನು ವೈಶಂಪಾಯನನಿಂದ ಕೇಳುವ ಮಹಾಭಾಗ್ಯ ನನ್ನದಾಗಿದ್ದಿತು. ಸಮುದ್ರದಂತೆ ಅಪಾರವಾದ ಈ ಮಹಾಕಾವ್ಯದಿಂದ ರತ್ನಗಳನ್ನು ಆರಿಸಿ ಕೊಡುವ ಹಾಗೆ ನಿಮಗೆ ಇದನ್ನು ಸಂಗ್ರಹಿಸಿ ಮುಖ್ಯ ಕಥೆಯನ್ನು ಹೇಳುವೆನು ಕೇಳಿರಿ!" ಎಂದು ಸೂತನು ಹೇಳಲಾರಂಭಿಸಿದನು.* * * * ರಾಜನಾದವನಿಗೆ ಬೇಟೆಯೆಂಬುದು ಒಂದು ವ್ಯಸನ ಎಂದೇ ಹೇಳಬೇಕು. ಬೇಟೆಗೆಂದು ಹೊರಟು ಕಾಡಿನಲ್ಲಿ ಅಲೆಯುತ್ತ ಗಂಗಾನದಿಯ ತೀರಕ್ಕೆ ಬಂದು ಸೇರಿದ ಶಂತನು ಮಹಾರಾಜನು ಅವಳನ್ನು ನೋಡಿದ್ದು ಅಲ್ಲಿಯೇ. ಬಂಗಾರದಂತೆ ಹೊಳೆಯುತ್ತಿದ್ದ ಮೈ ಬಣ್ಣದ ಅವಳು ಅವನ ಪಾಲಿಗೆ ಒಂದು ದಿವ್ಯದರ್ಶನದಂತೆ ಗೋಚರಿಸಿದಳು. ವಿಶಾಲವಾದ ಕಣ್ಣುಗಳಲ್ಲಿ ಹೆಣ್ಣುತನವು ಹದವಾಗಿ ಮಡುಗಟ್ಟಿ ನಿಂತಿತ್ತು. ಗರಬಡಿದವನಂತೆ ಅವನು ನಿಂತಲ್ಲಿಯೇ ನಿಂತು ಕಣ್ಣುಗಳಿಂದಲೇ ಅವಳ ಸೌಂದರ್ಯವನ್ನು ಹೀರತೊಡಗಿದನು. ಅಪ್ಸರೆಯಂತೆ ತೋರಿದ ಅವಳ ಬಳಿಗೆ ಅವನು ಮೆಲ್ಲಮೆಲ್ಲನೆ ನಡೆದನು. ಸಪ್ಪಳವನ್ನು ಕೇಳಿ ತಿರುಗಿದ ಅವಳು ಇವನನ್ನು ನೋಡಿ ನಾಚಿ ನೀರಾದಳು. ಕದಪುಗಳು ಕೆಂಪಡರಿ ಮುಖ ಅವನತವಾಯಿತು. ಸ್ವಲ್ಪ ಹೊತ್ತಿನಲ್ಲಿ ತಲೆಯೆತ್ತಿ ಇವನನ್ನು ನೋಡಿದಳು.ಅವನು ಹಿಂಜರಿಯುತ್ತಿದ್ದ ಅವಳ ಕೈಹಿಡಿದು, `ನೀನು ಯಾರು ಸುಂದರಿ? ನಾನು ಶಂತನು, ಹಸ್ತಿನಾಪುರದ ಮಹಾರಾಜ. ನೀನು ನನ್ನ ಹೃದಯವನ್ನು ಗೆದ್ದಿರುವೆ. ನನ್ನವಳಾಗು, ಬಾ !ನೀನಿಲ್ಲದೆ ನಾನು ಬದುಕಲಾರೆ !' ಎಂದನು. ಅವಳು ನಕ್ಕು, `ನಿನ್ನನ್ನು ನೋಡಿದೊಡನೆ ತಿಳಿಯಿತು, ಮಹಾರಾಜ! ನಾನು ಗಂಗೆ. ಒಂದು ನಿಬಂಧನೆಯ ಮೇಲೆ ನಾನು ನಿನ್ನ ರಾಣಿಯಾಗುವೆ. ನಾನು ಮಾಡುವ ಯಾವುದಕ್ಕೂ ಯಾವಾಗಲೂ ನೀನು ಏಕೆಂದು ಕೇಳಕೂಡದು, ತಡೆಯಕೂಡದು; ಹಾಗೆ ಮಾಡಿದ ಕ್ಷಣವೇ ನಾನು ನಿನ್ನನ್ನು ಬಿಟ್ಟು ಮತ್ತೆ ಬರದಂತೆ ಹೊರಟುಹೋಗುತ್ತೇನೆ!' ಎಂದಳು. ಪ್ರೇಮದಿಂದ ಹುಚ್ಚನಾಗಿದ್ದ ರಾಜನು, `ಹಾಗೆಯೇ ಆಗಲಿ!' ಎಂದು ಒಪ್ಪಿ ಅವಳನ್ನು ರಾಜಧಾನಿಗೆ ಕರೆತಂದನು.ಅವಳು ಅವನೊಂದಿಗೆ ತುಂಬ ಅನ್ಯೋನ್ಯವಾಗಿದ್ದಳು, ಎಲ್ಲ ದೃಷ್ಟಿಯಿಂದಲೂ ಆದರ್ಶ ಪತ್ನಿಯೆನ್ನಿಸಿದಳು. ಅವಳ ರೂಪ, ಲಾವಣ್ಯ, ಇನಿದನಿ, ಗುಣಶೀಲಗಳು ಎಲ್ಲವೂ ಅವನನ್ನು ಸೆರೆಹೆಡಿದವು; ಕಾಲ ಸರಿಯುತ್ತಿದ್ದುದೇ ಅವನ ಅರಿವಿಗೆ ಬಾರದಂತಾಯಿತು.ದಿನಗಳುರುಳಿದವು; ತಿಂಗಳುಗಳೂ ಸರಿದುಹೋದವು. ಗಂಗೆ ರಾಜನಿಗೆ ಮಗನೊಬ್ಬನನ್ನು ಹೆತ್ತುಕೊಟ್ಟಳು. ಕೊನೆಗೂ ಕೀರ್ತಿವೆತ್ತ ಪೌರವ ವಂಶಕ್ಕೊಬ್ಬ ಉತ್ತರಾಧಿಕಾರಿಯ ಜನನವಾಯಿತು. ರಾಜನು ಸಂಭ್ರಮ ಸಡಗರಗಳಿಂದ ರಾಣಿಯ ಅಂತಃಪುರಕ್ಕೆ ನಡೆದ. ರಾಣಿಯು ಮಗುವನ್ನೆತ್ತಿಕೊಂಡು ಗಂಗಾನದಿಯ ಕಡೆಗೆ ಹೋದಳೆಂದು ಸಖಿಯರು. ಅಚ್ಚರಿಗೊಂಡ ಶಂತನು ನದೀದಡಕ್ಕೆ ಓಡಿದ. ಅಲ್ಲಿ ನೋಡಿದ ಭೀಭತ್ಸವನ್ನು ಅವನೆಂದಿಗೂ ಮರೆಯದಾದ. ಅವನ ಪ್ರೀತಿಯ ಗಂಗೆ, ಹೊಸದಾಗಿ ಹುಟ್ಟಿದ ಮಗುವನ್ನು ಅವನು ನೋಡುತ್ತಿದ್ದಂತೆಯೇ ನದಿಗೆಸೆದುಬಿಟ್ಟಳು! ದೊಡ್ಡ ಹೊರೆಯೊಂದನ್ನು ಇಳಿಸಿಕೊಂಡವಳಂತೆ ಕಂಡ ಅವಳನ್ನು ಅವನು ಏಕೆಂದು ಕೇಳದಾದ. ತಾನೇ ಮಾತು ಕೊಟ್ಟಿದ್ದನಲ್ಲ, ಅವಳಿಗೆ ಯಾವ ರೀತಿಯಲ್ಲೂ ಅಡ್ಡಿಬಂದು ಅಸಂತೋಷವನ್ನುಂಟು ಮಾಡಲಾರೆ ಎಂದು!ಒಂದು ವರ್ಷದ ನಂತರ ಇದೇ ಘಟನೆಯ ಪುನರಾವರ್ತನೆಯಾಯಿತು. ಇನ್ನೊಮ್ಮೆ, ಮತ್ತೊಮ್ಮೆ. ಮಗದೊಮ್ಮೆ! ರಾಜನ ಏಳು ಜನ ಗಂಡುಮಕ್ಕಳು ಒಬ್ಬರಾದ ಮೇಲೆ ಒಬ್ಬರಂತೆ ಗಂಗಾನದಿಗೆ ಸಮರ್ಪಿತರಾದರು. ಪ್ರೇಮದಿಂದ ಕುರುಡಾಗಿದ್ದ ರಾಜ ತನ್ನ ದುಃಖವನ್ನು ನುಂಗಿಕೊಂಡು ಸುಮ್ಮನಿದ್ದ. ಗಂಗೆ ಅವನ ಜೀವದ ಜೀವವಾಗಿದ್ದಳು. ಅವಳಿಲ್ಲದೆ ಬದುಕುವುದನ್ನು ಅವನು ಊಹಿಸಿಕೊಳ್ಳಲೂ ಆರ. ಆದರೆ, ರಾಜಸಿಂಹಾಸನದ ಗತಿಯೇನೆಂಬ ಚಿಂತೆಯೂ ಅವನನ್ನು ಹೆಚ್ಚುಹೆಚಾಗಿ ಬಾಧಿಸತೊಡಗಿತು. ಮನಶ್ಯಾಂತಿ ದೂರವಾಯಿತು. ಒಂದು ವರ್ಷ ಕಳೆದು ಎಂಟನೆಯ ಮಗು ಹುಟ್ಟಿದಾಗ ಗಂಗೆ ಯಥಾಪ್ರಕಾರ ಅದನ್ನು ಕೈಗೆತ್ತಿಕೊಂಡು ನದಿಯ ಕಡೆಗೆ ಓಡಿದಳು. ದುಃಖ, ರೋಷಗಳಿಂದ ತಪ್ತನಾಗಿದ್ದ ರಾಜ ಮಾತನಾಡದಾದ. ಅವಳ ಹಿಂದೆ ಅವನೂ ಓಡಿ ಅವಳನ್ನು ತಡೆದು, ಮೊದಲ ಬಾರಿಗೆ ಬಿರುನುಡಿಗಳನ್ನಾಡಿದ. ಎಂಥ ಅಮಾನುಷ ಕೆಲಸ ಇದು, ಗಂಗೆ? ಎಲ್ಲ ಮಕ್ಕಳನ್ನೂ ನೀನು ಹೀಗೆ ಸಾಯಿಸುತ್ತಿರುವುದನ್ನು ಇನ್ನು ನಾನು ಸಹಿಸಲಾರೆ. ಏಕೆ ಹೀಗೆ ಮಾಡುತ್ತಿರುವೆ? ತಾಯಿಯಾದವಳೇ ಹೀಗೆ ಮಾಡಬಹುದೆ? ಈ ಒಂದು ಮಗುವನ್ನಾದರೂ ನನಗೆ ಕೊಡು. ನಾನಿನ್ನು ಸಹಿಸಿಕೊಳ್ಳಲಾರೆ!ಗಂಗೆಯ ಮುಖದಲ್ಲಿ ವಿಚಿತ್ರ ಕಿರುನಗೆ ಮೂಡಿತು-ದುಃಖ ಸಂತಸ ಎರಡೂ ಬೆರೆತ ವಿಚಿತ್ರ ನಗೆ! ಅವಳು ಮೃದುವಾಗಿ ರಾಜನಿಗೆಂದಳು; ``ದೊರೆಯೇ, ನಾನಿನ್ನು ನಿನ್ನನ್ನು ಬಿಟ್ಟು ಹೋಗಬೇಕಾದ ಕಾಲ ಬಂದಿದೆ. ನೀನು ಕೊಟ್ಟ ಮಾತಿಗೆ ತಪ್ಪಿರುವೆ. ಈ ನಮ್ಮ ಮಗು ಬದುಕುತ್ತಾನೆ. ನಾನು ದೇವವ್ರತನೆಂಬ ಇವನನ್ನು ಈಗ ಕರೆದೊಯ್ದು, ಕಾಲ ಬಂದಾಗ ನಿನಗೆ ತಂದೊಪ್ಪಿಸುತ್ತೇನೆ. ಗಾಂಗೇಯನೆಂದೂ ಇವನು ಪ್ರಸಿದ್ಧನಾಗುತ್ತಾನೆ!" ದುಃಖಿತನಾದ ರಾಜನಿಗೆ ಮಾತೇ ಹೊರಡಲಿಲ್ಲ. ಅವಳು ಹೇಳುತ್ತಿದ್ದುದೇನೆಂದೂ ಅವನಿಗೆ ಪೂರ್ತಿಯಾಗಿ ಅರ್ಥವಾಗಲಿಲ್ಲ. ಈ ಮಗುವನ್ನಾದರೂ ಕೊಲ್ಲಬೇಡವೆಂದುದಕ್ಕೆ ತನ್ನ ಸರ್ವಸ್ವವಾಗಿರುವ ಇವಳು ಹಿಂದಿರುಗಿ ಬಾರದಂತೆ ಹೊರಟುಹೋಗುತ್ತಿದ್ದಾಳೆ! ದೈನ್ಯವೇ ಬೀಡುಬಿಟ್ಟಂತಿದ್ದ ಕಣ್ಣುಗಳಿಂದ ಅವನು ಅವಳನ್ನು ಆರ್ತನಾಗಿ ನೋಡಿದ. ``ಹೀಗೇಕೆ ಮಾಡುವೆ ಗಂಗೆ? ನಿನ್ನನ್ನು ಬಿಟ್ಟು ನಾನು ಜೀವಿಸಿರಲಾರೆ ಎಂಬುದು ನಿನಗೆ ಗೊತ್ತಿಲ್ಲವೆ? ನೀನು ನನ್ನನ್ನು ಪ್ರೀತಿಸಿದ್ದೆ ಅಲ್ಲವೆ? ಆ ಪ್ರೀತಿಗಾಗಿಯಾದರೂ ನನ್ನನ್ನು ಬಿಟ್ಟುಹೋಗಬೇಡ" ಎಂದ.ಗಂಗೆಯು, ``ನನ್ನ ರಾಜ, ನಾನು ಹೋಗಲೇಬೇಕು ಎಂಬುದನ್ನು ಮನಗಾಣಲಾರೆಯಾ? ನಾನು ಸ್ವರ್ಗಲೋಕದವಳು. ಒಂದು ಶಾಪದಿಂದಾಗಿ ನಾನು ಈ ಭೂಮಿಯ ಮೇಲೆ ಮಾನವರಂತೆ ಜೀವಿಸಬೇಕಾಯಿತು. ಹಿಂದಿನ ಜನ್ಮದಲ್ಲಿ ನೀನು ಮಹಾಭಿಷಕ್ ಎಂಬ ಮಹಾರಾಜನಾಗಿದ್ದೆ. ಒಂದು ಸಲ ನೀನು ಇಂದ್ರನ ಆಸ್ಥಾನಕ್ಕೆ ಬಂದಿದ್ದಾಗ ನನ್ನನ್ನು ನೀನು ಆಸೆಯ ಕಣ್ಣುಗಳಿಂದ ನೋಡಿದೆ. ನನಗೂ ನಿನ್ನ ಮೇಲೆ ಮನಸ್ಸಾಯಿತು. ದೇವತೆಗಳಿಗೆ ಅದು ಇಷ್ಟವಾಗಲಿಲ್ಲ. ಈ ಮಹಾಭಿಷಕ್ ರಾಜ ಪ್ರದೀಪನ ಮಗ ಶಂತನುವಾಗಿ ಹುಟ್ಟಲಿದ್ದಾನೆ. ನೀನು ಅವನ ಹೆಂಡತಿಯಾಗಿರು, ಎಂದು ಅವರು ನನ್ನನ್ನು ಈ ಭೂಮಿಗೆ ಕಳುಹಿಸಿದರು. ಹಾಗೆ ನಾವಿಬ್ಬರೂ ಪ್ರೇಮಿಗಳಾಗಿ ಸ್ವಲ್ಪ ಕಾಲ ಸುಖವಾಗಿರುವಂತಾಯಿತು. ನನ್ನ ದೊರೆಯೇ, ಎಲ್ಲವೂ ವಿಧಿನಿಯಾಮಕದಂತೆ ನಡೆಯಬೇಕೇ ಹೊರತು ನಾವಾಗಲಿ ಸಾಕ್ಷಾತ್ ದೇವತೆಗಳೇ ಆಗಲಿ ಅದನ್ನು ಬದಲಿಸಲು ಸಾಧ್ಯವಿಲ್ಲ."ಶಂತನುವಿಗೆ ಗಲಿಬಿಲಿಯುಂಟಾಯಿತು. ನನಗಿನ್ನೂ ಅರ್ಥವಾಗಲೇ ಇಲ್ಲ. ``ಹಾಗಿದ್ದರೆ, ನೀನು ನಿನ್ನ ಹೊಟ್ಟೆಯಲ್ಲಿಯೇ ಹುಟ್ಟಿದ ನಮ್ಮ ಮೊದಲ ಏಳು ಮಕ್ಕಳನ್ನೇಕೆ ಕೊಂದೆ? ಅದೂ ಸಹ ಶಾಪದ ಭಾಗವಾಗಿತ್ತೆ?" ಎಂದು ಕೇಳಿದ. ``ಹೌದು" ಎಂದಳು ಗಂಗೆ. ``ಈ ಎಂಟು ಮಕ್ಕಳು ಈ ಭೂಮಿಯಲ್ಲಿ ಹುಟ್ಟಿ ಬನ್ನಿರಿ ಎಂದು ಹಿಂದೆ ವಸಿಷ್ಠನಿಂದ ಶಾಪ ಪಡೆದ ಅಷ್ಟವಸುಗಳು. ನಾನು ನಿಮಗೆ ಜನ್ಮ ಕೊಡುತ್ತೇನೆ; ಅಲ್ಲದೆ ಹುಟ್ಟಿದೊಡನೆಯೇ ನಿಮ್ಮನ್ನು ಈ ಮಾನವ ಜೀವನದಿಂದ ಪಾರುಮಾಡುತ್ತೇನೆ ಎಂದು ಅವರಿಗೆ ವಚನ ಕೊಟ್ಟಿದ್ದೆ. ಈ ಎಂಟನೆಯವನು ಮರ್ತ್ಯಲೋಕದಲ್ಲಿ ಬಹುಕಾಲವಿರಬೇಕೆಂದು ಶಾಪ ಪಡೆದವನು. ಆದ್ದರಿಂದ ಇವನು ಬದುಕುತ್ತಾನೆ. ದೊರೆಯೇ, ದುಃಖಪಡದಿರು; ನಾನು ನಿನಗೆ ಖ್ಯಾತಿವೆತ್ತ ಪೌರವ ಸಿಂಹಾಸನದ ಉತ್ತರಾಧಿಕಾರಿಯನ್ನು ಕೊಡುತ್ತಿದ್ದೇನೆ. "ಭ್ರಮೆಯ ಪರದೆ ಹರಿದು ಸತ್ಯದರ್ಶನ ಮಾಡಬೇಕಾದಾಗ ಕಣ್ಣುಗಳಿಗೆ ಶಕ್ತಿ ಸಾಲದೆ ಹೋಗುತ್ತದೆ. ಶಂತನುವಿಗೂ ಹಾಗೇ ಆಯಿತು. ಸ್ವರ್ಗದ ದೇವಿಯಾದ ಗಂಗೆ ಅವನಿಗೆ ಹೆಂಡತಿಯಾಗಲು ಬಯಸಿ ಬಂದಳು. ಆದರೆ ಕೇವಲ ಮರ್ತ್ಯನಾದ ಅವನಿಗೆ ಆ ಮಹಾ ಸುಮ್ಮಾನದ ಕಲ್ಪನೆ ಬರಲಿಲ್ಲ. ಸತ್ಯವನ್ನೆದುರಿಸಲು ಅವನ ಮನಸ್ಸು ನಿರಾಕರಿಸಿತು. ಗಂಗೆ ಹೇಳಿದ್ದನ್ನು ಕೇಳಿದ ಅವನು ಮೂಕನಂತಾದ. ಅವನಿಗೆ ಎರಡು ಸಂಗತಿಗಳಂತೂ ನಿಚ್ಚಳವಾದವು. ಮೊದಲನೆಯದು, ಗಂಗೆ ಎಂದೆಂದಿಗೂ ಹಿಂದಿರುಗಿ ಬಾರದಂತೆ ಹೊರಟುಹೋಗುತ್ತಿರುವಳು. ಎರಡನೆಯದು, ಈಗ ಪೌರವರ ಹೆಸರನ್ನುಳಿಸಲು ತನಗೊಬ್ಬ ಮಗ ಇದ್ದಾನೆ. ಶಂತನುವಿನ ಮನಸ್ಸಿನ ಭಾವನೆಗಳೆಲ್ಲ ಗಂಗೆಗೆ ಅರ್ಥವಾದುವು. ಅವಳು ಪ್ರೇಮಾರ್ದ್ರಹೃದಯಳಾಗಿ, ಸಹಾನುಭೂತಿಯಿಂದ ಶಂತನುವನ್ನು ಕುರಿತು ಹೀಗೆಂದಳು: ``ಮಹಾರಾಜ! ದುಃಖಿಸಬೇಡ. ನಮ್ಮಿಬ್ಬರ ಮಗುವಾದ ಇವನನ್ನು ನಾನು ಚೆನ್ನಾಗಿ ಸಾಕುತ್ತೇನೆ. ಇವನು ಮಹಾತ್ಮನಾಗುತ್ತಾನೆ. ಚಂದ್ರವಂಶದ ಸಿಂಹಾಸನವನ್ನು ಅಲಂಕರಿಸಿದ ಸಮಸ್ತ ಪೌರವ ರಾಜರಿಗಿಂತ ಮಿಗಿಲೆನಿಸುತ್ತಾನೆ. "ಗಂಗೆ ಅದೃಶ್ಯಳಾದಳು. ಶಂತನು ಬಹಳ ಹೊತ್ತು ಗಂಗೆಯೊಂದಿಗೆ ಕಳೆದ ಕೊನೆಯ ಘಳಿಗೆಗಳನ್ನೇ ಸ್ಮರಿಸಿಕೊಳ್ಳುತ್ತ ಕುಳಿತಿದ್ದನು. ಕೊನೆಗೊಮ್ಮೆ ವಿಧಿಯ ಇಚ್ಛೆಗೆ ಮಣಿದು, ಅರಮನೆಯ ಕಡೆಗೆ ಹೆಜ್ಜೆ ಹಾಕಿದನು. ಅಲ್ಲಿ ಅವನಿಗಾಗಿ ಕಾದಿದ್ದುದು ಏಕಾಂಗಿತನವೊಂದೇ.* * * * ಹದಿನಾರು ವರ್ಷಗಳು ಕಳೆದುಹೋದವು. ಶಂತನು ಮಹಾರಾಜನದು ಜರ್ಜರಿತವಾದರೂ ಒಡೆಯದಿರುವ ಹೃದಯ. ಅವನ ಪಾಲಿಗೆ ಜೀವನ ತನ್ನೆಲ್ಲ ಅರ್ಥ ಕಳೆದುಕೊಂಡಿತ್ತು. ಆದರೆ ಅದೆಲ್ಲ ಅವನ ಅಂತರಂಗದಲ್ಲಿ ಅಷ್ಟೇ. ಬಾಹ್ಯದಲ್ಲಿ ಅವನೊಬ್ಬ ಆದರ್ಶ ರಾಜ; ಅವನ ಆಳ್ವಿಕೆಯಲ್ಲಿ ಪ್ರಜೆಗಳು ಸುಖವಾಗಿದ್ದರು. ಆ ಕಾಲದ ರಾಜರಿಗಿದ್ದಂತೆ ಬೇಟೆಯೊಂದೇ ಅವನ ವ್ಯಸನ. ಬೇಟೆಗೆಂದು ಅವನು ಯಾವಾಗಲೂ ಗಂಗಾ ನದೀತೀರದಲ್ಲಿ ತಿರುಗಾಡುತ್ತಿದ್ದನು. ಆ ಜಾಗವೊಂದೇ ಅವನ ಮನಸ್ಸನ್ನು ಸ್ವಲ್ಪವಾದರೂ ಮುದಗೊಳಿಸುತ್ತಿದ್ದಿತು.ಒಂದು ದಿನ ಅಲ್ಲಿ ತಿರುಗಾಡುತ್ತಿದ್ದಾಗ, ಗಂಗಾನದಿಯು ಹರಿಯುತ್ತಲೇ ಇಲ್ಲವೆಂಬ ವಿಚಿತ್ರ ಅವನ ಗಮನಕ್ಕೆ ಬಂದಿತು. ಇಂತಹ ಮಹಾನದಿಗೆ ಅಡ್ಡಗಟ್ಟು ಹಾಕಿದವರು ಯಾರೆಂಬ ಕುತೂಹಲದಿಂದ ದಡದಲ್ಲಿಯೇ ನಡೆದಾಡುತ್ತಿರಲು, ಬಾಣಗಳಿಂದಲೇ ಯಾರೋ ನದಿಗೆ ತಡೆ ನಿರ್ಮಿಸಿರುವುದು ಕಂಡುಬಂದಿತು. ಬಾಣಗಳು ಎಷ್ಟು ಚೆನ್ನಾಗಿ ಜೋಡಣೆಯಾಗಿದ್ದುವೆಂದರೆ, ಒಂದೇ ಒಂದು ಹನಿ ನೀರೂ ಸಹ ಮುಂದೆ ಹರಿಯದಂತೆ ಆಗಿದ್ದಿತು. ಬೆಕ್ಕಸಬೆರಗಾದ ಶಂತನು ಅಚ್ಚರಿಪಡುತ್ತ ನಿಂತಲ್ಲಿಯೇ ನಿಂತುಬಿಟ್ಟನು.ಸ್ವಲ್ಪ ಹೊತ್ತಿನಲ್ಲಿಯೇ ಅಲ್ಲಿ ತಾನೊಬ್ಬನೇ ಇಲ್ಲವೆಂಬ ಅರಿವು ಅವನಿಗಾಯಿತು. ಅಲ್ಲೇ ಹತ್ತಿರದಲ್ಲಿ ಗಂಗೆ ಮುಗುಳ್ನಗುತ್ತ ನಿಂತಿದ್ದಳು. ರಾಜ ಅವಾಕ್ಕಾಗಿ ನಿಂತುಬಿಟ್ಟನು. ಕಂಬನಿತುಂಬಿ, ``ಗಂಗಾ, ಕೊನೆಗೂ ಬಂದೆಯಾ? ನೋಡು, ನಾನು ಇಷ್ಟು ವರ್ಷಗಳೂ ಏಕಾಂಗಿಯಾಗಿಯೇ ಕಳೆದಿದ್ದೇನೆ. ನನಗೆ ನೀನು ಬೇಕು. ನೀನಿಲ್ಲದೆ ನಾನು ಬದುಕಲಾರೆ. ಬಾ ಹೋಗೋಣ. ನೀನು ನನ್ನನ್ನು ಕ್ಷಮಿಸಿಯೇ ಇರುತ್ತೀ, ನನಗೆ ಗೊತ್ತು. ಇಲ್ಲವಾದರೆ ಇಂದು ಬರುತ್ತಿದ್ದೆಯಾ? ಬಾ, ರಾಜಧಾನಿಗೆ ಹೋಗೋಣ. ನಮ್ಮೆಲ್ಲರಿಗೂ ಸಂತೋಷವನ್ನುಂಟುಮಾಡು. " ಎಂದು ಬಡಬಡಿಸ ತೊಡಗಿದನು. ಗಂಗೆಗೆ ಅಯ್ಯೋ ಪಾಪ ಎನಿಸಿತು. ``ನನ್ನ ದೊರೆಯೇ, ಅದೆಲ್ಲ ಕಳೆದುಹೋದ ಸಂಗತಿ. ನಾನು ಪುನಃ ಬರಲಾರೆ. ಸಂಜೆ ಸೂರ್ಯ ಮುಳುಗಿದ ಮೇಲೆ ಸೂರ್ಯದೇವ, ಹಿಂದೆರುಗಿ ಬಂದುಬಿಡು, ನಾನು ಈ ದಿನವನ್ನು ಇನ್ನೊಮ್ಮೆ ಬದುಕುತ್ತೇನೆ ಎಂದು ಕೇಳುವುದು ಮೂರ್ಖತನ. ಅದೆಲ್ಲ ಹಾಗಿರಲಿ. ನಾನು ಬಂದುದು ಏಕೆಂದು ಹೇಳುತ್ತೇನೆ. ನದಿಗೆ ಒಡ್ಡು ಹಾಕಿರುವುದನ್ನು ನೋಡಿದೆಯಾ?" ಎಂದಳು. ``ಹೌದು. ನೀನು ಬಂದಾಗ ಅದನ್ನು ನೋಡಿಯೇ ಅಚ್ಚರಿಪಡುತ್ತಿದ್ದೆ! ಯಾರನ್ನು ನನ್ನ ಪ್ರೀತಿಯೇ ತಡೆಯಲು ಆಗಲಿಲ್ಲವೋ ಅಂತಹ ಗಂಗೆಗೆ ಬಾಣಗಳಿಂದ ಒಡ್ಡುಕಟ್ಟಿದವರಾರು?" ಎಂದ ಶಂತನು.ಅವರು ಮಾತನಾಡುತ್ತಿರುವಾಗಲೇ ಇದ್ದಕ್ಕಿದ್ದಂತೆ ಕಿವಿಗಡಚಿಕ್ಕುವಂತಹ ಶಬ್ದವೊಂದು ಕೇಳಿಸಿತು. ಅದು ನದಿಯ ನಿಂತ ನೀರು ಬಾಣಗಳ ಒಡ್ಡನ್ನು ಒಡೆದು ಒಮ್ಮೆಗೇ ನುಗ್ಗಿದ ಶಬ್ದ. ದೂರದಿಂದ ಒಬ್ಬ ಹುಡುಗ ಓಡಿಬಂದ. ಆನಂದೋದ್ವೇಗದಿಂದ ಹೊಳೆಯುತ್ತಿದ್ದ ತೇಜಸ್ವೀ ಮುಖದ ಸುಂದರನಾದ ಅವನು ಗಂಗೆಯನ್ನು ಬಾಹುಗಳಿಂದ ತಬ್ಬಿಕೊಂದು, ``ಅಮ್ಮಾ!ಅಮ್ಮಾ!ನಾನು ನದಿಯನ್ನು ತಡೆದುಬಿಟ್ಟೆನಮ್ಮ!" ಎಂದು ಸಂಭ್ರಮಪಟ್ಟ. ಗಂಗೆ ಮೂಕನಾಗಿ ನಿಂತಿದ್ದ ರಾಜನೆಡೆಗೆ ನೋಡಿದಳು. ಇವನು ನಿನ್ನ ಮಗನೇ! ಹಾಗಿದ್ದರೆ. . . " ಎನ್ನುತ್ತಿದ್ದಂತೆ ``ಹೌದು. ನಿಮ್ಮ ಊಹೆ ಸರಿ. ಅವನು ನಮ್ಮ ಮಗ" ಎಂದಳು ಗಂಗೆ. ನಾನು ಬರುವುದಕ್ಕೆ ಇದೇ ಕಾರಣ. ಇದೋ, ನಿಮ್ಮ ಮಗನನ್ನು ನಿಮಗೆ ಒಪ್ಪಿಸುತ್ತಿದ್ದೇನೆ. ಕರೆದುಕೊಂಡು ಹೋಗಿ; ನಿಮಗೆ ಸಹಾಯಕನಾಗಿರುತ್ತಾನೆ. ಅವನಿಗೆ ಕ್ಷತ್ರಿಯಕುಮಾರನೊಬ್ಬನು ತಿಳಿದಿರಬೇಕಾದ ಎಲ್ಲ ವಿದ್ಯೆಗಳೂ ಗೊತ್ತು. ವಸಿಷ್ಠ ಮಹರ್ಷಿಗಳಿಂದ ವೇದ ವೇದಾಂಗಗಳನ್ನೂ, ದೇವಗುರುವಾದ ಬೃಹಸ್ಪತಿಯಿಂದ ರಾಜ್ಯಶಾಸ್ತ್ರವನ್ನೂ ಸಾಂಗವಾಗಿ ಕಲಿತಿರುವನು. ಕ್ಷತ್ರಿಯರ ವೈರಿಯಾದ ಭಾರ್ಗವನೇ ನನ್ನ ಕೋರಿಕೆಯ ಮೇರೆಗೆ ಇವನಿಗೆ ಧನುರ್ವಿದ್ಯೆಯನ್ನು ಹೇಳಿಕೊಟ್ಟಿರುವನು. ನನ್ನ ಮಗನು ಈಗ ಸರ್ವವಿದ್ಯಾಪಾರಂಗತ; ಅವನನ್ನು ನಾನು ಪೌರವ ಸಿಂಹಾಸನದ ಉತ್ತರಾಧಿಕಾರಿಯಾಗುವುದಕ್ಕೆ ಯೋಗ್ಯನನ್ನಾಗಿ ಮಾಡಿರುವೆ. ಈ ವೀರನನ್ನು ಕರೆದುಕೊಂಡು ಹೋಗು ಎಂದು ಹೇಳಿ ಗಂಗೆಯು ಅದೃಶ್ಯಳಾದಳು.ಹದಿನಾರು ವರ್ಷಗಳ ಹಿಂದಿನಂತೆಯೇ ಇಂದೂ ಶಂತನು ಮಹಾರಾಜನು ಗಂಗೆಯನ್ನು ಬೀಳ್ಕೊಂಡು ರಾಜದಾನಿಯ ಕಡೆ ಹೊರಟನು. ಆದರೆ ಒಬ್ಬನೇ ಅಲ್ಲ; ಈಗ ಜೊತೆಯಲ್ಲಿ ಮಗನಿದ್ದನು. ಬಹುಕಾಲ ಏಕಾಂಗಿಯಾಗಿದ್ದ ಅವನು ಈಗ ಈ ಹೆಮ್ಮೆಯ ಗಂಗಾಪುತ್ರನೊಂದಿಗೆ ಉತ್ಸಾಹದಿಂದ ಅರಮನೆಗೆ ತೆರಳಿದನು.* * * * ಶಂತನು ಮಹಾರಾಜನು ಪುತ್ರನ ಜೊತೆಗೆ ನಾಲ್ಕು ವರ್ಷಗಳನ್ನು ಆನಂದದಿಂದ ಕಳೆದನು. ಪುತ್ರವ್ಯಾಮೋಹವು ಅವನನ್ನು ಆವರಿಸಿಕೊಂಡುಬಿಟ್ಟಿತು. ಆದರ್ಶ ಪುತ್ರನಾದ ದೇವವ್ರತನಿಗೂ ತಂದೆಯನ್ನು ಕಂಡರೆ ಬಹಳ ಫ್ರೀತಿ. ತಂದೆಯ ವರ್ಷವರ್ಷಗಳ ಏಕಾಂಗಿತನವನ್ನು ಹೋಗಲಾಡಿಸಲು ಅವನು ಪಣ ತೊಟ್ಟಂತಿದ್ದಿತು. ಯುವರಾಜಪಟ್ಟವನ್ನು ಕಟ್ಟಿದ ಮೇಲಂತೂ ಅವನು ತಂದೆಯನ್ನು ಬಿಟ್ಟು ಅರೆಕ್ಷಣವೂ ಇರುತ್ತಿರಲಿಲ್ಲ. ಇವರಿಬ್ಬರ ಅನ್ಯೋನ್ಯವನ್ನು ಕಂಡ ಪ್ರಜೆಗಳ ಸಂತೋಷಕ್ಕೆ ಪಾರವಿರಲಿಲ್ಲ. ಇಂತಹ ಅಪ್ರತಿಹತ ಆನಂದವನ್ನು ಸಹಿಸದ ವಿಧಿ ಕಾಲದ ಮೊಟ್ಟೆಯ ಮೇಲೆ ಕಾವು ಕೂತಂತಿತ್ತು. ಸಂತೋಷದ ಪಾಯಸದಲ್ಲಿ ಹೇಗಾದರೂ ಮಾಡಿ ಕಹಿಯನ್ನು ಬೆರೆಸುವುದೇ ಅದರ ಕೆಲಸ.ಒಂದು ದಿನ ರಾಜನು ತಾನೊಬ್ಬನೇ ಬೇಟೆಗೆಂದು ಹೊರಟನು. ಹೋಗುತ್ತ ಹೋಗುತ್ತ ಅವನು ಆವರೆಗೆ ತಿಳಿದಿರದೇ ಇದ್ದ ಒಂದು ವಿಚಿತ್ರವಾದ ದಿವ್ಯ ಪರಿಮಳವು ಅವನನ್ನು ಸೆರೆಹಿಡಿಯಿತು. ಅದು ಎಲ್ಲಿಂದ ಬರುತ್ತಿದೆ ಎಂದು ಕಂಡುಹಿಡಿಯುವುದಕ್ಕಾಗಿ ಅದನ್ನೇ ಅನುಸರಿಸಿ ಹೊರಟ ಅವನನ್ನು ಅದು ಯಮುನಾ ನದಿಯ ದಡಕ್ಕೆ ಕೊಂಡೊಯ್ದಿತು. ಅಲ್ಲಿ ದೋಣಿಯೊಂದನ್ನು ದಡಕ್ಕೆ ಬಿಗಿದು ಕಟ್ಟುತ್ತಿದ್ದ ಸುರಸುಂದರಿಯಾದ ಒಬ್ಬ ಯುವತಿಯ ಕಡೆಯಿಂದ ಆ ಪರಿಮಳವು ಬರುತ್ತಿತ್ತು. ಅವಳ ಅಂಗಸೌಷ್ಠವ ಪರಿಪೂರ್ಣವಾಗಿದ್ದಿತು. ರಾಜದೃಷ್ಟಿಯನ್ನು ಎದುರಿಸಲಾರದೆ ನಾಚಿಕೆಯಿಂದ ಅವಳು ಅವನತಮುಖಳಾದಳು. ಬೆಸ್ತರ ಹುಡುಗಿಯ ಮೈಮೇಲಿದ್ದ ಬಟ್ಟೆಯಂತೂ ಅವಳ ಲಾವಣ್ಯವನ್ನು ಅಡಗಿಸಿಡಲು ಸಾಕಾಗುವಂತಿರಲಿಲ್ಲ. ಶಂತನುವಿಗೆ ಅವಳನ್ನು ನೋಡಿದೊಡನೆ ಆಸೆಯುಂಟಾಯಿತು. ಅವಳ ಬಳಿಗೆ ಹೋಗಿ, ``ನೀನು ಯಾರು ಸುಂದರಿ? ಇಲ್ಲಿ ಏನು ಮಾಡುತ್ತಿರುವೆ?" ಎಂದು ಕೇಳಿದನು. ಅವಳು, ``ನಾನು ಇಲ್ಲಿಯ ಬೆಸ್ತರ ಅರಸನ ಮಗಳು. ನನ್ನ ಕೆಲಸವೇ ದೋಣಿಯನ್ನು ಯಮುನಾ ನದಿಯ ಒಂದು ದಡದಿಂದ ಇನ್ನೊಂದು ದಡಕ್ಕೆ ಬಿಡುವುದು" ಎಂದು ಮಧುರವಾಗಿ ಉಲಿದಳು. ರಾಜನು ಹುಡುಗಿಯ ತಂದೆಯ ಬಳಿಗೆ ಹೋಗಿ, ``ನಾನು ಚಂದ್ರವಂಶದ ಮಹಾರಾಜನಾದ ಶಂತನು. ಹಸ್ತಿನಾಪುರದಿಂದ ಬಂದಿದ್ದೇನೆ. ಕಾಡಿನಲ್ಲಿ ಬೇಟೆಯಾಡುತ್ತಿರುವಾಗ ವಿಚಿತ್ರವಾದ ಸುವಾಸನೆಯೊಂದರ ಅನುಭವವಾಯಿತು. ಅದನ್ನು ಬೆನ್ನಟ್ಟಿಕೊಂಡು ಬಂದವನಿಗೆ ಸುಂದರಿಯಾದ ಹುಡುಗಿ ಕಾಣಿಸಿದಳು. ಅವಳು ನಿನ್ನ ಮಗಳೆಂದು ತಿಳಿಯಿತು. ಅವಳನ್ನು ನನಗೆ ಕೊಡು. ನಾನವಳನ್ನು ಮದುವೆಯಾಗುತ್ತೇನೆ" ಎಂದನು. ಬೆಸ್ತರರಸನ ಮಾತಿನಲ್ಲಿ ವಿನಯವೂ ದೈನ್ಯವೂ ಧಾರಾಳವಾಗಿತ್ತು. ಅವನು, ``ನೀನೆಂದುದು ನಿಜ, ದೊರೆಯೇ. ಪರಿಮಳವು ಬರುತ್ತಿರುವುದು ನನ್ನ ಮಗಳಿಂದಲೇ; ಅದು ನಿನ್ನನ್ನು ಆಕರ್ಷಿಸಿ ಕರೆತಂದಿದೆ. ಇಡೀ ಪ್ರಪಂಚದಲ್ಲೇ ನನ್ನ ಮಗಳ ಕೈ ಹಿಡಿಯಲು ನಿನಗಿಂತ ಯೋಗ್ಯರು ಇನ್ನಾರು ತಾನೇ ಇದ್ದಾರು? ಒಬ್ಬ ಬಡವಿಯಾದ ಬೆಸ್ತರ ಹುಡುಗಿಗೆ ಪೌರವ ಮಹಾರಾಜನ ಪಟ್ಟದ ರಾಣಿಯಾಗಿರುವುದಕ್ಕಿಂತ ಹೆಚ್ಚಿನ ಮರ್ಯಾದೆ ಇನ್ನೇನು ತಾನೇ ಸಾಧ್ಯವಿದ್ದೀತು? ನಾನು ನನ್ನ ಮಗಳನ್ನು ಸಂತೋಷದಿಂದ ನಿನಗೆ ಮದುವೆ ಮಾಡಿಕೊಡುತ್ತೇನೆ. ಆದರೆ ಒಂದೇ ಒಂದು ನಿಬಂಧನೆ ಇದೆ. ಅದಕ್ದೆ ನೀನು ಒಪ್ಪಿದರೆ, ಅವಳು ನಿನ್ನವಳಾದಳೆಂದೇ ತಿಳಿ!"ರಾಜನು ತಾಳ್ಮೆಗೆಟ್ಟನು. ``ಸಾಧ್ಯವಿರುವ ಹಾಗಿದ್ದರೆ, ನಿನ್ನ ನಿಬಂಧನೆಗೆ ನಾನು ಒಪ್ಪುತ್ತೇನೆ; ಅದೇನೆಂದು ಹೇಳು" ಎಂದು ಅವಸರಿಸಿದನು. ಬೆಸ್ತರ ಅರಸನು, ``ನನ್ನ ಮಗಳ ಹೊಟ್ಟೆಯಲ್ಲಿ ಹುಟ್ಟುವ ಮಗನನ್ನು ನಿನ್ನ ನಂತರ ಹಸ್ತಿನಾಪುರದ ರಾಜನನ್ನಾಗಿ ಮಾಡುತ್ತೇನೆಂದು ವಚನ ಕೊಡುವುದಾದರೆ, ನಾನು ನಿನಗೆ ಅವಳನ್ನು ಸಂತೊಷದಿಂದ ಕೊಡುವೆ" ಎಂದನು. ಶಂತನು ಮಹಾರಾಜನು ಮೂಕನಾದನು. ``ಈ ವೀರನನ್ನು ನಿನಗೆ ಕೊಡುತ್ತಿದ್ದೇನೆ. ವೀರರ ಅರಮನೆಗೆ ಕರೆದುಕೊಂಡು ಹೋಗು" ಎಂದೆನ್ನುತ್ತ ದೇವವ್ರತನನ್ನು ಒಪ್ಪಿಸಲು ಬಂದಿದ್ದ ಗಂಗೆಯ ನೆನಪು ಅವನಿಗಾಯಿತು. ತಾನೇ ಯುವರಾಜಪಟ್ಟವನ್ನು ಕಟ್ಟಿದ್ದ ಮಗ ದೇವವ್ರತನು ಬಗೆಗಣ್ಣಿನ ಮುಂದೆ ಬಂದಂತಾಯಿತು. ಅವನ ಪ್ರೀತಿ ನೆನಪಾಯಿತು. ಒಂದೇ ಒಂದು ಮಾತನ್ನೂ ಆಡದೆ ಶಂತನು ತನ್ನ ರಥದ ಕಡೆಗೆ ಬಂದನು. ಆಸೆಪಟ್ಟಿದ್ದನ್ನು ಪಡೆಯಲಾರದ ನೋವಿನಿಂದ ತುಂಬಿ ಭಾರವಾದ ಹೃದಯದೊಂದಿಗೆ ರಾಜಧಾನಿಗೆ ಹಿಂದಿರುಗಿದನು.* * * * ದೇವವ್ರತನಿಗೆ ಇದ್ದಕ್ಕಿದ್ದಂತೆ ತನ್ನ ತಂದೆ ಏನೋ ಒಂದು ವಿಧವಾಗಿಬಿಟ್ಟಿರುವರು ಎನಿಸಲಾರಂಭಿಸಿತು. ಆ ಪೂರ್ಣಪ್ರೀತಿಯ, ಸ್ನೇಹದ ದಿನಗಳು ಹಳೆಯದಾದವು. ಅವರು ಮಾತನಾಡಿಸುವುದಿರಲಿ, ತಾನೇ ಮಾತನಾಡಿಸಿಕೊಂಡು ಹೋದರೂ ತಂದೆ ಮಾತನಾಡುತ್ತಿರಲಿಲ್ಲ. ಈ ನಿರಾಸೆಗೆ, ಈ ಖಿನ್ನತೆಗೆ ಕಾರಣವೇನೆಂದು ಅವನಿಗೆ ತಿಳಿಯದಾಯಿತು. ಮಹಾರಾಜರಿಗೆ ಯಾವುದರಲ್ಲಿಯೂ ಆಸಕ್ತಿ ಉಳಿಯದಾಯಿತು. ಬೇಟೆ ಸಹಾ ಬೇಡವಾಯಿತು. ಕೊನೆಗೊಮ್ಮೆ ಒಂದು ದಿನ ಶಂತನು ದೇವವ್ರತನ ಜೊತೆಗೆ ಮಾತನಾಡಿದನು. ``ಈಗ ಈ ಕುರುವಂಶದ ಕುಡಿ ನೀನೊಬ್ಬನೇ ಆಗಿರುವೆ. ನೀನು ನನಗೆ ಒಬ್ಬನೇ ಮಗನಾದಾಗ್ಯೂ ನೂರು ಜನ ಮಕ್ಕಳಿಗಿಂತ ಹೆಚ್ಚಾಗಿರುವೆ. ಆದರೂ ಸಹ ನೀನು ಒಬ್ಬನೇ ಮಗ ಎಂಬುದೇ ನನಗೆ ಚಿಂತೆಯಾಗಿದೆ. ಒಬ್ಬ ಮಗ ಮಗನಲ್ಲ, ಒಂದು ಕಣ್ಣು ಕಣ್ಣಲ್ಲ ಎಂದು ಗಾದೆ ಮಾತೇ ಇದೆ. ಭಗವಂತನು ನಿನಗೆ ದೀರ್ಘಾಯುಸ್ಸನ್ನು ಕೊಟ್ಟಿದ್ದಾನೆ, ನನಗೆ ಗೊತ್ತು. ಆದರೆ ನನ್ನ ಮನಸ್ಸಿಗೇನೋ ಮಬ್ಬು ಕವಿದಂತಾಗಿದೆ. ನೀನು ಮಹಾಯೋಧ, ಯುದ್ದೋತ್ಸಾಹಿ. ಯಾವುದಾದರೂ ಯುದ್ಧದಲ್ಲಿ ನಿನಗೇನಾದರೂ ಆದರೆ, ಮುಂದೆ ಕುರುವಂಶದ ವಾರಸುದಾರರು ಯಾರು? ವಂಶ ಕ್ಷಯವಾಗುವುದು ಖಂಡಿತ. ಈ ಚಿಂತೆಯೇ ನನ್ನ ಮನಸ್ಸನ್ನು ಎಡೆಬಿಡದೆ ಕೊರೆಯುತ್ತಿದೆ" ಎಂದು ನಿಟ್ಟುಸಿರಿಟ್ಟನು.ತಕ್ಷಣವೇ ದೇವವ್ರತನು ಮಹಾರಾಜನು ಬೇಟೆಗೆ ಹೋದಾಗ ಅವನ ಸಾರಥಿಯಾಗಿದ್ದವನನ್ನು ಹುಡುಕಿಕೊಂಡು ಹೋದನು. ತಂದೆ ಹೇಳಿದ ಮಾತುಗಳ ಪರದೆಯ ಹಿಂದಿನ ವಿಷಯವೇನಿರಬಹುದು ಎಂದು ಅವನ ಬುದ್ದಿ ಯೋಚಿಸಲಾರಂಭಿಸಿತು. ಅವನು ನೇರವಾಗಿ ಸಾರಥಿಯನ್ನು ಪ್ರಶ್ನಿಸಿದನು: ``ಅಯ್ಯಾ, ನೀನು ನನ್ನ ತಂದೆಯವರ ಸ್ನೇಹಿತ ಹಾಗೂ ನಂಬಿಗಸ್ಥ. ನನ್ನಲ್ಲಿ ಮುಚ್ಚಿಡಬೇಡ. ಹೇಳು, ತಂದೆಯವರ ಹೃದಯವನ್ನು ಸೆರೆಹಿಡಿದಿಟ್ಟುಕೊಂಡಿರುವ ಈಕೆ ಯಾರು? ಬೇಗ ಹೇಳು, ಈ ಕ್ಷಣವೇ ಅವರಿಗೆ ಹಿತವನ್ನುಂಟುಮಾಡುವುದಕ್ಕಾಗಿ ನನ್ನಿಂದ ಸಾಧ್ಯವಾದುದನ್ನೆಲ್ಲ ಮಾಡುವೆನು. " ಯುವರಾಜನ ನೇರ ಪ್ರಶ್ನೆಗೆ ತತ್ತರಿಸಿದ ಸಾರಥಿ ಬಹುವಾಗಿ ಹಿಂಜರಿಯುತ್ತ, ``ನಾನು ನಿಮಗೆ ಹೇಳಿದರೆ ಮಹಾರಾಜರು ಕೋಪಿಸಬಹುದು. ಆದರೂ ಹೇಳಿಬಿಡುತ್ತೇನೆ. ನಿಮ್ಮ ತಂದೆಯವರ ಮನಸ್ಸಿಗೆ ಬಂದಿರುವವಳು ಬೆಸ್ತರ ಅರಸನ ಮಗಳು. ಮದುವೆ ಮಾಡಿಕೊಡು ಇಂದು ಮಹಾರಾಜರು ಅವನನ್ನು ಕೇಳಿದರು. ಅವಳ ಹೊಟ್ಟೆಯಲ್ಲಿ ಹುಟ್ಟುವ ಮಗನಿಗೆ ಪೌರವ ಸಿಂಹಾಸನಾಧೀಶ್ವರನನ್ನಾಗಿ ಪಟ್ಟ ಕಟ್ಟುವುದಾದರೆ ಹೊರತು ಇದು ಸಾಧ್ಯವಿಲ್ಲ ಎಂದು ಅವನು ಹೇಳಿಬಿಟ್ಟನು. ನಿಮ್ಮ ತಂದೆ ನಿಮ್ಮನ್ನು ಕುರಿತು ಚಿಂತಿಸಿದರು. ನಂತರ ಅಸಾಧ್ಯವನ್ನು ಸಾಧಿಸ ಹೊರಡುವುದಕ್ಕೆ ಮನಸ್ಸು ಬಾರದೆ, ಹಸ್ತಿನಾಪುರಕ್ಕೆ ಹಿಂದಿರುಗಿದರು" ಎಂದನು.ತಂದೆಗೆ ತಿಳಿಸದೆ ದೇವವ್ರತನು ತಕ್ಷಣ ಕಾಡಿಗೆ ಹೊರಟನು. ಬೆಸ್ತರ ಪರಿವಾರವಿದ್ದ ಜಾಗವನ್ನು ತಲುಪಿದನು. ಯಮುನಾ ನದಿಯ ದಡದಲ್ಲಿ ದೋಣಿಯನ್ನು ದಡಕ್ಕೆ ಕಟ್ಟುತ್ತಿದ್ದ ಆ ಯುವತಿಯನ್ನು ನೋಡಿದನು. ಅವಳೂ ಇವನನ್ನು ನೋಡಿ ಒಂದು ಕ್ಷಣ ರಾಜನೇ ಬಂದಿರುವನೆಂದು ಭ್ರಮೆಗೊಂಡಳು. ದೇವವ್ರತನು ಅವಳಿಗೆ ನಮಸ್ಕರಿಸಿ, ನಿನ್ನ ತಂದೆಯ ಬಳಿಗೆ ಕರೆದುಕೊಂಡು ಹೋಗು ಎಂದು ಕೇಳಿದನು. ಅತಿಥಿಯಾಗಿ ಬಂದವನನ್ನು ಬೆಸ್ತರ ಯೋಗ್ಯ ಮರ್ಯಾದೆಯಿಂದ ಬರಮಾಡಿಕೊಂಡನು. ಯುವರಾಜನು ನೇರವಾಗಿ ಪ್ರಶ್ನಿಸಿದನು: ``ಹಸ್ತಿನಾಪುರದ ಮಹಾರಾಜನಾದ ನನ್ನ ತಂದೆಯು ನಿನ್ನ ಮಗಳನ್ನು ಕಂಡು ಮೋಹಗೊಡಿರುವನೆಂದು ಕೇಳಿದೆ. ನಿನಗೆ ಇನ್ನೇನು ಬೇಕಾಗಿತ್ತು? ಭೂಮಂಡಲದ ಒಡೆಯನೇ ನಿನ್ನ ಬಳಿಗೆ ಬಂದು ಒಂದು ಉಪಕಾರಕ್ಕಾಗಿ ಕೈಜೋಡಿಸಿ ಕೇಳಿಕೊಂಡ ಮರ್ಯಾದೆ ನಿನಗೆ ಸಾಕಾಗಲಿಲ್ಲವೆ? ಅವನ ಹೃದಯದ ಆಸೆಯನ್ನು ಸಲ್ಲಿಸದಿರುವಷ್ಟು ಸೊಕ್ಕೇ ನಿನಗೆ?" ಬೆಸ್ತರರಸನು, ``ಯುವರಾಜ, ಕೋಪಿಸಬೇಡ. ನಾನೊಂದು ಶುಲ್ಕವನ್ನು ಅಪೇಕ್ಷಿಸಿದೆ ಅಷ್ಟೆ. ನಿನ್ನ ತಂದೆ ನನ್ನ ಮಗಳನ್ನು ಕೇಳಿದ್ದು ನನಗೆ ತೋರಿಸಿದ ದೊಡ್ಡ ಮರ್ಯಾದೆ ಎಂಬುದು ನನಗೆ ಗೊತ್ತು. ನನ್ನ ಮಗಳು ಸತ್ಯವತಿಯ ಮಗ ಮಹಾರಾಜನಾಗುವನು ಎಂದು ಜ್ಯೊತಿಷಿಗಳು ಹೇಳಿದ್ದಾರೆ. ಆದರೆ ಯುವರಾಜನಾಗಿ ನೀನು ಈಗಾಗಲೇ ಪಟ್ಟಾಭಿಷಿಕ್ತನಾಗಿರುವುದು ನನಗೆ ಗೊತ್ತು. ಮಹಾರಾಜನು ನಿನ್ನ ಮೇಲೆ ಅದೆಷ್ಟು ಪ್ರೀತಿ ಇಟ್ಟಿರುವನೆಂಬುದೂ ಗೊತ್ತು. ಆದುದರಿಂದಲೇ ಅವನು ನನ್ನ ನಿಬಂಧನೆಯನ್ನು ಕೇಳಿದೊಡನೆ ಸುಮ್ಮನಾಗಿಬಿಟ್ಟನು. ನನಗೆ ಏನೂ ಪ್ರತ್ಯುತ್ತರ ಕೊಡಲಾರದೇ ಹೋದನು. ಇಷ್ಟೇ ನಡೆದದ್ದು" ಎಂದನು.ಉದ್ವಿಗ್ನತೆಯಿಂದ ದೇವವ್ರತನ ಹುಬ್ಬು ಗಂಟಿಕ್ಕಿತು. ತನ್ನ ತಂದೆ ಏನನ್ನೋ ಬಯಸಿ ಅದನ್ನು ಪಡೆಯಲಾರದೆ ದೋದರು ಎಂಬುದನ್ನು ಊಹಿಸಿಕೊಳ್ಳಲೂ ಸಾಧ್ಯವಿರಲಿಲ್ಲ. ``ನನ್ನ ತಂದೆಯವರ ನಂತರ ನಿನ್ನ ಮೊಮ್ಮಗನು ರಾಜನಾಗಬೇಕು ಎಂದು ತಾನೇ ನಿನ್ನ ಅಭಿಲಾಷೆ? ಹಾಗೆಯೇ ಆಗಲಿ. ಇದೋ, ನಾನು ರಾಜ್ಯಸಿಂಹಾಸನದ ಮೇಲಿನ ನನ್ನ ಹಕ್ಕನ್ನು ತ್ಯಜಿಸಿದ್ದೇನೆ. ಈಗ ನಿನಗೆ ಸಮಾಧಾನವಾಯಿತೆ?" ಎಂದುಬಿಟ್ಟನು. ಲೋಕದ ಆಶೋತ್ತರವಾಗೆದ್ದ ಯುವರಾಜನ ಮಾತುಗಳನ್ನು ಕೇಳಿ ಬೆಸ್ತರ ಅರಸನು ಬೆರಗುವಟ್ಟುಹೋದನು. ಅವನ ಮುಖದಲ್ಲಿ ಅಪನಂಬಿಕೆ ಇನ್ನೂ ಉಳಿದಿರುವುದು ಕಾಣಿಸಿತು. ಯುವರಾಜನು ಅಷ್ಟು ಸುಲಭವಾಗಿ, ದಿನನಿತ್ಯದ ಯಾವುದೋ ಕ್ಷುಲ್ಲಕ ವ್ಯವಹಾರವೋ ಎಂಬಂತೆ ಸಿಂಹಾಸನವನ್ನು ತ್ಯಾಗಮಾಡಿದ್ದು ಅವನನ್ನು ದಂಗುಬಡಿಸಿತು. ಅವನು ನಕ್ಕು, ``ನನ್ನೊಡೆಯ, ನಿಜವಾದ ಯುವರಾಜನೆಂದರೆ ನೀನು. ನಿನ್ನ ತಂದೆಯ ಸಂತೋಷವೆಂಬುದೇ ನಿನಗೆ ಸರ್ವಸ್ವ. ಮಹಾತ್ಮನಾಗಿರುವ ನೀನು ಮಹಾತ್ಯಾಗವನ್ನೇ ಮಾಡಿರುವೆ. ಆದರೆ ನಿನ್ನ ಮಕ್ಕಳು ನಿನ್ನ ಹಾಗೆಯೇ ನಿಸ್ವಾರ್ಥಿಗಳಾಗಿ ಇದ್ದುಬಿಡುವರು ಎಂದು ಹೇಗೆ ತಾನೆ ನಾನು ನಂಬಲಿ? ಸತ್ಯವತಿಯ ಮಕ್ಕಳ ಹಕ್ಕನ್ನು ಅವರು ಕಸಿದುಕೊಳ್ಳುವುದಿಲ್ಲ ಎಂಬುದಕ್ಕೆ ನೆಚ್ಚಿಕೆಯಾದರೂ ಏನು?" ಎಂದನು. ಈ ಮನುಷ್ಯನ ದುರಾಸೆ ಇಷ್ಟರಮಟ್ಟಿಗೆ ಇರಬಹುದೆಂಬುದು ಯುವರಾಜನಿಗೆ ನಂಬಲಸಾಧ್ಯವಾಗಿ ತೋರಿತು. ಅತ್ಯಂತ ಹೇವರಿಕೆಯ, ತಿರಸ್ಕಾರದ ಕಿರುನಗೆ ಅವನ ಮುಖದ ಮೇಲೆ ಮೂಡಿತು. ``ಅಯ್ಯಾ, ಇನ್ನೂ ನಿನಗೆ ತೃಪ್ತಿಯಾಗಲಿಲ್ಲವೆ? ನಾನು ನಿನ್ನನ್ನು ತೃಪ್ತಿಪಡಿಸುತ್ತೇನೆ. ನಾನು ಮದುವೆಯನ್ನೇ ಮಾಡಿಕೊಳ್ಳುವುದಿಲ್ಲ. ಸ್ವರ್ಗಲೋಕ, ಮರ್ತ್ಯಲೋಕ, ಪಾತಾಳಲೋಕಗಳ ಸಮಸ್ತ ಪ್ರಜೆಗಳ ಸಮ್ಮುಖದಲ್ಲಿ, ನನಗೆ ಪ್ರಿಯವಾದ, ಪವಿತ್ರವೆನಿಸುವ ಎಲ್ಲದರ ಹೆಸರಿನಲ್ಲಿ, ನನ್ನ ಗುರು ಭಗವಾನ್ ಭಾರ್ಗವನ ಹೆಸರಿನಲ್ಲಿ, ನನ್ನ ತಾಯಿಯಾದ ಗಂಗೆಯ ಹೆಸರಿನಲ್ಲಿ, ಧರ್ಮದ ಹೆಸರಿನಲ್ಲಿ, ಇದೋ ನಾನು ಪ್ರತಿಜ್ಞೆ ಮಾಡುತ್ತಿದ್ದೇನೆ--ನಾನು ಬದುಕಿರುವವರೆಗೂ ಮದುವೆ ಮಾಡಿಕೊಳ್ಳುವುದಿಲ್ಲ! ಈಗಲಾದರೂ ನಿನಗೆ ತೃಪ್ತಿಯಾಯಿತೆ?" ಎಂದು ಘೋಷಿಸಿಬಿಟ್ಟನು.ದೇವವ್ರತನ ಮೇಲೆ ಸ್ವರ್ಗದಿಂದ ಪುಷ್ಪವೃಷ್ಟಿಯಾಯಿತು. ದೇವದುಂದುಭಿಗಳು ಮೊಳಗಿದುವು. ಅಷ್ಟು ಭೀಷಣವಾದ ಪ್ರತಿಜ್ಞೆಯನ್ನು ಕೈಕೊಂಡ ಯುವರಾಜನನ್ನು ಸಮಸ್ತ ಭೂತಗಳೂ ಭೀಷ್ಮ! ಎಂದು ಹೊಗಳಿದುವು. ``ಇಲ್ಲಿರುವಳು ನೋಡು ನಿನ್ನ ತಾಯಿ!" ಎಂದು ಬೆಸ್ತರರಸನು ಮಗಳನ್ನು ಕರೆತಂದು ಯುವರಾಜನ ಎದುರಿಗೆ ನಿಲ್ಲಿಸಿದ. ದೇವವ್ರತ ಅವಳಿಗೆ ನಮಸ್ಕರಿಸಿ, ರಥದ ಮೇಲೆ ಕೂರಿಸಿಕೊಂಡು, ತಕ್ಷಣವೇ ಹಸ್ತಿನಾಪುರದ ಕಡೆಗೆ ವೇಗವಾಗಿ ಪಯಣಿಸಿದ.ರಾಜಧಾನಿಯನ್ನು ತಲುಪಿದೊಡನೆಯೇ ದೇವವ್ರತನು ತಂದೆಯ ಬಳಿಗೆ ಧಾವಿಸಿದ. ಸುಂದರಿಯಾದ ಸತ್ಯವತಿಯನ್ನು ಕರೆತಂದು ಅವನ ಮುಂದೆ ನಿಲ್ಲಿಸಿ, ``ಅಪ್ಪಾ, ನಿನಗಾಗಿ ಈಕೆಯನ್ನು ಕರೆತಂದಿದ್ದೇನೆ. ಸ್ವೀಕರಿಸಿ ಇನ್ನಾದರೂ ಈ ಖಿನ್ನತೆಯನ್ನು ಬಿಟ್ಟುಬಿಡು. ದಯವಿಟ್ಟು ಸಂತೋಷವಾಗಿರು, ಅಪ್ಪ!" ಎಂದನು. ಅಂತರಿಕ್ಷದಿಂದ ಇನ್ನೂ `ಭೀಷ್ಮ! ಭೀಷ್ಮ! ಎಂಬ ಧ್ವನಿ ಮೊಳಗುತ್ತಿರುವುದು ಕೇಳಿಸುತ್ತಿತ್ತು. ಶಂತನುವು ನಡೆದುದೆಲ್ಲವನ್ನೂ ಕೇಳಿದನು. ಅವನ ಹೃದಯವು ದುಃಖದಿಂದ ತುಂಬಿಹೋಯಿತು. ಮನಸ್ಸಾಕ್ಷಿಯು ಅವನನ್ನು ತೀವ್ರವಾಗಿ ಘಾತಿಸಿತು. ಮಹಾವೀರನಾದ, ಸುಂದರಾಂಗನಾದ, ದೈವೀಪುರುಷನೆನಿಸಿದ ಮಗನು ತಾನೇ ತನ್ನ ಮೇಲೆ ವಿಧಿಸಿಕೊಂಡ ಆಜೀವ ಬ್ರಹ್ಮಚರ್ಯವ್ರತವನ್ನು ಕಲ್ಪಿಸಿಕೊಳ್ಳಲೂ ಅವನಿಗೆ ಸಾಧ್ಯವಾಗದೆ ಹೋಯಿತು. ಆದರೆ ವಿಧಿ ಹೆಣೆದ ಬಲೆಯನ್ನು ಬಿಡಿಸುವುದು ಸಾಧ್ಯವೆ? ಶಂತನುವಿನ ಬಯಕೆಯಂತೂ ಈಡೇರಿತು. ತನ್ನ ಕೃತಜ್ಞತೆಯ ಕುರುಹಾಗಿ, ತನ್ನ ಪ್ರೇಮದ ಕುರುಹಾಗಿ, ಪ್ರೀತಿಯ ದೇವವ್ರತನಿಗೆ ``ನೀನು ಇಚ್ಛಾ ಮರಣಿಯಾಗು! ನೀನಾಗಿ ಬಯಸುವವರೆಗೂ ಮೃತ್ಯುವು ನಿನಗಾಗಿ ಕಾದುಕೊಂಡಿರಲಿ!" ಎಂದು ಒಂದು ವರವನ್ನು ಕೊಟ್ಟನು. ಇದಕ್ಕಾಗಿ ಅವನು ತನ್ನ ತಪಃಫಲವನ್ನೆಲ್ಲ ಧಾರೆಯೆರೆಯಬೇಕಾಯಿತು. ಜೀವನದಲ್ಲಿ ತನ್ನ ಮಗನು ಕಳೆದುಕೊಂಡ ಸಮಸ್ತಕ್ಕಾಗಿ ತನ್ನದೇ ಆದ ರೀತಿಯಲ್ಲಿ ಪರಿಹಾರವನ್ನೊದಗಿಸಲು ತಂದೆಯು ಪ್ರಯತ್ನಿಸಿದನು.ಶಂತನು ಸತ್ಯವತಿಯನ್ನು ಮದುವೆಯಾಗಿ ಕೆಲವರ್ಷಗಳು ಸುಖವಾಗಿದ್ದನು. ಅವರಿಗೆ ಹುಟ್ಟಿದ ಇಬ್ಬರು ಮಕ್ಕಳಿಗೆ ಚಿತ್ರಾಂಗದ, ವಿಚಿತ್ರವೀರ್ಯ ಎಂದು ಹೆಸರಿಡಲಾಯಿತು. ವರ್ಷಗಳು ಉರುಳಿದವು. ಶಂತನು ಮಹಾರಾಜನು ವೃದ್ಧಾಪ್ಯದಿಂದ ಪ್ರಾಣಬಿಟ್ಟನು. ರಾಜ್ಯಭಾರವು ಭೀಷ್ಮನೆಂದು ಖ್ಯಾತನಾಗಿದ್ದ ದೇವವ್ರತನ ಮೇಲೇ ಬಿದ್ದಿತು. ಚಿತ್ರಾಂಗದನು ಇನ್ನೂ ಚಿಕ್ಕವನು. ಅವನಿಗೆ ಯುವ ರಾಜಪಟ್ಟ ಕಟ್ಟಿ, ಅವನ ಪರವಾಗಿ ಭೀಷ್ಮನು ರಾಜ್ಯಭಾರವನ್ನು ಹೊರಲೇ ಬೇಕಾಯಿತು. ಹೀಗೆ ಭೀಷ್ಮನು ಕೆಲವು ವರ್ಷಗಳನ್ನು ಕಳೆದನು. ನಂತರ ಇದ್ದಕ್ಕಿದ್ದಂತೆ ದುರಂತವು ಬರಸಿಡಿಲಿನಂತೆ ಬಂದೆರಗಿತು. ಚಿತ್ರಾಂಗದನೆಂಬ ಗಂಧರ್ವನಿಗೆ ಮಾನವನೊಬ್ಬ ತನ್ನ ಹೆಸರನ್ನಿಟ್ಟುಕೊಂಡದ್ದು ಸರಿಬೀಳಲಿಲ್ಲ. ``ಆ ಹೆಸರಿಗೆ ನೀನು ಯೋಗ್ಯನೆಂಬುದನ್ನು ನನ್ನೊಡನೆ ಯುದ್ಧಮಾಡಿ ತೋರಿಸು" ಎಂದು ಹುರುಡುಕಟ್ಟಿ ನಿಂತನು. ಕುರುಕ್ಷೇತ್ರ ರಣರಂಗದಲ್ಲಿ ಇಬ್ಬರು ಚಿತ್ರಾಂಗದರುಗಳ ನಡುವೆ ಯುದ್ಧವೇರ್ಪಟ್ಟಿತು. ಈ ಯುದ್ದದಲ್ಲಿ ಶಂತನುವಿನ ಮಗ ಚಿತ್ರಾಂಗದನು ಮರಣಹೊಂದಿದನು. ಭೀಷ್ಮನಿಗೆ ಅಪಾರ ದುಃಖವಾಯಿತು. ಅವನು ಸತ್ಯವತಿಯ ಎರಡನೆಯ ಮಗ ವಿಚಿತ್ರವೀರ್ಯನಿಗೆ ಯುವರಾಜಪಟ್ಟವನ್ನು ಕಟ್ಟಿ ಅವನ ಹೆಸರಿನಲ್ಲಿ ರಾಜ್ಯಭಾರವನ್ನು ಮುಂದುವರೆಸಿದನು. ಬಾಲಕ ವಿಚಿತ್ರವೀರ್ಯನು ಅಣ್ಣನಿಗೆ ವಿಧೇಯನಾಗಿದ್ದನು. ಪ್ರಜೆಗಳು ಸುಖವಾಗಿದ್ದರು. ಅನಭಿಷಿಕ್ತನಾಗಿದ್ದ ಭೀಷ್ಮನ ಆಳ್ವಿಕೆಯಲ್ಲಿ ಹಸ್ತಿನಾಪುರದ ಎಲ್ಲರೂ ಆನಂದದಿಂದಿದ್ದರು.* * * * ಪುಟ್ಟ ವಿಚಿತ್ರವೀರ್ಯನೇ ಈಗ ಸತ್ಯವತಿಯ ಆಶಾಕಿರಣ. ಅವಳಿಗೆ ಈಗ ಉಳಿದಿರುವುದು ಅವನೊಬ್ಬನೇ ಮಗ. ಭೀಷ್ಮನು ಅಣ್ಣನಾಗಿದ್ದರೂ, ತಂದೆಯಂತೆ ಅವನನ್ನು ನೋಡಿಕೊಳ್ಳುತ್ತಿದ್ದನು. ವರ್ಷಗಳು ಉರುಳಿದುವು. ವಿಚಿತ್ರವೀರ್ಯನ ಮದುವೆಯನ್ನು ಕುರಿತು ಭೀಷ್ಮನು ಯೋಚಿಸುವ ಕಾಲವು ಬಂದೊದಗಿತು. ಆಗ ಕಾಶೀರಾಜನಿಗೆ ಅಂಬೆ,ಅಂಬಿಕೆ, ಅಂಬಾಲಿಕೆ ಎಂಬ ಮೂವರು ಸುಕುಮಾರಿಯರಾದ ಮಕ್ಕಳಿದ್ದರು. ಇವರುಗಳು ತನ್ನ ತಮ್ಮನಿಗೆ ಯೋಗ್ಯರಾಗಬಹುದೆಂದು ಭೀಷ್ಮನು ಯೋಚಿಸಿದನು. ಇನ್ನೇನು ಮಾತುಕತೆ ಆರಂಭಿಸಬೇಕು ಎನ್ನುವಷ್ಟರಲ್ಲಿ ಕಾಶೀರಾಜನು ತನ್ನ ಕುಮಾರಿಯರಿಗೆ ಸ್ವಯಂವರವನ್ನು ಏರ್ಪಡಿಸಿರುವನೆಂಬ ಸುದ್ದಿ ಬಂದಿತು. ಭೀಷ್ಮನಿಗೆ ಈ ಅಪಮಾನವನ್ನು ಸಹಿಸುವುದು ಸಾಧ್ಯವಾಗಲಿಲ್ಲ. ಕಾಶೀರಾಜನ ಮನೆಯಿಂದ ಕುರುವಂಶಕ್ಕೆ ಹೆಣ್ಣು ತರುವುದು ಮೊದಲಿನಿಂದಲೂ ನಡೆದುಬಂದ ಪದ್ಧತಿ. ಅಂಥಾದ್ದರಲ್ಲಿ ಪದ್ಧತಿಗೆ ವಿರೋಧವಾಗಿ ಕಾಶೀರಾಜನು ಸ್ವಯಂವರವನ್ನು ಏರ್ಪಡಿಸುವುದೇ-ಅದೂ ತನಗೆ ತಿಳಿಸದೆ? ಅವನು ಸ್ವಯಂವರ ನಡೆಯುತ್ತಿದ್ದ ಸ್ಥಳಕ್ಕೆ ಧಾವಿಸಿದನು.ಸ್ವಯಂವರಕ್ಕೆ ಸಿದ್ಧತೆಗಳೆಲ್ಲ ಭರದಿಂದ ಸಾಗಿದ್ದವು. ಭರತವರ್ಷದ ಎಲ್ಲ ಭಾಗಗಳಿಂದಲೂ ರಾಜರುಗಳು ಬಂದಿದ್ದರು. ಅವರೆಲ್ಲ ಭೀಷ್ಮನನ್ನು ನೋಡಿದರು. ಪರಿಹಾಸದ, ಅವಹೇಳನದ, ತಿರಸ್ಕಾರದ ಕಿರುನಗೆಗಳು ಅವರ ಮುಖಗಳಲ್ಲಿ ಲಾಸ್ಯವಾಡುತ್ತಿದ್ದವು. ದೇವವ್ರತನನ್ನು ನೋಡಿ. ಇವನು ಬ್ರಹ್ಮಚಾರಿ. ಈ ರಾಜಕುಮಾರಿಯರ ಸ್ವಯಂವರಕ್ಕೆ ಬಂದಿದ್ದಾನೆ! ನಿಜಕ್ಕೂ ಹೇಳುವುದಾದರೆ, ಪ್ರಕೃತಿನಿಯಮವನ್ನು ಯಾರು ತಾನೆ ಮೀರುವುದಕ್ಕಾಗುತ್ತದೆ? ರಾಜಕುಮಾರಿಯರ ಸೌಂದರ್ಯವು ಋಷಿಗಳನ್ನೂ ಕದಲಿಸುವಂಥದು. ಎಂದಮೇಲೆ ಹುಲು ಮಾನವನಾದ ದೇವವ್ರತನ ಪಾಡೇನು? ತಂದೆಯ ತೃಪ್ತ್ಯರ್ಥವಾಗಿ ಮಾಡಿದ ಪ್ರತಿಜ್ಞೆಯನ್ನು ಮರೆತಿರುವನೆಂದು ಕಾಣುತ್ತದೆ. ಒಬ್ಬಳಾದರೂ ರಾಜಕುಮಾರಿ ತನ್ನನ್ನು ಆರಿಸಬಹುದೆಂಬ ಆಸೆಯಿಂದ ಬಂದಿರುವನೆಂದು ಕಾಣುತ್ತದೆ. ಅಯ್ಯೋ ಪಾಪ, ವೃಥಾ ಆಸೆಪಡುತ್ತಾನೆ! ನಾವೆಲ್ಲರೂ ಇರುವಾಗ, ಈ ಯೌವನ ಕಳೆದ ಮಧ್ಯ ವಯಸ್ಕನ ಕಡೆಗೆ ಯಾರು ನೋಡುತ್ತಾರೆ? ಎಂದು ಅವರು ವಿಧವಿಧವಾಗಿ ಮಾತನಾಡಿಕೊಳ್ಳುತ್ತಿದ್ದರು.ಸಿಡಿಲಿನಂತಹ ದನಿಯೊಂದು ನೆರೆದಿದ್ದ ರಾಜರುಗಳನ್ನೆಲ್ಲ ಬಡಿದೆಬ್ಬಿಸಿತು. ಭೀಷ್ಮನು ಅವರನ್ನುದ್ದೇಶಿಸಿ ಹೇಳುತ್ತಿದ್ದ: ``ನಾನು ಖಂಡಿತವಾಗಿಯೂ ಸ್ವಯಂವರಕ್ಕೆಂದೇ ಬಂದಿರುವೆನು. ಈ ರಾಜಕುಮಾರಿಯರನ್ನು ನಾನು ಹಸ್ತಿನಾಪುರಕ್ಕೆ ಕೊಂಡೊಯ್ಯಲಿರುವೆನು. ಅವರನ್ನು ನನ್ನ ತಮ್ಮ ವಿಚಿತ್ರವೀರ್ಯನಿಗೆ ಕೊಟ್ಟು ಮದುವೆ ಮಾಡುವೆನು. ಅವರು ಕುರು ಸಾರ್ವಭೌಮನ ರಾಣಿಯರಾಗಿ ಕುರುವಂಶದ ಸೊಸೆಯಂದಿರಾಗುವರು. ನಿಮ್ಮಲ್ಲಿ ಯಾರಿಗಾದರೂ ಧೈರ್ಯವಿದ್ದರೆ, ಸಾಹಸವಿದ್ದರೆ, ನನ್ನಿಂದ ಈ ಕುವರಿಯರನ್ನು ಗೆದ್ದು ಪಡೆದುಕೊಳ್ಳಬಹುದು. ಯಾರೇ ನನ್ನನ್ನು ಎದುರಿಸಿ ನಿಂತರೂ ಅವರೊಂದಿಗೆ ಹೋರಲು ನಾನು ಸಿದ್ದನಾಗಿರುವೆನು. ಹೀಗೆಂದ ಭೀಷ್ಮನು ರಾಜಕುಮಾರಿಯರನ್ನು ಒಬ್ಬೊಬ್ಬರನ್ನೇ ಕೈ ಹಿಡಿದು ರಥಕ್ಕೆ ಹತ್ತಿಸಿಕೊಂಡುನು. ಇನ್ನೇನು ಹೊರಡಬೇಕೆನ್ನುವಷ್ಟರಲ್ಲಿ ರಾಜರುಗಳೆಲ್ಲ ಕ್ರೋಧಾವಿಷ್ಟರಾದರು. ಕಾಶೀರಾಜನು ಸಹಾಯಕ್ಕಾಗಿ ಅವರೆಡೆಗೆ ನೋಡಿದನು. ಎಲ್ಲರೂ ಒಟ್ಟಾಗಿ ಭೀಷ್ಮನೆಡೆಗೆ ನುಗ್ಗಿ ಬಂದರು. ಭೀಷ್ಮನು ಅವರೆಲ್ಲರನ್ನೂ ಒಟ್ಟಿಗೇ ಎದುರಿಸಿ ಅನಾಯಸವಾಗಿ ಸೋಲಿಸಿದನು. ರಾಜಕುಮಾರಿಯರೊಂದಿಗೆ ಭೀಷ್ಮನ ರಥವು ಹಸ್ತಿನಾಪುರದೆಡೆಗೆ ಮುನ್ನಡೆಯಿತು.ಸ್ವಯಂವರಕ್ಕೆ ಬಂದಿದ್ದವರಲ್ಲಿ ಶಾಲ್ವ ದೇಶದ ರಾಜನೊಬ್ಬ ಮಹಾ ವೀರ. ಅವನೂ ಭೀಷ್ಮನೊಡನೆ ಸೆಣೆಸಿ ಕಾದಿದವರಲ್ಲಿ ಒಬ್ಬ. ಅವನದು ಸಾಧಾರಣ ಹೋರಾಟವಾಗಿರಲಿಲ್ಲ. ಅವನ ಯುದ್ಧವನ್ನೂ ಅವನು ಭೀಷ್ಮನನ್ನು ನೋಯಿಸಿದುದನ್ನೂ ಎಲ್ಲರೂ ಅಚ್ಚರಿಯಿಂದ ನೋಡುತ್ತಿದ್ದರು. ಭೀಷ್ಮನು ಸಿಡಿದೆದ್ದು, ಮೊದಲಿಗಿಂತ ಘೋರವಾಗಿ ಯುದ್ಧಮಾಡಿ, ಶಾಲ್ವನ ಸಾರಥಿಯನ್ನು ಕೊಂದು, ಅವನ ಕುದುರೆಗಳನ್ನು ಹೊಡೆದುರುಳಿಸಿ, ಅವನನ್ನು ನಿರಾಯುಧನನ್ನಾಗಿ ಮಾಡಿದನು. ಶಾಲ್ವನು ಅಸಹಾಯನಾಗಿ ಭೂಮಿಯ ಮೇಲೆ ನಿಲ್ಲುವಂತಾಯಿತು. ಧರ್ಮಾತ್ಮನಾದ ಭೀಷ್ಮನು ಅವನನ್ನು ಕೊಲ್ಲದೆ ಉಳಿಸಿ ಹಸ್ತಿನಾಪುರಕ್ಕೆ ಹೊರಟುಹೋದನು.ಹಸ್ತಿನಾಪುರದ ಬೀದಿಬೀದಿಗಳಲ್ಲಿ ಜನರು ನೆರೆದು ಸಂಭ್ರಮದಿಂದ ಸೆರೆಹಿಡಿದು ತಂದಿದ್ದ ರಾಜಕುಮಾರಿಯರನ್ನು ಸ್ವಾಗತಿಸಿದರು. ಅರಮನೆಯು ಬರುತ್ತಲೇ ಭೀಷ್ಮನು ರಥದಿಂದಿಳಿದು ಆ ಸುಂದರಿಯರನ್ನು ಸತ್ಯವತಿಯ ಮುಂದೆ ಕರೆತಂದು ನಿಲ್ಲಿಸಿದ. ``ನೋಡಮ್ಮ, ನಮ್ಮ ವಿಚಿತ್ರವೀರ್ಯನಿಗೆ ಎಂದು ನಾನು ಕರೆದುಕೊಂಡು ಬಂದಿರುವ ಕನ್ಯಾಮಣಿಗಳಿವರು" ಎಂದು ಒಪ್ಪಿಸಿದ. ಸತ್ಯವತಿಗೆ ಬಹಳ ಸಂತೋಷವಾಯಿತು. ಕುಮಾರನನ್ನು ಕರೆಸಿ ತೋರಿಸಿದಳು. ವಿಚಿತ್ರವೀರ್ಯನೂ ಆನಂದಪಟ್ಟು ಕೃತಜ್ಞತೆಯಿಂದ ಭೀಷ್ಮನೆಡೆಗೆ ನೋಡಿ ಅವನ ಪಾದಗಳಿಗೆ ಮಣಿದ. ಭೀಷ್ಮನು ಅವನನ್ನು ಹಿಡಿದೆತ್ತಿ ಅಲಂಗಿಸಿಕೊಂಡ. ಅವನ ಕಣ್ಣುಗಳು ಒದ್ದೆಯಾದವು. ಬಾಲಕನ ಮೇಲಿನ ಅವನ ಪಿತೃಸದೃಶ ವಾತ್ಸಲ್ಯ ಅತಿಶಯವಾಗಿತ್ತು.``ಪೂಜ್ಯರೇ, ದಯವಿಡಿ; ನನ್ನದೊಂದು ಮಾತಿದೆ!" ಎಂಬ ಮಾತು ಕೇಳಿದ ಭೀಷ್ಮ ತಿರುಗಿ ನೋಡಿದ. ರಾಜಕುಮಾರಿಯರಲ್ಲಿ ಹಿರಿಯವಳಾದ ಅಂಬೆಯು ಸತ್ಯವತಿ, ಭೀಷ್ಮ ಇಬ್ಬರನ್ನೂ ಉದ್ದೇಶಿಸಿ ``ಆರ್ಯನಾದ ಭೀಷ್ಮನು ಸ್ವಯಂವರಕ್ಕೆ ಬಂದು ನಮ್ಮನ್ನು ಕೈ ಹಿಡಿದು ಬಲವಂತವಾಗಿ ಎಳೆದು ತರುವಾಗ ನಾನು ಶಾಲ್ವನಿಗೆ ಹಾರವನ್ನು ಇನ್ನೇನು ಹಾಕುವವಳಿದ್ದೆ. ಅವನನ್ನು ಆಗಲೇ ನಾನು ಪತಿಯೆಂದು ಮನಸ್ಸಿನಲ್ಲಿ ಸ್ವೀಕರಿಸಿದ್ದೆ" ಎಂದಳು. ತಲೆದೋರಿದ ಈ ಹೊಸ ಸಮಸ್ಯೆಯಿಂದ ಎಲ್ಲರೂ ಅಪ್ರತಿಭರಾದರು. ಯುವರಾಜನು, ``ಹೃದಯವನ್ನು ಇನ್ನೊಬ್ಬರಿಗೆ ಇತ್ತಿರುವವಳನ್ನು ಮದುವೆಯಾಗುವುದು ತರವಲ್ಲ" ಎಂದ. ಭೀಷ್ಮ ಸತ್ಯವತಿ ಇಬ್ಬರಿಗೂ ಅವನು ಹೇಳುವುದು ಸರಿ ಎನಿಸಿತು. ಭೀಷ್ಮನು ಅಂಬೆಗೆ ``ನೀನು ನಿನ್ನ ಪತಿಯನ್ನು ಈಗಾಗಲೇ ಆರಿಸಿಕೊಂಡಿರುವೆ. ನಿನ್ನನ್ನು ಇಲ್ಲಿ ಉಳಿಸಿಕೊಳ್ಳುವುದು ಸರಿಯಲ್ಲವೆಂದು ನಮಗನ್ನಿಸುತ್ತದೆ. ನಾನು ನಿನ್ನನ್ನು ಸರಿಯಾದ ರಕ್ಷಣೆ ಕಳುಹಿಸಿಕೊಡುತ್ತೇನೆ. ನೀನು ಶಾಲ್ವನಲ್ಲಿಗೆ ಹೋಗಲು ಸ್ವತಂತ್ರಳು" ಎಂದನು.ಅಂಬೆ ಶಾಲ್ವರಾಜ್ಯಕ್ಕೆ ಪ್ರಯಾಣ ಮಾಡಿದಳು. ಶಾಲ್ವನ ಬಳಿಗೆ ಹೋಗಿ ನಿಂತು,``ರಾಜನೇ, ನೋಡು ನನ್ನನ್ನು. ಸ್ವಯಂವರ ಮಂಟಪದಲ್ಲಿ ನಿನಗೆ ಮಾಲೆ ಹಾಕಲು ಉದ್ಯುಕ್ತಳಾಗಿದ್ದವಳನ್ನು ನನ್ನ ತಂಗಿಯರೊಡನೆ ಭೀಷ್ಮನು ಬಲಾತ್ಕಾರದಿಂದ ಕರೆದೊಯ್ದ. ಹಸ್ತಿನಾಪುರವನನ್ನು ತಲುಪಿದೊಡನೆ ಅವನಿಗೆ ಈಗಾಗಲೇ ನಾನು ನನ್ನ ಪತಿಯನನ್ನು ಆರಿಸಿಕೊಂಡಿರುವೆನೆಂದು ಹೇಳಿದೆ. ದೊಡ್ದ ಮನಸ್ಸಿನವನಾದ ಅವನು ತಕ್ಷಣವೇ ನನ್ನನ್ನು ನಿನ್ನಲ್ಲಿಗೆ ಕಳಿಸಿಕೊಟ್ಟಿರುವನು. ನಿನ್ನನ್ನು ಪ್ರೀತಿಸಿರುವ ನನನನ್ನು ಪರಿಗ್ರಹಿಸು" ಎಂದಳು. ಶಾಲ್ವನು ದೊಡ್ದದಾಗಿ ನಕ್ಕು, ``ನಿನ್ನನ್ನು ಸ್ವೀಕರಿಸುವುದೆ? ಶತ್ರುವಿನಿಂದ ಉಡುಗೊರೆ ತೆಗೆದುಕೊಳ್ಳಲು ನೀನೇನು ನನ್ನನ್ನು ಭಿಕ್ಷಕ ಎಂದುಕೊಂಡಿರುವೆಯಾ? ದೇವವ್ರತನು ನಿನ್ನ ಬಲಗೈ ಹಿಡಿದು ಕರೆದೊಯ್ದಿದ್ದಾನೆ. ನಮ್ಮೆಲ್ಲರನ್ನೂ ಜಯಿಸಿ ನಿನ್ನನ್ನು ಯುದ್ಧದಲ್ಲಿ ಗೆದ್ದಿದ್ದಾನೆ. ಕ್ಷತ್ರಿಯಧರ್ಮದ ಪ್ರಕಾರ ಕನ್ಯೆಯನ್ನ ಯಾರು ಯುದ್ಧದಲ್ಲಿ ಗೆದ್ದುಕೊಳ್ಳುವರೋ ಅವರೇ ಅವಳ ಒಡೆಯನಾಗುವನು. ನೀನು ಭೀಷ್ಮನ ಸ್ವತ್ತು. ಅವನೇ ನಿನ್ನ ಪತಿ. ನೀನು ಅವನಲ್ಲಿಗೇ ಹೋಗಿ ಅವನನ್ನು ವಿವಾಹವಾಗಬೇಕು. ನಾನು ನಿನ್ನನ್ನು ಪರಿಗ್ರಹಿಸಲಾರೆ" ಎಂದ.ನೋವು ಅಪಮಾನ ಎರಡನ್ನೂ ಹೃದಯದಲ್ಲಿ ತುಂಬಿಕೊಂಡು, ಅಂಬೆಯು ಪುನಃ ಹಸ್ತಿನಾಪುರಕ್ಕೆ ಬಂದು ಭೀಷ್ಮನೆದುರಿಗೆ ನಿಂತಳು. ಮುಖವು ಕೆಂಪಡರಿ ಕಣ್ಣೀರು ಧಾರೆಧಾರೆಯಾಗಿ ಹರಿಯುತ್ತಿತ್ತು. ಎಳೆಯ ಹುಡುಗಿಯ ಪರಿಸ್ಥಿತಿ ಭೀಷ್ಮನನ್ನು ಕಂಗೆಡಿಸೀತು. ``ಏಕಮ್ಮಾ, ಏನಾಯಿತು? ನಾನು ನಿನ್ನನ್ನು ನಿನ್ನ ಇಚ್ಛೆಯ ಪ್ರಕಾರ ಶಾಲ್ವನಲ್ಲಿಗೆ ಕಳುಹಿಸಿದೆನಲ್ಲವೆ? ಏಕೆ ಹಿಂದಿರುಗಿ ಬಂದೆ?" ಎಂದು ವಿಚಾರಿಸಿದನು. ಅಂಬೆಯು ``ನನ್ನ ಪಯಣವು ನಿಷ್ಪಲವಾಯಿತು. ನಾನೀಗ ಧರ್ಮಶಾಸ್ತ್ರದಲ್ಲಿ ವಿಶೇಷ ಪರಿಣತಿ ಪಡೆದಿರುವೆ. ಶಾಲ್ವರಾಜನಿಗೆ ನಾನು ಸೋದರಿ ಸಮಾನಳಂತೆ. ಕನ್ಯೆಯನ್ನು ಯುದ್ದದಲ್ಲಿ ಗೆದ್ದವನೇ ಕ್ಷತ್ರಿಯಧರ್ಮದ ಪ್ರಕಾರ ಅವಳ ಪತಿಯಂತೆ. ನೀನು ನನ್ನನ್ನು ಬಲಗೈ ಹಿಡಿದು ನಿನ್ನ ರಥಕ್ಕೆ ಹತ್ತಿಸಿಕೊಂಡು, ಅನಂತರ ಆ ರಾಜರೆಲ್ಲರೊಂದಿಗೆ ಯುದ್ಧಮಾಡಿದೆಯಲ್ಲವೆ? ನೀನೇ ನನ್ನನ್ನು ಮದುವೆಯಾಗಬೇಕಂತೆ. ಈಗ ನನಗೆ ಬೇರೆ ಗತಿಯಿಲ್ಲ. ನೀನೇ ನನಗೆ ಬಾಳನ್ನು ಕೊಡಬೇಕು. ನನ್ನ ಸ್ತ್ರೀತ್ವವು ವ್ಯರ್ಥವಾಗದಂತೆ ನನ್ನನ್ನು ಮದುವೆಯಾಗು" ಎಂದಳು.ಭೀಷ್ಮನ ಹೃದಯ ತಲ್ಲಣಿಸಿತು, ಕರುಣೆ ಉಕ್ಕಿ ಹರಿಯಿತು. ಗಂಟಲು ಉಬ್ಬಿಬಂದಿತು; ಕಣ್ಣು ಮಂಜಾಯಿತು; ಮಾತೇ ಹೊರಡಲಿಲ್ಲ. ಆದರೆ ತನ್ನಂಥವನು ಕಣ್ಣಿರು ಹಾಕುವುದು ತರವೆ? ತನ್ನಿಂದ ಈ ಹುಡುಗಿಯ ಬಾಳು ಹೀಗಾಯಿತಲ್ಲ ಎಂಬ ವ್ಯಥೆ ಅವನನ್ನು ತುಂಬಿಕೊಂಡಿತು. ಸಾಧ್ಯವಾದಷ್ಟ ಅನುನಯದಿಂದ ಅವನು ``ಅಂಬೆ, ನಡೆದ ಘಟನೆಗಳಿಂದ ನನಗೆ ದು:ಖವಾಗಿದೆ. ನನು ಆಜನ್ಮಬ್ರಹ್ಮಚಾರಿಯಾಗಿರುತ್ತೇನೆಂಡು ಪ್ರತಿಜ್ಞೆಮಾಡಿರುವುದು ನಿನಗೆ ಗೊತ್ತಿದೆ. ನಿನ್ನನ್ನು ನಾನು ಹೇಗೆ ಮದುವೆಯಾಗಲಿ? ಈ ಯೋಚನೆಯನ್ನು ನೀನು ಮನಸ್ಸಿನಿಂದ ತೆಗೆದುಹಾಕು. ಇದು ಅಸಾಧ್ಯ. ನೀನು ಪತಿಯನ್ನು ಆರಿಸಿಕೊಂಡಿರುವ ವಿಷಯವನ್ನು ಕಾಶಿಯಲ್ಲೇ ಹೇಳಿಬಿಟ್ಟಿದ್ದಿದ್ದರೆ, ಹೀಗೆಲ್ಲ ಆಗುತ್ತಿರಲಿಲ್ಲ. ಆದರೆ ವಿಧಿಯ ಆಟವನ್ನು ಬಲ್ಲವರಾರು? ನೀನು ನನಗೆ ಪತ್ನಿಯಾಗುವುದು ಸಾಧ್ಯವಿಲ್ಲದ ಮಾತು. ಶಾಲ್ವನಲ್ಲಿಗೆ ಇನ್ನೊಮ್ಮೆ ಹೋಗಿ ಒತ್ತಾಯಮಾಡಿ ನೋಡು. ನಿನ್ನ ಕಷ್ಟದಲ್ಲಿ ನಾನು ಸಹಾಯ ಮಾಡಲು ಸಾಧ್ಯವಿಲ್ಲವಾಗಿದೆ. ಪ್ರತಿಜ್ಞೆಯೊಂದಿಲ್ಲದಿದ್ದರೆ. ಪರಿಸ್ಥಿತಿ ಬೇರೆಯಾಗಿರುತ್ತಿತ್ತು. ಆದರೆ, ಪ್ರತಿಜ್ಞಾಬದ್ಧನಾಗಿರುವ ನಾನು, ನೀನು ಹೇಳುವ ರೀತಿಯಲ್ಲಿ ನಿನಗೆ ಖಂಡಿತ ಸಹಾಯ ಮಾಡಲಾರೆ" ಎಂದು ಮುಂದೆ ಮಾತಿಗೆ ಅವಕಾಶವಿಲ್ಲದಂತೆ ಅಲ್ಲಿಂದ ಹೊರಟುಹೋದ.ದುಃಖತಪ್ತಳಾದ ಅಂಬೆ ಹೀಗೆ ಅಲ್ಲಿಂದಿಲ್ಲಿಗೆ ತಿರುಗುತ್ತ ಆರು ವರ್ಷಗಳಗನ್ನು ವ್ಯರ್ಥವಾಗಿ ಕಳೆದಳು. ತನ್ನ ದುಃಖಕ್ಕೆ ಕಾರಣನಾದ ಭೀಷ್ಮನ ಮೇಲೆ ದ್ವೇಷವನ್ನು ಹೃದಯದಲ್ಲಿ ತುಂಬಿಕೊಂಡು, ಅವಳು ಕಾಡಿಗೆ ಹೋದಳು. ಅಲ್ಲಿದ್ದ ಋಷಿಗಳ ಮುಂದೆ ತನಗೆ ಒದಗಿದ ದುರ್ಗತಿಯನ್ನು ವಿವರಿಸಿದಳು. ಅವರೊಡನಿದ್ದು ತಾನೂ ತಪಸ್ಸು ಮಾಡುವೆನೆಂದಳು. ಅವರು ಸಂದಿಗ್ಧಕ್ಕೆ ಸಿಲುಕಿದರು. ಎಳೆವಯಸ್ಸಿನ ಮದುವೆಯಾಗದ ಹುಡುಗಿ ತಪಸ್ವಿಗಳಾದ ತಮ್ಮ ನಡುವೆ ಉಳಿಯುವುದು ಅವರಿಗೆ ಬೇಕಿರಲಿಲ್ಲ. ಏನು ಹೇಳಬೇಕೆಂದೇ ತೋರದೆ ಇದ್ದಾಗ, ಅದೃಷ್ಟವಶಾತ್ ಅಂಬೆಯ ಅಜ್ಜನಾದ ಹೋತ್ರವಹನ ಆ ಋಷ್ಯಶ್ರಮಕ್ಕೆ ಬಂದ. ನಡೆದ ದುರಂತವನ್ನು ಕೇಳಿದ ಅವನು ಅವಳನ್ನು ಸಮಾಧಾನ ಮಾಡಿದ. ``ಮಹಾತ್ಮನಾದ ಭಾರ್ಗವನು ನನ್ನ ಮಿತ್ರ. ನಾನು ಅವನಿಗೆ ಹೇಳುತ್ತೇನೆ. ಭೀಷ್ಮನು ಅವನ ಶಿಷ್ಯ. ಗುರುವಿನ ಆಣತಿಯನ್ನು ಮೀರಲಾರ. ನಿನ್ನನ್ನು ಮದುವೆಯಾಗುವಂತೆ ಭಾರ್ಗವನಿಂದ ಭೀಷ್ಮನಿಗೆ ಹೇಳಿಸುತ್ತೇನೆ. ಭೀಷ್ಮನು ಅವನ ಮಾತನ್ನು ನಡೆಸುತ್ತಾನೆ" ಎಂದ.ಕೆಲವು ದಿನಗಳ ನಂತಾರ ಭಾರ್ಗವನೂ ಆ ಮಾರ್ಗವಾಗಿ ಕಾಡಿಗೆ ಬಂದ. ಹೋತ್ರವಹನನು ಅಂಬೆಯ ದಾರುಣ ಕಥೆಯನ್ನು ಅವನಿಗೆ ಹೇಳಿದ. ಮಹರ್ಷಿಗೆ ಅಯ್ಯೋ ಪಾಪ ಎನಿಸಿತು. ``ನಾನು ಖಂಡಿತವಾಗಿಯೂ ಈ ಬಗ್ಗೆ ಭೀಷ್ಮನೊಂದಿಗೆ ಮಾತನಾಡುತ್ತೇನೆ. ನಿನ್ನನ್ನು ಮದುವೆಯಾಗುವಂತೆ ನಾನು ಅವನಿಗೆ ಹೇಳಿದರೆ, ಅವನು ನನ್ನ ಮಾತನ್ನು ತೆಗೆದುಹಾಕಲಾರ" ಎಂದ ಭಾರ್ಗವನು ತನ್ನ ಪ್ರೀತಿಯ ಶಿಷ್ಯನಾದ ಭೀಷ್ಮನಿಗೆ ತನ್ನನ್ನು ಬಂದು ಕಾಣುವಂತೆ ಹೇಳಿಕಳುಹಿಸಿದ. ಗುರು ಕರೆಯುತ್ತಿದ್ದರೆ ಎಂದ ಕೂಡಲೆ ಓಡಿಬಂದ ಭೀಷ್ಮನು ಅವನ ಪಾದಗಳಿಗೆರಗಿ, ``ಗುರುವೆ, ನನ್ನನ್ನು ತಮ್ಮ ಸನ್ನಿಧಾನಕ್ಕೆ ಕರೆಯಿಸಿಕೊಂಡದ್ದು ಏಕೆ? ನನ್ನಿಂದ ಏನಾಗಬೇಕು" ಎಂದ. ಭಾರ್ಗವನು ಅವನನ್ನು ಹಿಡಿದೆತ್ತಿ ಆಲಿಂಗಿಸಿಕೊಂಡು, ``ಮಗು, ಕಷ್ಟದಲ್ಲಿರುವ ಒಬ್ಬರಿಗೆ ನಿನ್ನಿಂದ ಸಹಾಯವಾಗಬೇಕಾಗಿದೆ. ಈ ಸುಂದರಿಯನ್ನು ನೀನು ನೋಡಿರುವೆಯಷ್ಟೆ?" ಎಂದು ಕೇಳಿದ. ಭೀಷ್ಮನು ತಿರುಗಿ ನೋಡುತ್ತಾನೆ, ಅಲ್ಲಿದ್ದಳೆ ಅಂಬೆ! ಭೀಷ್ಮನು, ``ಗುರುವೆ, ಅವಳು ನನಗೆ ಗೊತ್ತು. ಅವಳಿಗೆ ವಿಧಿ ಮೋಸ ಮಾಡಿತು. ಅವಳು ಶಾಲ್ವನನ್ನ ಮದುವೆಯಾಗಲು ಬಯಸಿದಳು. ಆದ್ದರಿಂದ ಅವಳು ಹಸ್ತಿನಾಪುರದಿಂದ ಹೊರಟುಹೋಗಬೇಕಾಯಿತು. ಆದರೆ, ನೀವು ಈಗ ನನ್ನನ್ನು ಕರೆಯಿಸಿದುದಕ್ಕೂ ಇದಕ್ಕೂ ಏನು ಸಂಬಂಧ?" ಎಂದು ಕೇಳಿದ. ಭಾರ್ಗವನು, ನೀನು ಅವಳನ್ನು ಪರಿಗ್ರಹಿಸುವಂತೆ ಮಾಡುವೆ ಎಂದು ಅವಳಿಗೆ ನಾನು ಮಾತು ಕೊಟ್ಟಿದ್ದೇನೆ. ನೀನು ನನ್ನ ಮಾತನ್ನು ಉಳಿಸಬೇಕು; ಅಂಬೆಯನ್ನು ನೀನು ಮದುವೆಯಾಗಬೇಕು" ಎಂದ. ಭೀಷ್ಮನು ದುಃಖಪೂರ್ಣ ಅಶ್ರುಗಳಿಂದ ಗುರುವನ್ನು ನೋಡುತ್ತ, ``ಗುರುವೆ, ನೀವು ನನ್ನ ಘೋರ ಪ್ರತಿಜ್ಞೆಯನ್ನು ಬಲ್ಲಿರಿ. ನಾನು ಮದುವೆಯಾಗಲಾರೆ. ನೀನು ಹೇಳಿದರೂ ಸಹ ನಾನು ಮದುವೆಯಾಗಲಾರೆ" ಎಂದ. ಗುರುವಿನ ಮಾತನ್ನು ನಡೆಸುವುದು ಶಿಷ್ಯನ ಕರ್ತವ್ಯವೆಂದು ಭೀಷ್ಮನ ಮನವೂಲಿಸಲು ಭಾರ್ಗವನು ತುಂಬ ಪ್ರಯತ್ನಪಟ್ಟರೂ ಫಲವಿಲ್ಲವಾಯಿತು. ಭೀಷ್ಮನು ಏನು ಮಾಡಿದರೂ ತನ್ನ ಪ್ರತಿಜ್ಞೆಯನ್ನು ಮುರಿಯಲು ಒಪ್ಪಲ್ಲಿ. ಭಾರ್ಗವನಿಗೆ ಕೋಪ ಮೇರೆಮೀರಿತು. ``ಎಲಾ ಭೀಷ್ಮ, ಗುರುವಾದ ನನ್ನ ಮಾತನ್ನು ನೀನು ಧಿಕ್ಕರಿಸುವೆಯಾ? ನಿನ್ನನ್ನು ಶಪಿಸುತ್ತೇನೆ. ಶಾಪ ಬೇಕಿಲ್ಲದಿದ್ದರೆ, ನನ್ನೊಡನೆ ಯುದ್ಧಕ್ಕೆ ಸಿದ್ದನಾಗು" ಎಂದು ಗರ್ಜಿಸಿದ. ಭೀಷ್ಮನಿಗೆ ಸಂದಿಗ್ದಕ್ಕಿಟ್ಟುಕೊಂಡಿತು. ``ಯುದ್ದಮಾಡಲೇಬೇಕೆಂದಿದ್ದರೆ ಯುದ್ಧಮಾಡುತ್ತೇನೆ, ಗುರುವೆ. ಆದರೆ ನಿಮ್ಮ ಈ ಪ್ರೀತಿಯ ಶಿಷ್ಯನನ್ನು ದಯವಿಟ್ಟು ಶಪಿಸಬೇಡಿ" ಎಂದ.ಇಬ್ಬರ ನಡುವೆ ಘೋರ ಯುದ್ದಕ್ಕೆ ಆರಂಭವಾಯಿತು. ನೋಡುವುದಕ್ಕೆಂದು ದೇವತೆಗಳೆಲ್ಲ ಅಂತರಿಕ್ಷದಲ್ಲಿ ನೆರೆದರು. ಅನೇಕ ದಿನಗಳವರೆಗೆ ಯಾರೊಬ್ಬರೂ ಸೋಲಲೂ ಇಲ್ಲ, ಗೆಲ್ಲಲೂ ಇಲ್ಲ. ಕೊನೆಗೆಗೆ ಬೇಸತ್ತ ಭೀಷ್ಮನು ಇಡೀ ಪ್ರಪಂಚವನ್ನೆ ನಾಶಗೊಳಿಸುವಂತಹ ಪ್ರಸ್ವಾಪವೆಂಬ ಅಸ್ತ್ರವನ್ನು ಬಳಸುವೆನೆಂದು ನಿರ್ಧರಿಸಿಕೊಂಡ. ಆಗ ದೇವತೆಗಳು, ನಾರದನನ್ನೂ ರುದ್ರನನ್ನೂ ಮುಂದಿಟ್ಟುಕೊಂಡು ಭೀಷ್ಮನಲ್ಲಿಗೆ ಬಂದು, `` ಭೀಷ್ಮ, ಈ ಯುದ್ದವನ್ನು ನಿಲ್ಲಿಸು. ಅಸ್ತ್ರವನ್ನು ಬಿಡಬೇಡ. ನೀನು ಲೋಕವನ್ನು ನಾಶಮಾಡಲು ಜನಿಸಿದವನಲ್ಲ. ಅದಕ್ಕೆ ಬೇರೆಯವರು ಇದ್ದಾರೆ" ಎಂದು ಹೇಳಿ, ನೀನೇ ಮೊದಲು ಯುದ್ದವನ್ನು ನಿಲ್ಲಿಸಬೇಕು; ಗುರುವನ್ನು ಯುದ್ದ ನಿಲ್ಲಿಸುವಂತೆ ಮಾಡುವುದು ಅವನಿಗೆ ಅಪಮಾನ ಎಂದೂ ಮನವೊಲಿಸಿದರು. ಭೀಷ್ಮ ಒಪ್ಪಿದ. ಭಾರ್ಗವನು ಶಿಷ್ಯನಾದ ಭೀಷ್ಮನನ್ನು ಆಲಿಂಗಿಸಿಕೊಂಡು, ``ನೀನು ಶ್ರೇಷ್ಠನಾದ ವೀರನಾಗಿರುವೆ. ನಿನ್ನನ್ನು ನಾನು ಸಹ ಸೋಲಿಸಲಾರದಾದೆ" ಎಂದ. ಅಂಬೆಯ ಕಡೆಗೆ ತಿರುಗಿ, ``ಮಗು,ನೀನೇ ನೋಡಿದೆಯಲ್ಲವೆ? ನಾನು ನನ್ನಿಂದಾದಷ್ಟೂ ಪ್ರಯತ್ನಿಸಿದೆ. ಆದರೆ ಭೀಷ್ಮಪ್ರತಿಜ್ಞೆಯನ್ನು ಮುರಿಯಲಾರದಾದೆ. ಅವನು ಸತ್ಯಪಥದಿಂದ ಸ್ವಲ್ಪವೂ ಅತ್ತಿತ್ತ ಚಲಿಸುವವನಲ್ಲ. ದಯವಿಟ್ಟು ಹೊರಟುಹೋಗು. ನಿನ್ನ ಆಶೆಯನ್ನು ಸಲ್ಲಿಸಲು ನನಗೆ ಸಾಧ್ಯವಾಗಲಿಲ್ಲ!" ಎಂದ.* * * * ಅಂಬೆ ಆ ಅರಣ್ಯವನ್ನು ಬಿಟ್ಟು ಬೇರೆಡೆಗೆ ಹೊರಟುಹೋದಳು. ಜೀವನಕ್ಕೆ ಅತ್ಯಂತ ಆವಶ್ಯಕವಾದವುಗಳನ್ನೂ ತ್ಯಜಿಸಿ ಅವಳು ಘೋರ ತಪಸ್ಸನ್ನು ಆಚರಿಸಿದಳು. ಈಶ್ವರಪುತ್ರನಾದ ಷಣ್ಮುಖನಿಗೆ ಅವಳನ್ನು ಕಂಡು ಕರುಣೆಯುಂಟಾಯಿತು. ಅವನು ಅವಳ ಎದುರಿಗೆ ಪ್ರತ್ಯಕ್ಷನಾದ. ಅವಳಿಗೆ ಎಂದೆಂದಿಗೂ ಬಾಡದ ಕಮಲಪುಷ್ಪಗಳ ಮಾಲೆಯೊಂದನ್ನು ಕೊಟ್ಟು, ``ಮಗುವೆ, ಈ ಮಾಲೆಯನ್ನು ತೆಗೆದುಕೋ. ಈ ಮಾಲೆಯನ್ನು ಯಾರು ತಮ್ಮ ಕುತ್ತಿಗೆಗೆ ಹಾಕಿಕೊಳ್ಳುವರೋ ಅವರೇ ಭೀಷ್ಮನನ್ನು ಕೊಲ್ಲುವವರೆಂದು ತಿಳಿ" ಎಂದ. ಅಂಬೆಗೆ ಸಂತೋಷವಾಯಿತು. ಸೇಡು ತೀರಿಸಿಕೊಳ್ಳುವುದು ಹೇಗೆಂದು ಯೋಚಿಸುತ್ತ ಅವಳು ಅಲ್ಲಿಂದ ಹೊರಟಳು.ಅಂಬೆಯ ದೇಶದ ಪ್ರಬಲ ರಾಜರುಗಳೆಲ್ಲರನ್ನು ಭೇಟಿಮಾಡಿ ಭೀಷ್ಮನನ್ನು ಕೊಲ್ಲಲು ತನಗೆ ಸಹಾಯ ಮಾಡಿರೆಂದು ಕೇಳಿಕೊಡಳು. ಷಣ್ಮುಖನು ಕೊಟ್ಟ ಮಾಲೆ ಹಾಕಿಕೊಂಡರೆ ಜಯವು ಖಚಿತವೆಂದು ಹೇಳಿದರೂ ಸಹ, ಯಾರೊಬ್ಬರೂ ಒಪ್ಪಲಿಲ್ಲ. ಮಹಾವೀರನಾದ ಭೀಷ್ಮನನ್ನು ಎದುರು ಹಾಕಿಕೊಳ್ಳಲು ಯಾರೊಬ್ಬರಿಗೂ ಧೈರ್ಯವಿರಲಿಲ್ಲ. ಅಂಬೆಯ ಪಾಂಚಾಲ ರಾಜನಾದ ದ್ರುಪದನ ಆಸ್ಥಾನಕ್ಕೆ ಹೋದಳು. ಎಲ್ಲ ಸಂಗತಿಯನ್ನೂ ವಿವರಿಸಿ ತನಗೆ ಸಹಾಯ ಮಾಡಬೇಕೆಂದು ಕೇಳಿಕೊಂಡಳು. ಅವಳು ಹೇಳಿದ್ದೆಲ್ಲವನ್ನೂ ಸಾವಧಾನವಾಗಿ ಕೇಳಿದ ಅವನು, ``ನಿನಗೆ ಒದಗಿದ ದುರ್ಗತಿ ಕಂಡು ನನಗೆ ದುಃಖವಾಗಿದೆ. ಆದರೆ ಭೀಷ್ಮನಲ್ಲದೆ ಇನ್ನಾರಾದರೂ ಆಗಿದ್ದಿದ್ದರೆ, ನಾನು ಇದನ್ನು ಕೈಗೆತ್ತಿಕೊಳಳುತ್ತಿದ್ದೆ. ಭೀಷ್ಮನು ಯಾವಾಗಲೂ ನ್ಯಾಯಬದ್ಧನಾಗಿರುವವನು. ಅವನೊಂದಿಗೆ ಯುದ್ಧಮಾಡಲು ನನಗೆ ಕಾರಣವಾವುದೂ ಇಲ್ಲ. ಅವನು ಅತ್ಯಂತ ಶಕ್ತನಷ್ಟೇ. ಅಲ್ಲ, ಸತ್ಯಸಂಧ ಕೂಡ. ದಯವಿಟ್ಟು ಕ್ಷಮಿಸು. ನಿನ್ನ ಕೊರೀಕೆಯನ್ನು ನಾನು ನೆರವೇರಿಸಲಾರೆ" ಎಂದುಬಿಟ್ಟ.ಅಂಬೆಗೆ ಬಹಳ ನಿರಾಸೆಯಾಯಿತು. ಷಣ್ಮುಖನು ಅನುಗರಹಿಸಿದ ಕಮಲಪುಷ್ಪ ಮಾಲೆಯನ್ನು ಅವಳು ಸಿಟ್ಟಿನಿಂದ ದ್ರುಪದ ಸಭಂಗಣದ ಒಂದು ಕಂಭಕ್ಕೆ ಕಟ್ಟಿದಳು. ಇದ್ದಕ್ಕಿದಂತೆ ಅಂಬೆ ಮಾಡಿದ ಈ ಕೆಲಸದಿಂದ ದ್ರುಪದನು ತಲ್ಲಣಿಸಿದನು. ಪ್ರತಿಯೊಬ್ಬರಿಗೂ ಭೀಷ್ಮನೆಂದರೆ ಭಯ. ಕ್ರೋಧೋನ್ಮತ್ತಳಾದ ಅಂಬೆ ಮಾಲೆಯನ್ನು ಅಲ್ಲೇ ಬಿಟ್ಟು ಸಭಾತ್ಯಾಗ ಮಾಡಿದಳು. ಯಾರೊಬ್ಬರಿಗೂ ಅದನ್ನು ಮುಟ್ಟಲು ಅವಕಾಶವಾಗದಂತೆ ದ್ರುಪದನು ಅದಕ್ಕೆ ಕಾವಲು ಹಾಕಿದನು.ಅಂಬೆ ಮತ್ತೊಮ್ಮೆ ಕಾಡಿಗೆ ಹೋಗಿ ಮತ್ತೊಮ್ಮೆ ಉಗ್ರ ತಪಸ್ಸಿಗೆ ಕುಳಿತಳು. ಅವಳ ಹೃದಯದಲ್ಲಿ ಭೀಷ್ಮನ ಮೇಲಣ ದ್ವೇಷ ಸೇಡುಗಳಿಗಲ್ಲದೆ ಇನ್ನು ಯಾವ ಭಾವಕ್ಕೂ ಅವಕಾಶವಿರಲ್ಲಿ. ಭೀಷ್ಮನು ಸಾಯುವುದನ್ನು ನೋಡಬೇಕೆಂಬುದೊಂದಲ್ಲದೆ ಅವಳಿಗೆ ಇನ್ನಾವ ಆಸೆಯೂ ಇರಲಿಲ್ಲ. ಅವಳ ತಪಸ್ಸು ಬಹು ಕಾಲ ಮುಂದುವರೆಯಿತು. ಕೊನೆಗೊಮ್ಮೆ ಭಗವಾನ್ ಶಂಕರನು ಅವಳ ಮುಂದೆ ಪ್ರತ್ಯಕ್ಷನಾಗಿ, ``ಮಗು, ದುಃಖಿಸಬೇಡ. ಮುಂದಿನ ಜನ್ಮದಲ್ಲಿ ನೀನೇ ಭೀಷ್ಮನನ್ನು ಕೊಲ್ಲುವೆ" ಎಂದ. ಅಂಬೆಗೆ ತಾಳ್ಮೆ ತಪ್ಪಿತು. ಅವಳೆಂದಳು, ``ಮುಂದಿನ ಜನ್ಮದಲ್ಲಿ ಈ ದ್ವೇಷ ಜ್ಞಾಪಕದಲ್ಲಿರುವುದಿಲ್ಲ. ನಾನು ಅವನನ್ನು ಕೊಲ್ಲಬಹುದು; ಆದರೆ ಸೇಡು ತೀರಿಸಿಕೊಂಡ ತೃಪ್ತಿ ನನಗಿರುವುದಿಲ್ಲ. ಅವನನ್ನು ನಾನು ಈಗಲೇ ಕೊಲ್ಲಬೇಕು. " ಶಂಕರನು ನಕ್ಕು, ``ಹೆದರಬೇಡ. ಈ ಜನ್ಮದ ಪ್ರತಿಯೊದು ಘಟನೆಯನ್ನೂ ನೀನು ಮುಂದಿನ ಜನ್ಮದಲ್ಲಿ ನೆನಪಿನಲ್ಲಿಡುವೆ. ಪಾಂಚಾಲರಾಜ ದ್ರುಪದನ ಮಗಳಾಗಿ ಹುಟ್ಟುವೆ. ಮೊದಲು ಸ್ತ್ರೀಯಾಗಿದ್ದು ಅನಂತರ ಪುರುಷನಾಗುವೆ. ನೀನು ಖಂಡಿತವಾಗಿಯೂ ನಿನ್ನ ಶತ್ರು ಭೀಷ್ಮನನ್ನು ಕೊಂದು ಸೇಡು ತೀರಿಸಿಕೊಳ್ಳುವೆ ಎಂದು ನಾನು ಭರವಸೆ ಕೊಡುತ್ತೇನೆ" ಎಂದ.ಅಂಬೆ ದೊಡ್ಡದೊಂದು ಚಿತೆಯನ್ನೇರ್ಪಡಿಸಿಕೊಂಡು ಉರಿಯುತ್ತಿರುವ ಅದರಲ್ಲಿ ಹಾರಿ ದೇಹತ್ಯಾಗ ಮಾಡಿದಳು. ನಂತರ, ಅವಳು ದ್ರುಪದನ ಮಗಳಾಗಿ ಹುಟ್ಟಿದಳು. ಒಂದು ದಿನ ಆಟವಾಡುತ್ತಿರುವಾಗ ಅಲ್ಲಿ ಕಂಭಕ್ಕೆ ಕಟ್ಟಿದ್ದ ಮಾಲೆಯನ್ನು ತೆಗೆದು ಹಾಕಿಕೊಂಡುಬಿಟ್ಟಳು. ದ್ರುಪದನು ಇದನ್ನು ಕೇಳಿ ಓಡೋಡಿ ಬಂದನು. ಮಗುವು ಮಾಡಿದ ಕೆಲಸವನ್ನು ನೋಡಿ ಭಯದಿಂದ ತಲ್ಲಣಿಸಿಹೋದನು. ಮಗುವು ಶಾಂತವಾಗಿ ನಗುತ್ತ, ``ತಂದೆಯೇ, ಭಯಪಡದಿರು. ಈ ಮಾಲೆಯನ್ನುಧರಿಸಿಕೊಳ್ಳುವ ಏಕಮಾತ್ರ ಉದ್ದೇಶದಿಂದ ನಾನು ನಿನ್ನ ಹೊಟ್ಟೆಯಲ್ಲಿ ಹುಟ್ಟಿ ಬಂದಿದ್ದೇನೆ. ನೀನು ಶಾಂತವಾಗಿರು. ಉಳಿದದ್ದೆಲ್ಲವನ್ನೂ ನನಗೆ ಬಿಡು" ಎಂದಿತು.ಮಗುವಿಗೆ ಶಿಖಂಡಿ ಎಂದು ಹೆಸರಿಟ್ಟರು. ದ್ರೋಣನ ಬಳಿ ವಿದ್ಯಾಭ್ಯಾಸವು ನಡೆಯಿತು. ಲೋಕದ ಎಲ್ಲರೂ ತಿಳಿದಿದ್ದಂತೆ ಗುರುವಾದ ದ್ರೋಣನೂ ಅವಳನ್ನು ಪುರುಷವನೆಂದೇ ತಿಳಿದಿದ್ದನು. ಯಕ್ಷನೊಬ್ಬನ ದಯೆಯಿಂದ ಅಂಬೆ ತನ್ನ ಲಿಂಗವನ್ನು ಬದಲಿಸಿಕೊಂಡು ಪುರುಷತ್ವವನ್ನು ಪಡೆದು ದ್ರುಪದನ ಮನೆಯಲ್ಲಿ ಬೆಳೆಯುತ್ತಿದ್ದಳು. ಅವಳ ಹೃದಯದಲ್ಲಿ ಭೀಷ್ಮದ್ವೇಷದ ಜ್ವಾಲೆ ಧಗಧಗನೆ ಉರಿಯುತ್ತಿದ್ದಿತು.* * * * ಅಂಬೆಯ ಉಳಿದಿಬ್ಬರು ಸೋದರಿಯರಾದ ಅಂಬಿಕೆ ಅಂಬಾಲಿಕೆಯರೊಂದಿಗೆ ವಿಚಿತ್ರವೀರ್ಯನ ವಿವಾಹವು ಸಾಂಗವಾಗಿ ನೆರವೇರಿತು. ಅಷ್ಟೊಂದು ಒಳ್ಳೆಯವನೂ ಸುಂದರಾಂಗನೂ ಆದ ಪತಿ ದೊರಕಿದುದು ತಮ್ಮ ಅದೃಷ್ಟ ಎಂದುಕೊಂಡರವರು. ಮದುವೆಯಾದ ಮೇಲೆ ಕೆಲ ಕಾಲ ತುಂಬ ಸುಖವಾಗಿದ್ದರು. ರಾಜ್ಯಾಡಳಿತವನ್ನು ಹೇಗೂ ಭೀಷ್ಮನೇ ನೋಡಿಕೊಳ್ಳುತಿದ್ದುದರಿಂದ, ಜವಾಬ್ದಾರಿಯನ್ನರಿಯದ ರಾಜಕುಮಾರನು ಯಾವಾಗಲೂ ತನ್ನ ಹೆಂಡಿರೊಂದಿಗೇ ಕಾಲ ಕಳೆಯಲಾರಂಭಿಸಿದನು. ವಿಧಿ ಮತ್ತೊಮ್ಮೆ ಬರಸಿಡಿಲಿನಂತೆ ಬಂದೆರಗಿತು. ಭೋಗವು ಅತಿಯಾಗಿ ಎಳೆಯ ವಯಸ್ಸಿನ ರಾಜಕುಮಾರನಿಗೆ ಕ್ಷಯರೋಗವು ತಗುಲಿತು. ಯಾರು ಏನು ಉಪಚಾರ ಮಾಡಿದರೂ, ಯಾವ ವೈದ್ಯರು ಏನೇ ಔಷಧ ಕೊಟ್ಟರೂ ಗುಣ ಕಾಣದೆ ವಿಚಿತ್ರವೀರ್ಯನು ಮರಣಹೊಂದಿದನು.ಹೀಗೆ ಪ್ರಾಪ್ತವಾದ ದುರಂತದಿಂದ ಸತ್ಯವತಿಯು ದಿಕ್ಕುತೋರದಂತಾದಳು. ತನ್ನ ಇಬ್ಬರು ಮಕ್ಕಳೂ ತನ್ನ ಕಣ್ಣೆದುರಿಗೇ ಪ್ರಾಣ ಬಿಡುವುದೆಂದರೆ ಅದೆಷ್ಟು ಭಯಾನಕ! ಆದರೆ ತನ್ನಿಂದಾಗಿ ಕುರುವಂಶಕ್ಕೆ ವಾರಸುದಾರರೇ ಇಲ್ಲವಾದಂತಾಯಿತಲ್ಲ ಎಂಬುದೇ ಅವಳ ಮನಸ್ಸನ್ನು ತೀವ್ರವಾಗಿ ನೋಯಿಸಿತು. ಆರಿಹೋಗಿರುವ ಜ್ವಾಲೆಯನ್ನು ಮತ್ತೆ ಹೊತ್ತಿಸಲು ಮಾರ್ಗವಿದೆಯೇ ಎಂದುಯೋಚಿಸಿ, ಭೀಷ್ಮನೊಂದಿಗೆ ಮಾತನಾಡಬೇಕೆಂದು ಹೇಳಿಕಳುಹಿಸಿದಳು. ಅವನು ಬಂದೊಡನೆ, ``ನೋಡು ಮಗನೇ, ಸುಖದ ದಿನಗಳು ಮುಗಿದವು. ನನ್ನ ಪತಿ ಪಿತೃಸಂಕುಲವನ್ನು ಸೇರಿಕೊಂಡನು. ಅದನ್ನು ನಾನು ಹೇಗೂ ಸಹಿಸಿಕೊಂಡೆ; ಏಕೆಂದರೆ ಅವನು ವೃದ್ಧನಾಗಿದ್ದನು. ಪುತ್ರ ಚಿತ್ರಾಂಗದನು ಗಂಧರ್ವನೊಂದಿಗೆ ಹೋರುತ್ತ ಮಡಿದನು. ಆ ದುಃಖವನ್ನು ಭರಿಸಲಾರದೆ ಸತ್ತೇ ಹೋಗುವಂತಾಗಿದ್ದ ನಾನು ಅದರಿಂದ ಚೇತರಿಸಿಕೊಳ್ಳುವುದರೊಳಗಾಗಿ ಇದೋ, ಈಗ ವಿಚಿತ್ರವೀರ್ಯನೂ ಸತ್ತುಹೋದ. ಕುರುವಂಶದ ಏಕಮಾತ್ರ ಆಶಾಕಿರಣನಾಗಿದ್ದ ಅವನು ಹೊಚ್ಚಹೊಸ ಯೌವನದಲ್ಲಿಯೇ ಕಾಲವಾಗಬೇಕೇ! ನಾನೀಗ ಹತಾಶಳಾಗಿದ್ದೇನೆ. ವಂಶವು ಮುಂದುವರೆಯಭೆಡವೆ? ಏನನ್ನು ಮಾಡಬಹುದು ಎಂಬುದನ್ನು ನಾನು ನಿರ್ಧರಿಸಿಕೊಂಡಿದ್ದೇನೆ. ಕುರುವಂಶವು ಮುಂದುವರೆಯುವುದು ಈಗ ನಿನ್ನ ಕೈಯಲ್ಲಿದೆ ಮಗು!" ಎಂದಳು.ಭೀಷ್ಮನಿಗೆ ಆಶ್ಚರ್ಯವಾಯಿತು. ``ಅಮ್ಮ, ಆಜನ್ಮ ಬ್ರಹ್ಮಚಾರಿಯಾದ ನನ್ನಿಂದ ಹೇಗೆ ತಾನೆ ಇದು ಸಾಧ್ಯ?' ಎಂದ. ಅದಕ್ಕೆ ಸತ್ಯವತಿಯು, ``ನನ್ನ ಮಗ ವಿಚಿತ್ರವೀರ್ಯ ಪುತ್ರಪ್ರಾಪ್ತಿ ಇಲ್ಲದೆ ಸತ್ತುಹೋದ. ನೀನು ಗೆದ್ದು ತಂದಿರುವ ಅವನ ಇಬ್ಬರು ಹೆಂಡಿರು ಇನ್ನೂ ಎಳೆಯ ವಯಸ್ಸಿನ ಹುಡುಗಿಯರು, ಆಸೆ ತೀರುವ ಮೊದಲೇ ಗಂಡನನ್ನು ಕಳೆದುಕೊಂಡವರು. ಈಗ ನನಗೆ ತೋರುವ ಧರ್ಮವೆಂದರೆ ಇದು: ನೀನು ಅವರನ್ನು ಸ್ವೀಕರಿಸಿ ಅವರಲ್ಲಿ ಕುರುವಂಶದ ಭವಿಷ್ಯದ ಕುಡಿಗಳನ್ನು ಒಡಮೂಡಿಸಬೇಕು. ವಂಶವನ್ನು ಮುಂದುವರೆಸುವ ಸಲುವಾಗಿ ಆಪಧರ್ಮವಾಗಿ ನೀನು ಇದನ್ನು ನೆರವೇರಿಸಬೇಕು. ನಿನ್ನ ಪೂರ್ವಿಕರು ಇಂಥ ಸಂಧರ್ಭಗಳಲ್ಲಿ ಹೀಗೇಯೇ ನಡೆದುಕೊಂಡಿರುವರು. ಈಗ ಉಳಿದಿರುವುದು ಇದೊಂದೇ ದಾರಿ. ಇದನ್ನು ನಿನ್ನ ಕರ್ತವ್ಯವೆಂದೇ ತಿಳಿ" ಎಂದಳು.ಈ ಅಸಂಬದ್ಧವಾದ ಸಲಹೆಯಿಂದ ಧೃತಿಗೆಡದ ಭೀಷ್ಮನು ತಾಳ್ಮೆಯಿಂದ ತಾಯಿಯನ್ನು ಕುರಿತು ``ಅಮ್ಮಾ, ಇಬ್ಬರು ಮಕ್ಕಳನ್ನೂ ಕಳೆದುಕೊಂಡ ಕುಃಖದಿಂದ ಬುದ್ಧಿಗೆಟ್ಟು ನೀನು ಹೀಗೆ ಮಾತನಾಡುತ್ತಿರುವೆ. ನೀನು ಹೇಳಿದ ಆಪದ್ಧರ್ಮವೆಂಬುದೊದು ಇರುವುದು ನಿಜವೇ. ಸಂಪ್ರದಾಯವೂ ಇದನ್ನು ಅನೇಕ ಬಾರಿ ಎತ್ತಿ ಹಿಡಿದಿದೆ. ಆದರೆ ನೀನು ನನಗೆ ಇದನ್ನು ಅನುಸರಿಸು ಎಂದು ಹೇಳುವುದು ಮಾತ್ರ ಸರಿಯಲ್ಲ. ನಿನಗೆ ಗೊತ್ತು ನಾನು ಸಿಂಹಾಸನದ ಹಕ್ಕನ್ನೂ, ಸಂಸಾರವನ್ನೂ ತ್ಯಾಗಮಾಡಿ ಪ್ರತಿಜ್ಞೆ ಮಾಡಿರುವೆ ಎಂದು. ನಾನು ಇದನ್ನು ನಿನಗಾಗಿಯೇ ಮಾಡಿದ್ದಾದ್ದರಿಂದ ನೀನಿದನ್ನು ಖಂಡಿತ ಮರೆತಿರಲಾರೆ! ಅಂದು ಘೋರಪ್ರತಿಜ್ಞೆ ಮಾಡಿದುದು ನಿನಗೆ ನೆನಪಿಲ್ಲವೆ? ಈ ಜನ್ಮದಲ್ಲಿ ನಾನು ಹೆಂಗಸಿನ ಸಹವಾಸ ಮಾಡುವುದಿಲ್ಲ ಎಂಬುವುದೇ ನನ್ನ ಪ್ರತಿಜ್ಞೆಯಲ್ಲವೆ? ಈಗ ಸತ್ತ ತಮ್ಮನ ಹೆಂಡಿರನ್ನು ಸ್ವೀಕರಿಸು ಎಂಡು ಹೇಳುತ್ತಿರುವೆಯಲ್ಲ!" ವಿಚಿತ್ರವೀರ್ಯನ ಸಾವಿನಿಂದ ನಿನ್ನ ಬುದ್ಧಿ ಪಲ್ಲಟಗೊಂಡಿದೆಯೆಂದು ತೋರುತ್ತದೆ. ಇಲ್ಲದಿದ್ದರೆ ಇಂಥ ಸಲಹೆಯನ್ನು ನೀನು ನನಗೆ ಕೊಡುತ್ತಿರಲಿಲ್ಲ. ತಾಯೇ, ನನಗೆ ತುಂಬ ದುಃಖವಾಗುತ್ತಿದೆ. ದಯವಿಟ್ಟು ಇಂಥದನ್ನು ಮಾಡೆಂದು ನನಗೆ ಹೇಳಬೇಡ," ಎಂದು ವಿಧವಿಧವಾಗಿ ಸಮಾಧಾನ ಮಾಡಿದನು. ಅದಕ್ಕೆ ಸತ್ಯವತಿಯು, ``ಆ ಘೋರಪ್ರತಿಜ್ಞೆ, ಅದನ್ನು ನೀನು ಮಾಡಿದ ಸನ್ನಿವೇಶ ಎಲ್ಲವೂ ನನಗೆ ನಿಚ್ಚಳವಾಗಿ ನೆನಪಿದೆ. ನಿಮ್ಮ ತಂದೆಗೆ ನನ್ನನ್ನು ತಂದುಕೊಳ್ಳುವ ಸಲುವಾಗಿ ನೀನು ಅದನ್ನು ಮಾಡಿದೆ ಎಂಬುದೂ ನೆನಪಿದೆ. ಆದರೀಗ ಪರಿಸ್ಥಿತಿ ಬದಲಾಗಿದೆ. ದೇವವ್ರತ, ನನ್ನ ಮಗನಿಗೆ ರಾಜ್ಯ ಕೊಡಬೇಕೆಂಬುದಕ್ಕಲ್ಲವೇ ನೀನು ಪ್ರತಿಜ್ಞೆ ಮಾಡಿದ್ದು? ನನ್ನ ಮಕ್ಕಳಿಬ್ಬರೂ ಈಗ ಸತ್ತಿರುವರು. ಕುರುವಂಶ ಕೊನೆಗೊಳ್ಳುವ ಸಮಯ ಒದಗಿದೆ. ಆದ್ದರಿಂದಲೇ ನಾನು ಆಪದ್ಧರ್ಮವಾಗಿ ಇದನ್ನು ನೀನು ನಡೆಸಬೇಕು ಎಂದು ಸಲಹೆ ಕೊಡುತ್ತಿರುವುದು. ಕುರುವಂಶದ ನಾಶಕ್ಕೆ ನೀನು ಅವಕಾಶ ಕೊಡಕೂಡದು. ನಾನು ನಿನ್ನ ತಾಯಿ. ನನಗೆ ಪ್ರಿಯವಾದುದನ್ನು ಮಾಡುವುದು ನಿನ್ನ ಕರ್ತವ್ಯ. ಈಗ ತಾಯಿಯ ಮಾತನ್ನು ನಡೆಸುವುದೇ ನೀನು ಹಿಂದೆ ಮಾಡಿರಬಹುದಾದ ಎಲ್ಲ ಪ್ರತಿಜ್ಞೆಗಳನ್ನು ಸಂರಕ್ಷಿಸಿಕೊಳ್ಳುವುದಕ್ಕಿಂತ ಶ್ರೇಷ್ಠವಾದ ಧರ್ಮ!" ಎಂದು ನುಡಿದಳು.ಇಲ್ಲಿಯವರೆಗೆ ಭೀಷ್ಮನು ತಾಳ್ಮೆ ಕಳೆದುಕೊಡಿರಲಿಲ್ಲ. ಆದರೆ ಈಗ ಅವನ ಸಹನೆಯ ಕಟ್ಟೆ ಒಡೆಯಿತು. ಹಿಂದಿನ ಘಟನೆಗಳೆಲ್ಲವೂ ಅವನ ಬಗೆಗಣ್ಣ ಮುಂದೆ ಬಂದವು. ತನ್ನ ತಾಯಿ ಗಂಗೆ, ಸ್ವರ್ಗದಲ್ಲಿ ಕಳೆದ ತನ್ನ ಬಾಲ್ಯ, ವಿದ್ಯಾಭ್ಯಾಸ-ರಾಜ್ಯಶಾಸ್ತ್ರದಲ್ಲಿ ಮೊದಲು ಬೃಹಸ್ಪತಿ ಶುಕ್ರಾಚಾರ್ಯರುಗಳೊಡನೆ, ವೇದವೇದಾಂಗಗಳಲ್ಲಿ ಅನಂತರ ವಸಿಷ್ಠನೊಡನೆ ತಾನು ಅಧ್ಯಯನ ಮಾಡಿದ್ದು; ಭಾರ್ಗವನಿಂದ ಧನುರ್ವಿದ್ಯೆ ಕಲಿತದ್ದು - ಇವೆಲ್ಲವನ್ನೂ ತನ್ನ ತಾಯಿ ಆಗಮಾಡಿಸಿದ್ದು ತಾನು ಕುರುವಂಶದ ಯೋಗ್ಯಪುತ್ರನಾಗಲಿ ಎಂದಲ್ಲವೆ! ನಾನು ಆದರ್ಶ ರಾಜನಾಗಬೇಕೆಂದು ಅವಳ ಅಭಿಲಾಷೆಯಾಗಿದ್ದಿತು; ಅದನ್ನವಳು ಬಾರಿಬಾರಿಗೂ ಹೇಳುತ್ತಿದ್ದಳು. ಅವನ ಮನಸ್ಸು ಅನಂತರ ತನ್ನ ತಂದೆಯೊಡನೆ ಕಳೆದ ನಾಲ್ಕು ವರ್ಷಗಳನ್ನು ನೆನೆಯಿತು. ಅದೆಂತಹ ಸ್ನೇಹ, ನಿರ್ವ್ಯಾಜ ಅಂತಃಕರಣ ಅವರದು! ತಂದೆಮಕ್ಕಳಾಗಿರುವುದಕ್ಕಿಂತ ಅವರು ಪ್ರೀತಿಯ ಗೆಳೆಯರಂತಿದ್ದರು. ಪರಸ್ವರ ಪ್ರೇಮಪ್ರವಾಹದಲ್ಲಿ ಮುಳುಗಿಹೋಗಿದ್ದ ಅವರಿಗೆ ಆ ನಾಲ್ಕು ವರ್ಷಗಳು ಕಳೆದುದೇ ತಿಳಿಯಲಿಲ್ಲ. ಅನಂತರ ತನಗೆ ನಡೆದ ಯುವರಾಜ್ಯಾಭಿಷೇಕ . . . ಅನಂತರ ಎಲ್ಲಿಂದ ಬಂದಳೋ ಈ ಸತ್ಯವತಿ! ತನ್ನ ತಂದೆಯ ತೃಪ್ತ್ಯರ್ಥವಾಗಿ, ಅವಳ ತಂದೆಯ ದುರಾಶೆಯ ತೃಪ್ತ್ಯರ್ಥವಾಗಿ, ತಾನು ಲೋಕದಲ್ಲಿ ಸುಂದರವಾದದ್ದು ಯಾವುದುಂಟೋ ಅದೆಲ್ಲವನ್ನೂ ಬಿಟ್ಟುಬಿಡುವಂತಾಯಿತು. ಅಂದಿನ ತನ್ನ ಆ ಎಳೆತಾರುಣ್ಯದ ಕಸುವೆಲ್ಲವೂ ಆ ಒಂದು ಪ್ರತಿಜ್ಞೆಯಿಂದಾಗಿ ಹಬೆಯಾಗಿ ಹಾರಿಹೋಯಿತೆ! ತಾನು ಹುಟ್ಟುವಾಗಲೇ ಮುದುಕನಾಗಿಯೇ ಹುಟ್ಟಿದೆನೋ ಎಂದೆನಿಸುತ್ತಿದೆ. ಅನಂತರ ಯಾವುದೂ ತನಗೆ ಆಶಿಸಲು ಯೋಗ್ಯವಾಗಿ ಕಾಣಿಸಲೇ ಇಲ್ಲ. ಜೀವನವೆಲ್ಲ ವರ್ಣರಹಿತವಾಗಿ, ಕೇವಲ ಕಪ್ಪುಬಿಳಿಯ ಏಕತಾನತೆಯಾಗಿಹೋಯಿತು. ತಾನು ಆವರೆಗೆ ಹೆಣೆದಿದ್ದ ಈ ಕಪ್ಪುಬಿಳುಪಿನ ಬಟ್ಟೆಯಲ್ಲಿ ಹಾಗೆ ಹೀಗೆ ಹಾದುಹೋದ ಕೆಂಪು ನೂಲಿನ ಹಾಗೆ ಬಂದಳು ಈ ಅಂಬೆ - ಇದ್ದ ಸ್ವಲ್ಪ ಕಾಲದಲ್ಲಿ ಏನು ಹಾವಳಿ ಮಾಡಿಬಿಟ್ಟಳು! ಸ್ವೀಕರಿಸಲು ಅಸಾಧ್ಯವಾದ್ದರಿಂದ ತಾನು ಅವಳನ್ನು ನಿರಾಕರಿಸಬೇಕಾಯಿತು. ಆ ಹಾಳು ಪ್ರತಿಜ್ಞೆಯಿಂದಾಗಿ ಆ ಬಡಪಾಯಿ ಹುಡುಗಿಯ ಹೃದಯವನ್ನು ಒಡೆಯಬೇಕಾಯಿತು, ಅವಳ ಸ್ತ್ರೀತ್ವದ ಸರ್ವವಾಶ ಮಾಡಬೇಕಾಯಿತು, ಗುರುವಿನ ಮಾತನ್ನೂ ಮೀರಬೇಕಾಯಿತು. ಈಗ ಈ ಮಲ ತಾಯಿಯ ಆಜ್ಞೆಯಂತೆ ಸತ್ತ ತಮ್ಮನ ಹೆಂಡಿರನ್ನು ಸ್ವೀಕರಿಸಬೇಕಂತೆ!ಭೀಷ್ಮನು ಬಾಯಿಬಿಟ್ಟೊಡನೆ ಒಳಗೆ ಹುದುಗಿದ್ದ ಕೋಪವೆಲ್ಲವೂ ಭೋರ್ಗರೆದು ಹೊರ ಹೊಮ್ಮಿತು. ನಡುಗುವ ಕಂಠದಿಂದ, ``ಅಮ್ಮ, ನನ್ನ ಮನಸ್ಸಿನ ಬಲವನ್ನು ನೀನರಿಯೆ. ನನ್ನ ಧರ್ಮ ಅದೆಷ್ಟು ದೃಢವಾದುದು ಎಂಬುದನ್ನು ನೀನರಿಯೆ. ಯಾವ ಶಕ್ತಿಯೂ ನೀನು ಹೇಳಿದುದನ್ನು ನನ್ನಿಂದ ಮಾಡಿಸಲಾರದು. ಭೂಮಿ ತನ್ನ ಗಂಧವನ್ನು ಕಳೆದುಕೊಳ್ಳಬಹುದು, ನೀರು ತನ್ನ ರುಚಿಯನ್ನು ಕಳೆದುಕೊಳ್ಳಬಹುದು. ಸೂರ್ಯನು ತನ್ನ ಪ್ರಕಾಶವನ್ನು ಕಳೆದುಕೊಳ್ಳಬಹುದು. ಚಂದ್ರನು ತನ್ನ ತಣ್ಪನ್ನು ಕಳೆದುಕೊಳ್ಳಬಹುದು. ಸಾಕ್ಷಾತ್ ಧರ್ಮನ್ನೇ ತನ್ನ ಧರ್ಮವನ್ನು ಬಿಟ್ಟುಕೊಡಬಹುದು. ಆದರೆ ನಾನು ಮಾತ್ರ ಸತ್ಯಪಥವನ್ನು ಬಿಡಲಾರೆ. ನನಗೆ ಸತ್ಯವೆಂಬುದು ಸ್ವರ್ಗದ ಎಲ್ಲ ಭೋಗಭಾಗ್ಯಗಳಿಗಿಂತ ಹೆಚ್ಚಿನದು. ಲೋಕವೇ ಪ್ರಳಯಕ್ಕೆ ತುತ್ತಾಗಬಹುದು, ಆದರೆ ನನ್ನ ಮನಸ್ಸಿನ ಬಲ ಮಾತ್ರ ಎಂದೆಂದಿಗೂ ತಗ್ಗದು. ಯಾರೂ, ಯಾವುದೂ ನನ್ನನ್ನು ಚಲಿಸುವಂತೆ ಮಾಡಲಾರದು -ತಾಯಿಯೆಂಬ ಅಧಿಕಾರವುಳ್ಳ ನೀನೂ ಸಹ! ಈ ಪ್ರತಿಜ್ಞೆಗಾಗಿ ನಾನು ಒಮ್ಮೆ ನನ್ನ ಗುರುವನ್ನೇ ವಿರೋಧಿಸುವ ಧೈರ್ಯ ಮಾಡಿದೆ. ನಿನ್ನ ಮಾತುಗಳು ನನ್ನ ಮೇಲೆ ಏನೂ ಪರಿಣಾಮ ಮಾಡವು. ಈ ಮೂರ್ಖ ಪ್ರಯತ್ನವನ್ನು ಬಿಟ್ಟುಬಿಡು!" ಎಂದನು.* * * * ಸತ್ಯವತಿಯು ಪುನಃ ಪುನಃ ಭೀಷ್ಮನ ಮೇಲೆ ಒತ್ತಡ ತರಲು ಪ್ರಯತ್ನಿಸುತ್ತಲೇ ಇದ್ದಳು. ಆದರೆ ಭೀಷ್ಮನು ಮಾತ್ರ ಅಲೆಗಳ ತಾಡನೆಯನ್ನು ತಡೆದು ನಿಲ್ಲುವ ಬಂಡೆಯಂತೆ ಅಚಲನಾಗಿ ನಿಂತನು. ಅವಳ ಮಾತುಗಳನ್ನು ಅವನು ಲೆಕ್ಕಿಸಲೇ ಇಲ್ಲ. ಸತ್ಯವತಿಯ ದುಃಖ ಸಹಿಸಲಸದಳವಾಯಿತು.ಸತ್ಯವತಿಯು ದುಃಖಿಸುತ್ತಿರುವುದನ್ನು ನೋಡಿ ನೋಡಿ ಭೀಷ್ಮನಿಗೂ ದುಃಖವಾಗತೊಡಗಿತು. ಅವಳ ಮೇಲಿನ ಅನುಕಂಪದಿಂದ, ``ಅಮ್ಮ, ವಂಶವು ಮುಂದುವರೆಯುವ ಬಗ್ಗೆ ನನ್ನ ಸಲಹೆಯೊಂದಿದೆ. ಕುಲೀನ ವಂಶವೊಂಡು ಕೊನೆಗೊಳ್ಳಬಹುದೆಂಬ ಭಯವು ತಲೆದೋರಿದಾಗ, ಸದ್ಬ್ರಾಹ್ಮಣನೊಬ್ಬನಿಂದ ಅದನ್ನು ಪುನರುಜ್ಜೀವನಗೊಳಿಸಿಕೊಳ್ಳಬಹುದು ಎನ್ನುವರು. ನನ್ನ ಗುರು ಭಾರ್ಗವನು ಕ್ಷತ್ರಿಯರೆಲ್ಲರನ್ನೂ ಸಂಹರಿಸಿದಾಗ, ಅನೇಕ ರಾಜವಂಶಗಳು ಮುಂದುವರೆಯುವಂತೆ ಮಾಡಿದ್ದು ಹೀಗೆಯೇ. ಯೋಗ್ಯನಾದ ಬ್ರಾಹ್ಮಣನೊಬ್ಬನನ್ನು ನೀನು ಯೋಚಿಸುವುದಾದರೆ, ಸಿಂಹಾಸನಕ್ಕೊಬ್ಬ ಉತ್ತರಾಧಿಕಾರಿಯನ್ನು ಕರುಣಿಸು ಎಂದು ಅವನನ್ನು ನಾವು ಪ್ರಾರ್ಥಿಸಿಕೊಳ್ಳಬಹುದು. ಇದು ಈ ಹಿಂದೆಯೂ ಇದ್ದ ಸಂಪ್ರದಾಯ; ಮಹಾ ಋಷಿಗಳೂ ಸಹ ಇದನ್ನು ಅನುಮೋದಿಸಿರುವರು" ಎಂದನು. ಬಡಪಾಯಿ ಸತ್ಯವತಿ ಈ ಏರ್ಪಾಡಿಗೆ ಒಪ್ಪದೆ ನಿರ್ವಾಹವಿರಲಿಲ್ಲ. ಆದರೆ, ಕುರುವಂಶದ ಉದ್ಧಾರಕ್ಕೆ ತನ್ನ ರಕ್ತವನ್ನು ಭೀಷ್ಮನು ಕೊಡಲಿಲ್ಲವೆಂಬ ಅಸಮಾಧಾನವು ಉಳಿದೇ ಉಳಿಯಿತು. ಅನೇಕ ದಿನಗಳವರೆಗೆ ಅಳೆದೂ ಸುರಿದೂ ಸತ್ಯವತಿಯು, ಶಂತನುವು ತನ್ನನ್ನು ನೋಡುವುದಕ್ಕೂ ಬಹಳ ಮುಂಚೆ ಪರಾಶರ ಮಹರ್ಷಿಯು ತನ್ನಲ್ಲಿ ವ್ಯಾಸನೆಂಬ ಪುತ್ರನೊಬ್ಬನನ್ನು ಪಡೆದಿದ್ದ ಸಂಗತಿಯನ್ನು ಭಿಷ್ಮನಿಗೆ ತಿಳಿಸಿದಳು. ವ್ಯಾಸನನ್ನು ಕರೆಯಬಹುದೆಂಬ ಅವಳ ಯೋಚನೆಗೆ ಭೀಷ್ಮನು ಒಪ್ಪಿದನು.ಸತ್ಯವತಿಯು ತನ್ನ ಚೊಚ್ಚಲ ಮಗು ವ್ಯಾಸನನ್ನು ಸ್ಮರಿಸಿಕೊಂಡಳು. ವ್ಯಾಸನು ತಾಯಿಯ ಕರೆಗೆ ಓಗೊಟ್ಟು ಧಾವಿಸಿ ಬಂದನು. ಎಲ್ಲವನ್ನೂ ನಿವೇದಿಸಿದ ಸತ್ಯವತಿಯು, ತನ್ನ ಬೇಡಿಕೆಯನ್ನು ಅವನ ಮುಂದಿಟ್ಟಳು. ವ್ಯಾಸನು, ``ಅಮ್ಮ, ನೀನು ನನಗೆ ಜನ್ಮ ಕೊಟ್ಟವಳು. ನಿನ್ನ ಆಣತಿಯು ನನಗೆ ಶಿರೋಧಾರ್ಯ. ನಿನ್ನ ಅಪೇಕ್ಷೆಯನ್ನು ನಾನು ಪೂರೈಸುವೆನು. ಆದರೆ ವಿಚಿತ್ರವೀರ್ಯನ ಹೆಂಡಿರು ನನ್ನನ್ನು ಸ್ವಾಗತಿಸುವಂತೆ ಮಾಡುವ ಭಾರ ಮಾತ್ರ ನಿನ್ನದು. ಅವರು ನನ್ನ ಕರಿಯ ಬಾಹ್ಯರೂಪವನ್ನು ನೋಡಿ ಹೆದರಬಾರದು, ಹೇಸಬಾರದು" ಎಂದು ಸಮ್ಮತಿಸಿದನು. ಸೊಸೆಯಂದಿರೊಂದಿಗೆ ಮಾತನಾಡಿ ಅವರನ್ನು ಒಡಂಬಡಿಸಲು ಸತ್ಯವತಿ ಒಪ್ಪಿದಳು. ಅಂಬಿಕೆಯ ಬಳಿಗೆ ಹೋಗಿ, ಪರಿಸ್ಥಿತಿಯ ಗಂಭೀರತೆಯನ್ನು ಮನಮುಟ್ಟುವಂತೆ ಅವಳಿಗೆ ವಿವರಿಸಿದಳು. ಕುರುವಂಶವನ್ನು ಬೆಳೆಸಿ ಬೆಳಗಿಸುವುದು ಅವಳ ಕರ್ತವ್ಯವೆಂದೂ, ವ್ಯಾಸನನ್ನು ಅವಳು ಸೂಕ್ತ ರೀತಿಯಲ್ಲಿ ಬರಮಾಡಿಕೊಳ್ಳಬೇಕೆಂದೂ ಬೋಧಿಸಿದಳು. ಅನ್ಯ ಮಾರ್ಗವಿಲ್ಲದೆ ಅಂಬಿಕೆಯೂ ಒಪ್ಪಿದಳು.ಕಾರ್ಗತ್ತಲ ರಾತ್ರಿ. ಅಂಬಿಕೆ ತನ್ನ ಅಂತಃಪುರದಲ್ಲಿ ವ್ಯಾಸನ ಬರವಿಗಾಗಿ ಕಾಯುತ್ತಿದ್ದಳು. ಬರುತ್ತಿದ್ದ ಅವನನ್ನು ನೋಡಿದಳು. ಮಹರ್ಷಿಯ ಅಸಹ್ಯಕರವೂ ಘೋರವೂ ಆದ ಬಾಹ್ಯರೂಪವನ್ನು ಕಂಡು ಭಯಪಟ್ಟಳು; ರಾತ್ರಿಯನ್ನು ಅವನೊಂದಿಗೆ ಕಳೆಯಬೇಕಾದ ಸಂದರ್ಭವನ್ನು ನೆನೆದು ಜುಗುಪ್ಸಿತಳಾದಳು. ಮಾಡುವುದೇನು? ಬಿಮ್ಮಗೆ ಕಣ್ಣುಮುಚ್ಚಿಕೊಂಡವಳು ತೆರೆಯಲಿಲ್ಲ. ಘೋರ ರಾತ್ರಿ ಕೊನೆಗೂ ಕಳೆದು ಬೆಳಗಾಯಿತು. ಸತ್ಯವತಿ ವ್ಯಾಸನಿಗಾಗಿ ಆತಂಕದಿಂದ ಕಾಯುತ್ತಿದ್ದಳು. `ಅಂಬಿಕೆಗೆ ಒಬ್ಬ ಬಲಶಾಲಿಯಾದ ಮಗನು ಹುಟ್ಟುವನು, ಆದರೆ ತನ್ನನ್ನು ನೋಡಲು ಭಯಪಟ್ಟು ರಾತ್ರಿಯಿಡೀ ಅವಳು ಕಣ್ಣು ಮುಚ್ಚಿಕೊಂಡೇ ಇದ್ದುದರಿಂದ, ಆ ಮಗನು ಕುರುಡನಾಗಿ ಹುಟ್ಟುವನು' ಎಂದ ವ್ಯಾಸನ ಮಾತನ್ನು ಕೇಳಿ ಅವಳಿಗೆ ನಿರಾಸೆಯಾಯಿತು. ಸೊಸೆಯ ಮೇಲೆ ಕೋಪ ಭುಗಿಲೆದ್ದಿತು. ಆದರೆ ಆಗಿಹೋದುದನ್ನು ಅಳಿಸಲಾಗುವುದೆ? ಇನ್ನೊಮ್ಮೆ ಬಂದು ಅಂಬಾಲಿಕೆಗೂ ಒಬ್ಬ ಮಗನನ್ನು ಕರುಣಿಸಬೇಕೆಂದು ವ್ಯಾಸನನ್ನು ಕೇಳಿಕೊಂಡಳು. ವ್ಯಾಸನು ಒಪ್ಪಿದನು.ಅಂಬಾಲಿಕೆಯೂ ವ್ಯಾಸನನ್ನು ನೋಡಿ ಅಷ್ಟೇ ಹೆದರಿಕೊಂಡಳು. ಅಸಹ್ಯಪಟ್ಟುಕೊಂಡಳು. ಅವನನ್ನು ನೋಡಿ ಅವಳ ರಕ್ತ ತಣ್ಣಾಗಾಯಿತು, ದೇಹವೆಲ್ಲ ಬಿಳಿಚಿಕೊಂಡಿತು. ರಾತ್ರಿ ಹೇಗೋ ಕಳೆಯಿತು. ಬೆಳಗ್ಗೆ ವ್ಯಾಸನು ಇವಳಿಗೆ ರೂಪವಂತನೂ ಗುಣವಂತನೂ ಆದ ಒಬ್ಬ ಮಗನು ಹುಟ್ಟುವನು, ಆದರೆ ಇವಳು ಬಿಳಿಚಿಕೊಂಡದ್ದರಿಂದ ಮಗುವೂ ಬಿಳಿಚಿಕೊಂಡಿರುವುದೆಂದು ಸತ್ಯವತಿಗೆ ಹೇಳಿದನು. ಸತ್ಯವತಿಗೆ ಕಿಂಕರ್ತವ್ಯವಿಮೂಢಳಾದಳು. ``ಮಗನೇ, ಈ ಹುಡುಗಿಯರು ಮೂರ್ಖರು. ನನ್ನ ಸಲುವಾಗಿ ಅವರನ್ನು ದಯವಿಟ್ಟು ಕ್ಷಮಿಸು. ಅಂಬಿಕೆಯ ಮಗು ಹುಟ್ಟಿದ ಮೇಲೆ ನೀನು ಅವಳನ್ನು ಮತ್ತೊಮ್ಮೆ ಸ್ವೀಕರಿಸಬೇಕು. ಅಷ್ಟು ಹೊತ್ತಿಗೆ ಅವಳಿಗೆ ನಾನು ಬುದ್ಧಿ ಕಲಿಸಿರುತ್ತೇನೆ. ಇದನ್ನು ನೀನು ನನಗಾಗಿ ಮಾಡಬೇಕು" ಎಂದು ಬೇಡಿಕೊಂಡಳು. ``ಹಾಗೇ ಆಗಲಿ!" ಎಂದ ವ್ಯಾಸನು ಹಸ್ತಿನಾಪುರದಿಂದ ಹೊರಟುಹೋದನು.ವ್ಯಾಸನು ಹೇಳಿದ್ದಂತೆ ಇಬ್ಬರು ಮಕ್ಕಳು - ಒಬ್ಬ ಕುರುಡ, ಇನ್ನೊಬ್ಬ ಬಿಳಿಚಿಕೊಂಡವನು - ಹುಟ್ಟಿದರು. ಅವರಿಗೆ ವ್ಯಾಸನ ಸಲಹೆಯಂತೆ ಧೃತರಾಷ್ಟ್ರ, ಪಾಂಡು ಎಂದು ಹೆಸರಿಟ್ಟರು. ಸತ್ಯವತಿಯು ಪುನಃ ವ್ಯಾಸನನ್ನು ಕರೆಯಲು ನಿರ್ಧರಿಸಿದಳು. ಸೊಸೆಯನ್ನು ಕರೆದು, ``ನೀನು ಕಣ್ಣು ಮುಚ್ಚಿಕೊಂಡುದರಿಂದಲೇ ನಿನಗೆ ಕುರುಡು ಮಗು ಹುಟ್ಟಿದ್ದು, ಈ ಬಾರಿ ಅಂತಹ ಹುಚ್ಚುತನ ಮಾಡಬೇಡ" ಎಂದು ಚೆನ್ನಾಗಿ ಬುದ್ಧಿ ಹೇಳಿದಳು.ಭಯದಿಂದ ಮೈನವಿರೇಳದೆ ಅಂಬಿಕೆಗೆ ವ್ಯಾಸನನ್ನು ಕಲ್ಪಿಸಿಕೊಳ್ಳಲು ಸಹ ಸಾಧ್ಯವಾಗುತ್ತಿರಲಿಲ್ಲ. ವ್ಯಾಸನು ಬಂದಾಗ ಅವನೊಡನೆ ಇಅರಲು ತನ್ನ ದಾಸಿಯನ್ನು ಕಳಿಸುವೆನೆಂದು ನಿರ್ಧರಿಸಿದಳು. ಆ ದಾಸಿ ಹೆದರಿಕೊಳ್ಳದೆ ವ್ಯಾಸನನ್ನು ಭಕ್ತಿಯಿಂದ ಸೇವಿಸಿದಳು. ಬೆಳಗ್ಗೆ ವ್ಯಾಸನು 'ಈ ಬಾರಿ ವಿವೇಕಿಯೂ, ಸದ್ಗುಣಿಯೂ ಆದ, ಧರ್ಮನ ಅವತಾರವೆನಿಸುವ ಮಗನು ಹುಟ್ಟುವನು' ಎಂದು ಸತ್ಯವತಿಗೆ ಹೇಳಿದನು. `ಆದರೆ, ಅವಳು ನಿನ್ನ ಸೊಸೆಯಲ್ಲ, ಅವಳ ದಾಸಿ, ಅವಳು ಪುಣ್ಯವಂತೆ, ನನ್ನ ಉತ್ತಮೋತ್ತಮ ಪುತ್ರನನ್ನು ಹೆರುವಳು. ನಾನು ನನ್ನಿಂದಾದಷ್ಟು ನಿನಗೆ ಸಹಾಯ ಮಾಡಿರುವೆ. ಆದರೆ ಅದು ಹೀಗಾಯಿತು. ನೀನು ಇನ್ನು ನನ್ನನ್ನು ಸಹಾಯ ಕೇಳಬೇಡ ಲೋಕದ ಸಮಸ್ತ ಬಂಧನಗಳಿಂಲೂ ದೂರವಾಗಿರುವ ನನ್ನಂಥವನು ಯಾವ ಕಾರಣಕ್ಕೂ ಮೂರು ಬಾರಿಗಿಂತ ಹೆಚ್ಚಾಗಿ ಸ್ತ್ರೀಸ್ವೀಕಾರ ಮಾಡುವುದು ತರವಲ್ಲ. ನೀನು, ನನ್ನ ತಾಯಿ, ಆಜ್ಞೆ ಮಾಡಿದೆ ಎಂದು ನಾನು ಶಿರಸಾವಹಿಸಿ ನಡೆದೆ. ದಯವಿಟ್ಟು ಇನ್ನು ನನ್ನನ್ನು ಕರೆಯಬೇಡ' ಎಂದು ನುಡಿದ ವ್ಯಾಸನು ತಪಸ್ಸಿಗಾಗಿ ಹಿಮಾಲಯಕ್ಕೆ ಹೊರಟುಹೋದ.* * * * ಮೂರನೆಯ ದಾಸೀಪುತ್ರನೂ ಜನಿಸಿದ. ಅವನಿಗೆ ವಿದುರನೆಂದು ಹೆಸರಿಟ್ಟರು. ಮಕ್ಕಳನ್ನು ಬೆಳೆಸಿ ಮುಂದಕ್ಕೆ ತರುವ ಹಾಗೂ ಅವರು ದೊಡ್ಡವರಾಗುವ ತನಕ ರಾಜ್ಯಾಡಳಿತವನ್ನು ನೋಡಿಕೊಳ್ಳುವ ಭಾರವು ಪುನಃ ಭೀಷ್ಮನ ಮೇಲೇ ಬಿದ್ದಿತು.ಭೀಷ್ಮನಿಗೆ ಈ ಮೂರು ಮಕ್ಕಳನ್ನು ಕಂಡರೆ ಬಹು ಪ್ರೀತಿ. ಕ್ಷತ್ರಿಯ ರಾಜಕುಮಾರರಿಗೆ ಕಲಿಸಬೇಕಾದುದನ್ನೆಲ್ಲ ಅವನು ಅವರಿಗೆ ಕಲಿಸಿದನು. ಧೃತರಾಷ್ಟ್ರನಿಗೆ ಎಲ್ಲಿಲ್ಲದ ದೇಹಶಕ್ತಿ. ಪಾಂಡುವು ಧನುರ್ವಿದ್ಯೆಯಲ್ಲಿ ಸಮರ್ಥ. ವಿದುರನು ಮೂವರಲ್ಲಿ ಅತ್ಯಂತ ಬುದ್ಧಿಶಾಲಿ. ಅವರ ವಿದ್ಯಾಭ್ಯಾಸ ಮುಗಿಯಿತು. ಭೀಷ್ಮ ಧೃತರಾಷ್ಟ್ರನಿಗೆ ಯುವರಾಜನಾಗಿ ಪಟ್ಟಾಭಿಷೇಕ ಮಾಡಿದ. ಸಮಸ್ತ ಆಯುಧಗಳಲ್ಲಿ ನೈಪುಣ್ಯ ಪಡೆದಿದ್ದ ಪಾಂಡುವಿಗೆ ಸೇನಾಧಿಪತ್ಯ ವಹಿಸಲಾಯಿತು. ವಿದುರನನ್ನು ಮಂತ್ರಿಯಾಗಲು ಪರಿಣತಿ ಕೊಡಿಸಲಾಯಿತು. ಕುರುಡನಾದ್ದರಿಂದ, ಧೃತರಾಷ್ಟ್ರನು ರಾಜ್ಯಭಾರವನ್ನು ನಡೆಸಲು ಕಷ್ಟವಾಗದಂತೆ, ಪಾಂಡುವೇ ಅವನ ಹೆಸರಿನಲ್ಲಿ ವಿದುರನ ಸಹಾಯದೊಂದಿಗೆ ರಾಜ್ಯಾಡಳಿತವನ್ನು ನೋಡಿಕೊಳ್ಳುತ್ತಿದ್ದ.ಮೂವರು ಮಕ್ಕಳೂ ಯೌವನಕ್ಕೆ ಪದಾರ್ಪಣ ಮಾಡಿದರು. ಇವರುಗಳಿಗೆ ಕನ್ಯೆಯರನ್ನು ಹುಡುಕಿ ತಂದು ಮದುವೆ ಮಾಡಿಸುವ ಭಾರ ಭೀಷ್ಮನ ಮೇಲೆ ಬಿದ್ದಿತು. ಗಾಂಧಾರರಾಜನಾದ ಶಬಲನಿಗೆ ಸುಂದರಿಯೂ ಸಾಧ್ವಿಯೂ ಶಂಕರನ ಭಕ್ತಳೂ ಆದ ಮಗಳಿರುವಳೆಂದೂ, ಮದ್ರದೇಶದ ರಾಜನ ಮಗಳು ಸುಂದರಿಯೂ ಒಳ್ಳೆಯ ನಡತೆಯವಳೆಂದೂ ಕೇಳಿದ್ದ ಭೀಷ್ಮನು ವಿದುರನ ಜೊತೆಗೆ ಚರ್ಚಿಸಿದ. ``ಈ ರಾಜಕುವರಿಯರು ನಮ್ಮ ಹುಡುಗರಿಗೆ ಯೋಗ್ಯರಾದವರೆಂದು ತೋರುತ್ತದೆ. ನಮ್ಮ ಸರಿಸಮಾನರಾದ ರಾಜರು ಯಾರು ಇಲ್ಲದಿದ್ದರೂ, ಈ ಇಬ್ಬರಿಗೆ ಒಳ್ಳೆಯ ಹಿನ್ನೆಲೆಯಿದೆ. ಈ ಕುವರಿಯರನ್ನು ಕುರುವಂಶದ ಸೊಸೆಯರನ್ನಾಗಿ ಮಾಡಿಕೊಳ್ಳೋಣ. " ಅದಕ್ಕೆ ವಿದುರನು, ``ನೀನು ನಮಗೆ ತಂದೆ, ತಾಯಿ, ಆಚಾರ್ಯ ಎಲ್ಲವೂ ಆಗಿರುವೆ. ನಿನ್ನ ತೀರ್ಮಾನವೇ ನಮಗೆಲ್ಲರಿಗೂ ಶಿರೋಧಾರ್ಯ" ಎಂದು ಸಮ್ಮತಿಸಿದನು.ಭೀಷ್ಮನು ಗಾಂಧಾರರಾಜನಿಗೆ ಸುದ್ದಿಯನ್ನು ಕಳುಹಿಸಿದಾಗ ಅವನು ಮೊದಲು ಧೃತರಾಷ್ಟ್ರನು ಕುರುಡ ಎಂದು ಗೊಣಗಿದ. ಆದರೆ ಅವನ ಮಗಳು ಗಾಂಧಾರಿ ಈ ವಿವಾಹಕ್ಕೆ ಅಡ್ಡಿಯೇನಿಲ್ಲವೆಂದು ಸಮ್ಮತಿಸಿದಳು. ತಕ್ಷಣವೇ ತನ್ನ ಸ್ವಾಮಿಗಿಂತ ತಾನು ಯಾವ ರೀತಿಯಲ್ಲೂ ಉತ್ತಮವೆನಿಸಬಾರದೆಂದು, ತನ್ನ ಕಣ್ಣುಗಳ ಸುತ್ತ ಬಟ್ಟೆ ಕಟ್ಟಿಕೊಂಡುಬಿಟ್ಟಳು. ತನ್ನ ಗಂಡನು ನೋಡಲಾಗದಂತಹ ಪ್ರಪಂಚವನ್ನು ತಾನೂ ನೋಡಲೊಲ್ಲೆ ಎಂದು ಕೊನೆಯವರೆಗೂ ಸ್ವಯಂಕೃತ ಅಂಧತ್ವವನ್ನು ಉಳಿಸಿಕೊಂಡಳು. ಸೋದರಿಯನ್ನು ಮದುವೆ ಮಾಡಿಕೊಟ್ಟ ನಂತರ ಶಕುನಿಯು ಗಾಂಧಾರದೇಶಕ್ಕೆ ಹಿಂದಿರುಗಿದನು.ಮದ್ರರಾಜನು ಮಗಳಿಗಾಗಿ ಸ್ವಯಂವರವನ್ನೇರ್ಪಡಿಸಿದನಾದರೂ, ಅದರಲ್ಲಿ ಅವನ ಮಗಳು ಇತರ ಎಲ್ಲ ರಾಜಕುಮಾರರಿಗಿಂತ ಅಧಿಕ ರೂಪವಂತನಾಗಿದ್ದ ಪಾಂಡುವನ್ನೇ ಪತಿಯನ್ನಾಗಿ ಆರಿಸಿಕೊಂಡಳು. ಸೊಸೆಯಂದಿರನ್ನು ಮನೆ ತುಂಬಿಸಿಕೊಂಡ ಮೇಲೆ ಭೀಷ್ಮನು ಇನ್ನಾದರೂ ಕುರುವಂಶವು ಬೆಳಗುವಂತಾಗಲಿ ಎಂದು ಹಾರೈಸಿ ನೆಮ್ಮದಿಯ ನಿಟ್ಟುಸಿರು ಬಿಟ್ಟನು.* * * * ವೃಷ್ಣಿಗಳಲ್ಲಿ ಸೂರನೆಂಬ ರಾಜನೊಬ್ಬನಿದ್ದನು. ಅವನಿಗೆ ವಸುದೇವ ಎಂಬ ಒಬ್ಬ ಮಗ, ಪೃಥೆ ಎಂಬ ಒಬ್ಬಳು ಮಗಳು. ಅವನ ಭ್ರಾತೃಸಂಬಂಧಿ ಕುಂತಿಭೋಜನಿಗೆ ಮಕ್ಕಳಿರಲಿಲ್ಲ. ಸೂರನಿಗೆ ಅವನನ್ನು ಕಂಡರೆ ಬಹು ಪ್ರೀತಿ. ಅವನಿಗೆ ಸಂತಾನವಿಲ್ಲದಿದ್ದುದನ್ನು ಕಂಡು ಮರುಗಿದ ಸೂರ ತನ್ನ ಮಗಳು ಪೃಥೆಯನೇ ಸಾಕಿಕೊಂಡಿರು ಎಂದು ಕೊಟ್ಟಿದ್ದನು. ಪೃಥೆ ತುಂಬ ಸುಂದರ ಮಗು, ಒಳ್ಳೆಯ ನಡತೆಯ ಹುಡುಗಿ. ಕುಂತಿಭೋಜನು ತನ್ನ ಪ್ರಾಣವನ್ನೆ ಸಾಕುಮಗಳಲ್ಲಿ ಇಟ್ಟಿದ್ದನು. ಅವಳಿಗೆ ಕುಂತಿಯೆಂದೇ ಹೆಸರಾಯಿತು.ಒಂದುಸಲ ಶೀಘ್ರಕೋಪಿಯಾದ ದೂರ್ವಾಸಮಹರ್ಷಿಯು ಕುಂತಿಭೋಜನ ಆಸ್ಥಾನಕ್ಕೆ ಬಂದಾಗ ಅವನ ಬೇಕುಬೇಡಗಳನ್ನು ನೋಡಿಕೊಳ್ಳಲು ರಾಜನು ಕುಂತಿಯನ್ನು ನಿಯಮಿಸಿದನು. ಆಂತಹ ಕಷ್ಟವಾದ ಕೆಲಸಗಳನ್ನು ಕುಂತಿಯ ತುಂಬ ಚೆನ್ನಾಗಿ ನಿರ್ವಹಿಸಿದಳು. ಹುಡುಗಿಯ ನಡತೆಯಿಂದ ಪ್ರೀತನಾದ ದೂರ್ವಾಸನು ಅವಳಿಗೆ ಒಂದು ವರವನ್ನು ಕೊಡಲು ಉದ್ಯುಕ್ತನಾದನು. ಅವಳನ್ನು ಹತ್ತಿರ ಕರೆದು, ``ನಿನಗೆ ನಾನೊಂದು ಮಂತ್ರವನ್ನು ಕೊಡುತ್ತೇನೆ, ಅದನ್ನು ಉಚ್ಚರಿಸಿದರೆ ನೀನು ಇಷ್ಟಪಟ್ಟ ದೇವತೆ ನಿನ್ನ ಬಳಿಗೆ ಬರುತ್ತಾನೆ" ಎಂದು ಹೇಳಿ ಮಂತ್ರೋಪದೇಶ ಮಾಡಿದನು. ಏನೂ ಅರಿಯದ ಮಗು ತನಗೇನೋ ಬಹುಮಾನ ಕೊಟ್ಟಿರುವರು ಎಂದು ಸಂತೋಷಪಟ್ಟಿತು. ದೂರ್ವಾಸನು ಹೊರಟುಹೋದನು.ದೂರ್ವಾಸನು ಕೊಟ್ಟ ಮಂತ್ರದಿಂದ ಇಷ್ಟಬಂದ ದೇವನನ್ನು ಕರೆದಾಗ ಅವನು ತನ್ನ ಬಳಿ ಬರುವುದರ ಸಾಧಕಬಾಧಕಗಳು ಆ ಪುಟ್ಟ ಹುಡುಗಿಗೆ ಅರ್ಥವಾಗುವುದಾದರೂ ಹೇಗೆ? ಹೊಸಗೊಂಬೆಯೊಂದನ್ನು ತಂದುಕೊಟ್ಟಾಗ ಸಂತೋಷಪಡುವ ಮಗುವಿನಂತೆ ಕುಂತಿಯು ಸಂಭ್ರಮಪಟ್ಟಳು. ಅಂದು ಆಗತಾನೆ ಬೆಳಗಾಗುತ್ತಿದ್ದ ಸಮಯ. ಪೂರ್ವದ ಕಿಟಕಿಯ ಮೂಲಕ ಸೂರ್ಯೋದಯವು ಕಾಣುತ್ತಿದ್ದಿತು. ಪೂರ್ವ ದಿಕ್ಕೆಲ್ಲ ಕರಗಿದ ಬಂಗಾರದ ಬಣ್ಣದಿಂದ ಶೋಭಿಸಿತ್ತಿದ್ದಿತು. ನದಿಯ ನೀರಿನ ಕಿರುತೆರೆಗಳು ಅರಮನೆಯ ಗೋಡೆಗಳನ್ನು ಮುದ್ದಿಸುತ್ತಿದ್ದವು. ಸೂರ್ಯನ ಎಳೆಬಿಸಿಲಿನ ಹೊಂಗಿರಣಗಳು ಬೆಳಗಿನ ತಣ್ಪಿನೊಡನೆ ಸೇರಿ, ತಮ್ಮ ಮಾರ್ಗದಲ್ಲಿದ್ದ ನದಿಯ ನೀರಿನ ಮೇಲೆ ಪ್ರತಿಫಲಿಸಿ ಕೆಂಪಿನ ಬಂಗಾರದ ಓಕಳಿಯನ್ನು ಸೃಷ್ಟಿಸಿದ್ದವು. ಅದು ಮರೆಯಲಾಗದಂತಹ ಅದ್ಭುತ ಸುಂದರ ದೃಶ್ಯವಾಗಿದ್ದಿತು. ಹೊಸ ಬೆಳಗು ಮಗುವಿನ ಹೃದಯವನ್ನು ಮುದಗೊಳಿಸಿತು. ಉಜ್ವಲ ಸೂರ್ಯನ ಆ ಸೌಂದರ್ಯದಲ್ಲಿ ಅವಳು ಕರಗಿಹೋದಳು. ಈ ಸೂರ್ಯ ತನ್ನ ಬಳಿಗೆ ಬಂದರೆ ಹೇಗಿರುತ್ತದೆ ಎಂದವಳು ಅಚ್ಚರಿಪಟ್ಟಳು. ದೂರ್ವಾಸನು ಕೊಟ್ಟ ಮಂತ್ರವು ಇದ್ದಕ್ಕಿದ್ದಂತೆ ಜ್ಞಾಪಕಕ್ಕೆ ಬಂದಿತು. ಹೌದು, ಅದನ್ನು ಪಠಿಸಿದರೆ ಸೂರ್ಯನು ತನ್ನ ಬಳಿ ಬರಬಹುದಲ್ಲವೆ! ಹಾಗೆ ತಾನೆ ಋಷಿಯು ತನಗೆ ಹೇಳಿದ್ದು? ಮಗು ಅರಿಯದ ಆನಂದದಲ್ಲಿ ಕಣ್ಣುಮುಚ್ಚಿಕೊಂಡು ಕಮಲದ ಮೊಗ್ಗಿನಂತೆ ಕೈಜೋಡಿಸಿಕೊಂಡು ತಾನು ಕಲಿತ ಮಂತ್ರವನ್ನು ಹೇಳುತ್ತ ಸೂರ್ಯನನ್ನು ಕರೆಯಿತು.ಕುಂತಿ ಕಣ್ತೆರೆದಳು. ಪವಾಡವೊಂದು ಜರುಗುತ್ತಿತ್ತು. ನದಿಯ ಮೇಲೆ ಪ್ರತಿಫಲಿತವಾಗುತ್ತ ಸೂರ್ಯನ ಪ್ರಖರ ಕಿರಣಗಳು ವೇಗವಾಗಿ ಚಲಿಸುತ್ತ ಬಂದವು; ಇವಳ ಕಣ್ಣು ಕೋರೈಸುವಂತಾಯಿತು. ಸೂರ್ಯದೇವನು ಮಾನವರೂಪಿನಲ್ಲಿ ಬಂದು ನಿಂತಿದ್ದ. ಇವಳನ್ನು ನೋಡಿ ಕುಚೇಷ್ಟೆಯ ನಗುವನ್ನು ನಗುತ್ತಿದ್ದ. ಮಂತ್ರ ಯಶಸ್ವಿಯಾದುದಕ್ಕೆ ಕುಂತಿಗೆ ಆನಂದವೋ ಆನಂದ! ಉದ್ರೇಕದಲ್ಲಿ ಚಪ್ಪಾಳೆ ತಟ್ಟಿ ನಕ್ಕಳು. ``ದೂರ್ವಾಸರು ಹೇಳಿದ್ದು ಸರಿ ಹಾಗಾದರೆ. ನೀನು ಪೂರ್ವದಲ್ಲಿ ಹುಟ್ಟುತ್ತಿರುವುದನ್ನು ನೋಡುತ್ತಿದ್ದೆ. ನೀನು ಇಲ್ಲಿಗೇ ಬಂದುಬಿಟ್ಟರೆ ಎಷ್ಟು ಚೆನ್ನ ಎನ್ನಿಸಿತು. ಅದಕ್ಕೇ ಮಂತ್ರವನ್ನು ಉಚ್ಚರಿಸಿದೆ. ನೀನು ಬಂದುಬಿಟ್ಟೆ! ಏನದ್ಭುತ!"ಸೂರ್ಯ ಇನ್ನೂ ನಗುತ್ತಿದ್ದ. ``ಹೌದು, ನಾನು ಬಂದಿದ್ದಾಯಿತು. ಈಗ ನನ್ನನ್ನು ಏನು ಮಾಡು ಎನ್ನುತ್ತೀ?" ಎಂದ.``ಏನಿಲ್ಲಪ್ಪ, ಸುಮ್ಮನೆ ಕರೆದೆ. ಅಷ್ಟು ಸುಂದರವಾಗಿರುವ ನೀನು ಬಳಿಗೆ ಬಂದರೆ ಎಷ್ಟು ಚೆನ್ನಾಗಿರುತ್ತೆ ಅನ್ನಿಸಿತು, ಅದಕ್ಕೇ ಕರೆದೆ ಅಷ್ಟೆ. "``ಅಷ್ಟೇ ಅಲ್ಲ. ನೀನು ಮಂತ್ರದ ಅರ್ಥವನ್ನು ತಿಳಿದುಕೊಂಡಿಲ್ಲ ಅಂತ ಕಾಣುತ್ತೆ. ನೀನು ಯಾವ ದೇವತೆಯನ್ನು ಕರೆದರೂ ಅವನು ಬಂದು ನಿನ್ನನ್ನು ಸೇರುವನು ಎಂದಲ್ಲವೇ ದೂರ್ವಾಸರು ಹೇಳಿದ್ದು?

``ಹೌದು" ಎಂದಳು ಕುಂತಿ, ಅವನು ಹೇಳಿದ್ದು ಅರ್ಥವಾಗದೆ.

``ಅದರ ಅರ್ಥ ನೀನು ಕರೆದ ದೇವರು ನಿನ್ನನ್ನು ಆಲಂಗಿಸಿ ತನ್ನಷ್ಟೇ ಸುಂದರ ಮಗುವೊಂದನ್ನು ನಿನಗೆ ಅನುಗ್ರಹಿಸುತ್ತಾನೆ ಅಂತ. ನಿನಗೆ ಗೊತ್ತಾಗಲಿಲ್ಲವೇ?"

ಕುಂತಿ ಬೆದರಿದಳು. ಅವಳಿಗೆ ಏನು ಮಾಡಬೇಕು, ಏನು ಹೇಳಬೇಕು ಎಂಬುದು ತಿಳಿಯದಾಯಿತು. ``ನನಗೆ ಗೊತ್ತಾಗಲಿಲ್ಲ. ಮಂತ್ರದ ಅರ್ಥ ಹೀಗೆಂದು ನಾನು ಹೇಗೆ ತಾನೆ ಊಹಿಸಲಿ? ಮೂರ್ಖ ಕೆಲಸ ಮಾಡಿದೆ. ಕ್ಷಮಿಸಿಬಿಡು ಸೂರ್ಯದೇವ! ದಯವಿಟ್ಟು ಹೊರಟುಹೋಗು, ನನ್ನ ಮರ್ಯಾದೆ ಕಾಪಾಡು." ಸೂರ್ಯನು, ``ಅದು ಅಸಾಧ್ಯ. ಮಂತ್ರಬಲದಿಂದ ಆಕರ್ಷಿತನಾಗಿರುವ ನಾನು ನಿನಗೊಂದು ಮಗುವನ್ನು ಕೊಡದೆ ಹೋಗುವುದು ಸಾಧ್ಯವಿಲ್ಲ. ದೇವತೆಯಾದರೂ ನಾನು ಮಂತ್ರದಿಂದ ಬದ್ಧನು," ಎಂದನು.

ಕುಂತಿಯ ದುಃಖ ಹೇಳತೀರದಾಯಿತು. ``ನಾನಿನ್ನು ಕುಮಾರಿ. ಮದುವೆಯಾಗದವಳು. ಲೋಕವೇನೆನ್ನಬಹುದು? ನಾನು ಕೌಮಾರ್ಯವನ್ನು ಕಳೆದುಕೊಡನೆಂದು ತಿಳಿದರೆ ನನ್ನ ತಂದೆಯ ಎದೆ ಒಡೆದೆ ಹೋಗಬಹುದು. ನೀನು ಹೊರಟುಹೋಗಲಾರೆಯ?" ಎಂದಳು ಕುಂತಿ ಅಳುತ್ತ. ಸೂರ್ಯನಿಗೆ ಇನ್ನೂ ಹುಡುಗಿಯಗಿರುವ ಕುಂತಿಯನ್ನು ಕಂಡು ಮರುಕವುಂಟಾಯಿತು. ಅವನು ನಕ್ಕು, ``ಹೆದರದಿರು ಮಗುವೆ. ಮಗು ಹುಟ್ಟಿದ ಮೇಲೆ ನೀನು ಪುನಃ ಕನ್ಯೆಯಗುತ್ತೀಯೆ. ನೀನು ನನ್ನನ್ನು ಕರೆದದ್ದು ಯಾರಿಗು ಗೊತ್ತಾಗುವುದಿಲ್ಲ" ಎಂದು ಭರವಸೆ ಕೊಟ್ಟಮೇಲೆ ಅವಳ ಹೆದರಿಕೆ ದೂರವಾಯಿತು. ಸೂರ್ಯನ ಸವಿಮಾತು, ಸುಂದರ ರೂಪ ಅವಳನ್ನು ಸೂರೆಗೊಂಡಿತು.

ಸೂರ್ಯ ಹೊರಡಲು ಸಿದ್ಧನಾದ. ``ನನ್ನ ಪ್ರತಿರೂಪವಾಗಿರುವ ನಿನ್ನ ಮಗ ಕವಚ ಕುಂಡಲಗಳೊಂದಿಗೆ ಹುಟ್ತುತ್ತಾನೆ. ಮಹಾ ಧನುರ್ಧಾರಿಯಾಗುತ್ತಾನೆ. ಸಹೃದಯತೆಯಲ್ಲಿ ಯಾರೂ ಅವನ ಸಮನರಾಗುವುದಿಲ್ಲ. ದಾನಶೂರಕರ್ಣನೆಂದು ಮೂರುಲೋಕಗಳಲ್ಲೂ ಪ್ರಸಿದ್ಧನಾಗುತ್ತಾನೆ. ನಾನೇ ದಾನ ಕೊಡಬೇಡವೆಂದು ಹೇಳಿದರು ಸಹ ಅವನು ಯಾರಿಗೂ ಏನನ್ನೂ ಇಲ್ಲವೆನ್ನಲಾರ. ಸೂಕ್ಷ್ಮನೂ ಆತ್ಮಾಭಿಮಾನಿಯೂ ಆಗುತ್ತಾನೆ. ಆತನ ಕೀರ್ತಿ ಆಚಂದ್ರಾರ್ಕವಾಗಿರುತ್ತದೆ" ಎಂದು ಹೇಳಿ ಅದೃಶ್ಯನಾದ.

ಕಾಲಾನುಕ್ರಮದಲ್ಲಿ ಕುಂತಿ ಮಗುವನ್ನು ಹೆತ್ತಳು. ಅದನ್ನು ಏನು ಮಾಡಬೇಕೆಂದೆ ಅವಳಿಗೆ ತೋರಲಿಲ್ಲ. ತಾಯ್ತನದ ಆನಂದವನ್ನು ಅರಿಯುವಷ್ಟು ದೊಡ್ಡವಳಾಗಿರದ ಅವಳು, ಅದರ ನಾಚಿಕೆಯನ್ನು ಮಾತ್ರ ಅನುಭವಿಸಿದಳು. ಕಿಟಕಿಯಿಂದ ಹೊರಗೆ ನೋಡಿದಳು. ನದಿ ಎಂದಿನಂತೆ ಪ್ರಶಾಂತವಾಗಿ ಹರಿಯುತಿತ್ತು. ಕುಂತಿಯ ಹೃದಯದಲ್ಲಿ ಮಾತ್ರ ದೊಡ್ದ ಬಿರುಗಾಳಿ ಎದ್ದಿತ್ತು. ಧೃಡಮನಸ್ಸಿನಿಂದ ಮಗುವನ್ನೆತ್ತಿಕೊಂಡಳು. ಮೃದು ರೇಷ್ಮೆಯಲ್ಲಿ ಅದನ್ನು ಸುತ್ತಿ ಮರದ ತೊಟ್ಟಿಲಲ್ಲಿಟ್ಟು ನದಿಯಲ್ಲಿ ತೇಲಿಬಿಟ್ಟು ಅರಮನೆಗೆ ಹಿಂದಿರುಗಿ ಬಂದಳು. ತೊಟ್ಟಿಲು ತನ್ನಿಂದ ದೂರ, ದೂರ ತೇಲಿಹೋಗುತ್ತಿರುವುದನ್ನು ಕಿಟಕಿಯಿಂದ ನೋಡಿಯೇ ನೋಡಿದಳು. ನದಿಯ ಮಹಾಪ್ರವಾದಲ್ಲಿ ತೇಲಿಹೊಗುತ್ತಿರುವ ಮುದ್ದುಮಗುವಿನ ಮೇಲೆ ವರ್ಣಿಸಲಾಗದಂತಹ ಸೆಳೆತ, ಹೃದಯವೇ ಒಡೆದು ಹೋಗುತ್ತಿರುವಂತಹ ತಳಮಳ. ಕಣ್ಣೀರು ಧಾರೆಧಾರೆಯಗಿ ಹರಿಯಿತು. ಸೂರ್ಯನೆದುರಿಗೆ ಕೈಯೆತ್ತಿ ಮುಗಿಯುತ್ತ, ``ದೇವ, ನಮ್ಮ ಈ ಮಗುವಿಗೆ ನಾನು ದೊಡ್ಡ ಅನ್ಯಾಯ ಮಾಡಿಬಿಟ್ಟೆ. ದಯವಿಟ್ಟು ಅದನ್ನು ರಕ್ಷಿಸು. ಅದಕ್ಕೇನೂ ತೊಂದರೆ ಬಾರದಂತೆ ನೋಡಿಕೋ" ಎಂದು ಎದೆ ಬಿರಿಯುವಂತೆ ಕೂಗಿ ಹೇಳಿದಳು. ತನ್ನಿಂದ ದೂರವಾಗುತ್ತಿರುವ ಮಗುವಿಗೆ, ನನ್ನ ಕಂದ, ನಿನ್ನ ಬದುಕು ಋಜುಪಥದಲ್ಲಿ ಸಾಗಲಿ. ಆಪೋದೇವಿಯರು ನಿನ್ನನ್ನು ಕಾಪಾಡಲಿ. ನೀನು ಸಾಯುವುದಿಲ್ಲ. ಸ್ವರ್ಗದಲ್ಲಿರುವ ದೇವತೆಗಳೆಲ್ಲರೂ ನಿನ್ನ ರಕ್ಷಣೆಗೆ ಟೊಂಕಕಟ್ಟಿ ನಿಂತಿರುವರು. ದೂರದ ಭವಿಷ್ಯದಲ್ಲಿ ನಾನು ನಿನ್ನನ್ನು ಯಾವಾಗಲೋ ನೋಡಬಹುದು. ನಿನ್ನ ಕವಚಕುಂಡಲಗಳ ನೆರವಿನಿಂದ ನಾನು ನಿನ್ನನ್ನು ಗುರುತಿಸುವೆ. ಯಾರು ನಿನ್ನನ್ನು ಮಗನೆಂದು ಕೈಗೆತ್ತಿಕೊಂಡು ಸಾಕುವಳೋ ಅವಳೇ ಪುಣ್ಯವಂತೆ. ನಿನ್ನನ್ನು ತರುಣನನ್ನಾಗಿ ಬೆಳೆಸುವ ಆನಂದವನ್ನು ಪಡೆಯುವ ಅದೃಷ್ಟವಂತೆ ಅವಳು. ಆದರೆ ನಾನು ಎಲ್ಲರಿಗಿಂತ ಅತ್ಯಂತ ದುರದೃಷ್ಟವಂತಳು: ಹೊಟ್ಟೆಯಲ್ಲಿ ಹುಟ್ಟಿಯೂ ನನ್ನ ಪಾಲಿಗೆ ನೀನಿಲ್ಲದಂತೆ ಮಾಡಿಕೊಂಡೆ. ದೇವರು ನಿನ್ನನ್ನು ಚೆನ್ನಾಗಿಟ್ಟಿರಲಿ, ನನ್ನ ಚೊಚ್ಚಲ ಮಗುವೆ" ಎಂದಳು.

ನೆಗೆದು ನೆಗೆದು ಒಡುತ್ತ ಕಿಲಕಿಲನೆ ನಗುತ್ತ ಇದ್ದ ಹುಡುಗಿ ಇದ್ದಕ್ಕಿದ್ದಂತೆ ಭದ್ರಮಹಿಳೆಯಾಗಿಬಿಟ್ಟಳು. ಎಗ್ಗಿಲ್ಲದ ಆನಂದಮಯ ಹುಡುಗುತನ ದೂರವಾಯಿತು. ಸ್ವಪ್ನದಲ್ಲಾಗಲಿ, ಎಚ್ಚರವಿರುವಾಗಲಿ, ಅವಳ ಬಗೆಗಣ್ಣಿಗೆ ಕಾಣುತ್ತಿದ್ದು ಒಂದೇ: ರೇಷ್ಮೆ ಬಟ್ಟೆ, ಮರದ ಪೆಟ್ಟಿಗೆ, ಎಳೆಯ ಬಿಸಿಲಿಗೆ ಹೊಳೆಹೊಳೆಯುತ್ತಿದ್ದ ಕವಚಕುಂಡಲಗಳುಳ್ಳ ಮುದ್ದುಮಗು.* * * * ಅನೇಕ ವರ್ಷಗಳು ಕಳೆದವು. ಎಳೆಯ ಕುಂತಿಗೆ ಮದುವೆಯ ವಯಸ್ಸಾಯಿತು. ಅವಳು ಪಾಂಡುವನ್ನು ಸ್ವಯಂವರದಲ್ಲಿ ವರಿಸಿದಳು. ಮದ್ರರಾಜನ ಮಗಳು ಮಾದ್ರಿಯೂ ಪಾಂಡುವನ್ನು ಇನ್ನೊಂದು ಸ್ವಯಂವರದಲ್ಲಿ ಆರಿಸಿಕೊಂಡಳು. ಭೀಷ್ಮನು ಇಬ್ಬರನ್ನು ಅವರವರ ಯೋಗ್ಯತೆಗನುಗುಣವಾಗಿ ವೈಭವದಿಂದ ಮನೆ ತುಂಬಿಸಿಕೊಂಡನು.

ಕುರುವಂಶಕ್ಕೆ ಅವು ಬಂಗಾರದ ದಿನಗಳು. ಪಾಂಡುವು ಒಳ್ಳೆಯ ಯೋಧನಾಗಿದ್ದು ದಿಗ್ವಿಜಯಕ್ಕಾಗಿ ಭರತವರ್ಷವನ್ನೆಲ್ಲ ತಿರುಗಿದ. ದಶಾರ್ಣ, ಕಾಶಿ, ಅಂಗ, ವಂಗ, ಕಳಿಂಗ ದೇಶಗಳನ್ನೆಲ್ಲ ಗೆದ್ದ ಮೇಲೆ ಮಗಧರಾಜ್ಯಕ್ಕೆ ಮುತ್ತಿಗೆ ಹಾಕಿ ಅಲ್ಲಿಯ ರಾಜನನ್ನು ಸುಲಭವಾಗಿ ಸೋಲಿಸಿದ. ಚಿತ್ರಾಂಗದ ವಿಚಿತ್ರವೀರ್ಯರು ಮಕ್ಕಳಿಲ್ಲದೆ ಸತ್ತು ಭೀಷ್ಮನೊಬ್ಬನ ಮೇಲೆ ರಾಜ್ಯಭಾರವು ಬಿದ್ದಿದ್ದ ಕಾಲದಲ್ಲಿ ಈ ಚಿಕ್ಕಪುಟ್ಟ ರಾಜರುಗಳೆಲ್ಲ ಕುರುವಂಶವು ನಿರ್ಮೂಲವಾಗುವುದರಲ್ಲಿದೆ ಎಂದುಕೊಂಡಿದ್ದರು. ಆದುದರಿಂದ, ಪಾಂಡುವಿನ ಈ ದಿಗ್ವಿಜಯವು ಅನೇಕ ರೀತಿಗಳಲ್ಲಿ ಪರಿಣಾಮಕಾರಿಯಾಯಿತು ಅದು ಕುರುವಂಶದ ಮೇಲ್ಮೆಯನ್ನು ಸಂಶಯಕ್ಕೆ ಅವಕಾಶವಿಲ್ಲದಂತೆ ಎತ್ತಿಹಿಡಿಯಿತು; ಪಾಂಡುವಿಗೂ ಇದರಿಂದ ಕೀರ್ತಿ ಬಂದಿತು. ಅವನ ಕಾಲದಲ್ಲಿ ಅವನೇ ವೀರ ಯೋಧನೆಂದು ಪರಿಗಣಿಸಲ್ಪಟ್ಟಿದ್ದನು.

ದಿಗ್ವಿಜಯವು ಮುಗಿದಮೇಲೆ ಪಾಂಡುವು ತನ್ನಿಬ್ಬರು ರಾಣಿಯರೊಂದಿಗೆ ವಿಹಾರಾರ್ಥವಾಗಿ ಕಾಡಿಗೆ ಹೋದನು. ಅವನು ಒಳ್ಳೆಯ ಬೇಟೆಗಾರನೂ ಆಗಿದ್ದು, ಎಳೆವಯಸ್ಸಿನ ಪತ್ನಿಯರೊಂದಿಗೆ ಹಿಮಾಲಯದ ದಕ್ಷಿಣ ತಪ್ಪಲಿನಲ್ಲಿ ತಿರುಗಾಡುತ್ತ ಅನೇಕ ಸಂತೋಷದ ದಿನಗಳನ್ನು ಕಳೆದನು. ಕಾಡಿನಲ್ಲಿದ್ದ ಮೂಲನಿವಾಸಿಗಳು ಇವರನ್ನು ವಿಹಾರಾರ್ಥವಾಗಿ ಭೂಮಿಗಿಳಿದು ಬಂದಿರುವ ದೇವತೆಗಳೆಂದು ಭಾವಿಸಿದ್ದರು. ನಂತರದ ವರ್ಷಗಳಲ್ಲಿ, ಈ ಸಂತೋಷದ ನೆನಪೇ ಕುಂತಿಯನ್ನು ಜೀವಂತವಾಗಿರಿಸಿದುದು.

ಆ ಕಾಡಿನಲ್ಲಿ ಒಬ್ಬ ಋಷಿಯೂ ಅವನ ಪತ್ನಿಯೂ ವಾಸವಾಗಿದ್ದರು. ಇಬ್ಬರ ನಡುವೆ ಗಾಢವಾದ ಪ್ರೇಮವಿದ್ದಿತು. ಋಷಿಯು ಸ್ಥೂಲಪ್ರೇಮದ ಎಲ್ಲ ಆಯಾಮಗಳನ್ನು ಆನಂದಿಸಿ ನೊಡಲು ಅಪೇಕ್ಷಿಸಿದನು. ಯಾವ ಮುಜುಗರವಿಲ್ಲದೆ ಪ್ರಕೃತಿಸಹಜವಾಗಿ ಹಾಗೆ ಆನಂದಿಸುವುದು ಪ್ರಾಣಿಶರೀರದಲ್ಲಿರುವಾಗ ಮಾತ್ರವೇ ಸಾಧ್ಯವೆಂದು ನಿರ್ಧರಿಸಿ, ಋಷಿಯೂ ಅವನ ಪತ್ನಿಯೂ ಎರಡು ಜಿಂಕೆಗಳಾಗಿ ರೂಪಾಂತರಗೊಂಡು ಯಾವಾಗಲೂ ಒಟ್ಟಿಗೆ ಇರುತ್ತಿದ್ದರು. ಒಂದು ದಿನ, ಎರಡು ಜಿಂಕೆಗಳೂ ಏಕಭಾವದಲ್ಲಿ ಪ್ರಪಂಚವನ್ನೇ ಮರೆತಿದ್ದಾಗ, ಪಾಂಡುವು ಅವುಗಳನ್ನು ನೋಡಿದನು. ಎಂಥ ಬೇಟೆಯ ಅವಕಾಶ! ಎರಡು ಪ್ರಾಣಿಗಳು ಒಟ್ಟಿಗೆ ಇರುತ್ತ ತಮ್ಮನ್ನು ತಾವು ಮರೆತಿರುವಾಗ ಅವುಗಳಿಗೆ ತೊಂದರೆಕೊಡಬಾರದೆಂಬ ಸಹಜನಿಯಮವು ಬೇಟೆಯ ಆಸೆಯಲ್ಲಿ ಅವನಿಗೆ ಮರೆತೇ ಹೋಯಿತು. ಬಾಣವನ್ನು ಹೂಡಿ ಪ್ರಯೋಗಿಸಿದಾಗ ಗಂಡು ಜಿಂಕೆಗೆ ಪ್ರಾಣಾಂತಿಕವಾಗಿ ಪೆಟ್ಟಾಯಿತು. ಅದು ವಿಲವಿಲನೆ ಒದ್ದಾಡುತ್ತ, ಮಾನವ ಭಾಷೆಯಲ್ಲಿ, ``ಋಜುತ್ವಕ್ಕಾಗಿ ಲೋಕವಿಖ್ಯಾತವಾಗಿರುವ ವಂಶದಲ್ಲಿ ಹುಟ್ಟಿದ ನೀನು ಹೇಗೆ ಇಂಥ ಪಾಪವನ್ನು ಮಾಡಿದೆ? ನಾವಿಬ್ಬರೂ ಮೈಮರೆತಿದ್ದವೆಂಬುದನ್ನು ನೋಡಿಯೂ ನಿನಗೆ ನಮ್ಮನ್ನು ಹೊಡೆಯಲು ಮನಸ್ಸು ಹೇಗೆ ಬಂದಿತು? ಪತ್ನಿಯೊಡನೆ ವಿಹರಿಸುತಿದ್ದ ನಾನು ಕಿಂದಮನೆಂಬ ಋಷಿ. ನಿನ್ನನ್ನು ಶಪಿಸುತ್ತೇನೆ. ನಿನ್ನ ಪತ್ನಿಯೊಂದಿಗೆ ಸುಖದಲ್ಲಿದ್ದಾಗಲೇ ನಿನಗೆ ಮರಣವು ಈಗ ನನಗೆ ಬಂದ ಹಾಗೆಯೇ ಬರಲಿ!" ಏಂದು ವಿಲಾಪಿಸಿ ತನ್ನ ಹೆಂಡತಿಯೊಂದಿಗೆ ಪ್ರಾಣಬಿಟ್ಟಿತು. ಪಾಂಡುವು ಎಷ್ಟು ಬೇಡಿಕೊಂಡರೂ ಪ್ರಯೋಜನವಾಗಲಿಲ್ಲ. ಪಾಂಡುವಿಗೆ ತನ್ನ ದುರ್ವಿಧಿಯಿಂದ ತಪ್ಪಿಸಿಕೊಳ್ಳುವ ಮಾರ್ಗವೇ ತಿಳಿಯದಾಯಿತು.

ಭಾರವಾದ ಮನಸ್ಸಿನಿಂದ ತನ್ನ ಅವಿವೇಕವನ್ನು ಹಳಿದುಕೊಳ್ಳುತ್ತ ಪಾಂಡುವು ಆಶ್ರಮಕ್ಕೆ ಹಿಂದಿರುಗಿದನು. ವಿಧಿಯ ಆಟ ನಿಜಕ್ಕೂ ಅತ್ಯಾಶ್ಚರ್ಯಕರ. ಅದು ಒಮ್ಮೆ ಬಂದು ತಗುಲಿಗೊಡಿತೆಂದರೆ, ನಮ್ಮ ಭವಿಷ್ಯವೇ ಬದಲಾಗಿಬಿಡಬಹುದು. ಅಲ್ಲಿಯವರೆಗೂ ಪಾಂಡುವು ನಿರ್ಯೋಚನೆಯಿಂದ ಸಂತೋಷವಾಗಿದ್ದನು. ಕುರುಸಾಮ್ರಾಜ್ಯಕ್ಕೆಲ್ಲ ಅನಭಿಷಿಕ್ತ ಮಹಾರಾಜನಂತಿದ್ದ ಅವನು ವೈಭವದ ಪರಾಕಾಷ್ಠೆಯಲ್ಲಿರುವಾಗಲೇ ಸಿಡಿಲು ಬಡಿದ ಮಹಾವೃಕ್ಷದಂತೆ ನೆಲಕ್ಕುರುಳುವಂತಾಯಿತು. ಕಿಂದಮ ಶಾಪದಿಂದಾಗಿ ಪಾಂಡುವೂ ಎಲ್ಲದರಲ್ಲಿಯೂ ಆಸಕ್ತಿಯನ್ನು ಕಳೆದುಕೊಡನು. ರಾಜ್ಯಕ್ಕೆ ಹಿಂದಿರುಗುವುದೇ ಬೇಡವೆನಿಸಿತು. ತನ್ನ ಉಳಿದ ಜೀವನದ ಭಾಗವನ್ನು ಕಾಡಿನಲ್ಲೇ ಕಳೆಯಲು ನಿರ್ಧರಿಸಿರುವುದಾಗಿ ಪತ್ನಿಯರಿಗೆ ತಿಳಿಸಿಬಿಟ್ಟನು. ರಾಜನ ಮನಸ್ಥಿತಿಯ ಕಾರಣವನ್ನು ತಿಳಿದಿದ್ದ ಅವರುಗಳು ಯಾವ ಮಾತನ್ನು ಆಡಲಿಲ್ಲ. ಪಶ್ಚಾತ್ತಾಪದ ದಳ್ಳುರಿಯ ಪಾಂಡುವಿನ ಪ್ರಾಪಂಚಿಕ ಆಸೆ ಆಕಾಂಕ್ಷೆಗಳನ್ನೆಲ್ಲ ಸುಟ್ಟುಹಾಕಿಬಿಟ್ಟಿದ್ದಿತು. ಅವನಿಗೆ ಋಷಿಜೀವನದಿಂದ ಬರತಕ್ಕ ಶಾಂತಿಯೊಂದರ ಹೊರತು ಮತ್ತೇನು ಬೇಕೆನಿಸಲಿಲ್ಲ. ತನ್ನನ್ನು ತಾನು ಗೆಲ್ಲುವುದೇ ತನ್ನ ಮುಂದಿನ ದಿಗ್ವಿಜಯ ಎಂದವನು ನಿರ್ಧರಿಸಿಬಿಟ್ಟನು. ಪಾಂಡುವು ತನಗೆ ತಾನೇ ``ಇಂದಿನಿಂದ ನಾನು ಬೇರೆಯ ಮನುಷ್ಯನಾಗುತ್ತೇನೆ. ಸುಖದುಃಖಗಳು ನನ್ನನ್ನು ಘಾಸಿಗೊಳಿಸಲಾರವು. ಮಾನಾಪಮಾನಗಳಲ್ಲಿ ಸಮಾನವಾಗಿಯೇ ಉದಾಸೀನನಾಗಿರುವೆನು. ಯಾವ ದ್ವಂದ್ವಗಳಿಂದಲೂ ವಿಚಲಿತನಾಗುವುದಿಲ್ಲ. ಜೀವನವನ್ನು ನಾನು ಪ್ರೀತಿಸುವುದೂ ಇಲ್ಲ, ದ್ವೇಷಿಸುವುದೂ ಇಲ್ಲ. ಪ್ರಾಪಂಚಿಕ ಸಂಗತಿಗಳನ್ನೆಲ್ಲ ಮನಸಾ ತ್ಯಾಗಮಾಡಿ, ಕಣ್ಣುಮುಚ್ಚಿ ಮರದ ಕೆಳಗೆ ತಪೋನಿರತನಾಗುತ್ತೇನೆ" ಎಂದು ನಿಯಮ ಹಾಕಿಕೊಂಡನು. ತನ್ನ ಪರಿವಾರವನ್ನೆಲ್ಲ ಬಳಿಗೆ ಕರೆದು ಅವರಿಗೆ ``ನೀವೆಲ್ಲಾ ದಯವಿಟ್ಟು ಹಸ್ತಿನಾಪುರಕ್ಕೆ ಹೋಗಿ. ಅಜ್ಜಿ ಸತ್ಯವತಿ, ದೊಡಪ್ಪ ಭೀಷ್ಮ, ಪ್ರೀತಿಯ ತಾಯಿಯಾದ ಅಂಬಾಲಿಕೆ ಎಲ್ಲರಿಗೂ ನನ್ನ ನಮಸ್ಕಾರಗಳನ್ನು ತಿಳಿಸಿ. ನಾನು ಕೈಕೊಂಡಿರುವ ತೀರ್ಮಾನವನ್ನು ನನ್ನ ಭವಿಷ್ಯದ ಜೀವನಕ್ರಮವನ್ನೂ ವಿವರಿಸಿ. ಹಸ್ತಿನಾಪುರಕ್ಕೆ ನಾನು ಹಿಂದಿರುಗಿ ಬರ\-ಲಾರೆ" ಎಂದು ಹೇಳಿಬಿಟ್ಟನು. ಕುಂತಿ ಮಾದ್ರಿಯರು ತಮ್ಮ ಆಭರಣಗಳನ್ನೂ ರಾಜೋಚಿತ ಬಟ್ಟೆಬರೆಗಳನ್ನು ಅವರೊಡನೆ ಕಳಿಸಿಕೊಟ್ಟುಬಿಟ್ಟರು.

ಪಾಂಡುವಿನ ಪರಿತ್ಯಾಗದ ಸುದ್ದಿಯನ್ನು ಕೇಳಿದ ಹಸ್ತಿನಾಪುರಿಯು ದುಃಖಸಾಗರದಲ್ಲಿ ಮುಳುಗಿತು. ನಡೆದುದನ್ನೆಲ್ಲ ಕೇಳಿ ಭೀಷ್ಮನು ತುಂಬ ಸಂಕಟಪಟ್ಟನು. ಅಂಬಾಲಿಕೆಯ ಕಣ್ಣೀರಿಗೆ ಕೊನೆಯೇ ಇಲ್ಲವಾಯಿತು. ಯಾರಿಗೂ ಅವಳನ್ನು ಸಮಾಧಾನ ಮಾಡಲು ಸಾಧ್ಯವಾಗಲಿಲ್ಲ. ರಾಜ್ಯಭಾರದ ಹೊರೆಯು ಮತ್ತೊಮ್ಮೆ ತನ್ನ ಹೆಗಲೇರಿತು ಎಂಬುದನ್ನು ಭೀಷ್ಮನು ಕಂಡುಕೊಂಡನು. ವೀರನಾದ ಪಾಂಡು ಸೇನಾಪತಿಯ ಆಳ್ವಿಕೆಯಲ್ಲಿ, ವಿವೇಕಿ ವಿದುರನು ಕುರುಡರಾಜ ಧೃತರಾಷ್ಟ್ರನನ್ನು ನಿರ್ದೇಶಿಸುತ್ತಿದ್ದು, ಸ್ವಲ್ಪಕಾಲ ಭೀಷ್ಮನು ರಾಜ್ಯಭಾರದ ಹೊರೆಯನ್ನು ಇಳಿಸಿಕೊಂಡಿದ್ದನು. ಈಗ ಆ ಅಲ್ಪಾವಧಿಯ ಬಿಡುವೂ ಕೊನೆಗೊಂಡಿತು. ಪುನಃ ರಾಜ್ಯವನ್ನು ಮುನ್ನಡೆಸಬೇಕು; ಎಷ್ಟುಕಾಲವೋ ತಿಳಿಯದು. ತಂದೆಗಾಗಿ ಯಾವತ್ತು ಪ್ರಾಪಂಚಿಕ ಸುಖಸಂತೋಷಗಳನ್ನೆಲ್ಲ ತ್ಯಾಗಮಾಡಿದ್ದನೋ ಆ ದಿನ ಹೆಪ್ಪುಗಟ್ಟಿದ ಹೃದಯವು ಈಗ ಇನ್ನೂ ಗಟ್ಟಿಯಾಯಿತು, ಯಾವ ನೋವೂ ಅದನ್ನು ಭೇದಿಸದಷ್ಟು ಗಟ್ಟಿಯಾಯಿತು.* * * * 

ಪಾಂಡುವು ಕಾಡಿನಲ್ಲಿ ಅನೇಕ ವರ್ಷಗಳನ್ನು ಕಳೆದನು. ದುಃಖವನ್ನುಂಟುಮಾಡಬಹುದಾದ ಎಲ್ಲವನ್ನೂ ತ್ಯಾಗಮಾಡಿದ್ದರಿಂದ ಅವನದೇ ರೀತಿಯಲ್ಲಿ ಅವನು ಸುಖವಾಗಿದ್ದನೆನ್ನಬಹುದು. ಆದರೆ, ಕಾಲ ಸರಿದಂತೆ, ತನಗೆ ಮಕ್ಕಳಿಲ್ಲವೆಂಬ ಕೊರಗು ಅವನ ಹೃದಯವನ್ನು ಕೊರೆಯಲಾರಂಭಿಸಿತು. ಪುತ್ರನಿಲ್ಲದವನಿಗೆ ಪುತ್ ಎಂಬ ನರಕವೇ ಗತಿಯಂತೆ! ಬರುಬರುತ್ತ ಈ ಕೊರ\-ಗು ಹೆಚ್ಚಾಯಿತು. ಒಂದು ದಿನ ಇದನ್ನು ಅವನು ಕುಂತಿಗೆ ಹೇಳಿದನು. ಜೀವದಿಂದಿರಬೇಕಾದರೆ ತಾನಂತೂ ಹೆಂಡಿರ ಸಮೀಪ ಸುಳಿಯುವಂತಿಲ್ಲ; ಅದು ಖಂಡಿತ. ಆದ್ದರಿಂದ, ನಿನ್ನ ಅತ್ತೆ ಮಾಡಿದಂತೆ, ನೀನೂ ಋಷಿಯೊಬ್ಬನ ನೆರವಿನಿಂದ ಮಗನೊಬ್ಬನನ್ನು ಹೆತ್ತುಕೊಟ್ಟು ತನಗೆ ಮುಕ್ತಿಯನ್ನು ದೊರಕಿಸಿಕೊಡುವೆಯಾ" ಎಂದು ಕೇಳಿದನು. ಕುಂತಿಗೆ ಅದು ಇಷ್ಟವಾಗಲ್ಲಿ. ಸಿಟ್ಟೇ ಬಂದಿತು. ``ಮಹಾರಾಜ, ನೀನೇ ನನ್ನ ಸರ್ವಸ್ವ. ನಿನ್ನನ್ನು ಪತಿಯಾಗಿ ವರಿಸಿ ಬಹುಕಾಲವಾಯಿತು. ಸ್ವರ್ಗದಲ್ಲೇ ಆಗಲಿ, ನರಕದಲೇ ಆಗಲಿ, ನಿನ್ನೊಡನೆಯೇ ನಾನಿರುವುದು. ನಾವಿಬ್ಬರೂ ಸತ್ತ ಮೇಲೆ ಈ ಋಷಿಶಾಪ ಬಾಧಿಸದು. ಆಗ ಮಕ್ಕಳನ್ನು ಪಡೆಯೋಣ. ನಾನು ಮಾಡಲು ಸ್ವಲ್ಪವೂ ಇಷ್ಟಪಡದ ಕೆಲಸಕ್ಕೆ ದಯವಿಟ್ಟು ನನ್ನನ್ನು ಒತ್ತಾಯಿಸಬೇಡ" ಎಂದಳು.

ಪಾಂಡುವಿನ ಮನಸ್ಸು ಶಾಂತವಾಗಲಿಲ್ಲ. ತನ್ನ ಗಂಡನು ಹುಟ್ಟಲಾರದ ಮಕ್ಕಳಿಗಾಗಿ ಹಗಲೂ ಇರುಳೂ ಹಂಬಲಿಸುತ್ತಾ ಸಂಕಟಪಡುತ್ತಿರುವುದನ್ನು ನೋಡಿ ಸಹಿಸಲಾರದೆ ಕುಂತಿ ಕೊನೆಗೊಮ್ಮೆ ``ಮಹಾರಾಜ, ನಿನ್ನ ಸಂಕಟವನ್ನು ಪರಿಹರಿಸುವ ಶಕ್ತಿ ನನಗಿದೆ. ಚಿಂತಿಸದಿರು. ನಿನ್ನ ಹೃದಯದಾಸೆಯನ್ನು ನಾನು ನೆರವೇರಿಸುವೆನು" ಎಂದು ತನ್ನ ಬಾಲ್ಯದಲ್ಲಿ ದೂರ್ವಾಸನು ಕೊಟ್ಟ ವರದ ವಿಚಾರವನ್ನು ತಿಳಿಸಿದಳು. ಪಾಂಡುವಿಗೆ ತುಂಬ ಸಂತೋಷವಾಯಿತು. ಅವಳೊಡನೆ ಪರ್ಯಾಲೋಚಿಸಿ, ಧರ್ಮನ ನೆರವಿನಿಂದ ಒಬ್ಬ ಮಗನನ್ನು ಪಡೆಯುವುದೆಂದು ತೀರ್ಮಾನಿಸಿದನು. ``ಜನರು ಬಹುಕಾಲ ಸ್ಮರಿಸುವಂಥ ಮಗನು, ಧರ್ಮದ ಸ್ವರೂಪವೇ ಆಗಿರುವ ಆ ಮಗನು, ನನ್ನ ಹೆಸರನ್ನು ಆಚಂದ್ರಾರ್ಕವಾಗಿಸುತ್ತನೆ" ಎಂದನು. ಆ ರಮ್ಯವಾದ ಶತಶೃಂಗವೆಂಬ ವನದಲ್ಲಿ ಕುಂತಿಯು ಮಂತ್ರವನ್ನು ಉಚ್ಚರಿಸಿ ಧರ್ಮದೇವತೆಯನ್ನು ಕರೆದು ಅವನಿಂದ ಮಗನನ್ನು ಪಡೆದಳು. ಆಗ `ಋಜುತ್ವವೇ ಮೂರ್ತಿವೆತ್ತಂತಿರುವ ಇವನು ಈ ಗುಣಕ್ಕಾಗಿಯೇ ಲೋಕಪ್ರಸಿದ್ಧನಾಗುವನು' ಎಂದು ಆಶರೀರವಾಣಿಯಯಿತು. ಮಗುವಿಗೆ ಯುಧಿಷ್ಠಿರ ಎಂದು ಹೆಸರಿಟ್ಟರು. ಒಂದು ವರ್ಷ ಕಳೆದ ಮೇಲೆ ಪಾಂಡುವು ``ಋಜುತ್ವವು ಮಹಾಬಲದಿಂದ ಮೇಳೈಸಿದ್ದೇ ಆದರೆ, ಅದರ ಎದುರು ಯಾರು ನಿಲ್ಲಲಾರರು. ಆದ್ದರಿಂದ ದೇವತೆಗಳಲೆಲ್ಲಾ ಅತ್ಯಂತ ಶಕ್ತಿವಂತನಾದ ವಾಯುವಿನಿಂದ ಇನ್ನೊಂದು ಮಗುವನ್ನು ಹೆತ್ತಿಕೊಡು" ಎಂದು ಕುಂತಿಯನ್ನು ಕೇಳಿದನು. ``ಹಾಗೇ ಆಗಲಿ" ಎಂದಳು ಕುಂತಿ. ಹಾಗೆ ವಾಯುವಿನ ನೆರವಿನಿಂದ ಹುಟ್ಟಿದವನು ಭೀಮಸೇನ. ಈ ಮಗು ಅತ್ಯಂತ ಬಲಶಾಲಿಯೂ ಅತ್ಯಂತ ಹೃದಯವಂತನೂ ಆಗುತ್ತಾನೆ" ಎಂದು ಆಗ ಅಶರೀರವಾಣಿಯಾಯಿತು.

ಇಬ್ಬರು ಮಕ್ಕಳಾದರೂ ಪಾಂಡುವಿಗೆ ತೃಪ್ತಿಯಿಲ್ಲವಾಯಿತು. ಇನ್ನೂ ಒಬ್ಬ ಮಗನಿಗಾಗಿ ಕುಂತಿಯನ್ನು ಕೇಳಿದನು. ``ಇಂದ್ರನನ್ನು ಕರೆ. ಸ್ವರ್ಗಾಧಿಪತಿಯಿಂದ ಒಬ್ಬ ಮಗ ಹುಟ್ಟಿದರೆ, ನನ್ನ ಕನಸೆಲ್ಲವೂ ನನಸಾದಂತೆಯೇ. ಇಂದ್ರನಿಂದ ಹುಟ್ಟಿದ ಮಗನು ವಿವೇಕಿಯೂ ಅಸಾಮಾನ್ಯ ಶೂರನೂ ಆಗಿರುವನು. ಅವನನ್ನು ಸೋಲಿಸಲು ಯಾರಿಗೂ ಸಾಧ್ಯವಾಗದು. ನೀನು ಲೋಕೈಕವೀರನ ತಾಯಿಯೆನಿಸಿಕೊಳ್ಳುವೆ" ಎಂದನು. ಕುಂತಿಯೂ ಹಾಗೆಯೇ ಮಾಡಿದಳು. ಈ ಬಾರಿ ಅಶರೀರವಾಣಿಯು, ``ಈ ಮಗುವು ಪಾಂಡುವಿಗೆ ಅವಿನಾಶಿಯಾದ ಕೀರ್ತಿಯನ್ನು ತಂದುಕೊಡುವುದು. ಇವನು ಇಡೀ ಪ್ರಪಂಚವನ್ನೇ ಜಯಿಸುವನು. ಇವನಂಥವರು ಇನ್ನಾರೂ ಇರಲಾರರು" ಎಂದಿತು. ಇಂದ್ರನು ಪಾಂಡುವಿನ ಮುಂದೆ ಪ್ರತ್ಯಕ್ಷನಾಗಿ, ``ಈ ಮಗನು ಲೋಕಗಳೆಲ್ಲವನ್ನೂ ಜಯಿಸುವನು. ಇವನ ನೆರವಿನಿಂದ ಯುಧಿಷ್ಠರನು ರಾಜಸೂಯ ಅಶ್ವಮೇಧ ಯಾಗಗಳನ್ನು ಮಾಡುವನು. ಇವನು ವಿಷ್ಣುವಿನ ಅರ್ಧಭಾಗವೆನಿಸಿದ ನರನು. ವಸುದೇವ ದೇವಕಿಯರ ಮಗನಾದ ಕೃಷ್ಣನು ಇನ್ನರ್ಧವಾದ ನಾರಾಯಣನು ಈ ಇಬ್ಬರಿಂದಾಗಿ ಭೂಮಿಯು ಸಮಸ್ತ ಪಾಪಗಳೆಂಬ ವಿಷದಿಂದ ಮುಕ್ತಳಾಗುವಳು" ಎಂದು ಅವನನ್ನು ಅಭಿನಂದಿಸಿದನು. ಈ ಮಗುವಿಗೆ ಅರ್ಜುನ ಎಂದು ನಾಮಕರಣವಾಯಿತು.

ಹಣದ ಹಪಹಪಕ್ಕಿಂತಲೂ ಬಲವಾದ ಇನ್ನೊಂದು ಲೋಭವೆಂದರೆ ಮಕ್ಕಳ ಮೇಲಣ ಆಸೆ. ಮೂರು ಮಕ್ಕಳ ತಂದೆಯೆನಿಸಿಕೊಡರೂ ಪಾಂಡುವಿಗೆ ಮಕ್ಕಳು ಬೇಕೆಂಬ ಆಸೆ ತೀರಲಿಲ್ಲ. ಇನ್ನೂ ಒಂದು ಮಗನನ್ನೂ ಕೊಡುವಂತೆ ಕುಂತಿಯನ್ನು ಕೇಳಿದನು. ಕುಂತಿಯು,``ಯಾವುದೇ ಆಪದ್ಧರ್ಮವನ್ನಾದರೂ ಮೂರಕ್ಕಿಂತ ಹೆಚ್ಚು ಬಾರಿ ಆಚರಿಸಿದರೆ ಧರ್ಮಲೋಪವಾಗುತ್ತದೆ. ನಾನು ಅಧರ್ಮದ ಹಾದಿಯನ್ನು ಹಿಡಿಯಲಾರೆ" ಎಂದಳು. ಅದಕ್ಕೆ ಪಾಂಡುವು, ``ನೀನೆನ್ನುವುದು ಸರಿ. ಆದರೆ ಮಾದ್ರಿಯನ್ನು ಕುರಿತು ಯೋಚಿಸು. ಅವಳಿಗೆ ಮಕ್ಕಳಿಲ್ಲ. ನೀನು ಅವಳಿಗೆ ಮಂತ್ರೋಪದೇಶ ಮಾಡಿ ಒಂದು ಮಗುವಾಗುವಂತೆ ಮಾಡಲಾರೆಯ?" ಎಂದು ಕೇಳಿದನು. ಸರಿ ಎಂದು ಕುಂತಿಯು ಮಾದ್ರಿಗೆ ದೂವಾರ್ಸರು ಕೊಟ್ಟಿದ್ದ ಮಂತ್ರವನ್ನು ಉಪದೇಶಿಸಿದಳು. ಮಾದ್ರಿಯು ಅದನ್ನು ಬಳಸಿ ಅಶ್ವಿನೀದೇವತೆಗಳನ್ನು ಕರೆದು ಅವಳಿಮಕ್ಕಳನ್ನು ಪಡೆದಳು. ಮಾದ್ರಿಯ ಮಕ್ಕಳು ಕುಂತಿಯ ಮೂರುಮಕ್ಕಳಿಗಿಂತಲೂ ಸುಂದರವಾಗಿದ್ದರು. ಅಶರೀರ ವಾಣಿಯು, ``ಇವರಿಬ್ಬರು ಲೋಕದ ಅತ್ಯಂತ ಸುಂದರ ಪುರುಷರೆಂದು ಪ್ರಖ್ಯಾತರಾಗುವರು. ಅವರ ಒಳ್ಳೆಯ ಗುಣಗಳಿಂದಾಗಿ, ಭಕ್ತಿ ವಿವೇಕ ಧೈರ್ಯಗಳಿಂದಾಗಿ ಎಲ್ಲರಿಗೂ ಪ್ರಿಯರಾಗುವರು" ಎಂದು ಮತ್ತೊಮ್ಮೆ ಉದ್ಘೋಷಿಸಿತು. ಮಾದ್ರಿಯ ಮಕ್ಕಳಿಗೆ ನಕುಲ ಸಹದೇವರೆಂದು ನಾಮಕರಣಮಾಡಲಾಯಿತು.

ಶತಶೃಂಗ ವನದಲಿದ್ದ ಋಷಿಗಳು ನಾಮಕರಣ ಸಮಾರಂಭದಲ್ಲಿ ಭಾಗವಹಿಸಿದ್ದಲ್ಲದೆ, ರಾಜಕುಮಾರರ ಪ್ರಾಥಮಿಕ ವಿದ್ಯಾಭ್ಯಾಸದ ಜವಾಬ್ದಾರಿಯನ್ನೂ ಹೊತ್ತರು. ಋಷಿಗಳೆಲ್ಲರ ಮಕ್ಕಳಂತೆ ಈ ಐವರೂ ಬೆಳೆದರು. ವರ್ಷಗಳ ಹಿಂದೆ, ಪಾಂಡುವು ಶಾಪಗ್ರಸ್ತನಾಗಿ ಕಾಡಿಗೆ ಹೋದಾಗ ಕುಂತಿಯ ಸೋದರ ಸಂಬಂಧಿಗಳಾದ ವೃಷ್ಣಿಗಳಿಗೆ ಆಗಿದ್ದ ಬೇಸರವು, ಈಗ ಪಾಂಡುವು ಐವರು ಮಕ್ಕಳ ತಂದೆಯಾದನೆಂದು ಕೇಳಿದಾಗ ಪರಿಹಾರವಾಗಿ ಸಂತೋಷವಾಯಿತು. ಕುಲ ಪುರೋಹಿತ ಕಶ್ಯಪನೊಂದಿಗೆ ಬಗೆಬಗೆಯ ಉಡುಗೊರೆಗಳನ್ನೂ ಮಕ್ಕಳಿಗಾಗಿ ಕೊಟ್ಟು ಕಳುಹಿಸಿದರು. ಬಂದಿದ್ದ ಕಶ್ಯಪನ ಪೌರೋಹಿತ್ಯದಲ್ಲಿ ಐವರು ಮಕ್ಕಳಿಗೂ ಉಪನಯನ ಸಂಸ್ಕಾರವೂ ನೆರವೇರಿತು.

ಅದೇ ಶತಶೃಂಗ ವನದಲ್ಲಿ ಶರ್ಯಾತಿಯ ಮಗನಾದ ಶುಕನೆಂಬ ಋಷಿಯು ತಪಸ್ಸು ಮಾಡಿಕೊಂಡಿದ್ದನು. ಯುದ್ಧವಿದ್ಯೆಗಳಲ್ಲಿ ನಿಪುಣನಾದ ಅವನು ಪಾಂಡು ಪುತ್ರರಿಗೆ ಅಸ್ತ್ರಪ್ರಯೋಗಗಳನ್ನು ಕಲಿಸಲು ಮುಂದೆ ಬಂದನು. ಎಳೆಯ ವಯಸ್ಸಿನಲ್ಲಿ ಮಕ್ಕಳು ಸುಲಭವಾಗಿ ವಿದ್ಯೆಯನ್ನು ಕಲಿಯುವರು. ಭೀಮನು ಅನಾಯಾಸವಾಗಿ ಗದೆಯಲ್ಲಿಯೂ, ಯುಧಿಷ್ಠರನು ಈಟಿಯಲ್ಲಿಯೂ, ನಕುಲ ಸಹದೇರುಗಳು ಖಡ್ಗದಲ್ಲಿಯೂ, ಅರ್ಜುನನು ಬಿಲ್ವಿದ್ಯೆಯಲ್ಲಿಯೂ ಪರಿಣತಿ ಹೊಂದಿದರು. ಅರ್ಜುನನು ಎರಡು ಕೈಗಳಿಂದಲೂ ಬಾಣ ಪ್ರಯೋಗ ಮಾಡಬಲ್ಲವನಾಗಿದ್ದನು. ಇವರ ಕುಶಲತೆಯಿಂದ ಸಂತೋಷಗೊಡ ಶುಕನು, ಅರ್ಜುನನಿಗೆ ತನ್ನ ಬಿಲ್ಲನ್ನೇ ಕಾಣಿಕೆಯಾಗಿ ಕೊಟ್ಟು, ನೀನು ನನ್ನ ಸಮಾನನಾಗಿರುವೆ ಎಂದು ಪ್ರಶಸಿಸಿದನು.

ಭೀಮನು ಹುಟ್ಟಿದ ದಿನವೇ ಇತ್ತ ಹಸ್ತಿನಾಪುರದಲ್ಲಿ ಗಾಂಧಾರಿಯ ಹಿರಿಯ ಮಗ ಹುಟ್ಟಿದನು. ರಾತ್ರಿ ಹುಟ್ಟಿದ ಅವನಿಗೆ ದುರ್ಯೋಧನನೆಂದು ಹೆಸರಿಟ್ಟರು. ಧೃತರಾಷ್ಟ್ರನಿಗೆ ತುಂಬ ಸಂತೋಷವಾಯಿತು. ಅವನು ವಿದುರನನ್ನು ಕರೆದು, ``ಪಾಂಡುವಿಗೆ ಈಗಾಗಲೇ ಪುತ್ರೋತ್ಸವವಾಯಿತೆಂದು ಕೇಳಿದೆ. ಅವನು ನನ್ನ ಮಗನಿಗಿಂತ ಒಂದು ವರ್ಷ ಹಿರಿಯ. ತನ್ನ ಹಿರಿತನದಿಂದಾಗಿ ಅವನೇ ಪೌರವ ಸಿಂಹಾಸನಕ್ಕೆ ಮುಂದೆ ಹಕ್ಕುದಾರನಾಗುವನೆ? ಇದಲ್ಲದೆ ನನ್ನ ಮಗ ಹುಟ್ಟಿದೊಡನೆ ಆಕಾರಣವಾಗಿ ಬಗೆಬಗೆಯ ದುಶ್ಶಕುನಗಳು ಜರುಗಿರುವುವು. ಇವುಗಳಿಂದಾಗಿ ನನ್ನ ಮನಸ್ಸು ದುಗುಡದಿಂದ ತುಂಬಿ ಹೋಗಿದೆ. ಏನೆನ್ನುತ್ತಿ?" ಎಂದು ಕೇಳಿದನು. ವಿದುರನು ಅವನತಮುಖನಾಗಿ, ``ಸೋದರ ದುಶ್ಯಕುನಗಳು ನಿನ್ನ ಮಗನು ಇಡೀ ಪ್ರಪಂಚದ ನಾಶಕ್ಕೆ ಕಾರಣನಾಗಲಿರುವನು ಎಂಬುದನ್ನು ಸೂಚಿಸುತ್ತಿರುವುವು" ಎಂದು ಅಭಿಪ್ರಾಯಪಟ್ಟನು. ಇದನ್ನು ತಪ್ಪಿಸಬಹುದಾದ ಉಪಾಯವೇನಾದರೂ ಇದೆಯೇ ಎಂದು ಧೃತರಾಷ್ಟ್ರನು ಕೇಳಲು, ``ಈ ಕೇಡನ್ನು ತಪ್ಪಿಸಲು ಒಂದೇ ಒಂದು ಉಪಾಯವಿದೆ. ಮಾನವರೆಲ್ಲರ ಹಿತಕ್ಕಾಗಿ ನೀನು ಈ ಮಗುವನ್ನು ತ್ಯಾಗ ಮಾಡಬೇಕು, ಒಂದು ಕುಟುಂಬದ ಹಿತಕ್ಕಾಗಿ ಒಬ್ಬನನ್ನು, ಗ್ರಾಮದ ಹಿತಕ್ಕಾಗಿ ಒಂದು ಕುಟುಂಬವನ್ನು, ಸಮುದಾಯದ ಹಿತಕ್ಕಾಗಿ ಒಂದು ಗ್ರಾಮವನ್ನು, ಕೊನೆಗೆ ತನ್ನ ಹಿತಕ್ಕಾಗಿ ಲೋಕದ ಸಮಸ್ತವನ್ನೂ ಬಿಟ್ಟುಬಿಡಬೇಕೆಂದು ತಿಳಿದವರು ಹೇಳುವರು. ಲೋಕವಿನಾಶಕ್ಕಾಗಿ ಹುಟ್ತಿರುವ ಈ ಮಗುವನ್ನು ನೀನು ತೊರೆದುಬಿಡು ಎಂಬುದೆ ನನ್ನ ಸಲಹೆ" ಎಂದನು. ಇದಕ್ಕೆ ಸಮ್ಮತಿಸಲು ಧೃತರಾಷ್ಟ್ರನಿಗೆ ಸಾಶ್ಯವಾಗದಾಯಿತು. ಕಾಲಾನುಕ್ರಮದಲ್ಲಿ ಅವನಿಗೆ ಇನ್ನೂ ನೂರು ಜನ ಮಕ್ಕಳಾದರು. ಕೊನೆಯಲ್ಲಿ ದುಶ್ಯಲೆ ಎಂಬ ಮಗಳು ಹುಟ್ಟಿದಳು. ಇಷ್ಟೊಂದು ಜನ ಮಕ್ಕಳ ತಂದೆಯಾದ ಸಂತೋಷ ಸಂಭ್ರಮದಲ್ಲಿ ದುಶ್ಯಕುನಗಳ ಪರಿಣಾಮವು ಎಲ್ಲೋ ಅಡಗಿಹೋಯಿತು.* * * * ಪಾಂಡುವು ತನ್ನ ಮಕ್ಕಳೊಂದಿಗೆ ಹದಿನೈದು ವರ್ಷಗಳನ್ನು ಆನಂದದಿಂದ ಕಳೆದನು. ಕಾಲ ಚಕ್ರವು ಓಡುತ್ತಿತ್ತು. ಒಂದು ದಿನ ಕುಂತಿಯು ಮಕ್ಕಳೊಡನೆ ಪಕ್ಕದ ಆಶ್ರಮಕ್ಕೆ ಹೋಗಿದ್ದಳು. ಪಾಂಡುವು ಒಬ್ಬನೇ ಇದ್ದನು. ವಸಂತಕಾಲವಾದ್ದರಿಂದ ಮರಗಿಡಗಳಿಲ್ಲ ಹೂಬಿಟ್ಟು ಸುಂದರವಾಗಿ ಶೋಭಿಸುತ್ತಿದ್ದವು. ಗಾಳಿಯು ಹೂಗಳು ಸುಗಂಧವನ್ನು ಹೊತ್ತು ಆಹ್ಲಾದಮಯವಾಗಿದ್ದಿತು. ಶತಶೃಂಗವನವು ಒಟ್ಟಿನಲ್ಲಿ ಆ ಸಂಜೆ ದೇವಲೋಕದಂತೆ ಮನೋರವಾಗಿ ಪ್ರೇಮಿಗಳ ವಿಹಾರಕ್ಕೆ ಹೇಳಿ ಮಾಡಿಸಿದಂತಿದ್ದಿತು. ಆ ಸ್ವರ್ಗೀಯ ವಾತಾವರಣದಲ್ಲಿ ಪಾಂಡುವು ಕಡುಕೆಂಪು ರೇಷ್ಮೆಯಲ್ಲಿ ಸುರಸುಂದರಿಯಾಗಿ ಶೊಭಿಸುತ್ತ ಹೂ ಕೊಯ್ಯುತ್ತಿದ್ದ ಮಾದ್ರಿಯನ್ನು ನೋಡಿದನು. ಅವಳೊಂದಿಗೆ ವಿಹರಿಸಬೇಕೆಂಬ ಆಸೆಯು ಅವನ ಮನಸ್ಸಿನಲ್ಲಿ ಹುಟ್ಟಿಕೊಂಡಿತು. ಅವನು ಸರ್ವಸ್ವವನ್ನೂ ತ್ಯಾಗಮಾಡಿ ಋಷಿಜೀವನವನ್ನು ಕೈಕೊಂಡು ಹದಿನೆಂಟು ವರ್ಷಗಳಾಗಿದ್ದರೂ, ಮನಸ್ಸಿನಲ್ಲಿ ಕಾಳ್ಕಿಚ್ಚಿನಂತೆ ಭುಗಿಲೆದ್ದ ಅಸೆಯನ್ನು ಅ ಕ್ಷಣದಲ್ಲಿ ತಡೆಯಲಾರದಾದನು. ಕಿಂದಮ ಋಷಿಯ ಶಾಪವು ಮರೆತೇ ಹೋಯಿತು. ಭಯಭೀತಳಾದ ಮಾದ್ರಿಯು ತನ್ನಿಂದಾಗುವಷ್ಟೂ ಅವನನ್ನು ತಡೆಯಲು ಪ್ರಯತ್ನಿಸಿದಳು. ಕುಂತಿಯಿದ್ದಿದ್ದರೆ ಅವಳು ಅವನನ್ನು ಅಪಾಯದಿಂದ ಪಾರುಮಾಡುತ್ತಿದ್ದಳು; ಆದರೆ ಅವಳು ಅಲ್ಲಿರಲಿಲ್ಲ. ಮಾದ್ರಿಯೂ ಸಾಧ್ಯವಿದ್ದಷ್ಟೂ ಅಲ್ಲಿಂದಿಲ್ಲಿಗೆ ಪಾಂಡುವಿನಿಂದ ತಪ್ಪಿಸಿಕೊಳ್ಳಲು ಯತ್ನಿಸಿದರೂ, ಆ ಮಹಾವೀರನನ್ನು ನಿವಾರಿಸಲು ಅವಳಿಂದಲಾಗಲಿಲ್ಲ. ಅವಳು ಅವನ ಕೈಗೆ ಸಿಕ್ಕಿಬಿದ್ದೊಡನೆ ಪಾಂಡುವು ಸತ್ತು ನೆಲಕ್ಕೊರಗಿದನು.

ಪಾಂಡುವಿನ ಬಾಹುಗಳಲ್ಲೇ ಇನ್ನೂ ಬಂಧಿಯಾಗಿ ಉಳಿದಿದ್ದ ಮಾದ್ರಿಯ ಆರ್ತಧ್ವನಿ ಪಕ್ಕದ ಆಶ್ರಮದಲಿದ್ದ ಕುಂತಿಗೆ ಕೇಳಿಸಿ ಅವಳು ಓಡಿಬಂದಳು. ``ಆಗಬಾರದ್ದು ಆಗಿಹೋಗಿದೆ ಅಕ್ಕಾ. ಮಕ್ಕಳನ್ನು ಅಲ್ಲೆ ಬಿಟ್ಟು ನೀನೊಬ್ಬಳೇ ಬಾ" ಎಂದು ಕೂಗಿದಳು ಮಾದ್ರಿ. ಸತ್ತುಬಿದ್ದಿರುವ ಗಂಡನನ್ನು ನೋಡಿದ ಕುಂತಿಯ ಸಿಟ್ಟು ನಿರಪರಾಧಿಯಾಗಿದ್ದ ಬಡಪಾಯಿ ಮಾದ್ರಿ ಮೇಲೆ ಹರಿಯಿತು. ``ಋಷಿಶಾಪವನ್ನು ತಿಳಿದೂ ಇದೇನು ಮಾಡಿದೆ ಮಾದ್ರಿ? ನೀನಾದರೂ ಅವನಿಗೆ ನೆನಪಿಸಬಾರದಾಗಿತ್ತೆ?" ಮಾದ್ರಿ ನಡೆದುದನ್ನೆಲ್ಲವನ್ನೂ ಹೇಳಿ ಅತ್ತಳು. ವಿಧಿಗಿಂತ ಬಲತ್ತರವಾದುದು ಇನ್ನಾವುದೂ ಇಲ್ಲವೆಂಬುದು ಕುಂತಿಗೆ ಮನವರಿಕೆಯಾಯಿತು. ದುಃಖದಿಂದ ಶರೀರವೇ ಉರಿದುಹೋಗುತ್ತಿರುವಂತೆ ಭಾಸವಾಯಿತು; ಮರುಕ್ಷಣದಲ್ಲಿ ಕುಂತಿಯೂ ಮೂರ್ಛಿತಳಾಗಿ ನೆಲಕ್ಕೊರಗಿದಳು. ಸತ್ತ ದೊರೆಯ ಶರೀರವನ್ನು ಮೇಲೆತ್ತಿ, ಮಾಡಬೇಕಾದ ಅಲಂಕಾರಗಳನ್ನು ಮಾಡಿ, ಮಾದ್ರಿಯು ಅದನ್ನು ಹಾಸಿಗೆಯ ಮೇಲೆ ಮಲಗಿಸಿದಳು. ಕುಂತಿಗೆ ಶೈತ್ಯೋಪಚಾರಮಾಡಿ ಎಬ್ಬಿಸಿದಳು. ಕುಂತಿಯು ಪಾಂಡುವಿನ ಶಾಂತ, ಸುಂದರ ಮುಖಾರವಿಂದವನ್ನು ನೋಡುತ್ತ ಶರೀರದ ಮೇಲೆ ಬಿದ್ದು ಬಿದ್ದು ರೋದಿಸತೊಡಗಿದಳು.

ಅಷ್ಟರಲ್ಲಿ ಶತಶೃಂಗದ ಋಷಿಗಳೆಲ್ಲರೂ ಅಲ್ಲಿ ಬಂದು ನೆರೆದಿದ್ದರು. ದೃಶ್ಯವನ್ನು ನೋಡಿದ ಎಲ್ಲರ ಹೃದಯಗಳಲ್ಲೂ ಅಯ್ಯೋ, ಹೀಗಾಗಬಾರದಿತ್ತು ಎಂಬ ಅನುಕಂಪ ತುಂಬಿಕೊಡಿತು. ಮಕ್ಕಳೈವರು ನಡೆದ ಬೀಭತ್ಸದಿಂದ ಗರಬಡಿದವರಂತೆ ನಿಂತಿದ್ದರು. ಯುಧಿಷ್ಠರನು ತಮ್ಮ ದುರ್ದೈವಕ್ಕಾಗಿ ಕಣೀರಿಡುತ್ತಾ, ``ರಾಜಪುತ್ರರಾಗಿ ಹುಟ್ಟಿಯೂ ನಾವೀಗ ಅನಾಥರಾದೆವು. ವಿಧಿಯ ಪರಿಯನ್ನು ಕಂಡವರಾರು? ನಿನ್ನ ಮಾರ್ಗದರ್ಶನವಿಲ್ಲದೆ ಚಿಕ್ಕವರಾದ ನಾವು ಹೇಗೆತಾನೆ ಈ ಘೋರ ಪಾಪಗಳಿಂದ ತುಂಬಿದ ಪ್ರಪಂಚದಲ್ಲಿ ಬಾಳಬಲ್ಲೆವು? ನಮಗಿನ್ನಾರು ಸ್ನೇಹಿತರು? ಇಂದಿನಿಂದ ನಮಗಾರೂ ರಕ್ಷಕರೇ ಇಲ್ಲವಾಯಿತು" ಎಂದು ವಿಲಾಪಿಸಿದನು. ತಮ್ಮ ತಂದೆಯ ಸುತ್ತಲೂ ಕಣ್ಣೀರಿಡುತ್ತ ನಿಂತಿದ್ದ ಮಕ್ಕಳನ್ನು ಋಷಿಗಳಿಲ್ಲ ಸೇರಿ ಸಮಾಧಾನ ಮಾಡಲೆತ್ನಿಸಿದರು. ಕುಂತಿ ಮಾದ್ರಿ ಇಬ್ಬರೂ ಪತಿಯೊಂದಿಗೆ ಚಿತೆಯನ್ನೇರಬಯಸಿದಾಗ ಋಷಿಗಳು, ``ಮಕ್ಕಳೊಡನಿದ್ದು ಅವರನ್ನು ಬೆಳೆಸಬೇಕಾದದ್ದು ತಾಯಂದಿರಾದ ನಿಮ್ಮಿಬ್ಬರ ಕರ್ತವ್ಯ. ಅವರೀಗ ದುಃಖ ನಿರಾಸೆಗಳ ಆಳದಲ್ಲಿ ಮುಳುಗಿರುವರು. ನೀವೂ ಸತ್ತು ಅವರನ್ನು ಸಂಪೂರ್ಣವಾಗಿ ಅನಾಥರನ್ನಾಗಿ ಮಾಡುವಿರಾ? ನಾವು ನಿಮ್ಮೆಲ್ಲರನ್ನು ಹಸ್ತಿನಾಪುರಕ್ಕೆ ಕರೆದೊಯ್ಯುತ್ತೇವೆ. ಅಂಧನೃಪ ಧೃತರಾಷ್ಟ್ರನು ಈ ಮಕ್ಕಳ ಮೇಲೆ ಎಷ್ಟು ಪ್ರೀತಿಯುಳ್ಳವನಾಗಿರುವನೋ ತಿಳಿಯದು. ಭವಿಷ್ಯದಲ್ಲಿ ರಾಜರಾಗಲಿರುವ ಈ ಮಕ್ಕಳನ್ನು ಎಡೆಬಿಡದೆ ರಕ್ಷಿಸಿ ಕಾಪಾಡಬೇಕಾದುದು ತಾಯಂದಿರಾದ ನಿಮ್ಮ ಧರ್ಮ" ಎಂದರು.

ಋಷಿಗಳ ಬೊಧನೆಯು ಮಾದ್ರಿಯ ಮೇಲೆ ಏನೂ ಪರಿಣಾಮ ಮಾಡಲಿಲ್ಲ. ತನ್ನಿಂದಾಗಿಯೇ ಸಾಯಬೇಕಾಗಿಬಂದ ಪತಿಯೊದಿಗೆ ತಾನೂ ಸಾಯಬೇಕಾದ್ದೇ ಸರಿ ಎಂಬ ವಾದ ಅವಳದ್ದು . ``ನನ್ನನ್ನು ಅಪೇಕ್ಷಿಸಿದ ಅವನು ನನ್ನಿಂದ ತೃಪ್ತಿಹೊಂದುವ ಮೊದಲೇ ಪ್ರಾಣಬಿಟ್ಟ. ನಾನು ಅವನ ಜೊತೆಗೇ ನಡೆದು ಅವನೊಡನಿರಬೇಕಾದುದೇ ನ್ಯಾಯ. ನಾನೀಗ ಸಾಯಲೇಬೇಕು" ಎಂದು ಹೃದಯದ ವೇದನೆಯನ್ನು ತಾಳಲಾರದೆ ವಿಲಾಪಿಸುತಿದ್ದ ಅವಳು ಕುಂತಿಗೆ, ``ಅಕ್ಕ, ನೀನು ನನಗಿಂತ ವಿವೇಕಿ. ಮಕ್ಕಳನ್ನು ನಿನ್ನಷ್ಟು ಚೆನ್ನಾಗಿ ನಾನು ನೋಡಿಕೊಳ್ಳಲಾರೆ. ನಿನ್ನ ಕರುಣೆಯಿಂದ ನನಗೆ ಹುಟ್ಟಿದ ಈ ಇಬ್ಬರೂ ಸಹ ನಿನ್ನ ಮಕ್ಕಳೇ. ಈ ಐವರಿಗೂ ನೀನೇ ತಾಯಿ. ನೀನು ಮಾತ್ರ ಇವರನ್ನು ರಕ್ಷಿಸಬಲ್ಲೆ. ಬಂಧುಗಳಾದ ವೃಷ್ಣಿಗಳು ನಿನ್ನ ನೆರವಿಗೆ ಬರುವರು. ನೀನು ನನ್ನ ಈ ಕೊನೆಯ ಆಸೆಯನ್ನು ನೆರವೇರಿಸಿಕೊಡಬೇಕು. ಪತಿಯಿಲ್ಲದೆ ಈ ಪ್ರಪಂಚದಲ್ಲಿ ಕ್ಷಣಮಾತ್ರವೂ ನಾನು ಬದುಕಿರಲಾರೆ. ಅವನೊದಿಗೆ ನಾನು ಚಿತೆಯೇರುತ್ತೇನೆ. ನನಗಾಗಿ ನೀನು ಈ ತ್ಯಾಗವನ್ನು ಮಾಡಲು ಒಪ್ಪಬೇಕು. ಮಕ್ಕಳಿಗಾಗಿ ನೀನು ಬದುಕಬೇಕು. ಅವರು ರಾಜರಾದುದನ್ನು ನೀನು ನೋಡುವೆ. ಜೀವನದಲ್ಲಿ ಸಫಲತೆಯನ್ನು ಕಾಣುವೆ. ನಿನ್ನನ್ನು ಬೇಡಿಕೊಳ್ಳುತ್ತೇನೆ. ನನ್ನ ಈ ಅಭಿಲಾಷೆಯನ್ನು ನಡೆಸಿಕೊಡು" ಎಂದಳು.

ಕುಂತಿ ಒಪ್ಪಿದಳು. ಋಷಿಗಳೆಲ್ಲರೂ ಅದೇ ಸರಿ ಎಂದರು. ಮಾದ್ರಿ ಮಕ್ಕಳನ್ನು ಹತ್ತಿರಕ್ಕೆ ಕರೆದು, ನೋವಿನಿಂದ, ಆದರೆ ಪ್ರೀತಿಯಿಂದ ಹೇಳಿದಳು: ``ಕುಂತಿಯೇ ನಿಮ್ಮ ತಾಯಿ. ನಾನು ಕೇವಲ ದಾದಿಯಾಗಿದ್ದೆ. ನೀವೆಲ್ಲ ಕುಂತಿಯ ಮಕ್ಕಳು, ಕೌಂತೇಯರು. ಯುಧಿಷ್ಠಿರನು ನಿಮಗೆ ತಂದೆಯಿದ್ದಂತೆ. ಅವನನ್ನು ಯಾವ ಕಾರಣಕ್ಕೂ ನೋಯಿಸಬೇಡಿ. ನಾನು ನಿಮ್ಮನ್ನು ಅವನ ಕೈಯಲ್ಲಿ ಇಟ್ಟುಹೋಗುತ್ತಿರುವೆ. ಅಪ್ಪಾ, ಯುಧಿಷ್ಠಿರ, ನೀನು ಈ ಭೂಮಂಡಲಕ್ಕೆ ದೊರೆಯಾಗುವೆ. ನಾನು ಅದನ್ನು ಮೇಲಿನಿಂದ ನೋಡುತ್ತ ನಿನ್ನನ್ನು ಹರಸುವೆ. "

ಮಾದ್ರಿ ಎಲ್ಲರನ್ನೂ ಬೀಳ್ಕೊಂಡಳು. ಕುಂತಿಯ ಪಾದಗಳಿಗೆ ನಮಸ್ಕರಿಸಿದಳು. ಕುಂತಿಯು ಕಣ್ಣೀರಿಡುತ್ತ ``ತಂಗಿ, ಪತಿಯೊಂದಿಗೆ ಸಹಗಮನಕ್ಕಾಗಿ ನಿನಗೆ ಅನುಜ್ಞೆ ಕೊಡುತ್ತಿದ್ದೇನೆ. ಸ್ವರ್ಗದಲ್ಲಿ ನೀನು ಅವನನ್ನು ಸೇರಿ ಅವನೊಂದಿಗೆ ಚಿರಕಾಲ ಬಾಳಲಿರುವೆ. ನಿನ್ನ ಹೆಸರನ್ನು ಲೋಕವು ಪ್ರೀತಿಯಿಂದ ಸ್ಮರಿಸುವುದು. ಹೋಗಿಬಾ. ನಿನಗೆ ಶಾಂತಿಯಿರಲಿ" ಎಂದು ಹರಸಿದಳು. ಮಹಾಸಂತೋಷದಿಂದ ಮಾದ್ರಿ ಚಿತೆಯನ್ನೇರಿದಳು. ಕಣ್ಣೀರಿಡುತ್ತ ಹಿರಿಯ ಮಗನಾದ ಯುಧಿಷ್ಠಿರನು ಚಿತೆಗೆ ಬೆಂಕಿಯಿಟ್ಟನು.

ಎಲ್ಲವೂ ಮುಗಿಯಿತು. ಶತಶೃಂಗ ವನದ ನಿವಾಸಿಗಳೆಲ್ಲರೂ ಸಭೆ ಸೇರಿ ಮುಂದೆ ಏನು ಮಾಡಬೇಕೆಂದು ಚರ್ಚಿಸಿದರು. ಕುಂತಿಯನ್ನೂ ಪಾಂಡುಮಹಾರಾಜನ ಐವರು ಮಕ್ಕಳನ್ನೂ ಕರೆದುಕೊಂಡು ಹೋಗಿ ಹಸ್ತಿನಾಪುರಕ್ಕೆ ಬಿಟ್ಟುಬರಬೇಕೆಂದು ನಿರ್ಧರಿಸಿದರು. ಅಲ್ಲಿ ಅವರನ್ನು ಭೀಷ್ಮನಿಗೂ ಧೃತರಾಷ್ಟ್ರನಿಗೂ ಒಪ್ಪಿಸಿ ಬರುವುದೆಂದು ತೀರ್ಮಾನಿಸಿದರು. ಪಾಂಡುವಿನ ಮರಣಾನಂತರ ರಾಜಕುಮಾರರು ಬೆಳೆಯಬೇಕಾದ ಸ್ಥಳ, ಅವರ ನಿಜವಾದ ಮನೆ ಅದೇ ಅಲ್ಲವೆ? ಕುಂತಿಯು ತಾನು ಅಷ್ಟು ವರ್ಷಗಳು ಸುಖವಾಗಿ ಪಾಂಡುವಿನೊಂದಿಗೂ ಮಾದ್ರಿಯೊಂದಿಗೂ ಸಂತೋಷವಾಗಿ ಕಾಲ ಕಳೆದ ಆ ಶತಶೃಂಗ ವನಕ್ಕೆ ಕಂಬನಿ ತುಂಬಿ ವಿದಾಯ ಹೇಳಿದಳು. ಇನ್ನು ಹೊಸ ಬದುಕು ಆರಂಭವಾಗಬೇಕು. ಹಸ್ತಿನಾಪುರದಲ್ಲಿ ವಿಧಿಯು ಅವರಿಗಾಗಿ ಏನನ್ನು ಕಾದಿರಿಸಿರುವುದೋ ಬಲ್ಲವರಾರು? ಋಷಿಗಳೊಂದಿಗೆ ಎಲ್ಲರೂ ಆ ಸುಂದರ ನಗರಿಗೆ ಹೊರಟರು. ಅರಿಯದ ಭವಿಷ್ಯದೆಡೆಗೆ ಪಯಣವು ಆರಂಭವಾಯಿತು.

ಶತಶೃಂಗದ ಋಷಿಗಳು ಕುಂತಿಯನ್ನೂ ಪಂಚಪಾಂಡವರನ್ನೂ ಕರೆದುಕೊಂಡು ಹಸ್ತಿನಾಪುರಕ್ಕೆ ಬಂದರು. ಸುದ್ದಿ ತಿಳಿದ ಪುರಜನರು ಇವರನ್ನು ಎದುರುಗೊಳ್ಳಲು ನಗರದ ಪ್ರವೇಶದ್ವಾರದ ಬಳಿ ಬಂದು ನೆರೆದರು. ಆಗ ಅಲ್ಲಿಗೆ ಬಂದ ಧೃತರಾಷ್ಟ್ರ, ಭೀಷ್ಮ, ಶಂತುವಿನ ಸೋದರನಾದ ಬಾಹ್ಲೀಕ, ಅವನ ಮಗ ಸೋಮದತ್ತ, ವಿದುರ, ಸತ್ಯವತಿ, ಅಂಬಿಕೆ ಅಂಬಾಲಿಕೆಯರು, ಗಾಂಧಾರಿ ಮತ್ತಿತರರು, ದುಃಖದಿಂದ ಅಧೋವದನಳಾಗಿದ್ದ ಕುಂತಿಯನ್ನೂ, ಅನುಪಮ ಸೌಷ್ಠವದಿಂದಲೂ ರಾಜತೇಜಸ್ಸಿನಿಂದಲೂ ಬೆಳಗುತ್ತಿದ್ದ ಐವರು ಕುಮಾರರನ್ನೂ ನೋಡಿ ಆಶ್ಚರ್ಯಚಕಿತರಾದರು. ಋಷಿಗಳನ್ನು ಪೂಜಿಸಿ ಸತ್ಕರಿಸಿ ಅವರ ಯೋಗಕ್ಷೇಮವನ್ನು ವಿಚಾರಿಸಿದರು. ಋಷಿಗಳು ಕೌರವರನ್ನು ಕುರಿತು, ``ಪ್ರಾಪಂಚಿಕ ಸುಖಗಳನ್ನೆಲ್ಲ ತ್ಯಜಿಸಿದ ಪಾಂಡುವು, ಕುಂತಿ ಮಾದ್ರಿಯರೆಂಬ ತನ್ನ ಪತ್ನಿಯರೊಂದಿಗೆ ರಮಣೀಯವಾದ ಶತಶೃಂಗವನದಲ್ಲಿ ವಾಸಿಸುತಿದ್ದನೆಂಬುದು ನಿಮಗೇ ತಿಳಿದೇ ಇದೆ. ಅವನು ನಮಗೆಲ್ಲರಿಗೂ ಪ್ರೀತಿಪಾತ್ರನಾಗಿದ್ದನು. ಅಲ್ಲಿರುವಾಗ ಅವನಿಗೆ ಐದು ಜನ ಮಕ್ಕಳಾದರು. ಇವರಲ್ಲಿ ಯುಧಿಷ್ಠಿರ, ಭೀಮ, ಅರ್ಜುನ ಎಂಬ ಮೂವರನ್ನು ಕುಂತಿಯು ಕ್ರಮವಾಗಿ ಧರ್ಮ, ವಾಯು, ಇಂದ್ರರೆಂಬ ದೇವತೆಗಳ ಅನುಗ್ರಹದಿಂದ ಪಡೆದಳು; ನಕುಲ ಸಹದೇವರೆಂಬ ಇನ್ನಿಬ್ಬರನ್ನು ಮಾದ್ರಿಯು ಅಶ್ವಿನಿ ದೇವತೆಗಳಿಂದ ಪಡೆದಳು. ಯುಧಿಷ್ಠಿರನಿಗೆ ಹದಿನೈದು ವರ್ಷವಾಗುವ ಹೊತ್ತಿಗೆ ಬಾಲಕರಿಗೆಲ್ಲ ಉಪನಯನ ಮಾಡಿದರು. ಈಗ ಪಾಂಡುವು ಸ್ವರ್ಗಸ್ಥನಾಗಿ ಹದಿನೇಳು ದಿನಗಳು ಕಳೆದುವು. ಅವನ ಶವಸಂಸ್ಕಾರವನ್ನು ಮಾಡಿ ಮುಗಿಸಿರುವೆವು. ಮಾದ್ರಿಯೂ ಅವನ ಜೊತೆಗೆ ಸಹಗಮನವನ್ನು ಮಾಡಿರುವಳು. ಕುರುವಂಶದ ಭವಿಷ್ಯದ ಆಶೋತ್ತರಗಳಾದ ಈ ಐವರು ಕುಮಾರರನ್ನು ಅವರ ತಾಯಿ ಕುಂತಿಯೊಂದಿಗೆ ಕರೆತಂದಿರುವೆವು. ತಂದೆ ಇಲ್ಲದ ಈ ಮಕ್ಕಳನ್ನು ಸಾಕುವ ಬಾಧ್ಯತೆಯು ಈಗ ಭೀಷ್ಮ ಧೃತರಾಷ್ಟ್ರರಿಗೆ ಸೇರಿದ್ದು" ಎಂದು ತಿಳಿಸಿ ತಮ್ಮ ಪಾಡಿಗೆ ತಾವು ಹೊರಟುಹೋದರು.

ಸುದ್ದಿಯನ್ನು ಕೇಳಿದ ಇಡಿಯ ನಗರವೇ ದುಃಖತಪ್ತವಾಯಿತು. ಭೀಷ್ಮನಿಗೆ ಮಾತೇ ಹೊರಡದಂತಾಯಿತು. ಅನೇಕ ವರ್ಷಗಳ ಹಿಂದೆ ತಮ್ಮನ್ನೆಲ್ಲ ಬಿಟ್ಟು ಹೋಗಿದ್ದ ಪಾಂಡುವನ್ನು ಇನ್ನು ನೋಡಲು ಸಾಧ್ಯವಿಲ್ಲವೆಂಬುದು ಅವನಿಗೆ ಬಹು ನೋವಿನ ಸಂಗತಿಯಾಯಿತು. ತಮ್ಮನ ಸಾವು ಧೃತರಾಷ್ಟ್ರನಿಗೂ ತುಂಬ ದುಃಖವನ್ನುಂಟುಮಾಡಿತು. ಬಾಲ್ಯದಲ್ಲಿ ತಾನು ಕುರುಡನೆಂಬುದನ್ನೇ ಮರೆಯಿಸಿಬಿಡುತ್ತಿದ್ದ ಅವನ ಪ್ರೀತಿಯ ಒಡನಾಟವನ್ನು ನೆನೆಸಿಕೊಂಡು ಅವನ ಗಂಟಲುಬ್ಬಿ ಬಂದಿತು. ಅಂಬಾಲಿಕೆಯ ದುಃಖವಂತೂ ಹೇಳತೀರದು. ಅವಳನ್ನು ಸಮಾಧಾನ ಮಾಡುವರಾರು? ಎಲ್ಲರೂ ಅರಮನೆಗೆ ಹಿಂದಿರುಗಿದರು. ಕುರುವಂಶದ ಅಂತಸ್ತಿಗೆ ತಕ್ಕಂತೆ ಪಾಂಡುವಿಗೆ ಕುಟುಂಬದ ಕಡೆಯಿಂದ ಅಂತ್ಯಸಂಸ್ಕಾರಗಳನ್ನು ರಾಜೋಚಿತವಾಗಿ ನಡೆಸುವಂತೆ ಧೃತರಾಷ್ಟ್ರನು ವಿದುರನಿಗೆ ವಹಿಸಿದನು. ವ್ಯಾಸಮಹರ್ಷಿಯು ಕರ್ಮಗಳಿಗೆ ಅಧ್ವರ್ಯುವಾಗಿ ಒದಗಿ ಬಂದನು.

ಕರ್ಮಗಳೆಲ್ಲ ಮುಗಿದ ಮೇಲೆ ವ್ಯಾಸನು ತನ್ನ ತಾಯಿ ಸತ್ಯವತಿ ಬಳಿಗೆ ಬಂದು, ``ಅಮ್ಮ, ಇನ್ನು ಸುಖದ ದಿನಗಳು ಮುಗಿದವು. ಕುರುವಂಶಕ್ಕೆ ಇನ್ನು ಮುಂದಿನ ದಿನಗಳು ಒಂದೊಂದೂ ಪಾಪಭಾರದಿಂದ ಬಹಳ ಭಯಾನಕವಾಗಿ ಪರಿಣಮಿಸುವುವು. ಲೋಕದ ತಾರುಣ್ಯವು ಮುಗಿಯಿತು. ಇನ್ನು ಕೆಲವು ವರ್ಷಗಳ ನಂತರ, ನಿನ್ನ ಮೊಮ್ಮಗ ಧೃತರಾಷ್ಟ್ರನ ಹಾಗು ಅವನ ಮಕ್ಕಳ ಮನಸ್ಸಿನಲ್ಲಿ ಪಾಪವು ಮನೆಮಾಡಿಕೊಳ್ಳುವುದು. ಇನ್ನು ಉಳಿದಿರುವುದು ಕೇವಲ ವಿನಾಶ ಮಾತ್ರ. ನಿನ್ನ ಮರಿಮಕ್ಕಳು ಪರಸ್ಪರ ಯುದ್ಧ ಮಾಡಿ ಸಾಯಲಿರುವರು. ಅದನ್ನು ನೋಡಿ ಸಹಿಸುವ ಮನೋಬಲ ನಿನಗಿಲ್ಲ. ಇಲ್ಲಿದ್ದು ಏಕೆ ಸಂಕಟಪಡುತ್ತೀಯೆ? ಈ ಪ್ರಪಂಚಕ್ಕೆ ಇನ್ನು ಬೆನ್ನು ತಿರುಗಿಸಿ ಕಾಡಿಗೆ ಹೋಗಿ ತಪೋನಿರತಳಾಗುವುದು ಒಳ್ಳೆಯದಲ್ಲವೆ?' ಎಂದನು. ``ಹಾಗೆಯೇ ಆಗಲಿ!" ಎಂದ ಸತ್ಯವತಿಯು, ಅಂಬಿಕೆಅಂಬಾಲಿಕೆಯರನ್ನು ಕರೆದು, ``ನಾನು ಅರಣ್ಯಕ್ಕೆ ಹೋಗಲಿರುವೆ; ನಿಮಗೆ ಬರಲು ಇಷ್ಟವಿದೆಯೇ?" ಎಂದು ವಿಚಾರಿಸಿದಳು. ತಮ್ಮ ನೊಂದಮನಸ್ಸಿಗೆ ಶಾಂತಿಯನ್ನು ಅಪೇಕ್ಷಿಸುತ್ತಿದ್ದ ಅವರುಗಳು ಸಂತೋಷದಿಂದ ನಾವೂ ಬರುತ್ತೇವೆ ಎಂದರು.

ವಿಧಿಯು ಈ ಮೂವರು ಸ್ತ್ರಿಯರಿಗೆ ನಿಜಕ್ಕೂ ಬಹಳ ಕಠಿಣವಾಗಿದ್ದಿತು. ಅವರು ಅನುಭವಿಸಿದ ನೋವು ನಿರಾಸೆಗಳಿಗೆ ಕೊನೆಮೊದಲಿಲ್ಲ. ಯಾತನೆಯ ನೆನಪುಗಳ ತವರಾಗಿದ್ದ ಹಸ್ತಿನಾಪುರದಿಂದ ದೂರ ಹೋಗುವುದೆಂದರೆ ಅವರಿಗೆ ಸಂತೋಷವೇ. ವ್ಯಾಸನ ಸಲಹೆ ಅವರಿಗೆ ಬಹು ಆಪ್ಯಾಯಮಾನವೆನಿಸಿತು. ಸತ್ಯವತಿ ತನ್ನ ವ್ಯರ್ಥ ಜೀವನವನ್ನು ಕುರಿತು ಯೋಚಿಸಿದಳು. ಶಂತುವಿನೊಂದಿಗೆ ಕಳೆದದ್ದು ಕೆಲವೇ ವರ್ಷಗಳು. ಆಗಲೂ ಭೀಷ್ಮನನ್ನು ತುಳಿದು ತನ್ನ ಸುಖವನ್ನು ಸಾಧಿಸಿಕೊಂಡೆನೆಂಬ ಅಳುಕೇ ಮನಸ್ಸನ್ನು ತುಂಬಿಕೊಡಿರುತ್ತಿತ್ತು. ಅನಂತರ ಗಂಡ ಸತ್ತ; ಮಕ್ಕಳಿಬ್ಬರೂ ಒಬ್ಬರಾದ ಮೇಲೆ ಒಬ್ಬರು ಸತ್ತರು. ವಂಶವನ್ನುಳಿಸಲು ಭೀಷ್ಮನು ತನ್ನ ಮಾತನ್ನು ನಡೆಸಲಿಲ್ಲ; ವ್ಯಾಸನನ್ನು ಕರೆಯಬೇಕಾಯಿತು. ಅಂಬಿಕೆ ಅಂಬಾಲಿಕೆಯರಿಗೂ ಎಲ್ಲವನ್ನೂ ಮರೆಯುವುದೇ ಬೇಕಾಗಿದ್ದುದು. ಯಾವುದನ್ನು ನೆನೆಸಿಕೊಂಡು ಉತ್ಸಾಹ ತಂದುಕೊಳ್ಳುವುದು-ಅಕ್ಕ ಅಂಬೆಯ ಘೋರವನ್ನೆ, ಪತಿಯ ಸಾವನ್ನೆ, ವಂಶೋದ್ಧಾರಕ್ಕಾಗಿ ಅತ್ತೆಯ ಅಣತಿಯಂತೆ ವ್ಯಾಸನ ಘೋರವನ್ನೆದುರಿಸಿದುದನ್ನೆ, ಕುರುಡು ಮಗ ಧೃತರಾಷ್ಟ್ರನನ್ನೆ, ಶಾಪಗ್ರಸ್ತವಾಗಿ ಸತ್ತ ಮಗ ಪಾಂಡುವನ್ನೆ? ಇನ್ನು ಮುಂದೆ ಬದುಕನ್ನು ಮುಂದುವರೆಸುವುದೇ ಬೇಡ ಎನ್ನಿಸುವಂತಹ ಮನಃಸ್ಥಿತಿ ಅವರದ್ದು. ಲೋಕದ ಸಂಗತಿಗಳಲ್ಲಿ ಎಲ್ಲ ಆಸಕ್ತಿಯನ್ನೂ ಕಳೆದುಕೊಂಡ ಇಂತಹ ಸ್ಥಿತಿ ಸಾವಿಗಿಂತ ಘೋರವಾದದ್ದು. ಮುಂದೆ ಏನಾದರೆ ಏನು? ಶಾಂತಿಯನ್ನು ಅರಸಿಕೊಂಡು ಕಾಡಿಗೆ ಹೋಗುವುದೇ ಸರಿ ಎಂದು ಅವರು ತೀರ್ಮಾನಿಸಿದರು. ಸತ್ಯವತಿಯು ಅರಮನೆಯ ಎಲ್ಲರಿಗೂ ವಿದಾಯ ಹೇಳಿ, ಭೀಷ್ಮನನ್ನು ಕರೆಸಿ ತನ್ನ ನಿರ್ಧಾರವನ್ನು ಅವನಿಗೆ ತಿಳಿಸಿದಳು. ``ಮಗನೇ, ಕುರುವಂಶಕ್ಕೆ ಮುಂದೆ ಕಾದಿರುವುದು ಕೇವಲ ವಿನಾಶವೊಂದೇ ಎಂದು ವ್ಯಾಸನು ಹೇಳಿರುವನು. ನಾನದನ್ನು ನೋಡಿ ಸಹಿಸಲಾರೆ. ಸೊಸೆಯರೊಂದಿಗೆ ನಾನು ಕಾಡಿಗೆ ಹೊರಟಿದ್ದೇನೆ." ಗತಿಸಿದ ತಂದೆಯ ನೆನಪಿನ ಪ್ರತೀಕವಾಗಿ ಉಳಿದಿದ್ದ ಅವಳೂ ಇಲ್ಲವಾಗುವಳೆಂದು ಭೀಷ್ಮನಿಗೆ ದುಃಖವಾಯಿತು. ``ಓಡಿ ಹೋಗಬೇಕೆಂಬ ಹೇಡಿತನ ನನ್ನ ಮನಸ್ಸನ್ನೂ ಕಿತ್ತು ತಿನ್ನುತ್ತಿದೆ. ಬದುಕಿರುವುದಕ್ಕೆ ಏನು ಉಳಿದಿದೆ, ಅಮ್ಮ? ಅಪ್ಪ ಕೊಟ್ಟಿರುವ ಇಚ್ಛಾಮರಣದ ವರವನ್ನು ಬಳಸಿ ಸತ್ತುಹೋಗಲೇ ಎನ್ನಿಸಿಬಿಟ್ಟಿದೆ. ಮೃತ್ಯುವನ್ನು ಆಹ್ವಾನಿಸಿ ತಾಯಿ ಗಂಗೆಯ ಮಡಿಲಿಗೆ ಸೇರಿಕೊಳ್ಳುವೆ" ಎಂದ. ಸತ್ಯವತಿಯು, ``ಇಲ್ಲ ಮಗು, ನೀನು ಹಾಗೆ ಮಾಡಬಾರದು. ಇದನ್ನು ಹೇಳುವುದಕ್ಕಾಗಿಯೇ ನಿನ್ನನ್ನು ಕರೆಸಿದೆ. ಎಳೆಯರನ್ನೆಲ್ಲ ನಿನ್ನ ಕೈಯಲ್ಲಿಟ್ಟು ಹೋಗುತ್ತಿದ್ದೇನೆ. ಈಗ ಕುರುವಂಶದ ಭವಿಷ್ಯವೇ ನಿನ್ನನ್ನು ಅವಲಂಬಿಸಿದೆ. ಕುರುವಂಶವು ಲೋಕದಲ್ಲಿ ಭದ್ರವಾಗಿ ನೆಲೆನಿಲ್ಲುವಂತೆ ನೀನು ನೋಡಿಕೊಳ್ಳಬೇಕು. ಈಗ ನೀನು ಹಿಂದಿನಂತೆ ನನ್ನ ಮಾತನ್ನು ಮೀರಲಾಗದು ಎಂದಳು. ನೊಂದಿರುವ ತಾಯಿಗೆ ಎದುರಾಡಲಾರದೆ ಭೀಷ್ಮನು ಸುಮ್ಮನಿದ್ದನು. ಈವರೆಗೂ ಇಲ್ಲದಿದ್ದ ಮನಶ್ಶಾಂತಿಯನ್ನು ಹುಡುಕಿಕೊಂಡು ಸತ್ಯವತಿಯೂ, ಕೊನೆಯೇ ಇರದಂತೆ ತೋರುವ ಕುಟುಂಬದ ಜವಾಬ್ದಾರಿಯನ್ನು ಹೊರಲು ಭೀಷ್ಮನೂ ಹೀಗೆ ವಿಭಿನ್ನ ದಿಕ್ಕುಗಳಿಗೆ ನಡೆದರು.* * * * ಕಾಡಿನಲ್ಲೇ ಬೆಳೆದಿದ್ದ ಪಾಂಡವ ರಾಜಕುಮಾರರಿಗೆ ತಮ್ಮ ಜನ್ಮಸಿದ್ದ ಹಕ್ಕಾಗಿದ್ದ ಸುಖಜೀವನದ ಸವಿ ಮೊದಲ ಬಾರಿಗೆ ಲಭಿಸಿತು. ಧೃತರಾಷ್ಟ್ರನ ಮಕ್ಕಳು, ಪಾಂಡುವಿನ ಮಕ್ಕಳು, ಎಲ್ಲರೂ ಎಳೆಯರೇ. ಅರಮನೆಯ ಉದ್ಯಾನವನವೆಲ್ಲ ಅವರ ಗಲಭೆಯಿಂದ ತುಂಬಿಹೋಗಿದ್ದಿತು. ಕೆಲವು ದಿನಗಳು ಭೀಷ್ಮನೂ ಈ ಮೊಮ್ಮಕ್ಕಳ ಕಲರವವನ್ನು ಕೇಳಿ ಆನಂದಿಸುತ್ತಿದ್ದರು. ಆಗ ದುರ್ಯೋಧನನ ಹೃದಯದಲ್ಲಿ ಕೇಡು ಮೊಳೆಯಿತು. ಪಾಂಡವರಲ್ಲಿ ಭೀಮ ಮಹಾ ಬಲಶಾಲಿ, ಒರಟ. ಎಲ್ಲರನ್ನು ಗೋಳುಗುಟ್ಟಿಸುವ ಸ್ವಭಾವ. ಯಾವುದೇ ಹುರುಡಿನ ಆಟದಲ್ಲಿ, ಬಲಪ್ರದರ್ಶನದಲ್ಲಿ ಗೆಲ್ಲುವುದು ಅವನೇ. ಮರಕೋತಿ ಆಡುವಾಗ ಮರದ ಮೇಲಿದ್ದ ನೂರು ಜನ ಕೌರವರನ್ನೂ ಮರವನ್ನು ಬುಡಸಹಿತ ಅಲುಗಡಿಸಿ ಹಣ್ಣುಗಳಂತೆ ಪುತಪುತನೆ ಉದುರಿಸಿಬಿಡುವನು. ಕೌರವರಿಗೆ ಇದನ್ನೆಲ್ಲ ಸಹಿಸಲು ಆಗಲಿಲ್ಲ.ಸೋಲನ್ನು ಅಪಮಾನವನ್ನು ನಗೆಮುಖದಿಂದ ತೆಗೆದುಕೊಳ್ಳುವುದು ನಾವು ದೊಡ್ಡವರಾದಂತೆ ಕಲಿಯುವ ಆಷಾಡಭೂತಿತನ. ಎಳೆವಯಸ್ಸಿನಲ್ಲಿ ಅದು ಸ್ವಲ್ಪವೂ ಇರುವುದಿಲ್ಲ. ಸೋತ ಮಗು ಗೆದ್ದ ಮಗುವಿನ ಮೇಲೆ ಹರಿಹಾಯುತ್ತ ರಂಪು ಮಾಡುತ್ತದೆ; ಚಂಡಿ ಹಿಡಿದು ತನ್ನ ಕೋಪವನ್ನು ತೋರಿಸುತ್ತದೆ. ಇದು ನಮಗೆಲ್ಲ ಗೊತ್ತಿರುವಂತಹದು. ಕ್ರೀಡಾಮನೋಭಾವವು ಮಗುವಿನ ಸಹಜ ಪ್ರತಿಕ್ರಿಯೆ ಅಲ್ಲ. ನಮ್ಮ ಮನೋಬಲ ಬೆಳೆದಂತೆಲ್ಲ ನಾವು ಪ್ರಯತ್ನಪೂರ್ವಕವಾಗಿ ಬೆಳೆಸಿಕೊಳ್ಳುವುದು ಅದು. ಬಾಲಕರಾದ ದುರ್ಯೋಧನಾದಿಗಳು ಸಹಜವಾಗಿಯೇ ಭೀಮನ ಮೇಲ್ಗೈಯನ್ನು ಸಹಿಸಲಿಲ್ಲ. ಭೀಮನೂ ಸಹ ಅವರ ಮೇಲೆ ಸ್ವಲ್ಪ ಹೆಚ್ಚಾಗಿಯೆ ತನ್ನ ಬಲಪ್ರದರ್ಶನವನ್ನು ಮಾಡುತ್ತಿದ್ದ. ಇತರರನ್ನು ಕೀಟಲೆಮಾಡಿ ಗೋಳುಗುಟ್ಟಿಸುವುದೆಂದರೆ ಅವನಿಗೆ ಬಹು ಪ್ರೀತಿ. ಮಕ್ಕಳಿಗೆ ಇದೆಲ್ಲ ಸಹಜವಾಗಿದ್ದರೂ, ದುರ್ಯೋಧನ ಪುಟ್ಟ ಹೃದಯವು ಮಾತ್ರ ಭೀಮನ ಮೇಲಿನ ಕ್ರೋಧ, ಹೊಟ್ಟೆಕಿಚ್ಚುಗಳಿಂದ ತುಂಬಿಹೋಗಿತ್ತು. ಭೀಮನ ಮೇಲೆ ಸೇಡನ್ನು ತೀರಿಸಿಕೊಳ್ಳುವ ಬಗೆಯನ್ನು ಕುರಿತೇ ಅವನು ಯಾವಾಗಲೂ ಯೋಚಿಸುತ್ತಿದ್ದ.ದುರ್ಯೋಧನನು ಅತಿಯಾದ ಮುದ್ದಿನಿಂದ ಹಾಳಾಗಿ ಹೋಗಿದ್ದ. ಈವರೆಗೂ ಭೀಷ್ಮಾದಿಗಳೆಲ್ಲರ ಪ್ರೀತಿಗೂ ಬಾಧ್ಯಸ್ಥನಾಗಿ ಇಡೀ ಅರಮನೆಯಲ್ಲಿ ಪಾಳೆಯಗಾರನಂತೆ ಬೆಳೆದಿದ್ದ ಅವನು ಈ ಪಾಂಡವರೆಂಬ ದಾಯಾದಿ ಸೋದರರ ಬರವನ್ನು ನಿರೀಕ್ಷಿಸಿರಲಿಲ್ಲ. ಭೀಷ್ಮನ ಪ್ರೀತಿ ಅವರ ಮೇಲೂ ಸಮಾನವಾಗಿಯೇ ಹರಿಯತೊಡಗಿದ್ದನ್ನಂತೂ ಅವನಿಗೆ ಸಹಿಸಲೇ ಸಾಧ್ಯವಾಗಲಿಲ್ಲ. ಅಸೂಯೆಯಿಂದ ಅವನು ಹುಚ್ಚನಾದ. ದಿನ ಬೆಳಗಾದರೆ ಎಲ್ಲದರಲ್ಲಿಯೂ ಭೀಮನಿಗೆ ಗೆಲುವು, ಭೀಮನಿಗೆ ಪ್ರಶಂಸೆ. ಹಿರಿಯ ಕೌರವಕುಮಾರನಾದ ಅವನನ್ನು ಕೇಳುವವರೇ ಇಲ್ಲ. ಈ ಪರಿಸ್ಥಿತಿಯಲ್ಲಿ ಬೇರೆ ಮಗು ಇದ್ದಿದ್ದರೂ ಅದು ಹೀಗೇ ವರ್ತಿಸುತ್ತಿತ್ತೇನೋ. ಕೋಪದಿಂದ ಹುಚ್ಚನಾಗಿದ್ದ ಅವನು ಭೀಮ ಸಾಯಲಿ ಎಂದು ಹಾರೈಸುತ್ತಿದ್ದ, ಹಂಬಲಿಸುತ್ತಿದ್ದ. ಆದರೆ ಇಷ್ಟೇ ಆಗಿದ್ದರೆ ಸಹಜವೆನಿಸಿರುತ್ತಿತ್ತು. ಸಾಮಾನ್ಯ ಮಕ್ಕಳು ಈ ಸ್ಥಿಯನ್ನು ಮೀರಿ ಬೆಳೆಯುವರು. ಆದರೆ ದುರ್ಯೋಧನ ಸಾಮಾನ್ಯನಾಗಿರಲಿಲ್ಲ . ಅವರಪ್ಪ ಧೃತರಾಷ್ಟ್ರನ ಸ್ವಾರ್ಥ ದುರಾಸೆಗಳು ಅವನಲ್ಲಿಯೂ ದಾರಾಳವಾಗಿ ಮೊಳೆತು ಬೆಳೆದಿದ್ದವು. ಅವನು ಮುಂದಕ್ಕೆ ಬಹುದೂರ ಯೋಚಿಸಿದ. ಈ ದಾಯಾದಿಗಳು ಮುಂದಕ್ಕೆ ಬರುವುದನ್ನು ಹೇಗಾದರೂ ಮಾಡಿ ತಡೆಯಬೇಕೆಂದು ನಿರ್ಧರಿಸಿದ. ಭೀಮನನ್ನು ಕೊಂದುಬಿಟ್ಟರೆ ಮುಂದೆ ತಾನು ಅಬಾಧಿತನಾಗಿ ರಾಜ್ಯವಾಳಬಹುದೆಂದು ಅವನ ಯೋಚನೆ. ಇಂತಹ ಘಟ್ಟದಲ್ಲಿ ಅವನ ಮಾವ ಶಕುನಿಯ ರಂಗಪ್ರವೇಶವಾಯಿತು. ಅವನು ದುರ್ಯೋಧನನ ಹೃದಯದಲ್ಲಿದ್ದ ದ್ವೇಷದ ಕಿಡಿಯನ್ನು ಊದಿ ಊದಿ ಅದು ಎಲ್ಲವನ್ನು ನುಂಗಿ ನೊಣೆಯುವ ಬೆಂಕಿಯಾಗುವಂತೆ ಮಾಡಿದ. ರಾಜಕುಮಾರನ ಮನಸ್ಸಿನಲ್ಲಿ ಪಾಂಡವರ ಮೇಲೆ, ಅದರಲ್ಲೂ ಭೀಮನ ಮೇಲೆ, ದ್ವೇಷವೊಂದನ್ನು ಬಿಟ್ಟರೆ ಇನೇನೂ ಇರದಂತೆ ನೋಡಿಕೊಂಡವನೆ ಅವನು. ಈ ಭುಗಿಲೆದ್ದ ದ್ವೇಷದ ಭಾವನೆ ದುಯೋಧನನ ನಿದ್ರೆಯನ್ನು ದೂರಮಾಡಿತು; ಅವನು ನಿರಂತರ ದುಃಖಿಯಾದ.ಶಕುನಿ ದುಯೋಧನರು ಭೀಮನನ್ನು ನಾಶಪಡಿಸಲು ಒಂದು ಯೋಜನೆ ಹಾಕಿದರು. ಗಂಗಾ ತೀರಕ್ಕೆ ಒಂದು ಇಡೀ ದಿನ ಆಟವಾಡಲು ಎಲ್ಲರೂ ಹೋಗುವುದು ಎಂದಾಯಿತು. ಸಂಜೆಯಾಗುವ ಹೊತ್ತಿಗೆ ಭೀಮ ಬಳಲಿದ್ದ, ಹಸಿದಿದ್ದ. ದುರ್ಯೋಧನ ಅವನನ್ನು ಕರೆದುಕೊಂಡು ಹೋಗಿ ಬಗೆ ಬಗೆಯ ತಿಂಡಿಗಳನ್ನು, ಪಾನಕಗಳನ್ನು ಕೊಟ್ಟು ಉಪಚರಿಸಿ ತಿನ್ನಿಸಿದ. ಸರಳಸ್ವಭಾವದ ಭೀಮ ಇತರರ ವರ್ತನೆಯನ್ನು ಸಂಶಯದಿಂದ ನೋಡುವವನಾಗಿರಲಿಲ್ಲ. ದುರ್ಯೋಧನನು ಕಾಳಕೂಟ ವಿಷ ಬೆರೆಸಿ ಸಿದ್ಧಪಡಿಸಿದ್ದ ಆಹಾರವನ್ನು ಅವನು ಹೊಟ್ಟೆತುಂಬ ತಿಂದ. ಬಳಲಿಕೆಯಿಂದ ನಿದ್ರೆ ಬಂತು; ಮಲಗಿಬಿಟ್ಟ. ದುಯೋಧನ ಅವನನ್ನು ಬಳ್ಳಿಗಳಿಂದ ಬಲವಾಗಿ ಬಿಗಿದು ಮೊದಲೇ ವಿಷಸರ್ಪಗಳನ್ನು ತಂದು ಬಿಟ್ಟಿದ್ದ ಗಂಗಾನದಿಯ ಆಳವಾದ ಮಡುವೊಂದಕ್ಕೆ ಎಸೆದುಬಿಟ್ಟ.ಎಲ್ಲರೂ ಹಸ್ತಿನಾಪುರಕ್ಕೆ ಹಿಂದಿರುಗಲು ಸನ್ನಾಹ ಮಾಡತೊಡಗಿದರು. ಎಲ್ಲಿ ಹುಡುಕಿದರೂ ಭೀಮನಿಲ್ಲ. ಬಹುಶಃ ಅವನು ನಗರಕ್ಕೆ ಮೊದಲೇ ಹಿಂದಿರುಗಿರಬಹುದು ಎಂದುಕೊಂಡ ಯುಧಿಷ್ಠಿರ. ಮನೆಗೆ ಬಂದರೆ ಅಲ್ಲಿಯೂ ಭೀಮನಿಲ್ಲ! ಕುಂತಿಗೆ ಭಯವಾಯಿತು. ಉಳಿದ ನಾಲ್ವರನ್ನು ಪುನಃ ಗಂಗಾತೀರಕ್ಕೆ ಕಳುಹಿಸಿ ಹುಡುಕಿಸಿದಳು. ಎಲ್ಲಿಯೂ ಭೀಮನ ಸುಳಿವೇ ಎಲ್ಲ. ವಿದುರನಿಗೆ ಹೇಳಿಕಳುಹಿಸಿ,`` ದುರ್ಯೋಧನನಿಗೆ ನನ್ನ ಮಗನನ್ನು ಕಂಡರಾಗದು. ನಿದ್ರಿಸುತ್ತಿರುವಾಗ ಅವನೇ ಕೊಂದುಬಿಟ್ಟಿರುವನೋ ಏನೋ!'' ಎಂದು ನಡೆದ ಸಂಗತಿಯನ್ನು ತಿಳಿಸಿದಳು. ವಿದುರ ಅವಳನ್ನು ಸಮಾಧಾನಪಡಿಸಿದ. `` ತಂಗಿ, ನೀನು ಚಿಂತಿಸಬೇಡ. ಉಳಿದ ನಾಲ್ವರನ್ನಾದರೂ ಕಾಪಾಡಿಕೋ. ನಮಗೆ ಸಂಶಯ ಬಂದಿದೆಯೆಂದು ದುರ್ಯೋಧನನಿಗೆ ಗೊತ್ತಾದರೆ, ಅವನೂ ಅವರನ್ನೂ ಸಹ ಕೊಲ್ಲಿಸಿಬಿಡಬಹುದು. ನಿನ್ನ ಮಕ್ಕಳು ದೀರ್ಘಾಯುಗಳಾಗಿರುವರೆಂದು ಋಷಿಗಳು ಹೇಳಿರುವರಲ್ಲವೆ! ನಿನ್ನ ಭಾವನೆಗಳನ್ನು ಹೊರಗೆಡಹಬೇಡ. ಭೀಮ ಕ್ಷೇಮವಾಗಿರುವನೆಂದು ನನ್ನ ಮನಸ್ಸು ಹೇಳುತ್ತಿದೆ. ತಾಳ್ಮೆಯಿಂದಿರು.'' ಹೀಗೆಂದು ಬುದ್ಧಿಹೇಳಿ, ವಿದುರನು ಹೊರಟು ಹೋದ.ಮಡುವುನಲ್ಲಿ ಭೀಮನಿಗೆ ಪ್ರಜ್ಞೆ ಬರುವ ಹೊತ್ತಿಗೆ ತನ್ನ ಮೈಯನ್ನೆಲ್ಲ ಏನೋ ಕಚ್ಚುತ್ತಿರುವುದು ಗೊತ್ತಾಯಿತು. ಕಚ್ಚುತ್ತಿದ್ದವು ನೂರಾರು ಸರ್ಪಗಳು. ಆದರೇನು? ಇವುಗಳ ವಿಷವು ಒಳಗಿನ ಕಾಳಕೂತ ವಿಷಕ್ಕೆ ಪ್ರತಿವಿಷವಾಗಿಬಿಟ್ಟಿತು. ಭೀಮನು ಎಚ್ಚೆತ್ತು, ಕಚ್ಚುತ್ತಿದ್ದ ಹಾವುಗಳನ್ನೆಲ್ಲ ಕೊಂದುಹಾಕಿದ. ಕೆಲವು ತಪ್ಪಿಸಿಕೊಂಡು ಪಾತಾಳದಲ್ಲಿದ್ದ ತಮ್ಮಒಡೆಯ ವಾಸುಕಿಯ ಬಳಿಗೆ ಹೋಗಿ ನಡೆದುದನ್ನೆಲ್ಲ ವಿವರಿಸಿದವು. `` ಅಲ್ಲೊಬ್ಬ ಇದ್ದಾನೆ; ಅವನು ಸರ್ಪಗಳ ರಾಜನೇ ಇರಬೇಕು. ನಾವು ನೂರಾರು ಸಂಖ್ಯೆಯಲ್ಲಿ ಕಚ್ಚಿದರೂ ಅವನಿಗೇನೂ ಆಗಲಿಲ್ಲ; ನಿದ್ರೆಯಿಂದೆದ್ದ ಅವನು ನಮ್ಮನೆಲ್ಲ ಕೊಲ್ಲತೊಡಗಿದ. ನೀನು ಬಂದು ಅವನನ್ನು ನೋಡಬೇಕು'' ಎಂದವು. ವಾಸುಕಿಯು ಬಂದು ನೋಡಿ ಇವನು ಕುಂತೀಪುತ್ರನಾದ ಭೀಮನೆಂದು ಗುರುತಿಸಿದ; ಆಲಂಗಿಸಿಕೊಂಡ. ``ಅವನಿಗೆ ಯಥೇಷ್ಟವಾಗಿ ರತ್ನಾಭರಣಗಳನ್ನು ಕೊಟ್ಟು ಕಳುಹಿಸಿ; ನನಗೆ ಅವನನ್ನು ಕಂಡು ಸಂತಸವಾಗಿದೆ'' ಎಂದು ತನ್ನವರಿಗೆ ಅಪ್ಪಣೆ ಮಾಡಿದ. ಮಂತ್ರಿಗಳು, `` ಅವನು ರಾಜಕುಮಾರ. ಆಭರಣಗಳಿಂದ ಅವನಿಗೇನಾಗಬೇಕಿದೆ? ಅವನಿಗೆ ಮಹಾಬಲವನ್ನೀಯುವ ನಮ್ಮ ವಿಶೇಷ ಸಿದ್ಧರಸವನ್ನು ಕುಡಿಸೋಣ'' ಎನ್ನಲು, ವಾಸುಕಿಯು ಭೀಮನನ್ನು ಪೂರ್ವಾಭಿಮುಖವಾಗಿ ಕುಳ್ಳಿರಿಸಿ, ತೃಪ್ತಿಯಾಗುವಷ್ಟು ಸಿದ್ಧರಸವನ್ನು ಕುಡಿಸಿದ. ಎಂಟು ಲೋಟದಷ್ಟು ಕುಡಿದು ಎಂಟು ದಿನ ನಿದ್ರಿಸಿದ ಭೀಮನನ್ನು ನಾಗರು ಗಂಗಾತಟಕ್ಕೆ ತಂದುಬಿಟ್ಟರು.ಭೀಮನು ತಾವು ಆಟಕ್ಕಾಗಿ ಬಂದಿದ್ದ ಜಾಗವನ್ನು ಗುರುತಿಸಿದ; ಅರಮನೆಗೆ ಹಿಂದಿರುಗಿದ. ಎಲ್ಲರಿಗೂ ಸಂತೋಷದಿಂದ ಕಣ್ಣಿರು ಬಂದಿತು. ಇಡೀ ವಾರ ಭೀಮನಿಲ್ಲದ ದುಃಖದಿಂದ ಜರ್ಜರಿತರಾಗಿದ್ದರು. ಎಲ್ಲರನ್ನೂ ಆಲಂಗಿಸಿದ ಭೀಮನು ಗೋಳಿಡುತ್ತಿದ್ದ ತಾಯಿಯನ್ನು ಸಮಾಧಾನಪಡಿಸಿದ. ಅಷ್ಟರಲ್ಲಿ ಅಲ್ಲಿಗೆ ಬಂದ ವಿದುರನನ್ನು ಕೂರಿಸಿಕೊಂಡು ನಡೆದ ಕಥೆಯನ್ನೆಲ್ಲ ಹೇಳಿದ. ವಿದುರನು ದುರ್ಯೋಧನನ ದ್ವೇಷದ ಬಗ್ಗೆ ಪುನಃ ಪುನಃ ಎಚ್ಚರಿಕೆ ಕೊಟ್ಟ. ಪಾಂಡವರಿಗೆ ಆಶ್ಚರ್ಯ, ದ್ವೇಷ ಇಲ್ಲಿಯವರೆಗೆ ಹೋಗಬಹುದೆ, ತಮ್ಮ ಸೋದರರ ಮನಸ್ಸಿನಲ್ಲಿ ಇಂತಹ ಭಾವನೆಗಳಿವಿಯೇ ಎಂದು! ಭೀಮ ಬದುಕಿ ಬಂದಿರುವುದು ದುರ್ಯೋಧನನಿಗೆ ನುಂಗಲಾರದ ತುತ್ತಾಯಿತು. ತಾನು ತಿನ್ನಿಸಿದ ವಿಷವನ್ನು ತಾನು ಬಿಟ್ಟಿದ್ದ ಸರ್ಪಗಳ ವಿಷವೇ ತಟಸ್ಥಗೊಳಿಸಿದ್ದನ್ನು ತಿಳಿದು ಹಳಹಳಿಸಿಕೊಂಡ. ದ್ವೇಷವು ಹೆಚ್ಚಾಯಿತು. ಆದರೂ ಸುಮ್ಮನಿದ್ದ; ಏಕೆಂದರೆ ಈಗ ಪಾಂಡವರಿಗೆ ತನ್ನ ಬುದ್ಧಿ ಗೊತ್ತಾಗಿಬಿಟ್ಟಿದೆ!* * * * ರಾಜಕುಮಾರರಿಗೆ ವಿದ್ಯೆ ಕಲಿಸಲು ಭೀಷ್ಮನು ಕೃಪನನ್ನು ನಿಯಮಿಸಿದನು. ಕೃಪ ಧನುರ್ವಿದ್ಯಾ ಪಾರಂಗತ. ಶಂತನು ಒಂದು ದಿನ ಬೇಟೆಗೆಂದು ಕಾಡಿಗೆ ಹೋಗಿದ್ದಾಗ ಅಲ್ಲಿ ಅವಳಿ ಸಹೋದರ ಸಹೋದರಿಯರು ಸಿಕ್ಕಿದ್ದರು. ಕರುಣೆಯಿಂದ ಅವರನ್ನು ಮನೆಗೆ ಕರೆತಂದ ಶಂತನು ಗೌತಮನ ಮಕ್ಕಳಾದ ಅವರಿಗೆ ಕೃಪ ಕೃಪೆ ಎಂದು ಹೆಸರಿಟ್ಟು ಸಾಕಿಕೊಂಡನು. ಕೃಪ ತನಗಿಷ್ಟವಾದ ಧನುರ್ವಿದ್ಯೆಯನ್ನು ಕಲಿತನು. ಮಕ್ಕಳಿಗೆ ವಿದ್ಯೆ ಕಲಿಸಲು ಸೂಕ್ತನದವನೆಂದು ಭೀಷ್ಮನು ಕೃಪನನ್ನು ಆರಿಸಿದನು. ಪಾಂಡವ ಕೌರವರ ಜೊತೆಗೆ ಭೋಜರ, ವೃಷ್ಣಿಗಳ, ಅಂಧಕರ ಮನೆಗಳಿಂದಲೂ ಕುಮಾರರು ವಿದ್ಯೆ ಕಲಿಯಲೆಂದು ಹಸ್ತಿನಾಪುರಕ್ಕೆ ಬಂದರು. ಕೃಪನ ಬಳಿ ಕಲಿತಾದ ಮೇಲೆ ಹೆಚ್ಚಿನ ವಿದ್ಯೆಗಾಗಿ ಇನ್ನೂ ಸಮರ್ಥನಾದ ಗುರುವನ್ನು ನಿಯಮಿಸಬೇಕೆಂದು ಭೀಷ್ಮನು ಯೋಚಿಸುತ್ತಿದ್ದನು.ಒಂದು ದಿನ ಹುಡುಗರೆಲ್ಲರೂ ಚೆಂಡಾಟವಾಡುತ್ತಿದರು. ಇದ್ದಕ್ಕಿದ್ದಂತೆ ಚೆಂಡು ಬಾವಿಯೊಂದಕ್ಕೆ ಬಿದ್ದಿತು. ಆಟದ ಮಧ್ಯದಲ್ಲಿದ್ದ ಬಾಲಕರಿಗೆ ಏನು ಮಾಡಬೇಕೆಂದೇ ತೋರಲಿಲ್ಲ. ಅವರನ್ನೆ ಗಮನಿಸುತ್ತ ನಿಂತಿದ್ದ ಒಬ್ಬಾತನು ಬಳಿಗೆ ಬಂದು, ``ನಿಮಗೆ ಧನುರ್ವಿದ್ಯೆ ಬಾರದೆಂದು ಕಾಣುತ್ತದೆ. ಬಂದಿದ್ದರೆ ಈ ಅಸಹಾಯಕತೆಗೆ ಕಾರಣವೇ ಇರುತ್ತಿರಲ್ಲಿ'' ಎಂದನು. `` ಸ್ವಾಮೀ ನಮಗೆ ಧನುರ್ವಿದ್ಯೆ ಗೊತ್ತು!'' ಎಂದರು ಬಾಲಕರು. ಯುಧಿಷ್ಠಿರ ಮುಂದೆ ಬಂದು, ``ಕೃಪನು ನಮ್ಮ ಗುರು. ಆದರೆ ಅದು ಹೇಗೆ ಈ ಸಂದರ್ಭದಲ್ಲಿ ಸಹಾಯಕ್ಕೆ ಬರುತ್ತದೆ? ಬಾವಿಯಲ್ಲಿ ಬಿದ್ದಿರುವ ಚೆಂಡನ್ನು ಬಾಣಅಳಿಂದ ತೆಗೆಯುವುದಕ್ಕಾಗುತ್ತದೆಯೆ?'' ಎಂದನು. ``ನಾನು ತೋರಿಸುತ್ತೇನೆ!'' ಎಂದ ಹೊಸಬನು, ತನ್ನ ಕಿರುಬೆರಳಿನಲ್ಲಿದ್ದ ರತ್ನಖಚಿತವಾದ ಉಂಗುರವೊಂದನ್ನು ಬಾವಿಗೆ ಹಾಕಿ, ಅದು ಕೆಳಕ್ಕೆ ಬೀಳುವುದರೊಳಗೆ ಬಾಣವೊಂದನ್ನು ಬಿಟ್ಟನು. ಆ ಬಾಣವು ಉಂಗುರದೊಳಗೆ ತೂರಿಹೋಗಿ ಬಾವಿಯಲ್ಲಿ ಬಿದ್ದಿದ್ದ ಚೆಂಡನ್ನು ಚುಚ್ಚಿಕೊಂಡಿತು. ಅಷ್ಟರಲ್ಲಿಯೇ ಬಿಟ್ಟ ಎರಡನೆಯ ಬಾಣವು ಮೊದಲನೆಯ ಬಾಣಕ್ಕೆ ಚುಚ್ಚಿಕೊಡಿತು; ಮೂರನೆಯದು ಎರಡನೆಯದಕ್ಕೆ, ನಾಲ್ಕನೆಯದು ಮೂರನೆಯದಕ್ಕೆ, ಹೀಗೆ ಬಾಣಗಳಿಂದಲೇ ಒಂದು ಹಗ್ಗವು ತಯಾರಾಯಿತು. ಹೊಸಬನು ಅದರ ಸಹಾಯದಿಂದ ಚೆಂಡನ್ನು ಹೊರಕ್ಕೆ ತೆಗೆದುಕೊಟ್ಟು, ಉಂಗುರವನ್ನು ತನ್ನ ಬೆರಳಿಗೆ ಹಾಕಿಕೊಂಡನು. ತಮ್ಮೆಲ್ಲರ ಕಣ್ಣಮುಂದೆ ನಡೆದ ಈ ಅದ್ಭುತವನ್ನು ನೋಡಿದ ಹುಡುಗರೆಲ್ಲ ಬೆಕ್ಕಸ ಬೆರಗಾದರು. ಇಂತಹ ಪವಾಡಸದೃಶ ವಿದ್ಯೆಯನ್ನು ಅವರಾರೂ ಆವರೆಗೆ ನೋಡಿರಲ್ಲಿ. ಮಂತ್ರ ಮುಗ್ಧರಾಗಿದ್ದ ಬಾಲಕರು `` ಸ್ವಾಮೀ, ತಾವು ಯಾರು?'' ಎಂದೂ ಒಕ್ಕೊರಲಿನಿಂದ ವಿಚಾರಿಸಿದರು. ಹೊಸಬನು, `` ನಿಮ್ಮಜ್ಜನಿಗೆ ನಡೆದುದ್ದನ್ನು ತಿಳಿಸಿ. ಅವನಿಗೆ ಗೊತ್ತಾಗುತ್ತದೆ!'' ಎಂದನು. ಅರಮನೆಗೆ ಓಡಿಬಂದು ಬಾಲಕರು ನಡೆದುದೆಲ್ಲವನ್ನೂ ಭೀಷ್ಮನಿಗೆ ತಿಳಿಸಿದರು. ಭೀಷ್ಮನಿಗೆ ತಕ್ಷಣ ತಿಳಿಯಿತು, ಬಂದವನು ಕೃಪೆಯ ಪತಿಯಾದ ದ್ರೋಣ ಎಂದು. ಅವನೂ ಭಾರ್ಗವನ ಶಿಷ್ಯನೇ. ಭಾರದ್ವಾಜ ಋಷಿಯ ಮಗ. ಕೊನೆಗೂ ತಾನು ಅರಸುತ್ತಿದ್ದ ಯೋಗ್ಯ ಗುರುವು ಮಕ್ಕಳಿಗೆ ದೊರಕಿದನೆಂದು ಭೀಷ್ಮನಿಗೆ ಸಂತೋಷವಾಯಿತು. ಬೇಗ ಅವನು ಸಕಲ ರಾಜಮರ್ಯಾದೆಗಳೊಂದಿಗೆ ಹೋಗಿ ದ್ರೋಣನನ್ನು ಹಸ್ತಿನಾಪುರದ ಅರಮನೆಗೆ ಕರೆದುಕೊಂಡು ಬಂದನು.* * * * ಪಾಂಚಾಲ ರಾಜಕುಮಾರ ದ್ರುಪದನು ದ್ರೋಣನ ಬಾಲ್ಯಸ್ನೇಹಿತ. ಒಮ್ಮೆ, ಪ್ರೀತಿ ಉಕ್ಕಿ ಬಂದಾಗ, ದ್ರುಪದನು, `` ದ್ರೋಣ, ನನಗೆ ನಿನ್ನನ್ನು ಕಂಡರೆ ತುಂಬ ಪ್ರೀತಿ. ನಮ್ಮ ಸ್ನೇಹವು ಈ ಗುರುಕುಲ ಆಶ್ರಮದಲ್ಲಿಯೇ ಕೊನೆಗೊಳ್ಳುವುದು ಬೇಡ. ನಾನು ಪಾಂಚಾಲ ರಾಜ್ಯದ ದೊರೆಯಾಗುವವನು. ನಾನು ರಾಜನಾದಾಗ ನಿನ್ನನ್ನು ಕರೆದೊಯ್ಯುವೆ; ಜೀವನವಿಡೀ ನಾವು ಸ್ನೇಹಿತರಾಗಿ ಒಟ್ಟಿಗೆ ಇರಬಹುದು'' ಎಂದು ಹೇಳಿದ್ದನು.ವರ್ಷಗಳು ಉರುಳಿದವು. ದ್ರೋಣನು ಶಾರದ್ವತ ಗೌತಮನ ಮಗಳು ಕೃಪೆಯನ್ನು ಮದುವೆಯಾದನು. ಅವರಿಗೆ ಒಬ್ಬ ಮಗನು ಹುಟ್ಟಿದ. ಅವನಿಗೆ ಅಶ್ವತ್ಥಾಮನೆಂದು ಹೆಸರಿಟ್ಟರು. ತನ್ನ ಕಾಲದ ಅತ್ಯಂತ ಸಮರ್ಥ ಧನುರ್ಧಾರಿಯಾಗಬೇಕೆಂಬುದು ದ್ರೋಣನ ಆಸೆಯಾಗಿದ್ದಿತು. ಇಪ್ಪತ್ತೊಂದು ಸಲ ಭೂಮಂಡಲವನ್ನು ಕ್ಷತ್ರಿಯವಧೆಗಾಗಿ ಸುತ್ತಿದ ಭಾರ್ಗವನ ಬಳಿಗೆ ಹೋದ. ಭಾರ್ಗವನು ದ್ರೋಣನ್ನು ಕುಳಿರಿಸಿ ಏನು ಬೇಕೆಂದು ಕೇಳಿದ. `` ನಾನು ಭಾರದ್ವಾಜನ ಮಗ ದ್ರೋಣ . ಐಶ್ವರ್ಯವನ್ನು ಬಯಸಿ ಬಂದಿರುವೆನು'' ಎಂದಗ ಭಾರ್ಗವನು, `` ನನ್ನಲ್ಲಿದ್ದುದನ್ನೆಲ್ಲ ಕಶ್ಯಪನಿಗೆ ಕೊಟ್ಟುಬಿಟ್ಟೆ. ಈಗ ನನ್ನಲ್ಲಿ ನನ್ನದೆಂದು ಉಳಿದಿರುವುದು ಈ ಶರಿರವೊಂದೇ. ಬಡವನಾಗಿರುವ ನಾನು ನಿನಗೆ ಏನು ತಾನೇ ಕೊಡಬಲ್ಲೆ?'' ಎಂದ. ದ್ರೋಣನು ನಕ್ಕು. `` ಸ್ವಾಮೀ ನಿಮ್ಮಲ್ಲಿ ಇರುವ ಐಶ್ವರ್ಯಕ್ಕಾಗಿಯೇ ನಾನು ಬಂದಿರುವುದು . ಮಹಾ ಧನುರ್ಧಾರಿಯೆನಿಸಿದ ನಿಮ್ಮಲ್ಲಿ ಧನುರ್ವಿದ್ಯೆಯನ್ನು ಕಲಿಯಲು ಬಂದಿರುವೆನು" ಎನ್ನಲು ಭಾರ್ಗವನು ``ಹಾಗೇ ಆಗಲಿ ನಿನ್ನನ್ನು ಶಿಷ್ಯನನ್ನಾಗಿ ಸ್ವೀಕರಿಸಿರುವೆನು'' ಎಂದು ಒಪ್ಪಿಕೊಂಡನು.ಎಲ್ಲ ಅಸ್ತ್ರಗಳನ್ನೂ ತನ್ನದಾಗಿಸಿಕೊಂಡ ಮೇಲೆ ದ್ರೋಣನು ಮನೆಗೆ ಹಿಂದಿರುಗಿದನು. ಅಶ್ವತ್ಥಾಮ ಆಗಿನ್ನೂ ಚಿಕ್ಕ ಮಗು. ಮನೆಯಲ್ಲಿ ಬಡತನ. ಒಮ್ಮೆ ಮಗುವು ತನ್ನ ಅಮ್ಮನ ಬಳಿಗೆ ಬಂದು ``ಅಮ್ಮ, ನನ್ನ ಸ್ನೇಹಿತರುಗಳೆಲ್ಲ ಹಾಲು ಎಂಬ ವಸ್ತುವಿನ ಬಗ್ಗೆ ಮಾತನಾಡುತ್ತಿದ್ದರು. ದೇವತೆಗಳ ಅಮೃತವೊಂದನ್ನು ಬಿಟ್ಟರೆ, ರುಚಿಯಲ್ಲಿ ಹಾಲಿಗೆ ಸಮಾನವಾದುದು ಬೇರೆ ಯಾವುದೂ ಇಲ್ಲವಂತೆ ನನಗೆ ಹಾಲು ಬೇಕಮ್ಮ'' ಎಂದು ಕೇಳಿತು. ಆ ಬಡವಿಗೆ ಏನು ಮಾಡಲೂ ತೋರಲಿಲ್ಲ. ಮಗುವಿಗೆ ಹಾಲನ್ನು ಎಲ್ಲಿಂದ ತಂದುಕೊಡುವಳು, ಪಾಪ ! ದ್ರೋಣನು ಈ ಸಂಗತಿಯನ್ನು ಕೇಳಿ ಬಹು ದುಃಖಿತನಾದನು. ಆದರೆ, ಅವನಿಗೆ ಇದ್ದಕ್ಕಿದ್ದಂತೆ ತನ್ನ ಬಾಲ್ಯಸ್ನೇಹಿತ ಪಾಂಚಾಲ ರಾಜಕುಮಾರ ದ್ರುಪದ ನೆನಪಾಯಿತು. `` ನೋಡು ಕೃಪೆ, ನಾನು ಕುರುಕುಲಾಶ್ರಮದಲ್ಲಿದ್ದಾಗ ನನಗೆ ದ್ರುಪದನೆಂಬ ಒಬ್ಬ ಗೆಳೆಯನಿದ್ದನು. ಅವನು ಈಗ ಪಾಂಚಾಲ ದೇಶದ ರಾಜನಾಗಿರುವನು. ಅವನು ತನ್ನ ಭಾಗ್ಯವನ್ನು ನನ್ನೊಂದಿಗೆ ಹಂಚಿಕೊಳ್ಳುವೆನೆಂದು ಹೇಳಿದ್ದನು. ನಾವೀಗ ಪಾಂಚಾಲ ದೇಶಕ್ಕೆ ಹೋಗೋಣ ; ನಮ್ಮ ಬಡತನ ಕೊನೆಗೊಳ್ಳಬಹುದು'' ಎಂದು ಹೆಂಡತಿ ಮಕ್ಕಳೊಡನೆ ದ್ರುಪದನ ಭೇಟಿಗಾಗಿ ಹೊರಟನು.ದ್ರೋಣನು ದ್ರುಪದನ ಆಸ್ಥಾನಕ್ಕೆ ಹೋಗಿ ರಾಜನ ಮುಂದೆ ನಿಂತು `` ನಾನು ನಿನ್ನ ಬಾಲ್ಯಸ್ನೇಹಿತ ದ್ರೋಣ. ನೀನು ರಾಜನಾಗಿರುವೆ ಎಂದು ಕೇಳಿ, ನಿನ್ನನ್ನು ನೋಡಲು ಬಂದಿದ್ದೇನೆ. ನಾವು ಆಶ್ರಮದಲ್ಲಿ ಒಟ್ಟಿಗೆ ಓದುತ್ತಿದ್ದಾಗ ನೀನು ಹೇಳಿದ್ದು ನೆನಪಿದೆಯೆ? ನಮ್ಮಿಬ್ಬರ ಸ್ನೇಹ ಚಿರಾಯುವಾಗಿರಬೇಕೆಂದು ನೀನು ಬಯಸಿದ್ದೆ. ನನ್ನೊಂದಿಗೆ . ರಾಜ್ಯವನ್ನು ಹಂಚಿಕೊಳ್ಳುತ್ತೇನೆಂದೂ ನೀನು ಹೇಳಿದ್ದೆ. ನನಗೆ ನಿನ್ನ ರಾಜ್ಯವಾಗಲಿ ಐಶ್ವರ್ಯವಾಗಲಿ ಬೇಡ. ಗೆಳೆತನವನ್ನು ಸ್ಮರಿಸಿಕೊಂಡು ನಾನು ಬಂದಿರುವೆ. ನನ್ನನ್ನು ನಿನ್ನ ಹತ್ತಿರ ಇಟ್ಟುಕೊಳ್ಳುವುದೂ ಬಿಡುವುದೂ ನಿನಗೆ ಸೇರಿದ್ದು. ಪ್ರಿಯ ದ್ರುಪದ, ಪುನಃ ನಾವಿಬ್ಬರೂ ಗೆಳೆಯರಾಗಿ ಒಟ್ಟಿಗೆ ಇರೋಣ!'' ಎಂದನುದ್ರುಪದನು ಬದಲಾಗಿದ್ದನು. ಬಾಲ್ಯಕಾಲದ ಆ ಪ್ರೀತಿಯ ದ್ರುಪದ ಅವನಾಗಿರಲ್ಲಿ. ರಾಜನಾದ ಮೇಲೆ ದುರಹಂಕಾರವು ಅವನನ್ನು ಆವರಿಸಿತ್ತು. ಅಧಿಕಾರದ ಅಮಲಿನಲ್ಲಿ ಅವನು `` ವಿದ್ಯಾರ್ಥಿ ಜೀವನದಲ್ಲಿ ಸ್ನೇಹಿತನಾಗಿದ್ದೆ ಎಂದ ಮಾತ್ರಕ್ಕೆ ಬಡ ಬ್ರಾಹ್ಮಣನಾದ ನೀನು ನನ್ನೊದನೆ ಸ್ನೇಹವನ್ನು ಬಯಸಿ ಬಂದಿರುವೆ ಎನ್ನುವುದನ್ನು ಯೋಚಿಸಿದರೆ ನಗು ಬರುತ್ತದೆ. ಸ್ನೇಹ ಸಾಧ್ಯವಾಗುವುದು ಸಮಾನರಲ್ಲಿ ಮಾತ್ರ ಎಂಬುದು ನಿನಗೆ ತಿಳಿಯದೆ? ಇಬ್ಬರು ಬಡವರು ಅಥವಾ ಇಬ್ಬರು ಶ್ರೀಮಂತರು ಗೆಳೆಯರಾಗಬಹುದು. ಆದರೆ ಈ ನೀನು ಹೇಳುವ ಸ್ನೇಹ ಕನಸಿನ ಮಾತೇ ಸರಿ. ಅದೆಂದಿಗೂ ನಿಜವಾಗಲಾರದು. ಇಲ್ಲಿಂದ ಹೊರಟು ಹೋಗು, ಪುನಃ ನಮ್ಮ ಸ್ನೇಹದ ಹಳೆಯ ಕಥೆ ಹೇಳಿಕೊಂಡು ಬರಬೇಡ!'' ಎಂದುಬಿಟ್ಟ.ಅಪಮಾನಿತನಾದ ದ್ರೋಣನು ಸ್ವಲ್ಪಹೊತ್ತು ಹಾಗೆಯೇ ನಿಂತಿದ್ದನು. ನಂತರ ಇದ್ದಕ್ಕಿದ್ದಂತೆ ಆಸ್ಥಾನವನ್ನು ಬಿಟ್ಟು ಒಂದೂ ಮಾತನಾಡದೆ ಹೊರಟುಬಿಟ್ಟನು. ಮೌನವಾಗಿ ನಿಂತಿದ್ದ ಆ ಕ್ಷಣದಲ್ಲಿ, ಸೇಡು ತೀರಿಸಿಕೊಳ್ಳಬೇಕೆಂದು ತನ್ನ ಮನಸ್ಸಿನಲ್ಲಿ ನಿರ್ಧರಿಸಿಕೊಂಡನು. ದುರಹಂಕಾರದಲ್ಲಿ ಕುರುಡನಾಗಿ ತನ್ನ ಪ್ರತಿಜ್ಞೆಯನ್ನು ಮರೆತ ದ್ರುಪದನ ಮೇಲೆ ಸೇಡು. ಒಬ್ಬ ಶಿಷ್ಯನನ್ನು ಅಪ್ರತಿಮ ಧನುರ್ವಿದ್ಯಾನಿಪುಣನನ್ನಾಗಿ ಮಾಡಿ ಅವನ ಮೂಲಕ ತನ್ನ ಕನಸನ್ನು ನನಸಾಗಿ ಮಾಡಿಕೊಳ್ಳುವೆ ಎಂದು ತೀರ್ಮಾನಿಸಿದನು. ತನ್ನ ಭಾವ ಕೃಪ ಇದ್ದ ಹಸ್ತಿನಾಪುರದ ಕಡೆ ಹೊರಟನು. ಕುರುವಂಶದ ಮಕ್ಕಳಿಗೆ ಅವನು ವಿದ್ಯಾಗುರುವಾಗಿರುವನೆಂದು ಕೇಳಿದ್ದ ಅವನು, ಅಲ್ಲಿ ತನ್ನ ಗುರಿಸಾಧನೆಗೆ ಅನುಕೂಲವಾಗಬಹುದು ಎಂದು ಯೋಚಿಸಿದನುಹಾಗೆ ಅವನು ಹಸ್ತಿನಾಪುರಕ್ಕೆ ಬರುತ್ತಿರುವಾಗ ನಗರದ ಹೊರಗಡೆ ಬಾವಿಯೊಂದರ ಸಮೀಪದಲ್ಲಿ ಆ ಚೆಂಡಿನ ಘಟನೆ ನಡೆಯಿತು. ಈಗ ಭೀಷ್ಮನ ಹಾರ್ದಿಕ ಸ್ವಾಗತದಿಂದ ದ್ರೋಣನಿಗೆ ತುಂಬ ಸಂತೋಷವಾಯಿತು. ಪಾಂಚಾಲರಾಜನಿಂದ ತನಗೆ ಅಪಮಾನವಾದ ಸಂಗತಿಯನ್ನೂ, ಅವನ ಮೇಲೆ ತಾನು ಸೇಡು ತೀರಿಸಿಕೊಳ್ಳಬೇಕೆಂದಿರುವುದನ್ನೂಅವನು ಭೀಷ್ಮನಿಗೆ ಹೇಳಿದನು ಅದಕ್ಕೆ ಭೀಷ್ಮನು,`` ನೀನು ಸರಿಯಾದ ಜಾಗಕ್ಕೆ ಬಂದಿದ್ದೀ. ಧನುರ್ವಿದ್ಯೆ ಕಲಿಯಬೇಕೆಂದಿರುವ ನನ್ನ ನೂರಾರು ಮೊಮ್ಮಕ್ಕಳು ಇಲ್ಲಿದ್ದಾರೆ. ಅವರಿಗೆ ಪರಿಣತಿಯನ್ನಿತ್ತು ಅವರನ್ನು ನಿಜವಾದ ಕ್ಷತ್ರಿಯರನ್ನಾಗಿ ನೀನು ಮಾಡುವುದಾದರೆ ನನಗೆ ತುಂಬ ಸಂತೋಷ'' ಎಂದು, ಮಕ್ಕಳನ್ನೆಲ್ಲ ಕರೆದು ದ್ರೋಣನಿಗೆ ಒಪ್ಪಿಸಿ `` ಇಂದಿನಿಂದ ಇವರೆಲ್ಲ ನಿನ್ನವರು. ಇವರನ್ನು ನಿಜಾರ್ಥದಲ್ಲಿ ಪುರುಷಸಿಂಹರನ್ನಾಗಿ ಮಾಡುವುದು ನಿನ್ನ ಕೆಲಸ'' ಎಂದನು.ರಾಜಕುಮಾರರ ವಿದ್ಯಾಭ್ಯಾಸವು ಅನೇಕ ವರ್ಷಗಳು ನಡೆಯಿತು. ಎಲ್ಲರು ಅಸ್ತ್ರವಿದ್ಯಾನಿಪುಣರಾದರು. ಆದರೆ ಅರ್ಜುನ ದ್ರೋಣನ ಪ್ರಿಯಶಿಷ್ಯನೆನಿಸಿಕೊಂಡನು. ಅವನ ವಿದ್ಯಾಕಾಂಕ್ಷೆ, ಪಟ್ಟು ಬಿಡದ ಸಾಧನೆ, ಅಪರಿಮಿತ ತಾಳ್ಮೆ, ವಿದ್ಯೆಯ ಮೇಲೆ ಮತ್ತು ಗುರುವಿನ ಮೇಲೆ ಅವನಿಗಿದ್ದ ಭಕ್ತಿ, ಸಭ್ಯ ನಡತೆ ಎಲ್ಲವೂ ದ್ರೋಣನ ಹೃದಯವನ್ನು ಗೆದ್ದವು. ಗುರುವಿನ ಸ್ವಂತ ಮಗನಾದ ಅಶ್ವತ್ಥಾಮನಿಗಿಂತಲೂ ಪರಿಪೂರ್ಣ ವಿದ್ಯಾರ್ಥಿಯಾದ ಅರ್ಜುನನೇ ಅವನಿಗೆ ಪ್ರಿಯವೆನಿಸಿಕೊಂಡನು. ಅರ್ಜುನನ ಮನಸ್ಸಿನ ಧಾರಣೆ ಅದ್ವಿತೀಯವಾಗಿತ್ತು. ಒಂದು ಪಾಠವನ್ನು ಹೇಳಿಕೊಟ್ಟರೆ ಅದನ್ನು ರಾತ್ರಿಯೆಲ್ಲ ಅಭ್ಯಾಸಮಾಡಿ ಬೆಳಗಾಗುವ ಹೊತ್ತಿಗೆ ಅದನ್ನು ಸ್ವಾಧೀನ ಪಡಿಸಿಕೊಂಡು ಬಿಟ್ಟಿರುತ್ತಿದ್ದನು. ದ್ರೋಣನೆ ಒಮ್ಮೆ`` ನಿನ್ನಂತಹ ಧನುರ್ಧಾರಿಯನ್ನು ನಾನು ನೋಡಿಯೇ ಇಲ್ಲ. ನಿನ್ನನ್ನು ಈ ಲೋಕದಲ್ಲಿಯೇ ಅತ್ಯುತ್ತಮ ಬಿಲ್ಲುಗಾರನನ್ನಾಗಿಸುತ್ತೇನೆ'' ಎಂದು ಪ್ರತಿಜ್ಞೆ ಮಾಡಿದನು. ಅರ್ಜುನನ ಸಂತೋಷಕ್ಕೆ ಪಾರವೆ ಇಲ್ಲದಂತಾಯಿತು.ಒಂದು ಸಲ ಗಂಗಾನದಿಯಲ್ಲಿ ಸ್ನಾನ ಮಾಡುತ್ತಿರುವಾಗ ದ್ರೋಣನನ್ನು ಮೊಸಳೆಯೊಂದು ಹಿಡಿದುಕೊಂಡಿತು. `` ಮೊಸಳೆ ನನ್ನ ಕಾಲನ್ನು ಹಿಡಿದಿದೆ. ಯಾರಾದರೂ ಕಾಪಾಡಿ'' ಎಂದು ಅವನು ಕೂಗಿಕೊಂಡನು. ತನ್ನನ್ನು ತಾನೇ ರಕ್ಷಿಸಿಕೊಳ್ಳುವ ಸಾಮರ್ಥ್ಯವಿದ್ದರೂ, ಶಿಷ್ಯರ ಪರೀಕ್ಷಾರ್ಥವಾಗಿ ಹಾಗೆ ಸಹಾಯಕ್ಕಾಗಿ ಕೂಗಿ ಕರೆದನು. ಅವನ ಕೂಗು ಬಾಯಿಂದ ಹೊರಬೀಳುವುದರೊಳಗಾಗಿ ಅರ್ಜುನನು ನೀರಿನಲ್ಲಿದ್ದ ಮೊಸಳೆಯನ್ನು ತನ್ನ ಚೂಪಾದ ಬಾಣಗಳಿಂದ ಕೊಂದು ಬಿಟ್ಟಿದ್ದನು. ದ್ರೋಣನಿಗೆ ಬಹಳ ಸಂತೋಷವಾಯಿತು ಅವನು ಅರ್ಜುನನಿಗೆ ಬ್ರಹ್ಮಶೀರ್ಷವೆಂಬ ಅಸ್ತ್ರವನ್ನು ಅನುಗ್ರಹಿಸಿದನು. ಅದನ್ನು ಹೇಗೆ ಬಿಡಬೇಕು, ಹೇಗೆ ಉಪಸಂಹಾರಮಾಡಬೇಕು ಎಲ್ಲವನ್ನು ತಿಳಿಸಿ, `` ಈ ಅಸ್ತ್ರವನ್ನು ಸಾಮಾನ್ಯರ ಮೇಲೆ ಪ್ರಯೋಗಿಸತಕ್ಕದ್ದಲ್ಲ. ಹಾಗೆ ಅದು ಇಡೀ ಪ್ರಪಂಚವನ್ನೇ ನಾಶಮಾಡಿಬಿಡುತ್ತದೆ. ಲೋಕಕಂಟಕನಾದ ರಾಕ್ಷಸನೋ ವಿಕ್ಷಿಪ್ತನಾದ ದೇವನೋ ಎದುರಾದರೆ ಮಾತ್ರ ಇದನ್ನು ಪ್ರಯೋಗಿಸಬೇಕು'' ಎಂದು ಎಚ್ಚರಿಕೆಯನ್ನೂ ಕೊಟ್ಟನು. ಅರ್ಜುನನೂ ವಿನಯದಿಂದ ತಲೆಬಾಗಿ ಆ ಅಸ್ತ್ರವನ್ನು ಸ್ವೀಕರಿಸಿದನು.* * * * ಒಮ್ಮೆ ಕಪ್ಪು ಹುಡುಗನೊಬ್ಬನು ದ್ರೋಣನ ಬಳಿಗೆ ಯಾರು ಇಲ್ಲದಿದಾದ್ದಗ ಬಂದು ಆ ಮಹಾಬ್ರಾಹ್ಮಣನ ಪಾದಗಳಿಗೆ ನಮಸ್ಕರಿಸಿ, ``ಸ್ವಾಮಿ ನಾನು ಧನುರ್ವಿದ್ಯೆ ಕಲಿಯಬೇಕೆಂದು ಬಂದಿರುವೆನು. ನನ್ನನ್ನು ಶಿಷ್ಯನನ್ನಾಗಿ ಸ್ವೀಕರಿಬೇಕು'' ಎಂದು ಪ್ರಾರ್ಥಿಸಿಕೊಂಡನು. ಅವನ ನಡತೆ ದ್ರೋಣನಿಗೆ ಪ್ರಿಯವಾಯಿತು. ಕರುಣೆಯಿಂದ ``ಯಾರಪ್ಪಾ ನೀನು?'' ಎಂದು ವಿಚಾರಿಸಿದನು. ಹುಡುಗನು, `` ನಾನು ಹಿರಣ್ಯಧನುಸ್ಸೆಂಬ ನಿಷಾದರಾಜನ ಮಗ. ಏಕಲವ್ಯನೆಂದು ನನ್ನ ಹೆಸರು'' ಎಂದು ಉತ್ತರಕೊಟ್ಟನು. ಕ್ಷತ್ರಿಯನಲ್ಲದ ಅವನನ್ನು ದ್ರೋಣನು ಶಿಷ್ಯನಾಗಿ ತೆಗೆದುಕೊಳ್ಳುವಂತಿರಲಿಲ್ಲ. `` ಮಗೂ, ನಿನ್ನನ್ನು ನಾನು ಶಿಷ್ಯನಾಗಿ ತೆಗೆದುಕೊಳ್ಳಲಾರೆ. ನಾನೀಗ ಈ ಕ್ಷತ್ರಿಯರಾಜಕುಮಾರರಿಗೆ ವಿದ್ಯೆಯನ್ನು ಕಲಿಸುತ್ತಿರುವೆನು. ನೀನು ನನಗೆ ಇಷ್ಟವಾಗಿದ್ದರೂ ನಿನಗೆ ಇಲ್ಲಿ ಸ್ಥಳವಿಲ್ಲ ಎಂದು ಮೃದುವಾಗಿ ಹೇಳಿ ಕಳಿಸಿದನು.ನಿರಾಶೆಯಿಂದ ಅರಣ್ಯಕ್ಕೆ ಹೊಂದಿರುಗಿದ ಏಕಲವ್ಯನು ತನ್ನ ದುಃಖವನ್ನು ಸಹಿಸಿಕೊಂಡು, ದ್ರೋಣನ ಮೇಲೆ ಸಿಟ್ಟಾಗದೆ, ಮಣ್ಣಿನಿಂದ ದ್ರೋಣನ ಪ್ರತಿಮೆಯೊಂದನ್ನು ಮಾಡಿ ಅದನ್ನೆ ತನ್ನ ಗುರುವೆಂದು ಭಾವಿಸಿ ಪೂಜಿಸತೊಡಗಿದನು. ಪ್ರತಿದಿನವೂ ಪೂಜೆಯ ನಂತರ ಆ ಮೂರ್ತಿಯೆದುರಿಗೆ ಬಿಲ್ಲನ್ನು ಅಭ್ಯಾಸ ಮಾಡುವನು. ಬಹುಬೇಗ. ಬಹುಬೇಗ ಧನುರ್ವಿದ್ಯೆಯ ರಹಸ್ಯಗಳೆಲ್ಲ ಅವನಿಗೆ ಕರಗತವಾದವು. ತೀವ್ರ ಆಕಾಂಕ್ಷೆಯ ಬಲ ಇಂಥದು. ಅಪ್ರಜ್ಞೆಯ ಚಿಂತನೆಗಳೆಲ್ಲವನ್ನೂ ಈ ಆಕಾಂಕ್ಷೆಯೇ ಸೆಳೆದುಕೊಂಡುಬಿಡುವುದು; ನಮ್ಮ ಕಾರ್ಯಗಳೆಲ್ಲವೂ ಈ ಆಕಾಂಕ್ಷೆಯ ಪ್ರತಿಧ್ವನಿಗಳಾಗುವವು. ಏಕಲವ್ಯನಿಗೆ ಆದುದೇ ಹೀಗೆ. ` ನಿನ್ನನ್ನು ತೆಗೆದುಕೊಳ್ಳಲು ಇಷ್ಟವಿಲ್ಲವೆಂದೆಲ್ಲ, ತೆಗೆದುಕೊಳ್ಳಲು ಸಾಧ್ಯವಿಲ್ಲ' ಎಂದ ಗುರುವಿನ ಮೇಲಣ ಭಕ್ತಿ, ವಿದ್ಯೆಯ ಮೇಲಣ ಪ್ರೇಮ, ಇವೆರಡೂ ಅವನನ್ನು ಬಿಲ್ವಿದ್ಯೆಯನ್ನಲ್ಲದೆ ಇನ್ನೇನನ್ನೂ ಯೋಚಿಸದಂತೆ ಮಾಡಿಬಿಟ್ಟವು. ಬಹುಬೇಗ ಧನುರ್ವಿದ್ಯೆಯಲ್ಲಿ ಅವನು ಪಾರಂಗತನಾದನು.ಒಂದು ಸಲ ಕೌರವ ಪಾಂಡವ ರಾಜಕುಮಾರರು ಅರಣ್ಯಕ್ಕೆ ವಿಹಾರಾರ್ಥವಾಗಿ ಹೋದರು. ಪಾಂಡವರು ಒಂದು ನಾಯಿಯನ್ನೂ ಕರೆದೊಯ್ದಿದ್ದರು. ಈ ನಾಯಿಯ ಕಾಡಿನಲ್ಲಿ ಮುಂದೆಮುಂದೆ ಹೋಗುತ್ತಿತ್ತು. ಚಿರತೆಯ ಚರ್ಮವನ್ನುಟ್ಟು ಚಿರತೆಯಂತೆಯೇ ಕ್ಷಿಪ್ರನಡೆಯನ್ನುಳ್ಳ ಒಬ್ಬನನ್ನು ನೋಡಿ, ಬೇಟೆಯಾಡತಕ್ಕ ಮೃಗವಿರಬೇಕೆಂದು ಬೊಗಳಲಾರಂಭಿಸಿತು. ಅವನು ಏಕಲವ್ಯ. ಬೊಗಳಲು ಬಾಯ್ದೆರೆದಿದ್ದ ನಾಯಿಯ ಬಾಯಿ ಮುಚ್ಚುವುದರೊಳಗಾಗಿ ಅವನು ಅದರ ಬಾಯನ್ನು ಬಾಣಗಳಿಂದ ತುಂಬಿಬಿಟ್ಟನು. ಏಳು ಬಾಣಗಳನ್ನು ಅದೆಷ್ಟು ವಿಚಕ್ಷಣೆಯಿಂದ ನೆಯ್ದಿದ್ದನೆಂದರೆ, ಆ ನಾಯಿಗೆ ಬಾಣಗಳನ್ನು ಉಗುಳಲೂ ಆಗಲಿಲ್ಲ, ಬೊಗಳಲೂ ಆಗಲಿಲ್ಲ. ಅದು ಏದುಸಿರು ಬಿಡುತ್ತ ತನ್ನ ಒಡೆಯರ ಬಳಿಗೆ ಓಡಿಬಂದಿತು. ಅದರ ಬಾಯಿಗೆ ತುಂಬಿದ ಬಾಣಗಳನ್ನು ಎಲ್ಲರ ಗಮನವನ್ನೂ ಸೆಳೆದವು. ದ್ರೋಣ ಹಾಗೂ ಅವನ ಶಿಷ್ಯರು ಈ ಅಜ್ಞಾತ ಬಿಲ್ವಿದ್ಯಾನಿಪುಣ ಬಾಣಗಳಿಂದಲೇ ರಚಿಸಿದ ಕಾವ್ಯವನ್ನು ಹೊಗಳಿದರು. ಕೆಲವರು ಅವನನ್ನು ಹುಡುಕಿಕೊಂಡು ಹೊರಟರು. ಅವನು ಸಿಕ್ಕಿದಾಗ ನೀನು ಯಾರೆಂದು ವಿಚಾರಿಸಿದರು. ನಾನು ಹಿರಣ್ಯಧನುಸ್ಸೆಂಬ ನಿಷಾದರಾಜನ ಮಗ ಏಕಲವ್ಯ ಎಂದಾಗ, ಹೇಗೆ ನೀನು ಬಿಲ್ವಿದ್ಯೆಯಲ್ಲಿ ಇಂಥ ನೈಪುಣ್ಯವನ್ನು ಸಾಧಿಸಿರುವೆ ಎಂದು ರಾಜಕುಮಾರರು ಕೇಳಿದರು. ಏಕಲವ್ಯನು ನಕ್ಕು, `ದ್ರೋಣನ ಶಿಷ್ಯನಾದ್ದರಿಂದ!' ಎಂದು ಉತ್ತರಕೊಟ್ಟನು. ಎಲ್ಲರೂ ಹಿಂದಕ್ಕೆ ಬಂದು ದ್ರೋಣನಿಗೆ ಸಂಗತಿಯನ್ನು ತಿಳಿಸಿದರು. ದ್ರೋಣನ ಪ್ರಿಯಶಿಷ್ಯ ಅರ್ಜುನನಿಗೆ ಮಾತ್ರ ನಡೆದುದು ಯಾವುದೂ ಪ್ರಿಯವಾಗಲಿಲ್ಲ. ಅವನು ಆಚಾರ್ಯನ ಬಳಿಗೆ ಹೋಗಿ, `` ನೀವು ನನ್ನನ್ನು ಲೋಕೈಕವೀರನಾದ ಧನುರ್ಧಾರಿಯನ್ನಾಗಿ ಮಾಡುತ್ತೇನೆ ಎಂದು ಪ್ರತಿಜ್ಞೆಮಾಡಿದ್ದಿರಿ. ಆದರೆ ಈಗ ಅದನ್ನು ಬಿಟ್ಟುಕೊಟ್ಟು ಬೇರೊಬ್ಬನನ್ನು ಆ ಸ್ಥಾನಕ್ಕೆ ತಂದಿರುವಿರಿ ಎಂದು ಕಾಣುತ್ತದೆ" ಎಂದು ತನ್ನ ಅಳಲನ್ನು ತೋಡಿಕೊಂಡನು.ದ್ರೋಣನು ಈ ಏಕಲವ್ಯನನ್ನು ನೋಡಲು ಅರ್ಜುನನ ಜೊತೆಗೆ ಹೋದನು. ಚಿರತೆ ಚರ್ಮಚನ್ನು ಸುತ್ತಿಕೊಂಡು ಕೈಯಲ್ಲಿ ನಿಲ್ಲು ಬಾಣಗಳನ್ನು ಹಿಡಿದುಕೊಂಡಿದ್ದ ಆ ಬಾಲಕನ ನೆನಪೇ ಅವನಿಗೆ ಬರಲಿಲ್ಲ. ಏಕಲವ್ಯನು ಗುರುವನ್ನು ನೋಡಿದವನೆ ಓಡಿಬಂದು ಅವನ ಕಾಲುಗಳಿಗೆರಗಿದ. ಹೃದಯದಲ್ಲಿ ಪೂಜಿಸಿಸುತ್ತಿದ್ದ ಗುರುವು ಎದುರಿಗೆ ಬಂದು ನಿಂತಾಗ ಅವನ ಸಂತೋಷದ ಕಣ್ಣಿರು ಅವನ ಪಾದಗಳನ್ನು ತೊಯಿಸಿತು. ದ್ರೋಣನಿಗೆ ಅವನನ್ನು ಕಂಡು ಬಹು ಆನಂದವಾಯಿತು. ಯಾವಗಿನಿಂದ ನೀನು ನನ್ನ ಶಿಷ್ಯನಾದೆಯಪ್ಪ ಎಂದು ಕೇಳಿದ. ನಿಷ್ಪಾಪ ಮುಗ್ಧನಾದ ಏಕಲವ್ಯನು ಇಡೀ ಕಥೆಯನ್ನು ಸಂಭ್ರಮದಿಂದ ಮತ್ತೊಮ್ಮೆ ನೆನಪಿಸಿದ. ಅವನ ನಡತೆಯನ್ನು ನೋಡಿ ದ್ರೋಣನಿಗೆ ಅವನನ್ನು ಪ್ರೀತಿಸದೆ ಇರಲು ಅಸಾಧ್ಯವಾಯಿತ್ತು . ತಾನೆಷ್ಟು ದೊಡ್ಡ ಬಿಲ್ಲುಗಾರನಾಗಿರುವೆನೆಂಬ ಕಲ್ಪನೆ ಸಹಾ ಏಕಲವ್ಯನಿಗಿರಲ್ಲಿ. ಮನಸ್ಸಿಲ್ಲದ ಮನಸ್ಸಿನಿಂದ ದ್ರೋಣನು, `` ನೀನು ನನ್ನ ಶಿಷ್ಯ ಎಂದು ಹೇಳಿಕೊಳ್ಳುತ್ತಿರುವೆ . ಎಂದಮೇಲೆ ನಾನು ನಿನ್ನನ್ನು ಗುರುದಕ್ಷಿಣೆ ಕೊಡು ಎಂದು ಕೇಳಬಹುದು ತಾನೆ?'' ಏಕಲವ್ಯನು ಬಹು ಆನಂದಪಟ್ಟು, `` ಖಂಡಿತವಾಗಿ . ನೀವು ದಕ್ಷಿಣೆ ಕೇಳಿದರೆ ದೊಡ್ಡ ಮರ್ಯಾದೆ ಎಂದು ತಿಳಿಯುತ್ತೆನೆ''ಎಂದ . ದ್ರೋಣನು ಅರ್ಜುನನ ಮುಖದಲ್ಲಿದ್ದ ನಿರ್ದಯ ಭಾವವನ್ನು ಕಂಡ. `` ನನಗೆ ನಿನ್ನ ಬಲಗೈ ಹೆಬ್ಬೆರಳು ಬೇಕು, ಕೊಡುವೆಯಾ?'' ಎನ್ನುವ ಮಾತು ಮುಗಿಯುವುದರೊಳಗೆ ಏಕಲವ್ಯನು ತನ್ನ ಬತ್ತಳಿಕೆಯಿಂದ ಚಂದ್ರಮುಖದ ಹರಿತವಾದ ಬಾಣವೊಂದನ್ನು ತೆಗೆದು ಅದರಿಂದ ತನ್ನ ಬಲಗೈ ಹೆಬ್ಬೆರಳನ್ನು ಕತ್ತರಿಸಿ, ರಕ್ತ ಸುರಿಯುತ್ತಿದ್ದ ಅದನ್ನು ತನ್ನ ಪ್ರೀತಿಯ ಗುರುವಿನ ಪಾದಗಳ ಮೇಲೆ ಇಟ್ಟುಬಿಟ್ಟ.ಅರ್ಜುನನಿಗೆ ಸಂತೋಷವಾಯಿತು . ಯಾರೂ ಏನನ್ನೂ ಮಾತನಾಡಲಿಲ್ಲ . ಎಲ್ಲವೂ ಮುಗಿಯಿತು. ಏಕಲವ್ಯನು ತನ್ನ ಗುರುವಿನ ಪಾದಗಳಿಗೆ ಮಣಿದ. ಹೋಗಿಬನ್ನಿರಿ ಸ್ವಾಮಿ ಎಂದು ಬೀಳ್ಕೊಟ್ಟ. ದ್ರೋಣಾರ್ಜುನರಿಬ್ಬರೂ ಮರುಮಾತಾಡದೆ ತಮ್ಮ ಶಿಬಿರಕ್ಕೆ ಮರಳಿದರು.* * * * `` ಅಮ್ಮಾ, ನಾನೊಂದು ಕೇಳುತ್ತೇನೆ, ಹೇಳುವೆಯಾ? ರಾಧೇಯ ತನ್ನ ತಾಯಿ ರಾಧೆಯನ್ನು ಕೇಳಿದ. ಅವಳು ಅಧಿರಥನೆಂಬ ಸಾರಥಿಯ ಹೆಂಡತಿ. ರಾಧೇಯ ಅವರ ಮಗ. ಅವನಿಗೆ ಹದಿನಾರು ತುಂಬಿತು. ಅವನೆಂದ `` ಇಂದು ನನ್ನ ಹುಟ್ಟುಹಬ್ಬ. ಅಪ್ಪ ನನಗೊಂದು ರಥವನ್ನು ಹೊಸ ಕುದುರೆಗಳ ಸಮೇತ ತಂದುಕೊಟ್ಟ, ನೀನು ನಿನ್ನದೆ ರಥವನ್ನೋಡಿಸುವಷ್ಟು ದೊಡ್ಡವನಾಗಿರುವೆ ಎಂದರು. ಆದರೆ, ಅಮ್ಮ, ನನಗೆ ರಥ ಬೇಡ . ಬಿಲ್ಲು ಬಾಣ ಹಿಡಿಯಬೇಕೆಂದು ನನ್ನ ಕೈ ತುಡಿಯುತ್ತಿದೆ. ನನಗೆ ಬೇರೆ ಇನ್ನೇನೂ ಬೇಡ. ಹಗಲಿರುಳೂ ನನಗೆ ಅದೇ ಆಸೆ. ನಾನು ಧನುರ್ಧಾರಿ ಯೋಧನಾಗಬೇಕು. ನನಗೆ ಹೀಗೇಕೆ ಅನ್ನಿಸುತ್ತಿದೆ ಅಮ್ಮಾ?''ರಾಧೆಗೆ ಕಣ್ಣಿರು ಬಂತು. ರಾಧೇಯನಿಗೆ ತಾಯಿಯ ಕಣ್ಣೀರು ನೋಡಿ ಗಾಬರಿಯಾಯಿತು. `` ಅಮ್ಮ, ನಾನೇನಾದರೂ ನಿನ್ನನ್ನು ನೋಯಿಸಿದೆನೆ? ನೀನೆಂದರೆ ನನಗೆ ಜೀವಕ್ಕಿಂತ ಹೆಚ್ಚು. ನಾನು ಹೇಳಿದ್ದು ಬೇಜಾರಾಗಿದ್ದರೆ ಕ್ಷಮಿಸಮ್ಮಾ. ಏಕಮ್ಮಾ ಅಳುತ್ತಿದ್ದೀಯೆ?'' ಎನ್ನುತ್ತಿದ್ದ ಮಗನಿಗೆ ಉತ್ತರಿಸುವ ಬದಲು ಅವಳು ``ನಿನ್ನೆ ನೀನು ನಿದ್ರೆಯಲ್ಲಿಯೇ ಮಾತನಾಡುತ್ತಿದ್ದೆ. `ನನ್ನ ಪ್ರಶ್ನೆಗೆ ಉತ್ತರಿಸುವ ಮೊದಲು ಹೋಗಬೇಡ. ಯಾರು ನೀನು? ಹೀಗೇಕೆ ನನ್ನನ್ನು ಕಾಡಿಸುತ್ತಿರುವೆ?' ಎಂದೆಲ್ಲ ಯಾರನ್ನೋ ಕೇಳುತ್ತಿದ್ದೆ'' ಎಂದಳು.ರಾಧೇಯ ಸ್ವಲ್ಪಹೊತ್ತು ಸುಮ್ಮನಿದ್ದ. ಅನಂತರ ಹೇಳಿದ `` ಅಮ್ಮ, ನನಗೆ ಆಗಾಗ್ಗೆ ಒಂದು ಕನಸು ಬಿದ್ದು ಎಚ್ಚರಾಗುತ್ತದೆ. ಯಾವಾಗಲೂ ಅದೇ ಕನಸು . ಶ್ರೀಮಂತ ಉಡುಗೆಯುಟ್ಟಿರುವ ಹೆಂಗಸೊಬ್ಬಳು ಬರುತ್ತಾಳೆ. ರಾಜಕುಮಾರಿಯಂತಿರುವ ಅವಳ ಮುಖ ಅವಕುಂಠನದಲ್ಲಿ ಸರಿಯಾಗಿ ಕಾಣುವುದಿಲ್ಲ. ಮಲಗಿರುವ ನನ್ನ ಮೇಲೆ ಬಗ್ಗಿ ಕಂಬನಿ ಸುರಿಸುತ್ತಾಳೆ. ನಾನು ಎದ್ದು ಯಾರು ನೀನು ಎಂದು ಕೇಳುವುದರೊಳಗೆ ಮಾಯವಾಗಿರುತ್ತಾಳೆ. ಇದೇಕಮ್ಮ ನನಗೆ ಹೀಗಾಗುತ್ತಿದೆ? ಅಪ್ಪನಂತೆ ಸಾರಥಿಯಾಗಲು ನನಗೇಕೆ ಇಷ್ಟವಾಗುವುದಿಲ್ಲ?'' ಈ ಕನಸಿಗೇನಾದರೂ ವಿವರಣೆ ಇರಬೇಕಲ್ಲವೆ?ರಾಧೇಯ ತಾಯಿಯ ಹತ್ತಿರ ಕುಳಿತ. ಬಿಟ್ಟರೆ ಎಲ್ಲಿ ಹೊರಟುಹೋಗುವನೋ ಎಂಬ ಭಯದಿಂದ ಅವಳು ಅವನನ್ನು ತೊಡೆಯ ಮೇಲೆ ಕೂರಿಸಿಕೊಡಳು. `` ಮಗನೆ, ನಿನಗೆ ಒಂದು ಕಥೆ ಹೇಳಲೆಬೇಕಾದ ಕಾಲ ಬಂದಿದೆ. ಹದಿನಾರು ವರ್ಷಗಳ ಹಿಂದೆ ನಡೆದದ್ದು. ಸುಂದರವಾಗಿ ನಳನಳಿಸುತ್ತಿದ್ದ ಒಂದು ದಿನ ಬೆಳಗ್ಗೆ ನಿನ್ನ ತಂದೆ ಸೂರ್ಯನಿಗೆ ಅರ್ಘ್ಯ ಕೊಡಲು ಗಂಗಾನದಿಯ ದಡಕ್ಕೆ ಹೋಗಿದ್ದರು. ನದಿಯ ಮೇಲೆ ತೇಲುತ್ತಿದ್ದ ಏನನ್ನೋ ನೋಡಿ ಅವರ ಕಣ್ಣು ಕೋರೈಸಿತು. ಯಾವುದೋ ಪ್ರಕಾಶಮಾನವಾದ ಒಡವೆ ತೇಲುತ್ತಿದ್ದ ಹಾಗೆ ಇತ್ತು. ಸ್ವಲ್ಪ ಹೊತ್ತಿಗೆ ಅದು ಇವರ ಹತ್ತಿರ ತೇಲಿಕೊಂಡು ಬಂದಿತು. ಕುತೂಹಲದಿಂದ ನಿನ್ನ ತಂದೆ ಅದರ ಬಳಿಗೆ ಈಜಿಕೊಂಡೂ ಹೋದರು. ಅದೊಂದು ಮರದ ಪೆಟ್ಟಿಗೆಯಾಗಿತ್ತು. ಹತ್ತಿರ ಹೋಗಿ ನೋಡಲು ಅದರೊಳಗೆ ಒಂದು ಸುಂದರ ಮಗುವಿತ್ತು. ಅವರು ನೋಡಿದ್ದ ಮಕ್ಕಳಲ್ಲೆಲ್ಲ ಸುಂದರ ಮಗು. ಶಾಂತವಾಗಿ ಮಲಗಿತ್ತು. ಅದರಮ್ಮ ಹೇಳಲಾಗದ ಲಾಲಿಪದವನ್ನು ಗಂಗೆ ಹೇಳಿ ಮಲಗಿಸಿರುವಳೋ ಎಂಬಂತಿತ್ತು. ಪೆಟ್ಟಿಗೆಯೊಂದಿಗೆ ನಿನ್ನ ತಂದೆ ಈಜಿ ದಡ ಸೇರಿದರು. ಓಡೋಡಿ ಮನೆಗೆ ಬಂದ ಅವರು `` ರಾಧಾ! ರಾಧಾ! ನೋಡು ನಿನಗೆ ಏನನ್ನು ತಂದಿರುವೆ ಎಂಬುದನ್ನು !'' ಎಂದು ನನ್ನನ್ನು ಕೂಗುತ್ತಿದ್ದರು. ಅವರನ್ನು ಇಷ್ಟು ಸಂಭ್ರಮಗೊಳಿಸಿದ್ದು ಏನು ಎಂದು ನೋಡಲು ನಾನು ಹೊರಗೆ ಹೋದೆ. ಅವರ ಕಂಕುಳಲ್ಲಿದ್ದ ಮಗುವನ್ನು ನೋಡಿ ನನ್ನ ಕಣ್ಣನ್ನೆ ನಾನು ನಂಬಲಾಗಲಿಲ್ಲ `` ಆಹಾ, ಈ ಮಗು ಬಾಲಸೂರ್ಯನ ಹಾಗೆ ಪ್ರಕಾಶಿಸುತ್ತಿದೆ. ಅದಕ್ಕೆ ಅಂಟಿದಂತಿರುವ ಕವಚ ಕುಂಡಲಗಳನ್ನು ನೋಡಿ! ಯಾವುದೋ ದೇವತೆಯ ಮಗುವಿರಬೇಕು'' ಎಂದೆ ನಾನು.ರಾಧೇಯ ಉಸಿರುಕಟ್ಟಿ ಎದ್ದು ಕುಳಿತ. ಈ ಕಥೆ ಅಷ್ಟೊಂದು ಆಶ್ಚರ್ಯಕರವಾಗಿತ್ತು. ರಾಧೆ ಮುಂದುವರೆಸಿದಳು. `` ಖಂಡಿತವಾಗಿ ಇದು ಮಾನವಶಿಶುವಲ್ಲ. ಅದು ಯಾವುದೋ ದೇವತೆಯದೇ ಇರಬೇಕು. ಮಾನವಶಿಶುವಿಗೆ ಇಂತಹ ದಿವ್ಯಸೌಂದರ್ಯವು ಎಲ್ಲಿಂದ ಬರಬೇಕು?''ಎಂದೆ. ನಿಮ್ಮಪ್ಪ ನಕ್ಕರು. `` ದೇವರ ಮರಿಯೇ ಆಗಲಿ, ನಿನಗೆ ಮಕ್ಕಳಿಲ್ಲವೆಂದು ನಿನಗಾಗಿಯೇ ದೇವರು ಕಳಿಸಿಕೊಟ್ಟಿದ್ದಾನೆ. ಇವನು ನಿನ್ನ ಮಗುವಾದ್ದರಿಂದ ನಾನು ಇವನಿಗೆ ರಾಧೇಯ ಎಂದು ಹೆಸರಿಡುವೆ'' ಎಂದರು. ಮಕ್ಕಳಿಲ್ಲದ ನಮ್ಮ ಮನೆಯನ್ನು ಹೀಗೆ ನೀನು ಬಂದು ಪಾವನಗೊಳಿಸಿದೆ. ನಮ್ಮ ಮನಸ್ಸು ಧನ್ಯಭಾವದಿಂದ ತುಂಬಿಹೋಯಿತು. ನೀನು ಕವಚಕುಂಡಲಗಳೊಂದಿಗೆ ಹುಟ್ಟಿದ್ದೆಯಾದ್ದರಿಂದ ನಿನಗೆ ವಸುಷೇಣ ಎಂದೂ ಹೆಸರಿಟ್ಟೆವೂ. ಆದರೆ ನಿನ್ನ ತಂದೆ ಕರೆಯುವುದು ರಾಧೇಯ ಅಂತಲೇ. ಬಹುಶಃ ನೀನು ಅರಮನೆಗೆ ಸೇರಿದ ಮಗುವಾಗಿರಬೇಕು. ಆದರೆ ಇಷ್ಟು ವರ್ಷವೂ ಬಡ ಸಾರಥಿಯ ಮಗನಾಗಿ ಬೆಳೆದೆ. ನಮ್ಮ ಪ್ರೀತಿಯನ್ನು ಮಾತ್ರವೇ ನಾವು ನಿನಗೆ ಕೊಟ್ಟಿರುವುದು. ನಿನಗೆ ಸಾರಥಿಯಾಗಲು ಇಷ್ಟವಿಲ್ಲದಿರುವುದು ನಿನ್ನ ಹುಟ್ಟಿನಿಂದಾಗಿ ಎಂದು ತೋರುತ್ತದೆ. ನೀನು ಬಿಲ್ಲುವಿದ್ಯೆ ಕಲಿಯಲು ಬಯಸುವುದೂ ನೀನು ಕ್ಷತ್ರಿಯನಾಗಿರುವುದರಿಂದಲೇ ಇರಬೇಕು'' ಎಂದಳು. ಆಮೇಲೆ ಬಿಕ್ಕಿಬಿಕ್ಕಿ ಅಳುತ್ತ ಅವಳು, `` ಹೋಗು ಮಗು ವಿಶಾಲ ಪ್ರಪಂಚದಲ್ಲಿ ಹೋಗಿ ನಿನ್ನಮ್ಮನನ್ನು ಹುಡುಕು. ನಾನು ನಿನ್ನ ತಾಯಿಯಲ್ಲ. ಅವಳು ಸಿಕ್ಕರೆ ನಿನ್ನ ಬಾಳಿನ ಶೂನ್ಯ ಕೊನೆಗೊಳ್ಳುವುದು. ನಿನ್ನಂಥ ಮಗುವನ್ನು ಇಷ್ಟು ವರ್ಷಗಳ ಕಾಲ ಕೊಟ್ಟುದಕ್ಕೆ ನಾನು ದೇವರಿಗೆ ಕೃತಜ್ಞಳು. ಈ ವರ್ಷಗಳನ್ನು ಸ್ಮರಿಸುತ್ತ ಉಳಿದ ಬದುಕನ್ನು ನಾನು ಕಳೆಯುವೆ'' ಎಂದಳು.ರಾಧೇಯನೂ ಅಳಲಾರಂಭಿಸಿದನು `` ಏನಮ್ಮ, ಏನು ಹೇಳುತ್ತಿರುವೆ? ನನ್ನ ತಾಯಿ ನನ್ನನ್ನು ತೊರೆದ ಹಾಗೆ ನೀನೂ ನನ್ನನ್ನು ತೊರೆಯಬೇಕೆಂದಿರುವೆಯಾ? ಅವಳು ಯಾರೆಂದು ನನಗೆ ಗೊತ್ತಿಲ್ಲ. ಅದನ್ನು ತಿಳಿಯುವ ಬಯಕೆಯೂ ನನಗಿಲ್ಲ. ನೀನೆ ನನ್ನ ತಾಯಿ, ನನಗೆ ಪ್ರಿತಿಯನ್ನು ಧಾರೆಯೆರೆದು ಬೆಳೆಸಿದ ತಾಯಿ. ನನಗೆ ಜೀವನ ಕೊಟ್ಟವಳು ನೀನು. ನಾನು ಕ್ಷತ್ರಿಯನಾಗಿರಬಹುದು; ಅದರಿಂದೇನು? ನಾನು ನಿಮ್ಮ ಮಗನಾಗಿಯೆ ಇರುವೆನು. ನನ್ನ ಹೆಸರು ರಾಧೇಯ; ಜೀವನದ ಕೊನೆಯವರೆಗೂ ನಾನು ರಾಧೇಯನೆನ್ನಿಸಿಕೊಡೇ ಬಾಳುವೆನು. ಲೋಕವು ನನ್ನನ್ನು ಹಾಗೆಯೇ ಕರೆಯಬೇಕು. ನನ್ನ ತಂದೆತಾಯಿಗಳೆಂದರೆ ನನಗೇನೂ ನಾಚಿಕೆಯಿಲ್ಲ. ನಾನು ಸೂತಪುತ್ರ ರಾಧೇಯನೆಂಬುದೇ ನನಗೆ ಹೆಮ್ಮೆ. ಅಮ್ಮ, ಈ ಪ್ರಪಂಚದಲ್ಲಿ ಕಲಿಕೆ ಎಂಬುದು ಯಾರೊಬ್ಬರ ಸ್ವತ್ತಲ್ಲ. ಕಲಿಯುವುದಕ್ಕೆ ಜಾತಿ ಅಡ್ಡಬಾರದು. ನಾನು ವಿದ್ಯಾರ್ಥಿಯಾಗಿ ಹೋಗುವೆನು. ವಿದ್ಯಾವಂತನಿಗೆ ಎಲ್ಲಿ ಹೋದರೂ ಮನ್ನಣೆಯಿರುವುದು. ವಿದ್ಯೆಯ ಆಕಾಂಕ್ಷೆ, ಧನುರ್ವಿದ್ಯೆಯಲ್ಲಿ ಪರಿಣತಗಬೇಕೆಂಬ ಆಸೆ, ನನ್ನನ್ನು ಸುಡುತ್ತಿದೆ. ನಾನು ಜ್ಞಾನಸಂಪಾದನೆಗಾಗಿ ಈಗಲೇ ಹೋಗುವೆನು. ಆದರೆ, ನೆನಪಿಡು, ನಾನು ನಿನ್ನ ಬಳಿಗೆ ಹಿಂದಿರುಗಿ ಬರುವೆನು. ನೀನೆ ನನ್ನ ತಾಯಿ ; ನನ್ನನ್ನು ನಿನ್ನಿಂದ ಯಾರು ಕಿತ್ತುಕೊಳ್ಳಲಾರರು, ಯಾವುದೂ ಪ್ರತ್ಯೇಕಿಸಲಾರದು'' ಎಂದ ರಾಧೇಯನು ತಾಯಿಯನ್ನು ಬಿದಿದಪ್ಪಿಕೊಡನು. ಇಬ್ಬರ ಕಣ್ಣೀರಿನ ಹನಿಗಳೂ ಒಂದಾಗಿ ಭೂಮಿಗೆ ಉದುರಿದವು.* * * * ರಾಧೇಯನ ಏಕಮಾತ್ರ ಗುರಿ ಧನುರ್ವಿದ್ಯೆಯ ಸಂಪಾದನೆಯಾಗಿತ್ತು. ಹಸ್ತಿನಾಪುರದಲ್ಲಿ ರಾಜಕುಮಾರರೆಲ್ಲರೂ ದ್ರೋಣನಿಂದ ಕಲಿಯುತ್ತಿರುವ ವಿದ್ಯೆಯ ಪ್ರಖ್ಯಾತಿಯನ್ನು ಅವನು ಕೇಳಿದ್ದ. ಅಲ್ಲಿಗೆ ಹೋಗಿ ದ್ರೋಣನನ್ನು ಕಂಡು, `` ಆಚಾರ್ಯ, ದಯವಿಟ್ಟು ನನ್ನನ್ನು ಶಿಷ್ಯನನ್ನಾಗಿ ಸ್ವೀಕರಿಸಿ. ನಾನು ನಿಮ್ಮಿಂದ ಧನುರ್ವಿದ್ಯೆಯನ್ನು ಕಲಿಯಬೇಕೆಂದಿರುವೆನು'' ಎಂದು ಬೇಡಿಕೊಡನು. ದ್ರೋಣನು ನೀನು ಯಾರು ಎಂದು ಪರಿಚಯವನ್ನು ಕೇಳಲು, ರಾಧೇಯನು ನಾನು ಅಧಿರಥನೆಂಬ ಸೂತನ ಮಗ, ರಾಧೇಯ ಎಂದನು. ಸೂತನನ್ನು ಶಿಷ್ಯನನ್ನಾಗಿ ತೆಗೆದುಕೊಳ್ಳಕು ದ್ರೋಣ ಮನಸ್ಸು ಒಪ್ಪಲಿಲ್ಲ. `` ನೀನು ಸೂತಪುತ್ರನೆಂದು ಹೇಳುತ್ತಿರುವೆ. ನಾನು ಕೆಳಜಾತಿಯವರಿಗೆ ವಿದ್ಯೆ ಕಲಿಸುವುದಿಲ್ಲ " ಎನ್ನಲು, ರಾಧೇಯನು ಹಿಂದಿರುಗಬೇಕಾಯಿತು.ರಾಧೇಯ ಮನೆಯ ಕಡೆ ನಡೆದ. ಸೂತಪುತ್ರನೆಂಬ ಹೆಸರು ಅವನಿಗೆ ಜೀವನದ ಉದ್ದಕ್ಕೂ ಅಂಟಿಕೊಂಡೇ ಬಂದಿತ್ತು. ಇದರಿಂದಾಗಿ ಅವನು ಅನುಭವಿಸಿದ ಮಾನಸಿಕ ಯಾತನೆ ಅಷ್ಟಿಷ್ಟಲ್ಲ. ರಾತ್ರಿ ಹಗಲು ಅವನಿಗೆ ಅದೇ ಯೋಚನೆ--ಧನುರ್ವಿದ್ಯೆಯನ್ನು ಸಂಪಾದಿಸುವುದು ಹೇಗೆ ಎಂದು. ಸೂತಪುತ್ರನಾಗಿರುವುದರಿಂದ ಯಾವ ಗುರುವಾದರೂ ದ್ರೋಣನಂತೆಯೇ ಹೇಳಬಹುದು. ರಾಧೇಯನಿಗೆ ನಿರಾಸೆಯಾಯಿತು. ಕೊನೆಗೊಮ್ಮೆ ಭಾರ್ಗವನಲ್ಲಿಗೆ ಹೋಗಿ ಬೇಡುವುದೆಂದು ನಿರ್ಧರಿಸಿದ. ಭಾರ್ಗವನು ಕ್ಷತ್ರಿಯರ ವೈರಿ. ಅವನೆಂತಹ ಶೀಘ್ರಕೋಪಿ ಎಂಬುದೂ ಗೊತ್ತು. ಏನು ಮಾಡುವುದು? ಸೂತ ಎಂದರೆ ಕ್ಷತ್ರಿಯ-ಬ್ರಾಹ್ಮಣ ಸಂಯೋಗದಿಂದ ಹುಟ್ಟಿದವನಾದ್ದರಿಂದ, ತಾನು ಬ್ರಾಹ್ಮಣನೆಂದು ಹೇಳಿಕೊಳ್ಳುವುದು ಎಂದುಕೊಂಡ. ಹಾಗೆ ಮಾಡಿದರೆ, ಭಾರ್ಗವನು ತನ್ನನ್ನು ಶಿಷ್ಯನೆಂದು ಸ್ವೀಕರಿಸುವುದು ಖಂಡಿತ. ಹಾಗೇ ಮಾಡುವೆನು ಎಂದು ನಿರ್ಧರಿಸಿ, ರಾಧೇಯನು ಭಾರ್ಗವನ ಆಶ್ರಮಕ್ಕೆ ಬಂದ. ಹೃದಯದಲ್ಲಿ ಆಸೆಯು ಉರಿಯುತ್ತಿರಲು, ಜಡೆಕಟ್ಟಿದ ಕೂದಲಿನ, ಕೆಂಗಣ್ಣಿನ, ಭಯಂಕರ ರೂಪದ ಋಷಿಯನ್ನು ಕಂಡು ಪಾದಾಕ್ರಾಂತನಾದ. `` ಸ್ವಾಮೀ, ನಾನು ತುಂಬ ಆಸೆ ಭರವಸೆಗಳನಿಟ್ಟುಕೊಂಡು ನಿಮ್ಮಲ್ಲಿಗೆ ಬಂದಿದ್ದೆನೇ. ನನ್ನನ್ನು ಬರಿಗೈಯಲ್ಲಿ ಕಳುಹಿಸಬೇಡಿ'' ಎಂದು ಕಂಬನಿದುಂಬಿ ಬೇಡಿಕೊಂಡ. ಋಷಿಯು ಅವನನ್ನು ಹಿಡಿದೆತ್ತಿದಾಗ ರಾಧೇಯನು ಭಯದಿಂದಲೂ ವಿಚಿತ್ರವಾದ ಉನ್ಮತ್ತತೆಯಿಂದಲೂ ನಡುಗುತ್ತಿದ್ದ. ಎಳೆಯನ ವಿನಯವು ಭಾರ್ಗವನ ಮನವನ್ನು ಗೆದ್ದಿತು. `ರಾಧೇಯನು ತಾನು ಬ್ರಾಹ್ಮಣನೆಂದೂ, ಧನುರ್ವಿದ್ಯೆ ಕಲಿಯಲು ಬಂದಿರುವೆನು ಎಂದು ಬಿನ್ನವಿಸಿಕೊಂಡ. ಭಾರ್ಗವನು ನಕ್ಕು, `` ಆಗಲಿ ನನಗೆ ತಿಳಿದಿರುವುದೆಲ್ಲವನ್ನೂ ಸಂತೋಷದಿಂದ ಹೇಳಿಕೊಡುತ್ತೇನೆ'' ಎಂದ. ರಾಧೇಯನ ಕಲಿಕೆ ಆರಂಭವಾಯಿತು. ಭಾರ್ಗವನ ಆಶ್ರಮದಲ್ಲಿ ಅನೇಕ ತಿಂಗಳುಗಳು, ವರ್ಷಗಳೂ ಸುಖವಾಗಿ ಉರುಳಿದವು. ತಾನು ಸೂತಪುತ್ರನೆಂಬ ಕಾರಣಕ್ಕಾಗಿ ಅನುಭವಿಸಿದ ಅಪಮಾನಗಳು, ಅವುಗಳಿಂದಾಗಿ ಬಂದಿದ್ದ ಕೀಳರಿಮೆ, ರಾಧೇಯನಿಗೆ ಮರೆತೇಹೊಗಿತ್ತು. ತನ್ನ ಜನ್ಮರಹಸ್ಯ, ಆ ವಿಚಾರವಾಗಿ ತನಗೆ ಬೀಳುತ್ತಿದ್ದ ಆ ಯಾವುದೋ ಹೆಂಗಸಿನ ಕನಸು ಎಲ್ಲವನ್ನು ಮರೆತ. ಕನಸುಗಳು ಈಗ ಅಪರೂಪವಾಗಿದ್ದವು, ರಾಧೇಯನಿಗೆ ಇಗ ಬೇಕಾಗಿದ್ದುದ್ದು ಒಂದೇ: ಅದು ಧನುರ್ವಿದ್ಯೆ. ವಿದ್ಯೆ ಎಂದರೆ ಬಲ; ವಿದ್ಯೆ ಎಂದರೆ ಕೀರ್ತಿ; ವಿದ್ಯೆ ಎಂದರೆ ಮನ್ನಣೆ. ಮಾನವರ ಪ್ರಪಂಚದಲ್ಲಿ ಪಡೆಯಲು ಯೋಗ್ಯವಾದುದೆಂದರೆ ವಿದ್ಯೆಯೊಂದೇ.ರಾಧೇಯ ಆನಂದಿಸುತ್ತಿದ್ದ ಶಾಂತಿ ತೃಪ್ತಿಗಳ ಬದುಕು ಸಾಕೆಂದು ವಿಧಿಗೆ ಅನಿಸಿರಬೇಕು. ವಿಧಿಯು ನಿಜಕ್ಕೂ ಬಹು ಭಯಂಕರ ಹಠಮಾರಿ ಹೆಣ್ಣು. ಆಕೆಯದು ವಿಕ್ಷಿಪ್ತ ಹಾಸ್ಯ ಪ್ರಜ್ಞೆ ತನ್ನ ಕೈಗೆ ಸಿಕ್ಕಿಬಿದ್ದವರು ಯಾತನೆಯಿಂದ ಅಳುತ್ತಿದ್ದರೆ ಮಾತ್ರ ಅವಳಿಗೆ ಸಂತೋಷ. ರಾಧೇಯನ ವಿಚಾರದಲ್ಲಿಯೂ ಹೀಗೆಯೇ ಆಯಿತು. ಅವನ ಈಗ ಮುಕ್ತಾಯದ ಹಂತಕ್ಕೆ ಬಂದಿತ್ತು. ಭಗವಾನ್ ಭಾರ್ಗವನು ಅವನಿಗೆ ಮಹಾ ಶಕ್ತಿಶಾಲಿಯಾದ ಭಾರ್ಗವಾಸ್ತ್ರವನ್ನೂ ಏಕೆ, ಬ್ರಹ್ಮಾಸ್ತ್ರವನ್ನೂ, ಸಹ ಕಲಿಸಿಕೊಟ್ಟಿದ್ದ. ರಾಧೇಯನು ಭಾರ್ಗವಾಶ್ರಮವನ್ನು ಬಿಡುವ ಕಾಲ ಹತ್ತಿರ ಬಂದಿದ್ದಿತು. ಭಾರ್ಗವನು ಅವನಿಗೆ ಕೊನೆಯ ಉಪದೇಶವನ್ನು ಕೊಡುತ್ತಿದ್ದ: `` ಪ್ರಿಯ ಶಿಷ್ಯ, ಇಷ್ಟ ದಿನಗಳನ್ನು ನಾನು ಆನಂದದಿಂದ ಕಳೆದೆ. ನಿನಗೆ ಧನುರ್ವಿದ್ಯೆಯನ್ನು ಹೇಳಿಕೊಡುವುದು ನನಗೊಂದು ಸಂತೋಷದ ಸಂಗತಿಯಾಗಿದ್ದಿತು. ನನ್ನಲ್ಲಿದ್ದ ಜ್ಞಾನವೆಲ್ಲವನ್ನೂ ನಿನಗೆ ಧಾರೆಯೆರೆದಿದ್ದನೆ. ನಿನ್ನಂತಹ ಶಿಷ್ಯ ಸಿಕ್ಕಿದ್ದು ನನಗೆ ಹೆಮ್ಮೆಯ ಸಂಗತಿ ಎನಿಸಿದೆ. ನೀನು ಪ್ರಾಮಾಣಿಕ, ಗುರುಹಿರಿಯರಲ್ಲಿ ಗೌರವವುಳ್ಳವನು; ಯಾವಗಲು ಋಜುಮಾರ್ಗದಲ್ಲಿಯೇ ನಡೆಯಬಯಸುವವನು. ಈಗ ಗಳಿಸಿಕೊಡಿರುವ ವಿದ್ಯೆಯನ್ನು ನೀನು ಧರ್ಮವನ್ನು ಎತ್ತಿ ಹಿಡಿಯುವುದಕ್ಕಾಗಿ ಮಾತ್ರ ಬಳಸಬೇಕು. ಅಧರ್ಮವೆನಿಸಬಹುದಾದ ಕಾರಣಗಳಿಗಾಗಿ ಅದನ್ನು ಎಂದಿಗೂ ಬಳಸಬೇಡ."ಮಧ್ಯಹ್ನದ ಸೂರ್ಯ ನೆತ್ತಿಯ ಮೆಲೇ ಪ್ರಕಾಶಿಸುತ್ತಿದ್ದ. ಸೆಖೆ ಅಸಾಧ್ಯವಾಗಿದ್ದಿತು. ಭಗವಾನ್ ಭಾರ್ಗವನು ಮರದ ನೆರಳಿನಲ್ಲಿ ಸ್ವಲ್ಪ ವಿಶ್ರಮಿಸಿಕೊಳ್ಳಬಯಸಿದ. ``ರಾಧೇಯ, ಹೋಗಿ ಆಶ್ರಮದಿಂದ ಜಿಂಕೆ ಚರ್ಮದ ಸುರುಳಿಯನ್ನು ತಂದುಕೊಡು. ಅದರ ಮೇಲೆ ತಲೆ ಇಟ್ಟು ಸ್ವಲ್ಪ ಮಲಗಿಕೊಳ್ಳುತ್ತೇನೆ. ನನಗೆ ಆಯಾಸವಾಗಿದೆ.'' ``ಗುರುವರ್ಯ, ನಾನಿಲ್ಲವೆ? ನನ್ನ ತೊಡೆಯ ಮೇಲೆ ತಲೆಯಿಟ್ಟು ವಿಶ್ರಮಿಸಿರಿ. ನಾನು ನಿಮಗೆ ನಿದ್ರಾಭಂಗವಾಗದಂತೆ ಅಲುಗಾಡದೆ ಕುಳಿತುಕೊಂಡಿರುತ್ತೇನೆ. ಗುರುವಿಗಾಗಿ ಇಷ್ಟು ಸ್ವಲ್ಪ ಸೇವೆಯನ್ನು ನಾನು ಮಾಡಲಾರೆನೆ?'' ಎಂದನು ರಾಧೇಯ. ಅವನ ಭಕ್ತಿಯನ್ನು ನೋಡಿ ಭಾರ್ಗವನಿಗೆ ಮೆಚ್ಚಿಕೆಯಾಯಿತು. ಹಾಗೆಯೇ ಮರದ ನೆರಳಿನಲ್ಲಿ ಶಿಷ್ಯನ ತೊಡೆಯ ಮೇಲೆ ತಲೆಯಿಟ್ಟು ಮಲಗಿದನು, ರಾಧೇಯನ ಮನಸ್ಸಿನಲ್ಲಿ ಗುರುವು ಹೇಳಿದ ಮಾತುಗಳೇ ಓಡತೊಡಗಿದವು. ಗುರು ತನ್ನನ್ನು ಪ್ರಾಮಾಣಿಕ ಎಂದರು. ತಾನು ಪ್ರಾಮಾಣಿಕನೆ?ಬಹುಶಃ ಅಲ್ಲ. ಬ್ರಾಹ್ಮಣನಲ್ಲದ ತಾನು ಬ್ರಾಹ್ಮಣನೆಂದು ಹೇಳಿಕೊಂಡಿರುವೆ. ವಿದ್ಯಾಭ್ಯಾಸಕ್ಕಾಗಿ ಹಪಹಪಿಸುತ್ತಿದ್ದ ತನ್ನ ಜೀವದ ತೃಪ್ತಿಗಾಗಿ ಹಾಗೆ ಮಾಡುವುದೊಂದೇ ದಾರಿಯಾಗಿತ್ತು. ಪರಿಣಾಮ ಒಳ್ಳೆಯದಾದರೆ ಕಾರಣವೂ ಒಳ್ಳೆಯದೇ ಎಂದು ತಿಳಿದವರು ಹೇಳುವರು. ವಿದ್ಯೆ ಪಡೆದುಕೊಳ್ಳುವುದು ಅವನ ಗುರಿಯಾಗಿತ್ತು; ಅದಕ್ಕಾಗಿ ತಾನು ಸುಳ್ಳು ಹೇಳಬೇಕಾಯಿತು. ಯಾವುದೋ ಪಾಪಕಾರ್ಯವನ್ನು ಸಾಧಿಸಿಕೊಳ್ಳುವುದಕ್ಕಾಗಿ ಸುಳ್ಳು ಹೇಳಿದರೆ ಅದು ಪಾಪ; ತಾನು ಯಾವ ಪಾಪವನ್ನೂ ಮಾಡುತ್ತಿಲ್ಲ. ಆದ್ದರಿಂದ ತಾನು ಹೇಳಿದ ಅನೃತವು ಕ್ಷಮಾರ್ಹ. ಇಂತಹ ಅನೇಕಾನೇಕ ಯೋಚನೆಗಳು ಅವನ ಮನಸ್ಸಿನಲ್ಲಿ ಹಾದು ಹೋಗುತ್ತಿದ್ದವು.ಕೆಲ ಕಾಲ ಕಳೆಯಿತು. ಇದ್ದಕ್ಕಿದ್ದಂತೆ ರಾಧೇಯನ ತೊಡೆಯನ್ನು ಯಾವುದೋ ಕೀಟ ಕಡಿಯಲಾರಂಬಿಸಿತು. ನೋವು ಅಸಹನೀಯವಾಯಿತು. ಗುರುವಿನ ನಿದ್ರೆಗೆ ತೊಂದರೆಯಾಗದಂತೆ, ಏನು ಕಡಿಯುತ್ತಿದೆ ಎಂದು ನಿಧಾನವಾಗಿ ಬಗ್ಗಿ ನೋಡಿದನು. ನೋಡಿದರೆ ಅದೊಂದು ಭೀಕರ ಕೀಟ. ಹಂದಿಯಂತೆ ಚೂಪಾದ ಮುಖವುಳ್ಳ ಅದಕ್ಕೆ ಚೂಪಾದ ದಾಡೆಗಳು. ಉಕ್ಕಿನಂತೆ ಗಟ್ಟಿಯಾದ ಆ ದಾಡೆಗಳಲ್ಲಿ ಅನೇಕಾನೇಕ ಚೂಪಾದ ಹಲ್ಲು ಸಾಲುಗಳು. ರಾಧೇಯನಿಗೆ ಉಕ್ಕಿನ ಗರಗಸದಿಂದ ತನ್ನ ತೊಡೆಯನ್ನು ಯಾರೋ ಕೊರೆಯುತ್ತಿರುವಂತೆ ಅನಿಸಿತು.ಅವನಿಗೆ ಆ ಕೀಟವನ್ನು ತೆಗೆದು ಹಾಕಲು ಆಗಲಿಲ್ಲ. ಅದು ಕೊರೆಯುತ್ತಲೇ ಇದ್ದಿತು. ನೋವೋ ಅಸಾಧ್ಯ. ಮಾಡುವುದೇನು? ಗುರು ತೊಡೆಯಮೇಲೆ ತಲೆಯಿಟ್ಟು ಮಲಗಿದ್ದಾರೆ; ಅವರ ನಿದ್ರೆಗೆ ಭಂಗ ತರುವುದು ಸರಿಯಲ್ಲ. ಭಯಂಕರವಾದ ನೋವನ್ನು ಅನುಭವಿಸುತ್ತ ರಾಧೇಯನು ಸ್ವಲ್ಪವೂ ಅಲುಗಾಡದೆ ಕುಳಿತ.ಕೊರೆತ ಮುಂದುವರೆದಂತೆ ರಾಧೇಯನ ತೊಡೆಯಿಂದ ರಕ್ತವು ಧಾರೆದಾರೆಯಾಗಿ ಹರಿಯಲಾರಂಭಿಸಿತು. ಬೆಚ್ಚನೆಯ ರಕ್ತವು ಕೆನ್ನೆಗೆ ಹತ್ತಲು, ಭಾರ್ಗವನಿಗೆ ಎಚ್ಚರವಾಯಿತು. ಅವನು ರಾಧೇಯನನು ನೋಡಿ ``ನನ್ನ ಮುಖದ ಮೇಲೆ ರಕ್ತ! ಎಲ್ಲಿಂದ ಬಂದಿತು ಇದು?'' ಎಂದು ವಿಚಾರಿಸಿದ. ರಾಧೇಯನು, ``ಗುರುಗಳೆ, ಅದು ನನ್ನ ತೊಡೆಯಿಂದಲೇ ಬಂದುದು. ನಿವು ನಿದ್ರಿಸುತ್ತಿದ್ದಾಗ ಕೀಟವೊಂದು ನನ್ನ ತೊಡೆಯನ್ನು ಕೊರೆಯಲಾರಂಭಿಸಿತು. ಆ ಗಾಯದಿಂದಲೇ ರಕ್ತ ಬರುತ್ತಿರುವುದು'' ಎಂದನು . ಋಷಿಯು ರಾಧೇಯನ ರಕ್ತವನ್ನು ಕುಡಿದು ಮತ್ತವಾದ ಆ ಕೀಟವನ್ನು ನೋಡಿದನು. ಅವನಿಗೆ ಅಚ್ಚರಿಯಾಯಿತು. ``ಅಯ್ಯಾ, ಈ ಕೀಟವು ಇಷ್ಟು ಹೊತ್ತು ಕಡಿಯುತ್ತಿದ್ದರೂ ನೋವನ್ನು ಸಹಿಸಿಕೊಂಡಿದ್ದೆಯಾ? ತಕ್ಷಣ ಮೇಲೇಳಲಿಲ್ಲವೇಕೆ?'' ``ಗುರುವೆ, ನೀವು ನನ್ನ ತೊಡೆಯ ಮೇಲೆ ನಿದ್ರಿಸುತ್ತಿದ್ದಿರಿ. ನಿಮಗೆ ಆಯಾಸವಾಗಿದ್ದಿತು. ವಿಶ್ರಮಿಸಿಕೊಳ್ಳುತ್ತಿದ್ದಿರಿ. ನಾನು ನನ್ನ ನೋವಿಗಿಂತ ನಿಮ್ಮ ನಿದ್ರೆ ಭಂಗವಾಗದಿರಲಿ ಎಂದು ಯೋಚಿಸಿದೆ; ನೋವಿಗೆ ಹೆಚ್ಚು ಗಮನ ಕೊಡಲಿಲ್ಲ.'' ಭಾರ್ಗವನಿಗೆ ತನ್ನ ಕಿವಿಗಳನ್ನು ತಾನೇ ನಂಬಲಾಗಲಿಲ್ಲ. ``ಇದು ಹೇಗೆಂಬುದೇ ನನಗೆ ಅರ್ಥವಾಗುತ್ತಿಲ್ಲ. ಬ್ರಾಹ್ಮಣನಾದ ನೀನು ಇಷ್ಟು ನೋವನ್ನು ಹೇಗೆತಾನೆ ಸಹಿಸಿಕೊಂಡೆ?ಬ್ರಾಹ್ಮಣರು ನೋವನ್ನಾಗಲಿ ರಕ್ತ ಕಣ್ಣೆದುರಿಗೆ ಹರಿಯುವುದನ್ನಾಗಲಿ ತಡೆದು ಕೊಳ್ಳಲಾರರು ಎಂಬುದು ಗೊತ್ತೇ ಎದೆ. ನಿಜ ಹೇಳು! ನೀನು ಬ್ರಾಹ್ಮಣನಲ್ಲ. ನಿನು ಬ್ರಾಹ್ಮಣನಾಗಿರುವುದು ಸಾಧ್ಯವೇ ಇಲ್ಲ. ಕ್ಷತ್ರಿಯನಾದವನು ಮಾತ್ರವೇ ನೀನು ಈಗ ಮಾಡಿರುವುದನ್ನು ಮಾಡಲು ಸಾಧ್ಯ . ಇಷ್ಟೆಲ್ಲ ವರ್ಷಗಳು ನಾನು ನನ್ನ ಅಮೂಲ್ಯವಾದ ವಿದ್ಯೆಯನ್ನು ಒಬ್ಬ ಪಾಪಿ ಕ್ಷತ್ರಿಯನಿಗೆ ಧಾರೆಯೆರೆದೆನೆ? ನನಗೆ ಕ್ಷತ್ರಿಯರನ್ನು ಕಂಡರಾಗದು. ನಾನು ಈ ನಿನ್ನ ಮೋಸವನ್ನು ಕ್ಷಮಿಸಲಾರೆ. ನಿನ್ನು ಕ್ಷತ್ರಿಯ ತಾನೆ? ನಿಜವನ್ನೊಪ್ಪಿಕೋ!'' ಎಂದು ಗರ್ಜಿಸಿದನು.ರಾಧೇಯನು ಗುರುವಿನ ಪಾದಗಳ ಮೇಲೆ ಬಿದ್ದು ಹೊರಳಾಡತೊಡಗಿದನು. ಅವನ ಕಣ್ಣೇರು ಧಾರೆಧಾರೆಯಾಗಿ ಹರಿಯುತ್ತಿತ್ತು. ಅಯ್ಯೋ, ಎಷ್ಟೆಲ್ಲ ಕಷ್ಟಪಟ್ಟು ಕಲಿತಿದ್ದೆಲ್ಲವೊ ವ್ಯರ್ಥವಾಯಿತೆ? ಎಂಬ ಯೋಚನೆಯಿಂದ ಅವನ ಹೃದಯ ಜರ್ಜರಿತವಾಯಿತು. ಭಾರ್ಗವನ ಕಾಲುಗಳನ್ನು ಗಟ್ಟಿಯಾಗಿ ಹಿಡಿದುಕೊಂಡು, ರೋದಿಸುತ್ತ,``ಆಚಾರ್ಯ, ದಯವಿಟ್ಟು ನನ್ನನ್ನು ಕ್ಷಮಿಸಿ. ನಿವು ನನ್ನ ತಂದೆಗಿಂತಲೂ ಹೆಚ್ಚು. ಮಗನು ಮಾಡಿದ ತಪ್ಪನ್ನು ತಂದೆ ಕ್ಷಮಿಸಬೇಕು. ನಾನು ಬ್ರಾಹ್ಮಣನಲ್ಲ ಕ್ಷತ್ರಿಯನೂ ಅಲ್ಲ. ನಾನು ಸೂತಪುತ್ರ, ನನ್ನ ತಂದೆ ಅಧಿರಥ. ಸೂತನೊಬ್ಬನು ಹುಟ್ಟುವುದು ಬ್ರಾಹ್ಮಣ ಕ್ಷತ್ರಿಯರ ಸಂಯೋಗದಿಂದ. ಆದ್ದರಿಂದಲೇ ನಾನು ಬ್ರಾಹ್ಮಣನೆಂದು ಹೇಳಿಕೊಡೆ. ನನಗೆ ಬೇಕಾಗಿದ್ದುದು ವಿದ್ಯೆಯೊಂದೇ. ವಿದ್ಯೆಗೆ ಜಾತಿ, ಕುಲಗಳ ಕಟ್ಟು ಇಲ್ಲವೆಂದು ತಿಳಿದವರು ಹೇಳುವರು. ಮಹಾತ್ಮರಾದ ನೀವು ನನ್ನ ಈ ತಪ್ಪನ್ನು ಕ್ಷಮಿಸಬೆಕು, ನಿಮಗೆ ನಾನು ಸುಳ್ಳು ಹೇಳಿದೆ, ನಿಜ, ಆದರ ಅದು ಕೇವಲ ನಿಮ್ಮ ಶಿಷ್ಯನಾಗುವುದಕ್ಕಾಗಿ. ನಿಮಗೆ ನಾನು ವಿಧೇಯನಾಗಿರುವೆ. ನಿಮಗಿಂತ ಪ್ರಿಯರಾದವರು ನನಗೆ ಈ ಪ್ರಪಂಚದಲ್ಲಿ ಇನ್ನು ಯಾರೂ ಇಲ್ಲ. ಬೆಡಿಕೊಳ್ಳುತ್ತಿದ್ದೇನೆ, ಕೃಪೆಮಾಡಿ ನನ್ನನ್ನು ಕ್ಷಮಿಸಿರಿ'' ಎಂದನು.ಭಾರ್ಗವನ ಸಿಟ್ಟು ತಣಿಯಲಿಲ್ಲ. ರಾಧೆಯನ ಭಕ್ತಿಯಾಗಲಿ ಋಷಿಯಾದ ನಾನು ಕ್ರೋಧ ವಶನಾಗಬಾರದೆಂಬುದಾಗಲಿ ಅವನ ಮನಸ್ಸಿಗೆ ಬರಲಿಲ್ಲ. ರಾಧೇಯನು ಕೀಟಬಾಧೆಯನ್ನು ಸಹಿಸಿದ್ದು ತನ್ನ ಮೇಲಣ ಪ್ರೀತಿಯಿಂದ ಮಾತ್ರವೇ ಎಂಬುದನ್ನೂ ಮರೆತ. ಅವನು ಸುಳ್ಳು ಹೇಳಿದನೆಂಬುದೊಂದೇ ಮುಖ್ಯವಾಯಿತು. ``ನೀನು ಸುಳ್ಳು ಹೇಳಿ ಧನುರ್ವಿದ್ಯೆಯನ್ನು ಕಲಿತಿರುವೆ. ಮುಂದೆ ನಿನ್ನ ಪ್ರಾಣಾಂತಿಕ ಸಮಯದಲ್ಲಿ ಅಗತ್ಯವಾದ ಅಸ್ತ್ರವು ನಿನಗೆ ನೆನಪಾಗದೇ ಹೋಗಲಿ!'' ಎಂದು ಶಾಪ ಕೊಟ್ಟೇಬಿಟ್ಟನು. ರಾಧೇಯನು ಅವನ ಪಾದಗಳ ಮೇಲೆ ಪ್ರಜ್ಞೆ ತಪ್ಪಿ ಬಿದ್ದನು. ಎಚ್ಚೆತ್ತು ವಿಧವಿಧವಾಗಿ ಬೇಡಿಕೊಂಡನು. ಆದರೂ ಭಾರ್ಗವನಿಗೆ ಕರುಣೆ ಬರಲಿಲ್ಲ. ಬ್ರಾಹ್ಮಣನ ಮಾತು ಹೊರಬಿದ್ದ ಮೇಲೆ ಮುಗಿದೇ ಹೋಯಿತು: ಅದಕ್ಕೆ ಉಪಸಂಹಾರವಿಲ್ಲ. ಸ್ವಲ್ಪ ಶಾಂತನಾದ ಮೇಲೆ ಭಾರ್ಗವನು ``ನೀನು ಖ್ಯಾತಿಯನ್ನು ಬಯಸಿದೆ. ಅದು ನಿನಗೆ ಸಿಕ್ಕುತ್ತದೆ. ಈ ಭೂಮಿಯ ಮೇಲೆ ನಡೆದಾಡಿದ ಉತ್ತಮೋತ್ತಮ ಧನುರ್ಧಾರಿಯೆಂದು ಜನರು ನಿನ್ನನ್ನು ಸ್ಮರಿಸುತ್ತಾರೆ'' ಎಂದು ಹೇಳಿ ಋಷಿಯು ಅಲ್ಲಿಂದ ಹೊರಟುಹೋದನು.ದುಃಖಿತನಾದ ರಾಧೇಯನು ಮೇಲೆದ್ದು ಹೊರಟನು. ಎಲ್ಲಿಗೆ ಹೋಗಗೇಕೆಂಬುದನ್ನು ಅರಿಯದೆ ನಡೆದೇ ನಡೆದನು. ಸಮುದ್ರತೀರಕ್ಕೆ ಬಂದು ಸುಮ್ಮನೆ ಕುಳಿತನು. ಸೂತಪುತ್ರನೆಂದು ಹೀಗಳೆವ ಲೋಕದೊಂದಿಗಿನ ತನ್ನ ಹೋರಾಟವು, ದಡಕ್ಕೆ ಬಂದು ಬಡಿಯುತ್ತಿರುವ ಈ ಅಲೆಗಳಂತೆಯೇ ವ್ಯರ್ಥ ಎನಿಸಿತು. ಅವಿರತ ನೋವಿನ ಕೂಗಿನಂತಿದ್ದ ಸಮುದ್ರದ ಭೋರ್ಗರೆದವನ್ನು ಕೇಳಿ ಅವನ ಹೃದಯ ಶಾಂತವಾಯಿತು. ಮೇಲೆದ್ದು ವಾಪಸು ಹೊರಟನು. ದಾರಿ ನಡೆಯುತ್ತಿರುವಾಗ ಯಾವೂದೋ ಒಂದು ಪ್ರಾಣಿಯು ವೇಗವಾಗಿ ಅಡ್ಡಹಾಯ್ದಂತಾಗೆ, ತನಗೇ ಹೊತ್ತಿಲ್ಲದಂತೆ ಒಂದು ಬಾಣವನ್ನು ಬಿಟ್ಟನು. ಅದು ಸತ್ತುಬಿದ್ದಿತು. ನೋಡಲಾಗಿ, ಇವನೆಣಿಸಿದ್ದತೆ ಅದು ಜಿಂಕೆಯಾಗಿರದೆ ಒಂದಕು ಹಸು. ಒಬ್ಬ ಬ್ರಾಹ್ಮನನ ಸ್ವತ್ತು. ರಾಧೇಯನು ಬ್ರಾಹ್ಮಣನ ಬಳಿಗೆ ಹೋಗಿ, ತಿಳಿಯದೆ ತನ್ನಿಂದಾದ ಅಪಾರಧಕ್ಕಾಗಿ ಕ್ಷಮೆ ಯಾಚಿಸಿದನು. ಒಂದಕ್ಕೆ ಹತ್ತು ಹಸುಗಳನ್ನ ಸಿರಿಸಂಪತ್ತನ್ನೊ ಕೊಟ್ಟು ಸಮಾಧಾನ ಮಾಡಲು ಮುಂದಾದನು. ಆದರೆ ಬ್ರಾಹ್ಮಣನ ಕೋಪ ಆರಲಿಲ್ಲ. ಅವನು, ``ನೀನು ನಿನ್ನ ಶತ್ರುವಿನೊಂದಿಗೆ ಕೊಟ್ಟಕೊನೆಯ ಹೋರಾಟದಲ್ಲಿ ತೊಡಗಿರುವಾಗ ನಿನ್ನ ರಥಚಕ್ರವು ಭೂಮಿಯಲ್ಲಿ ಕಚ್ಚಿಕೊಳ್ಳುವುದು; ಈಗ ನೀನು ತನಗೆ ಒದಗಿದ ಅಪಾಯದ ಅರಿವೇ ಇಲ್ಲದಿದ್ದ ನನ್ನ ಹಸುವನ್ನು ಹೇಗೆ ಕೊಂದೆಯೋ ಹಾಗೆಯೇ ಆಗ ನಿನ್ನ ಶತ್ರುವೂ ಅಸಹಯನಾಗಿರುವಾಗಲೇ ನಿನ್ನನ್ನು ಕೊಲ್ಲುವನು!'' ಎಂದು ಶಪಿಸಿದನು.ಈಗ, ವಿಧಿಯು ಕ್ರೂರವಾಗಿ ಘಾತಿಸಲು ತನ್ನನ್ನೇ ಗುರಿಯಾಗಿಸಿಕೊಂಡುಬಿಟ್ಟಿದೆ ಎಂದು ರಾಧೇಯನಿಗೆ ಅನ್ನಿಸಿತು. ಜನ್ಮವಿತ್ತ ತಾಯಿಯ ಹೃದಯಹೀನತೆಯಿಂದಾಗೆ ಹುಟ್ಟೇ ರಹಸ್ಯವಾಗಿ ಉಳಿಯಿತು; ಬಾಲ್ಯ ಯೌವನಗಳ ಉದ್ದಕ್ಕೂ ಸೂತಪುತ್ರನೆಂಬ ಅಭಿಧಾನ ಕಾಡಿತು; ಆದರೂ ಭಾರ್ಗವನ ಶಿಷ್ಯನಾಗಿ ಇದನ್ನು ಕಳೆದುಕೊಳ್ಳುವೆನೆಂದು ಹೊರಟರೆ, ಅದೂ ಮರೀಚಿಕೆಯಯಿತು; ಗುರುವು ಶಪಿಸಿ ಹೊರಟೇ ಹೋದನು; ಈಗ ಈ ಬ್ರಾಹ್ಮಣನ ಶಪ. ಸುರಿಸಲು ರಾಧೇಯನಲ್ಲಿ ಕಣ್ಣೀರೇ ಉಳಿದಿರಲಿಲ್ಲ. ಈ ಲೋಕದಲ್ಲಿ ಇನ್ನೇತಕ್ಕಾಗಿ ಬದುಕಿರಬೇಕು, ಏತಕ್ಕಾಗಿ ಹೋರಾಡಬೇಕು? ತನ್ನನ್ನು ಪ್ರೀತಿಸುವ ತಾಯಿ ರಾಧೆಯೊಬ್ಬಳು ಮಾತ್ರ ಉಳಿದಿರುವಳು. ಲೋಕವೇ ರಾಧೇಯ, ರಾಧೇಯ ಎಂದು ಪ್ರತಿಧ್ವನಿಸುವಂತೆ ಮಾಡಿ ಅವಳಿಗೆ ಸಂತೋಷವನ್ನುಂಟುಮಾಡಬೇಕು. ಬಾಲ್ಯದಲ್ಲಿ ಅತ್ತುಕೊಂಡು ಹತ್ತಿರ ಹೋದಾಗ ತನ್ನ ಕಣ್ಣೀರನ್ನೊರೆಸಿದವಳು ಅವಳು. ಅವಳ ಹೆಸರನ್ನು ಚಿರಸ್ಥಾಯಿಸಗಿಸಬೇಕು. ಇದೇ ತನ್ನ ಮುಂದೆ ಇರುವ ಕೆಲಸ ಎಂದುಕೊಂಡನು.* * * * ದ್ರೋಣನಿಗೆ ತಾನು ವಿದ್ಯೆ ಕಲಿಸಿದ ಬಾಲಕರ ಪರಿಣತಿಯನ್ನು ರಾಜಕುಟುಂಬದ ಹಾಗೂ ಪುರಜನರ ಎದುರಿಗೆ ಸ್ಪರ್ಧೆಗಳ ಮೂಲಕ ಪ್ರದರ್ಶಿಸಲು ಕಾಲ ಪಕ್ವವಾಯಿತೆಂದು ಅನಿಸಿತು. ಭೀಷ್ಮನೂ ಧೃತರಾಷ್ಟ್ರನೂ ಒಪ್ಪಿದರು. ದ್ರೋಣನ ಅಪೇಕ್ಷೆಯಂತೆ ಅದ್ಭುತವಾದ ಒಂದು ಕ್ರೀಡಾ ರಂಗವು ನಿರ್ಮಾಣವಾಯಿತು. ಲಕ್ಷಗಟ್ಟಲೆ ಜನರು ದ್ರೋಣಶಿಷ್ಯರ ವಿದ್ಯಾಪ್ರದರ್ಶನವನ್ನು ನೋಡುವ ಕುತೂಹಲದಿಂದ ರಂಗಕ್ಕೆ ಬಂದು ನೆರೆದರು. ಬಿಸಿಲಿನಲ್ಲಿ ಹೊಳೆಯುತ್ತಿದ್ದ ಬಿಳಿಗಡ್ಡದ ಭೀಷ್ಮ, ವಿದುರನೊಡನೆ ಬಂದು ಧೃತರಾಷ್ಟ್ರ ಗಾಂಧಾರಿಯರು, ಅವರ ಹಿಂದೆ ರಾಜಕುಟುಂಬದವರು, ಎಲ್ಲರೂ ಒಬ್ಬೊಬ್ಬರಾಗಿ ಬಂದು ಸೇರಿದರು. ಸಮುದ್ರಘೋಷದಂತೆ ಅಪ್ರತಿಹತವಾಗಿದ್ದ ಜನರ ಕಲಅರವವು ಇದ್ದಕ್ಕಿದ್ದಂತೆ ಸ್ತಬ್ಧವಾಯಿತು. ಬ್ರಾಹ್ಮಣರು ವೇದಘೋಷ ಮಾಡುತ್ತಿರಲು, ದ್ರೋಣ ಅಶ್ವತ್ಥಾಮರು ರಂಗಪ್ರವೇಶ ಮಾಡಿದರು. ವ್ಯಾಸನೂ ನೋಡುವುದಕ್ಕೆ ಅಲ್ಲಿಗೆ ಬಂದನು.ಯುಧಿಷ್ಠಿರನನ್ನು ಮುಂದಿಟ್ಟುಕೊಡು ಬಂದ ರಾಜಕುಮಾರರು ಒಬ್ಬೊಬ್ಬರಾಗಿ ಆಚಾರ್ಯರಿಗೆ ನಮಿಸಿದರ. ಅವರು ವಿದ್ಯೆಯ ಪ್ರದರ್ಶನ ಪ್ರಾರಂಭವಾಯಿತು. ಬಿಲ್ಲುಬಾಣಗಳಿಂದ, ಗದೆ ಕತ್ತಿ ಈಟಿ ತೋಮರ ಮೊದಲಾದ ನಾನಾ ಆಯುಧಗಳಿಂದ ರಾಜಕುಮಾರರುಗಳು ತಮ್ಮ ತಮ್ಮ ಕೈ ಚಳಕವನ್ನು ತೋರಿಸಲಾರಂಭಿಸಿದರು. ಪ್ರೇಕ್ಷಕರೆಲ್ಲ ಬಿಟ್ಟಕಣ್ಣು ಬಿಟ್ಟಬಾಯಿಯಾಗಿ ಉಸಿರಾಡುವುದನ್ನು ಮರೆತು ನೋಡುತ್ತಿದ್ದರು.ದುರ್ಯೇಧನನಿಗೂ ಭೀಮನಿಗೂ ಗದಾಯುದ್ಧ ಸ್ಪರ್ಧೆ ನಡೆಯಿತು. ಬಳಿಯಲ್ಲಿ ಕುಳಿತಿದ್ದ ವಿದುರನು ಅಂಧನೃಪನಿಗೆ ನಡೆಯುತ್ತಿದ್ದುದನ್ನೆಲ್ಲ ವರ್ಣಿಸುತ್ತಿದ್ದನು. ಪ್ರೇಕ್ಷಕರಲ್ಲಿ ಕೆಲವರು ಭೀಮನ ಕಡೆಗೆ, ಇನ್ನು ಕೆಲವರು ದುರ್ಯೋಧನನ ಕಡೆಗೆ. ಇಬ್ಬರ ನಡುವೆ ಇದ್ದ ವೈರವನ್ನರಿತಿದ್ದ ದ್ರೋಣನು ಗಮನವಿಟ್ಟು ನೋಡುತ್ತಿದ್ದನು. ಸೆಣೆಸಾಟ ಆವಶ್ಯಕತೆಗಿಂತಲೂ ಹೆಚ್ಚೆನಿಸಿದಾಗ ಅಶ್ವತ್ಥಾಮನನ್ನು ಕರೆದು ಯುದ್ದವನ್ನು ನಿಲ್ಲಿಸುವಂತೆ ಹೇಳಿಕಳುಹಿಸಿದನು. ಪರಸ್ಪರರ ಮೇರೆ ಅಗಾಧ ಕೋಪಗೊಂಡಿದ್ದ ಅವರು, ಮನಸ್ಸಿಲ್ಲದಿದ್ದರೂ ಬೇರ್ಪಡಬೇಕಾಯಿತು.ದ್ರೋಣನು ಅರ್ಜುನನನ್ನು ರಂಗದ ಮೇಲೆ ಬರುವಂತೆ ಕರೆದನು. ಹೊನ್ನ ಕವಚ ತೊಟ್ಟು ಬಲಗೈಯಲ್ಲಿ ಬಿಲ್ಲು ಹಿಡಿದು ಭುಜದಲ್ಲಿ ಬಾಣತುಂಬಿದ ಬತ್ತಳಿಕೆಯಿಂದ ಶೋಭಿತನಾಗಿ ಸುಂದರಾಂಗನಾದ ಆತನು ಬರಲು, ಜನಸಮುದಾಯದ ಚಪ್ಪಾಳೆ ಗಡಚಿಕ್ಕಿತು. ಧೃತರಾಷ್ಟ್ರನು, ``ಇದೇನು ಗಲಭೆ ವಿದುರ? ನೆರೆದ ಜನರಿಗೆ ಏನು ಬೇಕಾಗಿದೆಯಂತೆ?'' ಎಂದು ವಿಚಾರಿಸಿದನು. ವಿದುರನು ನಕ್ಕು, ``ಜನರ ಕಣ್ಮಣಿಯಾದ ಕುಂತೀಪುತ್ರ ಅರ್ಜುನನು ರಂಗದ ಮೇಲೆ ಬಂದಿರುವುದಕ್ಕೆ ಜನರು ಸಂತೋಷಪಡುತ್ತಿರುವರು'' ಎನ್ನಲು, ಕುರುಡರಾಜನ ಎದೆಯು ಅಸೂಯೆಯಿಂದ ಕುದಿಯಿತು. ಅದನ್ನು ಅಡಗಿಸಿಗೊಂಡು, ``ಆಹಾ, ಪಾಂಡುಪುತ್ರರೇ!'' ಎಂದು ಬಾಯಿ ಚಪ್ಪರಿಸಿದನು.ಅರ್ಜುನನು ತನ್ನ ಧನುರ್ವಿದ್ಯಾನೈಪುಣ್ಯದಿಂದ ಜನರನ್ನು ರಂಜಿಸಿದನು. ಮಳೆ ಬೀಳುವಂತೆ, ಮಿಂಚಿನ ಛಳುಕಿನಂತೆ, ಸಿಡಿಲು ಮೊಳಗುವಂತೆ ಅವನ ಬಾಣಗಳು ಬರುತ್ತಿದ್ದುದು ಎಲ್ಲಿಂದಎಂಬುದೇ ತಿಳಿಯುತ್ತಿರಲಿಲ್ಲ . ಅರ್ಜುನನನ್ನು ಸರಿಗಟ್ಟುವವರು ಮೂರು ಲೋಕಗಳಲ್ಲಿಯೂ ಸಹ ಯಾರೂ ಇರಲಾರರು ಎಂಬುದೇ ಎಲ್ಲರ ಅಭಿಪ್ರಾಯವಾಯಿತು.ಅಷ್ಟರಲ್ಲಿ ಸಿಡಿಲು ಬಡಿಲು ಬಡಿದಂತೆ ಶಬ್ದವಾಯಿತು. ಜನರೆಲ್ಲರ ಗಮನ ಆ ಕಡೆಗೆ ತಿರುಗಿತು. ರಾಜಪರಿವಾರದವರೂ ಅದೇನೆಂದು ನೋಡತೊಡಗಿದರು. ಅರ್ಜುನನು ಪ್ರದರ್ಶನವನ್ನು ನಿಲ್ಲಿಸಿದನು. ಜನರ ನಡುವೆ ಜಾಗ ಮಾಡಿಕೊಂದು ಮಹಾಪುರುಷನೊಬ್ಬನು ಸಿಂಹದಂತೆ ನಡೆದು ಬರುತಿದ್ದನು. ಅವನು ತನ್ನ ಬಿಲ್ಲಿನ ನಾಣನ್ನು ತಟ್ಟಿದುದೆ ಆ ಶಬ್ದ!ಸಂಜೆಯ ಹೊಂಗಿರಣಗಳ ಶೋಭೆಯಲ್ಲಿ ಅವನ ಸಹಜ ಕವಚಕುಂಡಲಗಳು ಹೊಳೆಯುತ್ತಿದ್ದವು. ಅವನೇ ರಾಧೇಯ. ದ್ರೋಣನಿಗೆ ನಮಸ್ಕರಿಸಿ ಅರ್ಜುನನನ್ನು ಕುರಿತು ``ನಿನ್ನ ಗುರುಗಳು ಅನುಜ್ಞೆ ಕೊಟ್ಟರೆ, ನೀನು ಈವರೆಗೆ ತೋರಿಸಿದ ಕೈಚಳಕಗಳನ್ನಲ್ಲದೆ ಇನ್ನೂ ಹೆಚ್ಚನ್ನು ನಾನು ತೋರಿಸಬಲ್ಲೆ!'' ಎಂದು ಸವಾಲೆಸೆದನು. ದ್ರೋಣನು ಸುಮ್ಮನಿರಲು, ರಾಧೇಯನು ಎಲ್ಲವನ್ನೂ ನಿರಾಯಾಸವಾಗಿ ಮಾಡಿ ತೋರಿಸಿದನು. ಈ ಹೊಸಬನು ಬಾರದಿರುತ್ತಿದ್ದರೆ, ಸರ್ವಶ್ರೇಷ್ಠತ್ವ ಅರ್ಜುನನದೇ ಆಗಿರುತ್ತಿತ್ತು ಎಂಬುದರಲ್ಲಿ ಸಂಶಯವಿರಲಿಲ್ಲ. ದ್ರೋಣನ ಉಮ್ಮಳ ನೋಡಿದ ಭೀಷ್ಮನ ಮುಖದ ಮೇಲೆ ಕಿರುನಗೆ ಮೂಡಿತು. ದುರ್ಯೋಧನನಿಗೆ ಹೊಸಬನ ಮೇಲೆ ಆದರ ಕುತೂಹಲಗಳು ಮೂಡಿದವು. ಅರ್ಜುನನಿಗೆ ಅಪಮಾನದಿಂದ ಮುಖ ಕೆಂಪಾಯಿತು. ಯಧಿಷ್ಠಿರನಿಗೂ ಮನಸ್ಸಿಗೆ ಆತಂಕವುಂಟಾಗತೊಡಗಿತು.ರಾಧೇಯನು ಈಗ ದ್ವಂದ್ವಯುದ್ದಕ್ಕೆ ಆಹ್ವಾನಿಸಿದನು. ಅರ್ಜುನನು ಸಿಟ್ಟಿನಿಂದ,`` ಎಲವೋ! ಆಹ್ವಾನವಿಲ್ಲದೆ ರಂಗಕ್ಕೆ ನುಗ್ಗಿ ಬಂದು ಶೌರ್ಯ ಪ್ರದರ್ಶಿಸುತ್ತಿರುವ ನೀನು ಯಾರು?'' ಎಂದು ಗುಡುಗಿದನು. ರಾಧೇಯನು ನಕ್ಕು. ``ಅಯ್ಯಾ, ಇದು ಬಹಿರಂಗ ಸ್ವರ್ಧೆ; ಇದರಲ್ಲಿ ಯಾರುಬೇಕಾದರೂ ಭಾಗವಹಿಸಬಹುದು. ಈಗೇನು ನನ್ನ ಸವಾಲನ್ನು ಸ್ವೀಕರಿಸುವೆಯೇ ಅಥವಾ ನಿನಗಿಂತಲೂ ನಾನು ಉತ್ತಮ ಬಿಲ್ಲುಗಾರನೆಂದು ಒಪ್ಪಿಕೊಳ್ಳುವೆಯೋ?" ಎಂದನು . ಅಷ್ಟರಲ್ಲಿ ಆಕಾಶವೆಲ್ಲ ಕಾರ್ಮೋಡಗಳಿಂದ ತುಂಬಿಹೋಯಿತು. ಮೋಡಗಳ ನದುವೆ ನುಸುಳಿ ಬಂದ ಸೂರ್ಯನ ಹೊಂಗಿರಣಗಳು ರಾಧೇಯನ ಮೇಲೆ ಪ್ರಖರಿಸಿದವು. ಅರ್ಜುನನ ಮೇಲೆ ಮೋಡಗಳ ನೆರಳು ! ಜನಸಮುದಾಯದ ಮೆಚ್ಚುಗೆ ಇಬ್ಭಾಗವಾಯಿತು. ಕುರುನಂದನರೆಲ್ಲ ರಾಧೇಯನ ಕಡೆ. ಭೀಷ್ಮ ದ್ರೋಣ ಕೃಪ ಮುಂತಾದವರು ಅರ್ಜುನನ ಕಡೆಗೆ ಒಲಿದರು. ಇನ್ನೇನು ಸ್ಪರ್ಧೆ ಪ್ರಾರಂಭವಾಗಬೇಕು, ಅಷ್ಟರಲ್ಲಿ ಕುಂತಿ ಇದ್ದಕ್ಕಿದಂತೆ ಮೂರ್ಛಿತಳಾದಳು. ಅವಳಿಗೆ ನಾನು ಆ ದಿನ ಗಂಗೆಯಲ್ಲಿ ಮಗುವನ್ನು ತೇಲಿಬಿಡುವಾಗ `ದೂರದ ಭವಿಷ್ಯದಲ್ಲಿ ನಾನು ನಿನ್ನನ್ನು ಯಾವಾಗಲೋ ನೋಡಬಹುದು. ನಿನ್ನ ಕವಚಕುಂಡಲಗಳ ನೆರವಿನಿಂದ ನಿನ್ನನ್ನು ಗುರುತಿಸುವೆ' ಎಂದು ಹೇಳಿ ಕೊಂಡಿದ್ದು ನೆನಪಾಯಿತು. ಎದುರಿಗೆ ಸೆಣೆಸಲು ನಿಂತಿರುವವರಿಬ್ಬರೂ ತನ್ನ ಮಕ್ಕಳು! ಅವಳಿಗೆ ದುಃಖವನ್ನು ಸಹಿಸಲಾಗಲಿಲ್ಲ. ವಿದುರನು ಧಾವಿಸಿ ಬಂದು ನೀರು ಸಿಂಪಡಿಸಿ ಅವಳನ್ನು ಎಚ್ಚರ ಗೊಳಿಸಿದನು. ತ್ರಿಕಾಲಜ್ಞಾನಿಯಾದ ಅವನಿಗೆ ಎಲ್ಲವೊ ತಿಳಿದಿತ್ತು. ಅವನು ಕುಂತಿಗೆ ಸುಮ್ಮನಿರುವಂತೆ ಸನ್ನೆ ಮಾಡಿದನು.ಇಬ್ಬರು ಯುವಕರೂ ಸೆಣೆಸಲು ನಿಂತರು. ಕೃಪನು ರಂಗದ ಮೇಲೆ ಬಂದು, ``ದ್ವಂದ್ವಯುದ್ದದ ನಿಯಮಗಳನ್ನು ಪಾಲಿಸೋಣ. ಪಾಂಡವನಾದ ಈ ಅರ್ಜುನನು ಕುಂತಿಯ ಚಿಕ್ಕ ಮಗ; ಕುರುವಂಶಕ್ಕೆ ಸೇರಿದನು. ಎಲೈ ತರುಣನೇ, ನೀನೀಗ ನಿನ್ನ ತಂದೆ ಯಾರು, ವಂಶ ಯಾವುದು, ಯಾವ ರಾಜ್ಯದ ಅಧಿಪತಿ ನೀನು ಎಂಬುದನ್ನು ಸಭೆಗೆ ತಿಳಿಯಪಡಿಸು. ಪರಸ್ಪರ ಸರಿಸಾಟಿಯಾದವರ ನಡುವೆ ಮಾತ್ರ ದ್ವಂದ್ವ ನಡೆಯತಕ್ಕುದು'' ಎಂದನು.ರಾಧೇಯನ ಮುಖ ಬಾಡಿತು. ದುರ್ಯೋಧನನು ಸರ್ಪದಂತೆ ಸರ್ರನೆ ಎದ್ದು ನಿಂತು, ``ಹುಟ್ಟಿನಿಂದಲೇ ರಾಜನಾದವನು, ಶೌರ್ಯದಿಂದ ರಾಜನಾದವನು, ಇನ್ನೊಬ್ಬ ರಾಜನನ್ನು ಜಯಿಸುವುದರ ಮೂಲಕ ರಾಜನಾದವನು ಎಂದು ವಿಧಗಳುಂಟು. ಶೌರ್ಯವೆಂಬುದು ಕೇವಲ ಕ್ಷತ್ರಿಯರ ಜನ್ಮ ಸಿದ್ಧ ಹಕ್ಕೇನೂ ಅಲ್ಲ. ಈ ಅರ್ಜುನನು ರಾಜನಲ್ಲದವನೊಂದಿಗೆ ಸೆಣೆಸುವುದಿಲ್ಲ ಎಂದು ನೆವ ತೆಗೆಯುವುದಾದಾದರೆ, ಇದೋ, ನಾನು ಸದ್ಯದಲ್ಲಿ ರಾಜನಿಲ್ಲದಿರುವ ಅಂಗರಾಜ್ಯಕ್ಕೆ ಇವನನ್ನು ರಾಜನನ್ನಾಗಿ ಮಾಡುತ್ತಿದ್ದೇನೆ. ದ್ವಂದ್ವಯುದ್ಧ ನಡೆಯಲಿ!'' ಎಂದವನೇ, ಜನರಲ್ಲ ಅಚ್ಚರಿಯಿಂದ ನೋಡುತ್ತಿರಲು, ಭೀಷ್ಮ ಧೃತರಾಷ್ಟ್ರರ ಸಮ್ಮತಿಯೊಂದಿಗೆ, ಪವಿತ್ರಜಲ ಮುಂತಾದ ಪರಿಕರಗಳನ್ನು ತರಿಸಿ, ಬ್ರಾಹ್ಮಣರ ವೇದಘೋಷಗಳ ನಡುವೆ, ರಾಧೇಯನಿಗೆ ಅಂಗರಾಜ್ಯಾಭಿಷೇಕ ಮಾಡಿಯೇಬಿಟ್ಟನು. ``ಹೊಸಬನೇ, ಈಗ ನೀನು ರಾಜನು. ಅರ್ಜುನನಿಗಿಂತ ಮಿಗಿಲಾದವನು. ಅವನೊಡನೆ ಸೆಣಸಿ ನಮಗೆ ಸಂತೋಷವನ್ನುಂಟುಮಾಡು!'' ಎಂದು ಅವನ ಬೆನ್ನು ತಟ್ಟಿದನು.ಭಾವೋದ್ವೇಗದಿಂದ ರಾಧೇಯನ ಗಂಟಲು ಕಟ್ಟಿತು. ಕಣ್ಣೀರು ಸುರಿಸುತ್ತ, ``ದೊರೆಯೇ ನನಗೆ ನೀನು ತೋರಿದ ಈ ಮರ್ಯಾದೆಗೆ ಏನೆನ್ನಬೇಕೋ ತಿಳಿಯುತ್ತಿಲ್ಲ. ನಾನು ಇದಕ್ಕೆ ಯೋಗ್ಯನೆಂದು ನನಗನಿಸುತ್ತಿಲ್ಲ. ಈ ಋಣವನ್ನು ಹೇಗೆ ತೀರಿಸಲಿ?'' ಎನ್ನಲು, ದುರ್ಯೋಧನನು ನಕ್ಕು, ``ತರುಣನೇ, ನೀನು ಯಾರೇ ಆಗಿರು, ನಿನ್ನನ್ನು ನೋಡಿದರೆ, ಈ ಅಂಗರಾಜ್ಯವನ್ನೇಕೆ, ಲೋಕವನ್ನೇ ಆಳಲು ಹುಟ್ಟಿದವನಂತೆ ಕಾಣುತ್ತಿದ್ದೀಯೆ ನಾನು ನಿನಗೆ ಕೊಟ್ಟುದಕ್ಕೆ ಪ್ರತಿಯಾಗಿ ನೀನು ಏನನ್ನೂ ಕೊಡಬೇಕಾದುದಿಲ್ಲ, ನಿನ್ನ ಪ್ರೀತಿಯೊಂದಿದ್ದರೆ ಸಾಕು!'' ಎಂದನು. ಎಬ್ಬರೂ ಸ್ನೇಹದಿಂದ ಪರಸ್ಪರ ಆಲಿಂಗಿಸಿಕೊಂಡರು. ಇಡೀ ಸಭೆಯೇ ಭಾವುಕವಾಯಿತು. ``ದೊರೆ ಎಂದರೆ ಹೀಗಿರಬೇಕು. ಎಂಥ ದೊಡ್ಡ ಮನಸ್ಸು!'' ಎಂದುಕೊಂಡರು.ಆಗ ಜನರ ನಡುವೆ ಗದ್ದಲವುಂಟಾಯಿತು. ಒಬ್ಬ ವೃದ್ದನು ಕೋಲೂರಿಕೊಂಡು, ಜನರ ನಡುವೆ ದಾರಿ ಬಿಡಿಸಿಕೊಂಡು ಬರುತ್ತಿದ್ದಾನೆ. ನೋಡಿದೊಡನೆಯೇ ``ಅಪ್ಪಾ! ಎನ್ನುತ್ತ ರಾಧೇಯನು ಧಾವಿಸಿ ಬಂದು ನಮಸ್ಕರಿಸಿದನು. ``ನನ್ನ ಮಗುವೆ, ನಿನ್ನಿ ಅದೃಷ್ಟವು ತೆರೆದಿದ್ದನ್ನು ಕಂಡು ನನಗೆ ಸಂತೋಷವಾಯಿತು. ದುರ್ಯೋಧನ ಮಹಾರಾಜನ ಜೊತೆಗೆ ಚೆನ್ನಾಗಿ ಬಾಳು!'' ಎಂದು ಆಲಿಂಗಿಸಿಕೊಂಡ ಅಧಿರಥನನ್ನು ಕಂಡೊಡನೆಯೇ ಎಲ್ಲರಿಗೂ ರಾಧೇಯನು ಸೂತಪುತ್ರನೆಂಬುದು ತಿಳಿದು ಹೋಯಿತು. ಈ ಬೆಳವಣಿಗೆಯನ್ನು ಕಂಡ ಪಾಂಡವರ ಮುಖದ ಮೇಲೆ ತಿರಸ್ಕಾರದ ಮುಗುಳ್ನಗೆ ಮೂಡಿತು; ಸಮಾಧಾನ ನೆಲೆಸಿತು. ಭೀಮನು,``ಎಲವೋ, ಸೂತಪುತ್ರನಾದ ನೀನು ಅರ್ಜುನನ ಕೈಯಿಂದ ಸಾಯುವುದಕ್ಕೆ ಯೋಗ್ಯನಲ್ಲ. ನಿನ್ನ ಕೈಗೆ ಶೋಭಿಸುವುದು ಬಿಲ್ಲಲ್ಲ, ರಥದ ಕುದುರೆಗಳ ಲಗಾಮು!'' ಎಂದೇಬಿಟ್ಟ. ರಾಧೇಯನಿಗೆ ದಿಕ್ಕುತೋರದಂತಾಗಿ, ಸಿಟ್ಟಿನಿಂದ ಬುಸುಗುಡುತ್ತ ಸೂರ್ಯನ ಕಡೆಗೆ ನೋಡತೊಡಗಿದ. ಕುಂತಿಗೆ ಸಹಿಸಲಾಗದ ಕಣ್ಣೀರು ಬಂತು. ಆದರೆ ಮಾಡುವುದಾದರೂ ಏನು?ದುರ್ಯೋಧನನು, ಕೋಪಗೊಂಡ ಸರ್ಪವು ವಿಷವನ್ನು ಕಕ್ಕುವಂತೆ, ``ಭೀಮ, ಕ್ಷತ್ರಿಯನಾದ ನಿನಗೆ ಈ ಮಾತು ಯೋಗ್ಯವಲ್ಲ. ನಾನು ಈ ಮೊದಲೇ ಹೇಳಿದಂತೆ, ಶೌರ್ಯವು ಕ್ಷತ್ರಿಯರ ಹಕ್ಕುದಾರಿ ಮಾತ್ರವೇನೂ ಅಲ್ಲ. ನದಿಗಳಿಗೂ ವೀರರಿಗೂ ಜನ್ಮ ಮುಖ್ಯವಾಗದು. ಮಹಾತ್ಮರ ಜನ್ಮ ನಿಗೂಢವಾಗಿಯೇ ಇರುವುದು. ದ್ರೋಣ ಹುಟ್ಟಿದ್ದು ಮಡಕೆಯಲ್ಲಿ. ನಿನ್ನ,ನನ್ನ ತಂದೆಯರು ಹುಟ್ಟಿದ್ದು, ವಿದುರನು ಹುಟ್ಟಿದ್ದು ಎಲ್ಲಹೇಗೆಂಬುದು ನಿನಗೆ ಗೊತ್ತೇ ಇದೆ. ಇನ್ನು ನಿಮ್ಮ ಹುಟ್ಟನ್ನೂ ಸ್ವಲ್ಪ ಯೋಚಿಸಿಕೊಳ್ಳಿ. ನೀವೆಲ್ಲ ನಿಮ್ಮ ತಾಯಿಯ ಮಕ್ಕಳು ಸರಿ. ಆದರೆ ತಂದೆಯರು? ಈ ತರುಣನ ಕ್ಷತ್ರಿಯಲಕ್ಷಣಗಳು ನಿಮ್ಮ ಗಮನಕ್ಕೆ ಬಾರದಿರುವುದು ಅಚ್ಚರಿಯೇ ಸರಿ. ಸಿಂಹವು ಜಿಂಕೆಯ ಹೊಟ್ಟೆಯಲ್ಲಿ ಹುಟ್ಟುವುದೆ? ಇವನುಕ್ಷತ್ರಿಯನೇ ಆಗಿರಬೇಕೆಂದು ನಿನಗೇಕೆ ಅನಿಸುವುದಿಲ್ಲ? ನಾನು ಅವನನ್ನು ಅಂಗರಾಜನನ್ನಗಿ ಮಾಡಿರುವೆ; ಆದರೆ ಅವನಿಗೆ ಈ ಭೂಮಿಯನ್ನೇ ಅಳುವ ಯೋಗ್ಯತೆ ಇದೆ. ಅವನು ಶೂರ. ಅರ್ಜುನನಿಗೆ ಧೈರ್ಯವಿದ್ದರೆ ಅವನನ್ನು ಇದುರಿಸುವಂತೆ ಹೇಳು!? ಎಂದನು . ಸಭೆಯು ಭಲೆ ಎಂದಿತು. ಸೂರ್ಯನು ನಲಿನಲಿಯುತ್ತ ಪಶ್ಚಿಮದೆಡೆಗೆ ಸರಿದನು. ನಾಟಕೀಯವಾಗಿ ಪ್ರಾರಂಭವಾದ ಸ್ಪರ್ಧೆ ನಾಟಕೀಯವಾಗಿಯೇ ಮುಗಿಯಿತು. ಎಲ್ಲರೂ ಹೊಸಬನ ಬಗ್ಗೆ ಮಾತನಾಡಿಕೊಳ್ಳುವವರೇ ದುರ್ಯೋಧನನ ನಿಲುವನ್ನು ಹೊಗಳುವವರೇ. ಅರ್ಜುನನ ಶೌರ್ಯಪ್ರದರ್ಶನವೆಲ್ಲ ಜನರಿಗೆ ಮರೆತೇಹೋಯಿತು. ದ್ರೋಣಾರ್ಜುನರು ಮಾತ್ರ ನಿಸ್ತೇಜರಾದರು.ಭರಣಿ ಮುಚ್ಚಿದಂತೆ ಕತ್ತಲಾಯಿತು. ದೀವಟಿಗೆಗಳು ಬೆಳಗಿದವು. ರಾಧೇಯ ದುರ್ಯೋಧನರು ಪರಸ್ಪರರ ಹೆಗಲ ಮೇಲೆ ಕೈ ಹಾಕಿಕೊಂಡು ಗತ್ತಿನಿಂದ ನಡೆದರು. ಇತರರೂ ಅವರನ್ನು ಅನುಸರಿಸಿದರು. ಭೀಷ್ಮನ ಮುಖದ ಮೇಲೆ ತುಂಟನಗೆ ಇನ್ನೂ ಹಾಗೆಯೇ ಇತ್ತು. ವಿದುರನು ಮಾತ್ರ ತುಂಬ ಗಂಭೀರನಾದನು. ದ್ರೋಣನು ಅವನತಮುಖನಾಗಿ ನಡೆದನು.ಯುಧಿಷ್ಠಿರನ ಬಾಂದಳದಲ್ಲಿ ಧೂಮಕೇತುವಿನಂತೆ ಉದಯಿಸಿದ ರಾಧೇಯನು ಎಣೆಯಿಲ್ಲದ ಶೌರ್ಯವುಳ್ಳವನೆಂಬುದು ನಿಚ್ಚಳವಾಗಿತ್ತು. ಭೀಮಾರ್ಜುನರ ಬಲದಿಂದಾಗಿ ತಾವು ಕೌರವರಿಗಿಂತ ಮಿಗಿಲು ಎಂದುಕೊಂಡಿದ್ದ ಅವನ ಮನಸ್ಸಿಗೆ ಕಾರ್ಮೋಡ ಕವಿದಂತಾಯಿತು. ಪಾಂಡವರು ಅಜೇಯರು ಎಂಬ ನಂಬಿಕೆ ಎನ್ನು ಉಳಿಯದಾಯಿತು. ರಾಧೇಯ ದುರ್ಯೋಧನರ ಸ್ನೇಹವು ಅರ್ಜುನನ ಮನಶ್ಶಾಂತಿಯನ್ನು ಕೆಡಿಸಿತು. ತಾನು ಪ್ರತಿ ಹೇಳುವುದಕ್ಕಾಗದ ಆ ದುರ್ಯೋಧನನ ಮಾತು ಒಂದೊಂದೂ ಸತ್ಯ ಎಂದು ಭೀಮನು ಹಲ್ಲು ಕಡಿಯುವಂತಾಯಿತು.* * * * ರಾಜಕುಮಾರರ ವಿದ್ಯಾಭ್ಯಾಸವು ಮುಗಿಯಿತು. ಈಗ ದ್ರೋಣನು ಶಿಷ್ಯರನ್ನೆಲ್ಲ ಬಳಿಗೆ ಕರದು ``ನೀವೀಗ ಗುರುದಕ್ಷಿಣೆ ಸಲ್ಲಿಸುವ ಸಮಯ . ನನಗೇನೂ ಐಶ್ವರ್ಯಾದಿಗಳು ಬೇಡ. ಬದಲಿಗೆ ನಿವು ಪಾಂಚಾಲರಾಜ್ಯಕ್ಕೆ ಹೋಗಿ ದ್ರುಪದರಾಜನನ್ನು ಸೆರೆಹಿಡಿದು ಜೀವಸಹಿತ ಹೆಡೆಮುರಿಗಟ್ಟಿ ನನ್ನ ಬಳಿಗೆ ಕರೆದುತರಬೇಕು'' ಎಂದನು. ಯುದ್ಧವೆಂದೊಡನೆ ಕ್ಷತ್ರಿಯರಾದ ರಾಜಕುಮಾರರಿಗೆಲ್ಲಾ ಉತ್ಸಾಹವಾಯಿತು. ಇದು ತಮ್ಮ ಪರೀಕ್ಷಾಸಮಯ ಎಂದುಕೊಂಡು ಸೈನ್ಯದೊದಿಗೆ ಪಾಂಚಾಲರಾಜ್ಯಕ್ಕೆ ಹೊರಟೇಬಿಟ್ಟರು.ದ್ರುಪದನಿಗೆ ಇವರು ದಂಡೆತ್ತಿ ಬರುತ್ತಿರುವುದು ಏಕೆಂದೇ ಅರ್ಥವಾಗಲಿಲ್ಲ . ತನ್ನ ಸಹೋದರರೊಂದಿಗೆ ಅವನೂ ಸೆಣೆಸಿ ನಿಂತನು. ಪಾಂಡವರು ಬಳಿಯ ಒಂದು ಮರದ ಕೆಳಗೆ ಕಾಯುತ್ತ ನಿಂತರು. ಕೌರವರು ದ್ರುಪದನನ್ನು ಸೋಲಿಸಲಾರರೆಂಬುದು ಅರ್ಜುನನಿಗೆ ತಿಳಿದಿತ್ತು. ಅವನು ಸರಿಯಾದ ಸಮಯಕ್ಕಾಗಿ ಕಾಯತೊಡಗಿದನು. ಭೀಕರ ಯುದ್ದವು ನಡೆದು ರಾಜಕುಮಾರರೆಲ್ಲ ಸೋತುಹೋದರು. ಯುಧಿಷ್ಠಿರನನ್ನುಳಿದು ಉಳಿದ ನಾಲ್ವರು ಪಾಂಡವರು ಈಗ ಕಾಲಯಮನ ಪ್ರತಿನಿಧಿಗಳಂತೆ ಯುದ್ಧಕ್ಕಿಳಿದರು. ಮಾರ್ಗದಲ್ಲಿ ಸಿಕ್ಕಿದ ವೀರರನ್ನೆಲ್ಲ ಹೊಡೆದುರುಳಿಸುತ್ತ ದ್ರುಪದನೆಡೆಗೆ ನೇರವಾಗಿ ನುಗ್ಗಿದರು. ಯಾರನ್ನೂ ಕೊಲ್ಲಲು ಇಚ್ಛಿಸುವಂತೆ ತೋರದ ಇವರ ಮನೋಭೀಷ್ಟವೆ ಯಾರಿಗೂ ತಿಳಿಯದಾಯಿತು. ಅರ್ಜುನನ್ನು ತನ್ನ ರಥದಿಂದ ನೇರವಾಗಿ ದ್ರುಪದನ ರಥಕ್ಕೆ ಹಾರಿ ಅವನು ಇದೇನೆಂದು ಅಚ್ಚರಿಯಿಂದ ಕಣ್ಣುಬಿಡುವುದರೊಳಗೆ ಅವನನ್ನು ಸೆರೆಹಿಡಿದುಬಿಟ್ಟನು. ಅವನನ್ನು ತನ್ನ ರಥದಲ್ಲಿ ಕುಳ್ಳಿರಿಸಿಕೊಂಡು, ಕಾಯುತ್ತಿದ್ದ ದ್ರೋಣನ ಬಳಿಗೆ ಕರೆತಂದೇ ಬಿಟ್ಟನು.ಇಷ್ಟು ವರ್ಷಗಳು ದ್ರೋಣನು ಯಾವುದಕ್ಕಾಗಿ ಹಂಬಲಿಸುತ್ತಿದ್ದನೋ ಆ ಸಮಯ ಬಂದೇ ಬಂದಿತು. ಅಂದು ತಾನು ಅಧಿಕಾರದಿಂದ ಮತ್ತನಾಗಿದ್ದ ದ್ರುಪದನ ಮುಂದೆ ಅವನತ ಶಿರನಾಗಿ ನಿಂತಿದ್ದುದು ದ್ರೋಣನಿಗೆ ನೆನಪಾಯಿತು. ಈಗ ಅದೇ ದ್ರುಪದನು ಕೃಪಾಭಿಕ್ಷೆಗಾಗಿ ತನ್ನ ಮುಂದೆ ನಿಂತಿರುವನು. ``ಅಂದು ನೀನು ಸ್ನೇಹವು ಸಮಾನರಲ್ಲಿ ಮಾತ್ರ ಸಾಧ್ಯವೆಂದಿದ್ದೆ ಅಲ್ಲವೆ! ಆಗ ನನ್ನ ಬಳಿ ನನ್ನದೆನ್ನುವ ಏನೂ ಇರಲಿಲ್ಲ. ಆದರೆ ಈಗ, ನಿನ್ನ ಪ್ರಾಣವೂ ಸೇರಿ ನಿನ್ನದೆಂಬ ಏನೂ ನಿನಗೆ ಉಳಿದಿಲ್ಲ. ಆದರೆ ಗೆಳೆಯಾ, ಭಯಪಡಬೇಡ. ನಿನ್ನನ್ನು ನಾನು ಕೊಲ್ಲುವುದಿಲ್ಲ. ನೀನು ನನ್ನ ಸ್ನೇಹಿತ. ನೀನೆಂದ ಸಮಾನತೆಗಾಗಿ ನಿನ್ನ ರಾಜ್ಯದ ಅರ್ಧವನ್ನು ನಿನಗೆ ಹಿಂದಿರುಗಿಸುತ್ತಿದ್ದೇನೆ. ಈ ಗಂಗೆಯ ದಕ್ಷಿಣಕ್ಕಿರುವ ರಾಜ್ಯಭಾಗ ನಿನ್ನದು; ಉತ್ತರದ್ದು ನನ್ನದು. ಬಾ ಈಗ, ನಾವಿಬ್ಬರೂ ಸ್ನೇಹಿತರಾಗಿರೋಣ!'' ಎನ್ನುತ್ತ ಹಂಗಿಸತೊಡಗಿದನು.ಇಲ್ಲಿಗೆ ಈ ಪ್ರಸಂಗ ಮುಗಿಯಿತೆಂದು ಭಾವಿಸಿದ ದ್ರೋಣನಿಗೆ ದೂರದೃಷ್ಟಿ ಸಾಲದೆ ಹೋಯಿತು. ಅವಮಾನವನ್ನು ನುಂಗಿಕೊಂಡು ಪ್ರತೀಕಾರಕ್ಕಾಗಿ ಬ್ರಾಹ್ಮಣನಾದ ತಾನೇ ಇಷ್ಟು ವರ್ಷಗಳು ಕಾದಿರುವಾಗ ಕ್ಷತ್ರಿಯನಾದ ದ್ರುಪದನ ಹೃದಯದಲ್ಲಿ ಉಳಿಯಬಹುದಾದ ರಚ್ಚಿನ ಕಲ್ಪನೆ ಅವನಿಗೆ ಬರಲಿಲ್ಲ. ದ್ರೋಣನು ತನ್ನನ್ನು ಪ್ರೀತಿಯಿಂದ ಆಲಿಂಗಿಸಿಕೊಂಡಾಗಲೂ ದ್ರುಪದನು ತುಟಿಪಿಟಕ್ಕೆನ್ನಲಿಲ್ಲ. ದ್ರೋಣನ ದ್ವೇಷವು ಮರಳುಗಾಡಿನಲ್ಲಿ ಬಿದ್ದ ಮಂಜಿನಂತೆ ಕಣ್ಮರೆಯಾದರೂ, ಅದು ದ್ರುಪದನ ಮನಸ್ಸಿನಲ್ಲಿ ಉಳಿದೇ ಉಳಿಯಿತು. ``ಈ ಶಸ್ತ್ರ ಕೋವಿದನಾದ ಶತ್ರುವನ್ನು ಕೊಲ್ಲುವುದಕ್ಕಾಗಿ ಘೋರ ತಪಸ್ಸನ್ನಾಚರಿಸಿ ಯಜ್ಞದಿಂದ ವೀರಪುತ್ರನೊಬ್ಬನನ್ನು ಪಡೆಯುತ್ತೇನೆ. ಚಿಕ್ಕವಯಸ್ಸಿನಲ್ಲಿಯೇ ಮಹಾಶೌರ್ಯವನ್ನು ಮೆರೆದಿರುವ ಈ ಅರ್ಜುನನಿಗೆ ಒಪ್ಪುವಂತಹ ಮಗಳೊಬ್ಬಳನ್ನೂ ಪಡೆಯುತ್ತೇನೆ! ಎಂದು ಮನಸ್ಸಿನಲ್ಲಿಯೇ ನಿರ್ಧರಿಸಿದನು.* * * * ಧೃತರಾಷ್ಟ್ರನು ರಾಜನೇನೋ ಸರಿ, ಆದರೆ ರಾಜ್ಯವನ್ನು ಅವನಿಗೆ ತನ್ನ ಶೌರ್ಯದಿಂದ ಸಂಪಾದಿಸಿಕೊಟ್ಟವನು ಪಾಂಡು. ಇದಕ್ಕಿಂತಲೂ ಮುಖ್ಯವಾಗಿ ಯುಧಿಷ್ಠಿರನು ದುರ್ಯೋಧನನಿಗಿಂತ ವಯಸ್ಸಿನಲ್ಲಿ ದೊಡ್ಡವನು; ಜನಾನುರಾಗಿ. ಭೀಷ್ಮ ದ್ರೋಣ ವಿದುರ ಎಲ್ಲರೂ ಪಾಂಡವರನ್ನು, ಅದರಲ್ಲೂ ಯುಧಿಷ್ಠಿರನನ್ನು ಹೊಗಳುವವರೇ. ಧೃತರಾಷ್ಟ್ರನಿಗೆ ದುರ್ಯೋಧನನು ಯುವರಾಜನಾಗುವುದಾದರೆ ಚೆನ್ನು ಎಂದು ಆಸೆ; ಆದರೆ ಇದು ಅಸಾಧ್ಯವೆಂಬುದೂ ಗೊತ್ತು. ಮನಸ್ಸಿಲ್ಲದ ಮನಸ್ಸಿನಿಂದ ಧರ್ಮರಾಜನಿಗೇ ಪಟ್ಟಕಟ್ಟಬೆಕಾಯಿತು.ಒದುವರ್ಷ ಕಳೆಯುವುದರೊಳಗಾಗಿ ಯುಧಿಷ್ಠಿರನ ಜನಾನುರಾಗವು ಬಹಳ ಹೆಚ್ಚಿತು. ಭೀಮ ದುರ್ಯೋಧನರು ಬಲರಾಮನ ಬಳಿ ಗದಾಯುದ್ಧ ತಂತ್ರವನ್ನು ಕಲಿಯುತ್ತಿದ್ದರು. ಎಲ್ಲ ಶಿಷ್ಯರಿಗೂ ಸಮಾನವಾಗಿಯೆ ಕಲಿಸಿಕೊಡುತ್ತಿದ್ದ ಬಲರಾಮನಿಗೆ ದುರ್ಯೋಧನನನ್ನು ಕಂಡರೆ ಅದೇನೋ ವಿಶೇಷವಾದ ಅಭಿಮಾನ. ಇದೇ ಕಾಲದಲ್ಲಿಯೇ ಅರ್ಜುನನಿಗೂ ಬಿಲ್ವಿದ್ಯೆಯಲ್ಲಿ ಪರಿಣತಿ ಪೂರ್ಣಗೊಳ್ಳುತ್ತ ಬಂದಿತು; ದ್ರೋಣನು ``ಅರ್ಜುನ, ಹೆಮ್ಮೆಪಟ್ಟುಕೊಳ್ಳಬೇಡ. ಇಡಿಯ ಪ್ರಪಂಚದಲ್ಲಿಯೇ ಒಬ್ಬನನ್ನುಳಿದು ನಿನ್ನಂಥ ಬಿಲ್ಲುಗಾರರಿಲ್ಲ. ಆ ಒಬ್ಬನೆಂದರೆ ನಿನ್ನ ಸೋದರರ ಮಾವನ ಮಗ ವಾಸುದೇವ. ಆ ಕೃಷ್ಣನೊಬ್ಬನು ನಿನ್ನ ಸ್ನೇಹಿತನಾಗಿಬಿಟ್ಟರೆ, ಮೂರು ಲೋಕಗಳಲ್ಲಿಯೂ ನಿನ್ನನ್ನು ಯಾರೂ ಜಯಿಸಲಾರರು. ಕೃಷ್ಣನೂ ನಿಮ್ಮಗಳ ಬಗ್ಗೆ ಕೇಳಿರುವನು. ಸದ್ಯದಲ್ಲಿಯೇ ನೀವು ಭೇಟಿಯಾಗುತ್ತೀರಿ'' ಎಂದು ಅಭಿಮಾನದಿಂದ ನುಡಿದನು. ವಿದ್ಯೆ ಮುಗಿಸಿದ ಅರ್ಜುನನು ದಿಗ್ವಿಜಯ ಹೊರಟು ನಾಲ್ಕು ದಿಕ್ಕುಗಳಲ್ಲಿಯೂ ಆನೇಕ ರಾಜ್ಯಗಳನ್ನು ಗೆದ್ದು ಕೌರವರಾಜ್ಯಕ್ಕೆ ಸೇರಿಸಿದನು. ಕೌರವರ ಅಸೂಯೆ ದಿನದಿನಕ್ಕೆ ಹೆಚ್ಚುತ್ತಿತ್ತು. ಧೃತರಾಷ್ಟ್ರನೂ ಇದಕ್ಕೆ ಹೊರತಾಗಿರಲಿಲ್ಲ. ಪ್ರಜೆಗಳು `ಧೃತರಾಷ್ಟ್ರನು ಕುರುಡ; ರಾಜ್ಯವಾಳಲು ಅವನ ಕೈಲಾಗದು. ಭೀಷ್ಮನು ರಾಜ್ಯಸಿಂಹಾಸನವನ್ನು ಬೇಡವೆಂದು ತ್ಯಜಿಸಿದವನು. ದುರ್ಯೋಧನನು ನಮ್ಮನ್ನಾಳಲು ಯೋಗ್ಯನಲ್ಲ. ಯುಧಿಷ್ಠಿರನಿಗೆ ರಾಜ್ಯಾಭಿಷೇಕವಾಗಲಿ!' ಎನ್ನತೊಡಗಿರುವರೆಂದು ಗೂಢಚಾರರಿಂದ ಅರಿತ ದುರ್ಯೋಧನನ ಎದೆ ಬೇಯತೊಡಗಿತು. ಒಬ್ಬನೇ ಇರುವ ಸಮಯ ಕಾದು ತಂದೆಯ ಬಳಿಗೆ ಹೋಗಿ ತನ್ನೆದೆಯ ನೋವನ್ನು ತೋಡಿಕೊಂಡು, ``ಅಪ್ಪಾ, ನೀನು ಯಧಿಷ್ಠಿರನಿಗೆ ಯುವರಾಜ ಪದವಿ ಕೊಟ್ಟುದರ ಪರಿಣಾಮವಿದು, ಹೀಗೆಕೆ ಮಾಡಿದೆ?" ಎಂದು ಕೇಳಿದನು. ಧೃತರಾಷ್ಟ್ರನು ``ಮಗು, ನಿನಗೆ ತಿಳಿಯದು. ನಾನು ಸಾಮ್ರಾಟನಾದರೂ, ಈ ರಾಜ್ಯವನ್ನು ಸಂಪಾದಿಸಿದವನು ಪಾಂಡು. ಮಹಾವೀರನಾದ ಅವನು ಸರ್ವಸ್ವವನ್ನೂ ತ್ಯಾಗಮಾಡಿ ಕಾಡಿಗೆ ಹೋಗಿ ಅಲ್ಲಿಯೇ ಪ್ರಾಣಬಿಟ್ಟನು. ತಬ್ಬಲಿಗಳಾದ ಅವನ ಮಕ್ಕಳನ್ನು ನನ್ನ ಮಕ್ಕಳಂತೆಯೇ ನೋಡಿಕೊಳ್ಳಲು ಜನರು ಅವರನ್ನು ಕರಿತಂದು ಬಿಟ್ಟಿರುವರು. ಯುಧಿಷ್ಠಿರನ ಮೇಲೆ ಜನರ ಪ್ರೀತಿಯ ಸಾಧುವಾಗಿಯೇ ಇದೆ. ಅವನ ಸೋದರರೂ ನೀವುಗಳೂ ಒಟ್ಟಿಗೆ ಅವನೊಂದಿಗೆ ಸೇರಿ ಈ ರಾಜ್ಯದ ಕೀರ್ತಿಯನ್ನು ಬೆಳೆಸಬೇಕು. ನಾನು ನಿನಗೇನೂ ಅನ್ಯಾಯ ಮಾಡುವುದಿಲ್ಲ. ಆದರೆ ನೀನು ನಿನ್ನ ಹೊಟ್ಟೆಕಿಚ್ಚನ್ನುತೊರೆದು ಅವರೊಡನೆ ಹೊಂದಿಕೊಳ್ಳಬೇಕು . ಹುಚ್ಚುಹುಚ್ಚಾಗಿ ಏನನ್ನಾದರೂ ಮಾಡಲು ಹೋಗಬೇಡ'' ಎಂದು ಹಿತ ನುಡಿದನು.ಸಿಟ್ಟಿನಿಂದ ನಡುಗುತ್ತಿದ್ದ ದುರ್ಯೋಧನನು ನಿಟ್ಟುಸಿರಿಟ್ಟು, ``ಅಪ್ಪಾ, ಯಾರಾದರೂ ಕೇಳಿಸಿಕೊಂಡಾರೆಂದು ಹೀಗನ್ನುತ್ತಿರುವೆಯೇನು? ಇಲ್ಲಿ ನಮ್ಮಿಬ್ಬರನ್ನುಳಿದು ಇನ್ನು ಯಾರೂ ಇಲ್ಲ. ನಿನ್ನ ಮನಸ್ಸಿನ ಭಾವನೆಗಳನ್ನು ನೀನು ನಿರ್ಭಯವಾಗಿ ನನಗೆ ಹೇಳಬಹುದು. ಈಗ ಈ ಯುಧಿಷ್ಠಿರನು ರಾಜನಾದರೆ, ವಂಶಪಾರಂಪರ್ಯವಾಗಿ ರಾಜ್ಯ ಅವರಿಗೇ ಹೋಗುತ್ತದೆ; ನಾವೂ ನಮ್ಮ ಮಕ್ಕಳೂ ಅವರುಗಳ ಸೇವೆ ಮಾಡಿಕೊಂಡಿರಬೇಕಾಗುತ್ತದೆ. ಪಾಂಡವರನ್ನು ಅನುಸರಿಸಿಕೊಡಿರುವುದಕ್ಕಿಂತ ನನಗೆ ಸಾಯುವುದೇ ಮೇಲೆನಿಸುತ್ತದೆ. ರಾಜನಾದ ನಿನ್ನ ಮಗ ನಾನು ರಾಜನಾಗಬೇಕೆಂದು ನಿನಗೆ ಅನ್ನಿಸುವುದಿಲ್ಲವೆ?'' ಎನ್ನುತ್ತ ಕಂಬನಿ ಮಿಡಿದನು.ಧೃತರಾಷ್ಟ್ರನು ಕರಗಿಹೋದನು. ``ಮಗನೇ, ದುಃಖಿಸಬೇಡ. ನನ್ನ ತಮ್ಮನಾದ ಪಾಂಡುವು ತನ್ನ ಸದ್ಗುಣಳಿಂದಲೇ ಎಲ್ಲರ ಮನಸ್ಸನ್ನು ಗೆದ್ದವನು. ಅವನ ಮಗ ಯುಧಿಷ್ಠಿರನೂ ಹಾಗೆಯೇ ಇರುವನು. ಅವನಿಗೇನಾದರೂ ಆದರೆ ಸಂದೇಹ ಬರುವುದು ನಮ್ಮ ಮೇಲೆಯೇ. ಪಾಂಡವರು ತುಂಬ ಜನಪ್ರೀತಿಯನ್ನು ಗಳಿಸಿರುವರು. ಭೀಷ್ಮ, ದ್ರೋಣ, ಕೃಪ,ವಿದುರ ಎಲ್ಲರೂ ಇರುವುದು ಅವರ ಕಡೆಗೇ. ಅವರನ್ನೆಲ್ಲ ಎದುರುಹಾಕಿಕೊಳ್ಳುವುದು ಸಾಧುವೆ? ಇದನ್ನೆಲ್ಲ ಯೋಚಿಸಿಯೇ ಯುಧಿಷ್ಠಿರನನ್ನು ಯುರರಾಜನನ್ನಾಗಿ ಮಾಡಿದೆ!'' ಎನ್ನುತ್ತ ಮಗನ ತಲೆಯನ್ನು ನೇವರಿಸಿದನು. ಅದಕ್ಕೆ ದುರ್ಯೋಧನನು, ``ಅಪ್ಪಾ! ಭೀಷ್ಮನು ಎಲ್ಲದರ ಬಗ್ಯೂ ಅನಾಸಕ್ತನು. ಅವನು ಗಂಗಾತಟದಮೇಲೆ ತನ್ನಲ್ಲಿಯೇ ನಾನು ಏನನ್ನೊ ಯೋಚಿಸುತ್ತ ಶಥಪಥ ತುಳಿಯುತ್ತ ಕಣ್ಣೀರಿಡುತ್ತಿರುವುದನ್ನು ನಾನು ಅನೇಕ ಬಾರಿ ನೋಡಿರುವೆ. ಅವನ ದುಃಖ ಅವನಿಗೆ. ನಾವೇನು ಮಾಡುವೆವು ಎಂಬುದರ ಕಡೆಗೆ ಅವನ ಗಮನವಿರುವುದಿಲ್ಲ. ಅಶ್ವತ್ಥಾಮನು ನನ್ನ ಪ್ರಿಯಸ್ನೇಹಿತ. ನನ್ನ ಮೇಲಣ ಅವನ ಪ್ರೀತಿ ಧೃವತಾರೆಯಂತೆ ಸ್ಥಿರವಾದದ್ದು. ಎಂದಮೇಲೆ ಅವನ ತಂದೆ ದ್ರೋಣನೂ ನನ್ನ ಕಡೆಗೇ! ಇವರಿಬ್ಬರ ವಿರುದ್ಧವಾಗಿ ಕೃಪ ನಿಲ್ಲುವನೆ? ಇನ್ನುಳಿದವನು ವಿದುರ ಒಬ್ಬನೇ. ಅವನಿಗೆ ಪಾಂಡವರ ಮೇಳೆ ಪ್ರೀತಿ. ಅದಕ್ಕಾಗಿ ನಮ್ಮನ್ನೂ ತೊರೆದಾನು. ಆದರೆ ಏಕೈಕ ಅಂತ್ಯಜನೊಬ್ಬನು ಏನುತಾನೆ ಮಾಡಬಲ್ಲ? ಹೆಚ್ಚೆಂದರೆ ನಿನಗೆ ಧರ್ಮವನ್ನು ಬೋಧಿಸಿಯಾನು. ಅದನ್ನು ಕೇಳಿಸಿಕೊಳ್ಳುತ್ತ ನೀನು ಮನರಂಜನೆ ಪಡೆದುಕೋ! ಅಪ್ಪಾ, ನನ್ನದೊಂದು ಉಪಾಯವಿದೆ. ಪಾಂಡವರನ್ನು ಕುಂತಿಯೊಡನೆ ಒಂದು ವರ್ಷದ ಮಟ್ಟಿಗೆ ದೂರದ ವಾರಣಾವತಕ್ಕೆ ಏನಾದರೂ ನೆಪದಿಂದ ಕಳುಹಿಸು. ಅಷ್ಟರಲ್ಲಿ ನಾನು ಜನರ ಪ್ರೀತಿಯನ್ನು ಗಳಿಸಿಕೊಳ್ಳುವೆ. ಎಲ್ಲವನ್ನೂ ಬೇಗ ಮರೆಯುವ ಜನ ಸಾಮಾನ್ಯರು ಯುಧಿಷ್ಠಿರನನ್ನೂ ಸುಲಭವಾಗಿ ಮರೆಯುವರು. ಪಾಂಡವರು ಒಂದು ವೇಲೆ ಹಿಂದಿರುಗಿ ಬಂದರೆ, ತಮ್ಮ ವೈಭವದ ದಿನಗಳು ಇನ್ನಿಲ್ಲ ಎಂಬುದನ್ನು ತಿಳಿಯುವರು. ನೀನು ನನಗಾಗಿ ಇಷ್ಟನ್ನು ಮಾಡಲೇ ಬೇಕು. ನಿನಗೆ ನನ್ನ ಮೇಲೆ ಪ್ರೀತಿಯಿದ್ದರೆ, ನನ್ನ ಹೃದಯವನ್ನು ಬಾಧಿಸುತ್ತಿರುವ ಈ ಕೂರಲಗನ್ನು ತೆಗೆದುಹಾಕು. ಪಾಂಡವರನ್ನು ಹೇಗಾದರೂ ಮಾಡಿ ದೂರ ಕಳುಹಿಸು; ಉಳಿದುದನ್ನು ನಾನ್ನು ನೋಡಿಕೊಳ್ಳುವೆ'' ಎಂದು ಅಲ್ಲಿಂದ ತೆರಳಿದನು.ತನ್ನದೇ ಪಾಪಚಿಂತನೆಯಲ್ಲಿ ಹಗಲುಗನಸು ಕಾಣುತ್ತ ಧೃತರಾಷ್ಟ್ರನು ಮೌನವಾಗಿ ಅಲ್ಲಿಯೇ ಬಹುಕಾಲ ಕುಳಿತಿದ್ದನು. ಮಗ ಎಂಥವನೆಂಬುದು ಅವನಿಗೆ ಗೊತ್ತು. ಪಾಂಡವರನ್ನು ದೂರಕಳುಹಿಸಿದರೆ ಅವರು ಹಸ್ತಿನಾವತಿಗೆ ಪುನಃ ಹಿಂದಿರುಗದಂತೆ ಹೇಹೋ ಮಾದಿ ಮುಗಿಸಿ ಬಿಡುವ ಯೊಜನೆಯೊಂದು ತಯಾರಾಗಿದೆಯೆಂಬುದು ಅವನಿಗೆ ತಿಳಿಯಿತು. ಅದಕ್ಕೆ ತನ್ನ ಮಂತ್ರಾಲೋಚನೆಯನ್ನೂ ಸೇರಿಸಿ ಯಶಸ್ವಿಗೊಳಿಸಲು ನಿರ್ಧರಿಸಿದನು. ತನ್ನ ಗತಿಸಿದ ತಮ್ಮನ ಮಕ್ಕಳ ಬಗ್ಗೆ ಅವನಿಗೂ ಅಷ್ಟೇ ಅಸೂಯೆಯಿತ್ತು. ಆದರೆ ತಾನು ರಾಜನಾದರಿಂದ ಹೊರಗೆ ತೋರಿಸುವಂತಿರಲಿಲ್ಲ;ತನ್ನೊಳಗೇ ಹುದುಗಿಸಿಗೊಂಡಿದ್ದನು.ಧೃತರಾಷ್ಟ್ರನು ಶಕುನಿಯ ಸ್ನೇಹಿತನಾದ ಕಣಿಕ ಎಂಬುವನನ್ನು ಕರೆಸಿದನು. ಕೇಡಿನ ಯೋಜನೆಗಳಲ್ಲಿ ಚತುರನಾದ ಅವನು, ``ಶತ್ರುವು ಬಲಿಯುವುದರೊಳಗೆ ನಿಗ್ರಹಿಸಬೇಕು. ನಿನ್ನನ್ನೂ ಮಕ್ಕಳನ್ನು ರಕ್ಷಿಸಿಕೊಂಡಿರು; ಪ್ರೀತಿಯ ನಾಟಕವಾಡುತ್ತಿರು; ನೋಡೋಣ'' ಎಂದನು.* * * * ಕೆಲ ದಿನಗಳು ಕಳೆದು ಮೇಲೆ ರಾಜನು ಯುಧಿಷ್ಠಿರನಿಗೆ ಹೇಳಿಕಳುಹಿಸಿ, ``ಮಗು, ವಾರಣಾವತ ನಗರವು ಬಹು ಸುಂದರವಾದುದೆಂದು ಕೇಳಿರುವೆ. ನೀವೇಕೆ ಅಲ್ಲಿಗೆ ಪ್ರವಾಸ ಹೋಗಿ ಕೆಲಕಾಲ ಸುಖವಾಗಿದ್ದು ಹಿಂದಿರುಗಗಾರದು? ಏನೆನ್ನು ತ್ತೀಯೆ?'' ಎಂದನು . ಇದ್ದಕ್ಕಿದ್ದ ಹಾಗೆ ಮುಂದಿಟ್ಟ ಈ ಸಲಹೆಯಿಂದ ಧರ್ಮರಾಜನಿಗೆ ಗಲಿಬಿಲಿಯುಂಟಾದರೂ, ರಾಜನ ಧೋರಣೆಯ ಹಿಂದೆ ಏನೋ ಅಪಾಯದ ಹೊಂಚು ತಮಗಾಗಿ ಕಾದಿದೆ ಎನ್ನಿಸಿತು. ತಾನು ಯುವರಾಜನಾದರೂ ಅದೆಷ್ಟು ಅಸಹಾಯಕ!`` ಮಹಾರಾಜ, ಹಾಗೆಯೇ ಆಗಲಿ!'' ಎಂದು ಹೇಳಿ, ದ್ರೋಣ ವಿದುರ ಮತ್ತಿತರ ಹಿರಿಯರೆಲ್ಲರಿಗೂ ನಡೆದುದನ್ನು ತಿಳಿಸಿ ಅವರ ಆಶೀರ್ವಾದವನ್ನು ಪಡೆದುಕೊಂಡನು. ಭೀಷ್ಮನನ್ನು ಕಂಡು, ``ಅಜ್ಜಾ, ದೊಡ್ಡಪ್ಪನಿಗೆ ನಮ್ಮ ಮೇಲೆ ಅದೆಷ್ಟು ಪ್ರೀತಿ ಎಂದುದು ನಿನಗೆ ಗೊತ್ತು. ಈಗ ನಾವು ತ್ರಿಪುರಾಂತಕ ಶಿವನ ಸ್ಥಾನವಾದ ವಾರಣಾವತದಲ್ಲಿ ಕೆಲ ತಿಂಗಳುಗಳು ಇದ್ದು ಬರಬೇಕೆಂದು ಅವನ ಇಚ್ಛೆ. ಅವನು ನಮ್ಮ ಕ್ಷೇಮವನ್ನೇ ಯಾವಾಗಲೂ ಚಿಂತಿಸುತ್ತಿರುವುದು ನಮ್ಮ ಅದೃಷ್ಟ!'' ಎಂದನು. ಧೃತರಾಷ್ಟ್ರ ದುರ್ಯೋಧನಾದಿಗಳ ನೀಚಬುದ್ದಿ ಎಲ್ಲಿಗೆ ಹೋಗಿ ಮುಟ್ಟಿದೆ ಎಂದುದರ ಕಲ್ಪನೆ ಭೀಷ್ಮನಿಗೆ ಇರಲಿಲ್ಲ. ತನ್ನ ಮಾತಿನ ಇಂಗಿತ ಅಜ್ಜನಿಗೆ ತಿಳಿಯಲಿಲ್ಲ; ಇನ್ನು ಯಾರೂ ತನಗೆ ಸಹಾಯ ಮಾಡಲು ಸಾಧ್ಯವಿಲ್ಲ ಎಂಬುದನ್ನರಿತ ಯುಧಿಷ್ಠಿರನು ವಾರಣಾವತಕ್ಕೆ ಹೋಗುವ ಏರ್ಪಾಟನ್ನು ಮಾಡಿಕೊಳ್ಳತೊಡಗಿದನು. ಅಲ್ಲಿ ತಮಗೆ ಅಪಾಯ ಕಾದಿದೆಎಂದೆನಿಸಿದರೂ, ಸ್ಪಷ್ಟವಾಗಿ ಯಾವ ರೂಪದಲ್ಲಿ ಎಂವುದುದರ ಕಲ್ಪನೆ ಅವನಿಗುಂಟಾಗಲಿಲ್ಲ.ವಾರಣಾವತಕ್ಕೆ ಹೋಗಲು ಯುಧಿಷ್ಠಿರನು ಒಡಂಬಟ್ಟಕೂಡಲೆ ದುರ್ಯೋಧನನು ಶಕುನಿಯೊಂದಿಗೆ ಸೇರಿ ಷಡ್ಯಂತ್ರವನ್ನು ರೂಪಿಸತೊಡಗಿದನು. ದುರ್ಯೋಧನನು ಪುರೋಚನ ಎಂಬ ಒಬ್ಬ ಮಂತ್ರಿಯನ್ನು ಗುಟ್ಟಾಗಿ ಕರೆದು, ``ಸಮಸ್ತ ಸಂಪತ್ತನ್ನೊಡಗೂಡಿದ ಈ ಭೂಮಿಯು ನನ್ನದು. ನೀನು ನನಗೆ ತಂದೆಯ ಹಾಗೇಯೇ ಪ್ರಿತಿಯನು; ನೀನೀಗ ನನ್ನೊಂದಿಗೆ ರಾಜ್ಯವನ್ನು ಹಂಚಿಕೊಳ್ಳಬಹುದು. ನಿನಗೆ ನನ್ನ ಮನಸ್ಸು ಗೊತ್ತಲ್ಲವೆ? ಈಗ ನನಗೆ ಸಹಾಯ ಮಾಡು. ವೇಗದ ಕುದುರೆಗಳನ್ನು ಕಟ್ಟಿದ ರಥವನ್ನು ತೆಗೆದುಕೊಂಡು ತಕ್ಷಣ ವಾರಣಾವತಕ್ಕೆ ಹೋಗು. ಅಲ್ಲಿ ಪಾಂಡವರಿಗಾಗಿ ಅರಮನೆಯೊಂದನ್ನು ತಡಮಾಡದೆ ನಿರ್ಮಿಸಿಡು. ಅದು ಸುಂದರವೂ ರಾಜಯೋಗ್ಯವೂ ಆಗಿರಲಿ. ನಿರ್ಮಾಣಕ್ಕೆ ಸುಲಭವಾಗಿ ಉರಿಯುವಂತಹ ಮೇಣ,ರಾಳ ಮುಂತದುವುಗಳನ್ನು ಬಳಸು. ಅದರಲ್ಲಿ ಅಲ್ಲಲ್ಲಿ ಹೇರಳವಾಗಿ ಎಣ್ಣೆ, ತುಪ್ಪ, ಕರ್ಪೂರ ಇತ್ಯಾದಿಗಳ ದೊಡ್ಡಸಂಗ್ರಹಗಳಿರಲಿ. ಅವರು ಅಲ್ಲಿಗೆ ತಲುಪುವುದರೊಳಗಾಗಿ ನಿರ್ಮಾಣ ಮುಗಿಯಬೇಕು. ಸುದಂಧಗಳನ್ನು ಧಾರಾಳವಾಗಿ ಬಳಸಿ ಯಾರಿಗೂ ಯಾವ ಅನುಮಾನವೂ ಬಾರದಂತೆ ಮಾಡು. ಅನಂತರ ಪಾಂಡವರನ್ನು ಎದುರುಗೊಂಡು, ವಿನೀತನಾಗಿ, ಅಲ್ಲಿ ಅವರು ಬಂದಿರುವಂತೆ ಕೇಳಿಕೋ. ಅವರು ಸುಖವಾಗಿರುವುದಕ್ಕಾಗಿಯೇ ಮಹಾರಾಜನು ಅದನ್ನು ನಿರ್ಮಿಸಿರುವನೆಂದು ತಿಳಿಸು. ಹೇಗಾದರೂ ಮಾಡಿ ಅವರ ನಂಬಿಕೆಯನ್ನು ಸಂಪಾದಿಸು. ಅದರಲ್ಲಿ ಅವರು ವಾಸಿಸತೊಡಗಿದ ಮೇಲೆ ಅವರಿಗೆ ಯಾವ ಅನುಮಾನವೂ ಬಾರದಂತೆ ಒಂದು ರಾತ್ರಿ ಅದಕ್ಕೆ ಬೆಂಕಿಯಿಟ್ಟುಬಿಡು. ಬೆಂಕಿ ಅಕಸ್ಮಾತ್ತಾಗಿ ತಗುಲಿದಂತಿರಬೇಕು . ಜನರಿಗೆ ಅನುಮಾನ ಬರಬಾರದು. ಇದು ಯಶಸ್ವಿಯಾಗಲೇಬೇಕು. ನನ್ನ ಕೈವಾಡ ಇದರಲ್ಲಿದೆಯೊಂದು ಯಾರಿಗೂ ಅನ್ನಿಸದಂತೆ ಪಾಂಡವರನ್ನು ನಾಶಮಾಡಲು ಇದೊಂದೇ ಅವಕಾಶ. ನಾನು ನಿನ್ನನ್ನೇ ನಂಬಿರುವೆ!'' ಎಂದನು. ಹಾಗೆಯೇ ಆಗಲೆಂದು ಪುರೋಚನನು ವಾರಣಾವತಕ್ಕೆ ಹೊರಟನು.ಧೃತರಾಷ್ಟ್ರನು ಪಾಂಡವರನ್ನು ಒಂದು ವರ್ಷಕಾಲ ವಾರಣಾವತಕ್ಕೆ ಕಳುಹಿಸುತ್ತಿರುವನು ಎಂಬ ಸುದ್ದಿ ಕಾಳ್ಕಿಚ್ಚಿನಂತೆ ಹರಡಿ ಜನರನ್ನು ಕಳವಳಕ್ಕೀಡುಮಾಡಿತು. ಪುರಪ್ರಮುಖರು ಯುಧಿಷ್ಠಿರನ್ನ ಕಂಡು `ಇದರಲ್ಲೇನೋ ದುರುದ್ದೇಶವಿದೆ, ವಾರಣಾವತಕ್ಕೆ ಹೋಗಬೇಡಿ ' ಎಂದು ಹೇಳಿದರು. ಭೀಷ್ಮನಿಗೂ ಕಣ್ಣಿಲ್ಲದೆ ಹೋಯಿತೆ ಎಂದು ಹಳಹಳಿಸಿದರು. ಧರ್ಮಜನು ``ಹಿರಿಯರ ಮಾತನ್ನು ಮೀರುವುದಿಲ್ಲ ಎಂಬುದು ನನ್ನ ಪ್ರತಿಜ್ಞೆ. ತಂದೆಯಿಲ್ಲದ ನನಗೆ ಅವನೇ ತಂದೆ; ಅವನಿಗೆ ವಿಧೇಯನಾಗಿರುವುದು ನನ್ನ ಕರ್ತವ್ಯ. ನಿಮ್ಮೆಲ್ಲರ ಆಶೀರ್ವಾದ ನಮ್ಮ ಮೇಲಿರಲಿ!" ಎಂದು ಪುರಜನರನ್ನು ಕಳುಹಿಸಿಬಿಟ್ಟನು. ವಿದುರನು ಸ್ವಲ್ಪ ದೂರ ಪಾಂಡವರ ಜೊತೆಗೇ ನಡೆದು ಬಂದು "ಯುಧಿಷ್ಠಿರ, ನೀನು ಬುದ್ಧಿವಂತ. ಅಪಾಯದಿಂದ ಹೇಗೆ ಸಂರಕ್ಷಿಸಿಕೊಳ್ಳಬೇಕು ಎಂಬುದು ನಿನಗೆ ತಿಳಿದಿರಬೇಕು. ಬಿಲ್ಲುಬಾಣಗಳಿಗಿಂತಲೂ ಅಪಾಯಕಾರಿಯಾದ ಅಸ್ತ್ರಗಳಿವೆ. ಇಲಿಯು ಬಿಲವನ್ನು ಕೊರೆದುಕೊಂಡು ಅದರಲ್ಲಿದ್ದು ಚಳಿಗಾಲವನ್ನು ಕಳೆಯುತ್ತದೆ. ನಂತರದ ಹಾದಿ ನಕ್ಷತ್ರಗಳ ನೆರವಿನಿಂದ ಸುಗಮವಾಗುವುದು. ಎಚ್ಚರವಾಗಿರುವವರನ್ನು ಯಾವ ಅಪಾಯವೂ ತಾಗಲಾರದು, ಇದನ್ನರಿತುಕೊಂಡು ಅಪಾಯದಿಂದ ಪಾರಾಗು!" ಎಂದು ಇತರರು ಅರಿಯದ ಮ್ಲೇಚ್ಛ ಭಾಷೆಯಲ್ಲಿ ತಿಳಿಸಲು, ಧರ್ಮರಾಜನು ಹಾಗೆಯೇ ಆಗಲೆಂದು ಅವನತಶಿರನಾಗಿ ತಾಯಿ ತಮ್ಮಂದಿರೊಂದಿಗೆ ವಾರಣಾವತದ ಕಡೆಗೆ ಹೊರಟನು. ಎಂಟು ದಿನಗಳ ನಂತರ ಅವರೆಲ್ಲ ಭಗವಾನ್ ಶಂಕರನ ನಗರವಾದ ವಾರಣಾವತವನ್ನು ಸೇರಿದರು.* * * * ಸೂರ್ಯವಂಶದ ಹರಿಶ್ಚಂದ್ರನು ತನ್ನ ಕಷ್ಟಕಾಲವನ್ನು ಕಳೆದ ನಗರ ವಾರಣಾವತ. ಅಲ್ಲಿಯ ಜನರು ನಗರವನ್ನಲಂಕರಿಸಿ ಉತ್ಸಾಹದಿಂದ ಪಾಂಡವರನ್ನು ಬರಮಾಡಿಕೊಂಡರು. ಸ್ವಾಗತ ಸಮಾರಂಭಗಳೆಲ್ಲ ಮುಗಿದಮೇಲೆ, ಹತ್ತನೆಯ ದಿನ ಪುರೋಚನನು ಕಾಣಿಸಿಕೊಂಡು, ಧೃತರಾಷ್ಟ್ರ ಮಹಾರಾಜನು ಪಾಂಡವರ ಅನುಕೂಲಕ್ಕಾಗಿಯೇ ಕಟ್ಟಿಸಿರುವ, 'ಶಿವ' ಎಂಬ ಹೆಸರುಳ್ಳ ಅರ(ಗಿನ)ಮನೆಗೆ ವಾಸಕ್ಕೆ ಬರಬೇಕೆಂದು ಯುಧಿಷ್ಠಿರನನ್ನು ಪ್ರಾರ್ಥಿಸಿ ಕರೆತಂದನು. ಶತ್ರುಗಳಿಂದ ರಕ್ಷಣೆಯೆಂದು ಮನೆಯ ಸುತ್ತಲೂ ಕಂದಕವನ್ನು ತೋಡಲಾಗಿತ್ತು. ಪುರೋಚನನು ಹೊರಟುಹೋದ ಮೇಲೆ ಯುಧಿಷ್ಠಿರನು ತನ್ನ ತಮ್ಮನನ್ನು ಕರೆದು "ಭೀಮ, ಇಲ್ಲಿರುವ ವಿಚಿತ್ರ ವಾಸನೆಯನ್ನು ಗಮನಿಸಿದೆಯಾ? ಈ ಮನೆಯನ್ನು ಕಟ್ಟಿರುವುದು ಉರುವಲ ವಸ್ತುಗಳಿಂದ. ಕೌರವರು ಇದಕ್ಕೆ ಬೆಂಕಿಯಿಡುವುದು ಖಂಡಿತ ವಿದುರನು ಸುತ್ತಿ ಬಳಸಿ ಹೇಳಿದ್ದೂ ಅದನ್ನೇ! ಅವನಿಗೆ ಅವರುಗಳ ಷಡ್ಯಂತ್ರವು ಗೊತ್ತಿತ್ತೆಂದು ಕಾಣುತ್ತದೆ" ಎಂದನು. ಭೀಮನು ಕೋಪದಿಂದ, "ನಾವು ತಕ್ಷಣವೇ ಇಲ್ಲಿಂದ ಪಾರಾಗೋಣ. ಇಲ್ಲಿದ್ದರೆ ಬೋನಿನಲ್ಲಿ ಸಿಕ್ಕಿಬಿದ್ದ ಇಲಿಗಳಂತೆ ಸಾಯುವುದು ಖಂಡಿತ. ದುರಾತ್ಮನಾದ ಪುರೊಚನನು ಇದಕ್ಕೆ ಬೆಂಕಿ ಹಚ್ಚುವ ಮೊದಲೇ ಹೊರಟು ಹೋಗೋಣ!" ಎಂದು ಅವಸರಿಸಿದನು. ಧರ್ಮಜನು ನಕ್ಕು, "ಅವಸರಿಸಬೇಡ. ಜನರಿಗೆ ಅನುಮಾನ ಬರುವಂತೆ ಅವರು ತಕ್ಷಣಕ್ಕೆ ಬೆಂಕಿ ಹಚ್ಚುವುದಿಲ್ಲ. ನನಗೆ ವಿದುರನು ಮೇಲೆ ನಂಬಿಕೆಯಿದೆ. ಅವನು ನಮ್ಮನ್ನು ಇಲ್ಲಿಂದ ಪಾರುಮಾಡುವುದಕ್ಕೆ ಏನಾದರೂ ಉಪಾಯ ಮಾಡಿಯಾನು. ನಾವು ಎಚ್ಚರದಿಂದ ಕಾದುಕೊಡಿದ್ದು, ಏನಾಗುವುದೆಂದು ನೋಡೋಣ" ಎಂದನು. ಭೀಮನು, ``ಅಣ್ಣ, ಅವರೆಂಥ ಪಾಪಿಗಳೆಂಬುದು ನಿನಗೆ ಮರೆತುಹೋಯಿತೆ? ಅವರು ಜನಾಭಿಪ್ರಾಯಕ್ಕೆ ಸೊಪ್ಪು ಹಾಕುವವರಲ್ಲ. ನನಗೆ ಕಾಳಕೂಟ ವಿಷವನ್ನು ಕುಡಿಸಿ, ಹೆಡಮುರಿಗೆ ಕಟ್ಟಿ ನದಿಗೆಸೆದುದನ್ನು ನೆನೆದುಕೋ. ಆಗ ರಕ್ಷಿಸಿದ ದೇವರೇ ಈಗಲೂ ರಕ್ಷಿಸುವನು, ಎಲ್ಲವನ್ನೂ ಮೂಗುಮುಚ್ಚಿಕೊಂಡು ಸಹಿಸುವುದು ನನಗಿಷ್ಟವಿಲ್ಲ. ನಾವು ಇಲ್ಲಿಂದ ಹೋಗಿ ರಾಜನ ಷಡ್ಯಂತ್ರವನ್ನು ಜಗಜ್ಜಾಹೀರು ಮಾಡೋಣ. ಅವರನ್ನು ಮುಗಿಸಲು ಅರ್ಜುನನೊಬ್ಬನೇ ಸಾಕು. ನೀನು ಅಪ್ಪಣೆ ಕೊಟ್ಟರೆ ನಾನು ಅವರೆಲ್ಲರನ್ನೂ ಕೈಯಿಂದಲೇ ಹೊಸಕಿಹಾಕಿಬಿಡುತ್ತೇನೆ. ಅವರು ನಮ್ಮ ಮನಶ್ಶಾಂತಿಯನ್ನೇ ಹಾಳುಗೆಡವಿದ್ದಾರೆ!" ಎಂದನು. ಯುಧಿಷ್ಠಿರನು,``ವೃಕೋದರ, ನಿನಗರ್ಥವಾಗುವುದಿಲ್ಲ. ನಾವು ಅರಗಿನ ಮನೆಯಲ್ಲಿ ಸುಟ್ಟುಹೋದೆವೆಂದಿಟ್ಟುಕೋ. ಅಗ ದೊಡ್ಡಪ್ಪ ಮೊಸಳೆಕಣ್ಣೀರು ಸುರಿಸುತ್ತ, `ಹಾ ಪಾಂಡವರೆ, ನನ್ನ ಮಕ್ಕಳೆ, ನೀವೇ ನನ್ನ ವೃದ್ಧಾಪ್ಯದ ಆಶ್ರಯವೆಂದುಕೊಂಡಿದ್ದೆ; ನೀವೇ ಹೋದಿರಾ, ವಿಧಿಯು ಬಹು ಕ್ರೂರ!' ಎಂದು ವಿಲಾಪಿಸಿ ಸುಮ್ಮನಾಗುವನು. ನಂತರ ತನಗಾದ ಸಂತಸವನ್ನು ಹೇಗೆ ಮುಚ್ಚಿಟ್ಟುಕೊಳ್ಳುವುದು ಎಂದು ಯೋಚಿಸುವನು. ಅಜ್ಜ ಭೀಷ್ಮ ಒಳ್ಳೆಯವನು ನಿಜ. ಆದರೆ ಅವನು ತನ್ನ ಅಜ್ಜ ಹಿಮವಂತನ ಹಾಗೆ ತಣ್ಣನೆಯ ವ್ಯಕ್ತಿ. ಅವನಿಗೆ ದು:ಖವಾಗುವುದಿಲ್ಲ ಎಂದೇನಲ್ಲ; ಅದರೆ ಪಾಂಡವರನ್ನು ಕೊಂದನೆಂಬುದಕ್ಕಾಗಿ ದುರ್ಯೋಧನನನ್ನು ಶಿಕ್ಷಿಸಬೇಕೆಂದು ಹೊರಡಲಾರ. ದ್ರೋಣ ಕೃಪರೂ ಅಷ್ಟೆ. ಯಾರೂ ದುರ್ಯೋಧನನನ್ನು ಎದುರಿಸಿ ನಿಲ್ಲುವುದಿಲ್ಲ. ನೀನೆಂದಂತೆ ನಾವು ಇಲ್ಲಿಂದ ಹೊರಗೆ ಹೋಗಿ ಕೌರವರನ್ನು ಬಹಿರಂಗವಾಗಿ ನಿಂದಿಸಿದರೆ ನಮ್ಮನ್ನು ಕೇಳುವವರಾದರೂ ಯಾರು? ನಮಗೆ ಬೆಂಬಲವಿರುವುದಿಲ್ಲ. ಅದ್ದರಿಂದ ಸಮಯವನ್ನು ಕಾಯುವುದೇ ಮೇಲು. ನಾವಿಲ್ಲಿಂದ ಮಾರುವೇಷದಲ್ಲಿ ತಪ್ಪಿಸಿಕೊಂದು ಹೋಗೋಣ. ದುರ್ಯೋಧನನು ನಾವು ಸತ್ತೆವೆಂಬ ಸಂತಸದಲ್ಲಿ ನಲಿಯುತ್ತಿರಲಿ. ಕಾಲ ಬಂದಾಗ ನಾವು ಕಾಣಿಸಿಕೊಳ್ಳೋಣ. ಇದೇ ಒಳ್ಳೆಯದೆಂದು ನನ್ನ ಅಭಿಪ್ರಾಯ" ಎಂದನು. ಭೀಮನಿಗೆ ಮನಸ್ಸು ನಿರುಮ್ಮಳವಾಯಿತು.* * * * ವಿದುರನು ತನ್ನ ಆಪ್ತನಾದ ಗಣಿಕಾರನೊಬ್ಬನನ್ನು ವಾರಣಾವತಕ್ಕೆ ಕಳುಹಿಸಿದ. ಅವನು ಯುಧಿಷ್ಠಿರನಿದ್ದಲ್ಲಿಗೆ ಬಂದು ತನ್ನ ಗುರುತಿಗಾಗಿ ವಿದುರನು ಮ್ಲೇಚ್ಛಭಾಷೆಯಲ್ಲಿ ಹೇಳಿದ್ದ ಮಾತುಗಳನ್ನು ನೆನಪಿಸಿ ಅವನ ನಂಬಿಕೆಯನ್ನು ಸಂಪಾದಿಸಿ, ``ನಿಮ್ಮ ಚಿಕ್ಕಪ್ಪ ನನ್ನನ್ನು ಇಲ್ಲಿಗೆ ಕಳುಹಿಸಿರುವುದು ಈ ಮನೆಯೊಳಗಿನಿಂದ ಗಂಗಾನದಿಯ ದಡದವರೆಗೆ ಒಂದು ಸುರಂಗ ಕೊರೆಯುವುದಕ್ಕಾಗಿ" ಎಂದ. ಯುಧಿಷ್ಠಿರನ ಚಿಂತೆ ದೂರವಾಯಿತು. ``ಒಳ್ಳೆಯದು. ಕೆಲಸವನ್ನು ಈಗಲೇ ಪ್ರಾರಂಭಿಸಿಬಿಡು" ಎನ್ನಲು, ಕೆಲಸ ಪ್ರಾರಭವಾಯಿತು. " ಅದರೆ ಅದು ಅಷ್ಟೇನೂ ಸುಲಭವಾಗಿರಲಿಲ್ಲ. ಪುರೋಚನನು ಪಾಂಡವರು ತಪ್ಪಿಸಿಕೊಂಡು ಹೋಗುವಂತೆ ಕಣ್ಣಿಟ್ಟುಕೊಂಡು ಯೋಗಕ್ಷೇಮವನ್ನು ವಿಚಾರಿಸಿಕೊಳ್ಳುತ್ತಿರುವವನಂತೆ ಯಾವಾಗಲೂ ಮನೆಯೊಳಗೇ ಇರುತ್ತಿದ್ದ. ಪಾಂಡವರಿಗೆ ಇದೆಲ್ಲವೂ ತಿಳಿದಿತ್ತು. ಅವರು ವನವಿಹಾರದ ನೆವದಲ್ಲಿ ಅವನನ್ನೂ ಕರೆದುಕೊಂಡು ಹತ್ತಿರದ ಕಾಡಿನಲ್ಲಿ ಬೇಟೆಗೆಂಬಂತೆ ಸುತ್ತಲಾರಂಭಿಸಿದರು. ಸುತ್ತಲಿನ ಭೂಮಿಯ ಮೇಲ್ಮೈಲಕ್ಷಣವನ್ನು ಅರಿತು ಕೊಂಡರು. ಗಣಿಕಾರನ ಕೆಲಸ ನಿರಾತಂಕವಾಗಿ ಸಾಗಿತು. ಸುರಂಗದ ಬಾಯಿ ಚಿಕ್ಕದಾಗಿದ್ದು, ಮನೆಯೊಳಗೇ ತೆರೆದುಕೊಳ್ಳುವಂತಿತ್ತು. ಅದರ ಬಾಗಿಲು ನೆಲದ ಮಟ್ಟದಲ್ಲಿ ಮುಚ್ಚಿಕೊಳ್ಳುತ್ತಿದ್ದು, ಅದನ್ನು ಉತ್ತಮ ರತ್ನಗಂಬಳಿಯು ಮರೆಮಾಡಿತ್ತು.ಪಾಂಡವರು ವಾರಣಾವತಕ್ಕೆ ಬಂದು ಈಗ ವರ್ಷವಾಗುತ್ತ ಬಂದಿತು. ಪುರೋಚನನಿಗೆ ಪಾಂಡವರು ತನ್ನನ್ನು ನಂಬಿದ್ದಾರೆ, ಕಾಲ ಪಕ್ವವಾಗಿದೆ ಎನ್ನಿಸಿತು. ಬರುವ ಅಮಾವಾಸ್ಯೆಯಂದು ಕಗ್ಗತ್ತಲಿನಲ್ಲಿ ಅರಗಿನ ಮನೆಗೆ ಪುರೋಚನನು ಬೆಂಕಿ ಹಚ್ಚಲಿರುವನೆಂಬ ಸಮಾಚಾರವನ್ನು ಗಣಿಕಾರನು ಕೊಟ್ಟನು. ಯುಧಿಷ್ಠಿರನು, ``ಭೀಮ, ಕೆಲದಿನಗಳಲ್ಲಿಯೇ ಪುರೋಚನನು ಈ ಮನೆಗೆ ಬೆಂಕಿ ಹಚ್ಚಲಿರುವುನು. ನಾವು ತಪ್ಪಿಸಿಕೊಳ್ಳುವ ಕಾಲವು ಸನ್ನಿಹಿತವಾಗಿದೆ. ಪುರೋಚನನು ನಮ್ಮನ್ನು ಕಾಯುತ್ತ ಇಲ್ಲಿಯೇ ಇರುತ್ತಾನೆ. ನಾವೇ ಬೆಂಕಿ ಹಚ್ಚಿ ಸುರಂಗದ ಮೂಲಕ ಹೊರಟು ಹೋಗೋಣ" ಎಂದನು. ಕುಂತಿಯು ಮಾರನೆಯ ದಿನ ಸಾರ್ವಜನಿಕ ಸಂತರ್ಪಣೆಯನ್ನು ಏರ್ಪಡಿಸಿದಳು. ಬೇಡೆತಿಯೊಬ್ಬಳು ಪುರೋಚನನ್ನು ನೊಡಲು ಬರುತ್ತಿದ್ದದಳು ಅಂದೂ ಬಂದಿದ್ದಳು. ಅವಳಿಗೆ ಐವರು ಮಕ್ಕಳು. ಅವಳನ್ನು ಕುಂತಿ ಬಹು ಪ್ರೀತಿಯಿಂದ ಮಾತನಾಡಿಸಲು, ಅವಳಿಗೆ ತಾನು ರಾಣಿಗೆ ಆಪ್ತಳಾದೆನೆಂದು ಸಂಭ್ರಮವುಂಟಾಯಿತು. ಊಟವಾದ ಮೇಲೆ ಇವಳಿಗೆ ಧಾರಾಳವಾಗಿ ಸುರೆಯನ್ನು ಕೊಟ್ಟರು. ಅವಳೂ ಅವಳ ಐವರು ಮಕ್ಕಳೂ ಕುಡಿದು ಮತ್ತರಾಗಿ ಆ ರಾತ್ರಿ ಅಲ್ಲಿಯೇ ಮಲಗಿದರು. ಪುರೋಚನನೂ ಕುಡಿದು ಮತ್ತನಾಗಿ ಮಲಗಿದನು. ಅರ್ಧರಾತ್ರಿ ಕಳೆದ ಮೇಲೆ, ಸ್ವಲ್ಪವೂ ಶಬ್ದಮಾಡದಂತೆ ಪಂಡವರು ತಮ್ಮ ಪಯಣಕ್ಕೆ ತಯಾರಿ ನಡೆಸಿದರು.ಕುಂತಿಯನ್ನು ಮುಂದಿಟ್ಟುಕೊಂಡು ಪಾಂಡವರು ಸುರಂಗವನ್ನು ಹೊಕ್ಕರು. ಭೀಮನು ದೊಂದಿಯನ್ನು ಉರಿಸಿ ಕುಣಿಯುತ್ತ, ಎಣ್ಣೆ ತುಪ್ಪ ಮೊದಲಾದುವುಗಳನ್ನು ಸಂಗ್ರಹಿಸಿಟ್ಟಿದ್ದ ಎಲ್ಲ ಕಡೆಗೂ ಬೆಂಕಿ ಕೊಡುತ್ತ ಬಂದನು ಮಲಗಿದ್ದವರ ಸುತ್ತಲೂ ಏಕಕಾಲದಲ್ಲಿ ಬೆಂಕಿ ತಗುಲುವಂತೆ ನೋಡಿಕೊಂಡನು. ನಂತರ ಸುರಂಗವನ್ನು ಹೊಕ್ಕು ಬಾಗಿಲು ಹಾಕಿಕೊಂಡು ಸುರಂಗದ ಮೂಲಕ ವೇಗದಿಂದ ತಪ್ಪಿಸಿಕೊಂಡು ಹೊರಟನು.ಅರಗಿನ ಮನೆಯು ಛಟಛಟನೆ ಸಿಡಿಯುತ್ತ ಉರಿಯುವ ಶಬ್ದದಿಂದ ಊರಿನವರೆಲ್ಲರೂ ಎಚ್ಚೆತ್ತರು. ಆದರೆ ಮನೆಯ ಸುತ್ತಣ ಕಂದಕದಿಂದಾಗಿ ಯಾರೂ ಹತ್ತಿರ ಬಂದು ಬೆಂಕಿಯನ್ನು ಆರಿಸಲು ಸಾಧ್ಯವಾಗದೆ, ನಿಸ್ಸಹಾಯಕರಾಗಿ ನೋಡುತ್ತ ನಿಲ್ಲಬೇಕಾಯಿತು. ಪಾಂಡವರು ಧೃತರಾಷ್ಟ್ರನ ಕುಟಿಲತಂತ್ರದಿಂದಾಗಿಯೆ ಬೆಂದುಹೋದರೆಂದು ಅವರಿಗೆಲ್ಲ ಅರ್ಥವಾಯಿತು. ಇವರ ಕಗ್ಗೊಲೆಗಾಗಿ ಮರುಗುತ್ತ, ರಾಜಕುಟುಂಬದವರನ್ನು ಬೈಯುತ್ತ ರಾತ್ರಿಯನ್ನು ಕಳೆದರು.ಇಷ್ಟರಲ್ಲಿ ಪಾಂಡವರು ಆದಷ್ಟು ಬೇಗ ಸುರಂಗದಿಂದ ಹೊರಬರಲು ಪ್ರಯತ್ನಿಸುತ್ತಿದ್ದರು. ಸುರಂಗ ಯಾವ ಕ್ಷಣದಲ್ಲಿಯಾದರೂ ಮುಚ್ಚಿಕೊಂಡುಬಿಡಬಹುದಾಗಿತ್ತು. ಅದಕ್ಕಾಗಿ ಭೀಮನು ಕುಂತಿಯನ್ನು ಬೆನ್ನ ಮೇಲೂ, ಯಮಳರನ್ನು ಸೊಂಟದ ಮೇಲೂ, ಉಳಿದಿಬ್ಬರನ್ನು ಭುಜಗಳ ಮೇಲೂ ಹೊತ್ತು ವೇಗವಾಗಿ ಧಾವಿಸಿ ಸುರಂಗದಿಂದ ಹೊರಬಂದು ಗಂಗಾತಟಕ್ಕೆ ಸೇರಿದನು. ದೂರದಿಂದ ಉರಿಯುವ ಅರಗಿನ ಮನೆಯ ಕೆಂಪು ಬೆಳಕು ಕಾಣುತ್ತಿತ್ತು. ಶಾಂತವಾಗಿ ಹರಿಯುತ್ತಿದ್ದ ಗಂಗೆಯು ಅವರೆಲ್ಲರ ಮನಸ್ಸಿಗೆ ಮುದ ನೀಡಿದಳು. ಅಷ್ಟರಲ್ಲಿ ವಿದುರನು ಕಳುಹಿಸಿದ್ದ ಅಂಬಿಗನೊಬ್ಬನು ಅವರನ್ನು ನದಿ ದಾಟಿಸಿ ದಕ್ಷಿಣಕ್ಕೆ ಹೋಗಬೇಕೆಂದು ತಿಳಿಸಿದನು. ಕೆಲಕಾಲ ವೇಷ ಮರೆಸಿಕೊಂಡು ನಿಮ್ಮ ಸುಳಿವೂ ಸಿಕ್ಕದಂತೆ ಎಚ್ಚರಿಕೆಯಿಂದಿರಿ ಎಂದನು. ಕಾಳರಾತ್ರಿಯು ಭೀಕರವಾಗಿತ್ತು. ಆದರೂ ಅವರು ನಕ್ಷತ್ರಗಳ ಬೆಳಕಿನಲ್ಲಿಯೆ ವಾರಣಾವತದಿಂದ ಸಾಧ್ಯವಾದಷ್ಟು ದೂರ ಸಾಗಬೇಕಿತ್ತು. ಆದ್ದರಿಂದ ವೇಗವಾಗಿ ನಡೆದರು.* * * * ಘೋರರಾತ್ರಿಯು ಕಳೆದು ಬೆಳಗಾಯಿತು. ಅರಗಿನ ಮನೆ ಸಂಪೂರ್ಣವಾಗಿ ಸುಟ್ಟು ಭಸ್ಮವಾಗಿತ್ತು. ಈಗ ಕಂದಕವನ್ನು ದಾಟಿ ಬಂದ ಪುರಜನರು ಸುಟ್ಟು ಕರಕಲಾಗಿದ್ದ ದೇಹಗಳನ್ನು ನೋಡಿ ಮರುಗಿದರು. ಪಂಚಪಾಂಡವರು, ಕುಂತಿ ಹಾಗೂ ಪುರೋಚನನು ಎಂದೇ ಗುರುತಿಸಿದರು. ಪಾಪಿ ಪುರೋಚನನಿಗಾದರೂ ತಕ್ಕ ಶಾಸ್ತಿಯಾಯಿತಲ್ಲ ಎಂದು ನಿಟ್ಟುಸಿರಿಟ್ಟರು. ಪಾಂಡವರಿಗಾದ ದುರ್ಗತಿ ಅವರ ಕೋಪವನ್ನು ಕೆರಳಿಸಿತು. ಗಣಿಕಾರನು ಯಾರಿಗೂ ತಿಳಿಯದಂತೆ ಜನಪ್ರವಾಹದ ನಡುವೆ ನುಗ್ಗಿ ಸುರಂಗದ ಬಾಯಿ ಮುಚ್ಚಿರುವುದನ್ನು ಖಚಿತಪಡಿಸಿಕೊಂಡು ವಿದುರನಿಗೆ ಪಾಂಡವರು ತಪ್ಪಿಸಿಕೊಂಡಿರುವ ಸುದ್ದಿ ಕೊಟ್ಟನು. ಕ್ಷೇಮವಾಗಿ ದಕ್ಷಿಣಕ್ಕೆ ಪಯಣಿಸುತ್ತಿರುವುದನ್ನು ತಿಳಿದು ವಿದುರನಿಗೆ ಸಂತೋಷವಾಯಿತು.ಪಾಂಡವರು ಕಗ್ಗೊಲೆಗೀಡಾದ ಸುದ್ದಿ ತಿಳಿದ ಹಸ್ತಿನಾಪುರವು ದು:ಖದ ಕಡಲಿನಲ್ಲಿ ಮುಳಗಿತು. ಧೃತರಾಷ್ಟ್ರನಿಗೆ ಹೃದಯದಲ್ಲಿ ಅತ್ಯಂತ ಸಂತೋಷವಾಗಿದ್ದರೂ ಹೊರಗೆ ದು:ಖಿತನೆಂಬಂತೆ ನಟಿಸಬೇಕಾಗಿದ್ದಿತು. ಮಳೆ ಸುರಿಸದೆ ಬರಿದೇ ಗರ್ಜಿಸುವ ಹಿಂಗಾರಿನ ಮೋಡದಂತೆ ತನ್ನ ಕೃತಕ ದು:ಖವನ್ನು ಹೊರಗೆ ಹಾಕತೊಡಗಿದನು. ಗತಿಸಿದ ಎಲ್ಲರಿಗೂ ಗಂಗಾತಟದಲ್ಲಿ ಕರ್ಮಾಂತರಗಳನ್ನು ನಡೆಸುವುದಕ್ಕೆ ಏರ್ಪಾಡು ಮಾಡಿದನು. ಪದ್ಧತಿಯಂತೆ ದಾನಧರ್ಮಗಳು ನಡೆದವು. ಅಣ್ಣನ ಹೃದಯವನ್ನು ತಿಳಿದಿದ್ದರೂ, ವಿದುರನೂ ಜೊತೆಗಿದ್ದು ದು:ಖಿಸಿದನು. ಸತ್ಯವಾಗಿಯೂ ವಿದೀರ್ಣ ಹೃದಯನಾಗಿದ್ದ ಭೀಷ್ಮನ ದು:ಖವನ್ನು ನೋಡಿ ತಡೆಯದಾದ ವಿದುರನು ಇತರರಿಗೆ ತಿಳಿಯದಂತೆ ನಡೆದುದೆಲ್ಲವನ್ನೂ ಅವನಿಗೆ ಗುಟ್ಟಾಗಿ ಅರುಹಿದನು. ವಿದುರನು ದೂರದೃಷ್ಟಿಯನ್ನೂ ಜಾಣ್ಮೆಯನ್ನೂ ಭೀಷ್ಮನು ಕೊಂಡಾಡಿದನು. ಇವರ ನಡುವೆ ನಡೆದ ಸಂಭಾಷಣೆಯು ಯಾರಿಗೂ ತಿಳಿಯಲಿಲ್ಲ ಎಲ್ಲರೂ ಅರಮನೆಗೆ ಹಿಂತಿರುಗಿದರು.* * * * ಗಂಗಾನದಿಯನ್ನು ದಾಟಿದ ಪಾಂಡವರು ಎಂಭತ್ತು ಯೋಜನ ದೂರವನ್ನು ನಡೆದು ಸಿದ್ಧವಾತವೆಂಬ ಅರಣ್ಯವನ್ನು ಪ್ರವೇಶಿಸಿ ಶಾಲಿಹೋತ್ರವೆಂಬ ಸರೋವರದ ಬಳಿಗೆ ಬಂದರು ಅತ್ಯಂತ ಆಯಾಸದಿಂದಲೂ ಬಾಯಾರಿಕೆಯಿಂದಲೂ ಬಳಲುತ್ತಿದ್ದ ಅವರು ಆಲದ ಮರವೊಂದರ ಕೆಳಗೆ ವಿಶ್ರಮಿಸಲು, ಭೀಮನು ಅವರಿಗಾಗಿ ನೀರನ್ನು ಹುಡುಕಿ ತರುವಷ್ಟರಲ್ಲಿ ಅವರೆಲ್ಲರೂ ನಿದ್ರಾವಶರಾಗಿದ್ದರು. ವಸುದೇವನ ತಂಗಿಯಾದ ಕುಂತಿಗೂ ರಾಜಕುಮಾರರಾದ ತಮಗೂ ಎಂಥ ದುರ್ಗತಿ ಬಂದಿತು ಎಂದು ಚಿಂತಿಸುತ್ತ, ಅವರು ಎಚ್ಚರಗೊಳ್ಳುವುದನ್ನೇ ಕಾಯುತ್ತ ಭೀಮನು ಮರದ ಬುಡದಲ್ಲಿನ ಬೇರೊಂದರ ಮೇಲೆ ಕುಳಿತನು.ಆ ಪ್ರದೇಶವು ಹಿಡಿಂಬನೆಂಬ ನರಭಕ್ಷಕನಾದ ರಾಕ್ಷಸನ ಆವಾಸಸ್ಥಾನವಾಗಿದ್ದಿತು. ಮರದ ಮೇಲಿದ್ದ ಅವನಿಗೆ ಮನುಷ್ಯರ ವಾಸನೆ ಬಂದಿತು. ತಂಗಿ ಹಿಡಿಂಬೆಯನ್ನು ಕರೆದು, ``ಇಲ್ಲಿ ಮನುಷ್ಯರು ಬಂದು ವಿಶ್ರಮಿಸಿಕೊಳ್ಳುತ್ತಿರುವರೆಂದು ತೋರುತ್ತಿದೆ. ಬಹುದಿನಗಳಿಂದ ನಮಗೆ ದೊರೆಯದ ಮನುಷ್ಯಮಾಂಸವನ್ನು ನೆನೆದು ನನ್ನ ಬಾಯಿ ನೀರೂರುತ್ತಿದೆ. ನಾನಿಲ್ಲಿ ಕಾದುಕೊಂಡಿರುತ್ತೇನೆ. ನೀನು ಹೋಗಿ ಅವರನ್ನು ಕೊಲ್ಲು. ಹಬ್ಬವನ್ನಾಚರಿಸೋಣ" ಎಂದು ಹೇಳಲು, ಅಗಲೆಂದು ಒಪ್ಪಿ ಹಿಡಿಂಬೆಯು ಪಾಂಡವರು ವಿಶ್ರಮಿಸುತ್ತಿದ್ದ ಸ್ಥಳಕ್ಕೆ ಬಂದಳು.ನಿದ್ರಿಸುತ್ತಿದ್ದ ಪಾಂಡವರು ಮತ್ತು ಕುಂತಿಯು ರೂಪವನ್ನು ನೋಡಿ ಅವಳಿಗೆ ಅಚ್ಚರಿ ಎನಿಸಿತು. ಭೀಮನನ್ನು ನೋಡಿದ ಮೇಲಂತೂ ಅವಳಿಗೆ ತಾನು ಬಂದ ಉದ್ದೇಶವು ಮರೆತೇ ಹೋಯಿತು. ಮಾಟವಾಗಿ ಕಡೆದ ವಿಗ್ರಹದಂತಿದ್ದ ಅವನ ವಿಶಾಲವಾದ ವಕ್ಷಸ್ಥಳವನ್ನೂ ವೃಕೋದರನೆಂಬ ಹೆಸರಿಗೆ ಸಾರ್ಥಕವಾದ ಅವನ ಹೊಟ್ಟೆಯನ್ನೂ ಮತ್ತೆ ಮತ್ತೆ ನೋಡುವಳು. ಇವನು ತನಗೆ ದೊರೆಯದಿದ್ದರೆ ತನ್ನ ಬಾಳು ವ್ಯರ್ಥ ಎಂದು ಅವಳಿಗೆ ಅನ್ನಿಸಿತು. ಮಾನವಸ್ತ್ರೀ ರೂಪವನ್ನು ಧರಿಸಿ ಮೆಲ್ಲನೆ ಅವನೆದುರಿಗೆ ಬಂದು ನಿಂತಳು. ಕಾಲಮೇಘದಂತಿದ್ದರೂ ಶ್ವೇತವಸ್ತ್ರ ಧಾರಿಣಿಯಾಗಿ ಅವಳು ಯಾರನ್ನೂ ಮರುಳುಗೊಳಿಸುವಷ್ಟು ಸುಂದರಿಯಾಗಿದ್ದಳು. ಅಚ್ಚರಿಗೊಂಡ ಭೀಮನು ಅವಳನ್ನು ``ನೀನು ಯಾರು ಸುಂದರಿ? ಈ ಘೋರಾರಣ್ಯದಲ್ಲಿ ನೀನೊಬ್ಬಳೇ ಹೇಗೆ ಬಂದೆ? ಎಂದು ಪ್ರಶ್ನಿಸಿದನು. ಅವಳು ಅವನೆಡೆಗೆ ಮೋಹಗೊಳಿಸುವ ಕುಡಿನೋಟವನ್ನೆಸೆದು, ಮುದ್ದು ಮುದ್ದಾಗಿ ``ನೀನು ಯಾರು ಸುಂದರಾಂಗ? ಇಲ್ಲಿ ನಿದ್ರಿಸುತ್ತಿರುವ ಇವರು ಯಾರು? ಇದು ನರಮಾಂಸಭಕ್ಷಕನಾದ ಹಿಡಿಂಬನಿಗೆ ಸೇರಿದ ಅರಣ್ಯವೆಂದು ತಿಳಿಯದೆ?" ನಾನು ಅವನ ತಂಗಿ ಹಿಡಿಂಬೆ. ದೂರದಿಂದ ನಿಮ್ಮನ್ನು ನೋಡಿದ ಅವನು, ನಿಮ್ಮನ್ನೆಲ್ಲ ಕೊಂದು ತರುವುದಕ್ಕಾಗಿ ನನ್ನನ್ನಿಲ್ಲಿಗೆ ಕಳುಹಿಸಿರುವನು. ಆದರೆ ನಿನ್ನ ರೂಪವನ್ನು ನೋಡಿ ನಾನು ಮೋಹಗೊಂಡಿದ್ದೇನೆ. ನನ್ನನ್ನು ಪರಿಗ್ರಹಿಸು. ನಿನಗೆ ಬೇಕಾದ ಸುಖವೆಲ್ಲವನ್ನೂ ನಾನು ಕೊಡುವೆನು" ಎಂದಳು.ಭೀಮನು ``ನನಗೆ ದೇವರ ಸಮಾನನಾದ ಇವನು ನನ್ನ ಅಣ್ಣ. ಇವಳು ನನ್ನ ತಾಯಿ. ಇವರುಗಳು ನನ್ನ ತಮ್ಮಂದಿರು. ಇವರೆಲ್ಲರೂ ನನ್ನ ರಕ್ಷಣೆಯಲ್ಲಿರುವರು. ಇವರನ್ನು ಬಿಟ್ಟು ನಿನ್ನನ್ನು ನಾನು ಮದುವೆಯಾಗುವುದು ಅಸಾಧ್ಯ. ಅದು ಧರ್ಮವೂ ಅಲ್ಲ!" ಎಂದನು. ಹಿಡಿಂಬೆಯು ಕಣ್ಣೀರಿಡುತ್ತ, ``ನಿನಗೆ ಅಸಂತೋಷ ಉಂಟುಮಾಡಿದ್ದರೆ ದಯವಿಟ್ಟು ನನ್ನನ್ನು ಕ್ಷಮಿಸು. ನಿಮ್ಮೆಲ್ಲರನ್ನೂ ನಾನು ದೂರ ಕರೆದೊಯ್ದು ನನ್ನಣ್ಣನಿಂದಾಗಿ ಇಲ್ಲಿ ನಿಮಗೆ ಒದಗಬಹುದಾದ ಅಪಾಯದಿಂದ ಪಾರುಮಾಡುತ್ತೇನೆ. ಮಲಗಿರುವ ನಿನ್ನ ತಾಯಿತಮ್ಮಂದಿರನ್ನು ಎಬ್ಬಿಸು. ಇಲ್ಲಿಂದ ನಾವು ಆದಷ್ಟು ಬೇಗ ಹೊರಟುಹೋಗಬೇಕು. ನನ್ನಣ್ಣ ಇಲ್ಲಿಗೆ ಯಾವ ಕ್ಷಣದಲ್ಲಿಯಾದರೂ ಬರಬಹುದು" ಎನ್ನಲು, ಭೀಮನು ``ಶಾಂತವಾಗಿ ನಿದ್ರಿಸುತ್ತಿರುವ ಅವರನ್ನು ನಾನು ಖಂಡಿತ ಎಬ್ಬಿಸಲಾರೆ. ನಿನ್ನಣ್ಣ ಬರಲಿ. ನಾನೇನೂ ಹೇಡಿಯಲ್ಲ. ಅವನನ್ನು ನಾನು ನೋಡಿಕೊಳ್ಳುತ್ತೇನೆ" ಎಂದನು. ಅಷ್ಟರಲ್ಲಿ ಯಾರೋ ಬರುವ ಸದ್ದು ಕೇಳಿಸಿತು. ತಂಗಿ ಬರಲು ತಡವಾದುದೇಕೆಂದು ನೋಡಲು ಹಿಡಿಂಬನು ತಾನೇ ಬರುತ್ತಿದ್ದನು. ಹಿಡಿಂಬೆಗೆ ಭಯವಾಯಿತು. ``ಪ್ರಿಯ, ಈಗಲೂ ನೀನೊಪ್ಪಿದರೆ ನಿಮ್ಮನ್ನೆಲ್ಲ ದೂರ ಕರೆದೊಯ್ಯುತ್ತೇನೆ. ಬಾ, ನನ್ನ ಮಾತನ್ನು ಕೇಳು" ಎಂದಳು. ಭೀಮನು ನಕ್ಕು, ``ಭಯಪಡಬೇಡ. ನಿನ್ನಣ್ಣನನ್ನು ನಾನು ಸುಲಭವಾಗಿ ಸೋಲಿಸುತ್ತೇನೆ. ಈ ಅರಣ್ಯದಲ್ಲಿ ಅವನ ಉಪಟಳವನ್ನು ತಪ್ಪಿಸುವುದಕ್ಕೆ ನನಗೆ ಸಂತೋಷವೇ. ನನ್ನ ತೋಳನ್ನು ನೋಡಿದೆಯಾ ಹೇಗಿದೆ! ಇದಕ್ಕೆ ಸಿಕ್ಕಿದ ನಿನ್ನಣ್ಣನ ಪ್ರಾಣ ಉಳಿಯಲಾರದು. ಓಡಿಹೋಗುವ ಮಾತಾಡಿ ನನ್ನನ್ನು ಅವಮಾನಿಸಬೇಡ" ಎಂದನು.ಅಷ್ಟರಲ್ಲಿ ಅಲ್ಲಿಗೆ ಬಂದಿದ್ದ ಹಿಡಿಂಬನು ಕೋಪದಿಂದ ಕಣ್ಣು ಕೆಂಪಗೆ ಮಾಡಿಕೊಂಡು, ``ಓಹೋ, ಹೀಗೋ ನೀನು ಅಣ್ಣನಿಗೆ ಆಹಾರವನ್ನು ತಂದುಕೊಡುವುದು! ಮೊದಲು ಇವನನ್ನು ಕೊಂದು ಅನಂತರ ನಿನ್ನನ್ನು ನೋಡಿಕೊಳ್ಳುತ್ತೇನೆ. ಯಮಲೋಕದಲ್ಲಿ ನೀನು ಅವನನ್ನು ಕೂಡಿ ಕೊಳ್ಳುವೆಯಂತೆ!" ಎಂದು ಗರ್ಜಿಸುತ್ತ ಭೀಮನು ಕುಳಿತಿದ್ದೆಡೆಗೆ ಬಂದನು. ಭಿಮನು ನಗುತ್ತ, ``ಗಲಾಟೆ ಮಾಡಬೇಡ. ಆಯಾಸಗೊಂಡಿರುವ ನನ್ನ ತಾಯಿ ಹಾಗೂ ತಮ್ಮಂದಿರು ನಿದ್ರಿಸುತ್ತಿದ್ದಾರೆ. ಅವರನ್ನು ಎಬ್ಬಿಸಬೇಡ. ನಿನ್ನ ಮಾತಿನಂತೆ ಇಲ್ಲಿಗೆ ಬಂದ ನಿನ್ನ ತಂಗಿ ನನ್ನನ್ನು ನೋಡಿ ಮೋಹ ಗೊಂಡಿರುವಳು. ಅವಳು ತನ್ನ ಪ್ರೇಮಿಯನ್ನು ಕೊಲ್ಲಲಾರಳು. ನಾನಿರುವಾಗ ಅವಳನ್ನು ನೀನು ಹೇಗೆ ಶಿಕ್ಷಿಸುವೆ ಎಂಬುದನ್ನು ನಾನು ನೋಡುತ್ತೇನೆ. ಅರಣ್ಯವಾಸಿಗಳನ್ನು ಹೆದರಿಸುತ್ತಿರುವ ನಿನ್ನನ್ನೇ ನಾನೀಗ ಕೊಲ್ಲಬಾರದೇಕೆ?" ಎಂದು ಮೇಲೆದ್ದನು.ಇಬ್ಬರೂ ಮದಿಸಿದ ಆನೆಗಳಂತೆ ಕಾದಾಡಲಾರಂಭಿಸಿದರು. ಹಿಡಿಂಬೆಯು ಅಚ್ಚರಿಯಿಂದ ನೋಡುತ್ತ ನಿಂತಳು. ಈ ಗಲಾಟೆಯಲ್ಲಿ ಕುಂತಿಗೂ ಇತರ ಪಾಂಡವರಿಗೂ ಎಚ್ಚರವಾಯಿತು. ನೋಡುತ್ತಾರೆ, ಭೀಮನು ರಾಕ್ಷಸನೊಬ್ಬನೊಂದಿಗೆ ಹೋರುತ್ತಿದ್ದಾನೆ, ಪಕ್ಕದಲ್ಲಿ ಭೀಮನನ್ನು ಆಸೆಯ ಕಣ್ಣುಗಳಿಂದ ನೋಡುತ್ತ ಕುಳಿತ ಸುಂದರಿಯೊಬ್ಬಳಿದ್ದಾಳೆ. ಕುಂತಿಯು ಅವಳನ್ನು ``ಏನಮ್ಮ, ನೀನೇನು ವನದೇವತೆಯೋ, ಅಪ್ಸರೆಯೋ, ಯಾರು ನೀನು? ಇಲ್ಲೇನು ಮಾಡುತ್ತಿರುವೆ? ಏನಿದು ಈ ಹೋರಾಟ? ಹೇಳಮ್ಮ" ಎಂದು ಕೇಳಲು ಅವಳು, `` ಈ ದಟ್ಟ ಅರಣ್ಯದಲ್ಲಿಯೇ ನಾನು, ನಮ್ಮಣ್ಣ ವಾಸವಾಗಿರುವುದು. ನಿನ್ನ ಮಗನ ಜೊತೆಗೆ ಹೋರುತ್ತಿರುವವನು ನನ್ನ ಅಣ್ಣ" ಎಂದು ತನ್ನ ಪ್ರೇಮವನ್ನೂ ಸಹ ನಿವೇದಿಸಿದಳು. ಅಷ್ಟರಲ್ಲಿ ಭೀಮನು ಹಿಡಿಂಬನ ಶರೀರವನ್ನು ಎತ್ತಿ ಕುಕ್ಕಿ ಅವನ ಜೀವವನ್ನು ತೆಗೆದನು. ಅವನ ಶರೀರವೊಂದು ಮಾಂಸದ ಮುದ್ದೆಯಾಯಿತು. ಯುಧಿಷ್ಠಿರನು ಭೀಮನನ್ನು ಅಭಿನಂದಿಸಿದನು. ಸ್ವಲ್ಪಹೊತ್ತು ವಿಶ್ರಮಿಸಿಕೊಂಡು ನಂತರ ಅವರು ತಮ್ಮ ಪಯಣವನ್ನು ಮುಂದುವರಿಸಿದರು.ಹಿಡಿಂಬೆಯೂ ಅವರ ಜೊತೆಗೆ ಬರುತ್ತ ಕುಂತಿಯನ್ನು ಕುರಿತು ``ನಾನೇನು ಮಾಡಲಿ ಅಮ್ಮ?" ಎಂದು ಕೇಳಿದಳು. ಅವಳ ದನಿಯನ್ನು ಕೇಳಿದ ಯುಧಿಷ್ಠಿರನು ತಿರುಗಿ ನೋಡಿದನು. ``ಅಮ್ಮ, ನೀವುಗಳು ಈ ನನ್ನ ಇನಿಯನ ಅಣ್ಣ ಮತ್ತು ಅಮ್ಮ. ನಾನು ಅವನನ್ನು ಮನಸಾರೆ ಪ್ರೀತಿಸಿರುವೆ. ದಯವಿಟ್ಟು ಅವನು ನನ್ನನ್ನು ಸ್ವೀಕರಿಸುವಂತೆ ಮಾಡಿ. ಅವನು ನಿರಾಕರಿಸಿದರೆ ನಾನು ಖಂಡಿತ ಬದುಕಿರಲಾರೆ" ಎಂದು ಬೇಡಿಕೊಂಡಳು. ಕುಂತಿಯನ್ನು ನೋಡಿ, ``ಅಮ್ಮ, ನೀವೂ ಹೆಂಗಸು. ನನ್ನ ನೋವು ನಿಮಗೆ ಅರಿವಾಗದಿರುತ್ತದೆಯೆ? ನೀವು ನನಗೆ ಬದುಕನ್ನು ಕೊಡಬೇಕು, ಸುಖವನ್ನು ಕರುಣಿಸಬೇಕು. ಅವನೇ ನನ್ನ ಆಯ್ಕೆಯ ಪತಿ. ನಿಮ್ಮನ್ನು ನಾನು ಅರಣ್ಯದ ಕಷ್ಟಗಳಿಂದ ಪಾರು ಮಾಡುತ್ತೇನೆ. ಆಯಾಸದಿಂದ ನಡೆಯಲಾಗದಿದ್ದಾಗ ನಿಮ್ಮೆಲ್ಲರನ್ನೂ ನಾನು ಹೊತ್ತೊಯ್ಯುತ್ತೇನೆ. ದಯವಿಟ್ಟು ನನಗೆ ನಿಮ್ಮ ಮಗನನ್ನು ಅನುಗ್ರಹಿಸಿರಿ" ಎಂದಳು. ಕುಂತಿಯ ಮನಸ್ಸಿಗೆ ಅವಳ ಪ್ರೇಮವು ಅರಿವಾಯಿತು. ಅವಳೆಂದಳು, ``ಯುಧಿಷ್ಟಿರ, ಈ ಹುಡುಗಿ ಭೀಮನನ್ನು ಪ್ರೀತಿಸಿದ್ದಾಳೆ. ಅವಳ ಅಪೇಕ್ಷೆಯನ್ನು ಸಲ್ಲಿಸೋಣ. ಭೀಮನೂ ಇದಕ್ಕೆ ವಿರೋಧವಾಗಿಲ್ಲವೆಂದು ತೋರುತ್ತದೆ. " ಭೀಮನು ಲಜ್ಜೆಯಿಂದ ತಲೆತಗ್ಗಿಸಿದನು. ಉಳಿದವರಿಗೆ ಇದು ತಮಾಷೆಯಾಯಿತು. ಭೀಮನ ಈ ಮುಖವನ್ನು ಅವರಾರೂ ಈವರೆಗೆ ನೋಡಿರಲಿಲ್ಲ. ಯುಧಿಷ್ಠಿರನು ಕುಚೇಷ್ಟೆಯಿಂದ ``ಭೀಮ, ನಿನ್ನ ಮನಸ್ಸನ್ನು ಕಾಡುತ್ತಿರುವುದು ಏನೆಂದು ನನಗೆ ಅರ್ಥವಾಗುತ್ತಿದೆ. ಅಣ್ಣನಿಗಿಂತ ಮೊದಲೇ ಹೇಗೆ ಮದುವೆಯಾಗುವುದು ಎಂದಲ್ಲವೆ? ಚಿಂತಿಸಬೇಡ. ಕಣ್ಣು ಕಣ್ಣು ಕೂಡಿದಾಗಲೇ ಮದುವೆ ಆಗಿಹೋಯಿತೆಂದು ತಿಳಿ. ಹಿಡಿಂಬೆಯನ್ನು ಸ್ವೀಕರಿಸಿ ನೀನು ಸುಖವಾಗಿರಬೇಕೆಂಬುದೇ ನನ್ನ ಇಷ್ಟ" ಎಂದನು. ಪ್ರೇಮಿಗಳಿಬ್ಬರೂ ಪರಸ್ಪರ ನೋಡಿ ನಕ್ಕರು.ಭೀಮನು ಹಿಡಿಂಬೆಯೊಡನೆ ಸಂಸಾರ ಹೂಡಿದನು. ಶಾಲಿವಾಹನ ಸರೋವರದ ತಟದಲ್ಲಿ ಹಿಡಿಂಬೆ ಕಟ್ಟಿಕೊಟ್ಟ ಸುಂದರ ಪರ್ಣಕುಟಿಯಲ್ಲಿ ಅವರ ವಾಸ. ಅವಳು ಹಗಲೆಲ್ಲ ಭೀಮನೊಡನೆ ವಿಹರಿಸಿ ಸಂಜೆಯಾಗುತ್ತಲೂ ಅವನನ್ನು ಕುಟಿಗೆ ಕರೆತಂದುಬಿಟ್ಟು ತಾನು ಹೊರಟು ಹೋಗುತ್ತಿದ್ದಳು. ಅವಳೊಂದಿಗೆ ಭೀಮನು ಅನೇಕಾನೇಕ ಸುಂದರ ಪರ್ವತಗಳಲ್ಲಿ, ನದಿಗಳಲ್ಲಿ, ಕಣಿವೆಗಳಲ್ಲಿ ವಿಹರಿಸಿ ತಣಿದನು. ಆ ದಿನಗಳಲ್ಲೇ ಒಮ್ಮೆ ವ್ಯಾಸನು ಭೇಟಿಕೊಟ್ಟು ``ಕುಂತಿ, ಈ ನಿನ್ನ ಸೊಸೆ ಕಮಲಮಾಲಿನಿಯೆಂದು ಪ್ರಸಿದ್ಧಳಾಗುವಳು. ಅವಳಿಗೆ ಲೋಕೋತ್ತರ ಶೌರ್ಯವುಳ್ಳ ಒಬ್ಬ ಮಗನು ಹುಟ್ಟುವನು. ಅನಂತರ ನೀವೆಲ್ಲರೂ ಏಕಚಕ್ರನಗರಕ್ಕೆ ಹೋಗಿರಿ. ಅಲ್ಲಿ ನಾನು ಬಂದು ನಿಮ್ಮನ್ನು ಮತ್ತೊಮ್ಮೆ ಕಾಣುವೆನು" ಎಂದನು. ಹೀಗೆ ಏಳು ತಿಂಗಳು ಕಳೆಯಲು ಭೀಮನಿಗೆ ಘಟೋತ್ಕಚನೆಂಬ ಮಗ ಹುಟ್ಟಿದನು. ಯುಧಿಷ್ಠಿರನಿಗಂತೂ ಮಗುವಿನೊಂದಿಗೆ ಆಟವಾಡಿದಷ್ಟೂ ಸಾಲದು. ಕೊನೆಗೂ ಅವರು ಹಿಡಿಂಬೆಯಿಂದ ಬೇರ್ಪಡಬೇಕಾದ ಕಾಲವು ಬಂದೇ ಬಂದಿತು. ಮಗುವನ್ನು ಅವಳಿಗೊಪ್ಪಿಸಿದ ಭೀಮನು, ``ನನ್ನ ಪ್ರತಿರೂಪವಾದ ಇವನನ್ನು ಕಾಪಾಡಿಕೋ; ದು:ಖಿಸಬೇಡ. ನಾನು ಅಪೇಕ್ಷಿಸಿದಾಗ ನಿನ್ನನ್ನು ನೆನೆಯುವೆನು. ನೀನು ಆಗ ಮನೋವೇಗದಿಂದ ಬರಬೇಕು. ಈಗ ನಾವು ಹೋಗುವೆವು" ಎಂದು ಅವಳನ್ನು ಬೀಳ್ಕೊಟ್ಟನು. ಹಿಡಿಂಬೆಯು ಭೀಮನನ್ನು ಅಗಲಲಾರದೆ ಅಗಲಿ ಕಣ್ಣೀರಿಡುತ್ತ ಹೊರಟುಹೋದಳು.ಕೃಷ್ಣಾಜಿನವನ್ನೂ ಮರದ ತೊಗಟೆಯನ್ನೂ ಧರಿಸಿಕೊಂಡು, ಜಡೆಗಟ್ಟಿದ್ದ ಕೂದಲುಳ್ಳವರಾಗಿ, ಕಾಡಿನಿಂದ ಕಾಡಿಗೆ ದಾಟುತ್ತ, ಭವಿಷ್ಯದಲ್ಲಿ ತಮಗೇನು ಕಾದಿದೆಯೆಂಬುದನ್ನು ಅರಿಯದವರಾಗಿ, ವ್ಯಾಸನ ಆಣತಿಯಂತೆ ಪಾಂಡವರು ಏಕಚಕ್ರನಗರದ ಕಡೆಗೆ ಪ್ರಯಾಣಮಾಡಿದರು.* * * * ಏಕಚಕ್ರನಗರವನ್ನು ಸೇರಿದ ಪಾಂಡವರು ಬ್ರಾಹ್ಮಣನೊಬ್ಬನ ಮನೆಯಲ್ಲಿ ಉಳಿದುಕೊಂಡು ಭಿಕ್ಷಾಟನೆಯಿಂದ ಜೀವಿಸತೊಡಗಿದರು. ತೇಜಸ್ವಿಗಳಾಗಿದ್ದ ಇವರನ್ನು ಕಂಡು ಪುರಜನರಿಗೆ ಅಚ್ಚರಿ. ತಾಯಿಯನ್ನು ಬಿಟ್ಟು ಅವರು ಬಹುಕಾಲವಿರುತ್ತಿರಲಿಲ್ಲ. ಸಿಕ್ಕಿದ ಭಿಕ್ಷೆಯನ್ನು ತಾಯಿಯ ಮುಂದೆ ತಂದಿಡುವರು. ಕಣ್ಣೀರೊರೆಸಿಕೊಳ್ಳುತ್ತ ಅವಳು ಅದರಲ್ಲಿ ಅರ್ಧವನ್ನು ಭೀಮನಿಗೆ ಕೊಟ್ಟುಬಿಡುವಳು; ಉಳಿದುದನ್ನು ತಾವು ಐವರು ಹಂಚಿಕೊಳ್ಳುವರು. ಅಷ್ಟಾದರೂ ಭೀಮನಿಗೆ ಹೊಟ್ಟೆ ತುಂಬುತ್ತಿರಲಿಲ್ಲ. ಭಿಕ್ಷಾಟನೆಯ ಜೀವನವು ಅವರೆಲ್ಲರನ್ನೂ ಹಣ್ಣುಮಾಡಿತು.ಒಂದು ದಿನ ಭೀಮ ಕುಂತಿ ಇಬ್ಬರೇ ಮನೆಯಲ್ಲಿದ್ದರು. ಇದ್ದಕ್ಕಿದ್ದಂತೆ ಅವರಿಗೆ ಆಶ್ರಯವಿತ್ತಿದ್ದ ಬ್ರಾಹ್ಮಣನ ಮನೆಯಲ್ಲಿ ಯಾರೋ ಅಳುತ್ತಿರುವುದು ಕೇಳಿಸಿತು. ಅವರು ಕುಟಂಬಕ್ಕೆ ಏನು ಕಷ್ಟ ಬಂದಿದೆಯೋ ಎಂದು ಮರುಗಿದರು. ಕುಂತಿಯು, ``ನಮಗೆ ಆಶ್ರಯವಿತ್ತವರಿಗೆ ನಾವು ನೆರವಾಗಬೇಕು. ನೀನು ಇಲ್ಲಿಯೇ ಇರು; ನಾನು ಅವರ ಅಪತ್ತು ಏನೆಂಬುದನ್ನು ತಿಳಿದುಕೊಂಡು ಬರುತ್ತೇನೆ" ಎಂದು ಪಕ್ಕದ ಮನೆಗೆ ಹೋದಳು.ಆ ಬ್ರಾಹ್ಮಣನಿಗೆ ಒಬ್ಬ ಮಗಳು, ಒಬ್ಬ ಮಗ. ಮಗ ತುಂಬ ಚಿಕ್ಕವ. ಎಲ್ಲರೂ `ನಾನು ಹೋಗುವೆ, ನಾನು ಹೋಗುವೆ' ಎನ್ನುತ್ತಿದ್ದರು. ಕುಂತಿಗೆ ಅದೇನೆಂದು ಅರ್ಥವಾಗಲಿಲ್ಲ. ಅವಳು ಬ್ರಾಹ್ಮಣನ ಹೆಂಡತಿಯ ಬಳಿಗೆ ಹೋಗಿ, `` ಅಮ್ಮ, ನಿಮಗೆ ಬಂದಿರುವ ಅಪತ್ತು ಏನೆಂದು ತಿಳಿಸಬಹುದೇ? ನಮ್ಮಿಂದ ಆಗುವ ಸಹಾಯವನ್ನು ನಾವು ಮಾಡುತ್ತೇವೆ" ಎಂದಳು. ಆಗ ಆ ಬ್ರಾಹ್ಮಣನು, ``ಅಮ್ಮ ಇನ್ನೊಬ್ಬರ ಕಷ್ಟಕ್ಕೆ ಮರುಗುವ ಹೃದಯವಂತರು ನೀವು. ಆದರೆ ನಮ್ಮ ಕಷ್ಟವನ್ನು ಪರಿಹರಿಸುವುದು ಮನುಷ್ಯಮಾತ್ರದವರಿಗೆ ಸಾಧ್ಯವಾಗದು. ಆದರೂ ಹೇಳುತ್ತೇನೆ. ಕೇಳಿ. ಇಲ್ಲಿ ಹತ್ತಿರದ ಬೆಟ್ಟವೊಂದರ ಗುಹೆಯಲ್ಲಿ ಬಕನೆಂಬ ರಾಕ್ಷಸನಿದ್ದಾನೆ. ಕಳೆದ ಹದಿಮೂರು ವರ್ಷಗಳಿಂದ ಈ ಊರಿನವರಿಗೆ ಅವನ ಕಾಟ ಬಹಳವಾಗಿದೆ. ಹಸಿವಾದಾಗ ಇಳಿದುಬಂದು ಸಿಕ್ಕಿದವರನ್ನು ಕೊಲ್ಲುತ್ತಿದ್ದ. ಊರಿನವರೆಲ್ಲ ಸಭೆ ಸೇರಿ, ವಾರಕ್ಕೊಮ್ಮೆ ಸರದಿ ಪ್ರಕಾರ ಅವನಿಗೆ ಒಂದು ಬಂಡಿ ಮೃಷ್ಟಾನ್ನ ಹಾಗೂ ಅದನ್ನು ಹೊಡೆದುಕೊಂಡು ಹೋಗುವ ಒಬ್ಬ ಮನುಷ್ಯ ಇಷ್ಟನ್ನು ಸಲ್ಲಿಸುವೆವು, ಇದಕ್ಕೆ ಪ್ರತಿಯಾಗಿ ನೀನು ನಮ್ಮನ್ನು ಸಿಕ್ಕಿದ ಹಾಗೆ ಕೊಲ್ಲುವುದನ್ನು ಬಿಟ್ಟು, ಹೊರಗಿನ ಶತ್ರುಗಳಿಂದ ನಮ್ಮನ್ನು ರಕ್ಷಿಸಬೇಕು ಎಂದು ಅವನೊಡನೆ ಒಪ್ಪಂದ ಮಾಡಿಕೊಂಡಿರುವರು. ಪ್ರತಿ ಬಾರಿಯೂ ಒಂದು ಕುಟುಂಬ ಈ ಹೊರೆಯನ್ನು ಹೊತ್ತು ಒಬ್ಬ ವ್ಯಕ್ತಿಯನ್ನು ಬಲಿಕೊಡಬೇಕು. ನಾಳೆ ಅವನ ಬಳಿಗೆ ಹೋಗುವುದು ನನ್ನ ಸರದಿ. ನಾನು ಹೋದರೆ ಕುಟುಂಬಕ್ಕೆ ರಕ್ಷಕರಿಲ್ಲವಾಗುತ್ತದೆ. ಇವಳು ಹೋದರೆ ಮಕ್ಕಳು ಅನಾಥರಾಗುತ್ತಾರೆ. ಆದ್ದರಿಂದ ಎಲ್ಲರೂ ಹೋಗಿಬಿಡುವುದು ಎಂದುಕೊಂಡಿದ್ದೇವೆ!" ಎಂದನು.ಅವರ ದುಃಖವನ್ನು ಕಂಡು ಕುಂತಿಗೂ ದು:ಖವಾಯಿತು. ಅವಳೆಂದಳು: ``ನನಗೆ ಐವರು ಮಕ್ಕಳಿದ್ದಾರೆ; ನಾನು ಅವರಲ್ಲಿ ಒಬ್ಬನನ್ನು ಕಳುಹಿಸುತ್ತೇನೆ. ಆಶ್ರಯವಿತ್ತವರಿಗೆ ಇಷ್ಟಾದರೂ ಮಾಡದಿದ್ದರೆ ಹೇಗೆ?" ಅದಕ್ಕೆ ಆ ಬ್ರಾಹ್ಮಣನು, ``ಅಮ್ಮ, ನೀವು ನನ್ನ ಅತಿಥಿಗಳು. ನನ್ನ ಜೀವ ಉಳಿಸಿಕೊಳ್ಳಲು ಬ್ರಾಹ್ಮಣರಾದ ನಿಮ್ಮನ್ನು ಬಲಿಕೊಡಲೆ? ದಯವಿಟ್ಟು ಇಂತಹ ಮಾತನ್ನಾಡಬೇಡಿ" ಎಂದನು. ಕುಂತಿಯು ನಕ್ಕು, ``ನನ್ನ ಮಗ ಸಾಮಾನ್ಯನಲ್ಲ. ಅವನು ದೇವತೆಗಳ ಪ್ರೀತಿಪಾತ್ರನು, ಮಹಾ ಬಲಶಾಲಿ. ಅವನು ಈ ಬಕನನ್ನು ಕೊಲ್ಲುವುದು ಖಂಡಿತ. ನನ್ನ ಮಾತಿನ ಮೇಲೆ ನಂಬಿಕೆಯಿಟ್ಟು ನೀವು ಬಂಡಿ ಅನ್ನವನ್ನು ಸಿದ್ಧಪಡಿಸಿ. ಆದರೆ ಒಂದು ಮಾತು. ವಿಚಾರವು ಯಾರಿಗೂ ತಿಳಿಯಬಾರದು; ತಿಳಿದರೆ ಅವನ ಬಲ ಹೋಗಿಬಿಡುತ್ತದೆ!" ಎಂದಳು. ತುಂಬ ಒತ್ತಾಯ ಮಾಡಿದ ಮೇಲೆ ಬ್ರಾಹ್ಮಣನು ಇದಕ್ಕೆ ಒಪ್ಪಿಕೊಂಡನು.ಕುಂತಿಯು ಹಿಂದಿರುಗಿ ಭೀಮನಿಗೆ ಎಲ್ಲವನ್ನು ಹೇಳಿದಳು. ಆನಂದದಿಂದ ಕುಣಿಯುವಂತಾಯಿತು. ``ಆಹಾ! ಒಂದು ಬಂಡಿ ತುಂಬ ಮೃಷ್ಟಾನ್ನವೆ! ಅಮ್ಮ, ನೀನು ಅದೆಷ್ಟು ಒಳ್ಳೆಯವಳು! ಈ ಊರಿಗೆ ಕುತ್ತಾಗಿರುವ ಆ ಬಕನನ್ನು ನಾನು ಕೊಲ್ಲುತ್ತೇನೆ. ಅಡುಗೆ ರುಚಿಯಾಗಿರಲಿ ಎಂದು ಆ ಬ್ರಾಹ್ಮಣನಿಗೆ ಹೇಳು. ನನಗೆ ಬಹಳ ಹಸಿವಾಗಿದೆ" ಎಂದನು. ``ಬ್ರಾಹ್ಮಣಿಯ ಅಡುಗೆ ಬಲುರುಚಿ. ಅವಳ ಕೈಯೂ ಧಾರಾಳ. ಚಿಂತಿಸಬೇಡ. ನಡೆ ಅವರಿಗೆ ಸಮಾಧಾನ ಹೇಳಿ ಬರೋಣ" ಎಂದು ಕುಂತಿಯೆನ್ನಲು, ಇಬ್ಬರೂ ಪಕ್ಕದ ಮೆನೆಗೆ ಹೋಗಿ ಅವರಿಗೆ ನಂಬಿಕೆಯಾಗುವಂತೆ ಧೈರ್ಯ ಹೇಳಿ ಬಂದರು. ಅಷ್ಟರಲ್ಲಿ ಹಿಂದಿರುಗಿದ ಯುಧಿಷ್ಠಿರಾದಿಗಳಿಗೆ ಕುಂತಿಯು ನಡೆದುದೆಲ್ಲವನ್ನೂ ಹೇಳಲು, ಅವನು ಅಸಮಾಧಾನದಿಂದ `` ಏನಮ್ಮ, ಹೀಗೆ ಮಾಡಿಬಿಟ್ಟೆ? ಭೀಮನೆ ನಮ್ಮೆಲ್ಲ ಆಶೋತ್ತರಗಳಿಗೆ ಏಕಮಾತ್ರ ಆಧಾರವೆಂದು ನಿನಗೆ ತಿಳಿಯದೆ? ಅಂಥವನನ್ನು ಯಾವುದೋ ರಾಕ್ಷಸನಿಗೆ ಬಲಿ ಕೊಡುವುದೆ? ಕಷ್ಟಗಳು ಹೆಚ್ಚಾಗಿ ನಿನಗೇನು ಬುದ್ಧಿಗೆಟ್ಟುಹೋಯಿತೆ?" ಎಂದನು ಕುಂತಿಯು ``ಎಲ್ಲವನ್ನೂ ಯೋಚಿಸಿಯೇ ಮಾಡಿದೆನಪ್ಪ! ನನ್ನ ಮಗನ ಬಲ ನನಗೆ ಗೊತ್ತಿಲ್ಲವೆ? ಅವನು ನಮ್ಮೆಲ್ಲರನ್ನೂ ಸುರಂಗಮಾರ್ಗದಿಂದ ಕ್ಷೇಮವಾಗಿ ಸಾಗಿಸಿಕೊಂಡು ಬರಲಿಲ್ಲವೆ? ಅವನು ಹಿಡಿಂಬನನ್ನು ಮುಗಿಸಿದ್ದನ್ನು ಇಷ್ಟು ಬೇಗ ಮರೆತೆಯ? ಅವನು ನಾಗಲೋಕಕ್ಕೆ ಹೋಗಿ ಅಮೃತಪಾನ ಮಾಡಿ ಬಂದವನು! ಮೇಲಾಗಿ ನಮ್ಮ ಆಶ್ರಯದಾತರ ಕಷ್ಟದಲ್ಲಿ ನಾವು ನೆರವಾಗಬೇಡವೆ? ಅವನು ಈ ಬಕಾಸುರನನ್ನು ಕೊಲ್ಲುವುದು ಖಂಡಿತ" ಎಂದಳು. ಯುಧಿಷ್ಠಿರನಿಗೆ ಸಮಾಧಾನವಾಯಿತು.ಮಾರನೆಯ ಬೆಳಗ್ಗೆ ಬ್ರಾಹ್ಮಣನ ಹೆಂಡತಿ ಅಡುಗೆಯನ್ನು ಮುಗಿಸಲು, ಭೀಮನು ಅನ್ನಾದಿಷಡ್ರಸೋಪೇತಅಡುಗೆಗಳನ್ನು ತುಂಬಿದ ಗಾಡಿಯನ್ನು ಹೊಡೆದುಕೊಂಡು ರಾಕ್ಷಸನಿದ್ದ ಗವಿಯ ಬಳಿಗೆ ಹೋದನು. ರಾಕ್ಷಸನನ್ನು ಕೂಗಿ ಕರೆಯುವುದಕ್ಕಿಂತ ಮುಂಚೆ ಊಟಮಾಡಿಬಿಡೋಣವೆನ್ನಿಸಿತು. ಗಾಡಿಯನ್ನು ಮರವೊಂದರ ಬಳಿ ನಿಲ್ಲಿಸಿ, ಎತ್ತುಗಳನ್ನು ಕಟ್ಟಿಹಾಕಿ, ಊಟಕ್ಕೆ ಕುಳಿತನು. ಅಡುಗೆ ತಾನಂದುಕೊಂಡಿದ್ದಕ್ಕಿಂತ ಹೆಚ್ಚುರುಚಿಯಾಗಿತ್ತು. ಊಟ ಕೊನೆಯ ಹಂತಕ್ಕೆ ಬರುತ್ತಲೂ ಭೀಮನು ರಾಕ್ಷಸನನ್ನು ಕೂಗಿ ಕರೆದನು. ಬಕನು ಬಂದು ನೋಡುತ್ತಾನೆ, ಬ್ರಾಹ್ಮಣ ಬಾಲಕನೊಬ್ಬ ತನಗೆ ಮೀಸಲೆಂದು ಕಳುಹಿಸಿರುವ ಆಹಾರವನ್ನೆಲ್ಲ ಕಬಳಿಸುತ್ತಿದ್ದಾನೆ. ಬಕನ ಸಿಟ್ಟು ನೆತ್ತಿಗೇರಿತು. ಅವನು ಕೊಡಲುಪಕ್ರಮಿಸಿದ ಏಟನ್ನು ಭೀಮನು ಎಡಗೈಯಿಂದಲೇ ನಿವಾರಿಸಿ, ಬಲಗೈಯಿಂದ ಮೊಸರು ಕುಡಿಯತೊಡಗಿದನು. ಈಗ ಊಟ ಪೂರ್ಣವಾಯಿತು. ``ಎಲ್ಲವೋ, ನೀನು ಈ ಊರಿನವರನ್ನೂ ಅವರ ಅನ್ನವನ್ನೂ ತಿಂದು ಕೊಬ್ಬಿದ್ದೀಯೆ. ನಿನ್ನನ್ನು ಯಮಲೋಕಕ್ಕೆ ಕಳುಹಿಸಿ, ಜನರ ಸಂಕಟವನ್ನು ನಿವಾರಿಸುವೆ. ಬಾ, ನನ್ನೊಡನೆ ಕಾಳಗಕ್ಕೆ ಸಿದ್ಧನಾಗು" ಎಂದನು. ಇಬ್ಬರ ನಡುವೆ ಹೋರಾಟವು ಬಹುಕಾಲ ನಡೆಯಿತು. ಬಕನು ಬಹಳ ಬಲಶಾಲಿ. ಅದರೂ ಭೀಮನು ಅವನನ್ನು ಮಣಿಸಿದನು. ಕೊನೆಗೆ ಅವನನ್ನು ತನ್ನ ಮೊಣಕಾಲ ಅಡಿಗೆ ಸಿಕ್ಕಿಸಿಕೊಂಡು, ಆನೆಯು ಕಬ್ಬನ್ನು ಮುರಿಯುವಂತೆ ಬಕನನ್ನು ಎರಡಾಗಿ ಮುರಿದುಹಾಕಿದನು. ಅವನ ದೇಹವನ್ನು ಎಳೆದುತಂದು ಊರಿನ ದಿಡ್ಡೀ ಬಾಗಿಲಿಗೆ ಕಟ್ಟಿದನು. ಊರಿನ ಜನರನ್ನು ಹಿಂಸಿಸುವುದಿಲ್ಲವೆಂದು ಮಾತು ತೆಗೆದುಕೊಂಡು ಬಕನ ಅನುಯಾಯಿಗಳನ್ನು ಬಿಟ್ಟುಬಿಟ್ಟನು. ಬ್ರಾಹ್ಮಣನಿಗೆ ಗಾಡಿಯನ್ನು ಹಿಂದಿರುಗಿಸಿ ಬಕನನ್ನು ಕೊಂದವರು ಯಾರೆಂಬುದನ್ನು ರಹಸ್ಯವಾಗಿಟ್ಟಿರುವಂತೆ ತಿಳಿಸಿ, ಮನೆಗೆ ಬಂದು ನಿದ್ದೆ ಹೋದನು. ಬಕನನ್ನು ಯಾರೋ ಗಂಧರ್ವನು ಕೊಂದನೆಂದು ಬ್ರಾಹ್ಮಣನು ಸುದ್ದಿ ಹರಡಿಸಿದನು.* * * * ಬಕನನ್ನು ಕೊಂದ ಮೇಲೂ ಪಾಂಡವರು ಆ ಬ್ರಾಹ್ಮಣನ ಮನೆಯಲ್ಲೇ ಇದ್ದರು. ಒಂದು ದಿನ ಪ್ರವಾಸಿಯೊಬ್ಬನು ಇವರಿದ್ದ ಬ್ರಾಹ್ಮಣ ಕುಟುಂಬದೊಂದಿಗೆ ರಾತ್ರಿ ಆಶ್ರಯ ಪಡೆದುಕೊಂಡಿದ್ದನು. ಮಲಗುವ ಮುನ್ನ ಅವನ ಪ್ರವಾಸದ ಅನುಭವಗಳನ್ನು ಕೇಳಲು ಎಲ್ಲರೂ ಅವನ ಸುತ್ತ ನೆರೆದರು. ಕಾಂಪಿಲ್ಯದಲ್ಲಿ ಪಾಂಚಾಲ ರಾಜನಾದ ದ್ರುಪದನು ಅಗ್ನಿಯಲ್ಲಿ ಹುಟ್ಟಿದ ತನ್ನ ಮಗಳು ದ್ರೌಪದಿಯ ಸ್ವಯಂವರವನ್ನು ಏರ್ಪಡಿಸಿರುವನೆಂದೂ, ಈ ಸುದ್ದಿಯನ್ನು ಹರಡುವುದಕ್ಕೇ ತಾನು ಪ್ರವಾಸ ಹೊರಟಿರುವೆನೆಂದೂ ಅವನು ಹೇಳಿದನು. ಪಾಂಡವರು ಈ ಸ್ವಯಂವರದ ಬಗ್ಗೆ ವಿವರವನ್ನಪೇಕ್ಷಿಸಲು, ಅವನು ದ್ರೋಣ ದ್ರುಪದರು ಒಟ್ಟಿಗೆ ಭಾರದ್ವಾಜನ ಆಶ್ರಮದಲ್ಲಿ ವಿದ್ಯೆ ಕಲಿಯುತ್ತಿದ್ದುದು, ದ್ರುಪದನು ತಾನು ರಾಜನಾದ ಮೇಲೆ ಗೆಳೆಯ ದ್ರೋಣನೊಂದಿಗೆ ರಾಜ್ಯವನ್ನು ಹಂಚಿಕೊಳ್ಳುವೆನೆಂದಿದ್ದುದು, ನಂತರ ಅವನನ್ನು ಹೀನಾಯಿಸಿದುದು, ದ್ರೋಣನು ತನ್ನ ಶಿಷ್ಯ ಅರ್ಜುನನ ಸಹಾಯದಿಂದ ದ್ರುಪದನಿಂದಾದ ಅವಮಾನದ ಸೇಡನ್ನು ತೀರಿಸಿಕೊಂಡುದು; ದ್ರೋಣನನ್ನು ಕೊಲ್ಲುವುದಕ್ಕೆಂದು ಧೃಷ್ಟದ್ಯುಮ್ನನೆಂಬ ಒಬ್ಬ ಮಗನನ್ನೂ, ತಾನು ಮೆಚ್ಚಿದ ವೀರ ಅರ್ಜುನನಿಗೆ ಕೊಡುವುದಕ್ಕೆಂದು ದ್ರೌಪದಿಯೆಂಬ ಒಬ್ಬ ಮಗಳನ್ನೂ ದ್ರುಪದನು ಯಾಜೋಪಯಾಜರೆಂಬ ಋಷಿಗಳನ್ನು ಆಶ್ರಯಿಸಿ ಮಾಡಿದ ಯಜ್ಞವೊಂದರ ಮೂಲಕ ಪಡೆದುದು, ಆ ಸಂದರ್ಭದಲ್ಲಿ `ಈ ದ್ರೌಪದಿಯು ಕ್ಷತ್ರಿಯರೆಲ್ಲರ ವಿನಾಶಕ್ಕೆಂದೇ ಹುಟ್ಟಿರುವವಳು' ಎಂದು ಅಶರೀರವಾಣಿಯಾದುದು ಎಲ್ಲವನ್ನೂ ತಿಳಿಸಿದನು.ಭೀಮನು ``ಆದರೆ ಆ ಧೃಷ್ಟದ್ಯುಮ್ನನೂ ಸಹ ದ್ರೋಣನ ಶಿಷ್ಯನಾಗಿಯೇ ಧನುರ್ವಿದ್ಯೆಯನ್ನು ಕಲಿತನೆಂದು ಕೇಳಿರುವೆನಲ್ಲ!" ಎಂದನು. ಅದಕ್ಕಾ ಬ್ರಾಹ್ಮಣನು, ``ಹೌದು. ತನ್ನನ್ನು ಕೊಲ್ಲುವುದಕ್ಕೇಂದೇ ಹುಟ್ಟಿರುವನು ಎಂಬುದನ್ನು ತಿಳಿದೂ, ವಿಧಿಯನ್ನು ಎದುರಿಸಲು ಬಯಸದ ದ್ರೋಣನು ಅವನಿಗೆ ವಿದ್ಯಾದಾನ ಮಾಡಿದನು. ಅರಗಿನ ಮನೆಯಲ್ಲಿ ಸುಟ್ಟುಹೋದರಲ್ಲಾ ಆ ಪಾಂಡವರಲ್ಲಿ ಒಬ್ಬನಾದ ಭೀಮನು ಧೃಷ್ಟದ್ಯುಮ್ನನ ಗೆಳೆಯನಂತೆ. ನೀವು ಏನಾದರೂ ಹೇಳಿ; ತನ್ನ ತಮ್ಮನಾದ ಪಾಂಡುವಿನ ಮಕ್ಕಳನ್ನು ವಾರಣಾವತಕ್ಕೆ ಕಳುಹಿಸಿ ಮೋಸದಿಂದ ಸುಟ್ಟುಹಾಕಿಸಿದ ಧೃತರಾಷ್ಟ್ರನು ಕುರುವಂಶದ ಘನತೆಗೆ ತಕ್ಕಂತೆ ನಡೆದುಕೊಳ್ಳಲಿಲ್ಲ. ಪಾಂಡವರೂ ಅವರ ತಾಯಿಯಾದ ಕುಂತಿಯೂ ಅರಗಿನ ಮನೆಯಲ್ಲಿ ಸುಟ್ಟುಹೋದರೆಂಬ ಸುದ್ದಿಯನ್ನು ಕೇಳಿದ ದ್ರುಪದನು ದು:ಖದಿಂದ ಹುಚ್ಚನಂತಾಗಿದ್ದಾನೆ. ಇದು ಶಕುನಿ ದುರ್ಯೋಧನ ಧೃತರಾಷ್ಟ್ರ ಈ ಮೂವರದ್ದೇ ಕೆಲಸ ಎಂದು ಅವನಿಗೆ ಚೆನ್ನಾಗಿ ಮನದಟ್ಟಾಗಿದೆ. ಆದರೆ -ಋಷಿವಾಕ್ಯವು ಸುಳ್ಳಾಗುವುದಿಲ್ಲ. ಯಾಜೋಪಯಾಜರ ಯಜ್ಞವು ನಿರರ್ಥಕವಾಗುವುದೆ? ಪಾಂಡವರು ಬದುಕಿದ್ದಾರೆ. ನೀನು ನಿನ್ನ ಮಗಳಿಗೆ ಸ್ವಯಂವರವನ್ನೇರ್ಪಡಿಸಿದರೆ, ಅರ್ಜುನನು ಅವಳ ಕೈ ಹಿಡಿಯಲು ಎಲ್ಲಿದ್ದರೂ ಬರುತ್ತಾನೆ- ಎಂದು ದ್ರುಪದನ ಗುರುವು ಕೊಟ್ಟ ಸಲಹೆಯ ಮೇರೆಗೇ ಈ ಸ್ವಯಂವರ. ದಿಕ್ಕುದಿಕ್ಕುಗಳಲ್ಲಿಯೂ ಈ ವರ್ತಮಾನವನ್ನು ಹರಡುವುದಕ್ಕೆಂದು ನನ್ನಂಥ ಅನೇಕ ದೂತರನ್ನು ದ್ರುಪದನು ಕಳುಹಿಸಿದ್ದಾನೆ!" ಎಂದನು. ನಂತರ ರಾತ್ರಿ ಬಹಳವಾಯಿತು, ನಿದ್ರೆ ಬರುತ್ತಿದೆ ಎಂದು ಆ ಪ್ರವಾಸಿಯು ಮಲಗಿದನು.ಆ ನಂತರವೂ ಪಾಂಡವರು ಬಹಳ ಹೊತ್ತು ಕುಳಿತಿದ್ದರು . ಕುಂತಿಗೆ ಅರ್ಥವಾಯಿತು, ಪಾಂಚಾಲಕ್ಕೆ ಇವರು ಹೋಗಬಯಸಿದ್ದಾರೆ, ಆದರೆ ಹಾಗೆಂದು ಹೇಳುವುದಕ್ಕೆ ನಾಚಿಕೊಳ್ಳುತ್ತಿದ್ದಾರೆ ಎಂದು. ಅವರಿಗೆ ನೆರವಾಗುವಂತೆ ಕುಂತಿ ``ಮಕ್ಕಳೆ, ಇಲ್ಲಿರುತ್ತ ಬಹಳ ದಿನಗಳಾದವು. ಮನಸ್ಸಿಗೆ ಬದಲಾವಣೆ ಬೇಕೆನಿಸುತ್ತಿದೆ, ಈ ಪ್ರವಾಸಿಯ ಮಾತು ಕೇಳಿದ ಮೇಲೆ ಕಾಂಪಿಲ್ಯಕ್ಕೆ ಹೋದರೆ ಹೇಗೆ ಎಂದು ಯೋಚಿಸುತ್ತಿದ್ದೇನೆ. ಸ್ವಯಂವರದ ಉತ್ಸವವನ್ನು ನಾವೂ ನೋಡಿ ಆನಂದಿಸಬಹುದು. ನಿಮ್ಮ ಅಭಿಪ್ರಾಯವೇನು?" ಎಂದಳು. ಪಾಂಡವರಿಗೆ ರೋಗಿ ಬಯಸಿದ್ದೂ ಹಾಲು ಅನ್ನ, ವ್ಯೆದ್ಯ ಹೇಳಿದ್ದೂ ಹಾಲು ಅನ್ನ ಎಂಬಂತಾಯಿತು. ಒದಗಲಿರುವ ಸಾಹಸಗಳನ್ನು ಕಲ್ಪಿಸಿಕೊಂಡೇ ಅವರಿಗೆ ನಿದ್ರೆ ಬಾರದಂತಾಯಿತು. ಅದರಲ್ಲೂ ಅರ್ಜುನನಿಗೆಂದೇ ಜನಿಸಿರುವ ದ್ರೌಪದಿ! ಎಂಬ ವರ್ಣನೆಯನ್ನು ಕೇಳಿದ ಪಾಂಡವರಿಗೆ ಅವಳ ಯೋಚನೆಯೇ ಮನಸ್ಸನ್ನು ತುಂಬಿಕೊಂಡಿತು. ಯುಧಿಷ್ಠಿರನನ್ನೂ ಒಳಗೊಂಡು ಎಲ್ಲರಿಗೂ ಅವಳ ಮೇಲೆ ಆಸೆಯಾಯಿತು.ಬೆಳಗಾಗುತ್ತಲೂ ಕುಂತಿಯು ಬ್ರಾಹ್ಮಣ ದಂಪತಿಗಳನ್ನು ಬೀಳ್ಕೊಂಡು, ಅವರಿಗೆ ಧನ್ಯವಾದಗಳನ್ನರ್ಪಿಸಿ, ಮಕ್ಕಳೊಡನೆ ಪಾಂಚಾಲರಾಜ್ಯಕ್ಕೆ ಹೊರಟಳು. ದಾರಿಯಲ್ಲಿ ಸಿಕ್ಕಿದ ವ್ಯಾಸನು ಅವರನ್ನು ಆಶೀರ್ವದಿಸಿ, ``ನೀನು ಯುಕ್ತವಾದದ್ದನ್ನೇ ಮಾಡುತ್ತಿರುವಿರಿ. ಕಾಂಪಿಲ್ಯದಲ್ಲಿ ನಿಮಗೆ ಅದೃಷ್ಟ ಕಾದಿದೆ. ನಿಮ್ಮ ಮನಸ್ಸಿನಲ್ಲಿರುವುದನ್ನು ನಾನು ಊಹಿಸಬಲ್ಲೆ. ನಿಮ್ಮ ಅಭಿಲಾಷೆ ಕೈಗೂಡುವುದರಲ್ಲಿ ಸಂದೇಹವಿಲ್ಲ. ನಾನು ಕಾಂಪಿಲ್ಯದಲ್ಲಿ ಮತ್ತೊಮ್ಮೆ ಬಂದು ನಿಮ್ಮನ್ನು ಕಾಣುತ್ತೇನೆ" ಎಂದನು. ವ್ಯಾಸನ ದರ್ಶನದಿಂದ ಪುಳಕಿತರಾದ ಪಾಂಡವರು ಸಂತೋಷದಿಂದ ಮುಂದಕ್ಕೆ ಪ್ರಯಾಣ ಮಾಡಿದರು. ಕತ್ತಲಾಗಿ ಅರ್ಧರಾತ್ರಿಯಾಗುವ ಹೊತ್ತಿಗೆ ಗಂಗಾನದಿಯ ಬಳಿಗೆ ಬಂದರು. ನದಿಯಲ್ಲಿ ಮಿಂದು ದಣಿವಾರಿಸಿಕೊಳ್ಳಬೇಕು ಎನ್ನುವಷ್ಟರಲ್ಲಿ ಅಲ್ಲಿ ಪತ್ನಿಯರೊಂದಿಗೆ ವಿಹರಿಸುತ್ತಿದ್ದ ಚಿತ್ರರಥನೆಂಬ ಗಂಧರ್ವನು ಕೋಪದಿಂದ ಸೆಣೆಸಿ ನಿಂತನು. ಅರ್ಜುನನಿಗೂ ಅವನಿಗೂ ವಾಗ್ಯುದ್ಧ ಅಸ್ತ್ರಯುದ್ಧಗಳಾದವು. ಅರ್ಜುನನ ಆಗ್ನೇಯಾಸ್ತ್ರವು ಅವನ ರಥವನ್ನು ಸುಟ್ಟುಹಾಕಿತು. ಚಿತ್ರರಥನ ಪತ್ನಿಯರು ಯುಧಿಷ್ಠಿರನನ್ನು ಪತಿಭಿಕ್ಷೆಗಾಗಿ ಬೇಡಿಕೊಳ್ಳಲು, ಅಣ್ಣನ ಮಾತಿಗೆ ಒಪ್ಪಿ ಅರ್ಜುನನು ಚಿತ್ರರಥನೊಂದಿಗೆ ಗೆಳೆತನ ಮಾಡಿಕೊಂಡನು. ಆಗ್ನೇಯಾಸ್ತ್ರವನ್ನು ಚಿತ್ರರಥನಿಗೆ ಉಪದೇಶಿಸಿ, ಅವನಿಂದ ಎಂದಿಗೂ ಆಯಾಸಗೊಳ್ಳದ ಶ್ವೇತಾಶ್ವಗಳನ್ನೂ ತ್ರಿಕಾಲಜ್ಞಾನವನ್ನೂ ಪಡೆದನು. ಚಿತ್ರರಥನ ಸಲಹೆಯ ಮೇರೆಗೆ ಪಾಂಡವರು ಧೌಮ್ಯನೆಂಬ ಮಹರ್ಷಿಯನ್ನು ಗುರುವಾಗಿ ಸ್ವೀಕರಿಸಿದರು. ನಂತರ ಧೌಮ್ಯನನ್ನು ಮುಂದಿಟ್ಟುಕೊಂಡು ಪಾಂಚಾಲದೇಶದ ಕಡೆಗೆ ಪ್ರಯಾಣ ಮಾಡಿದರು.* * * * ಕಾಂಪಿಲ್ಯಕ್ಕೆ ಬಂದು ಸೇರಿದ ಪಾಂಡವರು ಬ್ರಾಹ್ಮಣ ವೇಷದಿಂದ ಕುಂಬಾರನೊಬ್ಬನ ಮನೆಯಲ್ಲಿ ಇಳಿದುಕೊಂಡು, ಭಿಕ್ಷಾಟನೆಯಿಂದ ಜೀವಿಸುತ್ತ, ನಗರಪ್ರದಕ್ಷಿಣೆಯ ನೆಪದಲ್ಲಿ ಸುದ್ದಿಸಂಗ್ರಹ ಮಾಡತೊಡಗಿದರು. ಪಾಂಡವರು ಖಂಡಿತ ಬದುಕಿರುವರೆಂಬುದು ತಮ್ಮ ರಾಜನ ನಂಬಿಕೆಯೆಂದೂ, ಋಷಿಗಳು ಹೇಳಿರುವಂತೆ ದ್ರೌಪದಿಯ ಸ್ವಯಂವರಕ್ಕೆ ಅರ್ಜುನನು ಬಂದೇ ಬರುತ್ತಾನೆಂದೂ, ಅವನನ್ನು ಗುರುತಿಸುವುದಕ್ಕಾಗಿಯೇ ಸ್ವಯಂವರ ಮಂಟಪದಲ್ಲಿ ಮಹಾಧನುಸ್ಸೊಂದನ್ನಿಟ್ಟು, ಮೇಲೆ ತಿರುಗುತ್ತಿರುವ ಮೀನಿನ ಲಕ್ಷ್ಯವೊಂದನ್ನಿಟ್ಟು, ಯಾರು ಧನುಸ್ಸಿಗೆ ಹೆದೆಯೇರಿಸಿ ಆ ಲಕ್ಷ್ಯವನ್ನು ಐದು ಬಾಣಗಳಿಂದ ಕೆಡಹುವರೋ ಅವನು ದ್ರೌಪದಿಯನ್ನು ಗೆದ್ದುಕೊಂಡಂತೆ ಎಂಬುದಾಗಿ ಪ್ರಕಟಿಸಿರುವನೆಂದೂ ಪುರಜನರು ಮಾತನಾಡಿಕೊಳ್ಳುತ್ತಿದ್ದರು. ಅರ್ಜುನನನ್ನುಳಿದು ಇತರರು ಯಾರಿಗೂ ಈ ಗುರಿ ಅಸಾಧ್ಯವೆಂದು ಅವರ ಅಭಿಪ್ರಾಯವಾಗಿದ್ದಿತು. ಎಲ್ಲರೂ ಸ್ವಯಂವರ ದಿನದ ಅಗಮನವನ್ನೇ ಕಾಯುತ್ತಿದ್ದರು. ಭರತಖಂಡದ ಮೂಲೆಮೂಲೆಗಳಿಂದಲೂ ರಾಜರುಗಳು ಸ್ವಯಂವರಕ್ಕಾಗಿ ಬಂದು ನೆರೆದಿದ್ದರು. ರಾಧೇಯನ ಜೊತೆಯಲ್ಲಿ ದುರ್ಯೋಧನಾದಿ ಕೌರವರು ಈಗಾಗಲೇ ಬಂದಿದ್ದರು. ಯಾದವರು,ಭೋಜರು, ಅಂಧಕರು,ವೃಷ್ಣಿಗಳು ಎಲ್ಲರೂ ನೆರೆದಿದ್ದರು. ಬಲರಾಮ ಕೃಷ್ಣರು ಸಹ ಅಲ್ಲಿದ್ದರು. ಬಹು ಮಾನ್ಯ ಅತಿಥಿಗಳಿಗಾಗಿ ಮಹಾ ಸೌಧಗಳೇ ಅಲ್ಲಿ ನಿರ್ಮಾಣಗೊಂಡಿದ್ದವು. ಅತಿಥಿಸತ್ಕಾರಕ್ಕಾಗಿ ದಾಸದಾಸಿಯರ ಗುಂಪೇ ಸಜ್ಜಾಗಿದ್ದಿತು.ಸ್ವಯಂವರದ ದಿನ ಮಂಟಪವು ಇಂದ್ರನ ಆಸ್ಥಾನದಂತೆ ಕಂಗೊಳಿಸುತ್ತಿದ್ದಿತು. ಗಂಧ ಪುಷ್ಪ ಧೂಪದೀಪಾಗಳಿಂದ ಹಾಗು ನಿರೀಕ್ಷೆಯಿಂದ ಎಲ್ಲರೂ ಪುಳಕಿತರಾಗಿದ್ದರು. ಪುರುಷಸಿಂಹರಂತಿದ್ದ ರಾಜರುಗಳು ತಮ್ಮ ತಮ್ಮ ಅಸ್ತ್ರಗಳೊಂದಿಗೆ ಶೋಭಿಸುತ್ತಿದ್ದರು. ನೋಡುವುದಕ್ಕೆಂದು ಬಂದು ನೆರೆದಿದ್ದ ದೇವತೆಗಳಿಂದ ಅಂತರಿಕ್ಷವು ತುಂಬಿಹೋಗಿದ್ದಿತು. ಅದೊಂದು ಮರೆಯಲಾಗದಂತಹ ಅದ್ಭುತ ದೃಶ್ಯವಾಗಿದ್ದಿತು. ಎಲ್ಲರೂ ದ್ರೌಪದಿಯ ಸೌಂದರ್ಯವನ್ನೂ ಅವಳ ಕೈ ಹಿಡಿಯಲಿರುವ ಪುಣ್ಯವಂತನನ್ನೂ ನೋಡಲು ತವಕಿಸುತ್ತಿದ್ದರು. ಬ್ರಾಹ್ಮಣರ ಗುಂಪಿನಲ್ಲಿ ಪಾಂಡವರು ಯಾರ ಗಮನವನ್ನೂ ಸೆಳೆಯದೆ ಅಲ್ಲೊಬ್ಬರು ಇಲ್ಲೊಬ್ಬರಂತೆ ಹರಡಿ ಕುಳಿತುಕೊಂಡಿದ್ದರು. ಎಲ್ಲರ ಕಣ್ಣೂ ಒಳಗಿನ ಬಾಗಿಲ ಕಡೆಗೆ. ಧೃಷ್ಟದ್ಯುಮ್ನನು ಸುಂದರವಾದ ರೇಷ್ಮೆಯ ಸೀರೆಯಲ್ಲಿ ರತ್ನಾಭರಣಗಳೊಡನೆ ದಿವ್ಯವಾಗಿ ಶೋಭಿಸುತ್ತಿದ್ದ ತನ್ನ ಪ್ರೀತಿಯ ತಂಗಿಯನ್ನು ಆಸ್ಥಾನಕ್ಕೆ ಕರೆತರುತ್ತಿದ್ದನು. ಅವಳು ಮುಗುಳ್ನಗುತ್ತ ಪುಷ್ಪಹಾರವನ್ನು ಕೈಯಲ್ಲಿ ಹಿಡಿದು ಲಜ್ಜೆಯ ಮಂದಗಮನದಿಂದ ಬರುತಿದ್ದಳು. ಮಂಟಪದ ಮಧ್ಯೆ ವಿಶೇಷವಾಗಿ ನಿರ್ಮಿತವಾದ ರಂಗಕ್ಕೆ ಧೃಷ್ಟದ್ಯುಮ್ನನು ಅವಳನ್ನು ಕರೆತಂದನು. ದ್ರೌಪದಿಯು ಆ ಕ್ಷಣದಿಂದ ಪ್ರಾರಂಭಿಸಿ ಕೊನೆಯ ಅಂಕದವರೆಗೂ ಒಂದು ದೈವೀನಾಟಕದ ಕೇಂದ್ರಬಿಂದುವಾಗಿ ಉಳಿದಳು. ಆವಳು ಹುಟ್ಟಿದ್ದೇ ಕ್ಷತ್ರಿಯರ ಸಂಹಾರಾರ್ಥವಾಗಿ; ಅದನ್ನು ಮುಂದೆ ಕಾಲವು ಸಾಧಿಸಲಿರುವುದು.ವೇದಘೋಷವಾಯಿತು, ಹವನವಾಯಿತು. ಎಲ್ಲೆಲ್ಲೂ ಪ್ರಶಾಂತತೆ ನೆಲೆಸಿತ್ತು. ಧೃಷ್ಟದ್ಯುಮ್ನನು ರಂಗಕ್ಕೆ ಬಂದು, ಮೇಘಗರ್ಜನೆಯಂತಹ ಗಂಭೀರ ಧ್ವನಿಯಲ್ಲಿ,``ಮಹಾಜನರು ಲಾಲಿಸಬೇಕು. ಈ ದಿವ್ಯಧನುಸ್ಸನ್ನೂ ಈ ಐದು ಬಾಣಗಳನ್ನೂ ಬಳಸಿ ಮೇಲೆ ಕಾಣುವ ಮತ್ಸ್ಯಲಕ್ಷ್ಯವನ್ನು ಬೀಳಿಸಬೇಕು. ಈ ಸಾಹಸವನ್ನು ಸಾಧಿಸಿದವನನ್ನು ನನ್ನ ತಂಗಿ ದ್ರೌಪದಿಯು ವರಿಸಲಿರುವಳು. ಇದು ನನ್ನ ಪ್ರತಿಜ್ಞೆ" ಎಂದು ಪ್ರಕಟಿಸಿದನು. ನಂತರ ತಂಗಿಯ ಬಳಿಗೆ ಹೋಗಿ ರಾಜರನ್ನೆಲ್ಲ ಒಬ್ಬೊಬ್ಬರನ್ನಾಗಿ ಪರಿಚಯಿಸತೊಡಗಿದನು. ``ಭದ್ರೆ, ನೋಡು. ಅದೋ, ಅಲ್ಲಿ ಕುಳಿತಿರುವವನು ಕುರುರಾಜ ದುರ್ಯೋಧನ; ಪಕ್ಕದಲ್ಲಿರುವವರು ಅವನ ಸೋದರರು. ಅವನ ಪ್ರೀತಿಯ ಸ್ನೇಹಿತ ರಾಧೇಯನು ಅಲ್ಲಿರುವನು. ಅದೋ, ಅವನು ಶಕುನಿ. ನಂತರದವನು ದ್ರೋಣಪುತ್ರನಾದ ಅಶ್ವತ್ಥಾಮ. ಅವನು ಭಗದತ್ತ, ಅವನು ಶಾಲ್ಯ, ಅವನು ಜರಾಸಂಧ. ಅವನೇ ರೋಹಿಣಿಯ ಮಗ ಬಲರಾಮ; ಅವನೇ ದೇವಕೀಪುತ್ರನಾದ ಕೃಷ್ಣ; ಅವನು ಸಾತ್ಯಕಿ; ಅವನು ಕೃತವರ್ಮ; ಅವನು ಚೇದಿರಾಜ ಶಿಶುಪಾಲ. ಅವನೇ ದುರ್ಯೋಧನನ ಭಾವನಾದ ಸಿಂಧುರಾಜ ಜಯದ್ರಥ." ಪರಿಚಯವು ಹೀಗೇ ಬಹಳ ಹೊತ್ತು ಸಾಗಿತು.ನಂತರ ರಾಜರುಗಳು ಒಬ್ಬೊಬ್ಬರಾಗಿ ಧನುಸ್ಸಿನ ಬಳಿಗೆ ಬಂದು ಅದನ್ನು ಹೆದೆಯೇರಿಸುವುದಕ್ಕೆ ಪ್ರಯತ್ನಿಸಿದರು; ತಮ್ಮಿಂದಾಗದೆ ಅವನತಮುಖರಾಗಿ ಹಿಂದಿರುಗಿದರು. ಯಾದವರು ಕೇವಲ ಪ್ರೇಕ್ಷಕರಾಗಿರಲು ನಿರ್ಧರಿಸಿಕೊಂಡೇ ಬಂದಿದ್ದರು. ಕೃಷ್ಣನು ಸಭೆಯಲ್ಲಿ ನೆರೆದವರನ್ನು ಸಿಂಹಾವಲೋಕನ ಮಾಡುತ್ತಿದ್ದನು. ಕೊನೆಗೊಮ್ಮೆ ಅವನ ದೃಷ್ಟಿಯು ಬ್ರಾಹ್ಮಣ ಸಮುದಾಯದಲ್ಲಿ ಮಾರುವೇಷದಿಂದ ಕುಳಿತಿದ್ದ ಪಾಂಡವರ ಮೇಲೆ ಬಿದ್ದಿತು. "ಅಣ್ಣ, ಅಲ್ಲಿ ನೋಡು ಬೂದಿಮುಚ್ಚಿದ ಕೆಂಡಗಳಂತಿರುವ ಆ ಬ್ರಾಹ್ಮಣವೇಷಧಾರಿಗಳನ್ನು. ಅವರು ಪಾಂಡವರಲ್ಲದೆ ಬೇರೆಯಲ್ಲ. ಈಗ ಏನು ನಡೆಯುವುದೆಂದು ಕಾದು ನೋಡೋಣ" ಎಂದು ಬಲರಾಮನಿಗೆ ತೋರಿಸಿದನು. ಪಾಂಡವರು ಬದುಕಿರುವರೆಂದೇ ಅವನು ಯಾದವರನ್ನೆಲ್ಲ ಪ್ರೇಕ್ಷಕರನ್ನಾಗಿಸಿದ್ದು.ಸ್ಪರ್ಧೆ ಮುಂದುವರೆಯಿತು. ಒಬ್ಬರಾದ ಮೇಲೊಬ್ಬರಂತೆ ರಾಜರುಗಳು ಪ್ರಯತ್ನಿಸಿ ಸೋತರು. ಶಿಶುಪಾಲನಂಥ ಕೆಲವರು ಗುರಿಯನ್ನು ಸಾಸಿವೆಕಾಳಿನಷ್ಟು ಅಂತರದಿಂದ ತಪ್ಪಿದರು. ಜರಾಸಂಧನೂ ಬಹು ಕಡಿಮೆ ಅಂತರದಿಂದ ಸೋತನು. ದುರ್ಯೋಧನನು ಕಿರುಬೆರಳ ಅಂತರದಿಂದ ಸೋತನು. ಮಹಾ ಬಿಲ್ಲುಗಾರರೆನಿಸಿಕೊಂಡವರೆಲ್ಲರೂ ಸೋಲಲು, ರಾಜರೆಲ್ಲ ನಿರಾಶರಾದರು. ಈಗ ರಾಧೇಯನು ಚಿರತೆಯಂತೆ ಮೇಲೆದ್ದುಬಂದನು. ಕೃಷ್ಣನು ಆತಂಕದಿಂದ ಅವನು ಹೆದೆಯೇರಿಸುವುದನ್ನೇ ನೋಡುತ್ತಿದ್ದನು. ಅವನು ಗುರಿಯಿಡುತ್ತಿರುವಾಗಲಂತೂ ಕೃಷ್ಣನು ಉಸಿರು ಬಿಗಿಹಿಡಿದನು. ಅರ್ಜುನ ನಿಲ್ಲದಿರುವಾಗ ಭಾರ್ಗವಶಿಷ್ಯನಾದ ರಾಧೇಯನಿಗೆ ಸಮಾನರಾರು? ಎಂದು ಎಲ್ಲರೂ ಮಾತನಾಡಿಕೊಂಡರು. ಅವನ ಗುರಿಯೂ ಕೂದಲೆಳೆಯಷ್ಟು ಅಂತರದಿಂದ ತಪ್ಪಿತು. ಕೃಷ್ಣನಿಗೆ ಈಗ ನಿರಾತಂಕವಾಯಿತು. ರಾಧೇಯನೂ ಸೋತಮೇಲೆ ಯಾರೊಬ್ಬರೂ ಮುಂದೆ ಬರಲಿಲ್ಲ.ಇದ್ದಕ್ಕಿದ್ದಂತೆ ಪ್ರಜ್ವಲಿಸಿದ ಬೆಂಕಿಯಂತೆ ಅರ್ಜುನ ಮೇಲೆದ್ದು ನಿಂತನು. ಇದನ್ನೇ ಕಾಯುತ್ತಿದ್ದ ಕೃಷ್ಣನು ಉದ್ವೇಗದಿಂದ ಬಲರಾಮನ ಕೈಹಿಡಿದು ಅದುಮಿದನು. ಎಲ್ಲರ ದೃಷ್ಟಿಯೂ ಈ ಬ್ರಾಹ್ಮಣ ತರುಣನ ಕಡೆಗೆ ತಿರುಗಿತು. ಕೃಷ್ಣ, ಬಲರಾಮ, ಧೌಮ್ಯ, ಭೀಷ್ಮರ ಹೊರತಾಗಿ ಯಾರಿಗೂ ಅವನಾರೆಂದು ಗೊತ್ತಿರಲಿಲ್ಲ. ಅರ್ಜುನನು ರಂಗಕ್ಕೆ ಬಂದು ಧೃಷ್ಟದ್ಯುಮ್ನನನ್ನು ``ಕ್ಷತ್ರಿಯರಾರೂ ಈ ಮತ್ಸ್ಯಯಂತ್ರವನ್ನು ಭೇದಿಸುವಂತೆ ತೋರಲಿಲ್ಲ. ಬ್ರಾಹ್ಮಣರು ಪ್ರಯತ್ನಿಸಬಹುದೆ?'' ಎಂದು ಕೇಳಿದನು. ಯುವರಾಜ ಧೃಷ್ಟದ್ಯುಮ್ನನು ``ಓಹೋ, ಖಂಡಿತವಾಗಿ. ಚತುರ್ವರ್ಣದವರಲ್ಲಿ ಯಾರು ಬೇಕಾದರೂ ಪ್ರಯತ್ನಿಸಬಹುದು. ಮೇಲೆ ಕಾಣುವ ಆ ಮೀನನ್ನು ಹೊಡೆದು ಬೀಳಿಸಿದರೆ ನನ್ನ ತಂಗಿ ನಿನ್ನವಳಾಗುವಳು. ನನ್ನ ಪ್ರತಿಜ್ಞೆ ಸತ್ಯವಾದದ್ದು" ಎಂದನು. ಅರ್ಜುನನು ಆ ಮಹಾಧನುಸ್ಸಿನ ಬಳಿಗೆ ಹೋಗಿ ಅದಕ್ಕೆ ಪ್ರದಕ್ಷಿಣೆ ಬಂದು ನಮಸ್ಕರಿಸಿದನು. ಮುಗುಳ್ನಗುತ್ತ ಹೆದೆಯೇರಿಸಿ ಐದು ಬಾಣಗಳನ್ನೂ ಒಂದಾದ ಮೇಲೊಂದರಂತೆ ಮೀನಿನ ಕಣ್ಣಿನೊಳಗೆ ತೂರಿಸಿಯೇ ಬಿಟ್ಟನು! ಲಕ್ಷ್ಯವು ಭೂಮಿಗೆ ಬಿದ್ದಿತು.ಕೂಡಲೆ ಕೋಟಿಸಿಡಿಲುಗಳು ಮೊಳಗಿದಂತೆ ಕರತಾಡನವಾಯಿತು. ಬ್ರಾಹ್ಮಣರು ತಮ್ಮತಮ್ಮ ಉತ್ತರೀಯಗಳನ್ನು ಹಾರಿಸಿ ಕುಣಿದರು. ಆಕಾಶದಿಂದ ಪುಷ್ಪವೃಷ್ಟಿಯಾಯಿತು. ದೇವದುಂದುಭಿ ಮೊಳಗಿತು. ಹಂಸಗಮನದಿಂದ ದ್ರೌಪದಿಯು ನಡೆದುಬಂದು ಪುಷ್ಪಮಾಲೆಯನ್ನು ಅರ್ಜುನನ ಕೊರಳಿಗೆ ಹಾಕಿದಳು. ಕಹಳೆ ಕೊಂಬು ಶಂಖ ಭೇರಿ ಮುಂತಾದ ವಾದ್ಯಗಳು ಮೊಳಗಿದವು. ದ್ರೌಪದಿ ಅರ್ಜುನರು ಶಚೀಂದ್ರರಂತೆ, ರತಿಮನ್ಮಥರಂತೆ, ಉಷಾಸೂರ್ಯರಂತೆ, ಸ್ವಾಹಾಗ್ನಿಯರಂತೆ, ವಿಷ್ಣುಲಕ್ಷ್ಮಿಯರಂತೆ, ಉಮಾಶಂಕರರಂತೆ, ಸೀತಾರಾಮರಂತೆ, ನಳ ದಮಯಂತಿಯರಂತೆ ಶೋಭಿಸಿದರು. ದ್ರೌಪದಿಯ ಕೈಹಿಡಿದು ರಂಗದಿಂದ ಇಳಿಯುತಿದ್ದ ತರುಣನನ್ನು ನೋಡಿ ದ್ರುಪದನು ಸಂತೋಷಪಟ್ಟನು. ಕ್ಷಣಮಾತ್ರ ಸ್ತಂಭಿತರಾದಂತಿದ್ದ ಕ್ಷತ್ರಿಯರೆಲ್ಲ ಈಗ ಕೋಪೋದ್ದೀಪಿತರಾಗಿ ಮೇಲೆದ್ದು ನಿಂತರು. ``ದ್ರುಪದನು ನಮ್ಮನ್ನು ಅವಮಾನಿಸಿದ್ದಾನೆ. ಕ್ಷತ್ರಿಯರಾರೂ ಸ್ಪರ್ಧೆಯಲ್ಲಿ ಗೆಲ್ಲದಿದ್ದರೆ ಅವನ ಮಗಳು ಬ್ರಾಹ್ಮಣನ ಕೈಹಿಡಿಯುವುದರ ಬದಲು ಅಗ್ನಿಪ್ರವೇಶ ಮಾಡಬೇಕಾಗಿತ್ತು. ಈ ಅವಮಾನಕ್ಕಾಗಿ ದ್ರುಪದನನ್ನು ಕೊಲ್ಲೋಣ'' ಎಂದು ಕೂಗತೊಡಗಿದರು. ದ್ರುಪದನು ಇದೆಲ್ಲಕ್ಕೂ ಕಾರಣನಾದ ಬ್ರಾಹ್ಮಣ ತರುಣನ ಕಡೆಗೆ ನೋಡಿದನು. ಅವನು ನಕ್ಕು, ``ಭಯಪಡಬೇಡಿ. ಇವರೆಲ್ಲರನ್ನೂ ನಾನು ನಿವಾರಿಸುವೆನು'' ಎನ್ನುವುದರೊಳಗೆ ಭೀಮನ ಅವನ ಪಕ್ಕದಲ್ಲಿ ಬಂದು ನಿಂತನು. ದ್ರೌಪದಿಯು ಅವರಿಬ್ಬರ ಹಿಂದೆ ನಿಂತಳು. ತುಮುಲಯುದ್ದವಾರಂಭವಾಯಿತು. ಶಲ್ಯ ದುರ್ಯೋಧನ ಶಕುನಿ ಎಲ್ಲರೂ ಸೋಲಲು, ರಾಧೇಯನು ಅವರ ನೆರವಿಗೆ ಬಂದನು. ಅರ್ಜುನನು ಅವನನ್ನೆದುರಿಸಿ ಸೋಲಿಸಿದನು. ಅವನ ಹಸ್ತಕೌಶಲವನ್ನು ಮೆಚ್ಚಿದ ರಾಧೇಯನು, ``ಯಾರು ನಿನು ವಿಪ್ರೋತ್ತಮ? ನನ್ನ ಎದುರು ನಿಲ್ಲಬಲ್ಲವನು ಅರ್ಜುನನೊಬ್ಬನೇ; ಅವನಿಗೆ ಸತ್ತುಹೋಗಿರುವನು. ನೀನೇನು ಇಂದ್ರನೋ, ಭಾರ್ಗವನೋ, ವಿಷ್ಣುವೋ? ನಾನು ಅಂಗರಾಜನಾದ ರಾಧೇಯನು. ನಿನ್ನೆದುರು ನಾನು ಸೋತೆ!'' ಎಂದನು. ಅರ್ಜುನನು, ``ರಾಧೇಯ, ನಾನೊಬ್ಬ ಸಾಮಾನ್ಯ ಬ್ರಾಹ್ಮಣ; ಬ್ರಾಹ್ಮಣನೊಬ್ಬನ ಶಿಷ್ಯ ಅಷ್ಟೆ!'' ಎಂದು ಅಲ್ಲಿಂದ ಹೊರಟನು.ದ್ರೌಪದಿಯೊದಿಗೆ ಪಾಂಡವರು ಕುಂಬಾರನ ಮನೆಯನ್ನು ಸೇರಿದರು. ಹಾಸ್ಯಕ್ಕಾಗಿ ``ಅಮ್ಮ, ಭಿಕ್ಷೆ ತಂದಿರುವೆವು" ಎಂದು ಕೂಗಿ ಹೇಳಿದರು. ಒಳಗಿದ್ದ ಕುಂತಿಯು, "ಎಲ್ಲರೂ ಹಂಚಿಕೊಳ್ಳಿರಿ'' ಎಂದುಬಿಟ್ಟಳು. ಹೊರಗೆ ಬಂದವಳೇ ದ್ರೌಪದಿಯನ್ನು ಕಂಡು ಸ್ತಂಭಿತಳಾದಳು. ಆದರೂ ಸಾವರಿಸಿಕೊಂಡು ದ್ರೌಪದಿಯನ್ನು ಆಲಿಂಗಿಸಿಕೊಂಡು, ನೆತ್ತಿಯನ್ನು ಆಘ್ರಾಣಿಸಿ, ``ಮಗುವೆ, ನಿನಗೆ ನಮ್ಮ ಮನೆಗೆ ಸ್ವಾಗತ'' ಎಂದಳು. ಯುಧಿಷ್ಠಿರನು ನಡೆದುದೆಲ್ಲವನ್ನೂ ವಿವರಿಸಿದನು. ಕುಂತಿಯು ``ಅಯ್ಯೋ, ಮಗನೆ, ನಾನೇನು ಹೇಳಿಬಿಟ್ಟೆ! ನಾನೆಂದೂ ಅನೃತವನ್ನು ನುಡಿದವಳಲ್ಲ. ನನ್ನ ಮಾತಿನ ಪರಿಣಾಮವೇನಾಗುವುದೋ!'' ಎಂದು ಆತಂಕಪಟ್ಟಳು. ಯುಧಿಷ್ಠಿರನು, ``ಅಮ್ಮ, ಚಿಂತಿಸದಿರು. ಏನೂ ಆಗದಂತೆ ನಾನು ನೋಡಿಕೊಳ್ಳುತ್ತೇನೆ'' ಎಂದು ಸಮಾಧಾನ ಹೇಳಿ ಅರ್ಜುನನಿಗೆ ``ನೀನು ಸ್ಪರ್ಧೆಯಲ್ಲಿ ಗೆದ್ದಿರುವೆ; ಇವಳನ್ನು ನೀನು ಮದುವೆಯಾಗು'' ಎನ್ನಲು, ಅರ್ಜುನನು ``ಅಣ್ಣ, ನೀನು ಹಿರಿಯನು. ನೀನೇ ಇವಳನ್ನು ಮದುವೆಯಾಗು. ನಂತರ ಭೀಮನು ಮದುವೆಯಾಗಬೇಕು. ಅನಂತರವೇ ನನ್ನ ಸರದಿ'' ಎಂದುಬಿಟ್ಟನು. ಯುಧಿಷ್ಠಿರನು ಸ್ವಲ್ಪಹೊತ್ತು ಯೋಚಿಸಿ ``ನಾವೆಲ್ಲರೂ ಹಂಚಿಕೊಳ್ಳಬೇಕೆಂದು ತಾಯಿ ಹೇಳಿರುವಳು. ತಾಯಿಯ ಮಾತಿಗಿಂತ ದೊಡ್ಡದೇನಿದೆ? ತಾಯಿಯೇ ನಮ್ಮ ಗುರುವು. ಅವಳ ಮಾತನ್ನು ನಡೆಸೋಣ. ನಾನೆಂದೂ ತಪ್ಪಾಗಿ ಯೋಚಿಸಿದವನೇ ಅಲ್ಲ. ನಿಜಸಂಗತಿಯೆಂದರೆ, ನಾವು ಐವರೂ ಈ ದ್ರೌಪದಿಯನ್ನು ಪ್ರೀತಿಸುತ್ತಿರುವಂತಿದೆ. ಎಲ್ಲರೂ ಒಟ್ಟಿಗೇ ಅವಳನ್ನು ಮದುವೆಯಾಗೋಣ. ಇದರ ಬಗ್ಗೆ ಇನ್ನು ವಾಗ್ವಾದ ಬೇಡವೇ ಬೇಡ" ಎಂದು ತೀರ್ಮಾನ ಕೊಟ್ಟನು.* * * * ಸ್ವಯಂವರವು ಮುಗಿದ ನಂತರ ಕೃಷ್ಣನು ಬಲರಾಮನೊಡಗೂಡಿ ಪಾಂಡವರು ಇಳಿದುಕೊಂಡಿದ್ದ ಕುಂಬಾರನ ಮನೆಗೆ ಬಂದನು. ಈ ಹಿಂದೆ ಅವನು ಅವರನ್ನು ನೋಡಿರಲಿಲ್ಲ. ತಾಯಿಯೊಂದಿಗೆ ಇದ್ದ ಅವರು ಅಗ್ನಿಯಂತೆ ಪ್ರಕಾಶಿಸುತ್ತಿದ್ದರು. ಕುಂತಿಗೂ ಯುಧಿಷ್ಠಿರನಿಗೂ ನಮಸ್ಕರಿಸಿ,``ಅಮ್ಮ,ನಾನು ವಸುದೇವನು ಮಗ ಕೃಷ್ಣ!''ಎನಲು, ಅವರೆಲ್ಲರಿಗೂ ರೋಮಾಂಚನವಾಯಿತು. ದ್ರೌಪದಿಯ ರಂಗಪ್ರವೇಶವನ್ನು ಮಹಾನಾಟಕದ ಮೊದಲನೆಯ ಅಂಕವೆನ್ನಬಹುದಾದರೆ, ಕೃಷ್ಣನು ಪಾಂಡವರನ್ನು ಭೇಟಿಮಾಡಿದ್ದನ್ನು ಎರಡನೆಯ ಅಂಕವೆನ್ನಲು ಅಡ್ಡಿಯಿಲ್ಲ. ಆ ಕ್ಷಣದಲ್ಲಿ ಅವರ ನಡುವೆ ಏರ್ಪಟ್ಟ ಸ್ನೇಹಸಂಬಂಧವು ಅದ್ವಿತೀಯವಾದುದಾಗಿದ್ದಿತು- ಬಹುಶಃ ದುರ್ಯೋಧನ ರಾಧೇಯರುಗಳ ಸ್ನೇಹವೊದನ್ನು ಅದಕ್ಕೆ ಸರಿಸಮನೆನ್ನಬಹುದೇನೋ. ಬಲರಾಮನೂ ಕುಂತಿಗೆ ನಮಸ್ಕರಿಸಿ, ತನ್ನ ಶಿಷ್ಯ ಭೀಮನನ್ನು ಆಲಿಂಗಿಸಿಕೊಡನು. ಅರ್ಜುನ ಕೃಷ್ಣರು ಒಂದೇ ವಯಸ್ಸಿನವರು; ಬಲರಾಮನಿಗಿಂತ ಭೀಮ ಸ್ವಲ್ಪ ಚಿಕ್ಕವನು. ಕೃಷ್ಣನು ನಕ್ಕು, ``ಬೆಂಕಿಯನ್ನು ಮುಚ್ಚಿಡಲಾದೀತೆ? ಇಂದಿನ ಘಟನೆ ನನಗೆ ಪಾಂಡವರನ್ನು ತೋರಿಸಿ ಕೊಟ್ಟಿತು. ಅತ್ತೆ, ಅದಕ್ಕೇ ನಿನ್ನನ್ನು ನೋಡುವುದಕ್ಕೆಂದು ಬಂದೆ. ನೀವು ಅರಗಿನ ಮನೆಯಿಂದ ಪಾರಾದುದು ಬಹು ಸಂತೋಷದ ಸಂಗತಿ. ಇನ್ನೂ ಸ್ವಲ್ಪಕಾಲ ತುಂಬ ಎಚ್ಚರವಾಗಿರಿ. ನೀವು ಯಾರೆಂಬುದು ಕೌರವರಿಗೆ ಗೊತ್ತಾಗಬಾರದು!'' ಎಂದು ತನ್ನ ಬಿಡಾರಕ್ಕೆ ಹಿಂದಿರುಗಿದನು.ದ್ರುಪದನ ದುಃಖ ಹೇಳತಿರದು. ``ಅಯ್ಯೋ, ನಾನು ಏನು ಮಾಡಿಬಿಟ್ಟೆ! ವಿಧಿಯನ್ನು ವಂಚಿಸುವೆನೆಂದುಕೊಂಡೆ. ನನ್ನ ಮಗುವನ್ನು ಅರ್ಜುನನಲ್ಲದೆ ಬೇರಾರೂ ಗೆಲ್ಲಲಾರರೆಂದೇ ನಂಬಿದ್ದೆ. ಸ್ವಯಂವರವನ್ನು ಏರ್ಪಡಿಸದೆ ಅರ್ಜುನನ ಬರವಿಗಾಗಿ ಕಾಯಬೇಕಾಗಿತ್ತು. ಈಗ, ನನ್ನ ಅನರ್ಘ್ಯ ರತ್ನವನ್ನು ತಿಪ್ಪೆಯ ಕುಪ್ಪೆಗೆ ಎಸೆದಂತಾಯಿತು. ಅವಳಿಗಾದ ಈ ಅಪಮಾನವನ್ನು ಸಹಿಸಿ ನಾನು ಹೇಗೆತಾನೆ ಬದುಕೆರಲಿ!'' ಎಂದು ವಿಧವಿಧವಾಗಿ ವಿಲಾಪಿಸಿದನು. ಧೃಷ್ಟದ್ಯುಮ್ನನು ``ಅಪ್ಪಾ, ದುಃಖಿಸಬೇಡ. ಏನೋ ಮಹತ್ತಾದುದು ಸಂಭವಿಸಿದೆ. ಅದನ್ನು ಹೀಗೆಂದು ಹೇಳಲಾರೆ. ನಾನು ಈ ಬ್ರಾಹ್ಮಣರನ್ನು ಹಿಂಬಾಲಿಸಿ ಅವರು ಯಾರೆಂದು ಕಂಡುಹಿಡಿಯುತ್ತೇನೆ. ನನ್ನ ತಂಗಿ ಸುಖವಾಗಿರುವಳೆಂದು ನನಗೆ ನಂಬಿಕೆಯಿದೆ'' ಎಂದನು.ದೂರದಿಂದ ಪಾಂಡವರನ್ನು ಹಿಂಬಾಲಿಸಿದ ಧೃಷ್ಟದ್ಯುಮ್ನನು ಕುಂಬಾರನ ಮನೆಯ ಬಳಿ ಯಾರಿಗೂ ಕಾಣದಂತೆ ಹೊಂಚಿ ನಿಂತು ಒಳಗಿನ ಸಂಭಾಷಣೆ