ಪರಿವಿಡಿ
ಅಸಂಖ್ಯ ಜನರು ಭಾರತದ ಎಲ್ಲಾ ಭಾಷೆಗಳಲ್ಲೂ ಎಲ್ಲಾ ಕಾಲದಲ್ಲೂ ಮಹಾಭಾರತದ ಕಥೆಯನ್ನು ಬರೆದಿದ್ದಾರೆ. ಹೊಸಗನ್ನಡ ಗದ್ಯದಲ್ಲೂ ಅನೇಕ ಅಡಕವಾದ ಸಂಗ್ರಹಗಳಿವೆ. ಮಹಾಭಾರತ ರಾಮಾಯಣಗಳನ್ನು ಬರೆಯುವುದು ಹೊಸ ಸಾಹಿತ್ಯ ಬರೆದಂತಲ್ಲ; ಅದರಲ್ಲಿ ಬರೆಯುವವನ ಮೂಲದ್ರವ್ಯ ಏನೂ ಇರುವುದಿಲ್ಲ, ಇರಬಾರದು. ಅದು ಮನಸ್ಸಿನ ಪರಿಪಕ್ವತೆ ಸಂಪಾದಿಸುವ ಒಂದು ಪ್ರಯತ್ನ; ತಾಯಿ ಮಗುವಿಗೆ ಕಥೆ ಹೇಳುವ ಹಾಗಿನ, ಹಿರಿಯನೆನ್ನಿಸಿಕೊಂಡವನ ಒಂದು ಕರ್ತವ್ಯ. 1965ರಷ್ಟು ಹಿಂದೆಯೇ ಕಮಲಾ ಸುಬ್ರಮಣ್ಯಂ ಅವರು ಇಂಗ್ಲೀಷಿನಲ್ಲಿ ಬರೆದ ಮಹಾಭಾರತವನ್ನು ಓದಿ ಪ್ರಭಾವಿತನಾಗಿದ್ದ ನಾನು ಈ ಕಥಾಸಂಗ್ರಹದಲ್ಲಿ ಅವರ ಮಾರ್ಗವನ್ನೇ ಅನುಸರಿಸಿ ಘಟನಾವಳಿಗಳ ಕೌತುಕತೆಗೆ, ಭಾವತೀವ್ರತೆಗೆ, ಮನಮುಟ್ಟುವ ಅಂಶಗಳಿಗೆ ಒತ್ತುಕೊಡಲು ಯತ್ನಿಸಿದ್ದೇನೆ.