ಪರಿವಿಡಿ

This book is available at Ramakrishna Ashrama, Mysore.

ದ್ರೋಣಪರ್ವ

ಯುದ್ಧದ ಹನ್ನೊಂದನೆಯ ದಿನದ ಬೆಳಗು ಕೌರವರಿಗೆ ಘೋರವಾಗಿತ್ತು. ತಮ್ಮ ಏಕೈಕ ಆಶೋತ್ತರವಾಗಿದ್ದ ಭೀಷ್ಮನನ್ನು ಅವರು ಕಳೆದುಕೊಡಿದ್ದರು. ಭೀಷ್ಮನಿಲ್ಲದ ಕೌರವಸೇನೆ ನಕ್ಷತ್ರಗಳಿಲ್ಲದ ಆಕಾಶದಂತೆ, ಹಸಿರು ಇಲ್ಲದ ಭೂಮಿಯಂತೆ ಪದಲಾಲಿತ್ಯವಿಲ್ಲದ ಮಾತಿನಂತೆ, ಬೇಸಿಗೆಯಲ್ಲಿ ಒಣಗಿಹೊಂದ ನದಿಯಂತೆ ಕಳಾಹೀನವಾಗಿತ್ತು. ನಿರಾಶರಾಗಿದ್ದ ಕೌರವರು ಈಗ ರಾಧೇಯನಲ್ಲಿ ಭರವಸೆ ಇಟ್ಟುಕೊಳ್ಳಬೇಕಾಯಿತು. ರಾಧೇಯನು ತನ್ನ ಡೇರೆಯಲ್ಲಿ ಯುದ್ಧಕ್ಕಾಗಿ ಸಿದ್ದನಾಗುತ್ತಿದ್ದ. ದುರ್ಯೋಧನನಿಗೆ ತಾನು ಕೊಟ್ಟ ಮಾತನ್ನು ನಡೆಸಬೇಕಾದ ಕಾಲ ಬಂದಿದೆ. ಭೀಷ್ಮಪಿತಾಮಹ ಬಿದ್ದುಹೋದ ಮೇಲೆ ಎಲ್ಲ ಮುಗಿದಂತೆಯೇ. ಅಪ್ರತಿಮ ಗುಣಶಾಲಿಯಾದ ಅವನು, ತಾನು ಏತಕ್ಕಾಗಿ ಈ ಭೂಮಿಯಲ್ಲಿ ಹುಟ್ಟಿದನೋ ಆ ಉದ್ದೇಶವನ್ನು ನೆರವೇರಿಸಿದ; ಈಗ ವಸುಗಳನ್ನು ಸೇರಿಕೊಳ್ಳಲು ಸಮಯ ಕಾಯುತ್ತಿದ್ದಾನೆ. ಪ್ರಪಂಚದ ಕೊನೆ ಹತ್ತಿರಬಂದಿದೆ. ಕೌರವರಿಗಿನ್ನು ಉಳಿಗಾಲವಿಲ್ಲ. ತಾನೇ ಅವರನ್ನು ಹೇಗಾದರೂ ಸಮಾಧಾನಪಖಿಸಬೇಕು. ಹೀಗೆಂದುಕೊಳ್ಳುತ್ತಿರುವಷ್ಟರಲ್ಲಿ ದುರ್ಯೋಧನಾದಿಗಳು ಬಂದರು. ಮಿತ್ರರಿಬ್ಬರೂ ಭೀಷ್ಮನನ್ನು ನೆನೆಸಿಕೊಂಡು ಮತ್ತೊಮ್ಮೆ ಅತ್ತರು. ರಾಧೇಯನು, ``ದುರ್ಯೋಧನ, ಯಾವುದೂ ಶಾಶ್ವತವಲ್ಲದ ಈ ಪ್ರಪಂಚದಲ್ಲಿ ಏನನ್ನು ನೆಮ್ಮಿಕೊಳ್ಳೋಣ? ವೀರರಾದ ನಮ್ಮ ಕಣ್ಣೆದುರಿಗೇ ಭೀಷ್ಮ ಬಿದ್ದುಹೋದ. ಹಾಗೆಂದು ಕರ್ತವ್ಯವನ್ನು ಮರೆಯುವುದಕ್ಕಾಗುತ್ತದೆಯೆ? ನಾನು ನಿನಗಾಗಿ ಪ್ರಾಣವನ್ನು ಪಣವಾಗಿಟ್ಟು ಹೋರಾಡುವೆ. ಲೋಕದ್ದಲ್ಲಿ ಕೀರ್ತಿಯೊಂದನ್ನು ಬಿಟ್ಟು ಎಲ್ಲವೊ ನಾಶವಾಗತಕ್ಕವೇ! ಮುಂದೇನಾದೀತು ಎಂಬುದನ್ನು ಯೋಚಿಸದೆ ಯುದ್ದ ಮಾಡೋಣ" ಎಂದನು. ದುರ್ಯೋಧನನು ತಾನೂ ಸಿದ್ಧನಾಗಲು ಹೋದನು.ರಾಧೇಯನು ಭೀಷ್ಮನ ಬಳಿಗೆ ಹೋಗಿ ಕೈಮುಗಿದುಕೊಂಡು, ``ಅಜ್ಜ, ನಾನು ರಾಧೇಯ. ಪಾಂಡವರೊಡನೆ ಇಂದು ನನ್ನ ಮೊದಲನೆಯ ಹೋರಾಟ. ನಿನ್ನ ಮೇಲ್ಪಂಕ್ತಿಯಂತೆಯೇ ಯಜ್ಞವನ್ನು ಮುಂದುವರೆಸಿಕೊಂಡು ಹೋಗುತ್ತೇನೆ. ನೀನು ದುರ್ಯೋಧನನಿಗಾಗಿ ಪ್ರಾಣ ಬಿಡುತ್ತಿರುವಂತೆಯೇ ನಾನೂ ಬಿಡುತ್ತೇನೆ. ದಯವಿಟ್ಟು ನನ್ನನ್ನು ಹರಸು" ಎನ್ನಲು ಭೀಷ್ಮನು ``ನೀನೇ ಈಗ ದುರ್ಯೋಧನನ ಏಕೈಕ ಭರವಸೆಯಾಗಿದ್ದೀಯೆ. ಕೈಲಾದಷ್ಟು ಹೋರಾಡು. ನಿನ್ನ ಕೀರ್ತಿ ಲೋಕೋತ್ತರವಾಗಿರಲಿ ಎಂದು ನಾನು ಹರಸುವೆ. ರಣರಂಗವೇ ನಿನಗೆ ತಾಯಿಯ ಮಡಿಲು. ನಿನಗೆ ಪುನರ್ಜನ್ಮವಿಲ್ಲ" ಎಂದನು. ರಾಧೇಯನು ಭೀಷ್ಮನ ಪಾದಧೂಳಿಯನ್ನು ಶಿರಸ್ಸಿನಲ್ಲಿ ಧರಿಸಿ ರಥವನ್ನು ಹತ್ತಿ ವೈಭವದಿಂದ ಹೊರಟನು. ಅವನನ್ನು ನೋಡಿದ ಕೌರವರೆಲ್ಲ ತಮ್ಮ ದುಃಖವನ್ನು ಮರೆತು ಉತ್ಸಾಹಿತರಾದರು. ದುರ್ಯೋಧನನು. ``ರಾಧೇಯ. ಈಗ ನಿನ್ನ ಸಲಹೆ ಏನು? ನಾವೀಗ ಸೇನಾಪತಿಯೊಬ್ಬನನ್ನು ಆರಿಸಬೇಕಾಗಿಗೆ. ಯಾರು ಈ ಹೊಣೆಯನ್ನು ಹೊರಬಲ್ಲರು?" ಎನ್ನಲು ರಾಧೇಯನು``ನಿನಗಾಗಿ ಇಲ್ಲಿ ನೆರೆದಿರುವ ವೀರರೆಲ್ಲರೂ ಸೇನಾಪತಿಯ ಹೊಣೆಯನ್ನು ಹೊರಬಲ್ಲವರೇ. ಶೌರ್ಯ ಧೈರ್ಯಗಳಲ್ಲಿ ಒಬ್ಬರಿಗಿಂತ ಒಬ್ಬರು ಮಿಗಿಲು. ಆದರೆ ಯಾರಿಗೆ ಸೇನಾಪತ್ಯವನ್ನು ವಹಿಸಿದರೂ ಉಳಿದವರಿಗೆ ಅಸಮಾಧಾನವಾಗುವುದು ಆದ್ದರಿಂದ ನಿನ್ನ ಗುರುವಾದ ದ್ರೋಣಾಚಾರ್ಯನು ಸೇನಾಪತಿಯಾಗಿರಲಿ. ಭೀಷ್ಮನ ಸ್ಥಾನವನ್ನು ತುಂಬಲು ಆತನೇ ಯೋಗ್ಯನಾದವನು" ಎಂದನು. ರಾಧೇಯನ ಬುದ್ಧಿವಂತಿಕೆ ದುರ್ಯೋಧನನಿಗೆ ಇಷ್ಟವಾಯಿತು. ಅದರಂತೆ ದ್ರೋಣನ ಬಳಿಗೆ ಹೋಗಿ, ``ಆಚಾರ್ಯ ನೀನೂ ನಮ್ಮಜ್ಜನಂತೆಯೇ ನಮಗೆಲ್ಲರಿಗೂ ಪ್ರೀತಿ ಪಾತ್ರನು. ಅವನ ಸ್ಥಾನವನ್ನು ಈಗ ನೀನು ತುಂಬಿ ನಮಗೆ ಸಂತೋಷ ತಂದುಕೊಡಬೇಕು, ಸೇನಾಪತಿಯಾಗಿ ನಮ್ಮನ್ನು ಮುನ್ನಡೆಸಬೇಕು" ಎಂದನು ದ್ರೋಣನು ಸಂತೋಷದಿಂದ, ``ಹಾಗೆಯೇ ಆಗಲಿ!'" ಎಂದು ಒಪ್ಪಲು, ಅವನಿಗೆ ಅವಭೃಥ ಸ್ನಾನಮಾಡಿಸಿದರು. ದ್ರೋಣನ ಮುಂದಾಳ್ತನದಲ್ಲಿ ಕೌರವ ಸೇನೆಯು ಉತ್ಸಾಹದಿಂದ ಹೊರಟಿತು.ದ್ರೋಣನು ಸೇನೆಯನ್ನು ಶಕಟವ್ಯೂಹದಲ್ಲಿ ನಿಲ್ಲಿಸಿದನು. ಪ್ರಥಮಬಾರಿಗೆ ರಣರಂಗಕ್ಕೆ ಬಂದ ರಾಧೇಯನು ಮುಂದೆಯೇ ರಾಹುಮುಕ್ತನಾದ ಸೂರ್ಯನಂತೆ ಶೋಭಿಸುತ್ತಿದ್ದನು. ಅವನು ಯುದ್ಧಕ್ಕೆ ಬಂದುದರಿಂದ ಕೌರವರಿಗೆ ಹೊಸ ಭರವಸೆ ಮೂಡಿತ್ತು. ಪಾಂಡವರು ತಮ್ಮ ಸ್ಯೆನ್ಯವನ್ನು ಮತ್ತೊಮ್ಮೆ ಕ್ರೌಂಚವ್ಯೂಹದಲ್ಲಿ ನಿಲ್ಲಿಸಿದರು. ರಂಗಕ್ಕಿಳಿಯುವ ಮೊದಲು ದ್ರೋಣನು ದುರ್ಯೋಧನನಿಗೆ, ``ನಿನ್ನ ಪ್ರೀತ್ಯರ್ಥವಾಗಿ ಏನಾದರೊಂದನ್ನು ಮಾಡಬೇಕು ಎನಿಸುತ್ತಿದೆ. ನಿನಗೆ ಏನು ಬೇಕು ಕೇಳು" ಎನ್ನಲು ಅವನು ಸ್ವಲ್ಪ ಯೋಚಿಸಿ, ``ಆಚಾರ್ಯ, ಯುಧಿಷ್ಠಿರನನ್ನು ಜೀವಸಹಿತ ಸೆರೆಹೆಡಿದು ಕರೆತಂದರೆ ನನಗೆ ಸಂತೋಷವಾಗುತ್ತದೆ!"ಎಂದನು. ದ್ರೋಣನು, ``ನೀನು ಅವನನ್ನು ಮೋಸದಿಂದ ಕೊಲ್ಲಲು ಹವಣಿಸುತ್ತಿಲ್ಲ ತಾನೆ? ಸಾಧ್ಯವಾದರೆ ಅವನನ್ನು ಯುದ್ಧದಲ್ಲಿ ಕೊಲ್ಲು. ಆದರೆ ಮೋಸಮಾಡಿ ಕೊಲ್ಲುವುದಕ್ಕೆ ನಾನು ಒಪ್ಪುವುದಿಲ್ಲ" ಎನ್ನಲ್ಲು, ದುರ್ಯೋಧನನು ನಕ್ಕು ``ಹಾಗೆ ತಿಳಿಯದಿರಿ. ನಾನು ಯುಧಿಷ್ಠಿರನನ್ನೇನಾದರೂ ಕೊಂದರೆ, ಮರುಕ್ಷಣವೇ ಅರ್ಜುನನು ನಮ್ಮೆಲ್ಲರನ್ನೂ ಕೊಲ್ಲುವನು. ನಾವೇ ಪಾಂಡವರನ್ನೂ ಕೊಂದರೂ, ಕೃಷ್ಣನು ಆಯುಧಪಾಣಿಯಾಗಿ ನಮ್ಮನ್ನು ನಾಶಮಾಡುವನು. ಇದರಲ್ಲಿ ಸಂಶಯವಿಲ್ಲ. ಯುಧಿಷ್ಠಿರನು ಕೈಗೆ ಸಿಕ್ಕರೆ ಇನ್ನೂ ಒಮ್ಮೆ ದ್ಯೂತವಾಡೋಣವೆಂದು ಆಸೆ. ಸೋಲಿಸಿದರೆ ಮತ್ತೊಮ್ಮೆ ವನವಾಸಕ್ಕೆ ಕಳಿಸಬಹುದಲ್ಲ!ಅದಕ್ಕಾಗಿ ಕೇಳಿದೆ" ಎಂದನು. ದ್ರೋಣನು ಸ್ವಲ್ಪ ಯೋಚಿಸಿ, ``ಹಾಗೆಯೇ ಆಗಲಿ! ಅರ್ಜುನನು ಹತ್ತಿರದಲ್ಲಿಲ್ಲದಿದ್ದರೆ ಯುಧಿಷ್ಠಿರನನ್ನು ಸೆರೆಹಿಡಿಯುತ್ತೇನೆ. ಅರ್ಜುನನನ್ನು ಮಾತ್ರ ನಾನು ಸೋಲಿಸಲಾರೆ. ನನ್ನ ಶಿಷ್ಯನಾದರೂ ಅವನು ಈಗ ನನಗಿಂತ ಮಿಗಿಲಾಗಿರುವನು" ಎಂದನು. ಇದನ್ನು ಗೂಢಚಾರರಿಂದ ತಿಳಿದ ಅರ್ಜುನನಿಗೆ ದುರ್ಯೋಧನನ ನೀಚ ಕೋರಿಕೆಗೆ ದ್ರೋಣನು ಒಪ್ಪಿದ್ದು ಕೋಪವನ್ನು ಉಂಟುಮಾಡಿತು. ಯುದ್ಧದಲ್ಲಿ ಎಂತಹ ಸಂದರ್ಭ ಒದಗಿದರೂ ತಾನು ಯುಧಿಷ್ಠಿರನ ಬಳಿಯಿಂದ ದೂರ ಹೋಗುವುದಿಲ್ಲ ಎಂದುಕೊಂಡನು.* * * * ಯುದ್ದವು ಆರಂಭವಾಯಿತು. ದ್ರೋಣನ ಸೇನಾನಾಯಕತ್ವದಲ್ಲಿ ದ್ರೋಣ-ಧೃಷ್ಟದ್ಯುಮ್ನ, ಸಹದೇವ-ಶಕುನಿ, ವಿವಿಂಶತಿ - ಭೀಮ, ಭೂರಿಶ್ರವಸ್-ಶಿಖಂಡಿ, ಘಟೋತ್ಕಚ-ಆಲಂಬುಷ ಮುಂತಾದವರ ಅನೇಕಾನೇಕ ದ್ವಂದ್ವಗಳು ಏರ್ಪಟ್ಟವು. ಭೀಮನು ಅನಾಯಾಸವಾಗಿ ವಿವಿಂಶತಿಯನ್ನು ಸೋಲಿಸಿದನು. ಘಟೋತ್ಕಚ-ಆಲಂಬುಷ ಮಾಯಾಯುದ್ಧವು ನೋಡುವಂತಿದ್ದಿತು. ರಾಧೇಯನು ಮೊದಲು ಎದುರಿಸಿದುದು ವಿರಾಟನನ್ನು. ಅಭಿಮನ್ಯುವು ಇಂದು ಅನೇಕರೊಡನೆ ದ್ವಂದ್ವಯುದ್ಧ ಮಾಡಿದನು. ಅಭಿಮನ್ಯುವಿನ ಉಪಟಳ ಸಹಿಸದೆ ಕೋಪಗೊಡ ಶಲ್ಯನು ರಥದಿಂದಿಳಿದು ಗದಾಧಾರಿಯಾಗಿ ಅವನೆಡೆಗೆ ಬರಲು, ಭೀಮನು ರಕ್ಷಣೆಗೆ ಧಾವಿಸಿ ಬಂದನು. ಭೀಮನಿಗೂ ಶಲ್ಯನಿಗೂ ರೋಮಾಂಚಕವಾದ ಗದಾಯುದ್ದವು ನಡೆಯಿತು. ಶಲ್ಯನು ಕೊನೆಗೆ ಸೋತು ಹಿಮ್ಮೆಟ್ಟಲು, ಕೃತವರ್ಮನು ಬಂದು ಅವನನ್ನು ಕರೆದುಕೊಂಡು ಹೊರಟುಹೋದನು.ಇಂದು ಧೂಮಕೇತುವಿನಂತೆ ಉದಯಿಸಿ ಬಂದವನು ರಾಧೇಯನ ಮಗ ವೃಷಸೇನ. ನಕುಲನ ಮಗ ಶತಾನೀಕನು ಅವನನ್ನು ಎದುರಿಸಿದನು. ದ್ರೌಪದಿಯ ಇತರ ಮಕ್ಕಳು ಅವನ ನೆರವಿಗೆ ಬಂದರು. ವೃಷಸೇನನಿಗೆ ಅಶ್ವತ್ಥಾಮನು ನೆರವಾದನು. ಭೀಮ ಅಭಿಮನ್ಯು ಸಾತ್ಯಕಿ ಮುಂತಾದ ಪಾಂಡವವೀರರಿಂದಾಗಿ ಕೌರವ ಸೇನೆಯು ಇಂದು ತುಂಬ ನಷ್ಟಕ್ಕೆ ಒಳಗಾಯಿತು.ಇಷ್ಟರಲ್ಲಿ ಯುಧಿಷ್ಠಿರನ ಬಳಿಯಲ್ಲಿ ಅರ್ಜುನನು ಇಲ್ಲದಿರುವುದು ದ್ರೋಣನ ಗಮನಕ್ಕೆ ಬಂದಿತು. ಅವನು ರಥವನ್ನು ವಾಯುವೇಗದಿಂದ ಯುಧಿಷ್ಠಿರನಿದ್ದಲ್ಲಿಗೆ ಓಡಿಸಿದನು. ತನ್ನನ್ನು ದಾರಿಯಲ್ಲಿ ತೆಡೆಯಲೆತ್ನಿಸಿದ ವೀರರೆಲ್ಲರನ್ನೂ ಬಾಣಗಳಿಂದ ನಿವಾರಿಸಿಕೊಂಡನು. ಇದ್ದಕ್ಕಿದ್ದಂತೆ ಹೋಗಿ ಯುಧಿಷ್ಠಿರನನ್ನು ಎದುರಿಸಿದನು. ಯುಧಿಷ್ಠಿರನನು ಎಷ್ಟು ವೀರಾವೇಶದಿಂದ ಕಾದಿದರೂ ದ್ರೋಣನನ್ನು ಹಿಮ್ಮೆಟ್ಟಿಸಲಾಗಲಿಲ್ಲ. ಅಷ್ಟರಲ್ಲಿ ಧೃಷ್ಟದ್ಯುಮ್ನನು ಯುಧಿಷ್ಠಿರನ ಸಹಾಯಕ್ಕೆ ಬಂದನು. ಅವನನ್ನು ಸೋಲಿಸುವಷ್ಟರಲ್ಲಿ ಅಲ್ಲಿಗೆ ಬಂದ ಶಿಖಂಡಿ, ಉತ್ತಮೌಜಸ್, ಸಾತ್ಯಕಿ, ವಿರಾಟ, ದ್ರೌಪದಿಯ ಮಕ್ಕಳು ಎಲ್ಲರನ್ನೂ ದ್ರೋಣನು ಸೋಲಿಸಿದನು. ಅಷ್ಟರಲಿ ಕೃಷ್ಣನು ಮಹಾವೇಗದಿಂದ ಅರ್ಜುನನ ರಥವನ್ನು ಓಡಿಸಿಕೊಂಡು ಅಲ್ಲಿಗೆ ಬಂದನು. ದುರ್ಯೋಧನನ ಪ್ರೀತಿಗಾಗಿ ಯುಧಿಷ್ಠಿರನನ್ನು ಸೆರೆಹಿಡಿಯುವಂಥ ನೀಚ ಕೆಲಸಕ್ಕಾಗಿ ಬಂದಿರುವ ದ್ರೋಣನನ್ನು ಗುರುವೆಂದೂ ನೋಡದೆ ಅರ್ಜುನನು ತನ್ನ ಬಾಣವರ್ಷದಿಂದ ಮುಚ್ಚಿದನು. ಹದಿನಾಲ್ಕು ವರ್ಷಗಳ ಹಿಂದಿನ ದ್ಯೂತದ ಘೋರವನ್ನೇ ಇನ್ನೂ ಯಾರೂ ಮರೆಯದಿರುವಾಗ, ಈ ದ್ರೋಣನು ಇನ್ನೊಮ್ಮೆ ದ್ಯೂತವಾಡಿಸುವುದಕ್ಕಾಗಿ ಯುಧಿಷ್ಠಿರನನ್ನು ಸೆರೆಹಿಡಿಯಲು ಬಂದಿದ್ಧಾನೆ! ನೆನ್ನೆಯಷ್ಟೇ ಅಜ್ಜ ಭೂಮಿಗುರುಳಿರುವಾಗ, ಇಂದು ಈ ದುರ್ಯೋಧನ ತನ್ನ ನೀಚ ಬುದ್ದಿಯನ್ನು ಪ್ರದರ್ಶಿಸುತ್ತಿದ್ದಾನೆ! ಅರ್ಜುನನು ಮಹಾಕೋಪದಿಂದ ದ್ರೋಣನ ಮೇಲೆ ಯುದ್ಧಮಾಡಿದನು. ದ್ರೋಣನಿಗೆ ಸಿಕ್ಕಿದ ಅವಕಾಶ ತಪ್ಪಿಹೋದಂತಾಯಿತು. ಸೋತು ಹಿಮ್ಮೆಟ್ಟಿದನು.ಸೂರ್ಯಾಸ್ತವಾಗುತ್ತಿತ್ತು. ಯಾರಿಗೂ ಅದರ ಮೇಲೆ ಗಮನವಿರಲಿಲ್ಲ. ಎರಡು ಕಡೆಯವರೂ ಸೈನ್ಯಗಳನ್ನು ಹಿಂತೆಗೆದುಕೊಂಡಿದ್ದರು. ಅರ್ಜುನನ ಮುಖ ಅವಮಾನದಿಂದ ಕೆಂಪಾಗಿತ್ತು. ತನ್ನ ಪ್ರೀತಿಯ ಗುರು ಹೀಗೆ ಮಾಡುವನೆಂದು ಅವನೆಂದೂ ಭಾವಿಸಿರಲಿಲ್ಲ. ದ್ರೋಣನ ಮೊದಲನೆಯ ದಿನ ಹೀಗೆ ಶಿಷ್ಯನಿಂದಾದ ಮುಖಭಂಗದಿಂದ ಕೊನೆಗೊಂಡಿತು.* * * * ಕೌರವಪಾಳೆಯದಲ್ಲಿ ದುರ್ಯೋಧನನು ಎಂದಿನಂತೆ ಅತೃಪ್ತಿಯಿಂದ ನಿಡುಸುಯ್ಯುತ್ತಿದ್ದನು. ಎಲ್ಲರ ಸಮ್ಮುಖದಲ್ಲಿ ದ್ರೋಣನನ್ನು ಕುರಿತು, ``ಆಚಾರ್ಯ, ನೀನೇ ನೀನಾಗಿ ನನ್ನ ಸಂತೋಷಾರ್ಥವಾಗಿ ಯುಧಿಷ್ಠಿರನನ್ನು ಸೆರೆಹಿಡಿಯುತ್ತೆನೆ ಎಂದೆ. ನಿನಗೆ ಈ ಹೊತ್ತು ಅವಕಾಶ ಸಿಕ್ಕಿದ್ದರೂ ನೀನು ಬಳಸಿಕೊಳ್ಳಲಿಲ್ಲ" ಎಂದನು. ದ್ರೋಣನಿಗೆ ಬೇಸರವಾಯಿತು. ಅವನ್ನು, ``ನಾನು ಹೇಳಿದ್ದು ನಿಜ; ಆದರೆ ಅರ್ಜುನನು ಬಳಿಯಲ್ಲಿಲ್ಲದಿದ್ದರೆ ಮಾತ್ರ ಎಂದೂ ಹೇಳಿದ್ದೆ. ಯುಧಿಷ್ಠಿರನನ್ನು ಹೆಚ್ಚುಕಡಿಮೆ ಸೆರೆಸಿಕ್ಕಿಸಿದ್ದೆ; ಅಷ್ಟರಲ್ಲಿ ಅರ್ಜುನ ಬಂದೇಬಿಟ್ಟ. ಅವನನ್ನು ಸೋಲಿಸುವುದು ನನಗೆ ಸಾಧ್ಯವಾಗಾಲಿಲ್ಲ. ಇನ್ನೊಮ್ಮೆ ಅರ್ಜುನನನ್ನು ದೂರಮಾಡಿದರೆ, ಖಂಡಿತ ಹಿಡಿಯುತ್ತೆನೆ" ಎಂದನು. ಆಗ ಅಲ್ಲಿದ್ದ ತ್ರಿಗರ್ತರ ಸುಶರ್ಮನು, ``ಅರ್ಜುನನ ಮೇಲೆ ನಮಗೆ ಹಳೆಯ ದ್ವೇಷವುಂಟು. ನಾವೀಗ ಸೇಡು ತೀರಿಸಿಕೊಳ್ಳಬಹುದೆಂದು ಕಾಣುತ್ತದೆ. ಆಚಾರ್ಯನ ಸಲಹೆ ನಮಗೆ ಆಕರ್ಷಕವಾಗಿದೆ. ನಾಳೆ ನಾವು ಅವನನ್ನೆದುರಿಸಿ ರಣರಂಗದ ದಕ್ಷಿಣಕ್ಕೆ ಹೇಗಾದರೂ ಕರೆದೊಯ್ಯುತ್ತೇವೆ. ಅವನೊಂದಿಗೆ ಹೋರುತ್ತಾ ಕಾಲಹರಣ ಮಾಡುತ್ತೇವೆ. ಅಷ್ಟರಲ್ಲಿ ಆಚಾರ್ಯನು ಯುಧಿಷ್ಠಿರನನ್ನು ಸೆರೆಹಿಡಿಯಬಹುದು" ಎಂದನು.ತ್ರಿಗರ್ತ ಸೋದರರೆಂದರೆ ಸುಶರ್ಮ, ಸತ್ಯರಥ, ಸತ್ಯವರ್ಮ, ಸತ್ಯಾಶು ಮತ್ತು ಸತ್ಯಧರ್ಮ ಎಂಬ ಐವರು. ಅವರು, ``ಅರ್ಜುನನನ್ನು ಕೊಲ್ಲುತ್ತೇವೆ ಇಲ್ಲವೇ ಅವನಿಂದ ಕೊಲ್ಲಲ್ಪಡುತ್ತೇವೆ; ಪ್ರತಿಜ್ಞೆ ಪೂರೈಸಿಕೊಳ್ಳದೆ ರಣರಂಗದಿಂದ ಹಿಂದಿರುಗುವುದಿಲ್ಲ" ಎಂದು ಅಗ್ನಿಯ ಮುಂದೆ ಶಪಥ ಮಾಡಿದುದರಿಂದ ಅವರಿಗೆ ಸಂಶಪ್ತಕರು ಎಂದೂ ಹೆಸರು.ಯುದ್ಧದ ಹನ್ನೆರಡನೆಯ ದಿನ ಬೆಳಗಾಯಿತು. ಕೌರವರು ಸೈನ್ಯವನ್ನು ಗರುಡವ್ಯೂಹದಲ್ಲಿ ನಿಲ್ಲಿಸಿದರು. ಪಾಂಡವ ಸೈನ್ಯವು ಅರ್ಧಚಂದ್ರಾಕೃತಿಯಲ್ಲಿ ನಿಂತಿತು. ಬಿಸಿಲೇರುವುದರೊಳಗೇ ಸಂಶಪ್ತಕರು ಮುಂದೆ ಬಂದು ಆರ್ಜುನನೊಡನೆ ಸೆಣೆಸತೊಡಗಿದರು. ಅರ್ಜುನನಿಗೆ ಏನೂ ತೋರದಂತಾಯಿತು. ಈ ಸೆಣೆಸಾಟ ಉದ್ದೇಶಪೂರ್ವಕವಾಗಿ ತನ್ನನ್ನು ದೂರ ಕರೆದೂಯ್ಯುವುದಕ್ಕಾಗಿಯೇ ಎಂದು ಅವನಿಗೆ ಅರಿವಾಯಿತು. ನಿನ್ನೆ ಹೆಚ್ಚುಕಡಿಮೆ ದ್ರೋಣನ ಪ್ರಯತ್ನ ಸಫಲವಾಗುವುದರಲ್ಲಿತ್ತು. ಸೆಣೆಸಾಟವನ್ನು ಕ್ಷತ್ರಿಯನಾದವನು ಬೇಡವೆನ್ನುವಂತಿಲ್ಲ. ಯುಧಿಷ್ಠಿರನ ಬಳಿ ಬಂದು, ``ತ್ರಿಗರ್ತರು ಯುದ್ದಕ್ಕಾಗಿ ಆಹ್ವಾನಿಸುತ್ತಿದ್ದಾರೆ. ಹೋಗದಿದ್ದರೆ ಲೋಕವು ನನ್ನನ್ನು ಹೇಡಿ ಎನ್ನುವುದು. ಅಣ್ಣ, ನಿನ್ನನ್ನು ಬಿಟ್ಟುಹೋಗಲು ಮನಸ್ಸು ಬಾರದು. ಆದರೂ ನಿರ್ವಾಹವಿಲ್ಲ" ಎನ್ನಲು, ಯುಧಿಷ್ಠಿರನು ``ಅರ್ಜುನ, ದ್ರೋಣನು ದುರ್ಯೋಧನನಿಗೆ ಕೊಟ್ಟಿರುವ ವಚನವನ್ನು ಕೇಳಿರುವೆಯಲ್ಲವೆ? ಅದನ್ನು ಸುಳ್ಳುಮಾಡುವುದು ನಿನ್ನ ಕೆಲಸ. ನೀನು ತ್ರಿಗರ್ತರೊಂದಿಗೆ ಹೋರಾಡು. ಇಂದು ಈ ಸೋದರರ ಕೊನೆಯ ದಿನ. ಆದರೆ ನೀನು ನನ್ನ ರಕ್ಷಣೆಗೆ ಸರಿಯಾದ ಏರ್ಪಾಡುಮಾಡು. ನನ್ನ ಸೆರೆಯಾಗದಂತೆ ನೋಡಿಕೋ" ಎಂದನು. ಅರ್ಜುನನು. ``ಅಣ್ಣ, ಆತಂಕಪಟ್ಟುಕೊಳ್ಳಬೇಡ. ದ್ರುಪದನ ಸೋದರ, ಈ ಸತ್ಯಜಿತ್ ನಿನ್ನನ್ನು ರಕ್ಷಿಸುತ್ತಿರುತ್ತಾನೆ. ಅವನು ಬದುಕಿರುವವರೆಗೆ ನಿನ್ನನ್ನು ಯಾರೂ ಮುಟ್ಟ ಲಾರರು. ಅವನು ಸತ್ತರೆ, ನೀನು ಹೇಡಿಯಂತೆ ನಟಿಸುತ್ತ ರಣರಂಗದಿಂದ ಓಡಿಹೋಗಬೇಕು; ದ್ರೋಣನಿಗೆ ಸೆರೆಸಿಕ್ಕಬಾರದು. ಇದು ನನ್ನ ಕೋರಿಕೆ" ಎನ್ನಲು, ಯುಧಿಷ್ಠಿರನು ಹಾಗೆಯೇ ಆಗಲೆಂದು ಅರ್ಜುನನನ್ನು ಆಶೀರ್ವದಿಸಿ ತ್ರಿಗರ್ತರೊಂದಿಗೆ ಹೋರಾಡಲು ಕಳುಹಿಸಿಕೊಟ್ಟನು.* * * * ಅರ್ಜುನನ ಶ್ವೇತಾಶ್ವಗಳು ದಕ್ಷಿಣದ ಕಡೆಗೆ ದೌಡಾಯಿಸಿದುದನ್ನು ದುರ್ಯೋಧನನ ಕಡೆಯವರು ನೋಡಿ ದ್ರೋಣನ ಉಪಾಯ ಫಲಿಸುವುದು ಎಂದುಕೊಂಡರು. ಎರಡು ಸೈನ್ಯಗಳೂ ಯುದ್ಧವಾರಂಭಿಸಿದವು. ರಣರಂಗದ ದಕ್ಷಿಣದಲ್ಲಿ ತ್ರಿಗರ್ತರು ತಮ್ಮ ಸೈನ್ಯವನ್ನು ಅರ್ಧ ಚಂದ್ರಾಕೃತಿಯಲ್ಲಿ ನಿಲ್ಲಿಸಿದ್ದರು. ಅದರ ಜೊತೆಗೆ ಅರ್ಜುನನು ಏಕಾಂಗಿಯಾಗಿ ಹೋರಾಡಬೇಕಾಗಿತ್ತು. ತ್ರಿಗರ್ತರೇನೂ ಸಾಮಾನ್ಯರಲ್ಲ; ಮಹಾವೀರರು. ಅವರ ಬಳಿಗೆ ಹೋಗುತ್ತಿದ್ದಂತೆಯೇ ಅರ್ಜುನನು ತನ್ನ ದೇವದತ್ತ ವನ್ನು ತೆಗೆದು ಊದಿದನು. ಅವರ ಬಾಣಗಳು ಇವನಿಗೆ ಸ್ವಾಗತ ಹಾಡಿದವು. ತುಂಬ ಹೊತ್ತು ಘೋರಯುದ್ದವು ನಡೆಯಿತು. ಕೃಷ್ಣಾರ್ಜುನರಿಬ್ಬರೂ ಬಾಣಗಳಿಂದ ಮುಚ್ಚಿಹೋದರು. ಅರ್ಜುನನು ಬಲವಾಗಿ ಕಾದಿದನು. ತ್ರಿಗರ್ತ ಸೋದರರು ಎದುರಿಗೆ ಬಂದ ಸ್ವಲ್ವ ಹೊತ್ತಿನಲ್ಲಿಯೇ ಸುಶರ್ಮನನ್ನುಳಿದು ಉಳಿದವರೆಲ್ಲರೂ ಹತರಾದರು. ಸೈನಿಕರೆಲ್ಲಾ ಚೆಲ್ಲಾಪಿಲ್ಲಿಯಾದರು. ಸುಶರ್ಮನನು ಕೋಪದೀದ, ``ನೀವೆಲ್ಲರೂ ಜಯಿಸುತ್ತೇವೆ ಅಥವಾ ಸಾಯುತ್ತೇವೆ ಎಂದು ಪ್ರತಿಜ್ಞೆ ಮಾಡಿರುವಿರಿ. ಈಗ ಓಡಿಹೋಗಿ ಇತರರ ಹೀಯಾಳಿಕೆಗೆ ಒಳಗಾಗಬೇಡಿ" ಎಂದು ಅವರನ್ನು ಕರೆದನು. ಈ ಸೈನ್ಯದ ಒಂದು ಭಾಗವು ಕೃಷ್ಣನು ದುರ್ಯೋಧನನಿಗೆ ಕೊಟ್ಟ ನಾರಾಯಣರೆಂಬ ಜನರಿಂದ ಕೂಡಿತ್ತು. ಅವರೆಲ್ಲರೂ ಪುನಃ ಹಿಂದಿರುಗಿದರು. ಸೈನ್ಯ ಹಿಂದಿರುಗಿ ಬಂದುದನ್ನು ನೋಡಿದ ಅರ್ಜುನನಿಗೆ ಆತಂಕವಾಯಿತು. ನೋಡನೋಡುತ್ತಿದ್ದಂತೆಯೇ ಕೃಷ್ಣಾರ್ಜುನರು ಮತ್ತೊಮ್ಮೆ ಬಾಣಗಳಿಂದ ಮುಚ್ಚಿಹೋದರು. ಅರ್ಜುನನಿಗೆ ಈಗ ಅಸ್ತ್ರಗಳನ್ನು ಬಳಸುವ ಸಮಯ ಹತ್ತಿರ ಬಂದಿದೆ ಎನಿಸಿತು. ಮತ್ತೊಮ್ಮೆ ದೇವದತ್ತವನ್ನೂದಿ, ತ್ವಷ್ಟೃವನ್ನು ಧ್ಯಾನಿಸಿ ಅಸ್ತ್ರವೊಂದನ್ನು ಪ್ರಯೋಗಿಸಿದನು. ಇದರಿಂದ ಸೈನಿಕರಿಗೆ ಸಾವಿರಾರು ಕೃಷ್ಣಾರ್ಜುನರು ಕಾಣಲಾರಂಭಿಸಿದರು. ಪ್ರತಿಯೊಬ್ಬನೂ ಪಕ್ಕದವನಿಗೆ ಅರ್ಜುನನಂತೆಯೇ ಕಂಡುದರಿಂದರಿಂದ ಅವರೆಲ್ಲರೂ ತಮ್ಮನ್ನು ತಾವೇ ಕೊಂದುಕೊಳ್ಳಲಾರಂಭಿಸಿದರು. ಹೀಗೆ ನಿಮಿಷಮಾತ್ರದಲ್ಲಿ ತ್ರಿಗರ್ತರ ಸೇನೆ ಧೂಳೀಪಟವಾಗಿ ಹೋಯಿತು. ಉಳಿದವರನ್ನು ಅರ್ಜುನನು ಹೊಡೆಯಲು ಆರಂಭಿಸಿದನು. ಕವಿದ ಧೂಳಿನ ಹಾಗೂ ಬಾಣಗಳ ಕತ್ತಲೆಯಲ್ಲಿ ಕೃಷ್ಣನಿಗೆ ಉಸಿರುಕಟ್ಟಿದಂತೆ ಆಯಿತು. ಅವನು, ``ಅರ್ಜುನ, ಎಲ್ಲಿರುವೆ? ಈ ಬಾಣಗಳ ಸುರಿಮಳೆಯಲ್ಲಿ ನನಗೇನೂ ಕಾಣಿಸದಂತಾಗಿದೆ. ನೀನೇನು ಬದುಕಿರುವೆಯೋ ಸತ್ತಿರುವೆಯೋ ತಿಳಿಯದಾಗಿದೆ" ಎಂದು ಕೂಗಿದನು. ಅರ್ಜುನನು ಕೋಪದಿಂದ ವಾಯವ್ಯಾಸ್ತ್ರವನ್ನು ಪ್ರಯೋಗಿಸಿದನು. ಬಿರುಗಾಳಿಯೆದ್ದು ಬಾಣಗಳ ಜೊತೆಗೆ ಸೈನಿಕರನ್ನೂ ತರಗೆಲೆಗಳಂತೆ ಹಾರಿಸಿತು; ರಣರಂಗವು ನಿಚ್ಚಳವಾಗಿ ಕಾಣಿಸುವಂತಾಯಿತು. ಅರ್ಜುನನು ಅಲ್ಲಿ ದ್ರೋಣನು ಏನು ಮಾಡಿರುವನೋ ಏನೋ, ತಾನು ಈಗಲಾದರೂ ಯುಧಿಷ್ಠಿರನ ಬಳಿಗೆ ಹೋಗಬೇಕು ಎಂದುಕೊಂಡನು.ಇತ್ತ ದ್ರೋಣನು ಯುಧಿಷ್ಠಿರನಿದ್ದ ಸ್ಥಳಕ್ಕೆ ಬರಲು ಇನ್ನಿಲ್ಲದಂತೆ ಪ್ರಯತ್ನಮಾಡತೊಡಗಿದನು. ಅರ್ಜುನನು ಸಂಶಪ್ತಕರನ್ನು ಜಯಿಸಿ ಎಷ್ಟು ಬೇಗ ಹಿಂದಿರುಗುವನೆಂದು ಊಹಿಸಲು ಬರುವಂತಿರಲ್ಲಿಲ್ಲ. ಯುಧಿಷ್ಠಿರನ ಬಳಿ ಇದ್ದ ಧೃಷ್ಟದ್ಯುಮ್ನನು ದ್ರೋಣನನ್ನೆದುರಿಸಿದನು. ಮುಂದೆ ತನಗೆ ಮೃತ್ಯುವಾಗಲಿದ್ದ ಅವನನ್ನು ಕಂಡು ಅಪಶಕುನವೆನಿಸಿ ದ್ರೋಣನು ಹಿಂಜರಿದನು. ಧೃಷ್ಟದ್ಯುಮ್ನನನ್ನು ಹೇಗೋ ತಪ್ಪಿಸಿ ಮುಂದುವರೆದ ದ್ರೋಣನಿಗೆ ದ್ರುಪದನ ಸೇನೆ ಎದುರಾಯಿತು. ಧೃಷ್ಟದ್ಯುಮ್ನನ ಗಮನವನ್ನು ಬೇರೆಡೆಗೆ ಸೆಳೆಯಲು ದುರ್ಯೋಧನನ ಸೋದರನಾದ ದುರ್ಮುಖನು ಅವನೊಡನೆ ದ್ವಂದ್ವಯುದ್ದವನ್ನಾರಂಭಿಸಿದನು. ಧೃಷ್ಟದ್ಯುಮ್ನನು ಅವನೊಡನೆ ಹಾಗೂ ದ್ರೋಣನೊಡನೆ ಏಕಕಾಲದಲ್ಲಿ ಹೋರಾಡಬೇಕಾಯಿತು. ಆಗ ಉಂಟಾದ ತುಮುಲದಲ್ಲಿ ದ್ರೊಣನು ಧೃಷ್ಟದ್ಯುಮ್ನನು ಒಡ್ಡಿದ್ದ ತಡೆಯನ್ನು ಹಾದು ಯುಧಿಷ್ಠಿರನ ಬಳಿಗೆ ಬಂದು ಬಿಟ್ಟನು. ಬೆಂಗಾವಲಿಗೆ ಇದ್ದ ಸತ್ಯಜಿತ್ ಅವನನ್ನೆದುರಿಸಿದನು. ದ್ರುಪದನ ಇನ್ನೊಬ್ಬ ಸೋದರ ವೃಕನು ಅಲ್ಲಿಗೆ ಬರಲು, ದ್ರೋಣನು ಅವನನ್ನು ಕೊಂದುಹಾಕಿದನು. ಇದರಿಂದ ಕೋಪಗೊಂಡ ಸತ್ಯಜಿತ್ ದ್ರೋಣನ ಸಾರಥಿಯನ್ನು ಕೊಂದು ಅವನ ಮೇಲೆ ನುಗ್ಗಲು, ದ್ರೋಣನು ಅವನ ತಲೆಯನ್ನು ಹರಿತವಾದ ಅರ್ಧಚಂದ್ರಾಕೃತಿಯ ಬಾಣವೊಂದರಿಂದ ಕತ್ತರಿಸಿ ಹಾಕಿದನು.ಸತ್ಯಜಿತ್ ಸತ್ತೊಡನೆ ಪಾಂಡವ ಸೇನೆಗೆ ಆಘಾತವಾಯಿತು. ದ್ರುಪದನ ಇತರ ಸೋದರರೂ ಕೇಕಯರೂ ಯುಧಿಷ್ಠಿರನ ರಕ್ಷಣೆಗೆ ಧಾವಿಸಿದರು. ವಿರಾಟನೂ ಬಂದನು. ಮುನ್ನುಗ್ಗುತ್ತಿದ್ದ ದ್ರೋಣನ ಹಾದಿಗೆ ಅಡ್ಡಬಂದು ನಿಂತು ಹೋರಾಡಿದ ವಿರಾಟನ ಸೋದರ ಶತಾನೀಕನನ್ನು ದ್ರೋಣನು ಕೊಂದುಹಾಕಿದನು. ಕೆಲವೇ ಕ್ಷಣಗಳಲ್ಲಿ ಮೂವರು ವೀರರು ಹತರಾದುದನ್ನು ನೋಡಿ ಪಾಂಡವ ಸೇನೆ ಭಯಭೀತವಾಯಿತು. ಶಿಖಂಡಿ, ವಸುಧಾನ ಹಾಗೂ ಸಾತ್ಯಕಿ ಈಗ ದ್ರೋಣನನ್ನೆದುರಿಸಿದರೂ, ಅವನು ತುಂಬ ಹತ್ತಿರ ಬಂದುಬಿಟ್ಟಿದ್ದರಿಂದ ಯುಧಿಷ್ಠಿರನು ಅರ್ಜುನನು ಹೇಳಿದ್ದಂತೆ ವೇಗಶಾಲಿಯಾದ ಕುದುರೆಯೊಂದನ್ನು ಹತ್ತಿಕೊಂಡು ಅಲ್ಲಿಂದ ಹೊರಟುಹೋದನು.ದ್ರೋಣನ ಒತ್ತಡವನ್ನು ಸಹಿಸಲು ಪಾಂಡವ ಸೇನೆಗೆ ಆಗಲಿಲ್ಲ. ಧೃಷ್ಟದ್ಯುಮ್ನನೂ ದ್ರುಪದನ ಸೋದರರೂ ಅವನನ್ನೆದುರಿಸಿ ಹೋರಾಡುತ್ತಲೇ ಇದ್ದರು. ರಾಧೇಯನೊಡನೆ ನಿಂತಿದ್ದ ದುರ್ಯೋಧನನಿಗೆ ದ್ರೋಣನ ಪರಾಕ್ರಮವನ್ನು ನೋಡಿ ಬಹಳ ಸಂತೋಷವಾಯಿತು. ``ನೋಡು ರಾಧೇಯ, ನಮ್ಮ ಆಚಾರ್ಯನು ಹೇಗೆ ಪಾಂಡವಸೈನ್ಯವನ್ನು ಧ್ವಂಸಮಾಡುತ್ತಿದ್ದಾನೆ! ಅವರ ಕಡೆಯ ವೀರರೆಲ್ಲ ಹೇಗೆ ಹೆದರಿದ್ದಾರೆ! ಭೀಮನೂ ಸಹ ಆಚಾರ್ಯನನ್ನು ಎದುರಿಸಲಾರದವನಾಗಿದ್ದಾನೆ. ಪಾಂಡವರು ಸೂರ್ಯಾಸ್ತವನ್ನು ನೋಡುವರೋ ಇಲ್ಲವೋ? ಜೀವ ಉಳಿದರೆ ಅವರು ರಾಜ್ಯದಾಸೆಯನ್ನು ಬಿಟ್ಟುಬಿಡುವುದು ಖಂಡಿತ" ಎಂದನು. ರಾಧೇಯನಿಗೆ ಇಂಥ ಮಾತು ಇಷ್ಟವಾಗಲ್ಲಿ. ``ಮಿತ್ರ, ಪಾಂಡವರನ್ನು ಅಷ್ಟೊಂದು ಹಗುರವಾಗಿ ಭಾವಿಸಬೇಡ. ಅವರೇನೂ ಹೇಡಿಗಳಲ್ಲ. ಹಳೆಯದನ್ನು ಮರೆಯುವವರೂ ಅಲ್ಲ. ಅವರು ವೀರರು, ಉತ್ಸಾಹಿಗಳು. ನೀನು ಮಾಡಿದ ಅನ್ಯಾಯಗಳನ್ನು ಅವರು ಮರೆಯುವರೆಂದು ಭಾವಿಸಿದೆಯಾ? ನಿನ್ನ ಗುರುವಿನ ತಾತ್ಪೂರ್ತಿಕ ಗೆಲುವನ್ನು ಕಂಡು ಕಾಲ್ಪನಿಕ ಭದ್ರತೆಯ ಭಾವನೆಯನ್ನು ತಂದುಕೊಳ್ಳಬೇಡ. ಮಹಾವೀರರಾದ ಅವರು ಖಂಡಿತವಾಗಿಯೂ ತಮ್ಮ ಪ್ರತಿಜ್ಞೆಯನ್ನು ಪೂರೈಸಿಕೊಳ್ಳುವುದಕ್ಕಾಗಿ ಹೋರಾಡುವರು. ನೋಡು, ಭೀಮನು ಹೇಗೆ ವೀರರನ್ನು ಕಟ್ಟಿಕೊಂಡು ಮಹಾ ಕೊಪದಿಂದ ಬರುತ್ತಿರುವನು! ಆಚಾರ್ಯನ ಪರಿಸ್ಥಿತಿ ಕಷ್ಟಕರವಾಗುವುದೆಂದು ತೋರುತ್ತಿದೆ; ನಾನು ಅವನ ರಕ್ಷಣೆಗೆ ಹೋಗುತ್ತೇನೆ" ಎಂದವನೇ ರಾಧೇಯನು ದ್ರೋಣನ ಬೆಂಬಲಕ್ಕಾಗಿ ಹೊರಟನು.ರಾಧೇಯನ ಮಾತು ದುರ್ಯೋಧನನಿಗೆ ಇಷ್ಟವಾಗದಿದ್ದರೂ, ಅದರಲ್ಲಿ ಸತ್ಯಾಂಶವಿರುವುದನ್ನು ಮನಗಂಡು, ತಮ್ಮಂದಿರೊಡನೆ ತಾನೂ ಆಚಾರ್ಯನ ನೆರವಿಗೆ ಧಾವಿಸಿದನು. ದ್ರೌಪದಿಯ ಮಕ್ಕಳು, ಅಭಿಮನ್ಯು ಮತ್ತು ನಕಲ ಸಹದೇವರು ಕೌರವಸೈನ್ಯವನ್ನು ಚಚ್ಚಿಹಾಕುತ್ತಿದ್ದನು.ಆಗ ಭಗದತ್ತನು ತನ್ನ ಅಜೇಯವೆಂದು ಪ್ರಸಿದ್ಧವಾದ ಸುಪ್ರತೀಕ ಎಂಬ ಆನೆಯ ಮೇಲೆ ಐರಾವತವನ್ನೇರಿರುವ ಇಂದ್ರನಂತೆ ಅಲ್ಲಿಗೆ ಬಂದನು. ಈ ಆನೆಗೆ ಭೀಮನನ್ನು ಪೀಡಿಸುವುದೆಂದರೆ ಬಲು ಇಷ್ಟ; ಅವನನ್ನು ನೋಡಿದ ಕೂಡಲೆ ಅವನ ಮೇಲೆ ಏರಿಹೋಗುತ್ತಿತ್ತು. ಇಂದು ಸಹ ಅದು ಅವನ ರಥವನ್ನು ಪುಡಿಪುಡಿ ಮಾಡಿ ಹಾಕಿತು. ಭೀಮನಿಗೆ ಏನಾಯಿತೋ ಎಂದು ಗಾಬರಿಯಿಂದ ಯುಧಿಷ್ಠರನು ಪಾಂಚಾಲಸೇನೆಯೊಂದಿಗೆ ಬಂದನು. ಈ ಆನೆಯನ್ನು ಎದುರಿಸಲು ದಶಾರ್ಣ ರಾಜನು ತನ್ನ ಆನೆಯನ್ನು ತಂದನು. ಭಗದತ್ತನು ತನ್ನ ಆನೆಯನ್ನು ತಿವಿಯಲು, ಅದು ಸಾತ್ಯಕಿಯ ರಥವನ್ನು ಪುಡಿ ಮಾಡಿತು. ಸಾತ್ಯಕಿಯಉ ಹೊರಗೆ ಹಾರಿ ಜೀವ ಉಳಿಸಿಕೊಂಡದ್ದೇ ಹೆಚ್ಚಾಯಿತು. ನಂತರ ಅದು ಭೀಮನನ್ನು ಸೊಂಡಲಿನಿಂದ ಹಿಡಿದೆತ್ತಿ ಇನ್ನೇನು ಭೂಮಿಗೆ ಬಡಿಯಬೇಕೆನ್ನುವಷ್ಟರಲ್ಲಿ ಅವನು ಅದರ ಹಿಡಿತದಿಂದ ಹೇಗೋ ತಪ್ಪಿಸಿಕೊಂಡು ಅದರ ಹೊಟ್ಟೆಯ ಕೆಳಗೆ ಸೇರಿಕೊಂಡನು. ಅದನ್ನು ತಿವಿಯುತ್ತಾ ಅದು ತನ್ನ ಸುತ್ತಲೂ ತಾನೇ ತಿರುತಿರುಗಿ ಸುಸ್ತಾಗುವಂತೆ ಮಾಡಿದನು. ಈ ಒಂದು ಆನೆಯಿಂದ ಪಾಂಡವಸೈನ್ಯದಲ್ಲಿ ಅಗಾಧವಾದ ಭಯವು ಹುಟ್ಟಿಕೊಂಡಿತು; ಎಲ್ಲರೂ ಅದರಿಂದ ತಪ್ಪಿಸಿಕೊಳ್ಳಲು ಓಡತೊಡಗಿದರು.* * * * ಆಗತಾನೆ ತ್ರಿಗರ್ತರನ್ನು ವಾಯುವ್ಯಾಸ್ತ್ರದಿಂದ ಸೋಲಿಸಿದ ಅರ್ಜುನನು ಈ ಗಲಭೆಯನ್ನು ದೂರದಿಂದ ಕೇಳಿ, ``ಕೃಷ್ಣ ಪ್ರಾಗ್ಜ್ಯೋತಿಷ ರಾಜನಾದ ಭಗದತ್ತನು ತನ್ನ ಆನೆಯೊಂದಿಗೆ ಬಂದಿರುವಂತಿದೆ. ಭೀಮನು ಇದೊಂದು ಆನೆಯನ್ನು ಸೋಲಿಸಲಾರ. ಈ ಸುಪ್ರತೀಕ ಎಂಬ ಆನೆಯನ್ನು ಹೇಗೆ ಮಣಿಸಬೇಕೆಂಬುದು ನಿನಗೆ ಮತ್ತು ನನಗೆ ಮಾತ್ರ ಗೊತ್ತು. ಇಂದ್ರನ ಸಖನಾದ ಭಗದತ್ತನು ಪುರುಷಶ್ರೇಷ್ಠನೆಂದು ಪ್ರಸಿದ್ಧನಾದರೂ. ಕೌರವರ ಪಕ್ಷವನ್ನು ಸೇರಿರುವನು. ನಾನಿಂದು ಅವನನ್ನೂ ಅವನ ಆನೆಯನ್ನೂ ಕೊಲ್ಲುವೆನು. ಅದರ ಉಪಟಳ ಬಹಳವಾಗಿರುವುದು. ಬಾ, ಹೋಗೋಣ" ಎನ್ನಲು ಕೃಷ್ಣ ರಥವನ್ನು ಹಿಂದಕ್ಕೆ ತಿರುಗಿಸಿದನು. ಅಷ್ಟರಲ್ಲಿ ತ್ರಿಗರ್ತರು ಪುನಃ ಮೇಲೇರಿ ಬರಲು, ಅರ್ಜುನನಿಗೆ ಏನು ಮಾಡಬೇಕೆಂದೇ ತೋರದಾಯಿತು. ಕೃಷ್ಣನು, ``ಅರ್ಜುನ, ವಜ್ರಾಸ್ತ್ರದಿಂದ ಈ ಪಾಪಿಗಳನ್ನು ತಡಮಾಡದೆ ಕೊಂದುಬಿಡು" ಎನ್ನಲು, ಅರ್ಜುನನು, ತಂದೆಯನ್ನು ಸ್ಮರಿಸಿ ವಜ್ರಾಸ್ತ್ರವನ್ನು ಅಭಿಮಂತ್ರಿಸಿ ಪ್ರಯೋಗಿಸಿದನು. ಕೃಷ್ಣನು, ಭಲೆ, ಭಲೆ ಎನ್ನುತ್ತ ರಥವನ್ನು ಪುನಃ ತ್ರಿಗರ್ತರ ಕಡೆಗೆ ತಿರುಗಿಸಿದನು. ಸುಶರ್ಮನೂ ಅವನ ಕೆಲವು ಸೋದರರೂ ಇನ್ನೂ ಉಳಿದಿದ್ದು, ಪುನಃ ಅರ್ಜುನನ ಮೇಲೇರಿ ಬಂದರು. ಅರ್ಜುನನು ಇನ್ನಿಲ್ಲದಂತೆ ಹೋರಾಡಿ ಅವರನ್ನು ಸೋಲಿಸಿ ಅವರ ಸೈನ್ಯವನ್ನೆಲ್ಲ ದಿಕ್ಕಾಪಾಲಾಗಿ ಚದುರಿಸಿದನು. ಅರ್ಜುನನ ಬಾಣದಿಂದ ಸುಶರ್ಮನು ರಥದಲ್ಲೇ ಮೂರ್ಛೆಹೋಗಿದ್ದನು.ರಥದಲ್ಲಿಯೇ ನಿಂತುಕೊಂಡ ಕೃಷ್ಣನು ಅರ್ಜುನನ ಕೈಹಿಡಿದು, "ಅರ್ಜುನ, ನೀನಿಂದು ಅದ್ಭುತವಾಗಿ ಯುದ್ಧಮಾಡಿದೆ. ಏಕಾಂಗಿಯಾಗಿ ತ್ರಿಗರ್ತರನ್ನು ಸೋಲಿಸಿದೆ. ನಿನ್ನಂಥ ಧನುರ್ಧಾರಿಯನ್ನು ನೋಡಿ ನನಗೆ ಹೆಮ್ಮೆ ಎನಿಸಿದೆ" ಎಂದು ಅಭಿನಂದಿಸಲು, ಅರ್ಜುನನಿಗೆ ಬಹಳ ಸಂತೋಷವಾಯಿತು. ನಂತರ ಅವರು ವೇಗವಾಗಿ ಭಗದತ್ತನಿದ್ದಲ್ಲಿಗೆ ಹೊರಟರು. ದಾರಿಯಲ್ಲಿ ಅರ್ಜುನನು ಕೌರವಸೈನ್ಯವನ್ನು ಕಾಲಯಮನಂತೆ ಘಾತಿಸುತ್ತ ಬರಲು ಕೌರವಸೈನ್ಯದ ಈವರೆಗಿನ ಸಂತಸದ ಕೇಕೆಯು ಆರ್ತನಾದವಾಗಿ ಬದಲಾಯಿತು. ಕೊನೆಗೆ ಅರ್ಜುನನ ರಥವು ಭಗದತ್ತನ ಮುಂದೆ ಬಂದು ನಿಂತಿತು. ಭಗದತ್ತನು ಆನೆಯ ಮೇಲಿನಿಂದಲೇ ಅರ್ಜುನನ ಮೇಲೆ ಬಾಣಗಳ ಮಳೆಗರೆದನು. ಆನೆಯು ಅರ್ಜುನನ ರಥವನ್ನು ಘಾತಿಸಲು ಪ್ರಯತ್ನಿಸಿದಾಗಲೆಲ್ಲ ಕೃಷ್ಣನು ಕುಶಲತೆಯಿಂದ ರಥವನ್ನು ನಡೆಸಿ ಆದರಿಂದ ತಪ್ಪಿಸಿಕೊಳ್ಳುತ್ತಿದ್ದುದು ಒಂದು ಮಂತ್ರಜಾಲದಂತೆ ತೋರುತ್ತಿದ್ದಿತು. ಅರ್ಜುನನು ಭಗದತ್ತನ ಬಿಲ್ಲುಗಳನ್ನೆಲ್ಲ ಒಂದಾದ ಮೇಲೊಂದರಂತೆ ಕತ್ತರಿಸಲು, ಅವನು ಭಲ್ಲೆಗಳನ್ನು ಪ್ರಯೋಗಿಸಲಾರಂಭಿಸಿದನು. ಅರ್ಜುನನು ಅವುಗಳನ್ನೂ ಮಾರ್ಗಮಧ್ಯದಲ್ಲಿಯೇ ಕತ್ತರಿಸಿ ಹಾಕಿದನು. ಭಗದತ್ತನು ಎಸೆದ ಮೂರು ಶಕ್ತ್ಯಾಯುಧಗಳನ್ನೂ ಅರ್ಜುನನು ಕುಶಲತೆಯಿಂದ ತಡೆದನು. ಅತ್ಯಂತ ಕೋಪಾವಿಷ್ಟನಾದ ಭಗದತ್ತನು ಮೈಮರೆತು ಕೈಯಲ್ಲಿದ್ದ ಆನೆಯ ಅಂಕುಶದಲ್ಲಿಯೇ ವೈಷ್ಣವಾಸ್ತ್ರವನ್ನು ಅಭಿಮಂತ್ರಿಸಿ ಅರ್ಜುನನು ಮೇಲೆ ಪ್ರಯೋಗಿಸಿದನು. ತಕ್ಷಣ ಕೃಷ್ಣನು ಎದ್ದುನಿಂತು ಅದನ್ನು ಸೋಕಿದೊಡನೆಯೇ ಆ ವೈಷ್ಣವಾಸ್ತ್ರವು ಒಂದು ಪುಷ್ಪಮಾಲೆಯಾಗಿ ಪರಿವರ್ತಿತವಾಯಿತು. ಇದನ್ನು ನೋಡಿ ಎಲ್ಲರೂ ಸ್ತಂಭೀಭೂತರಾದರು. ಕೃಷ್ಣಾರ್ಜುನರಿಬ್ಬರೂ ಕ್ಷೇಮವಾಗಿರುವುದನ್ನು ನೋಡಿ ಭೀಮನು ಆನಂದದಿಂದ ಯುಧಿಷ್ಠಿರನನ್ನು ಆಲಂಗಿಸಿಕೊಂಡನು. ಕೃಷ್ಣನು ಹೀಗೆ ಮಾಡಿದುದನ್ನು ಕಂಡು ಅರ್ಜುನನು, ``ಕೃಷ್ಣ, ಹೀಗೇಕೆ ಮಾಡಿದೆ? ನನ್ನ ಮೇಲೆಸೆದ ಅಸ್ತ್ರವನ್ನು ನೀನು ಎದುರಿಸಿದೆಯಲ್ಲ? ಯುದ್ಧದಲ್ಲಿ ಭಾಗಹಿಸುವುದಿಲ್ಲವೆಂಬ ನಿನ್ನ ಪ್ರತಿಜ್ಞೆಯನ್ನು ಮರೆತೆಯಾ?" ಎನ್ನಲು ಕೃಷ್ಣನು ನಕ್ಕು ``ಅರ್ಜುನ, ಅದು ನನಗೆ ಸೇರಿದ್ದಾದ್ದರಿಂದ ಅದನ್ನು ನಾನು ತೆಗೆದುಕೊಂಡೆ. ಒಂದು ಸಲ ಯಾವುದೋ ಕೆಟ್ಟ ಘಳಿಗೆಯಲ್ಲಿ ನಾನು ಈ ಅಸ್ತ್ರವನ್ನು ನರಕಾಸುರನ ತಾಯಿಯಾದ ಪೃಥ್ವಿಗೆ ಕೊಟ್ಟೆ. ಯಾವ ಆಯುಧದಿಂದಲೂ ಮಗನಿಗೆ ಸಾವು ಸಂಭವಿಸಬಾರದೆಂದು ಅವಳು ಅದನ್ನು ಅವನಿಗೆ ಕೊಟ್ಟಳು. ನರಕಾಸುರನು ಅದನ್ನು ಭಗದತ್ತನಿಗೆ ಕೊಟ್ಟನು. ಅದು ಯಾರ ಮೇಲೆ ಪ್ರಯೋಗವಾಗುತ್ತಿದೆಯೋ ಅವರನ್ನು ಕೊಲ್ಲದೆ ಬಿಡದು. ನನಗೆ ನಿನ್ನನ್ನು ಕಳೆದುಕೊಳ್ಳಲು ಇಷ್ಟವಿಲ್ಲ. ಮಧ್ಯೆ ಬಂದುದಕ್ಕೆ ಕ್ಷಮಿಸು. ಈಗ ವೈಷ್ಣವಾಸ್ತ್ರವು ಇಲ್ಲದ ಭಗದತ್ತನಾಗಲಿ ಅವನ ಆನೆಯಾಗಲಿ ಅಜೇಯರೇನಲ್ಲ. ಅವರನ್ನು ಕೊಲ್ಲುವುದು ಸುಲಭ. ತ್ವರೆಮಾಡು, ಅರ್ಜುನ!" ಎಂದನು. ಅರ್ಜುನನು ತಕ್ಷಣವೇ ಚೂಪಾದ ಬಾಣವೊಂದರಿಂದ ಸುಪ್ರತೀಕದ ತಲೆಯನ್ನು ಸೀಳಿದನು. ಅರ್ಧಚಂದ್ರಾಕಾರದ ತಲೆಯುಳ್ಳ ಬಾಣವೊಂದರಿಂದ ಗುರಿಯಿಟ್ಟು ಭಗದತ್ತನ ಎದೆಗೆ ಹೊಡೆದನು. ಭಗದತ್ತನೂ ಆತನ ಆನೆಯೂ ಸತ್ತು ನೆಲಕ್ಕೊರಗಿದರು. ಅವರಿಬ್ಬರಿಗೂ ಸಮಾನರು ಇನ್ನು ಯಾರೂ ಇರಲಿಲ್ಲ. ಅರ್ಜುನನು ರಥದಿಂದಿಳಿದು ತನ್ನ ತಂದೆಯ ಮಿತ್ರನಾದ ಭಗದತ್ತನ ಸುತ್ತಲೂ ಪ್ರದಕ್ಷಿಣೆ ಮಾಡಿ, ಗತಿಸಿದ ಮಹಾವೀರನಿಗೆ ಗೌರವಪೂರ್ವಕವಾಗಿ ಪ್ರಣಾಮ ಸಲ್ಲಿಸಿದನು. ಅರ್ಜುನನ ಈ ಸನ್ನಡತೆಯನ್ನು ಎರಡು ಕಡೆಯ ವೀರರೂ ಶ್ಲಾಘಿಸಿದರು.* * * * ಅರ್ಜುನನು ಪುನಃ ರಣರಂಗಕ್ಕಿಳಿದನು. ಶಕುನಿಯ ತಮ್ಮಂದಿರು ಅವನೊಡನೆ ಹೋರಲು ಸಿದ್ಧರಾಗಿದ್ದರು; ಯುದ್ಧದಲ್ಲಿ ಅರ್ಜುನನಿಂದ ಹತರಾಗಿದ್ದರು.ಇದನ್ನು ನೋಡಿ ಶಕುನಿಯು ಮೇಲೇರಿ ಬಂದನು. ಅವನ ಸೈನ್ಯವನ್ನು ಒದ್ದೋಡಿಸಿಡ ಅರ್ಜುನನು ಶಕುನಿಯ ಮಾಯಾಯುದ್ದವನ್ನು ಅಸ್ತ್ರಗಳಿಂದ ನಿವಾರಿಸಿಕೊಂಡು, ``ಎಲವೋ ದ್ರೋಹಿ, ಕೇಳು. ಈ ಗಾಂಡೀವಕ್ಕೆ ದಾಳವೆಸೆಯಲು ಬರುವುದಿಲ್ಲ; ಬದಲಿಗೆ ಅಗ್ನಿಮುಖದಂತಹ ಚೂಪಾದ ಬಾಣಗಳನ್ನು ಎಸೆಯಬಲ್ಲದು. ಸಾಧ್ಯವಾದರೆ ಅವುಗಳನ್ನೆದುರಿಸು"ಎನ್ನಲು ಶಕುನಿಯ ಸೋಲೊಪ್ಪಿಕೊಂಡು ಅಲ್ಲಿಂದ ಹೊರಟು ಹೋದನು. ಅಲ್ಲಿಂದ ಅವರೆಲ್ಲ ದ್ರೋಣನಿದ್ದೆಡೆಗೆ ತೆರಳಿದರು. ದ್ರೋಣನಿಗೆ ಎಲ್ಲಿ ಹೋದರೂ ಧೃಷ್ಟದ್ಯುಮ್ನನೇ ಸಿಕ್ಕುತ್ತಿದ್ದನು. ಅರ್ಜುನನಿದ್ದುದರಿಂದ ಯುಧಿಷ್ಠಿರನೂ ಮುಂಚೂಣಿಯಲ್ಲಿ ಕಾಣಿಸಿಕೊಂಡನು. ಧಾರ್ತರಾಷ್ಟ್ರರು ಅವನನ್ನು ಎದುರಿಸಿದರು. ಆಶ್ವತ್ಧಾಮನು ತಂದೆಯ ಸಹಾಯಕ್ಕೆ ಬಂದವನು, ಮಾಹಿಷ್ಮತೀ ನಗರದ ರಾಜಕುಮಾರನಾದ ನೀಲನನ್ನು ಸೆಣೆಸಿ ಕೊಂದುಹಾಕಿದನು. ಇದರಿಂದ ಕೋಪಗೊಂಡ ಪಾಂಡವರು ಅಶ್ವತ್ಥಾಮನನ್ನು ಎದುರಿಸಿದರಾದರೂ ಹೋರಾಟವು ತುಮುಲಯುದ್ಧವಾಗಿ ಪರಿವರ್ತಿತವಾಯಿತು. ಸ್ವಲ್ಪಹೊತ್ತು ಅರ್ಜುನ ರಾಧೇಯರು ಎದುರಾಗಿ ಅಸ್ತ್ರ-ಪ್ರತ್ಯಸ್ತ್ರಗಳಿಂದ ಹೋರಾಡಿದರು. ಅರ್ಜುನನು ಕೌರವರ ಕಡೆಯ ಶತ್ರುಂಜಯನೆಂಬ ವೀರನನ್ನು ಕೊಂದುಹಾಕಿದನು. ಸಂಕುಲಯುದ್ಧವು ಮುಂದುವರೆಯುತ್ತಿರುವಂತೆಯೇ ಸೂರ್ಯಾಸ್ತವಾದುದರಿಂದ ಎರಡು ಕಡೆಯವರೂ ಯುದ್ಧವನ್ನು ನಿಲ್ಲಿಸಿ ಪಾಳೆಯಗಳಿಗೆ ಹಿಂದಿರುಗಿದರು. ಹನ್ನೆರಡನೆಯ ದಿನದ ಯುದ್ಧದಲ್ಲಿ ಅರ್ಜುನನು ಸಂಶಪ್ತಕರನ್ನು ಸೋಲಿಸಿದನಲ್ಲದೆ ಭಗದತ್ತನನ್ನೂ ಅವನ ಆನೆಯನ್ನೂ ಕೊಂದದ್ದೇ ಮುಖ್ಯ ಘಟನೆ ಎನಿಸಿಕೊಡಿತು. ಕೌರವರ ಕಡೆ ತುಂಬ ನಷ್ಟವಾಗಿದ್ದುದರಿಂದ ಅವರು ನಿರಾಶರಾಗಿದ್ದರು.ದುರ್ಯೋಧನನು ಯಥಾಪ್ರಕಾರ ನಿರಾಶೆ ದುಃಖಗಳಿಂದ ದ್ರೋಣನ ಬಳಿಗೆ ಹೋಗಿ ಗೋಳಿಟ್ಟನು. ಭೀಷ್ಮನಿಗೆ ಇದು ಅಭ್ಯಾಸವಾಗಿತ್ತಾದರೂ ದ್ರೋಣನಿಗೆ ಹೊಸತು. ಎಷ್ಟು ಪ್ರಯತ್ನಿಸಿದರೂ ದುರ್ಯೋಧನನನ್ನು ತೃಪ್ತಿಗೊಳಿಸುವುದು ಅಸಾಧ್ಯವೆಂದು ಅವನಿಗೆ ತಿಳಿದಿರಲಿಲ್ಲ. ದುರ್ಯೋಧನನು, ``ಆಚಾರ್ಯ, ನೀನು ಶತ್ರುಗಳ ಮೇಲೆ ಸಹಾನುಭೂತಿಯಿಂದಿರುವುದು ಸಹಜವಾಗಿಯೇ ಇದೆ. ಅದರಿಂದಾಗಿಯೇ, ನಿನ್ನ ಮಾತಿನಂತೆ ನೀನು ಅರ್ಜುನನು ದೂರ ಹೋಗಿದ್ದರೂ ಯುಧಿಷ್ಠಿರನನ್ನು ಸೆರೆ ಹಿಡಿಯಲಿಲ್ಲ. ಬೇಕೆಂದೇ ಅವಕಾಶವನ್ನು ವ್ಯರ್ಥಗೊಳಿಸಿರುವೆ. ನಿನಗಾಗಿ ಸುಶರ್ಮನು ಸೇನೆಯನ್ನೂ ಸೋದರರನ್ನೂ ಕಳೆದುಕೊಂಡನಷ್ಟೇ. ನೀನು ಮಾತ್ರ ನಿನ್ನ ಪ್ರೀತಿಯ ಪಾಂಡವರೊಡನೆ ಮೃದುವಾಗಿಯೇ ನಡೆದುಕೊಳ್ಳುತ್ತಿರುವೆ. ನಿನ್ನ ಮಾತನ್ನು ನೀನು ಉಳಿಸಿಕೊಳ್ಳಲಿಲ್ಲ" ಎನ್ನಲು, ದ್ರೋಣನಿಗೆ ತುಂಬ ಬೇಸರವಾಯಿತು. ಅವನು ``ದುರ್ಯೋಧನ, ನಡೆದುದೆಲ್ಲ ನಿನಗೆ ತಿಳಿದೇ ಇದೆ ಯುದಿಷ್ಠಿರನು ಸೆರೆಸಿಕ್ಕುವಷ್ಟರಲ್ಲಿ ಓಡಿಹೋದ. ಏನು ಮಾಡುವುದೆಂದು ನಾನು ಯೋಚಿಸುವಷ್ಟರಲ್ಲಿ ಅರ್ಜುನನು ಹಿಂದಿರುಗಿದ. ಆ ನಂತರ ಏನೂ ಮಾಡಲಾಗಲಿಲ್ಲ. ನಾಳೆ ನಾನು ಅವರ ಕಡೆ ಒಬ್ಬ ಮಹಾವೀರನನ್ನು ಖಂಡಿತ ಕೊಲ್ಲುವೆ. ಪದ್ಮವ್ಯೂಹದಲ್ಲಿ ಸೇನೆಯನ್ನಿರಿಸುವೆ. ಅದನ್ನು ಭೇದಿಸುವುದು ದೇವತೆಗಳಿಗೂ ಆಗದು; ಆದರೆ ಅರ್ಜುನ ಭೇದಿಸಬಲ್ಲ. ಅವನನ್ನು ದಿನವೆಲ್ಲ ದೂರವಿಡಬೇಕು. ನಾನು ನಾಳೆ ಸಾಧಿಸುವುದನ್ನು ನೋಡಿ ನೀನು ಮೆಚ್ಚಿಕೊಳ್ಳುವೆ. ಇದು ಖಂಡಿತ" ಎನ್ನಲು ದುರ್ಯೋಧನನಿಗೆ ಸಮಾಧಾನವಾಯಿತು. ತ್ರಿಗರ್ತರು ಅರ್ಜುನನನ್ನು ಮತ್ತೊಮ್ಮೆ ಎದುರಿಸಲು ಸಿದ್ಧರಾದರು. ಕೌರವರ ಪಾಳೆಯದಲ್ಲಿ ಉತ್ಸಾಹ ಮೂಡಿತು. ನಾಳೆ ಏನೋ ಭಯಾನಕವಾದುದು ಸಂಭವಿಸಲಿದೆ ಎಂದು ಎಲ್ಲರೂ ಬೆಳಗಾಗುವುದನ್ನೇ ಕಾಯತೊಡಗಿದರು.* * * * ಯುದ್ಧದ ಹದಿಮೂರನೆಯ ದಿನ ಬೆಳಗಾಯಿತು. ದ್ರೋಣನ ನಾಯಕತ್ವದ ಮೂರನೆಯದಿನ. ಸೂರ್ಯೋದಯವಾಗುತ್ತಿದ್ದಂತೆಯೇ ಅರ್ಜುನನು ತ್ರಿಗರ್ತರೊಂದಿಗೆ ಸೆಣೆಸುತ್ತ ರಣರಂಗದ ದಕ್ಷಿಣಕ್ಕೆ ಹೋಗಬೇಕಾಯಿತು. ಅವನು ಹೊರಟು ಹೋದಮೇಲೆ ದ್ರೋಣನು ತನ್ನ ಸೈನ್ಯವನ್ನು ಪದ್ಮವ್ಯೂಹದಲ್ಲಿ ನಿಲ್ಲಿಸಿದ. ಪದ್ಮದ ಒಂದೊಂದು ದಳದಲ್ಲಿಯೂ ಒಬ್ಬೊಬ್ಬ ಕೌರವವೀರರು. ಪದ್ಮದ ಕೇಂದ್ರದಲ್ಲಿ ದುರ್ಯೋಧನ. ಮೊದಲ ಸುತ್ತಿನ ದಳಗಳಲ್ಲಿ ಕೃಪ, ರಾಧೇಯ, ದುಶ್ಶಾಸನ ಮತ್ತಿರರರು; ಎರಡನೆಯ ಸುತ್ತಿನಲ್ಲಿ ಜಯದ್ರಥ ಮತ್ತು ಅವನ ಸೈನ್ಯ; ಅವನ ನಂತರ ಅಶ್ವತ್ಥಾಮ, ಧಾರ್ತರಾಷ್ಟ್ರರು. ಆ ನಂತರ ಶಕುನಿ, ಕೃತವರ್ಮ, ಶಲ್ಯ, ಭೂರಿಶ್ರವಸ್ ಮತ್ತು ಅವನ ಸೋದರ ಶಲ. ಎಲ್ಲರಿಗೂ ಧರಿಸಲು ಕೆಂಪುರೇಷ್ಮೆ, ಕೆಂಪು ಹೂಹಾರ. ಬೆಳಗಿನ ಹೊಂಬಿಸಿಲಿನಲ್ಲಿ ದೊಡ್ಡದೊಂದು ಕಮಲ ಅರಳಿರುವಂತೆಯೇ ಕಾಣುತ್ತಿತ್ತು ಕೌರವಸೇನೆ. ದ್ರೋಣನು ಪದ್ಮದ ಹೊರಗೆ ಪ್ರತಿಷ್ಠಾಪಿತನಾಗಿದ್ದನು.ಯುದ್ಧವು ಆರಂಭವಾಯಿತು. ಭೀಮನ ಮುಂದಾಳ್ತನದಲ್ಲಿ ಸಾತ್ಯಕಿ ಧೃಷ್ಟದ್ಯುಮ್ನ ದ್ರುಪದ ಕುಂತಿಭೋಜ ಕ್ಷತ್ರಧರ್ಮ ಬೃಹತ್ ಕ್ಷಾತ್ರ ಧೃಷ್ಟಕೇತು ಘಟೋತ್ಕಚ ಯುಧಾಮನ್ಯು ಉತ್ತಮೌಜಸ್ ಶಿಖಂಡಿ ವಿರಾಟ ಯುಧಿಷ್ಠಿರ ನಕುಲಸಹದೇವರು ಕೇಕಯ ಸೋದರರು ಮುಂತಾದ ವೀರರೆಲ್ಲರೂ ಒಟ್ಟಿಗೆ ಪದ್ಮವ್ಯೂಹವನ್ನು ಮುತ್ತಿದರು. ದ್ರೋಣನು ವ್ಯೂಹದ ಸುತ್ತಲೂ ರಥವನ್ನೋಡಿಸುತ್ತಿದ್ದು, ಪಾಂಡವಸೇನೆಯನ್ನು ಧ್ವಂಸಮಾಡುತ್ತಿದ್ದ. ಸೈನ್ಯ ನಾಶವಾಯಿತೇ ಹೊರತು ವ್ಯೂಹವನ್ನು ಒಡೆದು ಒಳಪ್ರವೇಶಿಸಲು ಯಾರಿಗೂ ಸಾಧ್ಯವಾಗಲಿಲ್ಲ.ಯುಧಿಷ್ಠಿರನಿಗೆ ಚಿಂತೆಯಾಯಿತು. ಸಂಜೆಯಾಗುವುದರೊಳಗೆ ಸೇನೆಯೆಲ್ಲ ನಷ್ಟವಾದರೆ? ಅರ್ಜುನ ಯಾವಾಗ ಹಿಂದಿರುಗುವನೋ ತಿಳಿಯದು. ಕೋಪಗೊಂಡಿರುವ ಸುಶರ್ಮನದು ಇಂದು ನಿರ್ಣಾಯಕ ಯುದ್ಧ ಬೇರೆ. ಇರುವ ಒಂದೇ ಆಸೆಯ ಕುಡಿಯೆಂದರೆ ಅಭಿಮನ್ಯು. ಅವನಿಗೆ ಪದ್ಮವ್ಯೂಹವನ್ನು ಭೇದಿಸುವುದು ಗೊತ್ತು. ಆ ಬಾಲಕನಿಗೇ ಈ ಗುರುತರ ಹೊಣೆಯನ್ನು ಹೊರಿಸಲು ನಿರ್ಧರಿಸಿದ. ಯುಧಿಷ್ಠಿರನು, ``ಮಗು, ಅರ್ಜುನನು ಹಿಂದಿರುಗಿದ ಮೇಲೆ ಅವನಿಗೆ ನಾವು ಯುದ್ದಮಾಡಿದ ಕ್ರಮ ಸರಿಯಾಗಿರಲಿಲ್ಲ ಎನಿಸಬಾರದು. ಈಗ ದ್ರೋಣನ ಈ ಪದ್ಮ ವ್ಯೂಹವನ್ನು ಭೇದಿಸಬೇಕಾಗಿದೆ. ಇದು ನಿನಗೆ, ಅರ್ಜುನನಿಗೆ, ಕೃಷ್ಣನಿಗೆ ಹಾಗೂ ಅವನ ಮಗ ಪ್ರದ್ಯುಮ್ನನಿಗೆ ಮಾತ್ರ ಗೊತ್ತು. ಅವರಾರೂ ಇಲ್ಲದಿರುವುದರಿಂದ ಈಗ ನೀನೇ ನಮಗೆ ಸಹಾಯ ಮಾಡಬೇಕು" ಎನ್ನಲು ಅಭಿಮನ್ಯುವು ಸ್ವಲ್ಪ ಯೋಚಿಸಿ, ಮುದ್ದಾಗಿ ನಕ್ಕು ``ದೊಡ್ಡಪ್ಪ, ಖಂಡಿತ ನಾನು ಅದನ್ನು ಮಾಡಬಲ್ಲೆ ಆದರೆ ಅಪ್ಪ ನನಗೆ ಹೇಳಿಕೊಟ್ಟಿರುವುದು ಕೇವಲ ಪ್ರವೇಶವನ್ನು ಮಾತ್ರ ಪದ್ಮವ್ಯೂಹದಿಂದ ಹೊರಬರುವುದು ಹೇಗೆಂದು ನನಗೆ ತಿಳಿಯದು." ಎಂದ ಯುಧಿಷ್ಠಿರನು, ``ಅದರ ಬಗ್ಗೆ ಚಿಂತಿಸುವ ಅಗತ್ಯವಿಲ್ಲ. ವ್ಯೂಹದಲ್ಲಿ ನೀನು ಒಂದು ಕಡೆ ಜಾಗ ಮಾಡಿಕೊಟ್ಟರೆ ಸಾಕು, ನಾವು ಉಳಿದುದನ್ನು ನೋಡಿಕೊಳ್ಳುತ್ತೇವೆ. ನಾವೆಲ್ಲ ನಿನ್ನ ಹಿಂದೆಯೇ ಇರುತ್ತೇವೆ, ಒಳನುಗ್ಗಿ ವ್ಯೂಹವನ್ನು ಮುರಿಯುತ್ತೇವೆ" ಎಂದನು. ಭೀಮನು, ``ನಿನ್ನ ಸಮೀಪದಲ್ಲಿಯೇ ನಾನು, ಧೃಷ್ಟದ್ಯುಮ್ನ, ಸಾತ್ಯಕಿ, ಕೇಕಯರು, ಪಾಂಚಾಲರು, ಮತ್ಸ್ಯರು, ಪ್ರಭದ್ರಕರು ಎಲ್ಲರೂ ಇರುತ್ತೇವೆ. ನೀನು ವ್ಯೂಹವನ್ನು ಭೇದಿಸಿದ ಕೆಲವೇ ಕ್ಷಣಗಳಲ್ಲಿ ಎಲ್ಲವೂ ಮುಗಿಯುತ್ತದೆ" ಎಂದನು.ಇಂತಹ ದೊಡ್ಡ ಜವಾಬ್ದಾರಿ ಕೊಟ್ಟರಲ್ಲಾ ಎಂದು ಅಭಿಮನ್ಯುವಿಗೆ ಬಹಳ ಸಂತೋಷವಾಯಿತು. ಪೂರ್ಣಚಂದ್ರನಂತೆ ರೂಪವಂತನಾದ ಅವನ ಕಣ್ಣುಗಳು ಆನಂದದಿಂದ ಮಿನುಗಿದವು. ಅವನಂತಹ ದಿವ್ಯತೇಜಸ್ಸಿನ ಯುವಕ ಇನ್ನೊಬ್ಬನಿರಲಿಲ್ಲ. ``ದೊಡಪ್ಪ, ಇಂದು ನಾನು ಇದನ್ನು ಸಾಧಿಸಿಯೇ ತೀರುವೆ. ಕೌರವರು ಜ್ವಾಲೆಯಲ್ಲಿ ಬಿದ್ದ ಪತಂಗಗಳಂತೆ ನಾಶವಾಗುವುದನ್ನು ನೀವು ನೋಡುವಿರಿ. ಇಂದು ನಾನು ಕುರುವಂಶಕ್ಕೂ ವೃಷ್ಣಿವಂಶಕ್ಕೂ ಕೀರ್ತಿಯನ್ನು ತರುವೆ. ಕುರುಕ್ಷೇತ್ರದಲ್ಲಿ ಹೋರಾಡಿದ ಅಪ್ರತಿಮ ವೀರನನ್ನು ಹೆತ್ತ ತಾಯಿ ತಾನೆಂದು ಅಮ್ಮನು ಸಂಭ್ರಮ ಪಡುವಳು. ನನ್ನ ಇಂದಿನ ಹೋರಾಟವನ್ನು ನೀವು ಯಾರೂ ಮರೆಯಲಾರಿರಿ. ಎಲ್ಲರೂ ಹೆಮ್ಮೆಪಡುವಂಥ ನನ್ನ ಯುದ್ಧವನ್ನು ಕೌರವರು ನೋಡಲಿ" ಎಂದನು. ಯುಧಿಷ್ಠಿರನು, ``ನಿನ್ನ ಮಾತು ನಿಜವಾಗಲಿ, ಮಗುವೆ. ದೇವತೆಗಳ ಅನುಗ್ರಹ ನಿನ್ನ ಮೇಲಿರಲಿ. ನಿನ್ನ ಬೆಂಬಲಕ್ಕೆ ನಮ್ಮ ಕಡೆಯ ವೀರರೆಲ್ಲರೂ ಇರುತ್ತಾರೆ. ನೀನು ಕೃಷ್ಣನಿಗೂ ಅರ್ಜುನನಿಗೂ ಕೀರ್ತಿಯನ್ನು ತಾ" ಎಂದನು. ಅಭಿಮನ್ಯುವು ತನ್ನ ದೊಡ್ಡಪ್ಪ ಚಿಕ್ಕಪ್ಪಂದಿರಿಗೆಲ್ಲ ನಮಸ್ಕಾರ ಮಾಡಿ ಹೊರಟನು. ರಥವನ್ನೇರಿದನು. ಪಾಂಡವರೆಲ್ಲರೂ ಅವನನ್ನು ಹೆಮ್ಮೆಯಿಂದ ಬೀಳ್ಕೊಟ್ಟರು. ತಾವೂ ಅವನ ಬೆನ್ನಹಿಂದೆಯೇ ಹೊರಟರು ಎಲ್ಲರೂ ಮಹಾವೇಗದಿಂದ ಕೌರವಸೈನ್ಯದೆಡೆಗೆ ನುಗ್ಗಿದರು.* * * * ಮಿಂಚಿನಂತೆ ಹೊಂಚಿದ ಅಭಿಮನ್ಯುವಿನ ರಥವು ಪದ್ಮವ್ಯೂಹದೆಡೆಗೆ ಸಿಡಿಲಿನಂತೆ ನಡೆಯಿತು. ಧ್ವಜವೊಂದು ಬೇರೆಯಾಗಿರದಿದ್ದರೆ, ಅರ್ಜುನನೇ ಬಂದಿರುವನೋ ಎನಿಸುವಂತಿತ್ತು. ಎರಡು ಸೈನ್ಯಗಳೂ ಮೇಳವಿಸಿದವು. ದ್ರೋಣನ ಕಣ್ಣೆದುರಿಗೇ ಮಾನವವ್ಯಾಪ್ತಿಗೆ ಮೀರಿದ ಪದ್ಮವ್ಯೂಹ ಛೇದನೆಯನ್ನು ಅಭಿಮನ್ಯುವು ಸಾಧಿಸಿ, ಒಡನೆಯೇ ವ್ಯೂಹವನ್ನು ಪ್ರವೇಶಿಸಿಬಿಟ್ಟನು. ಕೌರವ ಸೇನೆಯು ಭಯದಿಂದ ತತ್ತರಿಸಿತು. ಅರ್ಜುನನ ಮಗ, ಹದಿನಾರು ವರ್ಷದ ಪೋರ, ವ್ಯೂಹವನ್ನೊಡೆದು ದ್ರೋಣನ ಲೆಕ್ಕಾಚಾರಗಳನ್ನೆಲ್ಲಾ ಬುಡಮೇಲು ಮಾಡಿಬಿಟ್ಟಿದ್ದನು. ಅಕಸ್ಮಾತ್ ಛೇದಿಸಲ್ಪಟ್ಟರೂ, ತಕ್ಷಣವೇ ಪುನಃ ಕೂಡಿಕೊಳ್ಳುವಂಥದು ಪದ್ಮವ್ಯೂಹ. ಅಭಿಮನ್ಯು ಒಳಗೆ ಹೋದ ಒಡನೆಯೇ ಅನೇಕ ವೀರರನ್ನು ಒಟ್ಟಿಗೇ ಎದುರಿಸಬೇಕಾಯಿತು. ಆದರೇನು? ಅವನ ಬಾಣ ವರ್ಷಗಳಿಂದ ಸಾಯುವ ಸೈನಿಕರ ರಾಶಿ ಬೆಳೆಯುತ್ತ ಹೋಯಿತು. ಕೌರವರು ಸಹಾಯಕ್ಕಾಗಿ ದಶದಿಕ್ಕುಗಳನ್ನು ನೋಡತೊಡಗಿದರು. ಕುಮಾರನನ್ನು ತಡೆಯುವವರೇ ಇಲ್ಲವಾದರು. ಮೊದಲು ಎದುರಿಸಿ ನಿಂತವನು ದುರ್ಯೋಧನ. ಇದನ್ನು ನೋಡಿದೊಡನೆ ರಾಜನ ಸಹಾಯಕ್ಕೆ ದ್ರೋಣನು ಧಾವಿಸಿ ಬಂದನು. ಕೃಪ ಕೃತವರ್ಮ ರಾಧೇಯ ಶಕುನಿ ಇವರೂ ಪಕ್ಕದಲ್ಲಿ ಬಂದು ನೆರೆದರು. ವ್ಯೂಹದ ಹೃದಯದಲ್ಲಿದ್ದ ರಾಜನ ಬಳಿಗೆ ಕ್ಷಣಮಾತ್ರದಲ್ಲಿ ಅಭಿಮನ್ಯು ಬಂದುಬಿಟ್ಟಿದ್ದನು. ಎಲ್ಲ ವೀರರು ಒಟ್ಟಿಗೆ ಅಭಿಮನ್ಯುವನ್ನು ಘಾತಿಸಲಾರಂಭಿಸಿದರು. ದುಶ್ಶಾಸನ ಭೂರಿಶ್ರವಸ್ಸು ಮೊದಲಾದವರೂ ಬಂದು ಸೇರಿಕೊಂಡರು. ಅವರಾರಿಗೂ ಅಭಿಮನ್ಯುವನ್ನು ತಡೆಯಲಾಗಲಿಲ್ಲ. ಅವನ ಬಾಣಗಳಿಂದ ರಾಧೇಯನು ತತ್ತರಿಸಿಹೋದನು. ಎಲ್ಲರೂ ಹೆಮ್ಮೆಟ್ಟಬೇಕಾಯಿತು. ಏಕಾಂಗಿಯಾಗಿದ್ದರೂ ಅಭಿಮನ್ಯುವು ಇಡೀ ಕೌರವಸೈನ್ಯವನ್ನು ಎದುರಿಸಿ ಹೋರಾಡುತ್ತಿದ್ದನು. ಅನೇಕ ವೀರರು ಒಟ್ಟಿಗೇ ಅವನನ್ನೆದುರಿಸಿದರೂ. ಮಗುವಿನ ಮುಖದ ಮೇಲಿನ ಮುಗುಳ್ನಗೆ ಮಾಸಲಿಲ್ಲ. ಶೌರ್ಯದಲ್ಲಿ ಕೃಷ್ಣಾರ್ಜುನರಿಬ್ಬರನ್ನೂ ಮೀರಿಸಿದನು. ಸಾವಿರಗಟ್ಟಲೆಯಲ್ಲಿ ಸೈನಿಕರನ್ನು ಕೊಲ್ಲುತ್ತಿದ್ದನೆಂದರೆ ಉತ್ಪ್ರೇಕೆಯಲ್ಲ. ಎಲ್ಲ ಅಸ್ತ್ರಗಳನ್ನೂ ಬಲ್ಲವನಾಗಿದ್ದ ಅವನು ಎಲ್ಲವನ್ನೂ ಬಳಸುತ್ತಿದ್ದನು. ಅವನ ಬಿಲ್ಲಿನಿಂದ ಹೊರಡುತ್ತಿದ್ದ ಸಹಸ್ರಾರು ಬಾಣಗಳು ಸೂರ್ಯನಿಂದ ಹೊರಡುವ ಕಿರಣಗಳಂತೆ ಕಾಣಿಸುತ್ತಿದ್ದವು. ಅವನ ಮುನ್ನಡೆಯನ್ನು ಗಮನಿಸಿದ ದ್ರೋಣನು ಕೃಪನನ್ನು ಕುರಿತು, ``ಅಭಿಮನ್ಯುವು ಮಹಾ ಕೌಶಲ್ಯವುಳ್ಳ ಧನುರ್ಧಾರಿ. ತನ್ನ ದೊಡ್ಡಪ್ಪ ಚಿಕ್ಕಪ್ಪಂದಿರ ಪ್ರೀತ್ಯರ್ಥವಾಗಿ ಇಂದು ಇಲ್ಲಿ ಬಂದಿರುವನು. ಮನಸ್ಸು ಮಾಡಿದರೆ ನಮ್ಮ ಇಡೀ ಸೈನ್ಯವನ್ನು ನಿರ್ನಾಮ ಮಾಡಿಬಿಡಬಲ್ಲ ಅವನು ಇನ್ನೂ ಏಕೆ ಹಾಗೆ ಮಾಡಿಲ್ಲವೆಂದೇ ಆಶ್ಚರ್ಯವಾಗುತ್ತಿದೆ" ಎಂದನು. ಶತ್ರುವನ್ನು ಹೊಗಳಿದ ಈ ಮಾತು ದುರ್ಯೋಧನನಿಗೆ ಇಷ್ಟವಾಗಲಿಲ್ಲ. ಅವನು, ``ರಾಧೇಯ, ಇವರು ನಮ್ಮ ಗುರುಗಳು, ದೊಡ್ಡವರು. ಇಂದ್ರಯಮಾದಿಗಳೂ, ಇವರಿಗೆ ಸಮನಲ್ಲ. ಕೇವಲ ಮನುಷ್ಯರನ್ನು ಕುರಿತು ಏಕೆ ಯೋಚಿಸಿಯಾರು? ಇವರು ಮನಸ್ಸು ಮಾಡಿದರೆ ಈ ಮೂರ್ಖ ಎಳೆನಿಂಬೆಕಾಯನ್ನು ಕೊಲ್ಲಬಲ್ಲರು. ಆದರೆ, ಗುಟ್ಟೇನು ಗೊತ್ತೆ? ಇವನು ಗುರುಗಳ ಪ್ರೀತಿಯ ಶಿಷ್ಯನಾದ ಅರ್ಜುನನ ಮಗ. ಅದಕ್ಕೇ ಅವನನ್ನು ನೋಯಿಸಲು ಮನಸ್ಸು ಬಾರದೆ ರಕ್ಷಿಸುತ್ತಿರುವರು. ಅದರಿಂದಾಗಿಯೇ ಅವನು ಅಷ್ಟು ಧೈರ್ಯವಾಗಿ ನುಗ್ಗಿ ಬಂದಿರುವನು" ಎಂದನು. ದುಶ್ಶಾಸನನು, ``ನಿನ್ನ ಮಾತು ನಿಜ. ಅಭಿಮನ್ಯುವನ್ನು ಕೊಲ್ಲುವುದಕ್ಕೆ ಆಚಾರ್ಯಯನನ್ನು ನಂಬಿ ಪ್ರಯೋಜನವಿಲ್ಲ. ನಾನೇ ಅವನನ್ನೀಗ ಕೊಲ್ಲುತ್ತೇನೆ. ಇವನೊಬ್ಬ ಸತ್ತರೆ, ದುಃಖವನ್ನು ತಡೆಯಲಾರದೆ ಪಾಂಡವರೆಲ್ಲರೂ ಸಾಯುತ್ತಾರೆ" ಎಂದು ಅಭಿಮನ್ಯುವನ್ನೆದುರಿಸಿದನು. ಕೆಲ ಕ್ಷಣಗಳಲ್ಲೇ ಸೋತು ಅವನು ಪರಾರಿಯಾಗಲು, ರಾಧೇಯನು ಅವನ ಸ್ಥಾನಕ್ಕೆ ಬಂದನು. ಸ್ವಲ್ಪ ಹೊತ್ತು ಯುದ್ದ ನಡೆಯಿತಾದರೂ. ಕೊನೆಗೆ ಅವನೂ ಸೋಲಬೇಕಾಯಿತು.

ಅಭಿಮನ್ಯುವು ವ್ಯೂಹವನ್ನೊಡೆಯುವವರೆಗೂ ಪಾಂಡವ ವೀರರೆಲ್ಲರೂ ಅವನ ಹಿಂದೆಯೇ ಇದ್ದರು. ವ್ಯೂಹವನ್ನೊಡೆದು ಒಳಗೆ ಪ್ರವೇಶಿಸುವ ಕ್ಷಣದಲ್ಲಿ ಅವನು ಹಿಂದಿರುಗಿ ಅವರನ್ನೆಲ್ಲ ನೋಡಿ ಮೋಹಕವಾಗಿ ನಕ್ಕನು. ಅವರು ಅವನನ್ನು ನೋಡಿದ್ದು ಅದೇ ಕೊನೆ. ಶತ್ರುಸೈನ್ಯದ ನಡುವೆ ಮಗು ಮಾಡಿದ್ದ ದಾರಿಯಲ್ಲಿ ನುಗ್ಗುಬೇಕೆನ್ನುವಷ್ಟರಲ್ಲಿ ಗೋಡೆಯ ಹಾಗೆ ನಿಂತು ತಡೆದವನು ಜಯದ್ರಥ. ದ್ರೌಪದಿಯನ್ನು ಕದ್ದೊಯ್ಯುವ ಪ್ರಯತ್ನದಲ್ಲಿ ಅರ್ಜುನ ಹಾಗೂ ತನ್ನಿಂದ ಪೆಟ್ಟುತಿಂದ ಇವನಿಗೆ ಈಗ ತಮ್ಮನ್ನು ತಡೆಯುವಷ್ಟು ಧಾರ್ಷ್ಟ್ಯವೆ!ಎಂದು ಭೀಮನಿಗೆ ನಗು ಬಂದಿತು. ಯುಧಿಷ್ಠಿರ ಸಾತ್ಯಕಿ ಇಬ್ಬರೂ ಮೇಲೆ ಬಿದ್ದರೂ ಜಯದ್ರಥ ಮಿಸುಕಲಿಲ್ಲ. ಪದ್ಮವ್ಯೂಹದಲ್ಲಿ ಅಭಿಮನ್ಯು ಮಾಡಿದ್ದ ದಾರಿಯನ್ನು ಬಲವಾಗಿ ಮುಚ್ಚಿಬಿಟ್ಟನು. ಅಭಿಮನ್ಯು ಮುಂದೆ ಮುಂದೆ ಹೋಗುತ್ತಲೇ ಇದ್ದಾನೆ. ಈ ಜಯದ್ರಥನಿಂದ ತಮಗಾರಿಗೂ ಮುಂದೆ ಹೋಗಲಾಗುತ್ತಿಲ್ಲ. ಏನಿದು ವಿಪರ್ಯಾಸ! ಭೀಮನೂ ಯುಧಿಷ್ಠಿರನ ಜೊತೆಗೆ ಸೇರಿ ಹೋರಾಡಿದರೂ ಏನೂ ಪ್ರಯೋಜನವಾಗಲಿಲ್ಲ. ಕೃಷ್ಣಾರ್ಜುನರು ಜೊತೆಗೆ ಇಲ್ಲದಿದ್ದಾಗ ಪಾಂಡವರನ್ನು ತಡೆದು ನಿಲ್ಲಿಸುವುದು ಶಂಕರನ ವರದಿಂದಾಗಿ ಜಯದ್ರಥನಿಗೆ ಸಾಧ್ಯವಾಯಿತು. ಏನೂ ಮಾಡಲಾಗದ ಪಾಂಡವರಿಗೆ ಪ್ರಸಂಗದ ಭೀಕರತೆಯ ಅರಿವಾಗಿ ಮಹಾಭಯವು ತಲೆದೋರಿತು. ಮಗುವನ್ನು ವ್ಯೂಹದೊಳಕ್ಕೆ ಕಳುಹಿಸಿದುದಕ್ಕಾಗಿ ಯುಧಿಷ್ಠಿರನು ತನ್ನನ್ನು ತಾನೇ ಶಪಿಸಿಕೊಳ್ಳುವಂತಾಯಿತು. ಈ ವೀರರೆಲ್ಲರನ್ನು ನಂಬಿ ಅವನು ಮೃತ್ಯುವಿನ ಬಾಯೊಳಕ್ಕೇ ಹೋದಂತಾಯಿತು; ಇವರೆಲ್ಲ ಈಗ ಹೊರಗೇ ಉಳಿದರು, ಅದೂ ಜಯದ್ರಥನಂಥವನಿಂದ ಸೋತು! ``ನೀನು ಒಮ್ಮೆ ವ್ಯೂಹದೊಳಕ್ಕೆ ದಾರಿ ಮಾಡಿ ಕೊಡು, ಅನಂತರ ಕ್ಷಣಮಾತ್ರದಲ್ಲಿ ನಾವು ಒಳನುಗ್ಗಿ ವ್ಯೂಹವನ್ನು ನುಚ್ಚುನೂರು ಮಾಡಿಬಿಡುತ್ತೇವೆ" ಎಂದಿದ್ದನು ಭೀಮ. ಈಗ ಅವನು ಯುಧಿಷ್ಠಿರನನ್ನು ಅದೆಂತಹ ದೈನ್ಯದೃಷ್ಟಿಯಿಂದ ನೋಡಿದನೆಂದರೆ, ಅಂತರಿಕ್ಷದಲ್ಲಿದ್ದ ದೇವತೆಗಳಿಗೂ ಅಳು ಬರುವಂತಾಯಿತು.* * * * ವ್ಯೂಹದೊಳಗೆ ಅಭಿಮನ್ಯುವು ತನ್ನ ಅವಿರತ ವಿನಾಶಕಾರ್ಯವನ್ನು ನಡೆಸಿದ್ದ. ಕೌರವರ ಕಡೆ ಸೈನ್ಯಕ್ಕೆ ಲೆಕ್ಕಕ್ಕೆ ಸಿಕ್ಕದಷ್ಟು ನಷ್ಟವುಂಟಾಗಿತ್ತು. ದುರ್ಯೋಧನನು ತುಂಬ ಹತಾಶನಾಗಿದ್ದನು. ಶಲ್ಯನ ಮಗ ರುಕ್ಮರಥ ಅಭಿಮನ್ಯುವನ್ನೆದುರಿಸಿ ಸ್ವಲ್ಪಹೊತ್ತು ಯುದ್ಧಮಾಡಿ ಸತ್ತನು. ಶಲ್ಯನ ಇತರ ಮಕ್ಕಳು ಬಂದರು. ಅಭಿಮನ್ಯುವಿನ ಬಾಣಗಳನ್ನು ತಡೆಯಲಾರದೆ ಮೂರ್ಛಿತರಾದ ಅವರನ್ನೆಲ್ಲ ರಂಗದಿಂದ ಹೊರಕ್ಕೆ ತೆಗೆದುಕೊಂಡು ಹೋಗಲಾಯಿತು. ಎದುರಿಸಿದವನು ಇಲ್ಲವೇ ಸಾಯಬೇಕು, ಇಲ್ಲವೇ ಪಲಾಯನ ಮಾಡಬೇಕು. ಯುದ್ಧಕ್ಕೆ ಬಂದ ಲಕ್ಷಣಕುಮಾರನು ಸ್ವಲ್ಪ ಹೊತ್ತಿನಲ್ಲಿ ದುರ್ಯೋಧನನೆದುರಿಗೇ ಸಾವನ್ನಪ್ಪಿದನು. ಇದನ್ನು ನೋಡಿ ಅಘಾತವಾದ ದುರ್ಯೋಧನನು ದುಃಖದಿಂದ, ``ಈ ಪಾಪಿಯನ್ನು ಕೊಲ್ಲಿ!" ಎಂದು ಕೂಗಿದನು. ಆಗ ಆ ಭಯಾನಕವೂ ಕ್ರೂರವೂ ಆದ ದುರಂತವು ಸಂಭವಿಸಿತು: ದ್ರೋಣ, ಕೃಪ, ಅಶ್ವತ್ಥಾಮ, ರಾಧೇಯ, ಬೃಹದ್ಬಲ ಮತ್ತು ಕೃತವರ್ಮ-ಈ ಆರು ಜನ ಅದರಲ್ಲಿ ಭಾಗಿಗಳಾದರು. ಅಭಿಮನ್ಯುವು ಈ ಆರು ಜನರನ್ನೂ ಎದುರಿಸಿದುದಲ್ಲದೆ ಜೊತೆಗೆ ಜಯದ್ರಥನನ್ನೂ ಘಾತಿಸಿದನು. ಜಯದ್ರಥನಿಂದಾಗಿ ಪಾಂಡವರಾರೂ ಒಳಕ್ಕೆ ಬರಲಾಗಲಿಲ್ಲವೆಂದು ಅವನಿಗೆ ಬಹುಶಃ ಗೊತ್ತಾಗಿರಬೇಕು. ಹೊರಕ್ಕೆ ಹೋಗುವ ಬಗೆ ತಿಳಿಯಲಿಲ್ಲ. ಇಡೀ ವ್ಯೂಹವನ್ನು ನಾಶಮಾಡಿಬಿಡುವುದಾದರೆ ಆ ಸಮಸ್ಯೆಯೇ ಇರುವುದಿಲ್ಲ! ಜಯದ್ರಥನೊಂದಿಗೆ ಘೋರವಾಗಿ ಹೋರಾಡಿದನು. ಇವನೊಬ್ಬನನ್ನು ಸೋಲಿಸಿದರೆ ಪಾಂಡವರು ಒಳಗೆ ಬರಬಹುದು. ಆದರೆ ಅವನು ಆನೆಗಳ ಸಮೂಹವನ್ನೇ ಅಲ್ಲಿ ತಂದು ದಾರಿಯನ್ನು ಮುಚ್ಚಿಬಿಟ್ಟಿದ್ದನು. ಅಭಿಮನ್ಯುವು ಈಗ ಆರು ಮಹಾರಥಿಕರೊಡನೆ ಒಬ್ಬನೇ ಹೋರಾಡಬೇಕಾಯಿತು. ಅವರೆಲ್ಲರನ್ನೂ ಸೋಲಿಸಿ ಹಿಮ್ಮೆಟ್ಟುವಂತೆ ಮಾಡಿದನು. ಬೃಹದ್ಬಲನ ಹೃದಯವನ್ನು ಚೂಪಾದ ಒಂದೇ ಬಾಣದಿಂದ ಛೇದಿಸಲು, ಅವನು ಸತ್ತು ಉರುಳಿದನು. ರಾಧೇಯನ ಮೈಯೆಲ್ಲ ರಕ್ತಸಿಕ್ತವಾಯಿತು. ದುಶ್ಶಾಸನನ ಮಗ ಮುಂದೆ ಬರಲು ಅಭಿಮನ್ಯುವು, ``ಹೆದರಿ ಓಡಿದ ಹೇಡಿ ಆ ನಿಮ್ಮಪ್ಪನಿಗಿಂತ ನೀನೇ ವಾಸಿ. ಬಾ ಸೆಣೆಸೋಣ" ಎಂದನು. ಅಷ್ಟರಲ್ಲಿ ಅಶ್ವತ್ಥಾಮನೂ ಅಲ್ಲಿಗೆ ಬಂದನು. ಶಕುನಿಯು ರಾಜನ ಬಳಿ ಬಂದು, ``ಈ ಹುಡುಗನನ್ನು ನಿಯಂತ್ರಿಸುವುದಾಗಲಿ ಕೊಲ್ಲುವುದಾಗಲಿ ಸಾಧ್ಯವಾಗುತ್ತಿಲ್ಲ. ಅವನನ್ನು ಕೊಲ್ಲಲ್ಲೇ ಬೇಕು; ನಾವೆಲ್ಲರೂ ಒಟ್ಟಾಗಿ ಸೇರಿ ಕೊಲ್ಲೋಣ" ಎಂದನು. ರಾಧೇಯನು ದ್ರೋಣನಿಗೆ, ``ಈ ಅರ್ಜುನನ ಮಗ ನಮ್ಮನ್ನೆಲ್ಲ ಕೊಲ್ಲುವುದರೊಳಗೆ ಅವನನ್ನು ಕೊಲ್ಲುವುದು ಹೇಗೆಂದು ಹೇಳಿರಿ. ರಾಜನ ಬಳಿ ಇರುವುದು ನನ್ನ ಕರ್ತವ್ಯವಾದ್ದರಿಂದ ನಾನು ಇಲ್ಲಿದ್ದೇನೆ; ಇಲ್ಲವಾದರೆ ಹೊರಟುಹೋಗುತ್ತಿದ್ದೆ; ಅಭಿಮನ್ಯುವಿನ ಬಾಣಗಳು ನನ್ನನ್ನು ಅಷ್ಟೊಂದು ನೋಯಿಸುತ್ತಿವೆ" ಎಂದುದಕ್ಕೆ ಅವನು, ``ನನ್ನ ಅರ್ಜುನನ ಮಗನ ಸಮಾನರು ಯಾರೂ ಇಲ್ಲ. ಅವನ ಬಾಣಗಳಿಂದ ನೊಂದಿದ್ದರೂ, ಅವನನ್ನು ಶ್ಲಾಘಿಸದೆ ವಿಧಿಯಿಲ್ಲವಾಗಿದೆ. ಅವನನ್ನು ಕೊಲ್ಲಬೇಕಾದರೆ ಅವನ ಅಭೇದ್ಯವಾದ ಕವಚವನ್ನು ಭೇದಿಸಬೇಕು. ರಥ ಬಿಲ್ಲುಬಾಣಗಳು ಅವನ ಬಳಿ ಇರುವವರೆಗೂ ಯಾರೂ ಅವನನ್ನು ಸೋಲಿಸಲರರು. ಆದ್ದರಿಂದ ಅವನ ರಥವನ್ನೂ ಬಿಲ್ಲನ್ನೂ ನಾಶಮಾಡಿರಿ. ಅವನು ನೋಡುತ್ತಿಲ್ಲದ ಸಮಯವನ್ನು ಸಾಧಿಸಿ ಬಿಲ್ಲಿನ ನಾಣನ್ನು ಕತ್ತರಿಸಿ" ಎಂದನು. ಅಲ್ಲಿಂದ ಹೊರಟುಹೋದ ರಾಧೇಯನು ತನ್ನ ಜೀವಮಾನದಲ್ಲಿ ಎಂದೂ ಮಾಡಿರದ ಹೀನ ಕಾರ್ಯವನ್ನು ಮಾಡಿದನು-ಅಭಿಮನ್ಯುವಿನ ಹಿಂದುಗಡೆ ಹೋಗಿ ತನ್ನ ಬಾಣದಿಂದ ಅವನ ಬಿಲ್ಲನ್ನು ಕತ್ತರಿಸಿದನು. ಯುದ್ಧದಲ್ಲಿ ಅತ್ಯಂತ ತುಚ್ಛವಾದ ಇಂತಹ ಕೆಲಸ ಮಾಡಿದವರಾರೆಂದು ನೋಡಲು ಮಗುವು ಹಿಂದಕ್ಕೆ ತಿರುಗಿದ ಕೂಡಲೇ ದ್ರೋಣನು ಅಭಿಮನ್ಯುವಿನ ರಥದ ಕುದುರೆಗಳನ್ನು ಕೊಂದನು; ಕೃಪನು ಅವನ ಸಾರಥಿಯನ್ನು ಕೊಂದನು. ಕೃತವರ್ಮ, ಅಶ್ವತ್ಥಾಮ, ದುಶ್ಶಾಸನನ ಮಗ ಈ ಮೂವರೂ ಅಭಿಮನ್ಯುವನ್ನು ಬಾಣಗಳಿಂದ ಘಾತಿಸತೊಡಗಿದರು. ಆರು ಮಹಾರಥಿಕರು, ರಥರಹಿತನಾದ, ಬಿಲ್ಲೂ ಕೈಯಲ್ಲಿಲ್ಲದ ಮಗುವಿನ ಮೇಲೆ ನಿರ್ದಯರಾಗಿ ಪ್ರಹಾರ ಮಾಡಿದರು. ಕೋಪತಪ್ತನೂ ಅಪಮಾನಿತನೂ ಆದ ಅವನು ದ್ರೋಣನನ್ನು ಕುರಿತು, ``ನೀನು ವಯೋವೃದ್ಧನು, ಮಹಾಗುರುವು, ಮೇಲಾಗಿ ಸೇನಾಪತಿಯು. ನನಗೆ ಇಂಥ ಅನ್ಯಾಯ ಮಾಡಬಹುದೇ? ಎಂದನು. ರಾಧೇಯನ ಕಡೆ ತಿರುಗಿ, ``ನೀನು ಭಾರ್ಗವಶಿಷ್ಯನೆಂದು ಹೇಳಿಕೊಳ್ಳುತ್ತಿಯಲ್ಲವೆ? ಬಿಲ್ವಿದ್ಯೆಯಲ್ಲಿ ನನ್ನ ತಂದೆಯ ಸಮಾನ ಎಂದುಕೊಳ್ಳುವೆ. ನಿನಗಾದರೂ ಇಂಥ ಹೀನ ಬುದ್ಧಿ ಹೇಗೆ ಬಂದಿತು? ನನ್ನ ದೊಡ್ಡಪ್ಪ ನಿನ್ನನ್ನು ಋಜು ಬುದ್ಧಿಯವನೆಂದು ಹೊಗಳಿದರು; ಇದುವೇ ನಿನ್ನ ಋಜುಬುದ್ಧಿ? ನಿಮ್ಮನ್ನೆಲ್ಲ ಲೋಕವೀರರೆಂದು ಜನರು ಗೌರವಪ್ರೀತಿಗಳಿಂದ ಕರೆಯುತ್ತಾರೆ; ನಿಮ್ಮ ಶೌರ್ಯ ಇಷ್ಟೇಯೆ? ಹೇಗತಾನೆ ಈ ಭೂಮಿ ತಾಯಿಯು ನಿಮ್ಮನ್ನು ಬಾಯ್ದೆರೆದು ನುಂಗಿಬಿಡದೆ ನಾಚಿಕೆಗೆಟ್ಟ ನಿಮ್ಮನ್ನು ಸಹಿಸಿಕೊಂಡಿದ್ದಾಳೆಯೋ!" ಎಂದು ಛೇಡಿಸಿದನು.ಯೋಚಿಸಲು ಅವಕಾಶವೇ ಇಲ್ಲದ ಅಭಿಮನ್ಯುವು, ಕತ್ತಿಯನ್ನು ಹಿರಿದು, ಗುರಾಣಿಯನ್ನು ತೆಗೆದುಕೊಂಡು, ರಥದಿಂದ ಕೆಳಕ್ಕೆ ಧುಮುಕಿದನು. ಕೊಲ್ಲುವ ಉದ್ದೇಶದಿಂದಲೇ ಅವರುಗಳ ಮೇಲೆ ಹಾರಿ ಬಂದನು. ದ್ರೋಣನು ಅವನ ಸಿಟ್ಟನು ನೋಡಿ ನೋಡಿ ಹೆದರಿ ತನ್ನ ಬಾಣದಿಂದ ಅವನ ಕತ್ತಿಯ ಹಿಡಿಯನ್ನು ಮುರಿದುಹಾಕಿದನು. ರಾಧೇಯನು ತನ್ನ ಬಾಣಗಳಿಂದ ಅವನ ಗುರಾಣಿಯನ್ನು ಚೂರುಚೂರು ಮಾಡಿದನು. ಈಗ ಅಭಿಮನ್ಯುವು ನಿರಾಯುಧನಾಗಿ ಆ ಆರು ಮಂದಿ ಮಹಾಕ್ರೂರ ಕೊಲೆಪಾತಕಿಗಳ ಮುಂದೆ ನಿಲ್ಲುವಂತಾಯಿತು.ಒಂದು ಕ್ಷಣ ಅಭಿಮನ್ಯುವಿಗೆ ಅಪ್ಪನ ನೆನಪಾಯಿತು. ತನ್ನ ಸಾಹಸವನ್ನು ಕೇಳಿ ತಿಳಿದ ಅಪ್ಪನ ಮುಖದಲ್ಲಿ ಮೂಡುವ ಹೆಮ್ಮೆಯನ್ನು ನೋಡುವ ಭಾಗ್ಯ ತನಗಿಲ್ಲವಲ್ಲ ಎಂದು ವ್ಯಥೆಯಾಯಿತು. ಸುದ್ದಿ ತಿಳಿದ ತಾಯಿ ಸುಭದ್ರೆಯು ಎದೆಯೊಡೆದುಕೊಳ್ಳುವಳೋ ಏನೋ! ಅಯ್ಯೋ ದೌರ್ಭಾಗ್ಯವೇ ಸಾಯುವ ಮುನ್ನ ಅಪ್ಪನನ್ನೂ ಮಾವ ಕೃಷ್ಣನನ್ನೂ ನೋಡಲಾಗುವುದಿಲ್ಲವಲ್ಲ! ಇನ್ನು ದೊಡ್ಡಪ್ಪಂದಿರು ಯುಧಿಷ್ಠಿರ, ಭೀಮ-ಪಾಪ, ಅವರು ತನ್ನ ಹಿಂದೆಯೇ ಬರಲೆತ್ನಿಸಿದರು, ಆದರೆ ಈ ಜಯದ್ರಥ ತಡೆದ. ಹೌದು, ವಿಷಯ ತಿಳಿದ ಅಪ್ಪ ಅವನನ್ನು ಕೊಲ್ಲುವುದು ಖಂಡಿತ. ಬೀಭತ್ಸವೆನಿಸುವ ತನ್ನ ಸಾವಿನ ಸೇಡನ್ನು ಪಾಂಡವರು ತೀರಿಸಿಕೊಳ್ಳುವುದರಲ್ಲಿ ಸಂಶಯವಿಲ್ಲ, ಈ ಆರು ಜನರೂ ತಮ್ಮ ಹೇಡಿತನದ ವರ್ತನೆಗೆ ಹೇಸಿಕೊಳ್ಳಬಹುದೇನೋ.ಅಸಹಾಯನಾದ ಅಭಿಮನ್ಯುವು ತನ್ನ ರಥದ ಚಕ್ರವೊಂದನ್ನು ಕಳಚಿ, ತಲೆಯ ಮೇಲೆ ತಿರುಗಿಸುತ್ತ, ಮೈಯೆಲ್ಲ ಆ ಆರು ಮಹಾರಥಿಕರ ಬಾಣಗಳು ನಾಟಿ ರಕ್ತ ಸುರಿಯುತ್ತಿರಲು, ಮುಖದಲ್ಲಿ ಅಭಿಮಾನ, ಅಪಮಾನ, ಕ್ರೋಧಗಳು ಉರಿಯುತ್ತಿರಲು, ``ಈಗಲೂ ಕಾಲ ಮಿಂಚಿಲ್ಲ. ನಿಮ್ಮ ಮರ್ಯಾದೆ ಉಳಿಸಿಕೊಳ್ಳಲು ನಾನು ಅವಕಾಶ ಕೊಡುತ್ತೆನೆ. ಒಬ್ಬೊಬ್ಬರೇ ಬನ್ನಿ. ಎದುರಿನಿಂದ ಬಂದು ಯುದ್ಧಮಾಡಿ" ಎಂದೆನ್ನುತ್ತ ದ್ರೋಣನೆಡೆಗೆ ನುಗ್ಗಿದನು. ದ್ರೋಣನ ಮೇಲೆ ಚಕ್ರವನ್ನೆಸೆಯುವುದರೊಳಗೆ ಆರು ಜನರೂ ಸೇರಿ ಅದನ್ನು ತುಂಡು ತುಂಡಾಗಿ ಕತ್ತರಿಸಿದರು. ಅಭಿಮನ್ಯು ಗದೆಯನ್ನು ತೆಗೆದುಕೊಂಡು, ``ಈಗಲಾದರೂ ಬನ್ನಿ, ಒಬ್ಬೊಬ್ಬರೇ ಬನ್ನಿ. ನಿಮ್ಮಲ್ಲರೊಡನೆಯೂ ಯುದ್ಧಮಾಡಲು ನಾನು ಸಿದ್ಧ" ಎಂದೆನ್ನುತ್ತ ಅಶ್ವತ್ಥಾಮನ ಕಡೆಗೆ ನುಗ್ಗಿದನು. ಅಶ್ವತ್ಥಾಮನು ಈ ಯಮಸ್ವರೂಪಿಯನ್ನು ನೋಡಿ ಹೆದರಿ ಓಡಿಹೋದನು. ಅಭಿಮನ್ಯುವು ಅಶ್ವತ್ಥಾಮನ ಕುದುರೆಗಳನ್ನು ಕೊಂದು, ದುಶ್ಶಾಸನನ ಮಗನ ರಥವನ್ನು ಮುರಿದನು. ದುಶ್ಶಾಸನನ ಮಗನೂ ಗದೆಯನ್ನು ತೆಗೆದುಕೊಂಡು ಅಭಿಮನ್ಯುವಿನ ಮೇಲೆ ಏರಿಹೋದನು. ಇಬ್ಬರೂ ಗದಾಯುದ್ಧದಲ್ಲಿ ತೊಡಗಿದರು. ಅಭಿಮನ್ಯುವಿಗೆ ಬಹಳ ಆಯಾಸವಾಗಿತ್ತು. ಆದರು ಅದನ್ನು ಮರೆತು ಹೋರಾಡಿದನು. ಇಬ್ಬರೂ ಪ್ರಾಣವನ್ನು ಪಣವಾಗಿಟ್ಟು ಹೋರಾಡಿದರು. ಅಭಿಮನ್ಯು ಬಿದ್ದುದನ್ನು ನೋಡಿ ದುಶ್ಯಾಸನನ ಮಗನು ಅವನೆಡೆಗೆ ನುಗ್ಗಿದನು. ಇನ್ನೇನು ಏಳುವುದರಲ್ಲಿದ್ದ ಅಭಿಮನ್ಯುವಿನ ಮೇಲೆ ಗದೆಯಿಂದ ಬಲವಾಗಿ ಹೊಡೆದನು. ಅಭಿಮನ್ಯು ಪುನಃ ಬಿದ್ದವನು ಮತ್ತೆ ಮೇಲೇಳಲಿಲ್ಲ. ಅವನ ಪ್ರಾಣಪಕ್ಷಿ ಹೊರಟುಹೋಯಿತು.

ಕೌರವರ ಕಡೆಯ ಈ ಮಹಾಯೋಧರು, ಈ ಆರು ಜನ ಮಹಾರಥಿಕರು ಧರ್ಮಕ್ೇತ್ರವೆಂದು ಕರೆಯಿಸಿಕೊಳ್ಳುವ ಕುರುಕ್ೇತ್ರಭೂಮಿಯ ಮೇಲೆ ಇಂತಹ ಹೀನ ಕೊಲೆಗಡುಕತನವನ್ನು ನಡೆಸಿದರು. ಸೇನಾಪತಿ ದ್ರೋಣನು ತನ್ನ ರಾಜನಿಗಿಂತ ತಾನೇನು ಕಡಿಮೆ ಪಾತಕಿಯಲ್ಲವೆಂದು ತೋರಿಸಿಕೊಟ್ಟನು. ಶಂಕರನ ವರಪ್ರಸಾದವಾಗಿ ಹುಟ್ಟಿದ ಚಿರಂಜೀವಿ ಅಶ್ವತ್ಥಾಮನು, ಹಿಂದೆಂದೂ ಕಂಡು ಕೇಳರಿಯದಂತಹ ಈ ಹದಿನಾರರ ಎಳೆಯನ ಕಗ್ಗೊಲೆಯಲ್ಲಿ ಭಾಗಿಯಾದನು. ಅಭಿಮನ್ಯುವಿನ ಶವದ ಸುತ್ತಲೂ ಈ ಜನರು ಪ್ರಾಣಿಗಳಂತೆ ಕೇಕೆ ಹಾಕಿ ಕುಣಿದರು. ಇಲ್ಲ, ಇಲ್ಲ, ಪ್ರಾಣಿಗಳಿಗೂ ಭಾವನೆಗಳಿರುತ್ತವೆ. ಆ ಆರುಜನ ಕ್ರೂರ ರಾಕ್ಷಸರಾಗಿದ್ದರು. ಪೂರ್ವ ಪರ್ವತಗಳ ಮೇಲಿನಿಂದ ಉದಯಿಸಿ ಬಂದ ಪೂರ್ಣಚಂದ್ರನಂತೆ ಶೋಭಿಸುತ್ತಿದ್ದ ಅವನ ಮುಖವನ್ನು ನೋಡಿಯೇ ನೋಡಿದರು, ವಿಜಯದ ಕೇಕೆ ಹಾಕಿಯೇ ಹಾಕಿದರು. ಹೊರಗಡೆ ಇದ್ದ ಭೀಮ ಯುಧಿಷ್ಠಿರರಿಗೆ ಈ ಕೇಕೆ ಕೇಳಿ ಅವರು ಭಯಭೀತರಾದರು. ಕ್ಷಣಮಾತ್ರದಲ್ಲಿ ನಡೆದಿರಬಹುದಾದದ್ದನ್ನು ಊಹಿಸಿದ ಯುಧಿಷ್ಠಿರನು ಮೂರ್ಛಿತನಾದನು. ಕೃಷ್ಣಾರ್ಜುನರು ಇಲ್ಲದಾಗ ನಡೆದ ಈ ಹತ್ಯಾಕಾಂಡವನ್ನು ಕುರಿತು ಅವರು ತ್ರಿಗರ್ತರನ್ನು ಸೋಲಿಸಿ ಬಂದ ಮೇಲೆ ಏನೆಂದು ಹೇಳುವುದು? ಸೂರ್ಯನು ಮುಳುಗಿದನು. ಪಾಂಡವರ ಪಾಳೆಯದಲ್ಲಿ ಎಲ್ಲರೂ ಅತೀವ ದುಃಖದ, ನಿರಾಶೆಯ ಆಳದಲ್ಲಿ ಮುಳುಗಿಹೋಗಿದ್ದರು.* * * * ಯುಧಿಷ್ಠಿರನ ದುಃಖಕ್ಕೆ ಕೊನೆಮೊದಲಿರಲಿ. ``ಅಯ್ಯೋ, `ದೊಡ್ಡಪ್ಪ, ಖಂಡಿತ ನಾನು ಅದನ್ನು ಮಾಡಬಲ್ಲೆ. ಆದರೆ ಅಪ್ಪ ನನಗೆ ಹೇಳಿಕೊಟ್ಟಿರುವುದು ಕೇವಲ ಪ್ರವೇಶವನ್ನು ಮಾತ್ರ. ಪದ್ಮವ್ಯೂಹದಿಂದ ಹೊರಬರುವುದು ಹೇಗೆಂದು ನನಗೆ ತಿಳಿಯದು' ಎಂದು ಹೇಳಿತು ಮಗು. ನಾನು ಅವನಿಗೆ ನೀನು ಒಳಗೆ ಹೋಗು, ನಿನ್ನನ್ನು ಹಿಂದಿನಿಂದಲೇ ಬಂದು ರಕ್ಷಿಸುವುದು ನನ್ನ ಹೊಣೆ ಎಂದು ಹೇಳಿ ಕಳುಹಿಸಿದೆ. ಮಗುವಿಗೆ ಕೊಟ್ಟ ಮಾತನ್ನು ಉಳಿಸಿಕೊಳ್ಳಲಾರದೆ ಹೋದ ಮೇಲೆ ನಾನು ಬದುಕಿರಬಾರದು. ನಾನೇ ಅವನನ್ನು ಮೃತ್ಯುವಿನ ಬಾಯಿಗೆ ಕೊಟ್ಟ ಹಾಗಾಯಿತು. ಅರ್ಜುನ ಬರುವುದರೊಳಗಾಗಿ ನನ್ನನ್ನು ಕೊಂದುಬಿಡಿ. ಕೃಷ್ಣಾರ್ಜುನರು ಬಂದು ಅಭಿಮನ್ಯು ಎಲ್ಲಿ ಎಂದು ಕೇಳಿದರೆ ನಾನೇನು ಹೇಳಲಿ? ಸುಭದ್ರೆ ನನ್ನ ಮಗನೆಲ್ಲಿ ಎಂದು ಕೇಳಿದರೆ ನಾನೇನು ಹೇಳಲಿ? ನಾನೇನು ಮಾಡಿಬಿಟ್ಟೆ!" ಎಂದೆನ್ನುತ್ತ ಮೂರ್ಛೆ ಹೋದನು.ಅರ್ಜುನನು ಕೊನೆಗೂ ಸಂಶಪ್ತಕರನ್ನು ಸಂಪೂರ್ಣವಾಗಿ ಸೋಲಿಸಿದನು. ಸೂರ್ಯನು ಅಸ್ತನಾಗಿದ್ದರಿಂದ ಅವನು ರಥವನ್ನು ಹಿಂದಿರುಗಿಸಿ ಹೊರಟಿದ್ದನು. ದಾರಿಯುದ್ದಕ್ಕೂ ದುಶ್ಶಕುನಗಳನ್ನು ಕಂಡು ಅರ್ಜುನನ ಮನಸ್ಸು ಭಯಭೀತವಾಯಿತು. ಪಾಳೆಯದಲ್ಲಿ ಎಂದೂ ಇಲ್ಲದಿದ್ದ ಭಾರವಾದ ಮೌನ. ``ಕೃಷ್ಣ, ಇದೇನಿದು! ನಮ್ಮ ವಿಜಯವನ್ನು ಸಾರುವ ಕೊಂಬು ಕಹಳೆಗಳಿಲ್ಲ, ಮನವನ್ನು ಮುದಗೊಳಿಸುವ ವೀಣಾರವವಿಲ್ಲ. ಈ ಸೈನಿಕರನ್ನು ನೋಡು. ನನ್ನನ್ನು ಕಂಡೊಡನೆ ಮುಖ ತಪ್ಪಿಸುತ್ತಿದ್ದಾರೆ. ನನ್ನ ಸೋದರರೆಲ್ಲಿ, ಕಾಣಿಸುತ್ತಿಲ್ಲವಲ್ಲ? ನಿತ್ಯವೂ ಸುಂದರವಾಗಿ ನಗುತ್ತ ನನ್ನನ್ನು ಸ್ವಾಗತಿಸುತ್ತಿದ್ದ ಅಭಿಮನ್ಯುವೆಲ್ಲಿ? ನನಗೇಕೋ ಭಯವಾಗುತ್ತಿದೆ" ಎಂದೆನ್ನುತ್ತ ಯುಧಿಷ್ಠಿರನ ಡೇರೆಗೆ ಬಂದನು. ಅಲ್ಲಿ ನೋಡುತ್ತಾನೆ, ಎಲ್ಲರೂ ಮುಖ ಕೆಳಗೆ ಹಾಕಿ ಕುಳಿತಿದ್ದಾರೆ! ಎಂಡೂ ಇಂತಹ ವಾತಾವರಣವಿರಲಿಲ್ಲ. ಭೀಮನು ಮೇಲೆದ್ದು ಇವನನ್ನು ಸ್ವಾಗತಿಸುವುದಕ್ಕೆ ಹೋಗಿ ಬಿದ್ದುಬಿಟ್ಟ. ಯುಧಿಷ್ಠಿರನ ಕಣ್ಣೊರೆಸಿಕೊಳ್ಳುತ್ತಿದ್ದಾನೆ. ನಕುಲ ನೆಲ ನೋಡುತ್ತಿದ್ದಾನೆ, ಸಹದೇವ ಡೇರೆಯಿಂದ ಹೊರಗೆ ದಿಗಂತವನ್ನು ನೋಡುತ್ತಿದ್ದಾನೆ. ಯಾರೂ ಮಾತನಾಡಲೊಲ್ಲರು. ದೀಪವನ್ನು ಸಹ ಹಚ್ಚಿಲ್ಲ. ಎಲ್ಲಿ ನೋಡಿದರು ಅಭಿಮನ್ಯುವಿಲ್ಲ. ``ನಿಮ್ಮ ಮುಖಗಳೆಲ್ಲ ಪೆಚ್ಚಾಗಿವೆ. ಎಲ್ಲರೂ ನೋವಿನಲ್ಲಿ ನರಳುತ್ತಿರುವಿರಿ. ಹೇಳಿ, ಏನಾಯಿತು? ಎಲ್ಲಿ ನನ್ನ ಮಗು ಅಭಿಮನ್ಯು?" ಎಂದ ಅರ್ಜುನನಿಗೆ ಯುಧಿಷ್ಠಿರನ ಆಳುವೇ ಉತ್ತರವಾಯಿತು.``ದ್ರೋಣ ಪದ್ಮವ್ಯೂಹವನ್ನು ರಚಿಸಿದನೆಂದು ಕೇಳಿದೆ. ನೀವು ನನ್ನ ಮಗುವನ್ನು ಆ ಮೃತ್ಯುಕೂಪಕ್ಕೆ ಕಳುಹಿಸಲಿಲ್ಲವಷ್ಟೆ?" ಈಗಲು ಯಾರದು ಮಾತಿಲ್ಲ. ``ಮಗುವಿನ ಹೊರತಾಗಿ ನಿಮಗಾರಿಗೂ ಪದ್ಮವ್ಯೂಹಛೇದನ ಗೊತ್ತಿಲ್ಲ. ನಾನು ಅವನಿಗೆ ಒಳನುಗ್ಗುವುದನ್ನು ಮಾತ್ರ ಕಲಿಸಿದ್ದೆ; ಹೊರಬರುವುದನ್ನು ಕಲಿಸಿರಲಿಲ್ಲ..." ಎನ್ನುತ್ತಿದ್ದಂತೆ ಯುಧಿಷ್ಠಿರನು ಅಳು ಹೆಚ್ಚಾಯಿತು. ಅರ್ಜುನನಿಗೆ ನಡೆದುದೇನೆಂದು ತಿಳಿದುಹೋಯಿತು. ಅವನನ್ನು ನೋಡಲು ಯಾರಿಗೂ ಧೈರ್ಯವಾಗಲಿಲ್ಲ. ಯುಧಿಷ್ಠಿರನು ಮೇಲೆದ್ದು, ``ಒಂದೂ ಮಾತನಾಡಬೇಡ. ನನ್ನನ್ನು ಮೊದಲು ಕೊಂದುಬಿಡು. ನಾನೇ ಅಭಿಮನ್ಯುವನ್ನು ಕೊಂದಿದ್ದು" ಎನ್ನುತ್ತಿದ್ದಂತೆ ಮತ್ತೆ ಮೂರ್ಛೆಹೋದನು. ಅಭಿಮನ್ಯು ಇನ್ನಿಲ್ಲ ಎಂಬುದನ್ನು ಅರ್ಜುನನು ಕಲ್ಪಿಸಿಕೊಳ್ಳಲೇ ಆಗಲಿಲ್ಲ. ದುಃಖಿತನಾದ ಕೃಷ್ಣನು ನೆಲದಲ್ಲಿ ಕುಳಿತವನು ಭೀಮನ ಯಾತನೆಯನ್ನು ನೋಡಿ ಅವನ ಕೈ ಹಿಸುಕಿ ಸಮಾಧಾನ ಮಾಡಲೆತ್ನಿಸಿದ. ಅರ್ಜುನನು ``ಹೇಳಿ ಯಾರಾದರೂ ಹೇಳಿ, ಏನಾಯಿತೆಂದು. ಅಭಿಮನ್ಯು ಹೇಗೆ ಸತ್ತ? ನಾನು ಪದ್ಮವ್ಯೂಹದಿಂದ ಹೊರಬರಲಾರೆ ಎಂದು ಅವನು ನಿಮಗೆ ಹೇಳಲಿಲ್ಲವೆ? ವಿಧಿಪ್ರೇರಿತನಾದ ಯಾವನು ನನ್ನ ಮಗನನ್ನು ಕೊಂದು ಇನ್ನೂ ಉಸಿರಾಡುತ್ತಿರುವನು? ನನ್ನ ಮಗು ಧೀರ, ಶೂರ. ಯುದ್ಧದಲ್ಲಿ ತಾನಾಗಿಯೇ ಮೊದಲು ಹೊಡೆಯುವವನಲ್ಲ. ಅವನನ್ನು ಕೊಲ್ಲಲು ಮನಸ್ಸಾದರೂ ಯಾರಿಗೆ, ಹೇಗೆ ಬಂದಿತು? ನನಗೆ ನಂಬಲೇ ಆಗುತ್ತಿಲ್ಲವಲ್ಲ" ಎಂದೆನ್ನುತ್ತ ತುಂಬ ಹೊತ್ತು ದುಃಖಿಸಿದನು. ಕೊನೆಗೆ, ``ಎಲ್ಲೋ ಏನೋ ಮೋಸ ನಡೆದಿದೆ. ಅಭಿಮನ್ಯುವನ್ನು ಹಾಗೆಲ್ಲ ಕೊಲ್ಲಲು ಯಾರಿಗೂ ಸಾಧ್ಯವಿಲ್ಲ. ಇದು ಖಂಡಿತ" ಎಂದೆನ್ನುತ್ತ ನೆಲಕ್ಕೆ ಬಿದ್ದು ಮೂರ್ಛೆಹೋದನು. ಅವನನ್ನು ಪನ್ನೀರು ಚಿಮುಕಿಸಿ ಎಬ್ಬಿಸಿದರು.ಕೃಷ್ಣನು ಅರ್ಜುನನ ಕೈಯನ್ನು ತೆಗೆದುಕೊಂಡು, ``ಅರ್ಜುನ, ದುಃಖಿಸಬೇಡ. ವೀರ ಅಭಿಮನ್ಯುವು ನಿಮ್ಮನ್ನು ಬದುಕಿಸುವುದಕ್ಕಾಗಿ ಸತ್ತು ಸ್ವರ್ಗವನ್ನು ಸೇರಿರುವನು. ದುಃಖದಲ್ಲಿ ಮುಳುಗಿರುವ ನಿನ್ನ ಸೋದರರನ್ನು ನೋಡು. ಪಶ್ಚಾತ್ತಾಪದಿಂದ ಎದೆಯೊಡೆದುಕೊಂಡಿರುವ ಅವರನ್ನು ನೀನೇ ಸಮಾಧಾನ ಮಾಡಬೇಬೇಕು. ಅವರಿಗೆಷ್ಟು ಬೇಗುದಿಯಾಗಿರಬಹುದೆಂದು ಯೋಚಿಸು. ಅಭಿಮನ್ಯು ನಮ್ಮೆಲ್ಲರ ಪ್ರೀತಿಯ ಮಗುವಲ್ಲವೇ?"ಎಂದನು. ಅರ್ಜುನನು ತಕ್ಷಣ ಯುಧಿಷ್ಠಿರನಿಗೂ ಭೀಮನಿಗೂ ನಮಸ್ಕರಿಸಿ, ``ಕ್ಷಮಿಸಿ ನನ್ನ ದುಃಖದ ಭರದಲ್ಲಿ ನಿಮ್ಮನ್ನು ಮರೆತುಬಿಟ್ಟೆ. ನಿಮಗೇನೆನ್ನಿಸಿರಬಹುದೆಂದು ನಾನು ಊಹಿಸಬಲ್ಲೆ. ನಾನೀಗ ಧೈರ್ಯ ತಂದುಕೊಂಡಿರುವೆ. ಯಾರದರೂ ನನಗೆ ಹೇಳಿ, ಇದು ಹೇಗಾಯಿತೆಂದು" ಎಂದನು.ಯುಧಿಷ್ಠಿರನೂ ಭೀಮನೂ ಅರ್ಜುನನನ್ನು ಕುಳ್ಳಿರಿಸಿ ನಡೆದುದೆಲ್ಲವನ್ನೂ ಹೇಳಿದರು. ಕೇಳುತ್ತ ಕೇಳುತ್ತ ಅರ್ಜುನನು ಮೂರ್ಛೆಹೋದನು. ಎಚ್ಚೆತ್ತ ಮೇಲೆ ಎದ್ದುನಿಂತು, ಕೋಪದಿಂದ ಮೈ ನಡುಗುತ್ತಿರಲು, ``ಇದೋ ನನ್ನ ಪ್ರತಿಜ್ಞೆ. ನಾನು ನಾಳೆ ಜಯದ್ರಥನನ್ನು ಕೊಲ್ಲುವೆನು. ಅವನು ಯುಧಿಷ್ಠಿರನಲ್ಲಿ ಅಧವಾ ಕೃಷ್ಣನಲ್ಲಿ ಆಶ್ರಯ ಪಡೆದರೂ ನಾನವನನ್ನು ಕೊಲ್ಲುವೆನು. ಸಾಕ್ಷಾತ್ ಶಂಕರನಿಗೇ ಶರಣಾಗತನಾದರೂ, ನಾನವನನ್ನು ಕೊಲ್ಲುವೆನು. ಅವನನ್ನು ನಾನು ನಾಳೆ ಕೊಲ್ಲಲಾಗದಿದ್ದರೆ, ನನ್ನ ಪುಣ್ಯಗಳೆಲ್ಲವೂ ಲೋಪವಾಗಲಿ! ಅಗ್ನಿಸಾಕ್ಷಿಯಾಗಿ, ಗಾಂಡೀವದ ಸಾಕ್ಷಿಯಾಗಿ, ನಾನವನನ್ನು ಕೊಂದೇ ಕೊಲ್ಲುವೆನು. ಕೊಲ್ಲಲಾಗದಿದ್ದರೆ ಗಾಂಡೀವಸಮೇತವಾಗಿ ಅಗ್ನಿಪ್ರವೇಶವನ್ನು ಮಾಡುವೆನು" ಎಂದು ಗಾಂಡೀವದ ನಾಣನ್ನು ತಟ್ಟಿದನು. ಅದರ ಟಂಕಾರವು ದಶದಿಕ್ಕುಗಳಲ್ಲಿಯೂ ಮೊಳಗಿತು. ತಕ್ಷಣವೇ ಕೃಷ್ಣನು ತನ್ನ ಪಾಂಚಜನ್ಯವನ್ನೂದಿದನು. ಈ ಎರಡರ ಶಬ್ದವು ಭೂಮಿಯನ್ನೆ ನಡುಗಿಸಿತು. ಅದನ್ನು ಕೇಳಿದ ಕೌರವರ ಗುಂಡಿಗೆಯೂ ಗಡಗಡನೆ ನಡುಗಿತು. ಪಾಂಡವರೀಗ ಉತ್ಸಾಹದಿಂದ ಮೇಲೆದ್ದರು. ಅಭಿಮನ್ಯುವಿನ ಸಾವಿಗಾಗಿ ಸೇಡು! ಆ ಆರು ಜನ ಪಾತಕಿಗಳಿಗೆ ಆಗಬೇಕಾಗಿರುವ ಶಿಕ್ಷೆ! ಪ್ರತೀಕಾರವಾಗಿ ಅವರೆಲ್ಲ ಸಾಯುವುದು ಖಂಡಿತ-ದಿನಗಳೋ ಗಂಟೆಗಳೋ ಉಳಿದಿರುವುದುದಷ್ಟೆ. ಆದರೆ ಅವರು ಅಭಿಮನ್ಯುವಿನ ಆ ಕೊನೆಯ ನಗುಮುಖವನ್ನು ಮರೆಯಲಾರದಾದರು. ಅದೇ ಅವರನ್ನು ಮುಂದಿನ ಯುದ್ಧಕ್ಕೆ ಪ್ರೇರೆಪಿಸಿತು.ಪಾಂಡವ ಪಾಳೆಯದಲ್ಲಿ ಪ್ರತಿಯೊಬ್ಬರೂ ಅಭಿಮನ್ಯುವಿನ ಸಾವಿನಿಂದಾಗಿ ದುಃಖತಪ್ತರಾಗಿದ್ದರು. ಯಾರೊಬ್ಬರೂ ಆ ರಾತ್ರಿ ನಿದ್ರಿಸಲಿಲ್ಲ. ಅರ್ಜುನನ ಪ್ರತಿಜ್ಞೆಯನ್ನು ಮಾಡಿರುವ ಅರ್ಜುನನು ಹೇಗೆ ನಾಳಿನ ಯುದ್ದದಲ್ಲಿ ಅದನ್ನು ಪೂರೈಸಿಕೊಳ್ಳುವನೋ! ದೇವರೆ, ಅವನಿಗೆ ವಿಜಯವನ್ನು ಕರುಣಿಸು! ಅವನ ಪ್ರತಿಜ್ಞೆಯನ್ನು ಪೂರ್ಣಗೊಳಿಸು! ಇದಕ್ಕಾಗಿ ನಾವೆಲ್ಲರೂ ನಮ್ಮ ಪುಣ್ಯವನ್ನು ಧಾರೆಯೆರೆಯಲು ಸಿದ್ಧರಾಗಿರುವೆವು. ಪಾಂಡವರ ಪಾಳೆಯದಲ್ಲಿನ ಎಲ್ಲರೂ ಹೀಗೆ ರಾತ್ರಿಯೆಲ್ಲಾ ಪ್ರಾರ್ಥಿಸುತ್ತಿದ್ದರು.* * * * ಕೌರವರ ಪಾಳೆಯಅಲ್ಲಿ ಸಂತೋಷ ಉಕ್ಕಿ ಹರಿಯುತ್ತಿತ್ತು. ಆಚಾರ್ಯರು ತಮ್ಮ ಮಾತಿನಂತೆ ಪಾಂಡವರ ಕಡೆಯ ಮಹಾವೀರನೊಬ್ಬನನ್ನು ಸಂಹರಿಸಿದ್ದರು. ಎಲ್ಲರೂ ತಮ್ಮನ್ನು ತಾವು ಹೊಗಳಿಕೊಳ್ಳುವವರೇ! ಸಂಶಪ್ತಕರೂ ಅವರ ಸೇನೆಯೂ ಅರ್ಜುನನಿಗೆ ಸಂಪೂರ್ಣವಾಗಿ ಸೋತುಹೋದರೆಂದು ಕೇಳಿಯೂ ದುರ್ಯೋಧನನಿಗೆ ದುಃಖವಾಗಲಿಲ್ಲ. ಅಭಿಮನ್ಯು ಸತ್ತಿದ್ದೇ ಎಲ್ಲರಿಗೂ ಸಂಭ್ರಮ, ವಿಜಯೋತ್ಸವ. ಈ ಮಧ್ಯೆ ಕೃಷ್ಣನ ಪಾಂಚಜನ್ಯ, ಅರ್ಜುನನ ಗಾಂಡೀವ ಧ್ವನಿ ಕೇಳಿ ಅವರಿಗೆ ಗಾಬರಿಯಾಯಿತು. ಅದರರ್ಥವೇನೆಂದೇ ಅವರಿಗೆ ತಿಳಿಯದಾಯಿತು. ಒಂದಂತೂ ಸತ್ಯ; ದುಃಖದಲ್ಲಿ ಮುಳುಗಿಹೋಗಿರಬಹುದೆಂದುಕೊಂಡಿದ್ದ ಕೃಷ್ಣಾರ್ಜುನರು ಯಾವುದೋ ಕಾರಣಕ್ಕಾಗಿ ಉತ್ಸಾಹಪಡುತ್ತಿದ್ದಾರೆ. ಇದು ಅವರಿಗೆ ಅನಿರೀಕ್ಷಿತವಾಗಿತ್ತು. ಅಷ್ಟರಲ್ಲಿ ಪಾಂಡವ ಪಾಳೆಯದಿಂದ ಬಂದ ಗೂಢಚಾರರು ಅರ್ಜುನನ ಪ್ರತಿಜ್ಞೆಯನ್ನು ತಿಳಿಸಿದರು. ಜೀವಭಯದಿಂದ ಜಯದ್ರಥನು ದುರ್ಯೋಧನನಲ್ಲಿಗೆ ಬಂದು, ``ಅರ್ಜುನ ತನ್ನ ಪ್ರತಿಜ್ಞೆಯನ್ನು ಪೂರೈಸಿಕೊಳ್ಳುವುದು ಖಂಡಿತ. ಓಡಿಹೋಗುವುದನ್ನು ಬಿಟ್ಟು ಇನ್ನೇನನ್ನೂ ನಾನು ಯೋಚಿಸಲಾರೆ. ರಾಜ್ಯಕ್ಕೆ ಹಿಂದಿರುಗಿ ನನ್ನ ತಂದೆಯಲ್ಲಿ ಆಶ್ರಯ ಪಡೆದು ಜೀವವನ್ನುಳಿಸಿಕೊಳ್ಳುವೆನು. ಕ್ಷತ್ರಿಯನಾದವನು ರಣರಂಗದಿಂದ ಓಡಿಹೋದವನನ್ನು ಬೆನ್ನಟ್ಟಲಾರ" ಎಂದನು. ಜಯದ್ರಥನ ಭಯ ದುರ್ಯೋಧನನನ್ನು ತಟ್ಟಿದಂತೆ ತೋರಲಿಲ್ಲ. ಜಯದ್ರಥನಿಂದ ಆಗಬೇಕಾದ ಕೆಲಸ ಆಯಿತು. ತನ್ನ ಸ್ವಾರ್ಥವನ್ನೇ ಮೊದಲು ಯೋಚಿಸುವ ದುರ್ಯೋಧನನಿಗೆ ಅವನ ಜೀವಭಯವನ್ನು ಕಂಡು ನಗು ಬಂದಿತು. ``ಭಯಪಡಬೇಡ. ಅರ್ಜುನ ನಿನ್ನನ್ನು ಕೊಲ್ಲಲಾರ. ರಣರಂಗದಿಂದ ಓಡಿಹೋದವನನ್ನು ಬೆನ್ನಟ್ಟುವುದು ಕ್ಷತ್ರಿಯಧರ್ಮವಲ್ಲವೆಂದು ಹೇಳಿದೆಯಲ್ಲವೇ? ನಾವು ಅಭಿಮನ್ಯುವನ್ನು ಕೊಂದ ಬಗೆಯೂ ಕ್ಷತ್ರಿಯ ಧರ್ಮವೇನಲ್ಲ ಎಂಬುದನ್ನು ಮರೆಯಬೇಡ. ಅರ್ಜುನನಿಗೆ ಅದು ಗೊತ್ತು. ಮೇಲಾಗಿ ನೀನು ಶಂಕರನಲ್ಲೇ ಆಶ್ರಯ ಪಡೆದಿದ್ದರೂ ನಿನ್ನನ್ನು ಕೊಲ್ಲದೆ ಬಿಡುವುದಿಲ್ಲ ಎಂದು ಅವನು ಪ್ರತಿಜ್ಞೆ ಮಾಡಿದ್ದಾನೆ. ಆದ್ದರಿಂದ ಓಡಿಹೋದರೆ ಪ್ರಯೋಜನವಿಲ್ಲ. ನಿನ್ನ ಭಯಕ್ಕೆ ಕಾರಣವಿಲ್ಲ. ನಿನ್ನ ರಕ್ಷಣೆಗೆ ನಾವೆಲ್ಲ ಇರುವಾಗ ಇಂದ್ರನೂ ನಿನಗೆ ಏನನ್ನೂ ಮಾಡಲಾರ. ಸ್ವಯಂ ನೀನೇ ಮಹಾ ವೀರನಾಗಿ ಹೆದರುವುದೆ? ಅವನೇನು ದೇವರೆ? ನಿನ್ನ ಕೂದಲು ಕೊಂಕದಂತೆ ನಾನು ನೋಡಿಕೊಳ್ಳುವೆ. ಅರ್ಜುನನ ಪ್ರತಿಜ್ಞೆ ಭಂಗವಾದರೆ ಅವನು ಅಗ್ನಿಪ್ರವೇಶ ಮಾಡುವನಲ್ಲವೆ? ನಿನ್ನಿಂದಾಗಿ ಅರ್ಜುನ ಸತ್ತರೆ ಉಳಿದ ಪಾಂಡವರು ಏನುಮಾಡಬಲ್ಲರು? ಈ ಅವಕಾಶವನ್ನು ಕಳೆದುಕೊಳ್ಳುವುದು ಬೇಡ" ಎಂದನು. ಜಯದ್ರಥನಿಗೆ ಸಮಾಧಾನವಾಯಿತು. ಆದರೂ ದುರ್ಯೋಧನನೊಂದಿಗೆ ದ್ರೋಣರಲ್ಲಿಗೆ ಹೋಗಿ, ``ಅರ್ಜುನನ ಮತ್ತು ನಾನು ಇಬ್ಬರಲ್ಲಿ ಹೆಚ್ಚು ಶೂರರು ಯಾರು? ನಿಮ್ಮ ನಿಷ್ಪಕ್ಷಪಾತವಾದ ಅಭಿಪ್ರಾಯವನ್ನು ಹೇಳಿ" ಎಂದನು. ದ್ರೋಣನು, ``ನೀವಿಬ್ಬರೂ ಗುರುಭಾಯಿಗಳು, ನನಗೆ ಗೊತ್ತು. ಆದರೆ ಅವನ ಕೌಶಲ ದೊಡ್ಡದು; ಮೇಲಾಗಿ ಅವನು ದೇವತೆಗಳಿಂದ ಅಸ್ತ್ರಗಳನ್ನೆಲ್ಲ ಸಂಗ್ರಹಿಸಿರುವನು. ಅವೆಲ್ಲ ಇರಲಿ. ನಾಳೆ ನಾನು ನಿನ್ನನ್ನು ಅರ್ಜುನನಿಂದ ರಕ್ಷಿಸುವೆನು. ನಾಳೆ ನಾನು ಶಕಟವ್ಯೂಹದೊಳಗೆ ಪದ್ಮವ್ಯೂಹವನ್ನೂ, ಅದರೊಳಗೆ ಸೂಚೀಮುಖ ವ್ಯೂಹವನ್ನೂ ರಚಿಸಿ ಅದರೊಳಗೆ ಎಲ್ಲ ವೀರರ ಸಮೇತ ನಿನ್ನನ್ನು ಇಡುವೆನು. ಇಂದಿನಂತೆಯೇ ವ್ಯೂಹದ ಹೊರಗಡೆ ನಾನು ಕಾವಲು ಕಾಯುತ್ತಿರುವೆನು. ನೀನೇಕೆ ಅಷ್ಟೊಂದು ಹೆದರುವೆ? ನನ್ನ ಈ ರಕ್ಷಣೆಯೂ ಸೋತರೆ, ನೀನು ಸಾವನ್ನೆದುರಿಸಬೇಕು. ಎಲ್ಲರೂ ಒಂದಲ್ಲ ಒಂದು ದಿನ ಸಾಯಬೇಕು ತಾನೆ? ನೀನು ರಣರಂಗದಲ್ಲಿ ಹೋರುತ್ತ ಸತ್ತರೆ ವೀರಸ್ವರ್ಗವು ದೊರಕುವುದು. ಅಸಂಭವವಾದುದರ ಬಗ್ಗೆ ಅಷ್ಟೇಕೆ ಚಿಂತಿಸುತ್ತಿ? ಹೋಗಿ ಮಲಗಿಕೋ. ಒಂದು ವೇಳೆ ಅರ್ಜುನನು ಮೊದಲಿನರೆಡು ವ್ಯೂಹಗಳನ್ನೂ ಭೇದಿಸಿಕೊಂಡು ಮೂರನೆಯ ವ್ಯೂಹಕ್ಕೂ ಲಗ್ಗೆಯಿಡುತ್ತಾನೆ ಎಂದಿಟ್ಟುಕೋ; ಅಲ್ಲಿಯ ವೀರರನ್ನೆಲ್ಲ ಸೋಲಿಸುವ ವೇಳೆಗೆ ಸೂರ್ಯಾಸ್ತವಾಗಿರುತ್ತದೆ, ಅವನ ಪ್ರತಿಜ್ಞೆ ಸುಳ್ಳಾಗುತ್ತದೆ. ನಾಳಿನ ಬಗ್ಗೆ ಚಿಂತಿಸಬೇಡ" ಎಂದನು.

ದ್ರೋಣನ ಮಾತುಗಳಿಂದ ಜಯದ್ರಥನಿಗೆ ಅಂತಹ ಅಪಾಯವೇನೂ ತನಗೆ ಇಲ್ಲ ಎನಿಸಿತು. ಕೌರವರ ಮೇಲೆ ನಂಬಿಕೆ ಬಂದಿತು. ಎಲ್ಲರೂ ಹೋಗಿ ಮಲಗಿದರು. ಅರ್ಜುನ ನಾಳೆ ಜಯಿಸುವ ಸಂಭವವಿಲ್ಲವೆಂದೇ ಎಲ್ಲರ ಅನಿಸಿಕೆಯಾಗಿತ್ತು.ಕೃಷ್ಣನು ಅರ್ಜುನನ ಡೇರೆಗೆ ಹೋಗಿ, ``ಅರ್ಜುನ, ನೀನು ಹಿಂದುಮುಂದು ನೋಡದೆ ಪ್ರತಿಜ್ಞೆ ಮಾಡಿಬಿಟ್ಟೆ. ನನ್ನನ್ನು ಕೇಳದೆ ಹಾಗೇಕೆ ಮಾಡಿದೆ? ಬಹು ದೊಡ್ಡ ಕೆಲಸವನ್ನು ನೀನು ಹೊತ್ತುಕೊಂಡಿರುವೆ. ಲೋಕದ ಅಪಹಾಸ್ಯಕ್ಕೆ ನೀನು ಪಕ್ಕಾಗದಿರಲಿ ಎಂದು ಹಾರೈಸುತ್ತೇನೆ. ಅದೇನೂ ಅಂತಹ ದೊಡ್ಡ ಕೆಲಸವಲ್ಲ ಎಂದು ಹೇಗೆ ಭಾವಿಸಿದೆ?" ಎಂದನು.ಅರ್ಜುನನು ನಕ್ಕು, ``ಅವರ ಕಡೆಯ ವೀರರು ಯಾರೂ ನನ್ನಷ್ಟು ಸಮರ್ಥರಲ್ಲ ಎಂಬುದು ನನಗೆ ಗೊತ್ತು. ನಾನು ದ್ರೋಣನನ್ನೂ ಅವನ ಮಗನನ್ನೂ ಸೋಲಿಸಬಲ್ಲೆ. ನಾಳೆ ನಾನು ಜಯದ್ರಥನನ್ನು ಕೊಲ್ಲುವುದು ಖಂಡಿತ. ತನ್ನ ಸೇನಾಪತಿಯನ್ನು ದುರ್ಯೋಧನನು ತುಂಬ ಸಮರ್ಥ, ಯುದ್ಧವನ್ನು ಗೆದ್ದುಕೊಡುತ್ತಾನೆ ಎಂದುಕೊಂಡಿದ್ದಾನೆ. ನಾನು ದ್ರೋಣನೊಂದಿಗೇ ಮೊದಲು ಹೋರಾಡುತ್ತೇನೆ. ಕೃಷ್ಣ, ನಾಳೆ ನಾನು ಅವರ ಕಡೆಯ ಮಹಾವೀರರನ್ನೆಲ್ಲ ಹೇಗೆ ಕೊಲ್ಲುತ್ತೇನೆ, ನನ್ನ ಗಾಂಡೀವವು ಎಂಥ ವೈಭವದಿಂದ ಮೆರೆಯುತ್ತದೆ, ಹೇಗೆ ಸೂರ್ಯಾಸ್ತದೊಳಗೇ ಜಯದ್ರಥನನ್ನು ಕೊಲ್ಲುತ್ತದೆ ಎಂಬುದನ್ನು ನೋಡು. ನನ್ನ ಅಭಿಮನ್ಯು ನೋಡುತ್ತಿರುತ್ತಾನೆ. ನಾನು ಸೋಲುವಂತೆಯೇ ಇಲ್ಲ. ಬೆಳಗ್ಗೆ ಬೇಗ ಹೋಗೋಣ. ಎಲ್ಲ ಆಯುಧಗಳೂ ಸಿದ್ಧವಾಗಿವೆ ತಾನೆ? ನೀನು ನನ್ನ ಜೊತೆಗಿರುವೆ ಎಂದಮೇಲೆ, ವಿಜಯವು ನಮ್ಮದೇ!" ಎಂದನು.ಸ್ವಲ್ಪ ಹೊತ್ತು ಅವರಿಬ್ಬರೂ ಸುಮ್ಮನೆ ಕುಳಿತರು. ಇಬ್ಬರಿಗೂ ಅಭಿಮನ್ಯುವಿನದೇ ಯೋಚನೆ. ಇದ್ದಕ್ಕಿಂತೆ ಅರ್ಜುನನು, ``ಕೃಷ್ಣ, ನಾನು ಸುಭದ್ರೆಯ ಕಣ್ಣೀರನ್ನು ಎದುರಿಸಲಾರೆ. ನನ್ನ ಪರವಾಗಿ ನೀನೇ ಅವಳಿಗೆ ಸಮಾಧಾನ ಹೇಳಿ ಬರುತ್ತೀಯಾ?" ಎನ್ನಲು ಕೃಷ್ಣನು, ``ಹೌದು ಅರ್ಜುನ, ನಿನಗೆ ಕಷ್ಟವಾಗುತ್ತದೆ. ನಾನು ಇದೀಗಲೇ ಹೋಗಿಬರುತ್ತೇನೆ" ಎಂದು ತಕ್ಷಣವೇ ತಂಗಿಯನ್ನು ನೋಡಲು ಹೊರಟನು. ಮಗನನ್ನು ಕಳೆದುಕೊಂಡ ತಾಯಿಯ ದುಃಖ ವರ್ಣನಾತೀತವಾಗಿತ್ತು. ಕೃಷ್ಣನು ಸುಭದ್ರೆಯ ಬಳಿ ಎಷ್ಟೋ ಹೊತ್ತು ಸುಮ್ಮನೆ ಕುಳಿತನು. ``ಸುಭದ್ರೆ, ವೀರಸ್ವರ್ಗವನ್ನು ಸೇರಿದ್ದಾನೆ ನಿನ್ನ ಮಗ. ಅದೇಕೆ ಅಷ್ಟೊಂದು ದುಃಖಿಸುತ್ತಿ? ಅವನೀಗ ಚಂದ್ರಲೋಕದಲ್ಲಿ ಸುಖವಾಗಿರುವನು. ಅವನ ಕೀರ್ತಿ ಭೂಲೋಕದಲ್ಲಿ ಚಿರಸ್ಥಾಯಿಯಾಗಿರುವುದು. ಅಭಿಮನ್ಯುವನ್ನು ಈ ಪ್ರಪಂಚವು ಮರೆಯಲು ಸಾಧ್ಯವೆ? ಅಳಬೇಡ ತಂಗಿ, ಬೇರಾರೂ ಬದುಕಲು ಸಾಧ್ಯವಿಲ್ಲದಂತಹ ಬದುಕು ನಿನ್ನ ಮಗುವಿನದು. ಇನ್ನು ಅವನ ಸಾವೂ ಸಹ ಕ್ಷತ್ರಿಯ ವೀರರು ಬಯಸುವಂಥದು, ತಮಗೆ ಲಭ್ಯವಾಗಲಿಲ್ಲವಲ್ಲ ಎಂದು ಹೊಟ್ಟೆಕಿಚ್ಚು ಪಡುವಂಥದು! ನಾವೆಲ್ಲ ಮರ್ತ್ಯರು, ಒಂದಲ್ಲ ಒಂದು ದಿನ ಸಾಯಲೇಬೇಕು. ಜನರು ತಮಗೆ ಸ್ವರ್ಗ ಲಭಿಸಲೆಂದು ಯಜ್ಞಯಾಗಾದಿಗಳನ್ನು ಮಾಡುತ್ತಾರೆ. ಆದರೆ ನಮ್ಮ ಮಗು ರಣರಂಗದಲ್ಲಿ ಅಷ್ಟೊಂದು ವೀರರ ಜೊತೆಗೆ ಏಕಾಂಗಿಯಾಗಿ ಹೋರಾಡಿ ವೀರಸ್ವರ್ಗವನ್ನು ಪಡೆದಿದ್ದಾನೆ. ನೀನು ವೃಷ್ಣಿಗಳ ಮನೆಯ ಮಗಳು, ಲೋಕೈಕವೀರನ ಹೆಂಡತಿ, ಲೋಕದ ಅಚ್ಚರಿಯೆನಿಸುವಂಥ ವೀರನ ತಾಯಿ! ನೀನು ಹೀಗೆ ಅಳಬಾರದು. ಎದ್ದೇಳು, ಕಣ್ಣೊರೆಸಿಕೋ" ಎಂದನು. ಸುಭದ್ರೆಯು, ``ಕೃಷ್ಣ, ನೀನು ಅಳಬೇಡ ಎನ್ನುತ್ತೀ. ಆದರೆ ನಾನು ಅಳದೇ ಬೇರೇನನ್ನು ಮಾಡಲಿ? ಅಭಿಮನ್ಯುವಿನ ಸುಂದರ ಮುಖವನ್ನು, ಕಮಲದಂತಹ ಕಣ್ಣುಗಳನ್ನು ಸ್ಮರಿಸಿಕೊಂಡಾಗ, ಅಮ್ಮಾ ಎಂದು ಕರೆಯುವ ಅವನ ಪ್ರೀತಿಭರಿತ ದನಿಯನ್ನು ಸ್ಮರಿಸಿಕೊಡಾಗ, ಅಂತಹ ಅವನು ಈಗ ರಣರಂಗದ ಧೂಳಿನಲ್ಲಿ ರಕ್ತಸಿಕ್ತನಾಗಿ ಮೇಲೇಳದಂತೆ ಮಲಗಿರುವುದನ್ನು ಯೋಚಿಸಿಕೊಂಡಾಗ, ನಾನು ಅಳದೆ ಇನ್ನೇನು ಮಾಡಲಿ? ಪಂಚಪಾಂಡವರೂ ನೀನೂ ಬದುಕಿರುವಾಗಲೇ ನನ್ನ ಮಗು ಸತ್ತದ್ದಾದರೂ ಹೇಗೆ? ಅವನು ವೀರ! ಧೈರ್ಯಶಾಲಿ! ಮೃದುಸ್ವಭಾವದ, ಎಲ್ಲರಿಗೂ ಪ್ರಿಯನಾದ ಅವನಿಗೆ ಸಾವು ಬಂದದ್ದಾರೂ ಹೇಗೆ? ಕೃಷ್ಣ, ನೀನು ನನ್ನ ಮಗು ಸಾಯಲು ಹೇಗಾದರೂ ಬಿಟ್ಟೆ? ವೀರರಾದ ಪಾಂಡವರು ಹೇಗೆ ಅವನನ್ನು ರಕ್ಷಿಸಿಕೊಳ್ಳದೆ ಹೋದರು? ಅವರು ವೀರರು ಎಂದು ನಾನು ಅಂದುಕೊಂಡದ್ದೆ ಸುಳ್ಳೆ?" ಎನ್ನಲು, ಕೃಷ್ಣನು, ``ಸುಭದ್ರೆ, ನೀನು ದುಃಖಾತಿರೇಕದಲ್ಲಿ ಹೀಗೆನ್ನುತ್ತಿರುವೆ. ಅಭಿಮನ್ಯುವನ್ನು ಮೋಸದಿಂದ ಕೊಂದರು. ನೇರ ಯುದ್ಧದಲ್ಲಿ ಅವನನ್ನು ಕೊಲ್ಲಲು ಯಾರಿಗೂ ಸಾಧ್ಯವಾಗುತ್ತಿರಲಿಲ್ಲ. ನಾನು ಅರ್ಜುನನೊಡನೆ ದೂರದಲ್ಲಿದ್ದಾಗ ಹೊಡೆದು ಕೊಂದರು. ಧರ್ಮಕ್ಷೇತ್ರವೆನಿಸಿಕೊಂಡಿದ್ದ ಕುರುಕ್ಷೇತ್ರದಲ್ಲಿ ಅಧರ್ಮ ತಲೆದೋರಿದ್ದೇ ಇಂದು. ಪಾಂಡವರು ರಕ್ಷಿಸಲಿಲ್ಲ ಎಂದು ಹೇಗೆ ಹೇಳುತ್ತೀ? ಈ ಕೊಲೆಗಾಗಿ ಇವರು ಶೀಘ್ರದಲ್ಲಿಯೇ ತಕ್ಕ ಫಲವನ್ನು ಅನುಭವಿಸುವರು. ನಾಳೆ ನೀನು ಅದನ್ನು ನೋಡುವೆ. ನಾಳೆ ಸಂಜೆಯೊಳಗೆ ಆ ಪಾಪಿ ಜಯದ್ರಥನನ್ನು ಕೊಲ್ಲುವೆನೆಂದು ಅರ್ಜುನನು ಪ್ರತಿಜ್ಞೆ ಮಾಡಿರುವನು. ಜಯದ್ರಥನಿಗೆ ಇದೇ ಕೊನೆಯ ರಾತ್ರಿ, ಈ ಭೂಮಿಯ ಮೇಲೆ. ದುಃಖವನ್ನು ಬಿಡು. ವೀರಕ್ಷತ್ರಿಯನಾದ ನಿನ್ನ ಮಗು ಇಂದು ದೇವತೆಯಾಗಿರುವನು. ಈ ಹದಿಮೂರು ದಿನಗಳಲ್ಲಿ ಎಷ್ಟು ಜನ ತಾಯಂದಿರು ತಮ್ಮ ಮಕ್ಕಳನ್ನು ಕಳೆದುಕೊಂಡಿರುವರು ಎಂಬುದನ್ನು ಯೋಚಿಸು. ಅವರೆಲ್ಲ ಧೈರ್ಯ ತೆಗೆದುಕೊಂಡಿಲ್ಲವೇ? ನೀನು ಅಳುವುದನ್ನು ಬಿಟ್ಟು ಎದೆಯೊಡೆದುಕೊಂಡಿರುವ ಮಗು ಉತ್ತರೆಗೆ ಸಮಾಧಾನ ಮಾಡು. ಅವಳ ಹೊಟ್ಟೆಯಲ್ಲಿ ಅಭಿಮನ್ಯುವಿನ ಮಗು ಬೆಳೆಯುತ್ತಿರುವುದು. ಅವಳ ಕಣ್ಣೀರನ್ನು ಒರೆಸಿ, ಅವಳಿಗೆ ತಾಯಿಯಾಗಿ ಅವಳನ್ನು ರಕ್ಷಿಸಿಕೋ. ನಿನ್ನ ಮಗನ ಸಾವಿನ ಸೇಡನ್ನು ಅರ್ಜುನ ನಾಳೆ ತೀರಿಸಿಕೊಳ್ಳುತ್ತಾನೆ. ಇದು ಖಂಡಿತ"ಎಂದು ಅವಳನ್ನೆಬ್ಬಿಸಿ ಉತ್ತರೆಯ ಬಳಿಗೆ ಕರೆದುಕೊಂಡು ಹೋದನು. ಅಲ್ಲಿ ಅವಳಿಗೂ ದ್ರೌಪದಿಗೂ ಸಮಾಧಾನ ಹೇಳಿ, ಪುನಃ ಅರ್ಜುನನ ಬಳಿಗೆ ಹಿಂದಿರುಗಿದನು.ಅರ್ಜುನ ಎಂದಿನಂತೆ ಕೃಷ್ಣ ಪೂಜೆಗಾಗಿ ಎಲ್ಲವನ್ನು ಸಿದ್ಧಪಡಿಸಿಕೊಂಡು ಅವನಿಗಾಗಿ ಕಾಯುತ್ತಿದ್ದನು. ಅವನು ಬಂದೊಡನೆ ಫಲಪುಷ್ಪ ಮಧುಪರ್ಕಗಳಿಂದ ಅವನನ್ನು ಪೂಜಿಸಿದನು. ಕೃಷ್ಣನು, ``ಅರ್ಜುನ, ಮಲಗಿಕೋ ಹೋಗು. ನಾಳಿನ ಯುದ್ಧದಲ್ಲಿ ನಿನ್ನ ವಿಜಯಕ್ಕಾಗಿ ನಾನು ಖಂಡಿತವಾಗಿಯೂ ಶ್ರಮಿಸುತ್ತೇನೆ" ಎಂದು ಹೇಳಿ ಅವನನ್ನು ಬೀಳ್ಕೊಟ್ಟು, ದಾರುಕನೊಡನೆ ರಥವನ್ನು ಹತ್ತಿ ತನ್ನ ಡೇರೆಗೆ ಹೊರಟುಹೊದನು.* * * * ಮಂಜಿನಂತೆ ಬೆಳ್ಳಗಿದ್ದ ತನ್ನ ಹಾಸಿಗೆಯ ಮೇಲೆ ಮಲಗಿದ್ದ ಕೃಷ್ಣನು ಯೋಚನೆಯಲ್ಲಿ ಮುಳುಗಿದ್ದ. ಮಧ್ಯರಾತ್ರಿಯಾದರೂ ನಿದ್ರೆ ಬಾರದು. ಎದ್ದುಕುಳಿತು ದಾರುಕನಿಗೆ ಹೇಳಿ ಕಳಿಸಿದ. ಅವನು ಬರಲು, ``ದಾರುಕ, ನಾಳೆ ಸಂಜೆಯೊಳಗೆ ಜಯದ್ರಥನನ್ನು ಕೊಲ್ಲುವೆನೆಂದು ಅರ್ಜುನ ಮಾಡಿದ ಪ್ರತಿಜ್ಞೆಯನ್ನು ನೀನೂ ಕೇಳಿರುವೆ. ದುರ್ಯೋಧನನಿಗೂ ಇದು ಗೊತ್ತು. ಅದಕ್ಕೆ ಅವನು ತಕ್ಕ ರಕ್ಷಣಾವ್ಯವಸ್ಥೆಯನ್ನು ಮಾಡಿರುವನು. ಅರ್ಜುನ ಮಹಾವೀರ; ಏಕಾಂಗಿಯಾಗಿ ಇಂದ್ರನ ಶತ್ರುಗಳನ್ನು ಸಹ ಜಯಿಸಿರುವನು; ಎಲ್ಲ ಸರಿಯೇ. ಆದರೂ ನಾಳಿನ ಪ್ರತಿಜ್ಞೆಯನ್ನು ಪೂರೈಸುವುದು ಅವನಿಗೆ ಕಷ್ಟವೆಂದೇ ನನ್ನ ಅನಿಸಿಕೆ. ಜಯದ್ರಥನ ರಕ್ಷಣೆಗೆ ನಿಂತಿರುವ ವೀರರಿಗೆ ದ್ರೋಣನೇ ಮುಂದಾಳು. ಇದು ದಕ್ಷಿಣಾಯನ; ಸೂರ್ಯನು ಬೇಗ ಮುಳುಗುವ ದಿನಗಳಿವು. ಸೂರ್ಯಾಸ್ತದೊಳಗೆ ಅರ್ಜುನ ಸೂಚೀಮುಖವ್ಯೂಹವನ್ನು ತಲುಪುವುದು ಕಷ್ಟ. ಇದೇ ನನ್ನ ಭಯ. ದಾರುಕ, ನಿನಗೆ ಅರ್ಜುನನ ಮೇಲಿನ ನನ್ನ ಪ್ರೀತಿ ಎಷ್ಟೆಂಬುದು ಗೊತ್ತು. ತನ್ನ ಪ್ರತಿಜ್ಞೆ ನೆರವೇರದಿದ್ದರೆ ಅರ್ಜುನ ಅಗ್ನಿಪ್ರವೇಶ ಮಾಡುತ್ತಾನೆ. ಆಮೇಲೆ ನಾನು ಒಂದು ಕ್ಷಣವೂ ಬದುಕಿರಲಾರೆ. ನಾನೂ ನಾಳೆ ನನ್ನ ಪ್ರತಿಜ್ಞೆ ಯನ್ನು ಮುರಿದು ಯುದ್ಧ ಮಾಡಬೇಕಾಗಿ ಬರಬಹುದು. ಅವನ ಪ್ರತಿಜ್ಞೆಯ ಪೂರೈಕೆಗಾಗಿ ನಾನು ಪ್ರತಿಜ್ಞೆ ಮುರಿಯುತ್ತೇನೆ. ಅವನ ಕೀರ್ತಿಯನ್ನುಳಿಸಲು ನಾನು ರಾಧೇಯನನ್ನೂ ದುರ್ಯೋಧನನನ್ನೂ ಕೊಲ್ಲುತೇನೆ. ನೀನು ನನ್ನ ರಥವನ್ನೂ ನನ್ನೆಲ್ಲ ಆಯುಧಗಳನ್ನೂ ಸಿದ್ಧವಾಗಿಟ್ಟಿರು; ನೀನೂ ಸಿದ್ಧನಾಗಿರು. ಯಾವಾಗ ನಾನು ವೃಷಭಸ್ವರದಲ್ಲಿ ಶಂಖವನ್ನೂದುತ್ತೇನೆಯೋ ಆಗ ನೀನು ತಡಮಾಡದೆ ಬಂದುಬಿಡು" ಎಂದನು. ಸುಮ್ಮನೆ ಕೇಳುತ್ತಿದ್ದ ದಾರುಕನು ``ಕೃಷ್ಣ, ನೀನು ಸಾರಥಿಯಾಗಿರುವಾಗ ಅರ್ಜುನನು ಹೇಗತಾನೆ ಸೋಲಲು ಸಾಧ್ಯ? ಆದರೂ ಆಣತಿಯಂತೆ ಸಿದ್ಧನಾಗಿರುತ್ತೇನೆ"ಎಂದು ಹೇಳಿ ಹೊರಟುಹೋದನು. ಕೃಷ್ಣನ ಹೃದಯದಿಂದ ಭಾರವೊಂದು ಇಳಿದಂತಾಗಿ, ಅವನು ಹಾಯಾಗಿ ಮಲಗಿ ನಿದ್ರಿಸಿದ.

ನಾಳಿನ ಯೋಚನೆಯಲ್ಲಿ ಅರ್ಜುನನಿಗೂ ನಿದ್ರೆ ಬಾರದು. ಅಷ್ಟೊಂದು ಅವಸರದಲ್ಲಿ ಪ್ರತಿಜ್ಞೆ ಮಾಡಿದೆಯಲ್ಲ ಎಂದ ಕೃಷ್ಣನ ಮಾತೇ ಅವನ ಮನಸ್ಸನ್ನು ಕೊರೆಯುತ್ತಿತ್ತು. ನಾಳೆ ಜಯದ್ರಥನನ್ನು ಕೊಲ್ಲಬೇಕು. ಹೇಗಾಗುತ್ತದೆಯೋ? ಒತ್ತಡಕ್ಕೆ ಸಿಕ್ಕಿದ ಅರ್ಜುನನಿಗೆ ಆ ನೋವಿನಲ್ಲಿಯೇ ಅರೆನಿದ್ರೆ. ಅದರಲ್ಲೆ ಒಂದು ಕನಸು. ಕೃಷ್ಣನು ಬಂದಿದ್ದಾನೆ. ಅರ್ಜುನ, ಚಿಂತಿಸಬೇಡ. ಯಶಸ್ಸನ್ನು ಹಾಳು ಮಾಡುವುದೇ ಚಿಂತೆ. ನಿನ್ನ ಈ ಚಿಂತೆ ಶತ್ರುಗಳ ಬಲವನ್ನು ಹೆಚ್ಚಿಸುತ್ತದೆ, ನಿನ್ನನ್ನು ದುರ್ಬಲಗೊಳಿಸುತ್ತದೆ. ಹಾಗಾಗುವುದಕ್ಕೇ ಬಿಡಬೇಡ ಎನ್ನುತ್ತಿದ್ದಾನೆ. ಕೃಷ್ಣಾ, ಪ್ರತಿಜ್ಞೆಯನ್ನೆನೋ ಮಾಡಿಬಿಟ್ಟೆ. ಸೂರ್ಯಾಸ್ತದೊಳಗೆ ನಾನು ಜಯದ್ರಥನನ್ನು ಕೊಲ್ಲುವುದಕ್ಕೆ ಆಗುತ್ತದೆಯೆ? ಅವನಿಗೆ ಕೌರವರು ಎಲ್ಲ ರಕ್ಷಣೆಯನ್ನೂ ಮಾಡಿರುತ್ತಾರೆ. ಹೇಳು ಕೃಷ್ಣಾ, ನನಗೆ ಅವನನ್ನು ಕೊಲ್ಲಲು ಆಗುತ್ತದೆಯೆ? ಅದಕ್ಕೆ ಕೃಷ್ಣನೆನ್ನುತ್ತಾನೆ, ನೀನು ಶಂಕರನಿಂದ ಪಡೆದ ಪಾಶುಪತಾಸ್ತ್ರವಿದೆಯಲ್ಲ? ಅದನ್ನು ನಾಳೆ ಜಯದ್ರಥನ ಮೇಲೆ ಪ್ರಯೋಗಿಸು. ಪ್ರತಿಜ್ಞೆಯ ಪೂರೈಕೆಗಾಗಿ ಶಂಕರನನ್ನು ಪ್ರಾರ್ಥಿಸು. ಎಲ್ಲವೂ ಒಳ್ಳೆಯದಾಗುವುದು ಎನ್ನುತ್ತಾನೆ. ತಕ್ಷಣ ಅರ್ಜುನನು ಎದ್ದು ಶುದ್ಧಾಚಮನ ಮಾಡಿ, ಶಂಕರನನ್ನು ಪ್ರಾರ್ಥಿಸತೊಡಗುತ್ತಾನೆ. ಆಗ ಆಶ್ಚರ್ಯವೆಂಬಂತೆ, ತಾನು ಅಂತರಿಕ್ಷದಲ್ಲಿ ಕೃಷ್ಣನೊಡನೆ ಹಾರುತ್ತಿದ್ದಾನೆ. ಇಬ್ಬರೂ ಬಿಟ್ಟ ಬಾಣದಂತೆ ಮನೋವೇಗದಿಂದ ಹೋಗುತ್ತಿದ್ದಾನೆ. ಕೃಷ್ಣನು ತನ್ನ ಬಲಗೈಯನ್ನು ಹಿಡಿದಿದ್ದಾನೆ; ಇಬ್ಬರೂ ಆಕಾಶದಲ್ಲಿ ಉತ್ತರದಿಕ್ಕಿಗೆ ಈಜುತ್ತಿದ್ದಾರೆ. ಅನೇಕ ಸುಂದರ ತಾಣಗಳನ್ನು ದಾಟಿ ಮಂದರಪರ್ವತಕ್ಕೆ ಬಂದಿದ್ದಾರೆ. ಅನಂತರ ಮೇಲೇರುತ್ತ ಏರುತ್ತ ಕೈಲಾಸಪರ್ವತಕ್ಕೆ ಬಂದು ಸಾವಿರ ಸೂರ್ಯರಂತೆ ಪ್ರಕಾಶಿಸುತ್ತಿರುವ ಶಂಕರನನ್ನು ಕಂಡು, ನಮಸ್ಕರಿಸಿ ಪೂಜಿಸಿದ್ದಾರೆ. ಅವನು ಪ್ರೀತಿಯಿಂದ ಇವರ ಪೂಜೆಯನ್ನು ಸ್ವೀಕರಿಸಿ, ನಿನಗೇನು ವರ ಬೇಕು ಕೇಳು ಎಂದಿದ್ದಾನೆ. ಅರ್ಜುನನು ನನಗೆ ನಿನ್ನ ಪ್ರಸಿದ್ಧವಾದ ಪಾಶುಪತಾಸ್ತ್ರ ಬೇಕು ಎನ್ನುತ್ತಿರುವಂತೆಯೇ ತಾನು ಆ ರಾತ್ರಿ ಕೃಷ್ಣನಿಗೆ ಅರ್ಪಿಸಿದ ಫಲಪುಷ್ಪಗಳೆಲ್ಲ ಅಲ್ಲಿರುವುದನ್ನು ಗಮನಿಸುತ್ತಾನೆ. ಶಂಕರನು ಅಲ್ಲೊಂದು ಅಮೃತಸರೋವರವಿದೆ ನೋಡು, ಅದರಲ್ಲಿ ನನ್ನ ಬಿಲ್ಲು ಬಾಣಗಳನ್ನೆಲ್ಲ ಇಟ್ಟಿದ್ದೇನೆ ತೆಗೆದುಕೋ ಎನ್ನುತ್ತಾನೆ. ಭೂತಗಣಗಳು ತನ್ನನ್ನು ಅಮೃತ ಸರೋವರಕ್ಕೆ ಕರೆದೊಯ್ಯುತ್ತವೆ. ಅದರಲ್ಲೊಂದು ಭಯಂಕರವಾದ ಸರ್ಪವಿರುತ್ತದೆ. ಜೊತೆಗೆ ಇನ್ನೊಂದು ಸಾವಿರ ಹೆಡೆಯ ಸರ್ಪ ಬೆಂಕಿಯನ್ನುಗುಳುತ್ತಿರುತ್ತದೆ. ಕೃಷ್ಣಾರ್ಜುನರು ಮಹಾರುದ್ರದ ಶ್ಲೋಕಗಳನ್ನು ಹೇಳುತ್ತಾರೆ. ಆಗ ಸರ್ಪಗಳು ಬದಲಾಗಿ ಬಿಲ್ಲುಬಾಣಗಳು ಕಾಣಿಸಿಕೊಳ್ಳುತ್ತವೆ. ಕೃಷ್ಣಾರ್ಜುನರು ಅವುಗಳನ್ನು ಭಕ್ತಿಯಿಂದ ಎತ್ತಿಕೊಂಡು ಶಂಕರನಲ್ಲಿಗೆ ಬರುತ್ತಾರೆ. ಶಂಕರನು ನಗುತ್ತಾನೆ. ಆಗ ಅವನ ಮೈಯಿಂದ ಕೆಂಗಣ್ಣಿನ, ನೀಲಗಪ್ಪುಕೂದಲಿನ ಬ್ರಹ್ಮಚಾರಿಯೊಬ್ಬ ಜನಿಸಲು, ಅರ್ಜುನ ಆ ಬಿಲ್ಲನ್ನು ಹೆದೆಯೇರಿಸಿ ಬಾಣಪ್ರಯೋಗ ಮಾಡುವ ಕ್ರಮವನ್ನು ಅವನಿಂದ ಕಲಿಯುತ್ತಾನೆ. ಶಂಕರನು ಅದರ ಮಂತ್ರವನ್ನು ಉಪದೇಶಿಸುತ್ತಾನೆ. ಇದೇ ಶಂಕರನು ಹಿಂದೆ ಇಂದ್ರಕೀಲ ಪರ್ವತದಲ್ಲಿ ಬೇಡನ ರೂಪದಲ್ಲಿ ತನಗೆ ದರ್ಶನ ಕೊಟ್ಟದ್ದು ನೆನಪಾಗುತ್ತದೆ. ಕೃಷ್ಣಾರ್ಜುನರು ಭಕ್ತಿಯಿಂದ ಅವನಿಗೆ ನಮಸ್ಕರಿಸಿ ಹಿಂದಿರುಗುತ್ತಾರೆ. ಕನಸಿನಿಂದ ದುಗುಡವು ಪರಿಹಾರವಾಗುತ್ತದೆ.* * * * ಮಹಾಯುದ್ಧದ ಹದಿನಾಲ್ಕನೆಯ ದಿನ ಬೆಳಗಾಯಿತು. ಅದು ದ್ರೋಣ ಸೇನಾಪತ್ಯದ ನಾಲ್ಕನೆಯ ದಿನ. ಯುಧಿಷ್ಠಿರನು ಬೇಗನೆ ಎದ್ದು ನಿತ್ಯಪೂಜೆಯನ್ನು ಮುಗಿಸಿದ್ದನು. ಅಷ್ಟರಲ್ಲಿ ಕೃಷ್ಣನೂ ಪಾಂಡವರ ಕಡೆಯ ಇತರರೂ ಬಂದರು. ಯುಧಿಷ್ಠಿರನು, ``ಕೃಷ್ಣ, ರಾತ್ರಿ ಚೆನ್ನಾಗಿ ನಿದ್ರೆ ಬಂತೆ?" ಎಂದು ವಿಚಾರಿಸಲು, ಕೃಷ್ಣನು, ``ನಿದ್ರೆ ಬಂತು. ಈಗ ನಿನ್ನ ಶಾಂತ ಮುಖವನ್ನು ನೋಡಿದ ಮೇಲೆ ನಮಗಿಂದು ಎಲ್ಲವೂ ಮಂಗಳವೇ" ಎಂದನು. ಯುಧಿಷ್ಠಿರನು ಬಂದ ವೀರರನ್ನೆಲ್ಲ ಆದರಿಸಿದ ಮೇಲೆ ಎಲ್ಲರೂ ಆ ಮುಖ್ಯವಾದ ದಿನದ ಬಗ್ಗೆ ಚರ್ಚಿಸತೊಡಗಿದರು.ಯುಧಿಷ್ಠಿರನು, ``ಕೃಷ್ಣ, ನಾವು ಸಂಪೂರ್ಣವಾಗಿ ನಿನ್ನನ್ನೇ ಅವಲಂಬಿಸಿರುವೆವು. ನೀನೇ ನಮ್ಮನ್ನು ಈ ಯುದ್ಧದಲ್ಲಿ ಕೊನೆಗೆ ಗೆಲ್ಲಿಸಬೇಕು. ಅರ್ಜುನ ತನ್ನ ಪ್ರತಿಜ್ಞೆಯನ್ನು ಪೂರೈಸಿಕೊಳ್ಳವುದು ಹೇಗೆಂದು ನೀನು ಈಗಾಗಲೇ ಯೋಚಿಸಿರಬಹುದು. ನೀನು ಸಾರಥಿಯಾಗಿರುವಾಗ ಉಳಿದ ದಿನಗಳಂತೆಯೇ ಇಂದು ನಮ್ಮ ಅರ್ಜುನ ಗೆಲ್ಲುವನು" ಎನ್ನಲು ಕೃಷ್ಣನು, ``ಅರ್ಜುನನಂಥ ಧನುರ್ಧಾರಿ ಇನ್ನೊಬ್ಬನಿಲ್ಲ. ಅವನಿಗೆ ಧೈರ್ಯವಿದೆ, ದಿವ್ಯಾಸ್ತ್ರಗಳನ್ನೂ ಸಂಪಾದಿಸಿಕೊಂಡಿದ್ದಾನೆ. ತಾನು ಸಾಯಬೇಕೆಂದೇ ನಿರ್ಧರಿಸದಿರುವ ಯಾವನು ತಾನೇ ಅವನನ್ನು ಎದುರಿಸಿ ನಿಲ್ಲುತ್ತಾನೆ? ನಾವಿಬ್ಬರೂ ಕೌರವಸೇನೆಯನ್ನಿಂದು ಸುಟ್ಟುಹಾಕುತ್ತೇವೆ. ಜಯದ್ರಥನ ಸಾವಿನಿಂದ ಅವರ ಬೆನ್ನು ಮೂಳೆ ಮುರಿದಂತಾಗುತ್ತದೆ. ಶಕುನಗಳೂ ನಮಗೆ ಅನುಕೂಲವಾಗಿವೆ. ನೀನೇನೂ ಚಿಂತಿಸಬೇಡ. ನಾನಿದ್ದೇನೆ. ಅವನ ಪ್ರತಿಜ್ಞೆ ಹುಸಿಯಾಗಲು ನಾನು ಬಿಡುವುದಿಲ್ಲ" ಎಂದನು. ಅವರು ಹೀಗೆ ಮಾತನಾಡುತ್ತಿದ್ದಂತೆ ಅರ್ಜುನನು ಅಲ್ಲಿಗೆ ಬಂದನು. ಹಿರಿಯರಿಗೆಲ್ಲ ನಮಸ್ಕರಿಸಿದ ಅವನನ್ನು ಯುಧಿಷ್ಥಿರನು ಪ್ರೀತಿಯಿಂದ ಕೂರಿಸಿಕೊಂಡು, ``ನಿನ್ನ ಲವಲವಿಕೆ ನೊಡಿಯೇ ನನಗೆ ನೀನಿಂದು ಜಯಿಸುತ್ತೀ ಎಂದು ನಂಬಿಕೆಯಾಗುತ್ತಿದೆ; ಕೃಷ್ಣನೂ ಸಂತೋಷದಿಂದಿದ್ದಾನೆ" ಎಂದನು. ಅರ್ಜುನನಿಗೆ ಹಿಂದಿನ ರಾತ್ರಿಯ ಕನಸಿನದೇ ಗುಂಗು. ಕೃಷ್ಣನೊಂದಿಗೆ ಶಂಕರನನ್ನು ಅರ್ಚಿಸಿದರು. ಎಲ್ಲರಿಗೂ ಅರ್ಜುನನು ಆ ದಿನ ಗೆಲ್ಲುವನೆಂಬ ನಂಬಿಕೆಯಾಯಿತು.ಪಾಂಡವ ಪಾಳೆಯದಲ್ಲಿ ಸಂಭ್ರಮವೋ ಸಂಭ್ರಮ. ಶಂಖ ಭೇರಿಗಳ ನಿನಾದ. ಯುದ್ಧಕ್ಕೆ ಎಲ್ಲರೂ ಸಿದ್ಧರಾದರು. ಕೃಷ್ಣ ಸಾತ್ಯಕಿ ಇಬ್ಬರೂ ಒಂದೇ ರಥದಲ್ಲಿ ಅಲ್ಲಿಂದ ಹೊರಟರು. ಅರ್ಜುನನ ಡೇರೆಗೆ ಬಂದೊಡನೆ ಕೃಷ್ಣನು ಅವನ ಸಾರಥಿಯಾಗಿಬಿಟ್ಟನು. ಸಾತ್ಯಕಿಯ ಕಡೆ ನೋಡಿ ನಗುತ್ತ, ಕುದುರೆ ಲಾಯಕ್ಕೆ ಹೋಗಿ ಅರ್ಜುನನ ಶ್ವೇತಾಶ್ವಗಳನ್ನು ಪ್ರೀತಿಯಿಂದ ತೊಳೆದನು. ಆಯುಧಗಳನ್ನೆಲ್ಲ ಹೊಂದಿಸಿಟ್ಟನು. ಕುದುರೆಗಳನ್ನು ಕಟ್ಟಿ, ಧ್ವಜವನ್ನು ಏರಿಸಿ ರಥವನ್ನು ಅರ್ಜುನನಿದ್ದಲ್ಲಿಗೆ ತಂದನು. ಕೆಳಗಿಳಿದು, ``ಅರ್ಜುನ, ರಥವು ಸಿದ್ಧವಾಗಿದೆ. ಬಾ, ಹೋಗೋಣ" ಎಂದು ಕರೆದನು. ಇಂದ್ರನು ಕೊಟ್ಟ ಕವಚ ಕಿರೀಟಗಳನ್ನು ತೊಟ್ಟ ಅರ್ಜುನನು ರಥವನ್ನೇರಿದನು. ಬೆಳಗಿನ ಎಳೆಬಿಸಿಲಿನಲ್ಲಿ ಕಪಿಧ್ವಜವು ಪ್ರಕಾಶಿಸುತ್ತಿತ್ತು. ರಥವು ಹೊರಡುವ ಮೊದಲು ಅರ್ಜುನನು ಸಾತ್ಯಕಿಯನ್ನು ಕುರಿತು, ``ಜಯದ್ರಥನನ್ನು ಕೊಲ್ಲವ ಭರಾಟೆಯಲ್ಲಿ ನಾವು ಯುಧಿಷ್ಠಿರನನ್ನು ಸೆರೆ ಹಿಡಿದು ಕೊಡುತ್ತೇನೆಂಬ ದ್ರೋಣನು ದುರ್ಯೋಧನನಿಗೆ ಕೊಟ್ಟ ಮಾತನ್ನು ಮರೆಯಬಾರದು. ನಾನು ಪದ್ಮವ್ಯೂಹ ಛೇದನೆಗೆಂದು ಹೋದೊಡನೆ ಆಚಾರ್ಯನು ಇಲ್ಲಿಗೆ ಬಂದು ಆ ಪ್ರಯತ್ನ ಮಾಡಿಯಾನು. ಅಣ್ಣನ ರಕ್ಷಣೆಗೆ ನಿನ್ನನ್ನೇ ನಾನು ನಂಬಿಕೊಂಡಿದ್ದೇನೆ. ನನಗೆ ಕೃಷ್ಣನ ರಕ್ಷಣೆಯಿದ್ದಂತೆ ಅಣ್ಣನಿಗೆ ನಿನ್ನ ರಕ್ಷಣೆಯಿರಲಿ. ನಾನು ಆತಂಕರಹಿರನಾಗಿ ಯುದ್ಧಕ್ಕೆ ತೆರಳುವೆ" ಎನ್ನಲು, ಸಾತ್ಯಕಿಯು, ``ಹಾಗೆಯೇ ಆಗಲಿ" ಎಂದನು.ಕೌರವಸೇನೆಯೂ ಸಿದ್ಧವಾಗಿತ್ತು. ಯುದ್ಧಾರಂಭದ ಮುಂಚಿನ ಶಂಖಾದಿ ವಾದ್ಯಗಳ ನಾದವು ಕಿವಿಗಡಚಿಕ್ಕುವಂತಿತ್ತು. ದ್ರೋಣನು ತನ್ನ ರಥದಲ್ಲಿ ಅತ್ತಿಂದಿತ್ತ ಸುತ್ತಿಬರುತ್ತಿರುವುದು ಕಾಣಿಸುತಿತ್ತು. ಅವನು ಜಯದ್ರಥನಿರುವಲ್ಲಿಗೆ ಹೋಗಿ ``ಹೆದರಬೇಡ. ಭೂರಿಶ್ರವಸ್ಸು ರಾಧೇಯ ಅಶ್ವತ್ಥಾಮ ಶಲ್ಯ ವೃಷಸೇನ ಕೃಪ ಇವರೆಲ್ಲರೂ ನಿನ್ನ ಜೊತೆಗೆ ಸೂಚೀಮುಖ ವ್ಯೂಹದ ಹಿಂದಿರುವರು. ನಿನ್ನ ಸೈನ್ಯದಲ್ಲಿ ನೂರು ಸಾವಿರ ಆನೆಗಳು, ಕುದುರೆಗಳು, ರಥಗಳು ಇರುವುವು. ಇವರೆಲ್ಲರಿಂದ ರಕ್ಷಿತವಾದ ನಿನ್ನ ಬಳಿಗೆ ದೇವತೆಗಳೂ ಬರಲಾರರು; ಇನ್ನು ಅರ್ಜುನನದೇನು ಚಿಂತೆ? ಆತಂಕ ಪಟ್ಟುಕೊಳ್ಳಬೇಡ. ನೀನು ನಾಳೆಯ ಸೂರ್ಯೋದಯವನ್ನು ನೋಡುತ್ತಿ" ಎನ್ನಲು ಜಯದ್ರಥನಿಗೆ ಸ್ವಲ್ಪ ನಿರಾಳವಾಯಿತು; ಆದರೂ ಭಯವು ಅವನ ಕಣ್ಣಿನಿಂದ ದೂರವಾಗಲಿಲ್ಲ. ದ್ರೋಣನ ಮೂರುಸುತ್ತಿನ ವ್ಯೂಹವು ಅಭೇದ್ಯವೂ, ಆವರೆಗೆ ಕಂಡು ಕೇಳರಿಯದ್ದೂ ಆಗಿತ್ತು. ಅರ್ಜುನ ಅದನ್ನು ಒಡೆಯುವುದು ಸಾಧವೇ ಇಲ್ಲವೆಂದು ಕೌರವರು ನಂಬಿದ್ದರು. ದ್ರೋಣನು ಪದ್ಮವ್ಯೂಹದ ಹೊರಭಾಗದಲ್ಲಿ ನಿಂತಿದ್ದನು. ಶಕಟವ್ಯೂಹದ ಹೊರಭಾಗದಲ್ಲಿ ದುರ್ಯೋಧನನ ತಮ್ಮ ದುರ್ಮರ್ಷಣನನ್ನು ನಿಲ್ಲಿಸಿದ್ದರು. ಅವನು ಆತ್ಮವಿಶ್ವಾಸದಿಂದ, ``ಇಂದು ನಾನು ಅರ್ಜುನನನ್ನು ತಡೆಯುತ್ತೇನೆ. ಅವನ ಅಹಂಕಾರವನ್ನು ಮುರಿಯುತ್ತೇನೆ. ಅವನಿಂದು ಈ ದುರ್ಮರ್ಷಣನ ಶೌರ್ಯವನ್ನು ನೋಡುವನು" ಎನ್ನುತ್ತಿದ್ದನು.* * * * 

ಪಾಂಡವರ ಪಾಳೆಯದಿಂದ ಹೊರಟ ಅರ್ಜುನನ ರಥದ ಹೊಳಪನ್ನು ನೋಡಿದ ಕೌರವರಿಗೆ ಕ್ಷಣಕಾಲ ನಡುಕವುಂಟಾಯಿತು. ರಕ್ಷಣೆಗೆ ಅಷ್ಟೆಲ್ಲ ಸೈನ್ಯವಿದ್ದರೂ ಜಯದ್ರಥನಿಗೆ ಅರ್ಜುನನ್ನು ನೋಡಿದ ಕೂಡಲೆ ಸಾಕ್ಷಾತ್ ಯಮನನ್ನೇ ನೋಡಿದಂತಾಗಿ ಗಡಗಡನೆ ನಡುಗಿದನು. ರಥವು ಬಯಲಿನಲ್ಲಿ ಬಂದು ನಿಂತೊಡನೆ ಅರ್ಜುನನು ತನ್ನ ದೇವದತ್ತವನ್ನು ತೆಗೆದು ದೀರ್ಘವಾಗಿ ಊದಿದನು. ಜೊತೆಯಲ್ಲಿ ಕೃಷ್ಣನ ಪಾಂಚಜನ್ಯವೂ ಸೇರಿತು. ಈ ಧ್ವನಿಗಳನ್ನು ಹದಿಮೂರು ದಿನಗಳ ಕಾಲ ಕೇಳಿ ಅಭ್ಯಾಸವಾಗಿದ್ದರೂ ಶತ್ರುಗಳ ಎದೆನಡುಕ ಇನ್ನೂ ನಿಂತಿರಲಿಲ್ಲ. ಅರ್ಜುನನು ಮುಖದಲ್ಲಿ ದಿವ್ಯವಾದ ಸಂತಸವನ್ನು ಹೊಳಹುತ್ತ, ``ಕೃಷ್ಣ, ದುರ್ಮರ್ಷಣನಿರುವಲ್ಲಿಗೆ ಕರೆದುಕೊಂಡು ಹೋಗು. ನಾನು ವ್ಯೂಹವನ್ನೊಡೆದು ಒಳಗೆ ಹೋಗುವೆ" ಎಂದನು. ಅಲ್ಲಿ ಅವನೊಂದಿಗೆ ಘೋರಯುದ್ಢವು ನಡೆಯಿತು. ಯೋಧರ ತಲೆಗಳು ಪುಂಖಾನುಪುಂಖವಾಗಿ ಹಾರಿದವು. ಸೈನಿಕರು ಜೀವಭಯದಿಂದ ಓಡತೊಡಗಿದರು. ದುರ್ಮರ್ಷಣನೂ ಓಡಿಹೋಗಬೇಕಾಯಿತು.

ಸ್ವಲ್ಪ ಹೊತ್ತಿನಲ್ಲಿ ದುಶ್ಶಾಸನನು ಗಜಸೈನ್ಯದೊಂದಿಗೆ ಹಿಂದಿರುಗಿ ಬಂದು ಅರ್ಜುನನ್ನು ಎದುರಿಸಿದನು. ಗಾಂಡೀವದ ಟಂಕಾರಧ್ವನಿಗೆ ಬಿಡುವೆಂಬುದಿರಲಿಲ್ಲ. ಕೆಲವೇ ಕ್ಷಣಗಳಲ್ಲಿ ಗಜಸೈನ್ಯವು ಸೋತು ಓಡಿತು. ಕೃಷ್ಣನ ಮುಖದಲ್ಲಿ ಮಂದಹಾಸ ಮಿನುಗತೊಡಗಿತು. ಇದರಿಂದ ಉದ್ರಿಕ್ತನಾದ ದುಶ್ಶಾಸನನು ದ್ವಂದ್ವಯುದ್ಧವನ್ನಾರಂಭಿಸಿದನು. ಆದರೂ ಅರ್ಜುನನೆದುರಿಗೆ ನಿಲ್ಲಲಾರದೆ ಓಡಿ ಹೋದನು. ಅರ್ಜುನನು ಮೊದಲನೆಯ ವ್ಯೂಹವನ್ನೊಡೆದು ಒಳಗೆ ಹೋದನು. ದ್ರೋಣನಿಂದ ರಕ್ಷಿತವಾದ ಪದ್ಮವ್ಯೂಹವು ಎದುರಾಯಿತು. ಎದುರಾದ ದ್ರೊಣನಿಗೆ ಕೈಮುಗಿದು, ``ಆಚಾರ್ಯ, ನನ್ನ ಮಗುವಿನ ಸಾವಿನಿಂದ ಕೋಪಗೊಂಡು ನಾನು ಈ ದಿನ ಜಯದ್ರಥನನ್ನು ಕೊಲ್ಲುತ್ತೇನೆಂದು ಪ್ರತಿಜ್ಞೆ ಮಡಿರುವೆ. ಇಲ್ಲಿಯವರೆಗೆ ಬಂದಿರುವೆ. ನೀವು ನನ್ನ ಗುರುಗಳು. ನಾನು ನಿಮಗೆ ಮಗನಿದ್ದಂತೆ ಎಂದು ನೀವೇ ಒಮ್ಮೆ ಹೇಳಿದ್ದಿರಿ. ನನ್ನನ್ನು ಆಶೀರ್ವದಿಸಿ ಪದ್ಮವ್ಯೂಹ ಛೇದನೆಗೆ ಅನುಮತಿ ಕೊಡಿ" ಎನ್ನಲು ದ್ರೋಣನು ನಕ್ಕು ``ಅರ್ಜುನ, ನೀನು ನನ್ನನ್ನು ಸೋಲಿಸದೆ ಮುಂದೆ ಹೋಗಲಾರೆ" ಎಂದನು. ಅರ್ಜುನನು ಗುರುವಿನ ಮೇಲೆ ಬಾಣಗಳನ್ನು ಮಳೆಗರೆದನು. ಇದೆಂಥ ಹೇಯ ಕಾರ್ಯ! ಆಗ ಅಜ್ಜ, ಈಗ ಗುರುಗಳು. ನೆನ್ನೆ ತಾನೆ ಅಭಿಮನ್ಯುವನ್ನು ಕೊಂದಂಥ ಅತ್ಯಂತ ಹೇಯಕಾರ್ಯದಲ್ಲಿ ಅವರು ಭಾಗವಹಿಸಿದ್ದರೂ ಸಹ ಅರ್ಜುನನಿಗೆ ಗುರುಗಳ ಮೇಲೆ ಕೋಪ ಬಾರದು. ಪದ್ಮವ್ಯೂಹವನ್ನು ಛೇದಿಸಲು ಅರ್ಜುನನಿಗೆ ಬಿಡಬಾರದೆಂದೇ ದ್ರೋಣನ ಸಂಕಲ್ಪ. ವ್ಯೂಹವನ್ನು ಒಡೆದೇ ತೀರುವೆನೆಂದು ಅರ್ಜುನನ ಪ್ರಯತ್ನ. ಇಬ್ಬರೂ ಇನ್ನಿಲ್ಲದಂತೆ ಹೋರಾಡಿದರು. ಎಷ್ಟು ಹೊತ್ತಾದರೂ ಯಾರೂ ಸೋಲಲೊಲ್ಲರು. ಕೃಷ್ಣನು ಸ್ವಲ್ಪ ಹೊತ್ತು ನೋಡಿ, ``ಅರ್ಜುನ, ಈ ನಿನ್ನ ಗುರುವಿನ ಬಳಿ ಹೆಚ್ಚು ಹೊತ್ತು ಕಳೆದೆಯಾದರೆ ಜಯದ್ರಥನನ್ನು ಕೊಲ್ಲುವ ಯೊಚನೆಯನ್ನು ನೀನು ಬಿಡಬೇಕಾಗುತ್ತದೆ. ಈಗ ನಿನಗೆ ಪ್ರತಿ ಕ್ಷಣವು ಬೆಲೆಯುಳ್ಳದ್ದು. ಕಾಲ ಮೀರುವ ಮೊದಲು ವ್ಯೂಹದೊಳಕ್ಕೆ ಪ್ರವೇಶಿಸು" ಎನ್ನಲು, ಅರ್ಜುನನು, ``ಹೌದು ಕೃಷ್ಣ, ನೀನೆನ್ನುವುದು ಸರಿ. ರಥವನ್ನು ತಿರುಗಿಸು" ಎಂದನು. ಕೃಷ್ಣನು ರಥವನ್ನು ದ್ರೋಣನ ಸುತ್ತ ಪ್ರದಕ್ಷಿಣೆ ಮಾಡಿಸಿ ಹೊರಡಲು ಅರ್ಜುನನು, ``ಗುರುವೆ, ನಾನು ಹೋಗಬೇಕು" ಎಂದನು. ದ್ರೋಣನು ತಿರಸ್ಕಾರದಿಂದ ನಕ್ಕು, " ಅರ್ಜುನ, ಇದೇನಿದು! ಶತ್ರುವನ್ನು ಸೋಲಿಸದೆ ಪಲಾಯನ ಮಾಡುತ್ತಿರುವೆ?" ಎನ್ನಲು "ಅರ್ಜುನನು ಈಗ ನಿಮ್ಮನ್ನು ಶತ್ರುವೆಂದು ಭಾವಿಸದೆ ಗುರುವೆಂದು ಗೌರವಿಸುವುದೇ ಲಾಭಕರ. ಗುರು ಶಿಷ್ಯನ ಮೇಲೆ ಕೋಪ ಮಾಡಲಾರ. ನನ್ನನ್ನು ಆಶೀರ್ವದಿಸಿರಿ" ಎಂದು ಕೂಗಿ ಹೇಳಿ ದ್ರೋಣನ ಅಪ್ಪಣೆ ಇಲ್ಲದೆಯೇ ವ್ಯೂಹದೊಳಕ್ಕೆ ಪ್ರವೇಶಿಸಿಬಿಟ್ಟ.ದ್ರೋಣನೊಂದಿಗೆ ದ್ವಂದ್ವದಲ್ಲಿ ಕಳೆದ ಕಾಲವನ್ನು ಉಳಿಸಿಕೊಳ್ಳಲು ಅರ್ಜುನನು ಬಹು ಪ್ರಯಾಸಪಟ್ಟು ಹೋರಾಡಬೇಕಾಯಿತು. ಅವನೊಂದಿಗೆ ಯುಧಾಮನ್ಯು ಹಾಗೂ ಉತ್ತಮೌಜಸ್ ಇಬ್ಬರೂ ಪಾರ್ಶ್ವರಕ್ಷಕರಾಗಿದ್ದರು. ಕೃತವರ್ಮ, ಕಾಂಭೋಜದ ರಾಜ ಸುದಕ್ಷಿಣ ಶ್ರುತಾಯುಸ್ಸು ತಮ್ಮ ತಮ್ಮ ಸೈನ್ಯಗಳೊಂದಿಗೆ ಅರ್ಜುನನನ್ನೆದುರಿಸಿದರು. ದ್ರೋಣನೂ ಅರ್ಜುನನನ್ನು ಅಟ್ಟಿಸಿಕೊಂಡು ಬಂದ. ಅರ್ಜುನ ಬ್ರಹ್ಮಾಸ್ತ್ರವನ್ನು ಅಭಿಮಂತ್ರಿಸಿ ದ್ರೋಣನ ಪ್ರಹಾರಗಳನ್ನು ತಡೆದುಕೊಂಡ. ಅಭಿಮನ್ಯುವನ್ನು ಕೊಂದವರಲ್ಲಿ ಈ ಕೃತವರ್ಮನೂ ಒಬ್ಬನಲ್ಲವೆ? ಎಂದುಕೊಂಡು ಅವನ ಮೇಲೆ ಘೋರವಾಗಿ ಯುದ್ಧಮಾಡತೊಡಗಿದ. ನೋಡುತ್ತಿದ್ದ ಕೃಷ್ಣನು, ``ಅರ್ಜುನ, ಕಾಲ ಮೀರುತ್ತಿದೆ. ಕೃತವರ್ಮನು ನನ್ನ ಸಂಬಂಧಿ ಎಂದು ಮೃದುವಾಗಬೇಡ. ಬೇಗನೆ ಅವನನ್ನು ನಿವಾರಿಸಿ ಮುಂದೆ ಹೋಗು" ಎನ್ನಲು, ಅರ್ಜುನನು ಅವನನ್ನು ಕ್ರೂರವಾಗಿ ಘಾತಿಸಿ ಮೂರ್ಛೆಗೊಳಿಸಿದ. ನಂತರ ಸುದಕ್ಷಿಣನನ್ನು ಸೋಲಿಸುವುದರೊಳಗೆ ವೀರನಾದ ಶ್ರುತಾಯುಧನು ವರುಣದತ್ತವಾದ ತನ್ನ ಗದೆಯಿಂದ ಅರ್ಜುನನನ್ನು ಎದುರಿಸಿದ. ಇಲ್ಲಿ ಸ್ವಲ್ಪ ಕಾಲ ಕಳೆಯಿತು. ನಿರಾಯುಧನಾದವನ ಮೇಲೆ ಪ್ರಯೋಗಿಸಿದರೆ ಈ ಗದೆಯು ಪ್ರಯೋಗಿಸಿದವನನ್ನೇ ಆಹುತಿ ತೆಗೆದುಕೊಳ್ಳುವಂಥದು. ವಿಧಿಪ್ರೇರಿತನಾಗಿ ಮೈಮರೆತು ಶ್ರುತಾಯುಧನು ಅದನ್ನು ಕೃಷ್ಣನ ಮೇಲೆ ಬಳಸಲು, ವರುಣನ ಗದೆಯು ಹಿಂತಿರುಗಿ ಬಂದು ಅವನನ್ನೇ ಬಡಿದು ಅವನನ್ನೆ ಕೊಂದುಹಾಕಿತು. ಮತ್ತೆ ಬಂದು ಎದುರಿಸಿದ ಸುದಕ್ಷಿಣನನ್ನು ಅರ್ಜುನನು ಒಂದು ಚೂಪಾದ ಬಾಣದಿಂದ ಕೊಂದೇ ಹಾಕಿದ. ಅನಂತರ ಬಂದವರು ಶ್ರುತಾಯುಸ್ ಮತ್ತು ಅಚ್ಯುತಾಯುಸ್. ಸೋದರರಾದ ಇವರಿಬ್ಬರೂ ಮಹಾವೀರರು. ಇವರನ್ನು ಕೊಲ್ಲಲು ಅರ್ಜುನನು ಐಂದ್ರಾಸ್ತ್ರವನ್ನೇ ಬಳಸಬೆಕಾಯಿತು. ಹೀಗೆ ನಾಲ್ಕು ಮಹಾವೀರರನ್ನು ಕಳೆದುಕೊಂಡ ಕೌರವ ಸೈನ್ಯವು ಕಂಗೆಟ್ಟು ದಿಕ್ಕಾಪಾಲಾಗಿ ಓಡಲಾರಂಭಿಸಿತು. ಅರ್ಜುನನ ಮುನ್ನಡೆ ಕ್ಷಣಕ್ಷಣಕ್ಕೂ ಸುಲಭವಾಗುತ್ತ ಹೋಯಿತು. ಇದನ್ನು ಗಮನಿಸುತ್ತಿದ್ದ ದುರ್ಯೋಧನನು ದ್ರೋಣನ ಬಳಿಗೆ ಹೋಗಿ, ``ಆಚಾರ್ಯ, ಅರ್ಜುನನು ಎರಡನೆಯ ವ್ಯೂಹವನ್ನು ಪ್ರವೇಶಿಸಿಬಿಟ್ಟ. ನೀನೇ ರಕ್ಷಿಸುತ್ತಿದ್ದ ಈ ವ್ಯೂಹವನ್ನು ಅಭೇದ್ಯವೆಂದಿದ್ದೆಯಲ್ಲವೆ? ಹೇಗೆ ನೀನು ಅರ್ಜುನನನ್ನು ಒಳಗೆ ಹೋಗಲು ಬಿಟ್ಟೆ? ನಿನ್ನೆಲ್ಲ ಏರ್ಪಾಟು ಮುರಿದುಬಿದ್ದಿತೆ? ಮೊದಲಬಾರಿಗೆ, ಈಗ ನನಗೆ ಸೈನ್ಯವೇ ಇಲ್ಲವೆಂದೆನ್ನಿಸತೊಡಗಿದೆ. ನೀನು ಅರ್ಜುನನನ್ನು ತಡೆಯಬಹುದೆಂದು ನಿರೀಕ್ಷಿಸಿದ್ದೆ; ಆ ನಂಬಿಕೆಯಿಂದ ಜಯದ್ರಥನನ್ನು ಇರಲು ಹೇಳಿದೆ. ಅವನನ್ನು ಯಮನಿಗೆ ಬಲಿ ಕೊಡುವುದಕ್ಕಾಗಿಯೇ ಇಟ್ಟುಕೊಂಡಂತಾಯಿತಲ್ಲ! ಒಮ್ಮೆ ಅರ್ಜುನನ ಕೈಗೆ ಸಿಕ್ಕಿದರೆ ಅವನು ಯಮನ ಬಾಯಿಗೆ ಸಿಕ್ಕಿದಂತೆಯೇ. ಏನಾದರೂ ಮಾಡಿ ಅವನನ್ನು ರಕ್ಷಿಸು" ಎಂದನು.ದ್ರೋಣನು ಮೌನವಾಗಿ ಅವನ ಮಾತನ್ನು ಕೇಳಿ, ``ದುರ್ಯೋಧನ, ನಾನು ಅರ್ಜುನನನ್ನು ತಡೆಯಲು ಸರ್ವಪ್ರಯತ್ನ ಮಾಡಿದೆ. ಆದರೆ ಅವನ ಚುರುಕು ನನಗಿಲ್ಲ. ನನಗೆ ವಯಸ್ಸಾಯಿತು. ಮೇಲಾಗಿ ಅವನ ಸಾರಥಿ ಸಾಕ್ಷಾತ್ ಕೃಷ್ಣ. ಯುಧಿಷ್ಠಿರನನ್ನು ಬೇರೆ ಸೆರೆಹಿಡಿಯುತ್ತೇನೆಂದು ಪ್ರತಿಜ್ಞೆ ಮಾಡಿದ್ದೆನಲ್ಲವೆ? ಅರ್ಜುನನೀಗ ಯುಧಿಷ್ಠಿರನ ಬಳಿಯಲಿಲ್ಲ. ನಾನು ಅದಕ್ಕಾಗಿ ಪ್ರಯತ್ನಿಸುವೆ. ನೀನೇ ಅರ್ಜುನನೊಡನೆ ಯುದ್ಧಮಾಡಬಾರದೇಕೆ?" ಎನ್ನಲು ದುರ್ಯೋಧನನು ನೋವಿನಿಂದ, ``ಆಚಾರ್ಯ, ನನ್ನನ್ನು ಹಾಸ್ಯಮಾಡುತ್ತಿರುವೆಯಾ? ನೀನೇ ಅವನನ್ನು ತಡೆಯಲಾರದೆ ಹೋದಮೇಲೆ ನನ್ನ ಕೈಯಲ್ಲಿ ಆಗುತ್ತದೆಯೆ? ಇಂದ್ರನನ್ನಾದರೂ ಸೊಲಿಸಬಹುದು, ಆದರೆ ಅರ್ಜುನನನ್ನಲ್ಲ. ನಿನ್ನ ಕಣ್ಣೆದುರಿಗೆ ಕೃತವರ್ಮ ಸೋತ. ನೀನು ಪಿನಾಕಧಾರಿಯಾದ ಶಂಕರನಂತೆ ನಿಂತಿರುವಾಗಲೇ ಶ್ರುತಾಯುಧ ಶ್ರುತಾಯುಸ್ಸು ಅಚ್ಯುತಾಯುಸ್ಸು ಸುದಕ್ಷಿಣ ಎಲ್ಲರೂ ತಮ್ಮ ತಮ್ಮ ಸೈನ್ಯದೊಂದಿಗೆ ಸೋತು ಸತ್ತರು. ಇನ್ನು ನಾನು ಅರ್ಜುನನನ್ನು ಎದುರಿಸಲು ಆಗುವುದೆ? ನೀನೇ ನಮ್ಮನ್ನು ರಕ್ಷಿಸಬೇಕು" ಎಂದನು. ದ್ರೋಣನಿಗೆ ಅಯ್ಯೋ ಪಾಪ ಎನಿಸಿ, "ನೀನು ನನ್ನ ಮಗ ಅಶ್ವತ್ಥಾಮನಿದ್ದ ಹಾಗೆ; ನಿನ್ನ ಯೋಗಕ್ಷೇಮವನ್ನು ನಾನು ಮರೆತಿಲ್ಲ. ನಿನ್ನ ರಕ್ಷಣೆಗಾಗಿ ಇದೋ, ಈ ಕವಚವನ್ನು ಧರಿಸು. ಇದು ವೃತ್ರನನ್ನು ಕೊಲ್ಲುವಾಗ ಇಂದ್ರನು ಧರಿಸಿದ್ದು. ಇದಕ್ಕೆ ಸೃಷ್ಟಿಕರ್ತನಾದ ಬ್ರಹ್ಮನೇ ಅಧಿದೇವತೆ. ಇದನ್ನು ಭೇದಿಸಲು ದೇವತೆಗಳಿಗೂ ಆಗದು. ಇದನ್ನು ಧರಿಸಿ ಅರ್ಜುನನನ್ನೆದುರಿಸು" ಎಂದು ಅವನನ್ನು ಒಳಭಾಗಕ್ಕೆ ಕಳುಹಿಸಿದನು. ದುರ್ಯೋಧನನು ತನ್ನ ಸೈನ್ಯವನ್ನು ತೆಗೆದುಕೊಂಡು ಅರ್ಜುನನನ್ನು ಮುಂಭಾಗದಿಂದಲೇ ಎದುರಿಸುವುದೆಂದು ಯೋಚಿಸಿ ಹೊರಟನು.ಅಷ್ಟರಲ್ಲಿ ಧೃಷ್ಟದ್ಯುಮ್ನನು ಪಾಂಡವರ ಸೇನೆಯನ್ನು ತೆಗೆದುಕೊಂಡು ಶತ್ರುಸೇನೆಯ ಕಡೆಗೆ ಧಾವಿಸಿ ಬಂದನು. ಎರಡು ಸೇನೆಗಳೂ ಹೊಂಬಣ್ಣದ ಗಂಗೆಯೊಡನೆ ನೀಲವರ್ಣದ ಯಮುನೆಯು ಸೇರಿದಂತೆ ಪರಸ್ಪರ ಮೇಳೈಸಿದವು. ದ್ರೋಣನು ವ್ಯೂಹರಕ್ಷಣೆಗೆ ನಿಂತಿದ್ದನು. ದ್ರೋಣನ ಪ್ರಹಾರಕ್ಕೆ ಸಿಕ್ಕಿದ ಪಾಂಡವಸೇನೆಯು ಕರಗಲಾರಂಭಿಸಿತು. ಧೃಷ್ಟದ್ಯುಮ್ನನು ದ್ರೋಣನನ್ನು ಎದುರಿಸಿ ನಿಂತನು. ವಿವಿಂಶತಿ ಚಿತ್ರಸೇನ ವಿಕರ್ಣಾದಿ ಧಾರ್ತರಾಷ್ಟ್ರರು ಭೀಮನನ್ನೂ, ಶಲ್ಯನು ಯುಧಿಷ್ಠಿರನನ್ನೂ, ದುಶ್ಶಾಸನನು ಸಾತ್ಯಕಿಯನ್ನೂ, ಶಕುನಿಯು ನಕುಲಸಹದೇವರನ್ನೂ, ವಿಂದಾನುವಿಂದರು ವಿರಾಟನನ್ನೂ, ಬಾಹ್ಲೀಕನು ಶಿಖಂಡಿಯನ್ನೂ, ಘಟೋತ್ಕಚನು ಆಲಂಬುಷನನ್ನೂ ಎದುರಿಸಿದರು. ಘೋರ ಯುದ್ಧವು ನಡೆಯಿತು. ಇನ್ನುಳಿದ ಅಶ್ವತ್ಥಾಮ, ರಾಧೇಯ, ಭೂರಿಶ್ರವಸ್ಸು, ಕೃಪ, ಶಲ, ದುರ್ಜಯ ಮೊದಲಾದ ವೀರರು ಜಯದ್ರಥನ ರಕ್ಷಣೆಗೆ ನಿಂತರು. ದ್ರೋಣ ಧೃಷ್ಟದ್ಯುಮ್ನರು ಪರಸ್ಪರರ ಸೈನ್ಯಗಳನ್ನು ನಾಶಮಾಡುವುದರಲ್ಲಿ ತೊಡಗಿದ್ದರು. ಅವರ ನಡುವಣ ದ್ವಂದ್ವಯುದ್ಧದಲ್ಲಿ ದ್ರೋಣನೆ ಕ್ರಮೇಣ ಮೇಲುಗೈ ಸಾಧಿಸುತ್ತಿದ್ದನು. ಇದ್ದಕ್ಕಿದ್ದಂತೆ ದ್ರೋಣನು ಧೃಷ್ಟದ್ಯುಮ್ನನ ಕುದುರೆಗಳನ್ನೂ ಸಾರಥಿಯನ್ನೂ ಕೊಂದು, ಅವನ ಬಿಲ್ಲನ್ನು ಕತ್ತರಿಸಿ, ಇನ್ನೇನು ಅವನನ್ನೂ ಚೂಪಾದ ಬಾಣವೊಂದರಿಂದ ಕೊಲ್ಲಬೇಕೆಂದಿರುವಾಗ ಸಾತ್ಯಕಿಯ ಬಂದು ಅದನ್ನು ಕತ್ತರಿಸಿ ಗೆಳೆಯನನ್ನು ಉಳಿಸಿದನು. ಇದರಿಂದ ದ್ರೋಣನ ಕೋಪಾಗ್ನಿ ಭುಗಿಲೆದ್ದಿತು. ಸಾತ್ಯಕಿಗೆ ಕೌರವ ಸೇನಾಪತಿಯಿಂದ ಒಂದಾದ ಮೇಲೊಂದು ಸಿಡಿಲುಗಳು ಬಂದು ಬಡಿಯುತ್ತಿವೆಯೋ ಎನಿಸುವಂತಾಯಿತು. ಆದರೆ ಅವನು ಧೈರ್ಯವನ್ನು ಕಳೆದುಕೊಳ್ಳದೆ ತನ್ನ ಸಾರಥಿಗೆ, ``ಈ ಕ್ರೂರಿ ಬ್ರಾಹ್ಮಣ ಕ್ಷತ್ರಿಯಕರ್ಮವನ್ನು ಕೈಗೆತ್ತಿಕೊಂಡಿದ್ದಾನೆ. ಬ್ರಾಹ್ಮಣನಿಗೆ ಕೋಪ ಹೆಚ್ಚೆಂದೂ, ಕ್ಷತ್ರಿಯನಿಗೆ ಧೈರ್ಯ ಹೆಚ್ಚೆಂದೂ ಹೇಳುವರು; ಇವನಲ್ಲಿ ಈ ಎರಡೂ ಭಯಾನಕವಾಗಿ ಒಗ್ಗೂಡಿವೆ. ದುರ್ಯೋಧನನಿಗೆ ಇವನದೇ ಭರವಸೆ. ಯುದಿಷ್ಠಿರನನ್ನು ರಕ್ಷಿಸಿಕೊಳ್ಳಬೇಕಾಗಿರುವಲ್ಲಿ ನಮಗೂ ಸಹ ಇವನದೇ ಹೆದರಿಕೆ. ನೀನು ವೇಗವಾಗಿ ಅವನ ಬಳಿಗೆ ರಥವನ್ನು ಮುನ್ನಡೆಸು. ಯುಧಿಷ್ಠಿರನ ಬಳಿ ಅವನು ಬಾರದಂತೆ ತಡೆಯಬೇಕು" ಎಂದನು. ಇಬ್ಬರ ನಡುವೆ ಭೀಕರವಾದ ದ್ವಂದ್ವಯುದ್ಧವು ನಡೆಯಿತು. ಸಾತ್ಯಕಿ ಇಂದು ತನ್ನ ಸಾಮರ್ಥ್ಯವನ್ನೆಲ್ಲ ತೋರಿಸಿಬಿಡಲು ಮನಸ್ಸುಮಾಡಿರುವನು ಎಂದೆನಿಸುತ್ತಿತ್ತು. ದ್ರೋಣನಿಗೆ ಇವನ ಶೌರ್ಯವನ್ನೂ ಕೌಶಲವನ್ನೂ ನೋಡಿ ಅಚ್ಚರಿ. ಅವನು ತನ್ನಲ್ಲಿ ತಾನು, ``ಇಂಥ ಧನುರ್ವಿದ್ಯಾಕೌಶಲವನ್ನು ಕೇವಲ ಅರ್ಜುನನಲ್ಲಿ, ಭೀಷ್ಮನಲ್ಲಿ, ಗುರು ಭಾರ್ಗವನಲ್ಲಿ ಹಾಗೂ ಕಾರ್ತಿಕೇಯನಲ್ಲಿ ನೋಡುವಂಥದು. ಭಲೆ, ಅರ್ಜುನನ ಶಿಷ್ಯ ಅರ್ಜುನನಷ್ಟೇ ಸಮರ್ಥನು ಎಂದುಕೊಂಡನು. ಅವನಲ್ಲಿದ್ದ ವಿದ್ಯಾಗುರುವು ಸಾತ್ಯಕಿಯನ್ನು ಮೆಚ್ಚದಿರಲು ಸಾಧ್ಯವಿರಲಿಲ್ಲ. ಅಂದು ದ್ರೋಣನು ಅಸಂಖ್ಯ ಬಿಲ್ಲುಗಳನ್ನು ಕಳೆದುಕೊಳ್ಳಬೇಕಾಯಿತು. ಎರಡೂ ಕಡೆಯ ಸೈನ್ಯಗಳೂ ಯುದ್ಧವನ್ನು ನಿಲ್ಲಿಸಿ ಇವರಿಬ್ಬರ ದ್ವಂದ್ವವನ್ನೇ ತದೇಕಚಿತ್ತದಿಂದ ನೋಡುತ್ತಿದ್ದವು. ದ್ರೋಣನು ಯಾವ ಅಸ್ತ್ರವನ್ನು ಕಳುಹಿಸಿದರೂ ಸಾತ್ಯಕಿಯು ತಕ್ಕ ಪ್ರತ್ಯಸ್ತ್ರದಿಂದ ಅದನ್ನು ನಿವಾರಿಸುತ್ತಿದ್ದನು. ಈ ಅಚ್ಚರಿಯ ದೃಶ್ಯವನ್ನು ನೋಡಲು ಅಂತರಿಕ್ಷದಲ್ಲಿ ದೇವತೆಗಳು ಬಂದು ನೆರೆದರು. ಸ್ವಲ್ಪ ಹೊತ್ತಿನಲ್ಲಿ ಯುಧಿಷ್ಠಿರ ಭೀಮ ನಕುಲ ಸಹದೇವ ಧೃಷ್ಟದ್ಯುಮ್ನ ವಿರಾಟ ಕೇಕಯ ಸಹೋದರರು ಬಂದು ಸಾತ್ಯಕಿಗೆ ನೆರವಾದರು. ದುಶ್ಶಾಸನ ಮತ್ತಿತರ ಧಾರ್ತರಾಷ್ಟ್ರರು ದ್ರೋಣನ ಬೆಂಬಲಕ್ಕೆ ಬಂದು ನಿಂತರು ಯುದ್ಧ ಸಂಕುಲಕ್ಕೆ ತಿರುಗಿತು.* * * * ಸೂರ್ಯನು ನಿಧಾನವಾಗಿ ಪಶ್ಚಿಮದ ಕಡೆಗೆ ಇಳಿಯುತ್ತಿದ್ದನು. ಈಗ ಅರ್ಜುನನದು ಕಾಲದೊಂದಿಗೆ ಹೋರಾಟ. ಈಗ ಅವನು ಬೆಳಗಿನ ಎರಡರಷ್ಟು ವೀರಾವೇಶದಿಂದ ಹೋರಾಡುತ್ತಿದ್ದನು. ಅವನ ರಥ ಹೋದಲೆಲ್ಲ ಸರ್ವನಾಶವೂ ಹಿಂಬಾಲಿಸುತ್ತಿತ್ತು. ಕೃಷ್ಣನ ಸಾರಥ್ಯದ ಕುಶಲತೆಯನ್ನು ನೋಡುವುದೇ ಒಂದು ಚೆಂದ. ಅವನ ರಥದಷ್ಟು ಚೆನ್ನಾಗಿ ದಾರಿ ಬಿಡಿಸಿಕೊಂಡು ವೇಗವನ್ನು ಕಳೆದುಕೊಳ್ಳದೆ ಇನ್ನಾವ ರಥವೂ ಚಲಿಸುತ್ತಿರಲಿಲ್ಲ. ಆದರೂ ಅವನ ರಥದ ಕುದುರೆಗಳಿಗೆ ಆಯಾಸವಾಗತೊಡಗಿತು. ಬಾಯಾರಿಕೆಯಿಂದಾಗಿ ಅವು ನೊರೆ ಸುರಿಸತೊಡಗಿದವು. ಬಾಣಗಳಿಂದಾದ ಗಾಯಗಳಿಂದ ತುಂಬ ನೊಂದಿದ್ದವು. ಕ್ರಮೇಣ ಅರ್ಜುನನ ರಥವು ವೇಗವನ್ನು ಕಳೆದುಕೊಳ್ಳತೊಡಗಿದುದನ್ನು ಕಂಡು ಕೌರವರಿಗೆ ಸಂತೋಷವೋ ಸಂತೋಷ. ಜಯದ್ರಥನಿದ್ದ ಜಾಗವು ಇನ್ನೂ ಬಹು ದೂರವಿತ್ತು. ಇದನ್ನು ಗಮನಿಸಿದ ಅವಂತಿಯ ವಿಂದಾನುವಿಂದರು ಅರ್ಜುನನನ್ನು ಎದುರಿಸಿ ನಿಂತರು. ಬೇರೆ ದಿನಗಳಲ್ಲಾಗಿದ್ದರೆ ಅರ್ಜುನ ಯುದ್ಧಮಾಡುತ್ತಿದ್ದನು. ಆದರೆ ಇಂದು ಕಾಲಾವಕಾಶವಿರಲಿಲ್ಲವಾದ್ದರಿಂದ ವಿಂದಾನುವಿಂದರ ತಲೆಗಳನ್ನು ಕತ್ತರಿಸಿ ಹಾಕಿದನು. ಇದರಿಂದ ಕೋಪಕೊಂಡ ಕೌರವನು ಒಟ್ಟಾಗಿ ಮೇಲೆ ಬಿದ್ದರೂ ಅರ್ಜುನನು ಹಿಂಜರಿಯಲಿಲ್ಲ. ಕುದುರೆಗಳಿಗೆ ಸಲ್ಪ ವಿಶ್ರಾಂತಿ ದೊರಕಲೆಂದು ಅರ್ಜುನನು ನಗುನಗುತ್ತಲೇ ರಥದಿಂದಿಳಿದು ನಿಂತು ಹೋರಾಟವನ್ನು ಮುಂದುವರೆಸಿದನು. ಕೌರವರು ರಥವಿಲ್ಲದ ಅವನನ್ನು ಮುಗಿಸಲು ಇದೇ ಸಮಯವೆಂದು ಕೊಂಡರು. ಹಿಂದಿನ ದಿನ ಅಭಿಮನ್ಯುವಿಗೆ ಮಾಡಿದಂತೆಯೇ ಅವನ ಸುತ್ತಲೂ ನೆರೆದರು. ಅಚ್ಚರಿಯೆಂದರೆ ರಥದಲ್ಲಿರುವ ಅರ್ಜುನನಿಗಿಂತ ನೆಲದ ಮೇಲೆ ನಿಂತಿರುವ ಅರ್ಜುನನೇ ಅವರೆಲ್ಲರಿಗೂ ಹೆಚ್ಚು ಅಪಾಯಕಾರಿಯಾಗಿ ತೋರಿದನು.

ಈ ನಡುವೆ ಕೃಷ್ಣನು ಬಂದು, ``ಅರ್ಜುನ, ಇಲ್ಲಿ ಎಲ್ಲಿಯೂ ನೀರಿಲ್ಲ. ಆಯಾಸಗೊಂಡಿರುವ ಕುದುರೆಗಳನ್ನು ನೀರು ಕುಡಿಸದೆ ಹೇಗೆ ನಾನು ರಥಕ್ಕೆ ಕಟ್ಟಲಿ? ಎಂದದ್ದು ಅಲ್ಲಿ ಇದ್ದವರಿಗೆಲ್ಲ ಕೇಳಿಸಿತು. ಅರ್ಜುನನು ನಕ್ಕು ``ನೋಡು, ನೀರು ಇಲ್ಲಿದೆ!" ಎಂದವನೆ ವಾರುಣಾಸ್ತ್ರವನ್ನು ಅಭಿಮಂತ್ರಿಸಿ ಒಂದು ಬಾಣವನ್ನು ನೆಲಕ್ಕೆ ಹೊಡೆದನು. ಆಗ ಅಲ್ಲಿ ಅರ್ಜುನನ ಬಾಣಗಳಿಂದಲೇ ನಿರ್ಮಿಸಲ್ಪಟ್ಟ ದಡವುಳ್ಳ ಒಂದು ಸುಂದರವಾದ ಸರೋವರವು ನಿರ್ಮಾಣವಾಯಿತು. ಈ ಕಾರ್ಯವನ್ನು ಅಲ್ಲಿದ್ದವರಿಗೆಲ್ಲ ಅಚ್ಚರಿ. ಅರ್ಜುನನ ಈ ಸಾಹಸದಿಂದ ಕೃಷ್ಣನು ತುಂಬ ಸಂತೋಷಪಟ್ಟು ``ಭಲೆ!" ಎಂದನು. ಕುದುರೆಗಳನ್ನು ಕರೆತಂದು ನೀರು ಕುಡಿಸಿದನು. ಅವುಗಳನ್ನು ನೋಡಿ ಅವನಿಗೆ ಕಣ್ಣೀರು ಬಂತು. ಅವುಗಳ ಮೈಯಲ್ಲಿ ಚುಚ್ಚಿಕೊಂಡಿದ್ದ ಬಾಣಗಳನ್ನು ಒಂದೊಂದಾಗಿ ನೋವಾಗದಂತೆ ಕಿತ್ತುಹಾಕಿದನು. ಕೃಷ್ಣನ ಈ ಪ್ರಾಣಿದಯೆಯನ್ನು ಉಭಯಸೈನ್ಯಗಳೂ ಮೆಚ್ಚುಗೆಯಿಂದ ನೋಡುತ್ತಿದ್ದವು. ಅರ್ಜುನನು ನಿಂತೇ ಇಷ್ಟೆಲ್ಲ ಮಾಡಿದುದನ್ನೂ ಕೃಷ್ಣನ ಕಾರ್ಯವನ್ನೂ ಕೌರವರಂಥ ಕೌರವರೂ ಮೆಚ್ಚಿಕೊಂಡರು. ಯಾರಿಗೂ ಯುದ್ಧಮಾಡಬೇಕೆಂಬ ಆಸಕ್ತಿಯೇ ಉಳಿಯಲಿಲ್ಲ. ಕೃಷ್ಣನಂತೂ ಯುದ್ಧರಂಗದಲ್ಲಿರುವನೋ ಗೋಪಿಯರ ನಡುವೆ ಇರುವನೋ ಎಂಬಂತೆ ಆನಂದದಿಂದ ನಗುತ್ತಿದ್ದುದನ್ನು ನೋಡಿ ಕೌರವರ ಆತ್ಮವಿಶ್ವಾಸವೇ ಹೊರಟುಹೋಯಿತು. ಯಾವ ಅವಸರವಿಲ್ಲದೆ ಕೃಷ್ಣನು ಕುದುರೆಗಳನ್ನು ಚಪ್ಪರಿಸಿ ಮಾಲೀಷುಮಾಡಿ ಮಾತನಾಡಿಸಿ ಸಮಾಧಾನ ಮಾಡಿದನು. ಅವು ವಿಶ್ರಾಂತಿಯನ್ನು ಪಡೆದಾದ ಮೇಲೆ ರಥಕ್ಕೆ ಕಟ್ಟಿ, ರಥವನ್ನು ಅರ್ಜುನನ ಎದುರಿಗೆ ತಂದು ನಿಲ್ಲಿಸಿದನು. ಇದಕ್ಕೆ ಸ್ವಲ್ಪ ಕಾಲ ವ್ಯಯವಾಯಿತಾದರೂ, ಕುದುರೆಗಳ ದೃಷ್ಟಿಯಿಂದ ಇದು ಅವಶ್ಯಕವಾಗಿದ್ದಿತು. ಹೊತ್ತಾಗುತ್ತಿರುವುದರ ಬಗ್ಗೆ ಇವರಿಗೆ ಗಮನವೇ ಇಲ್ಲವೆನ್ನಿಸಿ ಶತ್ರುಗಳು ನಿಬ್ಬೆರಗಾದರು.

ಕೃಷ್ಣಾರ್ಜುನರು ರಥವನ್ನು ಹತ್ತಿ ವಾಯುವೇಗದಿಂದ ಜಯದ್ರಥನಿದ್ದಲ್ಲಿಗೆ ಬಂದರು. ಪದ್ಮ ವ್ಯೂಹವನ್ನು ಭೇದಿಸಿ ಕೊನೆಯ ವ್ಯೂಹದ ಹತ್ತಿರಕ್ಕೆ ಬಂದರು. ತಾವು ಅಸಾಧ್ಯವೆಂದೇ ಭಾವಿಸಿದ್ದ ಕೃಷ್ಣಾರ್ಜುನರ ಈ ಕಾರ್ಯವನ್ನು ನೋಡಿ ಕೌರವರು ಕಿಂಕರ್ತವ್ಯವಿಮೂಢರಾದರು. ರಥವನ್ನು ಅವರೆಷ್ಟು ತಡೆಯಲೆತ್ನಿಸಿದರೂ, ನಗುನಗುತ್ತಲೇ ಕೃತವರ್ಮ ದುರ್ಮರ್ಷಣ ದ್ರೋಣರಂಥವರನ್ನೂ ನಿವಾರಿಸಿ ಕೃಷ್ಣಾರ್ಜುನರು ತಮ್ಮ ಪ್ರಯಾಣದ ಕೊನೆಯ ಹತ್ತಿರಕ್ಕೆ ಬಂದುಬಿಟ್ಟಿದ್ದರು. ಈಗ ಬಗೆಗಣ್ಣಿಗೆ ಕಾಣಿಸುತ್ತಿದ್ದ ಜಯದ್ರಥನ ಸಾವು ಸಂಭಾವ್ಯವೆಂದೆನಿಸಿತು. ಇಷ್ಟು ವೇಗದಿಂದ ಮುಂದುವರೆಯುತ್ತಿದ್ದ ಇವರನ್ನು ತಡೆಯಲು ದುರ್ಯೋಧನನೇ ದ್ರೋಣನು ಕೊಟ್ಟ ಕವಚವನ್ನು ಧರಿಸಿ ಅಲ್ಲಿಗೆ ಬಂದನು. ಇದನ್ನು ನೋಡಿ ಕೃಷ್ಣನು, ``ಅರ್ಜುನ, ದ್ವಂದ್ವಯುದ್ಧಕ್ಕಾಗಿ ಬಂದಿರುವ ಇವನು ಸಾಮಾನ್ಯನಲ್ಲ. ಹೆಸರಿಗೆ ತಕ್ಕಂತ ಉತ್ತಮ ಯೋಧನು. ರಥದಲ್ಲಿರುವಾಗ ಚೆನ್ನಾಗಿ ಹೋರುವನು. ಸುಖಲೋಲುಪತೆಯಲ್ಲಿ ಬೆಳೆದ ಅವನು ತುಂಬ ಸೂಕಷ್ಮ, ದುರಹಂಕಾರಿ, ಪಾಂಡವದ್ವೇಷಿ. ನಿನ್ನೊಡನೆ ದ್ವಂದ್ವಕ್ಕಾಗಿ ಏಕೆ ಬಂದಿರುವನೋ ತಿಳಿಯದು. ನೀನು ಹುಷಾರಾಗಿರಬೇಕು. ಅಧಿಕಾರಮತ್ತನಾದ ಅವನಿಗೆ ನೋವೆಂಬುದೇ ತಿಳಿಯದು. ಅವನ ಅಹಂಕಾರವನ್ನು ತಗ್ಗಿಸು. ಅರ್ಜುನನನ್ನು ಎದುರಿಸುವುದೆಂದರೆ ಏನೆಂಬುದನ್ನು ಅವನಿಗೆ ತೋರಿಸಿಕೊಡು!" ಎಂದನು. ರಾಜನೇ ಅರ್ಜುನನ ಮೇಲೆ ಯುದ್ಧಕ್ಕೆ ಬಂದಿರುವುದನ್ನು ಕಂಡು ಕೌರವಸೈನಿಕರಿಗೆ ಸಂತೋಷವಾಯಿತು. ದುರ್ಯೋಧನನು ನಗುತ್ತ, ``ಬಾ ಅರ್ಜುನ, ಅದೇನೋ ಬಹಳ ದಿವ್ಯಾಸ್ತ್ರಗಳನ್ನು ಸಂಪಾದಿಸಿಕೊಂಡಿರುವೆಯಂತೆ. ಬಾ ಅವುಗಳನ್ನು ನನ್ನ ಮೇಲೆ ಪ್ರಯೋಗಿಸು!" ಎಂದು ಚೂಪಾದ ಬಾಣಗಳಿಂದ ಕೃಷ್ಣಾರ್ಜುನರನ್ನು ನೋಯಿಸಿದನು. ಕೃಷ್ಣನು, ``ಇಂಥ ನೋವನ್ನು ಅನುಭವಿಸಿರಲಿಲ್ಲ; ದುರ್ಯೋಧನನ ಬಾಣಗಳು ಭಯಂಕರವಾಗಿವೆ" ಎಂದನು. ಅರ್ಜುನನು ಕೋಪದಿಂದ ಬಿಟ್ಟ ಬಾಣಗಳೂ ದುರ್ಯೋಧನನನ್ನು ನೋಯಿಸಲಾರದೆ ಹೋದವು. ಆಗ ಕೃಷ್ಣನು, ``ಅರ್ಜುನ, ನಾವಿಬ್ಬರೂ ಇವನ ಬಾಣಗಳಿಂದ ನೊಂದಿದ್ದೇವೆ. ನಿನ್ನ ಬಾಣಗಳು ಫಲಕಾರಿಯಾಗುತ್ತಿಲ್ಲ! ಬಹುಶಃ ಗಾಂಡೀವವು ತನ್ನ ಹಿಂದಿನ ವೈಭವವನ್ನು ಕಳೆದುಕೊಂಡಿರಬೇಕು. ಅದೃಷ್ಟವು ನಮಗೆ ವಿರೋಧವಾಗಿದೆಯೆಂದು ತೋರುತ್ತದೆ. ಸೂರ್ಯನು ಮುಳುಗುತ್ತಿದ್ದಾನೆ. ತನಗಾಗಿ ಹೋರುವ ಇಂಥ ಗೆಳೆಯನನ್ನು ಹೊಂದಿರುವ ಜಯದ್ರಥನೇ ಪುಣ್ಯವಂತ. ನಾವು ಸೋಲೊಪ್ಪಿಕೊಂಡು ಹೊರಟುಹೋಗೋಣ" ಎನ್ನಲು, ಅರ್ಜುನನು, ``ಕೃಷ್ಣ, ಎಲ್ಲವನ್ನೂ ತಿಳಿದ ನೀನೇ ನನ್ನನ್ನು ಹಂಗಿಸುತ್ತಿರುವೆಯಲ್ಲ! ಈ ಹೇಡಿ ನನ್ನೆದುರು ನಿಲ್ಲಲಾರನೆಂದು ನಿನಗೂ ಗೊತ್ತಿದೆ. ನಮ್ಮ ಗುರುಗಳು ಇವನ ಮೈಗೆ ನನ್ನ ಬಾಣಗಳನ್ನು ತಡೆದುಕೊಳ್ಳುವಂಥ ವಿಶೇಷ ಕವಚವನ್ನು ತೊಡಿಸಿ ಕಳುಹಿಸಿರುವರು. ಈ ಎರವಲು ಕವಚದಿಂದಲೇ ಇವನಿಗೆ ಇಷ್ಟು ಪೊಗರು ಬಂದಿರುವುದು. ಈಗ ನೋಡುತ್ತಿರು. ನನ್ನ ತಂದೆ ಇಂದ್ರನು ಹೇಳಿಕೊಟ್ಟಿರುವ ಅಸ್ತ್ರವೊಂದನ್ನು ಪ್ರಯೋಗಿಸಿ ಈ ಕವಚವನ್ನು ಭೇದಿಸುವೆನು" ಎಂದು ಮಾನವಾಸ್ತ್ರವನ್ನು ಅಭಿಮಂತ್ರಿಸಿ ಬಿಲ್ಲಿನಲ್ಲಿ ಹೊಡಿದನು. ಅಶ್ವತ್ಥಾಮನು ಅದನ್ನು ದೂರದಿಂದಲೇ ನೋಡಿ, ಅದು ಬಿಲ್ಲನ್ನು ಬಿಡುವ ಮೊದಲೇ ಅದನ್ನು ಎರಡಾಗಿ ಕತ್ತರಿಸಿದನು. ``ಗುರುಪುತ್ರನು ನನ್ನ ಉದ್ದೇಶವನ್ನು ಆರಿತುಬಿಟ್ಟನು. ಆದರೇನು? ನೋಡುತ್ತಿರು ಈಗ ದುರ್ಯೋಧನನ ಅವಸ್ಥೆಯನ್ನು. ಸ್ತ್ರೀಯೊಬ್ಬಳು ಪುರುಷನ ಕವಚವನ್ನು ಹಾಕಿಕೊಂಡಂತೆ ಇವನು ಹಾಕಿಕೊಂಡಿರುವನು. ಅದರ ರಹಸ್ಯವು ಅವನಿಗೆ ತಿಳಿಯದು" ಎಂದು ಅರ್ಜುನನು ಕವಚದಿಂದ ಹೊರಗಿಣುಕುತ್ತಿರುವ ದೇಹಭಾಗಗಳಿಗೇ ಗುರಿಯಿಟ್ಟು ಬಾಣ ಬಿಡಲಾರಂಭಿಸಿದನು. ಬೆರಳಿನ ತುದಿ, ಉಗುರುಗಳು, ಅಂಗೈಗಳಿಗೆ ನೆಟ್ಟ ಬಾಣಗಳಿಂದ ಬಹುವಾಗಿ ನೊಂದ ದುರ್ಯೋಧನನು ಯುದ್ಧಮಾಡಲಾರದೆ ರಣರಂಗದಿದ ಪಲಾಯನಮಾಡಿದನು. ಈ ತಮಾಷೆಯನ್ನು ನೋಡಿ ನಗುತ್ತ ಕೃಷ್ಣಾರ್ಜುನರು ಜಯದ್ರಥನಿದ್ದಲ್ಲಿಗೆ ಹೊರಟರು. ಸೂರ್ಯನು ವೇಗವಾಗಿ ಪಶ್ಚಿಮಸಮುದ್ರಕ್ಕಿಳಿಯುತ್ತಿದ್ದನು. ಈಗ ಕಾಲವನ್ನು ವ್ಯರ್ಥಮಾಡುವಂತಿರಲಿಲ್ಲ. ಆದರೆ ಎಲ್ಲ ಕಡೆಗಳಿಂದಲೂ ರಥಿಕರು, ಸೈನಿಕರು ಬಹುಸಂಖ್ಯೆಯಲ್ಲಿ ಅವರನ್ನು ಮುತ್ತಿದರು. ಕೃಷ್ಣನಿಗೆ ಏನು ಮಾಡಬೇಕೆಂದೇ ತೋರದಾಯಿತು. ಅವರಿನ್ನೂ ಎರಡು ಹರಿದಾರಿ ಹೋಗಬೇಕಾಗಿದ್ದಿತು. ಇದ್ದಕ್ಕಿದ್ದಂತೆ ಪಾಂಚಜನ್ಯವನ್ನು ತೆಗೆದು ಗಟ್ಟಿಯಾಗಿ ಊದಿದನು. ಅರ್ಜುನನ ಗಾಂಡೀವದ ಟಂಕಾರವು ಅದರ ಜೊತೆಗೆ ಸೇರಿತು. ಗಗನವನ್ನೇ ಭೇದಿಸುವಂತೆ ಮೊಳಗಿದ ಈ ಧ್ವನಿಗಳನ್ನು ಕೇಳಿದ ಜಯದ್ರಥನ ರಕ್ಷಕರುಗಳು ಅರ್ಜುನನು ಹತ್ತಿರಬಂದುಬಿಟ್ಟನೆಂದು ಅರಿತರು. ಭೂರಿಶ್ರವಸ್ಸು, ರಾಧೇಯ, ಶಲ, ವೃಷನೇನ, ಕೃಪ, ಶಲ್ಯ, ಅಶ್ವತ್ಥಾಮ ಎಲ್ಲರೂ ಸೇರಿ ಒಟ್ಟಿಗೆ ಅರ್ಜುನನನ್ನು ಎದುರಿಸಿದರು. ಅವರ ಸೈನ್ಯಗಳೂ ಅವರ ಜೊತೆಗೇ ಮುತ್ತಿಗೆ ಹಾಕಿದವು. ಘೋರ ಯುದ್ಧವಾಯಿತು. ಅರ್ಜುನನು ಹಿಂದೆಂದಿಗಿಂತಲೂ ಅದ್ಭುತವಾಗಿ ಯುದ್ಧಮಾಡಿದನು. ಅವರಲ್ಲಿ ಪ್ರತಿಯೊಬ್ಬನೂ ಅರ್ಜುನನ ಬಾಣಗಳಿಂದ ತೀವ್ರವಾಗಿ ನೋಯಿಸಲ್ಪಟ್ಟನು. ಸೂರ್ಯನು ಇನ್ನೇನು ಪಶ್ಚಿಮ ಪರ್ವತಗಳ ಹಿಂದೆ ಕಣ್ಮರೆಯಾಗುವುದರಲ್ಲಿದ್ದನು. ಕೃಷ್ಣಾರ್ಜುನರಿಬ್ಬರಿಗೂ ಆತಂಕವಾಗಿದ್ದರೂ ಅದನ್ನವರು ತೋರಿಸಿಕೊಳ್ಳಲಿಲ್ಲ.* * * * 

ಇತ್ತಕಡೆ ಪಾಂಡವಸೈನ್ಯವು ದ್ರೋಣನೊಂದಿಗೆ ಹೋರಾಡುತ್ತಲೇ ಇದ್ದಿತು. ದ್ವಂದ್ವ ಯುದ್ಧದಲ್ಲಿ ಯುಧಿಷ್ಠಿರನು ದ್ರೋಣನನ್ನು ತೀವ್ರವಾಗಿ ಗಾಯಗೊಳಿಸಿದನು. ಅವನು ಬಳಸಿದ ಸಿಡಿಲಿನಂತಹ ಶಕ್ತಿಯೊಂದನ್ನು ತಡೆಯಲು ದ್ರೋಣನು ಬ್ರಹ್ಮಾಸ್ತ್ರವನ್ನೇ ಪ್ರಯೋಗಿಸಬೇಕಾಯಿತು. ಯುಧಿಷ್ಠಿರನ ರಥದ ಹತ್ತಿರಕ್ಕೇ ಹೋಗಿ ಅವನ ಧ್ವಜವನ್ನು ಮುರಿದು ಅವನ ಕುದುರೆಗಳನ್ನು ಕೊಲ್ಲಲು, ಯುಥಿಷ್ಠಿರನು ಕೆಳಕ್ಕೆ ಹಾರಿ ಜೀವ ಉಳಿಸಿಕೊಳ್ಳಬೇಕಾಯಿತು. ರಥವಿಲ್ಲದ ದ್ರೋಣನು, ಸಮ್ಮೋಹನಾಸ್ತ್ರದಿಂದ ಎಲ್ಲರನ್ನೂ ಎಚ್ಚರತಪ್ಪಿಸಿ, ಸಿಂಹವು ಕುರಿಮರಿಯತ್ತ ನುಗ್ಗುವಂತೆ ಅವನ ಬಳಿಗೆನುಗ್ಗಿದನು. ಯುಧಿಷ್ಠಿರನು ಇನ್ನೇನು ಸೆರೆಸಿಕ್ಕಿಬಿಟ್ಟನೆನ್ನುವ ಸಮಯಕ್ಕೆ ಸರಿಯಾಗಿ ಸಾತ್ಯಕಿಯ ರಥವು ಅಲ್ಲಿಗೆ ಬಂದಿತು. ಯುಧಿಷ್ಠಿರನು ಅವನ ರಥಕ್ಕೆ ನೆಗೆಯಲು, ಸಾತ್ಯಕಿಯು ಅವನನ್ನು ಅಲ್ಲಿಂದ ಕರೆದುಕೊಂಡು ಹೋದನು. ತನ್ನ ಪ್ರಯತ್ನಕ್ಕೆ ಮತ್ತೊಮ್ಮೆ ಸೋಲಾದುದರಿಂದ ದ್ರೋಣನಿಗೆ ತುಂಬ ನಿರಾಶೆಯಾಯಿತು, ಸಿಟ್ಟೂ ಬಂದಿತು. ಮತ್ತೊಮ್ಮೆ ಯುದ್ಧವು ಸಂಕುಲವಾಯಿತು. ಬೃಹತ್ಕ್ಷಾತ್ರನೆಂಬ ಕೇಕಯ ಸೋದರನೊಬ್ಬನು ಕೌರವರ ಕಡೆಯ ಕ್ಷೇಮಧೂರ್ತಿ ಎಂಬ ವೀರನನ್ನು ದ್ವಂದ್ವಯುದ್ಧದಲ್ಲಿ ಕೊಂದನು. ಚೇದಿರಾಜನಾದ ಧೃಷ್ಟಕೇತುವು ವೀರಧನ್ವನೆಂಬ ತ್ರಿಗರ್ತಸೋದರನನ್ನು ಭಯಂಕರವಾದ ದ್ವಂದ್ವಯುದ್ಧದಲ್ಲಿ ಕೊಂದನು. ದ್ರೋಣನೂ ಸಾತ್ಯಕಿಯೂ ಮತ್ತೊಮ್ಮೆ ಹೋರಾಡಿದರು. ಶಲನನ್ನು ಸಹದೇವನ ಮಗನು ಕೊಂದುಹಾಕಿದನು. ಭೀಮನು ಆಲಂಬುಷನನ್ನು ಸೋಲಿಸಲು, ಅವನು ಘಟೋತ್ಕಚನ ಮೇಲೆ ಏರಿಹೋದನು. ಇಬ್ಬರಿಗೂ ಮಾಯಾಯುದ್ಧವು ಬಹುಹೊತ್ತು ನಡೆಯಿತು. ಕೊನೆಗೆ ಘಟೋತ್ಕಚನು ಗಿಡುಗನ ರೂಪದಲ್ಲಿ ಬಂದು ಆಲಂಬುಷನನ್ನು ಆಕಾಶಕ್ಕೆ ಎತ್ತಿಕೊಂದು ಹೋಗಿ ಅಲ್ಲಿಂದ ಹೊತ್ತುಹಾಕಿ ಸಾಯಿಸಿದನು. ಬಕನ ಗೆಳೆಯನಾದ ಆಲಂಬುಷನು ಭೀಮನನ್ನು ಕೊಂದು ಗೆಳೆಯನ ಸಾವಿಗೆ ಸೇಡು ತೀರಿಸಿಕೊಳ್ಳುವುದಕ್ಕಾಗಿ ಕೌರವರ ಕಡೆ ಸೇರಿಕೊಂಡಿದ್ದವನು, ಅದರ ಬದಲಿಗೆ ಭೀಮನ ಮಗನಿಂದ ಸಾಯಬೇಕಾಯಿತು. ಯುಧಿಷ್ಠಿರನು ಘಟೋತ್ಕಚನನ್ನು ಆಲಿಂಗಿಸಿಕೊಂಡನು. ಭೀಮನು ಮಗನ ಸಾಹಸದಿಂದ ಸಂತೋಷಪಟ್ಟನು. ಆಗ ಅವರಿಗೆ ಪಾಂಚಜನ್ಯವು ಕೇಳಿಸಿತು. ಕೃಷ್ಣನು ಬೇಕೆಂತಲೇ ಗಾಂಡೀವಧ್ವನಿಯನ್ನು ಮುಳುಗಿಸುವಷ್ಟು ಜೋರಾಗಿ ಶಂಖವನ್ನೂದಿದ್ದನು. ಇದರ ಉದ್ದೇಶ ಅರ್ಜುನನಿಗೆ ಗೊತ್ತಾಗದಂತೆ ಪಾಂಡವರನ್ನು ಸಹಾಯಕ್ಕಾಗಿ ಕರೆಯುವುದು. ತಾವಿಬ್ಬರೇ ಯುದ್ದಮಾಡಿ ಸುತ್ತುವರೆದಿರುವವರನ್ನು ಸೋಲಿಸುವಷ್ಟು ಸಮಯವಿರಲಿಲ್ಲ. ಯುಧಿಷ್ಠಿರನು ತಕ್ಷಣವೇ ಸಾತ್ಯಕಿಯನ್ನು ಕರೆದು ಅರ್ಜುನನ ಬಳಿಗೆ ಸಹಾಯಕ್ಕಾಗಿ ಹೋಗೆಂದು ಕಳುಹಿಸಿದನು. ಸಾತ್ಯಕಿಯು ಯುಧಿಷ್ಠಿರನನ್ನು ಬಿಟ್ಟು ಹೋಗಲಾರ, ಹೋಗದಿರಲಾರ. ಕೊನೆಗೊಮ್ಮೆ ಹೋಗುವುದೆಂದು ನಿರ್ಧರಿಸಿ, ಅವನನ್ನು ಭೀಮ ಧೃಷ್ಟದ್ಯುಮ್ನರ ರಕ್ಷಣೆಗೆ ಬಿಟ್ಟು, ಅವನ ಪಾದಧೂಳಿಯನ್ನು ಧರಿಸಿ ಪಾಂಚಜನ್ಯ ಧ್ವನಿ ಬಂದ ದಿಕ್ಕಿಗೆ ರಥವನ್ನೋಡಿಸಿದನು.* * * * ಅರ್ಜುನನು ಬೆಳಗ್ಗೆ ಹೋದ ದಾರಿಯಲ್ಲೇ ಸಾತ್ಯಕಿಯು ಶತ್ರುಸೈನ್ಯವನ್ನು ಪ್ರವೇಶಿಸಿ ರಥವನ್ನೋಡಿಸಿದನು. ಸೈನ್ಯವು ಅವನೊಡನೆ ಘೋರವಾಗಿ ಯುದ್ಧಮಾಡುತ್ತ ಅವನ ಮುನ್ನಡೆಯನ್ನು ತಡೆಯಲೆತ್ನಿಸಿತು. ಆದರೆ ಸಾತ್ಯಕಿಯು ಬೇಗಬೇಗ ತನ್ನನ್ನೆದುರಿಸಿದವರನ್ನೆಲ್ಲ ಕೊಲ್ಲುತ್ತ, ಮುಂದೆ ಮುಂದೆ ನಡೆದನು. ದ್ರೋಣನು ಸಾತ್ಯಕಿ ಮಾಡುತ್ತಿರುವ ಧ್ವಂಸವನ್ನು ಕಂಡು, ಬೇಗ ಬಂದು ಅವನನ್ನೆದುರಿಸಿದನು. ಸ್ವಲ್ಪಹೊತ್ತು ಇಬ್ಬರಿಗೂ ಯುದ್ಧವು ನಡೆಯಿತು. ಇಬ್ಬರಿಗೂ ಬಹು ಕೋಪ; ಯಾರೂ ಯಾರನ್ನೂ ಸೋಲಿಸಲಾರದ ಸನ್ನಿವೇಶ. ಅರ್ಜುನನ ಸಹಾಯಕ್ಕೆ ಸಾತ್ಯಕಿ ಹೋಗುವುದನ್ನು ತಡೆಯುವುದೇ ದ್ರೋಣನ ಉದ್ದೇಶವಾಗಿದ್ದಿತು. ಛೇಡಿಸುವಂತೆ ನಗುತ್ತ, ``ನಿನ್ನ ಗುರು ಅರ್ಜುನ, ನಾನು ಎದುರಿಸಿದಾಗ ನನ್ನೆದುರು ಯುದ್ಧಮಾಡದೆ ಹೇಡಿಯಂತೆ ಹೊರಟುಹೋದನು. ಸೋಲೊಪ್ಪಿಕೊಳ್ಳುವಂತೆ ರಥವನ್ನೇ ನನಗೆ ಪ್ರದಕ್ಷಿಣೆ ಮಾಡಿಸಿ ಓಡಿಸಿ ಕೊಂಡುಹೋದನು. ನಾನೀಗ ನಿನ್ನನ್ನು ಹಾಗೆ ಹೋಗಲು ಬಿಡುವುದಿಲ್ಲ. ನನ್ನನ್ನು ಕೊಂದೇ ನೀನು ಮುಂದೆ ಹೋಗಬೇಕು" ಎಂದನು. ಸುಲಭವಾಗಿ ದ್ರೋಣನನ್ನು ದಾಟಿಕೊಂದು ಹೋದ ಅರ್ಜುನನ ಜಾಣತನವನ್ನು ಕೇಳಿ ಸಾತ್ಯಕಿಗೆ ನಗು ಬಂದಿತು. ``ಶಿಷ್ಯನಿಗೆ ಗುರುವಿನ ಮಾರ್ಗವನ್ನು ಅನುಸರಿಸುವುದಕ್ಕಿಂತ ಹೆಚ್ಚಾದ ಶ್ರೇಯಸ್ಸು ಇನ್ನೇನಿದೆ? ಅವನ ಹಾಗೆಯೇ ಹೇಡಿತನ ಪ್ರದರ್ಶಿಸುವುದಕ್ಕೆ ನನಗೆ ಹೆಮ್ಮೆಯೇ!~" ಎಂದು ಹೆಳುತ್ತಿರುವಂತೆಯೇ ರಥದಿಂದ ದ್ರೋಣನಿಗೆ ಪ್ರದಕ್ಷಿಣೆ ಮಾಡಿಸಿ ಓಡಿಸಿಕೊಂಡು ಹೋಗಿಯೇಬಿಟ್ಟನು. ದ್ರೋಣನಿಗೆ ಅಗಾಧ ಸಿಟ್ಟು ಬಂದಿತು. ಸಾಧ್ಯವಾದಷ್ಟೂ ವೇಗವಾಗಿ ಅವನನ್ನು ಹಿಂಬಾಲಿಸಿದನು. ಸಾತ್ಯಕಿಯ ಸಾರಥಿ ದಾರುಕನ ತಮ್ಮ. ಅವನನ್ನು ಕುರಿತು, ``ಬೇಗ ಹೋಗು. ದ್ರೋಣನು ಹಿಂಬಾಲಿಸುತ್ತಿದ್ದಾನೆ. ನಾನು ಅರ್ಜುನ ಇದ್ದಲ್ಲಿಗೆ ಸಾಧ್ಯವಾದಷ್ಟೂ ಬೇಗ ಹೋಗಬೇಕು. ಮುಂದಿರುವುದು ಬಾಹ್ಲೀಕನ ಸೈನ್ಯ. ಅದರ ಮುಂದೆ ದಕ್ಷಿಣರಾಜನ ಸೈನ್ಯ. ಬಾಹ್ಲೀಕನ ಪಕ್ಕದಲ್ಲಿರುವುದು ರಾಧೇಯನ ಸೈನ್ಯ. ಬಾಹ್ಲೀಕನ ಸೈನ್ಯವನ್ನು ತಪ್ಪಿಸಿ ಬೇಗ ಅಲ್ಲಿಗೆ ಕರೆದುಕೊಂಡು ಹೋಗು" ಎಂದನು. ದ್ರೋಣನು ಹಿಂಬಾಲಿಸುತ್ತಿರುವಂತೆಯೇ ಸಾತ್ಯಕಿ ದಕ್ಷಿಣರಾಜನ ಸೈನ್ಯವನ್ನೆದುರಿಸಿದನು. ರಾಧೇಯನ ಸೈನ್ಯವನ್ನೂ ಧ್ವಂಸಮಾಡಿದನು. ಅವನು ಅರ್ಜುನನ ಹಾಗೆಯೇ ಯುದ್ಧಮಾಡುವುದನ್ನು ನೋಡಿ ಎಲ್ಲರೂ ಆಶ್ಚರ್ಯಪಟ್ಟರು. ಅದೇ ಕೈಚಳಕ, ಅದೇ ನಿರಾತಂಕ ಮನಸ್ಥೈರ್ಯ, ಅದೇ ನಗೆ, ಅದೇ ಎಗ್ಗಿಲ್ಲದ ಹೊಡೆತ. ಕೃತವರ್ಮನು ಎದುರಿಗೆ ಬಂದು ಸಾತ್ಯಕಿಯೊಡನೆ ಯುದ್ಧವಾರಂಭಿಸಿದನು. ಇಬ್ಬರಿಗೂ ಬಹಳ ಗಾಯಗಳಾದವು. ತನ್ನ ದಾಯಾದಿ ಸೋದರನೇ ತನ್ನನ್ನೆದುರಿಸಿದ್ದು ಸಾತ್ಯಕಿಗೆ ಸಿಟ್ಟು ತರಿಸಿತು. ಕೃತವರ್ಮನ ಸಾರಥಿಯನ್ನು ಭಲ್ಲೆಯೊಂದರಿಂದ ಇರಿಯಲು ಅವನು ರಥದಿಂದ ಕೆಳಕ್ಕೆ ಉರುಳಿದನು. ಕೃತವರ್ಮನು ಸಾವರಿಸಿಕೊಂಡು ಎಡಗೈಯಿಂದ ಕುದುರೆಗಳನ್ನು ನಿಯಂತ್ರಿಸಿ ಬಲಗೈಯಿಂದ ಬಾಣಬಿಡಲು ಸಿದ್ಧವಾಗುವುದರೊಳಗೆ ಸಾತ್ಯಕಿ ಅವನಿಂದ ದೂರ ಹೋಗಿಬಿಟ್ಟಿದ್ದನು.

ಸಾತ್ಯಕಿಯ ಮೇಲಿನ ಸಿಟ್ಟಿನಿಂದ ಕೃತವರ್ಮನು ಭೀಮನ ಮುಂದಾಳ್ತನದಲ್ಲಿದ್ದ ಪಾಂಡವ ಸೈನ್ಯವನ್ನು ಧ್ವಂಸಮಾಡತೊಡಗಿದನು. ಸೈನ್ಯ ಚೆಲ್ಲಾಪಿಲ್ಲಿಯಾಯಿತು. ಭೀಮ, ಶಿಖಂಡಿ, ಧೃಷ್ಟದ್ಯುಮ್ನ ಎಲ್ಲರಿಗೂ ಗಾಯಗಳಾದವು. ಸಾತ್ಯಕಿಯು ಈಗ ಕೃತವರ್ಮನ ಸೈನ್ಯದ ಪರಿಧಿಯನೂ ದಾಟಿ ಹೋಗಿದ್ದನು. ಅಲ್ಲಿದ್ದ ಜಲಸಂಧನ ಗಜಸೈನ್ಯವನ್ನು ಪ್ರಹರಿಸತೊಡಗಿದನು. ರಣರಂಗವು ಆನೆಗಳ ಶವಗಳಿಂದ ತುಂಬಿಹೋಯಿತು. ಜಲಸಂಧನು ಈಗ ಯುದ್ಧಕ್ಕೆ ಬಂದನು. ಸ್ವಲ್ಪ ಹೊತ್ತು ಯುದ್ಧವು ನಡೆ\-ದು, ಸಾತ್ಯಕಿಯು ಅವನ ತಲೆಯನ್ನೂ ಕೈಗಳನ್ನೂ ಕತ್ತರಿಸಿ ಹಾಕಿದನು. ನಂತರ ಸಾತ್ಯಕಿಯು ವೇಗವಾಗಿ ಮುಂದುವರೆದನು. ದ್ರೋಣನು ಹಿಂದಿರುಗಿ ಬಂದು ಸಾತ್ಯಕಿಯನ್ನು ಹೆದರಿಸತೊಡಗಿದನು. ಧಾರ್ತರಾಷ್ಟ್ರರೂ ಸಾತ್ಯಕಿಯನ್ನು ಮುತ್ತಿದರು. ಅವನ ಪ್ರಹಾರವನ್ನು ತಾಳಲಾರದೆ ದುರ್ಯೋಧನನು ರಣರಂಗದಿಂದ ಓಡಿಹೋಗಬೇಕಾಯಿತು. ಇದನ್ನ ನೋಡಿ ಕೃತವರ್ಮನು ಅವನ ನೆರವಿಗೆ ಬಂದನು. ಪುನಃ ಇವರಿಬ್ಬರಿಗೆ ದ್ವಂದ್ವಯುದ್ಧವು ಪ್ರಾರಂಭವಾಯಿತು. ಕೃತವರ್ಮನು ರಥದಲ್ಲಿಯೇ ಮೂರ್ಛೆಹೋಗಲು, ದ್ರೋಣನು ಬಂದು ಸಾತ್ಯಕಿಯನ್ನೆದುರಿಸಿದನು. ಅವರಿಬ್ಬರಿಗೂ ಸ್ವಲ್ಪಹೊತ್ತು ಯುದ್ಧವಾಯಿತು. ಸಾತ್ಯಕಿಯು ದ್ರೋಣನ ಸಾರಥಿಯನ್ನೂ ಕುದುರೆಗಳನ್ನೂ ನೋಯಿಸಲು, ಅವು ದ್ರೋಣನಿರುವಂತೆಯೇ ರಣರಂಗದ ತುಂಬ ಹುಚ್ಚೆದ್ದು ಓಡತೊಡಗಿದವು. ದ್ರೋಣನು ಸಾತ್ಯಕಿಯನ್ನು ಬಿಟ್ಟು ತನ್ನ ವ್ಯೂಹರಕ್ಷಣೆಗೆಂದು ಹೊರಟುಹೋದನು.

ಸಾತ್ಯಕಿಯು ಕೌರವ ಸೈನ್ಯವನ್ನು ಸೀಳಿಕೊಂಡು ಮುಂದೆ ಮುಂದೆ ಹೋಗುತ್ತಿದ್ದನು. ವೀರಾವೇಶದಲ್ಲಿ ಅವನು ಅರ್ಜುನನಿಗಿಂತ ಯಾವ ವಿಧದಲ್ಲೂ ಕಡಿಮೆಯಾಗಿರಲಿಲ್ಲ. ಎಲ್ಲ ಬಗೆಯ ಆಯುಧಗಳನ್ನು ಬಳಸುವುದರಲ್ಲಿ ಕುಶಲತೆಯನ್ನು ಪಡೆದಿದ್ದ ಕೌರವರ ಕಡೆಯ ಸುದರ್ಶನನೆಂಬ ವೀರನು ಅವನನ್ನೆದುರಿಸಿದನು. ಆದರೆ ಸಾತ್ಯಕಿಯು ಅವನಿಗಿಂತ ಮಿಗಿಲಾಗಿದ್ದು ದ್ವಂದ್ವಯುದ್ಧದಲ್ಲಿ ಅವನನ್ನು ಕೊಂದುಹಾಕಿದನು.

ಸ್ವಲ್ಪವೇ ಹೊತ್ತಿನಲ್ಲಿ ಸಾತ್ಯಕಿಯು ದ್ರೋಣ, ಕೃತವರ್ಮ ಮತ್ತು ದುರ್ಯೋಧನರನ್ನು ಸೋಲಿಸಿದ್ದೂ ಅಲ್ಲಿದೆ ಜಲಸಂಧ ಹಾಗೂ ಸುದರ್ಶನರನ್ನು ಕೊಂದಿದ್ದನು. ದ್ರೋಣನನ್ನು ಓಡಿ ಹೋಗುವಂತೆ ಮಾಡಿದ್ದನು. ಅವನು ಕೊಂದ ಸೈನ್ಯಗಳಿಗೆ ಲೆಕ್ಕವೇ ಇಲ್ಲವಾಗಿದ್ದಿತು. ಅರ್ಜುನನಿದ್ದ ದಿಕ್ಕಿಗೆ ಸಾಧ್ಯವಾದಷ್ಟೂ ವೇಗವಾಗಿ ಮುನ್ನಡೆಯುತ್ತಿದ್ದನು. ದುರ್ಯೋಧನನು ತಮ್ಮಂದಿರೊಡನೆ ಸೈನ್ಯದೊಂದಿಗೆ ಮತ್ತೊಮ್ಮೆ ಅವನನ್ನೆದುರಿಸಿದನು. ಸಾತ್ಯಕಿಯು ಇಡೀ ಸ್ಯೆನ್ಯವನ್ನು ಸೋಲಿಸಿ ಓಡಿಸಿ, ದುರ್ಯೋಧನನ ಸಾರಥಿಯನ್ನು ಕೊಂದನು. ದ್ರೋಣನಿಗೆ ಆದಂತೆಯೇ ದುರ್ಯೋಧನನ ಕುದುರೆಗಳೂ ಹುಚ್ಚೆದ್ದು ಓಡತೊಡಗಿದ್ದರಿಂದ ರಾಜನು ಅಲ್ಲಿಂದ ಪಲಾಯನ ಮಾಡಬೇಕಾಯಿತು. ಸಾತ್ಯಕಿಗೆ ಮಾರ್ಗವು ಮತ್ತೊಮ್ಮೆ ಸುಗಮವಾಯಿತು.* * * * ಕೌರವರು ಹೇಗಾದರೂ ಮಾಡಿ ಸಾತ್ಯಕಿಯನ್ನು ತಡೆಯಲೇ ಬೇಕಾಗಿದ್ದಿತು. ಅವನು ಈಗಾಗಲೇ ಅರ್ಜುನನಿಗಿಂತ ಮಿಗಿಲಾಗಿ ಸೈನ್ಯವನ್ನು ನಾಶಮಾಡಿದ್ದನು. ದುರ್ಯೋಧನ ದುಶ್ಶಾಸನರು ಅವನ ಮೇಲೆ ಕಲ್ಲು ತೂರಲು ನುರಿತವರನ್ನು ಕಳುಹಿಸಿದರು. ಸಾತ್ಯಕಿಯು ಅವರೆಸೆದ ಕಲ್ಲುಗಳಲ್ಲಿ ಒಂದನ್ನೂ ಬಿಡದೆ ಬಾಣಗಳಿಂದ ನಿವಾರಿಸಿ, ಅವರಲ್ಲಿ ಒಬ್ಬನನ್ನೂ ಬಿಡದೆ ಕೊಂದುಹಾಕಿದನು. ಇನ್ನಿತರ ವೀರರು ತಂದಿದ್ದ ಆನೆ ಕುದುರೆಗಳೂ ಬಹುಸಂಖ್ಯೆಯಲ್ಲಿ ಸತ್ತವು. ಆ ಮಹಾಶಬ್ದವನ್ನು ಕೇಳಿದ ದ್ರೋಣನಿಗೆ ಆತಂಕವುಂಟಾಯಿತು. ಅಷ್ಟರಲ್ಲಿ ಅಳಿದುಳಿದ ರಾಜನ ಸೈನ್ಯದೊಂದಿಗೆ ದುಶ್ಶಾಸನನು ತಾನಿದ್ದಲ್ಲಿಗೆ ಬರುತ್ತಿರುವುದು ಅವನಿಗೆ ಕಾಣಿಸಿತು. ಅವನನ್ನು ಕುರಿತು ದ್ರೊಣನು, ``ಇದೇನು ರಾಜಕುಮಾರ, ರಾಜನನ್ನೂ ಜಯದ್ರಥನನ್ನೂ ಬಿಟ್ಟು ಈಗ ಇಲ್ಲಿಗೆ ಬಂದೆ? ನೀನು ದುರ್ಯೋಧನನ ಪ್ರೀತಿಯ ತಮ್ಮ; ಹಸ್ತಿನಪುರದ ಆಸ್ಥಾನದಲ್ಲಿ ವೀರಾವೇಶದ ಮಾತುಗಳನ್ನಾಡುತ್ತಿದ್ದೆ. ಈಗ ಸಾತ್ಯಕಿಯನ್ನೆದುರಿಸಲಾರದೆ ಓಡಿಬಂದಿರುವೆಯಾ? ನಿನ್ನ ಹಾಗೆಯೇ ಒಬ್ಬನಾದ ಅವನನ್ನು ಕೊಲ್ಲಲರದೆ ಹೋದೆಯಾ? ನಿನ್ನ ದುರಹಂಕಾರವೆಲ್ಲಿ ಹೋಯಿತು? ನಾಚಿಕೆಯಾಗುವುದಿಲ್ಲವೆ? ಯಾವಾಗಲೂ ಇನ್ನೊಬ್ಬರು ನಿನಗಾಗಿ ಯುದ್ಧಮಾಡಬೇಕಲ್ಲವೆ? ನೀನೇ ಯುದ್ಧಮಾಡುವುದು ಯಾವಾಗ? ಹೀಗೆ ಓಡಿಬಂದರೆ ಸೈನ್ಯಕ್ಕೆ ನಿನ್ನದು ಕೆಟ್ಟ ಮೇಲ್ಪಂಕ್ತಿಯಾಗದೆ? ಮುಂದೆ ಹೇಗೆ ಭೀಮಾರ್ಜುನರನ್ನು ಎದುರಿಸುತ್ತೀಯೆ? ದುಶ್ಶಾಸನ, ಇದು ದ್ಯೂತವಾಡುವ ಅರಮನೆಯಲ್ಲ, ಪಾಂಡವ ರಾಣಿಯನ್ನು ಎಳೆದುತಂದ ಆಸ್ಥಾನವೂ ಅಲ್ಲ. ನಿನ್ನಣ್ಣನ ಮನಸ್ಸಿನಲ್ಲಿ ಪಾಂಡವದ್ವೇಷವನ್ನು ಬೆಳೆಸಿದವನೇ ನೀನು. ನೀನು ಹೀಗೆ ರಣರಂಗದಿಂದ ಓಡಿಬಂದಿರುವುದೇ ಯುಧಿಷ್ಠಿರನು ಶೀಘ್ರದಲ್ಲಿ ರಾಜನಾಗಲಿರುವನು ಎಂಬುದನ್ನು ತೋರಿಸುತ್ತದೆ. ಬದುಕಬೇಕೆಂಬ ಆಸೆಯಿದ್ದರೆ ಅಣ್ಣನಿದ್ದಲ್ಲಿಗೆ ಹೋಗಿ ಪಾಂಡವರಿಗೆ ರಾಜ್ಯವನ್ನು ಕೊಡುವ ವಿಚಾರ ಮಾತನಾಡು. ಭೀಮನು ನಿನ್ನೆದೆಯ ರಕ್ತವನ್ನು ಬಸಿಯುವುದರೊಳಗೆ ಇದನ್ನು ಮಾಡು. ದುಶ್ಶಾಸನ, ನೀನು ಸಾಯುವುದಂತೂ ಖಂಡಿತ; ವೀರನಾಗಿ ಯುದ್ಧಮಾಡುತ್ತ ಸಾಯಿ. ಲೋಕವು ನಿನ್ನನ್ನು ಹೇಡಿಯೆಂದು ಕರೆಯುವಂತೆ ಮಾಡಿಕೊಳ್ಳಬೇಡ. ಹೋಗು, ಸಾತ್ಯಕಿಯನ್ನೆದುರಿಸು" ಎಂದನು. ದುಶ್ಶಾಸನನು ಒಂದೂ ಮಾತನಾಡದೆ ತಲೆ ತಗ್ಗಿಸಿಕೊಂಡು ವಾಪಸು ಹೊರಟನು. ಪುನಃ ಸಾತ್ಯಕಿಯನ್ನೆದುರಿಸಿದನು. ಆದರೆ ಸಾತ್ಯಕಿಯ ಮುಂದೆ ಅವನ ಆಟ ನಡೆಯಲಿಲ್ಲ. ಭೀಮನ ಪ್ರತಿಜ್ಞೆಯನ್ನು ನೆನಪಿಗೆ ತಂದುಕೊಂಡ ಸಾತ್ಯಕಿಯು, ಅವನ ರಥವನ್ನೂ ನಾಶಮಾಡಿ, ಜೀವಸಹಿತ ಬಿಟ್ಟುಬಿಟ್ಟನು.

ದುಶ್ಶಾಸನನು ಹೊರಟುಹೋದ ಮೇಲೆ ದ್ರೋಣನು ಯುಧಿಷ್ಠಿರನನ್ನು ರಕ್ಷಿಸಿಕೊಂಡಿದ್ದ ವೀರರ ಮೇಲೆ ಮತ್ತೊಮ್ಮೆ ದಾಳಿ ಮಾಡಿದನು. ಇದರಲ್ಲಿ ದ್ರುಪದನ ಕೆಲವು ಮಕ್ಕಳು ಸತ್ತರು. ಕೋಪಗೊಂಡ ಧೃಷ್ಟದ್ಯುಮ್ನನು ಮತ್ತೊಮ್ಮೆ ದ್ರೋಣನ ಮೇಲೆ ಬಿದ್ದನು. ಈ ದ್ವಂದ್ವಯುದ್ಧದಲ್ಲಿ ದ್ರೋಣನು ಮೂರ್ಛಿತನಾದುದನ್ನು ನೋಡಿ, ತನ್ನ ರಥದಿಂದ ಅವನ ರಥಕ್ಕೆ ನೆಗೆದು ಕತ್ತಿಯಿಂದ ಅವನನ್ನು ಕೊಲ್ಲಲುದ್ಯುಕ್ತನಾದನು. ಆದರೆ ಸಮಯಕ್ಕೆ ಸರಿಯಾಗಿ ಮೂರ್ಛೆ ತಿಳಿದೆದ್ದ ದ್ರೋಣನು ಈ ಪ್ರಯತ್ನವನ್ನು ನಿವಾರಿಸಿ, ಮತ್ತೊಮ್ಮೆ ವೀರಾವೇಶದಿಂದ ಕಾದಿ ಧೃಷ್ಟದ್ಯುಮ್ನನನ್ನು ಸೋಲಿಸಿದನು. ಅಷ್ಟರಲ್ಲಿ ತಮ್ಮಂದಿರೊಂದಿಗೆ ದುರ್ಯೋಧನನು ಅಲ್ಲಿಗೆ ಬರಲು, ದ್ರೋಣನು ಪುನಃ ಸೇನಾಪತ್ಯದಲ್ಲಿ ನಿಂತು ಅವನಿಗೆ ನೆರವಾಗುತ್ತ ಪಾಂಡವ ಸೇನೆಯೊಂದಿಗೆ ಯುದ್ಧಮಾಡಿದನು. ಕೇಕಯ ಸೋದರರಲ್ಲಿ ಹಿರಿಯನಾದ ಬೃಹತ್ ಕ್ಷಾತ್ರನನ್ನು ದ್ರೋಣನು ಕೊಂದುಹಾಕಿದನು. ಇದನ್ನು ನೋಡಿ ಶಿಶುಪಾಲನ ಮಗನಾದ ಧೃಷ್ಟಕೇತುವು ದ್ರೋಣನನ್ನೆದುರಿಸಲು, ನಡೆದ ದ್ವಂದ್ವಯುದ್ಧದಲ್ಲಿ ದ್ರೋಣನು ಅವನನ್ನೂ ಕೊಂದುಹಾಕಿದನು. ಹಾಗೆಯೇ ಜರಾಸಂಧನ ಮಗನೂ ದ್ರೋಣನಿಂದ ಹತನಾದನು. ಅನಂತರ ಧೃಷ್ಟದ್ಯುಮ್ನನ ಮಗ ಕ್ಷತ್ರಧರ್ಮನೂ ಸತ್ತನು. ಪಾಂಡವರ ಕಡೆಯ ಎಲ್ಲ ವೀರರೂ ಅಂದು ದ್ರೋಣನಿಗೆ ಬಲಿಯಾಗುವರೋ ಎನ್ನುವಂತಾಯಿತು.ಈ ಮಧ್ಯೆ ಯುಧಿಷ್ಠಿರನಿಗೆ ಅರ್ಜುನನ ಬಗ್ಗೆ ಆತಂಕ ತೀವ್ರವಾಯಿತು. ಎಲ್ಲಿ ನೋಡಿದರೂ ಅರ್ಜುನನ ಧ್ವಜ ಕಾಣಿಸುತ್ತಿಲ್ಲ, ಗಾಂಡೀವಧ್ವನಿ ಕೇಳಿಸುತ್ತಿಲ್ಲ. ಸಾತ್ಯಕಿಯನ್ನು ಕಳಿಸಿದ್ದಾಯಿತು. ಅವನ ಸುದ್ದಿಯೂ ಇಲ್ಲ. ಕೃಷ್ಣಾರ್ಜುನರೂ ಸಾತ್ಯಕಿಯೂ ಹೇಗಿರುವರೋ ಎಂದು ಭಯವಾಗತೊಡಗಿತು. ಯುಧಿಷ್ಠಿರನು ಭೀಮನನ್ನು ಕುರಿತು, ``ಭೀಮ, ಅರ್ಜುನನು ಹೊರಟುಹೋಗಿ ಬಹುಕಾಲವಾಯಿತು. ಅವನ ಕುರುಹೇ ಎಲ್ಲಿಯೂ ಕಂಡುಬರುತ್ತಿಲ್ಲ. ನನಗೆ ತುಂಬ ಚಿಂತೆಯಾಗಿದೆ" ಎಂದನು. ಭೀಮನು, ``ಅಣ್ಣ, ಎಲ್ಲಾ ಬಿಟ್ಟು ಅರ್ಜುನನ ಬಗ್ಗೆ ಆತಂಕ ಪಟ್ಟುಕೊಳ್ಳುತ್ತೀಯಲ್ಲ! ನೀನೇ ಹೀಗೆ ಭಯಪಟ್ಟರೆ ನಾವೇನು ಮಾಡಬೇಕು? ಹೇಳು, ಈಗ ನಾನೇನು ಮಾಡಲಿ?" ಎಂದನು. ಯುಧಿಷ್ಠಿರನು ಕಣ್ಣೀರು ತುಂಬಿ, ``ಇನ್ನೂ ಅರ್ಜುನ ಹಿಂದಕ್ಕೆ ಬರಲಿಲ್ಲ. ನಾನು ಸಾತ್ಯಕಿಯನ್ನೂ ಕಳಿಸಿದೆ. ಅವರೆಲ್ಲರಿಗೂ ಏನಾಯಿತೆಂಬ ಸುದ್ದಿಯೇ ಇಲ್ಲ. ಆ ಕಡೆಯಿಂದ ನಮ್ಮವರ ವಿಜಯ ಘೋಷವೂ ಕೇಳಿಬರುತ್ತಿಲ್ಲ. ಬರೀ ಕೌರವರ ಕೂಗೇ ಕೇಳಿಸುತ್ತಿದೆ. ನೆನ್ನೆ ಅಭಿಮನ್ಯುವನ್ನು ಕೊಂದಂತೆ ವೀರರೆಲ್ಲ ಸೇರಿ ನಮ್ಮ ಅರ್ಜುನನನ್ನೂ ಕೊಂದುಬಿಟ್ಟಿರುವರೋ ಏನೋ! ಅರ್ಜುನನನ್ನು ಕೊಂದಮೇಲೆ ಅವರು ಸಾತ್ಯಕಿಯನ್ನು ಉಳಿಸುತ್ತಾರೆಯೇ? ಭೀಮ, ಹೋಗಿ ಅಲ್ಲೇನು ನಡೆಯುತ್ತಿದೆ ಎಂದು ನೋಡಿಕೊಂಡು ಬಾ! ಅವರು ಬದುಕಿರುವುದು ತಿಳಿದರೆ, ಸಿಂಹನಾದ ಮಾಡು. ನನ್ನ ಮನಸ್ಸಿಗೆ ಶಾಂತಿಯಾಗುತ್ತದೆ. ಓಹೋ, ಇದೇನು ಪಾಂಚಜನ್ಯ ಕೇಳಿಸುತ್ತಿದೆ! ಅದರೆ ಗಾಂಡೀವಧ್ವನಿ ಕೇಳಿಸುತ್ತಿಲ್ಲ. ಅರ್ಜುನ ಸತ್ತಿರುವುದು ಖಂಡಿತ. ಗೆಳೆಯನ ಪ್ರತಿಜ್ಞಾ ಪಾಲನೆಗಾಗಿ ಈಗ ಕೃಷ್ಣನೇ ಯುದ್ಧಮಾಡುತ್ತಿರುವನು. ಇದು ಖಂಡಿತ. ಅಣ್ಣನ ಮೇಲೆ ನಿನಗೆ ಸ್ವಲ್ಪವಾದರೂ ಗೌರವವಿದ್ದರೆ, ಹೋಗಿ ಅವರಿಗೆ ಏನಾಗಿದೆ ಎಂದು ನೋಡಿಕೊಂಡು ಬಾ" ಎಂದನು, ಭೀಮನು ನಕ್ಕು, ``ಅಣ್ಣ, ಕೃಷ್ಣಾರ್ಜುನರು ಯುದ್ದಕ್ಕೆ ನಿಂತಾಗ, ವಿಜಯವೆಂದರೆ ಯಾವಾಗಲೂ ಅವರದೇ. ಸಾತ್ಯಕಿಗೂ ಏನೂ ಆಗಿರುವುದಿಲ್ಲ. ಆದರೆ, ನಿನ್ನ ಮನಸ್ಸಿಗೆ ಸಮಾಧಾನಕ್ಕಾಗಿ ನಿನ್ನ ಆಣತಿಯಂತೆ ಹೋಗಿಬರುತ್ತೇನೆ. ನೀನು ನನ್ನ ಸಿಂಹನಾದ ಕೇಳಿಸುವುದನ್ನೇ ಕಾಯುತ್ತಿರು" ಎಂದನು.* * * * ಭೀಮನು ಧೃಷ್ಟದ್ಯುಮ್ನನನ್ನು ಕಂಡು, ``ನನ್ನಣ್ಣನಿಗೆ ಅರ್ಜುನ ಸಾತ್ಯಕಿಯರ ಬಗ್ಗೆ ತುಂಬ ಯೋಚನೆಯಾಗಿದೆ. ಅವನನ್ನು ಈಗ ಬಿಟ್ಟುಹೋಗುವುದು ವಿವೇಕವಲ್ಲ. ಆದರೆ ಅವನು ನಾನು ಹೋಗಲೇಬೇಕೆನ್ನುತ್ತಿದ್ದಾನೆ. ನಾನು ಜಯದ್ರಥನಿರುವ ಸ್ಧಳದವರೆಗೂ ಹೋಗಿ ನೋಡಿಕೊಂಡು ಬರುತ್ತೇನೆ. ಧೃಷ್ಟದ್ಯುಮ್ನ, ಅಣ್ಣನನ್ನು ಕಾಪಾಡುವ ಸಂಪೂರ್ಣ ಹೊರೆಯನ್ನು ನಿನ್ನ ಮೇಲೇ ಹೊರಿಸುತ್ತಿದ್ದೇನೆ. ನೀನು ಆ ದ್ರೋಣನಿಗೆ ಮಣಿಯುವುದಿಲ್ಲವೇದು ನನ್ನ ನಂಬಿಕೆ" ಎಂದನು. ಧೃಷ್ಟದ್ಯುಮ್ನನು ಭಾವನನ್ನು ಅಪ್ಪಿಕೊಂಡು, ``ಹೆದರಬೇಡ ಭೀಮ. ನನ್ನ ಪ್ರಾಣವನ್ನು ಕೊಟ್ಟಾದರೂ ಯುಧಿಷ್ಠಿರನನ್ನು ರಕ್ಷಿಸುತ್ತೇನೆ. ಅದರೆ ದ್ರೋಣನು ನನ್ನ ಪ್ರಾಣವನ್ನು ತೆಗೆಯಲಾರ; ಏಕೆಂದರೆ ನಾನು ಹುಟ್ಟಿರುವುದೇ ಅವನನ್ನು ಕೊಲ್ಲುವುದಕ್ಕೆ. ನೀನು ಶಾಂತನಾಗಿ ಹೋಗಿ ಬಾ" ಎಂದನು. ಭೀಮನು ಅಣ್ಣನನ್ನು ಬಿಟ್ಟು ಕೌರವಸ್ಯೆನ್ಯದ ಕಡೆಗೆ ಹೊರಟನು. ಅಷ್ಟರಲ್ಲಿ ಪಾಂಚಜನ್ಯದ ಧ್ವನಿ ಇನ್ನೊಮ್ಮೆ ಕೇಳಿಸಿತು. ಆದಷ್ಟೂ ಬೇಗ ಭೀಮನು ಮುನ್ನಡೆಯಲಾರಂಭಿಸಿದನು. ಇದನ್ನು ನೋಡಿ ದ್ರೋಣನು ಪುನಃ ತನ್ನ ಪದ್ಮವ್ಯೂಹದ ದ್ವಾರದಲ್ಲಿ ಹೋಗಿ ನಿಂತುಕೊಂಡನು. ಭೀಮನು ಹೊರಟೊಡನೆ ದುಶ್ಶಾಸನನ ನೇತೃತ್ವದಲ್ಲಿ ಅವನ ತಮ್ಮಂದಿರು ಅಡ್ಡಗಟ್ಟಿದರು. ಅಷ್ಟೊಂದು ಜನ ಧಾರ್ತರಾಷ್ಟ್ರನ್ನು ನೋಡಿ ಭೀಮ ಉನ್ಮತ್ತನಾದ. ಅವರನ್ನು ನೋಡಿ ನಕ್ಕು ಯುದ್ದವಾರಂಭಿಸಿದಾಗ ಕೇಕೆ ಹಾಕಿ ಸಿಂಹನಾದ ಮಾಡಿದ. ದುಶ್ಶಾಸನನೆಸೆದ ಭಲ್ಲೆಯನ್ನು ಅದು ಬರುವುದರೊಳಗೇ ಎರಡು ತುಂಡು ಮಾಡಿ ಎಸೆದ ಭೀಮನು, ಕೌರವರನ್ನು, ಒಬ್ಬೊಬ್ಬರನ್ನಾಗಿ ಕೊಲ್ಲತೊಡಗಿದ. ಏಳು ಮಂದಿಯನ್ನು ಕೊಲ್ಲುವಷ್ಟರಲ್ಲಿ ಉಳಿದವರು ಅವನನ್ನು ಸುತ್ತುಗಟ್ಟಿ ನಿಂತರು. ಭೀಮನಿಗೆ ಖುಷಿಯೋ ಖುಷಿ. ಬೆಳಗಿನಿಂದ ಇದ್ದಲ್ಲಿಯೇ ಇದ್ದು ಅವನಿಗೂ ಬೇಜಾರಾಗಿದ್ದಿತು. ಈಗ ತನ್ನ ಬದ್ಧವೈರಿ ದುರ್ಯೋಧನನ ತಮ್ಮಂದಿರೊಂದಿಗೆ ಸಾಕಾಗುವಷ್ಟೂ ಹೋರಾಟ! ತನ್ನನ್ನು ಕಳುಹಿಸಿದುದಕ್ಕಾಗಿ ಭೀಮನು ಅಣ್ಣನಿಗೆ ಮನಸ್ಸಿನಲ್ಲಿಯೇ ಕೃತಜ್ಞತೆಯನ್ನರ್ಪಿಸಿದ. ಮತ್ತೂ ಮೂರು ಜನ ಕೌರವರನ್ನು ಕೊಂದು. ಒಟ್ಟು ಮೂವತ್ತನಾಲ್ಕು ಆಯಿತು. ಉಳಿದವರು ಅಲ್ಲಿಂದ ಓಡಿಹೋದರು. ಈಗ ಪದ್ಮವ್ಯೂಹವನ್ನು ಪ್ರವೇಶಿಸಬೇಕಾದರೆ ದ್ರೋಣನನ್ನು ಎದುರಿಸಬೇಕು ಅಲ್ಲವೆ ಎಂದುಕೊಂಡ.

ಅರ್ಜುನ ಸಾತ್ಯಕಿಯರಂತೆ ಭೀಮನು ತನಗೆ ಗೌರವಕೊಡುವನೆಂದೆಣೆಸಿದ ದ್ರೋಣನು ``ಭೀಮ, ನೀನು ನನ್ನನ್ನು ಸೋಲಿಸದೆ, ಅಥವಾ ನನ್ನ ಅನುಮತಿಯಿಲ್ಲದೆ ಈ ವ್ಯೂಹವನ್ನು ಪ್ರವೇಶಿಸುವಂತಿಲ್ಲ. ನನಗೆ ಹೆದರಿದ ನಿನ್ನ ತಮ್ಮ ಅರ್ಜುನ ನನ್ನನ್ನು ಗೌರವಿಸಿ ಪ್ರದಕ್ಷಿಣೆ ಮಾಡಿ ಯುದ್ದಮಾಡದೆ ಮುಂದೆ ಹೋಗಿಬಿಟ್ಟ. ನಿನಗೆ ಹೀಗೆ ಮಾಡಲು ನಾನು ಬೆಡುವುದಿಲ್ಲ" ಎಂದನು. ಭೀಮನು ನಕ್ಕು, ``ಆಚಾರ್ಯ, ಕೇಳು. ನನ್ನ ತಮ್ಮನನ್ನು ಸೋಲಿಸುವವನು ಈ ಭೂಮಿಯಲ್ಲಾಗಲಿ ಸ್ವರ್ಗದಲ್ಲಾಗಲಿ ಇಲ್ಲ. ಅರ್ಜುನ ನಿನಗೆ ಹೆದರಿ ಅಪ್ಪಣೆ ಕೇಳಲಿಲ್ಲ. ಗುರುವೆಂಬ ಗೌರವವಿಟ್ಟುಕೊಂಡಿರುವುದರಿಂದ ಕೇಳಿದ. ಆದರೆ ನಾನು ಭೀಮ; ಅರ್ಜುನನಲ್ಲ ಎಂಬುದನ್ನು ನೆನಪಿಡು. ನಿನ್ನ ಮೇಲೆ ನನಗೆ ತುಂಬ ಗೌರವವಿದ್ದ ಒಂದು ಕಾಲವಿತ್ತು. ನೀನು ಒಂದು ಕಾಲದಲ್ಲಿ ನಮಗೆಲ್ಲ ತಂದೆಯಂತಿದ್ದೆ. ನಮ್ಮ ಗುರುಗಳು, ನಮ್ಮ ಹಿತಚಿಂತಕರು ಎಂಬ ಭಾವನೆ ನಮಗಿದ್ದಿತು. ನಾವೆಲ್ಲ ನಿನ್ನ ಮೇಲೆ ಪ್ರೀತಿಗೌರವಗಳನ್ನಿಟ್ಟುಕೊಂಡಿದ್ದೆವು. ಈಗ ಆ ಭಾವನೆ ಇಲ್ಲ; ನೀನು ದುರ್ಯೋಧನನ ಹಿತಚಿಂತಕ, ನಮಗೆಲ್ಲ ಶತ್ರು. ಇನ್ನೊದು ದ್ಯೂತವನ್ನಾಡಲು ಅನುಕೂಲವಾಗುವಂತೆ ನನ್ನಣ್ಣನನ್ನು ಸೆರೆಹಿಡಿದು ತಂದೊಪ್ಪಿಸುವೆನೆಂದು ನೀನು ದುರ್ಯೋಧನನಿಗೆ ಮಾತು ಕೊಟ್ಟ ಕ್ಷಣದಿಂದಲೇ ನನಗೆ ನಿನ್ನ ಮೇಲಿದ್ದ ಗುರುವೆಂಬ ಗೌರವ ಹೊರಟುಹೋಯಿತು. ಆಟದ ಪರಿಣಾಮಗಳನ್ನು ನೋಡಿಯೂ ನೀನು ಇನ್ನೊಮ್ಮೆ ದ್ಯೂತವಾಡಿಸಲು ಮನಸ್ಸು ಮಾಡಿದೆ ಎಂದಮೇಲೆ ನೀನು ಗುರುವೂ ಅಲ್ಲ, ನಾನು ಶಿಷ್ಯನೂ ಅಲ್ಲ. ನೀನೇ ನಮ್ಮ ವೈರಿಯೆಂದು ಘೋಷಿಸಿಕೊಂಡಿದ್ದೀಯೆ. ಎಂದಮೇಲೆ ನಿನ್ನನ್ನು ನಾವು ಶತ್ರುವಿನಂತೆಯೇ ನೋಡಬೇಕಲ್ಲವೆ? ನಾನೇನು ಅರ್ಜುನನಂತೆ ಕಳೆದುಹೋದ ಸಂಗತಿಗಳನ್ನು ನೆನಪಿಡುವಂಥವನಲ್ಲ. ನಾನು ಭೀಮ; ಧಾರ್ತರಾಷ್ಟ್ರರ ಮತ್ತು ಅವರೊಡನೆ ಸೇರಿಕೊಂಡಿರುವವರ ಶತ್ರು" ಎಂದನು. ಭೀಮನ ಕಣ್ಣುಗಳು ಕೋಪದಿಂದ ಕೇಪಾಗಿದ್ದವು. ಅವನು ರಥದಿಂದಿಳಿದು ಗದಾಪಾಣಿಯಾಗಿ ದ್ರೋಣನ ಮೇಲೆ ಏರಿಹೋದನು. ದ್ರೋಣನು ಕೊನೆಯ ಕ್ಷಣದಲ್ಲಿ ರಥದಿಂದ ಹಾರಿ ಜೀವ ಉಳಿಸಿಕೊಂಡನು. ಅವನನ್ನು ಅಲ್ಲೇ ಬಿಟ್ಟು ಭೀಮನು ಅರ್ಜುನನಿದ್ದ ಸ್ಥಳದ ಕಡೆಗೆ ಹೊರಟುಹೋದನು. ಸಾತ್ಯಕಿಯು ನುಗ್ಗಿದ್ದ ಹಾದಿಯಲ್ಲೇ ನುಗ್ಗುತ್ತ, ದಾರಿಯಲ್ಲಿ ಸಿಕ್ಕ ಗಜಸ್ಯೆನ್ಯ ಇತ್ಯಾದಿಗಳನ್ನು ನಾಶಮಾಡುತ್ತ ಮುಂದುವರೆದನು. ದ್ರೋಣನು ಇನ್ನೊಂದು ರಥದಲ್ಲಿ ಬಂದು ಭೀಮನಿಗೆ ಅಡ್ಡವಾದನು. ಭೀಮನಿಗೆ ತಾಳ್ಮೆ ಉಳಿದಿರಲಿಲ್ಲ. ರಥದಿಂದ ಕೆಳಕ್ಕೆ ಹಾರಿ, ದ್ರೋಣನ ರಥವನ್ನು ಸಿಕ್ಕ ಹಾಗೆ ಎಳೆದಾಡಿ ದ್ರೋಣನನ್ನು ಕೆಳಕ್ಕೆ ಬೀಳಿಸಿದನು. ಅವನು ಇನ್ನೊಂದು ರಥವನ್ನು ಹತ್ತಿಕೊಂಡು ವ್ಯೂಹದಿಂದ ಹೊರಕ್ಕೆ ಹೊರಟು ಹೋದನು. ಭೀಮನು ನಗುತ್ತ, ಕೈಯೊರೆಸಿಕೊಂಡು ಪುನಃ ರಥವನ್ನು ಹತ್ತಿ ವಾಯುವೇಗದಿಂದ ವ್ಯೂಹದ ತುದಿಗೆ ಬಂದುಬಿಟ್ಟನು. ಅವನನ್ನು ನೋಡಿದವರೆಲ್ಲ ಭಯದಿಂದ ದಿಕ್ಕಾಪಾಲಾಗಿ ಓಡಿ ಹೋದರು.ಸಾತ್ಯಕಿ ಮಾಡಿದ್ದ ಜಾಗದಲ್ಲಿಯೇ ಮುನ್ನಡೆಯುತ್ತ ಅವನು ಯುದ್ಧಮಾಡುತ್ತಿದ್ದಲ್ಲಿಗೆ ಬಂದ ಭೀಮನು ಅವನಿಗಿಂತಲೂ ಮುಂದೆ ಹೋಗಿ ಅಲ್ಲಿ ಅರ್ಜುನನನ್ನು ಕಂಡನು. ಅವನೇ ಅರ್ಜುನ! ಆಗ ಭೀಮನ ಗಂಟಲಿನಿಂದ ಹೊರಟ ನಾದವು ಕಾಳಮೇಘದ ಗುಡುಗಿನಂತಿದ್ದಿತು. ನಾಲ್ಕು ದಿಕ್ಕುಗಳಲ್ಲಿಯೂ ಅನುರಣಿತವಾದ ಅದು ಯುಧಿಷ್ಠಿರನಿಗೂ ಕೇಳಿಸಿತು. ಭೀಮನ ಮನಸ್ಸಿನಲ್ಲಿದ್ದ ಆತಂಕವು ದೂರವಾಯಿತು. ಅವನ ಗರ್ಜನೆಯನ್ನು ಕೇಳೆದ ಕೃಷ್ಣಾರ್ಜುನರಿಗೆ ಸಂತೋಷವಾಗಿ ಅವರೂ ಸಿಂಹನಾದ ಮಾಡಿದರು. ಇಷ್ಟು ಕಷ್ಟಪಟ್ಟು ಇಲ್ಲಿಯವರೆಗೆ ಬಂದ ಭೀಮನನ್ನು ನೋಡ ಬೇಕೆಂದು ಅವರು ತವಕಪಟ್ಟರು. ಮೂರು ಗರ್ಜನೆಗಳನ್ನೂ ಕೇಳಿದ ಯುಧಿಷ್ಠಿರನು ಕಂಬನಿದುಂಬಿ, ``ಆಹಾ ಅದೃಷ್ಟವೆ! ಅರ್ಜುನ ಸಾತ್ಯಕಿ ಕೃಷ್ಣ ಎಲ್ಲರೂ ಬದುಕಿದ್ದಾರೆ! ಭೀಮನು ಇಂದು ನನ್ನನ್ನು ಹಿಂದೆಂದಿಗಿಂತಲೂ ಹೆಚ್ಚು ಸಂತೋಷಪಡಿಸಿದ್ದಾನೆ! ನನ್ನಂತಹ ಅದೃಷ್ಟವಂತರು ಇನ್ನಾರಿರುವರು!" ಎಂದು ಭೀಮನನ್ನು ಕೊಂಡಾಡಿದನು.ಭೀಮನ ಗರ್ಜನೆಯಿಂದ ಅರ್ಜುನನ ಸಹಾಯಕ್ಕೆ ಪಾಂಡವರು ಧಾವಿಸುತ್ತಿರುವುದು ಕೌರವರಿಗೆ ತಿಳಿದುಹೋಯಿತು. ಕೃಷ್ಣನ ಮಾರ್ಗದರ್ಶನದಲ್ಲಿ ಭೀಮ, ಅರ್ಜುನ, ಸಾತ್ಯಕಿ! ಒಮ್ಮೆಲೇ ರಾಧೇಯನು ಭೀಮನನ್ನು ಎದುರಿಸುವುದಕ್ಕೆ ಬಂದನು. ರಾಧೇಯನ ಬಾಣಗಳೆಲ್ಲವನ್ನೂ ಭೀಮನು ಲೀಲಾಜಾಲವಾಗಿ ನಿವಾರಿಸಲು, ಈವರೆಗೆ ಅವನ ಧನುರ್ವಿದ್ಯಾಕೌಶಲವನ್ನು ಕಾಣದೆ, ಅವನನ್ನು ಕೇವಲ ಕುಸ್ತಿಪಟು, ಗದಾಯುದ್ಧನಿಪುಣ ಎಂದು ಮಾತ್ರ ತಿಳಿದಿದ್ದ ಎಲ್ಲರೂ ಆಶ್ಚರ್ಯಪಟ್ಟರು. ಭೀಮನು ಕೋಪಗೊಂಡರೂ ರಾಧೇಯನು ಶಾಂತನಾಗಿಯೇ ಇದ್ದನು. ಅವನು ಅರ್ಜುನನಂತೆಯೇ ಸ್ಥಿರವಾಗಿ ನಿಂತು, ತುಟಿಯಂಚಿನಲ್ಲಿ ನಗೆಯನ್ನು ತುಳುಕಿಸುತ್ತಿದ್ದನು. ಇದನ್ನು ನೋಡಿ ಭೀಮನ ಕೋಪವು ಇನ್ನೂ ಹೆಚ್ಚಾಯಿತು. ಅವನು ರಾಧೇಯನ ಬಿಲ್ಲನ್ನು ಮುರಿದು, ಅವನ ಸಾರಥಿಯನ್ನೂ ಕುದುರೆಗಳನ್ನೂ ಕೊಲ್ಲಲು, ರಾಧೇಯನು ತನ್ನ ಮಗ ವೃಷಸೇನನ ರಥಕ್ಕೆ ಹಾರಿದನು. ರಾಧೇಯನು ಸೋತದ್ದರಿಂದ ಭೀಮನಿಗೆ ಮಹದಾನಂದವಾಯಿತು. ಮುಂದೆ ಹೋಗಲು ಸ್ವತಂತ್ರನಾದೊಡನೆ ಅವನು ಮತ್ತೊಮ್ಮೆ ಸಿಂಹನಾದ ಮಾಡಿದನು. ಅಷ್ಟರಲ್ಲಿ ತಿರುಗಿ ಬಂದ ರಾಧೇಯನು ಮೃದುವಾಗಿ ಯುದ್ಧಮಾಡತೊಡಗಿದ್ದನ್ನು ನೋಡಿ ಭೀಮನು ಇವನು ಪ್ರಸಿದ್ಧಿ ಪಡೆದಿರುವಷ್ಟು ನುರಿತ ಬಿಲ್ಲಗಾರನೇನಲ್ಲ ಎಂದುಕೊಂಡನು. ರಾಧೇಯನ ಮನಸ್ಸು ಯುದ್ಧಮಾಡುವುದರಲ್ಲಿ ಇರಲಿಲ್ಲವಾದ್ದರಿಂದ ಅವನು ಮೃದುವಾಗಿದ್ದನು. ಸೋದರ ಭೀಮನೊಂದಿಗೆ ಇದು ಅವನ ಮೊದಲ ದ್ವಂದ್ವಯುದ್ಧ. ಅವನು ಅರ್ಜುನನೊಂದಿಗೆ ಯುದ್ಧ ಮಾಡಿದ್ದರೂ, ಅದು ಬೇರೆಯೇ ಆಗಿದ್ದಿತು. ಒರಟನಾದರೂ ಹೃದಯವಂತನಾದ ಭೀಮನ ಮೇಲೆ ಅವನಿಗೆ ಸೋದರವಾತ್ಸಲ್ಯವು ಉಕ್ಕಿಬಂದಿತು. ರಥದಿಂದ ಕೆಳಗೆ ಹಾರಿ ಭೀಮನನ್ನು ಆಲಿಂಗಿಸಿಕೊಂಡು ನಾವು ಸೋದರರು ಹೋರುವುದು ಬೇಡ; ಬಾ ಯುಧಿಷ್ಠಿರನ ಬಳಿಗೆ ಹೋಗೋಣ ಎನ್ನುವಂತಿದ್ದಿದ್ದರೆ! ಪಾಪ, ರಾಧೇಯನಿಗೆ ತನ್ನ ಕಲ್ಪನೆ ಕಲ್ಪನೆಯಾಗಿಯೇ ಉಳಿಯುವುದೇದು ಗೊತ್ತು. ಉಕ್ಕಿಬಂದ ಒಲವು ಅವನನ್ನು ಭೀಮನೊಡನೆ ಮೃದುವಾಗುವಂತೆ ಮಾಡಿತು. ಹೋರಾಟ ಮುಂದುವರೆದಂತೆ ರಾಧೇಯನ ಹಗಲುಗನಸು ಹಾರಿಹೋಯಿತು. ಭೀಮನಿಂದ ರಕ್ಷಿಸಿಕೊಳ್ಳಬೇಕಾದ ಪರಿಸ್ಥಿತಿ ತಲೆದೋರಿತು. ಪುನಃ ರಾಧೇಯನು ರಥವನ್ನು ಕಳೆದುಕೊಳ್ಳಲು, ದುರ್ಯೋಧನನು ದುಶ್ಶಲನೊಂದಿಗೆ ಇನ್ನೊಂದು ರಥವನ್ನು ಕೊಟ್ಟು ಕಳಿಸಿದನು. ರಾಧೇಯನು ಆ ರಥವನ್ನೇರುತ್ತಿದ್ದಂತೆಯೇ ಭೀಮನು ದುಶ್ಶಲನ ತಲೆಯನ್ನು ಕತ್ತರಿಸಿ ಹಾಕಿದನು. ಈಗ ರಾಧೆಯನು ಭೀಮನ ಬಗ್ಗೆ ತಲೆ ಕೆಡಿಸಿಕೊಳ್ಳಬೇಕಾಗಿ ಬಂದಿತು.ತನ್ನ ಸ್ಯೆನ್ಯದಲ್ಲಾಗುತ್ತಿದ್ದ ಧ್ವಂಸಕಾರ್ಯವನ್ನು ನೋಡುತ್ತಿದ್ದ ದುರ್ಯೋಧನನು ವ್ಯೂಹದ್ವಾರದಲ್ಲಿದ್ದ ದ್ರೋಣನ ಬಳಿಗೆ ಓಡಿಬಂದನು. ನಿರಾಶೆ, ಭಯ, ಕ್ರೋಧಗಳಿಂದ ಉನ್ಮತ್ತನಾಗಿ, ``ಆಚಾರ್ಯ, ಯಾರೂ ನನ್ನನ್ನು ದಾಟಿಹೋಗಲು ಬಿಡೆನೆಂದು ನೀನು ಪ್ರತಿಜ್ಞೆ ಮಾಡಿದ್ದೆ. ಈಗ ನಿನ್ನ ವ್ಯೂಹದ ಅಂಚಿಗೇ ಬಂದುಬಿಟ್ಟಿರುವ ಭೀಮಾರ್ಜುನ ಸಾತ್ಯಕಿಯರು ನಮ್ಮ ಸ್ಯೆನ್ಯದ ಬಹು ದೊಡ್ಡ ಭಾಗವನ್ನು ನಾಶಮಾಡಿದ್ದಾರೆ, ಜಯದ್ರಥನನ್ನು ಮುತ್ತುವ ಹವಣಿಕೆಯಲ್ಲಿದ್ದಾರೆ. ಅವನ ರಕ್ಷಣೆಗಾಗಿ ಇರುವ ಎಲ್ಲ ವೀರರನ್ನೂ ಹೆದರಿಸುತ್ತಿದ್ದಾರೆ. ಅವರು ನಿನ್ನನ್ನು ಹೇಗೆ ದಾಟಿ ಹೋದರು? ಇದು ಹೇಗೆ ಸಾಧ್ಯವಾಯಿತು?" ಎಂದನು. ದ್ರೋಣನಿಗೆ ಇವನ ಚುಚ್ಚು ಮಾತುಗಳನ್ನು ಕೇಳಿ ಸಾಕಾಗಿಹೋಗಿತ್ತು. ತನ್ನ ಕೈಲಾದುದನ್ನು ನಿರ್ವಂಚನೆಯಿಂದ ಮಾಡಿದರೂ ರಾಜನಿಗೆ ತೃಪ್ತಿಯಿಲ್ಲ. ಯಾವಾಗಲೂ ತಪ್ಪು ಹುಡುಕುವುದೇ ಆಗಿಹೋಯಿತು. ದ್ರೋಣನು, ``ಏನು ಆಯಿತೋ ಅದು ಆಗಿಹೋಯಿತು. ಮುಂದೇನು ಮಾಡಬೇಕು ಯೋಚಿಸು" ಎನ್ನಲು ದುರ್ಯೋಧನನು, ``ಜಯದ್ರಥನನ್ನು ಕಾಪಾಡಿಕೊಳ್ಳಲು ಬೇಕಾದ ಏರ್ಪಾಟನ್ನು ಗಮನಿಸಿಕೊಳ್ಳಿ. ನನಗೆ ಭರವಸೆಯೇ ಹೊರಟು ಹೋಗುತ್ತಿದೆ" ಎಂದನು. ದ್ರೋಣನಿಗೆ ಜುಗುಪ್ಸೆಯಾಯಿತು. ತಾನು ಎಷ್ಟೆಲ್ಲ ಮಾಡಿದೆ ರಾಜನಿಗೆ; ಅದರೂ ಈ ಮೂರು ಜನರು ತಪ್ಪಿಸಿಕೊಂಡು ಹೋದುದನ್ನೇ ದೊಡ್ಡದು ಮಾಡುತ್ತಾನೆ. ಇವನ ದುರಹಂಕಾರ ಮಿತಿ ಮೀರಿಹೋಯಿತು. ಕೃತಜ್ಞತೆ ಎಂಬುದು ದುರ್ಯೋಧನನ ಹೃದಯಕ್ಕೆ ಅಪರಿಚಿತವಾದ ಗುಣ. ಬೆಳಗಿನಿಂದಲೂ ಬಿಡುವಿಲ್ಲದೆ ವ್ಯೂಹದ ದ್ವಾರವನ್ನು ಕಾಯ್ದುಕೊಂಡಿದ್ದೇನೆ. ಆ ಮೂವರು ತಪ್ಪಿಸಿಕೊಂಡು ಹೋದರು ನಿಜ; ಆದರೆ ಪಾಂಡವ ಸ್ಯೆನ್ಯವನ್ನು ಮುನ್ನುಗ್ಗದಂತೆ ತಡೆದಿಟ್ಟಿದ್ದೇನೆ. ಮಾನವಯತ್ನವನ್ನು ಮೀರಿ ಏನನ್ನಾದರೂ ಮಾಡಿದರೂ ಸಹ ಈ ದುರ್ಯೋಧನನಿಗೆ ತೃಪ್ತಿಯಿಲ್ಲ. ದ್ರೋಣನು ಕೋಪವನ್ನು ತಡೆಯಲಾರದೆ, ``ಹೌದು, ಈ ಮೂವರು ನನ್ನನ್ನು ದಾಟಿ ಹೋಗಿರುವರು. ನೀನು ನಿನ್ನ ಭಾವನ ಕೂದಲು ಕೊಂಕಲೂ ಬಿಡುವುದಿಲ್ಲವೆಂಬ ಪ್ರತಿಜ್ಞೆಯ ಜವಾಬ್ದಾರಿಯನ್ನು ಮರೆಯದೆ ಅವನನ್ನು ರಕ್ಷಿಸಿಕೋ. ನಾನು ಇಡೀ ಪಾಂಡವ ಸ್ಯೆನ್ಯವನ್ನು ಬೆಳಗಿನಿಂದ ತಡೆದು ನಿಲ್ಲಿಸಿದ್ದೇನೆ. ಅದನ್ನು ನೀನು ಗಮನಿಸುವುದಿಲ್ಲ. ಈಗ ನೀನೇ ನಿನ್ನ ಹೆಂಬೇಡಿ ಜಯದ್ರಥನನ್ನು ಕಾಯ್ದುಕೊಳ್ಳಬೇಕು. ಶಂಕರನ ವರದಿಂದಾಗಿ ಒಂದು ದಿನ ಅವನು ಪಾಂಡವರನ್ನು ತಡೆಯಲು ಸಾಧ್ಯವಾಯಿತು. ಆದರೆ ಈಗ ನಡುನೀರಿನಲ್ಲಿ ಕಳೆದುಹೋದ ದೋಣಿಯಂತಾಗಿದ್ದಾನೆ. ಶಕುನಿಯ ಸಹಾಯದಿಂದ ದ್ಯೂತದಲ್ಲಿ ಗೆದ್ದಂತಲ್ಲ ಯುದ್ಧದಲ್ಲಿ ಗೆಲ್ಲುವುದು. ಜಯದ್ರಥನನ್ನು ಕಾಯ್ದುಕೊಳ್ಳುತ್ತೇನೆಂದು ಪ್ರತಿಜ್ಞೆ ಮಾಡಿರುವ ದುರ್ಯೋಧನ ಮಹಾರಾಜನಿಗೂ ಸೋಲುವ ಸಂಭಾವ್ಯತೆ ಇರುತ್ತದೆ. ಪಾಂಡವರ ವಿರುದ್ಧವಾಗಿ ನೀನೆಸೆದ ದ್ಯೂತದ ದಾಳಗಳೇ ಈಗ ಕ್ರೂರವಾದ ಬಾಣಗಳಾಗಿ ಬಂದು ನಿನ್ನನ್ನು ಕಾಡುತ್ತಿವೆ. ಯುಧಿಷ್ಠಿರನಿಗೆ ಮಾಡಿದ ಮೋಸದ ಪಲವನ್ನು ನಿನಗೇ ತಂದು ಉಣ್ಣಿಸುತ್ತಿವೆ. ಇಂದಿನ ಪಣ ಜಯದ್ರಥನ ಪ್ರಾಣ; ರಣರಂಗವೆಂಬ ಭಗವಂತನ ಈ ಆಸ್ಥಾನದಲ್ಲಿ ದಾಳವೆಸೆಯಲು ಶಕುನಿಯನ್ನು ಎಲ್ಲಿಂದ ತರುತ್ತಿ? ನೀನೇ ದಾಳವೆಸೆಯಬೇಕು; ಫಲ ಏನಾಗುತ್ತದೆಯೋ ಗೊತ್ತಿಲ್ಲ. ನನ್ನಿಂದ ಆದಷ್ಟು ಮಾಡಿರುವೆ; ಇನ್ನು ನನ್ನಿಂದ ಸಾಧ್ಯವಿಲ್ಲ. ನೀನೇ ಅಲ್ಲಿಗೆ ಹೋಗಿ ಸಾಧ್ಯವಿರುವುದನ್ನು ಮಾಡು. ನೀನು, ದುಶ್ಶಾಸನ, ರಾಧೇಯ, ಎಲ್ಲ ಮಹಾಯೋಧರು. ಇನ್ನೂ ಅನೇಕರಿರುವರು. ಅವರೆಲ್ಲರೂ ನಿನಗಾಗಿ ಸಾಯಲು ಸಿದ್ಧರಾಗಿರುವರು. ಇನ್ನೇನು ಬೇಕು? ಪಾಂಡವಸೇನೆ ಒಮ್ಮೆಲೇ ನಿಮ್ಮ ಮೇಲೆ ನುಗ್ಗದಂತೆ ಕಾಯಲು ನಾನು ಇಲ್ಲಿರಬೇಕು. ಈಗ ನಿಮ್ಮೆಲ್ಲರ ವಿರುದ್ಧ ಅವರಿರುವುದು ಮೂರೇ ಜನ. ಹೋಗು, ಜಯದ್ರಥನನ್ನು ಅರ್ಜುನನ ಕೋಪಾಗ್ನಿಯಿಂದ ರಕ್ಷಿಸಲು ನಿನ್ನಿಂದಾಗುವುದನ್ನು ಮಾಡು" ಎಂದನು.* * * * ದುರ್ಯೋಧನನು ಹಿಂದಿರುಗಿ ಹೋಗುತ್ತ ದಾರಿಯಲ್ಲಿ ಕಂಡ ಯುಧಾಮನ್ಯು ಮತ್ತು ಉತ್ತಮೌಜಸ್ ಇಬ್ಬರನ್ನೂ ಎದುರಿಸಲು ನಿರ್ಧರಿಸಿದನು. ಚೆನ್ನಾಗಿ ಯುದ್ಧಮಾಡಿದರೂ, ಇಬ್ಬರ ಎದುರು ಅವನ ಕೈ ಸಾಗಲಿಲ್ಲ. ಶಲ್ಯನ ರಥ ಹತ್ತಿಕೊಂಡು ಅಲ್ಲಿಂದ ಪಲಾಯನ ಮಾಡಬೇಕಾಯಿತು. ರಾಧೇಯನಿಗೂ ಭೀಮನಿಗೂ ದ್ವಂದ್ವಯುದ್ಧವು ನಡೆಯುತ್ತಿತ್ತು. ಭೀಮನು ರಾಧೇಯನನ್ನು ನಿವಾರಿಸಿಕೊಂಡು ಅರ್ಜುನನಿದ್ದೆಡೆಗೆ ಹೋಗಲು ತವಕಿಸುತ್ತಿದ್ದನು; ಆದರೆ ರಾಧೇಯನು ಬಿಡುತ್ತಿರಲಿಲ್ಲ. ಅವನ ಮುಖದಲ್ಲಿನ ಸುಂದರ ನಗೆ ಭೀಮನಿಗೆ ಇರಿಸುಮುರಿಸು ಉಂಟುಮಾಡುತ್ತಿದ್ದಿತು. ಸಾಧ್ಯವಾದಷ್ಟೂ ಭಯಂಕರವಾಗಿ ಹೋರಾಡಿದರೂ, ಭೀಮನ ಕವಚವನ್ನು ರಾಧೇಯನು ಭೇದಿಸಿ ಬಿಟ್ಟಿದ್ದನು. ಅವನ ಹೋರಾಟವು ಕುಂಠಿತವಾಗುತ್ತ ಬಂದಿತು. ಭೀಮನಿಗೆ ಹುಚ್ಚುಹಿಡಿದಂತಾಗಿ ರಾಧೇಯನ ರಥವನ್ನೊಡೆದು, ಬಿಲ್ಲನ್ನು ಕತ್ತರಿಸಿ, ಅವನೆದೆಗೆ ಚೂಪಾದ ಬಾಣವೊಂದರಿಂದ ಗಾಯಮಾಡಿದನು. ರಾಧೇಯನು ಬೇರೊಂದು ರಥವನ್ನು ಹತ್ತಿಕೊಂಡು ಅಲ್ಲಿಂದ ಹೊರಟುಹೋಗಬೇಕಾಯಿತು. ಕೆಲವೇ ಕ್ಷಣಗಳಲ್ಲಿ ಹಿಂದಿರುಗಿದ ಅವನ ಸುಂದರ ನಗೆಯು ಮಾಯವಾಗಿತ್ತು; ಬದಲಿಗೆ ಸಿಟ್ಟು ಬಂದಿತ್ತು. ಈ ಸಲ ಅವನು ಭೀಮನನ್ನು ಮುಗಿಸಿಬಿಡುವನೆಂದು ಧಾರ್ತರಾಷ್ಟ್ರರು ಎಣಿಸಿದರು. ಇಬ್ಬರೂ ಹಿಂದೆಂದೂ ಇಲ್ಲದಂತೆ ಹೋರಾಡಿದರು. ತಾವು ಪಾಂಡವರು ಅನುಭವಿಸಿದ ಕಷ್ಟಗಳನ್ನೆಲ್ಲ ನೆನಪಿಸಿಕೊಂಡ ಭೀಮನು ಈ ತನ್ನ ದಾಯಾದಿಯ ಸ್ನೇಹಿತನನ್ನು ಮುಗಿಸಿಬಿಡಬೇಕೆಂದುಕೊಂಡನು. ಅದೊಂದು ಭೀಕರವಾದ ದ್ವಂದ್ವಯುದ್ಧವಾಗಿದ್ದಿತು. ನೋಡುತ್ತಿದ್ದ ದುರ್ಯೋಧನನು ಪಕ್ಕದಲ್ಲಿದ್ದ ತನ್ನ ತಮ್ಮ ದುರ್ಜಯನಿಗೆ``ದುರ್ಜಯ, ಹೋಗು ರಾಧೇಯನಿಗೆ ಸಹಾಯ ಮಾಡು. ಆ ಕಾಡುಪ್ರಾಣಿ ಅವನಿಗೆ ತುಂಬ ತೊಂದರೆ ಕೊಡುತ್ತಿದೆ" ಎನ್ನಲು ದುರ್ಜಯನು ಭೀಮನ ಮೇಲೆ ಬಿದ್ದನು. ಧಾರ್ತರಾಷ್ಟ್ರರು ಯಾರೇ ಎದುರಿಸಲಿ ಅದು ಭೀಮನಿಗೆ ಉತ್ಸಾಹತುಂಬುತ್ತಿದ್ದಿತು. ಇದನ್ನು ಅರಿಯದೆ ಹೋದ ದುರ್ಜಯನು ಕ್ಷಣಮಾತ್ರದಲ್ಲಿ ಸತ್ತುಬಿದ್ದನು. ರಾಜನ ತಮ್ಮನು ಹತನಾದುದರಿಂದ ರಾಧೇಯನಿಗೆ ಕಣ್ಣೀರು ಬಂತು. ಮತ್ತೆ ರಾಧೇಯನ ರಥವು ಮುರಿಯಲು, ಅವನು ನೆಲದ ಮೇಲೆ ನಿಂತೇ ಹೋರಾಡತೊಡಗಿದನು. ದುರ್ಯೋಧನನು ಇನ್ನೊಬ್ಬ ಸೋದರ ದುರ್ಮುಖನನ್ನು ಅವನ ಸಹಾಯಕ್ಕೆ ಕಳುಹಿಸಿದನು. ರಾಧೇಯ ಪುನಃ ರಥಾರೂಢನಾಗಿ ಬಂದರೂ, ಭೀಮನು ಅವನನ್ನು ನಿರ್ಲಕ್ಷಿಸಿ ದುರ್ಮುಖನ ಜೊತೆಗೆ ಯುದ್ಧವಾರಂಭಿಸಿದನು. ಕೇವಲ ಒಂಭತ್ತು ಬಾಣಗಳಿಂದ ಅವನನ್ನು ಕೊಂದನು. ರಾಧೇಯನಿಗೆ ತನಗೆ ಸಹಾಯ ಮಾಡಲು ಬಂದ ದುರ್ಯೋಧನನ ತಮ್ಮಂದಿರು ಹೀಗೆ ಸಾಯುತ್ತಿರುವುದನ್ನು ಕಂಡು ದುಃಖದಿಂದ ಮೂರ್ಛೆ ಹೋಗುವಂತಾಯಿತು. ಭೀಮನ ಬಾಣಗಳೂ ಅವನನ್ನು ಬಹುವಾಗಿ ನೋಯಿಸ ತೊಡಗಿದವು. ಹೀಗಾಗಿ ತುಂಬ ವ್ಯಗ್ರನಾಗಿದ್ದ ರಾಧೇಯನು ಅಲ್ಲಿಂದ ಹೊರಟು ಹೋದನು.ರಾಧೇಯನು ಹೊರಟುಹೋಗಿದ್ದನ್ನು ನೋಡಿದ ದುರ್ಯೋಧನನ ಐವರು ಸೋದರರು ಭೀಮನ ಮೇಲೆ ಒಟ್ಟಿಗೇ ಏರಿ ಬಂದರು. ಅವರಲ್ಲೊಬ್ಬ ದುರ್ಮರ್ಷಣ; ಅವರನ್ನು ನೋಡಿ ಭೀಮನಿಗೆ ನಗೆ ಬಂದಿತು. ಅವರೆಲ್ಲರನ್ನೂ ಕೊಂದುಹಾಕಿದನು. ಇಷ್ಟೊಂದು ಹತ್ಯೆಗಳನ್ನು ನೋಡಿದ ರಾಧೇಯನು ಹಿಂದಿರುಗಿ ಬಂದು ಘೋರವಾಗಿ ಯುದ್ಧಮಾಡತೊಡಗಿದನು. ಪುನಃ ರಥ ಮುರಿಯಿತು; ಪುನಃ ದುರ್ಯೋಧನನ ತಮ್ಮಂದಿರು ರಾಧೇಯನ ಸಹಾಯಕ್ಕಾಗಿ ಬಂದರು; ಪುನಃ ಭೀಮನು ಅವರನ್ನೆಲ್ಲ ಕೊಂದುಹಾಕಿದನು. ಈಗ ಭೀಮನಿಂದ ಸತ್ತ ಧಾರ್ತರಾಷ್ಟ್ರರ ಸಂಖ್ಯೆ ನಲವತ್ತೊಂಭತ್ತಾಯಿತು. ಕವಚ ಹರಿದು, ಬಲಗೈಗೆ ಪೆಟ್ಟುಮಾಡಿಕೊಂಡ ರಾಧೇಯ ಮೂರ್ಛೆ ಹೋದನು. ಸ್ವಲ್ಪಹೊತ್ತಾದ ಮೇಲೆ ಚೇತರಿಸಿಕೊಂಡು ಯುದ್ಧವನ್ನು ಮುಂದುವರೆಸಿದನು. ಇಬ್ಬರೂ ಸಾಕ್ಷಾತ್ ಅರ್ಜುನನಂತೆಯೇ ಹೋರಾಡುತ್ತಿರುವರೆಂದು ನೋಡಿದವರೆಲ್ಲ ಮಾತನಾಡಿಕೊಳ್ಳುತ್ತಿದ್ದರು. ಭೀಮನ ಬಿಲ್ಲುಗಾರಿಕೆಯನ್ನು ಕಂಡ ಕೃಷ್ಣಾರ್ಜುನರ ಹಾಗೂ ಸಾತ್ಯಕಿಯ ಹೃದಯಗಳು ಹೆಮ್ಮೆಯಿಂದ ತುಂಬಿಹೋದವು. ರಾಧೇಯ ಪುನಃ ಸೋಲಲು, ದುರ್ಯೋಧನನು ಪುನಃ ತನ್ನ ಸೋದರರನ್ನು ಕಳುಹಿಸಿದನು. ಭೀಮನು ವಿಕರ್ಣನೂ ಸೇರಿದಂತೆ ಹಾಗೆ ಬಂದ ಏಳು ಜನರನ್ನೂ ಕೊಂದುಹಾಕಿದನು. ವಿಕರ್ಣನನ್ನು ಕೊಲ್ಲುವಾಗ ಮಾತ್ರ ಭೀಮನಿಗೆ ತುಂಬ ದುಃಖವಾಯಿತು. ದ್ರೌಪದಿಯನ್ನು ಅಪಮಾನಗೊಳಿಸಿದ ಸಂದರ್ಭದಲ್ಲಿ ಅವನೊಬ್ಬನೇ ವಿರೋಧಿಸಿದವನು. ಅವನು ಸಾಯುವುದಕ್ಕೆ ಮೊದಲು ಭೀಮನು ``ವಿಕರ್ಣಾ, ನಾನು ಧಾರ್ತರಾಷ್ಟ್ರರೆಲ್ಲರನ್ನೂ ಕೊಲ್ಲುವೆನೆಂದು ಪ್ರತಿಜ್ಞೆ ಮಾಡಿರುವೆ. ಅವರಲ್ಲೆಲ್ಲ ನೀನೊಬ್ಬನೇ ಋಜು ಬುದ್ದಿಯುಳ್ಳವನು. ನಿನ್ನನ್ನು ಕೊಲ್ಲಲು ಮನಸ್ಸಿಲ್ಲವಾದರೂ ನಿರ್ವಾಹವಿಲ್ಲವಾಗಿದೆ. ಇದಕ್ಕಾಗಿ ಶಪಿಸುವುದಾದರೆ ಇದರ ಕಾರಣನಾದ ನಿನ್ನಣ್ಣನನ್ನು ಶಪಿಸು" ಎಂದು ವಿಲಾಪಿಸಿದನು.ಯುದ್ಧವು ಮುಂದುವರೆಯಿತು. ಕ್ರಮೇಣ ರಾಧೇಯನ ಕೈ ಮೇಲಾಗುತ್ತ ಬಂದಿತು. ಅವನು ಭೀಮನನ್ನು ಅನಾಯಾಸವಾಗಿ ನಿರಾಯುಧನನ್ನಾಗಿ ಮಾಡಿದನು. ಭೀಮನು ರಥವಿಲ್ಲದೆ ಭೂಮಿಯ ಮೇಲೆ ನಿಲ್ಲಬೇಕಾಗಿ ಬಂದಿತು. ಆದರೂ ಭೀಮನು ಹಿಮ್ಮೆಟ್ಟಲಿಲ್ಲ. ಅಲ್ಲಿ ಬಿದ್ದಿದ್ದ ರಥಗಳ ತುಂಡುಗಳನ್ನು, ಆನೆಗಳ ಶವಗಳನ್ನು, ಕೈಗೆ ಏನು ಸಿಕ್ಕರೆ ಅದನ್ನು ರಾಧೇಯನ ಮೇಲೆ ಎಸೆಯಲಾರಂಭಿಸಿದನು. ಅವೆಲ್ಲವೂ ನಿಷ್ಫಲವಾದವು. ತನ್ನ ಅಂಕೆಯಲ್ಲಿ ಸಿಕ್ಕ ಭೀಮನನ್ನು ರಾಧೇಯ ಕೊಲ್ಲಬಹುದಾಗಿತ್ತು. ಆದರೆ ತಾಯಿ ಕುಂತಿಗೆ ಅರ್ಜುನನ ಹೊರತು ಇತರ ಪಾಂಡವರನ್ನು ಕೊಲ್ಲುವುದಿಲ್ಲವೆಂಬ ವಚನವು ನೆನಪಿಗೆ ಬಂದಿತು. ಭೀಮನ ಹತ್ತಿರಕ್ಕೆ ಬಂದು, ಬಿಲ್ಲಿನ ತುದಿಯಿಂದ ಅವನನ್ನು ಮುಟ್ಟಿ, ``ನೀನೊಬ್ಬ ಮೂರ್ಖ, ಹೊಟ್ಟೆಬಾಕ. ನನ್ನಂಥ ವೀರರ ಜೊತೆ ಹೋರಾಡಲು ಬರಬೇಡ. ಇಲ್ಲವೇ ನೀನು ವಿರಾಟನ ಅರಮನೆಯಲ್ಲಿದ್ದಂತೆ ಅಡುಗೆ ಮಾಡಿಕೊಂಡಿರಬೇಕು, ಅಥವಾ ಕಾಡಿನಲ್ಲಿ ಬೇರುನಾರುಗಳನ್ನು ವರ್ಷಗಟ್ಟಲೆ ಹೆಕ್ಕಿ ಕೊಂಡಿರಬೇಕು. ನೀನಿನ್ನೂ ಮಗು. ಮನೆಗೆ ಹೋಗು ಮಗುವೆ" ಎಂದು ಛೇಡಿಸಿದನು.ಕೃಷ್ಣನು ಇದನ್ನು ನೋಡಿ ``ಅರ್ಜುನ ನೋಡು ಭೀಮನ ಅವಸ್ಥೆಯನ್ನು. ರಾಧೇಯ ಅವನನ್ನು ಸೋಲಿಸಿದ್ದಲ್ಲದೆ ಹಂಗಿಸುತ್ತಿದ್ದಾನೆ" ಎಂದನು. ಅರ್ಜುನ ಭೀಮನ ಬಳಿಗೆ ಬಂದವನೇ ರಾಧೇಯನ ಮೇಲೆ ಬಾಣಪ್ರಹಾರವನ್ನಾರಂಬಿಸಿದನು. ಆದರೆ ರಾಧೇಯನು ಅದಕ್ಕೆ ಉತ್ತರಿಸದೆ ಮುಖ ತಿರುಗಿಸಿಕೊಂಡು ಹೊರಟುಹೋದನು. ತನ್ನ ಭಾವನೆಗಳನ್ನು ಅಡಗಿಸಿಕೊಳ್ಳುವುದಕ್ಕಾಗಿ ಹೋದನೆಂಬುದು ಕೃಷ್ಣನಿಗೆ ಗೊತ್ತಾಯಿತು. ಭೀಮನು ಸಾತ್ಯಕಿಯ ರಥವನ್ನು ಹತ್ತಿಕೊಂಡನು. ಎಲ್ಲರೂ ಪುನಃ ಜಯದ್ರಥನನ್ನು ರಕ್ಷಿಸಿಟ್ಟಲ್ಲಿಗೆ ಬಂದರು. ರಾಧೇಯನ್ನು ಅಷ್ಟು ಸುಲಭವಾಗಿ ಹೋಗಲು ಬಿಡಲಿಷ್ಟವಿಲ್ಲದೆ ಅರ್ಜುನನು ಪುನಃ ಬಾಣ ಬಿಡಲು, ಅಶ್ವತ್ಥಾಮನು ಅವನ್ನು ಕತ್ತರಿಸಿ ಹಾಕಿದನು. ಈಗ ಅರ್ಜುನನ ಗಮನ ಅಶ್ವತ್ಥಾಮನ ಕಡೆಗೆ ಹರಿಯಿತು.* * * * ಸಾತ್ಯಕಿಯು ಮುಂಚೂಣಿಗೆ ಬಂದು ತಲುಪಿದ್ದನು. ಅವನದು ಆ ದಿನ ದೊಡ್ಡ ಸಾಹಸವೇ ಸರಿ. ಕೌರವ ಸ್ಯೆನ್ಯವನ್ನು ಧ್ವಂಸಮಾಡಿದ್ದಲ್ಲದೆ ಅರ್ಜುನನಿಗೆ ಸಹಾಯಮಾಡಲು ಸಮಯಕ್ಕೆ ಸರಿಯಾಗಿ ಬಂದುಬಿಟ್ಟಿದ್ದನು. ದುಶ್ಶಾಸನನ ದೊಡ್ಡ ಸ್ಯೆನ್ಯ ಅವನನ್ನು ಸುತ್ತುವರೆದಿತ್ತು. ಸಾತ್ಯಕಿಯು ಯುದ್ಧಮಾಡುವುದನ್ನು ನೋಡುವುದೇ ಒಂದು ಚೆಂದ. ರಥದಲ್ಲಿ ಅವನು ನರ್ತಿಸುವಂತೆ ತೋರುತ್ತಿದ್ದಿತು. ಅವನು ಇದ್ದಲ್ಲಿಯೇ ಇದ್ದರೂ ಅವನ ಬಾಣಗಳು ಮಾತ್ರ ಎಲ್ಲ ದಿಕ್ಕುಗಳಿಗೂ ಹಾರುತ್ತಿದ್ದವು. ಕೌರವಸ್ಯೆನ್ಯವನ್ನೆಲ್ಲ ದಾಟಿ ಅರ್ಜುನನಿದ್ದಲ್ಲಿಗೆ ಬಂದ ಅವನನ್ನು ಮೊದಲು ನೋಡಿದ್ದು ಕೃಷ್ಣ. ``ಅರ್ಜುನ, ನೋಡು ನಿನ್ನ ಶಿಷ್ಯ ಸಾತ್ಯಕಿ ಈ ಇಡೀ ಸ್ಯೆನ್ಯಸಮುದ್ರವನ್ನು ದಾಟಿ, ದ್ರೋಣ ಕೃತವರ್ಮರನ್ನೂ ಮೀರಿ ನಿನ್ನ ಬಳಿಗೆ ಬಂದಿರುವನು. ಅವನಿಗೆ ನೀನು ಜೀವಕ್ಕಿಂತ ಹೆಚ್ಚು. ಅಸಾಧ್ಯವಾದುದನ್ನು ಸಾಧ್ಯವಾಗಿಸಿ ಕೊನೆಗೂ ಸಾತ್ಯಕಿ ನಿನ್ನ ಸಹಾಯಕ್ಕಾಗಿ ಬಂದಿರುವನು" ಎಂದನು. ಸಾತ್ಯಕಿಯನ್ನು ``ಕೃಷ್ಣ, ಸಾತ್ಯಕಿ ಇಲ್ಲದೆ ಯುಧಿಷ್ಠಿರನು ಕ್ಷೇಮವಾಗಿರುವನೆ? ಭೀಮನ ಜೊತೆಗೆ ನೀನೂ ಇದ್ದು ಯುಧಿಷ್ಠಿರನ ರಕ್ಷಣೆಯನ್ನು ನೋಡಿಕೋ ಎಂದಿದ್ದೆ; ಅವನಿಲ್ಲಿಗೆ ಏಕೆ ಬಂದ?" ಎನ್ನಲು, ಕೃಷ್ಣನು, ``ನಿನ್ನಣ್ಣ ನಿನ್ನ ಕ್ಷೇಮದ ಬಗ್ಗೆ ಆತಂಕಗೊಂಡು ಕಳುಹಿಸಿರಬಹುದು. ನೀನು ಹೇಗಿರುವೆ ಎಂದು ನೋಡಿಕೊಂಡು, ಅವಶ್ಯವಾದರೆ ಸಹಾಯ ಮಾಡಲು ಅವನು ಬಂದಿರುವನು. ಏನೇ ಇರಲಿ, ನನಗೆ ಸಾತ್ಯಕಿಯನ್ನು ನೋಡಿ ಸಂತೋಷವಾಗಿದೆ" ಎಂದನು. ಅವರು ಹೀಗೇ ಮಾತನಾಡುತ್ತಿರಲು, ಅರ್ಜುನನು, ``ನೋಡು ಕೃಷ್ಣ, ಜಯದ್ರಥನ ರಕ್ಷಣೆ ಮಾಡುತ್ತಿದ್ದ ಭೂರಿಶ್ರವಸ್ಸು ಸಾತ್ಯಕಿಯನ್ನು ನನ್ನ ಬಳಿಗೆ ಬಾರದಂತೆ ತಡೆಯುತ್ತಿದ್ದಾನೆ. ನಾನೀಗ ಸಾತ್ಯಕಿಯನ್ನು ರಕ್ಷಿಸಬೇಕು. ಸೂರ್ಯ ಇನ್ನೇನು ಮುಳುಗುತ್ತಿದ್ದಾನೆ. ಬೇಗ ಜಯದ್ರಥನನ್ನು ಕೊಲ್ಲಬೇಕು. ಸಾತ್ಯಕಿಗೆ ಹಾಗೂ ಅವನ ಕುದುರೆಗಳಿಗೆ ತುಂಬ ಆಯಾಸವಾಗಿರುವಂತಿದೆ. ಪಾಪ, ಪಾಂಡವ ಪ್ರೀತಿಯು ಅವನ ಜೀವವನ್ನೇ ತೆಗೆದುಕೊಳ್ಳುತ್ತಿದೆ. ಅವನ ಪ್ರೀತಿಯ ಋಣವನ್ನು ಹೇಗೆತಾನೆ ತೀರಿಸಲಾದೀತು?" ಎಂದನು. ಅವನ ಕಣ್ಣಿನಲ್ಲಿ ನೀರು ತುಂಬಿದ್ದನ್ನು ಕಂಡು ಕೃಷ್ಣನಿಗೆ ಸಂತೊಷವಾಯಿತು. ``ಭೂರಿಶ್ರವಸ್ಸಿಗೇನೂ ಆಯಾಸವಾಗಿಲ್ಲ; ಆದರೆ ಸಾತ್ಯಕಿ ದಣಿದಿದ್ದಾನೆ. ಆದರೂ ಈ ದ್ವಂದ್ವಯುದ್ಧವನ್ನು ಅವನು ಗೆಲ್ಲಬೇಕು. ಯುಧಿಷ್ಠಿರನು ಈ ಅಪಾಯಕ್ಕೆ ಅವನನ್ನು ಸಿಕ್ಕಿಸಬಾರದಾಗಿತ್ತು" ಎಂದನು. ಸಾತ್ಯಕಿ ಭೂರಿಶ್ರವಸ್ಸಿನ ದ್ವಂದ್ವಯುದ್ಧವನ್ನು ನೋಡುತ್ತಲೇ ಅರ್ಜುನನು ಯುದ್ಧವನ್ನೂ ಮಾಡಿದನು.ಸಾತ್ಯಕಿಯ ಬಳಿಗೆ ಬಂದ ಭೂರಿಶ್ರವಸ್ಸು, ``ನಿನ್ನೊಡನೆ ದ್ವಂದ್ವವನ್ನು ಬಹುಕಾಲದಿಂದ ಎದುರು ನೋಡುತ್ತಿದ್ದೆ; ಇಂದು ಅವಕಾಶ ಒದಗಿ ಬಂದಿದೆ. ನೀನು ಪಲಾಯನ ಮಾಡದ ಹೊರತು ನನ್ನಿಂದ ಜೀವಸಹಿತ ತಪ್ಪಿಸಿಕೊಳ್ಳಲಾರೆ. ನಿನ್ನಜ್ಜ ಶಿನಿ ನನ್ನ ತಂದೆಗೆ ಮಾಡಿದ ಅವಮಾನದ ಸೇಡನ್ನು ನಾನಿಂದು ತೀರಿಸಿಕೊಳ್ಳುತ್ತೇನೆ. ಹೋರಾಡಲು ಸಿದ್ಧನಾಗು" ಎಂದನು. ಸಾತ್ಯಕಿಯು ``ಎಲವೋ, ನೀನು ಮಾತನಾಡುತ್ತಿರುವುದು ಸಾತ್ಯಕಿಯೊಡನೆ ಎಂಬುದನ್ನು ಮರೆಯಬೇಡ. ನಿನ್ನ ಹಾಗೆಯೇ ನಾನೂ ನಿನ್ನೊಡನೆ ಹೋರಲು ಆತುರದಿಂದಿದ್ದೇನೆ. ನನ್ನಜ್ಜ ನಿನ್ನಪ್ಪನ ಜಗಳ ನನಗೂ ಗೊತ್ತಿದೆ. ಮಾಗಿಯ ಮೇಘಗರ್ಜನೆಯಂತೆ ಬರಿಯ ಮಾತಿನಿಂದೇನು? ಆಡಿದ್ದನ್ನು ಮಾಡಿತೋರಿಸು" ಎಂದನು. ಅವರಿಬ್ಬರ ಕುಟುಂಬಗಳ ನಡುವೆ ಒಂದು ಮನಸ್ತಾಪ. ವಸುದೇವನ ಅಪ್ಪ ಸೂರನ ದಾಯಾದಿ ಸೋದರ ಶಿನಿ. ಅವನು ದೊಡ್ಡ ಸಾಹಸಿ. ಕಂಸನ ತಂಗಿ ದೇವಕಿಯ ಸ್ವಯಂವರಕ್ಕೆ ಹೋಗಿದ್ದ ಶಿನಿ ವಸುದೇವನಿಗಾಗಿ ದೇವಕಿಯನ್ನು ಹಾರಿಸಿಕೊಂಡು ಬಂದ. ಆಗ ಕುರುವಂಶದ ರಾಜನಾಗಿದವನು ಸೋಮದತ್ತ. ಅವನು ಶಿನಿಯ ಪ್ರಯತ್ನವನ್ನು ವಿರೋಧಿಸಿದ. ಬಾಹ್ಲೀಕನ ಮಗ ಸೋಮದತ್ತ; ಅವನ ಮಕ್ಕಳೇ ಭೂರಿಶ್ರವಸ್ಸು ಮತ್ತು ಶಲ. ಸೋಮದತ್ತ ಶಿನಿಯನ್ನು ದ್ವಂದ್ವಯುದ್ಧಕ್ಕೆ ಆಹ್ವಾನಿಸಿದ. ಶಿನಿ ಗೆದ್ದ ಸಂತೋಷದಲ್ಲಿ ಸೋಮದತ್ತನ ಜುಟ್ಟನ್ನು ಹಿಡಿದು, ತನ್ನ ಕಾಲನ್ನು ಅವನ ಎದೆಯ ಮೇಲೆ ಇರಿಸಿದ. ಇದು ಕುರುವಂಶದ ರಾಜನಾದ ಸೋಮದತ್ತನಿಗೆ ಭಾರಿ ಅವಮಾನವೆನಿಸಿತು. ಅವನು ತಪಸ್ಸು ಮಾಡಿ ತನ್ನ ಮಗನೂ ಶಿನಿಯ ಮಗನಿಗೋ ಮೊಮ್ಮಗನಿಗೋ ಹಾಗೇ ಮಾಡಲು ಸಾಧ್ಯವಾಗಲಿ ಎಂದು ವರವನ್ನು ಪಡೆದ. ಈಗ ಭೂರಿಶ್ರವಸ್ಸು ಸೋಮದತ್ತನ ಮಗ; ಸಾತ್ಯಕಿ ಶಿನಿಯ ಮೊಮ್ಮಗ. ಇದನ್ನೇ ಅವರು ಮಾತನಾಡುತ್ತಿದ್ದುದು. ವಸುದೇವನ ಮಗನಾದ ಕೃಷ್ಣನೂ ಸೂರನ ಮೊಮ್ಮಗ. ಕುಂತಿಯು ಸೂರನ ಮಗಳಾದುದರಿಂದ. ಅರ್ಜುನನೂ ಸಹ ಸೂರನ ಮೊಮ್ಮಗನೇ.ಯುದ್ದವು ಆರಂಭವಾಯಿತು. ಭೂರಿಶ್ರವಸ್ಸು ವೀರ ಹಾಗೂ ಭಕ್ತ. ಅವನಿಗೆ ಎರಡೂ ಕಡೆಯ ಸ್ಯೆನ್ಯಗಳಲ್ಲಿ ತುಂಬ ಗೌರವವಿದ್ದಿತು. ಸಾತ್ಯಕಿಯೂ ಅಷ್ಟೇ. ಇಬ್ಬರೂ ವೀರಾವೇಶದಿಂದ ಹೋರಾಡಿದರು. ಪರಸ್ಪರರ ಕುದುರೆಗಳನ್ನೂ ಸಾರಥಿಗಳನ್ನೂ ಕೊಂದುಕೊಂಡು ನೆಲದ ಮೇಲೆ ನಿಂತರು. ನೋಡುವುದಕ್ಕೆ ಘೋರವಾಗಿದ್ದ ಕತ್ತಿಕಾಳಗ ನಡೆಯಿತು. ನೋಡುತ್ತಿದ್ದ ಕೃಷ್ಣಾರ್ಜುನರಿಗೆ ಸಾತ್ಯಕಿ ಬಳಲಿದ್ದುದು ತಿಳಿದಿತ್ತು. ಆದರೂ ಯುದ್ಧಮಾಡುತ್ತಿದ್ದುದನ್ನು ನೋಡಿ ಕೃಷ್ಣನು, ``ಸಾತ್ಯಕಿಯನ್ನು ನೋಡಿ ನನ್ನ ಮೈ ಉರಿಯುತ್ತಿದೆ. ಅವನು ನಿನಗಾಗಿ ಅಷ್ಟು ದೂರದಿಂದ ಕಷ್ಟಪಟ್ಟುಕೊಂಡು ಬಂದ. ಸುಸ್ತಾಗಿರುವ ಅವನ ಮೇಲೆ ಈಗ ಭೂರಿಶ್ರವಸ್ಸು ಮೆಲುಗೈ ಸಾಧಿಸುತ್ತಿದ್ದಾನೆ. ಇದು ಸಮಾನರ ಯುದ್ಧವಲ್ಲ" ಎನ್ನುತ್ತಿರುವಂತೆಯೇ ಭೂರಿಶ್ರವಸ್ಸಿನ ಭಾರೀ ಹೊಡೆತವೊಂದರಿಂದ ಸಾತ್ಯಕಿ ಮೂರ್ಛೆ ಹೋದನು. ಭೂರಿಶ್ರವಸ್ಸು ಮುಂದೆ ಬಂದು, ಮಲಗಿದ್ದ ಅವನ ಜುಟ್ಟನ್ನು ಎಡಗೈಯಲ್ಲಿ ಹಿಡಿದು ಅವನೆದೆಯ ಮೇಲೆ ಕಾಲಿಟ್ಟನು. ಬಿದ್ದಿರುವ ವೀರನೊಬ್ಬನನ್ನು ಹೀಗೆ ಅವಮಾನಿಸಿದನ್ನು ಎರಡೂ ಕಡೆಯ ಸ್ಯೆನ್ಯಗಳು ಬಲವಾಗಿ ವಿರೋಧಿಸಿದವು. ಕೃಷ್ಣನು ಇದನ್ನು ಕಂಡು, ``ಅರ್ಜುನ, ಸಾತ್ಯಕಿ ಇವನ ಕೈಗೆ ಸಿಕ್ಕಿಕೊಂಡಿರುವುದನ್ನು ನೋಡಲಾಗುತ್ತಿಲ್ಲ ಸಾತ್ಯಕಿಗೆ ಆಯಾಸವಾಗಿದೆ. ಪ್ರಜ್ಞೆಯಿಲ್ಲದೆ ಮಲಗಿದ್ದಾನೆ. ಅಂಥ ಸ್ಥಿತಿಯಲ್ಲಿ ಇವನು ಹೀಗೆ ಅವಮಾನಿಸುತ್ತಿದ್ದಾನಲ್ಲ! ಸಾತ್ಯಕಿಗಾಗುತ್ತಿರುವ ಅವಮಾನವನ್ನು ನೀನು ತಪ್ಪಿಸಬಾರದೆ?" ಎನ್ನಲು ಅರ್ಜುನನು, ``ಅವನು ಕೂದಲನ್ನು ಹಿಡಿದೆಳೆಯುತ್ತಿರುವನೇ ಹೊರತು ಕೊಲ್ಲುತ್ತಿಲ್ಲ. ಭೂರಿಶ್ರವಸ್ಸು ಯೋಗ್ಯವೀರ. ಕೇವಲ ಹಳೆಯ ಸೇಡು ತೀರಿಸಿಕೊಳ್ಳಲು ಹೀಗೆ ಮಾಡುತ್ತಿದ್ದಾನೆ. ಪ್ರತಿಜ್ಞೆ ಪೂರೈಸಿಕೊಂಡಾಯಿತು; ಬಿಟ್ಟುಬಿಡುತ್ತಾನೆ. ಕೊಲ್ಲುವುದಿಲ್ಲ" ಎಂದನು. ಅಷ್ಟರಲ್ಲಿ ಭೂರಿಶ್ರವಸ್ಸು ಕತ್ತಿ ಹಿಡಿದು ಪ್ರಜ್ಞೆತಪ್ಪಿದ್ದ ಸಾತ್ಯಕೀಯ ತಲೆಯನ್ನು ಕತ್ತರಿಸಲುದ್ಯುಕ್ತನಾದುದು ಕಾಣಿಸಿತು. ಅರ್ಜುನನು. ನನ್ನನ್ನು ಎಲ್ಲರೂ ಎಲ್ಲ ದಿಕ್ಕುಗಳಿಂದಲೂ ಪೀಡಿಸುತ್ತಿದ್ದಾರೆ. ಆದರೂ ನಾನು ಸಾತ್ಯಕಿಯನ್ನು ರಕ್ಷಿಸುತ್ತೇನೆ. ಇನ್ನೊಬ್ಬರ ದ್ವಂದ್ವದಲ್ಲಿ ಪ್ರವೇಶಿಸಲು ಇಷ್ಟಪಡುವುದಿಲ್ಲವಾದರೂ, ನನಗಾಗಿ ಅಷ್ಟೆಲ್ಲ ಮಾಡಿದ ಸಾತ್ಯಕಿಯನ್ನು ಕಾಪಾಡಲೇ ಬೇಕು. ಈಗೇನು ಮಾಡುವುದೆಂದೇ ತೋರದು" ಎಂದನು. ಕೃಷ್ಣ ಭೂರಿಶ್ರವಸ್ಸಿನ ಘಾತುಕ ಕಾರ್ಯವನ್ನು ನೋಡಿ, ``ಸಾತ್ಯಕಿಯನ್ನು ಯಾವುದೋ ಅಜ್ಜನ ಕಾಲದ ಸೇಡಿಗಾಗಿ ಭೂರಿಶ್ರವಸ್ಸು ಕೊಲ್ಲುತ್ತಿದ್ದಾನೆ. ಸುಸ್ತಾಗಿ ಮೂರ್ಛೆಹೋಗಿರುವವನನ್ನು ಕೊಲ್ಲುವುದು ಯುದ್ಧನೀತಿಯಲ್ಲ. ಅವನ ಈ ಕಾರ್ಯ ಸರಿಯಲ್ಲ" ಎನ್ನಲು ತಾನು ಇದರಲ್ಲಿ ಪ್ರವೇಶಿಸಲೇಬೇಕೆಂದು ಅರ್ಜುನನಿಗೆ ಮನವರಿಕೆಯಾಯಿತು. ಒಂದು ಚೂಪಾದ ಬಾಣದಿಂದ ಭೂರಿಶ್ರವಸ್ಸಿನ ಬಲಗೈಯನ್ನು ಕತ್ತರಿಸಿ ಹಾಕಿದನು. ನೋವಿನಿಂದಲೂ ಕೋಪದಿಂದಲೂ ಭೂರಿಶ್ರವಸ್ಸು, ``ಅರ್ಜುನ, ಇದು ನೀನು ನಾಚಿಕೆಗೇಡಿನ ಕೆಲಸ ಮಾಡಿದೆ. ಯುದ್ಧಕ್ಕೆ ಸಿದ್ದನಾಗಿಲ್ಲದವನಿಗೆ ಅವನಿಗೆ ತಿಳಿಯದಂತೆ ಹೊಡೆದೆ. ಹೇಗೆ ನೀನು ಯುಧಿಷ್ಠಿರನೆದುರಿಗೆ ಹೋಗಿ ನಿಲ್ಲುವೆ? ಧರ್ಮಿಷ್ಠನಾದ ಅವನಿದನ್ನು ಒಪ್ಪುವನೆ? ಕುರುವಂಶದಲ್ಲಿ ಹುಟ್ಟಿದ ನೀನು ಇಡೀ ವಂಶಕ್ಕೇ ಕಳಂಕ ತರುವಂಥ ಕೆಲಸ ಮಾಡಿದೆ. ನೀನಾಗಿ ನೀನು ಇಂಥ ಹೀನ ಕಾರ್ಯ ಮಾಡುವವನಲ್ಲ. ನಿನ್ನ ಸಾರಥಿಯ ಸಲಹೆಯಂತೆ ನೀನದನ್ನು ಮಾಡಿರಬೇಕು. ವೃಷ್ಣಿಗಳ ವಂಶದಲ್ಲಿ ಹುಟ್ಟಿದವನಿಗೆ ಮಾತ್ರವೇ ಈ ಕೀಳುಮಟ್ಟಕ್ಕಿಳಿಯಲು ಸಾಧ್ಯ" ಎನ್ನಲು, ಅರ್ಜುನನು ಕೋಪದಿಂದ, ``ಕೃಷ್ಣನ ಬಗ್ಗೆ ಕೆಟ್ಟ ಮಾತಾಡಬೇಡ. ಅವನು ನನ್ನ ಗುರು, ಯಜಮಾನ. ನಿಮ್ಮಿಬ್ಬರ ದ್ವಂದ್ವ ಸರಿಯಾಗಿಲ್ಲ ಎಂಬುದನ್ನು ಗಮನಿಸಿದರೂ ಎಷ್ಟೋ ಹೊತ್ತು ನಾನು ಮಧ್ಯೆ ಪ್ರವೇಶಿಸಲಿಲ್ಲ. ಆದರೆ ನೀನು ಅವನನ್ನು ಪ್ರಜ್ಞೆಯಿಲ್ಲದೆ ಇರುವಾಗ ಕೊಲ್ಲಲು ಹೊರಟಿದ್ದೆ. ನನ್ನ ಆಪ್ತಸ್ನೇಹಿತ ಹೀಗೆ ಸಾಯುತ್ತಿರುವಾಗಲೂ ಸುಮ್ಮನಿರುವಷ್ಟು ಹೃದಯಹೀನ ನಾನಲ್ಲ. ಇಷ್ಟು ದಿನಗಳ ಈ ಯುದ್ಧದಲ್ಲಿ ಎಷ್ಟೋ ದ್ವಂದ್ವಗಳು ನಡೆದಿವೆ. ಅವುಗಳಲ್ಲಿ ಒಬ್ಬರು ಬಳಲಿ ಸೋಲತೊಡಗಿದ ಕೂಡಲೆ ಇತರರು ಅವರ ಸಹಾಯಕ್ಕೆ ಬಂದಿದ್ದಾರೆ. ಇನ್ನೊಬ್ಬರನ್ನು ಕುರಿತೂ ನಾವು ಯೋಚಿಸಬೇಕು; ನನ್ನ ಗೆಳೆಯ, ಅನುಯಾಯಿ, ಶಿಷ್ಯ, ನನ್ನ ಪ್ರೀತಿಯ ಸಾತ್ಯಕಿ ತನ್ನನ್ನು ತಾನು ರಕ್ಷಿಸಿಕೊಳ್ಳುವ ಸ್ಥಿತಿಯಲ್ಲಿಲ್ಲದಿರುವಾಗ ನೀನು ಕೊಲ್ಲಹೊರಟರೆ ನಾನು ನೋಡುತ್ತ ಸುಮ್ಮನಿರಲೆ? ಯಾರು ನನಗಾಗಿ ಯುದ್ಧಮಾಡುತ್ತಾರೋ ಅವರು ನನ್ನಿಂದ ರಕ್ಷಿಸಲ್ಪಡುತ್ತಾರೆ. ಇದರಲ್ಲಿ ತಪ್ಪೇನಿಲ್ಲ ಇದು ನನ್ನ ನಿಯಮ. ಸಾತ್ಯಕಿ ಸಾಯುವುದನ್ನು ಸುಮ್ಮನೆ ನೋಡುತ್ತಿದ್ದರೆ ಅದು ಪಾಪವೇ ಹೊರತು ನಿನ್ನ ಕೈ ಕತ್ತರಿಸಿದುದಲ್ಲ. ನೀನು ಮಾಡುತಿದ್ದ ಕೆಲಸಕ್ಕೆ ನಿನ್ನ ತಲೆಯನ್ನೇ ಕತ್ತರಿಸಬೇಕಾಗಿತ್ತು. ನೀನು ನನಗೆ ಧರ್ಮವೇನೆಂದು ಹೇಳುವೆಯಾ? ನಿರಾಯುಧನಾಗಿ ನೆಲದ ಮೇಲೆ ನಿಂತಾಗ ನನ್ನ ಅಭಿಮನ್ಯುವನ್ನು ಕೌರವರು ಹಿಂದಿನಿಂದ ಹೊಡೆದು ಕೊಂದಾಗ ನೀನು ಸುಮ್ಮನೆ ನೋಡುತ್ತಿದ್ದೆಯಲ್ಲಾ, ಆಗ ನಿನ್ನ ಧರ್ಮವೆಲ್ಲ ಹೋಗಿತ್ತು?ಆಗ ಅದು ಕ್ಷತ್ರಿಯ ಧರ್ಮವಲ್ಲವೆಂದು ನೀನು ಹೇಳಿದೆಯಾ? ಇಲ್ಲ! ಆ ಮಗು ಹಾಗೆ ಕೊಲೆಯಾಗುವುದನ್ನು ನೋಡುತ್ತಿದ್ದೆ. ಈಗ ನಾನು ಹಾಗೆ ಮಾಡಬೇಕಾಗಿತ್ತೆ? ಖಂಡಿತ ಇಲ್ಲ. ನನಗಾಗಿ ಹೋರಾಡುವವರನ್ನು ನಾನು ಯಾವಾಗಲೂ ರಕ್ಷಿಸಿಯೇ ತೀರುವೆ" ಎಂದನು. ಯಾರೂ ಮಾತನಾಡಲಿಲ್ಲ. ಅರ್ಜುನನಿಗೆ ಭೂರಿಶ್ರವಸ್ಸಿನ ಮೇಲೂ ಕರುಣೆ ಉಕ್ಕಿ ಬಂತು. ``ಅಪ್ಪ, ಕ್ಷತ್ರಿಯನಾಗಿ ಹುಟ್ಟಿದುದಕ್ಕೆ ನನಗೆ ದುಃಖವಾಗುತ್ತಿದೆ. ಕುರುವಂಶದ ಸುಪುತ್ರನಾದ ನಿನಗೆ ನಾನು ಹೀಗೆ ಮಾಡಬೇಕಾಯಿತೆ? ಶಪಿಸಬೇಕಾದದ್ದು ನಿನ್ನ ಈ ಸ್ಥಿತಿಗೆ ಕಾರಣನಾದ ನನ್ನನ್ನಲ್ಲ, ಇದಕ್ಕೆಲ್ಲ ಮೂಲಕಾರಣನಾದ ದುರ್ಯೋಧನನನ್ನು!" ಎಂದನು. ಭೂರಿಶ್ರವಸ್ಸು ಸುಮ್ಮನೆ ತಲೆತಗ್ಗಿಸಿ ಕೇಳುತ್ತಿದ್ದನ್ನು ತನ್ನ ಇನ್ನೊಂದು ಕೈಯನ್ನೆತ್ತಿ ಅರ್ಜುನನ ಮಾತನ್ನು ಅನುಸರಿಸಿದನು. ಅವನಿಗೆ ಇನ್ನು ಮುಂದೆ ಬದುಕಿರುವ ಇಚ್ಛೆ ಉಳಿಯಲಿಲ್ಲ ಕುಶಾಸನವನ್ನು ನೆಲದ ಮೇಲೆ ಹರಡಿ, ಯೋಗದಿಂದ ಪ್ರಾಣ ಬಿಡಲು ಸಿದ್ಧನಾದನು.ಇಡೀ ಸೈನ್ಯವೇ ಈ ಎಲ್ಲ ನಾಟಕೀಯ ಘಟನೆಗಳಿಗೆ ಮೂಕ ಪ್ರೇಕ್ಷಕನಾಗಿತ್ತು. ಮಹಾವೀರನಾದ ಭೂರಿಶ್ರವಸ್ಸು ಪ್ರಪಂಚವನ್ನು ತ್ಯಜಿಸಿ ಪ್ರಾಣ ಬಿಡಬೇಕೆಂದು ತೀರ್ಮಾನಿಸಿದನು. ಎಲ್ಲರ ದೃಷ್ಟಿಯೂ ಅವನ ಮೇಲಿರಲು, ಸಾತ್ಯಕಿಯು ಮೂರ್ಛೆ ತಿಳಿದು ಮೇಲೆದ್ದನು. ಕತ್ತಿಯನ್ನು ಇರಿದು ಹಾರಿ ನೆಗೆದು ಭೂರಿಶ್ರವಸ್ಸನ್ನು ಕೊಲ್ಲಲು ಹೊರಟನು. ಇದನ್ನು ನೋಡಿ ಎಲ್ಲರೂ ಭಯಭೀತರಾದರು. ಕೃಷ್ಣಾರ್ಜುನರೂ ವಿಹ್ವಲತೆಯಿಂದ ಅವನನ್ನು ತಡೆಯಲೆತ್ನಿಸಿದರು. ಆದರೆ ಅವನು ಅವರನ್ನು ಲೆಕ್ಕಿಸದೆ ನುಗ್ಗಿದನು. ಭೂರಿಶ್ರವಸ್ಸು ತನ್ನ ಮನಸ್ಸನ್ನು ಯುದ್ದದಿಂದ ಹಿಂದೆಗೆದಿದ್ದನು; ಒಂದು ಕೈಯನ್ನು ಕಳೆದುಕೊಂಡು, ನಿರಾಯುಧನಾಗಿ, ಇಹವನ್ನು ಮರೆತಿದ್ದನು. ಅಂತಹ ಸ್ಥಿತಿಯಲ್ಲಿ ಅವನನ್ನು ಪಾಂಡವರ ಕಡೆಯ ವೀರಾಗ್ರಣಿ ಸಾತ್ಯಕಿಯು ಕೊಂದನು. ಸಾತ್ಯಕಿಯ ಬದುಕಿನಲ್ಲಿ ಇದೊಂದು ಕಳಂಕ ಉಳಿದೇ ಹೋಯಿತು.* * * * ಸಾತ್ಯಕಿಯ ಮೇಲೆ ಅರ್ಜುನನಿಗೆ ಸಿಟ್ಟು ಬಂದಿತು. ಆದರೂ ಅವನು ಮಾತನಾಡಲಿಲ್ಲ ಸಾತ್ಯಕಿಯು ಅಲ್ಲಿ ನೆರೆದವರೆಲ್ಲರನ್ನೂ ಒಮ್ಮೆ ನುಂಗಿಬಿಡುವವನಂತೆ ನೋಡಿ, ``ನಾನು ಏನೋ ತಪ್ಪು ಮಾಡಿಬಿಟ್ಟೆ ಎಂದು ನೀವೆಲ್ಲ ಭಾವಿಸಿರಬಹುದು. ಆದರೆ ನನಗೇನೂ ಹಾಗೆನಿಸುವುದಿಲ್ಲ. ಅಸಹಾಯಕನಾಗಿದ್ದ ಅವನನ್ನು ಕೊಲ್ಲಬಾರದಾಗಿತ್ತು ಎಂದು ನೀವೆಲ್ಲ ಘೋಷಿಸಬಹುದು. ಧರ್ಮವನ್ನು ಇನ್ನೊಬ್ಬರಿಗೆ ಬೋಧಿಸುವುದು ಸುಲಭ. ನೆನ್ನೆ ಆ ಮಗು ಒಬ್ಬೊಬ್ಬರೇ ಬನ್ನಿ, ನಾನು ಯುದ್ಧ ಮಾಡುತ್ತೇನೆ ಎಂದು ಕೇಳಿಕೊಂಡಾಗ ನಿಮ್ಮ ಧರ್ಮಕ್ಕೇನು ಗ್ರಹಣ ಹಿಡಿದಿತ್ತೆ? ರಾಧೇಯ ಹಿಂದಿನಿಂದ ಹೋಗಿ ಅವನ ಬಿಲ್ಲನ್ನು ಕತ್ತರಿಸಿದನಲ್ಲ, ಆಗ ಎಲ್ಲಿಗೆ ಹೋಗಿತ್ತು ನಿಮ್ಮ ಧರ್ಮ? ಪದ್ಮ ವ್ಯೂಹದೊಳಗೆ ಮಗುವನ್ನು ಇರುಕಿಸಿಕೊಂಡು, ಅವನನ್ನು ಕೊಲ್ಲುವುದು ಹೇಗೆಂದು ನಿಮಗೆಲ್ಲ ಯೋಜನೆ ಹಾಕಿಕೊಟ್ಟನಲ್ಲ, ಆ ನಿಮ್ಮ ಸೇನಾಪತಿಗೆ ಧರ್ಮವೆಲ್ಲಿತ್ತು? ಈಗ ನಿಮಗಾರಿಗೂ ಧರ್ಮದ ಬಗ್ಗೆ ಮಾತನಾಡುವ ಹಕ್ಕಿಲ್ಲ. ನನ್ನನ್ನು ಯಾರೂ ಅವಮಾನಿಸುವರೋ ಅವರನ್ನು ಕೊಲ್ಲುವೆನೆಂದು ನಾನೂ ಪ್ರತಿಜ್ಞೆ ಮಾಡಿರುವೆ. ಇವನು ನನ್ನೆದೆಯ ಮೇಲೆ ಕಾಲಿಟ್ಟು ಅವಮಾನಿಸಿದ್ದರಿಂದ ನಾನು ಅವನನ್ನು ಕೊಂದೆ. ಅರ್ಜುನ ನನ್ನ ಮೇಲಿನ ಪ್ರೀತ್ಯಾಧಿಕ್ಯದಿಂದ ಅವನ ಕೈ ಕತ್ತರಿಸಿ ನನಗೆ ಆ ಅವಕಾಶ ತಪ್ಪಿಸಿದ ನಾನು ಪ್ರಜ್ಞೆತಪ್ಪಿ ಮಲಗಿದ್ದಾಗ ಅವನು ನನ್ನನ್ನು ಅವಮಾನಿಸಿದನಲ್ಲ, ಅದು ಧರ್ಮವೆ? ಎಂದ ಮೇಲೆ ನಾನು ಕೊಂದದ್ದು ಹೇಗೆ ಅರ್ಧಮವಾಗುತ್ತದೆ. ಎಂದನು. ಯುದ್ಧವನ್ನು ನೋಡಲೆಂದು ಆಕಾಶದಲ್ಲಿ ನೆರೆದಿದ್ದ ದೇವತೆಗಳು, ``ಇದರಲ್ಲಿ ಸಾತ್ಯಕಿಯದೇನೂ ತಪ್ಪಿಲ್ಲ. ಭೂರಿಶ್ರವಸ್ಸು ಸಾತ್ಯಕಿಯಿಂದ ಹತನಾಗಬೇಕೆಂಬುದು ವಿಧಿನಿಯಮ. ಈ ವಿಚಾರದಲ್ಲಿ ಸಾತ್ಯಕಿಯನ್ನು ನಿಂದಿಸಲಾಗದು" ಎಂದರು. ಯಾರೂ ಮಾತನಾಡಲಿಲ್ಲ. ಅವರೂ ಅರ್ಜುನನಿಗೆ ಒಂದು ಭಾವನೆ, ಸಾತ್ಯಕಿ ಮಾಡಿದ್ದು ತಪ್ಪು ಎಂದು. ಆದರೆ ಮಾತನಾಡಿ ಏನು ಪ್ರಯೋಜನ? ಭೂರಿಶ್ರವಸ್ಸು ಸತ್ತ; ಅದು ಅಲ್ಲಿಗೆ ಮುಗಿಯಿತು. ಈಗ ಜಯದ್ರಥನನ್ನು ಕೊಲ್ಲುವ ಮುಖ್ಯವಾದ ವಿಷಯವಿದೆಯಲ್ಲ ಯೋಚಿಸಲು!ಅರ್ಜುನನು, ``ಕೃಷ್ಣ, ಹೊತ್ತು ಮುಳುಗುತ್ತಿದೆ. ನಾವು ಬೇಗ ಜಯದ್ರಥನ ಬಳಿಗೆ ಹೋಗಬೇಕು" ಎಂದೊಡನೆ ವೇಗವಾಗಿ ಜಯದ್ರಥನಿದ್ದಲ್ಲಿಗೆ ರಥವನ್ನೋಡಿಸಿದ. ಕೌರವ ಸೇನೆಯಲ್ಲ ಅಲ್ಲಿ ಒಗ್ಗೂಡಿತ್ತು. ದುರ್ಯೋಧನ, ರಾಧೇಯ, ವೃಷಸೇನ, ಅಶ್ವತ್ಥಾಮ, ಕೃಪ ಎಲ್ಲರೂ ಅಲ್ಲಿದ್ದರು. ಅವರು ಅರ್ಜುನ ಜಯದ್ರಥರ ದ್ವಂದ್ವವನ್ನು ತಪ್ಪಿಸಲು ಪ್ರಯತ್ನಿಸುತ್ತಿದ್ದರು. ಅರ್ಜುನ ಈಗ ಜಯದ್ರಥನ ಮುಂದೆಯೇ ನಿಂತಿದ್ದ. ಕೋಪದಿಂದ ಕೆಂಪಾದ ಕಣ್ಣುಗಳುಳ್ಳ ಅವನು ಜಯದ್ರಥನನ್ನು ನೋಡಬಹುದಾಗಿತ್ತು. ರಾಧೇಯನು ಸಾತ್ಯಕಿಯನ್ನು ಅರ್ಜುನನ ಹತ್ತಿರವಿರದಂತೆ ದ್ವಂದ್ವಯುದ್ಧದಲ್ಲಿ ತೊಡಗಿಸಿಕೊಂಡ. ಅರ್ಜುನನು, ``ಕೃಷ್ಣ, ನೋಡು ರಾಧೇಯನ ಧೈರ್ಯವನ್ನು. ಈಗತಾನೆ ಭೂರಿಶ್ರವಸ್ಸು ಸತ್ತಿದ್ದನ್ನು ನೋಡಿದ್ದರೂ ಅವನು ಸಾತ್ಯಕಿಯೊಡನೆ ಯುದ್ಧಮಾಡಬೇಕೆನ್ನುತ್ತಾನೆ. ಸಾತ್ಯಕಿ ಅವನನ್ನು ಕೊಲ್ಲುವುದು ನನಗಿಷ್ಟವಿಲ್ಲ. ಅವನನ್ನು ನಾನೇ ಕೊಲ್ಲಬೇಕು. ನನ್ನನ್ನು ರಾಧೇಯನ ಬಳಿಗೆ ಕರೆದುಕೊಂಡು ಹೋಗು" ಎಂದನು. ಕೃಷ್ಣನಿಗೆ ಈಗ ಅರ್ಜುನ ರಾಧೇಯರ ದ್ವಂದ್ವ ಬೇಕಿರಲಿಲ್ಲ. ಇಂದ್ರನು ರಾಧೇಯನಿಗೆ ಕೊಟ್ಟಿರುವ ಶಕ್ತಿಯ ಭಯ ಅವನಿಗೆ. ಆದ್ದರಿಂದ, ``ಚಿಂತೆಯಿಲ್ಲ, ಅರ್ಜುನ, ಅವನು ಸಾತ್ಯಕಿಯೊಡನೆ ಹೋರಾಡಲಿ. ರಾಧೇಯನೊಂದಿಗೆ ಯುದ್ಧವನ್ನು ಅಮೇಲೆ ಯೋಚಿಸೋಣವಂತೆ. ಈಗ ಅದಕ್ಕೆಲ್ಲಿದೆ ಕಾಲಾವಕಾಶ? ಸೂರ್ಯ ಇನ್ನೆನು ಮುಳುಗುವುದರಲ್ಲಿದ್ದಾನೆ. ಜಯದ್ರಥನ ಸುತ್ತ ಇರುವವರ ಕಡೆಗೆ ಗಮನ ಹರಿಸು. ಅವರೆಲ್ಲರನ್ನೂ ನೀನು ಮೊದಲು ಸೋಲಿಸಬೇಕಲ್ಲವೆ? ನಮಗೀಗ ರಾಧೇಯನ ಚಿಂತೆ ಬೇಡ" ಎಂದನು.ಸಾತ್ಯಕಿಗೆ ರಥವೂ ಇಲ್ಲ, ಭೂರಿಶ್ರವಸ್ಸನ್ನು ಕೊಂದ ಕತ್ತಿಯನ್ನುಳಿದು ಬೇರಾವ ಆಯುಧವೂ ಇಲ್ಲ. ಅರ್ಜುನನ ರಥ ಮುಂದೆ ಹೋಗುವುದರಲ್ಲಿತ್ತು. ಕೃಷ್ಣ ಈಗ ಪಾಂಚಜನ್ಯದಲ್ಲಿ ಗಟ್ಟಿಯಾಗಿ ವೃಷಭಧ್ವನಿ ಹೊರಡಿಸಿದ. ಕಣ್ಣುಮುಚ್ಚಿ ತೆರೆಯುವುದರೊಳಗಾಗಿ ದಾರುಕನ ಸಾರಥ್ಯದ ಕೃಷ್ಣನ ರಥ ಅಲ್ಲಿಗೆ ಬಂದಿತು. ಸಾತ್ಯಕಿ ಕೃತಜ್ಞತೆಯ ನಗುವನ್ನು ನಕ್ಕು, ಅದನ್ನೇರಿ ರಾಧೇಯನೊಡನೆ ಹೋರಲಾರಂಭಿಸಿದ. ರಥವನ್ನಡಿಸುವ ದಾರುಕನ ಚಾಕಚಕ್ಯತೆಗೆ ಕೃಷ್ಣ ಸಹ ಬೆರಗಾದ. ಕೌರವರೆಲ್ಲರೂ ರಾಧೇಯನ ಸಹಾಯಕ್ಕೆ ಬಂದರು. ರಾಧೇಯನ ರಥ ಮುರಿದು ಬೀಳಲು ಅವನು ದುರ್ಯೋಧನನ ರಥವನ್ನೇರಿದ. ಸಾತ್ಯಕಿಯು ದುಶ್ಶಾಸನನೂ ಸೇರಿದಂತೆ ಅವರೆಲ್ಲರನ್ನೂ ಸೋಲಿಸಿದ. ಮತ್ತೊಮ್ಮೆ ಭೀಮನ ಪ್ರತಿಜ್ಞೆಯನ್ನು ಜ್ಞಾಪಿಸಿಕೊಂಡ ಸಾತ್ಯಕಿಯು ಅವರನ್ನು ಜೀವಸಹಿತ ಬಿಟ್ಟುಬಿಟ್ಟ. ಯುದ್ಧರಂಗದಲ್ಲಿ ಕೃಷ್ಣಾರ್ಜುನರಿಗೆ ಸಮಾನನಾದವನು ಸಾತ್ಯಕಿಯೊಬ್ಬನೇ, ನಾಲ್ಕನೆಯವರು ಯಾರೂ ಇಲ್ಲವೆಂದೇ ಅಶ್ವತ್ಥಾಮ ಕೃತವರ್ಮರ ಅಭಿಮತವಾಗಿದ್ದಿತು. ಅರ್ಜುನ ರಾಧೇಯನ ಬಳಿಗೆ ಹೋಗಿ, ``ನೀನು ನನ್ನ ಮಗನನ್ನು ನಾನಿಲ್ಲದಿರುವಾಗ ಕೊಂದೆ. ನಿನ್ನ ಕಣ್ಣೆದುರಿಗೇ ನಾನು ಶೀಘ್ರದಲ್ಲಿಯೇ ನಿನ್ನ ಮಗ ವೃಷಸೇನನನ್ನು ಕೊಲ್ಲುವೆನು. ನೀನು ಹೇಗೆ ಉಳಿಸಿಕೊಳ್ಳುತ್ತೀ ನೋಡೋಣ" ಎಂದನು.ಸೂರ್ಯಕಿರಣಗಳು ಕೆಂಪಾಗತೊಡಗಿದ್ದವು. ಇನ್ನೇನು ಸೂರ್ಯಾಸ್ತವಾಗುತ್ತಿತ್ತು. ದುರ್ಯೋಧನನು ರಾಧೇಯನಿಗೆ, ``ಅರ್ಜುನನಿಗೆ ತನ್ನ ಪ್ರತಿಜ್ಞೆಯನ್ನುಳಿಸಿಕೊಳ್ಳಲಾಗದಂತೆ ನೀನು ಅವನ ಬೆನ್ನಟ್ಟು. ನಾವು ಹೇಗಾದರೂ ಮಾಡಿ ಜಯದ್ರಥನನ್ನು ಉಳಿಸಿಕೊಳ್ಳಬೇಕು. ಅದನ್ನು ಮಾಡಬಲ್ಲವನು ನೀನೊಬ್ಬನೇ" ಎನ್ನುತ್ತಿರುವಷ್ಟರಲ್ಲಿ ಅರ್ಜುನನು ವ್ಯೂಹದಲ್ಲಿ ಮುಂದಕ್ಕೆ ಹೋಗಿಬಿಟ್ಟಿದ್ದನು. ದ್ವಂದ್ವಕ್ಕೆ ಸಮಯವೇ ಇರಲಿಲ್ಲ. ಕೌರವರೆಲ್ಲ ಜಯದ್ರಥನ ಸುತ್ತ ನೆರೆದರು. ದುರ್ಯೋಧನ ರಾಧೇಯ ವೃಷಸೇನ ಶಲ್ಯ ಅಶ್ವತ್ಥಾಮ ಇವರುಗಳ ಜೊತೆಗೆ ಈಗ ಜಯದ್ರಥನೂ ಅರ್ಜುನನನ್ನು ಎದುರಿಸಿದ. ಸೂರ್ಯ ಕೆಂಪಾಗತೊಡಗಿದ್ದ. ಅರ್ಜುನ ಹಿಂದೆಂದೂ ಇಲ್ಲದಷ್ಟು ವೀರಾವೇಶದಿಂದ ಕಾದಿದ. ಎಲ್ಲರನ್ನೂ ಒಟ್ಟಿಗೆ ಎದುರಿಸುವುದು ಬಹು ಕಷ್ಟವಾಗಿದ್ದಿತು. ಅಸ್ತ್ರಗಳ ನೆರವಿನಿಂದ ಸೈನ್ಯವನ್ನು ಬದಿಗೊತ್ತಿ ಜಯದ್ರಥನ ಹತ್ತಿರಕ್ಕೆ ಹೋಗುವುದು ಅವನಿಗೆ ಸಾಧ್ಯವಾಯಿತು. ಈಗ ಜಯದ್ರಥನ ಜೀವಭಯದಿಂದಾಗಿ ಎಲ್ಲಿಲ್ಲದ ವೀರಾವೇಶದಿಂದ ಯುದ್ಧ ಮಾಡಿದ. ಕಾಲಾವಕಾಶ ಇರಲಿಲ್ಲವಾಗಿ ಅರ್ಜುನನಿಗೂ ಅವನನ್ನು ಸೋಲಿಸುವುದು ಕಷ್ಟವಾಯಿತು. ಕೃಷ್ಣನು, ``ಅರ್ಜುನ ಸೂರ್ಯಾಸ್ತಕ್ಕೆ ಮೊದಲು ಜಯದ್ರಥನನ್ನು ಕೊಲ್ಲುವುದು ನಿನಗೆ ಕಷ್ಟ ಎಂದೆನಿಸುತ್ತಿದೆ. ಇನ್ನು ಕೆಲವೇ ಕ್ಷಣಗಳಲ್ಲಿ ಸೂರ್ಯನು ಮುಳುಗಲಿದ್ದಾನೆ. ಧೈರ್ಯಗೆಡಬೇಡ. ಈಗ ಚಾಚೂತಪ್ಪದೆ ನಾನು ಹೇಳಿದಂತೆ ಮಾಡು. ನಾನು ಬಿಡು ಎಂದೊಡನೆ ನೀನು ಜಯದ್ರಥನ ಮೇಲೆ ನಿನ್ನ ಮಹಾಸ್ತ್ರವನ್ನು ಬಿಡಬೇಕು" ಎಂದು ತನ್ನ ಚಕ್ರವನ್ನು ಸ್ಮರಿಸಿದ. ಅದನ್ನು ಸೂರ್ಯಬಿಂಬವನ್ನು ಮರೆಮಾಡುವಂತೆ ಕಳಿಸಿದ. ಇದ್ದಕಿದ್ದಂತೆ ಕತ್ತಲು ಕವಿಯಿತು. ಕೌರವರೆಲ್ಲರೂ ಸಂತೋಷದಿಂದ ಅರಚಿದರು. ಗೆದ್ದೆನೆಂಬ ಸಂಭ್ರಮದಿಂದ ಜಯದ್ರಥನು ಮೈಮರೆತು ಸೂರ್ಯನಿದ್ದ ಕಡೆಗೆ ನೋಡಿದ. ಇದೇ ಸಮಯವೆಂದು ಕೃಷ್ಣನು ``ಬಿಡು!" ಎಂದೊಡನೆ ಅರ್ಜುನನು ತನ್ನ ಪಾಶುಪತಾಸ್ತ್ರವನ್ನು ಅಭಿಮಂತ್ರಿಸಿ ಜಯದ್ರಥನ ಮೇಲೆ ಪ್ರಯೋಗಿಸಿದ. ಅದು ಅವನ ಕತ್ತನ್ನು ಕತ್ತರಿಸಿ ತಲೆಯನ್ನು ಆಕಾಶಕ್ಕೆ ಚಿಮ್ಮಿತು. ಕೃಷ್ಣನು ``ಅರ್ಜುನ, ಅದು ಭೂಮಿಗೆ ಬೀಳುವುದರೊಳಗೆ ಅದನ್ನು ಅವನ ತಂದೆಯ ತೊಡೆಯ ಮೇಲೆ ಬೀಳುವಂತೆ ಮಾಡು; ಕಾರಣ ಆಮೇಲೆ ಹೇಳುತ್ತೇನೆ" ಎಂದೊಡನೆ ಅರ್ಜುನನು ಹಾಗೆಯೇ ಮಾಡಿದ. ಕೌರವರು ಬಾಣ ಚುಚ್ಚಿಕೊಂಡ ಜಯದ್ರಥನ ತಲೆಯನ್ನು ಆಕಾಶದಲ್ಲಿ ಕಂಡರು. ಅಲ್ಲೇ ಹತ್ತಿರ ಸ್ಯಮಂತಪಂಚಕದಲ್ಲಿ ಸಾಯಂಸಂಧ್ಯಾವಂದನೆಯನ್ನು ಮಾಡುತ್ತಿದ್ದ ಜಯದ್ರಥನ ತಂದೆಯ ತೊಡೆಯ ಮೇಲೆ ಹೋಗಿ ಅದು ಬಿದ್ದಿತು. ಸಂದ್ಯೆ ಮುಗಿದ ಮೇಲೆ ಅವನು ಮೇಲೆದ್ದ; ಜಯದ್ರಥನು ತಲೆಯು ನೆಲಕ್ಕುರುಳಿತು. ತಕ್ಷಣ ಜಯದ್ರಥನ ತಂದೆಯ ತಲೆಯೂ ಸಹಸ್ರ ಹೋಳಾಗಿ ಒಡೆಯಿತು.

ಜಯದ್ರಥ ಸತ್ತೊಡನೆ ಕತ್ತಲೆ ಕರಗಿ ಪುನ: ಆಕಾಶವು ಕೆಂಬಣ್ಣದ ಬೆಳಕಿನಿಂದ ತುಂಬಿತು. ಅಸ್ತಮಿಸುವ ಸೂರ್ಯನ ಕೊನೆಯ ಕ್ಷಣಗಳ ಸೌಂದರ್ಯ ಎಲ್ಲರಿಗೂ ಗೋಚರಿಸಿತು. ಈಗ ಸೂರ್ಯ ಸಂಪೂರ್ಣವಾಗಿ ಮುಳುಗಿದ. ಕೌರವರೆಲ್ಲರೂ ನಿರಾಶೆಯಲ್ಲಿ ಮುಳುಗಿದರು.* * * * ಅರ್ಜುನನು ಪಾಶುಪತಾಸ್ತ್ರದ ಉಪಸಂಹಾರ ಮಂತ್ರವನ್ನು ಪಠಿಸಿದ ಕೂಡಲೆ ಸಾವಿರ ಕುಸುಮಗಳ ಸುಗಂಧವನ್ನು ಹೊತ್ತ ತಂಗಾಳಿ ತೀಡಿತು; ಲೋಕದಲ್ಲಿ ಶಾಂತಿ ನೆಲೆಸಿತು. ಕೃಷ್ಣನು ರಥದಿಂದ ಇಳಿದು ಅರ್ಜುನನನ್ನಪ್ಪಿ ಆನಂದಬಾಷ್ಪ ಸುರಿಸಿದ. ಅರ್ಜುನನ ಅಗ್ನಿಪ್ರವೇಶ ತಪ್ಪಿತೆಂದು ಅವನಿಗೆ ಬಹು ಸಂತೋಷವಾಗಿತ್ತು. ಜಯದ್ರಥನನ್ನು ಉಳಿಸಿಕೊಳ್ಳಲಾರದ ಕೌರವರೆಲ್ಲರೂ ಅಲ್ಲಿಂದ ಹೊರಟುಹೋದರು. ಅವರ ಕಣ್ಣೆದುರಿಗೇ ಅವನು ಕೊಲ್ಲಲ್ಪಟ್ಟಿದ್ದನು. ಅಪಮಾನ ತಡೆಯಲಾರದೆ ದುರ್ಯೋಧನ ಕಣ್ಣೀರು ಸುರಿಸಿದ.

ಭೀಮನು ದಿಕ್ತಟಗಳೊಡೆಯುವಂತಹ ಸಿಂಹನಾದವನ್ನು ಮಾಡಲು, ಯುಧಿಷ್ಠಿರನಿಗೆ ಜಯದ್ರಥ ಸತ್ತನೆಂದು ಗೊತ್ತಾಯಿತು. ಪಾಂಚಜನ್ಯ ದೇವದತ್ತಗಳ ಮೇಳಗಾನ ಅವನ ಕಿವಿಯನ್ನು ತುಂಬಿತು. ಅರ್ಜುನನು ಕೃಷ್ಣನ ಪಾದಗಳಿಗೆ ನಮಸ್ಕರಿಸಿ, ``ದೇವ, ಇದೆಲ್ಲಾ ನಿನ್ನದೇ ಲೀಲೆ, ನಿನ್ನದೇ ಇಚ್ಛೆ. ನೀನಿಲ್ಲದೆ ಯಾರೂ ಏನನ್ನೂ ಮಾಡಲಾರರು. ಈ ಕಷ್ಟಕೋಟಲೆಗಳ ಮಹಾ ಸಾಗರವನ್ನು ದಾಟಿಸಿ ಸತ್ತ ಮಗುವಿನೆದುರಿಗೆ ನಾನು ಮಾಡಿದ ಪ್ರತಿಜ್ಞೆಯನ್ನುಳಿಸಿಕೊಟ್ಟೆ. ನಿನ್ನ ದಯೆಯಿಂದಲೇ ಈ ಪಾಪಿಗಳೆಲ್ಲ ಸತ್ತಮೇಲೆ ಯುಧಿಷ್ಠಿರನು ರಾಜ್ಯವನ್ನಾಳುವನು. ಸತ್ಯಪಥದಲ್ಲಿ ನೀನೇ ನಮ್ಮ ಮಾರ್ಗದರ್ಶಿ" ಎನ್ನಲು ಕೃಷ್ಣನು ಎಂದಿನ ತನ್ನ ಸುಂದರ ಮಂದಹಾಸವನ್ನು ಬೀರಿದ. ಅರ್ಜುನನಿಗೆ, ``ಇಂದು ನೀನು ಸಾತ್ಯಕಿ ಇಬ್ಬರೂ ಸೇರಿ ಅವರ ಏಳು ಅಕ್ಷೌಹಿಣಿ ಸೈನ್ಯವನ್ನು ನಿರ್ನಾಮ ಮಾಡಿರುವಿರಿ. ನಿಜವಾಗಿ ಹೇಳುವುದಾದರೆ ನಿನಗಿಂತ ಸಾತ್ಯಕಿ ಮಾಡಿರುವ ನಾಶವೇ ಹೆಚ್ಚು. ನೋಡು ರಣರಂಗವನ್ನು!" ಎಂದು ತೋರಿಸಿದ.

ನಂತರ ಅವರು ಯುಧಿಷ್ಠಿರನನ್ನು ನೋಡಬೇಕೆಂದು ವೇಗವಾಗಿ ಹೊರಟರು. ದಾರಿಯಲ್ಲಿ ಕೃಷ್ಣನು, ``ಬೃಹತ್ ಕ್ಷಾತ್ರನು ತೀವ್ರ ತಪಸ್ಸು ಮಾಡಿದ ನಂತರ ಜಯದ್ರಥನೆಂಬ ಮಗನನ್ನು ಪಡೆದ. ಸಾಧಾರಣ ಮನುಷ್ಯರಿಂದ ಸಾಧಾರಣ ರೀತಿಯಲ್ಲಿ ಅವನಿಗೆ ಸಾವಿರುವುದಿಲ್ಲವೆಂದೂ, ಲೋಕೋತ್ತರ ವೀರನಿಂದ ಲೋಕೋತ್ತರವಾದ ಆಯುಧದಿಂದ ಮಾತ್ರವೇ ಸಾಯಬಹುದೆಂದೂ ವರವನ್ನು ಪಡೆದ. ಅದೂ ಸಾಲದೆ, ಯಾರು ಜಯದ್ರಥನ ತಲೆಯನ್ನು ಭೂಮಿಗೆ ಬೀಳಿಸುತ್ತಾರೆಯೋ ಅವರ ತಲೆ ಸಹಸ್ರ ಹೋಳಾಗಿ ಒಡೆದು ಹೋಗಬೇಕೆಂದೂ ವರವನ್ನು ಪಡೆದ. ಅದಕ್ಕೇ ನಾನು ನಿನ್ನ ಕೈಲಿ ಅವನ ತಲೆಯನ್ನು ಹಾರಿಸಿ ಅವನ ತಂದೆಯ ತೊಡೆಯ ಮೇಲೆ ಹಾಕಿಸಿದೆ'' ಎಂದು ಜಯದ್ರಥನ ಜನ್ಮವೃತ್ತಾಂತವನ್ನು ಹೇಳಿದ. ಅಷ್ಟರಲ್ಲಿ ಅವರು ಯುದಿಷ್ಠಿರನಿದ್ದಲ್ಲಿಗೆ ಬಂದರು. ಅರ್ಜುನನನ್ನು ನೋಡಿದೊಡನೆ ಅವನು ರಥದಿಂದಿಳಿದು ಬಂದು ಅವನನ್ನು ಆಲಿಂಗಿಸಿಕೊಡು ಆನಂದಬಾಷ್ಪ ಸುರಿಸಿದ. ``ಎಲ್ಲವೂ ಆ ಭಗವಂತನ ದಯೆ! ಅರ್ಜುನ, ನೀನೂ ಬದುಕಿರುವೆ. ಕೃಷ್ಣ, ನೀನೂ ಬದುಕಿರುವೆ. ನನಗೆಷ್ಟು ಆನಂದವಾಗುತ್ತಿದೆ!" ಎಂದು ಸಾತ್ಯಕಿಯನ್ನೂ ಭೀಮನನ್ನು ಆಲಿಂಗಿಸಿ, ಸಂತೋಷದಿಂದ ಕುಣಿದಾಡಿದ. ``ಕೃಷ್ಣ, ನಿನ್ನೊಬ್ಬನಿಂದಲೇ ಇದೆಲ್ಲವೂ ಸಾಧ್ಯವಾಗಿರುವುದು. ಅರ್ಜುನನ ಈ ಗೆಲುವಿಗೆ ನಿನ್ನ ದಯೆಯೇ ಕಾರಣ. ಅವನು ಸೋಲಬಾರದೆಂಬ ನಿನ್ನಿಚ್ಛೆಯಿಂದ ಮಾತ್ರವೇ ಅವನ ಪ್ರತಿಜ್ಞೆ ಪೂರ್ತಿಯಾದುದು" ಎಂದು ಗದ್ಗದ ಕಂಠದಿಂದ ವಿಧವಿಧವಾಗಿ ಕೊಂಡಾಡಿ ಸ್ತುತಿಸಿದ. ಕೃಷ್ಣನು ``ಇಲ್ಲ ಯುಧಿಷ್ಠಿರ, ಜಯದ್ರಥ ಸತ್ತುದು ನೆನ್ನೆಯ ನಿನ್ನ ಕೋಪಾಗ್ನಿಯಿಂದ. ಸತ್ಪುರುಷನ ಕೋಪವೇ ಈ ಲೋಕದಲ್ಲಿ ಎಲ್ಲಕ್ಕಿಂತ ಹೆಚ್ಚು ಶಕ್ತಿಶಾಲಿ; ಅದೇ ಈ ಅತಿಮಾನುಷ ಕಾರ್ಯಕ್ಕೂ ಕಾರಣ" ಎಂದ.

ಅರ್ಜುನ ಅಜೇಯನೆಂಬ ಭೀಮನ ಮಾತು ನಿಜವೆಂದು ಮೊಟ್ಟಮೊದಲ ಬಾರಿಗೆ ದುರ್ಯೋಧನನಿಗೆ ಅನ್ನಿಸಿತು. ಅವನು ತನ್ನ ಡೇರೆಯಲ್ಲಿ ಇಂದಿನ ಹಾಗೂ ಕಳೆದುಹೋದ ದಿನಗಳ ಘಟನೆಗಳನ್ನು ಧೇನಿಸುತ್ತ ಕುಳಿತ್ತಿದ್ದ. ದ್ರೋಣ ಕೃಪ ಅಶ್ವತ್ಥಾಮ ರಾಧೇಯ ಯಾರೂ ಅರ್ಜುನನನ್ನು ಸರಿಗಟ್ಟಲಾರರೆಂದು ಅವನಿಗೆ ಮನವರಿಕೆಯಾಯಿತು. ಅರ್ಜುನನೊಬ್ಬನೇ ಸಂಚರಿಸಿ ಅಷ್ಟೊಂದು ಸೈನ್ಯವನ್ನು ನಾಶಮಾಡಿದ್ದ. ಎಲ್ಲರ ಕಣ್ಣೆದುರಿಗೇ ಅವನು ಜಯದ್ರಥನನ್ನು ಕೊಂದಿದ್ದ; ಯಾರೂ ಏನೂಮಾಡಲೂ ಸಾಧ್ಯವೇ ಆಗಿರಲಿಲ್ಲ. ಈ ಜನರನ್ನ ನಂಬಿಕೊಂಡು ತಾನು ಕೃಷ್ಣನ ಮಾತನ್ನು ಮೂರ್ಖತನವೆಂದು ತಳ್ಳಿಹಾಕಿದೆನಲ್ಲ! ಹಸ್ತಿನಪುರಕ್ಕೆ ಅವನು ರಾಯಭಾರಿಯಾಗಿ ಬಂದಾಗ ಇವೆಲ್ಲವನ್ನು ಹೇಳಿ ಎಚ್ಚರಿಕೆ ಕೊಟ್ಟಿದ್ದನಲ್ಲವೇ! ಅರ್ಜುನನನ್ನು ಸೋಲಿಸಲು ಸಾಧ್ಯವೇ ಇಲ್ಲವೆಂದು ವಿದುರನೂ ಸಾರಿ ಸಾರಿ ಹೇಳಿದ್ದ. ಆದರೆ ತಾನು ಅವರು ಯಾರ ಮಾತನ್ನೂ ಕೇಳಲಿಲ್ಲ. ದುಃಖದಿಂದ ಮೂಕನಾದ ದುರ್ಯೋಧನನು ದ್ರೋಣನ ಬಳಿ ಹೋಗಿ ತನ್ನ ಸಂಕಟವನ್ನು ತೋಡಿಕೊಂಡ. ``ಆಚಾರ್ಯ, ಆ ಒಬ್ಬ ಅರ್ಜುನನಿಂದ ನಮ್ಮ ಸೈನ್ಯದಲ್ಲಿ ಆದ ನಾಶವನ್ನು ನೋಡು. ನನಗಾಗಿ ಎಷ್ಟುಜನ ರಾಜರು ಪ್ರಾಣ ಒಪ್ಪಿಸಬೇಕಾಯಿತು! ಇಚ್ಛಾಮರಣಿಯಾದ ಭೀಷ್ಮನನ್ನೇ ಅರ್ಜುನ ಶರಪಂಜರದ ಮೇಲೆ ಮಲಗುವಂತೆ ಮಾಡಿದ. ಈ ಹೊತ್ತು ಅರ್ಜುನ ಸಾತ್ಯಕಿ ಇಬ್ಬರೂ ಸೇರಿ ಏಳು ಅಕ್ಷೋಹಿಣಿ ಸೈನ್ಯವನ್ನು ನಾಶಮಾಡಿದರು. ಯುದ್ಧ ಮಾಡಲಾರದ ಹೇಡಿ ನಾನು. ಮಿತ್ರರ ಸಾವನ್ನೆಲ್ಲ ನೊಡುತ್ತ ಬದುಕಿರುವೆನು. ಸಾವಿರ ಅಶ್ವಮೇಧಗಳನ್ನು ಮಾಡಿದರೂ ನನ್ನ ಪಾಪ ತೊಳೆದು ಹೋಗದು. ನಿನ್ನ ಕೂದಲು ಕೊಂಕಲೂ ಬಿಡುವುದಿಲ್ಲ ಎಂದು ಜಯದ್ರಥನಿಗೆ ವಚನ ಕೊಟ್ಟ ನಾನು ಮಿತ್ರದ್ರೋಹವೆಸಗಿದಂತಾಯಿತು. ವೀರನಾದ ಜಲಸಂಧನನ್ನು ನೆನೆಸಿಕೊಂಡರೂ ನನ್ನ ಎದೆಯೊಡೆಯುವಂತಾಗುತ್ತದೆ. ಸುದಕ್ಷಿಣ ಶ್ರುತಾಯುಸ್ಸು ಅಚ್ಯುತಾಯಸ್ಸು ಶ್ರುತಾಯುಧ ಆಲಂಬುಷ ವಿಂದಾನುವಿಂದರು ಎಲ್ಲರೂ ಸತ್ತರು. ಬದುಕಿರಲು ನನಗೆ ಇನ್ನೇನು ಉಳಿದಿದೆ? ಜಯದ್ರಥ ಭೂರಿಶ್ರವಸ್ಸು ಮುಂತಾದ ನನ್ನ ಗೆಳೆಯರ ಸಾವಿನ ಸೇಡನ್ನು ನಾನು ತೀರಿಸಿಕೊಳ್ಳುವೆ. ಪಾಂಡವರನ್ನೂ ಪಾಂಚಾಲರನ್ನು ಕೊಂದು ಸತ್ತವರ ಆತ್ಮಕ್ಕೆ ಶಾಂತಿಯನ್ನುಂಟ್ಟು ಮಾಡುವೆ. ಅವರನ್ನು ಕೊಲ್ಲಲಾಗದಿದ್ದರೆ ನಾನಾದರೂ ಸತ್ತು ಸ್ವರ್ಗದಲ್ಲಿರುವ ಅವರನ್ನು ಸೇರಿಸಿಕೊಳ್ಳುವೆ. ಈಗ ನಾನು ಹೋಗುತ್ತೇನೆ``.

ರಾಜನ ದುಃಖವನ್ನು ನೋಡಿ ದ್ರೋಣನಿಗೆ ಅಯ್ಯೋ ಎನ್ನಿಸಿತು. ``ದುರ್ಯೋಧನ, ಅರ್ಜುನ ಅಜೇಯನೆಂಬುದು ಗೊತ್ತಿರುವ ಸಂಗತಿ. ಆ ಸತ್ಯವನ್ನು ನಾವು ಒಪ್ಪಿಕೊಳ್ಳಲೇ ಬೇಕು. ಹಿಂದಿನದನ್ನು ಚಿಂತಿಸುವುದು ಬೇಡ; ಆ ಬಗ್ಗೆ ಏನು ತಾನೆ ಮಾಡಬಲ್ಲೆವು? ಈಗ ನಾನು ನಿನ್ನ ಶತ್ರುಗಳನ್ನು ಕೊಲ್ಲುವವರೆಗೆ ಈ ನನ್ನ ಕವಚವನ್ನು ತೆಗೆಯುವುದಿಲ್ಲ. ನನ್ನ ದೇಹದಲ್ಲಿ ಉಸಿರಿರುವ ವರೆಗೆ ಹೋರಾಡುತ್ತೇನೆ, ಇಲ್ಲವೇ ಸಾಯುತ್ತೇನೆ. ಅಶ್ವತ್ಥಾಮನೂ ನನಗೆ ನೆರವಾಗುತ್ತಾನೆ. ಈ ರಾತ್ರಿ ಅವರಿಗೆ ನಿದ್ರಿಸಲೂ ಬಿಡದೆ ಯುದ್ದವನ್ನು ಮುಂದುವರೆಸುತ್ತೇನೆ" ಎಂದು ದ್ರೋಣನು ರಣರಂಗದ ಕಡೆಗೆ ಹೊರಟನು. ದುರ್ಯೋಧನ ರಾಧೇಯರೂ ರಣರಂಗಕ್ಕೆ ಹೊರಟನು. ದಾರಿಯಲ್ಲಿ ದುರ್ಯೋಧನನು, ``ಹೇಗೆ ಅರ್ಜುನನು ವ್ಯೂಹವನ್ನು ಬೇಧಿಸಿ ನಾವೆಲ್ಲ ರಕ್ಷಿಸುತ್ತಿದ್ದರೂ ಸಹ ಜಯದ್ರಥವನ್ನು ಕೊಂದಿರುವನು ನೋಡು! ನನ್ನ ಅರ್ಧಕ್ಕಿಂತ ಹೆಚ್ಚು ಸೈನ್ಯ ಅರ್ಜುನ ಸಾತ್ಯಕಿ ಇಬ್ಬರಿಂದಲೇ ನಾಶವಾಗಿದೆ. ಪ್ರೀತಿಯ ಶಿಷ್ಯನೆಂದು ಆಚಾರ್ಯನೇ ಅವನನ್ನು ವ್ಯೂಹದೊಳಕ್ಕೆ ಬಿಟ್ಟಿರಬೇಕು ಅನ್ನಿಸುತ್ತದೆ. ಇಲ್ಲವಾದರೆ ರಾಧೇಯ, ಇದು ಹೇಗೆ ಹೀಗಾಗುವುದು ಸಾಧ್ಯವೆ? ಅರ್ಜುನ ದ್ರೋಣನನ್ನು ಮೀರಿ ಹೋಗುವುದೆಂದರೇನು? ದ್ರೋಣನು ಜಯದ್ರಥನಿಗೆ ನಿನ್ನನ್ನು ರಕ್ಷಿಸುತ್ತೇನೆಂದು ಮಾತು ಕೊಟ್ಟು, ಅನಂತರ ಅರ್ಜುನನನ್ನು ವ್ಯೂಹದೊಳಕ್ಕೆ ಬಿಡುವುದರ ಮೂಲಕ ದ್ರೋಹವೆಸಗಿದ್ದಾನೆ. ನನಗಿದು ಗೊತ್ತಿದ್ದಿದ್ದರೆ ನಾನು ಜಯದ್ರಥನನ್ನು ಅವನ ರಾಜ್ಯಕ್ಕೆ ಹೋಗೆಂದು ಕಳಿಸಿಬಿಡುತ್ತಿದ್ದೆ. ಈ ಸತ್ತಿರುವ ಸೈನಿಕರನ್ನು ನೋಡು. ಒಬ್ಬೊಬ್ಬನ ಮೈಯಲ್ಲೂ ಅರ್ಜುನನ ಹೆಸರಿರುವ ಬಾಣಗಳು. ನನ್ನ ಸೋದರರೆಷ್ಟು ಜನ ಈ ದಿನ ಸತ್ತರು! ನನಗೆ ದ್ರೋಣನ ಮೇಲೆ ಬಂದಿರುವ ಸಿಟ್ಟು ಅಷ್ಟಿಷ್ಟಲ್ಲ" ಎಂದು ಅಲವತ್ತುಕೊಂಡನು. ಅದಕ್ಕೆ ರಾಧೇಯನು, ``ನೀನು ಆಚಾರ್ಯನ ಬಗ್ಗೆ ಹೀಗೆಲ್ಲ ಮಾತನಾಡಬಾರದು. ಅವನಿಂದಾದಷ್ಟೂ ಅವನು ಯುದ್ಧ ಮಾಡುತ್ತಿದ್ದಾನೆ. ಈ ವೃದ್ಧಾಪ್ಯದಲ್ಲಿ ಅವನು ನಿನಗೆ ಎಷ್ಟೊಂದು ನೆರವಾಗುತ್ತಿರುವನಲ್ಲ! ಅದಕ್ಕೆ ನೀನು ಕೃತಜ್ಞನಾಗಿರಬೇಕು. ದ್ರೋಣನಿಗೆ ಅರ್ಜುನನನ್ನು ಸೋಲಿಸಲು ಆಗುವುದಿಲ್ಲ. ಅರ್ಜುನನೇ ದ್ರೋಣನನ್ನು ಉಪಾಯವಾಗಿ ದಾಟಿಕೊಂಡು ಹೋಗಿದ್ದಾನೆ. ಇದಕ್ಕಾಗಿ ನೀನು ದ್ರೋಣನನ್ನು ಆಕ್ಷೇಪಿಸುವುದು ಸರಿಯಲ್ಲ. ನಾವೆಲ್ಲರೂ ನಮಗೆ ಸಾಧ್ಯವಿದ್ದಷ್ಟು ಚೆನ್ನಾಗಿ ಹೋರಾಡಿದ್ದೇವೆ; ಆದರೂ ಜಯದ್ರಥನನ್ನು ರಕ್ಷಿಸಲಾಗಲಿಲ್ಲ. ಮಾನವನ ಪೌರುಷಕ್ಕಿಂತ ವಿಧಿಯ ಬಲವೇ ಮಿಗಿಲು ಎಂದಷ್ಟೇ ಹೇಳಬಲ್ಲೆ. ದುರ್ಯೋಧನ, ನಾವು ಏನನ್ನಾದರೂ ಮಾಡಲು ನಮ್ಮ ಕೈಲಾದಷ್ಟು ಪ್ರಯತ್ನಪಡುತ್ತೇವೆ. ವಿಧಿ ಅದಕ್ಕೆ ವ್ಯತಿರಿಕ್ತವಾಗಿದ್ದರೆ, ಅದಕ್ಕಾಗಿ ನಾವು ಪರಸ್ಪರ ಬೈದುಕೊಳ್ಳುವುದು ತಪ್ಪು. ವಿಧಿ ನಾವು ಮಾಡುವುದನ್ನು ಕಾದುಕೊಂಡೇ ಇರುತ್ತವೆ. ಕೊನೆಗೆ ಗೆಲ್ಲುವುದು ವಿಧಿಯೇ. ಈವರೆಗೆ ನಾವು ಮಾಡಿದುದನ್ನೆಲ್ಲ ವಿಧಿಯು ವಿರೋಧಿಸಿದೆ. ಪ್ರಯತ್ನ ನಮ್ಮ ಕೈಯಲ್ಲಿ; ಫಲಿತ ವಿಧಿಯ ಕೈಯಲ್ಲಿ. ವಿಧಿಯನ್ನು ಬೈದಾದರೂ ಎನು ಪ್ರಯೋಜನ? ನಾವು ನಾಳಿನ ಭರವಸೆಯನ್ನು ಕಳೆದುಕೊಳ್ಳಬಾರದು. ಗೆಳೆಯ, ಈ ಖಿನ್ನತೆಯನ್ನು ತೊರೆದು ಹೋರಾಡು. ನಾವೆಲ್ಲರೂ ಹೋರಾಡೋಣ. ಗೆಲ್ಲುವೆವೋ ಸೋಲುವೆವೋ ಎಂಬುದನ್ನು ನಿರ್ಧರಿಸುವುದು ನಮ್ಮ ಕೈಯಲ್ಲಿಲ್ಲ ``ಎಂದನು. ಅಷ್ಟುಹೊತ್ತಿಗೆ ಅವರು ಸೈನ್ಯದ ಅಂಚಿಗೆ ಬಂದಿದ್ದರು. ಪಾಂಡವ ಸೈನ್ಯವೂ ಯುದ್ದಕ್ಕೆ ಸಿದ್ಧವಾಗಿತ್ತು.

ಅದೊಂದು ಭೀಕರ ಯುದ್ದ. ಕಾಳರಾತ್ರಿಯ ಕಗ್ಗತ್ತಲಿನಲ್ಲಿ ಎದುರಾಳಿ ಯಾರೆಂಬುದನ್ನೂ ತಿಳಿಯದೆ ಮಾಡುವ ಕೊಲೆಗಳ ಸರಮಾಲೆ! ಎರಡೂ ಸೈನ್ಯಗಳೂ ಕತ್ತಲಲ್ಲೇ ಒಂದರಮೇಲೊಂದು ಬಿದ್ದವು. ಧ್ವನಿಗಳ ಆಧಾರದ ಮೇಲೆಯೇ ಒಬ್ಬರನ್ನೊಬ್ಬರು ಗುರುತಿಸಬೇಕು.ಕೃಷ್ಣ, ರಾಧೇಯ, ದುರ್ಯೋಧನನ ಜೊತೆಗೆ ದ್ರೋಣನು ಉತ್ಸಾಹದಿಂದ ಪಾಂಡವ ಸೇನೆಯ ಮೇಲೆ ಬಿದ್ದು ಹೋರಾಡಿದನು. ತಪ್ಪಿಸಿಕೊಳ್ಳುವುದಕ್ಕೇ ಆಗದಂತಹ ಅವರ ಮುತ್ತಿಗೆಯಿಂದ ಪಾಂಡವಸೇನೆಯನ್ನು ಕಾಪಾಡಲು ಭೀಮನು ಮುಂದಾದನು. ದುರ್ಯೋಧನ ಯುಧಿಷ್ಠಿರರ ನಡುವೆ ಕೊನೆಯಿಲ್ಲವೇನೋ ಎಂದೆನಿಸುವಂತಿದ್ದ ದ್ವಂದ್ವವನ್ನು ದ್ರೋಣನು ಬಂದು ಸಂಕುಲವನ್ನಾಗಿಸಿದನು. ಗುರಿಯಿಲ್ಲದ ಬಾಣಗಳು ಕತ್ತಲಲ್ಲಿ ಎಲ್ಲೆಂದರಲ್ಲಿ ಚೆಲ್ಲಾಡಿದವು. ಶಕ್ತ್ಯಾಯುಧಗಳು ಮಿಂಚಿನಂತೆ ಹೊಳೆದು ಮಾಯವಾಗುತ್ತಿದ್ದವು. ಸೈನ್ಯನಾಶದ ಕಾಲಪುರುಷನಾಗಲು ದ್ರೋಣನಿಗೂ ಭೀಮನಿಗೂ ಸ್ಪರ್ಧೆ ಏರ್ಪಟ್ಟಂತಿತ್ತು. ಕತ್ತಲಲ್ಲೂ ಭೀಮನ ಕೈಗೆ ಕೆಲವು ಧಾರ್ತರಾಷ್ಟ್ರರು ಸಿಕ್ಕು ಹತರಾದರು. ಸೋಮದತ್ತನು ಸಾತ್ಯಕಿಯನ್ನು ದ್ವಂದ್ವದಲ್ಲಿ ಸಿಲುಕಿಸಿಕೊಂಡನು. ತನ್ನ ಮಕ್ಕಳು ಶಲ ಭೂರಿಶ್ರವಸ್ಸು ಇಬ್ಬರನ್ನೂ ಒಂದೇ ದಿನ ಕಳೆದುಕೊಂಡು ದುಃಖಿತನಾಗಿದ್ದ ಅವನ ಕೋಪ ಅಸಾಧ್ಯವಾಗಿತ್ತು. ಯುದ್ಧ ಭೀಕರವಾಗುತ್ತಿದ್ದಂತೆ ಸಾತ್ಯಕಿ ಮೇಲುಗೈ ಸಾಧಿಸುತ್ತಿದ್ದಂತೆ ದುರ್ಯೋಧನನು ವೃದ್ಧನಿಗೆ ನೆರವಾಗಬೇಕಾಯಿತು. ಇತ್ತ ಧೃಷ್ಟದ್ಯುಮ್ನನು ಸಾತ್ಯಕಿಯ ಸಹಾಯಕ್ಕೆ ನಿಂತನು. ಮೂರ್ಛಿತನಾದ ಸೋಮದತ್ತನನ್ನು ರಣರಂಗದಿಂದ ದೂರ ಸಾಗಿಸಲಾಯಿತು. ಅಶ್ವತ್ಥಾಮನು ಈಗ ಸಾತ್ಯಕಿಯನ್ನೆದುರಿಸಿದನು. ಘಟೋತ್ಕಚನು ಅಶ್ವತ್ಥಾಮನೆದುರಿಗೆ ಬಂದು ನಿಂತನು. ಆ ಕತ್ತಲಲ್ಲಿನ ಅವನ ಭೀಕರ ರೂಪ, ವಿಕಾರವಾದ ಚೀತ್ಕಾರ, ಇಡೀ ಸೈನ್ಯವನ್ನೇ ನಡುಗಿಸುವಂತಿತ್ತು. ಅವನ ಜೊತೆಯಲ್ಲಿ ರಾಕ್ಷಸರ ಹಿಂಡೇ ಬಂದಿತ್ತು. ರಾತ್ರಿಯಾದ್ದರಿಂದ ರಾಕ್ಷಸರಿಗೆ ಸಹಜವಾಗಿಯೇ ಶಕ್ತಿ ಹೆಚ್ಚು.ಘಟೋತ್ಕಚನು ಮಾಯಾಯುದ್ಧವನ್ನು ಪ್ರಾರಂಭಿಸಿದನು. ಅಶ್ವತ್ಥಾಮನು ಇದಕ್ಕೆಲ್ಲ ಹೆದರುವ ಅಂಜುಕುಳಿಯೇನಲ್ಲ. ಅವನು ಮಾಯೆಯನ್ನು ಅಸ್ತ್ರಗಳಿಂದ ನಿವಾರಿಸತೊಡಗಿದನು. ಇದರಿಂದ ಕೆರಳಿದ ಘಟೋತ್ಕಚನು ಇನ್ನೂ ಭೀಕರನಾದನು. ಅವರಿಬ್ಬರ ದ್ವಂದ್ವಯುದ್ಧವು ನೋಡುವಂತಿತ್ತು. ಘತೋತ್ಕಚನ ಧನುರ್ವಿದ್ಯಾನೈಪುಣ್ಯವನ್ನು ಅದುವರೆಗೆ ಯಾರೂ ನೋಡಿರಲಿಲ್ಲ. ಅಶ್ವತ್ಥಾಮನೆಸೆದ ಚಕ್ರಾಯುಧವನ್ನು ಅಣುವಾಗಿ ತಪ್ಪಿಸಿಕೊಂಡ ಘಟೋತ್ಕಚನು ಒಮ್ಮೆಲೇ ಮುಗಿಲೆತ್ತರಕ್ಕೆ ಬೆಳೆದು ಪುನಃ ಮಾಯಾಯುದ್ಧವನ್ನಾರಂಭಿಸಿದನು. ಅಶ್ವತ್ಥಾಮನೆದುರಿಗೆ ಅದು ನಡೆಯದೆ ಪುನಃ ಸಾಮಾನ್ಯನಂತೆ ಯುದ್ದಮಾಡಬೇಕಾಗಿ ಬಂದಿತು. ರಾಕ್ಷಸ ಸಮೂಹವನ್ನು ಕಂಡು ಹೆದರಿದ ರಾಜನನ್ನು ಅಶ್ವತ್ಥಾಮನು ಸಮಾಧಾನ ಮಾಡಿ ಅವರ ವಿಚಾರವನ್ನು ತನಗೆ ಬಿಡುವಂತೆ ಹೇಳಲು, ದುರ್ಯೋಧನನು ಶಕುನಿಯಿದ್ದಲ್ಲಿಗೆ ಹೋಗಿ, ಅವನನ್ನು ಪಾಂಡವರೊಡನೆ ಹೋರಾಡಲು ಕಳುಹಿಸಿದನು.* * * * ಅಶ್ವತ್ಥಾಮನು ಇಷ್ಟೊಂದು ಭಯಂಕರನಾದದ್ದನ್ನು ಪಾಂಡವರು ನೋಡಿದ್ದು ಇದೇ ಮೊದಲು. ಶಂಕರನಂತೆ ನಿಂತ ಅವನ ಬಾಣಗಳನ್ನು ಘಟೋತ್ಕಚನ ಹೊರತು ಇನ್ನಾರೂ ತಡೆಯಲಾರದೆ ಹೋದರು. ಘಟೋತ್ಕಚನೂ ಪಾಂಚಾಲ ರಾಜಕುಮಾರರೂ ಚೆನ್ನಾಗಿಯೇ ಯುದ್ಧಮಾಡಿದರೂ, ಅಶ್ವತ್ಥಾಮನು ಪಾಂಚಾಲ ರಾಜಕುಮಾರರನ್ನು ಕೊಂದಲ್ಲದೆ ಘಟೋತ್ಕಚನನ್ನೂ ನೋಯಿಸಿದನು. ಮೂರ್ಛೆಹೋದ ಅವನನ್ನು ರಣರಂಗದಿಂದ ಕೆಲಕಾಲ ಹೊರಗೊಯ್ಯಲಾಯಿತು. ರಾಕ್ಷಸಸೇನೆ ಅಶ್ವತ್ಥಾಮನಿಂದ ಬಹುವಾಗಿ ಘಾಸಿಗೊಳಗಾಯಿತು. ಮಕ್ಕಳನ್ನು ಕಳೆದುಕೊಂಡ ದ್ರುಪದ ಘೋರವಾಗಿ ಯುದ್ದಮಾಡಿದನು. ಸೋಮದತ್ತನ ತಂದೆ ಬಾಹ್ಲೀಕ ಮತ್ತು ಭೀಮನ ನಡುವೆ ದ್ವಂದ್ವವೇರ್ಪಟ್ಟಿತು. ರಣರಂಗದಲ್ಲಿ ಅವನು ಯಾವ ಯುವಕನಿಗೂ ಕಡಿಮೆಯಿಲ್ಲದಂತೆ ಹೋರಾಡುತ್ತಿದ್ದನು. ಭೀಮನು ಅವನನ್ನು ಬಲವಾದ ಒಂದು ಗದಾಪ್ರಹಾರದಿಂದ ಕೊಂದುಹಾಕಿದನು. ಕುರುವಂಶದ ಹಿರಿಯನೊಬ್ಬನು ಬಿದ್ದನೆಂದು ಹಾಹಾಕಾರವುಂಟಾಯಿತು. ಭೀಷ್ಮನೂ ಸಹ ಅವನಿಗಿಂತ ಚಿಕ್ಕವನು. ಇದನ್ನು ನೋಡಿದ ಧಾರ್ತರಾಷ್ಟ್ರರು ಅವನ ಮೇಲೇರಿಬಂದರು. ಅವರಲ್ಲಿ ಹತ್ತು ಜನರನ್ನು ಕೊಂದದ್ದಲ್ಲದೆ, ತನ್ನ ಸೈನ್ಯದೊಂದಿಗೆ ಬಂದಿದ್ದ ಶಕುನಿಯು ಸಹೋದರರನ್ನು ಭಿಮನು ಕೊಂದು ಹಾಕಿದನು. ದ್ರೋಣನು ಯುಧಿಷ್ಥಿರನ ಮೇಲೆ ತನ್ನಲ್ಲಿದ್ದ ಅಸತ್ರಗಳನ್ನೆಲ್ಲ ಪ್ರಯೊಗಿಸಿದನು. ಅವೆಲ್ಲವೂ ನಿಷ್ಫಲವಾಗಲು, ಬ್ರಹ್ಮಾಸ್ತ್ರವನ್ನೇ ಅಭಿಮಂತ್ರಿಸಿದನು. ಯುಧಿಷ್ಠಿರನು ಅದನ್ನು ಬ್ರಹ್ಮಾಸ್ತ್ರದಿಂದಲೇ ನಿವಾರಿಸಿದನು. ದ್ರೋಣನು ಕೊನೆಗೆ ಹಿಂತೆಗೆದು ತನ್ನ ಗಮನವನ್ನು ಬೇರೆಡೆಗೆ ಹರಿಸಿದನು. ಭಿಮಾರ್ಜುನರಿಬ್ಬರೂ ಮುಂದೆ ಬಂದು ಎರಡು ಕಡೆಗಳಿಂದ ದ್ರೋಣನನ್ನೆದುರಿಸಿದರು. ಕೌರವ ಸೈನ್ಯವು ಈಗ ಕರಗತೊಡಗಿತು. ಸಹೋದರರಿಬ್ಬರೂ ದ್ರೋಣನ ಮೇಲೆ ಬಾಣಗಳ ಮಳೆಯನ್ನೇ ಸುರಿಸಿದರು. ಮೃತ್ಯುವಿನ ಈ ರುದ್ರತಾಂಡವದಿಂದ ದು:ಖಿತನಾದ ರಾಜನನ್ನು ರಾಧೇಯನು ಸಮಾಧಾನಪಡಿಸಿ, ತನ್ನ ಪ್ರತಾಪವನ್ನು ಹೇಳಿಕೊಂಡು, ತಾನೇ ಅರ್ಜುನನನ್ನು ಎದುರಿಸಿ ಶಕ್ತ್ಯಾಯುಧದಿಂದ ಅವನನ್ನು ಕೊಲ್ಲುತ್ತೇನೆಂದು ಹೊರಟನು. ಈ ಮಾತನ್ನು ಕೇಳುತ್ತಿದ್ದ ಕೃಪನು, ``ಆಹಾ! ಏನು ಶೌರ್ಯ ರಾಧೇಯನದು! ಎಲ್ಲವೂ ಮಾತಿನಲ್ಲೇ! ಕೆಲವೇ ತಿಂಗಳ ಹಿಂದೆ ವಿರಾಟನ ಗೋವುಗಳನ್ನು ಹಿಡಿಯುವಾಗ ನೋಡಲಿಲ್ಲವೆ ಇವನ ಸೌರ್ಯವನ್ನು! ಮಾತು ಶೋಭಿಸುವುದು ಬ್ರಾಹ್ಮಣನಿಗೆ ಮಾತ್ರ. ಕ್ಷತ್ರಿಯನಾದವನು ಕಾರ್ಯ ಮಾಡಿ ತೋರಿಸಬೇಕು. ಸುಮ್ಮನೆ ಮಾಗಿಯ ಮೇಘದಂತೆ ವ್ಯರ್ಥವಾಗಿ ಬಡಬಡಿಸಿದರೆ ಏನು ಪ್ರಯೋಜನ?" ಎಂದು ಛೇಡಿಸಿದನು. ರಾಧೇಯನು, ``ಯುಧಿಷ್ಠಿರನು ಧರ್ಮವನ್ನು ಬಿಟ್ಟುಹೋಗುವವನಲ್ಲ; ಅರ್ಜುನ ವೀರರಲ್ಲಿ ವೀರ; ಅವರಿಗೆ ಕೃಷ್ಣನ ಸಹಾಯವಿದೆ; ಇದೆಲ್ಲವೂ ಸರಿಯೇ. ಆದರೆ ಅರ್ಜುನನನ್ನು ನಾನು ಅವರಪ್ಪನೇ ಕೊಟ್ಟಿರುವ ಶಕ್ತ್ಯಾಯುಧದಿಂದ ಗೆದ್ದು ನನ್ನ ಏಕೈಕ ಮಿತ್ರನಾದ ದುರ್ಯೋಧನನನ್ನು ಸಂತೋಷಪಡಿಸುತ್ತೇನೆ. ವಿಜಯಶ್ರೀ ಕೊನೆಗೆ ಯಾರಿಗೆ ಮಾಲೆ ಹಾಕುವಳೋ ಯಾರಿಗೆ ಗೊತ್ತು? ಈವರೆಗೇನೋ ಅವಳು ಪಾಂಡವರ ಪರವಾಗಿದ್ದಾಳೆ. ಪಾಂಡವರು ಹೆಚ್ಚು ಬಲಶಾಲಿಗಳೆಂದು ನಾನೊಪ್ಪುವುದಿಲ್ಲ. ಈವರೆಗೆ ಅದೃಷ್ಟ ಅವರ ಕಡೆಗಿದೆ. ನನ್ನಿಂದ ಸಾಧ್ಯವಾದಷ್ಟೂ ಹೋರಾಡುವೆನು; ಫಲವು ವಿಧಿಯ ಕೈಯಲ್ಲಿರುವಂಥದು. ವಿಧಿಯೇ ಹೆಚ್ಚಿನದು, ಅರ್ಜುನನಲ್ಲ. ಕೃಪ, ನೀನು ಪಾಂಡವರ ಪಕ್ಷಪಾತಿ. ನಿನ್ನ ಮಾತು ಯಾವಾಗಲೂ ಅವರ ಕಡೆಗೇ. ಎಂದೇ ಈಗ ನಿನ್ನ ನಾಲಿಗೆಯನ್ನು ಸೀಳುವೆನು" ಎನ್ನುತ್ತ ಕತ್ತಿಯನ್ನು ಹಿರಿದನು. ಅಶ್ವತ್ಥಾಮನು ಸಮಯಕ್ಕೆ ಸರಿಯಾಗಿ ಬಂದು ಅವನನ್ನು ತಡೆದು, ``ನನ್ನ ಸೋದರಮಾವನ ಮೇಲೆ ಏರಿಹೋಗುವೆಯಾ ನಿನ್ನನ್ನು ಕೊಲ್ಲುತ್ತೇನೆ" ಎಂದು ನುಗ್ಗಿದನು. ದುರ್ಯೋಧನನು ಬಂದು ಅವನನ್ನು ತಡೆದನು. "ಅಶ್ವತ್ಥಾಮ, ಸಾಕು ನಿಲ್ಲಿಸು. ವ್ಯೆಯಕ್ತಿಕ ಜಗಳಗಳಿಗೆ ಇದು ಸಮಯವಲ್ಲ. ಯುದ್ದವನ್ನು ಗೆಲ್ಲಲು ನಾನು ನಿಮ್ಮೆಲ್ಲರನ್ನು ಅವಲಂಬಿಸಿರುವೆನು. ಪಾಂಡವಸೇನೆಯು ಈಗಲೂ ನಮ್ಮ ಮೇಲೆ ನುಗ್ಗಿ ಬರುತ್ತಿರುವುದು. ನೀನೀಗ ರಾಧೇಯನ ಮೇಲಿನ ಕೋಪನನ್ನು ಬಿಡು" ಎಂದನು. ಅಶ್ವತ್ಥಾಮನು ದುರ್ಯೋಧನನ ಮಾತನ್ನು ತೆಗೆದುಹಾಕಲಾರದೆ ಮನಸ್ಸನ್ನು ಸಮಾಧಾನಮಾಡಿಕೊಂಡನು. ರಾಧೇಯನು ಬಿಲ್ಲನ್ನು ತೆಗೆದುಕೊಂಡು ಪಾಂಡವಸೈನ್ಯದ ಕಡೆಗೆ ಹೊರಟನು.* * * * ಇಂದ್ರನು ಅಸುರರ ಮೇಲೆ ಬಿದ್ದಂತೆ ರಾಧೇಯನು ಪಾಂಡವಸೇನೆಯ ಮೇಲೆ ಒಮ್ಮೆಲೇ ಆಕ್ರಮಣಮಾಡಿದನು. ಅವನ ಬಾಣಗಳ ಹೊಡೆತದಿಂದ ತುಂಬ ನಷ್ಟವನ್ನನುಭವಿಸಿದ ಸೈನ್ಯವು ಚೆದುರಿ ದಿಕ್ಕಾಪಾಲಾಯಿತು. ಸೈನ್ಯದ ಸಂರಕ್ಷಣೆಗೆಂದು ಅರ್ಜುನನು ಧಾವಿಸಿ ಬಂದನು. ತನ್ನ ಜೊತೆಗೆ ಅರ್ಜುನನು ಯುದ್ಧಕ್ಕೆ ಬಂದುದ್ಧನ್ನು ನೋಡಿ ನಿರೀಕ್ಷೆಯಿಂದ ರಾಧೇಯನ ಕಣ್ಣುಗಳು ಮಿನುಗಿದವು. ಕೇವಲ ನಕ್ಷತ್ರಗಳ ಬೆಳಕಿನಲ್ಲಿ ಈ ಇಬ್ಬರು ವೀರರೂ ಪ್ರಾಣವನ್ನು ಪಣವಾಗಿಟ್ಟು ಹೋರಾಡಿದರು. ಒಂದು ಹಂತದಲ್ಲಿ ರಾಧೇಯನಿಗೆ ರಥವಾಗಲಿ ಬಿಲ್ಲಾಗಲಿ ಇಲ್ಲದೆ ಹೋಗಲು, ದುರ್ಯೋಧನನು ಅರ್ಜುನನ ಮೇಲೆ ಕೋಪಗೊಂಡು, ಪಾಂಡವರೆಲ್ಲರನ್ನೂ ನಿರ್ನಾಮ ಮಾಡುವೆನೆಂದು ಗೆಳೆಯನಿಗೆ ಸಹಾಯ ಮಾಡುವುದಕ್ಕೆ ಹೋದನು. ಕೃಪನು ಅಲ್ಲಿದ್ದ ಅಶ್ವತ್ಥಾಮನಿಗೆ, ``ದುರ್ಯೋಧನನೇ ಅರ್ಜುನನ ಮೇಲೇರಿಹೋಗಿದ್ದಾನೆ. ಪಾಂಡವರನ್ನು ಕೊಲ್ಲಬಹುದೆಂದು ಅವನ ಎಣಿಕೆ. ಈಗ ನೀನು ಹೋಗಿ ರಾಜನನ್ನು ರಕ್ಷಿಸಬೇಕು. ಇಲ್ಲವಾದರೆ ಅವನು ಸಾಯಲು ತಡವಾಗುವುದಿಲ್ಲ. ಅವನ ಮೇಲಿರುವ ಸಿಟ್ಟಿಗೆ ಪಾಂಡವರು ಅವನನ್ನು ಸುಟ್ಟೇಹಾಕಿ ಬಿಡಬಹುದು" ಎಂದನು. ಅಶ್ವತ್ಥಾಮನು ಬೇಗನೆ ಅಲ್ಲಿಗೆ ಹೋಗಿ, "ದುರ್ಯೋಧನ, ನಾನಿಲ್ಲಿ ಇರುವಾಗ ನೀನೇಕೆ ಯುದ್ದ ಮಾಡಬೇಕು? ನಾವೆಲ್ಲ ಇರುವಾಗ ನೀನು ಮುಂಚೂಣಿಗೆ ಬರುವ ಅಗತ್ಯವಿಲ್ಲ. ನಾನು ಅರ್ಜುನನೊಡನೆ ಯುದ್ಧ ಮಾಡುವೆನು. ನೀನು ದೂರ ನಿಂತು ನೋಡುತ್ತಿರು" ಎನ್ನಲು ದುರ್ಯೋಧನ, ``ನನಗೆ ಭಯವಾಗಿದೆ. ಆಚಾರ್ಯನಾದ ನಿನ್ನ ತಂದೆ ತನ್ನ ಪ್ರಿಯಶಿಷ್ಯರಾದ ಪಾಂಡವರನ್ನು ರಕ್ಷಿಸುತ್ತಿರುವನು. ಇತ್ತಿಚೆಗೆ ಉದಾಸೀನನಾಗಿರುವ ನಿನ್ನನ್ನೂ ನಿನ್ನ ತಂದೆಯ ಹಾಗೆಯೇ ಅಂದುಕೊಂಡೆ. ನಿನ್ನ ಶೌರ್ಯವು ಇನ್ನೂ ಸುಪ್ತವಾಗಿಯೇ ಇದೆ. ಯುಧಿಷ್ಠಿರನನೋ ದ್ರೌಪದಿಯನ್ನೊ ಮೆಚ್ಚಿಸಲು ನೀನು ಹೀಗಿರುವೆ ಎಂದುಕೊಂಡಿದ್ದೇನೆ. ನನ್ನ ಮೇಲೆ ಪ್ರಿತಿಯಿರುವ ಎಲ್ಲರೂ ದುರದೃಷ್ಟದಿಂದ ಇಲ್ಲವೇ ಸೋತಿದ್ದಾರೆ, ಇಲ್ಲವೇ ಸತ್ತಿದ್ದಾರೆ. ಈಗ ನಾನು ಪಾಂಡವ ಸೈನ್ಯನಾಶಕ್ಕೆ ನಿನ್ನ ಮೇಲೆ ಅವಲಂಬಿಸಬೇಕಾಗಿದೆ. ಹೋಗು ಅವರೊಡನೆ ಹೋರಾಡಿ ಅವರನ್ನು ಬೇಗನೆ ಯಮಸದನಕ್ಕಟ್ಟು" ಎಂದನು. ಅದಕ್ಕೆ ಅಶ್ವತ್ಥಾಮನು, ``ಹೌದು! ನೀನು ಹೇಳುವುದು ಸರಿ. ನನಗೂ ನಮ್ಮಪ್ಪನಿಗೂ ಪಾಂಡವರನ್ನು ಕಂಡರೆ ಮೆಚ್ಚುಗೆ. ಆದರೆ ನಿನ್ನನ್ನು ಕಂಡರೂ ಪ್ರೀತಿಯಿದೆ. ಯುದ್ಧಮಾಡುವಾಗ ನಾವು ಪಾಂಡವಪ್ರೀತಿಯನ್ನು ದೂರವಿಟ್ಟು ಯುದ್ಧ ಮಾಡುವೆವು. ನಾನೀಗ ರಾಧೇಯ, ಶಲ್ಯ, ಕೃಪ, ಕೃತವರ್ಮ ಹಾಗೂ ನನ್ನ ತಂದೆಯೊಂದಿಗೆ ಸೇರಿ ಪಾಂಡವರೊಡನೆ ಹೋರಾಡುವೆವು. ನಿನ್ನದು ತುಂಬ ಸಂಶಯದ ಸ್ವಭಾವ. ನಮ್ಮ ಮೇಲೆ ನಂಬಿಕೆಯಿಲ್ಲ. ಇದು ಒಳ್ಳೆಯದಲ್ಲ. ಉಸಿರಿರುವವರೆಗೂ ನಾನು ಹೋರಾಡುವೆ, ನೋಡುತ್ತಿರು" ಎಂದು ಪಾಂಡವರ ಮೇಲೆ ಏರಿ ಹೋದನು. ಕೋಪಗೊಂಡ ದ್ರೋಣಪುತ್ರನನ್ನು ಎದುರಿಸುವವರು ಯಾರು? ಅವನ ಪ್ರಬಲ ವೈರಿ ಧೃಷ್ಟದ್ಯುಮ್ನ ಬಂದನು. ತಾನಿವನನ್ನು ಕೊಂದರೆ ತನ್ನ ತಂದೆಯ ಸಾವನ್ನು ತಪ್ಪಿಸಬಹುದು ಎಂದು ಅಶ್ವತ್ಥಾಮನಿಗೆ ಅನ್ನಿಸಿತು. ಬಾಣಗಳಿಗಿಂತ ಹೆಚ್ಚಾಗಿ ಅವರ ವಾಗ್ಯುದ್ಧವೇ ಬಿರುಸಾಗಿದ್ದಿತು. ಒಬ್ಬರನ್ನೊಬ್ಬರು ಸುಟ್ಟುಬಿಡುವಂತೆ ನೋಡುವರು! ಹೀನಾಯದ ಮಾತುಗಳನ್ನಾಡುವರು! ಪಾಂಚಾಲಸೇನೆಯು ಅಶ್ವತ್ಥಾಮನಿಂದಾಗಿ ತುಂಬ ನಷ್ಟವನ್ನು ಅನುಭವಿಸಿತು. ಅಶ್ವತ್ಥಾಮನು ಧೃಷ್ಟದ್ಯುಮ್ನನ ರಥವನ್ನು ಮುರಿದು, ಬಿಲ್ಲನ್ನು ಕತ್ತರಿಸಿದನು. ಇದನ್ನು ನೋಡಿದ ಕೌರವರು ಭಲೆ ಎಂದರು. ಪುನ: ಯುದ್ಧವು ಸಂಕುಲವಾಯಿತು. ರಾಜನು ಯುಧಿಷ್ಠಿರನೊಡನೆ ಯುದ್ಧ ಮಾಡಲು ಬರುತ್ತಿದ್ದಂತೆ ಭೀಮನು ಅವನನ್ನೆದುರಿಸಿದನು. ಪಾಂಡವ ಸಹೋದರರೊಂದು ಕಡೆ, ದ್ರೋಣ ದುರ್ಯೋದನ ಮತ್ತಿತರರು ಇನ್ನೊಂದು ಕಡೆ ಪ್ರಾಣವನ್ನೂ ಲೆಕ್ಕಿಸದೆ ಹೋರಾಡಿದರು. ಸೋಮದತ್ತನು ಸಾತ್ಯಕಿಯನ್ನು ದ್ವಂದ್ವದಲ್ಲಿ ತುಂಬ ಹೊತ್ತು ತೊಡಗಿಕೊಂಡಿದ್ದನು. ಕೊನೆಗೆ ಸಾತ್ಯಕಿಯು ಸೋಮದತ್ತನನ್ನು ಚೂಪಾದ ಬಾಣವೊಂದರಿಂದ ಕೊಂದುಹಾಕಿದನು. ಯುಧಿಷ್ಠಿರನು ಸಾತ್ಯಕಿಯನ್ನು ಕೂಡಿಕೊಳ್ಳಲು, ದ್ರೋಣನು ಅಲ್ಲಿಗೆ ಬಂದನು. ಯುಧಿಷ್ಠಿರನು ದ್ರೋಣನನ್ನು ಮೂರ್ಛೆಗೊಳಿಸಿದನು. ಸ್ವಲ್ಪಹೊತ್ತಿನಲ್ಲಿ ದ್ರೋಣನು ಎದ್ದು ವಾಯುವ್ಯಾಸ್ತ್ರವನ್ನು ಪ್ರಯೋಗಿಸಲು, ಯುಧಿಷ್ಠಿರನು ಅದೇ ಅಸ್ತ್ರದಿಂದ ಅದನ್ನು ನಿವಾರಿಸಿದನು. ಕೃಷ್ಣನು ಜಾಗ್ರತೆಯಾಗಿ ಯುಧಿಷ್ಠಿರನ ಬಳಿಗೆ ಬಂದು, "ದ್ರೋಣನು ನಿನ್ನನ್ನು ಸೆರೆಹಿಡಿಯಬೇಕೆಂದಿದ್ದಾನೆ. ಅವನ ಬಳಿಗೆ ಪದೇ ಪದೇ ಹೋಗಬೇಡ. ಅವನನ್ನು ಧೃಷ್ಟದ್ಯುಮ್ನನಿಗೆ ಬಿಟ್ಟುಬಿಡು. ಭೀಮನು ದುರ್ಯೋಧನನ ಜೊತೆಗೆ ಹೋರುತ್ತಿದ್ದಾನೆ. ಹೋಗಿ ಅವನಿಗೆ ಸಹಾಯಮಾಡು. ರಾಜರುಗಳು ಪರಸ್ಪರ ಹೋರಾಡಿದರೆ ಚೆನ್ನಾಗಿರುತ್ತದೆ" ಎಂದನು. ಯುಧಿಷ್ಠಿರನು ಹಾಗೇಯೆ ಮಾಡಿದನು.

ಕಗ್ಗತ್ತಲಿನಲ್ಲಿ ಏನೂ ಕಾಣಿಸುತ್ತಿರಲಿಲ್ಲ. ಸೈನಿಕರು ಯಾರೂ ಸಿಕ್ಕರೂ ಶತ್ರುಗಳೆಂದು ತಿಳಿದು ಕೊಲ್ಲುತ್ತಿದ್ದರು. ದ್ರೋಣನು ರಾಜನೊಂದಿಗೆ ಪರ್ಯಾಲೋಚಿಸಿ, ಸೈನಿಕರು ಆಯುಧಗಳನ್ನು ಬಿಟ್ಟು ದೀಪಗಳನ್ನು ಹಿಡಿದುಕೊಳ್ಳಬೇಕೆಂದು ತೀರ್ಮಾನಿಸಿದರು. ಎಲ್ಲರಿಗೂ ಬಹಳ ಸಂತೋಷವಾಯಿತು. ಸೈನಿಕರ ಕೈಯಲ್ಲಿದ್ದ ಅಸಂಖ್ಯ ದೀಪಗಳಿಂದ ರಣರಂಗವೂ ಒಮ್ಮೆಲೇ ಬೆಳಕಾಯಿತು. ಪಾಂಡವ ಸೈನ್ಯದಲ್ಲಿಯೂ ಹಾಗೆಯೇ ಮಾಡಿದರು. ಈಗ ವೀರರ ನಡುವೆ ಅನೇಕಾನೇಕ ದ್ವಂದ್ವಗಳೇರ್ಪಟ್ಟವು. ದುರ್ಯೋಧನನು, "ಧೃಷ್ಟದ್ಯುಮ್ನನನ್ನು ಬಿಟ್ಟರೆ ಪಾಂಡವರ ಕಡೆ ಇನ್ನು ಯಾರೂ ಆಚಾರ್ಯ ದ್ರೊಣರನ್ನು ನೋಯಿಸಲಾರರು. ಆದ್ದರಿಂದ ಇವರಿಬ್ಬರು ಪರಸ್ಪರ ಎದುರಾಗದಂತೆ ಆಚಾರ್ಯರನ್ನು ಕಾಯ್ದುಕೊಳ್ಳಿ" ಎಂದು ತನ್ನ ಕಡೆಯ ವೀರರಿಗೆ ಕಿವಿಮಾತು ಹೇಳಿದನು. ನಡೆಯುತ್ತಿದ್ದ ದ್ವಂದ್ವಗಳನ್ನು ನೋಡುವುದೇ ಸೈನಿಕರಿಗೊಂದು ಹಬ್ಬವಾಗಿದ್ದಿತು. ಸಾತ್ಯಕಿಯು ಭೂರಿಯೆಂಬ ರಾಜನನ್ನು ಕೊಂದನು. ಅಶ್ವತ್ಥಾಮನು ಘಟೋತ್ಕಚನನ್ನೂ ಭೀಮನು ದುರ್ಯೋಧನನನ್ನೂ ಸೋಲಿಸಿದರು. ಸಹದೇವನು ರಾಧೇಯನನ್ನು ಎದುರಿಸಿ ಹೋರಾಡಿದರು. ಕೆಲವೇ ನಿಮಿಷಗಳಲ್ಲಿ ರಾಧೇಯನು ಸಹದೇವನ ಕುದುರೆಗಳನ್ನು ಕೊಂದು ಬಿಲ್ಲನ್ನು ಕತ್ತರಿಸಿದನು. ಸಹದೇವನು ಗದೆಯನ್ನೆಸೆಯಲು ಅದನ್ನು ರಾಧೇಯನು ತಡೆದನು. ಸಹದೇವನು ರಥದಿಂದ ಕೆಳಕ್ಕೆ ಹಾರಿ, ಚಕ್ರವೊಂದನ್ನು ಕಳಚಿಕೊಂಡು ಅದನ್ನೆ ರಾಧೆಯನಮೇಲೆ ಎಸೆಯಲುದ್ಯುಕ್ತನಾಗಲು, ಅವನು ಒಂದೇ ಒಂದು ಬಾಣದಿಂದ ಅದನ್ನು ನಿವಾರಿಸಿದನು. ಸಹದೇವನು ರಾಧೇಯನೆದುರಿಗೆ ಅಸಹಾಯಕನಾಗಿ ನಿಲ್ಲಬೇಕಾಯಿತು. ರಾಧೇಯನು ಸಹದೇವನನ್ನು``ಮಗು, ಅಸಾಧ್ಯವಾದದ್ದನ್ನು ಮಾಡಲು ಹೋಗಬೇಡ. ಸಮಾನರಾದವರನ್ನು ಹುಡುಕಿಕೊಂಡು ಯುದ್ಧ ಮಾಡು ಹೋಗು. ನಿನ್ನಣ್ಣ ಅರ್ಜುನ ಅಲ್ಲಿ ಮುಂಚೂಣಿಯಲ್ಲಿ ಯುದ್ದಮಾಡುತ್ತಿರುವನು. ಅವನಿಗೆ ಸಹಾಯ ಮಾಡು ಅಥವಾ ಮನೆಗೆ ಹೋಗು" ಎಂದು ಅವನನ್ನು ತನ್ನ ಬಿಲ್ಲಿನ ತುದಿಯಿಂದ ಮುಟ್ಟಿ ಅವಮಾನಿಸಿ ಕಳುಹಿಸಿಬಿಟ್ಟನು. ತನ್ನನ್ನು ಕೊಲ್ಲಬಹುದಾಗಿದ್ದರೂ ಏಕೆ ಕೊಲ್ಲಲಿಲ್ಲವೆಂದು ಅಚ್ಚರಿಪಡುತ್ತ ಸಹದೇವನು ಪಾಂಚಾಲಸೇನೆಯ ಕಡೆಗೆ ಹೊರಟನು. ಶಲ್ಯನು ವಿರಾಟನನ್ನೂ, ಅರ್ಜುನನು ಅಲನೆಂಬ ರಾಜನನ್ನೂ, ನಕುಲನು ಶಕುನಿಯನ್ನೂ, ಕೃಪನು ಶಿಖಂಡಿಯನ್ನೂ ದ್ವಂದ್ವಯುದ್ದದಲ್ಲಿ ಸೋಲಿಸಿದರು.

ದ್ರೋಣ ಧೃಷ್ಟದ್ಯಮ್ನರು ಘೋರವಾದ ದ್ವಂದ್ವಯುದ್ಧದಲ್ಲಿ ತೊಡಗಿದರು. ರಾಜನ ಆಣತಿಗನುಗುಣವಾಗಿ ಅನೇಕ ವೀರರು ದ್ರೋಣನ ರಕ್ಷಣೆಗೆ ನಿಂತರು. ಧೃಷ್ಟದ್ಯುಮ್ನನ ನೆರವಿಗೂ ಅನೇಕರು ಬಂದು ನೆರೆದರು. ಯುದ್ಧವು ಸಂಕುಲವಾಯಿತು. ರಾಧೇಯನ ಪ್ರತಾಪ ತಾನೇ ತಾನಾಗಿತ್ತು. ಸಾತ್ಯಕಿಯೊಡನೆ ಅವನು ದ್ವಂದ್ವದಲ್ಲಿ ನಿರತನಾದನು. ಇಬ್ಬರೂ ಅಸ್ತ್ರಗಳನ್ನು ಬಲ್ಲವರು. ನೋಡಲು ಅದ್ಭುತವಾಗಿದ್ದರೂ ಅವರ ಯುದ್ಧವು ಬಹುಕಾಲ ಮುಂದುವರೆಯಲಿಲ್ಲ. ಇಬ್ಬರ ನೆರವಿಗೂ ಅನೇಕರು ಬಂದು ಪುನ: ಯುದ್ಧವು ಸಂಕುಲವಾಯಿತು. ಗಾಂಡೀವಧ್ವನಿಯನ್ನು ಕೇಳಿದ ರಾಧೇಯನು ದುರ್ಯೋಧನನನ್ನು ಕುರಿತು, ``ಅರ್ಜುನನು ಸೈನ್ಯನಾಶದಲ್ಲಿ ತೊಡಗಿರುವನು. ಅವನನ್ನು ಎದುರಿಸಲು ಯಾರನ್ನಾದರೂ ಕಳುಹಿಸು. ನಾನಿಲ್ಲಿ ಸಾತ್ಯಕಿಯನ್ನು ಮುಗಿಸಿ ಧೃಷ್ಟದ್ಯುಮ್ನನನ್ನು ನೋಡಿಕೊಳ್ಳುತ್ತೇನೆ. ಇವರಿಬ್ಬರನ್ನು ಕೊಂದುಬಿಟ್ಟರೆ ವಿಜಯಮಾಲೆ ನಿನ್ನ ಕೊರಳಿಗೇ" ಎಂದನು. ದುರ್ಯೋಧನನು ಅರ್ಜುನನ್ನೆದುರಿಸಲು ಶಕುನಿಯನ್ನು ಕಳುಹಿಸಿದನು. ರಾಧೇಯನು ಪುನ: ಸಾತ್ಯಕಿಯನ್ನೆದುರಿಸಿದನು. ಪಾಂಡವರು ಸಾತ್ಯಕಿಯ ನೆರವಿಗೆ ಬಂದರು. ಪುನ: ಹಿಂದೆಂದೂ ಇಲ್ಲದಂತಹ ಘೋರ ಯುದ್ಧ ಪ್ರಾರಂಭವಾಯಿತು. ಒಂದು ಕಡೆ ಅರ್ಜುನನ ಶೌರ್ಯ, ಇನ್ನೊಂದು ಕಡೆ ರಾಧೇಯ ದ್ರೋಣ ಅಶ್ವತ್ಥಾಮರ ಪ್ರತಾಪ, ಇವುಗಳನ್ನು ನೋಡಿ ಎರಡೂ ಸ್ಯೆನ್ಯಗಳು ಭಯದಿಂದ ತತ್ತರಿಸುತ್ತಿದ್ದವು. ರಾಧೇಯನು ಧೃಷ್ಟದ್ಯುಮ್ನನನ್ನು ಸೋಲಿಸಿದನು. ಭೀಮಾರ್ಜುನರು ಹೊಸದಾಗಿ ರಾಧೇಯನನ್ನೆದುರಿಸಿದರು. ಕೃಷ್ಣನು ಅರ್ಜುನನನ್ನು ಹುರಿದುಂಬಿಸುತ್ತಿದ್ದನು. ದ್ರೋಣನು ಶಕ್ತಿಮೀರಿ ಹೋರಾಡುತ್ತಿದ್ದನು. ರಾಧೇಯನ ಶೌರ್ಯಕ್ಕೆ ನಿಲುಗಡೆಯಿರುವಂತೆಯೇ ಕಾಣಲಿಲ್ಲ. ಯುಧಿಷ್ಠಿರನೂ ಭಯಪಡುವಂತಾಯಿತು. ಅರ್ಜುನನು, ``ಕೃಷ್ಣ, ರಾಧೇಯನನ್ನು ತಡೆಯುವವರೇ ಇಲ್ಲವಾಗಿದೆ. ನಾನು ಅವನನ್ನು ಎದುರಿಸಲೇಬೆಕಾದ ಸನ್ನಿವೇಶ ಒದಗಿದೆ. ನನ್ನನ್ನು ಅವನಿದ್ದಲ್ಲಿಗೆ ಕರೆದುಕೊಂಡು ಹೋಗು" ಎಂದನು. ಕೃಷ್ಣನಿಗೆ ಇದು ಒಪ್ಪಿಗೆಯಗಲಿಲ್ಲ. ಅವನಿಗೆ ಶಕ್ತ್ಯಾಯುಧದ ಹೆದರಿಕೆ. ``ಅರ್ಜುನ, ಇಬ್ಬರು ಮಾತ್ರ ರಾಧೇಯನನ್ನು ಎದುರಿಸಬಲ್ಲರು: ನೀನು ಮತ್ತು ಘಟೋತ್ಕಚ. ಅವನು ರಾಧೇಯನೊಡನೆ ಹೋರಾಡಲಿ. ನೀನು ದ್ರೋಣನಿಂದ ಯುಧಿಷ್ಠಿರನನ್ನು ರಕ್ಷಿಸಿಕೋ" ಎಂದನು ಅದರಂತೆ ಅರ್ಜುನನು ಘಟೋತ್ಕಚನನ್ನು ಕರೆದ. ಕೃಷ್ಣನು ಅವನನ್ನು ನೋಡಿ ಹಸನ್ಮುಖನಾಗಿ, ಘಟೋತ್ಕಚ, ನಾವೀಗ ನಿನ್ನ ಸಹಾಯವನ್ನೇ ಎದುರುನೋಡುತ್ತಿದ್ದೇವೆ. ರಾಧೇಯನನ್ನು ಮಾಯಾಯುದ್ಧ ಮಾಡಿ ದಿವ್ಯಾಸ್ತ್ರಗಳಿಂದ ಕೊಲ್ಲಬಲ್ಲವನು ನೀನು. ಧೃಷ್ಟದ್ಯುಮ್ನನೊಡನೆ ಅರ್ಜುನಗು ದ್ರೋಣ ಅಶ್ವತ್ಥಾಮರೊಂದಿಗೆ ಹೊರಾಡುತ್ತಾನೆ. ನೀನು ರಾಧೇಯನನ್ನು ಎದುರಿಸು" ಎನ್ನಲು, ಅವನು, "ನಾನು ಈ ಕ್ಷಣವೇ ರಾಧೇಯನ ಮೇಲೆ ಯುದ್ಧಕ್ಕೆ ಹೋಗಲು ಸಿದ್ಧನಾಗುವೆ " ಎಂದನು. ಅರ್ಜುನನು, ಘಟೋತ್ಕಚ, ನಿನ್ನ ಸಹಾಯಕ್ಕೆ ಸಾತ್ಯಕಿಯಿರುವನು. ನೀವಿಬ್ಬರೂ ಸೇರಿದರೆ ಅಸಾಧ್ಯವನ್ನು ಸಾಧಿಸಬಲ್ಲಿರಿ" ಎಂದನು. ತನ್ನ ಮುಂದಿರುವ ಸಾಹಸವನ್ನು ನೆನೆದು ಘಟೋತ್ಕಚನಿಗೆ ಆನಂದವಾಯಿತು. ಅವನು ರಾಧೇಯನೆದುರಿಗೆ ಹೋಗಿ ನಿಂತನು. ಅವನನ್ನು ನೋಡಿ ಕೌರವಸೇನೆಯು ಭಯಪಟ್ಟುಹೋಯಿತು.* * * * ರಾಧೇಯ ಘಟೋತ್ಕಚರ ಯುದ್ಧವು ಭೀಕರ ಮಧ್ಯರಾತ್ರಿಯಲ್ಲಿ ಪ್ರಾರಂಭವಾಯಿತು. ದುರ್ಯೋಧನನು ಇವರಿಬ್ಬರಿಗೂ ಸೆಣೆಸಲು ನಿಂತಿರುವುದನ್ನು ನೋಡಿ, ``ದುಶ್ಶಾಸನ, ಅರ್ಜುನ ರಾಧೇಯನನ್ನು ಹೋರಲು ಘಟೋತ್ಕಚನನ್ನು ರಾಕ್ಷಸಸೇನೆಯೊಂದಿಗೆ ಕಳುಹಿಸಿದ್ದಾನೆ. ನೀನು ದೊಡ್ದ ಸೈನ್ಯವನ್ನು ತೆಗೆದುಕೊಂಡು ಹೋಗಿ ಅವನಿಗೆ ಸಹಾಯವಾಗಿ ನಿಲ್ಲು" ಎಂದನು. ಅಷ್ಟರಲ್ಲಿ ಜಟಾಸುರನೆಂಬುವನ ಮಗನು ಅಲ್ಲಿಗೆ ಬಂದು, ``ಮಹಾರಾಜ, ನನ್ನ ತಂದೆಯನ್ನು ಕೊಂದಿರುವ ಭೀಮನ ಮೇಲೆ ಸೇಡು ತೀರಿಸಿಕೊಳ್ಳುವುದಕ್ಕಾಗಿ ಬಂದಿರುವ ನಾನು ನಿಮ್ಮ ಕಡೆಗೆ ಸೇರಿಕೊಂಡು ಯುದ್ಧಮಾಡಲು ಬಯಸುತ್ತೇನೆ " ಎಂದು ಕೇಳಿಕೊಳ್ಳಲು, ದುರ್ಯೋಧನನಿಗೆ ತುಂಬ ಸಂತೋಷವಾಯಿತು. "ನಿನಗೆ ಸ್ವಾಗತ. ಹೋಗು ಭೀಮನ ಮಗ ಘಟೋತ್ಕಚನೊಂದಿಗೆ ಯುದ್ಧಮಾಡು" ಎಂದನು. ಅವನು ತಕ್ಷಣವೇ ಯುದ್ಧವನ್ನು ಪ್ರಾರಂಭಿಸಿದನು. ಇದು ಬೆಳಗ್ಗೆ ಆಲಂಬುಷನೊಂದಿಗೆ ನಡೆದ ಯುದ್ಧದಷ್ಟೇ ಭೀಕರವಾಗಿತ್ತು. ಇಬ್ಬರೂ ಮಾಯಾವಿಗಳು. ಹೊಸಬನು ಪಾಂಡವರ ಕಡೆಯ ಸ್ಯೆನ್ಯವನ್ನು ವೇಗವಾಗಿ ನಿರ್ಮೂಲಗೊಳಿಸುತ್ತಿದ್ದನು. ಈಗ ಎರಡು ಸೈನ್ಯಗಳೂ ಈ ರಾಕ್ಷಸರಿಗೆ ಹೆದರಿಕೊಂಡು ಮುಂದೇನಾಗುತ್ತದೆಯೋ ಎಂದು ಆತಂಕದಿಂದ ನಿರೀಕ್ಷಸುತ್ತಿದ್ದವು. ಜಟಾಸುರನ ಮಗನಿಗೆ ರಥವಿಲ್ಲದ್ದರಿಂದ ಕೈಕೈ ಮಿಲಾಯಿಸಿ ಹೋರಾಡತೋಡಗಿದನು. ಘಟೋತ್ಕಚನು ಒಮ್ಮೆಲೇ ಆಕಾಶಕ್ಕೆ ಹಾರಿ ಅಲ್ಲಿಂದ ಕತ್ತಿಯೊಂದನ್ನು ಕೈಯ್ಯಲ್ಲಿ ಹಿಡಿದುಕೊಂಡು ಇವನ ಮೇಲೆ ಬಿದ್ದ ಹೊಡೆತಕ್ಕೆ ಜಟಾಸುರನ ಮಗನ ತಲೆ ಕತ್ತರಿಸಿತು. ಅದನ್ನು ಕತ್ತಿಯ ತುದಿಯಲ್ಲಿ ಚುಚ್ಚಿಕೊಂಡು ದುರ್ಯೋಧನನ ರಥದಲ್ಲಿ ಅದನ್ನಿಟ್ಟು, "ರಾಜನನ್ನು ನೊಡಲು ಹೋಗುವಾಗ ಕಾಣಿಕೆ ತೆಗೆದುಕೊಂಡು ಹೋಗಬೇಕಂತೆ. ಇದೋ ನಿನಗೆ ಕಾಣಿಕೆ. ಇನ್ನು ಸ್ವಲ್ಪ ಹೊತ್ತಿನಲ್ಲಿ ನಿನ್ನ ಪ್ರೀತಿಯ ರಾಧೇಯನ ತಲೆಯನ್ನು ಹೀಗೆಯೇ ತಂದುಕೊಡುವೆ" ಎಂದು ಹೇಳಿ, ಉತ್ತರವನ್ನು ನಿರೀಕ್ಷಿಸದೆ, ಹಿಂದಿರುಗಿ ಬಂದು ರಾಧೇಯನೊಂದಿಗೆ ಯುದ್ಧವನ್ನು ಮುಂದುವರೆಸಿದನು. ಅವನ ಕೋಪಗೊಂಡ ಕೆಂಗಣ್ಣುಗಳೂ ಅವನ ಮಹಾಕಾಯವೂ ನೋಡುವವರೆದೆಯಲ್ಲಿ ಭೀತಿಯನ್ನು ಹುಟ್ಟಿಸುತ್ತಿದ್ದವು. ರಾಧೇಯನಿಗೆ ಇವನ ಮಾಯೆಯ ಆಟವನ್ನು ಕಂಡು ತಮಾಷೆಯೆನಿಸಿತು. ಇಬ್ಬರು ಕಳುಹಿಸಿದ ಅಸ್ತ್ರಗಳೂ ಪ್ರತ್ಯಸ್ತ್ರಗಳಿಂದ ಶಾಂತವಾದವು. ಘಟೋತ್ಕಚನು ತನ್ನ ಮಾಯೆಯಿಂದ ಕೌರವಸೈನ್ಯವನ್ನು ನಾಶಮಾಡುತ್ತಲೇ ಹೋದನು. ಸಹಸ್ರ ಸಂಖ್ಯೆಯಲ್ಲಿ ಸಾಯುತ್ತಿದ್ದ ಸೈನಿಕರ ಆರ್ತನಾದವು ಎಲ್ಲೆಲ್ಲಿಯೂ ಕೇಳಿಬರುತ್ತಿದ್ದಿತ್ತು. ಈ ಕ್ಷಣ ಭೂಮಿಯ ಮೇಲಿದ್ದು ಮರುಕ್ಷಣ ಮನಸ್ಸಿಗೆ ಬಂದ ರೂಪದಲ್ಲಿ ಅಂತರಿಕ್ಷದಲ್ಲಿರುತ್ತಿದ್ದ ಈ ಮಾಯಾವಿಯ ಜೊತೆಗೆ ಹೇಗೆ ಹೋರುವುದೆಂದೇ ರಾಧೇಯನಿಗೆ ತಿಳಿಯದಾಯಿತು. ಸೈನಿಕರಾರೂ ಅವನೊಡನೆ ಹೇಗೆಹೇಗೂ ಹೋರಾಟ ನಡೆಸಲು ಸಾಧ್ಯವಾಗಲಿಲ್ಲ.

ಅಷ್ಟರಲ್ಲಿ ಇನ್ನೊಬ್ಬ ರಾಕ್ಷಸನು ತನ್ನ ದೊಡ್ಡ ಸೈನ್ಯದೊಂದಿಗೆ ದುರ್ಯೋಧನನ ಬಳಿಗೆ ಬಂದು, ``ನನ್ನ ಹೆಸರು ಅಲಾಯುಧ. ಹಿಡಿಂಬ ಕಿರ್ಮೀರ ಬಕ ಎಲ್ಲರೂ ನನ್ನ ಸಂಬಂಧಿಗಳು. ಭೀಮನು ಅವರೆಲ್ಲರನ್ನು ಕೊಂದಿದ್ದಾನೆ. ನನಗೆ ಸೇರಬೇಕಾಗಿದ್ದ ಹಿಡಿಂಬೆಯನ್ನು ಅವನು ಕದ್ದೊಯ್ದಿದ್ದಾನೆ. ನಾನು ನಿಮ್ಮ ಕಡೆ ಸೇರಿಕೊಂಡು ಅವನ ಮೇಲೂ ಅವನ ಮಗನ ಮೇಲೂ ಯುದ್ಧ ಮಾಡಿ ಸೇಡು ತೀರಿಸಿಕೊಳ್ಳುವೆ. " ಎಂದನು ದುರ್ಯೋಧನನು, ``ನಿನ್ನ ಶತ್ರುವಿನ ಮಗ ನನ್ನ ಸೈನ್ಯವನ್ನು ಹೇಗೆ ನಾಶಮಾಡುತ್ತಿರುವನು ನೋಡು. ಮೊದಲು ನೀನು ರಾಧೇಯನೊಡನೆ ಹೋರಾಡುತ್ತಿರುವ ಆ ಘಟೋತ್ಕಚನನ್ನು ಕೊಲ್ಲು, ಆಮೇಲೆ ಭೀಮನನ್ನು ಕೊಲ್ಲುವೆಯಂತೆ" ಎಂದು ಹೇಳಿ ಕಳುಹಿಸಿದನು. ಹಾಗೆಯೇ ಆಗಲೆಂದು ಅಲಾಯುಧನು ಯುದ್ಧಕ್ಕೆ ಹೊರಟನು. ಕೌರವಸೈನ್ಯವೆಲ್ಲ ಅವನಿಗೆ ಜಯಕಾರ ಹಾಕಿತು. ಈಗ ಘಟೋತ್ಕಚನೊಡನೆ ಹೋರಾಡುವವರು ಇಬ್ಬರಾದರು. ಭೀಮನಿಗೆ ಗಾಬರಿಯಾಯಿತು. ಮಗನ ಸಹಾಯಕ್ಕೆ ಹೋಗಿ ಅಲಾಯುಧನ ಮೇಲೆ ಬಾಣಗಳ ಮಳೆಗರೆದನು. ಇದನ್ನು ನೋಡಿ ಅವನು ಭೀಮನನ್ನೇ ಎದುರಿಸುವುದಕ್ಕೆ ಬಂದನು. ದ್ವಂದ್ವಯುದ್ಧಕ್ಕಾರಂಭವಾಯಿತು. ಬೆಳಗ್ಗೆ ಆಲಂಬುಷೆ ಸತ್ತಮೇಲೆ ನಿರಾಳವಾಗಿದ್ದ ಪಾಂಡವಸ್ಯೆನ್ಯವನ್ನು ಅಲಾಯುಧನು ಅನಿರೀಕ್ಷಿತವಾಗಿ ಕೊಲ್ಲಲಾರಂಭಿಸಿದನು. ಕೃಷ್ಣನು, "ಅರ್ಜುನ, ನೀನು ನಿನ್ನ ಸೋದರನ ಸಹಾಯಕ್ಕೆ ಹೋಗಬೇಕು. ನಮ್ಮ ಸೈನ್ಯವೂ ನಾಶವಾಗುತ್ತಿದೆ. ನಾವು ಈ ಅಲಾಯುಧವನ್ನು ಕೊಲ್ಲಲೇಬೇಕು ಎನ್ನಲು ಪಾಂಡವವೀರರೆಲ್ಲರೂ ಅಲ್ಲಿಗೆ ಹೊರಟರು. ಭೀಮನು ರಥವನ್ನು ಕಳೆದುಕೊಂಡು ಗದಾಯುದ್ಧವನ್ನಾರಂಭಿಸಿದ್ದನು. ಕೃಷ್ಣನು ಘಟೋತ್ಕಚನಿಗೆ ತಂದೆಯ ನೆರವಿಗೆ ಧಾವಿಸುವಂತೆ ಹೇಳಿಕೊಟ್ಟನು. ಅದರಂತೆ ಅವನು ಭೀಮನು ಸಹಾಯಕ್ಕೆ ಬಂದನು. ಪಾಂಡವವೀರರು ರಾಧೇಯನೊಂದಿಗೆ ಯುದ್ಧವನ್ನು ಮುಂದುವರೆಸಿದರು. ಘಟೋತ್ಕಚನು ಕೊನೆಗೊಮ್ಮೆ ಅಲಾಯುಧನನ್ನು ಕೊಂದುಹಾಕಿದನು. ಮೌನವಾಗಿ ಅವನ ತಲೆಯನ್ನೂ ದುರ್ಯೋಧನನ ರಥದಲ್ಲಿಟ್ಟು ಬಂದನು. ಬೀಭತ್ಸರೂಪದ ಅದನ್ನು ನೋಡಿದ ದುರ್ಯೋಧನನಿಗೆ ಬಹಳ ಭಯವಾಯಿತು. ಘಟೋತ್ಕಚನ ಅಟ್ಟಹಾಸಕ್ಕೆ ಕೊನೆಮೊದಲಿಲ್ಲವಾಯಿತು. ಕೌರವ ಸೈನಿಕರೆಲ್ಲರೂ ತಮ್ಮನ್ನು ಈ ರಾಕ್ಷಸನ ಉಪಟಳದಿಂದ ಕಾಪಾಡುವಂತೆ ರಾಧೇಯನಿಗೆ ಮೊರೆಯಿಟ್ಟರು. ಕೌರವ ಸೈನ್ಯವು ಸಂಪೂರ್ಣ ನಾಶವಾಗುವುದಕ್ಕೆ ಮುಂಚೆ ಅವನನ್ನು ಕೊಲ್ಲಲೇಬೇಕು. ಯಾವ ದಿವ್ಯಾಸ್ತ್ರವೂ ಘಟೋತ್ಕಚನನ್ನು ಕೊಲ್ಲದೆ ಹೋದುದರಿಂದ, ಅವನನ್ನು ನಾಶಮಾಡುವುದಕ್ಕೆ ಇರುವುದು ಒಂದೇ ದಾರಿ, ಅದೇ ಇಂದ್ರನು ಕೊಟ್ಟಿರುವ ಶಕ್ತ್ಯಾಯುಧವನ್ನು ಬಳಸುವುದು ಎಂಬ ತೀರ್ಮಾನಕ್ಕೆ ರಾಧೇಯನು ಬಂದನು.* * * * ವಿಧಿ ತನ್ನ ವಿರುದ್ದವಾಗಿದೆಯೆಂದು ರಾಧೆಯನಿಗೆ ಅರ್ಥವಾಯಿತು. ಶಕ್ತ್ಯಾಯುಧ ಇರುವವರೆಗೂ ಅರ್ಜುನನನ್ನು ಕೊಲ್ಲಬಲ್ಲೆನೆಂದು ತನಗೆ ವಿಶ್ವಾಸವಿತ್ತು. ಆದರೆ ಈಗ ಕೌರವ ಸೈನ್ಯವನ್ನು ಉಳಿಸುವುದಕ್ಕಾಗಿ ಆ ಶಕ್ತಿಯನ್ನು ಬಳಸಲೇಬೇಕಾದ ಸಂದರ್ಬ ಒದಗಿದೆ. ಮೃತ್ಯುಮುಖನಾದವನು ಕೊನೆಯುಸಿರೆಳೆಯುವಂತೆ ದೀರ್ಘವಾಗಿ ಉಸಿರುಬಿಟ್ಟು, ಇಂದ್ರದತ್ತವಾದ ಆ ಶಕ್ತ್ಯಾಯುಧವನ್ನು ಕೈಗೆ ತೆಗೆದುಕೊಂಡನು. ದೇವೇಂದ್ರನು ಹೇಳಿದ್ದು ನೆನಪಿಗೆ ಬಂದಿತು. ``ಕರ್ಣ, ನಾನೀಗ ನನ್ನ ಈ ಶಕ್ತ್ಯಾಯುಧವನ್ನು ನಿನಗೆ ಕೊಡುತ್ತಿದ್ದೆನೆ. ನೀನು ಇದನ್ನು ಒಬ್ಬ ಶತ್ರುವಿನ ಮೇಲೆ, ಒಂದು ಸಂದರ್ಭದಲ್ಲಿ ಮಾತ್ರ ಬಳಸಬಹುದು. ಇದು ಶತ್ರುವನ್ನು ಖಂಡಿತವಾಗಿಯೂ ಕೊಲ್ಲುತ್ತದೆ; ಆದರೆ ಅನಂತರ ನನ್ನ ಬಳಿಗೆ ಹಿಂದಿರುಗುತ್ತದೆ.'' ಅದಕ್ಕೆ ರಾಧೇಯನು, ``ದೇವ ನನಗೆ ಬೇಕಾದ್ದು ಒಮ್ಮೆ ಒಬ್ಬನ ಮೇಲೆ ಬಳಸುವುದಕ್ಕೆ ಮಾತ್ರ. ನನಗಿರುವುದೂ ಒಬ್ಬನೇ ಶತ್ರು'' ಎಂದಿದ್ದ. ಅದಕ್ಕೆ ಇಂದ್ರನು, ``ನೀನು ಅರ್ಜುನನನ್ನುದ್ದೇಶಿಸಿರುವೆಯಲ್ಲವೆ? ಆದರೆ ಕೃಷ್ಣನ ರಕ್ಷಣೆಯಿರುವವರೆಗೂ ನನ್ನ ಶಕ್ತಿ ಸಹ ಅವನಿಗೇನೂ ಮಾಡಲಾರದು. ಭಗವಂತನ ಅವತಾರವಾದ ಕೃಷ್ಣನು ಪಾಂಡವರ ರಕ್ಷಣೆಯನ್ನು ವಹಿಸಿಕೊಂಡಿರುವನು. ನಿನ್ನ ಶಕ್ತಿ ಅವನ ಮುಂದೆ ಸೋತುಹೋಗುವುದು" ಎಂದಿದ್ದನು. ರಾಧೇಯನು ಇಂದ್ರನ ಮಾತಿಗೆ ಅಷ್ಟಾಗಿ ಗಮನಕೊಟ್ಟಿರಲಿಲ್ಲ ಘಟೋತ್ಕಚನ ಮೇಲೆ ಪ್ರಯೋಗಿಸುವುದಕ್ಕೆಂದು ಕ್ಯೆಯಲ್ಲಿ ಶಕ್ತ್ಯಾಯುಧವನ್ನು ತೆಗೆದುಕೊಂಡಾಗ ಇದೆಲ್ಲವೂ ನೆನಪಿಗೆ ಬಂದಿತು. ಹೌದು, ವಿಧಿ ಬಲವತ್ತರವಾದುದು. ಅದನ್ನೆದುರಿಸಿ ಗೆಲ್ಲುವುದು ಸಾಧ್ಯವೇ ಇಲ್ಲ. ಅರ್ಜುನನನ್ನು ಗೆಲ್ಲುವ ಕನಸು ಕನಸಾಗಿಯೇ ಉಳಿಯಿತು. ಕೌರವನ ಸೇನೆಯನ್ನುಳಿಸುವುದಕ್ಕಾಗಿ ಇದನ್ನೀಗ ಈ ರಾಕ್ಷಸನ ಮೇಲೆ ಪ್ರಯೋಗಿಸಲೇ ಬೇಕು. ನಾಳಿನ ಯೋಚನೆಗಳನ್ನು ಅವನು ಕಷ್ಟದಿಂದಲೇ ಬದಿಗೆ ತಳ್ಳಿದ. ತಾನು ರಣರಂಗದ ಮೇಲೆ ಸಾಯುವೆನು ಅದೂ ತನ್ನ ತಮ್ಮನಿಂದಲೇ. ತಾಯಿ ಕುಂತಿಯ ಇಚ್ಛೆಯಂತೆ ಆಗುವುದು. ಅವಳಿಗೆ ಅರ್ಜುನನು ಬದುಕಬೇಕೆಂದಿತ್ತು; ಹಾಗೆಯೇ ಆಗಲಿ. ಕೃಷ್ಣನು ಘಟೋತ್ಕಚನನ್ನು ಕಳುಹಿಸಿರುವುದು ಈ ಶಕ್ತಿಯನ್ನು ನಾನು ಬಳಸಲೆಂದೇ ಎಂದು ಸುಲಭವಾಗಿ ಊಹಿಸಬಹುದು. ಈಗ ಇದನ್ನೆಲ್ಲ ಯೋಚಿಸಿ ಫಲವೇನು? ಕರ್ತವ್ಯ ಮುಖ್ಯ. ಇನ್ನು ಪಾಂಡವರನ್ನು ಜಯಿಸುವುದು ಸುಳ್ಳು. ಪ್ರಿಯ ದುರ್ಯೋಧನ, ನಾನು ಈ ಶಕ್ತಿಯನ್ನು ಘಟೋತ್ಕಚನ ಮೇಲೆ ಪ್ರಯೋಗಿಸಿದ ಕ್ಷಣವೇ ಲೋಕವನ್ನಾಳುವ ನಿನ್ನ ಕನಸೆಲ್ಲ ಮುರಿದುಬೀಳುತ್ತದೆ. ಆದರೆ ನಾನು ಸುಖವಾಗಿ ಸಾಯುತ್ತೇನೆ. ಈ ಮಾನವಬಂಧನದಿಂದ ಮುಕ್ತಿ ಪಡೆಯಲು ನನಗೆ ಖಂಡಿತವಾಗಿಯೂ ಸಂತೋಷವಾಗುತ್ತದೆ. ಈ ಬದುಕು ಸಾಕಿನ್ನು.ರಾಧೇಯ ಬಲಗೈಯಲ್ಲಿ ಹಿಡಿದಿದ್ದ ಶಕ್ತ್ಯಾಯುಧವನ್ನು ನೋಡಿಯೇ ನೋಡಿದ. ಕಣ್ಣು ಹನಿಗೂಡಿ ಏನೂ ಕಾಣದಾಯಿತು. ಕಣ್ಣೊರೆಸಿಕೊಂಡು ಅದನ್ನು ಘಟೋತ್ಕಚನ ಮೇಲೆ ಎಸೆದ. ಮಿಂಚಿನಂತೆ ಮುನ್ನುಗ್ಗಿದ ಅದು ಭೂಮ್ಯಾಕಾಶಗಳನ್ನು ಗಡಗಡನೆ ನಡುಗಿಸುತ್ತ, ಘಟೋತ್ಕಚನ ಮಾಯಾಜಾಲವನ್ನು ಬೇಧಿಸಿತು. ತನಗೆ ಸಾವು ನಿಶ್ಚಿತವೆಂದು ಘಟೋತ್ಕಚನಿಗೆ ತಿಳಿದುಹೋಯಿತು. ಶಕ್ತಿ ನೇರವಾಗಿ ಅವನೆದೆಯನ್ನು ಪ್ರವೇಶಿಸಿತು. ಸಾಯುವ ಕ್ಷಣದಲ್ಲಿಯೂ ಪಾಂಡವರಿಗೆ ತಾನು ಸಹಾಯಮಾಡಬೇಕೆಂಬ ಯೋಚನೆ ಅವನ ತಲೆಯಲ್ಲಿತ್ತು. ಕೊನೆಯ ಬಾರಿಗೆ ತನ್ನ ಮಾಯೆಯನ್ನು ಬಳಸಿದ ಅವನು ತನ್ನ ದೇಹವನ್ನು ಅಭೂತಪೂರ್ವ ಗಾತ್ರಕ್ಕೆ ಬೆಳಸಿ ಅಂತರಿಕ್ಷದಿಂದ ಮಹಾಶಬ್ದದೊಂದಿಗೆ ಕೌರವ ಸೈನ್ಯದ ಮೇಲೆ ಬಿದ್ದ ರಭಸಕ್ಕೆ ಒಂದು ಅಕ್ಷೋಹಿಣೀ ಸೈನ್ಯ ನಾಶವಾಯಿತು. ಘಟೋತ್ಕಚ ಸತ್ತುಹೋದ. ರಾಧೇಯ ತನ್ನ ಶಕ್ತಿಯಿಂದ ಅವನನ್ನು ಕೊಂದುದಕ್ಕೆ ದುರ್ಯೋಧನನಿಗೆ ಹೆಮ್ಮೆ ಎನಿಸಿತು. ತನ್ನ ರಥದಲ್ಲಿ ಕುಳ್ಳಿರಿಸಿಕೊಂಡು ವಿಶೇಷ ಮರ್ಯಾದೆ ಮಾಡಿದ. ಕೌರವರೆಲ್ಲರ ಹೃದಯವೂ ಸಂತೋಷದಿಂದ ತುಂಬಿಹೋಯಿತು.ತನ್ನ ಮಗ ಸತ್ತದ್ದು ತಿಳಿದು ಭೀಮನಿಗೆ ಆಘಾತವಾಯಿತು. ಘಟೋತ್ಕಚ ಸಾಯಬಹುದೆಂದು ಊಹಿಸದ ಅವನು ಯುಧಿಷ್ಠಿರನ ಬಳಿ ಹೋಗಿ ಅತ್ತುಕೊಂಡ. ತನಗಿಂತ ಬಲಶಾಲಿಯಾದ ಅವನು ಸತ್ತುದಾದರೂ ಹೇಗೆ? ಯುಧಿಷ್ಠಿರನಿಗೂ ದುಃಖವಾಯಿತು. ಪಾಪ, ಅರಣ್ಯದ ಕೂಸು ಈ ಹಾಳು ಯುದ್ಧದಿಂದಾಗಿ ಸಾಯಬೇಕಾಯಿತು. ಭೀಮನಿಗೆ ಹೇಗೆ ಸಮಾಧಾನ ಮಾಡಬೇಕೆಂದೇ ತಿಳಿಯದೆ ತಾನೂ ಕಣ್ಣೀರಿಡುತ್ತಲೇ ಅವನ ಕಣ್ಣೀರೊರೆಸಿದ. ಆದರೆ ಕೃಷ್ಣನಿಗೆ ಮಾತ್ರ ಸಂತೋಷವೋ ಸಂತೋಷ. ಅವನು ರಥದಿಂದ ಕೆಳಕ್ಕೆ ಹಾರಿ ಅರ್ಜುನನನ್ನು ಬಿಗಿದಪ್ಪಿದ. ಅವನ ಈ ನಡತೆ ಅರ್ಜುನನಿಗೆ ಅರ್ಥವಾಗಲಿಲ್ಲ, ಇಷ್ಟವೂ ಆಗಲಿಲ್ಲ. ``ಕೃಷ್ಣ, ಇದೇನು! ಘಟೋತ್ಕಚ ಸತ್ತು ಒಂದು ಘಳಿಗೆಯೂ ಆಗಿಲ್ಲ. ನಾವೆಲ್ಲ ದುಃಖದಲ್ಲಿದ್ದೇವೆ; ನೀನು ಹೀಗೆ ಸಂತೊಷಿಸುತ್ತಿರುವೆಯಲ್ಲ! ಏನಾಗಿದೆ ನಿನಗೆ?" ಎನ್ನಲು, ಅವನು, ``ಅರ್ಜುನ, ಇದು ನನ್ನ ಅತ್ಯಾನಂದದ ದಿನ. ರಾಧೇಯನ ಬಳಿ ಇದ್ದ ಇಂದ್ರನ ಶಕ್ತ್ಯಾಯುಧ ಇಂದು ಇಂದ್ರನ ಬಳಿಗೆ ಹಿಂದಿರುಗಿ ಹೊರಟುಹೋಯಿತು. ಇನ್ನು ನನಗೆ ರಾಧೇಯನ ಹೆದರಿಕೆಯಿಲ್ಲ. ಅವನು ಸತ್ತನೆಂದೇ ಲೆಕ್ಕ. ಆ ಶಕ್ತಿಯ ಭಯದಿಂದ ನಾನೆಷ್ಟು ನಿದ್ರೆಗೆಡುತ್ತಿದ್ದೆನೆಂದು ತಿಳಿದರೆ ನೀನು ನನ್ನ ಸಂತೋಷವನ್ನು ಅರ್ಥಮಾಡಿಕೊಳ್ಳಬಲ್ಲೆ. ಆ ಶಕ್ತಿ ಅವನ ಬಳಿ ಇದ್ದಾಗ ಅಜೇಯನಾಗಿದ್ದ ಅವನನ್ನು ನಿನಗೆ ಎದುರಿಸುವುದಕ್ಕಾಗುತ್ತಿತೇನು? ನಾನು ಸಂಧಾನಕ್ಕಾಗಿ ಹಸ್ತಿನಾಪುರಕ್ಕೆ ಹೋಗಿದ್ದಾಗ ದುರ್ಯೋಧನನು ರಾಧೇಯನೊಬ್ಬನಿದ್ದರೆ ಸಾಕು ನನಗೆ ಯುದ್ಧವನ್ನು ಗೆಲ್ಲುವುದಕ್ಕೆ ಎಂದು ಹೇಳಿದ. ಆ ಮಾತು ಸರಿಯೆಂದು ನನಗೆ ಗೊತ್ತಿತ್ತು. ದುರ್ಯೋಧನನಿಗೆ ಅವನ ಸ್ನೇಹದ ಬಲದಿಂದಲೇ ರಾಧೇಯನು ಅಸಾಮಾನ್ಯನೆಂದು ತಿಳಿದಿತ್ತು. ಅವನೇ ಲೋಕೈಕವೀರ, ನೀನು ಅವನ ಸಮಾನನಲ್ಲ ಅರ್ಜುನ. ಯುದ್ಧದ ಪ್ರಾರಂಭದಲ್ಲಿ ಕವಚಕುಂಡಲಗಳಿಲ್ಲದ ಮಾತ್ರಕ್ಕೆ ಭೀಷ್ಮನು ಅವನನ್ನು ಅರ್ಧರಥಿಕನೆಂದು ಜರೆದ; ಅದು ತಪ್ಪು. ಆ ಶಕ್ತ್ಯಾಯುಧ ಸಮೇತನಾದ ರಾಧೇಯನು ದೇವತೆಗಳಿಗಿಂತಲೂ ಬಲಶಾಲಿಯಾಗಿದ್ದ. ಅವನು ಕವಚಕುಂಡಲಗಳನ್ನು ಕಳೆದುಕೊಳ್ಳದೆ ಇದ್ದಿದ್ದರೆ ಶಕ್ತ್ಯಾಯುಧವನ್ನು ಇಟ್ಟುಕೊಂಡಿದ್ದಿದ್ದರೆ, ಯಾರೊಬ್ಬರೂ, ಇಂದ್ರ ವರುಣ ಕುಬೇರರೂ ಸಹ ಅವನನ್ನು ಸೋಲಿಸಲಾಗುತ್ತಿರಲಿಲ್ಲ. ನಿನ್ನ ಗಾಂಡೀವ ನನ್ನ ಚಕ್ರ ಸಹ ಅವನೆದುರು ನಿಷ್ಫಲವಾಗುತ್ತಿದ್ದವು. ನಿನಗಾಗಿ ಇಂದ್ರನು ಅವನಿಂದ ಕವಚಕುಂಡಲಗಳನ್ನು ದಾನವಾಗಿ ಪಡೆದ; ಬದಲಾಗಿ ಶಕ್ತಿಯನ್ನು ಕೊಟ್ಟ. ಈಗ ಅವನು ಶಕ್ತಿಯೂ ಇಲ್ಲದೆ ಹಲ್ಲು ಕಿತ್ತ ಹಾವಿನಂತಾಗಿರುವನು. ದೈವಶಕ್ತಿಯನ್ನು ಕಳೆದುಕೊಂಡಿರುವ ಅವನನ್ನೀಗ ಸೋಲಿಸುವುದು ಸುಲಭ. ಆದರೆ ಈಗಲೂ, ನಿನ್ನನ್ನು ಬಿಟ್ಟರೆ ಅವನನ್ನು ಕೊಲ್ಲಬಲ್ಲವರು ಯಾರೂ ಇಲ್ಲ.``ರಾಧೇಯನು ಸಾತ್ವಿಕ ಮನುಷ್ಯ; ಎಷ್ಟೋ ಸತ್ಕಾರ್ಯಗಳನ್ನು ಮಾಡಿದ್ದಾನೆ. ಮರ್ಯಾದೆ ಕೊಡಬೇಕಾದವರಿಗೆ ಕೊಟ್ಟಿದ್ದಾನೆ. ಅವನು ಜೀವಮಾನವಿಡೀ ಮಾಡಿದಂತಹ ತಪಸ್ಸನ್ನು ಮನುಷ್ಯ ಮಾತ್ರದವರು ಮಾಡಲಾರರು. ಅವನು ಶತ್ರುಗಳಿಗೂ ಕರುಣೆ ತೋರಿಸುವಂತಹ ಭೂತದಯೆ ಉಳ್ಳವನು. ಭಾರ್ಗವನೇ ತನಗೆ ಸಮಾನನೆಂದಿರುವ ಉತ್ತಮ ಧನುರ್ಧಾರಿ. ಅವನ ಹಿರಿಮೆ ನನಗೂ ಯುಧಿಷ್ಠಿರನಿಗೂ ಗೊತ್ತು. ಮಧ್ಯಾಹ್ನದ ಸೂರ್ಯನಂತೆ ಅವನ ಅತಿ ಪ್ರಕಾಶದಿಂದಾಗಿ ಅವನನ್ನು ತಿಳಿಯಲಾಗುವುದಿಲ್ಲ. ಅವನ ಔನ್ನತ್ಯವನ್ನು ನೀನರಿಯೆ. ನೀನು ಅವನನ್ನು ಹೆಚ್ಚಲ್ಲದಿದ್ದರೂ ಯುಧಿಷ್ಠಿರನಷ್ಟೇ ಮಹಾನುಭಾವನೆಂದು ತಿಳಿಯಬಹುದು. ಇಂದು ಅವನು ಶಕ್ತಿಯನ್ನು ಕಳೆದು ಕೊಂಡು ಸಾಮಾನ್ಯ ಮಾನವನಾಗಿಬಿಟ್ಟಿದ್ದಾನೆ; ನೀನವನನ್ನು ಯುದ್ಧದಲ್ಲಿ ಸೋಲಿಸಬಹುದು. ನೀನು ಸಾವಿನ ದವಡೆಯಿಂದ ಪಾರಾಗಿರುವೆ ಎಂಬುದೇ ನನ್ನ ಆನಂದಕ್ಕೆ ಕಾರಣ. ಬಾ, ಮುಂಚೂಣಿಗೆ ಹೋಗೋಣ. ಅಲ್ಲಿ ದ್ರೋಣನು ಪಾಂಡವಸೈನ್ಯದೊದಿಗೆ ಯುದ್ಧಮಾಡುತ್ತಿರುವನು. ಘಟೋತ್ಕಚನ ಸಾವನ್ನರಿತ ಅವನ ಸೈನಿಕರು ಹುಚ್ಚರಂತೆ ಹೋರುತ್ತಿರುವರು" ಎಂದನು. ಸಾತ್ಯಕಿಯು ರಾಧೇಯ ಇಷ್ಟುದಿನ ಆ ಶಕ್ತಿಯನ್ನು ಅರ್ಜುನನ ಮೇಲೆ ಪ್ರಯೋಗಿಸಲಿಲ್ಲವೇಕೆ ಎಂದು ಕೃಷ್ಣನನ್ನು ಕೇಳಲು, ಅವನು, ``ಪ್ರತಿರಾತ್ರಿಯೂ ಪಾಳೆಯದಲ್ಲಿ ಅವರು ಯುದ್ಧವನ್ನು ಚರ್ಚಿಸುತ್ತಿದ್ದರು. ಶಕ್ತ್ಯಾಯುಧವನ್ನು ಅರ್ಜುನನ ಮೇಲೆ ಬಳಸು ಎಂದು ದುಶ್ಶಾಸನ, ಶಕುನಿ, ದುರ್ಯೋಧನ ಎಲ್ಲರೂ ಅವನಿಗೆ ಹೇಳುತ್ತಿದ್ದರು. ರಾಧೇಯನೂ ಒಪ್ಪುತ್ತಿದ್ದನು. ಆದರೆ ನಾನು ಎಚ್ಚರಿಕೆಯಿಂದಿದ್ದು ಅರ್ಜುನನು ಬಹುಕಾಲ ದ್ವಂದ್ವಯುದ್ದಕ್ಕೆ ಅವನೊಂದಿಗೆ ಸಿಕ್ಕದಂತೆ ಜಾಣ್ಮೆಯಿಂದ ರಥವನ್ನು ನಡೆಸುತ್ತಿದ್ದೆ; ಸಿಕ್ಕಾಗಲೂ ಆಯುಧವು ಅವನಿಗೆ ತಕ್ಷಣವೇ ನೆನಪಾಗುತ್ತಿರಲಿಲ್ಲ" ಎಂದನು. ಅಷ್ಟರಲ್ಲಿ ದ್ರೋಣನ ಮುತ್ತಿಗೆಯ ಸದ್ದು ಕೇಳಿಸಲು ಯುಧಿಷ್ಠಿರನು ಭೀಮನಿಗೆ, ``ಹೋಗು ಮಗು, ನಿನ್ನ ಕರ್ತವ್ಯವನ್ನು ಮಾಡು. ಮುಂಚೂಣಿಯಲ್ಲಿ ಕೌರವಸೇನಾಪತಿ ಇರುವನು. ನೀನೇ ಹೋಗಬೇಕು, ನಾನು ಹೋಗಲಾರೆ. ಘಟೋತ್ಕಚನ ಸಾವಿನಿಂದ ನನಗೆ ಬವಳಿ ಬರುವಂತಾಗಿದೆ. ಭೀಮ, ನೀನೇ ಹೋಗಬೇಕು" ಎಂದನು. ಭೀಮನು ಕಣ್ಣೊರೆಸಿಕೊಂಡು ಯುದ್ಧರಂಗಕ್ಕೆ ಹೊರಟುಹೋದನು.ಯುಧಿಷ್ಠಿರನಿಗೆ ತುಂಬ ದುಃಖವಾಗಿರಬೇಕೆಂದು ಕೃಷ್ಣನು ಊಹಿಸಿದ್ದನು. ಅವನು ಮೂರ್ಛಿತನಾದದ್ದೂ ಹೌದು. ಕಷ್ಟದಿಂದ ಎದ್ದು ಕೃಷ್ಣನೊಂದಿಗೆ ಮಾತನಾಡಿದನು. ಕೃಷ್ಣನು ಅವನಿಗೆ ``ದುಃಖಕ್ಕೆ ಈಡಾಗಬೇಡ ದೊರೆಯೇ. ನೀನು ಧೈರ್ಯದಿಂದಿರಬೇಕು. ರಾಜನಾದವನಿಗೆ ಈ ದೌರ್ಬಲ್ಯವಿರಬಾರದು. ದುಃಖವನ್ನು ಸಹಿಸಿಕೊಂಡು ಮೇಲೇಳು" ಎಂದದ್ದು ಕೇಳಿಸಿತು. ಯುಧಿಷ್ಠಿರನು ``ಯುದ್ಧದ ನಿಯಮಗಳೆಲ್ಲ ನನಗೆ ಗೊತ್ತು. ರಣರಂಗದ ಬದುಕು ಅಸ್ಥಿರವೆನ್ನುವುದೂ ಗೊತ್ತು. ಆದರೆ ಹೃದಯವು ನನ್ನ ಮಗುವಿಗಾಗಿ ಅಳುತ್ತಿದೆ. ಅವನು ಮಾಡಿದುದನ್ನೆಲ್ಲ ಸ್ಮರಿಸದೇ ಹೋದರೆ, ಈ ಭೂಮಿಯ ಮೇಲೆ ನನ್ನಂತಹ ಪಾಪಿ ಇನ್ನೊಬ್ಬನಿರುವುದಿಲ್ಲ. ನನಗೆ ಅವನನ್ನು ಕಂಡರೆ ಸಹ ದೇವರ ಮೇಲಿರುವುದಕ್ಕಿಂತ ಎರಡರಷ್ಟು ಪ್ರೀತಿ. ನಾವು ಕಾಮ್ಯಕವನದಲ್ಲಿದ್ದಾಗ ಅವನು ನಮ್ಮಲ್ಲಿಗೆ ಬಂದನು. ಅರ್ಜುನ ತಪಸ್ಸಿಗೆ ಹೋಗಿದ್ದಾಗ ನಮ್ಮೊಡನೆಯೇ ಇದ್ದನು. ನಮ್ಮೊಡನೆ ಹಿಮವತ್ಪರ್ವತಕ್ಕೆ ಬಂದನು. ನಡೆಯಲಾರದೆ ಹೋದ ದ್ರೌಪದಿಯ ನೆರವಿಗೆ ಬಂದವನು ಅವನು. ಯುದ್ಧವು ಪ್ರಾರಂಭವಾದಾಗಿನಿಂದಲೂ ನಮಗೆ ಪ್ರಿಯವಾದುದನ್ನೇ ಯಾವಾಗಲೂ ಮಾಡುತ್ತಿದ್ದನು. ಅವನನ್ನು ಕಳೆದುಕೊಂಡ ನಾನು ಹೇಗೆತಾನೆ ಸಮಾಧಾನ ತಂದುಕೊಳ್ಳಲಿ? ನೀವಿಷ್ಟು ಜನ ನೋಡುತ್ತಿರುವಾಗಲೂ ಅವನು ಹೇಗೆ ಸತ್ತ? ಅಭಿಮನ್ಯು ಸತ್ತಾಗಲಾದರೆ ನಾವು ಯಾರೂ ಅವನ ನೆರವಿಗೆ ಹೋಗಲು ಸಾಧ್ಯವಾಗಿರಲಿಲ್ಲ. ಆದರೆ ಈ ಮಗು ನಿಮ್ಮ ಕಣ್ಣೆದುರಿಗೇ ಸತ್ತನಲ್ಲ? ಅಭಿಮನ್ಯುವಿನ ಕೊಲೆಗಾರರಿಗೆ ಇನ್ನೂ ಶಿಕ್ಷೆಯಾಗಿಲ್ಲ. ಜಯದ್ರಥನೊಬ್ಬನನ್ನು ಅರ್ಜುನ ಕಷ್ಟಪಟ್ಟು ಕೊಂದ. ಬದಲಿಗೆ ದ್ರೋಣನನ್ನೋ ರಾಧೇಯನನ್ನೋ ಕೊಂದಿದ್ದರಾಗಿತ್ತು. ಅಭಿಮನ್ಯುವಿನ ಸಾವಿನಲ್ಲಿ ಅವರ ಪಾತ್ರವೇ ದೊಡ್ಡದು. ಈಗ, ಘಟೋತ್ಕಚನ ಸಾವಿಗಾಗಿ ರಾಧೇಯನನ್ನು ಶಿಕ್ಷಿಸುವವರಾರೂ ಇಲ್ಲವೆ? ನಾನೇ ಹೋಗಿ ಅವನೊಂದಿಗೆ ಹೋರಾಡಿ ಮಗುವಿನ ಸಾವಿನ ಸೇಡನ್ನು ತೀರಿಸಿಕೊಳ್ಳುವೆ" ಎಂದವನೇ ಹುಚ್ಚು ಕೋಪದಲ್ಲಿ ರಾಧೇಯನಿದ್ದಲ್ಲಿಗೆ ಓಡಿದನು. ಕೃಷ್ಣಾರ್ಜುನರೂ ಅವನ ಹಿಂದೆಯೇ ಹೋದರು. ಆಗ ಅಲ್ಲಿಗೆ ಬಂದ ವ್ಯಾಸನು ಯುಧಿಷ್ಠಿರನನ್ನು ತಡೆದು, ``ಯುಧಿಷ್ಠಿರ, ಘಟೋತ್ಕಚನು ಸತ್ತುದಕ್ಕಾಗಿ ಅಷ್ಟೊಂದು ಶೋಕಿಸಬೇಡ. ಅವನು ಸಾಯಬೇಕೆಂದು ವಿಧಿನಿಯಾಮಕವಿತ್ತು, ಸತ್ತ. ನಿನ್ನ ಅದೃಷ್ಟಕ್ಕೆ ರಾಧೇಯನು ಅರ್ಜುನನನ್ನು ಕೊಲ್ಲುವುದಕ್ಕೆಂದೇ ಇಟ್ಟುಕೊಡಿದ್ದ ಶಕ್ತ್ಯಾಯುಧವನ್ನು ಬಳಸಿದ್ದಾಗಿಹೋಯಿತು. ಇನ್ನು ರಾಧೇಯನು ಅರ್ಜುನನನ್ನು ಕೊಲ್ಲಲಾರ. ಮುಂದಿನ ಐದು ದಿನಗಳಲ್ಲಿ ನೀನು ರಾಜನಾಗುತ್ತೀಯೆ. ಹಿಂದಿರುಗಿ ಹೋಗು" ಎಂದು ಹೇಳಿ ಅದೃಶ್ಯನಾದನು.* * * * ಯುದ್ಧ ಮತ್ತೆ ಮೊದಲಾಯಿತು. ಎರಡೂ ಸೈನ್ಯಗಳು ಮತ್ತೆ ಮಾರಣಹೋಮವನ್ನು ಆರಂಭಿಸಿದವು. ಹೊತ್ತು ಮಧ್ಯರಾತ್ರಿಯನ್ನೂ ಮೀರಿತ್ತು. ಎಲ್ಲರಿಗೂ ನಿದ್ರೆ ತೂಗುತ್ತಿತ್ತು. ಆ ದಿನ ಬೆಳಗ್ಗೆಯಿಂದ ಬಿಡುವಿಲ್ಲದೆ ಯುದ್ಧವೇ ಯುದ್ಧ. ಸೂರ್ಯಾಸ್ತದ ನಂತರವೂ ಯುದ್ಧ ನಡೆದದ್ದು ಇದೇ ಮೊದಲು. ಯಾರಿಗೂ ಯುದ್ಧದ ಮೇಲೆ ಗಮನವಿಲ್ಲ; ಅವುಚಿಕೊಂಡು ಬರುತ್ತಿರುವ ನಿದ್ರೆ. ಸೈನಿಕರು ಒಬ್ಬೊಬ್ಬರಾಗಿ ನಿಂತಲ್ಲಿಯೇ ನಿದ್ರೆ ಬಂದು ಬೀಳಲಾರಂಭಿಸಿದರು. ಅವರನ್ನು ನೋಡಿ ಅರ್ಜುನನಿಗೆ ಅಯ್ಯೋ ಪಾಪ ಎನ್ನಿಸಿತು. ಯುದ್ಧದ ನಡುವೆಯೇ ಅವನು ತನ್ನ ಧ್ವನಿಯನ್ನೆತ್ತರಿಸಿ, ``ಯುದ್ಧಭೂಮಿಯಲ್ಲಿರುವ ಎಲ್ಲರೂ ಬಳಲಿದ್ದಾರೆ. ನಮ್ಮೆಲ್ಲರಿಗೂ ಆಯಾಸವಾಗಿದೆ. ಕಾರ್ಗತ್ತಲು ಕವಿದಿದೆ; ಯಾರಿಗೂ ಏನೂ ಕಾಣಿಸುತ್ತಿಲ್ಲ. ವಿರೋಧಪಕ್ಷದವರಾದ ನೀವೂ ಒಪ್ಪುವುದಾದರೆ, ನಾವೆಲ್ಲರೂ ಇಲ್ಲೇ ಭೂಮಿಯ ಮೇಲೆ ಸ್ವಲ್ಪ ಕೈಕಾಲು ಚಾಚಿ ವಿಶ್ರಮಿಸೋಣ. ಚಂದ್ರೋದಯವಾದ ನಂತರ ಪುನಃ ಯುದ್ಧಮಾಡೋಣ" ಎಂದನು. ಅವನ ಸಲಹೆಯನ್ನು ಕೌರವರು ಒಪ್ಪುತ್ತಿದ್ದಂತೆಯೇ ಯಾರು ಯಾರು ಎಲ್ಲಿ ಎಲ್ಲಿ ಇದ್ದರೋ ಅಲ್ಲಲ್ಲೇ ನೆಲದ ಮೇಲೊರಗಿ ನಿದ್ರಿಸತೊಡಗಿದರು. ಎಲ್ಲೆಲ್ಲು ನಿದ್ರಿಸುವ ಸೈನಿಕರು; ಎಲ್ಲರೂ ಅರ್ಜುನನನ್ನು, ``ಇತರರ ಬಗ್ಗೆ ಅನುಕಂಪವುಳ್ಳವನು ಅರ್ಜುನನೊಬ್ಬನೇ. ದೇವರು ಅವನಿಗೆ ಒಳ್ಳೆಯದನ್ನು ಮಾಡಲಿ" ಎಂದು ಹಾಡಿ ಹರಸಿದರು. ಅತ್ತು ಅತ್ತು ಮಲಗಿದ ತಾಯ್ಮಡಿಲ ಮಗುವಿನಂತೆ ಯುದ್ಧಭೂವಿಯು ಶಾಂತವಾಯಿತು.ಅವರು ಒಂದು ಗಂಟೆಯಷ್ಟು ನಿದ್ರಿಸುವಷ್ಟರಲ್ಲಿ ಪೂರ್ವದಿಕ್ಕಿನಲ್ಲಿ ಚಂದ್ರೋದಯವಾಯಿತು. ಹೊಸದಾಗಿ ಅರಳಿದ ಕೆಂಪುಕಮಲದಂತೆ ಚಂದ್ರನು ತನ್ನ ಕಿರಣಗಳನ್ನು ಆ ಭಯಾನಕವಾದ ಯುದ್ಧ ಭೂಮಿಯ ಮೇಲೆ ಹರಡಿದನು. ಕ್ರಮೇಣ ಕಮಲದ ಕೆಂಪು ಸುಂದರಸ್ತ್ರೀಯ ಕತ್ತಿನಂತೆ ಮೃದುಮಧುರ ಹಳದಿಯಾಗಿ, ಮೃದುಹಳದಿ ನೀಲಶೀತಲಶ್ವೇತವಾಗಿ ಆಕಾಶದಲ್ಲಿ ಮೇಲೇರತೊಡಗಿದನು. ಸೂರ್ಯೋದಯವಾಯಿತೋ ಎಂದು ಭ್ರಮೆಪಡುತ್ತ ಒಬ್ಬೊಬ್ಬರಾಗಿ ಎಲ್ಲರೂ ನಿದ್ರೆ ತಿಳಿದೆದ್ದರು. ಇದ್ದಕ್ಕಿದ್ದಂತೆ ಹೋರಾಟಸಿದ್ಧತೆಯ ಶಬ್ದತುಮುಲ ಮತ್ತೆ ಮುಗಿಲು ಮುಟ್ಟಿತು. ಸೈನಿಕರನ್ನು ರಾತ್ರಿಯುದ್ಧಕ್ಕೆ ತೊಡಗಿಸಿದ್ದು ಅತ್ಯಂತ ಅಮಾನವೀಯವಾಗಿದ್ದಿತು. ಇನ್ನೂ ಸರಿಯಾಗಿ ಎಚ್ಚರವಾಗುವುದರೊಳಗೆ ಮತ್ತೆ ಯುದ್ಧ. ಸೇನಾಪತಿಯಾದ ಮೇಲೆ ದ್ರೋಣನಿಗೆ ಮಾನವಸಹಜ ದಯೆಯೇ ಹೊರಟುಹೋಗಿದ್ದಿತು. ಭೀಷ್ಮನಿದ್ದಾಗ ಇಂತಹ ಯುದ್ಧ ನಡೆದಿರಲಿಲ್ಲ. ಆದರೆ ಯಾರೂ ಗೊಣಗಾಡಲಿಲ್ಲ-ಸೈನಿಕನಾದಮೇಲೆ ರಾತ್ರಿಯೇನು, ಹಗಲೇನು? ಉಳಿದಿದ್ದ ಕಾಲುಭಾಗ ರಾತ್ರಿಯಲ್ಲಿ ಚಂದ್ರನ ಬೆಳಕಿನಲ್ಲಿ ಮತ್ತೆ ಯುದ್ಧವು ಪ್ರಾರಂಭವಾಯಿತು. ಸ್ವಲ್ಪಹೊತ್ತಿನಲ್ಲಿ ಆ ಬೆಳಕು ಹಿಂಚಾಗಿ, ಪೂರ್ವದಾಕಾಶದ ತಾಮ್ರವರ್ಣದ ಛಾಯೆ ಮುಂಚಾಚಿತು; ಇನ್ನು ಸ್ವಲ್ಪಹೊತ್ತಿನಲ್ಲಿಯೇ ಸೂರ್ಯನು ತನ್ನೆಲ್ಲ ವೈಭವದೊಂದಿಗೆ ಪ್ರತ್ಯಕ್ಷನಾದ. ಎಲ್ಲರ ಹೃದಯಗಳಲ್ಲಿ ಉತ್ಸಾಹ ತುಂಬಿ ಸಂತೋಷ ಸೂರೆಯಾಯಿತು. ಪ್ರತಿಯೊಬ್ಬನೂ ಭಕ್ತಿಯಿಂದ ಸೂರ್ಯನಿಗೆ ಕೈಮುಗಿದು ಪ್ರಾರ್ಥಿಸಿದನು. ಮಹಾಯುದ್ಧದ ಹದಿನೈದನೆಯ ದಿನದ ಸೂರ್ಯೋದಯವಾಯಿತು. ಅದು ದ್ರೋಣ ನಾಯಕತ್ವದ ಐದನೆಯ ದಿನ. ಎಲ್ಲರೂ ರಾತ್ರಿ ಯುದ್ಧರಂಗದಲ್ಲಾದ ಸರ್ವನಾಶವನ್ನು ನೋಡಿದರು; ಆದರೆ ಅವರ ಬಗ್ಗೆ ಚಿಂತಿಸಲು ಸಮಯವೆಲ್ಲಿ? ಯುದ್ಧವನ್ನು ಮುಂದುವರೆಸಲೇಬೇಕು.ಚಂದ್ರೋದಯವಾಗುತ್ತಿದ್ದಾಗ ದುರ್ಯೋಧನನು ದ್ರೋಣನೊಂದಿಗೆ ಮಾತನಾಡುತ್ತಿದ್ದನು. ಯಥಾಪ್ರಕಾರ ಅವನು, ``ನೀವು ನಮ್ಮ ಸೇನಾಪತಿಗಳು. ದಿವ್ಯಾಸ್ತ್ರಗಳನ್ನುಳ್ಳವರು. ಆದರೂ ಪಾಂಡವರಿಂದ, ಅದರಲ್ಲೂ ಅರ್ಜುನನಿಂದ ನಮ್ಮ ಕಡೆ ಆಗಿರುವ ನಾಶಕ್ಕೆ ಲೆಕ್ಕವಿಲ್ಲ. ಧನುರ್ವಿದ್ಯೆಯ ಪಿತಾಮಹರು ನೀವು. ಆದರೂ ನಮ್ಮ ದುರದೃಷ್ಟಕ್ಕೆ ನಿಮಗೆ ಪಾಂಡವರನ್ನು ಕಂಡರೇ ಹೆಚ್ಚು ಪ್ರೀತಿ. ಅರ್ಜುನನೊದಿಗೆ ನೀವು ಹೋರಾಡುವುದು ಬಹು ಮೃದುವಾಗಿ. ಯಾವಾಗಲೂ ನೀವು ಅವನ ಕಡೆಗೇ" ಇತ್ಯಾದಿಯಾಗಿ ಪ್ರಾರಂಭಿಸಿದನು. ಕರ್ಣಕರ್ಕಶವಾದ ಈ ನುಡಿಗಳನ್ನು ಕೇಳುತ್ತ ದ್ರೋಣನು ತನ್ನ ಇಂದಿನ ಸ್ಥಾನ, ಹಿಂದಿನ ಬದುಕು ಎಲ್ಲವನ್ನೂ ಧೇನಿಸತೊಡಗಿದನು. ಹುಡುಗುತನದಲ್ಲಿನ ದ್ರುಪದನೊಂದಿಗಿನ ಸ್ನೇಹ. ಅಶ್ವತ್ಥಾಮ, ಹಾಲು ಕುಡಿಯಬೇಕೆಂಬ ಅವನ ಆಸೆ. ಸುಖಜೀವನವನ್ನು ಅರಸಿ ಪಾಂಚಾಲದ ದ್ರುಪದನಆಸ್ಥಾನಕ್ಕೆ ಬಂದ ಮೂರ್ಖ ಆಸೆ. ರಾಜರುಗಳ ಸ್ವಾರ್ಥ ದುರಹಂಕಾರಗಳ ಮೊದಲ ಪರಿಚಯ. ಆಗಲೇ ಎಚ್ಚೆತ್ತುಕೊಳ್ಳಬಾರದಿತ್ತೆ? ಅರಣ್ಯದ ಋಷಿಗಳ ನಡುವಣ ಶಾಂತ ವಾತಾವರಣಕ್ಕೆ ಹೋಗಿ ಬದುಕಬಾರದಿತ್ತೆ? ಕವಲುದಾರಿಯಲ್ಲಿ ಬಂದು ನಿಂತಾಗ ಮತ್ತೆ ಮಾಡಿದ ತಪ್ಪು ಆಯ್ಕೆ. ಹೃದಯದಲ್ಲಿ ಕ್ರೋಧಕ್ಕೆ, ದ್ರುಪದನ ಮೇಲಿನ ಸೇಡಿಗೆ, ಕೊಟ್ಟ ಅವಕಾಶ. ಅವನ ದುರಹಂಕಾರವನ್ನು ಕೊಂದು ಪಾಠ ಕಲಿಸುವ ಆಸೆ. ಅದಕ್ಕಾಗಿಯೇ ಅಲ್ಲವೆ ಹಸ್ತಿನಾಪುರಕ್ಕೆ ಬಂದದ್ದು? ಆಗ ಭೀಷ್ಮ ಹೇಳಿದ ಕೌರವ ಪಾಂಡವರ ವಿಚಾರ, ಅವರ ಭವಿಷ್ಯ. ದ್ರುಪದನ ಆಸ್ಥಾನದಲ್ಲಿ ತನಗಾದ ಅವಮಾನವನ್ನೂ ಪ್ರತೀಕಾರದ ಅವಕಾಶವನ್ನು ಹುಡುಕಿಕೊಂಡು ಹಸ್ತಿನಾಪುರಕ್ಕೆ ಬಂದಿರುವುದಾಗಿಯೂ ತಾನು ಹೇಳಿದಾಗ, ಆ ವೃದ್ಧನು ನಕ್ಕು, ನೋವು ತುಂಬಿದ ಕಟುವಾದ ದನಿಯಲ್ಲಿ ``ನೀನು ಸರಿಯಾದ ಸ್ಥಳಕ್ಕೇ ಬಂದಿರುವೆ; ನಮ್ಮಲ್ಲಿ ಧನುರ್ವಿದ್ಯೆ ಕಲಿಯಬಯಸುವ ನೂರಾರು ಮಕ್ಕಳಿವೆ" ಎಂದದ್ದು; ತಾನು ಹಸ್ತಿನಾಪುರಕ್ಕೆ ಬಂದದ್ದೇ ಒಳ್ಳೆಯದಾಯಿತು ಎಂದು ಕೊಂಡದ್ದು. ಆದರೀಗ ಅನಿಸುತ್ತಿದೆ ಅದೇ ತಾನು ಮಾಡಿದ ಮೂರ್ಖ ಕೆಲಸ ಎಂದು.ಹಸ್ತಿನಾಪುರದಲ್ಲಿರುತ್ತ ತನ್ನ ಬ್ರಾಹ್ಮಣಸಹಜ ಸ್ವಭಾವದ ಇನಿತು, ಮೃದುತ್ವ ಎಲ್ಲಾ ಎಲ್ಲಿ ಹೋದವು? ಬದಲಿಗೆ ತನ್ನನ್ನು ಅವಮಾನಿಸಿದ ದುರಹಂಕಾರಿ ದ್ರುಪದನನ್ನು ಶಿಕ್ಷಿಸುವ ಬಯಕೆ ಬೆಳೆಯುತ್ತಾ ಹೋಯಿತು. ತಾನೂ ಅಷ್ಟೇ ದುರಹಂಕಾರಿಯಾಗಿದ್ದೆನೆಂದು ಈಗ ಅನಿಸುತ್ತಿದೆ. ಸೇಡಿನಾಸೆಗಾಗಿ ನೈತಿಕ ಆತ್ಮಹತ್ಯೆ ಮಾಡಿಕೊಂಡೆ; ಹಸ್ತಿನಾಪುರದಲ್ಲಿ ಸಂಬಳದ ಆಳಾದೆ. ಅರ್ಜುನ ಗುರುದಕ್ಷಿಣೆಗಾಗೆ ದ್ರುಪದನನ್ನು ಶಿಕ್ಷಿಸಿದ. ಆದರೆ ಅಷ್ಟುಹೊತ್ತಿಗೆ ಸಿಟ್ಟೆಲ್ಲಾ ತಣ್ಣಗಾಗಿತ್ತು; ಸೇಡಿನ ಸುಖ ಸಿಕ್ಕಲೇ ಇಲ್ಲ. ದ್ರುಪದನನ್ನು ನೋಡಿದ ತಾನು, ``ನಿನಗೆ ಪಾಠ ಕಲಿಸಬೇಕೆಂದು ಹೀಗೆ ಮಾಡಿದೆ; ಇನ್ನು ನಾವು ಸ್ನೇಹಿತರಾಗೋಣ" ಎಂದೆ; ದಶಕದಷ್ಟು ದೀರ್ಘಕಾಲದ ದ್ವೇಷವನ್ನು ಈ ಮಾತು ಅಳಿಸುತ್ತದೆ ಎಂದು ಭ್ರಮಿಸಿದೆ. ಇತರರಿಗೂ ಸೇಡು ಇದ್ದೀತು ಎಂಬುದನ್ನೇ ಮರೆತೆ. ದ್ರುಪದ ತನ್ನನ್ನು ಕೊಲ್ಲುವುದಕ್ಕಾಗಿಯೇ ಅಗ್ನಿಯನ್ನು ಪ್ರಾರ್ಥಿಸಿ ಮಗನನ್ನು ಪಡೆದ.ಬಾಲಕರಾಗಿದ್ದ ಪಾಂಡವ ಕೌರವರ ನಡುವೆ ದ್ವೇಷ ಬೆಳೆಯುತ್ತಿದ್ದುದನ್ನು ಗಮನಿಸುತ್ತಿದ್ದ ತಾನು ಅದನ್ನು ತಡೆಯಬಾರದಿತ್ತೆ? ನೋಡಿಯೂ ಸುಮ್ಮನಿದ್ದೆ. ಹೋಗಲಿ, ಹುಡುಗರ ವಿದ್ಯಾಭ್ಯಾಸ ಮುಗಿದು ಸೇಡು ತೀರಿಸಿಕೊಂಡಾದ ಮೇಲಾದರೂ ತಾನು ಹಸ್ತಿನಾಪುರವನ್ನೂ ಅದರ ಜೊತೆಗಿನ ಪ್ರಾಪಂಚಿಕತೆಯನ್ನೂ ಬಿಟ್ಟು ಅರಣ್ಯಕೆ ಹೋಗಿ ವಾನಪ್ರಸ್ಥನಾಗಬಾರದಿತ್ತೆ? ಅದನ್ನೂ ಮಾಡಲಿಲ್ಲ. ದುರಂತದ ಮೊಟ್ಟೆಯ ಮೇಲೆ ವಿಧಿ ಕಾವು ಕೂತಿರುವುದನ್ನು ಕಂಡರೂ ಕಾಣದಂತಿದ್ದೆ. ದ್ಯೂತ ನಡೆದಾಗ ಅದು ಅಧರ್ಮವೆಂದು ತನಗೆ ಅನಿಸಲಿಲ್ಲವೆ, ಗೊತ್ತಿರಲಿಲ್ಲವೆ? ಆಗ ಹಿರಿಯನಾಗಿ ತಾನು ಯಾವ ಅಭಿಪ್ರಾಯವನ್ನೂ ಕೊಡದೆ ಸುಮ್ಮನಿದ್ದು ಪಾಂಡವರಿಗೆ ಅನ್ಯಾಯ ಮಾಡಿದೆ. ಅವರನ್ನು ವನವಾಸಕ್ಕೆ ಕಳಿಸಿದಾಗ, ಯುದ್ಧವಾದೀತೆ ಎಂದು ಹೆದರಿದ ದುರ್ಯೋಧನ ತನ್ನಲ್ಲಿಗೆ ಬಂದಾಗ, ತಾನು ಅವನಿಗೆ ಹೆದರಬೇಡ, ನಿನಗಾಗಿ ನಾನು ಹೊರಾಡುತ್ತೇನೆ ಎಂದು ಧೈರ್ಯ ಕೊಟ್ಟೆ. ಅದೇ ಮೂರ್ಖತನದ ಹೆಜ್ಜೆ, ಪಾಪದ ಮೊದಲ ಮೆಟ್ಟಿಲು. ಅದನ್ನು ಹತ್ತಿದ ಮೇಲೆ ಈಗ ಮುಂದುವರೆಯದಿದ್ದರೆ ಹೇಗೆ? ಜೀವನದ ಎಷ್ಟೋ ಇಂತಹ ವಿಚಾರಗಳಲ್ಲಿ ಹಿಂದಕ್ಕೆ ಹೋಗಿ ಸರಿಪಡಿಸಿಕೊಳ್ಳಬೇಕು ಎನ್ನಿಸಿದರೂ ಹಾಗೆ ಮಾಡುವುದು ಸಾಧ್ಯವೇ ಇಲ್ಲ.ಈಗ, ಭೀಷ್ಮ ಸೋತು ಶರಶಯ್ಯೆಯಲ್ಲಿ ಮಲಗಿದ ನಂತರ, ತಾನು ಕೌರವ ಸೈನ್ಯಾಧಿಪತಿ. ಈ ದೊಡ್ಡ ಮರ್ಯಾದೆ ತನ್ನ ತಲೆಯನ್ನು ತಿರುಗಿಸಿತು, ಗಿರಗಿರನೆ. ತಾನಾಗಿಯೇ ದುರ್ಯೋಧನನ ಬಳಿಗೆ ಹೋಗಿ ನಿನಗೆ ಬೇಕಾದ ವರ ಕೇಳು, ಕೊಡುತ್ತೇನೆ ಎಂದೆ; ಯುಧಿಷ್ಠಿರನನ್ನು ಸೆರೆಹಿಡಿದು ತಂದುಕೊಡುತ್ತೇನೆ ಎಂದೆ. ಪಾಪ, ಅವನ ತನಗೇನು ಮಾಡಿದ್ದ? ಭೀಮನ ಮಾತುಗಳು ತನ್ನನ್ನು ಬೆಂಕಿಯಂತೆ ಸುಟ್ಟಿದ್ದವು; ಆದರೂ ಅವು ನಿಜ. ಅದಕ್ಕಾಗಿಯೇ ಅವನನ್ನೆದುರಿಸಲಾರದೆ ಹೋದೆ. ಸತ್ಯವನ್ನೆದುರಿಸುವುದು ಅಷ್ಟು ಸುಲಭವಲ್ಲ. ಮೊನ್ನೆ ರಾತ್ರಿ ದುರ್ಯೋಧನನ ಮಾತು ತನ್ನನ್ನು ಚೇಳಿನಂತೆ ಕುಟುಕಿತು; ಕೋಪದ ಭರದಲ್ಲಿ ತಾನು ಪಾಂಡವವೀರನೊಬ್ಬನನ್ನು ಮಾರನೆಯ ದಿನ ಕೊಂದೇ ಕೊಲ್ಲುವೆನೆಂದು ಪ್ರತಿಜ್ಞೆಮಾಡಿದೆ ಎಂದಮಾತ್ರಕ್ಕೆ, ನೆನ್ನೆ ತಾನು ಧರ್ಮವನ್ನೆಲ್ಲಾಗಾಳಿಗೆ ತೂರಿ, ಆ ಎಳೆಯು ಮಗುವನ್ನು ಮೋಸದಿಂದ ಕೊಲ್ಲುವುದೆ? ಮಗುವನ್ನು ಸಿಕ್ಕಿಹಾಕಿಸುವುದಕ್ಕಾಗಿಯೇ ಪದ್ಮವ್ಯೂಹವನ್ನು ರಚಿಸಿದೆ! ತನ್ನ ಈ ಪಾತಕಕ್ಕೆ ಎಂದಿಗೂ ಕ್ಷಮೆ ಇರದು. ತನ್ನ ಪ್ರೀತಿಯ ಅರ್ಜುನನಿಗೇ ದ್ರೋಹ ಮಾಡಿದೆ; ಅವನ ಹೃದಯವನ್ನು ಒಡೆದೆ. ಆದರೂ ಅವನು ಪ್ರೀತಿಯಿಂದ, ``ನೀವು ನನ್ನ ಗುರುಗಳು; ನಾನು ನಿಮಗೆ ಮಗನಿದ್ದ ಹಾಗೆ. ಅಶ್ವತ್ಥಾಮನಿಗೂ ನಿನಗೂ ವ್ಯತ್ಯಾಸವಿಲ್ಲವೆಂದು ನೀವೇ ಒಮ್ಮೆ ಹೇಳಿದ್ದಿರಲ್ಲ" ಎಂದು ಹೇಳಿದ. ಮಗನ ಸಾವಿನ ಸೇಡನ್ನು ತೀರಿಸಿಕೊಳ್ಳಲು ತನ್ನ ಅರ್ಜುನ ನೆನ್ನೆ ಅದು ಹೇಗೆ ಹೋರಾಡಿದ! ನ್ಯಾಯಬದ್ಧವಾದ ಆ ಹೋರಾಟ ತಡೆಯಲು ದುರ್ಯೋಧನ ತನ್ನನ್ನು ನಿಯಮಿಸಿದ್ದ. ತಾನೂ ಒಪ್ಪಿಕೊಂಡೆ. ಈಗ ಹೀಗೆ ಮಾತನಾಡಿ ಮನ ನೋಯಿಸುತ್ತಿದ್ದಾನೆ.ದ್ರೋಣನ ಮನಸ್ಸಿಗೆ ಇದ್ದಕ್ಕಿದ್ದಂತೆ ತುಂಬ ಜುಗುಪ್ಸೆಯಾಯಿತು. ಹಳೆಯ ಹೊಸ ಘಟನೆಗಳಲ್ಲವೂ ಮನಸ್ಸಿನಲ್ಲಿ ಕಡೆಯತೊಡಗಿದವು. ಈ ದುರ್ಯೋಧನನಿಗಾಗಿ ತಾನು ಎಷ್ಟೊಂದು ಪಾಪಕಾರ್ಯಗಳನ್ನು ಮಾಡಿದೆ, ಆದರೂ ತಾನು ಅರ್ಜುನನ ಪಕ್ಷಪಾತಿ ಎಂದು ಜರೆಯುತ್ತಿದ್ದಾನೆ. ಸಹಿಸಲಸಾಧ್ಯವಾದ ದುರಹಂಕಾರ ಇವನದು. ಕೃತಜ್ಞತೆ ಎಂಬುದು ಗೊತ್ತೇ ಇಲ್ಲದ ಘಟ್ಟದ ಮೇಲಿನವನಿವನು. ಕೃತಘ್ನ!ದುರ್ಯೋಧನನ ಮಾತು ಕೇಳುತ್ತಲೇ ಇದ್ದ ದ್ರೋಣನು ಇದ್ದಕ್ಕಿದ್ದಂತೆ ಕಣ್ಣುಬಿಟ್ಟು, ``ನೀನು ನನ್ನನ್ನು ರೇಗಿಸುತ್ತಿದ್ದೀಯೆ. ನನ್ನಿಂದಾದಷ್ಟೂ ನಾನು ಮಾಡುತ್ತಿರುವೆನೆಂದು ನಿನಗೆ ಗೊತ್ತು. ನಿನ್ನ ವಿಜಯದಾಸೆಗೆ ನೀನು ಹೀಗೆಲ್ಲ ಗಳಹುತ್ತಿರುವೆ. ಅಸ್ತ್ರಗಳನ್ನರಿಯದ ಅಮಾಯಕ ಸೈನಿಕರ ಮೇಲೆ ಅಸ್ತ್ರಗಳನ್ನು ಪ್ರಯೋಗಿಸು ಎನ್ನುತ್ತಿರುವೆ! ನಿನ್ನ ಪೋಷಣೆಯಲ್ಲಿರುವ ನಾನು ನೀನು ಬಯಸಿದರೆ ಹಾಗೂ ಮಾಡಬೇಕು. ಪಾಂಚಾಲರನ್ನೂ ಕೇಕಯರನ್ನೂ ಕೊಲ್ಲುವವರೆಗೆ ಈ ಕವಚವನ್ನು ತೆಗೆಯುವುದಿಲ್ಲ ಎಂದು ಪ್ರತಿಜ್ಞೆ ಮಾಡಿರುವೆಅಲ್ಲವೆ? ನಾನು ಸಾಯುವೆ; ಆದರೆ ಅದೇನೂ ನಿನಗೆ ಮುಖ್ಯಮಾದುದಲ್ಲ. ಆದರೆ ಅರ್ಜುನನನ್ನು ಸೋಲಿಸಬೇಕು ಎಂದರೆ ಮಾತ್ರ ಅದು ಎಂದಿಗೂ ಸಾಧ್ಯವಿಲ್ಲದ ಮಾತು, ಎಂದೂ ತೀರದ ಆಸೆ. ಅರ್ಜುನನ ಗುಣಗಳನ್ನು ನಾನು ಹೇಳಿದರೆ ನಿನಗೆ ಪಥ್ಯವಾಗುವುದಿಲ್ಲ. ಆದರೂ, ಕೊನೆಯ ಬಾರಿಗೆ ಹೇಳುತ್ತಿದ್ದೇನೆ ಕೇಳು: ಅರ್ಜುನನನ್ನು ಯಾರಿಗೂ ಜಯಿಸಲು ಸಾಧ್ಯವೇ ಇಲ್ಲ" ಎಂದನು.ದುರ್ಯೋಧನನಿಗೆ ಈ ಶತ್ರುಗಳನ್ನು ಹೊಗಳುವುದನ್ನು ಕಂಡರಾಗದು. ಎಲ್ಲರೂ ತನಗೆ ಪುನಃ ಪುನಃ ಹೇಳುತ್ತಿರುವುದು ಅದನ್ನೇ! ``ನಾವು ಖಂಡಿತ ಅವನನ್ನು ಸೋಲಿಸುತ್ತೇವೆ. ನಾನಿದ್ದೇನೆ. ಶಕುನಿ ರಾಧೇಯ ದುಶ್ಶಾಸನರಿದ್ದಾರೆ. ನಾವು ನಾಲ್ವರು ಸೇರಿ ಅವನನ್ನು ಸುಲಭವಾಗಿ ಸೋಲಿಸುತ್ತೇವೆ" ಎಂದು ಅವನ ಮಾತಿಗೆ ದ್ರೋಣನು ನಕ್ಕು ಸುಮ್ಮನಾದನು. ಆದರೂ ದುರ್ಯೋಧನನು, ``ಸೈನ್ಯವನ್ನು ಎರಡಾಗಿ ವಿಭಾಗಿಸೋಣ. ನಾವು ಒಂದು ಭಾಗವನ್ನು ತೆಗೆದುಕೊಂಡು ಅರ್ಜುನನಿರುವ ಪಾಂಡವಸೈನ್ಯದ ಮೇಲೆ ಯುದ್ಧಮಾಡುತ್ತೇವೆ. ನಿಮಗೆ ಇಷ್ಟವಾದರೆ ಯುದ್ಧಮಾಡಿ, ಇಲ್ಲವಾದರೆ ಅರ್ಜುನನ ಹಿರಿಮೆಯನ್ನು ಕುರಿತು ಚಿಂತಿಸುತ್ತ ರಣರಂಗದಿಂದ ಹೊರಗೆ ಕುಳಿತಿರಿ" ಎಂದು ಮಾರ್ಮಿಕವಾಗಿ ನುಡಿದನು.ಈ ಮಾತುಗಳು ದ್ರೋಣನನ್ನು ತಂಬ ನೋಯಿಸಿದವು. ಆದರೂ ಮನಸ್ಸಿನ ಸಮತೋಲವನ್ನು ಕಳೆದುಕೊಳ್ಳದೆ, ``ದುರ್ಯೋಧನ, ಈ ನಿನ್ನ ಪ್ರಯತ್ನದಲ್ಲಿ ನಿನಗೆ ಒಳಿತಾಗಲಿ. ಅರ್ಜುನನ್ನು ಸೋಲಿಸಬಲ್ಲವರಾರೂ ಇಲ್ಲ. ನೀನೇ ಪ್ರಯತ್ನಿಸು. ಸ್ವಾನುಭವಕ್ಕಿಂತ ದೊಡ್ಡದು ಇನ್ನೇನಿದೆ? ಯಾವಾಗಲೂ ಪಾಪಚಿಂತನೆಯಿಂದ ತುಂಬಿರುವ ನೀನು ಕ್ರೂರಿ ಮತ್ತು ಸಂಶಯ ಸ್ವಭಾವದವನು. ನಿನ್ನ ಯೋಗಕ್ಷೇಮದಲ್ಲಿ ಆಸಕ್ತರಾಗಿದ್ದು ನಿನಗಾಗಿ ಕೆಲಸಮಾಡುತ್ತಿರುವವರು ನಿನ್ನ ಪರಿಗಣನೆಗೇ ಬಾರರು. ಕುರುವಂಶದಲ್ಲಿ ಹುಟ್ಟಿದ ಕ್ಷತ್ರಿಯನಾದ ನೀನೇ ಅರ್ಜುನನೊದಿಗೆ ಹೋರಾಡು. ನಿನ್ನ ಕಾರಣಕ್ಕಾಗಿ ಇಷ್ಟೆಲ್ಲ ರಾಜರುಗಳ ಪ್ರಾಣವನ್ನೇಕೆ ತೆಗೆದೆ? ಇಷ್ಟುದಿನ ಏಕೆ ಯುದ್ಧಮಾಡದೆ ದೂರವಿದ್ದೆ? ಈ ಕುರುಕ್ಷೇತ್ರದ ಯುದ್ಧವೇ ನಿನ್ನ ಪ್ರೀತ್ಯರ್ಥವಾಗಿ ನಿನ್ನಿಚ್ಛೆಯಂತೆ ಪ್ರಾರಂಭವಾದದ್ದಲ್ಲವೆ? ಆದ್ದರಿಂದ ನೀನೂ ಯುದ್ಧಮಾಡಬೇಕಲ್ಲವೆ? ನಿನ್ನ ಮನಸ್ಸಿನಲ್ಲಿದ್ದ ಹೊಟ್ಟೆಕಿಚ್ಚಿನ ಕಿಡಿಯನ್ನು ಊದಿ ಊದಿ ದ್ವೇಷದ ದಾವಾನಲವನ್ನಾನಿಸಿದ ಈ ಪಾಪಿ ಶಕುನಿಯೇ ಈ ಸರ್ವನಾಶಕ್ಕೆ ಮೂಲಕಾರಣ. ತನ್ನ ಪಾಪದ ಫಲವನ್ನನುಭವಿಸಲು ಅವನಿಗಾಗಿ ಒಂದು ವಿಶೇಷ ನರಕವೇ ಕಾದಿದೆ. ಅವನೂ ಕ್ಷತ್ರಿಯ, ಬುದ್ಧಿವಂತ. ಈ ದಾಳ ವಿದ್ಯಾನಿಪುಣನು ಅರ್ಜುನನನ್ನು ಸೋಲಿಸುತ್ತಾನೆ. ಇದುವರೆಗೆ ಯಾರಿಗೂ ಆಗದಿದ್ದುದನ್ನು ಅವನು ಸಾಧಿಸುತ್ತಾನೆ! ಈ ಮೋಸಗಾರ ಯುದ್ಧದಲ್ಲಿ ಪಾಂಡವರನ್ನು ಸೋಲಿಸುತ್ತಾನೆ! ಅಷ್ಟೇಕೆ? ದುಶ್ಶಾಸನ ರಾಧೇಯ ನಾನು ಮೂರೇ ಜನ ದಾಯಾದಿಗಳನ್ನು ಸುಲಭವಾಗಿ ಕೊಲ್ಲಬಲ್ಲೆವು ಎಂದು ನೀನು ಹಸ್ತಿನಾಪುರದಲ್ಲಿದ್ದಾಗ ಆಗಾಗ್ಗೆ ಹೇಳುತ್ತಿದ್ದೆಯಲ್ಲವೆ? ಪಾಂಡವರ ವಿಚಾರ ಚರ್ಚೆಗೆ ಬಂದಾಗಲೆಲ್ಲ ನೀನು ಇದನ್ನೇ ಹೇಳುತ್ತಿದ್ದೆ. ಹಾಗೆಯೇ ಮಾಡು! ನಿನ್ನ ಮಾತನ್ನು ದಿಟವಾಗಿಸು. ಪಾಂಡವರು ನಿನ್ನನ್ನೆದುರಿಸಲು ಸಿದ್ಧರಾಗಿಯೇ ಇರುವರು. ಕ್ಷತ್ರಿಯನಾಗು ದುರ್ಯೋಧನ! ಉಕ್ಕಿನ ಆಯುಧಗಳನ್ನು ಬಳಸಲು ಮೊದಲುಮಾಡು, ನಾಲಿಗೆಗೆ ಸ್ವಲ್ಪ ವಿಶ್ರಾಂತಿ ಕೊಡು. ಪೂರ್ಣ ಸುಖೀಜೀವನವನ್ನು ಬಾಳಿದ್ದೀಯೆ. ಒಳ್ಳೆಯದನ್ನೂ ಮಾಡಿರುವೆ. ಸುಖದ ಬಟ್ಟಲ ಕೊನೆಯ ಹನಿಯನ್ನೂ ಬಿಡದೆ ಆಸ್ವಾದಿಸಿರುವೆ. ಬೇರಾರಿಗೂ ಇದ್ದಿರದಂತಹ ಅಧಿಕಾರವನ್ನನುಭವಿಸಿರುವೆ. ಕನಿಷ್ಠಪಕ್ಷ ಈಗಲಾದರೂ ಹೋಗಿ ಶತ್ರುಗಳನ್ನೆದುರಿಸು. ಪಾಂಡವರ ಕೈಯಿಂದ ದೊರಕುವ ಮೃತ್ಯು ನಿನ್ನ ಬಾಳಿಗೆ ಮುಕುಟಪ್ರಾಯವಾಗಲಿ" ಎಂದವನೇ ಸೈನ್ಯವನ್ನು ಎರಡು ಭಾಗ ಮಾಡಿ, ಒಂದನ್ನು ತೆಗೆದುಕೊಂಡು ಕೊನೆಯುಸಿರಿರುವವರೆಗೂ ಈ ಕೃತಘ್ನನಿಗಾಗಿ ಯುದ್ಧಮಾಡುವೆನೆಂದು ಹೇಳಿಕೊಳ್ಳುತ್ತ ಯುದ್ಧರಂಗಕ್ಕೆ ತೆರಳಿದನು.* * * * ಕೌರವಸೈನ್ಯ ಇಬ್ಭಾಗವಾದುದನ್ನು ನೋಡಿದ ಕೃಷ್ಣನು ಅರ್ಜುನನಿಗೆ ``ನಿನ್ನ ಶತ್ರುಗಳೆಲ್ಲ ಒಟ್ಟಿಗೇ ಇರುವ ಈ ಎಡ ಭಾಗದ ಸೈನ್ಯವನ್ನೆದುರಿಸುವುದು ಒಳ್ಳೆಯದು" ಎಂದನು. ಭೀಮನೂ ಸಹ ``ನಮ್ಮ ಶತ್ರುಗಳು ಹೆಚ್ಚಾಗಿರುವ ಕಡೆಗೇ ಹೋಗೋಣ; ನಮ್ಮ ಪ್ರತಿಜ್ಞೆಯನ್ನು ಸುಲಭವಾಗಿ ನೆರವೇರಿಸಿಕೊಳ್ಳಬಹುದು" ಎನ್ನಲು ಅರ್ಜುನನು ಹಾಗೆಯೇ ಮಾಡಿದನು. ದ್ರೋಣನ ಮುಂದೆ ಹೇಳಿದಂತೆ ಆ ನಾಲ್ಕು ಕೌರವರು ಅರ್ಜುನನನ್ನೆದುರಿಸಿದರು. ಅವನೊಡನೆ ಯುದ್ಧ ಅವರು ಅಂದುಕೊಂಡಷ್ಟು ಸುಲಭವಾಗಿರಲಿಲ್ಲ. ಧೂಳಿನಿಂದಾಗಿ ಮತ್ತು ಬಾಣಗಳಿಂದಾಗಿ ಸೂರ್ಯನೇ ಕಾಣಿಸುತ್ತಿರಲಿಲ್ಲ. ಅರ್ಜುನನು ಆ ಅರ್ಧ ಸೈನ್ಯವನ್ನು ಕ್ಷಣಮಾತ್ರದಲ್ಲಿ ಸೋಲಿಸಿದ್ದಾಯಿತು.ದ್ರೋಣನು ರಣರಂಗದ ಉತ್ತರಭಾಗದಲ್ಲಿ ಪಾಂಚಾಲರನ್ನೂ ಮತ್ಸ್ಯ ಕೇಕಯರನ್ನೂ ಎದುರಿಸಿ ಹೋರಾಡುತ್ತಿದ್ದನು. ಹೊಗೆಯಿಲ್ಲದ ಬೆಂಕಿಯಂತೆ ಪ್ರಜ್ವಲಿಸುತ್ತಿದ್ದ ಆ ಬ್ರಾಹ್ಮಣನ ತೇಜಸ್ಸಿನೆದುರಿಗೆ ಎಲ್ಲರೂ ಗಡಗಡನೆ ನಡುಗುತ್ತಿದ್ದರು. ದ್ರುಪದನ ಮೂವರು ಮೊಮ್ಮಕ್ಕಳು ಮೃತಪಟ್ಟರು. ಇದನ್ನು ತಾಳಲಾರದ ದ್ರುಪದನು ವಿರಾಟನೊಂದಿಗೆ ದ್ರೋಣನೊಂದಿಗೆ ಸೆಣೆಸಲು ಧಾವಿಸಿದನು. ಈ ದಿನ ದ್ರೋಣನು ಕೇವಲ ಕೋಪಗೊಂಡಿರಲಿಲ್ಲ; ಇಡೀ ಪ್ರಪಂಚದ ಮೇಲೆಯೇ ಅವನಿಗೆ ಅದಮ್ಯವಾದ ಕ್ರೋಧವು ಉಕ್ಕುತ್ತಿತ್ತು. ಅವನೆಸೆದ ಎರಡು ಚೂಪಾದ ಭಲ್ಲೆಗಳು ದ್ರುಪದ ವಿರಾಟ ಇಬ್ಬರನ್ನೂ ಏಕಕಾಲದಲ್ಲಿ ಉರುಳಿಸಿದವು. ತನ್ನಿಬ್ಬರು ಮಕ್ಕಳೂ ತನ್ನ ತಂದೆಯೂ ಏಕಕಾಲದಲ್ಲಿ ಮೃತಪಟ್ಟುದನ್ನು ನೋಡಿದ ಧೃಷ್ಟದ್ಯುಮ್ನನು ಉಕ್ಕಿಬಂದ ಸಂಕಟದಿಂದ, ``ಈ ದಿನ ಈ ದ್ರೋಣನನ್ನು ನಾನು ಕೊಲ್ಲಲಿಲ್ಲವಾದರೆ ನಾನು ಈವರೆಗೆ ಗಳಿಸಿದ ಪುಣ್ಯವೆಲ್ಲ ವ್ಯರ್ಥವಾಗಲಿ!" ಎಂದೆನ್ನುತ್ತ ನುಗ್ಗಿಬಂದು ಯುದ್ಧಮಾಡತೊಡಗಿದನು. ಅರ್ಜುನನೂ ಉಳಿದ ಪಾಂಡವರೂ ಅವನ ನೆರವಿಗೆ ಓಡಿಬಂದರು; ದುರ್ಯೋಧನನೂ ಉಳಿದ ಕೌರವರೂ ದ್ರೋಣನ ನೆರವಿಗೆ ಧಾವಿಸಿ ಬಂದರು. ಎಲ್ಲರಲ್ಲಿಯೂ ಅವರವರದೇ ಕಾರಣಗಳಿಂದಾಗಿ ಕೋಪವು ಉಕ್ಕಿ ಉಕ್ಕಿ ಹರಿಯುತ್ತಿತ್ತು. ಧೃಷ್ಟದ್ಯುಮ್ನನು ದ್ರೋಣನನ್ನು ಎದುರಿಸದಂತೆ ಪಾಂಡವರ ರಕ್ಷಣೆಯಿದ್ದಿತು. ಸ್ವಲ್ಪಹೊತ್ತು ನೋಡಿದ ಭೀಮನು, ``ಧೃಷ್ಟದ್ಯುಮ್ನ, ದ್ರೋಣನನ್ನು ಇಂದು ಕೊಲ್ಲುತ್ತೇನೆಂದು ಎಲ್ಲ ವೀರರೂ ಕೇಳುವಂತೆ ನೀನು ಪ್ರತಿಜ್ಞೆ ಮಾಡಿದ್ದೀಯೆ. ನಿನಗಾಗದಿದ್ದರೆ ನಾನು ಸಹಾಯಮಾಡುವೆ. ಈ ಪಾಪಿಯನ್ನು ನಾನು ಕೊಲ್ಲುತ್ತೇನೆ" ಎನ್ನುತ್ತ ಕೌರವಸೈನ್ಯವನ್ನು ಸೀಳಿಕೊಂಡು ದ್ರೋಣನಿರುವಲ್ಲಿಗೆ ಹೋಗತೊಡಗಿದನು.ಇದುವರೆಗೆ ನಡೆದ ಎಲ್ಲ ದಿನಗಳ ಯುದ್ಧಕ್ಕಿಂತಲೂ ಭೀಕರವಾಗಿತ್ತು ಈ ಹದಿನೈದನಯ ದಿನದ ಯುದ್ಧ. ದ್ರೋಣನು ಧರ್ಮವನ್ನು ಸಂಪೂರ್ಣವಾಗಿ ಗಾಳಿಗೆ ತೂರಿಬಿಟ್ಟಿದ್ದನು. ಅವನಾಡಿದ ಮೃತ್ಯುತಾಂಡವವು ಅನೂಹ್ಯವಾಗಿದ್ದಿತು. ಯಾರೂ ಯಾರಿಗೂ ಕಾಣಿಸದಷ್ಟು ಎಲ್ಲರೂ ದ್ರೋಣನ ಬಾಣಗಳಿಂದ ಆವೃತರಾಗಿದ್ದರು. ದ್ರೋಣನ ಆರ್ಭಟದಲ್ಲಿ ಯಾರಿಗೂ ಯಾರೊಡನೆಯೂ ದ್ವಂದ್ವಯುದ್ಧಮಾಡಲೂ ಸಾಧ್ಯವಾಗಲಿಲ್ಲ. ದುರ್ಯೋಧನನು ನಕುಲ ಸಹದೇವರನ್ನು ಸೋಲಿಸಿದನು. ಭೀಮನು ರಾಧೇಯನ ಹೊಡೆತಗಳನ್ನು ತಾಳಲಾರದೆ ಮೂರ್ಛೆ ಹೋದನು. ನಕುಲನ ರಥ ಹತ್ತಿಕೊಂಡು ಅವನು ರಣರಂಗದಿಂದ ನಿರ್ಗಮಿಸಬೇಕಾಯಿತು. ದ್ರೋಣಾರ್ಜುನರ ದ್ವಂದ್ವವು ನ ಭೂತೋ ನ ಭವಿಷ್ಯತಿ ಎಂಬಂತಿದ್ದಿತು. ಇಬ್ಬರೂ ತಮ್ಮ ತಮ್ಮ ಸಂಗ್ರಹದಲ್ಲಿದ್ದ ದಿವ್ಯಾಸ್ತ್ರಗಳನ್ನು ಉಪತೋಗಿಸತೊಡಗಿದರು. ಮನಸ್ಸಿನಲ್ಲೇ ದ್ರೋಣನು ಅರ್ಜುನನ ಒಂದೊಂದು ಹೊಡೆತಕ್ಕೂ ಭಲೆ ಭಲೆ ಎನ್ನುತ್ತಿದ್ದರೂ, ಹೊರಗೆ ಘೋರವಾಗಿ ಹೋರುತ್ತಿದ್ದನು. ಕೊನೆಗೆ ದ್ರೋಣನು ಬ್ರಹ್ಮಾಸ್ತ್ರವನ್ನು ಹೂಡಿದಾಗ ಸೈನ್ಯದಲ್ಲಿ ಹಾಹಾಕಾರವೆದ್ದಿತು. ಪಂಚಭೂತಗಳೆಲ್ಲ ಗಡಗಡನೆ ನಡುಗಿದವು. ಆಶ್ಚರ್ಯವೆಂಬಂತೆ ಅರ್ಜುನನೂ ಬ್ರಹ್ಮಾಸ್ತ್ರದಿಂದ ಅದನ್ನು ಅಡಗಿಸಿಬಿಟ್ಟನು. ದ್ರೋಣನು ಆಗ ಅರ್ಜುನನನ್ನು ಬಿಟ್ಟು ಪಾಂಚಾಲ ಸೇನೆಯನ್ನೆದುರಿಸಲು ಹೊರಟು ಹೋದನು. ಧೃಷ್ಟದ್ಯುಮ್ನನು ದುಶ್ಶಾಸನನನ್ನು ಸೋಲಿಸಿದನು. ದುರ್ಯೋಧನನು ಸಾತ್ಯಕಿಯನ್ನೆದುರಿಸಿದನು. ಇಬ್ಬರ ಬಾಣಗಳೂ ವಾಗ್ಬಾಣಗಳೂ ಒಂದರೊಡನೆ ಒಂದು ಸ್ಪರ್ಧಿಸುವಂತಿದ್ದವು. ಒಮ್ಮೆ ಗೆಳೆಯರಾಗಿದ್ದ ಅವರು ನಗುನಗುತ್ತಲೇ ಯುದ್ಧಮಾಡುತ್ತಿದ್ದರು. ಹಳೆಯ ಸ್ನೇಹಿತನೊಂದಿಗೆ ಯುದ್ಧಮಾಡಬೇಕಾಯಿತಲ್ಲ ಎಂಬ ಸಂಕಟದಿಂದ ದುರ್ಯೋಧನನು, ``ನಾನು ಇದೇನು ಮಾಡುತ್ತಿದ್ದೇನೆ, ಸಾತ್ಯಕಿ! ನನಗೂ ನನ್ನ ಕ್ರೋಧಕ್ಕೂ ದುರಹಂಕಾರಕ್ಕೂ ರಾಜ್ಯದಾಸೆಗೂ ಧಿಕ್ಕಾರವಿರಲಿ! ನಿನ್ನೊಡನೆ ಯುದ್ಧಮಾಡಾಲು ತೊಡಗಿಸಿದ ನನ್ನ ಕ್ಷತ್ರಿಯಜನ್ಮವನ್ನು ಸುಡಬೇಕು. ಒಂದು ಕಾಲದಲ್ಲಿ ನಾವು ಜೀವದ ಗೆಳೆಯರಾಗಿದ್ದೆವಲ್ಲವೆ? ಆಗಿನ ಜೇನಸವಿಯ ದಿನಗಳನ್ನು ನಾನೀಗ ನೆನೆದುಕೊಳ್ಳುತ್ತಿದ್ದೇನೆ. ಅಂತಹ ನಾವು ಈಗ ಶತ್ರುಗಳಂತೆ ಪರಸ್ಪರ ಯುದ್ಧಮಾಡುತ್ತಿರುವೆವಲ್ಲ! ನನ್ನ ದುರಾಸೆಯೊಂದಿಲ್ಲದಿರುತ್ತಿದ್ದರೆ, ನಮಗೆ ಈ ಗತಿ ಬರುತ್ತಿರಲಿಲ್ಲವೇನೋ" ಎಂದು ಕಣ್ಣೀರೊರೆಸಿಕೊಳ್ಳುತ್ತಲೇ ಯುದ್ಧಮಾಡಿದನು.ಸಾತ್ಯಕಿಯು ಯುದ್ಧಮಾಡುತ್ತಲೇ ನಕ್ಕು ``ಪ್ರಿಯ ಗೆಳೆಯ ದುರ್ಯೋಧನ, ಇದು ನಾವು ಕುಳಿತು ಮಾತನಾಡುತ್ತಿದ್ದ ಸಭೆಯಲ್ಲ, ಗುರುವಿನ ಮನೆಯೂ ಅಲ್ಲ, ನಾವೀಗ ಎಗ್ಗಿಲ್ಲದ ಎಳೆಯರೂ ಅಲ್ಲ" ಎನ್ನಲು ದುರ್ಯೋಧನನು, ``ಎಷ್ಟು ಬೇಗನೆ ಕಾಲ ಕಳೆದುಹೋಯಿತು! ನಾವು ಆಡಿ ಆನಂದಿಸುತ್ತಿದ್ದ ಆ ಆಟಗಳೆಲ್ಲಿ! ಅಂತಹ ನಾವು ಇಂದು ದ್ವಂದ್ವಯುದ್ಧ ಮಾಡುತ್ತಿರುವೆವಲ್ಲಾ, ಅಯ್ಯೋ ವಿಧಿಯೇ! ವಿಧಿಯೇ ನಮ್ಮ ಬಲವಾದ ಶತ್ರು! ರಾಧೇಯನೆನ್ನುವುದು ಸರಿ; ವಿಧಿನಿಯಾಮಕದ ಮುಂದೆ ನಾವೇನು ತಾನೆ ಮಾಡಲಾದೀತು?" ಎಂದನು. ಸಾತ್ಯಕಿಯು, ``ಕ್ಷತ್ರಿಯರಿಗೆ ವಿಧಿಸಿರುವ ನಿಯಮವಿದು: ಗೆಳೆಯರಾದರೂ, ಬಂಧುಗಳಾದರೂ, ಲೆಕ್ಕಿಸದೆ ಹೋರುವುದು. ಗುರುವನ್ನೇ ಆದರೂ, ಶಿಷ್ಯ ಯುದ್ಧದಲ್ಲಿ ಕೊಲ್ಲಲೇಬೇಕು. ನಿನ್ನ ಹೃದಯದಲ್ಲಿ ನನ್ನ ಮೇಲೆ ನಿಜವಾಗಿಯೂ ಪ್ರೀತಿಯಿರುವುದಾದರೆ, ದುರ್ಯೋಧನ, ನನ್ನನ್ನು ಆದಷ್ಟು ಬೇಗ ಕೊಂದುಬಿಡು! ಗೆಳೆಯನೊಡನೆ ಯುದ್ಧಮಾಡುವ ಈ ಸಂಕಟವನ್ನು ನಾನು ಅನುಭವಿಸಲಾರೆ. ನಿನ್ನ ಕೈಯಿಂದ ಸತ್ತು ಸ್ವರ್ಗ ಸೇರಿದೆನೆಂಬ ಸಂತೋಷವಾದರೂ ನನಗಿರಲಿ" ಎಂದನು. ಅನಂತರ ಅವರು ಮನಸ್ಸಿಟ್ಟು ಯುದ್ಧಮಾಡಿದರು. ಸಾತ್ಯಕಿಯು ದುರ್ಯೋಧನನನ್ನು ಸೋಲಿಸಿದ ನಂತರ ದೂರ ಹೊರಟುಹೋದನು. ಅವನಿಗೆ ಭಾವನಾತ್ಮಕವಾಗಿ ತುಂಬ ನೋವಾಗಿದ್ದಿತು. ಅವನಿಗೆ ದುರಹಂಕಾರಿ ದುರ್ಯೋಧನನ ಅಭ್ಯಾಸವಿದ್ದಿತು. ಆದರೆ ಬಾಲ್ಯಕಾಲದ ಸವಿನೆನಪನ್ನು ಮೆಲುಕುಹಾಕುವ ಈ ದುರ್ಯೋಧನ, ಇವನೊಂದಿಗೆ ಯುದ್ಧವು ತುಂಬ ನೋವನ್ನು ಕೊಡುತ್ತಿದ್ದಿತು. ಸಾತ್ಯಕಿಯು ಕುರುಸಾರ್ವಭೌಮನ ಕಣ್ಣಿನಲ್ಲಿ ನೀರನ್ನು ನೋಡಲಾರದಾದನು. ಇದೆಂತಹ ದಿವ್ಯ ಘಳಿಗೆ! ಇದನ್ನು ಯಾರಿಗೂ ಹೇಳಿಕೊಳ್ಳತಕ್ಕದ್ದಲ್ಲ. ಸಾತ್ಯಕಿಯು ದುರ್ಯೋಧನನನ್ನು ಇನ್ನೊಮ್ಮೆ ಎದುರಿಸಲಾರದವನಂತೆ ರಣರಂಗದ ಇನ್ನೊಂದು ಕಡೆ ಹೊರಟುಹೋದನು.ಮತ್ತೊಮ್ಮೆ ಯುದ್ಧವು ಸಂಕುಲವಾಯಿತು. ಪಾಂಡವ ಸೈನ್ಯವು ದ್ರೋಣನ ಕೈಯಲ್ಲಿ ಸಿಕ್ಕು ಅಸಹಾಯವಾಯಿತು. ಅವನ ಬ್ರಹ್ಮಾಸ್ತ್ರಪ್ರಯೋಗದಿಂದ ಕ್ಷಣಮಾತ್ರದಲ್ಲಿ ಇಪ್ಪತ್ತುಸಾವಿರ ಸೈನಿಕರು ನಿರ್ನಾಮವಾದರು. ಚಂಡಮಾರುತದಲ್ಲಿ ಎದ್ದ ಸಮುದ್ರದಲೆಗಳಂತೆ ಸೈನ್ಯವು ಅತ್ತಿಂದಿತ್ತ ತೊನೆಯುತ್ತಿದ್ದಿತು. ದ್ರೋಣನ ತೇಜಸ್ಸನ್ನು ತಡೆಯಲಾರದೆ ಎಲ್ಲರೂ ಉಳಿವಿಗಾಗಿ ಅರ್ಜುನನನ್ನು ಮೊರೆಯಿಟ್ಟರು. ಪಾಂಡವರು ತಮ್ಮೊಳಗೇ, ``ಇವನು ನಮ್ಮ ಆಚಾರ್ಯನಂತೆ ಇಲ್ಲವೇ ಇಲ್ಲ. ಯಾವುದೋ ಭೂತ ದ್ರೋಣನಲ್ಲಿ ಸೇರಿ ಈ ಅಮಾನುಷ ವರ್ತನೆಯನ್ನು ತೋರಿಸುತ್ತಿರಬೇಕು. ಪ್ರಳಯಕಾಲದ ಅಗ್ನಿಯಂತೆ ಜ್ವಲಿಸುತ್ತಿರುವ ಇವನನ್ನು ಯಾರು ತಾನೆ ಎದುರಿಸಲಾದೀತು?" ಎಂದು ಮಾತನಾಡಿಕೊಂಡರು. ಕೃಷ್ಣನು ಸೈನ್ಯದಲ್ಲಿ ಹರಡಿದ್ದ ಭಯವನ್ನು ಗಮನಿಸಿದನು. ದ್ರೋಣನು ಅಸ್ತ್ರಗಳನ್ನರಿಯದ ಅಮಾಯಕರ ಮೇಲೆ ಅನ್ಯಾಯವಾಗಿ ಅಸ್ತ್ರ ಪ್ರಯೋಗ ಮಾಡುತಿರುವುದನ್ನು ನೋಡಿ, ``ಯುಧಿಷ್ಠಿರ, ಈ ಮನುಷ್ಯನನ್ನು ಯುದ್ಧದಲ್ಲಿ ಸೋಲಿಸಲು ಸಾಧ್ಯವಿಲ್ಲ. ಅವನನ್ನು ಹೀಗೇ ಮುಂದುವರೆಯಲು ಬಿಟ್ಟರೆ ಸಂಜೆಯೊಳಗೆ ನಮ್ಮ ಕಡೆ ಒಬ್ಬ ಸೈನಿಕನೂ ಉಳಿಯಲಾರ. ಏನಾದರೂ ಉಪಾಯ ಮಾಡದಿದ್ದರೆ ನಮಗೆ ಉಳಿಗಾಲವಿಲ್ಲ. ಅವನು ತಾನಾಗಿ ಅಸ್ತ್ರಗಳನ್ನು ಕೆಳಗಿಡದಿದ್ದರೆ ನಾವು ಅವನನ್ನು ಕೊಲ್ಲಲು ಸಾಧ್ಯವಿಲ್ಲ. ಪ್ರಿಯ ಯುಧಿಷ್ಠಿರ, ಇಂದು ದ್ರೋಣನು ಅನ್ಯಾಯದ ಯುದ್ಧ ಮಾಡಲಾರಂಭಿಸಿರುವನು. ನಾವೂ ಅವನನ್ನು ಕೊಲ್ಲಲು ಅನ್ಯಾಯದ ವಿಧಾನವನ್ನೇ ಅನುಸರಿಸಬೇಕಾಗಿದೆ. ಧೃಷ್ಟದ್ಯುಮ್ನನ ಪ್ರತಿಜ್ಞೆ ನೆರವೇರಬೇಕಾದರೆ, ನಾವು ದ್ರೋಣನು ತನ್ನ ಅಸ್ತ್ರಗಳನ್ನು ತ್ಯಜಿಸುವಂತೆ ಮಾಡಬೇಕು. ಮಗ ಅಶ್ವತ್ಥಾಮ ಸತ್ತನೆಂದು ಕೇಳಿದರೆ ಅವನು ಹಾಗೆ ಮಾಡಬಹುದು ಎಂದು ನನಗನಿಸುತ್ತದೆ. ಅಶ್ವತ್ಥಾಮ ಸತ್ತನೆಂದು ನಾವು ಅವನಿಗೆ ಹೇಳೋಣ" ಎಂದನು.ಅರ್ಜುನನಿಗೆ ಈ ಸಲಹೆ ಇಷ್ಟವಾಗಲಿಲ್ಲ. ಉಳಿದವರೆಲ್ಲ ಒಪ್ಪಿದರು. ಯುಧಿಷ್ಠಿರನೂ ಕಷ್ಟದಿಂದ ಒಪ್ಪಿದ. ಭೀಮ ತನ್ನ ಸೈನ್ಯದೊಳಕ್ಕೇ ನುಗ್ಗಿ ಅಶ್ವತ್ಥಾಮನೆಂಬ ಆನೆಯನ್ನು ಗದೆಯಿಂದ ಹೊಡೆದು ಕೊಂದ. ಅನಂತರ ದ್ರೋಣನಿಗೆ ಕೇಳುವಷ್ಟು ಹತ್ತಿರ ಬಂದು, ಮುಖವೆಲ್ಲ ನಾಚಿಕೆಯಿಂದ ಕೆಂಪಾಗಿದ್ದರೂ, ``ಅಶ್ವತ್ಥಾಮನು ಸತ್ತ!" ಎನ್ನಲು ದ್ರೋಣನು ವಿಚಲಿತನಾದ. ಪ್ರಜ್ಞೆ ತಪ್ಪುವಂತಾದರೂ, ಸಾವರಿಸಿಕೊಂಡ. ತನ್ನ ಮಗನನ್ನು ಸೋಲಿಸಬಲ್ಲವರಾರು? ಭೀಮನ ಮಾತನ್ನು ನಂಬುವುದಾದರೂ ಹೇಗೆ? ಎರಡರಷ್ಟು ಶೌರ್ಯದೊಡನೆ ಧೃಷ್ಟದ್ಯುಮ್ನನೊಂದಿಗೆ ಯುದ್ಧವನ್ನು ಮುಂದುವರೆಸಿದ. ಭಯಂಕರ ಕೋಪದಿಂದ ಬ್ರಹ್ಮಾಸ್ತ್ರವನ್ನು ಮತ್ತೊಮ್ಮೆ ಅಭಿಮಂತ್ರಿಸಿ ಪಾಂಚಾಲರ ಮತ್ತು ಸೋಮಕರ ಸೈನ್ಯಗಳ ಮೇಲೆ ಬಿಟ್ಟ. ಈ ಅಮಾನುಷವಾದ ಮಾರಣಹೋಮವನ್ನು ನೋಡಿ ಅಂತರಿಕ್ಷದಲ್ಲಿದ್ದ ಋಷಿಗಳು ದ್ರೋಣನ ತಂದೆಯಾದ ಭಾರದ್ವಾಜನೊಡಗೂಡಿ ಮಾನವರ ಕಣ್ಣಿಗೆ ಗೋಚರವಾಗದಂತೆ ಅಲ್ಲಿಗೆ ಬಂದು, ``ದ್ರೋಣ, ನೀನು ನಿಂದ್ಯವಾದ ಮಾರ್ಗದಲಿ ಯುದ್ಧಮಾಡುತ್ತಿರುವೆ. ನಿನ್ನ ಮರಣದ ಸಮಯ ಹತ್ತಿರ ಬಂದಿದೆ. ನಮ್ಮನ್ನು ನೋಡಿ ಅಸ್ತ್ರಗಳನ್ನು ಕೆಳಗಿಡು. ನಮ್ಮನ್ನು ನೋಡಿದ ಮೇಲೆ ನೀನು ಯುದ್ಧಮಾಡಬಾರದು. ನೀನು ವೇದವೇದಾಂಗ ಪಾರಂಗತನಾದ ಬಾಹ್ಮಣ. ನಿನ್ನಂಥವನು ಕ್ಷತ್ರಿಯನಂತೆ ಕ್ರೂರನಾಗಬಾರದು. ನಿನ್ನ ದೃಷ್ಟಿಯನ್ನು ಕವಿದಿರುವ ಈ ಮಾಯೆಯ ಮುಸುಕನ್ನು ಕಿತ್ತೊಗೆ. ಪರಬ್ರಹ್ಮನ ಮೇಲೆ ಮನಸ್ಸಿಡು. ಈ ಭೂಮಿಯ ಮೇಲಣ ನಿನ್ನ ಪಯಣ ಮುಗಿಯಿತು. ನೀನು ಬ್ರಹ್ಮಾಸ್ತ್ರವನ್ನು ಪ್ರಯೋಗಿಸಿದ್ದು ತಪ್ಪು. ಅಸ್ತ್ರಗಳನು ಕೆಳಗಿಡು" ಎಂದರು. ಈ ಮಾತನ್ನು ಕೇಳಿ, ಭೀಮನು ಹೇಳಿದ್ದನ್ನೂ ಸ್ಮರಿಸಿಕೊಂಡು, ದ್ರೋಣನು ಇದ್ದಕ್ಕಿದ್ದಂತೆ ಸಪ್ಪಗಾದನು. ತನ್ನ ಮುಂದೆ ನಿಂತಿರುವವನು ತನ್ನನ್ನು ಕೊಲ್ಲುವುದಕ್ಕಾಗಿಯೇ ಹುಟ್ಟಿರುವ ಧೃಷ್ಟದ್ಯುಮ್ನ. ದ್ರೋಣನು ಯುಧಿಷ್ಠಿರನ ಕಡೆ ನೋಡಿ, ``ಮಗು, ನನ್ನ ಮಗನು ಸತ್ತದ್ದು ನಿಜವೆ?" ಎಂದನು. ಒಂದು ಸುಳ್ಳಿನಿಂದಾಗಿ ಇಡೀ ಲೋಕವೇ ತನ್ನದಾಗುವುದಾದರೂ ಸಹ ಯುಧಿಷ್ಠಿರನು ಸುಳ್ಳನ್ನು ಎಂದಿಗೂ ಹೇಳಲಾರ. ಬಾಲ್ಯದಿಂದ ಇಲ್ಲಿಯವರೆಗೆ ಒಂದು ಸುಳ್ಳನ್ನೂ ಹೇಳಿದವನಲ್ಲ ಯುಧಿಷ್ಠಿರ. ಈ ನಂಬಿಕೆಯ ಮೇಲೆ ಗುರುವು ತನ್ನ ಶಿಷ್ಯನನ್ನು ಅಶ್ವತ್ಥಾಮ ಸತ್ತದ್ದು ನಿಜವೇ ಎಂದು ಕೇಳಿದನು. ಇಂತಹ ತುರ್ತುಪರಿಸ್ಠಿತಿಯನ್ನು ಮೊದಲೇ ನಿರೀಕ್ಷಿಸಿದ್ದ ಕೃಷ್ನನು, ``ಇನ್ನು ಅರ್ಧದಿನ ದ್ರೋಣನು ಮುಂದುವರೆಯುವುದಕ್ಕೆ ಬಿಟ್ಟರೂ, ನಿನ್ನ ಕಡೆ ಒಬ್ಬನೂ ಉಳಿಯುವುದಿಲ್ಲ. ಸೈನ್ಯವನ್ನು ಉಳಿಸಲು ಈ ಸುಳ್ಳುನ್ನು ಹೇಳಲೇಬೇಕಾದ್ದು ನಿನ್ನ ಕರ್ತವ್ಯ. ಸುಳ್ಳು ಹೇಳುವುದು ಪಾಪವೆಂದು ನನಗೂ ಗೊತ್ತು. ಆದರೆ ಇಂತಹ ಪರಿಸ್ಠಿತಿಯಲ್ಲಿ ಸುಳ್ಳನ್ನು ಹೇಳಬಹುದು. ಈ ಸುಳ್ಳು ಸುಳ್ಳಾಗದು, ಇದರ ಪಾಪ ನಿನಗಂಟದು. ನೀನು ಭಯಪಡಬೇಡ" ಎಂದನು. ಯುಧಿಷ್ಠಿರನು ಈಗಾಗಲೇ ಕೃಷ್ಣನ ಮಾತಿಗೆ ಒಪ್ಪಿದ್ದನು. ಮನಸ್ಸಿಲ್ಲದ ಮನಸ್ಸಿನಿಂದ ಅವನು, ``ಸತ್ತಿದ್ದು ಅಶ್ವತ್ಥಾಮನೆಂಬ ಆನೆ ಎಂದನು. ``ಎಂಬ ಅನೆ" ಎನ್ನುವಾಗ ದ್ರೋಣನಿಗೆ ಕೇಳಿಸದಷ್ಟು ದನಿಯನ್ನು ತಗ್ಗಿಸಿದ್ದನು. ಯುಧಿಷ್ಠಿರನ ರಥವು ಅವನ ಧರ್ಮನಿಷ್ಠೆಯಿಂದಾಗಿ ಭೂಮಿಯಿಂದ ಯಾವಾಗಲೂ ನಾಲ್ಕಂಗುಲದಷ್ಟು ಮೇಲೆಯೇ ಇರುತ್ತಿದ್ದಿತು. ಆದರೆ ಈಗ, ಹೀಗೆ ಹೇಳಿದ ನಂತರ, ಅದು ಇತರರ ರಥಗಳಂತೆಯೇ ಭೂಮಿಯನ್ನು ಸ್ಪರ್ಶಿಸಿತು. ಇತರ ಎಲ್ಲರಂತೆಯೇ ಇಂದಿನಿಂದ ಯುಧಿಷ್ಠಿರನು ಸಾಮಾನ್ಯ ಮಾನವನಾಗಿ ಹೋದನು.ಯುಧಿಷ್ಠಿರನು ಹೇಳಿದುದನ್ನು ಕೇಳಿದ ದ್ರೋಣನು ಯುದ್ಧದಲ್ಲಿ ಎಲ್ಲ ಆಸಕ್ತಿಯನ್ನೂ ಕಳೆದುಕೊಂಡನು. ಎಚ್ಚರ ತಪ್ಪಿತು. ಮೂರ್ಛೆ ತಿಳಿದೆದ್ದ ಮೇಲೆ ಮನಸ್ಸಿಲ್ಲದ ಮನಸ್ಸಿನಿಂದ ಬಿಲ್ಲು ಕೈಗೆತ್ತಿಕೊಂಡನಾದರೂ ಅವನ ಹೃದಯವು ಯುದ್ಧದಲ್ಲಿರಲಿಲ್ಲ. ಅಷ್ಟರಲ್ಲಿ ತನ್ನ ರಥವನ್ನು ದ್ರೋಣನೆದುರಿಗೆ ತಂದಿದ್ದ ಧೃಷ್ಟದ್ಯುಮ್ನನು ಚೂಪಾದ ಬಾಣವೊಂದನ್ನು ದ್ರೋಣನ ಮೇಲೆ ಬಿಟ್ಟನು. ದ್ರೋಣನಿಗೆ ಕೈಯೇ ಓಡದಾಯಿತು. ಅಸ್ತ್ರಗಳೆಲ್ಲ ಮರೆತೇಹೋದವು. ಕೋಪದಿಂದ, ತನ್ನ ಗುರು ಆಂಗೀರಸನು ಕೊಟ್ಟಿದ್ದ ಬಿಲ್ಲನ್ನು ತೆಗೆದುಕೊಂಡು ದ್ವಂದ್ವಯುದ್ಧವನ್ನು ಆರಂಭಿಸಿದನು. ಧೃಷ್ಟದ್ಯುಮ್ನನ ಕುದುರೆಗಳನ್ನು ಕೊಂದು, ಬಿಲ್ಲನ್ನು ಮುರಿದನು. ಅವನು ಕತ್ತಿಯನ್ನು ಹಿರಿದು ಮೇಲೇರಿ ಬರಲು ಅದನ್ನೂ ತನ್ನ ಬಾಣಗಳಿಂದ ಕತ್ತರಿಸಿದನು. ನಿರಾಯುಧನಾದ ಧೃಷ್ಟದ್ಯುಮ್ನನ ಮೇಲೆ ವೈತಸ್ನಿಕಗಳೆಂಬ ತೀರಾ ಹತ್ತಿರವಿರುವವರ ಮೇಲೆ ಬಿಡುವಂಥ ಬಾಣಗಳನ್ನು ಬಿಟ್ಟನು. ಕೃಪ ಅರ್ಜುನ ರಾಧೇಯ ದ್ರೋಣ ಕೃಷ್ಣ ಪ್ರದ್ಯುಮ್ನ ಸಾತ್ಯಕಿ ಹಾಗೂ ಅಭಿಮನ್ಯು ಮಾತ್ರವೇ ಈ ಬಾಣಗಳನ್ನು ಬಲ್ಲವರು. ಧೃಷ್ಟದ್ಯುಮ್ನನನ್ನು ಕೊಲ್ಲುವ ಉದ್ದೇಶದಿಂದಲೇ ದ್ರೋಣನು ಈ ಬಾಣಗಳನ್ನು ಪ್ರಯೋಗಿಸಿದುದನ್ನು ನೋಡಿದ ಸಾತ್ಯಕಿಯು ತನ್ನ ಬಿಲ್ಲಿನಿಂದ ಹತ್ತು ಬಾಣಗಳನ್ನು ಬಿಟ್ಟು ಅವುಗಳನ್ನು ಕತ್ತರಿಸಿ ಹಾಕಿದನು. ಸಾತ್ಯಕಿಯ ಕೃಪೆಯಿಂದ ಧೃಷ್ಟದ್ಯುಮ್ನನಿಗೆ ದ್ರೋಣನ ಹಿಡಿತದಿಂದ ಮುಕ್ತಿ ದೊರಕಿದಂತಾಯಿತು. ದ್ರೋಣ ಧೃಷ್ಟದ್ಯುಮ್ನರ ದ್ವಂದ್ವ ನಡೆಯುತ್ತಿದ್ದ ಸ್ಥಳಕ್ಕೆ ತಕ್ಷಣವೇ ಬರುವುದಕ್ಕಾಗದಿದ್ದಷ್ಟು ದೂರವಿದ್ದ ಕೃಷ್ಣಾರ್ಜುನರು ಇದನ್ನು ನೋಡಿ ಆನಂದದಿಂದ ಕೇಕೆ ಹಾಕಿದರು. ಇತರ ಕೌರವವೀರರೊದಿಗೆ ಹೋರಾಡುತ್ತಿದ್ದ ಅರ್ಜುನನು, ``ಕೃಷ್ಣ, ಸಾತ್ಯಕಿಯ ಕಾರ್ಯದಿಂದ ನನಗೆ ತುಂಬ ಸಂತೋಷವಾಗಿದೆ. ನೋಡು, ಸಮಯ ಬಿದ್ದರೆ ಗೆಳೆಯನಿಗೆ ಸಹಾಯಮಾಡುವುದಕ್ಕೆ ಸಾಧ್ಯವಾಗುವಂತೆ ಕುಶಲತೆಯಿಂದ ಹೇಗೆ ತನ್ನ ರಥವನ್ನು ಅವನು ಹತ್ತಿರದಲ್ಲೇ ಚಲಿಸುತ್ತಿರುವನು! ಅವನು ನಮ್ಮೆಲ್ಲರಿಗೂ ಪ್ರೀತಿಪಾತ್ರನಾಗಿರುವನು" ಎಂದನು. ಅಷ್ಟರಲ್ಲಿ ಧೃಷ್ಟದ್ಯುಮ್ನನ ಬಳಿಯೇ ಸುಳಿದಾಡುತ್ತಿದ್ದ ಸಾತ್ಯಕಿಯನ್ನು ಪದ್ಧತಿಯಂತೆ ಕೌರವರು ಎಲ್ಲ ದಿಕ್ಕುಗಳಿಂದಲು ಸುತ್ತುವರೆದರು.* * * * ಋಷಿಗಳು ಕೆಳಗಿಳಿದು ಬಂದು ಅಷ್ಟೆಲ್ಲ ಹೇಳಿದರೂ, ಮಗ ಸತ್ತನೆಂಬ ಮಾತಿನಿಂದಲೂ ದ್ರೋಣನು ಧೃತಿಗೆಡದೆ ಹದಿನಾರರ ತರುಣನಂತೆ ಹೋರಾಡತೊಡಗಿದನು. ಈಗಾಗಲೇ ಇಪತ್ತನಾಲ್ಕು ಸಾವಿರ ಕ್ಷತ್ರಿಯರನ್ನು ಕೊಂದಿದ್ದರೂ ತೃಪ್ತನಾಗದೆ ಇನ್ನೂ ಸೈನ್ಯವನ್ನು ಕೊಲ್ಲುತ್ತಲೆ ಹೋದನು. ಕ್ರೋಧದಿಂದ ಬುದ್ದಿಗೆಟ್ಟು ಪುನ: ಬ್ರಹ್ಮಾಸ್ತ್ರವನ್ನು ಅಭಿಮಂತ್ರಿಸುವುದಕ್ಕೆ ಅಣಿಯಾದನು. ರಥವೂ ಇಲ್ಲದೆ ನಿರಾಯುಧನಾಗಿ ನಿಂತಿದ್ದ ಧೃಷ್ಣಧ್ಯುಮ್ನನ ನೆರವಿಗೆ ಭಿಮನು ಓಡಿದನು. ಬೆಗ ತನ್ನ ರಥದಲ್ಲಿ ಅವನನ್ನು ಕೂರಿಸಿಕೊಂಡನು. ಇಬ್ಬರೂ ಒಂದೇ ರಥದಿಂದ ದ್ರೋಣನೊಂದಿಗೆ ಹೋರಾಟ ನಡೆಸಿದರು. ಅವನು ಎಲ್ಲ ಅಸ್ತ್ರಗಳನ್ನೂ ಇವರು ನಿವಾರಿಸಿದರೂ ದ್ರೋಣನು ಸೋಲೊಪ್ಪಿಕೊಳ್ಳಲು ಸಿದ್ಧನಿರಲಿಲ್ಲ. ಭೀಮನು ಆಚಾರ್ಯನ ರಥದ ಬಳಿ ಹೋಗಿ ಸಿಟ್ಟಿನಿಂದ ``ಬ್ರಾಹ್ಮಣರು ಕ್ಷತ್ರಿಯರ ಕೆಲಸಕ್ಕೆ ಬರದೆ ತಮ್ಮ ಧರ್ಮವನ್ನು ತಾವು ಅನುಷ್ಠಾನ ಮಾಡಿಕೊಂಡಿದ್ದಿದ್ದರಿಂದ ಕ್ಷತ್ರಿಯರು ಇಷ್ಟೊಂದು ನಾಶಹೊಂದುತ್ತಿರಲಿಲ್ಲ. ದಯೆ ಅಹಿಂಸೆಗಳೇ ಅತ್ಯುತ್ತಮ ಮೌಲ್ಯಗಳೆಂದೂ, ಬ್ರಾಹ್ಮಣರಲ್ಲಿ ಇವು ಇರುವುದೆಂದೂ ಹೇಳುವರು. ಆದರೆ ನೀನು ಹುಟ್ಟಿನಿಂದ ಮಾತ್ರ ಬ್ರಾಹ್ಮಣ. ಕರ್ಮದಿಂದ ನೀನೊಬ್ಬ ಕಟುಕ. ನಿನ್ನ ಹಾಗಲ್ಲದೆ ತಮ್ಮ ತಮ್ಮ ಧರ್ಮದಲ್ಲಿ ನಿಷ್ಠರಾಗಿರುವ ಜನರನ್ನು ನೀನು ಲಕ್ಷಲಕ್ಷ ಸಂಖ್ಯೆಯಲ್ಲಿ ಕೊಲ್ಲುತ್ತಿರುವೆ. ಸಂಪತ್ತಿನ ಮೇಲಣ ಮೋಹದಿಂದಲೂ ಅಜ್ಞಾನದಿಂದಲೂ ಮೌಲ್ಯಗಳಿಗೆ ಕುರುಡಾಗಿರುವೆ. ಈ ಎಲ್ಲ ಸಿರಿ ನಿನಗೇಕೆ? ಹೆಂಡತಿಮಕ್ಕಳಿಗಾಗಿಯೇ? ನಿನ್ನ ಒಬ್ಬನೇ ಮಗ ಸತ್ತಿದ್ದರೂ ನಿನ್ನ ಕೊಲೆಗಡುಕತನವನ್ನು ಮುಂದುವರೆಸಿದ್ದೀಯೆ. ಇತರರಿಗೆ ಹೇಳುವ ಧರ್ಮವನ್ನು ನೀನೇ ಪಾಲಿಸುತ್ತಿಲ್ಲ. ನಿನಗೆ ನಾಚಿಕೆಯಾಗುವುದಿಲ್ಲವೆ?" ಎಂದು ಬೈದನು.ಪದ್ಮವ್ಯೂಹವನ್ನು ರಕ್ಷಿಸಿಕೊಂಡಿದ್ದಾಗ ಹೇಳಿದಂತೆಯೇ ಭೀಮನು ತನಗನಿಸಿದ್ದನ್ನು ನೇರವಾಗಿ ಹೇಳಿಬಿಡುವ ಸ್ವಭಾವದವನು. ಅವನು ಮಾತುಗಳಿಂದ ದ್ರೋಣನಿಗೆ ಯಾವಾಗಲೂ ನೋವಾಗುತ್ತಿದ್ದಿತು. ಆದರೂ ಅವನು ಮಾತುಗಳು ನಿಜವೆಂದೆನಿಸಿದವು. ತನ್ನದೇ ತಪ್ಪೆಂದು ದ್ರೊಣನಿಗೆ ಮನವರಿಕೆಯಾಯಿತು. ಇದ್ದಕ್ಕಿದ್ದಂತೆ ಅವನು ಯುದ್ಧಮಾಡುವುದನ್ನು ನಿಲ್ಲಿಸಿದನು. ಬಿಲ್ಲುಬಾಣಗಳನ್ನು ಕೆಳಕ್ಕೆ ಹಾಕಿ, ದುರ್ಯೋಧನ ರಾಧೇಯರನ್ನು ಕರೆದು, ``ಓ ವೀರರೆ, ಇನ್ನು ಮುಂದಕ್ಕೆ ಎಚ್ಚರಿಕೆಯಿಂದ ನಿಮ್ಮನ್ನು ನೀವು ರಕ್ಷಿಸಿಕೊಳ್ಳಿ" ಎಂದು ಕೂಗಿಹೇಳಿ, ರಥದ ಮುಂಭಾಗದಲ್ಲಿ ಯೋಗಮುದ್ರೆಯಲ್ಲಿ ಕುಳಿತನು. ಅವನು ಮನ ಜೀವವನ್ನು ಕೊನೆಗಾಣಿಸುವ ಯೊಚನೆಯಿದ್ದಿತು. ಮನಸ್ಸನ್ನು ನಿಗ್ರಹಿಸಿ, ಸುತ್ತಮುತ್ತಣ ಘಟನೆಗಳು ಬಾಧಿಸದಂತೆ ಕಲ್ಲಾದನು. ಧೃಷ್ಟದ್ಯುಮ್ನನು ಕತ್ತಿಯನ್ನು ಹಿರಿದು ಆಚಾರ್ಯನನ್ನು ಕೊಲ್ಲುವುದಕ್ಕೆಂದು ಧಾವಿಸಿ ಬಂದನು. ಆಚಾರ್ಯನ ಬಗ್ಗೆ ಉಕ್ಕಿಬಂದ ಕರುಣೆಯಿಂದ ಅರ್ಜುನನು ``ದ್ರೋಣನನ್ನು ಕೊಲ್ಲದಿರು! ಜೀವಂತವಾಗಿ ಸೆರೆ ಹಿಡಿ; ಆದರೆ ಕೊಲ್ಲಬೇಡ!" ಎಂದು ಕೂಗಿಕೊಂಡನು. ಅದನು ಕೇಳಿಯೂ ಕೇಳದವನಂತೆ ಧೃಷ್ಟದ್ಯುಮ್ನನು ಒಂದೆ ಏಟಿಗೆ ದ್ರೋಣನ ತಲೆಯನ್ನು ಕತ್ತರಿಸಿಹಾಕಿದನು. ಜ್ವಲಂತವಾದ ಬೆಳಕೊಂದು ಮೇಲೆದ್ದು ಆಕಾಶದಲ್ಲಿ ಲೀನವಾಯಿತು. ದ್ರೋಣನು ಅಲ್ಲಿ ನೆರೆದಿದ ಋಷಿಗಳಲ್ಲಿ ಒಬ್ಬನ್ನಾಗಿ ಹೋದನು. ರಣರಂಗದಲ್ಲಿ ನಡೆದುದೆಲ್ಲವನ್ನೂ ಕಾಣುವಂತೆ ವರವನ್ನು ಪಡೆದಿದ್ದು ಸಂಜಯನಿಗೆ ಮಾತ್ರ ಅದು ಕಾಣಿಸಿತು. ಯುಧಿಷ್ಠಿರ, ಕೃಪ ಮತ್ತು ಕೃಷ್ಣರ ಹೊರತಾಗಿ ಇತರರಿಗೆ ಏನೂ ತಿಳಿಯಲಿಲ್ಲ.ಧೃಷ್ಟದ್ಯುಮ್ನನ ಮೈಯೆಲ್ಲವೂ ದ್ರೋಣನ ರಕ್ತದಿಂದ ತೊಯ್ದು ಹೋಯಿತು. ಒಂದು ಕೈಯಲ್ಲಿ ಕತ್ತಿಯನ್ನೂ ಇನ್ನೊಂದು ಕೈಯಲ್ಲಿ ದ್ರೋಣನ ತಲೆಯನ್ನೂ ಹಿಡಿದುಕೊಂಡು ಅವನ ರಥದಿಂದ ಕೆಳಕ್ಕೆ ನೆಗೆದನು. ಎರಡೂ ಕಡೆಯ ವೀರರು ಹಾಹಾಕಾರ ಮಾಡುತ್ತಿರುವಂತೆಯೇ ಅವನು ದ್ರೋಣನ ತಲೆಯನ್ನು ನೆಲಕ್ಕೆಸೆದನು. ಭೀಮನು ಓಡಿಹೋಗಿ ಅವನನ್ನು ಗಾಢವಾಗಿ ಆಲಿಂಗಿಸಿಕೊಂಡನು. ಇಬ್ಬರೂ ಉನ್ಮತ್ತರಂತೆ ಕುಣಿದರು. ಭೀಮನು, ``ಮಿತ್ರ, ಅದೃಷ್ಟವಶದಿಂದ ನಿನ್ನ ಪ್ರತಿಜ್ಞೆ ಪೂರ್ಣವಾಯಿತು. ಸೂತಪುತ್ರನು ಸತ್ತ ಮೇಲೊಮ್ಮೆ, ದುರ್ಯೋಧನನು ಸತ್ತ ಮೇಲೊಮ್ಮೆ, ಇಬ್ಬರೂ ಆಲಿಂಗಿಸಿಕೊಳ್ಳೋಣ!" ಎಂದನು.* * * * ನಿರಂತರ ಉತ್ಸಾಹಿಯಾದ ದ್ರೋಣನು ಸತ್ತಿರುವನೆಂದು ದುರ್ಯೋಧನನಿಗೆ ನಂಬುವುದಕ್ಕೆ ಆಗಲಿಲ್ಲ. ದ್ರೋಣನ ಸಾವಿನೊಂದಿಗೆ ಅವನ ಹೃದಯದಲ್ಲಿದ್ದ ಭರವಸೆಯೂ ಸತ್ತು ಹೋಯಿತು. ಪಾಂಡವರನ್ನು ಕೊಂದೇವೆಂಬ ಆಸೆಯನ್ನು ಕೌರವರು ಬಿಟ್ಟುಭಿಟ್ಟರು. ಭೀಷ್ಮನು ಬಿದ್ದ ದಿನಕ್ಕಿಂತಲೂ ಹೆಚ್ಚು ದುಃಖವು ದುರ್ಯೋಧನನನ್ನು ಕವಿದಿತ್ತು. ತನಗಾಗಿ ಆಚಾರ್ಯನು ಏನೆಲ್ಲ ಮಾಡಿದ! ದೇಹದಲ್ಲಿ ಕೊನೆಯುಸಿರಿರುವ ವರೆಗೂ ಕವಚವನ್ನು ತೆಗೆಯುವುದಿಲ್ಲವೆಂದು ಪದೇ ಪದೇ ಹೇಳುತ್ತಿದ್ದ ದ್ರೋಣನನ್ನು ಕೊಂದದ್ದು ತನ್ನ ಸ್ವಾರ್ಥವೇ. ದ್ರೋಣನೊಂದಿಗೆ ಕೌರವರ ಬಲವೆಲ್ಲಾ ಹೊರಟುಹೋಯಿತು. ದುರ್ಯೋಧನನನ್ನು ಖಿನ್ನತೆ ಕವಿಯಿತು.ಕೌರವಸೈನ್ಯವು ಭಯದಿಂದ ತತ್ತರಿಸುತ್ತ ಹಿಂದಕ್ಕೆ ಸರಿಯುತ್ತಿತ್ತು. ಆಗ ಅಶ್ವತ್ಥಾಮನು ತನ್ನ ಸೈನ್ಯದೊಂದಿಗೆ ಬಂದನು. ಇಷ್ಟೊಂದು ಭಯದ ಕಾರಣವೇನೆಂದು ಅವನಿಗೆ ತಿಳಿಯಲಿಲ್ಲ. ಏನೋ ಘೋರ ನಡೆದಿದೆಯೆಂದು ಎಲ್ಲರ ಮುಖಗಳೂ ಹೇಳಿದವು. ದುಃಖದಿಂದ ಬಿಳಿಚಿಕೊಂಡಿದ್ದ ದುರ್ಯೋಧನನ ಮುಖವನ್ನು ನೋಡಿದನು. ``ಇದಕ್ಕೆಲ್ಲ ಏನರ್ಥ? ರಾಧೇಯನು ಯುದ್ಧದಲ್ಲಿ ಸೋತವನಂತಿದ್ದಾನೆ. ನೀನು ಯಾವುದೋ ಭರಿಸಲಾರದ ದುಃಖದಲ್ಲಿದ್ದೀಯೆ. ಏನು ಸಮಾಚಾರ? ಯಾರು ಸತ್ತರು? ನನ್ನಪ್ಪ ಸೇನಾಪತಿಯಾಗಿರುವಾಗ, ಅಂಥದೇನಾಯಿತು ಹೇಳು" ಎಂದನು. ದುರ್ಯೋಧನನು ಕೃಪನನ್ನು ನೋಡಿ, ನೀನೇ ಹೇಳು ಎನ್ನುವಂತೆ ಸನ್ನೆ ಮಾಡಿದನು. ಕೃಪನು ಮೃದುವಾಗಿ ನಡೆದುದೆಲ್ಲವನ್ನೂ ಹೇಳಿದನು.ಅಶ್ವತ್ಥಾಮನಿಗೆ ಹತ್ತಿರವಿ