ಪರಿವಿಡಿ

This book is available at Ramakrishna Ashrama, Mysore.

ಕರ್ಣಪರ್ವ

ಯುದ್ಧದ ಹದಿನೈದನೆಯ ದಿನ ಕೌರವರ ಪಾಲಿಗೆ ತೀರ ನಿರಾಶಾದಾಯಕವಾಗಿ ಕೊನೆಗೊಂಡಿತು. ರಾತ್ರಿ ದುರ್ಯೋಧನಾದಿಗಳು ಒಗ್ಗೂಡಿ ಕುಳಿತು ತಮ್ಮ ದುರವಸ್ಥೆಯಿಂದ ಪಾರಾಗುವುದು ಹೇಗೆಂಬ ಬಗ್ಗೆ ಚರ್ಚಿಸುತ್ತಿದ್ದರು. ಅಶ್ವತ್ಥಾಮನು, ``ಈಗ ಸಮರ್ಥನೂ ಧೈರ್ಯಶಾಲಿಯೂ ಶೂರನೂ ನಿನ್ನನ್ನು ಕಂಡರೆ ಪ್ರೀತಿಯಿರುವವನೂ ಆದ ನಾಯಕನೊಬ್ಬನು ನಮಗೆ ಅಗತ್ಯ. ಅಂಥವನೊಬ್ಬನು ಸೇನಾಪತಿಯಾದರೆ ನಿನಗೆ ವಿಜಯವು ಖಂಡಿತ. ಇಲ್ಲಿ ಸಭೆ ಸೇರಿರುವ ಎಲ್ಲ ವೀರರುಗಳೂ ಈ ಗುಣಗಳನ್ನುಳ್ಳವರೇ; ನೀನು ನಿರಾಶನಾಗಬೇಕಾದದ್ದಿಲ್ಲ. ನಾವೆಲ್ಲರೂ ನಿನಗಾಗಿ ಪ್ರಾಣ ಬಿಡಲು ಸಿದ್ಧರಾಗಿದ್ದೇವೆ. ರಾಧೇಯನು ನಾಯಕನಾಗಲಿ; ಅವನನ್ನು ಯಾರೂ ಸೋಲಿಸಲಾರರು" ಎನ್ನಲು ದುರ್ಯೋಧನನಿಗೆ ಪರಮಾನಂದವಾಯಿತು. ದೇಹದಲ್ಲಿ ಜೀವವಿರುವವರೆಗೆ ಮನುಷ್ಯನಿಗೆ ಆಸೆಯೆಂಬುದು ಹೋಗುವುದಿಲ್ಲ. ಭೀಷ್ಮದ್ರೋಣರ ನಂತರವೂ ದುರ್ಯೋಧನನ ಹೃದಯದಲ್ಲಿ ರಾಧೇಯನ ಸೈನ್ಯಾಧಿಪತ್ಯದಲ್ಲಾದರೂ ತನಗೆ ಜಯವಾಗಬಹುದೆಂಬ ಭರವಸೆ ಮೊಳೆಯಿತು. ಅವನು ರಾಧೇಯನನ್ನು ಪ್ರೀತಿಯಿಂದ ನೋಡುತ್ತ, ``ರಾಧೇಯ, ನೀನು ನನ್ನ ಮೇಲಿಟ್ಟಿರುವ ಪ್ರೀತಿ, ನಿನ್ನ ಯೋಗ್ಯತೆ ನನಗೆ ಚೆನ್ನಾಗಿ ಗೊತ್ತು. ಈಗ ಈ ಕಷ್ಟಕಾಲದಲ್ಲಿ ನೀನು ನಮ್ಮ ಸೈನ್ಯವನ್ನು ಮುನ್ನಡೆಸಬೇಕು. ಭೀಷ್ಮದ್ರೋಣರಿಬ್ಬರೂ ವೀರ್ಯವತ್ತಾಗಿ ನನಗೋಸ್ಕರ ಹೋರಾಡಿದರು. ಭೀಷ್ಮನಿಗೆ ಪಾಂಡವರೆಂದರೆ ಪ್ರೀತಿ. ಅವನ ನಂತರ ನಿನ್ನ ಮಾತಿನಂತೆ ದ್ರೋಣನ್ನು ಸೇನಾಪತಿಯಾಗಿ ಮಾಡಿದೆವು. ಇಬ್ಬರನ್ನೂ ನಿರಾಯುಧರಾಗಿದ್ದಾಗ, ನ್ಯಾಯವಲ್ಲದ ಮಾರ್ಗದಿಂದ ಸೋಲಿಸಲಾಯಿತು. ಅರಕ್ಷಿತರಾಗಿದ್ದವರನ್ನು ಕೊಲ್ಲಲಾಯಿತು. ಅವರಿಬ್ಬರಿಗೂ ಪಂಚಪಾಂಡವರನ್ನು ನೋಯಿಸಲು ಸ್ವಲ್ಪವೂ ಇಷ್ಟವಿರಲಿಲ್ಲ. ದ್ರೋಣನಿಗಂತೂ ಅರ್ಜುನನೆಂದರೆ ತುಂಬ ಮಮತೆ. ಆದರೆ ನೀನು ಹಾಗಲ್ಲ. ಈಗ ಸೈನ್ಯವು ಮೊದಲ ಬಾರಿಗೆ ಪಾಂಡವರನ್ನು ನನ್ನಷ್ಟೇ ದ್ವೇಷಿಸುವ ವ್ಯಕ್ತಿಯ ಕೈಗೆ ಬರಲಿದೆ. ದೇವಸೈನ್ಯವನ್ನು ಕಾರ್ತಿಕೇಯನು ನಡೆಸಿದಂತೆ ನೀನು ಈಗ ನಮ್ಮನ್ನು ಮುನ್ನಡೆಸಬೇಕು" ಎಂದನು.ರಾಜನ ಮಾತನ್ನು ಕೇಳಿ ರಾಧೇಯನಿಗೆ ಬಹಳ ಸಂತೋಷವಾಯಿತು. ಕೊನೆಗೂ ದುರ್ಯೋಧನನ ಸ್ನೇಹದ ಋಣವನ್ನು ತೀರಿಸುವ ಅವಕಾಶ ಒದಗಿಬಂದಿದೆ ಎಂದುಕೊಂಡು, ``ಹಾಗೆಯೇ ಆಗಲಿ! ನಾನೂ ಸಹ ಪಾಂಡವರೊಡನೆ ಹೋರಾಡಲು, ಅರ್ಜುನನನ್ನು ಕೊಲ್ಲಲು ಕಾತುರನಾಗಿರುವೆ. ನಾಳಿನ ಯುದ್ಧದಲ್ಲಿ ಅರ್ಜುನನನ್ನು ಕೊಂದು, ಇಡೀ ಲೋಕವನ್ನೇ ನಿನ್ನ ವಶ ಮಾಡುವೆ" ಎಂದನು. ಅವಭೃಥಸ್ನಾನ ಮಾಡಿಸಿ, ವಿಧಿವತ್ತಾಗಿ ರಾಧೇಯನನ್ನು ಕೌರವರ ಕಡೆಯ ಮೂರನೆಯ ಸೇನಾಪತಿಯೆಂದು ಘೋಷಿಸಲಾಯಿತು.ಕುರುಕ್ಷೇತ್ರ ಯುದ್ಧದ ಹದಿನಾರನೆಯ ದಿನ ಬೆಳಗಾಯಿತು. ಸೈನ್ಯಾಧಿಪತಿಯಾಗಿ ರಾಧೇಯನು ಪೂರ್ವದಲ್ಲಿ ಆಗತಾನೆ ಉದಯಿಸಿದ ಭಾನುವಿನಂತೆ ಕಂಗೊಳಿಸುತ್ತಿದ್ದನು. ಸೇನೆಯನ್ನು ಮಕರವ್ಯೂಹದಲ್ಲಿ ನಿಲ್ಲಿಸಿದನು. ಶಕುನಿ ಮತ್ತು ಅವನ ಮಗ ಉಲೂಕ ಅದರ ಎರಡು ಕಣ್ಣುಗಳು; ತಲೆಯೇ ಅಶ್ವತ್ಥಾಮ; ಧಾರ್ತರಾಷ್ಟ್ರರು ಅದರ ಕತ್ತು; ಉರಗಪತಾಕನಾದ ದುರ್ಯೋ ಧನನೇ ಅದರ ಮಧ್ಯಭಾಗ; ಎಡ ಮುಂಗಾಲಿನಲ್ಲಿ ಕೃತವರ್ಮ ಮತ್ತು ಅವನ ಸೈನ್ಯ; ಬಲ ಮುಂಗಾಲಿನಲ್ಲಿ ಕೃಪ ಮತ್ತು ಅವನ ಸೈನ್ಯ; ಎಡ ಹಿಂಗಾಲಿನಲ್ಲಿ ಶಲ್ಯ; ಬಲ ಹಿಂಗಾಲಿನಲ್ಲಿ ರಾಧೇಯನ ಮಗ ಸುಷೇಣ; ಬಾಲದಲ್ಲಿ ದುರ್ಯೋಧನನ ಕೆಲವು ತಮ್ಮಂದಿರು; ಮಕರದ ಬಾಯಿಯಲ್ಲಿ ಸೇನಾಪತಿ ರಾಧೇಯ- ಹೀಗೆ ವೀರರು ಸ್ಥಾಪಿತರಾದರು.ಈ ಸೇನೆಯನ್ನು ಕಂಡ ಯುಧಿಷ್ಠಿರನು ``ಅರ್ಜುನ, ರಾಧೇಯನ ಮುಂದಾಳ್ತನದಲ್ಲಿ ಎದುರಾಗಿರುವ ಕೌರವಸೈನ್ಯವನ್ನು ನೋಡು. ಹದಿನಾರು ದಿನಗಳ ಹಿಂದೆ ಭೀಷ್ಮನ ನೇತೃತ್ವದಲ್ಲಿ ಇದೇ ಸೈನ್ಯ ಹೀಗಿದ್ದಿತು! ಈಗಿನ ಈ ಮಕರವ್ಯೂಹ ಹೇಗೆ ಬಡಕಲಾಗಿದೆ! ಇವರದು ಇದು ಎಂತಹ ದುರದೃಷ್ಟ! ಆಕಾಶದಲ್ಲಿನ ಉಲ್ಕೆಗಳಂತೆ ಸಂಚರಿಸುತ್ತಿದ್ದ ಆಗಿನ ವೀರರಲ್ಲಿ? ಈ ಗಿನ ಈ ಸೈನ್ಯವೆಲ್ಲಿ? ನಕ್ಷತ್ರಗಳ ನಡುವಣ ಚಂದ್ರನಂತೆ ಇರುವ ರಾಧೇಯನಿಗೆ ನಾವು ಅಂಜಬೇಕಾಗಿರುವುದು. ಈ ಒಬ್ಬನನ್ನು ನೀನು ಕೊಂದುಬಿಟ್ಟರೆ, ಜಯವು ನಮ್ಮದೇ'' ಎಂದನು.ಈ ಮಾತಿನ ಸತ್ಯತೆಯನ್ನು ಕಂಡುಕೊಂಡ ಅರ್ಜುನನು ತನ್ನ ಸೈನ್ಯದ ಕಡೆಗೆ ತಿರುಗಿದನು. ಅದೂ ಭೀಷ್ಮ ದ್ರೋಣ ಅಶ್ವತ್ಥಾಮರ ಕೈಯಲ್ಲಿ ಸಿಕ್ಕು ದುರ್ಬಲವಾಗಿರುವಂಥದೇ. ಅದನ್ನು ಅರ್ಧಚಂದ್ರವ್ಯೂಹದಲ್ಲಿ ನಿಲ್ಲಿಸಿದ. ವ್ಯೂಹದ ಎಡತುದಿಯಲ್ಲಿ ಭೀಮನೂ, ಬಲತುದಿಯಲ್ಲಿ ಧೃಷ್ಟದ್ಯುಮ್ನನೂ, ಮಧ್ಯದಲ್ಲಿ ಅರ್ಜುನನೂ, ಅವನ ಹಿಂದೆ ಯುಧಿಷ್ಠಿರ ನಕುಲಸಹದೇವರೂ ನಿಂತರು. ಅರ್ಜುನನ ರಥಚಕ್ರಗಳ ರಕ್ಷಣೆಯನ್ನು ಎಂದಿನಂತೆ ಯುಧಾಮನ್ಯು ಉತ್ತಮೌಜಸರು ವಹಿಸಿಕೊಂಡರು. ಉಳಿದವರಲ್ಲ ಚಂದ್ರನ ಇನ್ನಿತರ ಭಾಗಗಳಲ್ಲಿ ನಿಂತರು. ಕಹಳೆ ಭೇರಿಗಳು ಮೊಳಗಿದವು: ಎರಡೂ ಸೈನ್ಯಗಳು ಒಂದರ ಮೇಲೊಂದು ಬಿದ್ದವು. ದೃಶ್ಯವು ಹೆಚ್ಚುಕಡಿಮೆ ಮೊದಲನೆಯ ದಿನದಂತೆಯೇ ಇದ್ದಿತ್ತು; ದ್ರೊಣನ ಬೇಕಾಬಿಟ್ಟಿತನ ಇರಲಿಲ್ಲ. ಎಲ್ಲರಿಗೂ ಭೀಷ್ಮನ ನಾಯಕತ್ವದ ನೆನಪಾಯಿತು. ಮುಂಚೂಣಿಯಲ್ಲಿ ವೀರನಾದ ರಾಧೇಯನನ್ನು ಕಂಡ ಕೌರವರಿಗೆ ಭೀಷ್ಮದ್ರೋಣರ ನಷ್ಟವನ್ನು ಮರೆಯುವುದು ಸಾಧ್ಯವಾಯಿತು.ಮೊದಲೇ ಭೀಮನು ಅಹಂಕಾರಿಯಾದ ಕ್ಷೇಮಧೃತಿಯೆಂಬ ರಾಜನನ್ನು ಕೊಂದ. ರಾಧೇಯನು ಪಾಂಡವಸೈನ್ಯದೊಳಕ್ಕೆ ನುಗ್ಗಿ ಕೊಲ್ಲಲಾರಂಭಿಸಲು, ನಕುಲ ಅವನನ್ನೆದುರಿಸಿದ. ಭೀಮ ಅಶ್ವತ್ಥಾಮರು ದ್ವಂದ್ವಯುದ್ಧದಲ್ಲಿ ನಿರತರಾದರು. ಸಾತ್ಯಕಿ ಕೇಕೆಯ ಸೋದರರಾದ ವಿಂದಾನುವಿಂದರನ್ನು ಎದುರಿಸಿ ಭೀಕರ ಹೋರಾಟದ ನಂತರ ಕೊಂದ. ದುರ್ಯೋಧನನು ಯುಧಿಷ್ಠಿರನನ್ನು ಎದುರಿಸಿದ. ಸಂಶಪ್ತಕರ ಅಳಿದುಳಿದ ಸೈನ್ಯವು ಅರ್ಜುನನನ್ನೆದುರಿಸಿತು. ಕೃಪನು ಧೃಷ್ಟದ್ಯುಮ್ನನನ್ನೂ ಶಿಖಂಡಿಯು ಕೃತವರ್ಮನನ್ನೂ ಶ್ರುತಕೀರ್ತಿಯು ಶಲ್ಯನನ್ನೂ ಸಹದೇವನು ದುಶ್ಶಾಸನನನ್ನೂ ಎದುರಿಸಿ ಹೋರಾಡಿದರು. ದ್ರೌಪದಿಯ ಮಕ್ಕಳೂ ಉತ್ತಮವಾಗಿ ಯುದ್ಧಮಾಡುತ್ತಿದ್ದರು.ಅಶ್ವತ್ಥಾಮನು ಭೀಮನಿಂದ ಪೆಟ್ಟುತಿಂದು ಒರಗಲು, ಅವನ ಸಾರಥಿಯು ಅವನನ್ನು ರಣರಂಗದಿಂದ ಹೊರಕ್ಕೆ ಕರೆದೊಯ್ಯಬೇಕಾಯಿತು. ಶಲ್ಯನು ಶ್ರುತಕೀರ್ತಿಯನ್ನೂ, ಸಹದೇವನು ದುಶ್ಶಾಸನನನ್ನು ಸೊಲಿಸಿದರು.ರಾಧೇಯ ನಕುಲರ ದ್ವಂದ್ವಯುದ್ದವು ಮುಂದುವರೆದು ನಕುಲನು ಕೌರವಸೈನ್ಯದೊಳಕ್ಕೆ ಕಾಳ್ಕಿಚ್ಚಿನಂತೆ ಮುನ್ನುಗ್ಗಿದ. ಅವನನ್ನು ತಡೆಯಲು ರಾಧೇಯನು ಅವನ ರಥಕ್ಕೆ ಅಡ್ಡವಾಗಿ ಬಂದುನಿಂತ. ನಕುಲನು, ``ದೇವರು ದೊಡ್ಡವನು. ಬಹುದಿನಗಳಿಂದ ನಿನ್ನನ್ನು ನೋಡಬೇಕೆಂದಿದ್ದೆ. ನಾವು ಸೈನ್ಯವನ್ನು ನಾಶಮಾಡುತ್ತಿರುವುದು ಈ ಕೇಡಿಗೆಲ್ಲ ಮೂಲನಾದ ನಿನಗಾಗಿಯೇ. ನಿನ್ನನ್ನು ಕೊಂದರೆ ನನ್ನ ಮನಸ್ಸಿನಲ್ಲಿರುವ ಶಲ್ಯವೊಂದನ್ನು ಕಿತ್ತಂತೆ. ಬಾ, ನನ್ನೊಡನೆ ಯುದ್ಧ ಮಾಡು'' ಎನ್ನಲು, ರಾಧೇಯನು ನಕ್ಕು ``ನೀನೊಬ್ಬ ಯೋಧ ; ನಿನ್ನೊಂದಿಗೆ ದ್ವಂದ್ವ ನನಗಿಷ್ಟವೇ. ನಿನ್ನ ಶೌರ್ಯವನ್ನು ತೋರಿಸಿ ನೀನು ಹೇಳಿದ್ದನ್ನು ಮಾಡಲೆತ್ನಿಸು. ನಾನೂ ಯುದ್ಧಮಾಡುವೆ'' ಎಂದನು. ಯುದ್ಧ ಮೊದಲಾಯಿತು ಬಹಳ ಹೊತ್ತು ನಡೆಯಿತು. ನಕುಲನನ್ನು ಸೋಲಿಸಿದ ನಂತರ ರಾಧೇಯನು ಸಹದೇವನೊಂದಿಗೆ ಹೋರಾಡಿದನು. ನಕುಲನು ಅಲ್ಲಿಂದ ಹೊರಟುಹೋಗಲು ಉದ್ಯುಕ್ತನಾದನು.ರಾಧೇಯನು ಬಿಲ್ಲಿನ ತುದಿಯಿಂದ ಅವನನ್ನು ನಿಲ್ಲಿಸಿ ``ಅಂತೂ ನೀನು ಹೇಳಿದ್ದೆಲ್ಲ ಬೊಗಳೆ ಎಂದಾಯಿತು. ನೀನು ಹೇಳಿದ್ದನ್ನು ಮಾಡಲಿಲ್ಲ. ನಕುಲ, ನಿನಗೆ ಇದೊಂದು ಪಾಠವಾಗಿರಲಿ. ನಿನಗಿಂತ ಶೂರರಾದರೊಡನೆ ಹೋರಾಡಲು ಹೋಗಬೇಡ. ಮೇಲಾದವರೊಡನೆ ಸೋಲುವುದರಲ್ಲಿ ಅವಮಾನವೇನಿಲ್ಲ. ಮುಂದೊಂದು ದಿನ ನನ್ನೊಡನೆ ನಡೆದ ಈ ದ್ವಂದ್ವವನ್ನು ನೀನು ಸ್ಮರಿಸಿಕೊಳ್ಳುವೆ. ನನ್ನೊಂದಿಗೆ ಹೋರಿ ಸೋತದ್ದಕ್ಕೆ ಹೆಮ್ಮೆಪಟ್ಟುಕೋ. ಈಗ ಮನೆಗೆ ಹೋಗು ಮಗು; ಅಥವಾ ಕೃಷ್ಣಾರ್ಜುನರಿದ್ದಲ್ಲಿಗೆ ಹೋಗು" ಎಂದು ಮತ್ತೊಮ್ಮೆ ನಕ್ಕು, ನಕುಲನನ್ನು ಬಿಟ್ಟನು. ಹಾವಿನಂತೆ ನಿಟ್ಟುಸಿರು ಬಿಡುತ್ತ, ನಕುಲನು ಯುಧಿಷ್ಠಿರನಿದ್ದಲ್ಲಿಗೆ ಓಡಿ ಹೋದನು. ರಾಧೇಯನ ಕಣ್ಣೆವೆಗಳಲ್ಲಿ ನೀರಾಡಿದುದನ್ನು ಕೃಷ್ಣನನ್ನುಳಿದು ಯಾರೊ ನೋಡಲಿಲ್ಲ. ಕೃಷ್ಣನು ಮನಸ್ಸಿನಲ್ಲಿ, ``ನಕುಲ ತನ್ನ ತಮ್ಮನೆಂಬುದನ್ನು ರಾಧೇಯ ಮರೆತಿಲ್ಲ. ಅರ್ಜುನನನ್ನುಳಿದು ಅವನು ಉಳಿದ ಪಾಂಡವರನ್ನು ಕೊಲ್ಲುವುದಿಲ್ಲ. ಆದರೆ ನಕುಲನಿಗೆ ಇಂಥ ಅವಮಾನ! ಯುದ್ಧದಲ್ಲಿ ಇಂಥದೆಲ್ಲ ಸಹಜವೇ! ಇದನ್ನೂ ಅವನು ಕಲಿಯಬೇಕು" ಎಂದುಕೊಂಡನು.* * * * ರಾಧೇಯನ ಕೋಪ ಮೇರೆ ಮೀರಿತ್ತು. ಪ್ರವಾಹದೋಪಾದಿಯಲ್ಲಿ ಬರುತ್ತಿದ್ದ ಅವನ ಬಾಣಗಳನ್ನು ತಡೆಯುವುದು ಹೇಗೆಂದೇ ಪಾಂಡವರಿಗೆ ತಿಳಿಯದಾಯಿತು. ಪ್ರತಿಯೊಂದು ಬಾಣವು ಒಬ್ಬನನ್ನು ಕೊಲ್ಲುತ್ತಿತ್ತಾದರೂ ಪಾಂಡವ ಸೈನ್ಯವು ಜ್ವಾಲೆಗೆ ಹೋಗಿ ಬೀಳುವ ಪತಂಗಗಳಂತೆ ಅವನ ಮೇಲೆ ಹೋಗಿ ಬಿದ್ದಿತು. ಉರಿಯುವ ಬಿಸಿಲಲ್ಲಿ ಘೋರ ಯುದ್ದವು ನಡೆಯುತ್ತಿದ್ದಿತು. ಎಷ್ಟೋ ದ್ವಂದ್ವಗಳೇರ್ಪಟ್ಟವು. ಶಕುನಿಯು ಸುತಸೋಮನನ್ನೂ, ಕೃಪನು ಧೃಷ್ಟದ್ಯುಮ್ನನನ್ನೂ ಎದುರಿಸಿದರು. ಕೃಪನು ದ್ರೋಣನ ಸಾವಿನ ಸೇಡನ್ನು ತೀರಿಸಿಕೊಳ್ಳಲು ಬಯಸಿರುವನೆಂದು ಧೃಷ್ಟದ್ಯುಮ್ನನಿಗೆ ತಿಳಿದಿತ್ತು. ಶಿಖಂಡಿಯು ಕೃತವರ್ಮನೊಂದಿಗೆ ಹೋರಾಡತೊಡಗಿದನು. ಧೃಷ್ಟದ್ಯುಮ್ನ ಶಿಖಂಡಿ ಇಬ್ಬರು ಸೋತು ರಣರಂಗದಿಂದ ಹಿಮ್ಮೆಟ್ಟಬೇಕಾಯಿತು.ಅರ್ಜುನನು ಅದ್ಭುತವಾಗಿ ಯುದ್ದಮಾತ್ತಿದ್ದನು. ಕೌರವ ಸೈನ್ಯವು ಅವನ ಪ್ರತಾಪದ ಎದುರು ಗಾಳಿಯೆದುರಿಗಿನ ಹತ್ತಿಯ ರಾಶಿಯಂತಾಯಿತು. ಅಳಿದುಳಿದ ಸಂಶಪ್ತಕರು ಅವನನ್ನು ಎದುರಿಸಿದರು. ಅವರಲ್ಲಿ ಬಹುಮಟ್ಟಿಗೆ ಎಲ್ಲರು ಸತ್ತರು; ಉಳಿದವರು ಓಡಿಹೋದರು. ದುರ್ಯೋಧನನು ಯುಧಿಷ್ಠಿರನೊಂದಿಗೆ ದ್ವಂದ್ವಯುದ್ದಕ್ಕೆ ನಿಂತನು. ಕೃತವರ್ಮನು ಪಾಂಡವ ಸೈನ್ಯವನ್ನು ಧ್ವಂಸಮಾದುತ್ತಿದ್ದುದನ್ನು ನೋಡಿ ಅವನಿಗೆ ಬಹು ಸಂತೋಷವಾದ್ದಿತು. ಆದರೂ ಅವನು ಯುಧಿಷ್ಠಿರನ ಕೈಯಲ್ಲಿ ಸೋಲಬೇಕಾಯಿತು. ರಾಧೇಯ ಅಶ್ವತ್ಥಾಮ ಕೃಪ ಮೂವರೂ ಅವನ ನೆರವಿಗೆ ಓಡಿಬಂದರು. ಯುಧಿಷ್ಠಿರನ ಸುತ್ತಲೂ ಸಹ ಯೋಧರು ನೆರೆದರು; ಯುದ್ಧ ಸಂಕುಲವಾಯಿತು. ಮಧ್ಯಾಹ್ನದ ಉರಿಬಿಸಿಲಲ್ಲಿ ಭೀಮನು ಅರ್ಜುನನಂತೆಯೇ ಕೌರವಸೈನ್ಯವನ್ನು ಕರಗಿಸುತ್ತಿದ್ದನು. ದುರ್ಯೋಧನನು ಮತ್ತೊಮ್ಮೆ ಯುಧಿಷ್ಠಿರನನ್ನೆದುರಿಸಲು ಪ್ರಯತ್ನಿಸಿ ಭಲ್ಲೆಯೊಂದರಿಂದ ಗಾಯಗೊಂಡು ಕೃತವರ್ಮನ ರಥದಲ್ಲಿ ಹಿಂದಿರುಗಬೇಕಾಯಿತು.ಯುದ್ಧವು ದಿನದ ಕೊನೆಯವರೆಗೂ ಹೀಗೆಯೇ ಬಿಡುವಿಲ್ಲದೆ ಮುಂದುವರೆಯಿತು. ಎರಡು ಕಡೆಯ ಸೈನ್ಯಗಳು ಬಹುಮಟ್ಟಿಗೆ ಕರಗಿದವು. ಆದರೆ ಕರ್ಣಸೇನಾಪತ್ಯದ ಮೊದಲದಿನವಾದ ಹದಿನಾರನೆಯ ದಿನದ ಯುದ್ಧದಲ್ಲಿ ವಿಶೇಷವೇನೊ ಘಟಿಸಲಿಲ್ಲ. ಸೂರ್ಯನು ಪಶ್ಚಿಮದ ಕಡೆಗೆ ಇಳಿಯತೊಡಗಿದನು. ಯೋಧರೆಲ್ಲ ಕತ್ತಲಾದ ಮೇಲೂ ಯುದ್ಧ ಮುಂದುವರೆಯುವುದೋ ಎಂಬ ಭಯದಲ್ಲಿ ತಾವಾಗಿಯೇ ಪಾಳೆಯಕ್ಕೆ ಹಿಂದಿರುಗತೊಡಗಿದರು. ಎರಡು ಪಾಳೆಯಗಳಲ್ಲೂ ಭೀಷ್ಮನಾಯಕತ್ವದ ಮೊದಲ ದಿನದ ಹಾಗೆಯೇ ಪರಿಸ್ಥಿತಿ ಸಾಧಾರಣವಾಗಿದ್ದಿತು.* * * * ರಾಧೇಯನು ಅರ್ಜುನನನ್ನು ಕೊಲ್ಲಲಿಲ್ಲವೆಂದು ದುರ್ಯೋಧನನಿಗೆ ನಿರಾಸೆಯಾಗಿದ್ದಿರಬಹುದು. ನಕುಲನನ್ನು ಸುಲಭವಾಗಿ ಕೊಲ್ಲಬಹುದಾಗಿದ್ದರೂ ಕೊಲ್ಲದೆ ಬಿಟ್ಟದ್ದನ್ನೂ ಅವನು ಗಮನಿಸಿರಬಹುದು. ಆದರೂ ಒಂದೂ ಮಾತನಾಡಲಿಲ್ಲ. ರಾಧೇಯನನ್ನು ಕಂಡರೆ ರಾಜನಿಗೆ ಅಷ್ಟೊಂದು ಪ್ರೀತಿ. ಪಾಳೆಯದಲ್ಲಿ ಅವರವರ ಡೇರೆಗಳಿಗೆ ಹೊರಡುವಾಗ ರಾಧೇಯನು ದುರ್ಯೋಧನನ ಕೈಕುಲುಕಿ, ``ಅರ್ಜುನ ತುಂಬ ಬುದ್ಧಿವಂತ; ಕುಶಲತೆಯಿಂದ ಯುದ್ಧಮಾಡುತ್ತಾನೆ; ಯಾವ ಕ್ಷಣದಲ್ಲಿ ಏನು ಮಾಡಬೇಕೆಂದು ಕೃಷ್ಣನು ಅವನಿಗೆ ಸೂಚನೆ ಕೊಡುತ್ತಾನೆ; ಅದರಿಂದಾಗಿಯೇ ಅವನು ಇನ್ನೂ ಬದುಕಿರುವುದು. ಆದರೆ ನಾಳೆ ನಾನು ಅಗತ್ಯವಾದದನ್ನು ಮಾಡುತ್ತೇನೆ. ನನ್ನ ಪ್ರತಿಜ್ಞೆಯನ್ನು ನೆರವೇರಿಸಿಕೊಳ್ಳುತ್ತೇನೆ" ಎಂದಾಗ, ರಾಜನು, ``ನನಗೆ ಗೊತ್ತು ರಾಧೇಯ, ನನಗೆ ಗೊತ್ತು" ಎಂದು ಮಾತ್ರ ಹೇಳಿ ಸುಮ್ಮನಾದನು.

ವೀರರೆಲ್ಲ ಮಲಗಿಕೊಂಡಿದ್ದರು. ಎಲ್ಲರೂ ರಾಧೇಯನ ಬಗ್ಗೆಯೇ ಯೋಚಿಸುತ್ತಿದ್ದರು. ರಾತ್ರಿ ಎಷ್ಟೋ ಹೊತ್ತಾದ ಮೇಲೆ ರಾಧೇಯನು ದುರ್ಯೋಧನನ ಡೇರೆಗೆ ಹೋದನು. ಮಾರನೆಯ ಬೆಳಗ್ಗೆ ಮಾಡಬೇಕಾದುದನ್ನು ಯೋಚಿಸತೊಡಗಿದರು. ರಾಜನು ತನ್ನೊಬ್ಬನ ಮೇಲೆಯೇ ಅವಲಂಬಿಸಿರುವನೆಂದು ರಾಧೇಯನಿಗೆ ಗೊತ್ತು. ಆದರೆ ಏಕೋ ಅವನಿಗೆ ಇದು ರಾಜನೊಂದಿಗೆ ತಾನು ಕಳೆಯಲಿರುವ ಕೊನೆಯ ರಾತ್ರಿ ಎನ್ನಿಸಿಬಿಟ್ಟಿತ್ತು. ಅವನು, ``ದುರ್ಯೋಧನ, ನಾಳೆ ನಾನು ಅರ್ಜುನನೊಡನೆ ಹೋರಾಡುತ್ತೇನೆ, ಹೋರಾಡಲೇಬೇಕು. ಇಬ್ಬರಲ್ಲಿ ಒಬ್ಬರು ಸಾಯುತ್ತೇವೆ. ಇದಾಗದ ಹೊರತು ನಾನು ಪಾಳೆಯಕ್ಕೆ ಹಿಂದಿರುಗುವುದಿಲ್ಲ. ಮಹಾರಾಜ, ನಾವೀಗ ನಮ್ಮಿಬ್ಬರ ಪ್ರೌಢಿಮೆಯನ್ನು ನೋಡೋಣ. ನಾನು ಅರ್ಜುನನಿಗಿಂತ ತುಂಬ ಮೇಲ್ಮಟ್ಟದವನು; ಕೃಪನೆನ್ನುವಂತೆ ನಾನು ಬೊಗಳೆಗಾಗಿ ಹೇಳುತ್ತಿಲ್ಲ, ನಿಜವಾದ ಸಂಗತಿಯೇ ಇದು. ಇಬ್ಬರಲ್ಲಿಯೂ ದಿವ್ಯಾಸ್ತ್ರಗಳಿವೆ. ಶಕ್ತಿಯಲ್ಲಿಯೂ ಉದಾತ್ತತೆಯಲ್ಲಿಯೂ ನಾನು ಅರ್ಜುನನಿಗಿಂತ ಮೇಲು. ಗಾಂಡೀವಕ್ಕಿಂತ ಉತ್ತಮವಾದ, ಭಾರ್ಗವನಿಂದ ಕೊಡಲ್ಪಟ್ಟ ವಿಜಯವೆಂಬ ಧನಸ್ಸು ನನ್ನಲ್ಲಿದೆ. ಇದನ್ನು ವಿಶ್ವಕರ್ಮನು ಇಂದ್ರನಿಗಾಗಿ ತಯಾರಿಸಿದನು; ಇಂದ್ರನು ಭಾರ್ಗವನಿಗೆ ಕೊಟ್ಟನು. ನಾಳೆ ನಾನು ಅರ್ಜುನನನ್ನು ಕೊಂದು ಲೋಕವನ್ನೇ ನಿನ್ನ ಪದತಲದಲ್ಲಿರಿಸುತ್ತೇನೆ. ಆ ಮೂಲಕ ನಾನು ನೋಡಿದ ಅತ್ಯುತ್ತಮ ಸಾಮ್ರಾಟನ ಪ್ರೇಮವನ್ನು ಅಭಿನಂದಿಸುತ್ತೇನೆ.``ಈಗ ಅರ್ಜುನ ನನಗಿಂತ ಹೇಗೆ ಮೇಲೆಂದು ಹೇಳುವೆನು ಕೇಳು. ಅವನ ಗಾಂಡೀವ ದೈವದತ್ತವಾದದ್ದು, ಬತ್ತಳಿಕೆ ಅಕ್ಷಯವಾದದ್ದು; ರಥ ಕುದುರೆಗಳೂ ದೈವಿಕವಾದವುಗಳು. ಅವನ ಧ್ವಜದಲ್ಲಿ ಸಾಕ್ಷಾತ್ ಹನುಮಂತನೇ ನೆಲೆಸಿರುವನು. ಜಗದ್ರಕ್ಷಕನಾದ ಕೃಷ್ಣನೇ ಕುದುರೆಗಳ ನಿಯಂತ್ರಕನಾಗಿರುವನು. ಈ ಮೂರು ಸಂಗತಿಗಳು ಅವನನ್ನು ಉತ್ತಮನ್ನಾಗಿಸುವುವು. ನಾನು ಅವನಿಗಿಂತ ಶೌರ್ಯದಲ್ಲಿ ಮೇಲಾಗಿದ್ದರೂ, ನನಗೊಬ್ಬ ಉತ್ತಮ ಸಾರಥಿಯಿಲ್ಲ. ಶಲ್ಯನು ನನ್ನ ಸಾರಥಿಯಾಗುವುದಾದರೆ, ನಾನು ಗೆಲ್ಲುವುದು ಖಂಡಿತ. ಶಲ್ಯನು ಕೃಷ್ಣನಂತೆಯೇ ಮಹಾತ್ಮನು; ಕೃಷ್ಣನಿಗಿಂತ ಮಿಗಿಲೆಂದೇ ಹೇಳಬಹುದು. ಯುದ್ಧದಲ್ಲಿ ನನ್ನನ್ನು ಹೇಗೋ ಹಾಗೆ ಸಾರಥ್ಯದಲ್ಲಿ ಶಲ್ಯನನ್ನು ಮೀರಿಸಿದವರಿಲ್ಲ. ಶಲ್ಯನನ್ನು ಒಪ್ಪಿಸುವುದು ನಿನಗೆ ಬಿಟ್ಟಿದ್ದು. ಅದು ಸುಲಭವೇನಲ್ಲ. ನೀನು ಮನಸ್ಸುಮಾಡಿದರೆ ಯಾರಿಂದ ಏನು ಬೇಕಾದರೂ ಮಾಡಿಸಬಲ್ಲೆ. ಆ ಸಾಮರ್ಥ್ಯ ನಿನಗೆ ದೈವದತ್ತವಾದದ್ದು, ದುರ್ಯೋಧನ!" ಎಂದನು.

ರಾಧೇಯನು ಸುಂದರವಾಗಿ ನಕ್ಕನು. ಅವನ ನಗೆಯಲ್ಲಿ ದಿವ್ಯತೆ ರಾರಾಜಿಸುತ್ತಿತ್ತು. ದುರ್ಯೋಧನನು ಅವನನ್ನು ಪ್ರೀತಿಯಿಂದ ಆಲಿಂಗಿಸಿಕೊಂಡನು. ಅದೇ ಅವರು ಒಟ್ಟಿಗೆ ಕಲೆಯಲಿರುವ ಕೊನೆಯ ರಾತ್ರಿಯಾಗಿತ್ತು. ಆದರೆ ರಾಜನಿಗದು ಗೊತ್ತಿರಲಿಲ್ಲ. ರಾಧೇಯನಿಗೆ ನಾಳೆ ತನ್ನ ಅವಸಾನವೆಂಬುದು ತಿಳಿದಿತ್ತು; ಅದಕ್ಕೆ ಸಿದ್ಧನಾಗಿಯೇ ಇದ್ದನು. ದುರ್ಯೋಧನನು, ``ನಾನು ಶಲ್ಯನನ್ನು ಒಪ್ಪಿಸುತ್ತೇನೆ, ರಾಧೇಯ. ಅವನು ನನ್ನ ಮಾತನ್ನು ತೆಗೆದುಹಾಕುವವನಲ್ಲ. ಹೋಗು, ಶಾಂತಿಯಿಂದ ಮಲಗು. ನಾಳೆಯ ಯುದ್ಧ ನಿನ್ನ ಮುಂದಿದೆ" ಎನ್ನಲು, ರಾಧೇಯನು ಅಲ್ಲಿಂದ ಹೊರಟನು; ಆದರೆ ಅವನ ಹೃದಯ ಅಲ್ಲೇ ಇತ್ತು. ಡೇರೆಯ ದ್ವಾರದಲ್ಲಿ ನಿಂತು ಒಮ್ಮೆ ಹಿಂದಿರುಗಿ ನೊಡಿದನು. ದುರ್ಯೋಧನನು ತನ್ನ ಪ್ರೀತಿಯ ರಾಧೇಯ ಹೋಗುವುದನ್ನೇ ನೊಡುತ್ತಿದ್ದನು. ರಾಧೇಯ ಓಡಿಬಂದು ಪುನಃ ಗೆಳೆಯನನ್ನು ಆಲಿಂಗಿಸಿಕೊಂಡನು. ಅವನ ಪ್ರೇಮ ದುರ್ಯೋಧನನ ಮನಸ್ಸನ್ನು ಕಲಕಿತು. ಇಬ್ಬರು ಕಣ್ಣೀರಿಟ್ಟರು; ನಂತರ ಬೇರೆಯಾದರು. ಅದು ಸಂತೋಷದ ಕಣ್ಣೀರೋ, ದುಃಖದ ಕಣ್ಣೀರೋ ಹೇಳುವವರಾರು?.ರಾಧೇಯನು ಹಾಸಿಗೆಯ ಮೇಲೆ ಮಲಗಿ ನಿದ್ರೆ ಮಾಡಲೆತ್ನಿಸಿದನು. ಆದರೆ ಕಣ್ಣುಗಳು ಕೆಂಡಗಳ ಹಾಗೆ ಉರಿಯುತ್ತಿರುವಾಗ ನಿದ್ರೆ ಬರುವುದಾದರು ಹೇಗೆ? ಅವನೆದೆ ವೇಗವಾಗಿ ಹೊಡೆದುಕೊಳ್ಳುತಿತ್ತು. ನಾಳೆ ತಾನು ಸಾವನ್ನೆದುರಿಸಬೇಕು. ವಿಧಿವಾದಿಯಾದ ಕರ್ಣನಿಗೂ ಬರಲಿರುವ ಸಾವನ್ನು ಇಚ್ಛಾಪೂರ್ವಕವಾಗಿ ಒಪ್ಪಿಕೊಳ್ಳುವುದೆಂದರೆ ಕಷ್ಟವೇ. ನಾಳಿನ ಹೋರಾಟವೇನು ಸಾಮಾನ್ಯವೇ? ಸಹೋದರನೊಂದಿಗೆ ಹೋರಬೇಕು, ಸಾಧ್ಯವಾದಷ್ಟು ಅವನನ್ನು ಕೊಲ್ಲಲು ಪ್ರಯತ್ನಿಸಬೇಕು. ಎಲ್ಲವೂ ಸಾಮಾನ್ಯವಾಗುವುದಾದರೆ ಅರ್ಜುನನನ್ನು ಕೊಲ್ಲವುದೇನೊ ಕಷ್ಟವಲ್ಲ. ಆದರೆ ಎಲ್ಲವೂ ಸಾಧಾರಣವಾಗುವುದು ಹೇಗೇ? ತನ್ನ ಜೀವನವೇ ಈವರೆಗೆ ಎಲ್ಲರ ಹಾಗಿನ ಸಾಧರಣ ಜೀವನವೇ? ಕೊನೆಯಲ್ಲಿ ಏಕೆ ಅದು ಸಾಧಾರಣವಾಗಬೇಕು? ಕೃಷ್ಣನು ಸಾರಥಿಯಾಗಿ ಕುಳಿತಿರುವುದರಿಂದ ಗೆಲ್ಲುವುದು ಅರ್ಜುನನೇ ಎಂಬುದು ತನಗೆ ಗೊತ್ತು. ಶಲ್ಯನು ಕೃಷ್ಣನ ಮಟ್ಟಕ್ಕೆ ಬರಲಾರನೆಂಬುದು ಅವನಿಗೆ ತಿಳಿದಿರುವ ವಿಷಯವೇ. ಕೃಷ್ಣಾರ್ಜುನರ ನಡುವಣ ಬಾಂಧವ್ಯ ತನಗೂ ಶಲ್ಯನಿಗೂ ನಡುವೆ ಏರ್ಪಡುವುದು ಹೇಗೆ? ನಿಜವಾಗಿ ಶಲ್ಯನಿಗೆ ತನ್ನನ್ನು ಕಂಡರಾಗುದು. ಆದರೆ ಅದೇನು ಮುಖ್ಯ ವಿಷಯವಲ್ಲ. ತಾನು ಕೈಲಾದಷ್ಟು ಹೋರಬೇಕು. ಕೊನೆಯಲ್ಲಿ ತಾನೂ, ದುರ್ಯೋಧನನೂ ಸಾಯುವವರೇ. ಇಷ್ಟು ವರ್ಷ ಕಷ್ಟಪಟ್ಟಿರುವ ಯುಧಿಷ್ಠಿರನೇ ಕೊನೆಗೆ ರಾಜ್ಯವಾಳುವುದು.ರಾಧೇಯ ತನ್ನ ಇಬ್ಬರು ತಾಯಿಯರನ್ನು ನೆನೆದು. ರಾಧೆಗೆ ತನ್ನ ಮೇಲೆ ಬಲು ಹೆಮ್ಮೆ. ಕುಂತಿಯ ಸುಂದರ ಕಣ್ಣುಗಳನ್ನು ಮೃದುಸ್ಪರ್ಶವನ್ನು ನೆನೆದ. ಅವಳೊಡನೆ ತಾನು ಕಳೆದ ಆ ಸ್ವಲ್ಪ ಕಾಲವನ್ನು ನೆನೆದಾಗ ಬಂದ ಕಣ್ಣೀರನ್ನೊರೆಸಿಕೊಂಡ. ಅವು ವ್ಯರ್ಥ! ಪುಂಖಾನುಪುಂಖವಾಗಿ ಬಂದ ಹಳೆಯ ಯೋಚನೆಗಳಲ್ಲಿ ಯಾವುದಕ್ಕೆ ಗಮನ ಕೊಡಬೇಕೆಂದೇ ತಿಳಿಯಲಿಲ್ಲ. ಭಾರ್ಗವಾಶ್ರಮದಲ್ಲಿದಾಗ ತನ್ನ ತೊಡೆಯನ್ನು ಕೊರೆದ ದುಂಬಿಯನ್ನು ನೆನೆದ. ಗಾಯದ ಗುರುತು ಇನ್ನೂ ಇದೆ. ಅದರ ಪರಿಣಾಮವಾಗಿ ಮನಸ್ಸಿನ ಮೇಲಾದ ಗಾಯದ ಗುರುತು ಸಹ ಇನ್ನೂ ಇದೆ. ಗುರುಗಳು ತನಗೆ ತುರ್ತುಸಮಯದಲ್ಲಿ ಅಸ್ತ್ರಗಳ ಮಂತ್ರಗಳೇ ಮರೆತು ಹೋಗಲಿ ಎಂದು ಶಾಪ ಕೊಟ್ಟಿದ್ದರು. ಅವು ಅಗತ್ಯವಾಗುವುದು ನಾಳೆಯೇ; ಆದರೆ ಅವು ಮರೆತುಹೋಗುವುದು ನಾಳೆಯೇ. ಅದರಲ್ಲಿ ಸಂಶಯವಿಲ್ಲ. ತನ್ನ ರಥದ ಚಕ್ರವು ಕೆಸರಿನಲ್ಲಿ ಹೂತುಹೋಗುವುದೆಂದು, ತಾನು ಸಿದ್ಧವಾಗಿಲ್ಲದಿರುವಾಗ ತನಗೆ ಸಾವು ಬರುವುದೆಂದೂ ಬ್ರಾಹ್ಮಣನ ಶಾಪ ಬೇರೆ ಇದೆ. ಹೌದು, ವಿಧಿ ತನ್ನ ವಿರುದ್ಧವಾಗಿಯೇ ಇದೆ; ಆದರೆ ತಾನೇನು ಅದನ್ನು ಗಂಭೀರವಾಗಿ ಪರಿಗಣಿಸುವುದಿಲ್ಲ. ಇಷ್ಟು ವರ್ಷಗಳ ನೋವಿನ ಜೀವನದ ನಂತರ ಸಾವು ಬರುವುದು ಅದೆಂತಹ ಸಂತೋಷದ ಸಂಗತಿ! ತಾನು ಅದನ್ನು ಸ್ವಾಗತಿಸುವೆ. ಆ ನಂತರ ತನ್ನ ತಮ್ಮನ ಮಗುವನ್ನೇ ತಾನು ಕೊಲ್ಲಬೇಕಾಗಿ ಬರುವುದಿಲ್ಲ; ತನ್ನ ತಮ್ಮಂದಿರನ್ನು ಬಿಲ್ಲಿನ ತುದಿಯಿಂದ ಮುಟ್ಟಿ, ಹೀಯಾಳಿಸಿ ಅವರನ್ನು ಕಣ್ಣೀರಿಡಿಸಬೆಕಾಗಿರುವುದಿಲ್ಲ. ಆ ದಿನ ಅವನಿಗೆ ನಕುಲನನ್ನು ಅಪಮಾನಗೊಳಿಸುವುದು ಸುಲಭವೇನಾಗಿರಲಿಲ್ಲ. ಬದಲಿಗೆ ಕೊಲ್ಲುವದೇ ಸುಲಭವಾಗುತ್ತಿತೇನೋ. ತನ್ನಣ್ಣನೊಂದಿಗೆ ಹೋರಾಡಿ ಅಪಮಾನಿತನಾಗಿದ್ದು ತನ್ನಣ್ಣನಿಂದ ಎಂದು ಮುಂದೆಂದೋ ತಿಳಿದಾಗ ಅವನಿಗೆ ಹೆಮ್ಮೆ ಎನ್ನಿಸಬಹುದು. ಅವನಿಗೆ ನಗು ಬಂದಿತು. ನಾಳೆ ಯುಧಿಷ್ಠಿರನ ಜೊತೆಗೂ ಹೋರಾಡಿ ಅವನನ್ನೂ ಅವಮಾನಿಸುವೆ. ತಾನು ಎಲ್ಲ ಪಾಂಡವರನ್ನೂ ಕೊಲ್ಲುವಂತಹ ಸಂದರ್ಭ ಬಂದಿದ್ದರೂ ಕೊಲ್ಲಲಿಲ್ಲ ಎಂದು ಕುಂತಿಗೆ ಗೊತ್ತಾಗಬೇಕು. ತಾನು ಮಾತು ಕೊಟ್ಟಂತೆ ನಡೆದಿರುವೆ ಎಂದು ಅವಳಿಗೆ ಸಂತೋಷವಾಗಬಹುದು. ಕೃಷ್ಣನೂ ತನ್ನ ಮಾತನ್ನು ಊಳಿಸಿಕೊಂಡಿರುವನು, ಗೊತ್ತು. ಕರ್ಣನಿಗೆ ಕೃಷ್ಣನ ಕಣ್ಣುಗಳಲ್ಲಿನ ಪ್ರೀತಿ, ದಯೆಯ ದೃಷ್ಟಿಯನ್ನೆದುರಿಸುವುದು ಕಠಿಣವೇ ಆಗಿತ್ತು. ಕೃಷ್ಣನನ್ನು ಕಂಡರೆ ತನಗೆ, ತನ್ನನ್ನು ಕಂಡರೆ ಕೃಷ್ಣನಿಗೆ, ತುಂಬ ಪ್ರೀತಿ, ದುರ್ಯೋಧನನೊಬ್ಬನನ್ನು ಬಿಟ್ಟರೆ, ತನಗೆ ತುಂಬ ಪ್ರೀತಿಯಿರುವುದು ಕೃಷ್ಣನ ಮೇಲೆಯೇ. ಕೃಷ್ಣನಿಗೂ ಇದು ಗೊತ್ತು.ಸುದೀರ್ಘ ರಾತ್ರಿ ನಿಧಾನವಾಗಿ ಕೊನೆಗೊಂಡಿತು. ಇಡೀ ರಾತ್ರಿ ರಾಧೇಯನು ಎಚ್ಚರವಾಗಿದ್ದ. ಮರೆವಿನಾಳಕ್ಕೆ ಹೊತ್ತುಹಾಕುವ ಮೊದಲು ಕಳೆದುಹೋದ ತನ್ನ ಬದುಕಿನ ಒಂದೊಂದು ಕ್ಷಣವನ್ನು ಕೈಯಲ್ಲಿ ತೆಗೆದುಕೊಂಡು ನೋಡುವ ಸಂತೋಷದಲ್ಲಿ ಅವನಿಗೆ ರಾತ್ರಿ ಕಳೆದದ್ದೇ ತಿಳಿಯಲಿಲ್ಲ.* * * * ಮಹಾಯುದ್ಧದ ಹದಿನೇಳನೆಯ ದಿನ ಬೆಳಗಾಗುತ್ತಿದ್ದಂತೆಯೇ ದುರ್ಯೋಧನನು ಶಲ್ಯನ ಡೇರೆಗೆ ಹೋಗಿ, ``ಮಾವ, ನಿನ್ನ ಕಾಲಿಗೆ ಬಿದ್ದು ಕೇಳಿಕೊಳ್ಳುತ್ತೇನೆ. ನೀನು ನನಗೊಂದು ಉಪಕಾರ ಮಾಡಬೇಕು. ಇಲ್ಲವೆನ್ನಬಾರದು. ಇವತ್ತು ರಾಧೇಯನು ಅರ್ಜುನನೊಡನೆ ಯುದ್ಧ ಮಾಡುತ್ತಾನೆ. ಕೃಷ್ಣನಂತಹ ಸಾರಥಿಯೊಬ್ಬನಿದ್ದರೆ ಅವನು ಗೆಲ್ಲುವುದು ಖಂಡಿತ. ನಾನು ಅತ್ಯಂತ ವಿನಯದಿಂದ ನೀನು ಆ ನನ್ನ ಗೆಳೆಯನಿಗೆ ಸಾರಥಿಯಾಗಬೇಕೆಂದು ಬೇಡುತ್ತೇನೆ. ನಿನ್ನನ್ನು ಬಿಟ್ಟರೆ ರಾಧೇಯನ ರಥದ ಕಡಿವಾಣ ಹಿಡಿಯಲು ಸೂಕ್ತರಾದವರು ಇನ್ನು ಯಾರೂ ಇಲ್ಲ. ಈ ಕಠಿಣಪ್ರಸಂಗದಿಂದ ನೀನು ನನ್ನನ್ನು ಪಾರುಮಾಡಬೇಕು. ಅರ್ಜುನನಿಗಿಂತ ರಾಧೇಯನು ಎಷ್ಟೋ ಮೇಲಾದವನಾದರೂ, ಸಾರಥಿಯಿಲ್ಲದ ಈ ಕಾರಣಕ್ಕಾಗಿ ಅವನಿಗೆ ಹಿನ್ನಡೆಯಾಗಿದೆ. ಮಹಾಪ್ರವಾಹದಂತಿದ್ದ ನನ್ನ ಸೈನ್ಯವನ್ನೇ ನೋಡು. ಬೇಸಿಗೆಯ ನದಿಯಂತೆ ಹೇಗೆ ಬತ್ತಿಹೋಗಿದೆ. ನನ್ನ ಪರವಾಗಿ ಹೋರಾಡಿದ ಎಷ್ಟೋ ವೀರರು ಸತ್ತುಹೋಗಿರುವರು. ಅವರನ್ನೆಲ್ಲ ಕೊಲ್ಲಿಸಿದ ಪಾಪವನ್ನು ನಾನು ಹೇಗೆ ತೊಳೆದುಕೊಳ್ಳುವೆನೋ ತಿಳಿಯದಾಗಿದೆ. ಆದರೆ ಈಗ ಅದನ್ನೆಲ್ಲ ಚಿಂತಿಸಿ ಫಲವಿಲ್ಲ. ಸೈನ್ಯದಲ್ಲಿ ಉಳಿದಿರುವವರಲ್ಲಿ ಈಗ ಸಹಾಯಮಾಡಿ ನನ್ನನ್ನು ಗೆಲ್ಲಿಸಬಲ್ಲವನು ನೀನೊಬ್ಬನೇ. ನೀನು ಸಾರಥಿಯಾದರೆ ರಾಧೇಯನು ಅರ್ಜುನನನ್ನು ಕೊಲ್ಲುವನು. ನನಗೆ ಒಳಿತಾಗಲೆಂದು ನಿನ್ನ ಮನಸ್ಸಿನಲ್ಲಿರುವುದಾದರೆ ದಯವಿಟ್ಟು ಸಹಾಯಮಾಡು" ಎಂದನು. ಶಲ್ಯನಿಗೆ ಬಹಳ ಸಿಟ್ಟು ಬಂದಿತು. ``ದುರ್ಯೋಧನ, ನೀನು ನನ್ನನ್ನು ಅಪಮಾನ ಮಾಡುತ್ತಿರುವೆ, ಇಂತಹ ಕೋರಿಕೆಯನ್ನು ನನ್ನ ಮುಂದಿಡುವುದಕ್ಕೆ ನಿನಗೆ ಹಕ್ಕಿಲ್ಲ. ರಾಧೇಯನ ಮೇಲಿನ ಪ್ರೀತಿಯಿಂದ ನೀನು ಅವನನ್ನು ಅತಿಯಾಗಿ ಹೊಗಳುತ್ತಿರುವೆ. ಅವನು ಇರುವುದಕ್ಕಿಂತ ದೊಡ್ಡವನನ್ನಾಗಿ ಮಾಡುತ್ತಿರುವೆ. ಕ್ಷತ್ರಿಯನಾದ ನನ್ನನ್ನು ಸೂತಪುತ್ರನಿಗೆ ಸೂತನಾಗೆಂದು ಹೇಳಬಹುದೇ? ನಿನ್ನ ಬುದ್ಧಿಗೆ ಆಗಿರುವುದಾದರೂ ಏನು, ದುರ್ಯೋಧನ? ಈ ಕೆಲಸವನ್ನು ನನ್ನಿಂದ ಮಾಡಿಸುವುದು ಅಸಾಧ್ಯವೆಂದು ನಿನಗೆ ತಿಳಿಯದೆ? ಸೂತರೆಂದರೆ ರಾಜಾಸ್ಥಾನಗಳಲ್ಲಿರುವ ಸೇವಕರು. ಅವರು ಬಾರುಕೋಲನ್ನು ಹಿಡಿದು ರಾಜರಿಗಾಗಿ ರಥದ ಕುದುರೆ ಓಡಿಸುವವರು. ನಾನೊಬ್ಬ ಮಹಾರಥಿಕ, ಅವಬೃಥಸ್ನಾನ ಮಾಡಿ ಕಿರೀಟಧಾರಣೆ ಮಾಡಿರುವ ರಾಜ. ದೊಡ್ಡ ದೊಡ್ಡ ಯುದ್ಧಗಳಲ್ಲಿ ನಾನು ಭಾಗವಹಿಸಿದ್ದೇನೆ. ಇಂತಹ ನನ್ನನ್ನು ನೀನು ಒಬ್ಬ ಸೂತಪುತ್ರನಿಗಾಗಿ ಇಂತಹ ಹೀನಸೇವೆಯನ್ನು ಮಾಡೆನ್ನುತ್ತೀಯಲ್ಲ? ಪಟ್ಟಾಭಿಷಿಕ್ತನಾದ ಕ್ಷತ್ರಿಯರಾಜನೊಬ್ಬನು ಕೀಳುಜಾತಿಯವನೊಬ್ಬನಿಗೆ ಸಾರಥಿಯಾಗುವುದೆ? ರಾಧೇಯ ನನಗಿಂತ ಮೇಲು ಎಂಬಂತೆ ಮಾತನಾಡುತ್ತೀಯಲ್ಲ? ಅವನು ನನಗೆ ಸಮಾನನೂ ಅಲ್ಲ; ಅವನನ್ನು ನಾನು ಸುಲಭವಾಗಿ ಕೊಲ್ಲಬಲ್ಲೆ. ನೀನಿದನ್ನು ಬೇಕೆಂದೇ ಹೇಳುತ್ತಿರುವೆಯೋ ಹೇಗೆ? ನಾನು ಇಂದ್ರನನ್ನು ಬೇಕಾದರೂ ದ್ವಂದ್ವಯುದ್ಧದಲ್ಲಿ ಗೆಲ್ಲಬಲ್ಲೆ. ನೀನಿಂದು ಒಬ್ಬ ಮಹಾವೀರನನ್ನು ಅಪಮಾನಗೊಳಿಸಿರುವೆ. ನಾನು ಈ ರಾಧೇಯ, ಅರ್ಜುನ, ಕೃಷ್ಣ ಮೂವರೊಡನೆಯೂ ಬೇಕಾದರೆ ಹೋರಿ ಗೆಲ್ಲಬಲ್ಲೆ. ನೀನು ನನ್ನನ್ನು ನೋಯಿಸಿರುವೆ; ನನ್ನ ಪ್ರೀತಿಗೆ ಯೋಗ್ಯನಲ್ಲದ ನಿನ್ನೊಡನೆ ನಾನಿರುವುದಿಲ್ಲ; ನನ್ನ ರಾಜ್ಯಕ್ಕೆ ಹಿಂದಿರುಗುವೆ" ಎಂದು ಶಲ್ಯನು ಅಲ್ಲಿಂದ ಹೊರಡಲು ಸಿದ್ದನಾಗತೊಡಗಿದ.ದುರ್ಯೋಧನನು ಅವನ ದಾರಿಗಡ್ಡವಾಗಿ ನಿಂತು ಕೈಜೋಡಿಸಿಕೊಂಡು, ಕಣ್ಣೀರು ಸುರಿಸುತ್ತ, ``ಮಾವ, ನೀನು ಈ ರೀತಿ ನನ್ನ ಮೇಲೆ ಕೋಪಿಸಿಕೊಳ್ಳುವುದು ತರವಲ್ಲ. ನಾನು ನಿನಗೆ ಅಪಮಾನ ಮಾಡಲೂ ಇಲ್ಲ, ನಿನಗಿಂತ ರಾಧೇಯನು ಹೆಚ್ಚೆಂದೂ ಹೇಳಲಿಲ್ಲ, ನಿನ್ನ ಹಿರಿಮೆ ನನಗೆ ಗೊತ್ತಿಲ್ಲದ್ದೆ? ನೀನು ಅನಾಯಾಸವಾಗಿ ರಾಧೇಯನನ್ನು ದ್ವಂದ್ವಯುದ್ಧದಲ್ಲಿ ಸೋಲಿಸಬಲ್ಲೆ. ಶತ್ರುವಿನ ಹೃದಯದಲ್ಲಿ ಚುಚ್ಚಿಕೊಳ್ಳಬಲ್ಲವನೆಂದೇ ನಿನಗೆ ಶಲ್ಯನೆಂದು ಹೆಸರು. ಈ ನನ್ನ ಬೇಡಿಕೆಗೆ ನಿಜವಾದ ಕಾರಣವನ್ನು ನಿನಗೆ ನಾನು ಹೇಳುತ್ತಿದ್ದೆ. ಅರ್ಜುನನಿಗಿಂತ ರಾಧೇಯನು ಮೇಲು ಎಂದು ನನಗೆ ಗೊತ್ತು. ಆದರೆ ಅವನಿಗೆ ಕೃಷ್ಣನಿಗಿಂತಲೂ ಮೇಲಾದ ಸಾರಥಿಯೂ ಬೇಕು. ಇಡೀ ಪ್ರಪಂಚದಲ್ಲಿ ಕೃಷ್ಣನಿಗಿಂತ ಮೇಲಾದವನು ನೀನೊಬ್ಬನೇ. ಅದಕ್ಕಾಗಿಯೇ, ತ್ರಿಪುರಾಸುರರನ್ನು ಕೊಂದಾಗ ಶಂಕರನಿಗೆ ಬ್ರಹ್ಮನು ಸಾರಥಿಯಾಗಿದ್ದಂತೆ ಈಗ ನೀನು ರಾಧೇಯನ ಕಡಿವಾಣಗಳನ್ನು ಹಿಡಿಯುಬೇಕೆಂದು ಕೇಳಿಕೊಳ್ಳುತ್ತಿದ್ದೇನೆ. ನೀನಿದನ್ನು ನನಗಾಗಿ ಮಾಡಲೇಬೇಕು" ಎನ್ನಲು, ಶಲ್ಯನು, ``ದುರ್ಯೋಧನ, ನೀನಿಂದು ಈ ಎಲ್ಲ ವೀರರುಗಳ ಮುಂದೆ ನಾನು ಕೃಷ್ಣನಿಗಿಂತ ಮಿಗಿಲಾದವನೆಂದು ಹೇಳಿರುವೆ. ನನಗೆ ಸಂತೋಷವಾಗಿದೆ. ಆಗಲಿ, ನಾನು ರಾಧೇಯನಿಗೆ ಸಾರಥ್ಯ ಮಾಡುತ್ತೇನೆ" ಎಂದು ಒಪ್ಪಿಕೊಂಡನು. ದುರ್ಯೋಧನನು. ಅವನಿಗೆ ನಮಸ್ಕರಿಸಿ, ಈ ಶುಭಸಮಾಚಾರವನ್ನು ರಾಧೇಯನಿಗೆ ತಿಳಿಸಲು ಹೊರಟುಹೋದನು.ದುರ್ಯೋಧನನು ಮತ್ತೆ ಶಲ್ಯನ ಬಳಿಗೆ ಬಂದು, ``ಮಾವ, ಭಾರ್ಗವನು ಶಂಕರನಿಂದ ಅಸ್ತ್ರಗಳನ್ನು ಪಡೆದುಕೊಂಡಾಗ ಅವುಗಳನ್ನು ಕೀಳುಜಾತಿಯವರಿಗೆ ಕೊಡಬಾರದು ಎಂದು ನಿರ್ಬಂಧಿಸಿದ್ದನು. ದಿವ್ಯದೃಷ್ಟಿಯನ್ನುಳ್ಳ ಭಾರ್ಗವನು ಅಂತಹ ದಿವ್ಯಾಸ್ತ್ರಗಳನ್ನು ರಾಧೇಯನಿಗೆ ಕೊಟ್ಟಿರಬೇಕಾದರೆ, ಅವನು ಸೂತನಲ್ಲವೆಂದು ಅರಿತಿರಬೇಕಲ್ಲವೆ? ರಾಧೇಯನು ಸೂತನಲ್ಲ ಎಂಬುದು ನನ್ನ ಬಹುಕಾಲದ ಅನಿಸಿಕೆ. ಅವನನ್ನು ಅತಿರಥನು ಸಾಕುವ ಮುಂಚೆ ಕ್ಷತ್ರಿಯ ಕನ್ಯೆಯೊಬ್ಬಳು ಅವನನ್ನು ಹೆತ್ತಿರಬೇಕು. ಅವನ ತಂದೆ ಯಾವುದೋ ದೇವತೆಯಿರಬೇಕು ! ಏನೋ ಕಾರಣದಿಂದ ಅವನ ತಾಯಿ ಅವನನ್ನು ತ್ಯಜಿಸಿದ್ದಾಳೆ. ಸೂರ್ಯನಂತೆ ಪ್ರಕಾಶಿಸುತ್ತಿರುವ ಈ ವೀರನು ಸೂತನಾಗಲು ಸಾಧ್ಯವೆ? ಸಿಂಹದ ಮರಿ ಜಿಂಕೆಯ ಹೊಟ್ಟೆಯಲ್ಲಿ ಹುಟ್ಟುವುದೆ? ಅವನ ವಿಶಾಲವಾದ ಭುಜಗಳನ್ನೂ ಆಜಾನುಬಾಹುಗಳನ್ನೂ ಗಮನಿಸಿರುವೆಯ? ಅವು ಗಾಡಿ ಹೊಡೆಯುವವನದಾಗಿರಲು ಸಾಧ್ಯವಿಲ್ಲ. ಅವನು ಯಾವುದೋ ದೇವತೆಯ ಮಗನಾಗಿರಬೇಕು. ಅವನ ಜನ್ಮರಹಸ್ಯ ಮುಂದೆಂದಾದರೂ ಹೊರಗೆ ಬರುತ್ತದೆ; ಅವನು ಕ್ಷತ್ರಿಯನೆಂದು ಲೋಕಕ್ಕೆ ತಿಳಿಯುತ್ತದೆ. ಅವನು ರಾಜನಾಗುವುದಕ್ಕೆ ಹುಟ್ಟಿದವನು. ಇಲ್ಲದಿದ್ದರೆ ಅವನು ಅರ್ಜುನನ್ನು ಮೀರಿಸುವುದಾದರೂ ಹೇಗೆ? ಅವನಿಗೆ ಸಾರಥ್ಯ ಮಾಡುವುದರಲ್ಲಿ ಅವಮಾನವೇನಿಲ್ಲ" ಎನ್ನಲು, ಶಲ್ಯನು ದುರ್ಯೋಧನನನ್ನು ಆಲಿಂಗಿಸಿ, ``ನಿನ್ನ ಮೇಲಿನ ಪ್ರೀತಿಯಿಂದ ನಾನಿದನ್ನು ಒಪ್ಪಿರುವೆನು. ಆದರೆ ನನ್ನದೊಂದು ಮಾತಿದೆ. ಪ್ರೀತಿಯಿಂದಾಗಿಯೇ ನಾನು ರಾಧೇಯನೊಂದಿಗೆ ಕಠಿಣವಾಗಿ ಮಾತನಾಡಬಹುದು. ನೀವಿಬ್ಬರೂ ನನ್ನ ಮಾತುಗಳನ್ನು ಆಕ್ಷೇಪಿಸಕೂಡದು. ಕೀಳರಿಮೆಯಿಂದ ತನ್ನನ್ನು ತಾನು ಹಳಿದುಕೊಳ್ಳುವುದು, ತನ್ನ ಗುಣಗಳನ್ನು ತಾನೇ ಹೊಗಳಿಕೊಳ್ಳುವುದು, ಇನ್ನೊಬ್ಬರನ್ನು ತೆಗಳುವುದು, ವೃಥಾ ವೀರಾವೇಶದ ಮಾತನಾಡುತ್ತಿರುವುದು-ಈ ನಾಲ್ಕನ್ನು ಕಂಡರೆ ನನಗಾಗುವುದಿಲ್ಲ. ಈ ಗುಣಗಳನ್ನು ಅವನಲ್ಲಿ ಕಂಡರೆ, ಅವನನ್ನು ನಾನು ಹಳಿಯುವುದು ಖಂಡಿತ. ಅದನ್ನು ಮನಸ್ಸಿನಲ್ಲಿಡಬಾರದು" ಎಂದನು. ಅಷ್ಟರಲ್ಲಿ ಅಲ್ಲಿಗೆ ಬಂದಿದ್ದ ರಾಧೇಯನು ನಗುತ್ತ, ``ನಿನ್ನ ಕೃಪೆಗಾಗಿ ನಾನು ಕೃತಜ್ಞ. ಶಲ್ಯನು ನನಗೆ ಸಾರಥಿಯಾಗುವನೆಂಬುದು ನನಗೊದು ದೊಡ್ಡ ಹೆಮ್ಮೆಯ ವಿಷಯ. ನಾನೇ ಧನ್ಯ" ಎನ್ನಲು ಶಲ್ಯನಿಗೆ ಅವನ ವಿನಯವಾಕ್ಯಗಳಿಂದ ತುಂಬ ಸಂತೋಷವಾಯಿತು.ಶಲ್ಯನು ಹೋಗಿ ರಾಧೇಯನ ರಥವನ್ನು ಸಿದ್ಧಗೊಳಿಸಿ, ಅವನ ಮುಂದೆ ತಂದು ನಿಲ್ಲಿಸಿದ. ಆ ರಥವು ರಾಧೇಯನಿಗೆ ಬಹು ಪ್ರಿಯವಾದ ಆಸ್ತಿಯಂತಿತ್ತು. ಅವನು ಅದನ್ನು ಪ್ರದಕ್ಷಿಣೆಮಾಡಿ, ಅದಕ್ಕೂ ತಂದೆಯಾದ ಸೂರ್ಯನಿಗೂ ನಮಸ್ಕರಿಸಿ, ಶಲ್ಯನನ್ನು ಮೊದಲು ಹತ್ತಿಸಿ, ಅನಂತರ ತಾನು ಹತ್ತಿ ಕುಳಿತ. ಅದರಲ್ಲಿ ಅಗ್ನಿ-ಸೂರ್ಯರಂತೆ ಶೋಭಿಸುತ್ತಿದ್ದ ಅವರನ್ನು ನೋಡುವುದೊಂದು ಅದ್ಭುತ ದೃಶ್ಯವಾಗಿತ್ತು. ಅರುಣಸಾರಥ್ಯದಲ್ಲಿ ಹೊರಟ ಆದಿತ್ಯನಂತೆ ರಾಧೇಯನು ಪಾಂಡವರ ಸೈನ್ಯದ ಕಡೆಗೆ ಹೊರಡುವ ಮುನ್ನ ದುರ್ಯೋಧನನು, ``ರಾಧೇಯ, ಭೀಷ್ಮದ್ರೋಣರಿಂದಲೂ ಆಗದಿರುವುದನ್ನು ನೀನಿಂದು ಸಾಧಿಸುವೆ. ಇಂದು ನಿನ್ನ ಹಾಗು ನನ್ನ ಬದುಕಿನಲ್ಲಿ ಒಂದು ಅದ್ಭುತ ದಿನವೆಂದು ನನಗೆ ಗೊತ್ತು. ಮಿತ್ರಾ, ಹೋಗು, ಬರುವಾಗ ಚಿರಂತನ ಕೀರ್ತಿಯನ್ನು ಹೊತ್ತುಕೊಂಡು ಬಾ!" ಎನ್ನಲು, ರಾಧೇಯನು, ``ನನ್ನಿಂದಾದಷ್ಟೂ ಪ್ರಯತ್ನಿಸುವೆ. ದುರ್ಯೋಧನ, ನಿನ್ನನ್ನು ಬಿಟ್ಟು ಹೋಗುತ್ತಿರುವೆ. ನಿನ್ನ ರಾಧೇಯನು ನಿನ್ನ ಯಶಸ್ಸಿಗಾಗಿ ಶ್ರಮಿಸುವುದನ್ನು ಒಂದಿನಿತೂ ಬಿಡಲಾರನೆಂದು ನೆನಪಿಡು. ಉಳಿದದ್ದು ವಿಧಿಯ ಕೈಯಲ್ಲಿ. ಅದನ್ನು ನೀನು ಮರೆಯಬಾರದು" ಎಂದನು. ಮಿತ್ರರಿಬ್ಬರೂ ಕೈಕುಲುಕಿ ಬೀಳ್ಕೊಂಡರು. ದುರ್ಯೋಧನನನ್ನು ಬಿಟ್ಟು ರಾಧೇಯನು ತನ್ನ ಕೊನೆಯ ಪಯಣವನ್ನಾರಂಭಿಸಿದ. ಅವನ ಕಣ್ಣುಗಳಲ್ಲಿ ತುಳುಕಿದ ಕಂಬನಿ ಅವನಿಗಿದು ತಿಳಿದಿದೆಯೆಂದು ಹೇಳಿತು. ಗೆಳೆಯ ದುರ್ಯೋಧನನನ್ನು ಮತ್ತೊಮ್ಮೆ ನೋಡಲಾರೆನೆಂದು ಹೇಳಿತು.* * * * ಶಲ್ಯನಿಗೆ ರಾಧೇಯನು, ``ಪಾಂಡವರಿರುವಲ್ಲಿಗೆ ನನ್ನನ್ನು ಕರೆದುಕೊಂಡು ಹೋಗು. ನಾನು ಅವರೆಲ್ಲರನ್ನೂ ಸೋಲಿಸುವೆ. ಖಂಡಿತವಾಗಿಯೂ ಅರ್ಜುನನನ್ನು ಕೊಂದು ಯುದ್ಧವನ್ನು ಗೆಲ್ಲುವೆ" ಎಂದನು. ಶಲ್ಯನಿಗೆ ತಾನು ಯುಧಿಷ್ಠಿರನಿಗೆ ಕೊಟ್ಟ ಮಾತು ನೆನಪಾಯಿತು: ತಾನು ರಾಧೇಯನ ಉತ್ಸಾಹವನ್ನು ಸಾಧ್ಯವಾದಷ್ಟೂ ತಗ್ಗಿಸುತ್ತಿರಬೇಕು ಎಂಬುದು. ಅದಕ್ಕೆ ಅವನು ಅರ್ಜುನನನ್ನೂ ಪಾಂಡವರನ್ನೂ ಹೊಗಳುತ್ತ, ``ಅಂಥ ಮಹತ್ವಾಕಾಂಕ್ಷೆಯೇಕೆ? ಪಾಂಡವರ ಹಿರಿಮೆಯನ್ನು ಹೀಗಳೆಯಲು ನಿನಗೆ ಅದೆಷ್ಟು ಧೈರ್ಯ? ನೀನು ಹೀಗೆ ಗಳುಹುವುದು ಅರ್ಜುನನ ಗಾಂಡೀವಧ್ವನಿಯನ್ನು ಕೇಳುವವರೆಗೆ, ಭೀಮನು ಗಜಸೈನ್ಯವನ್ನು ತರಿಯುವುದನ್ನು ನೋಡುವವರೆಗೆ, ಯುಧಿಷ್ಠಿರ ಮತ್ತು ಅವನ ಸೋದರರ ಬಾಣಗಳ ರುಚಿಯನ್ನು ನೋಡುವವರೆಗೆ. ಅನಂತರ ನೀನು ಹೀಗೆ ಮಾತನಾಡಲಾರೆ. ಪಾಂಡವರ ಶಕ್ತಿ ನನಗೆ ಗೊತ್ತಿರುವಷ್ಟು ನಿನಗೆ ತಿಳಿಯದು" ಎನ್ನಲು, ರಾಧೇಯನು, ``ಮಹಾರಾಜ, ನಾನು ನಿನ್ನನ್ನು ವಿರೋಧಿಸಿ ನಿನ್ನ ಮನಸ್ಸಿಗೆ ಬೇಸರವನ್ನುಂಟುಮಾಡುವುದಿಲ್ಲ; ಮುಂದಕ್ಕೆ ಹೋಗೋಣ" ಎಂದನು.ರಥವು ಓಡುತ್ತಿತ್ತು. ಶಕುನಗಳ ಬಗ್ಗೆ ಚೆನ್ನಾಗಿ ತಿಳಿದಿದ್ದ ರಾಧೇಯನಿಗೆ ತನಗೆ ಶುಭವನ್ನು ಸೂಚಿಸುವ ಶಕುನಗಳು ಕಾಣಿಸುವ ಬದಲು, ಕೆಟ್ಟ ಕೆಟ್ಟ ಶಕುನಗಳೇ ದಾರಿಯುದ್ದಕ್ಕೂ ಕಂಡವು. ಆದರೆ ಇವಕ್ಕೆಲ್ಲ ಗಮನ ಕೊಡುವ ಸ್ಥಿತಿ ಅವನದಾಗಿರಲಿಲ್ಲ. ಕಹಿಯಾದ ಕಿರುನಗೆಯೊಂದಿಗೆ ಮುನ್ನಡೆದನು. ದಾರಿಯುದ್ದಕ್ಕೂ ಶಲ್ಯನು ಪಾಂಡವರನ್ನು ಹೊಗಳಿದ್ದೇ ಹೊಗಳಿದ್ದು. ಅರ್ಜುನನನ್ನು ಹೊಗಳುವುದು, ರಾಧೇಯನನ್ನು ಬೈಯ್ಯುವುದು. ಇದರಿಂದ ನೊಂದ ಅವನು, ``ಶಲ್ಯ, ನಿನ್ನ ಹೆಸರಿಗೆ ತಕ್ಕಂತೆ ನೀನು ನನ್ನನ್ನು ಚುಚ್ಚುತ್ತಿರುವೆ. ನಿನ್ನ ಮಾತುಗಳು ಕೂರಲಗಿನಂತೆ ನನ್ನ ಹೃದಯವನ್ನು ಹೊಕ್ಕು ನೋಯಿಸುತ್ತಿವೆ. ನೀನೇಕೆ ಹೀಗೆ ಮಾಡುತ್ತಿರುವೆಯೋ ನನಗೆ ತಿಳಿಯದು. ಆದರೆ ನಾನು ಇದಕ್ಕೆಲ್ಲ ಸೊಪ್ಪುಹಾಕುವವನಲ್ಲ. ಇಂದು ನಾನು ನನ್ನ ಕರ್ತವ್ಯವನ್ನು ನೆರವೇರಿಸುವೆ. ಮನುಷ್ಯರ ಬದುಕಿನ ಮೇಲೆ ವಿಧಿ ಕಣ್ಣಿಟ್ಟಿರುತ್ತದೆ; ಲೋಕ ನಿದ್ರಿಸಿದಾಗಲೂ ಅದು ಎಚ್ಚೆತ್ತಿರುತ್ತದೆ. ಅದು ಕೆಲಸಮಾಡುವುದು ವಿಚಿತ್ರ ರೀತಿಯಲ್ಲಿ. ಭೀಷ್ಮ ಬಿದ್ದಾಗ, ವಿಧಿಯೆದುರು ಮನುಷ್ಯ ಅಸಹಾಯನೆಂದು ನನಗನಿಸಿತು. ಆದರೆ, ಸ್ವಲ್ಪಮಟ್ಟಿಗೆ ಮಾನವನ ಭವಿಷ್ಯ ಅವನ ಕೈಯಲ್ಲಿರುವುದೂ ನಿಜ. ರಣರಂಗದಲ್ಲಿ ಸಾಯುವುದೇ ಮಾನವನ ವಿಧಿ ಎನ್ನುವುದಾದರೆ, ಸಾಧ್ಯವಾದಷ್ಟುಮಟ್ಟಿಗೂ ಚೆನ್ನಾಗಿ ಹೋರಾಡಿ ಅವನು ಒಳ್ಳೆಯ ಹೆಸರು ಸಂಪಾದಿಸುವುದಕ್ಕೇನೂ ಅದು ಅಡ್ಡಿಯಾಗಲಾರದು. ಹಾಗೆ ಮಾಡಿ ಅವನು ತನ್ನ ದುರ್ವಿಧಿಯನ್ನು ಸ್ವಲ್ಪವಾದರೂ ತಿದ್ದಿಕೊಳ್ಳಬಹುದು. ಅರ್ಜುನನನ್ನು ಗೆಲ್ಲುವ ಸಂಭವವಿಲ್ಲವೆಂದು ಹಿಂದಿನಿಂದಲೂ ನನಗೆ ಗೊತ್ತು. ಆದರೂ, ನನಗಾಗಿ ಹೃದಯವನ್ನಿತ್ತ ರಾಜನಿಗಾಗಿ ನಾನು ಯುದ್ಧಮಾಡುತ್ತೇನೆ; ನನ್ನ ಜೀವನವನ್ನು ಬಲಿಕೊಟ್ಟು ಅವನನ್ನು ಸಂತೋಷಪಡಿಸುತ್ತೇನೆ. ಈ ಯಜ್ಞಕ್ಕೆ ನೀನು ದಯವಿಟ್ಟು ಸಹಾಯಮಾಡು. ನಾನು ಈಗಾಗಲೇ ದುರ್ವಿಧಿಗೆ ಬಲಿಯಾದವನು. ಅರ್ಜುನನನ್ನು ಹೊಗಳುತ್ತ ಉಳಿದಿರುವ ನನ್ನ ಕೆಲವೇ ಗಂಟೆಗಳ ಬದುಕನ್ನೂ ನೋಯಿಸಬೇಡ. ನನ್ನ ಉತ್ಸಾಹವನ್ನು ತಗ್ಗಿಸುವುದೇ ನಿನ್ನ ಉದ್ದೇಶವಾಗಿದ್ದರೆ, ನೀನು ಅದರಲ್ಲಿ ಯಶಸ್ವಿಯಾಗಿರುವೆ. ಇನ್ನಾದರೂ ಸುಮ್ಮನಿರು" ಎಂದನು. ಶಲ್ಯನು ಮುಂದೆ ಮಾತನಾಡಲಿಲ್ಲ.ರಾಧೇಯನು ಸೈನ್ಯವನ್ನು ಚೆನ್ನಾಗಿ ವ್ಯೂಹಗೊಳಿಸಿದ್ದನು. ಅರ್ಜುನ ಯುಧಿಷ್ಠಿರರು ಪ್ರತಿವ್ಯೂಹವನ್ನು ರಚಿಸಿದ್ದರು. ಯುಧಿಷ್ಠಿರನು, ``ಅರ್ಜುನ, ನೀನು ಇವತ್ತು ರಾಧೇಯನನ್ನು ಎದುರಿಸಬೇಕು. ಭೀಮನು ದುರ್ಯೋಧನನನ್ನು ಕೊಲ್ಲುವನು. ಅವರನ್ನೆಲ್ಲ ಒಬ್ಬೊಬ್ಬರನ್ನಾಗಿ ನೋಡಿಕೊಳ್ಳೋಣ. ಶತಾನೀಕನು ದುಶ್ಶಾಸನನನ್ನೂ, ನಕುಲನು ರಾಧೇಯನ ಮಕ್ಕಳನ್ನೂ, ಸಾತ್ಯಕಿಯು ಕೃತವರ್ಮನನ್ನೂ, ಧೃಷ್ಟದ್ಯುಮ್ನನು ಅಶ್ವತ್ಥಾಮನನ್ನೂ, ಸಹದೇವನು ಶಕುನಿಯನ್ನೂ ಎದುರಿಸಿ ಯುದ್ಧಮಾಡಲಿ. ನಾನು ಕೃಪನೊಡನೆ ಹೋರುವೆನು" ಎಂದನು. ಕೆಲವೇ ಕ್ಷಣಗಳಲ್ಲಿ ಯುದ್ಧವು ಪ್ರಾರಂಭವಾಯಿತು.ತ್ರಿಗರ್ತರ ಅಳಿದುಳಿದ ಸೈನ್ಯವು ಅರ್ಜುನನ ಮೇಲೆ ನುಗ್ಗಿತು. ತನ್ನೊಡನೆ ಸೈನ್ಯವನ್ನು ಒಯ್ಯದ ಅರ್ಜುನನು, ಪದ್ಧತಿಯಂತೆ ಒಬ್ಬನೇ ಅದನ್ನೆದುರಿಸಿದನು. ಕಾಲಕೇಯರನ್ನೂ ನಿವಾತ ಕವಚರನ್ನೂ ಒಬ್ಬನೇ ಎದುರಿಸಿದ್ದ ಅವನಿಗೆ ಇದೇನೂ ದೊಡ್ಡದೆನ್ನಿಸಲಿಲ್ಲ. ವೀರರ ಸಿಂಹನಾದ, ಸೈನಿಕರ ಹುಂಕಾರ ಹಾಹಾಕಾರಗಳು, ಕತ್ತಿಗಳ ಖಣಿಲು, ಬಾಣಗಳ ಸ್ವಿಶ್ಶಬ್ದ, ಗದೆಗಳ ಸಂಘಟ್ಟನೆ, ಕುದುರೆಗಳ ಹೇಷಾರವ, ಆನೆಗಳ ಘೀಳು, ಭೇರಿ ಕಹಳೆ ಶಂಖಗಳ ಶಬ್ದತುಮುಲ ಎಲ್ಲವೂ ಒಟ್ಟಾಗಿ ಸೇರಿ ರಣರಂಗದಲ್ಲಿ ದಿಕ್ತಟಗಳನ್ನೊಡೆಯುವಂತಹ ಮಹಾಶಬ್ದವನ್ನು ಸೃಜಿಸಿದ್ದವು.ರಾಧೇಯನು ಇಂದು ಅತ್ಯುತ್ತಮವಾಗಿ ಹೋರಾಡಿ ರಣರಂಗದಲ್ಲಿ ಪ್ರಾಣತ್ಯಾಗ ಮಾಡಲು ನಿಶ್ಚಯಿಸಿದ್ದನು. ಒಂಭತ್ತನೆಯ ದಿನ ಭೀಮನು ಪ್ರದರ್ಶಿಸಿದಂತಹ ವೀರಾವೇಶ. ತನ್ನ ಶರಗಳ ಪರಿಧಿಯಲ್ಲಿ ಬಂದವರನ್ನೆಲ್ಲ ಕೊಲ್ಲುತ್ತಿದ್ದನು. ಅವನದು ಬಿಟ್ಟೂಬಿಡದಂತಹ ಶರಗಾನ; ಯಾರೂ ಅವನನ್ನು ನೋಡಲು ಸಾಧ್ಯವಿರಲಿಲ್ಲ. ಪ್ರಾರಂಭದಲ್ಲಿಯೇ ಪಾಂಚಾಲವೀರರೆಷ್ಟೋ ಜನರನ್ನು ಕೊಂದನು. ಅವನು ಮಕ್ಕಳು ಸುಷೇಣ ಸತ್ಯಸೇನರು ಅವನ ರಥಚಕ್ರಗಳನ್ನೂ ವೃಷಸೇನನು ರಥದ ಹಿಂಬದಿಯನ್ನೂ ರಕ್ಷಿಸುತ್ತಿದ್ದರು. ಧೃಷ್ಟದ್ಯುಮ್ನ, ಸಾತ್ಯಕಿ, ದ್ರೌಪದಿಯ ಮಕ್ಕಳು, ಭೀಮ, ಶಿಖಂಡಿ, ನಕುಲ ಸಹದೇವರು ಎಲ್ಲರೂ ರಾಧೇಯನ ರಥದೆದುರು ನಿಂತು ಹೋರುತ್ತಿದ್ದರೂ ರಥದ ಮುನ್ನಡೆಯನ್ನು ತಡೆಯಲಾಗಲಿಲ್ಲ. ಭೀಮನು ಸತ್ಯಸೇನನನ್ನು ಕೊಂದು ಉಳಿದಿಬ್ಬರನ್ನು ಗಾಯಗೊಳಿಸಿದನು. ಆದರೆ ವೃಷಸೇನನು ಇನ್ನೊಂದು ರಥದಲ್ಲಿ ಬಂದು ತಂದೆಗೆ ಹಿಂದಿನಿಂದ ರಕ್ಷಣೆಯನ್ನೊದಗಿಸಿದನು. ಪಾಂಡವರ ಸೇನೆಯು ಸೂರ್ಯನೆದುರಿನ ಮಂಜಿನಂತೆ ಕರಗಿಹೋಗುತ್ತಿದ್ದಿತು. ವೀರರೆಲ್ಲ ಯಮನಂತಿದ್ದ ರಾಧೇಯನೆದುರಿನಿಂದ ದೂರಕ್ಕೆ ಓಡಿಹೋಗುತ್ತಿದ್ದರು. ಯುಧಿಷ್ಠಿರನು ದ್ವಂದ್ವಯುದ್ಧದಲ್ಲಿ ರಾಧೇಯನನ್ನೆದುರಿಸಿ ನಿಂತನು. ಕೋಪದಿಂದ ಕಣ್ಣು ಕೆಂಪಾಗಿರಲು, ಯುಧಿಷ್ಠಿರನು, ``ಕೇಳು, ಹೀನಕುಲದವನೇ. ಸೂತಪುತ್ರನಾಗಿರುವ ನೀನು ಅನೇಕ ವರ್ಷಗಳಿಂದ ನನ್ನ ಅರ್ಜುನನನ್ನು ಕೊಲ್ಲುವ ಪ್ರತಿಜ್ಞೆಮಾಡಿರುವೆಯಂತೆ. ಉತ್ತಮವಂಶಸಂಜಾತನಾದರೂ ಕೀಳು ಮನುಷ್ಯನಾದ ದುರ್ಯೋಧನನನ್ನು ಕಂಡರೆ ನಿನಗೆ ಪ್ರೀತಿಯಂತೆ. ನಿನ್ನ ಶೌರ್ಯದ ಮೇಲೆ ನಂಬಿಕೊಂಡೇ ಅವನು ಯುದ್ಧವಾರಂಭಿಸಿದನಂತೆ. ಬಾ, ಯುದ್ಧಮಾಡಿ ನಿನ್ನ ಶೌರ್ಯವನ್ನು ತೋರಿಸು. ಅರ್ಜುನನಿಗೆ ನಿನ್ನನ್ನು ಕೊಲ್ಲುವ ಕೆಲಸವನ್ನು ನಾನು ಉಳಿಸುತ್ತೇನೆ" ಎನ್ನಲು ರಾಧೇಯನು ನಕ್ಕು. ``ಹಾಗೆಯೇ ಆಗಲಿ!" ಎಂದನು. ಬಹಳ ಗೊತ್ತು ಯುಧಿಷ್ಠಿರನನ್ನೇ ನೋಡುತ್ತ ಧೇನಿಸುತ್ತಿದ್ದು, ಕೊನೆಗೊಮ್ಮೆ, ``ಯುಧಿಷ್ಠಿರ, ನೀನು ಮಹಾಪುರುಷ, ವೀರಯೋಧ. ವೀರೋಚಿತವಾಗಿ ನಾನು ನಿನ್ನನ್ನು ಅಭಿನಂದಿಸುತ್ತೇನೆ. ಕೆಲಕಾಲ ನಿನ್ನೊಡನೆ ಇದ್ದು ನಿನ್ನನ್ನೆದುರಿಸುವ ಈ ಅವಕಾಶಕ್ಕಾಗಿ ಕೃತಜ್ಞ. ನಂಬಿದರೆ ನಂಬು, ಬಿಟ್ಟರೆ ಬಿಡು, ನಿನ್ನೊಂದಿಗೆ ಸ್ವಲ್ಪಹೊತ್ತು ಇರಲು ನನಗೆ ಸಂತೋಷವಾಗಿದೆ" ಎಂದು, ತುಂಬು ಹೃದಯದ ಪ್ರೀತಿಯ ನಗುವನ್ನು ನಕ್ಕು, ಅವನೊಡನೆ ಯುದ್ಧವನ್ನಾರಂಭಿಸಿದನು.ಅದೊಂದು ಅದ್ಭುತ ದ್ವಂದ್ವ. ಮೊದಮೊದಲು ರಾಧೇಯನು ತಮ್ಮನ ಬಾಣಗಳಿಂದ ನೊಂದನು. ನೋವು ಸಹಿಸಲಾಗದೆ ರಥದ ಮೂಕಿಯ ಮೇಲೆ ಒರಗಿ ಮೂರ್ಛೆಹೋದನು. ಎಚ್ಚೆತ್ತು ಮುಂದುವರೆಸಿದನು. ಸಾತ್ಯಕಿ ಮೊದಲಾದವರು ಯುಧಿಷ್ಠಿರನ ನೆರವಿಗೆ ಬಂದರೂ ಅವರನ್ನೆಲ್ಲ ನಿವಾರಿಸಿ ದ್ವಂದ್ವವನ್ನೇ ಮುಂದುವರೆಸಿ, ತನ್ನ ಎಂದಿನ ತಂತ್ರದಂತೆ ಮೊದಲು ಯುಧಿಷ್ಠಿರನ ಬಿಲ್ಲನ್ನು ಮುರಿದು, ನಗುನಗುತ್ತ ಅವನ ಕವಚವನ್ನು ಹರಿದ. ಯುಧಿಷ್ಠಿರನ ಮೈಯೆಲ್ಲ ರಕ್ತಮಯವಾದದ್ದನ್ನು ನೋಡಲಾಗದಿದ್ದರೂ, ಯುದ್ಧವೆಂದ ಮೇಲೆ ಮಾಡಲೇ ಬೇಕಲ್ಲ! ನಗುತ್ತಲೇ ಯುಧಿಷ್ಠಿರನೆಸೆದ ಭಲ್ಲೆಯೊಂದನ್ನು ಎರಡಾಗಿ ಕತ್ತರಿಸಿದ. ಯುಧಿಷ್ಠಿರನ ಪತಾಕೆಯನ್ನು ನೆಲಕ್ಕೊರನಿಸಿದ. ಕ್ಷಣಮಾತ್ರದಲ್ಲಿ ಕೊಲ್ಲಬಹುದಾದ ಅಸಹಾಯನನ್ನಾಗಿಸಿದ ಮೇಲೆ, ಅವನನ್ನು ತನ್ನ ಬಿಲ್ಲಿನ ತುದಿಯಿಂದ ಮುಟ್ಟಿ, ``ಯುಧಿಷ್ಠಿರ, ನೀನು ಪ್ರಖ್ಯಾತ ಕುರುವಂಶದಲ್ಲಿ ಹುಟ್ಟಿದವನು, ಪಾಂಡವ ಜ್ಯೇಷ್ಠ. ನಾನೋ, ನೀನು ಹೇಳಿದ ಹಾಗೆ ಕೇವಲ ಸೂತಪುತ್ರ. ಕ್ಷತ್ರಿಯನಾದ ನೀನು ಶತ್ರುಗಳನ್ನು ಕೊಲ್ಲುವುದರಲ್ಲಿ ನಿಷ್ಣಾತನಾಗಿರಬೇಕಲ್ಲವೆ? ಆದರೆ ಹಾಗೇನೂ ಕಾಣಿಸುತ್ತಿಲ್ಲವಲ್ಲ? ಸ್ವಭಾವದಿಂದ ನೀನು ಬ್ರಾಹ್ಮಣ; ಕ್ಷತ್ರಿಯನಾಗಿ ಹುಟ್ಟಬಾರದಿತ್ತು. ನಿನಗಿಂತ ಮಿಗಿಲಾದ ಶೂರರೊಡನೆ ಹೋರಾಡಲು ಹೋಗಬೇಡ. ಸೋಲಿಸುವೆನೆಂಬ ದೃಢವಿಶ್ವಾಸವಿಲ್ಲದೆ ಯಾರನ್ನೂ ದ್ವಂದ್ವಕ್ಕೆ ಕರೆಯಬೇಡ. ಮನೆಗೆ ಹೋಗು ಮಗು, ಅಥವಾ ನಿನ್ನ ತಮ್ಮ ಅರ್ಜುನನಿದ್ದಲ್ಲಿಗೆ ಹೋಗು. ನೀನು ರಾಧೇಯನನ್ನು ದ್ವಂದ್ವದಲ್ಲಿ ಎಂದೂ ಕೊಲ್ಲಲಾರೆ" ಎಂದು ಹೇಳಿ, ಮರುಕ್ಷಣವೇ ರಾಧೇಯನು ಮುಖ ತಿರುಗಿಸಿ ಹೊರಟುಹೋದ. ತನ್ನನ್ನು ತಾನೇ ಶಿಕ್ಷಿಸಿಕೊಳ್ಳುವವನಂತೆ, ಇಮ್ಮಡಿ ಶೌರ್ಯದಿಂದ ಸೈನ್ಯವನ್ನು ಕೊಚ್ಚತೊಡಗಿದ. ಭೀಮ ಮೊದಲಾದ ವೀರರು ಧಾವಿಸಿ ಬಂದರೂ, ಅವನ ಪ್ರತಾಪವನ್ನು ಸ್ವಲ್ಪವೂ ತಡೆಯಲು ಸಾಧ್ಯವಾಗಲಿಲ್ಲ.ರಾಧೇಯನ ಮೇಲೆ ಕೋಪಗೊಂಡ ಭೀಮನು ಅವನನ್ನೆ ಅನುಸರಿಸಿಕೊಂಡು ಹೋದ. ಬರುತ್ತಿರುವ ಭೀಮನನ್ನು ಕಂಡು ಶಲ್ಯನು, ``ರಾಧೇಯ, ನೋಡು. ಭೀಮನಿಗೆ ನಿನ್ನ ಮೇಲೆ ಕೋಪ ಬಂದಿದೆ. ಅಭಿಮನ್ಯುವನ್ನು ಕೌರವರು ಕೊಂದಾಗಲಾಗಲಿ, ಅವನ ಮಗ ಘಟೋತ್ಕಚ ಸತ್ತಾಗಲಾಗಲಿ ಅವನಿಗೆ ಇಷ್ಟು ಕೋಪ ಬಂದಿರಲಿಲ್ಲ. ಇಂದು ಅವನು ಸಾಕ್ಷಾತ್ ಯಮನಂತೆಯೇ ಕಾಣುತ್ತಿರುವನು. ಏಕೆಂದು ನನಗೆ ಅಚ್ಚರಿಯಾಗಿದೆ" ಎನ್ನಲು, ರಾಧೇಯನು, ``ಹೌದು, ನಾನು ಅವನ ಅಣ್ಣನನ್ನು ಇದೇ ತಾನೆ ಅಪಮಾನಿಸಿದೆನಲ್ಲ, ಅದಕ್ಕೆ ಭೀಮನಿಗೆ ಕೋಪ ಬಂದಿದೆ. ಪಾಂಡವರಲ್ಲಿ ಜ್ಯೇಷ್ಠನೆಂದರೆ ಸಾಕ್ಷಾತ್ ದೇವರಂತೆ; ನಿನಗೆ ತಿಳಿಯದೆ? ಪಾಂಡವಜ್ಯೇಷ್ಠನು ಇತರ ಪಾಂಡವರ ಪ್ರೇಮ, ಭಕ್ತಿಗಳಿಗೆ ಬಾಧ್ಯನಾಗುತ್ತಾನೆ. ಅವನಿಗಾಗಿ ಅವರು ಸಾಯಲೂ ಸಿದ್ದ. ನಾನೀಗ ಭೀಮನೊಡನೆ ಯುದ್ಧಮಾಡುವೆ" ಎಂದನು. ಅವರಿಬ್ಬರ ಕಾಳಗವೂ ಬಹಳ ಹೊತ್ತು ನಡೆಯಿತು. ಕೋಪದ ಭರದಲ್ಲಿ ಭೀಮ ರಾಧೇಯನನ್ನು ಪ್ರಜ್ಞಾಹೀನನನ್ನಾಗಿಸಿದ. ಅಣ್ಣನನ್ನು ಹೀಯಾಳಿಸಿದ ಅವನ ನಾಲಿಗೆಯನ್ನು ಕೊಯ್ದುಬಿಡುವೆನೆಂದು ಮುನ್ನುಗ್ಗಿ ಬಂದ. ಶಲ್ಯನಿಗೆ ಇದು ಹಿಡಿಸದೆ, ``ಭೀಮ, ಅವಸರಿಸಬೇಡ. ನೀನು ಮಾಡುತ್ತಿರುವುದು ಸರಿಯಲ್ಲ. ರಾಧೇಯ ನಿನ್ನಣ್ಣನನ್ನು ಅವಮಾನಿಸಿದ್ದಕ್ಕೆ ನೀನು ಅವನನ್ನು ಯುದ್ಧದಲ್ಲಿ ಸೋಲಿಸಿದೆ; ಅಷ್ಟು ಸಾಕು. ನೀನಿನ್ನು ಹಿಂದಿರುಗಿ ಹೋಗು. ರಾಧೇಯನನ್ನು ಕೊಲ್ಲುವುದು ಅರ್ಜುನನ ಕೆಲಸ; ಅವನ ಪ್ರತಿಜ್ಞೆಯ ಪಾಲನೆಯನ್ನು ಅವನು ನೊಡಿಕೊಳ್ಳಲಿ" ಎಂದನು. ಶಲ್ಯನ ಮಾತು ಸರಿ ಎಂದೆನಿಸಿ ಭೀಮನು ಅಲ್ಲಿಂದ ಹೊರಟುಹೋದ. ಪ್ರಜ್ಞೆ ತಿಳಿದ ರಾಧೆಯನು ಪುನಃ ಭೀಮನೊಡನೆ ಯುದ್ಧಮಾಡಬಯಸಿದ. ಇದನ್ನು ನೋಡಿ ದುರ್ಯೋಧನನು ತನ್ನ ಕೆಲಹು ಸಹೋದರರನ್ನು ಅವನ ಸಹಯಕ್ಕೆಂದು ಕಳಿಸಿದ. ಭೀಮನು ಮೊದಲು ಅವರ ಕಡೆಗೆ ಗಮನ ಹರಿಸಿ, ಅವರನ್ನೆಲ್ಲ ಕೊಂದು. ತನ್ನ ಕೈಯಲ್ಲಿ ಸತ್ತ ಧಾರ್ತರಾಷ್ಟ್ರರ ಲೆಕ್ಕ ಅವನಿಗೆ ಮರೆತೇ ಹೋಗಿತ್ತು. ರಾಧೇಯ ಮತ್ತಿತರರು ಒಗ್ಗೂಡಿ ಭೀಮನನ್ನೆದುರಿಸಿದರು. ಈ ಕಡೆ ಭೀಮನ ನೆರವಿಗೆ ಇನ್ನಿತರರೂ ಬಂದು ಸೇರಿದರು. ಯುದ್ಧ ಪುನಃ ಸಂಕುಲವಾಯಿತು.ಯುದ್ಧದುದ್ದಕ್ಕೂ ತ್ರಿಗರ್ತರು ಅರ್ಜುನನಿಗೆ ದೊಡ್ಡ ತಲೆನೋವಾಗಿದ್ದರು. ಯಾವಾಗ ಅವನು ಮುಖ್ಯರಾದನೊಬ್ಬನ ಜೊತೆಗೆ ಹೋರಾಡಬೇಕೆಂದು ಪ್ರಯತ್ನಿಸಿದರೂ, ಸಂಶಪ್ತಕರು ಅವನನ್ನು ಎದುರಿಸಿ ಗಂಟೆಗಟ್ಟಲೆ ನಿಲ್ಲಿಸಿಕೊಂಡುಬಿಡುತ್ತಿದ್ದರು. ಈ ಹೊತ್ತೊ ಹಾಗೆಯೇ ಆಯಿತು. ಅವರ ಸೈನ್ಯದ ಬಹುಭಾಗವನ್ನು ನಾಶಮಾಡದೆ ಅವನು ಅತ್ತಿತ್ತ ಚಲಿಸುವಂತಿರಲಿಲ್ಲ. ಇಂದು ಅವರಲ್ಲಿ ಕೆಲವರನ್ನು ಕೊಂದರೂ, ನಾಳೆ ಮತ್ತೆ ಕೆಲವರು ಎಲ್ಲಿಂದಲೋ ಪ್ರತ್ಯಕ್ಷರಾಗಿ ಅವನನ್ನೆದುರಿಸಿ ನಿಲ್ಲುತ್ತಿದ್ದರು. ಇನ್ನೂ ಕೊಲ್ಲುವುದಕ್ಕಾಗಿರದ ಸುಶರ್ಮನೇ ಇಂದು ಅರ್ಜುನನಿಗೆ ಅಡ್ಡಿಯಾಗಿದ್ದನು. ಅವನಿಗೆ ದಿವ್ಯಾಸ್ತ್ರಗಳೂ ತಿಳಿದಿದ್ದರಿಂದ, ಅರ್ಜುನನು ತ್ರಿಗರ್ತರೊಡನೆ ಬಹಳ ಹೊತ್ತು ಹೋರಾಡಿ ಅವರ ಸೈನ್ಯದ ಅರ್ಧಕ್ಕಿಂತಲೂ ಹೆಚ್ಚನ್ನು ನಾಶಮಾಡಬೇಕಾಯಿತು. ಅಷ್ಟರಲ್ಲಿ ತಿರುಗಿ ನೋಡಿದರೆ ರಾಧೇಯ. ಅರ್ಜುನನು ಗಮನಿಸುತ್ತಿದ್ದಂತೆ, ರಾಧೇಯನು ತಮ್ಮ ಕಡೆಯ ವೀರರಲ್ಲಿ ಒಬ್ಬೊಬ್ಬರನ್ನೂ ಪ್ರತ್ಯೇಕಯಾಗಿ ಸೋಲಿಸಿದ್ದನು. ಮನಸ್ಸಿನಲ್ಲೇ ಅವನ ಶೌರ್ಯವನ್ನು ಮೆಚ್ಚಿಕೊಂಡ ಅರ್ಜುನನು ಹಾಗೆಂದು ಕೃಷ್ಣನಿಗೆ ಹೇಳಿ, ತನ್ನನ್ನು ರಾಧೇಯನ ಬಳಿಗೆ ಕರೆದೊಯ್ಯುವಂತೆ ಕೇಳಿಕೊಂಡನು. ಅಷ್ಟರಲ್ಲಿ ಅಶ್ವತ್ಥಾಮನು ಬಂದು ಸೆಣೆಸಿ ನಿಂತುದರಿಂದ ಅವನೊಡನೆ ದ್ವಂದ್ವಯುದ್ಧಕ್ಕೆ ನಿಲ್ಲಬೇಕಾಯಿತು. ಸ್ವಲ್ಪಹೊತ್ತಿನಲ್ಲಿಯೇ ಅಶ್ವತ್ಥಾಮನು ಅರ್ಜುನನ ರಥವನ್ನು ಬಾಣಗಳಿಂದ ಮುಚ್ಚಿಬಿಟ್ಟನು. ಕೃಷ್ಣನಿಗೆ ಕೋಪಬಂದಿತು. ``ಇನ್ನೂ ನಿನಗೆ ಗುರುವಿನ ಹಾಗೂ ಗುರುಪುತ್ರನ ಮೇಲೆ ಮೋಹವು ಹೋಗಿಲ್ಲ. ನಾನು ಇದುವರೆಗೂ ನಿನಗೆ ಹೇಳಿದ್ದೆಲ್ಲವೂ ವ್ಯರ್ಥ. ನನ್ನ ಮಾತಿಗಿಂತಲೂ ನಿನಗೆ ಇವರಿಬ್ಬರ ಮೇಲಿನ ಮೂರ್ಖ ಪ್ರೇಮವೇ ಹೆಚ್ಚು. ಅವರನ್ನು ನೋಡಿದೊಡನೆ ನಿನ್ನ ಕೈಗಳು ಹಿಂದೆಗೆಯುತ್ತವೆ, ಬೆರಳಿಗೆ ಜೋಮು ಹಿಡಿಯುತ್ತದೆ, ಗಾಂಡೀವವು ವಿಶ್ರಾಂತಿಯನ್ನು ಬೇಡುತ್ತದೆ; ಅಶ್ವತ್ಥಾಮನಿಂದ ಹೊಡೆಸಿಕೊಳ್ಳುವುದೆಂದರೆ ನಿನಗೆ ಆನಂದವಲ್ಲವೆ? ಕಾಲ ಬಂದಾಗ ಯುದ್ಧಮಾಡದೆ ಮೃದುವಾಗುವುದನ್ನು ನಾನೊಪ್ಪುವುದಿಲ್ಲ. ನೀನು ಮೊದಲಿನಿಂದಲೂ ಹೀಗೆಯೇ ಮಾಡುತ್ತ ಬಂದಿರುವೆ. ಒಳ್ಳೆಯ ಹೊತ್ತಿನಲ್ಲಿ ಕರ್ತವ್ಯವನ್ನು ಮರೆಯುವೆ" ಎಂದನು. ಅರ್ಜುನನು ಕೃಷ್ಣನ ಭರ್ತ್ಸನೆಯ ಮಾತುಗಳನ್ನು ಸಹಿಸಲಾರದೆ ಹೋದನು. ಕೋಪದಿಂದ ಯುದ್ಧಮಾಡಿ, ಕವಿದಿದ್ದ ಬಾಣಗಳ ಮಂಟಪವನ್ನು ಹರಿದೊಗೆದು, ದಿವ್ಯಾಸ್ತ್ರಗಳನ್ನು ಬಳಸಿ ಅಶ್ವತ್ಥಾಮನನ್ನು ಸೋಲಿಸಿಬಿಟ್ಟನು. ಬಳಲಿದ ಅಶ್ವತ್ಥಾಮನನ್ನು ಅವನ ಕುದುರೆಗಳು ರಣರಂಗದಿಂದ ದೂರಕ್ಕೆ ಕರೆದುಕೊಂಡು ಹೋದವು.* * * * ದುರ್ಯೋಧನನ ಕಡೆಗೆ ಇತರ ವೀರರ ಕಡೆಗೂ ಅರ್ಜುನನು ಗಮನಹರಿಸಿದನು. ಮಗಧ ರಾಜನಾದ ದಂಡಧರನನ್ನೂ ಅವನ ತಮ್ಮ ದಂಡನನ್ನೂ ಕೊಂದನು. ಸಂಶಪ್ತಕರೊಡನೆ ಮತ್ತೊಮ್ಮೆ ಹೋರಾಡಿದನು. ರಾಧೇಯನ ಕಡೆಗೆ ಹೋಗೋಣ, ಅವನನ್ನಿಂದು ಕೊಲ್ಲಬೇಕಾಗಿದೆ ಎಂದು ಕೃಷ್ಣನು ಹೇಳುವಷ್ಟರಲ್ಲಿ, ಅಶ್ವತ್ಥಾಮನಿಗೂ ಪಾಂಡ್ಯರಾಜನಿಗೂ ದ್ವಂದ್ವಯುದ್ಧವಾಗುತ್ತಿರುವುದು ಕಾಣಿಸಿತು. ತಾನೇ ಮಹಾವೀರನೆಂದುಕೊಂಡಿದ್ದ ಅವನನ್ನು ಅಶ್ವತ್ಥಾಮನು ಕೊಂದುಹಾಕಿದನು. ರಾ\-ಧೇಯನು ತಮ್ಮ ಸೈನ್ಯದ ಬಹುಭಾಗವನ್ನು ನಾಶಮಾಡಿರುವುದನ್ನು ಅರ್ಜುನನು ಗಮನಿಸಿದನು. ಈಗ ಅಶ್ವತ್ಥಾಮನು ದ್ವಂದ್ವದಲ್ಲಿ ಧೃಷ್ಟದ್ಯುಮ್ನನನ್ನು ಕೊಲ್ಲಲು ಯತ್ನಿಸುತ್ತಿದ್ದನು. ಅರ್ಜುನನು ಸಂಕುಲಯುದ್ಧದಲ್ಲಿ ಸೇರಿಕೊಂಡುದರಿಂದ ಸೈನಿಕರಿಗೆ ಸ್ಫೂರ್ತಿಯುಂಟಾಯಿತು. ಪಾಂಡವಸೈನ್ಯವು ಕೌರವರನ್ನು ಹಿಂದಕ್ಕೊತ್ತಿ ಮುನ್ನುಗ್ಗತೊಡಗಿತು. ರಾಧೇಯನ ರಥವು ರಣರಂಗದಲ್ಲಿ ವಾಯುವೇಗದಿಂದ ಸಂಚರಿಸುತ್ತಿರುವುದನ್ನೂ, ನರ್ತಿಸುತ್ತಿರುವಂತೆ ಕಾಣುವಷ್ಟು ಕೈಚಳಕದಿಂದ ಅವನು ಎಲ್ಲರೊಡನೆ ಹೋರುತ್ತಿರುವುದನ್ನೂ ಕಂಡು ಕೃಷ್ಣನು, ``ರಾಧೇಯನು ಯುದ್ಧಮಾಡುವುದನ್ನು ನೋಡುವುದೇ ಒಂದು ಚೆಂದ. ಅವನು ಬಾಣಗಳನ್ನು ಸೆಳೆಸೆಳೆದು ಬಿಡುವ ವೈಖರಿಯನ್ನು ನೋಡು. ಅವನ ವಿಶಾಲವೂ ಸುಂದರವೂ ಆದ ಎದೆಯನ್ನು ನೋಡು. ಯುದ್ಧರಂಗದಲ್ಲಿ ಸತ್ತಿರುವ ಸೈನಿಕರನ್ನು ನೋಡು: ಪ್ರತಿಯೊಬ್ಬರಿಗೂ ರಾಧೇಯನ ಹೆಸರುಳ್ಳ ಬಾಣ ಚುಚ್ಚಿಕೊಂಡಿರುವುದನ್ನು. ನೀನು ಅವನೊಡನೆ ಯುದ್ಧಮಾಡುವ ಕಾಲ ಬಂದೊದಗಿದೆ. ಬೇಗ ಬಾ ಹೋಗೋಣ. ಸಾಧ್ಯವಾದಷ್ಟು ಬೇಗ ನಾವು ಅವನನ್ನು ಸಂಧಿಸೋಣ" ಎಂದನು.ರಾಧೇಯ ಯುಧಿಷ್ಠಿರರು ಮತ್ತೊಮ್ಮೆ ದ್ವಂದ್ವದಲ್ಲಿ ತೊಡಗಿಕೊಂಡರು. ರಾಧೇಯನು ಅವನನ್ನು ಗಾಯಗೊಳಿಸಿ ಸೋಲಿಸಲು, ಯುಧಿಷ್ಠಿರನಿಗೆ ಎದ್ದು ನಿಲ್ಲುವುದೇ ಕಷ್ಟವಾಯಿತು. ರಾಧೇಯನ ಬಾಣಗಳಿಂದಾದ ನೋವನ್ನು ತಾಳಲಾರದೆ ಅವನು ತನ್ನ ಡೇರೆಗೆ ಹೋಗಿ ಮಲಗಿಕೊಂಡನು. ರಾಧೇಯನ ಮಾತುಗಳಿಂದಲೂ ನೊಂದಿದ್ದ ಅವನು ತುಂಬ ಖಿನ್ನನಾಗಿದ್ದನು. ಯುದ್ಧವೇ ಬೇಕಿರದಿದ್ದ ಅವನಿಗೆ, ನಡೆಯುತ್ತಿರುವ ಘಟನೆಗಳಿಂದ ಬೇಜಾರು ಹೆಚ್ಚಾಗುತ್ತಿದ್ದಿತು. ಈಗ ಯುದ್ಧದಲ್ಲಿ ಸಿಕ್ಕಿಕೊಂಡಾದ ಮೇಲೆ, ಈ ಕೊನೆಯಿಲ್ಲದ ಯಾತನೆ ಇನ್ನೂ ಎಷ್ಟು ಕಾಲ? ಅರ್ಜುನ ಇನ್ನೂ ಹೆಚ್ಚಿನ ವೀರಾವೇಶದಿಂದ ಹೋರಾಡಲೊಲ್ಲನೇಕೆ? ಏಕಾಂಗಿಯಾಗಿ ಶತ್ರುಗಳನ್ನು ಕೊಲ್ಲುತ್ತೇನೆ ಎಂದವನಲ್ಲವೆ ಅವನು? ಅಂಥದೇನನ್ನು ಮಾಡಿದ್ದಾನೆ? ಅವನಜ್ಜನಂತೆ ಸಾಮಾನ್ಯ ಸೈನಿಕರನ್ನು ಕೊಚ್ಚುತ್ತಿದ್ದಾನೆ. ಮುಖ್ಯವಾಗಿ ಅಪಾಯಕಾರಿಯಾದ ರಾಧೇಯನನ್ನು ಇನ್ನೂ ಎದುರಿಸಿಯೇ ಇಲ್ಲ; ಅವನು ತನ್ನ ಪ್ರತಿಜ್ಞೆಯನ್ನು ಮರೆತೇಬಿಟ್ಟಿರುವಂತೆ ತೋರುತ್ತದೆ. ತನಗೆ ರಾಧೇಯನು ನೀನು ಕ್ಷತ್ರಿಯನಾಗಿರುವುದರಿಂದಕ್ಕಿಂತ ಬ್ರಾಹ್ಮಣನಾಗಿರುವುದಕ್ಕೇ ಯೋಗ್ಯ ಎಂದನಲ್ಲವೆ! ಈ ಮಾತನ್ನು ಅರ್ಜುನನಿಗೆ ಹೇಳಿದರೇ ಚೆನ್ನಾಗಿರುತ್ತದೆ. ಯುದ್ದಮಾಡುವುದಕ್ಕೆ ಇಷ್ಟವೇ ಇಲ್ಲವೇನೋ ಎನ್ನುವಷ್ಟು ಮೃದುವಾಗಿ ಹೋರುತ್ತಾನೆ. ಭೀಮ ನಕುಲ ಸಹದೇವರುಗಳು ಮಾತ್ರ ಹೃತ್ಪೂರ್ವಕವಾಗಿ ಯುದ್ದಮಾಡುತ್ತಿದ್ದಾರೆ. ಆದರೆ ಎರಡೂ ಕಡೆಯ ಸೈನ್ಯಗಳು ದಿನೇ ದಿನೇ ಸೋಲುತ್ತಿವೆಯೇ ಹೊರತು ಮುಖ್ಯರಾದವರು ಸಾಯುತ್ತಿಲ್ಲ. ತಾನು ಪ್ರತಿಜ್ಞೆ ಪೂರೈಸಿಕೊಳ್ಳುವುದಿರಲಿ, ಧೃಷ್ಟದ್ಯುಮ್ನ ಪ್ರತಿಜ್ಞೆಯನ್ನು ಪೂರೈಸಿಕೊಂಡದ್ದಕ್ಕೂ ಅರ್ಜುನ ಕೆಂಡ ಕಾರಿದ. ಹೀಗೆ ಯೋಚನೆಗಳು ಯುಧಿಷ್ಠಿರನ ಮನಸ್ಸಿನಲ್ಲಿ ಓಡುತ್ತಿದ್ದವು.ರಣಘೋರನಾಗಿ ಪರಿಣಮಿಸಿದ್ದ ರಾಧೇಯನಿದ್ದೆಡೆಗೆ ಅರ್ಜುನ ಹೋಗತೊಡಗಿದ. ಅಲ್ಲಿ ಅವನು ಯುಧಿಷ್ಠಿರನನ್ನು ಕಾಣಲಿಲ್ಲ. ಗಾಯಗೊಂಡು ತನ್ನ ಡೇರೆಗೆ ಹೋದನೆಂದು ಭೀಮನಿಂದ ತಿಳಿದ ಕೂಡಲೆ, ಶತ್ರುನಿಗ್ರಹವನ್ನು ಅವನಿಗೆ ವಹಿಸಿ ಅಣ್ಣನನ್ನು ನೋಡಲು ಅವನ ಡೇರೆಗೆ ಕೃಷ್ಣನೊಡನೆ ಬಂದ. ಖಿನ್ನನಾಗಿ ಮಲಗಿದ್ದ ಯುಧಿಷ್ಠಿರನು ಕೃಷ್ಣಾರ್ಜುನರು ಬಂದದ್ದನ್ನು ನೋಡಿ ಮೇಲೆದ್ದು ಸ್ವಾಗತಿಸಿದ. ಯುದ್ಧದ ನಡುವೆಯೇ ಇವರು ಬಂದಿರುವುದನ್ನು ನೋಡಿ ರಾಧೇಯನನ್ನು ಕೊಂದಿರುವ ಸಂತೋಷದ ಸುದ್ದಿಯನ್ನು ತಿಳಿಸಲು ಬಂದಿರುವರೇನೋ ಎಂದುಕೊಂಡು, ``ಅನೇಕ ವರ್ಷಗಳಿಂದ ನನ್ನ ನಿದ್ರೆಯನ್ನು ಕೆಡಿಸುತ್ತಿದ್ದ ಆ ರಾಧೇಯನು ಭಾಗ್ಯವಶದಿಂದ ಸತ್ತದ್ದು ನನಗೆ ಬಹಳ ಸಂತೋಷವಾಗಿದೆ. ಹೇಳು ಅರ್ಜುನ, ನೀನು ಅವನನ್ನು ಹೇಗೆ ಕೊಂದೆ? ಎಲ್ಲವನ್ನೂ ವಿವರವಾಗಿ ಹೇಳು" ಎನ್ನಲು, ಅರ್ಜುನನು, ``ಅವನನ್ನು ನಾನಿನ್ನೂ ಎದುರಿಸಿಯೇ ಇಲ್ಲ. ಇನ್ನಿತರ ಕೌರವವೀರರ ಜೊತೆಗೆ ಹೋರುವುದೇ ಆಗಿಹೋಯಿತು. ಸಂಶಪ್ತಕರನ್ನು ಸೋಲಿಸಿ, ಈಗ ರಾಧೇಯನಲ್ಲಿಗೆ ಹೋಗುತ್ತಿದ್ದೇನೆ. ಭೀಮನು ಧಾರ್ತರಾಷ್ಟ್ರರೊಡನೆ ಯುದ್ದಮಾಡುತ್ತಿದ್ದ; ಅಲ್ಲಿ ನಿನ್ನನ್ನು ಕಾಣದೆ, ನಿನಗೆ ಗಾಯವಾಗಿರುವುದನ್ನು ತಿಳಿದು, ನಿನ್ನನ್ನು ನೋಡಿಕೊಂಡು ಹೋಗೋಣವೆಂದು ಬಂದೆ. ಈಗ ನಾನು ರಾಧೇಯನನ್ನು ಕೊಲ್ಲಲು ಹೋಗುತ್ತೆನೆ; ನನ್ನನ್ನು ಆಶೀರ್ವದಿಸು" ಎಂದನು. ರಾಧೇಯನಿನ್ನೂ ಬದುಕಿರುವನೆಂದು ಕೇಳಿದ ಯುಧಿಷ್ಠಿರನಿಗೆ ತುಂಬ ನಿರಾಸೆಯಾಯಿತು. ಮನಃಸ್ಥೈರ್ಯವನ್ನು ಕಳೆದುಕೊಂಡು, ಕೆಟ್ಟ ಮಾತುಗಳನ್ನಡುತ್ತ, ಆಣೆ-ಪ್ರಮಾಣಗಳನ್ನು ಮಾಡತೊಡಗಿ, ``ನಿನಗೇಕೆ ಗಾಂಡೀವದ ಅಲಂಕಾರ? ನನಗೆ ಕೊಟ್ಟುಬಿಡು; ನಾನೇ ರಾಧೇಯನೊಡನೆ ಯುದ್ದಕ್ಕೆ ಹೋಗುತ್ತೇನೆ!'' ಎನ್ನಲು, ಅರ್ಜುನನಿಗೆ ಮಹತ್ತಾದ ಕೋಪವುಂಟಾಯಿತು. ಕೃಷ್ಣನು ಮಧ್ಯಸ್ಥಿಕೆ ಮಾಡಲೆತ್ನಿಸುತ್ತ, ``ಅರ್ಜುನ, ರಾಧೇಯನಿಂದ ಗಾಯಗೊಂಡಿರುವ ಯುಧಿಷ್ಠಿರನು ನೋವಿನಿಂದ ತಾಳ್ಮೆ ಕಳೆದುಕೊಂಡಿರುವನೆಂಬುದು ಕಾಣುವುದಿಲ್ಲವೆ? ನಿನ್ನನ್ನು ಬಡಿದೆಬ್ಬಿಸಲು ಹಾಗೆ ಹೇಳಿದನಷ್ಟೆ. ಅದಕ್ಕಾಗಿ ಬೇಸರಿಸಬೇಡ``ಎಂದನು. ಅಷ್ಟರಲ್ಲಿ ಕೋಪವಿಳಿದ ಯುಧಿಷ್ಠಿರನು ಕೃಷ್ಣಾರ್ಜುನರನ್ನು ಆಲಿಂಗಿಸಿಕೊಂಡು, ಮೃದುವಚನಗಳನ್ನಾಡುತ್ತ, ಭರವಸೆಯ ದನಿಯಲ್ಲಿ, ``ಮಗೂ, ನಾನು ಹೃತ್ಪೂರ್ವಕವಾಗಿ ಆಶೀರ್ವಾದ ಮಾಡುತ್ತಿದ್ದೆನೆ. ವಿಜಯಿಯಾಗಿ ಹಿಂದಿರುಗುತ್ತಿ; ಹೋಗಿ ಬಾ!" ಎಂದನು. ರಾಧೇಯನು ಇನ್ನು ಸಾಯುವುದು ಖಂಡಿತ ಎಂದು ಅವನಿಗೆ ಅನ್ನಿಸಿತು.ಕೃಷ್ಣಾರ್ಜುನರು ರಥದ ಕುದುರೆಗಳನ್ನುಪಚರಿಸಿ, ನೀರು ಕುಡಿಸಿಕೊಂಡು, ಮಾತನಾಡಿಕೊಳ್ಳುತ್ತ ಯುದ್ಧದ ಮುಂಚೂಣಿಗೆ ಹೊರಟರು. ಕೃಷ್ಣನು, ``ಅರ್ಜುನ, ನೀನು ರಾಧೇಯನನ್ನು ಕೊಲ್ಲಲು ಪ್ರತಿಜ್ಞೆ ಮಾಡಿದ್ದೀಯೆ. ಆದರೆ ನೆನಪಿಡು, ಅವನನ್ನು ಕೊಲ್ಲುವುದು ಸುಲಭವೇನಲ್ಲ. ಅವನು ಈ ಭೂಮಿಯ ಮೇಲಣ ಮಹೋನ್ನತ ಧನುರ್ಧಾರಿ. ನೀನು ರಾಜಸೂಯ ಕಾಲದಲ್ಲಿ ರಾಜರನ್ನೆಲ್ಲ ಸೋಲಿಸಿರುವಂತೆಯೇ ಅವನೂ ಭರತವರ್ಷದ ಎಲ್ಲ ರಾಜರನ್ನೂ ಸೋಲಿಸಿರುವನು. ಕಾಶೀ ರಾಜನನ್ನು ಏಕಾಂಗಿಯಾಗಿ ಸೋಲಿಸಿ ಅವನ ಮಗಳನ್ನು ರಾಜನಿಗೆ ಕಾಣಿಕೆಯಾಗಿ ತಂದುಕೊಟ್ಟಿರುವನು. ನಾನೇ ಎದುರಿಸಲಾಗದ ಜರಾಸಂಧನನ್ನು ಸೋಲಿಸಿರುವ ಅವನು ನಿನ್ನ ಸಮಾನನು; ನಿನಗಿಂತ ಮಿಗಿಲು ಎಂದೇ ಹೇಳಬಹುದು. ಸ್ವಪ್ರಜ್ಞೆಯುಳ್ಳವನೂ ಬಲುಸೂಕ್ಷ್ಮ ಪ್ರಕೃತಿಯವನೂ ಆದ ಅವನೇ ಈಗ ದುರ್ಯೋಧನನ ಕಡೆ ಉಳಿದಿರುವ ಮಹಾವೀರ. ಅವನು ದುರ್ಯೋಧನನ ಪ್ರೀತಿಪಾತ್ರನಾದರೂ ಒಳ್ಳೆಯವನು; ತುಂಬ ಸತ್ಕಾರ್ಯಗಳನ್ನು ಮಾಡಿರುವನು; ಮಹಾದಾನಿಯೆಂದು ಭೂಮಂಡಲದಲ್ಲೆಲ್ಲಾ ಪ್ರಸಿದ್ಧನು. ಅವನನ್ನು ಕೊಲ್ಲಲಿರುವ ನಿನ್ನದು ಬಲು ದೊಡ್ಡ ಅದೃಷ್ಟ" ಎನ್ನಲು, ಅರ್ಜುನನು, ``ಕೃಷ್ಣ, ನೀನು ನನ್ನವನಾಗಿರುವೆ. ನೀನೇ ನನ್ನನ್ನು ವಿಜಯದೆಡೆಗೆ ಮುನ್ನಡೆಸುವೆ; ನಿನ್ನ ಮಾತನ್ನು ಚಾಚೂತಪ್ಪದೆ ಪಾಲಿಸುವುದಷ್ಟೇ ನಾನು ಮಾಡಬೇಕಾಗಿರುವುದು. ನಿನ್ನ ಕೃಪೆಯಿಂದ ನಾನು ರಾಧೇಯನನ್ನು ಕೊಲ್ಲುವೆ" ಎಂದನು. ಅನಂತರ ಅವರು ಕೌರವರಿದ್ದೆಡೆ ಹೋಗಿ ತುಮುಲಯುದ್ಧದಲ್ಲಿ ಸೇರಿಕೊಂಡರು.ಭೀಮನು ಸೈನ್ಯನಾಶದಲ್ಲಿ ಉದ್ಯುಕ್ತನಾಗಿದ್ದನು. ಅವನು ಬರುತ್ತಿದ್ದಂತೆಯೇ ಎಲ್ಲರೂ ಓಡಿ ಹೋಗುವರು. ಉತ್ತರಮಾರುತದಂತೆ ಭಯಾನಕನಾಗಿದ್ದ ಅವನು ಧಾರ್ತರಾಷ್ಟ್ರರಲ್ಲಿ ಸಾಧ್ಯವಾದಷ್ಟೂ ಮಂದಿಯನ್ನು ಕಂಡಕಂಡಲ್ಲಿ ಕೊಲ್ಲುತ್ತಿದ್ದನು. ಈ ನಡುವೆ ಅವನಿಗೆ ಗಾಂಡೀವಧ್ವನಿ ಕೇಳಿಸಿತು. ಯುಧಿಷ್ಠಿರನು ಕ್ಷೇಮವಾಗಿರುವನೆಂದುಕೊಂಡನು. ಈಗ ತಾವು ನಾಲ್ವರು ಪಾಂಡವರೂ ಯುದ್ಧದಲ್ಲಿ ಒಟ್ಟಾಗಿ ತೊಡಗಬಹುದು. ಅರ್ಜುನನೂ ಭೀಮನಿದ್ದ ಕಡೆಗೇ ಬರುತ್ತಿದ್ದನು. ದುರ್ಯೋಧನನು ಭೀಮನೊಂದಿಗೆ ಹೋರಲು ಶಕುನಿಯನ್ನು ಕಳುಹಿಸಿದ್ದನು. ಅವನನ್ನು ಸೋಲಿಸಿ ಓಡಿಸಲು, ಸೈನ್ಯಸಂರಕ್ಷಣೆಗೆ ರಾಧೇಯನೇ ಬಂದನು. ಅಜೇಯನಾದ ಅವನು ಬಂದೊಡನೆ ಸೈನಿಕರಿಗೆಲ್ಲ ಧೈರ್ಯ ಬಂದಿತು. ದೇವತೆಯಂತೆ ಶೋಭಿಸುತ್ತಿದ್ದ ಅವನ ಅಗ್ನಿಯಂತಹ ಬಾಣಗಳನ್ನು ಭೀಮನೇ ಮೊದಲಾದವರು ಎದುರಿಸಲಾರದೆ ಹೋದರು.* * * * ಅರ್ಜುನನು, ``ಕೃಷ್ಣ, ನೀನು ನನ್ನ ಕುದುರೆಗಳ ಕಡಿವಾಣವನ್ನು ಹಿಡಿದಿರುವಂತೆಯೇ ಶಲ್ಯನು ರಾಧೇಯನ ಕುದುರೆಗಳನ್ನೋಡಿಸುತ್ತಿರುವನು. ಸಾರಥಿಯಾಗಿ ಕಡಿವಾಣ ಹಿಡಿದ ಅವನೂ, ರಾಧೇಯನೂ ಅದ್ಭುತ ಶೋಭೆಯಿಂದ ಕೂಡಿರುವರು. ರಾಧೇಯನೆದುರಿಗೆ ನನ್ನನ್ನು ಕರೆದುಕೊಂಡು ಹೋಗು" ಎನ್ನಲು, ``ಹಾಗೆಯೇ ಆಗಲಿ!" ಎಂದ ಕೃಷ್ಣನು ರಾಧೇಯನೆದುರಿಗೆ ರಥವನ್ನು ಕೊಂಡೊಯ್ದನು. ಇವರು ದೃಡನಿರ್ಧಾರದಿಂದ ಬರುತ್ತಿರುವುದನ್ನು ದೂರದಿಂದಲೇ ಶಲ್ಯನು ನೋಡಿದನು. ಇಷ್ಟರಲ್ಲಿ ದುರ್ಯೋಧನನಿಗಾಗಿ ಪ್ರಾಣವನ್ನೇ ಪಣವಾಗಿಟ್ಟು ಹೋರಾಡುತ್ತಿರುವ ಈ ಮಹಾವೀರನನ್ನು ಮೆಚ್ಚಿಕೊಂಡಿದ್ದ ಶಲ್ಯನು ಅವನನ್ನು ಛೇಡಿಸುವುದನ್ನು ಬಿಟ್ಟಿದ್ದನು. ಯುಧಿಷ್ಠಿರನಿಗೆ ತಾನು ಕೊಟ್ಟ ಮಾತು ಮರೆತೇ ಹೋಗಿದ್ದಿತು. ಹಾಗಾಗಿ ಶಲ್ಯನು, ``ರಾಧೇಯ, ನೀನು ಅರ್ಜುನನನ್ನು ಕೊಲ್ಲುವೆನೆಂದು ಮಾಡಿದ ಪ್ರತಿಜ್ಞೆಯನ್ನು ಪೂರೈಸಿಕೊಳ್ಳುವ ಕಾಲವು ಬಂದೊದಗಿದೆ. ಕುಡುಗೋಲು ಬತ್ತದ ಪೈರನ್ನು ಹೇಗೋ ಹಾಗೆ ಅರ್ಜುನನು ಸೈನ್ಯವನ್ನು ಕತ್ತರಿಸುತ್ತ ನೇರವಾಗಿ ನಿನ್ನೆಡೆಗೇ ಬರುತ್ತಿದ್ದಾನೆ. ರಾಧೇಯ, ಲೋಕದಲ್ಲಿ ಅರ್ಜುನನನ್ನು ಎದುರಿಸಬಲ್ಲವನು ನೀನೊಬ್ಬನೆ. ನಿನ್ನಂತಹ ಮಹಾವೀರನನ್ನು ನಾನು ಈವರೆಗೆ ಕಂಡುದಿಲ್ಲ. ಘಾತಿಸುವ ಮಹಾ ಅಲೆಯನ್ನು ತಡೆಯುವ ದಡದಂತೆ ನೀನು ಅವನನ್ನು ತಡೆಯಬಲ್ಲೆ. ಅವನಿಗೀಗ ಯಾರೂ ರಕ್ಷಕರಿಲ್ಲ; ಹಾಗಾಗಿ ನೀನು ಕೃಷ್ಣಾರ್ಜುನರಿಬ್ಬರನ್ನೂ ಕೊಲ್ಲಬಲ್ಲೆ. ನಿನಗೆ ಸಾರಥಿಯಾಗಿ ಇರುವುದಕ್ಕೆ ನನಗೆ ಹೆಮ್ಮೆ ಎನಿಸಿದೆ. ಅರ್ಜುನನನ್ನು ನೋಡುತ್ತಲೇ ನಮ್ಮ ಸೈನ್ಯವು ನಾಲ್ಕೂ ದಿಕ್ಕುಗಳಿಗೆ ಚದುರಿಹೋಗಿದೆ. ರಾಧೇಯ, ಧನುರ್ವಿದ್ಯಾನಿಪುಣನಾದ ನಿನ್ನ ರಟ್ಟೆಗಳಲ್ಲಿ ಮಹಾನ್ ಬಲವಿದೆ. ದುರ್ಯೋಧನನಿಗಾಗಿ ನೀನು ಭೂಮಿಯನ್ನು ಒಮ್ಮೆ ಗೆದ್ದುಕೊಟ್ಟವನಲ್ಲವೆ? ಈ ಅರ್ಜುನನನ್ನು ಕೊಂದು ಇನ್ನೊಮ್ಮೆಯೂ ನೀನು ಹಾಗೆ ಮಾಡಬಲ್ಲೆ``ಎಂದನು.ಶಲ್ಯನ ಪ್ರೋತ್ಸಾಹಕ ಮಾತುಗಳನ್ನು ಕೇಳಿದ ರಾಧೇಯನಿಗೆ ಕೃತಜ್ಞತೆಯಿಂದ ಕಣ್ಣೀರು ಬಂದಿತು. ``ದೊರೆಯೇ, ನಿನ್ನ ಪ್ರಶಂಸೆಯಿಂದ ನನ್ನನ್ನು ಬಹಳವಾಗಿ ಗೌರವಿಸಿರುವೆ. ನಾನಿಂದು ಪ್ರಪಂಚದಲ್ಲೇ ಅತ್ಯಂತ ಆನಂದತುದಿಲನಾದವನಾಗಿರುವೆ. ನಿನ್ನ ನಿರೀಕ್ಷೆಯ ಮಟ್ಟಕ್ಕೇರಲು ಪ್ರಯತ್ನಿಸುವೆ. ಅರ್ಜುನನ ಹಿರಿಮೆ ನನಗೆ ಚೆನ್ನಾಗಿ ಅರಿವಿದೆ. ಆದರೂ ನನ್ನ ಯಜಮಾನನ ಪ್ರೀತ್ಯರ್ಥವಾಗಿ ನಾನು ಅವನನ್ನು ಕೊಲ್ಲಬಯಸುತ್ತೇನೆ. ನಾನಿನ್ನು ಕಾಯಲಾರೆ. ನನ್ನನ್ನು ಅವನ ಬಳಿಗೆ ಕರೆದೊಯ್ಯಿ" ಎಂದನು. ದುರ್ಯೋಧನನು ನೋಡುತ್ತಿರುವಂತೆಯೇ ಎರಡು ರಥಗಳೂ ಪರಸ್ಪರ ಎದುರಾದವು. ಅವನು ರಾಧೇಯನಿಗೆ ಸಹಾಯಕ್ಕಾಗಿ ತನ್ನ ಕೆಲವರು ಸೋದರರನ್ನು ಕಳುಹಿಸಿದನು. ಅವರನ್ನು ಕೊಲ್ಲಲು ಧಾವಿಸಿ ಬಂದ ಭೀಮನನ್ನು ತಡೆಯಲಾಗಲಿಲ್ಲ. ಯುದ್ಧವು ಸಂಕುಲವಾಯಿತು. ಸಾತ್ಯಕಿಯು ರಾಧೇಯನ ಮಗ ಸುಷೇಣನನ್ನು ಕೊಂದನು. ರಾಧೇಯನು ಧೃಷ್ಟದ್ಯುಮ್ನನ ಮಗನನ್ನು ಕೊಂದುದರಿಂದ ಪಾಂಚಾಲರೆಲ್ಲ ಒಟ್ಟಿಗೆ ಅವನ ಮೇಲೇರಿ ಬಂದರು. ಶಿಖಂಡಿ ಜನಮೇಜಯ ಯುಧಾಮನ್ಯು ಉತ್ತಮೌಜಸ್ ಮತ್ತು ಧೃಷ್ಟದ್ಯುಮ್ನ ಈ ಐವರು ಒಟ್ಟಿಗೇ ರಾಧೇಯನನ್ನೆದುರಿಸಿದರೂ ಅವನು ಅವರನ್ನೆಲ್ಲ ಸೋಲಿಸಿ ಹಿಮ್ಮೆಟ್ಟಿಸಿಬಿಟ್ಟನು. ಅವರ ಜೊತೆಗೆ ಸಾತ್ಯಕಿಯೂ ಪಾಂಚಾಲರೂ ಬಂದು ಸೇರಿಕೊಂಡರು. ಈ ತುಮುಲದಲ್ಲಿ ಅರ್ಜುನ ರಾಧೇಯರು ಎದುರುಬದುರಾಗಲಾಗದೆ ಹೋಯಿತು. ಯುದ್ದವು ಸಂಕುಲವಾದಾಗ ದುಶ್ಶಾಸನನೊಡನೆ ದುರ್ಯೋಧನನು ಇನ್ನಿತರ ತಮ್ಮಂದಿರೊಂದಿಗೆ ಬಂದು ಸೇರಿದರು. ಭೀಮ ದುಶ್ಶಸನರು ದ್ವಂದ್ವದಲ್ಲಿ ಒಗ್ಗೂಡಿ ಘೋರವಾಗಿ ಹೋರಾಡಿದರು. ಒಳ್ಳೆಯ ಯೋಧನಾದ ದುಶ್ಶಾಸನನು ಭೀಮನ ಹೊಡೆತಗಳನ್ನು ಸಹಿಸಿಕೊಂಡು ಅವನನ್ನೆದುರಿಸಿದನು. ಭೀಮನು, ``ದುಶ್ಶಾಸನ, ನೀನಿವತ್ತು ಸಿಕ್ಕಿದೆಯಾ! ಬಹುಕಾಲದಿಂದ ತೀರಿಸಬೇಕಾಗಿದ್ದ ಸಾಲವನ್ನು ಈಗ ತೀರಿಸುವೆನು. ನನ್ನ ದ್ರೌಪದಿಯ ಸುಗಂಧಪೂರಿತ ಕೇಶರಾಶಿಯನ್ನು ನಿನ್ನ ಪಾಪಿ ಕೈಗಳಿಂದ ಮುಟ್ಟಿದ ದಿನ ನನಗಿನ್ನೂ ನೆನಪಿದೆ. ಅವತ್ತಿನಿಂದ ನನಗೆ ನಿನ್ನ ಧ್ಯಾನವೇ ಧ್ಯಾನ. ನಿನಗದು ಮರೆತುಹೋಗಿರಬಹುದು; ಆದರೆ ನನಗೆ ಮರೆತಿಲ್ಲ" ಎನ್ನಲು, ದುಶ್ಶಾಸನನು ಛೇಡಿಸುವ ಧ್ವನಿಯಲ್ಲಿ, ``ನಾನೇಕೆ ಮರೆಯಲಿ? ನಾನು ಮರೆತಿಲ್ಲ. ದ್ರೌಪದಿ ಎನ್ನುವಾಗ ನನಗೆ ಇನ್ನೂ ಅನೇಕ ಸಂಗತಿಗಳು ನೆನಪಿಗೆ ಬರುತ್ತವೆ. ಜೀವ ಉಳಿಸಿಕೊಳ್ಳುವುದಕ್ಕಾಗಿ ಅರಗಿನ ಮನೆಯಿಂದ ಇಲಿಗಳ ಹಾಗೆ ಸುರಂಗ ತೋಡಿಕೊಂಡು ನೀವೆಲ್ಲರೂ ಓಡಿಹೋಗಿದ್ದು, ಕಾಡುಪ್ರಾಣಿಗಳ ಹಾಗೆ ಕಾಲ ಕಳೆದಿದ್ದು, ಹಿಡಿಂಬೆ ಎಂಬ ರಾಕ್ಷಸಿಯನ್ನು ನೀನು ವರಿಸಿದ್ದು, ಪಾಂಚಾಲಿಯನ್ನು ಅರ್ಜುನನು ಗೆದ್ದಿದ್ದು, ನೀವೆಲ್ಲರೂ ಅವಳನ್ನು ಬಯಸಿದ್ದು, ಅತ್ತೆಯ ಹಾಗೆಯೇ ಸೊಸೆಯೂ ಬಹುಜನ ಗಂಡಂದಿರನ್ನು ವರಿಸಿದ್ದು, ಶಕುನಿಯ ಕೃಪೆಯಿಂದ ದಾಸಿಯಾಗಿ ನಮ್ಮ ಆಸ್ಥಾನದಲ್ಲಿ ನಿಂತದ್ದು, ಎಲ್ಲವೂ ನೆನಪಿಗೆ ಬರುತ್ತಿವೆ" ಎಂದನು. ಪರಸ್ಪರ ಛೇಡಿಸುತ್ತಲೇ ಅವರು ಬೀಕರ ಯುದ್ದವನ್ನೂ ಮಾಡುತ್ತಿದ್ದರು. ದುಶ್ಯಾಸನನ ಕೈಚಳಕದಿಂದ ಬೀಮನ ಬಿಲ್ಲು ಆಗಾಗ್ಗೆ ಕತ್ತರಿಸಲ್ಪಟ್ಟು ಅವನಿಗೆ ಕಿರಿಕಿರಿಯಾಗುತ್ತಿದ್ದಿತು. ಕೋಪವನ್ನು ತಾಳಲಾರದೆ ಗದೆಯ ಒಂದೇ ಪ್ರಹಾರದಿಂದ ದುಶ್ಯಾಸನನ ಕುದುರೆಗಳನ್ನು ಕೊಂದು, ಇನ್ನೊಂದು ಪ್ರಹಾರದಿಂದ ಅವನನ್ನು ರಥದಿಂದ ಕೆಳಕ್ಕೆ ಬೀಳುವಂತೆ ಮಾಡಿದನು. ಉರಿಯುತ್ತಿದ್ದ ಬೆಂಕಿಯ ಕೆಂಡಗಳಂತಿದ್ದ ಭೀಮನ ಕಣ್ಣುಗಳನ್ನು ನೋಡಿ ಎಲ್ಲರೂ ಭಯಭೀತರಾಗಿದ್ದರು; ಯಾರೊಬ್ಬರೂ ಮಾತನಾಡಲಿಲ್ಲ.ಭೀಮನು ಹತ್ತಿರದಲ್ಲೇ ನಿಂತಿದ್ದ ದುರ್ಯೋಧನನನ್ನು ನೋಡಿ, ``ಹೌದು, ನೀನು ನೊಡುತ್ತಿರುವಂತೆಯೇ ನಾನದನ್ನು ಮಾಡಬೇಕು" ಎಂದು, ಪಕ್ಕದಲ್ಲೇ ಇದ್ದ ಕೃಪ ಅಶ್ವತ್ಥಾಮ ರಾಧೇಯ ಎಲ್ಲರ ಕಡೆಗೂ ನೋಡಿ ಕ್ರೂರವಾಗಿ ನಕ್ಕನು. ಅನಂತರ ವೇಗವಾಗಿ ನುಗ್ಗಿ ಸಿಂಹವು ಆನೆಯನ್ನು ಹಿಡಿಯುವಂತೆ ದುಶ್ಶಾಸನನ ಕುತ್ತಿಗೆಯನ್ನು ಹಿಡಿದು, ``ದುಶ್ಶಾಸನ, ಹಾಗಾದರೆ ನೀನು ಎಲ್ಲವನ್ನೂ ನೆನಪಿನಲ್ಲಿಟ್ಟಿರುವೆ! ಆದರೆ ನನ್ನ ಪ್ರತಿಜ್ಞೆಯೊಂದನ್ನೇಕೆ ನೆನಪಿನಲ್ಲಿ ಇಟ್ಟುಕೊಂಡಿಲ್ಲ? ನಾನೀಗ ನಿನ್ನ ಹೃದಯವನ್ನು ಬಗೆದು ರಕ್ತವನ್ನು ಕುಡಿಯುತ್ತೇನೆ. ಯಾರು ನನ್ನನ್ನು ತಡೆದು ನಿನ್ನನ್ನು ಉಳಿಸಿಕೊಳ್ಳುತ್ತಾರೋ ನೋಡೋಣ!" ಎಂದನು. ಅನಂತರ ಸುತ್ತ ನೆರೆದಿದ್ದ ಎಲ್ಲರ ಕಡೆಗೂ ನೋಡಿ, ``ದುರ್ಯೋಧನ, ಹದಿನೆಂಟು ದಿನಗಳ ಹಿಂದೆ ಈ ಉಲೂಕನೆಂಬ ನರಿಯೊಂದಿಗೆ ನನಗೆ ಸಂದೇಶವನ್ನು ಕಳುಹಿಸಿದ್ದೆ ನೆನಪಿದೆಯೆ? ಆ ಸಂದೇಶಕ್ಕೆ ಈಗ ನಾನು ಉತ್ತರವನ್ನು ಕೊಡುತ್ತೇನೆ. ನಿನ್ನ ತಮ್ಮನ ಹೃದಯವನ್ನು ಹರಿದು ತೆಗೆಯುವುದನ್ನು ನೋಡುತ್ತಿರು! ಅವನ ರಕ್ತವನ್ನು ನಾನು ಕುಡಿಯುವುದನ್ನೂ ನೋಡು. ನೋಡು ದುರ್ಯೋಧನ, ನಿನ್ನ ತಮ್ಮನ ಕತ್ತನ್ನು ನಾನು ಗಿಡುಗವು ಪಾರಿವಾಳವನ್ನು ಹಿಡಿಯುವಂತೆ ಹಿಡಿದಿದ್ದೇನೆ. ತನ್ನನ್ನು ಉಳಿಸಿರೆಂದು ಬೇಡುತ್ತಿರುವ ಅವನ ಅಸಹಾಯಕ ದೃಷ್ಟಿಯನ್ನು ನೋಡಿಯೂ ನೀನು ಏನೂ ಮಾಡಲಾರೆ. ಬಂದು ಅವನನ್ನು ರಕ್ಷಿಸುವುದಕ್ಕೆ ಪ್ರಯತ್ನಿಸು, ನಿನ್ನ ಕೈಯಲ್ಲಾದರೆ!" ಎಂದನು.ದೃಶ್ಯವು ಬಹು ಘೋರವಾಗಿದ್ದಿತು. ಎಲ್ಲರೂ ಗರ ಬಡಿದವರಂತೆ ನಿಂತಿದ್ದರು. ಭೀಮನು ದುಶ್ಶಾಸನನನ್ನು ನೆಲದ ಮೇಲೆಸೆದನು. ಕುತ್ತಿಗೆಯನ್ನು ಕಾಲಿನಿಂದೊತ್ತಿಕೊಂಡನು. ಅವನ ಬಲಗೈಯನ್ನು ಕತ್ತರಿಸಿ ಎಸೆದು, ``ಈಗ ದ್ರೌಪದಿಯ ಪ್ರತಿಜ್ಞೆ ಪೂರೈಸಿತು. ತನ್ನ ಮುಡಿಯನ್ನು ಹಿಡಿದೆಳೆದ ಈ ಕೈ ನೆಲದ ಮೇಲೆ ಬೀಳಬೇಕೆಂದು ಅವಳು ಬಯಸಿದ್ದಳು" ಎಂದನು. ಅನಂತರ ದುಶ್ಶಾಸನನ ಎದೆಯನ್ನು ಕತ್ತಿಯ ಒಂದೇ ಸೆಳೆತದಿಂದ ಬಗೆದು, ಚಿಮ್ಮಿದ ರಕ್ತವನ್ನು ಮೊಗೆಮೊಗೆದು ತುಟಿಗಿಟ್ಟನು. ದುಶ್ಶಾಸನನಿನ್ನೂ ಸತ್ತಿರಲಿಲ್ಲ. ಭೀಮನು ``ನಾನು ಈವರೆಗೆ ಕುಡಿದಿರುವ ಎಲ್ಲ ಪಾನೀಯಗಳಿಗಿಂತಲೂ ಇದು ರುಚಿಯಾಗಿದೆ" ಎನ್ನುತ್ತಿದ್ದಂತೆ ಅವನ ಪ್ರಾಣ ಪಕ್ಷಿಯು ಹಾರಿಹೋಯಿತು. ರಾಧೇಯನಿಗೆ ಈ ಭೀಕರ ದೃಶ್ಯವನ್ನು ನೋಡಿ ಸಹಿಸದಾಯಿತು. ಆದರೆ ಗೆಳೆಯನಿಗಾಗಿ ಏನನ್ನೂ ಮಾಡಲು ಅವನಿಂದಾಗಲಿಲ್ಲ. ಶಲ್ಯನು ರಾಧೇಯನ ದುಃಖವನ್ನು ನೋಡಿ, ``ನೀನು ತುಂಬ ಸೂಕ್ಷ್ಮ, ರಾಧೇಯ. ಯುದ್ದವೆಂದಮೇಲೆ ಇದೆಲ್ಲ ಇದ್ದದ್ದೇ. ಈಗ ದುಶ್ಶಾಸನ ಸತ್ತ ಮೇಲೆ ರಾಜನಿಗೆ ಸಹಾಯ ಮಾಡಲು ಉಳಿದಿರುವುದು ನೀನೊಬ್ಬನೇ. ಇದನ್ನೆಲ್ಲ ನೋಡಿ ಧೈರ್ಯಗುಂದಬೇಡ. ದುಃಖಿತನಾದ ದುರ್ಯೋಧನನ ಭವಿಷ್ಯವೀಗ ನಿನ್ನ ಕೈಯಲ್ಲಿದೆ. ಬಾ, ನಾವೀಗ ಅರ್ಜುನನಿದ್ದಲ್ಲಿಗೆ ಹೋಗೋಣ" ಎಂದು ಅಲ್ಲಿಂದ ಅವನನ್ನು ಕರೆದುಕೊಂಡು ಹೊರಟು ಹೋದನು.ರಾಧೇಯನ ಮಗ ವೃಷಸೇನ ಪಾಂಡವಸೈನ್ಯದ ಕಡೆಗೆ ನುಗ್ಗಿಬರುತ್ತಿದ್ದವನು, ನೇರವಾಗಿ ಭೀಮನಿದ್ದಲ್ಲಿಗೆ ನಡೆದ. ಔನ್ನತ್ಯ, ಶೌರ್ಯಗಳಲ್ಲಿ ನಿಜವಾಗಿ ಅವನು ರಾಧೇಯನ ಮಗನೇ. ಪಾಂಡವರನ್ನು ಪೀಡಿಸಲೆಂದೇ ಬಂದವನು ಅವನು. ಇದನ್ನು ನೋಡಿದ ಅರ್ಜುನ ಅವನೊಡನೆ ಹೋರಲು ಮುಂದೆ ಬಂದ. ರಾಧೇಯನು ನೋಡುತ್ತಿರುವಂತೆಯೇ ಅವನ ಮಗನನ್ನು ಕೊಲ್ಲುವೆನು ಎಂದು ಪ್ರತಿಜ್ಞೆ ಮಾಡಿದ್ದ ಅರ್ಜುನ, ಸ್ವಲ್ಪಹೊತ್ತು ಯುದ್ಧವಾದ ಮೇಲೆ ಚೂಪಾದ ಬಾಣವೊಂದರಿಂದ ವೃಷಸೇನನನ್ನು ಕೊಂದುಬಿಟ್ಟ. ಆಗತಾನೆ ದುಶ್ಶಾಸನನ ಸಾವನ್ನು ನೋಡಿದ್ದ ರಾಧೇಯ ತನ್ನ ಮಗನ ಸಾವನ್ನೂ ನೋಡುವಂತಾಯಿತು. ಅವನ ಕಣ್ಣಿನಿಂದ ಧಾರಾಕಾರವಾಗಿ ನೀರು ಸುರಿಯಲಾರಂಭಿಸಿತು. ಕೊನೆಗೆ ದುಃಖವು ಕೋಪಕ್ಕೆ ಎಡೆಮಾಡಿಕೊಟ್ಟಿತು. ಅರ್ಜುನನ ಜೊತೆಗೆ ಯುದ್ಧಮಾಡುವ ಕಾತುರತೆಯಿಂದ ರಥವನ್ನು ಮುಂದಕ್ಕೊಯ್ಯಲು ಹೇಳಿದ.* * * * ರಾಧೇಯ ಅರ್ಜುನರ ರಥಗಳೆರಡೂ ಪರಸ್ಪರ ಎದುರುಬದುರಾಗಿ ನಿಂತವು. ಲೋಕದ ಇಬ್ಬರು ಮಹಾನ್ ಧನುರ್ಧಾರಿಗಳು ಪರಸ್ಪರರನ್ನು ಕೊಲ್ಲುವುದಕ್ಕಾಗಿ ಸಜ್ಜಾದರು. ರಾಧೇಯನು ಅರ್ಜುನನನ್ನು ದ್ವಂದ್ವಯುದ್ಧಕ್ಕಾಗಿ ಆಹ್ವಾನಿಸಿದ. ಯುದ್ಧಾರಂಭಕ್ಕೆ ಮುನ್ನ ರಾಧೇಯನು ನಗುತ್ತ ಶಲ್ಯನ ಕಡೆಗೆ ತಿರುಗಿ, ``ನಾನಿಂದು ಜಯಿಸುವೆನೆಂದುಕೊಂಡಿದ್ದೆನೆ. ಒಂದು ವೇಳೆ ನಾನು ಸತ್ತರೆ ನೀನೇನು ಮಾಡುವೆ, ಮಹಾರಾಜ?" ಎಂದು ಕೇಳಿದನು. ಶಲ್ಯನ ಕಣ್ಣುಗಳು ಒದ್ದೆಯಾದವು. ``ನೀನು ಗೆಲ್ಲುತ್ತೀ ಎಂಬ ನಂಬಿಕೆ ನನಗಿದೆ. ಒಂದುವೇಳೆ ನೀನು ಸತ್ತರೆ, ನಾನು ಅವರಿಬ್ಬರನ್ನೂ ಕೊಂದು ಸೇಡನ್ನು ತೀರಿಸಿಕೊಳ್ಳುವೆ" ಎಂದನು. ರಾಧೇಯನಿಗೆ ತುಂಬ ಸಂತೋಷವಾಯಿತು. ಅಚ್ಚರಿಯೆಂಬಂತೆ, ಅರ್ಜುನನೂ ಕೃಷ್ಣನನ್ನು ಅದೇ ಪ್ರಶ್ನೆ ಕೇಳಿದನು. ಕೃಷ್ಣನು ನಕ್ಕು, ``ಸೂರ್ಯನು ಆಕಾಶದಿಂದ ಬಿದ್ದಾನು, ಬೆಂಕಿ ತನ್ನ ಶಾಖವನ್ನು ಕಳೆದುಕೊಂಡೀತು, ಆದರೆ ನೀನು ಮಾತ್ರ ಸೋಲುವುದಿಲ್ಲ. ಒಂದುವೇಳೆ ರಾಧೇಯನು ನಿನ್ನನ್ನು ಕೊಂದರೆ, ಪ್ರಪಂಚದ ಕೊನೆ ಬಂದಿತೆಂದೇ ಅರ್ಥ. ಶಲ್ಯ ರಾಧೇಯರುಗಳನ್ನು ನಾನು ಬರಿಗೈಯಲ್ಲಿ ಕೊಲ್ಲುವೆ. ನನ್ನ ಕೋಪದಿಂದ ಲೋಕವನ್ನೆ ನಾಶಮಾಡುವೆ. ಆದರೆ ಹಾಗಾಗದು, ನನಗೆ ಗೊತ್ತು" ಎಂದನು. ಸಾರಥಿಗಳು ಹಾಗೂ ರಥಿಕರು ಒಬ್ಬರನ್ನೊಬ್ಬರು ನೋಡಿದರು, ನಕ್ಕರು; ಯುದ್ಧಕ್ಕೆ ಸಿದ್ಧರಾದರು.ಅಶ್ವತ್ಥಾಮನು ಇದನ್ನು ನೋಡಿದನು. ಅವನ ಹೃದಯವು ಇದ್ದಕ್ಕಿದ್ದಂತೆ ರಣರಂಗದಲ್ಲಿ ಇರುವವರೆಲ್ಲರ ಮೇಲೆ ಅನುಕಂಪದಿಂದ ತುಂಬಿಹೋಯಿತು. ದುಶ್ಶಾಸನನ ಸಾವಿನಿಂದಾಗಿ ಇನ್ನೂ ಬಿಕ್ಕುತ್ತಿದ್ದ ದುರ್ಯೋಧನನ ಕೈಯನ್ನು ಒತ್ತುತ್ತ, ``ರಾಜಾ! ಪರಸ್ಪರರನ್ನು ಕೊಲ್ಲಲು ಎದುರಾಗಿರುವ ಈ ವೀರರನ್ನು ನೋಡು. ಈ ಯುದ್ಧವನ್ನು ನಿಲ್ಲಿಸಿ ಪಾಂಡವರೊಡನೆ ಸಂಧಿ ಮಾಡಿಕೋ. ಅವರು ಒಳ್ಳೆಯವರು. ನನ್ನ ತಂದೆ ಸತ್ತನು. ಭೀಷ್ಮನು ಬಿದ್ದಿರುವನು. ಇನ್ನು ಸ್ವಲ್ಪ ಹೊತ್ತಿನಲ್ಲಿ ರಾಧೇಯನೂ ಸಾಯಬಹುದು. ನಾನು ಅರ್ಜುನನಿಗೆ ಹೇಳುತ್ತೇನೆ; ಅವನು ನನ್ನ ಮಾತನ್ನು ತೆಗೆದುಹಾಕುವುದಿಲ್ಲ. ಕೃಷ್ಣನು ಶಾಂತಿಯನ್ನು ಸ್ವಾಗತಿಸುತ್ತಾನೆ. ನಾನಾಗಲಿ ಕೃಪನಾಗಲಿ ಸಾಯಲಾರೆವಾದರೂ, ನೀನು ಯುದ್ಧದಲ್ಲಿ ಸೋಲಬಹುದು. ಯುಧಿಷ್ಠಿರನಿಗೂ ಯುದ್ಧವೆಂದರೆ ಆಗದು. ಭೀಮ ನಕುಲ ಸಹದೇವರುಗಳು ಅಣ್ಣನ ಮಾತನ್ನು ಕೇಳುವರು. ಕಗ್ಗೊಲೆ ನಡೆಯುತ್ತ ಬಹಳ ಕಾಲವಾಯಿತು; ಇನ್ನು ಇದನ್ನು ನಿಲ್ಲಿಸು. ರಾಧೇಯ ಅರ್ಜುನರು ಸ್ನೇಹಿತರಾಗಿರಲಿ. ವಿನಯದಿಂದ ಕೇಳುತ್ತಿದ್ದೇನೆ, ನನ್ನ ಮಾತನ್ನು ನಡೆಸು; ಇಲ್ಲವಾದರೆ ದುಃಖಾಂಬುಧಿಯಲ್ಲಿ ಮುಳುಗುವೆ. ಅವರನ್ನೆಲ್ಲ ನೀನು ಮಿತ್ರರನ್ನಾಗಿ ಮಾಡಿಕೊಂಡರೆ, ಅದಕ್ಕಿಂತ ಅಚ್ಚರಿ ಇನ್ನೇನಿದೆ? ಕಾಲ ಮೀರುವ ಮೊದಲು ಜೀವ ಉಳಿಸಿಕೊ. ನನಗೆ ನಿನ್ನನ್ನುಳಿದು ಇನ್ನು ಯಾರೂ ಪ್ರೀತಿಪಾತ್ರರು ಇಲ್ಲ. ಗೆಳೆಯ, ನೀನು ಬದುಕಬೇಕೆಂಬುದೇ ನನ್ನ ಅಪೇಕ್ಷೆ; ಅದಕ್ಕಾಗಿ ಕೇಳುತ್ತಿದ್ದೇನೆ. ರಾಧೇಯನು ಇಂದಿನ ಯುದ್ದದಲ್ಲಿ ಸಾಯುವುದು ನಿಶ್ಚಿತ. ಈ ಹದಿನೇಳು ದಿನಗಳಲ್ಲಿ ಆಗಿರುವ ಸರ್ವನಾಶವನ್ನು ನೆನೆಸಿಕೊ. ಯುದ್ಧವನ್ನು ನಿಲ್ಲಿಸು!" ಎಂದನು.ದುರ್ಯೋಧನನು ಗೆಳೆಯನ ಕಡೆ ನೋಡಿ ಸ್ವಲ್ಪಹೊತ್ತು ಸುಮ್ಮನೆ ನಿಂತನು. ಅನಂತರ ``ನೀನು ಹೇಳುವುದೆಲ್ಲ ನಿಜ, ಅಶ್ವತ್ಥಾಮ. ಆದರೆ ತಡವಾಗಿಹೋಯಿತು. ದುಶ್ಶಾಸನನು ಆ ರೀತಿ ಕೊಲ್ಲಲ್ಪಟ್ಟ ಮೇಲೆ ನಾನು ಯುದ್ಧವನ್ನು ಬಿಟ್ಟು ಮತ್ತೇನನ್ನೂ ಯೋಚಿಸಲೇ ಆರೆ. ನಾವು ಹಿಂದಿರುಗಲಾರದಷ್ಟು ದೂರ ಹೋಗಿದ್ದೇವೆ. ಅಸಾಧ್ಯವಾದದ್ದನ್ನು ಚಿಂತಿಸಿ ಏನು ಫಲ? ರಾಧೇಯನೆಂದಂತೆ ಎಲ್ಲವೂ ನಡೆಯುವುದು ವಿಧಿನಿಯಾಮಕದಂತೆಯೇ. ವಿಧಿಯೆದುರ ಕವಚವಿಲ್ಲ. ಮುನ್ನುಗ್ಗಲೇಬೇಕು, ನಿಲ್ಲಲಾರೆ. ಗೆಳೆಯ, ನಿನ್ನ ಪ್ರೀತಿಯನ್ನು ಮೆಚ್ಚಿದೆ; ಆದರೆ ಯುದ್ಧವನ್ನು ಮಾತ್ರ ನಿಲ್ಲಿಸಲಾರೆ" ಎಂದವನೇ ಸೈನ್ಯವನ್ನು ರಾಧೇಯನಿಗೆ ರಕ್ಷಣೆಯಾಗಿ ನಿಲ್ಲಿಸಿದ. ಅರ್ಜುನನ ರಕ್ಷಣೆಗೆ ಪಾಂಡವಸೈನ್ಯವೂ ಬಂದು ನೆರೆಯಿತು. ಭರತವರ್ಷದ ಇಬ್ಬರು ಮಹಾವೀರರ ದ್ವಂದ್ವ ಯುದ್ಧವನ್ನು ನೋಡಲು ಎಲ್ಲರೂ ಸಜ್ಜಾದರು.ಮೊದಲು ಸಾಧಾರಣ ಬಾಣ ಭಲ್ಲೆಗಳಿಂದ ಯುದ್ಧವಾರಂಬಿಸಿ, ಅವು ಬಂದು ಸೇರುವ ಮೊದಲೇ ಕತ್ತರಿಸುವ ಕೈಚಳಕವನ್ನು ಮೆರೆದರು. ಸ್ವಲ್ಪಹೊತ್ತಿನಲ್ಲಿಯೇ ಅರ್ಜುನನು ದಿವ್ಯಾಸ್ತ್ರಗಳನ್ನು ಬಳಸಲು ನಿರ್ಧರಿಸಿದನು. ಅರ್ಜುನನ ಆಗ್ನೇಯಾಸ್ತ್ರವನ್ನು ರಾಧೇಯನು ವಾರುಣಾಸ್ತ್ರದಿಂದ ನಿವಾರಿಸಿದನು. ಕವಿದ ಕಾಳಮೇಘಗಳನ್ನು ವಾಯುವ್ಯಾಸ್ತ್ರದಿಂದ ಚದುರಿಸಿ, ಅರ್ಜುನನು ಬಿಟ್ಟ ಐಂದ್ರಾಸ್ತ್ರಕ್ಕೆ ಪ್ರತಿಯಾಗಿ ರಾಧೇಯನು ಭಾರ್ಗವಾಸ್ತ್ರವನ್ನು ಪ್ರಯೋಗಿಸಿದನು. ಅದು ಐಂದ್ರಾಸ್ತ್ರವನ್ನು ನಿವಾರಿಸಿ, ಪಾಂಡವರೆಲ್ಲರೆಲ್ಲರನ್ನೂ ಬಾಣಗಳಿಂದ ಮುಚ್ಚಿಬಿಟ್ಟಿತು. ಇದನ್ನು ನೋಡಿ ಭೀಮನು ಕೋಪದಿಂದ, ``ಅರ್ಜುನ, ಶತ್ರುಗಳು ನಿನ್ನ ಸ್ಥಿತಿಯನ್ನು ನೋಡಿ ನಗುತ್ತಿರುವರು. ಇದಕ್ಕೆ ಪ್ರತಿಯಾಗಿ ನೀನು ಏನೂ ಮಾಡಲಾಗದಿದ್ದರೆ ನನಗೆ ಹೇಳು; ನಾನು ಗದೆಯ ಒಂದೇ ಪ್ರಹಾರದಿಂದ ರಾಧೇಯನನ್ನು ಕೊಲ್ಲುವೆನು. ಈಗ ಕಾಲ ಪಕ್ವವಾಗಿದೆ" ಎಂದನು. ಇದನ್ನು ಕೇಳಿದ ಕೃಷ್ಣನು, ``ಅರ್ಜುನ, ಭೀಮ ಹೇಳುತ್ತಿರುವುದು ಸರಿ. ಏಕೆ ಇನ್ನೂ ತಡಮಾಡುತ್ತಿರುವೆ? ಹಿಂದೆ ನರನಾಗಿದ್ದಾಗ ನೀನು ದಂಬೋದ್ಭವನನ್ನು ಕೊಲ್ಲಲಿಲ್ಲವೆ? ಅವನೇ ಈ ರಾಧೇಯ. ಯುದ್ಧವಿಶಾರದನಾದ ಇವನ ಮೇಲೆ ನೀನು ಬ್ರಹ್ಮಾಸ್ತ್ರವನ್ನೇ ಪ್ರಯೋಗಿಸಬೇಕು. ನೀನಾರು, ಈ ಭೂಮಿಯಲ್ಲೇಕೆ ಹುಟ್ಟಿರುವೆ ಎಂಬುದನ್ನು ಸ್ಮರಿಸಿಕೊ. ಎಚ್ಚರಾಗು, ಅಗತ್ಯವಾದುದನ್ನು ಮಾಡು!" ಎಂದನು. ಬ್ರಹ್ಮಾಸ್ತ್ರವು ಭಾರ್ಗವಾಸ್ತ್ರವನ್ನು ನಿವಾರಿಸಿತು. ಇವರಿಬ್ಬರಿಗೂ ದ್ವಂದ್ವವೇರ್ಪಟ್ಟಿರುವುದನ್ನು ಕೇಳಿದ ಯುಧಿಷ್ಠಿರನು ಅದನ್ನು ನೋಡಲು ಕಷ್ಟದಿಂದ ಅಲ್ಲಿಗೆ ಬಂದನು. ಯುದ್ಧವನ್ನು ನೋಡಲು ಅಂತರಿಕ್ಷದಲ್ಲಿ ದೇವತೆಗಳೆಲ್ಲರೂ ಬಂದು ನೆರೆದರು. ಇಂದ್ರ ಸೂರ್ಯರಿಬ್ಬರೂ ತಮ್ಮ ತಮ್ಮ ಪುತ್ರರನ್ನು ಪ್ರೋತ್ಸಾಹಿಸುತ್ತಿದ್ದರು. ಈ ವೀರರ ಅಸ್ತ್ರಗಳಿಂದ ಎರಡೂ ಕಡೆಯ ಸೈನ್ಯಗಳು ಬಾಧೆಪಡುತ್ತಿದ್ದವು. ಗಾಂಡೀವ ವಿಜಯಗಳೆರಡರಿಂದಲೂ ರಣಸಂಗೀತವು ಮೊಳಗುತ್ತಿದ್ದಿತು. ಈ ಬಿಲ್ಲುಗಳ ಠೇಂಕಾರವನ್ನು ಬಿಟ್ಟರೆ ಬೇರಾವ ಧ್ವನಿಯೂ ಕೇಳುತ್ತಿರಲಿಲ್ಲ.ರಾಧೇಯನು ಅರ್ಜುನನ ಗಾಂಡೀವದ ನಾಣನ್ನು ಕತ್ತರಿಸಲು, ಅವನು ಕಣ್ಣುಮುಚ್ಚಿಬಿಡುವುದರೊಳಗಾಗಿ ಬೇರೊಂದು ನಾಣನ್ನು ಕಟ್ಟಿ ಹೆದೆಯೇರಿಸಿದನು. ಅಷ್ಟರಲ್ಲಿಯೇ ರಾಧೇಯನು ಅದನ್ನು ಕತ್ತರಿಸಲು, ಪುನಃ ಅರ್ಜುನನು ಹಾಗೆಯೇ ಮಾಡಿದನು. ಇದು ಹನ್ನೊಂದು ಬಾರಿ ನಡೆಯಿತು. ರಾಧೇಯನ ಹೃದಯವು ತಮ್ಮನ ಕೌಶಲ್ಯವನ್ನು ಮೆಚ್ಚಿತು. ಅಷ್ಟರಲ್ಲಿ ಅರ್ಜುನನು ತನ್ನ ಬಾಣಗಳಿಂದ ರಾಧೇಯನನ್ನು ಮುಚ್ಚಲು, ಅವನು ಪ್ರಳಯಕಾಲದ ರುದ್ರನಂತೆ ಕೋಪದಿಂದ ಸರ್ಪಸದೃಶವಾದ ಐದು ಬಾಣಗಳನ್ನು ಕೃಷ್ಣನೆಡೆಗೆ ಬಿಟ್ಟನು. ಇದರಿಂದ ಅರ್ಜುನನ ಕೋಪವೂ ಮಿತಿಮೀರಿತು. ಅವನು ಬಿಟ್ಟ ಬಾಣಗಳು ರಾಧೇಯನನ್ನು ಸುಟ್ಟುಬಿಡುವಂತಿದ್ದವು. ಸೈನಿಕರೂ, ರಥಚಕ್ರರಕ್ಷಕರೂ ಜೀವಭಯದಿಂದ ಓಡಿದರು. ರಾಧೇಯನೊಬ್ಬನೇ ಉಳಿದನು. ಹೀಗೆ ಓಡಿಬಂದವರ ಮೇಲೆ ದುರ್ಯೋಧನನು ಕಿಡಿ ಕಾರಿದನು. ಅರ್ಜುನನ ಬಾಣಗಳಿಗೆ ಹೆದರಿ ಪುನಃ ರಾಧೇಯನ ಬಳಿಗೆ ಯಾರೊಬ್ಬರೂ ಹೋಗಲೊಪ್ಪಲಿಲ್ಲ. ತನ್ನನ್ನು ಮುಸುಕಿನಂತೆ ಕವಿಯುತ್ತಿದ್ದ ಬಾಣಗಳನ್ನು ರಾಧೇಯನು ಕತ್ತರಿಸಿ ಹಾಕುತ್ತಿದ್ದನು. ಈಗ ಸರ್ಪಾಸ್ತ್ರದಿಂದ ಅರ್ಜುನನನ್ನು ಖಂಡಿತವಾಗಿಯೂ ಕೊಂದುಬಿಡಲು ನಿರ್ಧರಿಸಿದನು.ಸರ್ಪಾಸ್ತ್ರವನ್ನು ರಾಧೇಯನು ಬಹುಕಾಲದಿಂದಲೂ ರಕ್ಷಿಸಿಟ್ಟುಕೊಂಡಿದ್ದನು. ಕೆಲಕಾಲ ಅವನಿಗೆ ಇಂದ್ರನು ಕೊಟ್ಟಿದ್ದ ಶಕ್ತ್ಯಾಯುಧದ ನೆನಪು ಬಂದಿತು. ರಾಧೇಯನಿಗೆ ಯೋಚಿಸಲೂ ಕಾಲಾವಕಾಶವಿರಲಿಲ್ಲ. ಸರ್ಪಾಸ್ತ್ರವನ್ನು ಅಭಿಮಂತ್ರಿಸಿ ಬಿಲ್ಲಿನಲ್ಲಿ ಹೂಡಿ ಅರ್ಜುನನ ಕುತ್ತಿಗೆಗೆ ಗುರಿಯಿಟ್ಟನು. ಇದನ್ನು ಗಮನಿಸಿದ ಶಲ್ಯನು, ``ರಾಧೇಯ, ಕುತ್ತಿಗೆಗೆ ಗುರಿಯಿಡಬೇಡ. ಎದೆಗೆ ಗುರಿ ಇಡು; ಕನಿಷ್ಠಪಕ್ಷಕ್ಕೆ ಎದೆಗೆ ಇನ್ನೊಂದು ಬಾಣವನ್ನಾದರೂ ಕಳುಹಿಸು" ಎನ್ನಲು, ``ಒಮ್ಮೆ ಗುರಿಯಿಟ್ಟುದನ್ನು ಬದಲಿಸುವವನಲ್ಲ ಈ ರಾಧೇಯ. ಮೊದಲನೆಯದು ಸೋಲಬಹುದೆಂದೆಣಿಸಿ ಇನ್ನೊಂದನ್ನು ಬಿಡುವುದೂ ಧನುರ್ವಿದ್ಯಾನಿಪುಣರಿಗೆ ಶೋಭೆಯಲ್ಲ. ಒಂದು ಸಲ ಗುರಿಯಿಟ್ಟ ಮೇಲೆ ಮುಗಿಯಿತು" ಎಂದನು. ಕಿವಿಯವರೆಗೂ ನಾಣನ್ನೆಳೆದು, ``ಅರ್ಜುನಾ! ಸಾಯುವ ಮುನ್ನ ಲೋಕವನ್ನೆಲ್ಲ ಒಂದುಸಲ ಚೆನ್ನಾಗಿ ನೋಡಿಬಿಡು. ಇದೇ ಈ ಭೂಮಿಯ ಮೇಲೆ ನಿನ್ನ ಕೊನೆಯ ಕ್ಷಣ" ಎಂದನು. ಅಸ್ತ್ರವು ಬಿಲ್ಲಿನಿಂದ ಮಿಂಚಿನಂತೆ ಆಕಾಶವನ್ನೆಲ್ಲ ಬೆಳಗುತ್ತ ಬೆಂಕಿಯನ್ನುಗುಳುತ್ತ ಹೊರಟಿತು. ಉಸಿರಾಡುವುದನ್ನೂ ಮರೆತು ನೋಡುತ್ತಿದ್ದ ಪಾಂಡವಸೇನೆಗೆ ಅರ್ಜುನನ ಸಾವು ಖಚಿತವೆನಿಸಿಬಿಟ್ಟಿತು.ಆಗ ರಾಧೇಯನ ಗುರಿಯು ವಿಫಲವಾಗುವಂತೆ ಕೃಷ್ಣನು ಒಮ್ಮೆಲೇ ಕುದುರೆಗಳನ್ನು ತನ್ನ ಬಲವನ್ನೆಲ್ಲ ಬಿಟ್ಟು ಒತ್ತಲು, ಅವು ನೆಲಕ್ಕೆ ಮೊಣಕಾಲೂರಿದ್ದರಿಂದ ರಥವು ಐದು ಅಂಗುಲ ಪ್ರಮಾಣದಷ್ಟು ತಗ್ಗಿತು. ಸರ್ಪಾಸ್ತ್ರವು ಅರ್ಜುನನ ಕುತ್ತಿಗೆಯನ್ನು ತಾಕುವ ಬದಲು, ಅವನ ಸುಂದರ ಕಿರೀಟವನ್ನು ಹೊಡೆದು ನೆಲಕ್ಕುರುಳಿಸಿತು. ಸಾವಿರಾರು ರತ್ನಗಳಿಂದಲಂಕೃತವಾಗಿ, ದೇವಲೋಕದ ಶಿಲ್ಪಿಗಳಿಂದ ನಿರ್ಮಿತವಾದ ಅದನ್ನು ಇಂದ್ರನು ತನ್ನ ಕೈಯಿಂದಲೇ ಅರ್ಜುನನ ತಲೆಗೆ ತೊಡಿಸಿದ್ದನು; ಅದರಿಂದಾಗಿಯೇ ಅರ್ಜುನನಿಗೆ ಕಿರೀಟಿಯೆಂಬ ಅಬಿಧಾನವು ಪ್ರಾಪ್ತವಾಗಿದ್ದಿತು. ಪ್ರಾಣವೇ ಹೋದಷ್ಟು ಜೋರಾದ ನಿಟ್ಟುಸಿರು ರಾಧೇಯನಿಂದ ಹೊರಹೊಮ್ಮಿತು. ಅರ್ಜುನನನ್ನು ಕೊಲ್ಲುವ ಕನಸು, ದುರ್ಯೋಧನನು ಲೋಕವನ್ನಾಳುವ ಕನಸು. ಎಲ್ಲವೂ ಮೃಗತೃಷ್ಣೆಯಂತಾಗಿ ಹೋಯಿತು. ಕೋಪ ನಿರಾಶೆಗಳ ಕಣ್ಣೀರು ರಾಧೇಯನನ್ನು ಕುರುಡಾಗಿಸಿತು. ಅವನು ಅದನ್ನು ತೊಡೆದು ಮೊದಲಿನಂತೆ ಯುದ್ಧಮಾಡತೊಡಗಿದನು. ಅರ್ಜುನನು ತನ್ನ ಸುಂದರ ಕೇಶರಾಶಿಯನ್ನು ಶ್ವೇತವಸ್ತ್ರವೊಂದರಿಂದ ಬಿಗಿದು, ಯುದ್ಧವನ್ನು ಮುಂದುವರೆಸಿದನು. ಯುಧಿಷ್ಠಿರನು ಅಪಾಯ ತಪ್ಪಿತೆಂದು ನಿರಾಳವಾಗಿ ನಿಟ್ಟುಸಿರು ಬಿಟ್ಟನು. ಅರ್ಜುನ ಉಳಿದದ್ದು ಪಾಂಡವರೆಂದರೆ ತನ್ನ ಜೀವಕ್ಕಿಂತ ಹೆಚ್ಚೆಂದು ಹೇಳುತ್ತಿದ್ದ ಕೃಷ್ಣನ ಪ್ರಸಂಗಾವಧಾನದಿಂದ.ಕಿರೀಟವು ಬಿದ್ದ ಸ್ಥಳದಿಂದ ವಿಷಸರ್ಪವೊಂದು ಮೇಲೆದ್ದು ತನ್ನ ಬಳಿ ಬರುವುದನ್ನು ರಾಧೇಯನು ನೋಡಿದನು. ಅದು ಬಂದು ರಾಧೇಯನನ್ನು ಕುರಿತು ``ನಿನಗೆ ಗೊತ್ತಿಲ್ಲದಂತೆ ನಾನು ನಿನ್ನ ಅಸ್ತ್ರದಲ್ಲಿ ಸೇರಿಕೊಂಡಿದ್ದರಿಂದ ಅದು ಅರ್ಜುನನ ಕತ್ತನ್ನು ಕತ್ತರಿಸಲಾರದೆ ಹೋಯಿತು. ಈಗ ಅಸ್ತ್ರವನ್ನು ಪುನಃ ಕಳುಹಿಸು; ನಾನು ಅರ್ಜುನನನ್ನು ಕೊಲ್ಲುವೆನು. ನಾನು ಅಶ್ವಸೇನನೆಂಬ ನಾಗ; ಅವನ ಶತ್ರು. ಖಾಂಡವವನವನ್ನು ದಹಿಸಿದಾಗ ಅವನು ನನ್ನ ತಾಯಿಯನ್ನು ಅದರಲ್ಲಿ ಸುಟ್ಟುಹಾಕಿದ; ಆ ಸೇಡನ್ನು ನಾನು ತೀರಿಸಿಕೊಳ್ಳಬೇಕಾಗಿದೆ" ಎಂದಿತು. ರಾಧೇಯನಿಗೆ ಕೋಪ ಬಂದಿತು. ``ಓ ಮೂರ್ಖ ನಾಗನೇ ಕೇಳು. ರಾಧೇಯನು ಶತ್ರುದಮನಕ್ಕಾಗಿ ಇತರರನ್ನು ಅವಲಂಬಿಸಬೇಕಾದಷ್ಟು ಅಸಹಾಯನಲ್ಲ. ನಾನು ಸ್ವಾವಲಂಬಿ; ಇತರರ ಮೇಲೆ ಅವಲಂಬಿಸುವುದಕ್ಕಿಂತ ಸಾವಿರ ಬಾರಿ ಸತ್ತೇನು! ಅರ್ಜುನನನ್ನು ಕೊಲ್ಲುವುದಾದರೆ ನನ್ನ ಬಲದಿಂದಲೇ ಹೊರತು ಇನ್ನೊಬ್ಬರಿಂದ ಎರವಲು ತಂದ ಬಲದಿಂದಲ್ಲ. ನೀನು ನನ್ನ ಅಪ್ಪಣೆಯಿಲ್ಲದೆ ನನ್ನ ಅಸ್ತ್ರದಲ್ಲಿ ಸೇರಿಕೊಂಡದ್ದೇ ತಪ್ಪು; ನಾನು ನಿನ್ನನ್ನು ಕೊಲ್ಲುವುದಕ್ಕೆ ಮುಂಚೆ ಇಲ್ಲಿಂದ ಹೊರಟುಹೋಗು!" ಎಂದನು. ಅಶ್ವಸೇನನಿಗೆ ನಿರಾಶೆಯೂ ಕೋಪವೂ ಉಕ್ಕಿಬಂದವು. ಅವನು ತಾನೇ ಅರ್ಜುನನ ಮೇಲೆ ಬೀಳುವೆನೆಂದು ಹೊರಟನು. ಈ ಸರ್ಪವು ಬರುತ್ತಿರುವುದನ್ನು ನೋಡಿದ ಕೃಷ್ಣನು ``ಅರ್ಜುನ, ತ್ವರೆಮಾಡು! ಈ ಸರ್ಪವು ನಿನ್ನನ್ನು ಕೊಲ್ಲುವುದಕ್ಕಿಂತ ಮೊದಲು ನೀನದನ್ನು ಕೊಲ್ಲು!" ಎಂದನು. ಅರ್ಜುನನು ತಕ್ಷಣ ಆರು ಚೂಪಾದ ಬಾಣಗಳಿಂದ ಆ ಸರ್ಪವನ್ನು ಕೊಂದುಹಾಕಿದನು. ಅನಂತರ ಯುದ್ದವು ಮೊದಲಿನಂತೆ ಮುಂದುವರೆಯಿತು. ಯುದ್ಧಾಳುಗಳ ಜೊತೆಗೆ ಶಲ್ಯ, ಕೃಷ್ಣರೂ ಪರಸ್ಪರ ವಿರೋಧಪಕ್ಷದವರ ಆಯುಧಗಳಿಂದ ಪೆಟ್ಟು ತಿನ್ನಬೇಕಾಯಿತು.ರಾಧೇಯನ ಕೊನೆ ಹತ್ತಿರ ಹತ್ತಿರ ಬರುತ್ತಿತ್ತು. ಕೊನೆಯ ಕ್ಷಣವನ್ನು ವಿಧಿ ಆಗಲೇ ನಿರ್ಧರಿಸಿತ್ತು. ಬ್ರಾಹ್ಮಣನ ಶಾಪ ನಿಜವಾಗಲು ಸಹಕರಿಸುತ್ತಿದೆಯೋ ಎಂಬಂತೆ ಭೂಮಿ ಇದ್ದಕ್ಕಿದ್ದಂತೆ ಮೃದುವಾಯಿತು. ರಾಧೇಯನ ರಥದ ಒಂದು ಚಕ್ರವು ಭೂಮಿಯ ಕೆಸರಿನೊಳಕ್ಕೆ ಸಿಕ್ಕಿಕೊಳ್ಳತೊಡಗಿತು. ಕಳಿತ ದೇಹದಿಂದ ಜೀವ ಹೊರಹೋಗುವಂತಿತ್ತು; ಸೂರ್ಯಾಸ್ತ ತಾನಾಗಿ ಆಗುವಂತಿತ್ತು. ನಿಧಾನವಾದರೂ ನಿಷ್ಕೃಷ್ಟವಾದ ವಿಧಾನ: ರಥಚಕ್ರ ಸಿಕ್ಕಿಕೊಂಡೇ ಬಿಟ್ಟಿತು; ಮಟ್ಟ ಏರುಪೇರಾಯಿತು; ಆಗಲೇ ಇದು ರಾಧೇಯನ ಗಮನಕ್ಕೆ ಬಂದಿತು. ಅವನ ಮನಸ್ಸು ವರ್ಷಗಳ ಹಿಂದೆ ಹೋಯಿತು. ಸತ್ತ ಹಸು ನೆಲದ ಮೇಲೆ ಕಾಣಿಸಿತು. ಕೋಪದ ಕಣ್ಣುಗಳ ಬ್ರಾಹ್ಮಣ ಕಾಣಿಸಿದ. ಅವನ ಶಾಪವೂ ಕೇಳಿಸಿತು: ``ನಿನ್ನ ತೀವ್ರ ದ್ವೇಷದ ಶತ್ರುವಿನೊಡನೆ ನೀನು ಹೋರುವಾಗ ನಿನ್ನ ರಥಚಕ್ರ ಭೂಮಿಯಲ್ಲಿ ಸಿಕ್ಕಿಕೊಳ್ಳುವುದು. ಅಪಾಯದ ಅರಿವೇ ಇಲ್ಲದಿದ್ದ ನನ್ನ ಮುಗ್ಧ ಹಸುವನ್ನು ನೀನು ಹೇಗೆ ಕೊಂದೆಯೋ ಹಾಗೆಯೇ ನೀನು ಸಿದ್ಧನಾಗಿರದಾಗಲೇ ನಿನ್ನ ಶತ್ರುವಿನಿಂದ ಕೊಲ್ಲಲ್ಪಡುವೆ!"ತನಗಿರುವ ಸ್ವಲ್ಪ ಸಮಯದ ಸದುಪಯೋಗ ಮಾಡಿಕೊಳ್ಳಬೇಕೆಂದು ಯೋಚಿಸಿದ ರಾಧೇಯನು, ಬಿಲ್ಲಿನಲ್ಲಿ ಬ್ರಹ್ಮಾಸ್ತ್ರವನ್ನು ಹೂಡಿದ. ಆದರೆ ಮಂತ್ರವೇ ನೆನಪಿಗೆ ಬರಲೊಲ್ಲದು! ಇದೇ ತನ್ನ ಬಾಳಿನ ಕೊನೆ. ಮನಸ್ಸಿನಲ್ಲಿ ತೇಲಿಬಂದಿತು ಅವನ ಗುರುವಿನ ಶಾಪ: ``ನಿನ್ನ ಅತ್ಯಂತ ತುರ್ತು ಸಮಯದಲ್ಲಿ ಅತ್ಯಂತ ಅಗತ್ಯವಾಗಿ ಬೇಕಾಗುವ ಅಸ್ತ್ರ ನಿನಗೆ ನೆನಪೇ ಆಗದಿರಲಿ!" ತಾನು ಸಂಪೂರ್ಣ ಸೋತೆ. ರಥಚಕ್ರ ಹೂತುಹೋಯಿತು; ಬ್ರಹ್ಮಾಸ್ತ್ರ ನೆನಪಿಗೆ ಬಾರದಾಯಿತು; ಸರ್ಪಾಸ್ತ್ರ ವಿಫಲವಾಯಿತು. ಕವಚಕುಂಡಲಗಳನ್ನು ಆಗಲೇ ಕೊಟ್ಟಾಗಿತ್ತು. ಶಕ್ತ್ಯಾಯುಧವನ್ನು ಬಳಸಿಯಾಗಿತ್ತು. ಅಯ್ಯೋ ವಿಧಿಯೇ! ನೀನೇಕೆ ಇಷ್ಟು ಕ್ರೂರಿ? ಅಸಹಾಯಕತೆಯಿಂದಲೂ ಕೋಪದಿಂದಲೂ ರಾಧೇಯನಿಗೆ ಕಂಬನಿ ತುಂಬಿತು.ರಾಧೇಯನು ಬಿಲ್ಲಿಗೆ ನಾಣೇರಿಸಿದಂತೆಲ್ಲ ಅರ್ಜುನನು ಅದನ್ನು ಕತ್ತರಿಸಿ ಹಾಕುತ್ತಿದ್ದನು. ರಾಧೇಯನು ನಿಸ್ಸಹಾಯಕನಾಗಿ, ಕೈಕೈಹೊಸೆಯುತ್ತ, ``ಧರ್ಮೋ ರಕ್ಷತಿ ರಕ್ಷಿತಃ ಎಂದು ತಿಳಿದವರು ಹೇಳುತ್ತಾರೆ. ನನಗೆ ತಿಳಿದಿರುವ ಮಟ್ಟಿಗೆ ನಾನು ಧರ್ಮವಂತನಾಗಿ ನಡೆದುಕೊಂಡಿದ್ದೇನೆ. ಆದರೆ ಈ ಧರ್ಮವೆಂಬುದು ತನ್ನನ್ನು ಪ್ರೇಮಿಸುವವರನ್ನು ಸೇವಿಸದೆ ಮುನ್ನಡೆಯುವ ಚಂಚಲ ಸ್ವಭಾವದ ವಾರಾಂಗನೆಯ ಹಾಗೆ. ಈ ಲೋಕದಲ್ಲಿ ಧರ್ಮವೆಂಬುದೇ ಇಲ್ಲ!" ಎಂದನು. ಅರ್ಜುನನ ಬಾಣಗಳು ಅವನನ್ನು ಬಹುವಾಗಿ ನೋಯಿಸುತ್ತಿದ್ದವು. ಅರ್ಜುನನು ಪ್ರಯೋಗಿಸಿದ ಐಂದ್ರಾಸ್ತ್ರವನ್ನು ಬಹುಕಷ್ಟಪಟ್ಟು ನೆನಪಿಸಿಕೊಂಡು ಬ್ರಹ್ಮಾಸ್ತ್ರದಿಂದ ನಿವಾರಿಸಿದನು. ಅವನ ರಥದ ಚಕ್ರವು ಭೂಮಿಯಲ್ಲಿ ಪೂರ್ತಿಯಾಗಿ ಕಚ್ಚಿಕೊಂಡಿತ್ತು. ಚಕ್ರರಕ್ಷಕರನ್ನು ಅರ್ಜುನನು ಆಗಲೇ ಹೆದರಿಸಿ ಓಡಿಸಿಯಾಗಿತ್ತು. ಚಕ್ರವನ್ನು ಬಿಡಿಸಲು ರಾಧೇಯನೇ ಕೆಳಗಿಳಿಯಬೇಕಾಗಿ ಬಂದಿತು. ಅಷ್ಟರಲ್ಲಿ ಅರ್ಜುನನು ರುದ್ರಾಸ್ತ್ರವನ್ನು ಬಿಲ್ಲಿನಲ್ಲಿ ಹೂಡಿ ಅಭಿಮಂತ್ರಿಸುತ್ತಿರಲು, ರಾಧೇಯನು ಅಸಹಾಯಕತೆಯಿಂದಲೂ ಸಿಟ್ಟಿನಿಂದಲೂ ಕಣ್ಣೀರಿಡುತ್ತ, ``ಅರ್ಜುನ, ದುರದೃಷ್ಟವಶಾತ್ ನನ್ನ ರಥದ ಎಡಚಕ್ರವು ಭೂಮಿಯಲ್ಲಿ ಹೂತು ಹೋಗಿದೆ. ನೀನು ಕ್ಷಣಕಾಲ ತಾಳುವುದಾದರೆ, ನಾನು ಅದನ್ನು ಎತ್ತುತ್ತೇನೆ. ನೀನು ಮಹಾವೀರ, ಧರ್ಮಿಷ್ಠ; ದಯವಿಟ್ಟು ನಾನು ಸಿದ್ಧನಾಗುವವರೆಗೆ ಯುದ್ಧವನ್ನು ನಿಲ್ಲಿಸು. ಕಷ್ಟದಲ್ಲಿರುವ ಎದುರಾಳಿಗೆ ಹೊಡೆಯುವುದು ನ್ಯಾಯವಲ್ಲ. ನೀನು ರಥದಲ್ಲಿದ್ದುಕೊಂಡು, ನಿರಾಯುಧನಾಗಿ ನೆಲದ ಮೇಲೆ ನಿಂತಿರುವ ನನ್ನ ಮೇಲೆ ಅಸ್ತ್ರವನ್ನು ಕಳುಹಿಸಬೇಡ. ಚಕ್ರವನ್ನೆತ್ತುತ್ತೇನೆ; ಅನಂತರ ಯುದ್ಧಮಾಡೋಣವಂತೆ" ಎಂದನು.ಕೃಷ್ಣನು ಕ್ರೂರವಾದ ನಗೆಯನ್ನು ನಕ್ಕು, ``ಓಹೋ! ನಿನಗೀಗ ಅರ್ಜುನ ನ್ಯಾಯವಾಗಿ ನಡೆದುಕೊಳ್ಳಬೇಕು ಎನಿಸುತ್ತಿದೆಯಲ್ಲವೆ? ನಿಜವಾಗಿ ಹೇಳು ರಾಧೇಯ, ನೀನು ಯಾವಾಗಲೂ ನ್ಯಾಯವಾಗಿಯೇ ನಡೆದುಕೊಂಡಿರುವೆಯಾ? ಪಾಂಡವರ ವಿರೋಧವಾಗಿ ದುರ್ಯೋಧನ ನಡೆಸಿದ ಕುಟಿಲೋಪಾಯಗಳಲ್ಲೆಲ್ಲ ನಿನ್ನ ಪಾತ್ರವಿತ್ತು. ದ್ರೌಪದಿಯನ್ನು ದುಶ್ಶಾಸನನು ರಾಜಸಭೆಗೆ ಎಳೆ ತಂದಾಗ ನೀನೂ ಅಲ್ಲಿದ್ದೆ; ಬೇರೆಲ್ಲರಿಗಿಂತಲೂ ಮಿಗಿಲಾಗಿ ಅಸಹಾಯಕತೆಯ ಸೋಗು ಹಾಕಿದೆ. ದ್ಯೂತವಾಡಿದಾಗ ನೀನು ನ್ಯಾಯವನ್ನಾಗಲಿ ಧರ್ಮವನ್ನಾಗಲಿ ಯೋಚಿಸಿದೆಯಾ? ಬಹಳ ಹಿಂದಿನದೇಕೆ ಮಾತು, ನಾಲ್ಕೇ ನಾಲ್ಕು ದಿನಗಳ ಹಿಂದೆ ನೀವು ಆರು ಜನ ಮಹಾವೀರರು ಸೇರಿ ಅಭಿಮನ್ಯುವನ್ನು ಕೊಲೆ ಮಾಡಿದಿರಲ್ಲ, ಆಗ ನಿರಾಯುಧನಾಗಿದ್ದ ಅವನೂ ನ್ಯಾಯವಾಗಿ ಹೋರಾಡಿ, ಒಬ್ಬೊಬ್ಬರೇ ಬನ್ನಿ ಎಂದು ರಥಚಕ್ರವನ್ನೇ ಎತ್ತಿ ಹಿಡಿದು ನಿಮ್ಮೆಲ್ಲರನ್ನೂ ಕೇಳಿಕೊಂಡನಲ್ಲವೆ? ಆಗ ನೀನು ನ್ಯಾಯೋಚಿತ ಯುದ್ಧವನ್ನು ಕುರಿತು ಯೋಚಿಸಿದೆಯಾ? ಏನಾಗುತ್ತಿದೆ ಎಂದು ಗೊತ್ತಿಲ್ಲದಂತೆ ಬೆನ್ನ ಹಿಂದಿನಿಂದ ಹೋಗಿ ಅಭಿಮನ್ಯುವಿನ ಬಿಲ್ಲನ್ನು ಕತ್ತರಿಸಿದವರು ಯಾರು? ನ್ಯಾಯೋಚಿತ ಯುದ್ಧನಿಯಮಗಳನ್ನು ತಿಳಿದ ವೀರನಲ್ಲವೆ? ಈಗ ನೀನು ನ್ಯಾಯವಾಗಿ ಹೋರಾಡಬೇಕೆಂದು ಕೇಳುತ್ತಿರುವುದು ವಿಚಿತ್ರವಾಗಿದೆ. ಆಗ ಇಲ್ಲದ ನ್ಯಾಯಬುದ್ದಿ ನಿನಗೆ ಈಗ ಹೇಗೆ ಬಂದಿತು?" ಎಂದನು. ಕೋಪದಿಂದ ಅವನ ತುಟಿಗಳು ನಡುಗುತ್ತಿದ್ದವು.ಕೃಷ್ಣನ ಈ ಮಾತುಗಳು ರಾಧೇಯನನ್ನು ಅರ್ಜುನನ ಬಾಣಗಳಿಗಿಂತಲೂ ಹೆಚ್ಚಾಗಿ ನೋಯಿಸಿದವು. ಹೌದು, ಇದೆಲ್ಲವೂ ನಿಜ! ಅವನು ತಲೆತಗ್ಗಿಸಿ ನೆಲಕ್ಕಿಳಿದು ರಥಚಕ್ರವನ್ನು ಮೇಲಕ್ಕೆ ಎತ್ತಲೆತ್ನಿಸಿದ. ಕೃಷ್ಣನಿಗೆ ತನ್ನ ಬಗ್ಗೆ ಗೊತ್ತಿತ್ತು; ತಾನು ಜೀವನದಲ್ಲಿ ಮಾಡಿದ ಏಕಮಾತ್ರ ತಪ್ಪೆಂದರೆ ಪಾಪಿ ದುರ್ಯೋಧನನನ್ನು ಪ್ರೀತಿಸಿದ್ದು. ಆದರೆ ಎದೆಯ ರಕ್ತವನ್ನು ಕಾರುತ್ತಲೇ ಅದರ ಬೆಲೆಯನ್ನು ತಾನು ತೆರುತ್ತಿರುವುದು ಸಾಲದೆ? ಮಾತಿನಿಂದಲೂ ನೋಯಿಸಬೇಕೆ? ತನಗೆ ದುರ್ಯೋಧನನೊಬ್ಬನೇ ನಿಜವಾದ ಗೆಳೆಯನೆಂಬುದು ಹಿಂದೆಯೇ ವಿಧಿಯು ನಿರ್ಧರಿಸಿಯಾಗಿತ್ತು. ತನ್ನ ಬಾಳು ಹೀಗೆಯೇ ಇರಬೇಕೆಂದು ವಿಧಿ ಬರೆದ ಬರೆಹವಾಗಿರುವಾಗ, ತನ್ನ ಕಾರ್ಯಗಳನ್ನು ವಿವರಿಸಹೊರಡುವುದು ತರವೆ? ದುರ್ಯೋಧನನನ್ನು ಪ್ರೇಮಿಸಿದ ತಾನು ಅವನಿಗಾಗಿ ಏನು ಪಾಪ ಮಾಡಲೂ ಸಿದ್ಧನಿದ್ದೆ. ಆದರೂ ಶಕುನಿಯ ಕುಟಿಲೋಪಾಯಗಳು ತನಗೆ ಸಮ್ಮತವಾಗಿರಲಿಲ್ಲ. ಅವನ ಮಾತು ಕೇಳಬೇಡವೆಂದು ದುರ್ಯೋಧನನಿಗೆ ಬುದ್ದಿಯನ್ನೂ ಹೇಳಿದೆ. ಆದರೆ ಪ್ರಯೋಜನವಾಗಲಿಲ್ಲ. ಪಾಂಡವರನ್ನು ತದುಕಿಡುವ ಸಂತೋಷವನ್ನು ಗೆಳೆಯನಿಗೆ ತಪ್ಪಿಸುವ ಮನಸ್ಸು ಬರದೇ ಹೋಯಿತು. ಆ ದಿನ ರಾಜಸಭೆಯಲ್ಲಿ ತಾನು ಹಾಗೆ ನಡೆದುಕೊಂಡದ್ದು ದುರ್ಯೋಧನನ ಪ್ರಿತ್ಯರ್ಥವಾಗಿಯೇ! ಅದು ಗೊತ್ತಿದ್ದರೂ ಕೃಷ್ಣ ಹೀಗೆ ಹೇಳುತ್ತಿದ್ದಾನೆ. ಈಗ ಯೋಚಿಸಲು ಕಾಲಾವಕಾಶವಿಲ್ಲ, ಚಿಂತಿಸಿ ಫಲವೂ ಇಲ್ಲ. ತಾನೇ ಹೆಣೆದು ಸಿಕ್ಕಿಹಾಕಿಕೊಂಡಿರುವ ಬಲೆಯಿಂದ ಬಿಡಿಸಿಕೊಳ್ಳುವ ಬಗೆಯೂ ತೋರುತ್ತಿಲ್ಲ. ಈಗ ಮಹಾಪ್ರಸ್ಥಾನದ ಕಾಲ: ಶಸ್ತ್ರತ್ಯಾಗ ಮಾಡಿ ಚಿರಶಾಂತಿ ಪಡೆಯುವುದು. ರಾಧೇಯ ಚಕ್ರವನ್ನೆತ್ತುವ ಪ್ರಯತ್ನವನ್ನು ಬಿಟ್ಟುಕೊಟ್ಟು ಪುನಃ ಯುದ್ಧಕ್ಕೆ ಮೊದಲು ಮಾಡಿದ.ಅರ್ಜುನ ರುದ್ರಾಸ್ತ್ರವನ್ನು ಬಿಡಲಿಲ್ಲ; ಬದಲಿಗೆ ಆಗ್ನೇಯಾಸ್ತ್ರವನ್ನು ಪ್ರಯೋಗಿಸಿದ. ರಾಧೇಯನು ಬಹು ಕಷ್ಟಪಟ್ಟು ವಾರುಣಾಸ್ತ್ರದ ಮಂತ್ರವನ್ನು ನೆನಪಿಸಿಕೊಂಡ; ಅರ್ಜುನನ ಅಸ್ತ್ರವನ್ನು ನಿವಾರಿಸಿದ. ಅವನಿಗೆ ದಣಿವು ಬಹಳವೆನಿಸಿತು. ಇನ್ನಾವ ಅಸ್ತ್ರವೂ ನೆನಪಾಗುತ್ತಿಲ್ಲ. ಅರ್ಜುನನೀಗ ವಾಯವ್ಯಾಸ್ತ್ರವನ್ನು ಹೊಡುತ್ತಿದ್ದಾನೆ. ಅವನು ಅಭಿಮಂತ್ರಿಸುವುದರೊಳಗಾಗಿ ರಾಧೇಯ ಕೆಳಕ್ಕಿಳಿದು ಚಕ್ರವನ್ನೆತ್ತುವ ಪ್ರಯತ್ನಮಾಡಿ ಪುನಃ ರಥವೇರುತ್ತಾನೆ. ನೋಡುವ ಯಾರಿಗಾದರೂ ದುಃಖವಾಗುವ ಪರಿಸ್ಥಿತಿ ಅವನದು. ಅರ್ಜುನನ ಬಾಣಗಳ ಹೆದರಿಕೆಯಿಂದಾಗಿ ಯಾರೊಬ್ಬರೂ ಸಹಾಯಕ್ಕಾಗಿ ಹತ್ತಿರ ಬರುವಂತಿರಲಿಲ್ಲ. ಶಲ್ಯನಿಗೆ ಹೂತುಹೋದ ರಥವನ್ನು ಹಿಗ್ಗಾಮುಗ್ಗಾ ಎಳೆಯುತ್ತಿರುವ, ಅರ್ಜುನನ ಬಾಣಗಳಿಂದ ಗಾಯಗೊಂಡಿರುವ ಕುದುರೆಗಳನ್ನು ನಿಯಂತ್ರಿಸುವುದೇ ಆಗಿಹೋಯಿತು. ಈ ನಡುವೆಯೂ ರಾಧೇಯನು ಹೊಡೆದ ಒಂದು ಬಲವಾದ ಬಾಣದಿಂದ ಅರ್ಜುನ ಮೂರ್ಛೆ ಹೋಗುವಂತಾಯಿತು. ಗಾಂಡೀವವು ಅವನ ಕೈಯಿಂದ ಜಾರಿ ಅವನು ಕುಸಿದೊರಗಿದ. ಆದರೆ ಪಾಂಡವರ ಹಾಹಾಕಾರ, ಕೌರವರ ಜಯಕಾರಗಳು ಮೊದಲಾಗುವುದರೊಳಗೆ ಮೂರ್ಛೆ ತಿಳಿದೆದ್ದ ಅರ್ಜುನ, ರಾಧೇಯನ ರಥದ ಪತಾಕೆಯನ್ನು ಕೆಡಹಿದನು. ಅದರೊಂದಿಗೇ ಕರ್ಣನ ಕೀರ್ತಿಯೂ, ಕೌರವರ ಆಶೋತ್ತರಗಳೆಲ್ಲವೂ ಮಣ್ಣು ಪಾಲಾದವು. ರಾಧೇಯನು ಸಮಯ ಸಿಕ್ಕಿದಾಗಲೆಲ್ಲ ಚಕ್ರವನ್ನೆತ್ತಲು ಮಾಡಿದ ಪ್ರಯತ್ನವೆಲ್ಲವೂ ವ್ಯರ್ಥವಾಯಿತು. ಈಗ ಅವನು ಭೂಮಿಯ ಮೇಲೆ ನಿಂತು ಎರಡೂ ಕೈಗಳಿಂದ ರಥಚಕ್ರವನ್ನು ಎತ್ತತೊಡಗಿದನು. ಅವನ ಕಣ್ಣುಗಳಿಂದ ಕಂಬನಿಯೂ ಮುಖದಿಂದ ರಕ್ತಮಿಶ್ರಿತವಾದ ಬೆವರೂ ಸುರಿಯುತ್ತಿದ್ದವು. ಆಗ ಕೃಷ್ಣನು, ``ಅರ್ಜುನ, ತ್ವರೆಮಾಡು. ರಾಧೇಯನು ಪುನಃ ರಥವನ್ನೇರುವುದರೊಳಗಾಗಿ ಅವನನ್ನು ಕೊಂದುಬಿಡು" ಎನ್ನಲು, ಅರ್ಜುನನು ಸಿಡಿಲಿಗೆ ಸಮಾನವಾದ ದಿವ್ಯಾಸ್ತ್ರವೊಂದನ್ನು ಹೂಡಿ ಪ್ರಯೋಗಿಸಿಬಿಟ್ಟನು. ಅದನ್ನು ನೋಡುತ್ತಿದ್ದಂತೆಯೇ ಕೌರವರ ಹೃದಯವು ಒಡೆದುಹೋಯಿತು. ರಾಧೇಯನು ಅರ್ಜುನನ ಈ ಪ್ರಯತ್ನವನ್ನು ತಿರಸ್ಕಾರದಿಂದ ನೋಡುತ್ತಿದ್ದಂತೆಯೇ ಅಸ್ತ್ರವು ಅವನ ತಲೆಯನ್ನು ಕತ್ತರಿಸಿತು. ಸೂರ್ಯನು ಅಸ್ತಮಿಸಿದಂತೆ ರಾಧೇಯನ ತಲೆಯು ಭೂಮಿಯಲ್ಲಿ ಬಿದ್ದುಹೋಯಿತು. ಮುಖದಲ್ಲಿ ಮುಗುಳು ನಗೆಯು ಇನ್ನೂ ರಾರಾಜಿಸುತ್ತಿತ್ತು; ಚಕ್ರವನ್ನೆತ್ತುವ ಹಟದಿಂದ ಕೆಳದುಟಿಯನ್ನು ಕಚ್ಚಿಕೊಂಡಿದ್ದು ಹಾಗೆಯೇ ಇದ್ದಿತು. ಜ್ವಾಲೆಯೊಂದು ಅವನ ಶರೀರವನ್ನು ಬಿಟ್ಟು ಆಕಾಶದ ಕಡೆ ಹೊರಟು ಹೋಯಿತು.* * * * ರಾಧೇಯನೊಂದಿಗೇ ಈ ಭೂಮಿಯ ಸಮಸ್ತ ಸೌಂದರ್ಯವೂ ಸಮಸ್ತ ಉನ್ನತಿಯೂ ಹೊರಟು ಹೋದಂತಾಯಿತು. ಯುದ್ಧದ ಹದಿನೇಳನೆಯ ದಿನದ ಮಧ್ಯಾಹ್ನದ ಸೂರ್ಯನು ನೋಡಲಾರದೆ ಕಣ್ಮುಚ್ಚಿರುವನೋ ಎಂಬಂತೆ ದುರ್ಬಲನಾಗಿದ್ದ. ಕಿತ್ತು ಬಿಸುಟ ಅರಳಿರುವ ಹೊಸ ಕಮಲದಂತೆ ಯುದ್ಧಭೂಮಿಯ ಮೇಲೆ ರಾಧೇಯನ ತಲೆಯು ಶೋಭಿಸುತ್ತಿತ್ತು. ಹೊಂಗಿರಣದಲ್ಲಿ ಅವನ ಶರೀರವು ಚಿನ್ನದ ಪುತ್ಥಳಿಯಂತೆ ಮಿರುಗುತ್ತಿತ್ತು. ಶಲ್ಯನು ಯಜಮಾನವಿಲ್ಲದ, ಬಾವುಟವಿಲ್ಲದ ರಥವನ್ನು ಪಾಳೆಯಕ್ಕೆ ಹಿಂದಿರುಗಿ ತಂದನು. ಕರ್ಣನ ಅವಸಾನವಾಗುತ್ತಲೇ ರಥವು ತಂತಾನೆ ಭೂಮಿಯಿಂದ ಮೇಲೆದ್ದು ಬಂದುದನ್ನು ಕಂಡು ಅವನಿಗೆ ಅಚ್ಚರಿ. ಕಂಬನಿ ತುಂಬಿ ಅವನಿಗೆ ಕಣ್ಣು ಕಾಣಿಸದಾಯಿತು; ಪಾಂಡವಸೈನ್ಯದ ಜಯಧ್ವನಿಯಿಂದ ಕಿವಿಯೂ ಕೇಳಿಸದಾಯಿತು. ಅವನು ದುರ್ಯೋಧನನಿದ್ದಲ್ಲಿಗೆ ಧಾವಿಸಿ ಬಂದನು.ರಾಜನು ದುಃಖಾತಿರೇಕದ ಸಂಕಟದಾಳದಲ್ಲಿ ಮುಳುಗಿಹೋಗಿದ್ದನು. ಅವನ ಪ್ರೀತಿಯ ರಾಧೇಯನು ಸಾಯಬಹುದೆಂದು ಅವನು ಕಸಿನಲ್ಲಿಯೂ ಭಾವಿಸಿರಲಿಲ್ಲ: ಕಳೆದ ರಾತ್ರಿ ಡೇರೆಯಿಂದ ಹೊರಟವನು ಪುನಃ ಹಿಂದಿರುಗಿ ಬಂದು ತನ್ನನ್ನಾಲಿಂಗಿಸಿದ ರಾಧೇಯ ನೆನಪಾದನು. ಅಗ್ನಿದ್ರವದಂತಹ ದುಃಖಾಶ್ರುಗಳುದುರಿದವು. ರಾಧೇಯ ಸತ್ತು ತಾನು ಬದುಕಿರುವೆನೆಂಬ ಸತ್ಯವನ್ನು ಅವನಿಗೆ ನಂಬಲೇ ಕಷ್ಟವಾಯಿತು. ತಾನಿನ್ನೂ ಬದುಕಿರುವ ಈ ಪ್ರಪಂಚದಲ್ಲಿ ತನ್ನ ಜೀವದ ಗೆಳೆಯನಿಗೆ ಸ್ಥಳವಿಲ್ಲವಾಯಿತೆ! ರಾಧೇಯ ಸತ್ತಿರುವ. ಸಾವು! ವ್ಯರ್ಥಕೋಪದಲ್ಲಿ ಎದೆಎದೆ ಬಡಿದುಕೊಳ್ಳುತ್ತಿದ್ದ, ಸಂಕಟದಲ್ಲಿ ಮಾತೇ ಹೊರಡದ ರಾಜನನ್ನು ನೋಡಿದ ಶಲ್ಯನಿಗೂ ನಿಲ್ಲುವುದಕ್ಕೇ ಆಗದಂತಾಯಿತು. ಶಲ್ಯನನ್ನು, ರಾಧೇಯನ ರಥದಲ್ಲಿದ್ದ ಅವನ ಬರಿದಾದ ಪೀಠವನ್ನು, ಕೆಳಗಿಟ್ಟ ಬಿಲ್ಲು ಬಾಣಗಳನ್ನು, ನೋಡಿದ ದುರ್ಯೋಧನನು ಸಂಕಟವನ್ನು ತಾಳಲಾರದೆ ವಿಲವಿಲನೆ ಒದ್ದಾಡಿದನು. ಭಾರವಾದ ಹೃದಯದಿಂದ ಶಲ್ಯನು ರಾಜನನ್ನು ಸಮಾಧಾನ ಮಾಡಿದನು. ``ಮಗು ದುರ್ಯೋಧನ, ಎದೆಯೊಡೆದುಕೊಳ್ಳಬೇಡ. ಎಲ್ಲವೂ ಇರುವುದು ವಿಧಿಯ ಕೈಯಲ್ಲಿ. ರಾಧೇಯ ಯುದ್ಧಮಾಡಿದ ವೈಖರಿಯನ್ನು ನೋಡಿರುವ ನಾನು, ವಿಧಿಯನ್ನು ಮಾತ್ರವೇ ನಿಂದಿಸಬೇಕಾಗಿದೆ. ಕೃಷ್ಣಾರ್ಜುನರನ್ನು ದ್ವಂದ್ವದಲ್ಲಿ ಮೀರಿಸಿದ್ದ ರಾಧೇಯನು ವಿಧಿಯ ಬಲಿಪಶು. ಅರ್ಜುನ ಕೇವಲ ನಿಮಿತ್ತ. ವಿಧಿಯ ನಡೆಯನ್ನು ನಿಲ್ಲಿಸಲು ಸಾಧ್ಯವಿಲ್ಲ. ಅಳಬೇಡ, ಅವನು ಸ್ವರ್ಗವನ್ನು ಸೇರಿರುತ್ತಾನೆ. ಸೈನ್ಯವು ಹೋರಾಡುವ ಸ್ಥಿತಿಯಲ್ಲಿಲ್ಲ; ಈಗ ಅದನ್ನು ಹಿಂದಕ್ಕೆ ಕರೆಸಿಕೋ. ಎಲ್ಲರೂ ಗರಬಡಿದವರಂತಾಗಿದ್ದಾರೆ. ಸಂಜೆಯಾಗಿರದಿದ್ದರೂ, ಸೂರ್ಯ ಸಹ ಮಬ್ಬಾಗಿದ್ದಾನೆ. ಇಂದಿನ ಯುದ್ಧವನ್ನು ನಿಲ್ಲಿಸೋಣ" ಎಂದನು. ಸಂಕಟದಲ್ಲಿದ್ದ ದುರ್ಯೋಧನನು ಯಾವುದಕ್ಕೂ ಮನಸ್ಸು ಕೊಡಲಾರದವನಾಗಿದ್ದನು.ರಾಧೇಯನೊಬ್ಬನೇ ರಣರಂಗದಲ್ಲಿದ್ದನು. ಸತ್ತಿದ್ದರೂ ಅವನ ಮುಖ ಬಾಡಿರಲಿಲ್ಲ, ಸೌಂದರ್ಯ ಮಾಸಿರಲಿಲ್ಲ. ದೇಹದಲ್ಲಿನ್ನೂ ಜೀವವಿದೆಯೋ ಎಂಬಂತಿತ್ತು. ವಿಶ್ರಾಂತಿ ತೆಗೆದುಕೊಳ್ಳುತ್ತಿರುವನೋ ಎನ್ನಿಸುತ್ತಿದ್ದಿತು. ಆದರೆ ಒಳಗಿನ ಅಗ್ನಿಯು ನಂದಿಹೋಗಿತ್ತು. ಅವನು ರಣರಂಗಕ್ಕೆ ಬಂದು ಕೇವಲ ಏಳು ದಿನಗಳಾಗಿದ್ದವು. ಅಷ್ಟರಲ್ಲಿ ಅವನು ತೋರಿದ ಪ್ರತಾಪವೆಷ್ಟು! ಬೇಡಿದ ಯಾರಿಗೂ ಏನನ್ನೂ ಇಲ್ಲವೆನ್ನದ ಅವನು ಇಂದಿಲ್ಲಿ ಸತ್ತು ಮಲಗಿದ್ದನು. ತನ್ನದೆಲ್ಲವನ್ನೂ ದಾನವಾಗಿತ್ತ ಅವನು ಹೃದಯವನ್ನೂ ರಾಜನಿಗೆ ಕೊಟ್ಟುಬಿಟ್ಟಿದ್ದನು. ಅವನನ್ನವಲಂಬಿಸಿಯೇ ರಾಜನು ಯುದ್ಧವನ್ನಾರಂಭಿಸಿದ್ದು: ಈಗ ಅವನೇ ಸತ್ತು ಮಲಗಿರುವನು.ಅರ್ಜುನನು ದೇವದತ್ತವನ್ನೂ, ಕೃಷ್ಣನು ಪಾಂಚಜನ್ಯವನ್ನೂ ಊದಿದರು; ಎಂದಿನಂತೆ ಅವುಗಳಲ್ಲಿ ಉತ್ಸಾಹವಾಗಲಿ ಜಯಧ್ವನಿಯಾಗಲಿ ಇರಲಿಲ್ಲ. ದ್ವಂದ್ವಯುದ್ಧ ನಡೆಯುತ್ತಿದ್ದಾಗಲೇ ಯುಧಿಷ್ಠಿರನು ಪಾಳೆಯಕ್ಕೆ ಹಿಂದಿರುಗಿದ್ದನು. ಮೈಗಾಗಿದ್ದ ಗಾಯಗಳಿಂದ ಅವನು ಸಂಕಟಪಡುತ್ತಿದ್ದನು. ಕೃಷ್ಣಾರ್ಜುನರಿಬ್ಬರೂ ಅವನ ಡೇರೆಗೆ ನಡೆದರು. ಅರ್ಜುನ ರಥದಿಂದ ಧುಮುಕಿ ಅಣ್ಣನ ಬಳಿಗೆ ಓಡಿದನು. ರಾಧೇಯನ ಸಾವನ್ನು ಕೇಳಿ ತಿಳಿದಿದ್ದ ಅವನು ಅರ್ಜುನನಿಗಾಗಿಯೇ ಕಾಯುತ್ತಿದ್ದನು. ಹಿರಿಯನೂ ಗುರುವೂ ಆದ ಪ್ರೀತಿಯ ಅಣ್ಣನ ಕಾಲಿಗೆ ಬಿದ್ದ ಅರ್ಜುನನನ್ನು ಹಿಡಿದೆತ್ತಿ ಆಲಿಂಗಿಸಿದ ಯುಧಿಷ್ಠಿರನು, ಕೃಷ್ಣನನ್ನೂ ಹತ್ತಿರಕ್ಕೆ ಕರೆದು ಆಲಿಂಗಿಸಿದನು. ವೀರರೆಲ್ಲ ಅರ್ಜುನನನ್ನು ಅಭಿನಂದಿಸಲು ಕಾತುರದಿಂದಿದ್ದರು. ಧನ್ಯತೆ ಅರ್ಜುನನಲ್ಲಿ ಮನೆಮಾಡಿತ್ತು. ಕೃಷ್ಣನು, ``ಯುಧಿಷ್ಠಿರ, ಇಂದು ನಿನ್ನ ಆನಂದದ ದಿನ. ರಾಧೇಯನ ಸಾವಿನ ನಂತರ ದುರ್ಯೋಧನನಿಗೆ ಭರವಸೆಯೇನೂ ಉಳಿದಿಲ್ಲ. ಹದಿನಾಲ್ಕು ವರ್ಷಗಳ ಹಿಂದೆ ಹುಟ್ಟಿದ್ದ ನಿನ್ನ ಕೋಪಾಗ್ನಿಯಲ್ಲಿ ಈಗ ಕೌರವರೆಲ್ಲರೂ ದಗ್ಧರಾಗಿರುವರು. ಈಗ ನೀನೇ ಈ ಲೋಕದ ಒಡೆಯನು" ಎನ್ನಲು, ಯುಧಿಷ್ಠಿರನು, ``ಕೃಷ್ಣ, ನೀನೇ ನಮ್ಮೆಲ್ಲರ ಆಶೋತ್ತರವು. ಇದನ್ನೆಲ್ಲ ಕೈಗೂಡಿಸಿದವನು ನೀನೇ. ಪಾಂಡವರಾದ ನಮ್ಮ ರಕ್ಷಣೆಗೆ ನೀನಿರುವಾಗ, ನಮಗಿನ್ನೇನು ಚಿಂತೆ?" ಎಂದನು.ಯುಧಿಷ್ಠಿರನಿಗೆ ಬಹುಕಾಲದಿಂದ ನಿದ್ರಾನಾಶಕ್ಕೆ ಕಾರಣವಾಗಿದ್ದ ದೊಡ್ಡ ಚಿಂತೆ ಇಂದು ಪರಿಹಾರವಾದಂತಾಯಿತು. ಅರ್ಜುನನ ರಥವನ್ನು ತರಿಸಿ, ಸ್ನೇಹಿತರೊಂದಿಗೆ ಅವನು ರಣರಂಗಕ್ಕೆ ತೆರಳಿ ರಾಧೇಯ ಸತ್ತುದನ್ನು ಕಣ್ಣಾರೆ ಕಂಡು ಖಚಿತಪಡಿಸಿಕೊಡನು. ರಾಧೇಯನ ಮೂವರು ಮಕ್ಕಳೂ ಸತ್ತು ಮಲಗಿರುವುದನ್ನು ನೋಡಿದನು. ಜೀವನವೆಂಬ ಮಹಾಜ್ವರದ ಪೀಡೆಯು ಪರಿಹಾರವಾಗಿ ಶಾಂತನಾಗಿ ಮಲಗಿರುವ ರಾಧೇಯನನ್ನು ತುಂಬ ಹೊತ್ತು ನೋಡಿದ ಅವನು ನಿಟ್ಟುಸಿರಿಟ್ಟು ಮೌನವಾಗಿ ಪಾಳೆಯಕ್ಕೆ ಹಿಂದಿರುಗಿದನು. ಅನಂತರ ಅವನು ಬಹಳ ಹೊತ್ತು ಯಾರೊಬ್ಬರೊಡನೆಯೂ ಮಾತನಾಡದೆ ಮೌನವಾಗಿಯೇ ಕಾಲ ಕಳೆದನು.ಸೂರ್ಯನು ನಿಧಾನವಾಗಿ ಪಶ್ಚಿಮಘಟ್ಟಗಳ ಹಿಂದೆ ಜಾರತೊಡಗಿದನು. ಅವನಿಗಿಂದು ಅತ್ಯಂತ ದುರದೃಷ್ಟದ ದಿನ-ತನ್ನ ಪ್ರೀತಿಯ ಮಗನ ಮಾರಣಹೋಮವಾದ ದಿನ. ತನಗೆ ದೊರಕಿದ ಕೆಲ ಗಂಟೆಗಳ ವಿರಾಮಕ್ಕಾಗಿ ಅವನು ಕೃತಜ್ಞ. ಮಾರನೆಯ ದಿನ ಪೂರ್ವದಲ್ಲಿ ಉದಯಿಸಲು, ಕುರುಕ್ಷೇತ್ರಕ್ಕೆ ಇನ್ನೊಂದು ನೋವಿನ ದಿನವನ್ನು ತರಲು, ಅವನು ಶಕ್ತಿಸಂಗ್ರಹ ಮಾಡಿಕೊಳ್ಳಬೇಕಾಗಿದ್ದಿತು.* * * * ದುರ್ಯೋಧನನು ಏನನ್ನೂ ಯೋಚಿಸುವ ಸ್ಥಿಯಲ್ಲಿರಲಿಲ್ಲ. ನೆನಪುಗಳು ದಾಂಗುಡಿಯಿಡುತ್ತಿದ್ದವು. ಆ ಕ್ರೀಡಾಸ್ಪರ್ಧೆಯ ದಿನ ತನಗೆ ರಾಧೇಯನ ಪರಿಚಯವಾದುದು. ಇನ್ನೊಮ್ಮೆ ಅವನನ್ನು ನೋಡಬೇಕೆನಿಸಿತು. ಆ ಭೀಕರ ಕಾರಿರುಳಿನಲ್ಲಿ, ಪಾಳೆಯವೆಲ್ಲ ನಿದ್ರಿಸುತ್ತಿರುವಾಗ, ದುರ್ಯೋಧನನು ರಣರಂಗಕ್ಕೆ ಓಡಿಬಂದು, ತನ್ನನ್ನು ಅಷ್ಟೆಲ್ಲ ಪ್ರೀತಿಸಿದ್ದ ಗೆಳೆಯನ ಪಕ್ಕದಲ್ಲಿ ಕುಳಿತನು. ತನಗಾಗಿ ಸತ್ತಿರುವ ಗೆಳೆಯನ ಸುಂದರ ಮುಖವನ್ನೇ ಬಹಳ ಹೊತ್ತು ನೋಡುತ್ತಿದ್ದನು. ತನಗೆ ಹುಚ್ಚೇ ಹಿಡಿಯಬಹುದೆಂದೆನಿಸಿತು. ಅಲ್ಲಿಂದೆದ್ದು ರಣರಂಗವನ್ನೆಲ್ಲ ತಿರುಗಿ, ಶರಶಯ್ಯೆಯಲ್ಲಿ ಮಲಗಿ ಮರಣವನ್ನೇ ಎದುರುನೋಡುತ್ತಿದ್ದ ಅಜ್ಜನ ಬಳಿಗೆ ಬಂದನು. ಅಜ್ಜನ ಕಾಲಿಗೆ ಬಿದ್ದು, ಹೃದಯವೇ ಒಡೆದುಹೋಗುವುದೇನೋ ಎಂಬಂತೆ ಭೋರೆಂದು ಅಳತೊಡಗಿದನು. ಭೀಷ್ಮನು ತನ್ನ ಮುದಿಯಾದ, ದುರ್ಬಲವಾದ ಕೈಗಳನ್ನು ಈ ನತದೃಷ್ಟ ಮೊಮ್ಮಗನ ಮೇಲೆ ಇರಿಸಿ ಸಂತೈಸತೊಡಗಿದನು. ``ಮಗೂ, ರಾಧೇಯನ ಸಾವು ಆಗಲೇ ಬೇಕಿತ್ತು. ಅದಕ್ಕಾಗಿ ದುಃಖಿಸಬೇಡ; ಅವನು ಕ್ಷತ್ರಿಯ; ಕ್ಷತ್ರಿಯಸಹಜ ಸಾವನ್ನು ಪಡೆದು ಸ್ವರ್ಗದಲ್ಲಿ ಸುಖವಾಗಿದ್ದಾನೆ" ಎಂದನು. ದುರ್ಯೋಧನನಿಗೆ ಅಚ್ಚರಿಯೋ ಅಚ್ಚರಿ. ``ಹಾಗಿದ್ದರೆ ನಾನೆಂದುಕೊಂಡದ್ದು ಸರಿ; ರಾಧೇಯ ಕ್ಷತ್ರಿಯ. ಅಜ್ಜ, ನನಗೆ ಉದ್ದಕ್ಕೂ ಅನಿಸುತ್ತಿತ್ತು, ರಾಧೇಯ ಕ್ಷತ್ರಿಯನೆಂದು. ಈಗ ನೀನೂ ಅದನ್ನೇ ಹೇಳುತ್ತಿರುವೆ. ಅವನು ಯಾರೆಂದು ಹೇಳು. ನಾನು ಅದನ್ನು ತಿಳಿಯಲು ಕಾತುರನಾಗಿದ್ದೇನೆ. ಅವನ ಹೆಸರಿಗೆ ಅಂಟಿದ್ದ ಕಲೆಯನ್ನು ಈಗಲಾದರೂ ತೆಗೆದುಹಾಕುತ್ತೇನೆ. ನನಗಾಗಿ ಪ್ರಾಣಬಿಟ್ಟ ನನ್ನ ಗೆಳೆಯನಿಗೆ ಇಷ್ಟಾದರೂ ನಾನು ಮಾಡುವೆ. ಹೇಳಜ್ಜ" ಎಂದನು.ಭೀಷ್ಮನು, ``ನನಗೆ ಅವನು ಯಾರೆಂಬುದು ಗೊತ್ತು. ನೀನು ಯಾರಿಗೂ ಹೇಳುವುದಿಲ್ಲವೆಂದು ವಚನ ಕೊಡದಿದ್ದರೆ ನಾನು ಹೇಳಲಾರೆ. ಅದು ಯಾರಿಗೂ ತಿಳಿಯಬಾರದೆಂಬುದೇ ರಾಧೇಯನ ಇಚ್ಛೆಯಾಗಿತ್ತು. ತಾನು ಸಾಯುವವರೆಗೆ ಅದನ್ನು ನಿನಗೆ ಹೇಳಬಾರದೆಂದು ನನ್ನಿಂದಲೂ ಅವನು ವಚನ ತೆಗೆದುಕೊಂಡಿದ್ದ. ಈಗ ಅವನು ಸತ್ತಿರುವುದರಿಂದ ನಾನು ನಿನಗೆ ಹೇಳುತ್ತೇನೆ; ಆದರೆ ನೀನು ಸಾಯುವವರೆಗೆ ಇದನ್ನು ರಹಸ್ಯವಾಗಿಟ್ಟಿರಬೇಕು" ಎಂದನು. ದಿಙ್ಮೂಢನಾದ ದುರ್ಯೋಧನನು, ``ನನ್ನ ಪ್ರೀತಿಯ ರಾಧೇಯ ಅದನ್ನು ರಹಸ್ಯವಾಗಿಟ್ಟಿರಲು ಬಯಸಿದ್ದರೆ, ನಾನು ಅವನ ಇಚ್ಛೆಯನ್ನು ಗೌರವಿಸುವೆ; ಯಾರಿಗೂ ಹೇಳುವುದಿಲ್ಲ. ಹೇಳಜ್ಜ" ಎಂದನು. ಭೀಷ್ಮನು ಸ್ವಲ್ಪ ಹೊತ್ತು ಯೋಚಿಸಿ, ಅನಂತರ ``ದುರ್ಯೋಧನ, ನೀನು ಈಗಾಗಲೇ ಅಘಾತಗೊಂಡಿರುವೆ. ಇದನ್ನು ಕೇಳಿ ತಡೆದುಕೊಳ್ಳಬಲ್ಲೆಯಾ?" ಎಂದನು. ದುರ್ಯೋಧನನು ಕಹಿ ನಗುವನ್ನು ನಕ್ಕು, ``ರಾಧೇಯನ ಸತ್ತ ದೇಹವನ್ನು ನೋಡಿಯೂ ನಾನಿನ್ನೂ ಬದುಕಿದ್ದೇನೆ. ಅದು ನನ್ನ ಹೃದಯ ಕಲ್ಲಿನದು ಎಂಬುದನ್ನು ತಾನೆ ತೋರಿಸುತ್ತದೆ? ಈಗ ಏನನ್ನು ಬೇಕಾದರೂ ತಡೆದುಕೊಳ್ಳಬಲ್ಲೆ. ಹೇಳು ಅಜ್ಜಾ, ಹೇಳು. ರಾಧೇಯ ಯಾರು?" ಎಂದನು.ಭೀಷ್ಮನು ಇನ್ನೂ ಸ್ವಲ್ಪ ಹೊತ್ತು ಸುಮ್ಮನಿದ್ದನು. ಅನಂತರ, ``ಹೇಳುವೆ. ಸತ್ಯವನ್ನು ಕೇಳುವುದಕ್ಕೆ ಹೃದಯವನ್ನು ಗಟ್ಟಿಮಾಡಿಕೋ. ನಿನ್ನ ಗೆಳೆಯ ರಾಧೇಯನಲ್ಲ; ಅವನು ಕೌಂತೇಯ!" ಎಂದನು. ಪರಮಾಘಾತವು ದುರ್ಯೋಧನನ ಮುಖಕ್ಕೇ ರಾಚಿತು. ಅದರಿಂದ ಅವನು ತತ್ತರಿಸಿಹೋದನು. ನಂತರ ಅಜ್ಜನ ಕೈ ಹಿಡಿದುಕೊಡು, ``ಏನೆಂದೆ? ಕೌಂತೇಯನೆ! ಪಾಂಡವರು ರಾಧೇಯನ ಸೋದರರೆ? ಎಲ್ಲವನ್ನೂ ಹೇಳು, ಅಜ್ಜಾ" ಎನ್ನಲು, ಭಿಷ್ಮನು ರಾಧೇಯನ ಜೀವನದ ನೋವಿನ ವಿವರಗಳನ್ನೆಲ್ಲ ಎಳೆಎಳೆಯಾಗಿ ಬಿಡಿಸಿಟ್ಟನು. ಕುಂತಿಯು ಅರಿಯದೆ ಸೂರ್ಯನನ್ನು ದೂರ್ವಾಸರು ಕೊಟ್ಟ ಮಂತ್ರದಿಂದ ಕರೆದಿದ್ದು, ಮರದ ತೊಟ್ಟಿಲಿನಲ್ಲಿ ಮಲಗಿಸಿ ಮಗುವನ್ನು ಗಂಗೆಯಲ್ಲಿ ತೇಲಿಬಿಟ್ಟಿದ್ದು; ಅಧಿರಥನು ಆ ತೊಟ್ಟಿಲಿನಲ್ಲಿದ್ದ ಮಗುವನ್ನು ನೋಡಿ ಮನೆಗೆ ಕೊಂಡೊಯ್ದದ್ದು; ತಾನು ಅಧಿರಥನ ಮಗನಲ್ಲವೆಂದು ತಿಳಿದ ಮೇಲೂ ತನಗೆ ರಾಧೇಯನೆಂಬ ಹೆಸರನ್ನೇ ಮಗುವು ಆರಿಸಿಕೊಂಡದ್ದು; ಸೂತಪುತ್ರನೆಂಬ ಕಾರಣಕ್ಕೆ ದ್ರೋಣನು ಅವನನ್ನು ಶಿಷ್ಯನಾಗಿ ತೆಗೆದುಕೊಳ್ಳದಿದ್ದುದು; ನಂತರ ಭಾರ್ಗವಾಶ್ರಮದ ಕಥೆ; ಅನಂತರವೇ ಧನುರ್ವಿದ್ಯಾ ಪ್ರದರ್ಶನ, ಸ್ಪರ್ಧೆ, ದುರ್ಯೋಧನನ ಮೇಲೆ ಬೆಳೆದ ಪ್ರೀತಿ. ದುರ್ಯೋಧನನ ಹಾಗೂ ಸಾಕುತಾಯಿ ರಾಧೆಯ ಪ್ರೇಮ ಮಾತ್ರವೇ ಅವನ ಹೃದಯಕ್ಕೆ ಮುಖ್ಯವಾಗಿತ್ತು ಎಂಬುದನ್ನು ಮನಮುಟ್ಟುವಂತೆ ಹೇಳಿದನು ಭೀಷ್ಮ. ಬದುಕಿಗಿಂತಲೂ ಒಳ್ಳೆಯ ಹೆಸರು ಮುಖ್ಯ ಎಂಬ ಕಾರಣಕ್ಕೆ ಹೇಗೆ ಕವಚಕುಂಡಲಗಳನ್ನು ದಾನ ಮಾಡಿದ; ಅನಂತರ ಹೇಗೆ ಕೃಷ್ಣ ಹಾಗೂ ಕುಂತಿ ಅವನನ್ನು ಭೇಟಿಮಾಡಿ ಮಾತನಾಡಿದರು ಎಂಬುದನ್ನೆಲ್ಲ ವಿವರಿಸಿದನು. ತನ್ನ ಮೇಲೆ ರಾಧೇಯನಿಗಿದ್ದ ಎಣೆಯಿಲ್ಲದ ಪ್ರೀತಿ ದುರ್ಯೋಧನನಿಗೆ ಮನದಟ್ಟಾಯಿತು.ಭೀಷ್ಮನು ಎಲ್ಲವನ್ನೂ ಹೇಳಿ ಮುಗಿಸಿದನು. ಕೇಳಿದ ದುರ್ಯೋಧನನು ಒಂದೂ ಮಾತನಾಡದೆ ಸುಮ್ಮನೆ ಕುಳಿತಿದ್ದನು. ಎರಡೂ ಕೈಗಳಲ್ಲಿ ಹಿಡಿದುಕೊಂಡಿದ್ದ ಅಜ್ಜನ ಕೈಗಳನ್ನು ಕಣ್ಣೀರಧಾರೆಯಿಂದ ಒದ್ದೆ ಮಾಡಿದನು. ಅನಂತರ ನೋವಿನಿಂದ ಕಟ್ಟಿಹೋದಂತಿದ್ದ ಗಂಟಲಿನಿಂದ, ಗೊಗ್ಗರಧ್ವನಿಯಲ್ಲಿ, ``ರಾಧೇಯನಿಗೆ ಗೊತ್ತಿದ್ದೂ, ನನ್ನ ಮೇಲಣ ಪ್ರೇಮದಿಂದ ಅವರ ಕಡೆಗೆ ಹೋಗಲಿಲ್ಲ ಹಾಗಾದರೆ! ಅಯ್ಯೋ ದೇವರೆ, ನಾನೇಕೆ ಇನ್ನೂ ಸತ್ತಿಲ್ಲ? ಭೂಮಿಯು ಇನ್ನೂ ನನ್ನನ್ನು ನುಂಗದೆ ಏಕೆ ಉಳಿಸಿದೆ? ರಾಧೇಯ, ಗೆಳೆಯಾ, ನಾನೂ ನೀನಿದ್ದಲ್ಲಿಗೆ ಬರುವೆನಪ್ಪಾ, ಸಾಧ್ಯವಾದಷ್ಟು ಬೇಗ ಬರುವೆ. ನೀನಿಲ್ಲದೆ ನಾನು ಬದುಕಿ ಉಳಿಯಲಾರೆ!" ಎಂದು ವಿಧವಿಧವಾಗಿ ವಿಲಾಪಿಸಿದನು. ದುಃಖದ ಆಳದಲ್ಲಿ ಮುಳುಗಿಹೋದ ಈ ಮಗುವನ್ನು ಸಮಾಧಾನಪಡಿಸುವುದು ಭೀಷ್ಮನಿಗೆ ಬಹು ಕಷ್ಟವಾಯಿತು. ದುರ್ಯೋಧನನೇ ಕೊನೆಗೆ ಧೈರ್ಯ ತಂದುಕೊಂಡು, ``ಈಗ ಯಾವುದೂ ನನ್ನನ್ನು ನೋಯಿಸಲಾರದು. ಈ ಭೂಮಿಯ ಮೇಲೆ ಬದುಕಿದ್ದ ಈ ಮಹಾನ್ ಪುರುಷನ ಬಗ್ಗೆ ತಿಳಿದುಕೊಂಡ ಮೇಲೆ ನನ್ನ ಪಾಪಗಳೆಲ್ಲ ತೊಳೆದುಹೋದವು. ನಗುನಗುತ್ತ ನಾನೀಗ ಮೃತ್ಯುವನ್ನು ಸ್ವಾಗತಿಸಬಲ್ಲೆ. ಇದನ್ನು ಅವನಿಂದಲೇ ನಾನು ಕಲಿತೆ. ನಾನೀಗ ರಾಜ್ಯದಾಸೆಯಿಂದ ಮುಕ್ತನಾಗಿರುವೆ. ನಾನೀಗ ರಾಧೇಯನ ಜೊತೆಗೆ ಪಾಲುಮಾಡಿಕೊಳ್ಳಬೇಕು. ಬೇರೇನನ್ನೂ ಲೆಕ್ಕಿಸಲಾರೆ. ನನಗೀಗ ಬೇಕಾಗಿರುವುದು ಸಾವು; ಕ್ಷತ್ರಿಯನಿಗೆ ಯುಕ್ತವಾದಂತಹ ಸಾವು. ಅಜ್ಜಾ, ನೀನು ನನ್ನ ಬಗ್ಗೆ ಹೆಮ್ಮೆಪಡುವೆ. ನಾನೀಗ ಹೋಗಿ ನನ್ನ ಸಾವಿನ ಬಗ್ಗೆ ಏರ್ಪಾಟು ಮಾಡಿಕೊಳ್ಳಬೇಕು" ಎಂದನು. ಹೀಗೆಂದವನೇ ತಿರುಗಿಯೂ ನೋಡದೆ ದುರ್ಯೋಧನನು ಅಲ್ಲಿಂದ ಹೊರಟುಹೋದನು.

* * * * 

ಪರಿವಿಡಿ