ಪರಿವಿಡಿ

This book is available at Ramakrishna Ashrama, Mysore.

ಶಾಂತಿಪರ್ವ

ಸೂತಕವೆಂದು ಒಂದು ತಿಂಗಳು ಅವರು ನಗರದಿಂದ ಹೊರಗೇ ಉಳಿಯಬೇಕಾಯಿತು. ಕರ್ಮಾಂತರಗಳು ಮುಗಿಯುವವರೆಗೂ ಅವರು ನಗರಪ್ರವೇಶ ಮಾಡುವಂತಿರಲಿಲ್ಲ. ಎಲ್ಲರೂ ಗಂಗಾತಟದಲ್ಲಿ ತಾತ್ಪೂರ್ತಿಕವಾಗಿ ಹಾಕಿದ ಗುಡಿಸಲುಗಳಲ್ಲಿ ವಾಸಿಸತೊಡಗಿದರು. ವ್ಯಾಸ ನಾರದ ಮೊದಲಾದ ಋಷಿಗಳು ಯುಧಿಷ್ಠಿರನನ್ನು ನೋಡುವುದಕ್ಕೆಂದು ಬಂದರು. ನಾರದನು, “ಏಕೆ ಇಷ್ಟೊಂದು ದುಃಖದಲ್ಲಿ ಮುಳುಗಿಹೋಗಿದ್ದೀಯೆ? ಕೃಷ್ಣನ ಕೃಪೆಯಿಂದ ಹಾಗೂ ತಮ್ಮಂದಿರ, ಪಾಂಚಾಲರ ಶೌರ್ಯದಿಂದ ಈಗ ನೀನು ಭೂಮಂಡಲಕ್ಕೇ ಒಡೆಯನಾಗಿದ್ದೀಯೆ. ನಿನ್ನ ಯಾತನೆಯ ವರ್ಷಗಳು ಕಳೆದವು. ನಿನ್ನ ಯಶಸ್ಸಿಗಾಗಿ ಅಭಿನಂದಿಸುತ್ತೇನೆ’’ ಎಂದು ಹೇಳಿದೊಡನೆ ಯುಧಿಷ್ಠಿರನ ದುಃಖದ ಕಟ್ಟೆ ಒಡೆಯಿತು. “ಮಹರ್ಷಿ, ನಾನು ಸುಖವಾಗಿರುವುದನ್ನು ಪಡೆದು ಬರಲಿಲ್ಲ. ರಾಧೇಯ ನಮ್ಮ ಅಣ್ಣ ಎಂದು ಅಮ್ಮ ಹೇಳಿದೊಡನೆ ಯುದ್ಧದ ಜಯದಿಂದ ನಮ್ಮದಾಗಬಹುದಾಗಿದ್ದ ಸಂತೋಷವೆಲ್ಲ ಹೊರಟುಹೋಯಿತು. ಇಂಥಾದೊಂದು ಘಟಿಸುವುದು ಹೇಗೆ ಸಾಧ್ಯವಾಯಿತು? ಯುದ್ಧಕ್ಕೆ ಮುಂಚೆ ಒಮ್ಮೆ ಅವನನ್ನು ಭೇಟಿಯಾಗಿದ್ದೆ ಎಂದು ಅಮ್ಮ ಹೇಳುತ್ತಾಳೆ. ತಮ್ಮಂದಿರೊಟ್ಟಿಗೆ ಬಂದು ಸೇರಿಕೋ ಎಂದು ಕೇಳಿಕೊಂಡಳಂತೆ. ಕೃಷ್ಣನೂ ಕೇಳಿದನಂತೆ; ಆದರೂ ಅವನು ತನ್ನ ಗೆಳೆಯನನ್ನು ಕೈ ಬಿಟ್ಟು ಬರಲೊಲ್ಲ. ರಾಧೇಯನನ್ನು ಅವಲಂಬಿಸಿಯೇ ದುರ್ಯೋಧನನು ಯುದ್ಧವನ್ನಾರಂಭಿಸಿದ್ದು. ರಾಜ, ಯಜಮಾನ, ಗೆಳೆಯ ಮೂರೂ ಆಗಿದ್ದ ಅವನಿಗೆ ದ್ರೋಹ ಬಗೆಯುವ ಸ್ವಭಾವವಲ್ಲ ನನ್ನ ಅಣ್ಣನದು. ಪಾಂಡವರು ತನ್ನ ತಮ್ಮಂದಿರು ಎಂದು ತಿಳಿದಾಗ ಅವನಿಗೆಷುವೇದನೆಯಾಗಿರಬಹುದು! ಅದೆಲ್ಲವನ್ನೂ ತನ್ನಲ್ಲಿಯೇ ನುಂಗಿಕೊಂಡ; ಕರ್ತವ್ಯಚ್ಯುತನಾಗಲಿಲ್ಲ. ಇಂಥ ನಮ್ಮಣ್ಣನನ್ನು ನಾವೇ ನಮ್ಮ ಕೈಯಾರೆ ಕೊಂದೆವು. ಅವನು ಸತ್ತಾಗ ನಾನು ಪಟ್ಟ ಸಂತೋಷವೆಷ್ಟು! ದ್ವಂದ್ವಯುದ್ಧದ ಸಂದರ್ಭದಲ್ಲಿ ನಾನು ಅವನನ್ನು ಸೂತಪುತ್ರನೆಂದು ಜರಿದೆ. ಅವನು ನನ್ನನ್ನು ಸೋಲಿಸಿ ಅಪಮಾನಿಸಿದ. ನಮ್ಮನ್ನು ಹೀಗೆ ಬೇರ್ಪಡಿಸಿಟ್ಟಿದ್ದ ಇದು ಎಂಥ ವಿಧಿ, ದೇವ? ನಾವು ಅವನ ತಮ್ಮಂದಿರು ಎಂದು ಗೊತ್ತಿದ್ದರೂ.ನಮಗೆ ಅದನ್ನು ಹೇಳಲೊಲ್ಲ.

“ಹಸ್ತಿನಾಪುರದ ಆಸ್ಥಾನದಲ್ಲಿನ ಆ ದಿನ ನೆನಪಾಗುತ್ತದೆ. ದ್ರೌಪದಿಯನ್ನು ಎಲ್ಲರೂ ಅಪಮಾನಿಸಿದರು; ಅದರಲ್ಲಿ ರಾಧೇಯನೇ ಮುಂದು. ನಾನು ಕೋಪದಿಂದಲೂ ನಾಚಿಕೆಯಿಂದಲೂ ತಲೆ ತಗ್ಗಿಸಿ ಕುಳಿತಿದ್ದೆ. ಅವನ ಕಡೆಗೆ ತಿರುಗಿದೆ. ದೃಷ್ಟಿ ಮೇಲೆತ್ತಿ ನೋಡಲಿಲ್ಲ; ಪಾದಗಳನ್ನಷ್ಟೇ ನೋಡಿದೆ; ತಕ್ಷಣ ಅವನ ಮೇಲಣ ನನ್ನ ಕೋಪ ಶಮನವಾಯಿತು. ಅನಂತರ ಕೋಪವೇ ಬರಲಿಲ್ಲ. ಅವನ ಪಾದಗಳು ನಮ್ಮಮ್ಮನ ಪಾದಗಳಂತೆಯೇ ಇದ್ದವು. ಇದನ್ನು ನೋಡಿ ನನಗೆ ಆಶ್ಚರ್ಯವಾಗಿತ್ತು. ವರ್ಷಗಟ್ಟಲೆ ಇದನ್ನು ನೆನಪಿಟ್ಟುಕೊಂಡಿದ್ದೇನೆ, ಸಮಸ್ಯೆ ಬಿಡಿಸಲು ಪ್ರಯತ್ನಿಸಿದ್ದೇನೆ: ಸೂತಪುತ್ರನಾದ ರಾಧೇಯನ ಕಾಲುಗಳು ಅಮ್ಮನ ಕಾಲುಗಳನ್ನು ಹೋಲುವುದು ಹೇಗೆ? ಅಯೋ ದೇವ, ಆ ಹೋಲಿಕೆ ಇದ್ದದ್ದು ಹೇಗೆ ಎಂದು ಈಗ ತಿಳಿದ ಮೇಲೆ, ನನ್ನ ಹೃದಯ ಸಾವಿರ ಹೋಳಾಗಿ ಒಡೆದುಹೋಗುತ್ತಿದೆ! ಕುರುರಾಜ್ಯದ ಸಾಮ್ರಾಟನಾಗಬೇಕಾಗಿದ್ದ ಈ ಮಹನೀಯನನ್ನು, ಈ ನನ್ನಣ್ಣ ರಾಧೇಯನನ್ನು ಕೊಂದಮೇಲೂ ನಾನು ಹೇಗೆ ಸುಖವಾಗಿರಲಿ? ನನಗೆ ಎಂದೆಂದಿಗೂ, ಯಾವುದರಿಂದಲೂ ಶಾಂತಿಯಿಲ್ಲ, ಇರಲು ಸಾಧ್ಯವಿಲ್ಲ.

“ಅಮ್ಮ ಹೇಳುತ್ತಾಳೆ, ಅರ್ಜುನನ್ನುಳಿದು ಉಳಿದ ಪಾಂಡವರನ್ನು ಕೊಲ್ಲುವುದಿಲ್ಲ ಎಂದು ಅವನು ತಾನಾಗಿ ತಾನು ಒಂದು ವರ ಕೊಟ್ಟನೆಂದು. ಅರ್ಜುನನೊಂದಿಗೆ ಮಾತ್ರವೇ ಅವನು ನಿಜವಾಗಿ ದ್ವಂದ್ವಯುದ್ಧ ಮಾಡಬೇಕಾಗಿದ್ದುದು. ಅದೂ ದುರ್ಯೋಧನನನ್ನು ಮೆಚ್ಚಿಸುವುದಕ್ಕಾಗಿ. ಜಯದ್ರಥ ಸತ್ತ ದಿವಸ ಭೀಮ ತನ್ನ ಕೈಗೆ ಸಿಕ್ಕಿಕೊಂಡಿದ್ದರೂ, ರಾಧೇಯನು ಏಕೆ ಕೊಲ್ಲದೆ ಕೇವಲ ಅವಮಾನಿಸಿ ಬಿಟ್ಟುಬಿಟ್ಟ ಎಂದು ನನಗೀಗ ಅರ್ಥವಾಗುತ್ತಿದೆ. ಅದೇ ರಾತ್ರಿ ಸಹದೇವನೊಂದಿಗೆ ದ್ವಂದ್ವಯುದ್ಧ ಮಾಡಿದ. ಮಾರನೆಯ ದಿನ ನಕುಲನ ಜೊತೆಗೆ. ಕೊನೆಯ ದಿನ ನನ್ನಜೊತೆಗೆ. ನಮ್ಮೆಲ್ಲರನ್ನೂ ಕೇವಲ ಅವಮಾನಿಸಿ ಬಿಟ್ಟುಬಿಟ್ಟ. ನಮ್ಮನ್ನೇಕೆ ಕೊಲ್ಲಲಿಲ್ಲ ಎಂದರೆ, ಕೊಲ್ಲಲು ಇಚ್ಛಿಸಲಿಲ್ಲ ಅಷ್ಟೆ. ಎಂಥ ಪ್ರೀತಿಯ ಅಣ್ಣ, ಎಂಥ ಮಾನೋನ್ನತಿಯ ಅಣ್ಣ! ಅಂಥವನನ್ನು ಅರ್ಜುನ, ಅವನು ಅಸಹಾಯನಾಗಿದ್ದಾಗ ಕೊಂದ ! ಇದನ್ನು ಹೇಗೆತಾನೆ ತಾಳಿಕೊಳ್ಳಲಿ, ಹೇಗೆತಾನೆ ಕ್ಷಮಿಸಿಕೊಳ್ಳಲಿ? ಈ ಮಹಾಯುದ್ಧದಲ್ಲಿ ನಮ್ಮಷ್ಟು ಅಧರ್ಮದ ಯುದ್ಧ ಮಾಡಿದವರು ಇನ್ನಾರೂ ಇರಲು ಸಾಧ್ಯವೇ !’’ ಎಂದು ವಿಧವಿಧವಾಗಿ ವಿಲಾಪಿಸಿದ.

ನಾರದನು ಅನನನ್ನು ಸಮಾಧಾನ ಮಾಡಿದ. ರಾಧೇಯನನ್ನು ಯಾರೂ ಕೊಲ್ಲುವುದು ಸಾಧ್ಯವೇ ಇರಲಿಲ್ಲ. ಇಂದ್ರನು ಕವಚಕುಂಡಲಗಳನ್ನು ಕಿತ್ತುಕೊಂಡದ್ದು ಹಾಗೂ ಬ್ರಾಹ್ಮಣಶಾಪ ಈ ಎರಡರಿಂದ ಮಾತ್ರವೇ ರಾಧೇಯ ಸಾಯುವಂತಾದದ್ದು. ರಾಧೇಯನ ಜೀವನದ ಎಲ್ಲ ವಿವರಗಳನ್ನೂ ನಾರದ ಎಳೆಎಳೆಯಾಗಿ ಬಿಚ್ಚಿಟ್ಟ. ಅವನ ಬಳಿಸಾರುವ ಅದೃಷ್ಟವಿದ್ದ ಎಲ್ಲರನ್ನೂ ಪುನೀತರನ್ನಾಗಿಸಿದ, ಪರಿಶುದ್ಧರನ್ನಾಗಿಸಿದ ಅದು

ತ ಚೇತನ ಅವನದು. ಪಾಂಡವರನ್ನು ಹದಕ್ಕೆ ತಂದು ವಿನೀತರನ್ನಾಗಿಸಿದ. ವಿಧಿಯ ಕಾರ್ಯವೈ

ರಿಯ ಅದ್ಬುತವನ್ನು ಮನದಟ್ಟುಮಾಡಿಕೊಟ್ಟ. ಆದರೆ ಪಾಂಡವರ ಹೃದಯದ ದುಃಖ ಹಾಗೆಯೇ ಉಳಿಯಿತು. ಅದು ವಾಸಿಯಾಗದ ಗಾಯ.

ಯುಧಿಷ್ಠಿರ ತಾಯಿಯು ತಮಗೂ ರಾಧೇಯನಿಗೂ ಮಾಡಿದ ಅನ್ಯಾಯವನ್ನು ಕ್ಷಮಿಸಲಾರದಾದ. ಕುಂತಿ ಸಂಗತಿಯನ್ನು ಕೊನೆಯವರೆಗೂ ಗುಟ್ಟಾಗಿಟ್ಟಿದ್ದರಿಂದಲೇ ಈ ಎಲ್ಲ ದುರಂತ ಸಂಭವಿಸಿದ್ದು; ಆದ್ದರಿಂದ, ಇಲ್ಲಿಂದ ಮುಂದೆ ಹೆಂಗಸರ ಹೃದಯದಲ್ಲಿ ಗುಟ್ಟು ನಿಲ್ಲದಿರಲಿ ಎಂದು ಇಡೀ ಸ್ತ್ರೀ ಸಮುದಾಯವನ್ನೇ ಅವನು ಶಪಿಸಿದ.

ಅಷ್ಟೊಂದು ನೋವು ತಿಂದು, ರಕ್ತಪಾತ ಮಾಡಿ ಗೆದ್ದ ರಾಜ್ಯದ ಬಗ್ಗೆ ಯುಧಿಷ್ಠಿರನಿಗೆ ಆಸಕ್ತಿಯೇ ಉಳಿಯಲಿಲ್ಲ. ಎಲ್ಲವನ್ನೂ ಬಿಟ್ಟುಕೊಟ್ಟು ಅರಣ್ಯವಾಸಕ್ಕೆ ಹೋಗಿಬಿಡುವುದೆಂದು ಯೋಚಿಸತೊಡಗಿದ. ಅದು ತಪ್ಪು ಧೋರಣೆ ಎಂದು ಯಾರು ಹೇಳಿದರೂ ಕೇಳಲೊಲ್ಲ. ಸುಮ್ಮನೆ ಕುಳಿತು ಯುದ್ಧದಲ್ಲಿ ಸತ್ತವರನ್ನು ನೆನೆಪಿಸಿಕೊಂಡು ದುಃಖಿಸುತ್ತಿದ್ದ. ಎಲ್ಲಕ್ಕೂ ತಾನೇ ಕಾರಣ ಎಂದೆನಿಸತೊಡಗಿತು. ಭೀಮ ಅರ್ಜುನ ನಕುಲ ಸಹದೇವ ದ್ರೌಪದಿ ಎಲ್ಲರೂ ಸೇರಿ ಸಮಾಧಾನ ಮಾಡಿದರೂ ಖಿನ್ನತೆ ಹೋಗಲೊಲ್ಲದು. ಯುಧಿಷ್ಠಿರ ಖಿನ್ನತೆಯ ಅಳದಲ್ಲಿ ಮುಳುಗಿದ್ದ. ವ್ಯಾಸ, ನಾರದ ಮುಂತಾದವರು ಕಷ್ಟಪಟ್ಟು ಅವನನ್ನು ಕ್ರಮೇಣ ದುಃಖದಾಳದಿಂದ ಮೇಲೆ ತಂದರು. ಕೊನೆಗೂ ಯುಧಿಷ್ಠಿರನು ರಾಜನಾಗಿ ತನ್ನ ಕರ್ತವ್ಯಗಳನ್ನು ಮಾಡತಕ್ಕುದು ಎಂಬ ತೀರ್ಮಾನಕ್ಕೆ ಬರುವಂತಾಯಿತು. ರಾಜನಾದವನಿಗೆ ತನ್ನ ವೈಯಕ್ತಿಕ ವ್ಯಕ್ತಿತ್ವವೆಲ್ಲಿ? ಪ್ರಜೆಗಳ ಪಾಲಿಗೆ ರಾಜನು ದೇವರಾದರೆ, ರಾಜನ ಪಾಲಿಗೆ ಪ್ರಜೆಗಳೇ ದೇವರು. ಪ್ರಜಾಪರಿಪಾಲನೆ ಅವನ ಕರ್ತವ್ಯ. ಅದರಿಂದಾಚೆಗೆ ಅವನಿಗೆ ಅಸ್ತಿತ್ವವಿಲ್ಲ. ಪ್ರಜೆಗಳಿಗೆ ಅವನು ತಂದೆಯಂತಿರಬೇಕು; ಅದು ಅವರ ಹಕ್ಕು ಎಂದು ಅವನಿಗೆ ತಿಳಿಸಿ ಹೇಳಲಾಯಿತು.

ಇದೆಲ್ಲವನ್ನೂ ಅರಿತುಕೊಂಡ ಯುಧಿಷ್ಠಿರನು, “ಓ ಮಹರ್ಷಿ! ನನ್ನ ಮನಸ್ಸಿನ ಮೇಲೆ ಕವಿದಿದ್ದ ದುಃಖದ ಮೋಡ ಚದುರಿತು. ಕತ್ತಲೆಯ ಕಮರಿಯ ಮೂಲಕ ಹಾದುಬಂದು ಸೂರ್ಯನ ಬೆಳಕಿನಲ್ಲಿ ನಿಂತಿದ್ದೇನೆ. ರಾಜನು ಅನುಸರಿಸಬೇಕಾದ ನಡತೆಯ ನಿಯಮಗಳೇನು? ರಾಜ್ಯಾಡಳಿತದ ನಿಯಮಗಳಾವುವು? ನನಗೆ ಇದೊಂದೂ ತಿಳಿಯದು. ನೀವುಗಳೆಲ್ಲ ನನಗೆ ತಿಳಿಸಿಕೊಟ್ಟು ನನ್ನನ್ನು ಸರಿಯಾದ ಮಾರ್ಗದಲ್ಲಿ ಮುನ್ನಡೆಸಬೇಕು. ಈ ದೊಡ್ಡ ಜವಾಬ್ದಾರಿಯನ್ನು ಹೊತ್ತುಕೊಳ್ಳುವ ಮುನ್ನ ರಾಜ್ಯಾಡಳಿತದ ಬಗ್ಗೆ ನಾನು ಎಲ್ಲವನ್ನೂ ನಾನು ತಿಳಿದುಕೊಳ್ಳಬೇಕು. ನನ್ನ ಹಿರಿಯರು ನಡೆದು ಬಂದ ದಾರಿಯಲ್ಲೇ ನಾನು ನಡೆಯುವಂತೆ ಮಾಡಿ ಅನುಗ್ರಹಿಸಿರಿ” ಎನ್ನಲು, ವ್ಯಾಸನು ಸಂತೋಷದಿಂದ ನಗುತ್ತ, “ನಿನಗೆ ರಾಜ್ಯಾಡಳಿತದ ಬಗ್ಗೆ ಅಷ್ಟೊಂದು ಕುತೂಹಲವಿರುವುದಾದರೆ ನೀನು ಭೀಷ್ಮನನ್ನು ಕೇಳಿ ತಿಳಿದುಕೊಳ್ಳಬೇಕು. ಅವನು ಇದರಲ್ಲೆಲ್ಲ ಪ್ರಕಾಂಡ ಪಂಡಿತ. ಅವನನ್ನು ಚಂದ್ರವಂಶದ ದೊರೆಯನ್ನಾಗಿ ಮಾಡಲು ಅವನ ತಾಯಿ ಗಂಗೆಯು ಸ್ವರ್ಗಕ್ಕೆ ಕರೆದೊಯ್ದು ಬೃಹಸ್ಪತಿಯಿಂದ ರಾಜ್ಯಶಾಸ್ತ್ರವನ್ನೂ ಶುಕ್ರಾಚಾರ್ಯರಿಂದ ನೀತಿಶಾಸ್ತ್ರವನ್ನೂ ವಿಧಿವತ್ತಾಗಿ ಕಲಿಸಿರುವಳು. ಶಂತನುವಿನ ನಂತರ ಅವನೇ ರಾಜನಾಗಬೇಕಾಗಿದ್ದಿತು. ಈ ವಿಚಾರಗಳಲ್ಲಿ ದೇವವ್ರತನಿಗೆ ಸಮಾನರಾದವರು ಯಾರು ಇಲ್ಲ. ಅಷ್ಟವಸುಗಳಲ್ಲಿ ಒಬ್ಬನಾದ ಅವನು ಯಾವಾಗಲೂ ದೇವತೆಗಳ ಸಹವಾಸದಲ್ಲಿದ್ದವನು. ಭಾರ್ಗವನು ಅವನಿಗೆ ಧನುರ್ವಿದ್ಯಾಗುರು. ವಸಿಷ್ಠನಿಂದ ಅವನು ವೇದವೇದಾಂಗಗಳನ್ನೂ, ಮಾರ್ಕಂಡೇಯನಿಂದ ತ್ಯಾಗವನ್ನೂ ಕಲಿತಿರುವನು. ಅವನು ಮೃತ್ಯುರಹಸ್ಯವನ್ನೂ ಸಹ ಬಲ್ಲವನು. ಇವುಗಳೆಲ್ಲವನ್ನೂ ಕುರಿತು ಅವನು ನಿನಗೆ ಹೇಳಿದರೆ, ಅದು ನಿನ್ನ ಅದೃಷ್ಟವೆಂದೇ ತಿಳಿ. ವಿನೀತನಾಗಿ, ಇಚ್ಛಾಪೂರ್ವಕವಾಗಿ ಬಳಿಸಾರಿದರೆ, ಆ ಮಹಾತ್ಮನು ಸಂತೋಷದಿಂದ ತನಗೆ ತಿಳಿದುದನ್ನೆಲ್ಲಾ ಹೇಳುವನು. ಭೀಷ್ಮನ ಬಳಿಗೆ ಈಗಲೇ ಹೋಗಿ ಕೇಳು. ಶರಶಯ್ಯೆಯಲ್ಲಿ ಮಲಗಿ ಅವನು ತನ್ನ ಮೃತ್ಯುವನ್ನು ನಿರೀಕ್ಷಿಸುತ್ತಿರುವನು” ಎಂದನು. ಯುಧಿಷ್ಠಿರನು, “ಓ ಮಹರ್ಷಿ! ಆ ಮಹಾತ್ಮನ ಸನ್ನಿಧಿಯಲ್ಲಿ ಹೋಗಿ ನಾನು ಹೇಗೆತಾನೆ ನಿಲ್ಲಲಿ? ದಾಯಾದಿಗಳೆಲ್ಲರ ನಾಶಕ್ಕೆ ಕಾರಣನು ನಾನು. ಇಂತಹ ಪಾಪವನ್ನು ಮಾಡಿರುವ ನನಗೆ ಅವನಲ್ಲಿಗೆ ಹೋಗಿ ನಿಲ್ಲುವ ಧೈರ್ಯವೆಲ್ಲಿ?” ಎನ್ನಲು, ಕೃಷ್ಣನು, “ಕಳೆದುಹೋದುದರ ಬಗ್ಗೆ ಅಷ್ಟೊಂದು ಸೂಕ್ಷ್ಮನಾಗಬೇಡ ಯುಧಿಷ್ಠಿರ. ಇದಕ್ಕೆಲ್ಲ ವಿಧಿಯೇ ಕಾರಣ, ನೀನಲ್ಲ ಎಂಬುದು ಎಲ್ಲರಿಗೂ ಗೊತ್ತು. ವ್ಯಾಸನ ಮಾತನ್ನು ಕೇಳು; ಭೀಷ್ಮನ ಬಳಿಗೆ ಹೋಗು. ಇನ್ನೂ ಎಷ್ಟೋ ವರ್ಷಗಳವರೆಗೆ ನೀನು ಆಳಬೇಕಾದ ರಾಜ್ಯದ ಹಿತದೃಷ್ಟಿಯಿಂದಲೂ ಅದು ಒಳ್ಳೆಯದು. ಮಹಾತ್ಮನಾದ ಭೀಷ್ಮನಿಗೆ ಕೌರವರ ಭವಿಷ್ಯವು ಗೊತ್ತಿತ್ತು. ಅದರ ಬಗ್ಗೆ ಸಂದೇಹ ಬೇಡ. ವ್ಯಾಸನು ಹೇಳಿದಂತೆ ಮಾಡು” ಎಂದನು. ಅವರೆಲ್ಲರ ಸಲಹೆಯಂತೆ, ಯುಧಿಷ್ಠಿರನು ಭೀಷ್ಮನ ಬಳಿಗೆ ಹೋಗಿ ರಾಜ್ಯವಾಳುವುದು ಹೇಗೆಂಬ ಬಗ್ಗೆ ತಿಳಿಯಬೇಕು ಎಂದು ತೀರ್ಮಾನಿಸಿದನು.

* * * * 


ತಿಂಗಳ ಸೂತಕ ಮುಗಿಯಿತು. ಈಗ ಅವರು ಹಸ್ತಿನಾಪುರಕ್ಕೆ ಹೋಗಬಹುದಾಗಿತ್ತು. ಯುಧಿಷ್ಠಿರನ ಮನಸ್ಸು ಶಾಂತವಾಗಿತ್ತು. ಹಗಲು ರಾತ್ರಿ ಋಷಿಗಳ ಜೊತೆಗೆ ಕಾಲ ಕಳೆದುದರಿಂದ ಇಷ್ಟು ವರ್ಷಗಳೂ ಗಗನಕುಸುಮವಾಗಿದ್ದ ಮನಶ್ಶಾಂತಿ ಯುಧಿಷ್ಠಿರನಿಗೆ ನಿಜವಾಗಿ ದೊರಕಿತ್ತು. ಈಗ ಪ್ರತಿಯೊಂದರ ಮೌಲ್ಯವನ್ನೂ ಅವನು ಅರಿತುಕೊಂಡನು. ಯುಧಿಷ್ಠಿರನಂತಹ ಸೂಕ್ಷ್ಮಪ್ರಕೃತಿಯವನಿಗೆ ದಾಯಾದಿಗಳ ರಕ್ತದಿಂದ ಕಲುಷಿತವಾದ ರಾಜ್ಯವನ್ನಾಳುವುದೆಂದರೆ ಬಹುಕಷ್ಟದ ಸಂಗತಿಯೇ. ಮಹರ್ಷಿಗಳ ಸಹವಾಸದಿಂದ ದೊರಕಿದ ಸಮಾಧಾನ ಅವನಿಗೆ ತನ್ನ ನಿಜವಾದ ಸ್ಥಾನವನ್ನು ಅರಿತುಕೊಳ್ಳುವಂತೆ ಮಾಡಿತು. ಸಂತೋಷವಾಗಿದ್ದು, ರಾಜ್ಯಸೂತ್ರಗಳನ್ನು ಕೈಗೆತ್ತಿಕೊಳ್ಳುವ ದಿನವನ್ನು ಎದುರುನೋಡತೊಡಗಿದನು. ತಾನು ಈ ಸ್ಥಾನಕ್ಕೆ ಯೋಗ್ಯನೆನಿಸಬೇಕೆಂಬ ಅಭಿಲಾಷೆ ಮನಸ್ಸಿನಲ್ಲಿತ್ತು. ವ್ಯಾಸನ ಸಲಹೆಯಂತೆ ಮಾಡಲು ನಿರ್ಧರಿಸಿದನು.

ವೃದ್ಧರಾಜನನ್ನು ಮುಂದಿಟ್ಟುಕೊಂಡು ಎಲ್ಲರೂ ಹಸ್ತಿನಾಪುರಕ್ಕೆ ಹೊರ

ರು. ಪುರಜನರು ಹೊಸ ರಾಜನಾದ ಯುಧಿಷ್ಠಿರನು ಹದಿನಾರು ಶ್ವೇತವೃಷಭಗಳನ್ನು ಹೂಡಿದ ರಥದಲ್ಲಿ ಬರುತ್ತಿರುವುದನ್ನು ನೋಡಿ ತಣಿದರು. ಭೀಮನ ಕೈಯಲ್ಲಿ ಕಡಿವಾಣವಿದ್ದಿತು. ಅರ್ಜುನನು ಅಣ್ಣನ ಮೇಲೆ ಶ್ವೇತಚ್ಛತ್ರವನ್ನು ಹಿಡಿದಿದ್ದನು. ಎರಡು ಪಾರ್ಶ್ವಗಳಲ್ಲಿಯೂ ನಕುಲಸಹದೇವರುಗಳು ನಿಂತು ರಾಜನಿಗೆ ಚಾಮರವನ್ನು ಬೀಸುತ್ತಿದ್ದರು. ಇಷ್ಟರಲ್ಲಿ ದುಃಖವನ್ನು ಪುರಜನರೂ ಮರೆತಿದ್ದು, ಉತ್ಸವವನ್ನು ನೋಡಿ ಆನಂದಿಸಿದರು. ಯುಧಿಷ್ಠಿರನ ರಥದ ಹಿಂದಿನ ರಥದಲ್ಲಿ ಧೃತರಾಷ್ಟ್ರನ ಉಳಿದ ಒಬ್ಬನೇ ಮಗನಾದ ಯುಯುತ್ಸುವಿದ್ದನು. ಅನಂತರ ಬಂದ ರಥದಲ್ಲಿ ಕೃಷ್ಣನೂ ಸಾತ್ಯಕಿಯೂ ಕುಳಿತಿದ್ದರು. ಆ ನಂತರದ ಪಲ್ಲಕ್ಕಿಗಳಲ್ಲಿ ಅರಮನೆಯ ಮಹಿಳೆಯರು ಬಂದಿಳಿದರು. ಅನಂತರ ಆನೆಕುದುರೆಗಳ, ಪದಾತಿಗಳ ಮೆರವಣಿಗೆ. ಎಲ್ಲರೂ ಸಂತೋಷೋತ್ಸಾಹಗಳಿಂದ ಜಯಜಯಕಾರ ಮಾಡುತ್ತಿದ್ದರು.

ಧೃತರಾಷ್ಟ್ರನನ್ನು ಅನುಸರಿಸಿ ಯುಧಿಷ್ಠಿರನು ಕುರುಸಭೆಯನ್ನು ಪ್ರವೇಶಿಸಿದನು. ಸಭೆಯು ಪುರಜನರಿಂದಲೂ ಆಶೀರ್ವಚನಗಳನ್ನು ಪಠಿಸುತ್ತಿದ್ದ ಬ್ರಾಹ್ಮಣರಿಂದಲೂ ತುಂಬಿದ್ದಿತು. ಕೃಷ್ಣನು ಯುಧಿಷ್ಠಿರನನ್ನು ಕೈಹಿಡಿದು ಕರೆದೊಯ್ದು ಕೌರವ ಸಿಂಹಾಸನವನ್ನು ಆರೋಹಣ ಮಾಡಿಸಿದನು. ಅವನ ಕಣ್ಣುಗಳಿಂದ ಆನಂದಬಾಷ್ಪಗಳು ಉದುರುತ್ತಿದ್ದವು. ಯುಧಿಷ್ಠಿರನನ್ನು ಸಿಂಹಾಸನದ ಮೇಲೆ ಕುಳ್ಳಿರಿಸುವೆನೆಂಬ ಅವನ ಪ್ರತಿಜ್ಞೆಯು ಇಂದು ಪೂರೈಸಿತು. ಸಿಂಹಾಸನದೆದುರಿನ ರತ್ನ ಖಚಿತವಾದ ಆಸನಗಳಲ್ಲಿ ಕೃಷ್ಣನೂ ಸಾತ್ಯಕಿಯೂ ಕುಳಿತರು. ಭೀಮಾರ್ಜುನರು ರಾಜನ ಅಕ್ಕಪಕ್ಕಗಳಲ್ಲಿ ಕುಳಿತರು. ಇವರಿಬ್ಬರ ಪಕ್ಕಗಳಲ್ಲಿ ನಕುಲ ಸಹದೇವರುಗಳು ಆಸೀನರಾದರು. ಕುಂತಿಯು ತನ್ನ ಪ್ರೀತಿಯ ಸಹದೇವನ ಜೊತೆಗೆ ಏಕಾಸನದಲ್ಲಿ ಕುಳಿತಳು. ಧೃತರಾಷ್ಟ್ರ ಗಾಂಧಾರಿಯರು ಯುಕ್ತ ಆಸನಗಳಲ್ಲಿ ಪ್ರತಿಷ್ಠಿತರಾದರು. ವಿದುರನೂ ಯುಯುತ್ಸುವೂ ಅವರ ಜೊತೆಯಲ್ಲಿ ಕುಳಿತರು. ಪುರೋಹಿತರು ರಾಜಮುಕುಟವನ್ನು ಯುಧಿಷ್ಠಿರನಿಗೆ ತೊಡಿಸಿದನು. ಮೃದುವಾದ ವೀಣಾರವ ಹಿನ್ನೆಲೆಯಲ್ಲಿ ಕೇಳಿಬರುತ್ತಿತ್ತು. ಬ್ರಾಹ್ಮಣರಿಂದ ವೇದಘೋಷವಾಗುತ್ತಿದ್ದಿತು. ಅದೊಂದು ಸಂಭ್ರಮದ ಕ್ಷಣ. ನಗರಪಿತೃಗಳು ಬಂದು ನಾಲ್ಕು ಒಳ್ಳೆಯ ಮಾತನ್ನಾಡಿದರು. ನಕ್ಷತ್ರಗಳ ನಡುವಣ ಚಂದ್ರನಂತೆ ಶೋಭಿಸುತ್ತಿದ್ದ ಯುಧಿಷ್ಠಿರನು ಸಂದರ್ಭೋಚಿತವಾಗಿ ಮಾತನಾಡಿ, “ನಿಮ್ಮಿಂದ ನಾನು ಬಹು ಪುರಸ್ಕೃತನಾಗಿದ್ದೇನೆ. ಒಳೆಯ ರಾಜನಾಗಿರಲು ನಾನು ಪ್ರಯತ್ನಿಸುವೆ. ಈ ಎಲ್ಲ ವರ್ಷಗಳಲ್ಲಿದ್ದಂತೆ ನಮ್ಮ ದೊಡ್ಡಪ್ಪ ಮಹಾರಾಜನಾಗಿ ಮುಂದುವರೆಯುತ್ತಾನೆ. ಅವನು ನಮಗೆ ಹಿರಿಯನಾಗಿರುವಂತೆ ರಾಜ್ಯಕ್ಕೂ ಹಿರಿಯ. ಅವನ ಸೇವಕನಾಗಿದ್ದುಕೊಂಡು ನಾನು ರಾಜ್ಯಾಡಳಿತದಲ್ಲಿ ಅವನಿಗೆ ಸಹಕಾರ ನೀಡುವೆ. ನನ್ನ ಸೋದರರೂ ಸಹಕಾರ ನೀಡುವರು” ಎಂದನು. ಯೋಗ್ಯ ಜನಸನ್ಮಾನದ ಅನಂತರ ಸಭೆ ಮುಕ್ತಾಯಗೊಂಡಿತು.

ಯುಧಿಷ್ಠಿರನು ಭೀಮನಿಗೆ ಯುವರಾಜ ಪಟ್ಟಾಭಿಷೇಕವನ್ನು ಮಾಡಿಸಿದ. ರಾಜ್ಯದ ರಕ್ಷಣಾ ಮಂತ್ರಿಯಾದ ವಿದುರನು ಅವನಿಗೆ ಆಪ್ತ ಸಲಹೆಗಾರನೂ ಆದ. ಸಂಜಯನು ಅರ್ಥಮಂತ್ರಿಯಾದ; ನಕುಲನ ಸಹಾಯದೊಂದಿಗೆ ಸೈನ್ಯಾಧಿಪತಿಯಾದ ಅರ್ಜುನನಿಗೇ ವಿದೇಶವ್ಯವಹಾರವೂ ಬಂದಿತು. ಧೌಮ್ಯನು ರಾಜಪುರೋಹಿತನಾದ. ಸಹದೇವನು ರಾಜನ ಅಂಗರಕ್ಷಕನೆನಿಸಿಕೊಂಡ. ಯುಯುತ್ಸುವನ್ನು ಧೃತರಾಷ್ಟ್ರನಿಗೆ ಆಸರೆಯಾಗಿರುವಂತೆಯೂ, ಪ್ರಾಂತ್ಯವ್ಯವಹಾರಗಳನ್ನು ನೋಡಿಕೊಳ್ಳುವಂತೆಯೂ ಕೇಳಿಕೊಳ್ಳಲಾಯಿತು. ಕೃಷ್ಣನು ಇದೆಲ್ಲವನ್ನೂ ನೋಡಿ ಸಂತೋಷಿಸಿದ.

* * * * 


ಗತಿಸಿದ ವೀರರ ಕರ್ಮಾಂತರಗಳೆಲ್ಲ ವೈಭವದಿಂದ ಜರುಗಿದವು. ಎಲ್ಲವೂ ಮುಗಿದ ಮೇಲೆ ಯುಧಿಷ್ಠಿರನು ಕೃಷ್ಣನ ಬಳಿಗೆ ಬಂದು ಕೈಮುಗಿದುಕೊಂಡು, “ನೀನು ನನ್ನ ರಾಜ್ಯವನ್ನು ನನಗೆ ಪುನಃ ಕೊಡಿಸಿರುವೆ. ನನಗಾಗಿ ಅಷ್ಟೆಲ್ಲ ಕಷ್ಟಪಟೆ. ಪರಮಾತ್ಮನೆಂದು ಪೂಜೆಗೊಳ್ಳುವ ನೀನು ವಿಶೇಷ ಪ್ರೀತಿಯಿಂದ ನಮ್ಮ ನಡುವೆ ಮಾನವರೂಪಿನಿಂದ ಮಾನವನಂತೆ ಇದ್ದುಬಿಟ್ಟಿರುವೆ. ದೇವಾಧಿದೇವನಾದ ನೀನು ಸಾಮಾನ್ಯ ಮಾನವನಂತೆ ಸುಖದುಃಖಗಳನ್ನು ಅನುಭವಿಸಿದೆ; ನಾವು ಅತ್ತಾಗ ಅತ್ತು ನಕ್ಕಾಗ ನಗುತ್ತಿದ್ದೆ. ಸತ್ಯಪಥದಲ್ಲಿ ನಮ್ಮನ್ನು ಮುನ್ನಡೆಸಿದೆ. ಹೃದಯದ ಭಾವ ತುಂಬಿ ಬಂದಾಗ ನನಗೆ ಏನು ಹೇಳಬೇಕೋ ಗೊತ್ತಾಗುವುದಿಲ್ಲ. ನಾನು ನಿನ್ನ ಉಪದೇಶದಂತೆ ನಡೆಯುವವನು. ಇದೋ ನಿನ್ನ ಪಾದಗಳನ್ನು ಕಣ್ಣೀರಿನಿಂದ ತೊಳೆಯುವುದರ ಹೊರತು ನಾನು ಇನ್ನೇನು ತಾನೆ ಮಾಡಬಲ್ಲೆ?” ಎಂದು ನಮಸ್ಕರಿಸಿದನು. ಕೃಷ್ಣನು ಅವನನ್ನು ಮೇಲಕ್ಕೆತ್ತಿ, ಅವನಿಗೂ ಅವನ ಸೋದರರಿಗೂ ಯುಕ್ತ ಮೃದುವಚನಗಳನ್ನಾಡಿದನು.

ಮಾರನೆಯ ಬೆಳಗ್ಗೆ ಬಳಿಗೆ ಬಂದ ಯುಧಿಷ್ಠಿರನು ಕೃಷ್ಣ ಏನೋ ಯೋಚನೆಯಲ್ಲಿರುವುದನ್ನು ನೋಡಿ, “ಏನು ಯೋಚಿಸುತ್ತಿರುವೆ ಕೃಷ್ಣ?” ಎಂದು ವಿಚಾರಿಸಿದನು. ಕೃಷ್ಣನು, “ಭೀಷ್ಮನ ಬಗ್ಗೆ ಯೋಚಿಸುತ್ತಿದ್ದೆ. ಅವನು ತನ್ನ ಕೊನೆಯ ದಿನಗಳನ್ನೆಣಿಸುತ್ತಿರುವನು. ನೀನು ಅವನಿಂದ ಕಲಿಯಬೇಕು ಎನ್ನುತ್ತಿದ್ದೆಯಲ್ಲವೆ? ಅವನ ಮನಸ್ಸು ನನ್ನನ್ನು ಕರೆಯುತ್ತಿದೆ. ನನ್ನ ಜೊತೆಗೆ ಬರುತ್ತೀಯಾ ಎಂದು ನಿನ್ನನ್ನು ಕೇಳಬೇಕು ಎಂದುಕೊಳ್ಳುತ್ತಿದ್ದೆ” ಎನ್ನಲು ಯುಧಿಷ್ಠಿರನು, “ಹಾಗೆಯೇ ಆಗಲಿ. ಈಗಲೇ ಹೋಗೋಣ” ಎಂದನು. ಕೃಷ್ಣನು, “ಸಾತ್ಯಕಿ, ನನ್ನ ರಥವನ್ನು ಸಿದ್ಧಪಡಿಸುವಂತೆ ದಾರುಕನಿಗೆ ಹೇಳು. ಕುರುಪಿತಾಮಹನು ಶರಶಯ್ಯೆಯಲ್ಲಿ ಮಲಗಿರುವೆಡೆಗೆ ಹೋಗಬೇಕು” ಎಂದು ಹೇಳಿ ಕಳುಹಿಸಿದನು. ಅದರಂತೆ ಎಲ್ಲರೂ ಯುದ್ಧಭೂಮಿಗೆ ತೆರಳಿದರು. ರಥವನ್ನು ದೂರದಲ್ಲಿಯೇ ಬಿಟ್ಟು ಕಾಲುನಡಿಗೆಯಲ್ಲಿ ಅಸ್ತಮಿಸುವ ಸೂರ್ಯನಂತಿದ್ದ ಭೀಷ್ಮನನ್ನು ಬಳಿಸಾರಿದರು. ನೋವಿನಿಂದಲೂ ಯಾತನೆಯಿಂದಲೂ ಬಾಧೆಪಡುತ್ತಿದ್ದ ಅವನನ್ನು ಕೃಷ್ಣನೇ ಮೊದಲು ಮಾತನಾಡಿಸಿದನು. “ದೇವ ಹೇಗಿದ್ದೀಯೆ? ನಿನ್ನ ಇಚ್ಛಾಮರಣ ನನಗೂ ಸಹ ಸಾಧ್ಯವಿಲ್ಲ. ನಿನ್ನದು ಅಚ್ಚರಿಯ ಇಚ್ಛಾಶಕ್ತಿ. ಒಂದು ಸೂಜಿ ಚುಚ್ಚಿದರೇ ನನಗೆ ತಡೆದುಕೊಳ್ಳಲು ಆಗುವುದಿಲ್ಲ. ದೇಹಕ್ಕೆ ಚುಚ್ಚಿಕೊಂಡಿರುವ ಸಹಸ್ರಾರು ಬಾಣಗಳ ನೋವನ್ನು ನೀನು ಹೇಗೆ ಸಹಿಸುತ್ತಿರುವೆ? ಇಡೀ ಲೋಕದಲ್ಲಿ ನಿನ್ನಂಥವನು ನೀನೊಬ್ಬನೇ. ನೀನು ಜ್ಞಾನವಿಧಿ, ವಿವೇಕಿ, ವೀರ. ವಸುಗಳಲ್ಲೊಬ್ಬನಾದ ನೀನು ಋಜುಪಥದಲ್ಲೆ ನಡೆದುಬಂದಿರುವವನು. ಈಗ ನೀನು ದಾಯಾದಿಗಳ ಸಾವಿಗೆ ಕಾರಣನಾದೆನೆಂದು ತಪಿಸುತ್ತಿರುವ ಯುಧಿಷ್ಠಿರನನ್ನು ಸಂತೈಸಬೇಕು. ತನ್ನ ಪೂರ್ವಿಕರಂತೆಯೇ ರಾಜ್ಯವಾಳಬೇಕೆಂದು ಅವನಿಗೆ ವ್ಯಾಸನು ಬೆಸಸಿರುವನು. ಇವನ ಈ ದುಃಖವನ್ನು ತೊಡೆದುಹಾಕಿ, ಸಮರ್ಥ ರೀತಿಯಲ್ಲಿ ರಾಜ್ಯವಾಳುವಂತೆ ನಿನಗೆ ಗೊತ್ತಿರುವುದನ್ನೆಲ್ಲ ನೀನು ಇವನಿಗೆ ಕಲಿಸಿಕೊಡಬೇಕು. ಇವನನ್ನು ಮುನ್ನಡೆಸಬಲ್ಲವನು ನೀನೊಬ್ಬನೇ” ಎಂದನು.

ಭೀಷ್ಮನು ಕೃಷ್ಣನ ಮಾತನ್ನು ಕೇಳಿದನು. ತಲೆಯೆತ್ತಿ ಕೃಷ್ಣನ ಕಡೆ ನೋಡಿ ನಕ್ಕು, “ದೇವ, ನನ್ನ ಬದುಕು ಇನ್ನೆಷ್ಟು ಕಾಲವೋ ತಿಳಿಯದು. ಕಾಲದ ಪರಿವೆಯನ್ನೇ ಕಳೆದುಕೊಂಡಿದ್ದೇನೆ. ಸತ್ಯವತಿಗೆ ಕೊಟ್ಟ ಮಾತಿನಂತೆ ನಡೆದಿರುವ ನಾನು, ಉತ್ತರಾಯಣ ಬರುವುದನ್ನೇ ಕಾಯುತ್ತಿದ್ದೇನೆ. ಈ ವಿಶ್ವವನ್ನೇ ವ್ಯಾಪಿಸಿರುವ ಪರಮಾತ್ಮನು ನೀನು. ನಿನ್ನ ವಿಶ್ವರೂಪವನ್ನು ನೋಡಬೇಕೆಂಬ ಒಂದು ಆಸೆಯಿದೆ. ಇದನ್ನು ನೆರವೇರಿಸುವೆಯಾ?” ಎಂದು ಕೇಳಲು, ಕೃಷ್ಣನು, “ಭೀಷ್ಮ, ನೀನಿನ್ನೂ ಅರವತ್ತೈದು ದಿನಗಳವರೆಗೆ ಬದುಕಿರುವೆ. ನಿನ್ನ ದೇಹತ್ಯಾಗದ ಸಮಯದಲ್ಲಿ ನಾನು ನಿನ್ನ ಬಳಿಯಲ್ಲಿರುತ್ತೇನೆ. ನೀನು ಹೋಗುವಾಗ ನಿನ್ನೊಡನೆ ನಿನ್ನ ಜ್ಞಾನಭಂಡಾರವೂ ಹೊರಟುಹೋಗುವುದಲ್ಲ! ಯಾರಿಗೂ ಅದು ದೊರಕಲಾರದು. ಆದ್ದರಿಂದ, ನಿನಗೆ ತಿಳಿದಿರುವುದೆಲ್ಲವನ್ನೂ ಈ ಯುಧಿಷ್ಠಿರನಿಗೆ ಹೇಳು. ನೀನಿದನ್ನು ಖಂಡಿತ ಮಾಡಬಲ್ಲೆ” ಎಂದನು. ಭೀಷ್ಮನು, “ಕೃಷ್ಣ, ನನ್ನನ್ನು ಹಾಸ್ಯಮಾಡುತ್ತಿರುವೆಯಾ? ಸಮಸ್ತ ಜ್ಞಾನದ ಆಗರವೇ ನೀನಾಗಿರುವಾಗ, ನಿನ್ನೆದುರಿಗೆ ನಾನು ಧರ್ಮದ ಬಗ್ಗೆ, ನೀತಿಯ ಬಗ್ಗೆ ಮಾತನಾಡುವುದೆ? ಹಾಗೆ ಮಾತನಾಡಿದರೆ ಗುರುವಿನ ಸಮ್ಮುಖದಲ್ಲಿ ವಿದ್ಯಾರ್ಥಿ ಮಾತನಾಡಿದಂತೆ, ಅಪ್ರಸಕ್ತವಾದೀತು. ಅದು ಖಂಡಿತ ಸಲ್ಲದು ದೇವ” ಎನ್ನಲು ಕೃಷ್ಣನು ನಕ್ಕು, “ತುಂಬ ವಿನಯಶೀಲನಾದ ನೀನು ಹಾಗೆನ್ನುವುದು ಯೋಗ್ಯವೇ ಆಗಿದೆ. ಆದರೆ ನೀನು ಯುಧಿಷ್ಠಿರನಿಗೆ ತಿಳಿಹೇಳಬೇಕೆಂದು ನನ್ನ ಅಪೇಕ್ಷೆ” ಎಂದನು. ಭೀಷ್ಮನು, “ಕೃಷ್ಣ, ನನ್ನ ಗಾಯಗಳಿಂದಾಗಿ ನಾನು ದುರ್ಬಲನಾಗಿದ್ದೇನೆ. ಅವುಗಳ ಬಾಧೆ ಬಹಳವಾಗಿದೆ. ಮನಸ್ಸೂ ಭ್ರಮಿಸಿಹೋಗಿದೆ. ಬಾಲ್ಯದಲ್ಲಿ ನಾನು ಅಮ್ಮನೊಡನೆ ಸ್ವರ್ಗಕ್ಕೆ ಹೋಗಿ ಕಲಿತಿರುವುದನ್ನು ಜ್ಞಾಪಿಸಿಕೊಂಡು ಹೇಳು ಎನ್ನಿತ್ತಿದ್ದೀಯೆ. ನನ್ನ ಶರೀರಕ್ಕಾಗಲಿ ಮನಸ್ಸಿಗಾಗಲಿ ಈ ಸಾಮರ್ಥ್ಯ ಇರುವ ಹಾಗೆ ಕಾಣುತ್ತಿಲ್ಲ” ಎನ್ನಲು, ಕೃಷ್ಣನು, “ನಾನು ನಿನಗೊಂದು ವರವನ್ನು ಕೊಡುತ್ತೇನೆ. ನೀನು ಸಾಯುವವರೆಗೆ ನಿನ್ನನ್ನು ಈ ಶರೀರದ ನೋವು, ದೌರ್ಬಲ್ಯಗಳು ಬಾಧಿಸುವುದಿಲ್ಲ; ಮನಸ್ಸು ಭ್ರಮೆಗೀಡಾಗುವುದಿಲ್ಲ. ನಿನ್ನ ಗ್ರಹಿಕೆ ಕತ್ತಿಯ ಅಲುಗಿನಂತೆ ಚೂಪಾಗಿರುತ್ತದೆ. ಈ ವಿಶ್ವದ ಎಲ್ಲ ರಹಸ್ಯಗಳೂ ನಿನ್ನ ಅರಿವಿಗೆ ಬರುತ್ತವೆ. ತಿಳಿಯಬೇಕಾದದ್ದೆಲ್ಲವನ್ನೂ ನೀನು ತಿಳಿಯುತ್ತೀಯೆ” ಎಂದನು. ಕೃಷ್ಣನು ಈ ಮಾತನ್ನು ಹೇಳುವಾಗ ಆಕಾಶದಿಂದ ಪುಷ್ಪವೃಷ್ಟಿಯಾಯಿತು. ಮೇಲೆದ್ದು ಭೀಷ್ಮನಿಗೆ ನಮಸ್ಕರಿಸಿದ ಕೃಷ್ಣನು “ನಾವು ನಾಳೆ ಬರುತ್ತೇವೆ” ಎಂದು ಅವನನ್ನು ಬೀಳ್ಕೊಂಡನು. ಅನಂತರ ಅವರು ನಗರಕ್ಕೆ ಹಿಂದಿರುಗಿದರು.

ಆ ರಾತ್ರಿ ಎಲ್ಲರಿಗೂ ಸುಖವಾಗಿ ಕಳೆಯಿತು. ಬಹಳ ದಿನಗಳ ನಂತರ ಕೃಷ್ಣನು ಶಾಂತವಾಗಿ, ಸ್ವಪ್ನರಹಿತವಾಗಿ ನಿದ್ರಿಸಿದನು. ಬೆಳಗ್ಗೆ ಮುಂಚೆ ಯುಧಿಷ್ಠಿರನ ಬಳಿಗೆ ಸಾತ್ಯಕಿಯನ್ನು ಕಳುಹಿಸಿದನು. ಸಾತ್ಯಕಿಯು ರಾಜನ ಬಳಿಗೆ ಬಂದು, “ಕೃಷ್ಣನು ಭೀಷ್ಮನ ಬಳಿಗೆ ಹೋಗುವುದಕ್ಕೆ ಸಿದ್ದನಾಗಿದ್ದಾನೆ. ನಿಮ್ಮನ್ನು ಕರೆತರುವಂತೆ ನನ್ನನ್ನು ಕಳಿಸಿರುವನು” ಎನ್ನಲು, ತಕ್ಷಣವೇ ಯುಧಿಷ್ಠಿರನು ತಮ್ಮಂದಿರೊಂದಿಗೆ ಹೊರಟನು. ಎಲ್ಲರೂ ಭೀಷ್ಮನ ಬಳಿಗೆ ಹೋದರು. ಇಂದು ಬಾಲಸೂರ್ಯನಂತೆ ಹೊಸತನದಿಂದ ಭೀಷ್ಮನು ನಳನಳಿಸುತ್ತಿದ್ದನು. ಕೃಷ್ಣನು ಅವನ ಪಕ್ಕದಲ್ಲಿ ಕುಳಿತು ಯೋಗಕ್ಷೇಮವನ್ನು ವಿಚಾರಿಸಲು, ಅವನು, “ಕೃಷ್ಣ, ನೀನು ವರವನ್ನು ಕೊಟ್ಟ ಒಡನೆಯೇ ನನ್ನ ಯಾತನೆಯೆಲ್ಲ ಪರಿಹಾರವಾಯಿತು. ನನ್ನ ಮನಸ್ಸೂ ಈಗ ಚುರುಕಾಗಿದೆ, ಸಂತಸದಿಂದಿದೆ. ಆದರೆ ಕೃಷ್ಣ, ನನ್ನದೊಂದು ಪ್ರಶ್ನೆ. ಕ್ಷತ್ರಿಯಧರ್ಮವನ್ನು ಕುರಿತು ಹೇಳಬೇಕೆಂದು ನೀನು ನನ್ನನ್ನೇ ಏಕೆ ಕೇಳುತ್ತಿರುವೆ? ನೀನೇ ಏಕೆ ಯುಧಿಷ್ಠಿರನಿಗೆ ಹೇಳಬಾರದು? ಇದಕ್ಕೇನು ಕಾರಣ ಎಂದು ತಿಳಿಯಲು ಕುತೂಹಲಿಯಾಗಿದ್ದೇನೆ” ಎಂದನು.

ಕೃಷ್ಣನು ಮೃದುವಾಗಿ ನಕ್ಕು, “ನೀನೆನ್ನುವುದು ಸರಿ. ನಾನೇ ಹೇಳಬಹುದು. ಆದರೆ ನಿನಗೆ ಚಿರಂತನ ಗೌರವವನ್ನು ತಂದುಕೊಡಬೇಕೆಂದು ನನ್ನ ಅಪೇಕ್ಷೆ. ಲೋಕವು ಆಚಂದ್ರಾರ್ಕವಾಗಿ ನಿನ್ನನ್ನು ಸ್ಮರಿಸುತ್ತಿರಬೇಕು. ನಿನ್ನ ಮಾತನ್ನು ಜನರು ವೇದದೋಪಾದಿಯಲ್ಲಿ ಭಕ್ತಿಯಿಂದ ಸ್ವೀಕರಿಸಬೇಕು. ಮುಂದೆ ಪ್ರತಿಯೊಬ್ಬನ ಕೆಲಸಗಳೂ ನೀನು ಹಾಕಿಕೊಡುವ ನೀತಿನಿಯಮಗಳನ್ನು ಅನುಸರಿಸಿ ನಡೆಯುವಂತಾಗಬೇಕು. ತನ್ನ ಕೀರ್ತಿ ಇರುವವರೆಗೆ ಮನುಷ್ಯನು ಬದುಕಿರುತ್ತಾನೆ ಎನ್ನುತ್ತಾರೆ. ನೀನು ಹೀಗೆ ಚಿರಂಜೀವಿಯಾಗಬೇಕು. ಅದರಿಂದಾಗಿ, ನೀನೇ ಹೇಳು” ಎಂದನು.

ಭೀಷ್ಮನ ಮನಸ್ಸು ದ್ರವಿಸಿಹೋಯಿತು. ಮೌನವಾಗಿ ಕಂಬನಿ ಸುರಿಸಿದನು. ತನ್ನ ಮೇಲೆ ಕೃಷ್ಣನು ಇರಿಸಿರುವ ಪವಿತ್ರ ಪ್ರೇಮವು ಮಾನವ ಅಭಿವ್ಯಕ್ತಿಯನ್ನು ಮೀರಿದ್ದು ಎಂದೆನಿಸಿತು. ಸಮಧಾನವಾದಮೇಲೆ, “ಯುಧಿಷ್ಠಿರನು ಅವನಿಗೆ ಬೇಕಾದ ಪ್ರಶ್ನೆಗಳನ್ನು ಕೇಳಲಿ. ನಾನು ಉತ್ತರಿಸುತ್ತೇನೆ” ಎನ್ನಲು, ಕೃಷ್ಣನು, “ಯುಧಿಷ್ಠಿರನಿಗೆ ಅಪರಾಧಿ ಪ್ರಜ್ಞೆ ಕಾಡುತ್ತಿದೆ. ದಾಯಾದಿಗಳ ಸಾವಿಗೆ, ಕ್ಷತ್ರಿಯನಾಶಕ್ಕೆ ತಾನೇ ಕಾರಣನೆಂದು ಭಾವಿಸಿರುವ ಅವನಿಗೆ ನಿನ್ನೆದುರು ಬರುವ ಧೈರ್ಯವಿಲ್ಲ” ಎಂದನು. ಭೀಷ್ಮನು ಹಸನ್ಮುಖನಾಗಿ, ಪ್ರೀತಿಯಿಂದ ಯುಧಿಷ್ಠಿರನನ್ನು ಹತ್ತಿರ ಕರೆದು, ತಲೆಯನ್ನು ನೇವರಿಸಿ, “ಮಗು, ಕ್ಷತ್ರಿಯನ ಕರ್ತವ್ಯವೇ ಯುದ್ಧಮಾಡುವುದು, ಕೊಲ್ಲುವುದು. ನೀನು ನಿಜವಾದ ಕ್ಷತ್ರಿಯನಾದ್ದರಿಂದಲೇ ಕೊಂದಿದ್ದೀಯೆ. ಕರ್ತವ್ಯನಿರ್ವಹಣೆಗಾಗಿ ಕೊರಗುವುದೇಕೆ? ಸತ್ಯಪಥದ ನಡೆಯ ಬಗ್ಗೆ ನಿನಗೆ ಸಂದೇಹಗಳಿವೆ ಎಂದೆನ್ನುತ್ತಾನೆ ಕೃಷ್ಣ. ರಾಜ್ಯವಾಳುವುದರ ಬಗ್ಗೆ ನಿನಗೆ ತಿಳಿಯಲಪೇಕ್ಷೆಯಿದೆ ಅಲ್ಲವೆ? ಕೃಷ್ಣನೆಂಬ ಅಭಿದಾನವನ್ನು ಹೊತ್ತು ಈ ಭೂಮಿಯಲ್ಲಿ ಸಂಚರಿಸುತ್ತಿರುವ ಈ ಪರಮಾತ್ಮನ ಕೃಪೆಯಿಂದ ನಾನೆಲ್ಲವನ್ನೂ ನಿನಗೆ ಹೇಳುತ್ತೇನೆ ಮಗು!” ಎಂದನು.

* * * * 


ಯುಧಿಷ್ಠಿರನು, “ಅಜ್ಜ, ವಿವೇಕಿಗಳಾದವರು ರಾಜನ ಕರ್ತವ್ಯಗಳೆಂದರೆ ಒಂದು ವಿಜ್ಞಾನ ಎನ್ನುವರು. ದಯವಿಟ್ಟು ರಾಜನ ಕರ್ತವ್ಯಗಳ ಬಗ್ಗೆ ನನಗೆ ತಿಳಿಸಿಕೊಡಿ” ಎಂದು ಕೇಳಿದ ವಿನಯ ಭೀಷ್ಮನಿಗೆ ಇಷ್ಟವಾಯಿತು. ಅವನು ನಕ್ಕು “ಯುಧಿಷ್ಠಿರ, ಹೇಳುತ್ತೇನೆ ಕೇಳು. ದೇವ ಬ್ರಾಹ್ಮಣರ ಪೂಜೆ ರಾಜನ ಮೊಟ್ಟಮೊದಲ ಕರ್ತವ್ಯ. ರಾಜನು ಮುಖ್ಯವಾಗಿ ಕಾರ್ಯಶೀಲನಾಗಿರಬೇಕು. ವಿಧಿಯು ರಾಜನನ್ನು ನಡೆಸುತ್ತದೆ ಎಂಬ ಭಾವನೆ ಒಂದು ಭ್ರಮೆಯಷ್ಟೆ. ವಿಧಿಯ ಪಾತ್ರವೂ ಇದೆ. ನಾನೊಪ್ಪುತ್ತೇನೆ. ಆದರೆ ಅದು ಕೆಲಸಮಾಡುವಂತಾಗಲು ರಾಜನೂ ಕಾರ್ಯಶೀಲನಾಗಿರಬೇಕು. ವಿಧಿ ಎಷ್ಟು ಶಕ್ತವೋ ಪುರುಷಪ್ರಯತ್ನವೂ ಅಷ್ಟೇ ಶಕ್ತಿಶಾಲಿಯಾದದ್ದು. ಪುರುಷಪ್ರಯತ್ನವೇ ಮೇಲು, ಅದೇ ವಿಧಿಯನ್ನು ನಿರ್ಧರಿಸುತ್ತದೆ ಎಂದು ನನ್ನ ಅನಿಸಿಕೆ.

“ರಾಜನ ಎರಡನೆಯ ಮುಖ್ಯವಾದ ಕರ್ತವ್ಯವೆಂದರೆ ಸತ್ಯಪರಿಪಾಲನೆ. ಪ್ರಜೆಗಳಲ್ಲಿ ವಿಶ್ವಾಸ ಮೂಡಿಸಬೇಕಾದರೆ ರಾಜನು ಸತ್ಯಶೀಲನಾಗಿರಬೇಕು.

“ಸಮಸ್ತ ಪರಿಕರಗಳೂ ರಾಜನಲ್ಲಿ ಸಂಗ್ರಹವಾಗಿರುತ್ತವೆ. ಅವನ ನಡತೆ ನಿಂದನಾರ್ಹವಾಗಿರಬಾರದು. ರಾಜನು ಯಶಸ್ವಿಯೆನಿಸಬೇಕಾದರೆ ಅವನಲ್ಲಿ ಆತ್ಮಸಂಯಮ, ವಿನಯ ಮತ್ತು ಋಜುತ್ವಗಳಿರಬೇಕು. ಸಮಸ್ತ ಕಾಮನೆಗಳನ್ನೂ ಅವನು ಹದ್ದಿನಲ್ಲಿರಿಸಿಕೊಂಡಿರಬೇಕು.

“ರಾಜನಲ್ಲಿ ನ್ಯಾಯವು ಸ್ವಾಭಾವಿಕವಾಗಿಯೇ ನೆಲೆಗೊಂಡಿರಬೇಕು. ಇನ್ನೂ ಮೂರು ಗುಣಗಳನ್ನು ರಾಜನು ರೂಢಿಸಿಕೊಳ್ಳಬೇಕು. ರಾಜನ ದೌರ್ಬಲ್ಯವೆಂದರೆ ದೇಶದ ದೌರ್ಬಲ್ಯವಾಗಿಬಿಡುವುದರಿಂದ ರಾಜನು ತನ್ನ ದೌರ್ಬಲ್ಯಗಳನ್ನು ಎಚ್ಚರಿಕೆಯಿಂದ ಮುಚ್ಚಿಟ್ಟುಕೊಳ್ಳಬೇಕು. ಶತ್ರುಗಳ ದೌರ್ಬಲ್ಯಗಳನ್ನು ಪ್ರಯತ್ನಪೂರ್ವಕವಾಗಿ ತಿಳಿದುಕೊಳ್ಳಬೇಕು ಹಾಗೂ ತನ್ನ ಯೋಜನೆಗಳ ರಹಸ್ಯವನ್ನು ಎಂದೂ ಬಿಟ್ಟುಕೊಡಬಾರದು.

“ರಾಜನು ನೇರ ನಡತೆಯವನಾಗಿರಬೇಕು. ಮೃದುವಾಗಿದ್ದರೆ ಅಪಾಯ ತಪ್ಪಿದ್ದಲ್ಲ. ತುಂಬ ಮೃದುವಾಗಿದ್ದರೆ, ಅವನನ್ನು ಪ್ರಜೆಗಳೇ ಲೆಕ್ಕಿಸುವುದಿಲ್ಲ. ತೀರ ಒರಟ ಹಾಗೂ ಕ್ರೂರಿಯಾಗಿದ್ದರೆ ಪ್ರಜೆಗಳು ಯಾವಾಗಲೂ ಭಯಗ್ರಸ್ತರಾಗಿರುವರು; ಇದು ಸುಖೀರಾಜ್ಯದ ಲಕ್ಷಣವಲ್ಲ.

“ಸೇವಕರನ್ನು ಆರಿಸಿಕೊಳ್ಳುವ ಕಲೆ ರಾಜನಿಗೆ ತಿಳಿದಿರಬೇಕು. ಆತನ ಮನಸ್ಸು ಸಹಜವಾಗಿಯೇ ದಯೆಯಿಂದ ಕೂಡಿರಬೇಕು; ಆದರೆ ಯಾವಾಗಲೂ ಕ್ಷಮಿಸುತ್ತಲೇ ಇದ್ದುಬಿಡಬಾರದು. ಆಗ ಜನರು ಅವನ ಮತ್ತು ಅವನ ಸ್ವಭಾವದ ದುರುಪಯೋಗ ಮಾಡಿಕೊಳ್ಳುವರು.

“ರಾಜನಾದವನು ಯಾವಾಗಲೂ ಎಚ್ಚರದಿಂದಿದ್ದು ಶತ್ರುಗಳನ್ನೂ ಮಿತ್ರರನ್ನೂ ಗಮನಿಸುತ್ತಲೇ ಇರಬೇಕು. ಶತ್ರುತ್ವ ಮಿತ್ರತ್ವಗಳು ಯಾವಾಗಲೂ ಏಕರೀತಿಯಾಗಿರುವುದಿಲ್ಲ.

“ರಾಜನ ಮುಖ್ಯವಾದ ಕರ್ತವ್ಯ ಪ್ರಜಾಪರಿಪಾಲನೆ. ತಾಯಿ ತನ್ನ ಮಗುವನ್ನು ಗರ್ಭದಲ್ಲಿಟ್ಟುಕೊಂಡು ಕಾಪಾಡುವಂತೆ, ರಾಜನು ಪ್ರಜೆಗಳನ್ನು ರಕ್ಷಿಸಬೇಕು. ಮಗುವನ್ನು ಹೊತ್ತಿರುವ ತಾಯಿಯು ತನ್ನ ಸುಖವನ್ನು ಬಯಸದೆ ಮಗುವಿನ ಯೋಗಕ್ಷೇಮದಲ್ಲಿಯೇ ಯಾವಾಗಲೂ ಆಸಕ್ತಳಾಗಿರುವಂತೆ, ರಾಜನು ತನ್ನ ಇಷ್ಟಾನಿಷ್ಟಗಳನ್ನು ಹದ್ದಿನಲ್ಲಿರಿಸಿಕೊಂಡು, ಪ್ರಜೆಗಳ ಯೋಗಕ್ಷೇಮಕ್ಕಾಗಿಯೇ ಯಾವಾಗಲೂ ಶ್ರಮಿಸುತ್ತಿರಬೇಕು.

“ರಾಜನಾದವನು ಯಾರನ್ನೂ ಪೂರ್ತಿಯಾಗಿ ನಂಬಿಬಿಡಬಾರದು. ತನ್ನ ಅಂತರಂಗದ ಅನಿಸಿಕೆಗಳನ್ನು ತೀರ ಹತ್ತಿರದವರಿಗೂ ಸಹ ಹೇಳದೆ ತನ್ನಲ್ಲಿಯೇ ಅಡಗಿಸಿಟ್ಟುಕೊಂಡಿರಬೇಕು.

“ರಾಜನು ಆರು ಸಮಸ್ಯೆಗಳನ್ನು ಪರಿಹರಿಸುವುದರಲ್ಲಿ ವಿವೇಕಿಯಾಗಿರಬೇಕು. ಬಲಶಾಲಿಯಾದ ಶತ್ರುವಿನೊಡನೆ ಸಂಧಿ ಮಾಡಿಕೊಳ್ಳುವುದು, ಸಮಾನಬಲನೊಂದಿಗೆ ಯುದ್ಧಮಾಡುವುದು, ದುರ್ಬಲನಾದವನ ರಾಜ್ಯವನ್ನು ಜಯಿಸುವುದು ಈ ಮೂವರಲ್ಲಿ ವಿವೇಚನಾಯುಕ್ತ ತೀರ್ಮಾನವನ್ನು ತೆಗೆದುಕೊಳ್ಳಬೇಕು. ತಾನು ದುರ್ಬಲನಾಗಿದ್ದರೆ. ಕೋಟೆಯಲ್ಲಿ ರಕ್ಷಣೆ ಪಡೆಯಲು ಸಿದ್ಧನಾಗಬೇಕು. ಶತ್ರುರಾಜ್ಯದ ಅಧಿಕಾರಿಗಳಲ್ಲಿ ಪರಸ್ಪರ ಅಭಿಪ್ರಾಯಭೇದವನ್ನು ಹುಟ್ಟುಹಾಕುವುದು ರಾಜನಾದವನ ಮುಖ್ಯವಾದ ಕೆಲಸ. ಚತುರರಾದ ಗೂಢಚಾರರ ಮೂಲಕ ಶತ್ರುರಹಸ್ಯಗಳನ್ನು ಯಾವಾಗಲೂ ಅನ್ವೇಷಣೆ ಮಾಡಿಸುತ್ತಿರಬೇಕು. ಶತ್ರುವಿನ ಕಡೆಯ ಮುಖ್ಯರನ್ನು ಧನದಾಸೆ ತೋರಿಸಿಯೋ ಇತರ ಪ್ರಲೋಭನೆಗಳಿಂದಲೋ ತನ್ನ ಕಡೆಗೆ ಸೆಳೆದುಕೊಳ್ಳಬೇಕು.

“ರಾಜನ ಭಾಷಣವು ಯಾವಾಗಲೂ ಪ್ರಿಯವಾದುದಾಗಿರಬೇಕು. ತನ್ನಂತೆಯೇ ಸ್ವಭಾವವುಳ್ಳ ಉತ್ತಮ ಗುಣಶೀಲರನ್ನು ಹತ್ತಿರವಿಟ್ಟುಕೊಂಡಿರಬೇಕು. ರಾಜನಿಗೂ ಇಂತಹ ಅಧಿಕಾರಿಗಳಿಗೂ ಇರುವ ವ್ಯತ್ಯಾಸವೆಂದರೆ ರಾಜನ ಶ್ವೇತಚ್ಛತ್ರ ಮಾತ್ರವೇ ಎನಿಸುವಂತಿರಬೇಕು.

“ಪ್ರಜೆಗಳು ತಮ್ಮ ತಂದೆಯ ಮನೆಯಲ್ಲಿದ್ದಂತೆ ಸುಖಿಗಳೂ ಸ್ವತಂತ್ರರೂ ಆಗಿದ್ದರೆ ಆ ರಾಜನು ಉತ್ತಮನೆನಿಸುವನು. ಅಂತಹ ಪ್ರಜೆಗಳು ಶಾಂತರೂ. ತೃಪ್ತರೂ ಆಗಿದ್ದು ದುಷ್ಟತನ, ಆಂಡಬರ, ಅಪ್ರಾಮಾಣಿಕತೆ ಅಸೂಯೆ ಇತ್ಯಾದಿಗಳಿಂದ ಮುಕ್ತರಾಗಿರುವರು.

“ಪ್ರಜೆಗಳನ್ನು ರಕ್ಷಿಸಿ ಸುಖವಾಗಿಟ್ಟಿರುವುದೇ ರಾಜನ ಕರ್ತವ್ಯದ ತಿರುಳು. ಕಷ್ಟಸಾಧ್ಯವಾದ ಇದನ್ನು ಸಾಧಿಸಲು ರಾಜನು ವಿವಿಧ ವಿಧಾನಗಳನ್ನು ಅನುಸರಿಸಬೇಕು. ರಾಜ್ಯದ ಮುಖ್ಯವಾದ ಅಧಿಕಾರಸ್ಥಾನಗಳಿಗೆ ಪ್ರಾಮಾಣಿಕ ಜನರನ್ನು ಪ್ರತಿಷ್ಠಾಪಿಸುವ ಕಲೆಯಲ್ಲಿ ರಾಜನು ಪರಿಣಿತನಾಗಿರಬೇಕು. ಕುಶಲತೆ ಚತುರತೆ ಹಾಗೂ ಸತ್ಯ ಇವು ಮೂರು ರಾಜನಿಗೆ ಅತ್ಯಗತ್ಯ. ಪ್ರಜೆಗಳ ಸದಭಿಪ್ರಾಯವನ್ನು ಪಡೆಯಬೇಕಾದರೆ ಹಳೆಯ ಹಾಗು ಬಿದ್ದುಹೋದ ಕಟ್ಟಡಗಳನ್ನು ಜೀರ್ಣೋದ್ಧಾರ ಮಾಡುತ್ತಿರಬೇಕು. ಪಾಷಂಡಿಗಳಿಗೆ ದೈಹಿಕ ಶಿಕ್ಷೆ ಅಥವಾ ದಂಡ ವಿಧಿಸುವ ತನ್ನ ಅಧಿಕಾರವನ್ನು ಬಳಸುವ ಕಲೆಯನ್ನು ತಿಳಿದಿರಬೇಕು.

“ರಾಜ್ಯದ ಕೋಶವು ಯಾವಾಗಲೂ ತುಂಬಿರುವಂತೆ ನೋಡಿಕೊಳ್ಳಬೇಕು. ಕೋಶಾಧಿಕಾರಿಗಳ ಮೇಲೆ ಕಣ್ಣಿಡುವ ಕೆಲಸವನ್ನು ರಾಜನೇ ಸ್ವಂತವಾಗಿ ಮಾಡಬೇಕು. ನಗರಾಧ್ಯಕ್ಷರ ಅಥವಾ ಮತ್ತಿತರರ ಮೇಲೆ ಪೂರ್ತಿಯಾಗಿ ನಂಬಿಕೆಯಿಡಬಾರದು.

“ಪುಂಡಾಟಿಕೆ ನಡೆಸುವ ಶತ್ರುರಾಜ್ಯಗಳಲ್ಲಿ ರಾಜನು ಮಿತ್ರರೂ ನಂಬಿಕಸ್ಥರೂ ಆದ ತನ್ನವರನ್ನು ಇಟ್ಟಿರಬೇಕಲ್ಲದೆ ಅಲ್ಲಿನ ಜನರಲ್ಲಿ ರಾಜದ್ರೋಹವನ್ನು ಹುಟ್ಟಿಹಾಕುತ್ತಿರಬೇಕು.

“ಅವನು ಗುಟ್ಟಾಗಿ ಸೈನ್ಯದ ಜಮಾವಣೆ ಮಾಡುತ್ತಿರಬೇಕು. ಸರಳ ಸಾಧಾರಣವಾಗಿದ್ದು ಬಿಡುವುದರಿಂದ ರಾಜ್ಯವನ್ನು ರಕ್ಷಿಸಲಾಗುವುದಿಲ್ಲ. ರಾಜನಾದವನು ಸರಳರಿಗೆ ಸರಳನೂ ವಕ್ರರಿಗೆ ವಕ್ರನೂ ಆಗಿರಬೇಕು. ಶತ್ರುಮರ್ದನದಲ್ಲಿ ವಕ್ರಮಾರ್ಗಗಳನ್ನು ಅನುಸರಿಸುವುದು ತಪ್ಪಲ್ಲ. ಹೊರಗೆ ಕಾಣುವ ರಾಜನ ಸರಳತೆಯ ಹಿಂದೆ ಇದೆಲ್ಲವೂ ಅಡಗಿರಬೇಕು” ಎಂದನು.

ಯುಧಿಷ್ಠಿರ: “ಒಬ್ಬ ಮನುಷ್ಯನನ್ನು ರಾಜ ಎಂದು ಪರಿಗಣಿಸುವ ಕ್ರಮ ಹೇಗೆ ಜಾರಿಗೆ ಬಂದಿತು? ರಾಜನೆನ್ನಿಸಿಕೊಳ್ಳುವವನೂ ಇತರರಂತೆಯೇ ಆಯುಷ್ಯವುಳ್ಳವನು; ಇತರರಂತೆಯೇಸುಖದುಃಖಗಳನ್ನುಳ್ಳವನು, ಇತರರಂತೆಯೇ ಶರೀರಧಾರಿಯಾಗಿರುವನು. ಆದರೂ ಅವನನ್ನು ಬೇರೆಯಾಗಿ ಭಾವಿಸುವುದೇಕೆ? ಲೋಕದಲ್ಲಿ ಅವನನ್ನು ಸಾಧನೆಯಲ್ಲಿ, ಶೌರ್ಯದಲ್ಲಿ, ಬುದ್ಧಿಯಲ್ಲಿ ಮೀರಿಸಿರುವ ಬೇಕಾದಷ್ಟು ಜನರಿರುವರು. ಆದರೂ ರಾಜನು ತನಗಿಂತ ಮೇಲಾದವರನ್ನೂ ಸಹ ಆಳುವನು. ಇಂತಹ ವ್ಯಕ್ತಿಪೂಜೆಯ ಅಗತ್ಯವೇನು?”

ಭೀಷ್ಮ: “ಹೇಳುವೆನು ಕೇಳು. ಆದಿಯಲ್ಲಿ ರಾಜನೂ ಇರಲಿಲ್ಲ, ಶಿಕ್ಷೆಯೂ ಇರಲಿಲ್ಲ. ಆಗ ಇವುಗಳ ಅವಶ್ಯಕತೆಯೂ ಇರಲಿಲ್ಲ. ಎಲ್ಲರೂ ಋಜುತ್ವವುಳ್ಳವರಾಗಿ ಒಬ್ಬರು ಇನ್ನೊಬ್ಬರನ್ನು ರಕ್ಷಿಸಿಕೊಳ್ಳುತ್ತಿದ್ದರು. ಕಾಲ ಸರಿದಂತೆ ಮಾನವ ಹೃದಯಗಳಲ್ಲಿ ಕಾಪಟ್ಯ ಮನೆಮಾಡುತ್ತ ಬಂದಿತು. ಹೃದಯವು ಕಲುಷಿತವಾದೊಡನೆ ಮನಸ್ಸು ಭ್ರಮೆಗೀಡಾಯಿತು, ಯುಕ್ತಾಯುಕ್ತ ವಿವೇಚನೆ ಹೊರಟು ಹೋಯಿತು. ಹಿಂದಿನ ಕಾಲದ ಜನರಲ್ಲೂ ಆಗಿದ್ದು ಹೀಗೆಯೇ.

“ಮೊದಲು ಅವರ ಹೃದಯವನ್ನು ಪ್ರವೇಶಿಸಿದ್ದು ಲೋಭ. ಅದರಿಂದಾಗಿ ಮನುಷ್ಯನಿಗೆ ತನ್ನದಲ್ಲದ ವಸ್ತುಗಳು ಬೇಕೆನಿಸತೊಡಗಿತು. ಅನಂತರ ಬಂದದ್ದು ಕಾಮ. ಕಾಮವು ಬರುವಾಗ ಜೊತೆಯಲ್ಲಿ ಕ್ರೋಧವನ್ನೂ ಕರೆತಂದಿತು. ಈ ಭಾವೋದ್ರೇಕಗಳು ಮನಸ್ಯನ ಹೃದಯವನ್ನು ಪ್ರವೇಶಿಸಿದಾಗ ಋಜುತ್ವವೆಂಬುದು ಹಿಮ್ಮೆಟ್ಟಬೇಕಾಯಿತು. ಈ ತಬ್ಬಿಬ್ಬಿನ ನಡುವೆ ವೇದಗಳು ಖಿಲವಾಗಿ ಕಣ್ಮರೆಯಾದವು. ಋಜುತ್ವವೆಂಬುದು ಪ್ರಪಂಚದಿಂದ ಹೊರಟೇಹೋಯಿತು. ಆಗ ದೇವತೆಗಳು ಭಯಪಟ್ಟರು. ಆಗ ಅವರು ಸೃಷ್ಟಿಕರ್ತನಾದ ಬ್ರಹ್ಮನ ಬಳಿಗೆ ಹೋಗಿ ‘ನೀನು ಸೃಜಿಸಿದ ಲೋಕವನ್ನು ನೋಡು ದೇವ! ಅದು ವಿನಾಶದ ಅಂಚಿಗೆ ಬಂದಿದೆ. ಅದನ್ನೂ ನಮ್ಮನ್ನೂ ರಕ್ಷಿಸಿ ಕಾಪಾಡು!’ ಎಂದು ಬೇಡಿಕೊಂಡರು. ಬ್ರಹ್ಮನು ಉಪಾಯವೊಂದನ್ನು ಕಂಡುಹಿಡಿಯುವೆನೆಂದು ಅವರನ್ನು ಕಳಿಸಿ, ನೂರು ಸಾವಿರ ಪಾಠಗಳುಳ್ಳ ಗ್ರಂಥವೊಂದನ್ನು ರಚಿಸಿದನು. ಅದರಲ್ಲಿ ಅವನು ಧರ್ಮ ಅರ್ಥ ಕಾಮ ಮೋಕ್ಷಗಳನ್ನು ವಿವರವಾಗಿ ಚರ್ಚಿಸಿರುವನು. ಶಿಕ್ಷಣಕ್ಕೆ ಅಗತ್ಯವಾದ ನಿಯಮಗಳನ್ನು ಸೃಜಿಸಿರುವನು. ಶಿಕ್ಷೆಯು ವ್ಯಕ್ತ ಹಾಗೂ ರಹಸ್ಯ ಎಂದು ಎರಡು ವಿಧವಾಗಿರುವುದು. ವ್ಯಾಪಾರಿಗಳಿಂದ ಐಶ್ವರ್ಯದ ಸಂರಕ್ಷಣೆ, ಋಷಿಗಳಿಂದ ತಪೋವೃದ್ಧಿ, ದುರ್ಜನರನ್ನೂ ಕಳ್ಳರನ್ನೂ ನಾಶಪಡಿಸುವಿಕೆ ಇವು ಅದರಲ್ಲಿ ಹೇಳಿರುವ ಇತರ ಸಂಗತಿಗಳು. ಅದರಲ್ಲಿನ ಒಂದು ಶಾಖೆಯಲ್ಲಿ ಕರ್ಮಾನುಷ್ಠಾನಗಳು, ಇನ್ನೊಂದು ಶಾಖೆಯಲ್ಲಿ ಮಂತ್ರಿಗಳು, ಗೂಢಚಾರರು, ವರದಿಗಾರರು, ರಾಯಭಾರಿಗಳು ಮುಂತಾದವರು ನಡೆದುಕೊಳ್ಳಬೇಕಾದ ರೀತಿಯ ಬಗ್ಗೆ ಶಾಸನಗಳೂ ಇರುವುವು. ಜನರು ಋಜುತ್ವ ಪಥದಿಂದಲೂ ಪ್ರಾಮಾಣಿಕತೆಯಿಂದಲೂ ತಪ್ಪಿನಡೆಯದಂತೆ ಮಾಡುವ ಎಲ್ಲ ವಿಧಿವಿಧಾನಗಳೂ ಅದರಲ್ಲಿ ವಿವರಿಸಲ್ಪಟ್ಟಿರುವುವು. ಈ ಗ್ರಂಥವನ್ನು ರಚಿಸಿದ ನಂತರ ಬ್ರಹ್ಮನು ‘ಲೋಕಹಿತಕ್ಕಾಗಿ ಹಾಗೂ ಧರ್ಮಾರ್ಥಕಾಮಗಳೆಂಬ ಪುರುಷಾರ್ಥಗಳ ಪ್ರವರ್ತನೆಗಾಗಿ ನಾನು ದಂಡನೀತಿ ಎಂಬ ಇದನ್ನು ರಚಿಸಿರುವೆನು. ಶಿಕ್ಷೆ ವಿಧಿಸುವುದರೊಂದಿಗೆ ಇದನ್ನು ಅನುಷ್ಠಾನ ಮಾಡುವುದರಿಂದ ಲೋಕವು ರಕ್ಷಿತವಾಗುವುದು’ ಎಂದನು. ಅದನ್ನು ಅಧ್ಯಯನ ಮಾಡಿದ ಶಂಕರನೇ ಮೊದಲಾದ ಅನೇಕ ದೇವತೆಗಳು ಅದನ್ನು ಸಂಗ್ರಹರೂಪಕ್ಕೆ ತಂದರು. ಕೊನೆಗೆ, ಲೋಕಕ್ಕೆ ಅದನ್ನು ಕೊಡುವಾಗ, ಹ್ರಸ್ವವಾದ ಮಾನವಜೀವನವನ್ನು ಪರಿಗಣಿಸಿ, ಶುಕ್ರಾಚಾರ್ಯನು ಅದನ್ನು ಕೇವಲ ಒಂದು ಸಾವಿರ ಪಾಠಗಳಾಗುವಂತೆ ಸಂಗ್ರಹಿಸಿದನು. ದೇವತೆಗಳು ಅನಂತರ ವಿಷ್ಣುವಿನ ಬಳಿಗೆ ಹೋಗಿ ಮಾನವರಲ್ಲೆಲ್ಲ ಶ್ರೇಷ್ಠತಮನಾದವನನ್ನು ತೋರಿಸಬೇಕೆಂದು ಕೇಳಿಕೊಂಡರು. ಅದಕ್ಕೆ ನಾರಾಯಣನು ‘ನಾನೇ ಒಬ್ಬನ ಶರೀರವನ್ನು ಪ್ರವೇಶಿಸುವೆನು. ಅವನು ಮತ್ತು ಅವನ ವಂಶದಲ್ಲಿ ಹುಟ್ಟುವವರೆಲ್ಲರೂ ಮಾನವಶ್ರೇಷ್ಠರೆನಿಸುವರು’ ಎಂದನು.

“ವೇಣನೆಂಬ ಒಬ್ಬ ರಾಜನಿದ್ದನು. ಅವನ ಬಲಬಾಹುವಿನಿಂದ, ಎರಡನೆಯ ಇಂದ್ರನೋ ಎಂಬಂತೆ ಶೋಭಿಸುತ್ತಿದ್ದ ಒಬ್ಬನು, ಹುಟ್ಟುವಾಗಲೇ ಯುದ್ಧಕವಚದೊಡನೆ ಸಮಸ್ತ ಆಯುಧಗಳೊಂದಿಗೆ ಸಜ್ಜಿತನಾಗಿ, ವೇದವಿದನೂ ಸಮಸ್ತ ಕಲೆಗಳಲ್ಲಿ ಪರಿಣಿತನೂ ಆಗಿ ಹುಟ್ಟಿದ್ದನು. ಅವನನ್ನು ಋಷಿಗಳು ರಾಜನನ್ನಾಗಿಮಾಡಿದರು. ಶುಕ್ರನು ಅವನಿಗೆ ಪುರೋಹಿತನಾಗಿದ್ದನು. ಅವನು ವಿಷ್ಣುವಿಗೆ ಎಂಟನೆಯ ಮಗನೆಂಬ ನಂಬಿಕೆ ಜನಜನಿತವಾಗಿದ್ದಿತು. ಪೃಥುವೆಂಬ ಹೆಸರುಳ್ಳ ಅವನು ಭೂಮಿಯನ್ನು ಮಟ್ಟವಾಗಿಸಿ ವಾಸಯೋಗ್ಯವನ್ನಾಗಿ ಮಾಡಿದನು. ವಿಷ್ಣುವೇ ಮೊದಲಾದ ದೇವತೆಗಳು ಅವನಿಗೆ ರಾಜನೆಂದು ಮೂರ್ಧಾಭಿಷೇಕ ಮಾಡಿದರು. ಭೂಮಿಯು ನಂದಿನಿಯ ರೂಪದಲ್ಲಿ ಬಂದು ಅವನಿಗೆ ರತ್ನಾಭರಣಗಳನ್ನು ಕಾಣಿಕೆಯಾಗಿ ಕೊಟ್ಟಿತು. ಪೃಥುವು ಆ ನಂದಿನಿಯ ಹಾಲನ್ನು ಕರೆದು, ಅವಳಿಂದ ಎಲ್ಲರಿಗೂ ಆಹಾರವಾಗುವಂತಹ ಏಳು ಬೆಳೆಗಳನ್ನು ಪಡೆದನು. ಅವನ ದೆಸೆಯಿಂದಲೇ ಮಾನವನು ಧರ್ಮಕ್ಕೆ ಪಾಶಸ್ತ್ಯವನ್ನು ಕೊಡಲಾರಂಭಿಸಿದರು. ಅವನು ಜನಗಳ ಪ್ರೀತಿಗೆ ಪಾತ್ರನಾದ್ದರಿಂದ ಅವನಿಗೆ ‘ರಾಜನ್’ ಎಂದು ಹೆಸರಾಯಿತು. ಜನಗಳ ನೋವನ್ನು ನಿವಾರಿಸುವವನಾದ್ದರಿಂದ ಅವನನ್ನು ‘ಕ್ಷತ್ರಿಯ’ ನೆಂದು ಕರೆದರು. ಅವನ ಆಳ್ವಿಕೆಯನ್ನು ಔನ್ನತ್ಯಕ್ಕೇರಿಸಿದ್ದರಿಂದ ಭೂಮಿಗೆ ‘ಪೃಥ್ವೀ’ ಎಂದು ಹೆಸರಾಯಿತು. ವಿಷ್ಣುವು ಅವನ ಶರೀರವನ್ನು ಪ್ರವೇಶಿಸಿದನು. ಶುದ್ಧಾತ್ಮನಾದ ಒಬ್ಬ ಮನುಷ್ಯನು, ತನ್ನ ಪುಣ್ಯವು ತೀರಿದ ಮೇಲೆ, ಸ್ವರ್ಗದಿಂದ ಭೂಮಿಗಿಳಿದು ಬಂದು ರಾಜನಾಗಿ ಜನ್ಮ ತಾಳುವನು. ಅವನು ವಿಷ್ಣುವಿನ ಅಂಶದೊಂದಿಗೆ ಹುಟ್ಟಿದವನು. ದೇವತೆಗಳೇ ಅವನನ್ನು ಸಂಸ್ಥಾಪಿಸಿರುವುದರಿಂದ, ಅವನು ಬುದ್ಧಿಯ ಮೂಲ ದೇವತೆಗಳಲ್ಲಿರುವುದರಿಂದ, ಅವನು ಉಳಿದವರಿಗಿಂತ ಶ್ರೇಷ್ಠನು. ಅದರಿಂದಾಗಿಯೇ ಲೋಕವು ಅವನ ಆಜ್ಞಾರಾಧಕವಾಗಿರುವುದು; ಅವನಿಗೆ ಯಾರೂ ಆಜ್ಞೆಮಾಡಲಾಗದು. ಈ ಕಾರಣದಿಂದಲೇ, ಅವನು ಎಲ್ಲರಂತಿದ್ದರೂ, ಬಹುಜನರು ಅವನ ಮಾತಿಗೆ ವಿಧೇಯರಾಗಿರುವರು.”

ಯುಧಿಷ್ಠಿರ: “ಪ್ರಜೆಗಳ ಮುಖ್ಯ ಕರ್ತವ್ಯಗಳೇನು?”

ಭೀಷ್ಮ: “ಮೊದಲನೆಯ ಕರ್ತವ್ಯವೆಂದರೆ ರಾಜನನ್ನು ಆರಿಸಿ ಅವನಿಗೆ ಮೂರ್ಧಾಭಿಷೇಕ ಮಾಡುವುದು. ಕೋಶಕ್ಕಾಗಿ ಅವರು ತಮ್ಮಲ್ಲಿರುವ ಸ್ವರ್ಣವೇ ಮೊದಲಾದ ಲೋಹಗಳ ಮತ್ತು ಪಶುಸಂಪತ್ತಿನ ಐದನೆಯ ಒಂದು ಭಾಗವನ್ನು ಕೊಡಬೇಕು. ಅಲ್ಲದೆ ಧಾನ್ಯಸಂಪತ್ತಿನ ಹತ್ತರಲ್ಲಿ ಒಂದು ಭಾಗವನ್ನು ಕೊಡಬೇಕು. ಅವರು ತಮ್ಮಲ್ಲಿಯೇ ಒಬ್ಬ ಶಕ್ತನೂ ಆಯುಧ ಪರಿಣತಿಯುಳ್ಳವನೂ ಆದವನನ್ನು ಆರಿಸಿ, ಸೈನ್ಯದ ಸುಸ್ಥಿತಿಗಾಗಿ ರಾಜನ ಸಹಾಯಕ್ಕೆಂದು ನಿಯಮಿಸಬೇಕು. ಪ್ರಜೆಗಳ ಪುಣ್ಯಪಾಪಗಳಲ್ಲಿ ನಾಲ್ಕರಲ್ಲಿ ಒಂದು ಪಾಲು ರಾಜನನ್ನು ಸೇರುವುದು. ಶಿಷ್ಯನು ಗುರುವಿನೆದುರು ನಮ್ರನಾಗಿರುವಂತೆ, ಪ್ರಜೆಯಾದವನು ರಾಜನೆದುರು ನಮ್ರನಾಗಿರಬೇಕು. ಪ್ರಜೆಗಳಿಂದ ಗೌರವಿಸಲ್ಪಟ್ಟ ರಾಜನನ್ನು ಕಂಡರೆ ಸಹಜವಾಗಿಯೇ ಶತ್ರುಗಳು ಹೆದರುವರು.”

ಯುಧಿಷ್ಠಿರ: “ರಾಜನು ನಿರ್ವಹಿಸಬೇಕಾದ ಇನ್ನಿತರ ಕರ್ತವ್ಯಗಳಾವುವು?”

ಭೀಷ್ಮ: “ರಾಜನಾದವನು ಮೊದಲು ತನ್ನನ್ನು ತಾನು ಜಯಿಸಿಕೊಂಡು, ಅನಂತರ ಶತ್ರುವನ್ನು ಜಯಿಸುವುದಕ್ಕೆ ಯತ್ನಿಸಬೇಕು. ಪಂಚೇಂದ್ರಿಯಗಳ ಮೇಲಿನ ಜಯವೇ ಎಲ್ಲಕ್ಕಿಂತ ಮಹತ್ವದ ಜಯವೆನ್ನಿಸಿಕೊಳ್ಳುವುದು. ಅಂತಹ ರಾಜನು ಮಾತ್ರ ಶತ್ರುಗಳನ್ನು ಜಯಿಸುವನು.

“ರಾಜನು ತನ್ನ ಕೋಟೆಯಲ್ಲಿ, ನಗರಗಳಲ್ಲಿ; ರಾಜ್ಯದ ಗಡಿಯಲ್ಲಿ ಇನ್ನಿತರ ಮುಖ್ಯ ಸ್ಥಳಗಳಲ್ಲಿ ಯಾವಾಗಲೂ ಸಾಕಷ್ಟು ಸಂಖ್ಯೆಯಲ್ಲಿ ಸೈನ್ಯವನ್ನಿಟ್ಟುಕೊಂಡಿರಬೇಕು.

“ರಾಜನ ಯೋಚನೆಗಳು, ತೀರ್ಮಾನಗಳು, ಕಾರ್ಯಗಳು, ಗೂಢಚಾರರು ಯಾರಿಗೂ ತಿಳಿಯದಂತಿರಬೇಕು; ಶತ್ರುವಿಗಂತೂ ತಿಳಿಯಲೇ ಬಾರದು. ಗೂಢಚಾರರು ಕುರುಡರಂತೆ, ಕಿವುಡರಂತೆ ಅಥವಾ ಬುದ್ಧಿಶೂನ್ಯರಂತೆ ಕಾಣಿಸಿಕೊಳ್ಳಬೇಕು; ಆದರೆ ಕಾರ್ಯಸಮರ್ಥರೂ, ವಿಚಕ್ಷಣೆಯುಳ್ಳವರೂ ಆಗಿರಬೇಕು. ರಾಜನು ಅವರನ್ನು ನೇಮಿಸಿಕೊಳ್ಳುವ ಮೊದಲೇ ಈ ಗುಣಗಳಿಗಾಗಿ ಪರೀಕ್ಷಿಸಿರಬೇಕು. ಅವರು ಶೀತ, ಉಷ್ಣ, ಹಸಿವು ಇತ್ಯಾದಿಗಳನ್ನು ತಡೆಯಬಲ್ಲ ಕಷ್ಟಸಹಿಷ್ಣುಗಳಾಗಿರಬೇಕು. ರಾಜನು ಮಂತ್ರಿಗಳ ಮೇಲೂ, ಸ್ನೇಹಿತರ ಮೇಲೂ, ಕೊನೆಗೆ ತನ್ನ ಮಕ್ಕಳ ಮೇಲೂ ಗೂಢಚಾರರನ್ನಿಟ್ಟಿರಬೇಕು. ಗೂಢಚಾರರಲ್ಲಿ ಒಬ್ಬರು ಇನ್ನೊಬ್ಬರಿಗೆ ಪರಿಚಿತರಾಗಿರಬಾರದು. ತನ್ನ ಶತ್ರು ತನಗಿಂತ ಬಲಾಢ್ಯನೆಂದು ಕಂಡುಬಂದ ಕೂಡಲೆ ರಾಜನು ಅವನೊಡನೆ ಸಂಧಿಗಾಗಿ ಪ್ರಯತ್ನಿಸಬೇಕು. ತನ್ನ ಸಾಮರ್ಥ್ಯದ ಮೇಲೆ ನಂಬಿಕೆಯಿರುವ ರಾಜನು, ದೊಡ್ದ ಸೈನ್ಯದೊಂದಿಗೆ, ಮಿತ್ರರೂ ಹಿತೈಷಿಗಳೂ ಇಲ್ಲದ ಅಥವಾ ಇನ್ನೊಬ್ಬ ರಾಜನೊಂದಿಗೆ ಯುದ್ಧದಲ್ಲಿ ತೊಡಗಿರುವ ಶತ್ರುವಿನ ಮೇಲೆ. ಅವನ ಅರಿವಿಗೆ ಬರುವ ಮೊದಲೇ ಇದ್ದಕ್ಕಿದ್ದಂತೆ ಬಿದ್ದು ಯುದ್ಧಮಾಡಬೇಕು. ಶತ್ರು ರಾಜ್ಯದ ಮೇಲೆ ಆಯುಧ, ಬೆಂಕಿ, ವಿಷ ಇತ್ಯಾದಿಗಳನ್ನು ಬಳಸಲು ಹಿಂಜರಿಯಬಾರದು.

“ರಾಜನು ಪ್ರಜೆಗಳ ಸಂಪಾದನೆಯ ಆರರಲ್ಲಿ ಒಂದು ಭಾಗವನ್ನು ತೆಗೆದುಕೊಳ್ಳಬೇಕು. ಇದರಿಂದ ಸೈನ್ಯದ ನಿರ್ವಹಣೆಯನ್ನೂ ಪ್ರಜೆಗಳ ರಕ್ಷಣೆಯನ್ನು ಮಾಡಬೇಕು. ಪ್ರಜೆಗಳೆಂದರೆ ರಾಜನ ಮಕ್ಕಳಿದ್ದ ಹಾಗೆ. ಆದರೆ ಅವರ ದುರ್ನಡತೆಗಾಗಿ ಅವರನ್ನು ಶಿಕ್ಷಿಸುವಾಗ ಮಾತ್ರ ಅತೀವ ದಯೆತೋರದಂತೆ ಎಚ್ಚರಿಕೆಯಿಂದಿರಬೇಕು. ನಂಬಿಕೆಗೆ ಅತ್ಯಂತ ಅರ್ಹವಾದ ಹಾಗೂ ಪ್ರಾಮಾಣಿಕರಾದವರನ್ನು ಮಾತ್ರ ನ್ಯಾಯನಿರ್ದೇಶನಕ್ಕಾಗಿ ನಿಯೋಜಿಸಬೇಕು. ನ್ಯಾಯ ವಿಚಕ್ಷಣೆಯು ಚೆನ್ನಾಗಿದ್ದಾಗಲೇ ರಾಜ್ಯದ ಬುನಾದಿ ಬಲವಾಗುವುದು.

“ರಾಜನೇ ಯುಗಪ್ರವರ್ತಕನೆಂಬ ಬಗ್ಗೆ ಸಂದೇಹ ಬೇಡ. ರಾಜನು ದಂಡನೀತಿಯನ್ನು ಇಡಿಯಾಗಿ ಅನುಷ್ಠಾನಗೊಳಿಸಲು ಸಾಧ್ಯವಾದಾಗ, ಮತ್ತು ಅದನ್ನು ಆಧರಿಸಿಯೇ ರಾಜ್ಯಭಾರ ಮಾಡಿದಾಗ, ಕಾಲವು ಕೃತಯುಗ ಅಥವಾ ಸತ್ಯಯುಗ ಎನ್ನಿಸಿಕೊಳ್ಳುವುದು. ಅಧರ್ಮವೆಂಬುದು ಆಗ ಅಸ್ತಿತ್ವದಲ್ಲಿಯೇ ಇರುವುದಿಲ್ಲ. ಉಳುವುದನ್ನು ಕಾಯದೆಯೇ ಭೂಮಿಯಲ್ಲಿ ಬೆಳೆ ಬೆಳೆಯುವುದು. ಮೂಲಿಕೆಗಳೂ ವೃಕ್ಷಗಳೂ ಹುಲುಸಾಗಿ, ಧಂಡಿಯಾಗಿ ಬೆಳೆಯುವುವು. ಕಾಹಿಲೆಗಳೇ ಇಲ್ಲದೆ ಪ್ರಜೆಗಳು ದೀರ್ಘಾಯುಗಳಾಗಿರುವರು. ಋತುಗಳು ಸಂತೋಷದಾಯಕವಾಗಿರುವುವು.ಭೂಮಿಯಲ್ಲಿ ಶಾಂತಿಯು ನೆಲೆಸಿರುವುದು. ರಾಜನು ದಂಡನೀತಿಯ ನಾಲ್ಕರಲ್ಲಿ ಮೂರರಷ್ಟನ್ನು ಆಧರಿಸಲು ಸಮರ್ಥನಾದಾಗ, ಕಾಲವು ತ್ರೇತಾಯುಗವೆನ್ನಿಸಿಕೊಳ್ಳುವುದು. ನಾಲ್ಕರಲ್ಲಿ ಒಂದು ಪಾಲಿನಷ್ಟು ಧರ್ಮವು ಖಿಲವಾಗಿ ಅದರ ಜಾಗದಲ್ಲಿ ಅಧರ್ಮವು ನೆಲೆಸುವುದು. ಭೂಮಿಯು ಬೆಳೆಯನ್ನು ಕೊಡುವುದಾದರೂ, ಉಳುಮೆಯನ್ನು ನಿರೀಕ್ಷಿಸುವುದು. ಮೂಲಿಕೆಗಳನ್ನೂ ವೃಕ್ಷಗಳಲ್ಲಿ ಸಂರಕ್ಷಿಸಬೇಕಾಗುವುದು. ಫಲವು ತಂತಾನೆ ಕೈಸೇರುವುದಿಲ್ಲ. ರಾಜನು ದಂಡ ನೀತಿಯ ಅರ್ಧದಷ್ಟನ್ನು ಮಾತ್ರವೇ ಅನುಸರಿಸಲು ಸಮರ್ಥನಾದಾಗ, ಕಾಲವು ದ್ವಾಪರಯುಗ ಎನ್ನಿಸಿಕೊಳ್ಳುವುದು. ಅರ್ಧಾಂಶ ಮಾತ್ರ ಧರ್ಮವಿದ್ದು, ಉಳಿದರ್ಧ ಅಧರ್ಮದಿಂದ ತುಂಬಿಹೋಗಿರುವುದು. ಉಳುಮೆ ಮಾಡಿದರೂ ಭೂಮಿಯು ತನ್ನ ಸಾಮರ್ಥ್ಯದ ಅರ್ಧದಷ್ಟು ಬೆಳೆಯನ್ನು ಮಾತ್ರ ಕೊಡುವುದು. ರಾಜನು ಬ್ರಹ್ಮಕಲ್ಪಿತವಾದ ಈ ದಂಡನೀತಿಯನ್ನು ಉಪೇಕ್ಷಿಸಿ ಜನರನ್ನು ತುಳಿಯಲೆತ್ನಿಸಿದಾಗ, ಕಾಲವು ಕಲಿಯುಗವೆನ್ನಿಸಿಕೊಳ್ಳುವುದು. ಎಲ್ಲೆಲ್ಲಿಯೂ ಅಧರ್ಮವೇ ತಾಂಡವವಾಡುತ್ತಿದ್ದು, ಧರ್ಮವು ಹೇಳಹೆಸರಿಲ್ಲದಂತಾಗಿರುವುದು. ಅರಾಜಕತ್ವ ತಲೆದೋರುವುದು. ನಾನಾ ಕಾಹಿಲೆಗಳಿಂದ ಪೀಡಿತರಾಗಿ ಜನರು ತಮ್ಮ ಆಯುಸ್ಸಿಗೆ ಮುಂಚೆಯೇ ಸಾಯುವರು. ಮೇಘಗಳ ಋತುಕ್ರಮಕ್ಕೆ ಅನುಗುಣವಾಗಿ ಮಳೆಯನ್ನು ಸುರಿಸುವುದಿಲ್ಲವಾದ್ದರಿಂದ ಬೆಳೆಗಳು ಫಸಲನ್ನು ನಿರೀಕ್ಷೆಯಂತೆ ಕೊಡಲಾರವು. ಹೀಗೆ ರಾಜನೇ ಯುಗಪ್ರವರ್ತಕನು.”

ಯುಧಿಷ್ಠಿರ: “ಯಾರ ಸಂಪತ್ತಿಗೆ ರಾಜನು ಬಾಧ್ಯನೆನಿಸುವನು?”

ಭೀಷ್ಮ: “ಬ್ರಾಹ್ಮಣರ ಹೊರತಾಗಿ ಉಳಿದೆಲ್ಲರ ಸಂಪತ್ತಿಗೂ ರಾಜನು ಬಾಧ್ಯನು ಎಂದು ವೇದಗಳು ಹೇಳಿರುವುದು. ಬ್ರಾಹ್ಮಣರಿಗೆ ಅಗತ್ಯವಾದ ಬೆಂಬಲವನ್ನೀಯುವುದು ರಾಜನ ಕರ್ತವ್ಯ.”

ಯುಧಿಷ್ಠಿರ:“ಒಬ್ಬನೇ ವ್ಯಕ್ತಿಯಿಂದ ಯಾವ ಸಣ್ಣ ಕಾರ್ಯವೂ ಆಗದು. ಇನ್ನೊಬ್ಬರ ಸಹಾಯ ಬೇಕೇಬೇಕಾಗುವುದು. ರಾಜ್ಯಭಾರದ ವಿಷಯದಲ್ಲಂತೂ ಇದು ಸತ್ಯ. ಆದ್ದರಿಂದ ರಾಜನು ಮಂತ್ರಿಗಳನ್ನು ಅವಲಂಬಿಸಬೇಕಾಗುವುದು. ಮಂತ್ರಿಯಾದವನ ಕರ್ತವ್ಯವೇನು? ಅವನ ಗುಣಲಕ್ಷಣಗಳೇನು? ಎಂಥವನು ರಾಜನ ನಂಬಿಕೆಗೆ ಅರ್ಹನಾಗಿ ಮಂತ್ರಿಯಾಗಬಲ್ಲ?’’

ಭೀಷ್ಮ: “ರಾಜನ ಮಿತ್ರರನ್ನು ನಾಲ್ಕು ಬಗೆಯಾಗಿ ವಿಂಗಡಿಸಬಹುದು. ಮೊದಲ ಬಗೆಯವನ ಆಸಕ್ತಿಯೂ ರಾಜನ ಆಸಕ್ತಿಯೂ ಒಂದೇ ಆಗಿರುವುದು. ಎರಡನೆಯವನು ರಾಜನಿಗೆ ಭಕ್ತನಾಗಿರುವನು. ಮೂರನೆಯವನು ರಾಜನಿಗೆ ತನ್ನ ಜನ್ಮಕಾರಣದಿಂದ ಸಂಬಂಧಿಯಾಗಿರುವನು. ರಾಜನು ಉಡುಗೊರೆಗಳನ್ನು ಕೊಟ್ಟು ವಶಪಡಿಸಿಕೊಂಡಿರುವವನು ನಾಲ್ಕನೆಯವನು. ಧರ್ಮಾತ್ಮನಾಗಿದ್ದು, ಯಾವುದಾದರೂ ಒಂದು ಪಕ್ಷದಲ್ಲಿ ಗಟ್ಟಿಯಾಗಿ ನಿಲ್ಲುವ ಐದನೆಯ ಬಗೆಯವನೂ ರಾಜನಿಗೆ ಮಿತ್ರನಾಗಬಹುದು. ಇವನು ಧರ್ಮವೆಲ್ಲಿದೆಯೋ ಆ ಪಕ್ಷದಲ್ಲಿ ನಿಲ್ಲುವನು. ಇವನು ಒಪ್ಪದಿರಬಹುದಾದ ತನ್ನ ಯೋಚನೆಗಳಾವುದನ್ನೂ ರಾಜನು ಇವನಿಗೆ ಹೇಳಕೊಡದು. ಯಶಸ್ವೀ ರಾಜನಾದವನು ಕೆಲವು ಸಂದರ್ಭಗಳಲ್ಲಿ ಧರ್ಮಾತ್ಮನೂ ಇನ್ನು ಕೆಲವು ಸಂದರ್ಭಗಳಲ್ಲಿ ಅಧರ್ಮವನ್ನುನುಸರಿಸುವವನೂ ಆಗಬೇಕಾಗುತ್ತದೆ. ಆದ್ದರಿಂದ ಈ ಮಿತ್ರರ ವಿಚಾರದಲ್ಲಿ ಎಚ್ಚರಿಕೆಯಿಂದಿರಬೇಕು. ಕೆಟ್ಟವನೊಬ್ಬನು ಪ್ರಾಮಾಣಿಕನಾಗಿ ಕಾಣಬಹುದು; ಪ್ರಾಮಾಣಿಕನೊಬ್ಬನು ಅಪ್ರಾಮಾಣಿಕನಾಗಲೂ ಬಹುದು; ಯಾವನ ಮನಸ್ಸೂ ಎಲ್ಲ ಸಂದರ್ಭಗಳಲ್ಲಿಯೂ ಒಂದೇ ರೀತಿ ಇರುವುದಿಲ್ಲ. ಯಾರನ್ನೂ ಸಂಪೂರ್ಣವಾಗಿ ನಂಬಬಾರದು. ಮಂತ್ರಿಗಳ ಮೇಲೂ ಸಂಪೂರ್ಣ ಅವಲಂಬನೆಸಲ್ಲದು. ಹಾಗೆಂದು, ನಂಬದೆಯೇ ಇರುವುದೂ ಕೂಡದು. ಆದ್ದರಿಂದ ರಾಜನು ನಂಬಿದಂತೆಯೂ ಇರಬೇಕು, ನಂಬದೆಯೂ ಇರಬೇಕು.

“ರಾಜನಾದವನು ತನ್ನ ಬಂಧುಗಳ ವಿಚಾರದಲ್ಲಿ ಮೃತ್ಯುವಿನ ವಿಚಾರದಲ್ಲಿ ಹೇಗೋ ಹಾಗೆ ಭಯವಿಟ್ಟುಕೊಂಡಿರಬೇಕು. ರಾಜಬಂಧುವು ರಾಜನ ಪುರೋಭಿದ್ಧಿಯನ್ನು ಬಯಸುವವನಾಗಿರುವುದಿಲ್ಲ ಹಾಗೆಂದು ಬಂಧುಗಳಿಲ್ಲದಿರುವುದೂ ದುರದೃಷ್ಟದ ಸಂಗತಿಯೇ. ಆದ್ದರಿಂದ ಬಂಧುಗಳನ್ನು ನಂಬಿದಂತಿರಬೇಕು, ಆದರೆ ಹೃದಯದೊಳಗೆ ಎಂದಿಗೂ ನಂಬಿರಬಾರದು.’’

ಯುಧಿಷ್ಠಿರ: “ಹಾಗಾದರೆ ಶಾಸಕರ, ಯುದ್ಧಮಂತ್ರಿಗಳ, ರಾಜಸಭಾಸದರ, ಮತ್ತು ಸೈನ್ಯಾಧಿಕಾರಿಗಳು ಲಕ್ಷಣಗಳಾವುವು?’’

ಭೀಷ್ಮ: “ಶಾಸಕರು ಸಭ್ಯರೂ ಜಿತೇಂದ್ರಿಯರೂ ಸತ್ಯಶೀಲರೂ ಪ್ರಾಮಾಣಿಕರೂ ಆಗಿದ್ದು, ಯುಕ್ತವಾದದ್ದನ್ನು ಹೇಳುವ ಧೈರ್ಯವಿರುವವರಾಗಿರಬೇಕು. ಯುದ್ಧಮಂತ್ರಿಗಳು ಯಾವಾಗಲೂ ರಾಜನ ಪಕ್ಷದಲ್ಲಿರುವ, ಸತ್ಕುಲಪ್ರಸೂತರಾದ, ಬಹುವಿದರಾದ, ಧೈರ್ಯವಂತರಾಗಿದ್ದು ರಾಜನ ಸಣ್ಣಪುಟ್ಟ ತಪ್ಪುಗಳನ್ನು ಪ್ರೀತಿಯಿಂದ ತಿದ್ದುವವರಾಗಿರಬೇಕು. ರಾಜಸಭಾಸದನಾದವನು ಯಾವಾಗಲೂ ರಾಜನಿಂದ ಬಹುಮಾನಿತನಾಗಿದ್ದು ರಾಜನ ಆಸಕ್ತಿಗಳನ್ನು ಹೃದ್ಗತಮಾಡಿಕೊಂಡವನೂ ಉತ್ತಮ ವಂಶದವನೂ ಆಗಿರಬೇಕು. ಎಂತಹ ಸನ್ನಿವೇಶದಲ್ಲಿಯೂ ಅವನು ರಾಜನನ್ನು ಬಿಟ್ಟುಹೋಗಬಾರದು. ಸೈನ್ಯಾಧಿಕಾರಿಗಳು ರಾಜನ ದೇಶದವರೇ ಆಗಿದ್ದು ಉತ್ತಮ ವಂಶದವರಾಗಿರಬೇಕು; ವಿವೇಕಿಗಳೂ, ಬಹುವಿದರೂ. ಒಳ್ಳೆಯ ಮೈಕಟ್ಟುಳರೂಪವಂತರೂ, ಉತ್ಕೃಷ್ಟ ನಡತೆಯುಳ್ಳವರೂ ಆಗಿದ್ದು ರಾಜಭಕ್ತರಾಗಿರಬೇಕು.

“ರಾಜನ ಮಂತ್ರಿಮಂಡಲದಲ್ಲಿ ಉತ್ತಮ ಚಾರಿತ್ರದ, ಸ್ನಾತಕರಾಗಿ ವಿಶೇಷ ಸನ್ಮಾನಿತರಾದ, ವೇದವಿದರಾದ ನಾಲ್ಕು ಜನ ಬ್ರಾಹ್ಮಣರು; ಆಯುಧಗಳನ್ನು ಚೆನ್ನಾಗಿ ಬಲ್ಲ, ಉತ್ತಮ ಅಂಗ ಸೌಷ್ಠವವುಳ್ಳ ಎಂಟು ಜನ ಕ್ಷತ್ರಿಯರು; ಶ್ರೀಮಂತರಾದ ಇಪ್ಪತ್ತೊಂದು ವೈಶ್ಯರು; ವಿನಯಶೀಲರೂ ಶುದ್ಧನಡತೆಯುಳ್ಳವರೂ ಆದ ಮೂರು ಜನ ಶೂದ್ರರು; ಮತ್ತು ಒಬ್ಬ ಸೂತ-ಹೀಗೆ ಮೂವತ್ತೇಳು ಜನರಿರಬೇಕು. ಎಲ್ಲರೂ ಐವತ್ತಕ್ಕೆ ಮೇಲ್ಪಟ್ಟ ವಯಸ್ಸಿನವರಾಗಿರಬೇಕು.

“ವಿಧಿಸುವ ಶಿಕ್ಷೆಯು ಅಪರಾಧದ ತೀವ್ರತೆಗೆ ಅನುಗುಣವಾಗಿರಬೇಕು. ಶ್ರೀಮಂತ ಅಪರಾಧಿಗೆ ದಂಡ ವಿಧಿಸಬೇಕು ಅಥವಾ ಅವನ ಆಸ್ತಿಯನ್ನು ಮುಟ್ಟುಗೋಲು ಹಾಕಿಕೊಳ್ಳಬೇಕು; ಬಡವನಾಗಿದ್ದರೆ, ಸ್ವಾತಂತ್ರಹರಣವೇ ಅವನ ಶಿಕ್ಷೆಯಾಗಬೇಕು. ಕೆಟ್ಟ ನಡತೆಗೆ, ಪ್ರಾಣಕ್ಕೆ ಸಂಚಕಾರ ಬಾರದಂತೆ, ದೈಹಿಕವಾಗಿ ಶಿಕ್ಷೆ ವಿಧಿಸಬೇಕು.

“ರಾಜನು ವಿಧಿಸುವ ತೆರಿಗೆಯು ಪ್ರಜೆಗಳಿಗೆ ಭಾರವಾಗದಂತೆ ನೋಡಿಕೊಳ್ಳಬೇಕು. ಪ್ರಜೆಗಳೆಂಬ ಹಸುವಿನ ಹಾಲನ್ನು ಕರೆದುಕೊಳ್ಳುವ ಕಲೆ ರಾಜನಿಗೆ ತಿಳಿದಿರಬೇಕು. ಜೇನು ಹೂಗಳಿಂದ ಮಕರಂದವನ್ನು ಹೀರುವಂತೆ, ಜಿಗಣೆಯು ಅರಿವಿಗೇ ಬಾರದ ಹಾಗೆ ರಕ್ತವನ್ನು ಹೀರುವಂತೆ. ರಾಜನು ತೆರಿಗೆಯನ್ನು ಸಂಗ್ರಹಿಸಬೇಕು. ಹುಲಿಯು ತನ್ನ ಮರಿಗಳನ್ನು ಹೇಗೋ ಹಾಗೆ ರಾಜನು ಪ್ರಜೆಗಳನ್ನು ನೋಡಿಕೊಳ್ಳುಬೇಕು: ಮರಿಗಳನ್ನು ಹುಲಿ ಕಚ್ಚಿ ಹಿಡಿದರೂ ಅವುಗಳಿಗೆ ನೋವಾಗದಂತೆ ಹಿಡಿಯುವುದು.”

ಯುಧಿಷ್ಠಿರ: “ರಾಜನಾದವನು ಹೇಗೆ ನಡೆದುಕೊಳ್ಳಬೇಕು?”

ಭೀಷ್ಮ:“ಋಜುತ್ವವೇ ರಾಜನನ್ನು ಯಾವಾಗಲೂ ರಕ್ಷಿಸುವುದು. ಅದಕ್ಕಿಂತ ದೊಡ್ಡದು ಈ ಲೋಕದಲ್ಲಿ ಬೇರಾವುದೂ ಇಲ್ಲ. ಧರ್ಮಿಷ್ಠನಾದ ರಾಜನು ಲೋಕವನ್ನೇ ಜಯಿಸುವನು. ಅವನ ಸಲಹೆಗಾರರೆಲ್ಲ ಶುದ್ಧಾಂತಃಕರಣವುಳ್ಳವರಾಗಿರಬೇಕು. ಹಗೆಸಾಧನೆಗೆ ರಾಜನದಯದಲ್ಲಿ ಸ್ಥಳವಿರಬಾರದು. ರಾಜನು ಜಿತೇಂದ್ರಿಯನಾಗಿರಬೇಕು. ಸ್ವಬುದ್ದಿಯನ್ನುಪಯೋಗಿಸುವ ರಾಜನು ಸಾವಿರಾರು ನದಿಗಳು ಬಂದು ಸೇರುವ ಮಹಾಸಮುದ್ರದಂತೆ ಮಹಾನ್ ಆಗುವನು.”

ಯುಧಿಷ್ಠಿರ:“ಕರ್ತವ್ಯಪಥವು ಬಹಳ ಉದ್ದವಾದುದು; ಅದಕ್ಕೆ ನೂರಾರು ಶಾಖೆಗಳಿರುವುದು. ರಾಜನಾದವನು ಅನುಸರಿಸಬೇಕಾದ ಕರ್ತವ್ಯಗಳನ್ನು ಕುರಿತು ಹೇಳು”.

ಭೀಷ್ಮ:“ತಾಯಿತಂದೆಗಳನ್ನೂ ಗುರುವನ್ನೂ ಪೂಜಿಸುವುದು ಮಖ್ಯವಾದ ಕರ್ತವ್ಯ. ಈ ಕರ್ತವ್ಯಗಳನ್ನು ಮಾಡಿದವನು ಕೀರ್ತಿವಂತನಾಗುವುದಲ್ಲದೆ ಸ್ವರ್ಗವನ್ನೂ ಪಡೆಯುವನು. ಈ ಮೂವರನ್ನು ಪೂಜಿಸುವುದಲ್ಲದೆ, ವಿಧೇಯನಾಗಿ ಅವರ ಆಣತಿಯನ್ನು ಚಾಚೂತಪ್ಪದೆ ನಡೆಸಬೇಕು. ಅವರು ನಿತ್ಯವೂ ಪೂಜಿಸತಕ್ಕ ತ್ರೇತಾಗ್ನಿಗಳಂತೆ. ತಂದೆಯನ್ನು ಸೇವಿಸುವುದರಿಂದ ಈ ಲೋಕವನ್ನು ದಾಟುವನು; ತಾಯಿಯ ಸೇವೆಯಿಂದ ಸ್ವರ್ಗವನ್ನು ಪಡೆಯುವನು; ಗುರುವನ್ನು ಸೇವಿಸುವುದರಿಂದ ಬ್ರಹ್ಮಲೋಕವನ್ನು ಹೊಂದುವನು.”

ಯುಧಿಷ್ಠಿರ:“ಜೀವನಪಥದಲ್ಲಿ ಸಾಗುತ್ತಿರುವವನಿಗೆ ಧರ್ಮಾರ್ಥಕಾಮಗಳಲ್ಲಿ ಯಾವುದು ಸರಿಯಾದ ದಿಕ್ಕಿನಲ್ಲಿ ಮುನ್ನಡೆಯಲು ಸಹಾಯ ಮಾಡುವುದು?”

ಭೀಷ್ಮ:“ ಧರ್ಮಪಥದಲ್ಲಿ ಸಾಗುತ್ತ ಸಂಪತ್ತನ್ನು ಒಗ್ಗೂಡಿಸಿಕೊಂಡವನಲ್ಲಿ ಈ ಮೂರೂ ಜೊತೆಜೊತೆಗೇ ಇರುವುದು. ಸಂಪತ್ತಿಗೆ ಪುಣ್ಯವೇ ಮೂಲ; ಸುಖವೇ ಅದರ ಫಲ. ಇಚ್ಛೆಯಲ್ಲಿ ಈ ಮೂರೂ ಗಟ್ಟಿಯಾಗಿ ನೆಲೆಯೂರಿರುವುದು. ಈ ಪ್ರಪಂಚದ ವಸ್ತುಗಳು ಇಂದ್ರಿಯಗಳ ಭೋಗಕ್ಕಾಗಿಯೇ ಇರುವುವಾದರೂ, ಇಚ್ಛೆಯಿಲ್ಲದಿದ್ದರೆ ಅವು ಏನೂ ಮಾಡಲಾರವು. ವಿಷಯವಸ್ತುಗಳಿಂದ ಸಂಪೂರ್ಣವಾಗಿ ಹಿಂದೆಗೆಯುವುದನ್ನು ವಿಮೋಚನೆಯೆನ್ನುವರು. ಸಂಪತ್ತು ಪುಣ್ಯ ಸಂಪಾದನೆಗೂ, ಪುಣ್ಯವು ದೇಹರಕ್ಷಣೆಗೂ ಅಗತ್ಯವಾದುವುಗಳು. ಸುಖವಿರುವುದು ಕೇವಲ ಇಂದ್ರಿಯಗಳಪ್ಪಿಗಾಗಿ. ಈ ಮೂರಕ್ಕೂ ಸಾಮಾನ್ಯವಾಗಿರುವುದು ಕಾಮ. ಇವುಗಳ ಫಲಭೋಗಕ್ಕಾಗಿಯೇ ಇವನ್ನು ಬೆಂಬತ್ತಿ ಹೋಗುವುದರಿಂದ ಫಲಪ್ರಾಪ್ತಿಯಾಗುವುದಿಲ್ಲ. ಆದರೆ ಆತ್ಮ ಜ್ಞಾನಾರ್ಥವಾಗಿ ಇವುಗಳನ್ನು ಅನುಸರಿಸಿ ನಡೆದಾಗ, ಇವುಗಳನ್ನು ಧ್ಯೇಯಾಸಾಧನೆಗಾಗಿ ಬಳಸಿದಾಗ, ಬೇಕಾದಹಾಗೆ ಫಲಪ್ರಾಪ್ತಿಯಾಗುವುದು. ಪುಣ್ಯವನ್ನು ಆತ್ಮಶುದ್ಧಿಗಾಗಿ ಗಳಿಸಿಕೊಳ್ಳಬೇಕು. ಫಲೇಚ್ಛೆಯಿಲ್ಲದೆ ಬಳಸುವುದಕ್ಕಾಗಿ ಸಂಪತ್ತನ್ನು ಗಳಿಸಿಕೊಳ್ಳಬೇಕು. ಸುಖವನ್ನು ದೇಹದ ಸುಸ್ಥಿತಿಗಾಗಿ ಪಡೆಯಬೇಕೇ ಹೊರತು ದೇಹದಪ್ತರ್ಥವಾಗಿ ಅಲ್ಲ. ಆದ್ದರಿಂದಲೇ ಈ ಮೂರೂ ಇಚ್ಛೆಯಲ್ಲಿ ನೆಲೆಯುಳ್ಳವು ಎನ್ನುವುದು. ಧರ್ಮ, ಅರ್ಥ, ಕಾಮ ಎಂಬುವು ಮೋಕ್ಷವೆಂಬ ಧ್ಯೇಯಕ್ಕೆ ಕೇವಲ ಸಹಾಯಕಗಳು. ತಪಸ್ಸಿನ ಮೂಲಕವಾಗಿ ಮುಕ್ತಿಯನ್ನು ಪಡೆದಾದಮೇಲೆ ಈ ಮೂರನ್ನೂ ತ್ಯಜಿಸಿಬಿಡಬೇಕು. ವಿಮೋಚನೆಯೇ ಮಾನವನ ಗುರಿ.”

ಯುಧಿಷ್ಠಿರ:“ಬುದ್ಧಿಯೇ ಎಲ್ಲಕ್ಕಿಂತ ಮಹತ್ವದ್ದೆಂದೂ ಬುದ್ಧಿಯಿಂದಾಗಿಯೇ ಮಾನವನು ಭವಿಷ್ಯವನ್ನು ರೂಪಿಸಿಕೊಳ್ಳುವನೆಂದೂ ಬುದ್ಧಿಯ ಮೂಲಕವೇ ತುರ್ತು ಪರಿಸ್ಥಿತಿಗಳಲ್ಲಿ ತನ್ನನ್ನು ತಾನು ಕಾಪಾಡಿಕೊಳ್ಳುವನೆಂದೂ ಹೇಳುವರು. ಈ ಬುದ್ಧಿಯ ಬಗ್ಗೆ ನನಗೆ ಹೇಳು. ಉದಾಹರಣೆಗೆ, ರಾಜನೊಬ್ಬನನ್ನು ಅನೇಕ ಶತ್ರುಗಳು ಏಕಕಾಲಕ್ಕೆ ಮುತ್ತಿರುವಾಗ ಈ ಬುದ್ಧಿಯು ಅವನಿಗೆ ತನ್ನನ್ನು ತಾನು ರಕ್ಷಿಸಿಕೊಳ್ಳಲು ಹೇಗೆ ಸಹಾಯಮಾಡುವುದು?”

ಭೀಷ್ಮ”“ಕಷ್ಟಪರಿಸ್ಥಿತಿಗಳಲ್ಲಿ ರಾಜನ ಕರ್ತವ್ಯಗಳನ್ನು ಹೇಳುವೆನು ಕೇಳು. ಆಗ ಶತ್ರುವು ಮಿತ್ರನಾಗಬಹುದು, ಮಿತ್ರನು ಶತ್ರುವೂ ಆಗಬಹುದು. ಪರಿಸ್ಥಿತಿಯ ಒತ್ತಡದಲ್ಲಿ ಯಾರು ಹೇಗೆ ವರ್ತಿಸುವರೆಂಬುದನ್ನು ಹೇಳಲಾಗದು. ಇಲ್ಲಿಯೇ ಬುದ್ಧಿಯು ನಮಗೆ ಸಹಾಯಕ್ಕೆ ಬರಬೇಕಾದರೆ. ಅದು ಶತ್ರುವಿನೊಂದಿಗೆ ಯುದ್ಧ ಮಾಡಬೇಕೋ ಅಥವಾ ಸಂಧಿ ಮಾಡಿಕೊಳ್ಳ ಬೇಕೋ ಎಂಬುದನ್ನು ನಿರ್ಧರಿಸಲು ಅನುವಾಗುವುದು. ಕಾಲದೇಶಗಳಿಗನುಗುಣವಾಗಿ ಶತ್ರುವಿನೊಡನೆ ಮಿತ್ರತ್ವವನ್ನೂ ಸ್ಥಾಪಿಸಿಕೊಳ್ಳಬೇಕಾಗಿ ಬರಬಹುದು. ರಾಜನು ತನ್ನ ಪುರೋಭಿದ್ದಿಯನ್ನೂ ಕ್ಷೇಮವನ್ನೂ ಆಶಿಸುವ ಬುದ್ಧಿವಂತರಾದವರನ್ನು ಮಿತ್ರರನ್ನಾಗಿ ಮಾಡಿಕೊಳ್ಳಬೇಕು. ಶತ್ರುವಿನೊಂದಿಗೆ ಸಂಧಿಮಾಡಿಕೊಳ್ಳದಿದ್ದಾಗ ಜೀವವೇ ಉಳಿಯುವುದಿಲ್ಲ ಎನ್ನುವಂತಹ ಸಂದರ್ಭಗಳಲ್ಲಿ ಸಂಧಿಮಾಡಿಕೊಳ್ಳಲೇಬೇಕು. ಇದನ್ನು ಪರಿಗಣಿಸಲಾರದಷ್ಟು ಮೂರ್ಖನಾದರೆ, ಎಲ್ಲರೂ ಅಷ್ಟೊಂದು ಕಷ್ಟಪಟ್ಟು ಸಾಧಿಸುವಂಥವುಗಳನ್ನು ನಾವು ಪಡೆಯಲಾಗುವುದಿಲ್ಲ. ಸಂದರ್ಭಾನುಸಾರವಾಗಿ, ಅವಶ್ಯವಾದಾಗ ಶತ್ರುವಿನೊಡನೆ ಸಂಧಿಮಾಡಿಕೊಳ್ಳಬಲ್ಲ ಹಾಗೂ ಅಲ್ಲಿಯವರೆಗೆ ಮಿತ್ರರಾಗಿದ್ದವರೊಡನೆ ಜಗಳವಾಡ ಬಲ್ಲ ರಾಜನು ಯಶಸ್ವಿಯಾಗುವುದು. ಖಂಡಿತ.

“ಗೆಳೆತನವನ್ನು ಸ್ಥಾಪಿಸಿಕೊಳ್ಳುವುದಕ್ಕೆ ಮೊದಲು ವ್ಯಕ್ತಿಗಳನ್ನು ಕೂಲಂಕಷವಾಗಿ ಅಭ್ಯಸಿಸಬೇಕು. ಶತ್ರುಗಳ ಬಲಾಬಲಗಳನ್ನು ಯಾವಾಗಲೂ ತಿಳಿದಿರಬೇಕು. ಮಿತ್ರರು ಶತ್ರುಗಳಂತೆ ಕಾಣಬಹುದು, ಶತ್ರುಗಳು ಮಿತ್ರರಂತೆ ಬರಬಹುದು. ಸ್ನೇಹದ ಒಡಂಬಡಿಕೆಯನ್ನು ಮಾಡಿಕೊಂಡಾಗ, ಆ ಇನ್ನೊಬ್ಬನು ನಿಜವಾದ ಸ್ನೇಹಭಾವನೆಯಿಂದಿರುವನೋ ಅಥವಾ ಕೇವಲ ಸ್ವಾರ್ಥಷ್ಟಿಯಿಂದ ಆದಕ್ಕೆ ಒಪ್ಪಿರುವನೋ ಎಂದು ನಿರ್ಧರಿಸಲಾಗುವುದಿಲ್ಲ. ಶತ್ರು ಮಿತ್ರ ಎಂಬ ಪದಗಳೆರಡೂ ಸಾಪೇಕ್ಷವಾದುವುಗಳು. ಒಬ್ಬನು ಇನ್ನೊಬ್ಬನನ್ನು ತನಗೆ ಲಾಭದಾಯಕವಾಗಿರುವವರೆಗೆ, ತನ್ನ ಆಸಕ್ತಿಗಳು ರಕ್ಷಿತವಾಗಿರುವವರೆಗೆ ಮಾತ್ರವೇ ಮಿತ್ರನೆಂದು ಪರಿಗಣಿಸುವನು. ಆ ವ್ಯಕ್ತಿ ಜೀವಿಸಿರುವವರೆಗೂ ಇದು ಹೀಗೆಯೇ ಮುಂದುವರೆಯುವುದು ಎಂದಾದರೆ, ಸ್ನೇಹವು ಆಜೀವಪರ್ಯಂತ ಏರ್ಪಡುವುದು.

“ಪ್ರತಿಯೊಬ್ಬನ ಬದುಕಿನಲ್ಲಿ ಸ್ವಹಿತಾಸಕ್ತಿ ಎಂಬುದು ಬಹಳ ಬಲವತ್ತರವಾದುದು. ಲೋಕವೇ ಈ ಒಂದು ಅಂಶದ ಸುತ್ತ ತಿರುಗುತ್ತಿರುವುದು. ಯಾವುದಾದರೂ ಲಾಭವಿಲ್ಲದೆಯೇ ಯಾರೂ ಯಾರೊಬ್ಬರಿಗೂ ಪ್ರಿಯರಾಗಲಾರರು. ಸ್ವಹಿತಸಾಧನೆಯ ಉದ್ದೇಶವಿಲ್ಲದಲ್ಲಿ ಯಾವ ಪ್ರೀತಿಯೂ ಏರ್ಪಡಲಾರದು. ಒಬ್ಬನು ಉದಾರಮನಸ್ಕನೆಂದು, ಇನ್ನೊಬ್ಬನು ಮಧುರವಾಗಿ ಮಾತನಾಡುವವನೆಂದು, ಮತ್ತೊಬ್ಬನು ತುಂಬ ಧಾರ್ಮಿಕನೆಂದು, ಇತರರಿಗೆ ಪ್ರಿಯನಾಗಬಹುದು. ಯಾವುದಾದರೂ ಪ್ರಯೋಜನಹೇತುವಾಗಿಯೇ ಒಬ್ಬರು ಇನ್ನೊಬ್ಬರಿಗೆ ಪ್ರಿಯರಾಗುತ್ತಾರೆಯಲ್ಲದೆ ಬೇರೆಯಲ್ಲ. ಸ್ನೇಹ ಏರ್ಪಟ್ಟ ಕಾರಣವು ಇಲ್ಲವಾಡನೆ ಸ್ನೇಹವೂ ಇಲ್ಲವಾಗುವುದು.

“ಬುದ್ಧಿವಂತನಾದವನು ತಾನು ಶತ್ರುವಿನೊಡನೆ ಯಾವಾಗ ಸಂಧಿಮಾಡಿಕೊಳ್ಳಬೇಕು ಎಂಬುದನ್ನು ತಿಳಿದಿರಬೇಕು. ಹಿಂದೆ ಶತ್ರುಗಳಿಗಿದ್ದು ಈಗ ಮಿತ್ರರಾಗಿದ್ದಾರೆ ಎಂದಾಗ, ಒಬ್ಬರು ಇನ್ನೊಬ್ಬರನ್ನು ಮೀರಿಸಿ ತನ್ನ ಕಕ್ಷೆಯೊಳಗೆ ತಂದುಕೊಳ್ಳುವುದಕ್ಕೆ ಹೊಂಚುಹಾಕುತ್ತ ಸಮಯ ಕಾಯುತ್ತಿದ್ದಾರೆಂದೇ ಅರ್ಥ. ಇಬ್ಬರಲ್ಲಿ ಯಾರು ಹೆಚ್ಚು ಬುದ್ಧಿವಂತರೋ ಅವರು ಗೆಲ್ಲುವರು. ಮುಖ್ಯವಾದ ಅಂಶವೆಂದರೆ, ಇನ್ನೊಬ್ಬನ ಬಗ್ಗೆ ನೀನು ಹೆದರಿದಾಗಲೂ ಹೆದರದೆ ಇರುವವನಂತೆ ಇರಬೇಕು. ಸಂಪೂರ್ಣವಾಗಿ ಅವನನ್ನು ನಂಬಿದಂತಿರುತ್ತ, ಎಂದಿಗೂ ನಂಬಲೇ ಬಾರದು. ಸಂದರ್ಭದ ಒತ್ತಡದಲ್ಲಿ ಸಿಕ್ಕಿ ಶತ್ರುವಿನೊಡನೆ ಸಂಧಿಮಾಡಿಕೊಂಡಿದ್ದರೂ, ಅವಕಾಶ ದೊರೆತೊಡನೆ ತಡಮಾಡದೆ ಯುದ್ಧವನ್ನು ಸಾರಿಬಿಡಬೇಕು. ಇದು ಸ್ನೇಹಿತನಿಗೂ ಸಹ ಅನ್ವಯಿಸುವ ನಿಯಮ.”

ಯುಧಿಷ್ಠಿರ: “ಪಾಪದ ಮೂಲ ಯಾವುದು? ಯಾವ ಪಾತಳಿಯ ಮೇಲೆ ಅದು ಕಟ್ಟಲ್ಪಡುತ್ತದೆ? ಅದು ಎಲ್ಲಿಂದ ಉಗಮವಾಗುತ್ತದೆ? ಇದನ್ನು ಕುರಿತು ಹೇಳು.”

ಭೀಷ್ಮ: “ಎಲ್ಲವೂ ತನಗೆ ಬೇಕೆಂಬ ಲೋಭವೇ ಪಾಪಗಳೆಲ್ಲದರ ಮೂಲ. ಅದು ಎಲ್ಲ ಪುಣ್ಯಗಳನ್ನು, ಎಲ್ಲ ಒಳ್ಳೆಯತನವನ್ನು ನಾಶಮಾಡುತ್ತದೆ. ಅದರಿಂದಲೇ ಪಾಪದ ನದಿ ಹರಿಯುವುದು. ಲೋಭವೇ ಡಬಡ್ಡಾಳಿಕೆಯ, ಆಷಾಢಭೂತಿತನದ, ಮೋಸಗಾರಿಕೆಯ ಚಿರಂತನ ಚಿಲುಮೆ. ಕಾಮಕ್ರೋಧಗಳು, ನ್ಯಾಯಾನ್ಯಾಯ ವಿವೇಚನೆಯಿಲ್ಲದಿರುವುದು, ಹಮ್ಮುಬಿಮ್ಮುಗಳು, ದ್ವೇಷಾಸೂಯೆಗಳು, ನಾಚಿಕೆಗೆಟ್ಟ ನಡತೆ, ಯಾವುದೇ ಮೌಲ್ಯವಿಲ್ಲದಿರುವುದು, ದುಷ್ಕೀರ್ತಿ, ನಾನಾ ಆತಂಕಗಳು- ಇವೆಲ್ಲವೂ ಹುಟ್ಟುವುದು ಮೂಲತಃ ಲೋಭದಿಂದಲೇ. ಇನ್ನೂ ಹೇಳಬೇಕೆಂದರೆ, ಜಿಪುಣತನ, ದುರಾಸೆ, ದುರ್ನಡತೆಯನ್ನೇ ಇಷ್ಟಪಡುವುದು, ತನ್ನ ಹುಟ್ಟು, ವಿದ್ಯೆ, ಸೌಂದರ್ಯ, ಸಂಪತ್ತು ಇತ್ಯಾದಿಗಳ ಬಗ್ಗೆ ಹೆಮ್ಮೆಪಟ್ಟುಕೊಳ್ಳುವುದು, ದಯಾಹೀನತೆ, ಕೇಡೆಣಿಸುವುದು, ಅಪ್ರಾಮಾಣಿಕತೆ, ಇನ್ನೊಬ್ಬರ ಸಂಪತ್ತನ್ನು ದೋಚುವುದು, ಮಾತಿನಲ್ಲಿ ಕ್ರೌರ್ಯ, ಇತರರ ಬಗ್ಗೆ ಕೆಟ್ಟ ಮಾತನಾಡುವುದು, ಸುಳ್ಳನ್ನೂ ಮೋಸವನ್ನು ಇಷ್ಟಪಡುವುದು, ಹೊಟ್ಟಬಾಕತನ ಇತ್ಯಾದಿಗಳು. ಜೀವನದಲ್ಲಿ ಯಾವನೊಬ್ಬನಿಗೂ ಲೋಭವನ್ನು ಬಿಡಲು ಸಾದ್ಯವಿಲ್ಲ. ಬದುಕೇ ಸರ್ವನಾಶದತ್ತ ನಡೆದರೂ, ಲೋಭವು ಮಾತ್ರ ಶಕ್ತಿಗುಂದುವುದಿಲ್ಲ. ಸಮಸ್ತ ಶಾಸ್ತ್ರಗಳನ್ನೂ ಕರತಲಾಮಲಕ ಮಾಡಿಕೊಂಡಿರುವ ಮಹಾವಿದ್ವಾಂಸರುಗಳು, ಇತರರ ಸಂದೇಹಗಳನ್ನು ಕ್ಷಣಮಾತ್ರದಲ್ಲಿ ಪರಿಹರಿಸಬಲ್ಲವರು, ತಮ್ಮ ವ್ಯವಹಾರ ನಿರ್ವಹಣೆಯಲ್ಲಿ ಅಸಮರ್ಥರಾಗಿರುವರು, ಮೂಳೆಯಿಲ್ಲದ ಮನುಷ್ಯನಂತೆ ದುರ್ಬಲರಾಗಿರುವರು. ಇದಕ್ಕೆ ಅವರು ಈ ಲೋಭವೆಂಬ ಭೀಕರ ರೋಗಕ್ಕೆ ತುತ್ತಾಗಿರುವುದೇ ಕಾರಣ.”

ಯುಧಿಷ್ಠಿರ:“ಅಜ್ಜ, ಅಜ್ಞಾನದ ಬಗ್ಗೆ ನನಗೆ ಹೇಳು.”

ಭೀಷ್ಮ:“ಅಜ್ಞಾನದ ಮೂಲವೂ ಸಹ ಇರುವುದು ಲೋಭದಲ್ಲೇ. ಲೋಭವು ಬೆಳೆದಂತೆಲ್ಲ ಅಜ್ಞಾನವೂ ಹೆಚ್ಚುತ್ತ ಹೋಗುತ್ತದೆ. ಲೋಭದ ಮೂಲವಿರುವುದೂ ಸ್ಪಷ್ಟ ಚಿಂತನೆಯಿಲ್ಲದಿರುವುದು, ವಿವೇಚನೆಯಿಲ್ಲದಿರುವುದು ಮುಂತಾದವುಗಳಲ್ಲಿ; ಆದ್ದರಿಂದ ಅಜ್ಞಾನ ಲೋಭಗಳೆರಡೂ ಒಟ್ಟಿಗೆ ಇರುವುದು ಅನಿವಾರ್ಯ”

ಯುಧಿಷ್ಠಿರ: “ಕರ್ತವ್ಯಗಳಲ್ಲಿ ಮುಖ್ಯವಾದವುಗಳು ಯಾವುವು?”

ಭೀಷ್ಮ:“ಅತಿ ಮುಖ್ಯವಾದ ಕರ್ತವ್ಯವೇ ಆತ್ಮಸಂಯಮ.ಹೇಗೆ ಲೋಭವೆಂಬ ಪಾಪವು ಉಳಿದೆಲ್ಲ ಪಾಪಗಳಿಗೆ ಕಾರಣವಾಗುವುದೋ, ಹಾಗೆಯೇ ಆತ್ಮಸಂಯಮವು ಕ್ಷಮೆ, ತಾಳ್ಮೆ, ಅಹಿಂಸೆ, ನಿಷ್ಪಕ್ಷಪಾತ ಮನೋಭಾವ, ಸತ್ಯ, ಪ್ರಾಮಾಣಿಕತೆ, ವಿನಯ, ಸ್ಥೈರ್ಯ, ಉದಾತ್ತತೆ, ಔದಾರ್ಯ, ಕ್ರೋಧವಿಲ್ಲದಿರುವುದು, ತೃಪ್ತಿ, ಮೃದುವಚನ, ದಯಾಪರತೆ, ದ್ವೇಷನಿಲ್ಲದಿರುವುದು ಮುಂತಾದ ಸದ್ಗುಣಗಳಿಗೆ ಕಾರಣವಾಗಿ ಮನುಷ್ಯನನ್ನು ಉನ್ನತಿಯ ಪರಾಕಾಷ್ಠೆಗೆ ಏರಿಸುವುದು. ಆತ್ಮಸಂಯಮವುಳ್ಳವನು ಈ ಭೂವಿಯ ಯಾವ ಬಂಧನಗಳಿಗೂ ಒಳಗಾಗಲಾರ; ಅದನ್ನು ಸಾಧಿಸಿದವನು ವಿಮೋಚನೆಯ ಹೊಸ್ತಿಲಿನಲ್ಲಿದ್ದಂತೆಯೆ.”

ಯುಧಿಷ್ಠಿರ: ”ಅಜ್ಜ, ಸತ್ಯದ ಬಗ್ಗೆ ಹೇಳು.”

ಭೀಷ್ಮ:“ಸತ್ಯವು ಪ್ರತಿಯೊಬ್ಬ ಮಾನವನ ಚಿರಂತನ ಕರ್ತವ್ಯ; ಅದೇ ಅವನ ಪರ ಆಶ್ರಯ, ತಪಸ್ಸಿನ ಪರಾಕಾಷ್ಠೆ. ಸತ್ಯವೇ ಪರಬ್ರಹ್ಮ. ಅದೇ ಉಳಿದೆಲ್ಲ ಯಗಳಿಗಿಂತ ಶ್ರೇಷ್ಠವಾದ ಯಜ್ಞ. ಮೂರು ಲೋಕಗಳೂ ನಿಂತಿರುವುದು ಸತ್ಯದ ಮೇಲೇಯೇ. ಸತ್ಯವು ಹದಿಮೂರು ಬಗೆಯಾದದ್ದು: ನಿಷ್ಪಕ್ಷಪಾತತೆ, ಆತ್ಮನಿಗ್ರಹ, ಕ್ಷಮೆ, ಸಹನೆ, ಒಳ್ಳೆಯತನ, ತ್ಯಾಗ, ಧ್ಯಾನ, ವ್ಯಕ್ತಿಮರ್ಯಾದೆ, ಕಷ್ಟಸಹಿಷ್ಣುತೆ, ದಯೆ ಮತ್ತು ಅಹಿಂಸೆ. ಇವೆಸತ್ಯದ ಮುಖಗಳು. ಸತ್ಯವು ಅವಿನಾಶಿ, ಅಚಲವಾದದ್ದು ಮತ್ತು ಚಿರಂತನ.”

ಯುಧಿಷ್ಠಿರ:“ಯಾವ ಒಳಿತಿಗಾಗಿ ನಾವು ಶ್ರಮಿಸಬೇಕು?”

ಭೀಷ್ಮ:“ಈ ಲೋಕಕ್ಕೆ ಮೃತ್ಯುಭಯವು ಯಾವಾಗಲೂ ಇರುವುದು. ಪ್ರತಿ ರಾತ್ರಿಯೂ ಮನುಷ್ಯನ ಆಯುಷ್ಯವನ್ನು ಕಡಿಮೆಮಾಡುವುದಲ್ಲವೆ? ಮೃತ್ಯುವು ಯಾರನ್ನೂ ಕಾಯದು. ಅದು ಪ್ರತಿಯೊಬ್ಬನನ್ನೂ ಅವನಿಗೆ ಅರಿವಾಗದಂತೆ ಕ್ಷಣಕ್ಷಣಕ್ಕೂ ಬಳಿಸಾರುವುದು. ದಿನಗಳು ಕಳೆದಂತೆ ಮಾನವನ ಜೀವನ ಹ್ರಸ್ವವಾಗುತ್ತ ನಡೆಯುವುದು. ಆಸೆಗಳನ್ನು ಪೂರೈಸಿಕೊಳ್ಳುವ ಮೊದಲೇ ಮೃತ್ಯು ಬಂದುಬಿಡುವುದು. ಹೂ ಕೊಯ್ಯುತ್ತಿರುವ ಮನುಷ್ಯನನ್ನು ದುಷ್ಟಜಂತುವು ತನ್ನ ಬೇಟೆಯಾಗಿ ಹೊಂಚಿ ಕೊಂಡೊಯ್ಯುವುದು. ಆದ್ದರಿಂದ ನಾಳೆ ಮಾಡಬೇಕೆಂದಿರುವುದನ್ನು ಇಂದೇ ಮಾಡಬೇಕು; ಮಧ್ಯಾಹ್ನ ಮಾಡಬೇಕೆಂದಿರುವುದನ್ನು ಪೂರ್ವಾಹ್ನವೇ ಮಾಡಬೇಕು.ಮೃತ್ಯುವಿಗೆ ದಾಕ್ಷಿಣ್ಯವಿಲ್ಲ. ನೀನು ಮಾಡಬೇಕಾದ್ದನ್ನು ಮಾಡಿ ಮುಗಿಸುವವರೆಗೆ ಅದು ಕಾಯುವುದಿಲ್ಲ. ಆದ್ದರಿಂದ ಮನುಷ್ಯನು ತ್ವರೆಮಾಡಿ ಉತ್ಕೃ

ಷ್ಟತೆಯನ್ನು ಯೌವನದಲ್ಲಿಯೇ ಸಾಧಿಸಬೇಕು. ಜೀವನ ನಿಶ್ಚಿತವಲ್ಲ; ಸಾವೇ ನಿಶ್ಚಿತ. ಅದು ಈಗಲೇ ಬರಬಹುದು, ಯುಗಾಂತರಗಳಲ್ಲಿ ಬರಬಹುದು; ಆದರೆ ಅದಕ್ಕೆ ಸಿದ್ಧವಾಗಿರುವುದು ಮುಖ್ಯ. ಉತ್ಕೃ

ಷ್ಟತೆಯು ಇಹದಲ್ಲಿ ಕೀರ್ತಿಯನ್ನೂ ಪರದಲ್ಲಿ ಸುಖವನ್ನೂ ತಂದುಕೊಡುವುದು

“ಮನುಷ್ಯನು ಈ ಲೋಕದಲ್ಲಿ ಸಾವಿರ ಬಗೆಯ ಆಸೆಗಳಿಂದ ಪೀಡಿತನಾಗಿರುವನು. ಅನೇಕ ವಸ್ತುಗಳಿಗೆ, ಜನರಿಗೆ ಬಂಧಿತನಾಗಿರುವನು. ಅವನ ಕೆಲಸ. ಭೂಮಿಕಾಣಿಗಳು, ಮಕ್ಕಳು ಮರಿ, ಮನೆ: ಇವೆಲ್ಲವೂ ಹೆಣೆದಿರುವ ಬಲೆಯಿಂದ ಅವನನ್ನು ಮೃತ್ಯುವು ಕಿತ್ತು ಎಳೆದೊಯ್ಯುವುದು ಸತ್ಯವಲ್ಲದೆ ಇನ್ನೇನೂ ಈ ಬಂಧನದ ಬಲೆಯಿಂದ ಪಾರುಮಾಡಲಾರದು. ವಸ್ತುಗಳ ನಿಜ ಮೌಲ್ಯವನ್ನರಿತುಕೊಂಡರೆ, ಪ್ರಾಪಂಚಿಕ ಸಂಗತಿಗಳೆಲ್ಲ ಕ್ಷಣಿಕವೆಂದು ಮನದಟ್ಟಾಗುವುದು; ಅಂಥವನಿಗೆ ಮೃತ್ಯುಭಯವಿರದು. ಒಂದೇ ವ್ಯಕ್ತಿಯಲ್ಲಿ ಮೃತ್ಯುಬೀಜವನ್ನೂ ಕಾಣಬಹುದು, ಸತ್ಯವೆಂಬ ಅಮೃತತ್ವವನ್ನೂ ಕಾಣಬಹುದು. ನಾವು ಬಯಸಿದುದು ನಮಗೆ ಕಾಣಸಿಗುವುದು. ಪ್ರಾಪಂಚಿಕ ಬಂಧನಗಳನ್ನು ಮಾಡಿಕೊಳ್ಳುವುದೂ ಬೆಳೆಸುವುದೂ ಸುಲಭ; ಆದರೆ ಅಂತಹ ಬಂಧನಕ್ಕೆ ಮೃತ್ಯು ಎಂದು ಇನ್ನೊಂದು ಹೆಸರು.

“ವಿವೇಕಿಯಾದವನು ಹೇಗೂ ಇಂದ್ರಿಯಗಳನ್ನು ನಿಗ್ರಹಿಸಿರುತ್ತಾನೆ. ಕಾಮಕ್ರೋಧಗಳ ಹಿಡಿತದಿಂದ ತಪ್ಪಿಸಿಕೊಂಡಿರುತಾನೆ. ನೋವು ನಲಿವುಗಳನ್ನು ಒಂದೇ ರೀತಿ ಕಾಣುವುದು ಹೇಗೆಂದು ಅವನಿಗೆ ತಿಳಿದಿರುತ್ತದೆ. ಅವನಿಗೆ ಶಾಂತಿಯೂ ಸುಲಭ, ಅಮೃತತ್ವವೂ ಸುಲಭ. ಅವನ ಮಾತು, ಮನಸ್ಸು, ತ್ಯಾಗ ಯೋಗಗಳೆಲ್ಲ ಪರಬ್ರಹ್ಮನ ಮೇಲೆ ನೆಲೆಗೊಂಡಿರುತ್ತವೆ; ಅವನು ಮೃತ್ಯುವಿನಿಂದ ತಪ್ಪಿಸಿಕೊಳ್ಳುತ್ತಾನೆ.

“ಜ್ಞಾನಚಕ್ಷುವೆಂಬುದು ಅತ್ಯಂತ ಸೂಕ್ಷ್ಮ ವಾದದ್ದು. ಸತ್ಯವೆಂಬುದೇ ದೊಡ್ಡ ತಪಸ್ಸು. ಬಂಧನ ವೆಂಬುದು ದುಃಖಗಳಲ್ಲೆಲ್ಲ ಅತ್ಯಂತ ಘೋರವಾದದ್ದು. ತ್ಯಾಗವೆಂಬುದು ಮಹತ್ಸುಖದ ಮೂಲವು. ನಾವು ಬ್ರಹ್ಮನಿಂದ ಬ್ರಹ್ಮನ ಮೂಲಕವಾಗಿ ಹುಟ್ಟಿರುವೆವು. ಬ್ರಹ್ಮನಲ್ಲಿಯೇ ಮನಸ್ಸನ್ನು ತೊಡಗಿಸಿಕೊಂಡಿದ್ದರೆ, ಕೊನೆಗೆ ಬ್ರಹ್ಮನನ್ನೇ ಹೋಗಿ ಸೇರುವೆವು. ನಮ್ಮೊಳಗೇ ಗುಹೇಶ್ವರನಂತೆ ಅಡಗಿರುವ ಆತ್ಮನನ್ನು ಅರಸಬೇಕು.”

ಯುಧಿಷ್ಠಿರ: “ಎಲ್ಲರಿಗೂ ಪ್ರಿಯನಾದ ಮನುಷ್ಯನು ಹೇಗಿರುವನು? ಲೋಕವು ಹೇಳುವ ಪುಣ್ಯಗಳೆಲ್ಲವುನ್ನೊ ಸಂಪಾದಿಸಿರುವವನೆಂದು ಯಾರನ್ನು ಕುರಿತು ಹೇಳಬಹುದು”? ಭೀಷ್ಮ : “ನೀನು ಹೇಳುವಂತಹ ವ್ಯಕ್ತಿಯು ಬಹುಶ್ರುತನೂ ಸಜ್ಜನನೂ ತಪಸ್ವಿಯೂ ಆಗಿರುವನು. ಅಹಂಕಾರದಿಂದ ಅವನ ರಕ್ತವು ಎಂದಿಗೂ ಕುದಿಯದು. ಕ್ರೋಧವಾಗಲಿ ಅತೃಪ್ತಿಯಾಗಲಿ ಅವನಲ್ಲಿ ಕಾಣಸಿಗದು. ಇಂದ್ರಿಯಗಳು ಅವನನ್ನು ಹಾದಿತಪ್ಪಿಸವು. ಪರವು ಸತ್ಯದ ಸಾಕ್ಷಾತ್ಕಾರದಿಂದ ಲಭಿಸುವ ಶಾಂತಿಯನ್ನು ಯಾವಾಗಲೂ ಅವನು ಅನುಭವಿಸುತ್ತಿರುವನು.”

ಯೂಧಿಷ್ಠಿರ : “ಒಬ್ಬನು ಪಾಪಿಯಾಗುವುದು ಹೇಗೆ, ಪುಣ್ಯವಂತನಾಗುವುದು ಹೇಗೆ? ತ್ಯಾಗಿಯಾಗಲು ಅವನಿಗೆ ಸಹಾಯ ಯಾವುದು? ವಿಮೋಚನೆಯನ್ನು ಅವನು ಹೇಗೆ ಪಡೆಯುವನು?”

ಭೀಷ್ಮ : “ಆಸೆಯೇ ಮನುಷ್ಯನು ಪಾಪಿಯಾಗಲು ಕಾರಣ. ವಿಷಯವಸ್ತುವನ್ನು ನೋಡಿದಾಗ ಆಸೆಯಿಂದ ಅದನ್ನು ಪಡೆಯಲೆತ್ನಿಸುವನು. ಆಸೆಯ ಮೂಲಕವಾಗಿ ಅದಕ್ಕೆ ಬಂಧಿತನಾಗುವನು. ಜೊತೆಗೇ ಅದರ ಮೇಲೆ ಲೋಭ, ಉಳಿದವುಗಳ ಮೇಲೆ ಹೇಯಭಾವನೆ, ವಿವೇಚನೆ ಹೊರಟು ಹೋಗುವಿಕೆ ಎಲ್ಲವೂ ಉಂಟಾಗುವುವು. ಮನಸ್ಸು ಭ್ರಮೆಗೀಡಾಗಿ ಮನುಷ್ಯನು ಸನ್ನಡತೆಯನ್ನು ಬಿಟ್ಟುಬಿಡುವನು. ತನ್ನಲ್ಲಿಲ್ಲದ ಮೌಲ್ಯಗಳನ್ನು ಇವೆಯೆಂದು ಭ್ರಮಿಸಿಕೊಂಡಿರುವುದೇ ಅವನ ಧೋರಣೆಯಾಗಿ, ಅವನು ಆಷಾಢ ಭೂತಿಯೆನಿಸಿಕೊಳ್ಳುವನು. ಪಾಪಮಾರ್ಗವನ್ನು ಹಿಡಿದಿರುವ ಮನುಷ್ಯನಿಗೆ ಈ ಆಷಾಢಭೂತಿತನದ ಮೂಲಕವಾಗಿ ದ್ರವ್ಯಸಂಪಾದನೆ ಸುಲಭವಾಗಿ ಬಿಡುವುದು. ಇಂತಹ ಮನುಷ್ಯನು ಹಿರಿಯರ, ಹಿತೈಷಿಗಳ ಮಾತನ್ನು ಕೇಳುವುದಿಲ್ಲ. ಇಂತಹ ಪಾಪಿಗೆ ವಿಮೋಚನೆಯ ಭರವಸೆಯಿರುವುದಿಲ್ಲ.

“ಋಜುತ್ವವುಳ್ಳ ಪುಣ್ಯಪುರುಷನು ಇತರರಲ್ಲಿ ಒಳ್ಳೆಯದನ್ನೇ ಅರಸುವ ಮೂಲಕವಾಗಿ ತನಗಾಗಿ ಒಳ್ಳೆಯದನ್ನು ಸಂಪಾದಿಸಿಕೊಳ್ಳುವನು, ಸುಖಗಳ ನಿಜವಾದ ಸ್ವರೂಪವನ್ನು ವಿವೇಚಿಸಬಲ್ಲವನಾಗಿರುವನು. ಇಂದ್ರಿಯಗಳನ್ನು ಜಯಿಸಿ ಉತ್ಕೃ

ಷ್ಟನೆನಿಸುವನು. ಆದರು ಅವನಿಗೆ ತೃಪ್ತಿಯಿರುವುದಿಲ್ಲ; ತ್ಯಾಗವೆಂಬ ಕಲೆಯಲ್ಲಿ ಪರಿಣತನಾಗುವವರೆಗೊ ವಿಶ್ರಾಂತನಾಗುವುದಿಲ್ಲ. ಆಸೆಯಿಂದ ಮುಕ್ತನಾಗಲು ಅವನಿಗೆ ಜ್ಞಾನವು ಸಹಾಯಮಾಡುವುದು. ಕೊನೆಗೆ ಅವನು ಪ್ರಪಂಚವೆನ್ನುವುದು ಸಾವ್ನಿ ಕ್ಷಣಿಕವಾದ ಒಂದು ವೈಭವಪ್ರದರ್ಶನವೆಂಬುದನ್ನು ಮನಗಂಡು, ಉತ್ಕೃ

ಷ್ಟತೆಯ ಫಲಗಳಾದ ಸ್ವರ್ಗ, ಸುಖ ಇತ್ಯಾದಿಗಳನ್ನೂ ತ್ಯಜಿಸಿ, ಮುಕ್ತನಾಗುವುದಕ್ಕೆ ಪ್ರಯತ್ನಿಸುವನು.”

ಯುಧಿಷ್ಠಿರ:“ಬಂಧನದಿಂದ ಮುಕ್ತನಾಗಿ ವಿಮೋಚನೆಯನ್ನು ಪಡೆಯಬಯಸುವವನಿಗೆ ಇರಬೇಕಾದ ಗುಣಗಳು ಯಾವುವು?”

ಭೀಷ್ಮ:“ವಿಮೋಚನೆಗೆ ಯೋಗ್ಯನಾಗಿರುವ ಮನುಷ್ಯನು ಇಂದ್ರಿಯಪ್ರಪಂಚವನ್ನು ದಾಟಿ ಬಹುದೂರ ಬಂದಿರುವನು. ಹಸಿವು ಬಾಯಾರಿಕೆಗಳಾಗಲಿ, ದೇಹದ ಇತರ ಸ್ಥಿತಿಗಳಾಗಲಿ ಅವನನ್ನು ಬಾಧಿಸವು. ಕ್ರೋಧ ಅತ್ಯಾಶೆ ತಪ್ಪುಕಲ್ಪನೆ ಇತ್ಯಾದಿಗಳ ಬಲೆಯಲ್ಲಿ ಅವನ ಮನಸ್ಸು ಸಿಕ್ಕಿಕೊಳ್ಳುವುದಿಲ್ಲ. ತನ್ನನ್ನು ತಾನು ಮರೆಯುವ ಅವಿವೇಕವನ್ನು ಅವನು ಮಾಡನು. ಅವನಿಗೆ ರಾಜನ ಅರಮನೆಯೂ ಒಂದೇ, ಬಿದಿರುಕಡ್ಡಿಗಳಿಂದಾಗ ಗುಡಿಸಲೂ ಒಂದೇ. ನೋವು ನಲಿವುಗಳು ಹುಟ್ಟುವುದೇ ಭ್ರಮೆಯಲ್ಲಿ ಎಂದು ಅರಿತಿರುವ ಅವನನ್ನು ಅವು ಬಾಧಿಸುವುದಿಲ್ಲ. ಅವನ ಪಾಲಿಗೆ ಪ್ರಪಂಚವೆಲ್ಲವೂ ಪಂಚಭೂತಗಳ ಸಂಘಟ್ಟನೆಯಿಂದಾದ ಪರಿಣಾಮವೇ ಹೊರತು ಬೇರೆಯಲ್ಲ. ಅವನು ಪ್ರಪಂಚವನ್ನು ನೋಡುವಾಗ ಈ ಸತ್ಯವು ಯಾವಾಗಲೂ ಅವನ ಮನಸ್ಸಿನಲ್ಲಿರುವುದು. ಸುಖದುಃಖಗಳು, ಲಾಭನಷ್ಟಗಳು, ಜಯಾಪಜಯಗಳು ಅವನಿಗೆ ಸಮಾನವಾಗಿ ತೋರುವುವು. ಅವನ ಹೃದಯದಲ್ಲಿ ಭಯಕ್ಕಾಗಲಿ ಆತಂಕಕ್ಕಾಗಲಿ ಸ್ಥಳವಿರದು. ಮಹಾಶಕ್ತರೂ ಮಹದ್ವೈಭವವುಳ್ಳವರೂ ಆದ ರಾಜರು ಎಷ್ಟೋ ಜನ ತಾತ್ಕಾಲಿಕವಾಗಿ ಆಗಿಹೋಗಿರುವರು ಎಂಬುದು ಅವನಿಗೆ ಗೊತ್ತು. ನಿಜಸ್ವರೂಪಜ್ಞಾನ ಹಾಗೂ ಲೋಕಾನುಭವಗಳ ಮೂಲಕ ಎಲ್ಲವೂ ಕ್ಷಣಿಕ ಎಂದು ಅರಿತುಕೊಂಡಿರುವ ಅವನು ಪ್ರಪಂಚದ ಯಾವುದನ್ನೂ ತಥ್ಯವುಳ್ಳದ್ದೆಂದು ಗ್ರಹಿಸುವುದಿಲ್ಲ. ಈ ವಿವೇಕವು ಮೂಡಿದೊಡನೆ ಮನುಷ್ಯನು ಮನೆಯಲ್ಲೇ ಇರಲಿ, ಕಾಡಿನಲ್ಲೇ ಇರಲಿ, ತಕ್ಷಣವೇ ವಿಮೋಚನೆಯನ್ನು ಹೊಂದುವನು.”

ಯುಧಿಷ್ಠಿರ:“ನೀನು ಹೇಳುವುದು ವಿಚಿತ್ರವಾಗಿದೆ. ಗೃಹಸ್ಥಜೀವನವನ್ನು ತೊರೆದು ವಾನಪ್ರಸ್ಥನಾಗದೆ ಮನುಷ್ಯನು ವಿಮೋಚನೆಯನ್ನು ಹೊಂದುವುದೆಂದರೇನು?”

ಭೀಷ್ಮ: “ವಿಮೋಚನೆ ಪಡೆಯುವುದಕ್ಕಾಗಿ ರಾಜನು ರಾಜ್ಯವನ್ನು ತ್ಯಜಿಸಬೇಕೆಂದೇನೂ ಇಲ್ಲ. ಅವನು ಎಲ್ಲ ಬಂಧನಗಳಿಂದ ಮುಕ್ತನಾಗಿರಬೇಕು ಅಷ್ಟೆ. ಯಾವುದೇ ಸಂಬಂಧಗಳಿಂದ ವಿಚಲಿತನಾಗದೆ, ಮನಸ್ಸಿನ ಚಿಂತನೆಯನ್ನು ಪರಬ್ರಹ್ಮನ ಮೇಲೆ ಇರಿಸಿದಾಗ ವಿಮೋಚನೆ ಸಿದ್ಧಿಸುವುದು. ತ್ಯಾಗವೆಂಬುದು ಇದಕ್ಕೆ ಉತ್ತಮ ಮಾರ್ಗವೆಂಬುದೇನೋ ಸರಿ. ಜ್ಞಾನವು ಮನಸ್ಸನ್ನು ಯೋಗಕ್ಕೂ, ಆ ಮೂಲಕ ಬ್ರಾಹ್ಮೀಸ್ಥಿತಿಗೂ ಕೊಂಡೊಯ್ಯುವಾಗ ತ್ಯಾಗವು ತಂತಾನೆ ಅಲ್ಲಿಗೆ ಬರುತ್ತದೆ. ಗೃಹಸ್ಥನಾದವನೂ ಸಹ ಸಂನ್ಯಾಸಿಗೆ ಸಮನಾದ ಯಮನಿಯಮಗಳನ್ನು ಸಾಧಿಸಿದ್ದೇ ಆದರೆ ವಿಮೋಚನೆಯನ್ನು ಖಂಡಿತ ಹೊಂದಬಹುದು.”

ಯುಧಿಷ್ಠಿರ:“ಪುರೋಭಿವೃದ್ಧಿಯ ಅಧಿದೇವತೆಯು ಯಾರಲ್ಲಿ ನೆಲೆಸುವಳು?”

ಭೀಷ್ಮ:’’ಸ್ಫುಟವಾಗಿ ಮಾತನಾಡುವವನು, ಯಾವಾಗಲೂ ಕಾರ್ಯಪ್ರವೃತ್ತನಾಗಿರುವವನು, ಗಮನವಿಟ್ಟು ಗ್ರಹಿಸುವವನು, ಈ ಮೂವರಲ್ಲಿ ಈ ದೇವತೆಯು ನೆಲೆಸುವಳು. ಅಂಥವನು ಕ್ರೋಧದಿಂದ ಮುಕ್ತನಾಗಿ, ಕಾಮಾದಿಗಳನ್ನು ನಿಗ್ರಹಿಸಿಕೊಂಡು, ಉನ್ನತ ಮನಃಸ್ಥಿತಿಯಲ್ಲಿರುವನು. ಅಲ್ಪಚೇತನನಲ್ಲಿ, ಶೀಘ್ರಕೋಪಿಯಲ್ಲಿ, ಆತ್ಮವಿಶ್ವಾಸವಿಲ್ಲದವನಲ್ಲಿ ದೇವತೆಯು ನೆಲೆಸಲಾರಳು. ವೇದಾಧ್ಯಯನನಿರತನಾದ ಬ್ರಾಹ್ಮಣ, ಋಜುತ್ವವುಳ್ಳ ಕ್ಷತ್ರಿಯ, ವ್ಯವಸಾಯನಿರತನಾದ ವೈಶ್ಯ ಹಾಗೂ ಭಕ್ತನಾದ ಶೂದ್ರನಲ್ಲಿ ದೇವಿಯು ನೆಲೆಸಿರುವಳು.”

ಯುಧಿಷ್ಠಿರ:“ಇಹವನ್ನು ಸುಖವಾಗಿ ದಾಟಿ, ಪರದಲ್ಲೂ ಸಲ್ಲಬಯಸುವ ಮನುಷ್ಯನ ಕರ್ತವ್ಯಗಳೇನು?”

ಭೀಷ್ಮ:“ಅಂಥವನು ಇತರ ಜೀವಿಗಳ ಬದುಕನ್ನು ಹಾಳುಮಾಡುವುದು, ಇತರರ ವಸ್ತುಗಳನ್ನು ಕದಿಯುವುದು, ಹಾಗೂ ಇನ್ನೊಬ್ಬನ ಹೆಂಡತಿಯನ್ನು ಭೋಗಿಸುವುದು- ಈ ಮೂರು ದೈಹಿಕ ಕ್ರಿಯೆಗಳನ್ನು ಮಾಡಬಾರದು. ಕೆಟ್ಟ ಮಾತು, ಕಠಿಣ ನುಡಿಗಳು, ಸುಳ್ಳು ಹಾಗೂ ಇನ್ನೊಬ್ಬರ ಗುಟ್ಟನ್ನು ರಟ್ಟು ಮಾಡುವುದು- ಈ ನಾಲ್ಕು ಬಗೆಯ ವಾಕ್ಕನ್ನು ಬಿಡಬೇಕು. ಇನ್ನೊಬ್ಬನಿಗೆ ಸೇರಿದ ವಸ್ತುವನ್ನು ಆಶಿಸುವುದು, ಇತರರನ್ನು ಹಿಂಸಿಸುವುದು ಹಾಗೂ ವೇದಗಳಲ್ಲಿ ಅಪನಂಬಿಕೆ ಪಡುವುದು- ಈ ಮೂರು ಮಾನಸಿಕ ಕ್ರಿಯೆಗಳನ್ನು ಬಿಡಬೇಕು. ಈ ಹತ್ತನ್ನು ಬಿಟ್ಟವನು ಇಹವನ್ನು ಸುಖವಾಗಿ ದಾಟಿ ಪರದಲ್ಲೂ ಸಲ್ಲುವಂತಾಗುವನು.”

ಯುಧಿಷ್ಠಿರ:“ಬ್ರಹ್ಮಚರ್ಯಕ್ಕಿಂತಲೂ ಮಿಗಿಲಾದದ್ದು ಯಾವುದು? ಅತ್ಯುತ್ತಮ ಮೌಲ್ಯ ಹಾಗೂ ಅತ್ಯುತ್ತಮ ಶುದ್ಧತೆ ಎಂದರೆ ಯಾವುವು?”

ಭೀಷ್ಮ:“ಮದ್ಯಮಾಂಸಗಳಿಂದ ದೂರವಿರುವುದು ಬ್ರಹ್ಮಚರ್ಯಕ್ಕಿಂತಲೂ ಮಿಗಿಲು. ಋಜುತ್ವವೇ ಅತ್ಯುತ್ತಮ ಮೌಲ್ಯ ಹಾಗೂ ಋಜುತ್ವವೇ ಅತ್ಯುತ್ತಮ ಶುದ್ಧತೆ.”

ಯುಧಿಷ್ಠಿರ:“ಧರ್ಮವನ್ನು ಯಾವಾಗ ಆಚರಿಸಬೇಕು? ಅರ್ಥವನ್ನು ಯಾವಾಗ ಗಳಿಸಬೇಕು? ಕಾಮದಲ್ಲಿ ಯಾವಾಗ ನಿರತನಾಗಬೇಕು?”

ಭೀಷ್ಮ:“ಜೀವನದ ಮೊದಲ ಭಾಗದಲ್ಲಿ ಮನುಷ್ಯನು ಅರ್ಥವನ್ನು ಗಳಿಸಬೇಕು; ಎರಡನೆಯ ಭಾಗದಲ್ಲಿ ಋಜುಜೀವನವನ್ನು ನಡೆಸಬೇಕು; ಅನಂತರ ಸುಖಗಳನ್ನು ಅನುಭವಿಸಬೇಕು; ಆದರೆ ಈ ಮೂರು ಕಾಲಗಳಲ್ಲಿಯೂ ಅವುಗಳಿಗೆ ಅಂಟಿಕೊಂಡಿರಬಾರದು. ಜೀವನದ ಕೊನೆಯ ಗುರಿ ಮೋಕ್ಷವಾಗಿರಬೇಕು.”

ಯುಧಿಷ್ಠಿರ:“ಯಾವ ತೀರ್ಥವು ಅತ್ಯಂತ ಪವಿತ್ರವಾದುದ್ದು?”

ಭೀಷ್ಮ:“ಎಲ್ಲ ತೀರ್ಥಗಳೂ ಮನುಷ್ಯನನ್ನು ಪಾವನಮಾಡುವುದರಲ್ಲಿ ಸಂದೇಹವಿಲ್ಲ. ಆದರೆ ಮನುಷ್ಯನನ್ನು ಶುದ್ಧೀಕರಿಸುವುದರಲ್ಲಿ ಸತ್ಯವನ್ನು ಮೀರಿಸಿದ ತೀರ್ಥವಿಲ್ಲ. ಮನಸ್ಸೆಂಬ ಆಳವರಿಯದ, ಕಲ್ಮಷರಹಿತವಾದ, ಶುದ್ಧವಾದ ತೀರ್ಥದಲ್ಲಿ ಮನುಷ್ಯನು ಸ್ನಾನಮಾಡಬೇಕು. ಈ ಸರಸ್ಸಿಗೆ ಸತ್ಯವೇ ನೀರು; ಅರಿವೇ ದಡಗಳು. ಈ ಮಾನಸಸರೋವರದಲ್ಲಿ ಸ್ನಾನಮಾಡಿದವನು ಮೃದುವೂ, ಪ್ರಾಮಾಣಿಕನೂ, ಸತ್ಯವಂತನೂ, ದಯಾಶಾಲಿಯೂ, ಸಂಯಮಿಯೂ ಶಾಂತನೂ ಆಗುವನು.”

ಯುಧಿಷ್ಠಿರ:“ಮಾನವನ ನಿಜವಾದ ಗೆಳೆಯನಾರು? ತಂದೆತಾಯಿಗಳೆ, ಮಗನೆ, ಗುರುವೆ, ಬಂಧುವೆ ಮಿತ್ರನೆ? ಸತ್ತಾಗ ದೇಹವನ್ನು ಮರದ ತುಂಡಿನಂತೆ ಅಥವಾ ಮಣ್ಣಿನ ಹೆಂಟೆಯಂತೆ ಬಿಸುಡುವರು. ಯಾವ ಗೆಳೆಯನು ಮನುಷ್ಯನನ್ನು ಸತ್ತಾಗಲೂ ಅನುಸರಿಸುವನು?”

ಭೀಷ್ಮ:“ಈ ಸುಂದರ ಪ್ರಪಂಚಕ್ಕೆ ಮಾನವನು ಬರುವುದು ಏಕಾಂಗಿಯಾಗಿ; ಏಕಾಂಗಿಯಾಗಿಯೇ ಅದನ್ನವನು ಬಿಟ್ಟುಹೋಗಬೇಕು. ಜೀವನಯಾತ್ರೆಯಲ್ಲಿ ಮಾನವನಿಗೆ ಯಾರೊಬ್ಬರೂ ಜೊತೆಗಾರರಿಲ್ಲ. ನೀನು ಹೇಳಿದ ತಂದೆತಾಯಿಗಳು, ಬಂಧುಮಿತ್ರರು, ಗುರುಹಿರಿಯರು ಎಲ್ಲರೂ ಸತ್ತೊಡನೆ ಮುಖ ತಿರುಗಿಸುವವರೇ. ನೀನು ಬಿಟ್ಟುಹೋಗುವ ಶರೀರದ ಮೇಲೆ ಅವರಿಗೆ ಯಾವ ಆಸಕ್ತಿಯೂ ಉಳಿಯದು. ಧರ್ಮ ಅಥವಾ ಋಜುತ್ವವೊಂದೇ ಸಾವಿನ ನಂತರವೂ ಮಾನವನ ಜೊತೆಗೆ ಬರುವುದು; ಆದ್ದರಿಂದ ಮಾನವನು ಅದನ್ನೇ ಆಶ್ರಯಿಸಬೇಕು.”

ಯುಧಿಷ್ಠಿರ:“ಈ ಲೋಕದಲ್ಲಿ ಎಲ್ಲರಿಗೂ ಏಕಮಾತ್ರ ಆಶ್ರಯವಾದ, ನಮ್ಮ ಅಭಿಲಾಷೆಗಳನ್ನೆಲ್ಲ ಪೂರೈಸಬಲ್ಲ ಒಬ್ಬ ದೇವನಿರುವನೆ? ಯಾವ ಧರ್ಮವು ಎಲ್ಲ ಧರ್ಮಗಳಿಗಿಂತಲೂ ಮೇಲಾದುದು? ಯಾವ ಮಂತ್ರವು ಮನುಷ್ಯನನ್ನು ಪುನರ್ಜನ್ಮದ ಬಂಧನದಿಂದ ಬಿಡಿಸಬಲ್ಲುದು?”

ಭೀಷ್ಮ:“ದೇವರ ದೇವನಾದ ಕೃಷ್ಣನೇ ಲೋಕದೊಡೆಯನು. ಸಮಸ್ತ ಜೀವಿಗಳಲ್ಲೂ ಅವನೇ ಶ್ರೇಷ್ಠನು. ಅವನೇ ವಿಶ್ವವ್ಯಾಪಿಯು. ಅವನ ನಾಮಸ್ಮರಣೆಯ ಮೂಲಕ, ಅವನನ್ನು ಧ್ಯಾನಮಾಡುವುದರ ಮೂಲಕ, ಮನುಷ್ಯನು ದುಃಖವನ್ನು ದಾಟುವನು. ಕೃಷ್ಣನೇ ಶ್ರೇಷ್ಠಧರ್ಮವು. ಅವನೇ ಪರಾಶಕ್ತಿಯು. ಅವನೇ ಉತ್ಕೃ

ಷ್ಟ ತಪಸ್ಸು. ಪವಿತ್ರರಲ್ಲಿ ಪವಿತ್ರನಾದ ಅವನೇ ಏಕಮಾತ್ರ ಆಶ್ರಯನು. ಸೃಷ್ಟಿಯ ಆದಿ, ಅಂತ್ಯಗಳೂ ಅವನೇ. ಅವನೇ ಪರಬ್ರಹ್ಮವು. ಭೂತ ಭವಿಷ್ಯದ್ವರ್ತಮಾನಗಳಿಗೆ ಅಧಿಪತಿಯೂ ಪರಮಾತ್ಮನೂ ಆದ ಅವನಿಗೇ ಶರಣಾಗಿ ಅವನೊಡನೆ ನೀನು ಐಕ್ಯವಾಗು.

ಯುಧಿಷ್ಠಿರನ ಪ್ರಶ್ನೆಗಳೆಲ್ಲ ಮುಗಿದವು. ಭೀಷ್ಮನು, “ಮಗು, ನೀನು ಅಪೇಕ್ಷಿಸಿದುದನ್ನೆಲ್ಲ ನಿನಗೆ ತಿಳಿಸಿಕೊಟ್ಟಿರುವೆ. ನಿನ್ನ ರಾಜ್ಯಕ್ಕೆ ಹಿಂದಿರುಗಿ ಆಳ್ವಿಕೆಯನ್ನು ಪ್ರಾರಂಭಿಸು. ಈ ಲೋಕದಲ್ಲಿ ನಹುಷ ಹರಿಶ್ಚಂದ್ರ ಯಯಾತಿ ಇತ್ಯಾದಿ ರಾಜರ ಆಳ್ವಿಕೆಯಲ್ಲಿದ್ದಂತೆಯೇ ನಿನ್ನ ಆಳ್ವಿಕೆಯಲ್ಲಿಯೂ ಪ್ರಜೆಗಳು ಸುಖವಾಗಿರುವರು. ನನ್ನ ಹಾರ್ದಿಕ ಶುಭ ಹಾರೈಕೆ ನಿನ್ನ ಮೇಲಿದೆ. ಈಗ ಹೋಗು; ಉತ್ತರಾಯಣ ಪುಣ್ಯಕಾಲ ಬಂದಾಗ ಮತ್ತೆ ಬಾ. ಅದಕ್ಕಾಗಿಯೇ ನಾನು ಕಾಯುತ್ತಿರುವೆ. ಆಗ ಮತ್ತೆ ಭೇಟಿಯಾಗೋಣ.”

ಯುಧಿಷ್ಠಿರನು ಭೀಷ್ಮನನ್ನು ನಮಸ್ಕರಿಸಿ ಮೃದುವಾಗಿ ಬೀಳ್ಕೊಂಡನು. ಎಲ್ಲರೂ ಹಸ್ತಿನಾಪುರಕ್ಕೆ ಹಿಂದಿರುಗಿದರು.

ಪರಿವಿಡಿ