ಪರಿವಿಡಿ

This book is available at Ramakrishna Ashrama, Mysore.

ಅನುಶಾಸನಪರ್ವ

ಭೀಷ್ಮನಿಗೆ ಮಾನವಜನ್ಮದಿಂದ ಮುಕ್ತಿಕೊಡುವ ಆ ದಿನ ಬಂದೊದಗಿದ ಕೂಡಲೆ ಪಾಂಡವರು ಧೃತರಾಷ್ಟ್ರನನ್ನೂ ಕೃಷ್ಣನನ್ನೂ ಮುಂದಿಟ್ಟುಕೊಂಡು, ಗಂಧಪುಷ್ಪಧೂಪದೀಪಗಳನ್ನೂ ರತ್ನಾಭರಣಗಳನ್ನೂ ತೆಗೆದುಕೊಂಡು ರಣರಂಗದಲ್ಲಿ ಭೀಷ್ಮನು ಶರಶಯ್ಯೆಯಲ್ಲಿ ಮಲಗಿದ್ದೆಡೆಗೆ ನಡೆದರು. ಅವರೊಡನೆ ಕುಂತಿ ಗಾಂಧಾರಿ ದ್ರೌಪದಿ ಸಾತ್ಯಕಿ ವಿದುರ ಯುಯುತ್ಸು ಮೊದಲಾದವರೂ ಹೋದರು.

ಭೀಷ್ಮನ ಸುತ್ತಲೂ ವ್ಯಾಸ ಪರಾಶರ ನಾರದರೇ ಮೊದಲಾದ ಋಷಿಗಳು ನೆರೆದಿದ್ದರು. ಯುಧಿಷ್ಠಿರನು ಅಜ್ಜನಿಗೆ ನಮಸ್ಕರಿಸಿ, “ದೇವ, ನಾನು ಪಾಂಡವನಾದ ಯುಧಿಷ್ಠಿರ. ನನ್ನ ಸಹೋದರರನ್ನೂ ನಿನ್ನ ಪ್ರೀತಿಪಾತ್ರರನ್ನೂ ಕರೆತಂದಿದ್ದೇನೆ. ನಿನ್ನನ್ನು ಗೌರವಿಸಲು ಇಡೀ ಹಸ್ತಿನಾವತಿಯೇ ಇಲ್ಲಿಗೆ ಬಂದಿದೆ. ಧೃತರಾಷ್ಟ್ರ ಕೃಷ್ಣರೂ ಬಂದಿದ್ದಾರೆ. ದಯವಿಟ್ಟು ಕಣ್ಣು ತೆರೆದು ನಮ್ಮನ್ನು ನೋಡು” ಎಂದನು. ಭೀಷ್ಮನು ಕಣ್ತೆರೆದು ಎಲ್ಲರನ್ನೂ ನೋಡಿ, “ಮಗು, ಈ ಸಮಸ್ತರ ಜೊತೆಗೆ ನಿನ್ನನ್ನು ನೋಡಲು ಸಂತೋಷವಾಗುತ್ತಿದೆ. ಕೊನೆಗೂ ಉತ್ತರಾಯಣ ಬಂದಿತಲ್ಲವೆ! ಶರಶಯ್ಯೆಯಲ್ಲಿ ಮಲಗಿ ನೂರಾರು ವರ್ಷಗಳಾದಂತೆ ಅನ್ನಿಸುತ್ತಿದೆ. ಮಾಘಮಾಸ ಬಂದಿದೆ. ನಾನು ಈ ಭೂಮಿಯನ್ನು ಬಿಡುವ ಕಾಲ ಸನ್ನಿಹಿತವಾಯಿತು!” ಎಂದನು. ಆಮೇಲೆ ಧೃತರಾಷ್ಟ್ರನಿಗೆ, “ಮಗನೇ, ನಿನಗೆ ರಾಜನ ಕರ್ತವ್ಯಗಳೆಲ್ಲವೂ ತಿಳಿದಿವೆ. ನಿನಗೆ ಗೊತ್ತಿಲ್ಲದಿರುವುದು ಯಾವುದೂ ಇಲ್ಲ. ವಿವೇಕಿಯಾದ ನೀನು ನಿನ್ನ ಮಕ್ಕಳ ಸಾವಿಗೆ ಶೋಕಿಸಬಾರದು. ಪಾಂಡವರು ನಿನ್ನ ಮಕ್ಕಳೇ; ನಿನ್ನ ಮೇಲೆ ಭಕ್ತಿಯಿಂದಿದ್ದಾರೆ. ಅವರೊಡನೆ ಸುಖವಾಗಿರು” ಎಂದನು. ನಂತರ ಅವನ ದೃಷ್ಟಿ ಕೃಷ್ಣನ ಕಡೆಗೆ ಹೊರಳಿತು. ಪುಷ್ಪಗಳನ್ನು ತರಿಸಿ ಅವುಗಳಿಂದ ಅವನನ್ನು ಪೂಜಿಸಿ, “ಕೃಷ್ಣಾ, ನೀನು ಈ ಜಗತ್ತಿಗೆಲ್ಲ ಈಶನು. ಪುರುಷನೆನ್ನಿಸಿಕೊಳ್ಳುವ ನೀನೇ ವಿಶ್ವದ ಸೃಷ್ಟಿಕರ್ತನು. ನೀನೇ ಪರಮಾತ್ಮನು. ನಿನ್ನ ವಿಶ್ವರೂಪವನ್ನು ತೋರಿಸಿ, ನನಗಿನ್ನು ಮನುಷ್ಯಶರೀರವನ್ನು ತೊರೆದು ಈ ಲೋಕವನ್ನು ಬಿಟ್ಟುಹೊರಡಲು ಅಪ್ಪಣೆಕೊಡು. ನಿನ್ನ ಕೃಪೆಯಿಂದ ನನಗೆ ಉತ್ತಮ ಗತಿ ದೊರೆಯಲಿ” ಎನ್ನಲು. ಕೃಷ್ಣನು ಅವನಿಗೆ ವಿಶ್ವರೂಪವನ್ನು ದರ್ಶನ ಮಾಡಿಸಿದನು. ಅನಂತರ, “ದೇವವ್ರತ, ನಿನ್ನ ನಿಜಧಾಮಕ್ಕೆ ಇನ್ನು ನೀನು ಹೊರಡು. ಹೋಗಿ ವಸುಗಳನ್ನು ಸೇರಿಕೋ. ಮಾರ್ಕಂಡೇಯನಂತೆ ನಿನಗೆ ಪುನರ್ಜನ್ಮವಿಲ್ಲ. ಮೃತ್ಯುವು ಸೇವಕನಂತೆ ನಿನ್ನ ಆಣತಿಗಾಗಿ ಕಾದಿರುವನು. ನೀನು ಅವನನ್ನು ಕರೆಯಬಹುದು” ಎಂದನು.

ಭೀಷ್ಮನ ಮುಖವು ದೇದೀಪ್ಯಮಾನವಾಯಿತು. ಅವನ ಕಣ್ಣು ಮುಚ್ಚಿ ಕೆಲವು ಕ್ಷಣಗಳು ಸುಮ್ಮನಿದ್ದನು. ಸ್ವಲ್ಪ ಪ್ರಯತ್ನಿಸಿ ಸಾಯಲು ಇಚ್ಛೆಪಟ್ಟನು. ಜ್ವಾಲೆಯೊಂದು ಅವನ ಶರೀರವನ್ನು ಬಿಟ್ಟು ಅಂತರಿಕ್ಷಕ್ಕೆ ಏರಿದ್ದು ಸುತ್ತಲಿನವರಿಗೆ ಕಾಣಿಸಿತು. ದೇವದುಂದುಭಿಗಳು ಮೊಳಗಿದವು. ತಂಪಾದ, ಸುಗಂಧಪೂರಿತ ಗಾಳಿಯು ಬೀಸಿತು. ಭೂಮಿಯು ಪ್ರಶಾಂತವಾಯಿತು. ಎಲ್ಲರ ಮನಸ್ಸೂ ಶಾಂತಿಯಿಂದ ತುಂಬಿಹೋಯಿತು. ಶರಗಳ ಸಮೇತವಾಗಿ ಅವನ ಶರೀರವನ್ನು ಗಂಧದ ಚಿತೆಯ ಮೇಲಿಟ್ಟು ಯುಧಿಷ್ಠಿರನೂ ವಿದುರನೂ ಪುಷ್ಪಗಳಿಂದ ಮುಚ್ಚಿದರು. ಯುಯುತ್ಸು ಶ್ವೇತಚ್ಛತ್ರವನ್ನು ಹಿಡಿದನು. ಬ್ರಾಹ್ಮಣರು ಸಾಮಗಾನ ಮಾಡುತ್ತಿರಲು, ಧೃತರಾಷ್ಟ್ರನು ಚಿತೆಗೆ ಅಗ್ನಿಸ್ಪರ್ಶ ಮಾಡಿದನು. ಮಾರನೆಯ ದಿನ ಚಿತಾಭಸ್ಮವನ್ನು ಗಂಗೆ

ಲ್ಲಿ ವಿಸರ್ಜಿಸಿದರು. ಗಂಗೆಯು ಮೇಲೆದ್ದು ಬಂದು, “ಭಾರ್ಗವನನ್ನೂ ಸೋಲಿಸಿದ ವೀರನಾದ ನನ್ನ ಮಗು ಶಿಖಂಡಿಯಿಂದ ಕೊಲ್ಲಲ್ಲಟ್ಟನು. ನನ್ನದಯ ಇನ್ನೂ ಒಡೆಯದಿರುವುದರಿಂದ ಅದು ಕಲ್ಲಿನದಾಗಿರಬೇಕು” ಎಂದು ಗೋಳಿಟ್ಟಳು. ಕೃಷಣ

ನು ಅವಳನ್ನು, “ತಾಯಿ, ಸಮಧಾನಮಾಡಿಕೊ. ನಿನ್ನ ಮಗನು ವಸುಗಳನ್ನು ಸೇರಿರುವನು. ಅವನು ಸಾಮಾನ್ಯ ಮಾನವನಲ್ಲ” ಎಂದು ಸಮಾಧಾನ ಮಾಡಿದನು. ಗಂಗೆ ಅದೃಶ್ಯಳಾದಳು. ನದಿಯೂ ಅನಾದಿಕಾಲದಿಂದಲೂ ಹರಿಯುತ್ತಿರುವಂತೆಯೇ ಹರಿಯಲಾರಂಭಿಸಿತು.ದಯದಲ್ಲಿ ಶೋಕಸಂತೋಷಗಳೆರಡೂ ಒಟ್ಟಾಗಿ ಸೇರಿರಲು. ಎಲ್ಲರೂ ಹಸ್ತಿನಾಪುರಕ್ಕೆ ಹಿಂದಿರುಗಿದರು.

ಪರಿವಿಡಿ