ಪರಿವಿಡಿ

This book is available at Ramakrishna Ashrama, Mysore.

ಸಭಾಪರ್ವ

ಕೃಷ್ಣಾರ್ಜುನರು ತಮ್ಮ ತಂಗುದಾಣಕ್ಕೆ ಹಿಂದಿರುಗುತ್ತಿರುವಾಗ ಮಯನು ದಾರಿಯಲ್ಲಿ ಕಾದುಕೊಂಡಿದ್ದನು. ``ನಿಮ್ಮಿಂದ ಜೀವದಾನ ಪಡೆದ ಅಸುರಶಿಲ್ಪಿ ಮಯನು ನಾನು. ನಿಮಗೆ ಏನಾದರೊಂದು ರೀತಿಯಲ್ಲಿ ಕೃತಜ್ಞತೆ ತೋರಿಸಬೇಕೆಂದು ನನ್ನ ಅಪೇಕ್ಷೆಯಾಗಿದೆ. ದಯವಿಟ್ಟು ಅನುಜ್ಞೆಮಾಡಿ'' ಎಂದು ಕೇಳಿಕೊಂಡನು. ಅರ್ಜುನನು ನಕ್ಕು, ``ನಾನು ಮಾಡಿದ ಯಾವ ಒಳ್ಳೆಯ ಕೆಲಸಕ್ಕೂ ಪ್ರತಿಫಲ ಬಯಸುವವನಲ್ಲ. ನಿನ್ನ ಸ್ನೇಹ ದೊರಕಿತಲ್ಲ, ಅಷ್ಟೇ ಸಂತೋಷ'' ಎಂದು ಅಲ್ಲಿಂದ ಹೊರಡಲನುವಾದನು. ಮಯನು,``ನೀವು ಹೀಗೆನ್ನುವುದು ಯೋಗ್ಯವಾಗಿಯೇ ಇದೆ. ಆದರೂ, ನನ್ನ ಕೃತಜ್ಞತೆಯ ಕುರುಹಾಗಿ ಏನನ್ನಾದರೂ ಮಾಡಬೇಕೆಂದು ಮನಸ್ಸಾಗಿದೆ" ಎಂದು ಪುನಃ ಪುನಃ ಒತ್ತಾಯಿಸಲು, ``ಹಾಗಿದ್ದರೆ ಕೃಷ್ಣನಿಗೆ ಪ್ರೀತಿಯಾಗುವ ಏನನ್ನಾದರೂ ಮಾಡು; ಅದರಿಂದ ನನಗೂ ಪ್ರೀತಿಯಾಗುವುದು'' ಎಂದನು. ಮಯನು ಕೃಷ್ಣ ಏನನ್ನು ಹೇಳುವನೋ ಎಂದು ನಿರೀಕ್ಷಿಸುತ್ತ ನಿಂತನು. ಕೃಷ್ಣನು ಸ್ವಲ್ಪಹೊತ್ತು ಯೋಚಿಸಿ, ``ನೀನು ಶಿಲ್ಪಿ ಎಂದು ಹೇಳುತ್ತಿದ್ದೀಯೆ. ಯುಧಿಷ್ಠಿರನು ನನಗೆ ಪ್ರಿಯನಾದವನು. ಅವನಿಗಾಗಿ ಅರಮನೆಯೊಂದನ್ನು ನಿರ್ಮಿಸು. ಅದು ಲೋಕೈಕವಿಶಿಷ್ಟವಾಗಿದ್ದು, ಎಲ್ಲರೂ ನೋಡಿ ಅಚ್ಚರಿಪಡುವಂತೆ ಇರಲಿ. ಇದರಿಂದ ನನಗೂ ಅರ್ಜುನನಿಗೂ ಸಂತೋಷವಾಗುವುದು'' ಎಂದನು. ಮಯನಿಗೆ ಸಂತೋಷಸಂಭ್ರಮಗಳುಂಟಾದವು. ಯುಧಿಷ್ಠಿರನ ವಿಶಿಷ್ಟ ಸಭೆಯನ್ನು ಕಲ್ಪಿಸಿಕೊಳತೊಡಗಿದನು.



ಅವರೆಲ್ಲ ಇಂದ್ರಪ್ರಸ್ಥಕ್ಕೆ ಬಂದು ಯುಧಿಷ್ಠಿರನನ್ನು ಕಂಡರು. ಅವನು ಮಯನನ್ನು ಆದರಿಸಿ ಸನ್ಮಾನಿಸಿದನು. ಮಯನು ಕೃಷ್ಣ ಹಾಗೂ ಪಾಂಡವರೊಂದಿಗೆ ಅರಮನೆಯ ರೂಪರೇಷೆಗಳನ್ನು ಚರ್ಚಿಸಿದನು. ಶುಭಮುಹೂರ್ತದಲ್ಲಿ ಮಯಸಭೆಯ ನಿರ್ಮಾಣವು ಆರಂಭವಾಯಿತು.



ಕೃಷ್ಣನು ತಾನು ದ್ವಾರಕೆಯನ್ನು ಬಿಟ್ಟು ಬಹುಕಾಲವಾಯಿತೆಂದು ಹೇಳಿ ಯುಧಿಷ್ಠಿರನ ಅಪ್ಪಣೆ ಪಡೆದನು. ಅವನು ದ್ವಾರಕೆಗೆ ಹಿಂದಿರುಗುವುದಕ್ಕೆಂದು ರಥವೇರುವಾಗಲೆಲ್ಲ ತಮ್ಮ ಪ್ರೀತಿ ಗೌರವಗಳನ್ನು ತೋರಿಸುವುದಕ್ಕಾಗಿ ಸಾರಥಿಯಾದ ದಾರುಕನನ್ನು ಇಳಿಸಿ ಯುಧಿಷ್ಠಿರನು ತಾನೇ ಸ್ವಲ್ಪ ದೂರ ಸಾರಥಿಯಾಗುವನು; ಭೀಮಾರ್ಜುನರು ಅಕ್ಕಪಕ್ಕದಲ್ಲಿ ನಿಂತು ಕೃಷ್ಣನಿಗೆ ಚಾಮರ ಬೀಸುವರು; ನಕುಲಸಹದೇವರುಗಳು ಅವನ ತಲೆಯ ಮೇಲೆ ಶ್ವೇತಚ್ಛತ್ರವನ್ನು ಹಿಡಿದಿರುವರು. ನಗರವನ್ನು ದಾಟಿದ ಮೇಲೆ ಇಳಿದು ನಿಂತು ರಥವು ಕಣ್ಮರೆಯಾಗುವವರೆಗೂ ನೋಡುತ್ತಿರುವರು. ಅನಂತರ ಕೃಷ್ಣನನ್ನೇ ಮನಸ್ಸಿನ ತುಂಬ ತುಂಬಿಕೊಂಡು ಹಿಂದಿರುಗುವರು.



ಸ್ವಲ್ಪ ಕೆಲಸವಾದಮೇಲೆ ಮಯನು ಅರ್ಜುನನ ಬಳಿಗೆ ಬಂದು,``ಕೈಲಾಸಪರ್ವತದ ಬಳಿ ಬಿಂದುಸರಸ್ಸೆಂಬ ಸರೋವರದಲ್ಲಿ ನಾನು ನನ್ನ ರತ್ನಭಂಡಾರವನ್ನಿಟ್ಟಿರುವೆನು. ಈ ಸಭೆಯ ನಿರ್ಮಾಣದಲ್ಲಿ ಆ ರತ್ನಗಳನ್ನು ಬಳಸಬೆಕೆಂದಿರುವೆನು. ಅಲ್ಲದೆ ಭೀಮನಿಗೆ ಇಷ್ಟವಗುವಂತಹ ಗದೆಯೂ ನಿನಗಿಷ್ಟವಾಗುವಂತಹ ದೇವದತ್ತವೆಂಬ ಶಂಖವೂ ನನ್ನಲ್ಲಿರುವುದು. ಅಲ್ಲಿಗೆ ಹೋಗಿ ಅವುಗಳನ್ನು ತರುವೆನು'' ಎಂದು ಹೇಳಿ ಹೊರಟುಹೋದನು. ಬಿಂದುಸರಸ್ಸೆಂದರೆ ಗಂಗೆಯು ಶಿವನ ಜಟೆಯಿಂದ ಹನಿಹನಿಯಾಗಿ ಹೊರಹೊಮ್ಮುವ ಜಾಗ. ಇಲ್ಲಿಂದ ಗಂಗೆಯು ಪಶ್ಚಿಮಕ್ಕೆ ಮತ್ತು ಪೂರ್ವಕ್ಕೆ ಮೂರು ಮೂರು ಸೀಳುಗಳಾಗಿಯೂ, ಏಳನೆಯ ಸೀಳಾಗಿ ಭಗೀರಥನು ಕರೆದೊಯ್ದಲ್ಲಿಗೂ ಹರಿದಳು. ಇದು ನರ ನಾರಾಯಣರು ತಪಸ್ಸು ಮಾಡಿದ ಪವಿತ್ರ ಸ್ಥಳವೂ ಹೌದು. ಇಲ್ಲಿಗೆ ಬಂದ ಮಯನು ತನಗೆ ಬೇಕಾದುದೆಲ್ಲವನ್ನೂ ಸಹಸ್ರಾರು ಅನುಚರರ ಮೇಲೆ ಹೊರಿಸಿಕೊಂಡು ಇಂದ್ರಪ್ರಸ್ಥಕ್ಕೆ ಹಿಂದಿರುಗಿದನು.





ಸಭೆಯ ನಿರ್ಮಾಣ ಮುಂದುವರೆಯಿತು. ಹದಿನಾಲ್ಕು ತಿಂಗಳ ಕಾಲದಲ್ಲಿ ಭೂಲೋಕದಲ್ಲಿಯೆ ಅದ್ವಿತೀಯವಾದ ಅರಮನೆ ಹಾಗೂ ಸಭೆ ಸಿದ್ದವಾದವು. ವೈಭವದಲ್ಲಿ ಅದು ಇಂದ್ರಸಭೆಯನ್ನೂ ಮೀರಿಸಿತ್ತು. ಉದ್ಯಾನವನದಲ್ಲಿ ಸರ್ವರುಗಳಲ್ಲೂ ಕಮಲ, ಮಲ್ಲಿಗೆ, ಕುರುವಕ, ಶಿರೀಷ, ತಿಲಕ, ಕದಂಬ ಇತ್ಯಾದಿ ಹೂಗಳು ಅರಳಿರುತ್ತಿದ್ದವು. ಸಭೆಯ ಗೋಡೆಗಳು ವಿವಿಧ ರತ್ನಗಳಿಂದ ಖಚಿತವಾಗಿದ್ದು ವರ್ಣಮಯ ಪ್ರಕಾಶವನ್ನು ಬೀರುತ್ತಿದ್ದವು; ಅದರೆ ರತ್ನಗಳು ಕಾಣಿಸುತ್ತಿರಲಿಲ್ಲ. ಮಯನು ಪಾಂಡವರನ್ನು ಕರೆದು ತನ್ನ ನಿರ್ಮಾಣವನ್ನು ತೋರಿಸಿದನು. ಅವರು ಅಚ್ಚರಿಯಿಂದ ಮೂಕರಾದರು. ಅನಂತರ ಮಯನು ಅರ್ಜುನನನ್ನು ಆಲಿಂಗಿಸಿಕೊಂಡು, ಪಾಂಡವರಿಗೆ ಶುಭ ಕೋರಿ, ಅವರನ್ನು ಬೀಳ್ಕೊಂಡು ಹೊರಟನು. ಯುಧಿಷ್ಠಿರನೂ ಮಯನಿಗೆ ಬೇಕಾದ ಹಾಗೆ ಉಡುಗೊರೆಗಳನ್ನು ಕೊಟ್ಟ ಮರ್ಯಾದೆ ಮಾಡಿ ಕಳುಹಿಸಿಕೊಟ್ಟನು.



ಸುಮುಹೂರ್ತದಲ್ಲಿ ಪಾಂಡವರು ಅರಮನೆಯನ್ನು ಪ್ರವೇಶಿಸಿದರು. ದೀನದಲಿತರಿಗೂ ಬ್ರಾಹ್ಮಣರಿಗೂ ಧಾರಾಳವಾಗಿ ದಾನಗಳು ಕೊಡಲ್ಪಟ್ಟವು. ಮಯಸಭೆಯ ಕೀರ್ತಿ ಎಲ್ಲೆಲ್ಲಿಯೂ ಹರಡಿತು. ಎಲ್ಲೆಡೆಗಳಿಂದ ಜನರು ತಂಡತಂಡವಾಗಿ ಈ ಅಚ್ಚರಿಯನ್ನು ನೋಡುವುದಕ್ಕೆಂದು ಬರತೊಡಗಿದರು. ಧಾರ್ತರಾಷ್ಟ್ರರು ಹೊರತಾಗಿ ಎಲ್ಲ ರಾಜರುಗಳೂ ಬಂದರು. ಸಾತ್ಯಕಿ ಯುಯುಧಾನರಂಥ ಎಷ್ಟೋ ರಾಜಕುಮಾರರು ನೋಡುವುದಕ್ಕೆಂದು ಬಂದವರು ಅರ್ಜುನನಿಂದ ಧನುರ್ವಿದ್ಯೆಯನ್ನು ಕಲಿಯುವುದಕ್ಕೆಂದು ಇಂದ್ರಪ್ರಸ್ಥದಲ್ಲೇ ಉಳಿದರು. ಪಾಂಡವರ ಸುಖವು ಹೇಳತೀರದಾಗಿದ್ದಿತು.



ಸುಭದ್ರೆ ಈಗ ಅಭಿಮನ್ಯುವೆಂಬ ಮಗುವಿನ ತಾಯಿ. ದ್ರೌಪದಿಯು ಐವರು ಉಪ ಪಾಂಡವರ ತಾಯಿಯಾದಳು: ಯುಧಿಷ್ಠಿರನಿಂದ ಪ್ರತಿವಿಂಧ್ಯ, ಭೀಮನಿಂದ ಸುತಸೋಮ, ಅರ್ಜುನನಿಂದ ಶ್ರುತಕರ್ಮ, ನಕುಲನಿಂದ ಶತಾನೀಕ ಹಾಗೂ ಸಹದ

ವನೀದ ಶ್ರುತಸೇನ. ಕುಂತಿಗೆ ಈಗ ಭದ್ರತೆಯ ಭಾವ. ಅರಗಿನ ಮನೆಯಿಂದ ತಪ್ಪಿಸಿಕೊಂಡ ಹಾಗೂ ಏಕಚಕ್ರನಗರದ ಭಿಕ್ಷಾಟನೆಯ ದಿನಗಳನ್ನು ಅವಳು ಜ್ಞಾಪಿಸಿಕೊಳ್ಳುವಳು. ಆ ಕತ್ತಲೆ ಕಳೆದು ಬೆಳಕಾಗಿರುವುದು, ಈಗ ತಾವೆಲ್ಲರೂ ದುರ್ಯೋಧನ ಶಕುನಿ ಮುಂತಾದವರ ದುಷ್ಟತನಗಳಿಂದ ದೂರವಾಗಿ ಕ್ಷೇಮವಾಗಿರುವೆವು ಎಂದು ಸಮಾಧಾನಪಟ್ಟುಕೊಳ್ಳುವಳು. ಆದರೆ ಈ ಶಾಂತಿಯು ಕೇವಲ ಬರಲಿರುವ ಬಿರುಗಾಳಿಯ ಮುಂಚಿನ ನಿಶ್ಚಲತೆ ಎಂಬುದುರ ಅರಿವು ಯಾರಿಗೂ ಇರಲಿಲ್ಲ. ಕೆಲವೇ ತೀಗಳಲ್ಲಿ ಪುನ: ಪಾಂಡವರು ಭೂಮಂಡಲವನ್ನೆಲ್ಲ ಸುತ್ತಲಿರುವರು. ದುರಂತ ನಾಟಕದ ಮೂರನೆಯ ಅಂಕ ಪ್ರಾರಂಭವಾಗಲಿರುವುದು. ಬದುಕಿನ ಮುನ್ನಡೆಯಲ್ಲಿ ಕೆಲವು ಘಟನೆಗಳು ಮೈಲುಗಲ್ಲುಗಳಾಗಿ ನಿಲ್ಲುವವು. ಆದರೆ ಅವುಗಳನ್ನು ದಾಟಿ ಮುಂದೆ ಹೋಗಿ ನಂತರ ಹಿಂದಿರುಗಿ ನೋಡಿದ ಹೊರತು ಅವುಗಳ ಅರಿವು ನಮಗಾಗದು. ಪಾಂಡವರ ಬಾಳಿನಲ್ಲಿ ದ್ರೌಪದಿಯ ಪ್ರವೇಶ ಅಂಥದೊಂದು ಘಟನೆ; ಕೃಷ್ಣನ ಪ್ರವೇಶ ಅಂಥ ಇನ್ನೊಂದು ಘಟನೆ. ಮುಂಬರುವ ನಾರದನ ಪ್ರವೇಶವೂ ಆಂಥದೇ ಇನ್ನೊಂದು ಘಟನೆಗಲಿರುವುದನ್ನು ಯಾರು ತಾನೆ ಅರಿಯಬಲ್ಲರು ?

* * * * 



ಒಂದು ದಿನ ಯುಧಿಷ್ಠಿರನ ಆಸ್ಥಾನಕ್ಕೆ ನಾರದನ ಆಗಮನವಾಯಿತು. ಪಾಂಡವರೂ ದ್ರೌಪದಿಯೂ ಮಹರ್ಷಿಯನ್ನು ಪ್ರೀತಿಯಿಂದ ಬರಮಾಡಿಕೊಂಡರು. ಮಯನಿರ್ಮಿತವಾದ ಸಭೆಯನ್ನು ಕುರಿತು ಕೇಳಿದ್ದ ಅವನು ನೋಡುವುದಕ್ಕಾಗಿ ಬಂದಿದ್ದನು. ಮಗುವು ತನ್ನ ಹೊಸ ಗೊಂಬೆಯನ್ನು ತೊರಿಸಿ ಸಂಭ್ರಮಪಡುವಂತೆ, ಯುಧಿಷ್ಠಿರನ್ನು ಸಭೆಯನ್ನು ತೋರಿಸಿದನು. ನಾರದನಿಗೆ ತುಂಬ ಸಂತೋಷವಾಯಿತು. ಅನಂತರ ಯುಧಿಷ್ಠಿರನು ಓ ಮಹರ್ಷಿ!ನೀನು ತ್ರಿಲೋಕಸಂಚಾರಿಯು. ಅದ್ಭುತವಾಗಿ ನಿರ್ಮಿಸಲ್ಪಟ್ಟ ಇದರಂತಹ ಇನ್ನೊ ಅನೇಕ ಸಭೆಗಳನ್ನು ನೋಡಿರಬಹುದು. ಅವುಗಳನ್ನು ಕುರಿತು ಹೇಳಬಲ್ಲೆಯಾ?" ಎಂದು ವಿಚಾರಿಸಿದನು. ನಾರದನು ನಕ್ಕು, ``ಹೌದು, ನೋಡಿರುವೆ. ಆದರೆ ನಾನು ನೋಡಿರುವ ಸಭೆಗಳಲ್ಲೆಲ್ಲ ಈ ನಿನ್ನ ಸಭೆಯೇ ಸರ್ವೋತ್ಕೃಷ್ಟವಾದುದು" ಇಂದು ಹೇಳಿ ಅನಂತರ ಯಮ, ವರುಣ, ಇಂದ್ರ, ರುದ್ರ, ಬ್ರಹ್ಮ ಇವರುಗಳ ಸಭೆಗಳನ್ನು ವರ್ಣಿಸಿದನು. ಯಮಸಭೆಯ ವರ್ಣನೆಯಲ್ಲಿ ಸಭಾಸದರುಗಳನ್ನು ಹೆಸರಿಸುವಾಗ ಕೊನೆಯವರಾಗಿ ಶಂತನು ಪಾಂಡು ಇವರುಗಳೂ ಬಂದರು.



ಯುಧಿಷ್ಠಿರನು ``ಮಹರ್ಷಿ, ನಿನ್ನ ಸಭಾವರ್ಣನೆಗಳಲ್ಲಿ, ನಾನು ಗಮನಿಸಿದಂತೆ, ಈ ಭೂಮಿಯಲ್ಲಿ ಆಗಿ ಹೋದ ರಾಜರುಗಳೆಲ್ಲ ಯಮಸಭೆಯಲ್ಲಿರುವರೇ ಹೊರತು ಇಂದ್ರನ ಆಸ್ಥಾನದಲ್ಲಿಲ್ಲ. ಆದರೆ ಸೂರ್ಯವಂಶದ ಹರಿಶ್ಚಂದ್ರನೊಬ್ಬನು ಮಾತ್ರ ಇಂದ್ರಸಭೆಯಲ್ಲಿರುವನು ಎಂದೆ. ಇದಕ್ಕೆ ಕಾರಣವೇನು? ನನ್ನ ತಂದೆ ಮಾಡದ ಯಾವ ಪುಣ್ಯವನ್ನು ಹರಿಶ್ಚಂದ್ರ ಮಹಾರಾಜನು ಮಾಡಿರುವನು?" ಎಂದು ಪ್ರಶ್ನಿಸಿದನು. ಹೇಳುವುದಾಕ್ಕಾಗಿಯೇ ಬಂದಿದ್ದ ನಾರದನು, ``ಹೇಳುವೆನು ಕೇಳು. ಹರಿಶ್ಚಂದ್ರನು ವಿಶ್ವಾಮಿತ್ರನ ಪ್ರೀತಿಪಾತ್ರನಾದ ತ್ರಿಶಂಕುವಿನ ಮಗ. ಬಹು ಶಕ್ತಿಶಾಲಿ; ರಾಜ್ಯಗಳನ್ನೆಲ್ಲ ಗೆದ್ದು ರಾಜಸೂಯಯಾಗವನ್ನು ಮಾಡಿದವನು. ಇದರಿಂದಾಗಿಯೇ ಅವನಿಗೆ ಇಂದ್ರಸಭಾಸದನಾಗುವ ಪುಣ್ಯ ಲಭಿಸಿತ್ತು. ರಾಜಸೂಯಯಾಗವನ್ನು ಮಾಡಿದ ರಾಜನು ಇತರ ಎಲ್ಲ ರಾಜರುಗಳಿಗಿಂತ ಭಿನ್ನನಾಗುವನು. ಯುಧಿಷ್ಠಿರನು ರಾಜಸೂಯವನ್ನು ಮಾಡಿದರೆ ಶಂತನುವಿಗೂ ನನಗೂ ಇಂದ್ರಲೋಕವು ಪ್ರಾಪ್ತವಾಗುವುದೆಂದು ಪಾಂಡುವು ನನಗೆ ಹೇಳಿದನು. ಇದು ನಿನ್ನ ತಂದೆಯ ಇಚ್ಛೆ. ನಿನ್ನ ನಾಲ್ವರು ಸಹೋದರರ ಹಾಗೂ ಕೃಷ್ಣನ ಸಹಾಯವಿರುವಾಗ ಇದು ನಿನಗೇನೂ ಕಷ್ಟವಿಲ್ಲ. ನೀನು ಭೂಮಂಡಲವನ್ನೆಲ್ಲ ಗೆಲ್ಲುವೆ. ರಾಜಸೂಯ ಮಹಾಯಾಗವನ್ನು ಮಾಡಿದರೆ ನೀನೇ ಮಾಡಬೇಕು" ಎಂದು ಹೇಳಿ ಪಾಂಡವರನ್ನು ಆಶೀರ್ವದಿಸಿ ಅಲ್ಲಿಂದ ಹೊರಟು ಹೋದನು.



ಆವರೆಗೆ ಮನಸ್ಸಿನಲ್ಲಿ ಯಾವ ವಿಶೇಷವಾದ ಆಸೆಇಲ್ಲದೆ ಸುಖವಾಗಿದ್ದ ಯುಧಿಷ್ಠಿರನು ನಾರದನು ಬಂದು ಹೋದ ಮೇಲೆ ಚಿಂತಿತನಾಗಿರುವನು. ಕೌರವರಿಂದ ಅವರಿಗೆ ತುಂಬ ಅನ್ಯಾಯವಾಗಿದ್ದರೂ, ಅದನ್ನೆಲ್ಲ ಮನಸ್ಸಿನಲಿಟ್ಟುಕೊಂಡಿರುವ ಸ್ವಭಾವವೇ ಅಲ್ಲ ಯುಧಿಷ್ಠಿರನದು. ಜಗಳವೇ ಬೇಡವೆಂದು ದೊಡ್ಡಪ್ಪ ಕೊಟ್ಟ ಈ ಮರುಭೂಮಿಯನ್ನೇ ತೆಗೆದುಕೊಂಡು ತೃಪ್ತಿಯಿಂದ ಬದುಕುತ್ತಿರುವವನು ಅವನು. ಕೃಷ್ಣನ ಕೃಪೆಯಿಂದ ಮರುಭೂಮಿಯಾಗಿದ್ದುದು ಫಲವತ್ತಾಯಿತು. ಮಯನು ಪ್ರೀತಿಯಿಂದ ಕಟ್ಟಿಕೊಟ್ಟಿರುವ ಈ ಸಭೆ, ಈ ಅರಮನೆ ಯುಧಿಷ್ಠಿರನಿಗೆ ತುಂಬ ಸಂತೋಷವನ್ನು ಕೊಟ್ಟಿದ್ದವು. ನಾರದನ ಮಾತು ಶಾಂತ ಕೊಳದಲ್ಲಿ ಕಲ್ಲೊಂದನ್ನು ಎಸೆದಂತೆ ಆಗಿದ್ದಿತು. ಪಾಂಡುವು ರಾಜಸೂಯವನ್ನು ಮಾಡೆಂದು ಹೇಳಿರುವನು ಎಂಬ ಮಾತು ಶಾಂತಿಪ್ರಿಯನಾದ ಯುಧಿಷ್ಠಿರನ ಮನಸ್ಸಿನಲ್ಲಿ ರಾಜ್ಯಗಳನ್ನು ಜಯಿಸಬೇಕೆಂಬ ಆಸೆಯನ್ನು ಹುಟ್ಟಿಸಿತು. ಅವನ ಸಭಾಸದರೂ ಇದನ್ನು ಉತ್ಸಾಹದಿಂದ ಅನುಮೋದಿಸಿದರು.



ಯುಧಿಷ್ಠಿರನು ಹೇಳಿ ಕಳಿಸಿದನೆಂದು ಕೃಷ್ಣನೂ ದ್ವಾರಕೆಯಿಂದ ಬಂದನು. ಹೃತ್ಪೂರ್ವಕವಾಗಿ ಸ್ವಾಗತಿಸಿದ ಪಾಂಡವರನ್ನು ಅವನು ಪ್ರೀತಿಯಿಂದ ಆಲಿಂಗಿಸಿಕೊಂಡನು. ನಾರದನ ಮಾತು ತನ್ನ ಮನಸ್ಸನ್ನು ಗಲಿಬಿಲಿಗೊಳಿಸಿರುವ ವಿಚಾರವನು ಹೇಳಿ ಮಾರ್ಗದರ್ಶನ ನೀಡಬೇಕೆಂದು ಕೇಳಿಕೊಂಡ ಯುಧಿಷ್ಠಿರನನ್ನು ಕುರಿತು ಕೃಷ್ಣನು, ಇತರು ಎಲ್ಲ ರಾಜರುಗಳನ್ನು ಗೆಲ್ಲುವುದು ಸುಲಭ; ಅದರೆ ಜರಾಸಂಧನೊಬ್ಬನನ್ನು ಜಯಿಸಲು ನೀನು ಕಷ್ಟಅಪಡಬೇಕಾಗುವುದು. ಅವನ ಗೆಳೆಯರಾದ ದಂತವಕ್ತ್ರ, ದಮಘೋಷನ ಮಗನಾದ ಶಿಶುಪಾಲ, ಭಗದತ್ತ, ಭೀಷ್ಮಕನ ಮಗನಾದ ರುಕ್ಮಿ, ಪೌಂಡ್ರಕ ವಾಸುದೇವ ಇವರುಗಳನ್ನು ಜಯಿಸಬೇಕಾಗುವುದು. ಜರಾಸಂಧನು ವೃಷ್ಣಿಗಳ ಬದ್ಧವೈರಿ. ಅವನ ಅಳಿಯನಾದ ಕಂಸನನ್ನು ಕೊಂದಿರುವೆನೆಂದು ನನ್ನ ಮೇಲೆ ಅವನಿಗೆ ದ್ವೇಷವಿದೆ. ಅವನೊಂದಿಗೆ ಹದಿನೆಂಟು ಬಾರಿ ಕಾದಿದರೂ ಅವನನ್ನು ಗೆಲ್ಲಲಾಗಿಲ್ಲ. ಅವನ ಭಯದಿಂದಾಗಿಯೇ ವೃಷ್ಣಿಗಳು ಮಥುರೆಯನ್ನು ತ್ಯಜಿಸಿ ದ್ವಾರಕೆಯನ್ನು ಕಟ್ಟಿಕೊಂಡುದು. ಒಂದೆಡೆ ಸಮುದ್ರ ಮತ್ತು ಇನ್ನೊಂದೆಡೆ ರೈವತಕ ಪರ್ವತ ಇರುವುದರಿಂದ ಅಲ್ಲಿ ನಾವು ಕ್ಷೇಮವಾಗಿರುವೆವು. ಅವನ ಗಿರಿವ್ರಜವು ರೈವತಕದಿಂದ ನೂರು ಯೋಜನ ದೂರವಿದೆ; ಒಮ್ಮೆ ಅಲ್ಲಿಂದ ಅವನು ಎಸೆದ ಗದೆಯು ದ್ವಾರಕೆಯ ಹತ್ತಿರವೇ ಬಂದು ಬಿದ್ದಿತ್ತು ! ಸಂದರ್ಭ ಒದಗಿದಾಗ ದುರ್ಯೋಧನನು ಜರಾಸಂಧನ ಕಡೆ ವಾಲಬಹುದು. ಎಂದಮೇಲೆ ಭೀಷ್ಮ ದ್ರೋಣ ಕೃಪ ಎಲ್ಲರು ಅವನ ಕಡೆಗೇ. ಒಂದುವೇಳೆ ನಿನ್ನ ಮೇಲಿನ ಪ್ರೀತಿಯಿಂದ ಅವರು ಯುದ್ಧಮಾಡದಿದ್ದರೂ, ರಾಧೇಯನನ್ನು ನೀನು ಮರೆಯುವ ಹಾಗೇ ಇಲ್ಲ. ಭಾರ್ಗವನಿಂದ ಪಡೆದ ಅಸ್ತ್ರಗಳೆಲ್ಲ ಅವನಲ್ಲಿವೆ. ಅರ್ಜುನನನ್ನು ಸೋಲಿಸಿ ದುರ್ಯೋಧನನಿಗೆ ಪ್ರೀತಿಯನ್ನುಂಟು ಮಾಡುವ ಅವಕಾಶಕ್ಕಾಗಿ ಅವನು ಕಾಯುತ್ತಿರುತ್ತಾನೆ. ನೀನು ಇಷ್ಟೆಲ್ಲ ಶತ್ರುಗಳನ್ನು ಸೋಲಿಸಿ ರಾಜಸೂಯವನ್ನು ಮಾಡುವುದು ಕಷ್ಟ. ಶಂಕರನಿಗೆ ಬಲಿದೊಡುವುದಕ್ಕೆಂದು ತೊಂಭತ್ತೆಂಟು ರಾಜರುಗಳನ್ನು ಸೆರೆಯಲ್ಲಿಟ್ಟಿರುವ ಈ ಜರಾಸಂಧನು ಬದುಕಿರುವವರೆಗೆ ನೀನು ರಾಜಸೂಯವನ್ನು ಮಾಡಲಾರೆ. ಅವನೊಬ್ಬನನ್ನು ಕೊಂದುಬಿಟ್ಟರೆ, ಉಳಿದವರಾರೂ ನಿನ್ನನ್ನೆದುರಿಸುವ ಧೈರ್ಯ ಮಾಡುವುದಿಲ್ಲ. ಇದನ್ನು ಸಾಧಿಸುವುದೆಂತೆಂದು ಯೋಚಿಸು" ಎಂದನು.



ಯುಧಿಷ್ಠಿರನು, ``ಕೃಷ್ಣ, ವಾಸ್ತವಾಂಶಗಳನ್ನು ನಿನ್ನಷ್ಟು ಚೆನ್ನಾಗಿ ವಿವರಿಸಬಲ್ಲವರು ಇನ್ನು ಯಾರೂ ಇಲ್ಲ. ನಿನ್ನ ಬುದ್ಧಿವಾದಕ್ಕಾಗಿ ನಾನು ಋಣಿ. ಈ ರಾಜ್ಯಗೆಲ್ಲುವ ಕೆಲಸವೇ ಬೇಡ. ಹಿಂದೆ ಲೋಕವನ್ನಾಳಿದ ಮಹಾರಾಜರುಗಳೆಲ್ಲ ಶಾಂತಿಪ್ರಿಯರಾಗಿದ್ದರು. ಶಾಂತಿಯುತ ಸಹ ಬಾಳ್ವೆಯೇ ಸರಿಯಾದ ಧೋರಣೆ ಎಂದು ನನ್ನ ಭಾವನೆ. ಈ ಯಾಗದ ಯೋಜನೆಯನ್ನು ಬಿಟ್ಟು ಹಾಯಾಗಿರೋಣ!" ಎಂದನು. ಭೀಮನು ಇದನ್ನೊಪ್ಪದೆ, ``ಅಣ್ಣ, ಯಾವ ಮಹಾಕಾರ್ಯವಾದರೂ ಮೊದಲು ಕಷ್ಟವಾಗಿಯೇ ಕಾಣುತ್ತದೆ; ಇದಕ್ಕೆ, ನಾವು ಹೆದರಬಾರದು. ಬಲದಿಂದ ಸಾಧ್ಯವಾಗದುದನ್ನು ಜಾಣ್ಮೆಯಿಂದ ಸಾಧಿಸಬೇಕು. ಕೃಷ್ಣಾರ್ಜುನರ ನೆರವಿನಿಂದ ನಾನು ಜರಾಸಂಧನನ್ನು ಕೊಲ್ಲಬಲ್ಲೆ ಎಂದೆನಿಸುತ್ತಿದೆ. ಕೃಷ್ಣನು ನಮ್ಮ ಕಡೆಗೆ ಇರುವವರೆಗೂ ನಮಗೆ ಸೋಲೆಂಬುದೆಲ್ಲ" ಎನ್ನಲು ಕೃಷ್ಣನು, ``ಅದು ಅಷ್ಟು ಸುಲಭವಲ್ಲ ಭೀಮ. ಜರಾಸಂಧನು ಮಹಾ ಶಿವಭಕ್ತ, ಉದಾರಿ, ಅನೇಕ ರಾಜರ ಪ್ರೀತಿಯನ್ನು ಪಡೆದಿರುವವನು, ಅದರೂ, ನೀನೇನಾದರೂ ಅವನನ್ನು ಕೊಂದರೆ, ಬಲಿಕೊಡುವುದಕ್ಕೆಂದು ಸೆರೆಯಲ್ಲಿಟ್ಟಿರುವ ರಾಜರುಗಳ ಜೀವ ಉಳಿಸಿದಂತಾಗುವುದು ಯೋಚಿಸು" ಎಂದನು. ಯುಧಿಷ್ಠಿರನು ``ಕೃಷ್ಣ, ಭೀಮಾರ್ಜುನರು ನನ್ನ ಕಣ್ಣುಗಳು; ನೀನು ನನ್ನ ಮನಸ್ಸು. ನಿಮ್ಮನ್ನೆಲ್ಲ ಕಳೆದುಕೊಂಡು ನಾನು ಬದುಕಿರಲಾರೆ. ಈ ಯೋಚನೆಯನ್ನು ಬಿಟ್ಟು ಬಿಡೋಣ!" ಎನ್ನಲು ಅರ್ಜುನನು ``ಅಣ್ಣ, ನೀನೇಕೆ ಹೆದರುವೆ? ನಾವು ಕ್ಷತ್ರಿಯರಲ್ಲವೆ? ಯುದ್ಧವೇ ಕ್ಷತಿಯನ ಧರ್ಮ. ಮೇಲಾಗಿ ನಾವು ಋಜುಮಾರ್ಗವನ್ನು ಬಿಟ್ಟವರಲ್ಲ . ಜರಾಸಂಧನು ಶಕ್ತಿ ಶಾಲಿಯಾದರೂ ಋಜುತ್ವವಿಲ್ಲದವನು. ಅಂಥವನನ್ನು ಸೋಲಿಸುವುದು ಕಷ್ಟವೇನಲ್ಲ. ಧರ್ಮ ನಮ್ಮ ಕಡೆಗಿರುತ್ತದೆ. ಈ ಜರಾಸಂಧನನ್ನು ಕೊಂದು ಲೋಕರಕ್ಷಣೆ ಮಾಡುವುದು ನಮ್ಮ ಕರ್ತವ್ಯ. ನಮ್ಮನ್ನು ಮಗಧ ದಿಗ್ವಿಜಯಕ್ಕಾಗಿ ಕಳುಹಿಸು" ಎಂದು ವೀರಾವೇಶದ ಮಾತನ್ನಾಡೆದನು.



ಭೀಮಾರ್ಜುನರ ಯುದ್ದೋತ್ಸಾಹವನ್ನು ಕಂಡು ಕೃಷ್ಣನಿಗೆ ಸಂತೋಷವಾಯಿತು. ``ವೀರಪುತ್ರರಿಗೆ ಯೋಗ್ಯವಾದ ರೀತಿಯಲ್ಲಿ ಮಾತನಾಡಿದಿರಿ. ಯುಧಿಷ್ಠಿರ, ನಾವು ಈ ಪ್ರಪಂಚದಲ್ಲಿ ಬದುಕಿರುವುದು ಒಮ್ಮೆ ಮಾತ್ರ; ಅದೂ ಸ್ವಲ್ಪಕಾಲ. ಮೃತ್ಯುವಿನಿಂದ ತಪ್ಪಿಸಿಕೊಳ್ಳಲಾಗದು. ಅದು ಯಾವಾಗ ಬೇಕಾದರೂ ಬರಬಹುದು. ಯುದ್ಧಮಾಡದ ಮಾತ್ರಕ್ಕೆ ಒಬ್ಬನು ಚಿರಂಜೀವಿಯಾಗಲಾರನು. ಬದುಕಿರುವ ಅಲ್ಪಕಾಲದಲ್ಲಿ ಮನುಷ್ಯನು ತಾನೇನು ಮಾಡಬೇಕೆಂಬುದನ್ನು ಬೇಗನೆ ನಿರ್ಧರಿಸಬೇಕು. ಮೀನ ಮೇಶ ಎಣೆಸುತ್ತ ಕಾಲ ಕಳೆಯಬಾರದು. ನಾವು ಜರಾಸಂಧನನ್ನು ಸೆಣೆಸಿ ನಿಲ್ಲಲೇಬೇಕು. ಅವನ ದೇಶಕ್ಕೆ ಹೋಗಿ, ಅವನ ಮನೆಗೇ ನುಗ್ಗಿ ಅವನಿಗೆ ಸೆಡ್ಡು ಹೊಡೆಯೋಣ. ನಾವು ಗೆದ್ದರೆ ಈ ಭೂಮಂಡವೆಲ್ಲ ನಮ್ಮ ಸ್ವಾಧೀನವಾಗುವುದು. ಸೋತರೆ ವೀರಸ್ವರ್ಗವು ನಮ್ಮದಾಗುವುದು. ಹೇಗಾದರೂ ನಮ್ಮ ಕೀರ್ತಿಗೆ ಕಳಂಕ ಬಾರದು" ಎಂದನು. ಯುಧಿಷ್ಠಿರನು ``ಕೃಷ್ಣ, ಜರಾಸಂಧನಿಗೆ ನಿನ್ನನ್ನೇ ಸೋಲಿಸುವುದು ಹೇಗೆ ಸಾಧ್ಯವಾಯಿತು? ನಿನ್ನ ಬಳಿಗೆ ಬಂದಾಗ ಅವನು ಜ್ವಾಲೆಯ ಬಳಿಗೆ ಬಂದ ಪತಂಗದಂತೆ ಏಕೆ ನಾಶವಾಗಲಿಲ್ಲ? ನೀನು ಅವನನ್ನು ಹೇಗೆತಾನೆ ಗೆಲ್ಲಲಾರದೆ ಹೋದೆ?" ಎಂದು ಕೇಳಲು, ಕೃಷ್ಣನು ಜರಾಸಂಧನ ಕಥೆಯನ್ನು ಹೇಳಿದನು.



* * * * 



ಹಿಂದೆ ಮಗಧರಾಜ್ಯವನ್ನು ಬೃಹದ್ರಥನೆಂಬ ರಾಜನು ಆಳುತ್ತಿದ್ದನು. ಗುಣಶಾಲಿ ಕ್ಷತ್ರಿಯನೆಂದು ಕೀರ್ತಿವಂತನಾದ ಅವನ ರಾಜಧಾನಿ ಗಿರಿವಜ್ರ. ಕಾಶಿರಾಜನ ಅವಳಿ ಪುತ್ರಿಯರನ್ನು ಮದುವೆಯಾಗಿದ್ದ ಅವನು ಮಕ್ಕಳಿಲ್ಲದ್ದರಿಂದ ಬೇಸರಿಸಿ ವಾನಪ್ರಸ್ಥನಾದನು. ಆ ಕಾಡಿನಲ್ಲಿ ಚಂದ್ರಕೌಶಿಕನೆಂಬ ಋಷಿಯಿದ್ದನು. ಬೃಹದ್ರಥನು ಅವನನ್ನು ಭಕ್ತಿಯಿಂದ ಸೇವಿಸುತ್ತಿರಲು. ಋಷಿಗೆ ಅವನ ಮೇಲೆ ಅನುಕಂಪವುಂಟಾಯಿತು. ಅಷ್ಟರಲ್ಲಿ ಮರದ ಮೇಲಿಂದ ಮಾವಿನ ಹಣ್ಣೊಂದು ಬೀಳಲು, ಅದನ್ನು ಅಭಿಮಂತ್ರಿಸಿ ಕೊಟ್ಟು, ಇದನ್ನು ತಿಂದ ನಿನ್ನ ಪತ್ನಿಯು ಪುತ್ರನನ್ನು ಪಡೆಯುವಳು. ನೀನು ಪುನಃ ಹಿಂದಿರುಗಿ ರಾಜ್ಯವನ್ನಾಳು ಹೋಗು" ಎಂದು ಹೇಳಿದನು. ರಾಜನು ಅದನ್ನು ಎರಡು ಭಾಗ ಮಾಡಿ ತನ್ನ ಇಬ್ಬರು ಪತ್ನಿಯರಿಗೂ ಕೊಡಲು, ಕಾಲಕ್ರಮದಲ್ಲಿ ಇಬ್ಬರೂ ಆರ್ಧರ್ಧ ಮಗುವನ್ನು ಹೆತ್ತರು. ಇದನ್ನು ನೋಡಿ ಅರಮನೆಯಲ್ಲಿ ಎಲ್ಲರೂ ಹೆದರಿದರು. ದಾಸಿಯು ಈ ಎರಡು ಅರ್ಧಗಳನ್ನೂ ರಾಜಧಾನಿಯಿಂದಾಚೆ ಎಸೆದಳು. ಆ ರಾತ್ರಿ ಆಹಾರವನ್ನು ಹುಡುಕುತ್ತಿದ್ದ ಜರೆಯೆಂಬ ರಾಕ್ಷಸಿಯು ಇವುಗಳನ್ನು ಆರಿಸಿ ಒಟ್ಟಿಗೆ ಇಟ್ಟುಕೊಳ್ಳಲು, ಪವಾಡವೆಂಬಂತೆ ಎರಡು ಅರ್ಧಗಳೂ ಒಟ್ಟುಗೂಡಿ ಜೀವಂತ ಶಿಶುವಾಯಿತು. ಅದನ್ನು ಕೊಲ್ಲಲು ಮನಸ್ಸುಬಾರದೆ ಅವಳು ರಾಜನ ಬಳಿಗೆ ಹೋಗಿ ನಡೆದುದನ್ನು ತಿಳಿಸಿ ಮಗುವನ್ನು ಒಪ್ಪಿಸಿದಳು. ಸಂತೋಷದಿಂದ ರಾಜನು ಆ ಮಗುವಿಗೆ ಜರಾಸಂಧನೆಂದೇ ಹೆಸರಿಟ್ಟನು. ಚಂದ್ರಕೌಶಿಕ ಮುನಿಯು ಬಂದು, ವಿಶಿಷ್ಟ ಶಕ್ತಿಗಳೊಡನೆ ಹುಟ್ಟಿರುವ ಹಾಗೂ ಭವಿಷ್ಯದಲ್ಲಿ ಶಿವಭಕ್ತನೆನಿಸುವ ಈ ಮಗುವನ್ನು ಸಾಮಾನ್ಯರಾರೂ ಕೊಲ್ಲಲಾರರೆಂದು ತಿಳಿಸಿದನು.



ಜರಾಸಂಧನು ದೇಹಧಾರಿಯಾದ ಶಂಕರನನ್ನು ನೋಡಿರುವನು ಎಂದು ಹೇಳುವರು. ಅಂಥವನನ್ನು ಯಾರು ಸೋಲಿಸಬಲ್ಲರು? ಎಂದು ಕೃಷ್ಣ ಹೇಳಿದಾಗ ಯುಧಿಷ್ಠಿರನು ಮೌನ ತಾಳಿದನು. ``ಗಿರಿವ್ರಜದಿಂದ ದ್ವಾರಕೆಯ ಹತ್ತಿರಕ್ಕೆ ಗದೆಯನ್ನು ಎಸೆದನೆಂದು ಹೇಳಿದೆನಲ್ಲವೆ? ಈ ಗದೆಯೇ ಅವನ ಮುಖ್ಯ ಶಕ್ತಿಯಾಗಿತ್ತು. ಭೂಮಿಯೊಳಕ್ಕೆ ಹೊಕ್ಕ ಅದನ್ನು ಮೇಲೆತ್ತಲು ಅವನು ಪ್ರಯತ್ನಿಸಿದನಾದರೂ ಸಾಧ್ಯವಾಗಲಿಲ್ಲ. ಆ ಗದೆಯಿಲ್ಲದ ಅವನನ್ನು ಈಗ ಸೋಲಿಸಬಹುದು. ಅವನೊಂದಿಗೆ ಹೋರುವುದು ಯುಧಿಷ್ಠಿರನಿಗೆ ಬೇಕಿರಲಿಲ್ಲ. ಆದರೆ ಭೀಮಾರ್ಜುನರು ಬಿಡಲಿಲ್ಲ. ಕೃಷ್ಣನೆಂದನು: ``ಅವನು ಸ್ಯೆನ್ಯವನ್ನು ಇಂದ್ರನೂ ಸಹ ಸೋಲಿಸಲಾರನು. ಅದರೆ ಭೀಮನು ಮಲ್ಲಯುದ್ಧದಲ್ಲಿ ಅವನನ್ನು ಮಣಿಸಬಹುದೆಂದು ನನಗನ್ನಿಸುತ್ತದೆ. ಯುಧಿಷ್ಠಿರ, ನಾವು ಮೂವರನ್ನು ಕಳುಹಿಸು. ನಿನ್ನ ಸೋದರರ ಜವಾಬ್ದಾರಿ ನನ್ನದು. ನಾವು ವಿಜಯಿಗಳಾಗಿ ಹಿಂದಿರುಗುತ್ತೇವೆ. ಕೊನೆಗೂ ಯುಧಿಷ್ಠಿರನನನ್ನು ಒಪ್ಪಿಸಿ ಮೂವರೂ ಮಗಧಕ್ಕೆ ಹೊರಟರು. ಸರಯೂ ಗಂಡಕಿ ನದಿಗಳನ್ನು ದಾಟಿದರು. ಮಿಥಿಲೆಯನ್ನೂ ಗಂಗಾನದಿಯನ್ನೂ ದಾಟಿದರು. ದೂರದಿಂದ ಗಿರಿವ್ರಜ ಪರ್ವತ ಕಾಣಿಸಿತು. ಮಗಧ ರಾಜಧಾನಿಗೆ ಬಂದರು. ಅಲ್ಲಿನ ಶಂಕರ ದೇವಾಲಯದಲ್ಲಿ ಅರ್ಚನೆ ಮಾಡಿದರು. ಸ್ನಾತಕರಂತೆ ಗಂಧ ಪೂಸಿಕೊಂಡು, ಹೂಮಾಲೆಗಳನ್ನು ಹಾಕಿಕೊಂಡರು. ಸ್ನಾತಕ ಎಂದರೆ ಬ್ರಹ್ಮಚರ್ಯಾಶ್ರಮ ಮುಗಿಸಿದ್ದರೂ ಇನ್ನೂ ಗೃಹಸ್ಧಾಶ್ರಮಿ ಆಗದವನು. ಪ್ರಾಕಾರದ ಗೋಡೆ ಹಾರಿ ಅರಮನೆಯನ್ನು ಪ್ರವೇಶಿಸಿದರು. ಜರಾಸಂಧನು ಪೂಜೆಯಲ್ಲಿ ಮಗ್ನನಾಗಿದ್ದನು. ಇವರಿಗೆ ಮಧುಪರ್ಕವನ್ನು ಕಳುಹಿಸಿ, ಮಧ್ಯರಾತ್ರಿ ಭೇಟಿ ಮಾಡುವೆನೆಂದೂ ಆವರೆಗೆ ಕಾಯಬೇಕೆಂದೂ ತಿಳಿಸಿದನು. ಇವರು ಹಾಗೇ ಆಗಲೆಂದರು.



ಮಧ್ಯರಾತ್ರಿಯಾಯಿತು. ಜರಾಸಂಧನು ಇವರನ್ನು ಗೌರವಿಸಿ, ``ನೀವು ಸ್ನಾತಕರಂತೆ ಕಾಣುತ್ತೀರಿ. ಆದರೆ ಯಾವ ಸ್ನಾತಕನೂ ಬಳಸದ ಗಂಧಪುಷ್ಪಗಳನ್ನು ಬಳಸಿದ್ದೀರಿ. ಶತ್ರುಗಳಂತೆ ಗೋಡೆ ಹಾರಿ ಬಂದಿದ್ದೀರಿ. ನಾನು ಕಳಿಸಿದ ಮಧುಪರ್ಕವನ್ನು ಸ್ವೀಕರಿಸಲಿಲ್ಲವೆಂದೂ ಕೇಳಿದೆ. ನೀವು ಯಾರೇ ಆಗಿರಿ, ನಿಮಗೆ ಸ್ವಾಗತವು. ಬ್ರಾಹ್ಮಣರಿಗೆ ಸಲ್ಲುವ ಪೂಜೆ ನಿಮಗೂ ಸಲ್ಲುತ್ತದೆ; ಆದರೆ ನೀವು ಬ್ರಾಹ್ಮಣರಲ್ಲ, ಕ್ಷತ್ರಿಯರು ಎಂದು ನನ್ನ ಸಂದೇಹ. ಏನೋ ಕಾರಣದಿಂದ ವೇಷ ಮರೆಸಿಕೊಂಡಿದ್ದೀರಿ. ನಿಜ ಹೇಳಿ, ನೀವು ಯಾರು, ನನ್ನಿಂದ ಏನಾಗಬೇಕು?" ಎಂದನು.



ಕೃಷ್ಣನು, ``ಜರಾಸಂಧ, ನಿನ್ನ ಊಹೆ ಸರಿ. ನಾವು ನಿನ್ನಶತ್ರುಗಳು: ಮಲ್ಲಯುದ್ಧಕ್ಕೆ ಬಂದಿದ್ದೇವೆ. ಅದಕ್ಕಾಗಿಯೇ ನಿನ್ನ ಆತಿಧ್ಯವನ್ನು ಸ್ವೀಕರಿಸಲಿಲ್ಲ" ಎಂದನು. ಜರಾಸಂಧನಿಗೆ ಆಶ್ಚರ್ಯ. ``ನೀವಾರೆಂಬುದೇ ನನಗೆ ಗೂತ್ತಿಲ್ಲ. ಅದು ಹೇಗೆ ಶತ್ರುಗಳಾಗುವಿರಿ? ನನಗೆ ತುಂಬ ಶತ್ರುಗಳಿರುವರು ನಿಜ. ಆದರೆ ನಾನರಿಯದ ಶತ್ರು ಯಾರೂ ಇಲ್ಲ. ಯಾರು ನೀವು, ಏಕೆ ಶತ್ರುಗಳಾಗಿರುವಿರಿ ತಿಳಿಸಿ" ಎಂದು ಕೇಳಿದನು. ಅದಕ್ಕೆ ಕೃಷ್ಣನು, ``ನೀಜ ರುದ್ರಯಜ್ಞಕ್ಕಾಗಿ ರಾಜರನ್ನು ಬಂಧನದಲ್ಲಿರಿಸಿಕೊಂಡಿರುವುದೇ ಕಾರಣ. ನಾವು ಆ ರಾಜರುಗಳ ಹಕ್ಕುಗಳನ್ನು ಎತ್ತಿ ಹಿಡಿಯಲು ಬಂದಿರುವೆವು. ಸಹಮಾನವರನ್ನು ಕೂಲ್ಲುವ ಮೂಲಕ ಹೇಗೆತಾನೆ ಸ್ವರ್ಗಕ್ಕೆ ಹೋಗುತ್ತೀಯೆ? ಇದರಿಂದ ಯಮನಿಗೆ ಪ್ರೀತಿಯಾಗುವುದೆ? ಇದೋ ಇವನು ಅರ್ಜುನ, ಇವನು ಭೀಮ; ನಾನು ಕೃಷ್ಣ, ನಿನ್ನ ಹಳೆಯ ಪರಿಚಯದವನು. ನಾವು ಮಲ್ಲಯುದ್ಧಕ್ಕೆ ಬಂದಿರುವೆವು. ನಮ್ಮಲ್ಲಿ ನಿನಗೆ ಬೇಕಾದ ಒಬ್ಬರನ್ನು ನೀನು ಆರಿಸಿಕೂಳ್ಳಬಹುದು" ಎಂದ.



ಜರಾಸಂಧನು ಗಹಗಹಿಸಿ ನಕ್ಕು, ಕೃಷ್ಣನನ್ನು ತಿರಸ್ಕಾರದಿಂದ ನೋಡುತ್ತ, ``ಓಹೋ, ನನ್ನನ್ನೆದುರಿಸಲಾರದೆ ಹದಿನೆಂಟು ಬಾರಿ ಓಡಿಹೋದವ, ರೈವತಕ ಪರ್ವತದ ಹಿಂದೆ ಅವಿತುಕೊಂಡಿರುವವ ನಿನಗೆ ನನ್ನ ಮನೆಗೆ ಬಂದು ನನ್ನನ್ನು ಮಲ್ಲಯುದ್ಧಕ್ಕೆ ಕರೆಯುವಷ್ಟು ಸೊಕ್ಕೆ? ನನ್ನನ್ನೆದುರಿಸುವ ಧೈರ್ಯವನ್ನು ಎಲ್ಲಿಂದ ಸಂಪಾದಿಸಿದೆ? ಮೋಸದಿಂದ ಕೂಲ್ಲುವುದಕ್ಕೆ ನಾನೇನೂ ಕಂಸನಲ್ಲ! ನಾನು ದೇವತೆಗಳಿಗೆ ಪ್ರಿಯನೆನಿಸಿದ ಜರಾಸಂಧ. ನನಗೆ ಯಾರ ಭಯವೂ ಇಲ್ಲ. ನಿನಗೆ ತೃಪ್ತಿಯಾಗುವಷ್ಟು ಯುದ್ಧಮಾಡುವೆ. ಆದರೆ ನಿನ್ನೊಡನೆ ಅಲ್ಲ. ಹೇಡಿಯಾದ ನಿನ್ನೊಡನೆ ಕಾದುವುದು ನನಗೆ ಅಪಮಾನ. ಈ ಅರ್ಜುನನಾದರೋ ಇನ್ನೂ ಎಳೆಯ. ದುರ್ಬಲರಾದವರೊಂದಿಗೆ ಹೋರುವುದು ನನ್ನಂಥವರಿಗೆ ತರವಲ್ಲ. ಈ ಭೀಮ ಸಾಕಷ್ಟು ಅಂಗಸೌಷ್ಠವವುಳ್ಳವನು; ನನ್ನೊಂದಿಗೆ ಯುದ್ಧಮಾಡಲು ತಕ್ಕವನಾಗಿ ಕಾಣುತ್ತಿದ್ದಾನೆ" ಇತ್ಯಾದಿಯಾಗಿ ವಿಜಯ ತನ್ನದೇ ಎಂಬ ಗರ್ವದಿಂದ ಗಳುಹುತ್ತ, ತನ್ನ ಮಗ ಸಹದೇವನನ್ನು ಕರೆದು ಅವನಿಗೆ ಪಟ್ಟಕಟ್ಟಿ, ಅನಂತರ ಯುದ್ಧಕ್ಕೆ ಸಿದ್ಧನಾಗಿ ನಿಂತ.



ಮಲ್ಲಯುದ್ಧ ಮೊದಲಾಯಿತು. ಹದಿನಾಲ್ಕು ರಾತ್ರಿ ಕಳೆದರೂ ಇಬ್ಬರೂ ಸರಿಸಮನಾಗಿಯೆ ಹೋರಾಡುತ್ತಿದ್ದರು. ಕೃಷ್ಣಾರ್ಜುನರೂ ಇತರರೊಡನೆ ನಿಂತು ನೋಡುತ್ತಿದ್ದರು. ಯಾರೂ ಗೆಲ್ಲುವಂತೆಯೇ ತೋರಲಿಲ್ಲ. ಕೊನೆಗೆ ಭೀಮನು ನಿಧಾನವಾಗಿ ಮೇಲುಗೈ ಸಾಧಿಸತೊಡಗಿದ. ಕೃಷ್ಣನು ಅವನನ್ನು ಪ್ರೋತ್ಸಾಹಿಸುತ್ತ,``ಭೀಮ, ನೀನು ವಾಯುಪುತ್ರನೆಂಬುದನ್ನು ಜ್ಞಾಪಿಸಿಕೋ. ಕ್ಷತ್ರಿಯರಲ್ಲೆಲ್ಲ ನೀನು ಮಹಾಬಲಶಾಲಿ. ಮನಸ್ಸು ಮಾಡಿದರೆ ಅವನನ್ನು ಎರಡಾಗಿ ಸೀಳಿಬಿಡಬಲ್ಲೆ" ಎನ್ನಲು, ಭೀಮನು ತನ್ನ ತಂದೆಯಾದ ವಾಯುವನ್ನು ಪ್ರಾರ್ಥಿಸಿ, ಜರಾಸಂಧನನ್ನು ಒಮ್ಮೆಲೇ ಮೇಲಕ್ಕೆತ್ತಿ, ಬೀಳುತ್ತಿರುವಾಗ ಒಂದೊಂದು ಕೈಯಲ್ಲಿ ಅವನ ಒಂದೊಂದು ಕಾಲನ್ನು ಹಿಡಿದು, ಅವನ ದೇಹವನ್ನು ಎರಡಾಗಿ ಸೀಳಿಬಿಟ್ಟನು. ಆದರೇನು! ಹತ್ತಿರದಲ್ಲೇ ಬಿದ್ದಿದ್ದ ಎರಡು ಸೀಳುಗಳೂ ಒಂದಾಗಿ ಸೇರಿ, ಪುನಃ ಜರಾಸಂಧನು ಏನೂ ಆಗದವನಂತೆ ಎದ್ದು ಬಂದನು. ಇದನ್ನು ನೋಡಿ ಭೀಮಾರ್ಜುನರಿಗೆ ಜಂಘಾಬಲವೇ ಉಡುಗಿಹೋಯಿತು. ಕೃಷ್ಣನು ಮಾತ್ರ ಭೀಮನನ್ನು ಪ್ರೋತ್ಸಾಹಿಸುತ್ತಲೇ ಇದ್ದನು.



ಯುದ್ಧ ಮುಂದುವರೆಯಿತು. ಕೃಷ್ಣನು ಭೀಮನನ್ನು ನೋಡಿ ಮುಗುಳ್ನಗುತ್ತ, ಅವನ ದೃಷ್ಟಿ ತನ್ನ ಮೇಲಿರುವ ಸಮಯವನ್ನು ಕಾದು, ಬಾಳೆಯ ಎಲೆಯ ಚೂರೊಂದನ್ನು ಹರಿದು ಚೂರುಗಳನ್ನು ದೂರದೂರಕ್ಕೆಸೆದು ತೋರಿಸಿದನು. ಇಂಗಿತವನ್ನರಿತ ಭೀಮನು ಜರಾಸಂಧನನ್ನು ಮತ್ತೆ ಮೇಲಕ್ಕಿಸಿದು, ಬೀಳುತ್ತಿರುವಾಗ ಮುನ್ನಿನಂತೆಯೇ ಎರಡಾಗಿ ಸೀಳಿ, ಸೀಳುಗಳನ್ನು ಪರಸ್ಪರ ವಿರುದ್ಧವಾಗಿರುವಂತೆ ದೂರದೂರಕ್ಕೆ ಎಸೆಯಲು, ಸೀಳುಗಳು ಕೂಡಿಕೊಳ್ಳಲಾಗದೆ ಜರಾಸಂಧನು ಸತ್ತನು. ಅರಮನೆಯಲ್ಲಿ ಹಾಹಾಕಾರವುಂಟಾಯಿತು. ಮೂವರು ವೀರರೂ ಎಲ್ಲರನ್ನೂ ಸಮಾಧಾನಪಡಿಸಿದರು. ಜರಾಸಂಧನ ರಥವನ್ನೇ ಏರಿ, ಗಿರಿವ್ರಜ ಪರ್ವತಕ್ಕೆ ಹೋಗಿ ಬಂಧನದಲ್ಲಿದ್ದ ರಾಜರುಗಳನ್ನು ಮೊದಲು ಬಿಡಿಸಿದರು. ಕೃಷ್ಣನು ಅವರನ್ನು ಕುರಿತು. ``ನಿಮ್ಮ ಬಂಧಮುಕ್ತಿಗಾಗಿ ನಾವು ಪ್ರತ್ಯುಪಕಾರವನ್ನೇನೂ ಬಯಸುವುದಿಲ್ಲ. ಯುಧಿಷ್ಠಿರನು ಇಂದ್ರಪ್ರಸ್ಥದಲ್ಲಿ ರಾಜಸೂಯ ಯಾಗ ಮಾಡಬೇಕೆಂದಿದ್ದಾನೆ. ನೀವು ನಿಮ್ಮ ನಿಮ್ಮ ಸ್ನೇಹಿತರುಗಳೊಂದಿಗೆ ಅಲ್ಲಿಗೆ ಬರಬೇಕು. ಇದೇ ನಮ್ಮ ಕೋರಿಕೆ" ಎಂದನು. ಅವರು ಸಂತೋಷದಿಂದ ಒಪ್ಪಿದರು. ಭೀಮಾರ್ಜುನರೊಂದಿಗೆ ಜರಾಸಂಧನ ಅರಮನೆಗೆ ಹಿಂದಿರುಗಿದ ಕೃಷ್ಣನು, ಅವನ ಮಗ ಸಹದೇವನನ್ನು ಕುರಿತು, ``ಹೆದರಬೇಡ. ನಿನ್ನ ತಂದೆಯ ಅತಿರೇಕದ ಕಾರ್ಯಗಳಿಂದಾಗಿ ಅವನನ್ನು ಕೊಲ್ಲಬೇಕಾಯಿತು. ನೀನು ಈಗಾಗಲೇ ಅಭಿಷಿಕ್ತನಾಗಿರುವೆ. ನಿನ್ನ ತಂದೆಯ ಶೌರ್ಯವನ್ನೂ ನಿನ್ನ ಸೌಜನ್ಯವನ್ನೂ ಒಗ್ಗೂಡಿಸಿಕೊಂಡು ರಾಜ್ಯವನ್ನಾಳು. ಯುಧಿಷ್ಠಿರನು ಮಾಡುವ ರಾಜಸೂಯಕ್ಕೆ ಬಾ!" ಎಂದನು. ಸಹದೇವನು ಸಂತೋಷದಿಂದ ಒಪ್ಪಿದನು.



ಅಸಾಧ್ಯವೆನಿಸಿದ್ದನ್ನು ಸಾಧಿಸಿದ ಅವರು ಇಂದ್ರಪ್ರಸ್ಥಕ್ಕೆ ಹಿಂದಿರುಗಿದರು. ಯುಧಿಷ್ಠಿರನ ಸಂತೋಷಕ್ಕೆ ಪಾರವಿಲ್ಲ. ಕಣ್ಣೀರು ಬಿಡುತ್ತ ಒಬ್ಬೊಬ್ಬರನ್ನಾಗಿ ಆಲಿಂಗಿಸಿಕೊಂಡನು. ಕೃಷ್ಣನು, ``ಯುಧಿಷ್ಠಿರ, ನಿನ್ನ ಯಶಸ್ಸಿನ ಹಾದಿಯಲ್ಲಿದ್ದ ಮುಳ್ಳನ್ನು ಭೀಮ ತೆಗೆದುಹಾಕಿರುವನು. ಈಗ ನಿನ್ನ ರಾಜಸೂಯ ಯಾಗವು ಯಶಸ್ವಿಯಾಗಿ ನೆರವೇರುವುದು. ನಾನು ಇಂದ್ರಪ್ರಸ್ಥಕ್ಕೆ ಬಂದುದು ವ್ಯರ್ಥವಾಗಲಿಲ್ಲವೆಂದು ಸಂತೋಷವಾಗಿದೆ. ದ್ವಾರಕೆಗೆ ಹೋಗಿ ಪುನಃ ಬರುತ್ತೇನೆ. ಅಷ್ಟರಲ್ಲಿ ನಿನ್ನ ನಾಲ್ಕು ಜನ ತಮ್ಮಂದಿರನ್ನು ನಾಲ್ಕು ದಿಕ್ಕುಗಳಿಗೆ ದಿಗ್ವಿಜಯಕ್ಕಾಗಿ ಕಳುಹಿಸು. ನಾನು ವೃಷ್ಣಿಗಳೆಲ್ಲರನ್ನೂ ಕರೆತರುವೆನು" ಎಂದನು ವೃಷ್ಣಿಗಳಿಗೆ ಎನ್ನುಮುಂದೆ ಜರಾಸಂಧನ ಭಯವಿಲ್ಲ ಎಂದು ಕೃಷ್ಣನಿಗೆ ನಿರಾತಂಕವಾಯಿತು. ನಡೆದುದನ್ನೆಲ್ಲ ಅವರಿಗೆ ಯಾವಾಗ ಹೇಳಿಯೇನೋ ಎಂದುಕೊಳ್ಳುತ್ತ ದ್ವಾರಕೆಗೆ ಹೊರಟನು.



* * * * 



ಯುಧಿಷ್ಠಿರನು ರಾಜಸೂಯ ಯಾಗ ಮಾಡಲಿರುವ ಸುದ್ದಿ ಹರಡಿ ಇಂದ್ರಪ್ರಸ್ಥವು ಉತ್ಸಾಹಿತವಾಯಿತು. ಮಾರ್ಗದರ್ಶನ ಮಾಡಲು ವ್ಯಾಸನು ಬಂದನು. ಅರ್ಜುನನು ಉತ್ತರ ದಿಕ್ಕಿಗೂ, ಭೀಮನು ಪೂರ್ವಕ್ಕೂ, ನಕುಲನು ಪಶ್ಚಿಮಕ್ಕೂ, ಸಹದೇವನು ದಕ್ಷಿಣಕ್ಕೂ ದಿಗ್ವಿಜಯಕ್ಕಾಗಿ ಹೊರಟರು. ರಾಜ್ಯಗಳನ್ನು ಗೆಲ್ಲುತ್ತ ಹೊರಟ ಅರ್ಜುನನು ಸಾಲ್ವನನ್ನು ಸೋಲಿಸಿ, ಭಗದತ್ತನು ಆಳುತ್ತಿದ್ದ ಪ್ರಾಗ್ಜ್ಯೋತಿಷ ನಗರವನ್ನು ಪ್ರವೇಶಿಸಿದನು. ಎಲ್ಲರ ಗೌರವಕ್ಕೆ ಪಾತ್ರನಾಗಿದ್ದ ಭಗದತ್ತನೊಡನೆ ಎಂಟು ದಿನ ಕಾದಿ ಅವನನ್ನು ಸೋಲಿಸಿದನು. ಭಗದತ್ತನು ಅರ್ಜುನನನ್ನು ಆಲಿಂಗಿಸಿಕೊಂಡು,``ನಿನ್ನ ತಂದೆಯ ಸ್ನೇಹಿತ ನಾನು. ನಿನ್ನ ಶೌರ್ಯವನ್ನು ಕಂಡು ಸಂತೋಷವಾಗಿದೆ. ನಿನಗೇನು ಬೇಕು ಕೇಳು" ಎಂದನು. ಅರ್ಜುನನು ಅವನಿಗೆ ನಮಸ್ಕಾರ ಮಾಡಿ ರಾಜಸೂಯಕ್ಕೆ ಬರಬೇಕೆಂದು ಆಹ್ವಾನಿಸಿದನು. ಭಗದತ್ತನು ಸಂತೋಷದಿಂದ ಒಪ್ಪಿದನು. ಮುಂದೆ ಶ್ರೀರಾಮನೂ ಸೀತೆಯೂ ತಂಗಿದ್ದ ಸ್ಥಳವಾದ ರಾಮಗಿರಿಗೆ ಬಂದ ಅರ್ಜುನನು ಅಲ್ಲಿ ಆಳುತ್ತಿದ್ದ ತ್ರಿಗರ್ತ ಸೋದರರ ಹಿರಿಯನಾದ ಸುಶರ್ಮನನ್ನು ಎದುರಿಸಿ ಸೋಲಿಸಿದನು. ಆದರೆ ಅವರೊಡನೆ ಉಂಟಾದ ಶತ್ರುತ್ವವು ಕೊನೆಯವರೆಗೂ ಉಳಿಯಿತು. ಅರ್ಜುನನನ್ನು ಮುಂದೆ ಎಂದಾದರೂ ಕೊಲ್ಲುವ ಶಪಥ ಮಾಡಿದ ಅವರು ಸಂಶಪ್ತಕರು ಎನಿಸಿಕೊಂಡು ದುರ್ಯೋಧನನ ಸ್ನೇಹಿತರಾದರು. ಇನ್ನೂ ಮುಂದಕ್ಕೆ ಪಯಣಿಸಿದ ಅರ್ಜುನನು ಪರ್ವತರಾಜನಾದ ಮೇರುವಿನ ದರ್ಶನ ಮಾಡಿದನು. ಬೆಳಗಿನ ಕಿರಣಗಳಲ್ಲಿ ಅದರ ತುದಿ ಚಿನ್ನದ ಗಟ್ಟಿಯಂತೆ ಹೊಳೆಯುತ್ತಿತ್ತು. ಅಂತರಿಕ್ಷವನ್ನೇ ಭೇದಿಸುವಂತೆ ನಿಂತಿದ್ದು ಎಲ್ಲೆಡೆ ಸ್ವರ್ಣಪ್ರಕಾಶವನ್ನು ಬೀರುತ್ತಿದ್ದ ಅದರ ದರ್ಶನವು ಚೇತೋಹಾರಿಯಾಗಿತ್ತು. ಬಹುಕಾಲ ಅದರ ಮುಂದೆ ಧ್ಯಾನಸ್ಧನಾಗಿದ್ದ ಅರ್ಜುನನು ಅದಕ್ಕೆ ಭಕ್ತಿಯಿಂದ ವಂದಿಸಿ ಮನಸ್ಸಿಲ್ಲದ ಮನಸ್ಸಿನಿಂದ ಹಿಂದಿರುಗಬೇಕಾಯಿತು. ಮೇರುಪರ್ವತದ ದಕ್ಷಿಣ ತಪ್ಪಲಿನಲ್ಲಿ ಜಂಬು ಎಂಬ ಹೂಬಳ್ಳಿ ಬೆಳೆದು ವಿಶಾಲ ಭೂಮಿಯನ್ನು ಆವರಿಸಿತ್ತು. ಅದನ್ನು, ಪ್ರೀತಿಸುವ ಸಿದ್ದರೂ ಚಾರಣರೂ ಆಲ್ಲಿ ವಾಸಿಸುತ್ತಿದ್ದರು. ನಮ್ಮ ಭರತವರ್ಷಕ್ಕೆ ಜಂಬೂದ್ವೀಪವೆಂದು ಹೆಸರು ಬಂದದ್ದು ಈ ಬಳ್ಳಿಯಿಂದಾಗಿಯೇ. ವಿಜಯ ಎಂದೇ ಹೆಸರಾದ ಅರ್ಜುನನು ಅಲ್ಲಿಂದ ಗಂಧಮಾದನ ಪರ್ವತಕ್ಕೆ ಬಂದು ಅಲ್ಲಿಂದ ಇಂದ್ರಪ್ರಸ್ಧಕ್ಕೆ ಹಿಂದಿರುಗಿದನು. ಹಾದಿಯುದ್ದಕ್ಕೂ ಎಲ್ಲ ರಾಜರೂ ಬೇಕುಬೇಕಾದ ಹಾಗೆ ರತ್ನಾಭರಣಗಳನ್ನು ಕೊಟ್ಟು ಪುರಸ್ಕರಿಸಿದರು. ಆದ್ದರಿಂದ ಅರ್ಜುನನಿಗೆ ಧನಂಜಯನೆಂದು ಹೆಸರಾಯಿತು.





ಪೂರ್ವಕ್ಕೆ ಹೊರಟ ಭೀಮನು ಪಾಂಚಾಲ ಮಿಥಿಲೆಗಳನ್ನು ಜಯಿಸಿ ಚೇದಿ ದೇಶದ ರಾಜನಾದ ಶಿಶುಪಾಲನನ್ನು ಕಂಡು ತಾವು ಮಾಡಲಿರುವ ರಾಜಸೂಯ ಯಾಗದ ಬಗ್ಗೆ ತಿಳಿಸಿದನು. ಶಿಶುಪಾಲನು ಭೀಮನನ್ನು ಪ್ರೀತಿಯಿಂದ ಕಂಡನಲ್ಲದೆ ಬರುವುದಾಗಿ ಒಪ್ಪಿಕೊಂಡನು. ಮುಂದೆ ಭೀಮನು ಕೋಸಲ ಅಯೋಧ್ಯೆಗಳನ್ನೂ ಜಯಿಸಿ ಗಿರಿವ್ರಜಕ್ಕೆ ಬಂದು ಅಲ್ಲಿಂದ ಹಿಂದಿರುಗಿದನು. ಸಹದೇವನ ಪ್ರವಾಸವೂ ಅಂತೆಯೇ ಯಶಸ್ವಿಯಾಯಿತು. ಅವನು ಶ್ರೇಣಿಮನ್, ದಂತವಕ್ತ್ರ ಎಂಬ ರಾಜರನ್ನೂ, ಅವಂತಿಯ ವಿಂದ ಅನುವಿಂದರನ್ನೂ ಸೋಲಿಸಿದನು. ಮಾಹಿಷ್ಮತೀ ನಗರಕ್ಕೆ ಹೋಗಿ ಅಲ್ಲಿನ ನೀಲನೆಂಬ ರಾಜನನ್ನು ಗೆದ್ದನಲ್ಲದೆ ದಕ್ಷಿಣದ ಎಲ್ಲ ಸಣ್ಣಪುಟ್ಟ ರಾಜ್ಯಗಳನ್ನೂ ಗೆದ್ದು ಕುರುರಾಜ್ಯವನ್ನು ವಿಸ್ತರಿಸಿದನು. ಸಹದೇವನಿಗೆ ವಿಭೀಷಣನ ಸ್ನೇಹವನ್ನು ಗಳಿಸಬೇಕೆಂದೆನಿಸಿತು. ಅಣ್ಣನ ಮಗ ಘಟೋತ್ಕಚನನ್ನು ಸ್ಮರಿಸಿಕೊಂಡನು. ಅವನು ಬಂದೊಡನೆ ಅವನನ್ನು ರಾಜಸೂಯದ ಆಹ್ವಾನವನ್ನು ಕೊಟ್ಟು ಬರುವಂತೆ ಶ್ರೀಲಂಕೆಯ ವಿಭೀಷಣನ ಆಸ್ಧಾನಕ್ಕೆ ಕಳುಹಿಸಿದನು. ವಿಭೀಷಣನು ಸಂತೋಷದಿಂದ ಒಪ್ಪಿಕೊಂಡು ಘಟೋತ್ಕಚನನ್ನು ರತ್ನಾಭರಣಗಳಿಂದ ಸನ್ಮಾನಿಸಿ ಕಳಿಸಿಕೊಟ್ಟನು. ನಂತರ ಪಾಂಡ್ಯರಾಜ್ಯಕ್ಕೆ ಬಂದು ಅರ್ಜುನನ ಹೆಂಡತಿ ಚಿತ್ರಾಂಗದೆಯನ್ನೂ ಅವಳ ಮಗ ಬಭ್ರುವಾಹನನನ್ನೂ ಕಂಡನು . ಅವರೆಲ್ಲರನ್ನೂ ರಾಜಸೂಯಕ್ಕೆ ಬರಬೇಕೆಂದು ಆಹ್ವಾನಿಸಿ, ನಂತರ ಇಂದ್ರಪ್ರಸ್ಧಕ್ಕೆ ಮರಳಿದನು.



ಅಷ್ಟರಲ್ಲಿ ನಕುಲನು ಪಶ್ಚಿಮದ ದಿಗ್ವಿಜಯವನ್ನು ಮುಗಿಸಿ ಹಿಂದಿರುಗಿದ್ದನು. ದ್ವಾರಕೆಯಲ್ಲಿ ವೃಷ್ಣಿಗಳನ್ನೂ ವಸುದೇವನನ್ನೂ ಭೇಟಿಮಾಡಿ, ಆಮಂತ್ರಣ ಕೊಟ್ಟು ಬಂದಿದ್ದನು. ಕೃಷ್ಣನು ಬರುವುದೂ ಹೆಚ್ಚು ತಡವಾಗಲಿಲ್ಲ ಸಾವಿರಾರು ಬಗೆಯ ಕಪ್ಪಕಾಣಿಕೆಗಳನ್ನು ಯುಧಿಷ್ಠಿರನಿಗಾಗಿ ತಂದಿದ್ದನು. ವ್ಯಾಸನೊಂದಿಗೆ ಸೇರಿ ರಾಜಸೂಯಕ್ಕೆ ಅಗತ್ಯವಾದ ಎಲ್ಲ ಏರ್ಪಾಡುಗಳನ್ನೂ ಮಾಡತೊಡಗಿದನು. ಪುಣ್ಯಾಹಕರ್ಮಗಳಾದವು. ಎಲ್ಲಾ ರಾಜರುಗಳಿಗೂ ದೂತರ ಮೂಲಕ ಆಹ್ವಾನ ಹೋಯಿತು. ನಕುಲನು ಹಸ್ತಿನಾಪುರಕ್ಕೆ ಯುಧಿಷ್ಠಿರನ ಪರವಾಗಿ ಹೋಗಿ ಹಿರಿಯರಾದ ಭೀಷ್ಮ, ದ್ರೋಣ , ಧೃತರಾಷ್ಟ್ರ, ಬಾಹ್ಲೀಕ, ಸೋಮದತ್ತ, ಭೂರಿಶ್ರವಸ್ ಮತ್ತು ರಾಜಕುಮಾರರುಗಳನ್ನು ಕರೆದರು. ಶಕುನಿ, ಅವನ ಮಕ್ಕಳು, ರಾಧೇಯ ಇವರುಗಳನ್ನೂ ಆತ್ಮೀಯವಾಗಿ ಕರೆದು, ಅವರೆಲ್ಲರ ಶುಭಹಾರೈಕೆಗಳೊಂದಿಗೆ ಹಿಂದಿರುಗಿದನು.



ಎಲ್ಲರೂ ಒಬ್ಬೊಬ್ಬರಾಗಿ ಬರತೊಡಗಿದರು. ಎಲ್ಲೆಲ್ಲಿಯೂ ರಾಜರುಗಳು, ಅವರನ್ನು ಇಳಿಸುವುದಕ್ಕಾಗಿ ಕಟ್ಟಿದ ಉಪ್ಪರಿಗೆಗಳು. ಸಿರಿಯು ಯುಧಿಷ್ಠಿರನ ಕೋಶಕ್ಕೆ ಎಲ್ಲೆಡೆಗಳಿಂದ ಬಂದು ಸೇರುತ್ತಿದ್ದಿತು. ದುರ್ಯೋಧನನೇ ಕೋಶಾಧಿಕಾರಿ. ಪಾಂಡವರಿಗೆ ಎಲ್ಲ ರಾಜರೂ ತೋರುತ್ತಿದ್ದ ಪ್ರೀತಿಗೌರವಗಳನ್ನು, ಅವರ ವೈಭವವನ್ನು ಕಂಡು ಅವನು ಹೌಹಾರಿದನು. ಅವರನ್ನು ನಾಶಪಡಿಸಲು ಎಷ್ಟೇ ಪ್ರಯತ್ನಪಟ್ಟರೂ,ಅವರು ಇಷ್ಟೊಂದು ಉತ್ತಮಸ್ಧಿತಿಗೇರಿರುವುದನ್ನು ಕಂಡು ಅವನ ಹೃದಯ ವಿದೀರ್ಣವಾಯಿತು, ಅಸೂಯೆ ಹೊತ್ತಿ ಉರಿಯತೊಡಗಿತು. ಆದರೆ ತನ್ನ ಭಾವನೆಗಳನ್ನು ಅವನು ತನ್ನಲ್ಲಿಯೇ ಮುಚ್ಚಿಟ್ಟುಕೊಳ್ಳಬೇಕಾಯಿತು.



ಯಾಗವು ಮುಂದುವರೆಯಿತು. ಪಟ್ಟಾಭಿಷೇಕದ ಮುಹೂರ್ತವೂ ಬಂದೂದಗಿತು. ಋಷಿಗಳೆಲ್ಲರೂ ಯುಧಿಷ್ಠಿರನನ್ನು ಆಶೀರ್ವದಿಸಲು ಸಿದ್ದರಾಗಿದ್ದರು. ನಾರದನ ಮನಸ್ಸು ವರ್ತಮಾನದಲ್ಲಿರದೆ, ಸಿಂಹಾಸನದ ಬಳಿ ಮುಗುಳ್ನಗುತ್ತ ಕುಳಿತಿದ್ದ ಕೃಷ್ಣನ ಸುತ್ತಲೂ ಸುತ್ತಲಿದ್ದ ಭರತವರ್ಷದ ಭವಿಷ್ಯವನ್ನು ಕುರಿತು ಯೋಚಿಸುತ್ತಿತ್ತು ಯುಧಿಷ್ಠಿರನನ್ನು ನೋಡಿ ಈ ಮುಗ್ಧ ಕ್ಷತ್ರಿಯಕುಲಾಂತಕನಾಗಲಿರುವನೇ ಎಂದು ಅವನಿಗೆ ಅಚ್ಚರಿಯಾಯಿತು. ದುರ್ಯೋಧನನು ಈಗಲೂ ದ್ವೇಷಾಸೂಯೆಗಳಿಂದ ತುಟಿ ಕಚ್ಚುತ್ತಿದ್ದನು. ದಾನಶೂರಕರ್ಣನೆನಿಸಿದ ರಾಧೇಯನನ್ನು ನೋಡಿದನು. ಅಣ್ಣನೆಂದರಿಯದ ತಮ್ಮನಿಂದಲೇ ಹತನಾಗಲಿರುವ ನಿರ್ಭಾಗ್ಯನಿವನು. ಕುರುಕ್ಷೇತ್ರದ ರಣರಂಗದ ತುಂಬ ಭೀಮನು ಕೊಂದ ಧಾರ್ತರಾಷ್ಟ್ರರ ಶರೀರಗಳು. ಈ ಎಲ್ಲ ರಾಜರೂ ಅಲ್ಲಿ ಸತ್ತು ಒರಗುವರು. ನಾರದನು ತನ್ನ ಮಟ್ಟಿಗೆ ತಾನು ರಾಗದ್ವೇಷವಿಯುಕ್ತನಾದರೂ, ಬರಲಿರುವ ಕ್ಷತ್ರಿ\-ಯರು ದುರ್ವಿಧಿಗಾಗಿ ಮಮ್ಮಲ ಮರುಗಿದನು.



ಪಟ್ಟಾಭಿಷೇಕವು ಮುಗಿಯಿತು. ಈಗ ಅಭಿಷಿಕ್ತ ರಾಜನಿಂದ ಅತಿಥಿಗಳ ಸನ್ಮಾನ. ಎಲ್ಲರೂ ಫೂಜಾರ್ಹರೇ ಆದರೂ ಯಾರಿಗೆ ಅಗ್ರಪೂಜೆ ಸಲ್ಲಬೇಕು ಎಂಬ ಪ್ರಶ್ನೆ ಎದ್ದಿತು. ಕಿಂಕರ್ತವ್ಯ ವಿಮೂಢನಾದ ಯುಧಿಷ್ಠಿರನು ಭೀಷ್ಮನನ್ನು ಕುರಿತು, ``ಪಿತಾಮಹ, ನನಗೆ ಈ ವಿಷಯದಲ್ಲಿ ಏನೂ ತೋರದಾಗಿದೆ. ಅಗ್ರಪೂಜೆ ಯಾರಿಗೆ ಸಲ್ಲಬೇಕೆಂದು ನೀನೇ ಹೇಳಬೇಕು" ಎಂದನು. ಭೀಷ್ಮನು ಕ್ಷಣಕಾಲ ಯೋಚಿಸಿ, ``ರಾಜರುಗಳು ನೆರೆದಿರುವ ಈ ಮಹಾ ಸಭೆಯಲ್ಲಿ ಸೂರ್ಯನಂತೆ ಪ್ರಕಾಶಿಸುತ್ತಿರುವವನು ಕೃಷ್ಣ; ಅವನಿಗೇ ಅಗ್ರಪೂಜೆಯು ಸಲ್ಲತಕ್ಕುದು" ಎಂದನು. ತಮ್ಮ ಆತ್ಮದ ಆತ್ಮವಾದ ಕೃಷ್ಣನನ್ನು ಪೂಜಿಸಲು ಯುಧಿಷ್ಠಿರನು ಸಂತೋಷದಿಂದ ಸಿದ್ಧನಾದನು. ಪರಿಕರಗಳನ್ನೆಲ್ಲ ತರುವಂತೆ ಸಹದೇವನಿಗೆ ಹೇಳಿ, ಕಣ್ಣೀರು ಧಾರೆಯಾಗಿ ಸುರಿಯುತ್ತಿರಲು, ಪ್ರೀತಿಯಿಂದ ಕೃಷ್ಣನ ಪಾದಗಳನ್ನು ಮೃದುವಾಗಿ ನೇವರಿಸಿ ತೊಳೆದನು. ಅರ್ಘ್ಯವನ್ನು ಕೊಟ್ಟನು. ಪೂಜೆ ಮುಗಿಯಿತು. ಆಕಾಶದಿಂದ ಪುಷ್ಪವೃಷ್ಟಿಯಾಯಿತು.



ಸಭೆಯು ಕ್ಷಣಕಾಲ ಮೌನವಾಗಿದ್ದಿತು. ಕೃಷ್ಣನಿಗೆ ಅಗ್ರಪೂಜೆ ಸಂದುದನ್ನು ಕೆಲವರಿಗೆ ಸಹಿಸಲು ಆಗಲಿಲ್ಲ. ಅವರು ಪರಸ್ಪರ ಮುಖ ನೋಡಿಕೊಂಡರು. ಚೇದಿರಾಜನಾದ ಶಿಶುಪಾಲನು ಎದ್ದುನಿಂತು ಗಹಗಹಿಸತೊಡಗಿದನು. ``ಆಹಾ! ಚೆನ್ನಾಗಿದೆ! ಜಾರಜನೊಬ್ಬನು ನದೀಜನೊಬ್ಬನನ್ನು ಸಲಹೆ ಕೇಳುತ್ತಾನೆ. ಅವನ ಸಲಹೆಯಂತೆ ದನ ಕಾಯುವವನೊಬ್ಬನಿಗೆ ಪೂಜೆ ಸಲ್ಲುತ್ತದೆ. ಆಕಾಶದಿಂದ ಪುಷ್ಪವೃಷ್ಟಿಯೂ ಆಗುತ್ತದೆ! ನೆರೆದಿರುವ ಮಹಾವೀರರೆಲ್ಲರೂ ಮೂಕ ಪ್ರಾಣಿಗಳಂತೆ ನೋಡುತ್ತಿರುತ್ತಾರೆ! ಇನ್ನೇನು ತಾನೆ ಹೇಳಲಿ? ಚೆನ್ನಾಗಿದೆಯೆಂದಲ್ಲವೆ ಹೇಳಬೇಕಾದುದು" ಎಂದು ಹೇಳಿ ಕುಳಿತನು. ಎಲ್ಲರೂ ಮೌನವಾಗಿದ್ದರು. ಮತ್ತೆ ಶಿಶುಪಾಲನು ನಗುತ್ತ, ``ಎಲವೋ ಯುಧಿಷ್ಠಿರ, ಎಲ್ಲಿ ಹೋಯಿತು ನಿನ್ನ ಋಜುತ್ವ, ಧರ್ಮಬುಧ್ಧಿ? ಇಲ್ಲಿ ಇಷ್ಟೊಂದು ಜನ ವೀರಕ್ಷತ್ರಿಯರಿರುವಾಗ ಒಬ್ಬ ಗೊಲ್ಲನಿಗೆ ಅಗ್ರಪೂಜೆಯನ್ನು ಸಲ್ಲಿಸಿದೆಯಲ್ಲ! ನಿನ್ನ ದೃಷ್ಟಿ ಮಂಕಾಯಿತೆ? ನಾವೆಲ್ಲ ನಿನ್ನ ಮೇಲಿನ ಗೌರವದಿಂದ ರಾಜಸೂಯಕ್ಕೆ ಬಂದೆವೇ ಹೊರತು ನಿನ್ನನ್ನು ಸೋಲಿಸಲಾರದೆ ಅಲ್ಲ!" ಎಂದನು.



ಭೀಮನು ಕೋಪದಿಂದ ಕೈ ಕೈ ಹಿಸುಕಿಕೊಳ್ಳತೊಡಗಿದನು. ಅರ್ಜುನನು ಗಾಂಡೀವವನ್ನು ತೆಗೆದುಕೊಳ್ಳಲೇ ಎಂಬಂತೆ ಅಣ್ಣನ ಕಡೆಗೆ ನೋಡಿದನು. ಸಹದೇವನ ಕಣ್ಣುಗಳು ಕಿಡಿ ಕಾರುತ್ತಿದ್ದವು. ನಕುಲನ ಕೈ ಆಗಲೇ ಕತ್ತಿಯನ್ನು ಹಿರಿದಿತ್ತು. ಕೃಷ್ಣನು ಮಾತ್ರವೇ ಯಾವುದೇ ಭಾವವನ್ನು ತೋರಿಸದೆ-ಉದ್ರಿಕ್ತರಾಗದಿರಿ, ನಾನಿದನ್ನು ನೋಡಿಕೊಳ್ಳುವೆ-ಎಂಬಂತೆ ಪಾಂಡವರ ಕಡೆಗೆ ನೋಡಿದನು. ಶಿಶುಪಾಲನ ಭಾಷಣ ಮುಂದುವರೆದಿತ್ತು: ``ಇಲ್ಲಿರುವ ರಾಜರುಗಳಲ್ಲಿ ಹಿರಿಯನಾದ ವಸುದೇವನಿದ್ದಾನೆ. ನಿಮ್ಮ ಮಾವನೇ ಆದ ದ್ರುಪದನಿದ್ದಾನೆ. ನಿಮ್ಮ ಆಚಾರ್ಯರಾದ ದ್ರೋಣ ಕೃಪ ಅ







ತ್ಧಾಮರಿದ್ದಾರೆ. ತಪೋಧನನಾದ ವ್ಯಾಸನಿದ್ದಾನೆ. ಮಹಾವೀರ ಭೀಷ್ಮನಿದ್ದಾನೆ. ಇವರನ್ನೆಲ್ಲ ಬಿಟ್ಟು ಕೃಷ್ಣನಿಗೆ ಅಗ್ರಪೂಜೆ ಮಾಡುವಂಧ ದುರ್ಗತಿ ನಿಮಗೇಕೆ ಬಂದಿತು? ಧನುರ್ಧಾರಿ ಬೇಕಾದರೆ ಹಿರಣ್ಯಧನುಸ್ಸಿನ ಮಗ ಏಕಲವ್ಯನಿದ್ದಾನೆ. ಅವನು ಅರ್ಜುನನಿಗಿಂತ ಉತ್ತಮ. ಜರಾಸಂಧನನ್ನು ಒಮ್ಮೆ ಸೋಲಿಸಿದ ಭಾರ್ಗವಶಿಷ್ಯ ರಾಧೇಯನಿದ್ದಾನೆ. ಭಗದತ್ತ, ಕಳಿಂಗ, ವಿರಾಟ , ಶಾಲ್ಯ, ಸಾಲ್ವ, ಕಾಂಭೋಜ ಮೊದಲಾದ ವೀರರು ಬೇಕಾದಷ್ಟು ಜನರಿದ್ದಾರೆ. ಇವರೆಲ್ಲರಿಗಿಂತ ಕೃಷ್ಣ ಹೆಚ್ಚೆಂದು ತೋರಿದ ನಿನಗೆ ಬುದ್ಧಿ ಕೆಟ್ಟಿರಬೇಕು ಅಷ್ಟೆ. ಹೇಗಾದರೂ ಮಾಡಿ ಒಲಿಸಿಕೊಳ್ಳಲೇಬೇಕು ಅನ್ನುವುದಕ್ಕೆ ಇವನು ನಿನ್ನ ಗುರುವಲ್ಲ, ಅಳಿಯನಲ್ಲ. ಪ್ರೇಮಿಯೂ ಅಲ್ಲ!" ನೀನು ನಮ್ಮನ್ನೆಲ್ಲ ಅವಮಾನಿಸುವುದಕ್ಕಾಗಿಯೇ ರಾಜಸೂಯದ ನೆಪವಿಟ್ಟುಕೊಂಡು ಕರೆದಿರುವೆ ಎಂದು ಕಾಣುತ್ತದೆ. ಇದರಿಂದ ನಿನ್ನ ಋಜುತ್ವದ ಕೀರ್ತಿ ಈಗ ಕೆಟ್ಟುಹೋಯಿತು ! ಈ ಅಪಮಾನವನ್ನು ಇಲ್ಲಿರುವ ಇತರರು ಬೇಕಾದರೆ ಸಹಿಸಲಿ; ನಾನಂತೂ ಸಹಿಸಲಾರೆ!" ಎಂದು ತಕ್ಷಣವೇ ಸಭಾತ್ಯಾಗ ಮಾಡಿ ಕೋಪಗೊಂಡ ಸಿಂಹದಂತೆ ಹೊರಟುಹೋದನು.



ಯುಧಿಷ್ಠಿರನು ಅವನ ಹಿಂದೆಯೇ ಹೋಗಿ ಅವನನ್ನು ಸಮಾಧಾನಪಡಿಸುವುದಕ್ಕೆ ಪ್ರಯತ್ನಿಸಿದನು. ``ನೀನು ಹೀಗೆಲ್ಲ ನುಡಿಯಬಾರದು. ನಾವು ಅಜ್ಜನ ಮಾತಿನಂತೆ ನಡೆದಿದ್ದೇವೆ. ನನಗೆ ಅಪಮಾನವಾಗಿದ್ದರೆ ದಯವಿಟ್ಟು ಕ್ಷಮಿಸಿಬಿಡು. ನಮ್ಮ ಉದ್ದೇಶ ಅದಲ್ಲವೇ ಅಲ್ಲ. ನಮ್ಮ ಮಟ್ಟಿಗೆ ಕೃಷ್ಣನೇ ಇಲ್ಲಿರುವವರೆಲ್ಲರಿಗಿಂತ ಶ್ರೇಷ್ಠನು" ಎಂದನು. ಶಿಶುಪಾಲನಿಗೆ ಸಮಾಧಾನವಾಗುತ್ತಿತ್ತೋ ಏನೋ, ಅಷ್ಟರಲ್ಲಿ ಭೀಷ್ಮನು ``ಕೃಷ್ಣನನ್ನು ಅವಮಾನೆಸುವ ಇವನನ್ನೇಕೆ ಅನುನಯಿಸುತ್ತೀಯೆ? ಈ ಅಲ್ಪನಿಗೆ ಕೃಷ್ಣನ ಹಿರಿಮೆ ತಿಳಿಯುವುದಾದರೂ ಹೇಗೆ? ಕೃಷ್ಣನು ನಮಗೆ ಮಾತ್ರವಲ್ಲ, ಮೂರು ಲೋಕಗಳಿಗು ಪೂಜಾರ್ಹನು. ನೀನು ಈ ಶಿಶುಪಾಲನ ಹೊಟ್ಟೆಕಿಚ್ಚಿನ ಹುಚ್ಚುಮಾತುಗಳಿಗೆ ಬೆಲೆಕೊಡಬೇಕಾಗಿಲ್ಲ" ಎಂದನು. ಸಹದೇವನು, ``ಇಲ್ಲಿ ಕೃಷ್ಣನಿಗಿಂತ ದೊಡ್ಡವರಾರೂ ಇಲ್ಲ; ಅವನು ನಮಗೆ ಗುರು, ಗೆಳೆಯ, ಹಿತಚಿಂತಕ. ನಾವು ಮಾಡಿದ್ದು ಸರಿಯಾಗಿದೆ. ನಿನ್ನೊಂದಿಗೆ ಯುದ್ಧಮಾಡಲು ನಾನು ಸಿದ್ದ. ಬಾಯಿಗೆ ಬಂದ ಹಾಗೆ ಮಾತನಾಡಿ ನೀನು ಪಾರಾಗಿ ಯೋಗಲಾರೆ" ಎಂದನು. ಶಿಶುಪಾಲನಿಗೂ ಅವನ ಗೆಳೆಯರಿಗೂ ಕೋಪ ಬಂದಿತು. ಯುಧಿಷ್ಠಿರನು ಭೀಷ್ಮನನ್ನು'', ಅಜ್ಞಾ, ರಾಜರೆಲ್ಲರೂ ಕೋಪಗೊಂಡಿರುವರು. ಈಗ ಮಾಡುವುದೇನು?" ಎಂದು ಕೇಳಿದನು, ಭೀಷ್ಮನು, ``ಮಗು, ಭಯಪಡಬೇಡ. ನಾಯಿ ಸಿಂಹವನ್ನು ನೋಡಿ ಬೊಗಳುವಂತೆ, ಅವನು ಗಳಹಿಕೊಳ್ಳಲಿ. ಅದಕ್ಕೆ ನೀನು ಕವಡೆಯ ಬೆಲೆಯನ್ನು ಕೊಡುವುದೂ ಅಗತ್ಯವಿಲ್ಲ" ಎನ್ನಲು, ಶಿಶುಪಾಲನ ಸಿಟ್ಟು ಈಗ ಭೀಷ್ಮನ ಕಡೆಗೆ ತಿರುಗಿತು. ಅವನ ಲೋಕೋತ್ತರ ಪ್ರತಿಜ್ಞೆಯನ್ನು ಹಾಸ್ಯಮಾಡಿ, ನಪುಂಸಕನೆಂದು ಹಂಗಿಸಿದನು. ನದಿಯು ಉನ್ನತ ಮಟ್ಟದಿಂದ ಕೆಳಮಟ್ಟಕ್ಕೆ ಹರಿಯುವ ಹಾಗೆ, ನದಿಯ ಮಗನಾದ ಇವನ ಬುದ್ಧಿಯೂ ಸಹ ಎಂದನು. ವಿಷ್ಣುಪಾದಗಳಲ್ಲಿ ಹುಟ್ಟಿ, ಶಿವನ ಜಟೆಯಿಂದ ಬಂದಿರುವ ಪರಮ ಪವಿತ್ರ ಗಂಗೆಯನ್ನು ಜಾರಿಣಿಯೆಂದು ಬೈದನು. ಭೀಮನು ಸಹಿಸಲಾಗದೆ, ``ಅಜ್ಜಾ, ಇದೇನು ಸುಮ್ಮನಿರುವೆ? ಇವನನ್ನು ಕೊಲ್ಲಲು ನನಗಾದರೂ ಅನುಜ್ಞೆ ಕೊಡು!" ಎಂದನು. ಭೀಷ್ಮನು, ``ಭೀಮ, ದುಡುಕಬೇಡ. ಇವನು ಕೃಷ್ಣನಿಂದಲೇ ಕೊಲ್ಲಲ್ಪಡತಕ್ಕವನು. ಇವನು ಹುಟ್ಟಿದಾಗ ಇವನಿಗೆ ಮೂರು ಕಣ್ಣುಗಳೂ ನಾಲ್ಕು ಕೈಗಳೂ ಇದ್ದವು. ಯಾರ ತೊಡೆಯ ಮೇಲೆ ಮಲಗಿಸಿದಾಗ ಈ ಹೆಚ್ಚಾದ ಕಣ್ಣು, ಕೈಗಳೂ ಬಿದ್ದುಹೋಗುವುವೋ ಅವನಿಂದಲೇ ಇವನಿಗೆ ಮರಣವೆಂದು ಅಶರೀರವಾಣಿಯಾಯಿತು. ಇವನ ತಾಯಿ ಕೃಷ್ಣನ ತೊಡೆಯ ಮೇಲೆ ಮಗುವನ್ನು ಮಲಗಿಸಿದಾಗ ಹಾಗೇ ಆಯಿತು. ಹಾ ದೈವವೆ, ತನ್ನ ಸೋದರಳಿಯನಿಂದಲೇ ತನ್ನ ಮಗುವಿಗೆ ಸಾವು ಬರುವುದೇ ಎಂದು ಅವಳು ದುಃಖಿಸುತ್ತ ಜೀವಭಿಕ್ಷೆಯನ್ನು ಬೇಡಲು, ಕೃಷ್ಣನು ಅತ್ತೆಗೆ ಇವನ ನೂರು ಅಪರಾಧಗಳನ್ನು ಕ್ಷಮಿಸುವೆನೆಂದು ವಚನ ಕೊಟ್ಟಿರುವನು. ಈ ಶಿಶುಪಾಲನ ಗೆಳೆಯ ಭೀಷ್ಮಕಪುತ್ರನಾದ ರುಕ್ಮಿಯು ತನ್ನ ತಂಗಿ ರುಕ್ಮಿಣಿಯನ್ನು ಇವನಿಗೆ ಕೊಡಬೇಕೆಂದ್ದನು. ಆದರೆ ಅವಳು ಕೃಷ್ಣನನ್ನು ಪ್ರೀತಿಸಿ ಮದುವೆಯಾದಳು. ಆದ್ದರಿಂದಲೇ ಅವನಿಗೆ ಕೃಷ್ಣನನ್ನು ಕಂಡರಾಗದು. ವಚನ ಕೊಟ್ಟಂತೆ ಕೃಷ್ಣನು ಇವನ ನೂರು ಅಪರಾಧಗಳನ್ನು ಕ್ಷಮಿಸುವುದು ಮುಗಿದು ಬಹಳ ಕಾಲವಾಯಿತು. ಕೃಷ್ಣನೇ ಇವನನ್ನು ಶಿಕ್ಷಿಸುವನು, ನೋಡುತ್ತಿರು" ಎಂದನು. ಈಗ ಶಿಶುಪಾಲನು, ``ಹೆಚ್ಚು ಮಾತೇಕೆ? ಕುನ್ನಿಗಳಾ, ಬನ್ನಿ. ನನ್ನೊಡನೆ ಯುದ್ಧಮಾಡಿ. ಯಾರು ಹೆಚ್ಚೆಂದು ಸಿದ್ಧವಾಗಲಿ. ಇದು ಹುಡುಗಿಯರನ್ನು ಕದ್ದೊಯ್ಯು ಅವರನ್ನು ನಡುನೀರಿನಲ್ಲಿ ಕೈಬಿಟ್ಟಂತಲ್ಲ. ಸ್ನಾನಮಾಡುತ್ತಿರುವ ಹೆಂಗಳೆಯರ ಬಟ್ಟೆಗಳನ್ನು ಕದ್ದಂತಲ್ಲ. ಮುಖಾಮುಖಿ ಯುದ್ಧಮಾಡಿ, ಬನ್ನಿ!" ಎಂದು ಭೀಷ್ಮನನ್ನೂ ಕೃಷ್ಣನನ್ನೂ ಸೆಣೆಸಿ ನಿಂತನು.



ಕೃಷ್ಣನು ಯುಧಿಷ್ಠಿರನ ಮೇಲಿನ ಪ್ರೀತಿಯಿಂದ ಯಾಗದ ವಾತಾವರಣ ಹದಗೆಡದಿರಲಿ ಎಂದು ಇಷ್ಟು ಹೊತ್ತೂ ಸಹಿಸಿಕೊಂಡಿದ್ದನು. ನೆರೆದವರೆಲ್ಲರನ್ನೂ ಕುರಿತು. ``ಮಹಾಜನರೆ, ಇವನು ಮೊದಲಿನಿಂದಲೂ ವೃಷ್ಣಿಗಳ ವೈರಿ. ನಾನು ಪ್ರಾಗ್ಜ್ಯೋತಿಷಕ್ಕೆ ಹೋದಾಗ ಇವನು ದ್ವಾರಕೆಗೆ ಬಂದು ಬೆಂಕಿಯಿಟ್ಟನು. ನನ್ನ ಅಜ್ಜ ಉಗ್ರಸೇನನು ತನ್ನ ಪರಿವಾರದೊಂದಿಗೆ ರೈವತಕ ಪರ್ವತಕ್ಕೆ ಹೋಗಿದ್ದಾಗ ಇವನು ಅವರನ್ನು ಮುತ್ತಿ ಓಡಿಸಿದನು. ನನ್ನ ತಂದೆಯ ಯಜ್ಞಾಶ್ವವನ್ನು ಕಟ್ಟಿಹಾಕಿ ತೊಂದರೆ ಮಾಡಿದನು. ಬಭ್ರುವಾಹನನೆಂಬ ಯಾದವನ ಹೆಂಡತಿಯನ್ನು ಕೆಡಿಸಿದವನಿವನು. ಜರಾಸಂಧನೂ ವೃಷ್ಣಿಗಳ ಶತ್ರುವಾದ್ದರಿಂದಲೇ ಇವರಿಬ್ಬರೂ ಮಿತ್ರರಾಗಿದ್ದರು. ಮಾದರಿಗಾಗಿ ಇವನ ಕೆಲವೇ ಅಪರಾಧಗಳನ್ನು ಹೇಳಿರುವೆ. ಎಲ್ಲವನ್ನೂ ಹೇಳಲು ಈಗ ವ್ಯವಧಾನವಿಲ್ಲ. ಇವನ ಪಾಪದ ಕೊಡ ತುಂಬಿ ಬಹುಕಾಲವಾಯಿತು. ಇನ್ನು ಇವನನ್ನು ಸಹಿಸಬೇಕಾದ ಅಗತ್ಯವಿಲ್ಲ" ಎಂದ ಕೃಷ್ಣನನ್ನು, ಪತಂಗವು ಜ್ವಾಲೆಯನ್ನು ಹೇಗೋ ಹಾಗೆ, ಶಿಶುಪಾಲನು ನೋಡುತ್ತಿರಲು, ಕೃಷ್ಣನು ತನ್ನ ಸುದರ್ಶನಚಕ್ರದಿಂದ ಅವನ ತಲೆಯನ್ನು ಕತ್ತರಿಸಿ ಕೆಡಹಿದನು. ಶಿಶುಪಾಲನ ಶರೀರವು ಕೊಡಲಿಯಿಂದ ಕಡಿದುರುಳಿಸಿದ ಮಹಾವೃಕ್ಷದಂತೆ ಭೂಮಿಗೆ ಬಿದ್ದಿತು. ಅದರಿಂದ ಹೊರಟ ದಿವ್ಯತೇಜಸ್ಸೊಂದು ಕೃಷ್ಣನ ಪಾದಗಳಲ್ಲಿ ಐಕ್ಯವಾಯಿತು

ಕೃಷ್ಣನ ಮುಖದಲ್ಲಿ ಬೆಳಗುತ್ತಿದ್ದ ದಿವ್ಯ ಪ್ರೇಮವು ಯಾರಿಗೂ ಅರ್ಥವಾಗಲಿಲ್ಲ. ತನ್ನ ಪ್ರೀತಿಯ ಸೇವಕರಾಗಿದ್ದ ಜಯ ವಿಜಯರಲ್ಲಿ ಒಬ್ಬನನ್ನು ಮಾನವಜನ್ಮದಿಂದ ಮುಕ್ತಗೊಳಿಸಿದೆ, ಇನ್ನೊಬ್ಬನಾದ ದಂತವಕ್ತ್ರನೂ ಮುಕ್ತನಾಗಲಿರುವನು, ಎಂಬ ಯೋಚನೆ ಕೃಷ್ಣನ ಮನಸ್ಸಿನಲ್ಲಿ ಹಾದು ಹೋಯಿತು.



ಸಭೆಯಲ್ಲಿದ್ದವರೆಲ್ಲರೂ ದಿಙ್ಮೂಢರಾಗಿದ್ದರು. ಯಾರೊಬ್ಬರಿಗೂ ಮಾತನಾಡುವ ಧೈರ್ಯವಿರಲಿಲ್ಲ. ರಾಜಸೂಯ ಮಹಾಯಾಗವು ಹೀಗೆ ದುರಂತದಲ್ಲಿ ಮುಕ್ತಾಯಗೊಂಡಿತು. ವಿಧಿಯನ್ನು ಯಾರೂ ತಿದ್ದುವಂತಿರಲಿಲ್ಲ



* * * * 



ಯುಧಿಷ್ಠಿರನು ರಾಜರುಗಳನ್ನೆಲ್ಲ ಯುಕ್ತವಾಗಿ ಸನ್ಮಾನಿಸಿ ಕಳಿಸಿಕೊಟ್ಟನು. ಕೃಷ್ಣನು ದ್ವಾರಕೆಗೆ ಹೊರಡುವ ಸಮಯ ಸನ್ನಿಹಿತವಾಯಿತು. ಕುಂತಿ, ಪಾಂಡವರು, ದ್ರೌಪದಿ, ಸುಭದ್ರೆ ಎಲ್ಲರೂ ಮನಸ್ಸಿಲ್ಲದ ಮನಸ್ಸಿನಿಂದ ಅವನನ್ನು ಬೀಳ್ಕೊಟ್ಟರು. ಕೃಷ್ಣನು ಹೊರಟುಹೋದ ಮೇಲೆ ಅವರನ್ನು ಖಿನ್ನತೆ ಅವರಿಸಿತು. ಇಂದ್ರಪ್ರಸ್ಥದಿಂದ ಅವನನ್ನು ಬೀಳ್ಕೊಡುತ್ತಿರುವುದು ಇದೇ ಕೊನೆಯಬಾರಿಗೆ ಎಂದು ಅವರಿಗೆ ಹೇಗೆ ಗೊತ್ತಾಗಬೇಕು? ಕೃಷ್ಣನೊಡನೆ ಮುಂದಿನ ಭೇಟಿಯಾಗಲಿರುವುದು ಕಾವ್ಯಕವನದಲ್ಲಿ!



ಪಾಂಡವರು ಎಲ್ಲರನ್ನೂ ಕಳಿಸಿ ಹಿಂದಕ್ಕೆ ಬಂದಮೇಲೆ ಇಂದ್ರಪ್ರಸ್ಥವು ಭಣಗುಡುತ್ತಿತ್ತು. ಮಯಸಭೆಯನ್ನು ನೋಡುವುದಕ್ಕೆಂದು ದುರ್ಯೋಧನ, ದುಶ್ಯಾಸನ, ಶಕುನಿ ಮತ್ತು ರಾಧೇಯ ಮಾತ್ರ ಇನ್ನೂ ಉಳಿದಿದ್ದರು. ಯುಧಿಷ್ಠಿರನಿಗೆ ಅವರು ಉಳಿದದ್ದು ಬಹಳ ಹೆಮ್ಮೆಯೆನಿಸಿತು. ಇನ್ನಿಲ್ಲದ ಹಾಗೆ ಮರ್ಯಾದೆ ಮಾಡಿ ಅವರಿಗೆ ಸಂತೋಷವನ್ನುಟುಮಾಡಿದನು.



ಹೊರಟು ನಿಂತ ವ್ಯಾಸನಿಗೆ ಯುಧಿಷ್ಠಿರನು ನಮಸ್ಕರಿಸಲು ಅವನು, ``ದೈವಕೃಪೆಯಿಂದ ನೀನು ರಾಜಸೂಯವನ್ನು ಮುಗಿಸಿ ಚಕ್ರಾಧಿಪತಿಯಾದೆ, ನಿನ್ನ ತಂದೆಯ ಆಸೆಯನ್ನು ನೆರವೇರಿಸಿದೆ. ಶಿಶುಪಾಲನ ಸಾವು ಕೇವಲ ಪ್ರಾರಂಭವಷ್ಟೇ. ನಿನಗೆ ಒಳ್ಳೆಯದಾಗಲಿ" ಎಂದು ಆಶೀರ್ವದಿಸಿದನು.





ಅಷ್ಟರಲ್ಲಿ ದುರ್ಯೋಧನನು ಮಯಸಭೆಯ ಚಮತ್ಕಾರಗಳನ್ನು ನೋಡುತ್ತ ನಡೆಯುತ್ತಿದ್ದನು. ಅಂತಹ ಅಚ್ಚರಿಯನ್ನು ಅವನು ಈ ಹಿಂದೆ ನೋಡಿರಲಿಲ್ಲ. ಮಯನ ಸೃಷ್ಟಿಯ ಅದ್ಭುತ ಸೌಂದರ್ಯವು ಅವನ ಮನಸ್ಸಿಗೆ ಮೋಡಿ ಮಾಡಿತು. ಪಾಂಡವರ ಪಾಲಿಗೆ ಇಂತಹ ಒಂದು ಅದೃಷ್ಟ ಒದಗಿರುವುದನ್ನು ಅವನು ಸಹಿಸದಾದ. ಅಸುರಶಿಲ್ಪಿ ರಚಿಸಿದ ಈ ಸಭೆಯಲ್ಲಿ ವಿಶೇಷವೊಂದ್ದಿತು. ಅದೇನೇದರೆ, ಯಾರು ಅದನ್ನು ಕಟ್ಟಿಸಿದವನ ವಿಚಾರವಾಗಿ ಅಸೂಯಾಪರ ದೃಷ್ಟಿಯಿಂದ ನೋಡುವರೋ ಅವರು ಅಲ್ಲಿ ಅನೇಕ ಬಗೆಗಳಿಂದ ಮೋಸಹೋಗುವರು. ದುರ್ಯೋಧನನು ನಡೆದಾಡುತ್ತಿದ್ದಾಗ, ದೂರದಿಂದ ದೊಡ್ಡ ಕೊಳದಂತೆ ಕಂಡು ಇವನು ಬಟ್ಟೆಯನ್ನು ಮೇಲೆತ್ತಿಕೊಂಡು ಬಳಿಸಾರಿದಾಗ ಕೊನೆಗೆ ನೀರಿನಂತೆ ಭಾಸವಾಗುವ ಅಮೃತಶಿಲೆಯ ನೆಲ ಎಂದು ಅರಿವಾಗುವುದು; ಅವನು ನಕ್ಕು ಅದರ ಮೇಲೆ ನಡೆದು ಮುಂದೆ ಸಾಗುವನು; ಆದರೆ ಅದು ನಿಜವಾದ ಕೊಳವಾಗಿದ್ದು ಕೊನೆಗೆ ಅವನು ಅದರಲ್ಲಿ ಬಿದ್ದು ಒದ್ದೆಯಾಗುವನು. ಅಲ್ಲಿದ್ದ ಸೇವಕರೆಲ್ಲ ನಕ್ಕು, ಯುಧಿಷ್ಠಿರಾಜ್ಞೆಯಿಂದ ಅವನಿಗೆ ಒಣಗಿದ ಬಟ್ಟೆಗಳನ್ನು ಕೊಡುವರು. ಇನ್ನೊಮ್ಮೆ ಇದು ಕೊಳ ಎಂದುಕೊಂಡು ಬಟ್ಟೆಯನ್ನು ಮೇಲೆತ್ತಿಕೊಂಡು ಜಾಗ್ರತೆಯಾಗೆ ನಡೆಯುವನು; ಆದರೆ ಅದು ಕೊಳವಾಗಿರದೆ ಕೇವಲ ನೆಲವಾಗಿರುವುದು. ಅಲ್ಲಿದ್ದವರೆಲ್ಲಾ ಇವನ ಅವಸ್ಥೆಯನ್ನು ಕಂಡು ನಗುವರು. ಒಮ್ಮೆ ಇಲ್ಲಿ ಬಾಗಿಲಿದೆ ಎಂದುಕೊಂಡು ಸಲೀಸಾಗಿ ನಡೆದುಹೋದರೆ ಅಲ್ಲಿ ಬಾಗಿಲೇ ಇಲ್ಲದೆ ಗೋಡೆಗೆ ತಲೆ ಕುಟ್ಟಿಕೊಂಡು ಗಾಯಮಾಡಿಕೊಂಡನು. ಬಳಿಯಲ್ಲಿದ್ದ ಭೀಮಾರ್ಜುನರಿಗೂ ನಕುಲಸಹದೇವರಿಗೂ ನಗು ಬಂದಿತು. ಅದರಲ್ಲಿಯೂ ದ್ರೌಪದಿಯು ಕಿಲಕಿಲಕೆ ನಕ್ಕುದು ಅವನ ಹೃದಯದಲ್ಲಿ ಕೂರಲಗಿನಂತೆ ನಟ್ಟುಹೋಯಿತು. ಬಂದ ಕೋಪವನ್ನೆಲ್ಲ ನುಂಗಿಕೊಂಡು, ತನಗೆ ಏನೂ ಆಗಿಲ್ಲವೆಂಬಂತೆ ನಟಿಸಿಕೊಂಡು ಮುಂದೆ ಹೋಗಲೇಬೇಕಾಯಿತು.



ದುರ್ಯೋಧನನು ಪಾಂಡವರಿಂದ ಬೀಳ್ಕೊಂಡು ಇಂದ್ರಪ್ರಸ್ಥದಿಂದ ಹೊರಟನು. ಅವನು ಎದೆ ಅಸೂಯೆಯಿಂದ ಒಡೆದುಹೋಗುವಂತೆ ಆಗಿತ್ತು. ತಮ್ಮಂದಿರೊಡನೆಯಾಗಲಿ ಗೆಳೆಯರೊಡನೆಯಾಗಲಿ ಮಾತಿಲ್ಲ. ಒಬ್ಬನೇ ಕುಳಿತು ವಿಧಿ ತನ್ನನ್ನು ಹೇಗೆ ವಂಚಿಸಿತು ಎಂದು ಗಂಟೆಗಟ್ಟಲೆ ಧೇನಿಸುವನು. ಪಾಂಡವರಿಗೆ ದೇವತೆಗಳ ವಿಶೇಷ ಅನುಗ್ರಹವಿರಬೇಕು. ವಾರಣಾವತದಿಂದ ಪಾರಾಗಲಾರರೆಂದುಕೊಂಡಿದ್ದೆ; ಪುರೋಚನನ ಮೂರ್ಖತನದಿಂದಾಗಿ ನಮ್ಮ ಉಪಾಯ ಫಲಿಸಲಿಲ್ಲ. ನಂತರ ದ್ರುಪದನ ಅಳಿಯಂದಿರಾಗಿ ತುಂಬ ಬಲಶಾಲಿಗಳಾದರು. ಏನೂ ಬೆಳೆಯದ ಬರಪೀಡಿತ ಪ್ರದೇಶವನ್ನು ಕೊಟ್ಟು ಸಾಗಹಾಕಿದರೆ ಅದನ್ನೇ ನಂದನವನವನ್ನಾಗಿ ಮಾಡಿಕೊಂಡರು; ಯುಧಿಷ್ಠಿರನು ರಾಜರನ್ನೆಲ್ಲ ಗೆದ್ದು ರಾಜಸೂಯವನ್ನು ಮಾಡಿ ಚಕ್ರವರ್ತಿ ಎನಿಸಿಕೊಂಡನು. ಇತ್ಯಾದಿ ಚಿಂತಿಸುವುದರಲ್ಲಿಯೇ ಕಾಲ ಕಳೆಯಿತು. ದುಃಖವನ್ನು ಹೃದಯದಲ್ಲಿ ಬಚ್ಚಿಟ್ಟುಕೊಂಡು, ಏಕಾಂಗಿತನದಿಂದ ದುರ್ಯೋಧನನು ಹಣ್ಣಾದನು. ಚಿಕ್ಕಂದಿನ ಮುಗ್ಧ ಅಸೂಯೆ ದ್ವೇಷವಾಗಿ ಬೆಳೆದು ಈಗ ಅವನ ಮನಸ್ಸನ್ನು ಕೆಡಿಸುವ ಬಲವಾದ ಗೀಳಾಗಿ ಬೆಳೆದಿತ್ತು. ಅನೇಕ ವಿಚಾರಗಳಲ್ಲಿ ಅವನು ತಂದೆಗಿಂತ ಭಿನ್ನನಾಗಿದ್ದನು. ಧೃತರಾಷ್ಟ್ರ ಹೇಡಿ; ಲೋಭಿ; ತನ್ನ ಭಾವನೆಗಳನ್ನು ಮುಚ್ಚಿಟ್ಟುಕೊಂಡು ಆಷಾಢಭೂತಿಯಗಿ ಸದ್ವರ್ತನೆಯ ಸೋಗು ಹಾಕಬಲ್ಲವನು. ಆದರೆ ದುರ್ಯೋಧನ ಹೇಡಿಯಲ್ಲ, ಆಷಾಢಭೂತಿಯಲ್ಲ; ತಂದೆಯ ಅತಿರೇಕದ ಎಚ್ಚರ ಇವನಿಗಾಗದು. ಇವನದು ನೇರ ಮನಸ್ಸು-ತನ್ನ ದ್ವೇಷಾಸೂಯೆಗಳನ್ನು ಮುಚ್ಚಿಟ್ಟುಕೊಳ್ಳಲಾರ. ತನ್ನನ್ನು ಸಂತೋಷಪಡಿಸಿದ ಅನಾಮಧೇಯ ರಾಧೇಯನಿಗೆ ಅಂಗರಾಜ್ಯಾಭಿಷೇಕವನ್ನು ಮಾಡುವಂತಹ ಉದಾರಿ. ಅವನು ಆಳಿದ ಹದಿಮೂರು ವರ್ಷಗಳಲ್ಲಿ ಪ್ರಜೆಗಳು ಸೌಖ್ಯದಿಂದಿದ್ದರು. ನಿಜವಾಗಿ ಅವನು ತುಂಬ ಒಳ್ಳೆಯ ಮನುಷ್ಯ. ಅವನ ಏಕಮಾತ್ರ ದೋಷವೆಂದರೆ ಅಸೂಯೆಯೊಂದೇ. ಅದೇ ಮುಂದೆ ಅವನ ದುರಂತಕ್ಕೆ, ಅವನತಿಗೆ ಕಾರಣವಾಯಿತು.



ದ್ರೋಣನು ಹಸ್ತಿನಾಪುರಕ್ಕೆ ಬಂದ ಹೊಸತರಲ್ಲಿ ಅರ್ಜುನನ ನಡತೆಯಿಂದ ತುಂಬ ಸಂತೋಷಪಟ್ಟು, ``ಅರ್ಜುನ, ಇಂದಿನಿಂದ ಕೊನೆಯವರೆಗೆ ಈ ನನ್ನ ಮಗ ಅಶ್ವತ್ಥಾಮ ನಿನ್ನ ಸ್ನೇಹಿತನಾಗಿರುವನು" ಎಂದು ಮಗನ ಪರಿಚಯ ಮಾಡಿಕೊಟ್ಟಿದ್ದನು. ಆದರೆ ಅಶ್ವತ್ಥಾಮನಿಗೆ ಅರ್ಜುನನಿಗಿಂತ ದುರ್ಯೋಧನನೇ ಹೆಚ್ಚು ಇಷ್ಟವಾದನು. ಕೊಟ್ಟಕೊನೆಗೆ ಅವನು ತನ್ನದಾದ ಎಲ್ಲವನ್ನೂ ದುರ್ಯೋಧನನಿಗಾಗಿ ತ್ಯಾಗಮಾಡಿದನು; ಮಧ್ಯರಾತ್ರಿಯಲ್ಲಿ ಉಪಪಾಂಡವರನ್ನು ಮಲಗಿದ್ದಹಾಗೆಯೇ ಕೊಲ್ಲಲೂ ಹೇಸಲಿಲ್ಲ. ತೊಡೆ ಮುರಿದುಕೊಂಡು, ಮೇಲೇಳಲಾರದೆ ಬಿದ್ದಿದ್ದ ದುರ್ಯೋಧನನಿಗೆ ಪ್ರೀತಿಯಾಗಲೆಂದೇ ಅವನು ಅಂಥ ಕೆಲಸವನ್ನು ಮಾಡಿದನು.



ಅಲ್ಲದೆ, ಮಹಾಯುದ್ಧ ಪ್ರಾರಂಭವಾದಾಗ, ಧರ್ಮನಿಷ್ಠರೂ ಸತ್ಯಸಂಧರೂ ಎನಿಸಿ ಕೊಂಡಿದ್ದ ಪಾಂಡವರಿಗೆ ಒಗ್ಗೂಡಿಸಲು ಸಾಧ್ಯವಾದುದು ಕೇವಲ ಏಳು ಅಕ್ಷೌಹಿಣಿ ಸೈನ್ಯ ಮಾತ್ರ; ದುರ್ಯೋಧನನ ಕಡೆ ಒಲಿದದ್ದು ಹನ್ನೊಂದು ಅಕ್ಷೌಹಿಣಿ ಸೈನ್ಯ. ದುರ್ಯೋಧನನ ನಡತೆ ಅಕ್ಷಮ್ಯವಾದುದೆಂದೂ, ಪಾಂಡವರು ಯುದ್ಧಮಾಡುವ ಕಾರಣವು ನ್ಯಾಯವಾದುದೆಂದೂ ಇಡೀ ಪ್ರಪಂಚಕ್ಕೇ ಮನವರಿಕೆಯಾಗಿತ್ತು. ಪಾಂಡವರ ಕಡೆ ಇದ್ದವರಲ್ಲಿ ಹೆಚ್ಚಿನವರು ರಕ್ತ ಸಂಬಂಧಿಗಳು; ದುರ್ಯೋಧನನ ಕಡೆಗೋ, ಮೆಚ್ಚಿ ಬಂದವರು. ಕುರುಪಿತಾಮಹನಾದ ಭೀಷ್ಮನೇ ಅವನ ಕಡೆ ನಿಂತು ಯುದ್ಧಮಾಡಿದನು. ಭಗದತ್ತನು ಅವನ ಕಡೆ ನಿಂತನು; ತನ್ನ ತಂಗಿಯ ಮಕ್ಕಳಿಗೆ ಸಹಾಯ ಮಾಡುವುದಕ್ಕೆಂದೇ ಬರುತ್ತಿದ್ದ ಶಲ್ಯನು ದುರ್ಯೋಧನನ ವ್ಯಕ್ತಿತ್ವಕ್ಕೆ ಮಾರುಹೋಗಿ ಅವನ ಕಡೆಗೆ ಯುದ್ಧಮಾಡುವುದೆಂದು ತೀರ್ಮಾನಿಸಿದನು. ಈ ದುರದೃಷ್ಟಶಾಲಿ ರಾಜಕುಮಾರನ ವ್ಯಕ್ತಿತ್ವದ ಕಾಂತಶಕ್ತಿ ಅಷ್ಟು ಸೊಗಸಾಗಿತ್ತು. ಋಜುವ್ಯಕ್ತಿತ್ವದ ರಾಧೇಯನು ಇವನಿಗಾಗಿ ಹೋರಾಡಿ ಸತ್ತನು. ಬಲರಾಮನು ಭೀಮನಿಗಿಂತ ಇವನನ್ನೇ ಹೆಚ್ಚಾಗಿ ಪ್ರೀತಿಸಿದನು.



* * * * 



ದುರ್ಯೋಧನನ ಖಿನ್ನತೆ ಹೀಗೇ ಮುಂದುವರೆಯುವುದಕ್ಕೆ ಶಕುನಿಯು ಬಿಡಲಿಲ್ಲ. ಪದೇಪದೇ ಮಾತನಾಡಿಸಲು ಪ್ರಯತ್ನಿಸಿದ ಮೇಲೆ ದುರ್ಯೋಧನನು ತನ್ನ ದುಗುಡದ ಬಗ್ಗೆ ಬಾಯಿಬಿಟ್ಟನು. ತನಗಾದ ಅವಮಾನವನ್ನು ಹೇಳಿಕೊಂಡು, ``ಆ ಪಾಂಡವರ ನಾಶವನ್ನು ನೋಡುವವರೆಗೆ ನಾನು ಸುಖವಾಗಿರಲಾರೆ. ಅವರಿಗಿಂತ ಹೆಚ್ಚಿನ ಮೇಲ್ಮೆ ನನ್ನದಾಗಬೇಕು. ಮಾವ, ನೀನು ನನ್ನನ್ನು ಪ್ರೀತಿಸುವೆಯಲ್ಲವೆ? ಅದು ನಿಜವಾಗಿದ್ದರೆ ಇದನ್ನು ಸಾಧಿಸಿ ನನ್ನನ್ನು ಲೋಕೇಶ್ವರನನ್ನಾಗಿ ಮಾಡುವ ಯಾವುದಾದರೂ ಉಪಾಯ ಹುಡುಕು" ಎಂದು ಬೇಡಿದನು. ಶಕುನಿಯು, ``ಮಗು, ನೀನೇ ನೋಡಿರುವೆ ಅವರು ಅದೆಷ್ಟು ಬಲಶಾಲಿಗಳಾಗಿರುವರೆಂದು. ನಾನು ಯುದ್ಧಮಾಡಿದ್ದೇ ಆದರೆ ಅವರನ್ನು ಜಯಿಸುವುದು ಸಾಧ್ಯವಿಲ್ಲ. ಯಾವುದೇ ಉಕ್ಕಿನ ಶಸ್ತ್ರಕ್ಕಿಂತ ಬಲವಾದ ಆಯುಧವೊಂದು ನನ್ನಲ್ಲಿದೆ. ಒಂದೇ ಒಂದು ಹನಿ ರಕ್ತ ಚೆಲ್ಲದಂತೆ ಅವರ ಕಲೆಹಾಕಿಕೊಂಡಿರುವ ಐಶ್ವರ್ಯರಾಶಿಯೆಲ್ಲವನ್ನೂ ನಿನ್ನದಾಗಿಸಬಲ್ಲೆ-ನಿನ್ನ ಹೆಸರಿಗೂ ಕಳಂಕ ಬಾರದಂತೆ. ಈ ಖಿನ್ನತೆಯ ಹೊರೆಯನ್ನು ಕಳೆದೊಗೆದು ನಾನು ಹೇಳುವಂತೆ ಕೇಳು" ಎಂದನು. ದುರ್ಯೋಧನನಿಗೆ ತನ್ನ ಕಿವಿಯನ್ನು ತಾನೇ ನಂಬಲಾಗಲಿಲ್ಲ. ಶಕುನಿಯು ತನ್ನ ಕುಹಕದ ನಗೆಯನ್ನು ನಗುತ್ತ, ``ಬೇರೆ ಎಲ್ಲವೂ ಸರಿ,ಆದರೆ ಈ ಯುಧಿಷ್ಠಿರನಿಗೆ ಒಂದೇ ಒಂದು ದೌರ್ಬಲ್ಯವಿದೆ-ಅದೇ ಜೂಜು. ಅವನು ಪಗಡೆಯಾಟದ ಪ್ರೇಮಿ, ಆದರೆ ಆಡಲು ಮಾತ್ರ ಬಾರದು. ಇದನ್ನು ನಮ್ಮ ಉದ್ದೇಶಸಾಧನೆಗಾಗಿ ಬಳಸಿಕೊಳ್ಳೋಣ. ದಾಳವೆಸೆಯುವುದರಲ್ಲಿ ನನ್ನನ್ನು ಮೀರಿಸಿದವರಿಲ್ಲ. ನನ್ನೊಡನೆ ಪಗಡೆಯಾಡಿ ಗೆಲ್ಲುವವರು ಈ ಲೋಕದಲ್ಲೇ ಇಲ್ಲ. ನಾನು ಈ ವಿದ್ಯೆಯನ್ನು ಬಳಸಿ ನಿನಗೆ ಪ್ರಿಯವಾದುದನ್ನು ಮಾಡುವೆ; ಯಧಿಷ್ಠಿರನನ್ನು ಪಗಡೆಯಾಟಕ್ಕೆ ಅಹ್ವಾನಿಸು. ಅವನು ತನ್ನ ಇಡೀ ರಾಜ್ಯವನ್ನು ಪಣವಾಗಿಟ್ಟು ಸೋಲುವಂತೆ ಮಾಡುತ್ತೇನೆ. ನೀನು ನಿನ್ನ ತಂದೆಗೆ ಹೇಳಿ ಅನುಜ್ಞೆ ದೊರಕಿಸಿಕೋ. ಅನಂತರ ಮಗುವಿನ ಕೈಯ ಬೊಂಬೆಯನ್ನು ಕಿತ್ತುಕೊಂಡ ಹಾಗೆ ನಾನು ಸುಲಭವಾಗಿ ಅವನದ್ದಾದ ಎಲ್ಲವನ್ನೂ ಕಿತ್ತುಕೊಡುವೆ" ಎಂದನು. ದುರ್ಯೋಧನನು, ``ಆ ಕೆಲಸ ಮಾಡಲು ನೀನೇ ಹೆಚ್ಚು ಸಮರ್ಥ; ಅಪ್ಪನಿಗೆ ನಮ್ಮಗಳೆಲ್ಲರ ಕ್ಷೇಮ ಮುಖ್ಯ; ಇದರಲ್ಲೇನೂ ತೊಂದರೆಯಿಲ್ಲವೆಂದೂ, ಕೇವಲ ತಮಾಷೆಗಾಗಿ ಆಡುವುದೆಂದೂ ನೀನು ಅವನನ್ನು ನಂಬಿಸಬಹುದು. ಅಪ್ಪನಿಗೆ ವಿದುರನೆಂದರೆ ಅಂಜಿಕೆ" ಎನ್ನಲು, ಶಕುನಿಯು ಹಾಗೇ ಆಗಲೆಂದು ಒಪ್ಪಿಕೊಡು ಧೃತರಾಷ್ಟ್ರನ ಬಳಿಗೆ ಹೋಗಿ ``ಮಹಾರಾಜ! ನನ್ನ ಮಗ ಇಂದ್ರಪ್ರಸ್ಥದಿಂದ ಬಂದಾಗಿನಿಂದ ದುಃಖಿಯಾಗಿದ್ದಾನೆ. ನೀನು ಅವನಿಗೆ ಹೇಳಿ ಕಳುಹಿಸಿ ಸಮಾಧಾನ ಮಾಡು" ಎಂದನು. ಧೃತರಾಷ್ಟ್ರನು ಮಗನಿಗಾಗಿ ಹೇಳಿ ಕಳುಹಿಸಿದನು. ದುರ್ಯೋಧನನು ಬರಲು, ``ಮಗು, ಇದೇನು ನಾನು ಕೇಳುತ್ತಿರುವುದು? ಏಕೆ ದುಃಖಿಸುತ್ತಿದ್ದೀಯೆ? ನೀನೆಂದರೆ ನನಗೆ ಜೀವಕ್ಕಿಂತ ಹೆಚ್ಚು. ನಿನ್ನ ಖಿನ್ನತೆಗೆ ಕಾರಣವೇನೆಂದರೆ ತಿಳಿಸು. ಸಾಧ್ಯವಾಗುವುದಾದರೆ ನಾನು ಅದನ್ನು ಸರಿಪಡಿಸುತ್ತೇನೆ" ಎಂದು ವಿಚಾರಿಸಿದನು. ದುರ್ಯೋಧನನು ಇಂದ್ರಪ್ರಸ್ಥದಲ್ಲಿ ನಡೆದುದೆಲ್ಲವನ್ನೂ ತಿಳಿಸಿ, ಹೊಟ್ಟೆಕಿಚ್ಚಿನಿಂದ ತಾನು ಬೇಯುತ್ತಿರುವುದಾಗಿ ತಿಳಿಸಿದನು. ``ಆ ಪಾಂಡವರ ಅದೃಷ್ಟನಕ್ಷತ್ರ ಮೇಲೇರುವಾಗ ನಾನು ದುಃಖಿಯಾಗಿರುವುದು ಅಸಹಜವೇನಲ್ಲ. ಅವರನ್ನು ಹೊಗಳುತ್ತ ಕುಳಿತುಕೊಳ್ಳಲೆ? ಅದನ್ನು ಬಿಟ್ಟು ಬೇರೆ ಏನನ್ನು ನೀವು ಯಾರೂ ಮಾಡುತ್ತಿಲ್ಲ. ನಾನವರನ್ನು ದ್ವೇಷಿಸುತ್ತೇನೆ. ಅವರು ಅಸ್ತಂಗತರಾಗಬೇಕು; ಅವರ ಸಮಸ್ತ ಐಶ್ವರ್ಯವೂ ನನ್ನದಾಗಬೇಕು. ಇದು ಸಾಧ್ಯವಾಗುವವರೆಗೆ ನಾನು ಸುಖವಾಗಿರಲಾರೆ" ಎಂದು ದುರ್ಯೋಧನನು ತನ್ನ ಭಾವನೆಗಳನ್ನು ತೋಡಿಕೊಳ್ಳುತ್ತಿದ್ದಾಗ, ಇದೇ ಸರಿಯಾದ ಸಮಯವೆಂದು, ಶಕುನಿಯು ``ನಿನ್ನ ಮಗ ಬಯಸಿದುದನ್ನು ಕೊಡಿಸಲು ದ್ಯೂತವೊಂದೇ ಮಾರ್ಗ. ಅವರನ್ನು ಹಸ್ತಿನಾಪುರಕ್ಕೆ ಕರೆಯಿಸು. ದ್ಯೂತದಲ್ಲಿ ಯುಧಿಷ್ಠಿರನ್ನು ತನ್ನದೆಲ್ಲವನ್ನೂ ಕಳೆದುಕೊಳ್ಳುತ್ತಾನೆ; ಇದು ಖಂಡಿತ!" ಎಂದನು. ದುರ್ಯೋಧನನು ಬಹು ಸಂತೋಷದಿಂದ, ``ಅಪ್ಪಾ,ಇದನ್ನು ನೀನು ಮಾಡಿಯೇ ತೀರಬೆಕು" ಎಂದು ಒತ್ತಾಯಿಸಿದನು. ಧೃತರಾಷ್ಟ್ರನಿಗೆ ಭಯವಾಯಿತು. ಅವನು ಮಂತ್ರಿಗಳು ಒಪ್ಟುತ್ತಾರೆಯೋ ಇಲ್ಲವೋ; ಅವರುಗಳ ಸಲಹೆಯನ್ನು ಕೇಳೋಣ!" ಎನ್ನಲು ದುರ್ಯೋಧನನು ``ವಿದುರ ಮುಂತಾದ ಮಂತ್ರಿಗಳು ಇದನ್ನೊಪ್ಪುವುದಿಲ್ಲವೆಂಬುದು ಗೊತ್ತೇ ಇದೆ. ನೀನು ಅವರೊಂದಿಗೆ ಪರ್ಯಾಲೋಚಿಸಿ, ಅನಂತರ ನನಗೆ ಈ ಬಗೆಯ ಪಾಪ ಚಿಂತನೆಯನ್ನು ಮಾಡಬೇಡವೆಂದು ಬುದ್ಧಿವಾದಹೇಳಲು ತೊಡಗಿದರೆ ನಾನು ಸಾಯುತ್ತೇನೆ, ಇದು ಖಂಡಿತ. ಅನಂತರ ನೀನು ಧರ್ಮಾವತಾರನಾದ ಆ ನಿನ್ನ ಯುಧಿಷ್ಠಿರನೊಂದಿಗೆ, ಇನ್ನೊಬ್ಬ ಧರ್ಮಾವತಾರನಾದ ಆ ನಿನ್ನ ವಿದುರನೊಂದಿಗೆ ಸುಖವಾಗಿರಬಹುದು. ನನ್ನನ್ನಂತೂ ಮರೆತುಬಿಡು" ಎಂದನು. ಧೃತರಾಷ್ಟ್ರನು ಒಪ್ಪಲೇ ಬೇಕಾಯಿತು. ``ಆಗಲಿ. ನಾನು ಯಾರನ್ನೂ ಕೇಳುವುದಿಲ್ಲ. ಶಕುನಿ, ಹೋಗು. ಶಿಲ್ಪಿಗಳನ್ನು ಕರೆಸಿ ಹಸ್ತಿನಾಪುರದ ಹೊರಗೆ ಸುಂದರವಾದ ಸಭೆಯೊಂದನ್ನು ಕಟ್ಟಿಸು. ನಂತರ ಈ ಸಭೆಯನ್ನು ನೋಡಲು ಬನ್ನಿ ಎಂದು ಪಾಂಡವರನ್ನು ಕರೆಯಬಹುದು. ಆಗ ಅವರೊಡನೆ ಪಗಡೆಯಾಡಬಹುದು. ಎಲ್ಲವನ್ನೂ ನೀನೆ ನೋಡಿಕೋ!" ಎಂದನು. ಅವರಿಗೆ ಬೇಕಾಗಿದ್ದುದೂ ಇದೇ. ಸಂತೋಷದಿಂದ ಹಾಡೊಂದನ್ನು ಗುನುಗುತ್ತ ಇಬ್ಬರೂ ಹೊರಟು ಹೋದರು.



ಸಭೆಯ ನಿರ್ಮಾಣ ಆರಂಭವಾಯಿತು. ಸುದ್ದಿಯನ್ನು ಕೇಳಿದ ವಿದುರನು ಬಂದು ``ಏನಿದು ಊರ ಹೊರಗೆ ಸಭೆ ಕಟ್ಟಿಸುತ್ತಿದ್ದೀಯಂತೆ? ಪಾಂಡವರನ್ನೂ ಆಹ್ವಾನಿಸುವಂತೆ. ಇದ್ದಕ್ಕಿದ್ದಹಾಗೆ ಕರೆಸಿ ಸತ್ಕರಿಸುವ ಕಾರಣವೇನು? ಪಗಡೆಯಾಟವೂ ಇರುವುದಂತೆ! ಅಣ್ಣ, ನಿನಗೆ ಏನಾಯಿತು? ಪಾಡವರು ಅವರ ಪಾಡಿಗೆ ಅವರು ದೂರದಲ್ಲಿ ಸುಖವಾಗಿದ್ದಾರೆ. ನೀವು ಅಪ್ಪ ಮಗ ಸೇರಿ ಅವರನ್ನು ದೂರ ಮಾಡಿಬಿಟ್ಟಿರಿ. ಈಗ ನೀವು ಸುಖವಾಗಿರಬೇಕಲ್ಲ! ಇನ್ನೂ ತೃಪ್ತಿಯಿಲ್ಲವೆ? ನಿನ್ನ ತಮ್ಮನ ಮಕ್ಕಳ ಬಗ್ಗೆ ಅದೇಕೆ ಅಷ್ಟೊಂದು ಕ್ರೂರಿಯಾಗಿರುವೆ? ನಿಜವಾಗಿ ನೀನು ಹೃದಯ ಹೀನ!" ಎಂದು ವಿಚಾರಿಸಿದನು. ಧೃತರಾಷ್ಟ್ರನಿಗೆ ವಿದುರನ ಮಾತು ಇಷ್ಟವಾಗಲಿಲ್ಲ. ವಿದುರನು ಮತ್ತೆ, ``ಈ ನಿನ್ನ ಪ್ರಯತ್ನ ಒಳ್ಳೆಯದಲ್ಲ. ಈ ಜೂಜು ಮಕ್ಕಳ ನಡುವಣ ದ್ವೇಷವನ್ನು ಮತ್ತಷ್ಟು ಹೆಚ್ಚಿಸುತ್ತದೆ. ಇದನ್ನೆಲ್ಲ ದಯವಿಟ್ಟು ನಿಲ್ಲಿಸು" ಎಂದನು. ಧೃತರಾಷ್ಟ್ರನು ``ಅಂಥದೇನೋ ಆಗುವುದಿಲ್ಲ. ದ್ಯೂತವೆಂಬುದು ರಾಜರುಗಳಿಗೆ ಭೂಷಣಪ್ರಾಯ. ಮಕ್ಕಳು ಕೆಲಕಾಲ ವಿನೋದವಾಗಿರುತ್ತಾರೆ. ನಾನೂ ಭೀಷ್ಮನೂ ಇರುವಾಗ ಏನಾಗುತ್ತದೆ? ನೀನು ಏನೇ ಹೇಳು, ಈ ದ್ಯೂತಕ್ಕೆ ನಾನು ಒಪ್ಪಿಗೆ ಕೊಟ್ಟಿದ್ದೇನೆ" ಎಂದು ಸಿಡುಕಿದನು. ಅಣ್ಣನ ನಡತೆಯಿಂದ ಬಹಳವಾಗಿ ನೊಂದ ವಿದುರನು ಸುಮ್ಮನಾಗಬೇಕಾಯಿತು. ರಾಜನು ತನ್ನನ್ನೂ ತನ್ನ ಮಕ್ಕಳನ್ನೂ ತಾನೇ ನಾಶಪಡಿಸಲು ಹೊರಟಿರುವಂತೆ ಕಂಡಿತು. ಸಭಾನಿರ್ಮಾಣ ಮುಗಿಯಿತು. ದುರ್ಯೋಧನನಿಗಿಂತ ಧೃತರಾಷ್ಟ್ರನೇ ಸಂತೋಷದಿಂದ ಉದ್ರಿಕ್ತ ನಾಗಿರುವಂತೆ ತೋರಿತು. ವಿದುರನಿಗೆ ಹೇಳಿಕಳುಹಿಸಿ, ``ನೀನು ಖಾಂಡವಪ್ರಸ್ಥಕ್ಕೆ ಹೋಗಿ ಯುಧಿಷ್ಠಿರನಿಗೆ ನನ್ನ ಮಾತಿನಿಂದ ಹೀಗೆಂದು ಹೇಳು. ನಾನೂ ಒಂದು ಸಭೆಯನ್ನು ಕಟ್ಟಿಸಿದ್ದೇನೆ. ಮಯನು ನಿನಗಾಗಿ ಒಂದು ಸಭೆಯನ್ನು ಕಟ್ಟಿಕೊಟ್ಟಿರುವನೆಂದು ಕೇಳಿದೆ. ಬಂದು ನಾನು ಕಟ್ಟಿರುವ ಸಭೆಯನ್ನು ನೋಡು. ನನ್ನೊಡನೆ ನೀನು ಕೆಲವು ದಿನಗಳಿರಬೇಕೆಂದು ನನ್ನ ಅಪೇಕ್ಷೆ. ನಿನಗಿಷ್ಟವಾದ ಪಗಡೆಯಾಟ ಆಡುತ್ತ ವಿನೋದವಾಗಿರಬಹುದು. ಯುಧಿಷ್ಠಿರನು ನನ್ನ ಮಾತನ್ನು ತೆಗೆದುಹಾಕುವುದಿಲ್ಲ. ಅವನನ್ನು ಆದಷ್ಟು ಬೇಗ ಕರೆದುಕೊಂಡು ಬಾ!" ಎಂದನು. ವಿದುರನು ದುರಂತವನ್ನು ತಪ್ಪಿಸುವ ಮತ್ತೊಂದು ಪ್ರಯತ್ನವನ್ನು ಮಾಡಿದನಾದರೂ ಯಶಸ್ವಿಯಾಗಲಿಲ್ಲ. ಧೃತರಾಷ್ಟ್ರನದು ಒಂದೇ ಹಟ. ಭಾರವಾದ ಹೃದಯದಿಂದ ಇಂದ್ರಪ್ರಸ್ಥಕ್ಕೆ ಹೊರಟನು.



* * * * 



ಯುಧಿಷ್ಠಿರನು ವಿದುರನನ್ನು ಪ್ರೀತಿಯಿಂದ ಬರಮಾಡಿಕೊಂಡನು. ವಿದುರ ಚಿಕ್ಕಪ್ಪನೆಂದರೆ ಪಾಂಡವರಿಗೆ ಬಹು ಪ್ರೀತಿ. ಎಲ್ಲರೂ ಕುಳಿತ ಮೇಲೆ, ``ಚಿಕ್ಕಪ್ಪ, ನಿನ್ನ ಮುಖದಲ್ಲಿ ದುಗುಡ ಕಾಣುತ್ತಿದೆ. ಆರೋಗ್ಯವಿಲ್ಲವೆ? ಅಥವಾ ಹಸ್ತಿನಾಪುರದಲ್ಲಿ ಯಾರಿಗಾದರೂ ಆರೋಗ್ಯ ತಪ್ಪಿದೆಯೆ? ಏಕೆ ನೀನು ಅಷ್ಟೊಂದು ದುಃಖಿತನಾದಂತೆ ಕಾಣುತ್ತಿರುವೆ?" ಎಂದು ವಿಚಾರಿಸಿದನು. ವಿದುರನು ``ಅಲ್ಲಿ ಎಲ್ಲರೂ ಕ್ಷೇಮದಿಂದಿದ್ದಾರೆ. ಧೃತರಾಷ್ಟ್ರನು ನನ್ನ ಮೂಲಕ ನಿನಗೊಂದು ಸಂದೇಶವನ್ನು ಕಳುಹಿಸಿದಾನೆ" ಎಂದು ಹೇಳಿ ಅವನ ಸಂದೇಶವನ್ನು ಶ್ರುತಪಡಿಸಿದನು. ಯುಧಿಷ್ಠಿರನಿಗೆ ಏನೊಂದೂ ಅರ್ಥವಾಗದಂತಾಯಿತು. ಧೃತರಾಷ್ಟ್ರನ ಮಾತಿನಲ್ಲಿ ಅಪಾಯದ ಸುಳಿವೇನೂ ಕಂಡುಬರುವಂತಿರಲಿಲ್ಲ. ಸ್ವಲ್ಪಹೊತ್ತು ಸುಮ್ಮನಿದ್ದು ಯುಧಿಷ್ಠಿರನೆಂದ, ``ಕಾಣುವಷ್ಟು ಸುಲಲಿತವಾಗಿಲ್ಲ ಇದು. ಅವನ ಮಕ್ಕಳ ಜೊತೆಗೆ ಪಗಡೆಯಾಟವಾಡುವುದಕ್ಕೆ ನಾನು ಹಸ್ತಿನಾಪುರಕ್ಕೆ ಬರಬೇಕೆನ್ನುತ್ತಿದ್ದಾನೆ ದೊಡ್ಡಪ್ಪ. ಇದೇ ಅವನ ಮಾತಿನ ತಿರುಳು. ನನಗೆ ಅರ್ಥವಾಯಿತು. ಪಗಡೆಯಾಟದ ಕಾರಣದಿಂದ ನಮಗೂ ಅವರಿಗೂ ಜಗಳವನ್ನು ಹುಟ್ಟಿಹಾಕುವುದೇ ಅವನ ಗುರಿ. ನಿನಗೇನನ್ನಿಸುತ್ತದೆ?" ಎಂದು ಕೇಳಿದನು. ಅದಕ್ಕೆ ವಿದುರನು, ``ಯುಧಿಷ್ಠಿರ, ನನ್ನ ದುಗುಡಕ್ಕೆ ಕಾರಣವೇ ಅದು. ಈ ಆಟವನ್ನಾಡುವುದು ಸರಿಯಲ್ಲ ಎಂದು ಅವನಿಗೆ ತಿಳಿಸಿ ಹೇಳಲು ಪ್ರಯತ್ನಿಸಿದೆ; ಆದರೆ ಅವನು ಅದಕ್ಕೆ ಕಿವಿ ಗೊಡಲಿಲ್ಲ. ಆಜ್ಞೆ ಮಾಡಿ ನನ್ನನ್ನು ಬಲವಂತವಾಗಿ ಇಲ್ಲಿಗೆ ಕಳುಹಿಸಿದ" ಎಂದನು.



ಮುಂದೇನಾಗಬಹುದು ಎಂಬುದರ ಕಲ್ಪನೆ ಸ್ಪಲ್ಲಮಟ್ಟಿಗೆ ಯುಧಿಷ್ಠಿರನ ಮನಸ್ಸಿನಲ್ಲಿ ಮೂಡಿತು. ``ಚಿಕ್ಕಪ್ಪ, ಯಾರು ಯಾರು ಅಟವಾಡಬಹುದು?" ಎಂದು ಕೇಳಲು ವಿದುರನು, ``ಶಕುನಿ ಹಾಗೂ ದುರ್ಯೋಧನನ ತಮ್ಮಂದಿರಾದ ವಿವಿಂಶತಿ, ಪುರುಮಿತ್ರ ಹಾಗೂ ಚಿತ್ರಸೇನ!" ಎಂದನು. ಯುಧಿಷ್ಠಿರನು, ``ಬಹಳ ಬಲವಾದ ಅಟಗಾರರೇ ನೆರೆದಿದ್ದಾರೆ. ನಾನು ಆಟದಲ್ಲಿ ದುರ್ಬಲ. ದಾಳವೆಸೆಯುವುದರಲ್ಲಿ ಶಕುನಿ ಎತ್ತಿದ ಕೈ. ಆದರೆ ಏನು ಮಾಡುವುದಕ್ಕಾಗುತ್ತದೆ? ವಿಧಿನಿಯಾಮಕದಂತೆಯೇ ಎಲ್ಲವೂ ನಡೆಯುವುದು. ನಾನು ಅಸಹಾಯಕ. ಹಿರಿಯರ ಆಜ್ಞೆಯನ್ನು ಮೀರುವುದಿಲ್ಲವೆಂಬುದು ಅವನಿಗೆ ಗೊತ್ತು. ತಂದೆಯಾದವನಿಗೇ ನನ್ನ ಅದೃಷ್ಟವನ್ನು ಕಂಡು ಹೊಟ್ಟೆಕಿಚ್ಚು. ಕೆಟ್ಟದ್ದಕ್ಕೆ ದಾರಿ ಮಾಡಿಕೊಡುವುದೆಂದು ತಿಳಿದೂ ನಾನು ಆಟವಾಡಬೇಕಾಗಿದೆ. ದ್ಯೂತಕ್ಕೆ ಆಹ್ವಾನ ಕೊಟ್ಟಾಗ ಕ್ಷತ್ರಿಯನಾದವನು ಇಲ್ಲವೆನ್ನಲಾಗುವುದಿಲ್ಲ. ಇದೆಲ್ಲ ಗೊತ್ತಿದ್ದೂ ದೊಡ್ಡಪ್ಪ ನನಗೆ ಹೇಳಿಕಳುಹಿಸಿದ್ದಾನೆ. ವಿಧಿಯು ನಡೆಸಿದಂತಾಗಲಿ. ನಿನ್ನ ಜೊತೆಗೆ ಹಸ್ತಿನಾಪುರಕ್ಕೆ ಬರುತ್ತೇನೆ, ನಡೆ" ಎಂದು ಕುಂತಿ ದ್ರೌಪದಿ ಮತ್ತು ಸಹೋದರರೊಂದಿಗೆ ಹೊರಟನು. ಹಸ್ತಿನಾಪುರದಲ್ಲಿ ಪಾಂಡವರನ್ನು ಹಾರ್ದಿಕವಾಗಿ ಸ್ವಾಗತಿಸಿದರು. ಅವರ ವಸತಿಗೆ ರಾಜಯೋಗ್ಯವಾದ ಏರ್ಪಾಡುಗಳಾಗಿದ್ದವು. ಕುಶಲಸಂಭಾಷಣೆಗಳಾದ ಮೇಲೆ ಒಂದು ದಿನ ವಿಶ್ರಮಿಸಿಕೊಂಡರು. ಇಷ್ಟು ಒಳ್ಳೆಯ ಸತ್ಕಾರವನ್ನು ಕೊಟ್ಟ ರಾಜನು ನಿಜವಾಗಿಯೂ ನಮ್ಮನ್ನು ಆದರಿಸಬಯಸುತ್ತಿದ್ದಾನೆಯೇ ಎಂದೆನಿಸುವಂತಿತ್ತು.



ಪಾಂಡವರ ಜೀವಮಾನದ ಅತ್ಯಂತ ದುರದೃಷ್ಟದ ದಿನದ ಸೂರ್ಯೋದಯವಾಯಿತು. ಹೊತ್ತಿಗೆ ಮುಂಚೆಯೇ ಎದ್ದಿದ್ದ ಪಾಂಡವರು ಸ್ನಾನಾದಿಗಳನ್ನು ಮುಗಿಸಿ ಹೊರಟರು. ಕೌರವರು ಅವರನ್ನು ಹೊಸದಾಗಿ ನಿರ್ಮಿಸಿದ ಸಭೆಗೆ ಕರೆತಂದರು. ಅದನ್ನು ನೋಡುವವರಂತೆ ಇವರು ನಟಿಸಿದರು; ಅವರೂ ಇವರಿಂದ ಹೊಗಳಿಕೆಯನ್ನು ನಿರೀಕ್ಷಿಸದೆ ಉದಾಸೀನರಾಗಿದ್ದರು. ಎಲ್ಲರ ಯೋಚನೆಯೂ ಪಗಡೆಯಾಟದ ಮೇಲೇ ಇದ್ದಿತು. ಶಕುನಿಯು ಪಗಡೆಯಾಡೋಣವೆಂದು ಸಲಹೆ ಮಾಡಿದನು. ಯುಧಿಷ್ಠಿರನು, ಪಗಡೆಯಾಟವು ಅನೇಕ ಅನಿಷ್ಟಗಳಿಗೆ ಮೂಲ; ಅದು ಸ್ನೇಹಗಳನ್ನು ಕಳೆಯುತ್ತದೆಯಾದ್ದರಿಂದ ತಾನು ಆಡಲೊಲ್ಲೆ ಎಂದನು. ಶಕುನಿಯು, ``ಯುಧಿಷ್ಠಿರ, ನಿನು ಅಸಂಭಾವ್ಯವನ್ನು ಕಲ್ಪಿಸಿಕೊಳ್ಳುತ್ತಿರುವೆ. ನಾನು ಸಲಹೆ ಮಾಡಿದ್ದು ಆಟವನ್ನು ಮಾತ್ರ; ಸಮಸ್ತವನ್ನೂ ಕಳೆದುಕೊಳ್ಳುತ್ತಿರುವವನಂತೆ ಮಾತನಾಡುವೆಯಲ್ಲ! ಕೇವಲ ಕಾಲ ಕಳೆಯಲು ಆಡೋಣವೆಂದೆ; ಅದಕ್ಕೆ ಯಾವ ಆಟವಾದರೇನು!" ಎನ್ನಲು ಯುಧಿಷ್ಠಿರನು, ``ಹಾಗಲ್ಲ. ಮೋಸ ಮಾಡಿ ಇನ್ನೊಬ್ಬರ ಐಶ್ವರ್ಯವನ್ನು ಗೆಲ್ಲುವುದರಲ್ಲಿ ನನಗೆ ನಂಬಿಕೆಯಿಲ್ಲ. ಈ ಆಟದಲ್ಲಿ ಬರೀ ಮೋಸವಲ್ಲದೆ ಇನ್ನೇನಿದೆ? ದಾಳಗಳ ಮೇಲೆ ಕೈಯಿಟ್ಟೊಡನೆ ವಿವೇಕಿಯಾದವನೂ ಮೂರ್ಖನಾಗುತ್ತಾನೆ. ಈ ಆಟವು ನಮ್ಮ ವಿಚಾರಶಕ್ತಿಯನ್ನು ಕಳೆದುಬಿಡುತ್ತದೆ; ಇದು ಕುಡಿತದಂತೆ ಮನುಷ್ಯನ ಸದ್ಗುಣಗಳೆಲ್ಲವನ್ನೂ ಹಾಳುಗೆಡವುತ್ತದೆ. ಇದರ ಜ್ವರ ಒಮ್ಮೆ ಏರುದರೆ ಅದನ್ನು ವಾಸಿಮಾಡಲಾಗುವುದಿಲ್ಲ. ಕೆಟ್ಟ ಕಾಹಿಲೆಯಂತೆ ಇದನ್ನು ದೂರವಿಡಬೇಕು. ಆದ್ದರಿಂದ ಪಗಡೆಯಾಟ ಬೇಡವೇ ಬೇಡ" ಎಂದನು.



ಶಕುನಿಯು, ``ಅಯ್ಯೋ ಪಾಪ, ಯುಧಿಷ್ಠಿರ ಈಗ ತಾನೆ ರಾಜಸೂಯ ಯಾಗ ಮಾಡಿ ಸಿರಿಯನ್ನು ಸಂಪಾದಿಸಿದ್ದಾನೆ. ಹೊಸದಾಗಿ ಸಿಕ್ಕಿರುವ ಅದನ್ನು ಬಿಡಲಾರ; ಇಟ್ಟುಕೊಳ್ಳಲಿ. ನಿನಗೆ ಸವಾಲನ್ನು ಎದುರಿಸಲು ಭಯವಾದರೆ ಆಟವಾಡುವುದು ಬೇಡಪ್ಪ" ಎಂದು ಹೀಗಳೆಯುವವನಂತೆ ನುಡಿದನು. ಶಕುನಿಯ ಮಾತಿನ ಧ್ವನಿಯಿಂದ ಬೇಸರವಾಯಿತು. ``ನನಗೇನೂ ಭಯವಿಲ್ಲ; ನಿನ್ನ ಹಾಗೆ ನನಗೆ ಸಿರಿಯ ಲೋಭವೂ ಇಲ್ಲ. ಸವಾಲೆಸೆದಾಗ ನಾನು ಆಡಲು ನಿರಾಕರಿಸಲಾರೆ ಎಂಬುದೂ ನಿನಗೆ ಗೊತ್ತು. ಆಡುತ್ತೇನೆ. ಮಾನವನ ವಿವೇಕಕ್ಕಿಂತ ವಿಧಿಯೇ ದೊಡ್ದದು! ಹೇಳು, ನನ್ನೆದುರು ಆಡುವವರು ಯಾರು? ಪಣವೇನು?" ಎನ್ನಲು ದುರ್ಯೋಧನನು, ``ನೀನು ಪಣವಾಗಿಡುವ ರತ್ನಗಳನ್ನೂ ಐಶ್ವರ್ಯವನ್ನೂ ನಾನೂ ಪಣವಾಗಿಡುತ್ತೇನೆ. ಶಕುನಿಯು ನನ್ನ ಪರವಾಗಿ ಆಡುತ್ತಾನೆ!" ಎಂದನು. ಯುಧಿಷ್ಠಿರನು, ``ಇದು ಆಟದ ನಿಯಮವಲ್ಲವೇ ಅಲ್ಲ. ಒಬ್ಬರು ಇನ್ನೊಬ್ಬರಿಗಾಗಿ ಆಡುವುದನ್ನು ನಾನೆಲ್ಲಿಯೂ ಕೇಳಿಲ್ಲ. ನೀನೇ ಆಡಬೇಕು, ನೀನೇ ಪಣವಿಡಬೇಕು" ಎಂದುದಕ್ಕೆ ಶಕುನಿಯು ``ಈ ಏರ್ಪಾಡಿನಲ್ಲಿ ದೋಷವೇನೂ ಕಾಣಿಸದು. ನೆವ ಹೇಳಿ ಆಟದಿಂದ ತಪ್ಪಿಸಿಕೊಳ್ಳಲು ನೀನು ಯತ್ನಿಸುತ್ತಿದ್ದೀಯೆ. ನಿನಗೆ ಆಡಲಾಗದಿದ್ದರೆ ನೇರವಾಗಿ ಹಾಗೆಂದು ಹೇಳಿಬಿಡು" ಎಂದನು. ಯುಧಿಷ್ಠಿರನು ಮುಂದೇನೂ ಮಾತನಾಡಲಿಲ್ಲ.



ಸಭೆಯಲ್ಲಿ ನಿಧಾನವಾಗಿ ಜನರು ಬಂದು ಸೇರಿದರು. ಭೀಷ್ಮ ದ್ರೋಣ ವಿದುರ ಧೃತರಾಷ್ಟ್ರ ಎಲ್ಲರು ಬಂದರು. ಆಟ ಪ್ರಾರಂಭವಾಯಿತು. ದಾಳವು ಬಿದ್ದಿತು! ಯುಧಿಷ್ಠಿರನು ತನ್ನ ರತ್ನಾಭರಣಗಳನ್ನೂ ಐಶ್ವರ್ಯವನ್ನೂ ಪಣವಾಗಿಟ್ಟನು. ದುರ್ಯೋಧನನೂ ಸರಿಸಮನಾಗಿ ಪಣವೊಡ್ಡಿದನು ಶಕುನಿಯು ದಳವನ್ನೆಸೆದು `ಗೆದ್ದೆ!' ಎಂದನು. ಸಭೆಯಲ್ಲಿ ಮೌನ ಆವರಿಸಿತು. ಆಟ ಮುಂದುವರೆಯಿತು. ಯುಧಿಷ್ಠಿರನಿಗೆ ಆಟದ ಜ್ವರವೇರಿತು. ಒಂದಾದ ಮೇಲೊಂದರಂತೆ ಆಟಗಳಾದವು. ಸಂತೋಷದ ಲವಲೇಶವೊ ಸಭೆಯಲ್ಲಿ ಇಲ್ಲವಾಯಿತು. ಯುಧಿಷ್ಠಿರನು ತನ್ನದೆಲ್ಲವನ್ನೂ ಒಂದಾದ ಮೇಲೆ ಒಂದರಂತೆ ಕಳೆದುಕೊಳ್ಳತೊಡಗಿದನು. ರಥಗಳು, ಆನೆ ಕುದುರೆಗಳು, ಸೈನ್ಯ, ಸೇವಕರು, ಕೋಶದಲ್ಲಿದ್ದ ಎಲ್ಲ ಸಂಪತ್ತು, ಧಾನ್ಯಸಂಗ್ರಹ ಎಲ್ಲವೂ ಹೋದವು. ಶಕುನಿಯ `ಗೆದ್ದೆ!' ಎಂಬ ಅಟ್ಟಹಾಸದ ಕೂಗು ಎಲ್ಲವನ್ನೂ ನುಂಗಿ ನೊಣೆಯುತ್ತಿತ್ತು. ಯಾರಾದರೂ ಮಧ್ಯೆ ಪ್ರವೇಶಿಸಬೇಕಾದ ಕಾಲ ಬಂದಿದೆಯೆಂದು ವಿದುರನಿಗೆ ಅನ್ನಿಸಿ ಅವನು, ``ಮಹಾರಾಜ, ನಿನಗಿಷ್ಟವಾಗದಿದ್ದರೂ ನೀನೀಗ ನಾನೂ ಹೇಳುವುದನ್ನು ಕೇಳಬೇಕು. ವೈದ್ಯನು ವಿಧಿಸುವ ಔಷಧಿ ರೋಗಿಗೆ ಇಷ್ಟವಾಗುವುದಿಲ್ಲ; ಆದರೆ ಕಾಹಿಲೆ ವಾಸಿಯಾಗಬೇಕು ಎಂದಿದ್ದರೆ ಅವನು ಅದನ್ನು ತೆಗೆದುಕೊಳ್ಳಬೇಕು. ಈಗ ನಿನ್ನ ಮಗ ಹುಟ್ಟಿದಾಗ ಸಂಭವಿಸಿದ ಅಶುಭ ಶಕುನಗಳನ್ನು ಸ್ಮರಿಸಿಕೋ. ಇದೇಕೆಂದು ನೀನು ಕೇಳಿದ್ದಕ್ಕೆ ಇವನು ಪ್ರಪಂಚದ ನಾಶಕ್ಕೆ ಕಾರಣನಾಗುವನು ಎಂದು ನಾನು ಹೇಳಿದ್ದೆ. ಲೋಕವನ್ನು ಉಳಿಸುವುದಕ್ಕಾಗಿ ಅವನನ್ನು ತೊರೆದುಬಿಡು ಎಂದಿದ್ದೆ; ನೀನು ಕೇಳಲಿಲ್ಲ ಈಗಲಾದರೂ ನನ್ನನ್ನು ನಂಬು; ಪ್ರಪಂಚದ ಕೊನೆ ಹತ್ತಿರ ಬಂದಿದೆ; ಆಟವನ್ನು ನಿಲ್ಲಿಸು. ಪಾಂಡವರಿಗೆ ಮಾಡಿದ ಅನ್ಯಾಯವನ್ನು ನೀನು ಜೀರ್ಣಿಸಿಕೊಳ್ಳಲಾರೆ. ನಿನ್ನೆಲ್ಲ ಮಕ್ಕಳನ್ನೂ ಕಳೆದುಕೊಂಡು ವೃದ್ಧಾಪ್ಯದಲ್ಲಿ ಬಹು ದುಃಖವನ್ನು ಅನುಭವಿಸುತ್ತೀಯೆ. ಈ ಮಹಾವೀರರನ್ನು ಅವಮಾನಿಸಬೇಡ. ಲೋಭವೆಂಬುದು ಬಹಳ ಕೆಟ್ಟದ್ದು; ಇದರಿಂದ ನೀನು ನಿನ್ನ ಮಗನೂ ನರಳುತ್ತಿರುವಿರಿ. ನಿನ್ನ ಮಗನಿಗೆ ವೀರನಂತೆ ಯುದ್ಧಮಾಡಿ ಗೆಲ್ಲುವ ಬಲವಿಲ್ಲ; ಮೋಸಗಾರನನ್ನು ಕಟ್ಟಿಕೊಂಡು ಅವರಿಗೆ ಮೋಸಮಾಡುತ್ತಿದ್ದಾನೆ. ಇದರ ಫಲ ಭಯಾನಕವಾಗುತ್ತದೆ; ದಯವಿಟ್ಟು ಇದನ್ನು ನಿಲ್ಲಿಸು" ಎಂದನು. ಧೃತರಾಷ್ಟ್ರನು ಯಾವ ಮಾತನ್ನೂ ಆಡಲಿಲ್ಲ.



ಇದಾದ ಮೇಲೆ ಸಭೆಯಲ್ಲಿ ಮೌನ ಮುಸುಕಿತು. ಕೇಳುತ್ತಿದ್ದ ಶಬ್ದಗಳೆಂದರೆ ದಾಳಗಳು ಉರುಳುತ್ತಿದ್ದುದು, ಹಾಗೂ ಶಕುನಿಯ `ಗೆದ್ದೆ' ಎಂಬ ಹೆಮ್ಮೆಯ ಘೋಷಣೆ. ದುರ್ಯೋಧನ ವಿದುರನನ್ನು ದೃಷ್ಟಿಸಿ ನೋಡಿ, ``ಚಿಕ್ಕಪ್ಪ, ನೀನು ನಮ್ಮೆದುರೆ ಇತರರನ್ನು ಹೊಗಳುವುದರಲ್ಲಿ ನಿಸ್ಸೀಮ. ಬಾಲ್ಯದಿಂದಲೂ ನೋಡುತ್ತಿದ್ದೇನೆ, ನೀನು ಪಾಂಡವರ ಪಕ್ಷಪಾತಿ. ನಿನಗೆ ನನ್ನನ್ನು ಕಂಡರಾಗದು. ಅನ್ನ ಹಾಕುವ ಯಜಮಾನನಿಗೆ ಕೃತಜ್ಞನಾಗಿರುವವನಲ್ಲ ನೀನು. ನನ್ನಪ್ಪನಿಗೆ ನನ್ನ ಮೇಲೆ ಸಹಜವಾಗಿರುವ ಪ್ರೇಮವನ್ನು ಹಾಳುಮಾಡಲು ಯಾವಾಗಲು ಪ್ರಯತ್ನಿಸುತ್ತಿರುತ್ತಿಯೆ. ನೀನು ನಮ್ಮ ಹಿತಚಿಂತಕನೆಂದು ನನಗನಿಸುವುದಿಲ್ಲ; ನಮಗಾಗಿ ನೀನು ದುಃಖಿಸುವುದೂ ಬೇಡ. ನಮ್ಮ ನಿಜವಾದ ಹಿತಚಿಂತಕ ಶಕುನಿಯಿಂದಾಗಿ ಕೆಲವೇ ಕ್ಷಣಗಳಲ್ಲಿ ಬೀದಿಯ ಭಿಕಾರಿಗಳಾಗಲಿರುವ ನಿನ್ನ ಪ್ೀತಿಯ ಪಾಂಡವರಿಗಾಗಿ ದುಃಖಿಸು. ನಮಗೆ ಮುಂದಾಗಲಿರುವುದನ್ನು ಭವಿಷ್ಯ ನುಡಿದೆಯಲ್ಲಾ, ನಮ್ಮನ್ನು ಜೀವನದಲ್ಲಿ ಸೃಷ್ಟಿಕರ್ತ ತೊಡಗಿಸಿರುವ ರೀತಿಯನ್ನು, ನಮ್ಮ ಹಣೆಯ ಬರಹವನ್ನು ಬದಲಿಸಲು ಸಾಧ್ಯವೆ? ನನ್ನ ಒಳ್ಳೆಯ ಹಾಗೂ ಕೆಟ್ಟ ಗುಣಗಳು, ಅವುಗಳಿಂದ ಬರಲಿರುವ ಫಲಗಳು, ಎಲ್ಲವೂ ಅವನಿಂದ ಈಗಾಗಲೇ ನಿರ್ಧಾರಿತವಾಗಿವೆ. ನನಗೂ ನಮ್ಮಪ್ಪನಿಗೂ ಬುದ್ಧಿ ಹೇಳಿ ನಮ್ಮ ವಿಧಿಯನ್ನು ಬದಲಿಸುವೆನೆಂಬ ಭ್ರಮೆಯನ್ನು ಇನ್ನಾದರೂ ಬಿಟ್ಟುಬಿಡು" ಎಂದು ತಿರಸ್ಕಾರದಿಂದ ನುಡಿದನು .



ಆಟವು ಮುಂದುವರೆಯಿತು. ಶಕುನಿ ತನ್ನ ಕುಹಕದ ನಗುವನ್ನು ನಗುತ್ತ, ``ಯುಧಿಷ್ಠಿರ, ಈ ಭೂಮಿಯಲ್ಲಿ ನಿನ್ನದಾಗಿದ್ದ ಎಲ್ಲ ಆಸ್ತಿಯನ್ನೂ ನೀನೀಗ ಕಳೆದುಕೊಂಡೆಯೆಂದು ಕಾಣುತ್ತದೆ. ಇನ್ನೂ ನಿನ್ನದೆಂದು ಹೇಳಿಕೊಳ್ಳುವಂಥದೇನಾದರೂ ಇದ್ದರೆ ಪಣಕ್ಕಿಡು. ನಮ್ಮ ಯುವರಾಜನು ಈವರೆಗೆ ಗೆದ್ದುಕೊಂಡಿರುವುದೆಲ್ಲವನ್ನೂ ಪಣಕ್ಕಿಡುತ್ತಾನೆ. ಗೆದ್ದರೆ, ಎಲ್ಲವನ್ನೂ ವಾಪಸು ಪಡೆಯುವೆ" ಎಂದನು. ಆಟದ ಹುಚ್ಚು ಯುಧಿಷ್ಠಿರನ ವಿವೇಕವನ್ನು ಸಂಪೂರ್ಣವಾಗಿ ಹಾಳುಮಾಡಿತ್ತು. ಕ್ಷಣಕಾಲ ಸುಮ್ಮನಿದ್ದ ಅವನು, ತಕ್ಷಣ ಗಟ್ಟಿಮನಸ್ಸು ಮಾಡಿ, ``ಪಣವಿಡಲು ಇನ್ನೂ ನನ್ನ ಬಳಿ ತಮ್ಮಂದಿರಿದ್ದಾರೆ. ಇದೋ, ಸುಂದರಶ್ಯಾಮನಾದ ನಕುಲನನ್ನು ಪಣಕ್ಕಿಡುವೆ" ಎಂದನು. `ಗೆದ್ದೆ'ಎಂದನು ಶಕುನಿ. ``ವಿವೇಕಿಯಾದ ಸಹದೇವನು ನನ್ನ ಪಣ. ಅವನಂಥವರು ಈ ಲೋಕದಲ್ಲಿ ಬೇರೆ ಯಾರಿದ್ದಾರೆ? ಅವನನ್ನು ಒಡ್ಡುವ ಯೋಚನೆಯನ್ನೇ ಮಾಡಲಾರೆ. ಆದರೂ, ಅವನನ್ನು ಪಣವಾಗಿಡುವೆ. `ಗೆದ್ದೆ' ಎಂದ ಶಕುನಿಯು, ``ಮಾದ್ರಿಯ ಮಕ್ಕಳನ್ನು ಕಳೆದುಕೊಂಡೆ. ನಿನಗೆ ಇನ್ನೂ ಇಬ್ಬರು ತಮ್ಮಂದಿರಿದ್ದಾರಲ್ಲ? ಬಹುಶಃ ಅವರು ಪಣಕ್ಕಿಡಲು ಯೋಗ್ಯರಲ್ಲವೆಂದುಕೊಂಡೆಯೇನೋ. ಅದೂ ಸರಿಯೇ! ನಕುಲಸಹದೇವರು ನಿನ್ನ ಪ್ರಿಯರು; ಅದಕ್ಕಾಗಿ ಅವರನ್ನು ಪಣಕ್ಕಿಟ್ಟೆ. ಸಿರಿಸಂಪತ್ತಿಗೆ ಎದುರಾಗಿ ಅಂತಹ ಪಣವು ಸಮರ್ಪಕವೆಂದು ನಮಗೆ ಅನ್ನಿಸಲಿಲ್ಲ; ಆದರೂ ನಾವು ಉದಾರವಾಗಿ ಒಪ್ಪಿಕೊಂಡಿದ್ದೇವೆ. ಆಟ ಮುಂದುವರೆಯಬೇಕಲ್ಲ! ಅಥವಾ ನಿನ್ನ ಉಳಿದಿಬ್ಬರು ಸೋದರರು ನಿನಗೆ ಮಾದ್ರಿಯ ಮಕ್ಕಳಿಗಿಂತ ಹೆಚ್ಚಿನವರೆಂದು ಕಾಣುತ್ತದೆ. ಅದಕ್ಕೇ ಅಳೆದೂ ಸುರಿದೂ ಮಾಡುತ್ತಿದ್ದೀಯೆ!" ಎಂದನು.



ಯುಧಿಷ್ಠಿರನಿಗೆ ಕೋಪ ನೆತ್ತಿಗೇರಿತು. ``ಅಂಥ ಮಾತಾಡಬೇಡ ಶಕುನಿ! ನಮ್ಮ ನಡುವೆ ಭೇದವನ್ನು ನೀನೆಂದಿಗೂ ಹುಟ್ಟುಹಾಕಲಾರೆ. ಲೋಕದಲ್ಲಿ ಅರ್ಜುನನಿಗೆ ಸಮರು ಯಾರೂ ಇಲ್ಲ; ಅಂತಹ ಈ ಅರ್ಜುನನು ನನ್ನ ಮುಂದಿನ ಪಣ" ಎಂದನು. `ಗೆದ್ದೆ' ಎಂದನು ಶಕುನಿ. ``ಇಗೋ ಇಲ್ಲಿದ್ದಾನೆ ಭೀಮ. ಅವನು ನನ್ನ ಸೇನಾನಾಯಕ. ನಿಮ್ಮೆಲ್ಲರಿಗಿಂತಲೂ ಶಕ್ತಿಶಾಲಿ. ಇವನೀಗ ನನ್ನ ಪಣ!" `ಗೆದ್ದೆ' ಎಂದನು ಶಕುನಿ. ``ಈಗ ನಾನೇ ನನ್ನ ಪಣ" ಎಂದನು ಯುಧಿಷ್ಠಿರ. `ಗೆದ್ದೆ' ಎಂದನು ಶಕುನಿ. ಕ್ಷಣಕಾಲ ಎಲ್ಲರೂ ಸ್ತಂಭಿತರಾದರು. ಅಸಹನೀಯವಾದ ಮೌನದ ನಡುವೆ, ಬೆಂಕಿಯ ಹನಿಗಳಂತೆ ಶಕುನಿಯ ತುಟಿಯಿಂದ ಪದಗಳು ಉದುರಿದವು: ``ಇನ್ನೂ ದ್ರೌಪದಿ ಇದ್ದಾಳೆ; ಅವಳನ್ನು ಇನ್ನೂ ಕಳೆದುಕೊಂಡಿಲ್ಲ. " ಭೀಮನು ಶಕುನಿಯ ತಲೆಯೊಡೆಯುವವನಂತೆ ಗದೆಯನ್ನು ಬಿಮ್ಮಗೆ ಹಿಡಿದುಕೊಳ್ಳಲು, ಅರ್ಜುನನು ಅವನನ್ನು ಕಣ್ಸನ್ನೆಯಿಂದಲೇ ನಿವಾರಿಸಿದನು. ವಿವೇಕವನ್ನು ಸಂಪೂರ್ಣವಾಗಿ ಕಳೆದುಕೊಂಡಿದ್ದ ಯುಧಿಷ್ಠಿರನು, ``ಪಾಂಡವರ ಪ್ರಿಯಪತ್ನಿಯಾದ ದ್ರೌಪದಿಯನ್ನು ನಾನೀಗ ಪಣವಾಗಿಡುತ್ತಿದ್ದೇನೆ" ಎಂದೊಡನೆ ಶಕುನಿಯು ಕೊನೆಯ ಬಾರಿಗೆ `ಗೆದ್ದೆ' ಎಂದನು. ಎಲ್ಲವೂ ಕಳೆದುಹೋಯಿತು.



ಸಭೆಯಲ್ಲಿದ್ದ ಎಲ್ಲರೂ ಆಘಾತದಿಂದ ನಿಶ್ಚೇಷ್ಟಿತರಾಗಿದ್ದರು. ವಿದುರನು ತಲೆಯನ್ನು ಎರಡು ಕೈಗಳಲ್ಲಿ ಹಿಡಿದುಕೊಂಡು, ಹಾವಿನಂತೆ ನಿಟ್ಟುಸಿರು ಬಿಡುತ್ತಿದ್ದನು. ಆದ ಅನ್ಯಾಯಕ್ಕೆ ಅವನು ಭೂದೇವಿಯನ್ನು ಕ್ಷಮೆ ಕೇಳುವಂತಿತ್ತು. ಭೀಷ್ಮರೇ ಮೊದಲಾದವರ ಹುಬ್ಬು ಗಂಟಿಕ್ಕಿದ್ದವು. ಧೃತರಾಷ್ಟ್ರನು ಮಾತ್ರ ಸಂತೋಷದಿಂದ ``ನನ್ನ ಮಗ ಗೆದ್ದನೇ? ಏನು ಗೆದ್ದ? ಈಗ ಏನಾಯಿತು? ಆಟ ಎಲ್ಲಿಯವರೆಗೆ ಬಂದಿತು?" ಎಂದು ಬಾರಿಬಾರಿಗೂ ಕೇಳುತ್ತಿದ್ದನು. ದುರ್ಯೋಧನನು ಶಕುನಿಯನ್ನು ಪ್ರೀತಿಯಿಂದ ಆಲಿಂಗಿಸಿಕೊಂಡು ``ಮಾವ, ಇದು ನನ್ನ ಜೀವನದ ಅತ್ಯಂತ ಸುಖದದಿನ. ಇದನ್ನು ಆಗಮಾಡಿಸಿದವನು ನೀನು!" ಎಂದನು. ಅನಂತರ ವಿದುರನ ಕಡೆಗೆ ತಿರುಗಿ ``ವಿದುರ ಚಿಕ್ಕಪ್ಪ, ದ್ರೌಪದಿ ಈಗ ನಮ್ಮ ದಾಸಿ. ನೀನು ಹೋಗಿ ಅವಳನ್ನು ಇಲ್ಲಿಗೆ ಕರೆದುಕೊಂಡು ಬಾ! ಅವಳು ದಾಸಿಯರ ಜೊತೆಗೆ ಸೇರಿ ತನ್ನ ಕೆಲಸಗಳೇನೆಂಬುದನ್ನು ತಿಳಿದುಕೊಳ್ಳಲಿ" ಎನ್ನಲು ವಿದುರನು ಎದ್ದುನಿಂತು ``ದುರ್ಯೋಧನ, ಈಗಲೂ ಕಾಲ ಮಿಂಚಿಲ್ಲ. ಇನ್ನೂ ಮುಂದಕ್ಕೆ ಹೋಗಬೆಡ. ನೀನು ಅರಿಯದೆ ಹುಲಿಯನ್ನು ಎಬ್ಬಿಸುತ್ತಿರುವ ಜಿಂಕೆಯಂತೆ ಪಾಂಡವರನ್ನು ಬಡಿದೆಬ್ಬಿಸುತ್ತಿದ್ದೀಯೆ. ದ್ರೌಪದಿ ನಿನ್ನ ದಾಸಿಯಲ್ಲ; ಅವಳನ್ನು ಅಪಮಾನಿಸಬೇಡ. ಯುಧಿಷ್ಠಿರನು ತನ್ನನ್ನು ತಾನೇ ಸೋತುಕೊಂಡ ಮೇಲೆ ಅವಳನ್ನು ಪಣಕ್ಕಿಡುವಂತಿಲ್ಲ. ನಿನಗೆ ನನ್ನ ಮಾತು ಪಥ್ಯವಾಗದು. ನಿನ್ನ ಭಾವನೆ ಏನೇ ಆಗಿರಲಿ, ನಾನು ನಿನ್ನ ಹಿತಚಿಂತಕ. ಪಾಂಡವರ ಕ್ರೋಧಕ್ಕೆ ಬಲಿಯಾಗಬೇಡ. ನನ್ನ ಮಾತು ಕೇಳದಿದ್ದರೆ ನಿನ್ನೆಲ್ಲ ಸೋದರರೊಂದಿಗೆ, ಗೆಳೆಯರೊಂದಿಗೆ ನಾಶಹೊಂದುವೆ. ನರಕದಲ್ಲಿ ನಿಮಗಾಗಿ ಈಗಾಗಲೇ ಜಾಗ ಸಿದ್ಧವಾಗಿದೆ" ಎಂದನು. ಅವನ ಮಾತಿಗೆ ಯಾವ ಬೆಲೆಯೂ ಸಿಕ್ಕದಿರಲು, ಅವನು ನೋವಿನಿಂದ, ``ಯಾರು ಕಣ್ಣಿದ್ದೂ ಕಾಣದಿರುವರೋ, ಕಿವಿಯಿದ್ದೂ ಕೇಳದಿರುವರೋ ಅವರು ತಮಗೆ ಬರಲಿರುವ ಗತಿಯನ್ನು ತಿಳಿಯಲಾರರು" ಎಂದಷ್ಟೇ ಹೇಳಿ, ಕುಳಿತುಕೊಡನು.



ದುರ್ಯೋಧನನು ``ಈ ಹೀನಜಾತಿಯವನ ಮಾತು ಕೇಳಿ ಸಾಕಾಯಿತು. ಇವನಿಗೆ ಬೇರೆ ಏನಾದರೂ ಗೊತ್ತಿದ್ದರೆ ತಾನೆ!" ಎಂದನು. ಅಲ್ಲಿದ್ದ ಸೇವಕನನ್ನು ಕರೆದು, ``ಪ್ರಾತಿಕಾಮಿ, ಅಂತಃಪುರಕ್ಕೆ ಹೋಗಿ ದಾಸಿ ದ್ರೌಪದಿಯನ್ನು ಇಲ್ಲಿಗೆ ಕರೆದುಕೊಂಡು ಬಾ! ಅವಳ ಹೊಸ ಒಡೆಯನಾದ ಕುರುರಾಜನು ಕರೆಯುತ್ತಾನೆಂದು ಹೇಳು!" ಎಂದನು. ಅವನು ಅನುಮಾನಿಸಲು, ``ವಿದುರನು ವರ್ಣಿಸಿದ ಪಾಂಡವರ ಕೋಪಕ್ಕೆ ಹೆದರುವೆಯಾ? ಭಯಪಡಬೇಡ, ಅವರೆಲ್ಲರೂ ಈಗ ನಮ್ಮ ದಾಸರು!" ಎಂದನು. ಪ್ರಾತಿಕಾಮಿಯು ದ್ರೌಪದಿಯಿದ್ದಲ್ಲಿಗೆ ಹೋಗಿ ``ದ್ರೌಪದಿ, ಈಗ ನಿನು ದುರ್ಯೋಧನನ ದಾಸಿಯಾಗಿರುವೆ. ದ್ಯೂತದ ಜ್ವರದಲ್ಲಿ ಯುಧಿಷ್ಠಿರನು ನಿನ್ನನ್ನು ಪಣವಾಗಿಟ್ಟು ಸೋತಿದ್ದಾನೆ. ಈಗ ದುರ್ಯೋಧನನು ನಿನ್ನನ್ನು ಕರೆಯುತ್ತಿದ್ದಾನೆ" ಎಂದನು. ದ್ರೌಪದಿಗೆ ಆಘಾತದಿಂದ ಮಾತೇ ಹೊರಡಲಿಲ್ಲ. ``ಏನು ನೀನು ಹೇಳುತ್ತಿರುವುದು? ನನ್ನ ಪತಿಗೆ ಪಣವಿಡಲು ಬೇರೇನೂ ಇರಲಿಲ್ಲವೆ? ಹೀಗೆ ನನ್ನನ್ನು ಹೇಗೆತಾನೆ ಪಣಕ್ಕಿಡಬಲ್ಲ?" ಎಂದು ಕೇಳಿದಳು. ಪ್ರಾತಿಕಾಮಿಯು, ``ನಾನು ಹೇಳುತ್ತಿರುವುದು ಸತ್ಯ. ರಾಜನು ಮೊದಲು ತನ್ನದೆಲ್ಲವನ್ನೂ ಕಳೆದುಕೊಡನು. ಅನಂತರ ಸೋದರರನ್ನು ಒಬ್ಬೊಬ್ಬರನ್ನಾಗಿ ಸೋತನು. ನಂತರ ತನ್ನನ್ನೂ ಸೋತುಕೊಂಡನು. ಕೊನೆಗೆ ನಿನ್ನನ್ನೂ ಪಣವಾಗಿಟ್ಟು ಸೋತನು" ಎಂದನು. ದ್ರೌಪದಿಯು, ಆಸ್ಥಾನಕ್ಕೆ ಹೋಗಿ ಯುಧಿಷ್ಠಿರನು ಮೊದಲು ತನ್ನನ್ನೇ ಸೋತುಕೊಂಡನೋ ಅಥವಾ ನನ್ನನ್ನೇ ಮೊದಲು ಸೋತನೋ ಕೇಳಿಕೊಂಡು ಬಾ" ಎಂದು ಅವನನ್ನು ಕಳುಹಿಸಿದಳು.



ಪ್ರಾತಿಕಾಮಿಯ ಮಾತು ಕೇಳಿದ ಯುಧಿಷ್ಠಿರನಿಗೆ ಪ್ರಾಣ ಹೋದಂತಾಯಿತು. ಅವನು ದ್ರೌಪದಿಯ ಪ್ರಶ್ನೆಗೆ ಉತ್ತರಿಸದಾದ. ದುರ್ಯೋಧನನು ಕೋಪದಿಂದ, ``ಆ ಹೆಂಗಸು ಇಲ್ಲಿಗೇ ಬಂದು ಪ್ರಶ್ನೆಕೇಳಲಿ" ಎಂದನು. ಸೇವಕನು ಹಿಂದಿರುಗಿ ದ್ರೌಪದಿಗೆ ನಡೆದುದೆಲ್ಲವನ್ನೂ ತಿಳಿಸಿ ``ಕುರುವಂಶದ ನಾಶ ಸನ್ನಿಹಿತವಾಗಿದೆ. ನಿನಗಾಗುತ್ತಿರುವ ಈ ಅಪಮಾನ ದುರ್ಯೋಧನನನ್ನು ನಾಶಮಾಡುವುದು ಖಂಡಿತ" ಎಂದನು. ದ್ರೌಪದಿಯು ಪಟ್ಟು ಬಿಡದೆ, ``ಹೋಗು, ನಾನೀಗ ಏನು ಮಾಡಬೇಕೆಂದು ನನ್ನ ಪತಿಯನ್ನು ಮತ್ತೊಮ್ಮೆ ಕೇಳಿಕೊಂಡು ಬಾ! ನಾನು ಇನ್ನು ಯಾರ ಮಾತನ್ನೂ ಕೇಳುವವಳಲ್ಲ" ಎಂದಳು. ಅವನು ಅಂತೆಯೇ ಸಭೆಗೆ ಹೋಗಿ ತಿಳಿಸಲು ಯುಧಿಷ್ಠಿರನು ಅವನತಶಿರನಾಗಿ, ``ಅವಳು ಇಲ್ಲಿಗೆ ಬಂದು ತನ್ನ ಪತಿಯು ಮಾಡಿದುದು ಸರಿಯೇ ಎಂದು ಹಿರಿಯರನ್ನು ಕೇಳುವಂತೆ ಹೇಳು" ಎಂದನು. ದ್ರೌಪದಿಯ ಕೋಪಕ್ಕೆ ಹೆದರಿದ ಪ್ರಾತಿಕಾಮಿಯು ಮತ್ತೊಮ್ಮೆ ಅಂತಃಪುರಕ್ಕೆ ಹೋಗಲೊಪ್ಪಲಿಲ್ಲ. ದುರ್ಯೋಧನನೀಗ ದುಶ್ಶಾಸನನ ಕಡೆಗೆ ತಿರುಗಿ, ``ಈ ಸೇವಕ ಭಯಪಡುತ್ತಿದ್ದಾನೆ. ಈಗ ನೀನೇ ಹೋಗಿ ಅವಳನ್ನು ಕರೆದು ತಾ! ದಾಸಿಯಾದ ಅವಳು ನಿನಗೆ ಏನು ತಾನೆ ಮಾಡಬಲ್ಲಳು?" ಎಂದನು. ದುಶ್ಶಾಸನನು ದ್ರೌಪದಿಯ ಬಳಿಗೆ ಹೋಗಿ ನಗುತ್ತ, ``ಬಾ, ಬಾ, ನಮ್ಮ ರಾಜನೀಗ ನಿನ್ನನ್ನು ಗೆದ್ದಿರುವನು. ನಿನ್ನ ಗಂಡಂದಿರಿಗಾಗಿ ನೀನೇನೂ ಈಗ ಹೆದರಬೇಕಾದುದಿಲ್ಲ! ಸಂಕೋಚಪಡದೆ ನೀನು ದುರ್ಯೋಧನನೆಡೆಗೆ ಬರಬಹುದು; ನಿನ್ನ ಕಮಲದಂತಿರುವ ಕಣ್ಣುಗಳನ್ನು ಕುರುರಾಜನೆಡೆಗೆ ತಿರುಗಿಸಬಹುದು" ಎಂದನು. ದ್ರೌಪದಿ ರಭಸದಿಂದ ಮೇಲೆದ್ದಳು. ``ಛೆ, ಛೆ, ಅಷ್ಟೊಂದು ನಾಚಿಕೆ ಏಕೆ? ನಾವೆಲ್ಲ ನಿನ್ನ ಮೈದುನಂದಿರು" ಎನ್ನಲು, ಅವನನ್ನು ದುರುದುರನೆನೋಡಿ, ಗಾಂಧಾರಿಯ ಕೋಣೆಯ ಕಡೆಗೆ ಓಡತೊಡಗಿದಳು. ಬೆನ್ನಟ್ಟಿದ ದುಶ್ಶಾಸನನು ಅವಳ ನೀಳವಾದ ಸಿರಿಮುಡಿಯನ್ನು ಹಿಡಿದುಕೊಂಡನು. ರಾಜಸೂಯದಲ್ಲಿ ಸಮಸ್ತ ತೀರ್ಥಗಳಿಂದ ಅಭಿಷಿಕ್ತವಾಗಿದ್ದ ಅದನ್ನು ತನ್ನ ಪಾಲಿನ ಕಾಳಸರ್ಪವೆಂದು ಅರಿಯದೆ ಹಿಡಿದುಕೊಂಡು, ಆಸ್ಥಾನದ ಕಡೆಗೆ ಎಳೆದನು. ``ನೀನು ನಮ್ಮ ದಾಸಿ. ನಿನ್ನನ್ನು ದ್ಯೂತದಲ್ಲಿ ಗೆದ್ದಿರುವ ದುರ್ಯೋಧನನ ದಾಸಿ. ನಿನ್ನನ್ನು ಸೋತಿರುವ ನಿನ್ನ ಗಂಡ ನೀನು ಬಂದು ಅವನು ಮಾಡಿದ್ದು ಸರಿಯೇ ಎಂದು ಹಿರಿಯರನ್ನು ಕೇಳಬೇಕೆಂದು ಅಪೇಕ್ಷಿಸುತ್ತಿದ್ದಾನೆ. ಎಳೆದು ತಾರೆಂಬ ದುರ್ಯೋಧನನ ಆಜ್ಞೆಯಂತೆ ನಾನು ಬಂದಿದ್ದೇನೆ. ನೀನಾಗಿ ಬಾರದಿದ್ದರೆ ಎಳೆದೇ ಒಯ್ಯಬೇಕಾಗುತ್ತದೆ" ಎಂದನು. ದುಶ್ಶಾಸನನ ಎಳೆದಾಟದಿಂದ ಬಿಚ್ಚಿಹೋದ ಮುಡಿಯೊಡನೆ, ಕಂಬನಿಯಿಂದ ಒದ್ದೆಯಾಗಿ ಜಬ್ಬುಜಬ್ಬಾದ ಸೀರೆಯೊಡನೆ ದ್ರೌಪದಿಯು ಕೌರವಸಭೆಗೆ ಬಂದಳು.



* * * * 



ಈಗ ದ್ರೌಪದಿಯ ದುಃಖವಡಗಿತ್ತು. ಅಪಮಾನದಿಂದಾದ ಕೋಪದಿಂದ ಕಣ್ಣು ಕೆಂಪಾಗಿರಲು, ಸಭೆಯನ್ನುದ್ದೇಶಿಸಿ ಪ್ರಶ್ನಿಸಿದಳು: ``ಈ ಮಹಾಸಭೆಯಲ್ಲಿ ಅನಾದಿಕಾಲದಿಂದಲೂ ಧರ್ಮಕ್ಕೆ ಹೆಸರಾದ ಕುರುವಂಶದ ಹಿರಿಯರನ್ನು ನಾನು ನೋಡುತ್ತಿದ್ದೇನೆ. ನಿಮ್ಮ ಸಮ್ಮುಖದಲ್ಲಿ ನೀವು ನೋಡುತ್ತಿರುವಂತೆಯೇ ಅಧರ್ಮವು ತಲೆಯೆತ್ತಿದೆ. ಇದು ಹೇಗೆತಾನೆ ಸಾಧ್ಯ? ಅಧಿಕಾರಮತ್ತನಾದ ಈ ಮನುಷ್ಯ ಕ್ರೂರನಾದ ತನ್ನ ಅನುಜನಿಗೆ ಹೆಂಗಸೊಬ್ಬಳನ್ನು ಸಭೆಗೆ ಎಳೆತರುವಂತೆ ಆಜ್ಞೆಮಾಡಿದ್ದನ್ನು ನೀವು ಸುಮ್ಮನೆ ನೋಡುತ್ತಿದ್ದಿರಿ! ಧರ್ಮದ ಪ್ರತಿರೂಪವೆನಿಸಿದ ನನ್ನ ಗಂಡ ಇಲ್ಲಿದ್ದಾನೆ. ನೀವೆಲ್ಲ ಧರ್ಮಸೂಕ್ಷ್ಮಗಳನ್ನು ಚೆನ್ನಾಗಿ ತಿಳಿದವರು. ಇಂಥ ದುಷ್ಕೃತ್ಯ ನಡೆಯಬಲ್ಲ ಈ ಸಭೆಯಲ್ಲಿ ಧರ್ಮವೆಲ್ಲಿದೆ? ಧರ್ಮಕ್ಕೆ ಹೆಸರಾದ ಕುರುವಂಶದ ಕೀರ್ತಿ ಏನಾಯಿತು? ಹಿರಿಯರಾದ ನಿಮ್ಮ ಸಮ್ಮುಖದಲ್ಲಿ ನಾನು ನನ್ನ ಗಂಡನನ್ನು ತಾನೇ ತನ್ನನ್ನು ಮೊದಲು ಸೋತನೋ ಅಥವಾ ನನ್ನನ್ನು ಮೊದಲು ಸೋತನೋ ಎಂಬ ವಿವರವನ್ನು ಕೇಳಿದೆ. ನನಗಿನ್ನೂ ಉತ್ತರ ಸಿಕ್ಕಿಲ್ಲ. ಈ ಮನುಷ್ಯ ನನ್ನನ್ನು ಮುಡಿ ಹಿಡಿದು ದರದರನೆ ಸಭೆಗೆ ಎಳೆದು ತಂದಿದ್ದಾನೆ. ಭೀಷ್ಮದ್ರೋಣರಂಥವರು ಇದನ್ನು ನೋಡಿ ಸುಮ್ಮನಿರುವ ಈ ಸಭೆಯಲ್ಲಿ ಧರ್ಮವೆಲ್ಲಿದೆ? ನಾನು ನಿಮ್ಮನ್ನೆಲ್ಲ ಪುನಃ ಕೇಳುತ್ತಿದ್ದೇನೆ. ನಾನು ಈ ಮನುಷ್ಯನ ದಾಸಿಯೇ ಅಥವಾ ಸ್ವತಂತ್ರಳೆ? ಹೀಗೆನ್ನುತ್ತ ಕಡೆಗಣ್ಣಿನಿಂದ ಗಂಡದಿರನ್ನು ನೋಡಿದಳು. ಸಾತ್ವಿಕ ಕ್ರೋಧವನ್ನು ಹೊರಸೂಸುತ್ತಿದ್ದ ಅವಳ ದೃಷ್ಟಿ ಅವರನ್ನು ಇರಿಯಿತು. ಅವರ ಕೋಪ ಹೊತ್ತಿ ಉರಿಯುವಂತಾಯಿತು. ಯುಧಿಷ್ಠಿರನಿಗೆ ಅವಳ ದೃಷ್ಟಿಯನ್ನು ಎದುರಿಸುವುದಕ್ಕಿಂತ ತನ್ನನ್ನು ಮೃತ್ಯು ಹೊತ್ತೊಯ್ಯಬಾರದೇ ಎನಿಸಿತು. ತಲೆತಗ್ಗಿಸಿದನು ಮೇಲೆತ್ತಲಿಲ್ಲ.



ದ್ರೌಪದಿಯು ಭೀಷ್ಮನ ಕಡೆಗೆ ತಿರುಗಿ ``ನಿನ್ನನ್ನು ವಿವೇಕಿಯೆಂದೂ ವಿದ್ಯಾಪಾರಂಗತನೆಂದೂ ಹೇಳುತ್ತಾರೆ. ಅಜ್ಜಾ, ನಾನು ದಾಸಿ ಹೌದೇ ಎಂಬುದನ್ನು ನೀನು ಹೇಳಬಲ್ಲೆಯಾ?" ಎನ್ನಲು, ಭೀಷ್ಮನು ``ನಿನ್ನ ಪ್ರಶ್ನೆಗೆ ಸರಿಯಾದ ಉತ್ತರವನ್ನು ನಾನು ಕೊಡಲಾರೆ. ಕೆಲವು ಧರ್ಮಸೂಕ್ಷ್ಮಗಳನ್ನು ಅರ್ಥಮಾಡಿಕೊಳ್ಳುವುದು ಕಷ್ಟ. ತನ್ನನ್ನು ತಾನೇ ಸೋತುಕೊಂಡವನು ಮತ್ತೇನನ್ನಾದರೂ ಪಣವಾಗಿಟ್ಟು ದ್ಯೂತವನ್ನು ಮುಂದುವರೆಸುವಂತಿಲ್ಲ. ಇದರ ಪ್ರಕಾರ ಯುಧಿಷ್ಠಿರನಿಗೆ ನಿನ್ನನ್ನು ಕಳೆದುಕೊಳ್ಳುವ ಹಕ್ಕಿಲ್ಲ. ಆದರೆ-ಮನುಷ್ಯನಿಗೆ ತಾನು ಸ್ವತಂತ್ರನಾಗಿದ್ದರೂ ಅಲ್ಲದಿದ್ದರೂ-ಹೆಂಡತಿಯ ಮೇಲೆ ಹಕ್ಕು ಇದ್ದೇ ಇದೆ. ತನ್ನನ್ನು ತಾನು ಸೋತುಕೊಂಡ ಮೇಲೂ ಅವನು ಅವಳನ್ನು ತನ್ನ ಆಸ್ತಿ ಎಂದುಕೊಳ್ಳಬಹುದು. ಶಕುನಿಯು ಎಂತಹ ಪ್ರಚಂಡ ಆಟಗಾರನೆಂದು ತಿಳಿದ ಮೇಲೂ ಯುಧಿಷ್ಠಿರನು ನಿನ್ನನ್ನು ಪಣವಾಗಿಟ್ಟನಲ್ಲವೆ? ಆದ್ದರಿಂದ, ನೀನು ಸ್ವತಂತ್ರಳೋ ಅಲ್ಲವೋ ಎಂಬುದನ್ನು ನಾನು ಖಂಡಿತವಾಗಿ ಹೇಳಲಾರೆ" ಎಂದನು. ದ್ರೌಪದಿಯ ಕೋಪ ನೆತ್ತಿಗೇರಿತು. ಅವಳೆಂದಳು, ``ಅಜ್ಜಾ, ನನ್ನ ಗಂಡ ಇಷ್ಟಪಟ್ಟೇ ನನ್ನನ್ನು ಪಣವಾಗಿಟ್ಟ ಎಂಬ ಅರ್ಥ ಬರುವಂತೆ ಮಾತನಾಡುತ್ತಿದ್ದೀಯೆ. ಪಗಡೆಯಾಡಲು ಒಲ್ಲೆನೆನ್ನುತ್ತಿದ್ದ ಯುಧಿಷ್ಠಿರನಿಗೆ ನಿನ್ನ ಮೊಮ್ಮಗನೂ ಅವನ ಮಾವನೂ ಆಟವಾಡುವಂತೆ ಸವಾಲೆಸೆದರಲ್ಲವೆ? ಅವನು ಇಂದ್ರಪ್ರಸ್ಥದಲ್ಲಿ ವಿದುರನಿಗೆ ಹೀಗೆಯೇ ಹೇಳಿದ್ದ. ಅವನಿಗೆ ಚೆನ್ನಾಗಿ ಆಟವಾಡಲು ಬಾರದೆಂದು ತಿಳಿದೂ ತಿಳಿದೂ ಈ ಮೋಸದಾಟಕ್ಕೆ ಅವನನ್ನು ಒತ್ತಾಯದಿಂದ ಸೆಳೆದರಲ್ಲವೆ? ನನ್ನ ಗಂಡ ಗೆಲ್ಲುವ ಸಂಭವವೇ ಇಲ್ಲವೆಂಬುದು ನಿಮ್ಮಲ್ಲಿ ಒಬ್ಬೊಬ್ಬರಿಗೂ ತಿಳಿದಿತ್ತಲ್ಲವೆ? ಆದರೂ ನೀವೆಲ್ಲರೂ ಸುಮ್ಮನೆ ನೋಡುತ್ತಿದ್ದಿರಿ. ಇದು ಅನ್ಯಾಯವಲ್ಲವೆ? ಪಕ್ಷಪಾತದ ಈ ಆಟವನ್ನು ಮಹಾರಾಜನ ಚಿಕ್ಕಪ್ಪನಾದ ನೀನು ನಿಲ್ಲಿಸಬೇಕಾಗಿತ್ತು. ನೀವು ಯಾರೂ ಇದನ್ನು ನಿಲ್ಲಿಸುವ ಪ್ರಯತ್ನ ಮಾಡಲೂ ಇಲ್ಲ, ದುರ್ಯೋಧನನಿಗೆ ಅವನು ಮಾಡುತ್ತಿರುವುದು ತಪ್ಪೆಂದು ಹೇಳಲೂ ಇಲ್ಲ. ಈಗ ನಿನ್ನ ಗಂಡ ನಿನ್ನನ್ನು ಇಚ್ಛೆಪಟ್ಟೇ ಪಣವಿಟ್ಟಿರಬಹುದೆಂದು ಹೇಳುತ್ತಿರುವೆಯಲ್ಲ! ನನ್ನ ಮಾತನ್ನು ಗಮನವಿಟ್ಟು ಕೇಳಿ. ಹಿರಿಯರು ಇಲ್ಲದ ಸಭೆ ಸಭೆಯೇ ಅಲ್ಲ; ನ್ಯಾಯವಾದದ್ದನ್ನು ಹೇಳದವರು ಹಿರಿಯರಲ್ಲ; ಸತ್ಯವನ್ನು ಒಳಗೊಳ್ಳದ್ದು ನ್ಯಾಯವಲ್ಲ; ಧಾರ್ಷ್ಟ್ಯದಿಂದ ಒಳಗೂಡಿದ್ದು ಸತ್ಯವೂ ಅಲ್ಲ!"



ಕಣ್ಣೀರು ಸುರಿಸುತ್ತಿದ್ದ ದ್ರೌಪದಿಯ ಬೆಂಕಿಯಂತಹ ಮಾತುಗಳನ್ನು ಕೇಳಿಯೂ ದುಶ್ಶಾಸನನು ಅವಳನ್ನು ಹೀಗಳೆದನು. ``ನೀನು ದುರ್ಯೋಧನನ ದಾಸಿ. ನಿನಗೇಕೆ ಧರ್ಮಸೂಕ್ಷ್ಮಗಳ ಗೊಡವೆ? ಈಗ ನಿನ್ನ ಧರ್ಮ ಹೊಸ ಒಡೆಯನಾದ ಕೌರವ ಚಕ್ರವರ್ತಿಯನ್ನು ಸೇವಿಸುವುದು" ಎನ್ನಲು, ಅವಳು ಅವನನ್ನು ಕಣ್ಣಿನಿಂದಲೇ ಸುಟ್ಟುಬಿಡುವಂತೆ ನೋಡಿದಳು. ಆದರೆ ಮಾತನಾಡಲಿಲ್ಲ. ಭೀಮನು ಮೇಲೆದ್ದು, ಕೋಪದಿಂದ ತರಗೆಲೆಯಂತೆ ನಡುಗುತ್ತ, ಯುಧಿಷ್ಠಿರನನ್ನು ಕುರಿತು, ``ನಿನ್ನ ಹುಚ್ಚಿನಿಂದ ಈಗ ಆಗಿರುವುದನ್ನು ನೋಡು. ನಮ್ಮದಾಗಿದ್ದ ರಾಜ್ಯ, ಕೋಶ ಎಲ್ಲವೂ ಹೋದವು. ನಾನದನ್ನು ಪರಿಗಣಿಸಲೇ ಇಲ್ಲ. ನೀನು ನಮ್ಮನ್ನೆಲ್ಲ ಪಣವಾಗಿಟ್ಟು ಸೋತೆ. ಆಗಲೂ ನಾನು ಸಹಿಸಿಕೊಂಡೆ; ಏಕೆಂದರೆ ನೀನು ನಮ್ಮೆಲ್ಲರಿಗೂ ಹಿರಿಯ, ಗುರು ಸಮಾನ. ಆದರೆ ಈ ತುಚ್ಛ ಪ್ರಾಣಿ ಪಾಪಿಗಳಿಂದ ತುಂಬಿದ ಈ ಸಭೆಗೆ ದ್ರೌಪದಿಯನ್ನು ಎಳೆದು ತರುತ್ತಿರುವುದನ್ನು ನೋಡು! ಇದನ್ನೂ ನಾನು ಸಹಿಸಿಕೊಳ್ಳಬೇಕೆನ್ನುವೆಯಾ? ಸಾಧ್ಯವಿಲ್ಲ. ಸಹದೇವ, ಬೆಂಕಿಯನ್ನು ತೆಗೆದು ಕೊಂಡು ಬಾ. ದ್ಯೂತವಾಡಿದ ಈ ನನ್ನ ಅಣ್ಣನ ಕೈಗಳನ್ನು ಸುಟ್ಟುಬಿಡುತ್ತೇನೆ" ಎಂದನು. ಅರ್ಜುನನಿಗೆ ಭೀಮನ ಕೋಪವನ್ನೂ ಯುಧಿಷ್ಠಿರನ ತಲೆತಗ್ಗಿಸಿ ಕುಳಿತಿರುವುದನ್ನೂ ನೋಡಿ ತುಂಬ ದುಃಖವಾಯಿತು. ನೆನ್ನೆಯವರೆಗೂ ರಾಜನಾಗಿದ್ದವನು ಇಂದು ಈ ಕೌರವರ ದಾಸ! ``ಭೀಮ, ಇದೇನು ನಿನ್ನ ಕೆಲಸ? ಏನಾಗಿದೆ ನಿನಗೆ? ನೀನೆಂದೂ ಅಣ್ಣನೊಂದಿಗೆ ಒರಟಾಗಿ ನಡೆದುಕೊಂಡವನಲ್ಲ; ತಂದೆಯ ಹಾಗೆ ಅವನನ್ನು ಗೌರವಿಸುತ್ತಿದ್ದೆ!" ಎನ್ನಲು ಭೀಮನು, ``ಹೌದು ಗೌರವಿಸುತ್ತಿದ್ದೆ. ಆಗ ಅವನು ಬೇರೆ ಮನುಷ್ಯನಾಗಿದ್ದ. ಆದರೀಗ ಅವನ ಕೈಗಳನ್ನು ಸುಡಬೇಕಾಗಿದೆ. ಸುಟ್ಟ ಕೈಗಳ ಅವನನ್ನು ಇಲ್ಲಿಂದ ಹೊರಕ್ಕೆಸೆಯುವೆ. ಇಲ್ಲಿನ ಈ ದೃಶ್ಯವನ್ನು ನೋಡಿ ನಿನ್ನ ರಕ್ತ ಕುದಿಯುವುದಿಲ್ಲವೆ? ಇದನ್ನು ಸಹಿಸುವುದಾದರೂ ಹೇಗೆ?" ಎಂದನು. ಅರ್ಜುನನು, ``ಹೌದು ನನಗೂ ಕೋಪ ಬಂದಿದೆ. ಆದರೆ ಅಣ್ಣನಿಗೂ ತನ್ನ ಮೇಲೆ ತನಗೆ ಅಷ್ಟೇ ಕೋಪ ಬಂದಿರುವುದನ್ನು ಕಾಣಲಾರೆಯಾ? ಅವನು ಈಗಾಗಲೇ ಎದೆಯೊಡೆದಿದ್ದಾನೆ. ನಿನ್ನ ಕೋಪದಿಂದ ಅವನ ದುಃಖವನ್ನು ಹೆಚ್ಚಿಸಬೇಡ. ನಮ್ಮಲ್ಲಿ ಭೇದ ಉಂಟುಮಾಡಬೇಕೆಂಬುದೇ ಕೌರವರ ಅಭಿಲಾಷೆ. ಈವರೆಗೆ ನಾವು ಒಂದು ದೇಹಲ್ಲಿರುವ ಪಂಚಪ್ರಾಣಗಳಂತೆ ಇದ್ದೇವೆ. ನೀನು ಅಣ್ಣನ ವಿರುದ್ಧ ತಿರುಗಿ ನಿಂತರೆ ಕೌರವರ ಆಸೆ ಕೈಗೊಡಿದ ಹಾಗಾಗುತ್ತದೆ" ಎಂದು ಸಮಾಧಾನಮಾಡಿದನು. ಅದೊಂದು ಬೀಭತ್ಸ ದೃಶ್ಯವಾಗಿತ್ತು.



ಪಾಂಡವರ ಹಾಗೂ ದ್ರೌಪದಿಯ ಅವಸ್ಥೆಯನ್ನು ನೋಡಿ ಧೃತರಾಷ್ಟ್ರನ ಒಬ್ಬ ಮಗ ವಿಕರ್ಣನಿಗೆ ತಡೆಯಲಾರದಾಯಿತು. ಅವನು ಎದ್ದುನಿಂತು, ``ಹೌದು ದ್ರೌಪದಿ, ನೀನೆನ್ನುವುದು ಸರಿ: ಈ ಸಭೆಯಲ್ಲಿ ನ್ಯಾಯವಿಲ್ಲ. ಈ ದುಷ್ಕೃತ್ಯಕ್ಕಾಗಿ ನಮಗೆಲ್ಲ ನರಕ ಕಾದಿದೆ. ಇಲ್ಲಿರುವ ಹಿರಿಯರೊಬ್ಬರೂ ಯುಧಿಷ್ಠಿರ ನಿನ್ನನ್ನು ಪಣವಾಗಿಟ್ಟಾಗ ಪ್ರಶ್ನಿಸಲಿಲ್ಲ. ಈಗಲೂ ಸುಮ್ಮನಿದ್ದಾರಲ್ಲ! ನಿಮ್ಮಲ್ಲಿ ಯಾರೊಬ್ಬರಿಗೂ ದುರ್ಯೋಧನನನ್ನೆದುರಿಸಿ ಸತ್ಯವನ್ನು ನುಡಿಯುವ ಧೈರ್ಯವಿಲ್ಲವೆ?" ಎಂದನು. ಯಾರೂ ಮೌನವನ್ನು ಮುರಿಯಲಿಲ್ಲ. ಅನಂತರ ಅವನು, ``ಇರಲಿ. ನಾನಂತು ನನಗನಿಸಿದ್ದನ್ನು ಹೇಳುವೆ. ಕುರುರಾಜಕುಮಾರನಿಗೆ ಅವಳನ್ನು ದಾಸಿಯೆಂದು ಕರೆಯಲು ಹಕ್ಕಿಲ್ಲ; ಏಕೆಂದರೆ ಯುಧಿಷ್ಠಿರನಿಗೆ ಅವಳನ್ನು ಪಣವಾಗಿಡಲು ಹಕ್ಕಿರಲಿಲ್ಲ. ರಾಜರ ವಿವೇಕವನ್ನು ಜೂಜು, ಬೇಟೆ, ಕುಡಿತ ಹಾಗೂ ಸ್ತ್ರೀಯರು ಎಂಬ ನಾಲ್ಕು ವ್ಯಸನಗಳು ಹಾಳು ಮಾಡುತ್ತವೆ ಎಂದು ತಿಳಿದವರು ಹೇಳುತ್ತಾರೆ. ಯುಧಿಷ್ಠಿರನ ವಿಷಯದಲ್ಲಿ ಇದು ನಿಜವಾಯಿತು. ದ್ಯೂತದ ಹುರುಡಿನ ಜ್ವರದಲ್ಲಿ ಅವನು ಜವಾಬ್ದಾರಿಯಿಂದ ವರ್ತಿಸಲಿಲ್ಲ. ಮೂರ್ಖತನದಿಂದ ಅವನು ದ್ರೌಪದಿಯನ್ನು ಪಣವಾಗಿಟ್ಟ. ಅದೂ ಶಕುನಿಯ ಸಲಹೆಯ ಮೇರೆಗೆ. ಐವರಿಗೂ ಹೆಂಡತಿಯಾದವಳನ್ನು ಅವನೊಬ್ಬನು ಉಳಿದವರನ್ನು ಕೇಳದೆ ಹೇಗೆ ಪಣಕ್ಕಿಡಬಲ್ಲ? ಆದ್ದರಿಂದ ದ್ರೌಪದಿಯನ್ನು ಗೆದ್ದಂತಾಗಲಿಲ್ಲ; ಅವಳು ದಾಸಿಯಲ್ಲ. ಅವಳು ಸ್ವತಂತ್ರಳು" ಎಂದನು. ವಿಕರ್ಣನ ಸ್ಪಷ್ಟ ನುಡಿಗಳಿಂದ ಸಭೆ ರೋಮಾಂಚನಗೊಂಡಿತು. ರಾಧೇಯನಿಗೆ ವಿಕರ್ಣನ ಮೇಲೆ ಕೋಪ ಬಂದಿತು. ``ವಿಕರ್ಣ, ಭೀಷ್ಮ ದ್ರೋಣ ಧೃತರಾಷ್ಟ್ರ ಎಲ್ಲರಿಗೂ ದ್ರೌಪದಿಯು ದಾಸಿಯೆಂದು ಮನವರಿಕೆಯಾಗಿರುವುದರಿಂದಲೆ ಸುಮ್ಮನಿದ್ದಾರೆ. ಅವಳ ಗಂಡಂದಿರು ಅವಳನ್ನು ಸಭೆಗೆ ಕರೆದು ತರಲು ಬಿಡುತ್ತಿದ್ದರೆ? ಯುಧಿಷ್ಠಿರನೆ ಅವಳನ್ನು ಸಭೆಗೆ ಬರುವಂತೆ ಹೇಳಿ ಕಳುಹಿಸಿದ್ದು. ಪಾಂಡವರ ವಿಚಾರದಲ್ಲಿ ಧರ್ಮದ ಮಾತನ್ನಾಡುವ ಅಗತ್ಯವಿಲ್ಲ. ಒಬ್ಬಳು ಹೆಂಗಸನ್ನು ಐದು ಜನ ಹಂಚಿಕೊಂಡಿರುವುದನ್ನು ಎಲ್ಲಿಯಾದರೂ ನೋಡಿರುವೆಯೇನು? ಇಂಥ ಅನ್ಯಾಯಅನ್ನು ಅವರು ಮಾಡಬಹುದಾದರೆ, ನಾವು ದ್ರೌಪದಿಯನ್ನು ಸಭೆಗೆ ಕರೆತಂದದ್ದು ಏನು ತಪ್ಪು? ದ್ರೌಪದಿಯೇನೂ ಹೊರಪ್ರಪಂಚವನ್ನು ನೋಡದೆ ಪರದೆಯ ಹಿಂದೆಯೇ ಇದ್ದವಳಲ್ಲ. ಅವಳೊಬ್ಬ ಸಾಮಾನ್ಯ ಸ್ತ್ರೀ; ಅವಳ ಮೇಲೆ ನಿನಗೇಕೆ ಅಷ್ಟೊಂದು ಕಾಳಜಿ? ಇಲ್ಲಿಗೆ ಬಂದದ್ದಕ್ಕೆ ಅವಳ ಮರ್ಯಾದೆ ಹೋಯಿತೆಂದು ನೀನೇನೂ ಭಾವಿಸಬೇಕಾದದ್ದಿಲ್ಲ. ಅವಳ ಗಂಡಂದಿರು ದಾಸರಾಗಿರುವಂತೆಯೇ ಅವಳೂ ದಾಸಿ. ಅಷ್ಟೇಕೆ, ಉಟ್ಟಿರುವ ಬಟ್ಟೆ ಸಹಾ ಅವರು ಯಾರಿಗೂ ಸೇರಿದ್ದಲ್ಲ. ದುಶ್ಶಾಸನ, ಇವರೆಲ್ಲರ ಬಟ್ಟೆಗಳನ್ನು ಕಳಚಿ ತೆಗೆದು ರಾಜಕುಮಾರನಿಗೆ ಒಪ್ಪಿಸು" ಎನ್ನಲು ಪಾಂಡವರು ತಕ್ಷಣವೇ ತಮ್ಮ ಮೇಲುಡುಗೆಯನ್ನು ಕಳಚಿ ರಾಶಿ ಹಾಕಿದರು. ದುಶ್ಶಾಸನನು ಕ್ರೋಧತಪ್ತ ದ್ರೌಪದಿಯ ಮೇಲುಡುಗೆಯನ್ನು ಸೆಳೆದು ತೆಗೆಯಲುಪಕ್ರಮಿಸಿದ. ದ್ರೌಪದಿಗೆ ಎನು ಮಾಡಬೇಕೆಂದೇ ತೋರಲಿಲ್ಲ. ಒಬ್ಬೊಬ್ಬರನ್ನಾಗಿ ಗಂಡಂದಿರ ಕಡೆಗೆ ನೋಡಿದಳು. ತನ್ನ ಮರ್ಯಾದೆ ಉಳಿಸಲು ಅವರೇನೂ ಮಾಡಲಾರರೆಂದು ಅವಳಿಗೆ ತಿಳಿದುಹೋಯಿತು. ಉಳಿದವರನ್ನೂ ನೋಡಿದಳು, ತನಗೆ ಯಾರಾದರೂ ನೆರವಾಗುವರೋ ಎಂಬಂತೆ. ಅನಂತರ, `ದೊಡ್ಡ ಅಪಾಯವು ಮನುಷ್ಯನಿಗೆ ಎದುರಾದಾಗ ದೇವರೊಬ್ಬನ ಹೊರತು ಬೇರಾರೂ ಸಹಾಯ ಮಾಡಲಾರರೆಂದು ಕೇಳಿದ್ದೇನೆ; ಅವನೇ ಈಗ ನನ್ನ ಏಕಮಾತ್ರ ಆಶಾಕಿರಣ' ಎಂದು ಆತ್ಮರಕ್ಷಣೆಯನ್ನೂ ಸಹ ಮರೆತು, ಕ್ಯೆ ಜೋಡಿಸಿ ಕಣ್ಮುಚ್ಚಿ ನಿಂತುಕೊಂಡಳು. ಕಣ್ಣುಗಳಿಂದ ಅಶ್ರುಧಾರೆಯೂ ತುಟಿಗಳಿಂದ ಭಗವಂತನ ನಾಮಸ್ಮರಣೆಯೂ ಅವಿಚ್ಛಿನ್ನವಾಗಿ ಬರತೊಡಗಿದವು. ``ಹೇ ಕೃಷ್ಣ, ವಾಸುದೇವ, ಅಸಹಾಯಕರ ಕೊನೆಯ ಆಧಾರ ನೀನೇ ಎನ್ನುವರು. ನೀನೇ ನನ್ನ ಸರ್ವಸ್ವ; ನನ್ನನ್ನು ಹೆದರಿಸುತ್ತಿರುವ ಈ ಅಪಾಯದಿಂದ ನೀನೇ ಕಾಪಾಡಬೇಕು. ನೀನು ಸರ್ವವ್ಯಾಪಿ; ಭಕ್ತರು ಆರ್ತತೆಯಿಂದ ಕರೆದಾಗ ಅಲ್ಲಿರುತ್ತೀ ಎನ್ನುವರು. ನಿನ್ನಲ್ಲಿ ಸಂಪೂರ್ಣ ಶರಣಾಗತಳಾಗಿದ್ದೇನೆ. ನನ್ನನ್ನು ರಕ್ಷಿಸುವುದು ನಿನಗೇ ಸೇರಿದ್ದು" ಎನ್ನುತ್ತ ಪೂರ್ಣವಾಗಿ ಮೈಮರೆತಳು. ಯಾರೂ ಏನು ಹೇಳಿದ್ದೂ ಅವಳಿಗೆ ಕೇಳಿಸದಾಯಿತು. ಅವಳು ಉಟ್ಟ ಸೀರೆಯನ್ನು ಎಳೆಯುತ್ತಿದ್ದ ದುಶ್ಶಾನನನ್ನೂ ಸಹ ವಿರೋಧಿಸಲಿಲ್ಲ. ಆಗ ಪವಾಡವೊಂದು ಜರುಗಿತು. ದುಶ್ಶಾಸನ ಎಳೆದಷ್ಟೂ ಅವಳ ಸೀರೆ ಉದ್ದವಾಗುತ್ತ ಹೋಯಿತು. ಎಳೆದೆಳೆದು ಅವನು ಸೋತನು; ಬಟ್ಟೆ ರಾಶಿ ಬಿತ್ತು; ಭಗವಂತನ ಅನಂತ ಕೃಪೆಯಂತೆ, ಪಶ್ಚಾತ್ತಾಪಪಡುವವನ ಕಣ್ಣೀರಿನಂತೆ, ಉದಾರಿಯ ದಾನದಂತೆ ಉದ್ದವಾಗುತ್ತಲೇ ಹೋಯಿತು; ಆದರೆ ದ್ರೌಪದಿಯನ್ನು ನಗ್ನಗೊಳಿಸಲಾಗಲಿಲ್ಲ. ದುಶ್ಶಾಸನ ಸೋತು ನಿರ್ವಿಣ್ಣನಾದನು. ಕೊನೆಗೆ ಪರಾಭವಗೊಂಡು ನೆಲಕ್ಕೊರಗಿದನು.



ಗರಬಡಿದಂತಾಗಿದ್ದ ಎಲ್ಲರನ್ನೂ ಭೀಮನ ಮಾತು ಬಡಿದೆಬ್ಬಿಸಿತು. ``ಕ್ಷತ್ರಿಯರೆ, ಕೇಳಿರಿ. ಈ ಪಾಪಿ ದುಶ್ಶಾಸನನನ್ನು ಕೊಂದು ಅವನ ರಕ್ತವನ್ನು ಕುಡಿಯದಿದ್ದರೆ ನನ್ನ ಪಿತೃಗಳಿರುವ ಲೋಕವು ನನಗೆ ಸಿಕ್ಕದಿರಲಿ; ಬದಲಿಗೆ ನರಕವೇ ಪ್ರಾಪ್ತಿಯಾಗಲಿ. ಅವನ ಎದೆಯನ್ನು ಬಗೆದು ರಕ್ತವನ್ನು ಕುಡಿಯುವೆನು. ಇದು ನನ್ನ ಪ್ರತಿಜ್ಞೆ!" ದುಶ್ಶಾಸನನೂ ಇತರ ಕೌರವರೂ ಅವನನ್ನು ನೋಡಿ ನಕ್ಕರು. ರಾಧೇಯನು, ``ಏಕೆ ಸುಮ್ಮನಿರುವೆ ದುಶ್ಯಾಸನ? ಅವಳನ್ನು ದಾಸಿಯರಿರುವಲ್ಲಿಗೆ ಕರೆದುಕೊಂಡು ಹೋಗು. ಅಲ್ಲಿ ಅವಳು ತನ್ನ ಕರ್ತವ್ಯಗಳನ್ನು ಅರಿತುಕೊಳ್ಳಲಿ" ಎಂದು ಛೇಡಿಸಿದನು. ದ್ರೌಪದಿಯು, ``ನಾನು ದಾಸಿಯಲ್ಲ" ಎಂದು ಹೇಳುತ್ತ ಹಿರಿಯರೆಲ್ಲರನ್ನೂ ಬೇಡುತ್ತಿದ್ದಳು. ಎಲ್ಲರೂ ದುರ್ಯೋಧನನಿಗೆ ಹೆದರಿಕೊಂಡು ಸುಮ್ಮನಿದ್ದರು. ವಿದುರನು ಮಾತ್ರ ``ವಿಕರ್ಣ ಹೆಳಿದ್ದು ಸರಿ, ಅವಳು ದಾಸಿಯಲ್ಲ" ಎಂದು ಹೇಳುತ್ತಲೇ ಇದ್ದನು. ಯಾರೊಬ್ಬರೂ ಆ ಕಡೆಗೆ ಗಮನ ಕೊಡಲಿಲ್ಲ.



ದುರ್ಯೋಧನನು ದ್ರೌಪದಿಯನ್ನು ನೋಡಿ ನಕ್ಕು, ``ನಾನು ದಾಸಿಯಲ್ಲ ಎಂದು ಒರಲುವುದನ್ನು ನಿಲ್ಲಿಸು ದ್ರೌಪದಿ! ಅದು ಹಾಗಿರಲಿ. ನಿನ್ನ ಐವರು ಗಂಡಂದಿರು ಇಲ್ಲಿದ್ದಾರಲ್ಲ, ಅವರು ನಿನ್ನ ಪ್ರಶ್ನೆಗೆ ಉತ್ತರ ಕೊಡಲಿಲ್ಲ, ನಿನ್ನನ್ನು ದಾಸ್ಯದಿಂದ ವಿಮುಕ್ತಗೊಳಿಸಲಿಲ್ಲ. ನಿನ್ನ ಮರ್ಯಾದೆ ಹೋಗುತ್ತಿದ್ದಾಗಲೂ ಸಹ ಸುಮ್ಮನಿದ್ದರಲ್ಲವೆ? ಯುಧಿಷ್ಠಿರನು ಹೇಳುವುದನ್ನು ಕೇಳಲು ನಾನು ಕಾತುರತೆಯಿಂದಿದ್ದೇನೆ. ನೀನು ಅವನಿಗೆ ಸೇರಿದವಳೋ ನನಗೆ ಸೇರಿದವಳೋ ಎಂದು ಅವನೇ ಹೇಳಲಿ. ನಿನ್ನ ಭವಿಷ್ಯವನ್ನು ಅನಂತರ ನಿರ್ಧರಿಸೋಣ" ಎನ್ನಲು, ಯುಧಿಷ್ಠಿರನು ಇನ್ನಷ್ಟು ತಲೆ ತಗ್ಗಿಸಿದನೆ ಹೊರತು ಮಾತನಾಡಲಿಲ್ಲ. ದುರ್ಯೋಧನನು ನಗುತ್ತ, ``ನೋಡು ದ್ರೌಪದಿ! ನಿನ್ನ ಗಂಡಂದಿರೆಲ್ಲರೂ ಸುಮ್ಮನಿರುವರು. ನಾನೇ ನಿನ್ನ ಪ್ರಶ್ನೆಗೆ ಉತ್ತರ ಕೊಡುವೆ. ನೀನು ಸ್ವತಂತ್ರಳು. ಈ ಐವರು ಇನ್ನು ಮುಂದೆ ನಿನ್ನ ಗಂಡಂದಿರಲ್ಲ. ನೀನು ನಮ್ಮಲ್ಲಿಯೆ ಒಬ್ಬನನ್ನು ಆರಿಸಿಕೊಳ್ಳಬಹುದು. ನೀನು ದಾಸಿಯಾಗುವುದಕ್ಕೆ ಹುಟ್ಟಿದವಳಲ್ಲ, ಚಕ್ರವರ್ತಿನಿ ಎನ್ನಿಸಿಕೊಳ್ಳಲು ಹುಟ್ಟಿದವಳು. ದುರದೃಷ್ಟವಂತರಾದ ಇವರನ್ನು ಬಿಟ್ಟುಬಿಡು. ಯುಧಿಷ್ಠಿರನು ತನಗೆ ನಿನ್ನ ಮೇಲೆ ಹಕ್ಕೇನೂ ಇಲ್ಲವೆಂದು ಸಭೆಗೆ ತಿಳಿಸಿಬಿಡಲಿ!" ಎಂದನು. ದುರ್ಯೋಧನನ ಈ ಮಾತುಗಳನ್ನು ಭೀಮನಿಗೆ ತಡೆಯಲಾಗಲಿಲ್ಲ. ``ನಮ್ಮಣ್ಣನ ಮೇಲಣ ಗೌರವದಿಂದಲ್ಲದಿದ್ದರೆ ನಿಮ್ಮನ್ನೆಲ್ಲ ಎಂದೋ ಕೊಂದು ಬಿಡುತ್ತಿದ್ದೆ. ಅವನು ನಾವು ಈ ಮನುಷ್ಯನ ದಾಸರು ಎಂದು ಹೇಳಿದೊಡನೆ ನಾವೆಲ್ಲ ಒಪ್ಪಿಕೊಂಡೆವು; ಏಕೆ? ನಮಗೆ ಅವನೆಂದರೆ ದೇವರ ಸಮಾನ. ಯುಧಿಷ್ಠಿರನಿಗಾಗಿ ಅಲ್ಲದಿದ್ದರೆ ಈ ಘಟನೆ ಇಷ್ಟು ದೂರ ಹೋಗುವುದಕ್ಕೆ ನಾವು ಬಿಡುತ್ತಿರಲಿಲ್ಲ. ಅಲ್ಲದಿದ್ದರೆ ನಮ್ಮ ರಾಣಿಯ ಮುಡಿಯನ್ನು ಹಿಡಿದೆಳೆದ ಈ ದುರುಳ ದುಶ್ಶಾಸನ ಇಲ್ಲಿಯವರೆಗೆ ಬದುಕಿರುತ್ತಿದ್ದನೆ? ನನ್ನ ಈ ಬಾಹುಗಳನ್ನು ನೋಡು. ಅವುಗಳ ಶಕ್ತಿಯನ್ನು ಜ್ಞಾಪಿಸಿಕೋ. ಇಂದ್ರನೂ ಸಹ ನನ್ನ ದೃಢಾಲಿಂಗನವನ್ನು ಸಹಿಸಿಕೊಳ್ಳಲಾರ. ನಮ್ಮಣ್ಣನ ಧರ್ಮದಿಂದಾಗಿ, ಅರ್ಜುನನ ದಾಕ್ಷಿಣ್ಯದಿಂದಾಗಿ, ನನ್ನ ಕೈ ಕಟ್ಟಿದಂತಾಗಿದೆ. ಇಲ್ಲದಿದ್ದರೆ ಇಷ್ಟುಹೊತ್ತಿಗೆ ನಿಮ್ಮೆಲ್ಲರ ಜೀವವನ್ನೂ ತೆಗೆದಿರುತ್ತಿದ್ದೆ!" ಸಿಟ್ಟನ್ನು ನಿಯಂತ್ರಿಸಿಕೊಳ್ಳುವ ಕಷ್ಟದಿಂದಾಗಿ ಏದುಸಿರು ಬಿಡುತ್ತಿದ್ದ ಭೀಮನ ಮುಖದಿಂದ ಬೆವರಿಳಿಯುತ್ತಿತ್ತು.



ರಾಧೇಯನು ``ದ್ರೌಪದಿ, ನಾನು ಹೇಳುವುದನ್ನು ಕೇಳು. ನೀನೀಗ ದಾಸಿಯೆಂಬುದು ಸತ್ಯ. ದಾಸಿಗೆ ಆಸ್ತಿಯಿಲ್ಲ; ನಿನ್ನ ಗಂಡಂದಿರೂ ದಾಸರಾದ್ದರಿಂದ ಅವರಿಗೆ ನಿನ್ನ ಮೇಲೇನೂ ಹಕ್ಕಿಲ್ಲ. ಧಾರ್ತರಾಷ್ಟ್ರರೇ ನಿನ್ನ ಯಜಮಾನರುಗಳು. ಅವರ ಅಂತಃಪುರಕ್ಕೆ ಹೋಗು. ಅವರಲ್ಲಿಯೇ ದ್ಯೂತವನ್ನು ಆಡದವನೊಬ್ಬನನ್ನು ಕಟ್ಟಿಕೋ. ದಾಸಿಗೆ ತನಗೆ ಬೇಕಾದವನನ್ನು ಕಟ್ಟಿಕೊಳ್ಳುವ ಹಕ್ಕಿದೆ" ಎನ್ನಲು, ಅವನ ಮಾತುಗಳು ಕೂರಲುಗಿನಂತೆ ಭೀಮನನ್ನು ನೋಯಿಸಿದವು. ಅವನು ಯುಧಿಷ್ಠಿರನ ಕಡೆಗೆ ನೋಡುತ್ತ. ``ನಾನು ರಾಧೇಯನನ್ನು ದೂಷಿಸಲಾರೆ. ದಾಸಿಯ ಹಕ್ಕು ಏನೆಂದು ಅವನು ಹೇಳುತ್ತಿದ್ದಾನೆಯಷ್ಟೆ. ಬದಲಿಗೆ ನಿನ್ನನ್ನು ದೂಷಿಸುತ್ತೇನೆ-ನೀನು ಇಷ್ಟೊಂದು ಮೂರ್ಖನಾಗದೇ ಇದ್ದಿದ್ದರೆ ಶತ್ರುಗಳಿಗೆ ಹೀಗೆಲ್ಲ ಮಾತನಾಡಲು ಸಾಧ್ಯವಾಗುತ್ತಿತ್ತೆ?" ಎಂದು ಹಾವಿನಂತೆ ನಿಟ್ಟುಸಿರು ಬಿಡುತ್ತ, ತನ್ನನ್ನು ತಾನು ನಿಯಂತ್ರಿಸಿಕೊಡನು.



ರಾಧೇಯನ ಮಾತಿನೊಂದ ದುರ್ಯೋಧನನಿಗೆ ಖುಷಿಯಾಯಿತು. ಅವನು ಯುಧಿಷ್ಠಿರನನ್ನು, ``ನಿನ್ನ ಸಮ್ಮುಖದಲ್ಲಿ ಭೀಮಾರ್ಜುನರೂ ನಕುಲಸಹದೇವರೂ ಮಾತನಾಡಲಾರದೆ ಸುಮ್ಮನಿದ್ದಾರೆ. ದ್ರೌಪದಿಯ ಪ್ರಶ್ನೆಗೆ ಉತ್ತರವನ್ನು ಹೇಳು. ಅವಳು ಸ್ವತಂತ್ರಳೇ ಅಥವಾ ದಾಸಿಯೇ?" ಎಂದು ಕೇಳಿದನು. ಯುಧಿಷ್ಠಿರನು ಸುಮ್ಮನಿರಲು, ಅಧಿಕಾರಮತ್ತನಾದ ಪಾಪಿ ದುರ್ಯೋಧನನು, ಕಾಲ ಪ್ರೇರಿತನಾಗಿ ಮುಗುಳ್ನಗುತ್ತ ರಾಧೇಯನನ್ನು ನೋಡಿದನು; ದುಷ್ಟ ನಗುವನ್ನು ನಗುತ್ತ ಛೇಡಿಸುವ ರೀತಿಯಲ್ಲಿ ಭೀಮನನ್ನು ನೋಡಿದನು; ಭೀಮನ ದೃಷ್ಟಿ ತನ್ನ ಮೇಲಿರುದನ್ನು ಖಚಿತಪಡಿಸಿಕೊಂಡು, ದ್ರೌಪದಿಗೆ ತನ್ನ ಎಡತೊಡೆಯನ್ನು ತೋರಿಸಿದನು.



ತುಳಿಯಲ್ಪಟ್ಟ ಸರ್ಪದಂತೆ ಮೇಲೆದ್ದ ಭೀಮನು ಕೆಂಗಣ್ಣುಗಳಿಂದ ದುರ್ಯೋಧನನನ್ನು ನೋಡುತ್ತ, ``ಆ ತೊಡೆಯನ್ನು ಮುರಿಯದಿದ್ದರೆ, ನನ್ನ ಪಿತೃಗಳ ಲೋಕವು ನನಗೆ ದೊರಕದಿರಲಿ. ಆ ತೊಡೆಯನ್ನು ಈ ನನ್ನ ಗದೆಯಿಂದಲೇ ಮುರಿಯುವೆನು. ಇಲ್ಲವಾದರೆ ಚಿರಕಾಲ ನನಗೆ ನರಕ ಪ್ರಾಪ್ತವಾಗಲಿ" ಎಂದು ಪ್ರತಿಜ್ಞೆ ಮಾಡಿದನು. ರಾಧೇಯನು ತಿರಸ್ಕಾರದಿಂದ ಭೀಮನನ್ನು ನೋಡುತ್ತ, ``ದುಶ್ಶಾಸನ, ಏಕೆ ತಡಮಾಡುವೆ? ಇವಳನ್ನು ಅಂತಃಪುರಕ್ಕೆ ಕರೆದುಕೊಂಡು ಹೋಗು. ದುರ್ಯೋಧನನೇ ಸ್ವೀಕರಿಸುತ್ತಾನೆ" ಎನ್ನಲು, ದುಶ್ಶಾಸನನು ಪುನಃ ದ್ರೌಪದಿಯನ್ನು ಎಳೆಯತೊಡಗಿದನು. ದ್ರೌಪದಿಯು ಪುನಃ ಗೋಳಿಡುತ್ತ, ಹಿರಿಯರನ್ನು ಬೇಡಿಕೊಳ್ಳತೊಡಗಿದಳು. ಆದರೆ ಯಾರೂ ಮಾತನಾಡಲಿಲ್ಲ. ವಿದುರನು ಅವಳನ್ನು ಸಮಾಧಾನಮಾಡುತ್ತ, ಪುನಃ ಧೃತರಾಷ್ಟ್ರನನ್ನು ಸದ್ವರ್ತನೆ ತೋರುವಂತೆ ಕೇಳಿಕೊಂಡದ್ದು ವ್ಯರ್ಥವಾಯಿತು. ಭೀಮನು ಮತ್ತೆ ``ಎಲ್ಲರೂ ಗಮನವಿಟ್ಟು ಕೇಳಿರಿ. ನಾನು ಈ ದುರ್ಯೋಧನನನ್ನೂ, ಅರ್ಜುನನು ರಾಧೇಯನನ್ನೂ, ಸಹದೇವನು ಈ ದುಷ್ಟ ದ್ಯೂತಗಾರ ಶಕುನಿಯನ್ನೂ ಯುದ್ಧದಲ್ಲಿ ಕೊಲ್ಲುವೆವು. ನಾನು ದುರ್ಯೋಧನನ ತೊಡೆಯನ್ನು ಗದೆಯಿಂದ ಮುರಿದು ಅವನ ತಲೆಯನ್ನು ಮೆಟ್ಟುವೆನು; ದುಶ್ಶಾಸನನ ಎದೆ ಬಗೆದು ರಕ್ತವನ್ನು ಕುಡಿಯುವೆನು" ಎಂದು ಪ್ರತಿಜ್ಞೆ ಮಾಡಿದನು. ಅರ್ಜುನನು ``ಭೀಮ, ಮನೆಯೊಗಳಗೆ ಅವಿತಿರುವವರಿಗೆ ಹೊರಗೆ ಕಾಯುತ್ತಿರುವ ಅಪಾಯದ ಅರಿವಿರುವುದಿಲ್ಲ. ನಿನ್ನ ಮಾತು ಮಾತು ನಿಜವಾಗುತ್ತದೆ. ಈ ಭೂಮಿಯು ಈ ನಾಲ್ಕು ಜನರ ರಕ್ತವನ್ನು ಕುಡಿಯುವುದು ಖಂಡಿತ. ಈಗ ನನ್ನ ಪ್ರತಿಜ್ಞೆಯನ್ನು ಕೇಳಿರಿ. ನನ್ನಣ್ಣನ ಮಾತಿನಂತೆ ನಾನು ಯುದ್ಧದಲ್ಲಿ ರಾಧೇಯನನ್ನೂ ಅವನ ಜೊತೆಯವರನ್ನೂ ಕೊಂದು ಯಮಸದನಕ್ಕೆ ಅಟ್ಟುವೆನು. ಹಿಮವಂತನು ಚಲಿಸಬಹುದು, ಸೂರ್ಯನು ತನ್ನ ಪಥವನ್ನು ಬದಲಿಸಬಹುದು, ಚಂದ್ರನು ತನ್ನ ತಣಪನ್ನು ಕಳೆದುಕೊಳ್ಳಬಹುದು; ಆದರೆ ನಾನು ಈ ಪ್ರತಿಜ್ಞೆಯನ್ನು ನೆರವೇರಿಸಿಯೇ ತೀರುವೆನು" ಎಂದನು. ಸಹದೇವನು ``ಗಾಂಧಾರರಿಗೆ ಕಳಂಕವಾಗಿರುವ ಶಕುನಿಯೆ, ನೀನೆಸೆದ ದಾಳಗಳೇ ನಿನ್ನ ಮೃತ್ಯು. ಯುದ್ಧದಲ್ಲಿ ವೀರನಂತೆ ನನ್ನನ್ನೆದುರಿಸುವೆಯೆಂದು ಭಾವಿಸುವೆ. ಒಂದುವೇಳೆ ಹಾಗೆ ಎದುರಿಸಿದರೆ, ನಿನ್ನನ್ನೂ ನಿನ್ನವರನ್ನೂ ನಾನು ಕೊಲ್ಲುವುದು ಖಂಡಿತ" ಎಂದು ಪ್ರತಿಜ್ಞೆ ಮಾಡಿದನು. ನಕುಲನು ``ನಾನು ಶಕುನಿಯ ಮಗ ಊಲೂಕನನ್ನು ಕೊಲ್ಲುವೆ. ಇವರೆಲ್ಲರೂ ಪಾಂಡವರಿಂದ ಸದ್ಯದಲ್ಲಿಯೇ ನಡೆಯಲಿರುವ ಯುದ್ಧದಲ್ಲಿ ಹತರಾಗುವರು. ಇದರಲ್ಲಿ ಸಂಶಯವಿಲ್ಲ" ಎಂದನು.



ಪಾಂಡವರು ಪ್ರತಿಜ್ಞೆ ಮಾಡುತ್ತಿದ್ದಂತೆ ಅಂತರಿಕ್ಷದಿಂದ ಪುಷ್ಪವೃಷ್ಟಿಯಾಯಿತು. ಗಾಂಡೀವಧಾರಿಯಾಗಿ, ಕೋಪದಿಂದ ಕೆಂಪಾದ ಕಣ್ಣುಳ್ಳವನಾಗಿ, ಬಾರಿಬಾರಿಗೂ ನಿಟ್ಟುಸಿರು ಬಿಡುತ್ತ, ``ಯುಧಿಷ್ಠಿರನೊಬ್ಬನು ಇಲ್ಲದಿದ್ದರೆ, ಈ ಪಾಪಿಗಳನ್ನು ಕೊಲ್ಲಲು ಯುದ್ಧಕ್ಕಾಗಿ ಕಾಯಬೇಕಾಗಿರಲಿಲ್ಲ; ಈಗಲೆ ಇವರನ್ನೆಲ್ಲ ಮುಗಿಸಿಬಿಡುತ್ತಿದ್ದೆ!" ಎಂದು ಅರ್ಜುನನು ಗರ್ಜಿಸಲು, ಭೂಮಿ ಗಡಗಡನೆ ನಡುಗಿತು. ಯುಧಿಷ್ಠಿರನು ಅರ್ಜುನನ ಕೈಹಿಡಿದು ಪ್ರೀತಿ ಕೃತಜ್ಞತೆಗಳಿಂದ ಒತ್ತುತ್ತ, ``ಅರ್ಜುನ, ಕೋಪದಲ್ಲಿ ನಿನ್ನನ್ನು ನೀನು ಮರೆಯಬೇಡ. ಧರ್ಮವನ್ನು ಕಡೆಗಣಿಸಬೇಡ. ರಾಧೇಯನ ಮಾತನ್ನು ಕೇಳಿ ನನಗೂ ಅವನನ್ನು ಸುಟ್ಟುಬಿಡಬೇಕೆನ್ನಿಸಿತು. ಆದರೆ ಅದೇಕೋ ಅವನ ಪಾದಗಳನ್ನು ನೋಡಿದರೆ, ನಮ್ಮ ತಾಯಿ ಕುಂತಿಯ ಪಾದಗಳನ್ನೇ ನೋಡಿದಂತಾಗುತ್ತದೆ; ಕೋಪ ಅಡಗಿಹೋಗುತ್ತದೆ" ಎಂದು ಅವನನ್ನು ಸಮಾಧಾನ ಮಾಡಿದನು.



ಸಭೆಯನ್ನು ಪುನಃ ಮೌನ ಮುಸುಕಿತು. ಸಂಜೆಯಾಗುತ್ತ ಬಂದಾಗ, ಧೃತರಾಷ್ಟ್ರನಿಗೆ ಪ್ರಸಂಗ ಕೈಮೀರಿಹೋಗುತ್ತಿದೆಯೆನ್ನಿಸಿತು. ಪಾಂಡವರ ಪ್ರತಿಜ್ಞೆಗಳನ್ನು ಕೇಳಿದ ಅವನ ಹೃದಯ ಗದಗುಟ್ಟಿ ನಡುಗಿತು. ``ಅಯ್ಯೋ ಮಗನೆ, ನಿನ್ನ ಮೂರ್ಖತನದಿಂದಾಗಿ ಶುದ್ಧಾತ್ಮಳಾದ ದ್ರೌಪದಿಯನ್ನು ಅವಮಾನಿಸಿದೆ. ಈಗ ನಿನ್ನ ಸಾವು ನಿಶ್ಚಿತ" ಎಂದು ಬೈದು, ದ್ರೌಪದಿಯನ್ನು ಅನುನಯಗೊಳಿಸುತ್ತ, ``ಮಗಳೆ, ನೀನು ಕೇಳುವ ವರವನ್ನು ನಾನು ಕೊಡುವೆ. ತಾನೇನು ಮಾಡುತ್ತಿದ್ದೇನೆ ಎಂಬುದರ ಅರಿವಿಲ್ಲದನನ್ನ ಮಗನನ್ನು ಕ್ಷಮಿಸು" ಎಂದನು. ದ್ರೌಪದಿಯು ``ಹಾಗಿದ್ದರೆ ಯುಧಿಷ್ಠಿರನನ್ನು ದಾಸ್ಯದಿಂದ ವಿಮುಕ್ತಿಗೊಳಿಸು!" ಎಂದು ವರವನ್ನು ಕೇಳಿದಳು. ``ಹಾಗೆಯೇ ಆಗಲಿ!" ಎಂದ ಧೃತರಾಷ್ಟ್ರನು `ಇನ್ನೂ ಒಂದು ವರವನ್ನು ಕೇಳು' ಎನ್ನಲು ದ್ರೌಪದಿಯು ``ಪಾಂಡವರೆಲ್ಲರೂ ದಾಸ್ಯದಿಂದ ಮುಕ್ತರಾದರು ಎಂದು ಸಭೆಗೆ ಘೋಷಿಸು" ಎಂದಳು. ಧೃತರಾಷ್ಟ್ರನು ಹಾಗೆಯೇ ಮಾಡಿ, `ಮತ್ತೂ ಒಂದು ವರವನ್ನು ಕೇಳು ಮಗಳೇ' ಎಂದನು. ದ್ರೌಪದಿಯು, ``ಎರಡು ವರಗಳಿಗಿಂತ ಹೆಚ್ಚು ಕೇಳುವುದು ಧರ್ಮವಾಗದು. ನಾನು ಲೋಭಿಯಾಗಲಾರೆ. ನನ್ನ ಗಂಡಂದಿರು ಈಗ ಸ್ವತಂತ್ರರು. ನಾನು ತೃಪ್ತಳು!" ಎಂದಳು.



ರಾಧೇಯನು, ``ಮುಳುಗುತ್ತಿದ್ದ ಪಾಂಡವರ ಜೀವವು ಅದೃಷ್ಟವಶಾತ್ ದ್ರೌಪದಿಯೆಂಬ ದೋಣಿಯಿಂದ ಉಳಿಯಿತು. ಅಂತೂ ಹೆಂಗಸೊಬ್ಬಳೆಂದ ಪಾರಾದಂತಾಯಿತು" ಎಂದು ಪುನ: ಹೀಗಳೆದನು. ಕೋಪಗೊಂಡು ಮೇಲೆದ್ದ ಭೀಮನನ್ನು ಯುಧಿಷ್ಠಿರನು. ತಡೆದನು. ಪಾಂಡವರನ್ನು ಮುಕ್ತಗೊಳಿಸಿದ್ದು ಇಷ್ಟವಾಗದ ಕೌರವರೂ ರಾಧೇಯನೂ ಅವಸರದಲ್ಲಿ ಸಭಾತ್ಯಾಗ ಮಾಡಿದರು. ಯುಧಿಷ್ಠಿರನು ದೊಡ್ಡಪ್ಪ, ನಾವು ಯವಾಗಲೂ ನಿನ್ನ ಆಜ್ಞಾರಾಧಕರು. ಈಗೇನು ಮಾಡಭೇಕು ಹೇಳು" ಎನ್ನಲು ಧೃತರಾಷ್ಟ್ರನು, ``ಯುಧಿಷ್ಠಿರ,ನಿನ್ನ ವಿನಯ ನನ್ನ ಹೃದಯವನ್ನು ಸೊರೆಗೊಂಡಿದೆ. ನೀನು ವಿವೇಕಿ. ಸಭ್ಯ, ಒಳ್ಳೆಯವನು. ಈಗ ಆದುದನ್ನು ಮರೆತುಬಿಡು. ಸಜ್ಜನರು ಇತರರ ಒಳ್ಳೆಯದನ್ನೇ ನೋಡುವರು. ದುರ್ಯೋಧನನು ಮಾಡಿದ ಪಾಪಗಳನ್ನು ಮನ್ನಿಸಿಬಿಡು. ಇಂದು ನೀನು ದ್ಯೂತದಲ್ಲಿ ಕಳೆದುಕೊಂಡ ಎಲ್ಲವನ್ನೂ ನೀನು ಹಿಂದಕ್ಕೆ ತೆಗೆದುಕೊಳ್ಳಬೇಕೆಂದು ನನ್ನ ಅಪೇಕ್ಷೆ, ಕೋರಿಕೆ. ಆದದ್ದನ್ನೆಲ್ಲ ಕೆಟ್ಟ ಕನಸಿನಂತೆ ಮರೆತು ನಿಮ್ಮ ಖಾಂಡವಪ್ರಸ್ಥಕ್ಕೆ ಹಿಂದಿರುಗಿ ರಾಜ್ಯವಾಳಿಕೊಂಡಿರಿ. ನನ್ನ ಮಗನ ಮೇಲೆ ಕರುಣೆಯಿಡಿ!" ಎಂದನು. ತಲೆತಗ್ಗಿಸಿ ಎಲ್ಲವನ್ನೂ ಕೇಳಿದ ಯುಧಿಷ್ಠಿರನು ಹಿರಿಯರಿಗೆಲ್ಲ ನಮಸ್ಕರಿಸಿ, ತಮ್ಮಂದಿರೊಡನೆ ದ್ರೌಪದಿಯನ್ನೂ ಕರೆದುಕೊಂಡು ರಥವೇರಿ ಇಂದ್ರಪ್ರಸ್ಥ ಕಡೆಗೆ ಪ್ರಯಾಣಮಾಡಿದನು.



* * * * 



ಪಾಂಡವರು ಹೋಗುವುದನ್ನು ನೋಡಿದ ದುಶ್ಶಾಸನನು ದುರ್ಯೋಧನಾದಿಗಳಿದ್ದಲ್ಲಿಗೆ ಬಂದು ``ಅಪ್ಪ ಎಲ್ಲವನ್ನೂ ಪಾಂಡವರಿಗೆ ಹಿಂದಿರುಗಿಸಿ ಬಿಟ್ಟರು. ಪಾಂಡವರೀಗ ಇಂದ್ರಪ್ರಸ್ಥಕ್ಕೆ ಹೋಗುತ್ತಿದ್ದಾರೆ." ಎನ್ನಲು ದುರ್ಯೋಧನನನ್ನು ಕೋಪ ಹೇಳತೀರದಾಯಿತು. ಅವನು ತಂದೆಯ ಬಳಿಗೆ ಹೋಗಿ,``ಏನಿದು ಹುಚ್ಚುತನ, ಅಪ್ಪ? ನಾನು ಅಷ್ಟೆಲ್ಲವನ್ನೂ ಕಷ್ಟಪಟ್ಟು ಮಾಡಿದ ಮೇಲೆ,ನೀನು ಹೀಗೆ ಮಾಡುವುದೆ? ಅಪಮಾನಿತರಾದ ಪಾಂಡವರೀಗ ಮೊದಲಿಗಿಂತಲೂ ಅಪಾಯಕಾರಿಗಳು. ಈ ಹಿಂದೆಯೂ, ಅವರು ನಮಗೆ ಅಜೇಯರೆಂದಲ್ಲವೆ ನಾವು ದ್ಯೂತಕ್ಕ ಮೊರೆಹೋದದ್ದು? ಅದರಲ್ಲಿ ನಾವು ಗೆದ್ದೆವೆಂದೇ ಅವರನ್ನು ಅಷ್ಟೊಂದು ಅವಮಾನಿಸಿದೆವು. ಈಗ, ಅವರ ಕೋಪದ ಭುಗಿಲು ಜ್ವಲಂತವಾಗಿರುವಾಗ, ಸೇಡು ತೀರಿಸಿಕೊಳ್ಳಲು ನೀನು ಅವರಿಗೆ ಅವಕಾಶ ಮಾಡಿಕೊಟ್ಟೆ. ಇಂದ್ರಪ್ರಸ್ಥಕ್ಕೆ ಹೋದ ಮೇಲೆ ಅವರು ಸುಮ್ಮನೇ ಇರುವರೆ? ಇಲ್ಲಿ ಆದುದನ್ನೆಲ್ಲಾ ಕೇಳಿದ ಮೇಲೆ ದ್ರುಪದ ಧೃಷ್ಟದ್ಯುಮ್ನರು ಸುಮ್ಮನಿರುವರೆ? ನೀನು ಮಾಡಿರುವ ಈ ಹುಚ್ಚುತನದ ಕಾರ್ಯವನ್ನು ಸರಿಪಡಿಸಲೇಬೇಕು. ಅಪ್ಪಾ, ಅವರನ್ನು ಮತ್ತೊಮ್ಮೆ ಕರೆಕಳುಹಿಸು. ಇನ್ನೊಂದೇ ಒಂದು ಆಟವಾಡಿ, ಗೆದ್ದವರು ಇಡೀ ರಾಜ್ಯವನ್ನು ಆಳಲಿ; ಸೋತವರು ತಮ್ಮಂದಿರೊಡನೆ ಹನ್ನೆರಡು ವರ್ಷ ವನವಾಸ ಮಾಡಿ ಹದಿಮೂರನೆಯ ವರ್ಷ ಅಜ್ಞಾತವಾಸದಲ್ಲಿರಬೇಕು; ಆಗ ಅವರೆಲ್ಲಿರುವರೆಂದು ತಿಳಿದು ಬಿಟ್ಟರೆ, ಪುನ: ಹನ್ನೆರಡು ವರ್ಷ ವನವಾಸ-ಎಂದು ಹೇಳಿ ಕಳುಹಿಸು. ನೀನು ಹೇಳಿ ಕಳುಹಿಸಿದರೆ ಅವರು ಬಂದೇ ಬರುತ್ತಾರೆ. ಶಕುನಿ ಮಾವ ಇರುವಾಗ ಆಟದಲ್ಲಿ ಏನಾಗುತ್ತದೆ ಎಂದು ಹೇಳಬೇಕಾಗಿಯೇ ಇಲ್ಲ. ಹದಿಮೂರು ವರ್ಷ ಕಳೆಯುವಷ್ಟರಲ್ಲಿ ನಾನು ನನ್ನ ಸ್ಥಾನವನ್ನು ಭದ್ರಪಡಿಸಿಕೊಂಡಿರುತ್ತೇನೆ. ಆನಂತರ ಯುದ್ಧವಾದರೂ ಚಿಂತೆಯಿಲ್ಲ. ಆಗ ಅವರಿಗೆ ರಾಜ್ಯ ಖಂಡಿತಕ್ಕೂ ಸಿಕ್ಕಲಾರದು" ಎಂದನು.



ಸಭೆಯಲ್ಲಿ ಯಾರೂ ಇದನ್ನು ಒಪ್ಪಲಿಲ್ಲ. ರಾಜನು ಎಂದಿನಂತೆ ಮಗನ ಕೈಗೊಂಬೆಯಾಗಿದ್ದನು. ಅವನ ಮನಸ್ಸು ಮತ್ತೆ ಪಾಂಡವರ ಸಿರಿಯ ಬಗ್ಗೆ ಲೋಭಕ್ಕೊಳಗಾಗಿತ್ತು. ಗಾಂಧಾರಿಯು, ``ಮಗನೇ, ನೀನು ಹುಟ್ಟಿದಾಗ ವಿದುರನ ಮಾತಿನಂತೆ ನಿನ್ನನ್ನು ನಾನು ನಾಶಪಡಿಸಬೇಕಾಗಿತ್ತು. ಈ ಘೋರ ಅನ್ಯಾಅಕ್ಕೆ ನೀನೇ ಕಾರಣಕರ್ತ. ಈಗಲೂ ನನ್ನ ಮಾತನ್ನು ಕೇಳು. ನೀನು ಪಶ್ಚಾತ್ತಾಪಪಟ್ಟು ಮುಂದೆ ಪಾಪ ಮಾಡುವುದಿವುಲ್ಲವೆಂದರೆ ಪಾಂಡವರು ತಮ್ಮ ಪ್ರತಿಜ್ಞೆಗಳನ್ನು ಮರೆತು ನಿನ್ನನ್ನು ಕ್ಷಮಿಸಿ ಜೀವದಾನ ಮಾಡಿಯಾರು. ರಾಜನನ್ನು ಪೀಡಿಸಬೇಡ" ಎಂದಳು. ಆದರೂ ಧೃತರಾಷ್ಟ್ರನು ``ನನ್ನ ಮಗ ಕೇಳಿದ್ದನ್ನು ನಾನು ಇಲ್ಲವೆನ್ನಲಾರೆ" ಎಂದು ಪಾಂಡವರನ್ನು ಕರೆತರುವುದಕ್ಕಾಗಿ ದೂತನನ್ನು ಕಳುಹಿಸಿಯೇ ಬಿಟ್ಟನು. ದೂತನು ವೇಗವಾಗಿ ಪ್ರಯಾಣಮಾಡಿ ಇನ್ನೂ ಮಾರ್ಗಮಧ್ಯದಲ್ಲಿಯೇ ಪಯಣಿಸುತ್ತಿದ್ದ ಪಾಂಡವರನ್ನು ಸಂಧಿಸಿ ``ನಿಮ್ಮ ದೊಡ್ಡಪ್ಪ, ನೀವು ಹಸ್ತಿನಾಪುರಕ್ಕೆ ಹಿಂದಿರುಗಿ ಇನ್ನೊಂದೇ ಒಂದು ಆಟವಾಡಿ ಎಲ್ಲವನ್ನೂ ನಿರ್ಧರಿಸಿಕೊಂಡು ಹೋಗುವಂತೆ ಕರೆದಿದ್ದಾರೆ" ಎಂದು ಯುಧಿಷ್ಠಿರನಿಗೆ ಸಮಾಚಾರ ಕೊಟ್ಟನು.



ಯುಧಿಷ್ಠಿರನು``ಸೃಷ್ಟಿಸಿದ ದೇವರು ಮಾನವ ಹೀಗೆಯೇ ಬದುಕಬೇಕೆಂದು ಮೊದಲೇ ನಿರ್ಣಯಿಸಿಬಿಟ್ಟಿರುತ್ತಾನೆ. ಅವನಿಗೆ ಸಿಕ್ಕುವ ಅದೃಷ್ಟವೋ ದುರದೃಷ್ಟವೋ ಎಲ್ಲವೂ ವಿಧಿಯ ಕೈಲ್ಲಿದೆ. ನಾವು ಅಸಹಾಯಕರು; ನಾವೇನು ಮಾಡಬೇಕೆಂದು ನಿರ್ಧರಿಸಲಾರದವರು. ಈಗ ನಾನು ಆ ಕೆಟ್ಟ ಆಟವನ್ನು ಮತ್ತೊಮ್ಮೆ ಆಡಬೇಕು ---ಏನಾಗುವುದೆಂದು ಗೊತ್ತಿದ್ದರೂ. ಹಾಗೆಯೇ ಆಗಲಿ" ಎನ್ನಲು, ಪಾಂಡವರು ಹಸ್ತಿನಾಪುರಕ್ಕೆ ಹಿಂದಿರುಗಿದರು.



* * * * 



ಅದೇ ಸಭಾಂಗಣ, ಅದೇ ಜನರು, ಅದೇ ಕುಹಕದ ನಗೆಯ ಶಕುನಿ, ಎಲ್ಲವೂ ಅದೇ. ಆದರೆ ಯುಧಿಷ್ಠಿರನ ಮನಸ್ಸು ಮಾತ್ರ ತುಂಬ ದುಃಖಿತವಾಗಿತ್ತು. ಬೇರೆ ಯಾರಾಗಿದ್ದರೂ ರಾಜನ ಮೇಲೆ ಕೋಪಗೊಳ್ಳುತ್ತಿದ್ದರು. ಆಟದ ಪಣವನ್ನು ಶಕುನಿ ಮತ್ತೋಮ್ಮೆ ಘೋಷಿಸಿದ. ``ಭವಿಷ್ಯವನ್ನು ನಿರ್ದರಿಸುವುದು ಒಂದೇ ಒಂದು ದಾಳದ ಎಸೆತ. ಗೆದ್ದವರು ಇಡೀ ಕುರುರಾಜ್ಯವನ್ನಾಳುವರು. ಸೋತವರು ಹನ್ನೆರಡು ವರ್ಷ ವನವಾಸವನ್ನೂ ಒಂದು ವರ್ಷ ಅಜ್ಞಾತವಾಸವನ್ನೂ ಮಾಡಬೇಕು. ಹದಿಮೂರನೆಯ ವರ್ಷ ಅವರೆಲ್ಲಿರುವರೆಂದು ತಿಳಿದುಬಿಟ್ಟರೆ, ಪುನಃ ಹನ್ನೆರಡು ವರ್ಷ ವನವಾಸ." ಯುಧಿಷ್ಠಿರ ತಗ್ಗಿಸಿದ ತಲೆಯನ್ನು ಮೇಲೆತ್ತಲಿಲ್ಲ. ಸಭೆಯಲ್ಲಿದ್ದ ಎಲ್ಲರೂ ಆಟವನ್ನು ತಡೆಯಲು ಪ್ರಯತ್ನಿಸಿದರು. ಆದರೂ ಸಾಧ್ಯವಾಗಲಿಲ್ಲ. ಶಕುನಿ ದಾಳವೆಸೆದ; `ಗೆದ್ದೆ' ಎಂದು ಘೋಷಿಸಿದ.



ಪಾಂಡವರು ವನವಾಸಕ್ಕೆ ಸಿದ್ಧರಾಗತೊಡಗಿದರು. ಮರದ ತೊಗಟೆ ಉಟ್ಟರು, ಜಿಂಕೆಯ ಚರ್ಮ ತೊಟ್ಟರು. ಇದನ್ನು ನೋಡಿದ ದುಶ್ಶಾಸನ ಮತ್ತಿತರ ಧಾರ್ತರಾಷ್ಟ್ರರು ಅವರನ್ನು ಗೇಲಿ ಮಾಡಿದರು. ಅದರಲ್ಲೂ ಭೀಮನನ್ನು ದುಶ್ಶಾಸನನು `ಹಸು!'ಎಂದು ಹಂಗಿಸಿದನು. ಭೀಮ ಈಗ ನಿಜಕ್ಕೂ ಕೋಪಗೊಂಡಿದ್ದನು. ``ಮೋಸದಿಂದ ರಾಜ್ಯವನ್ನು ಗೆದ್ದುಕೊಂಡು ನಿವು ಚಿರಕಾಲ ಮೆರೆಯುವಿರೆಂದುಕೊಂಡಿದ್ದೀರಿ. ಆದರೆ ಯುದ್ಧ ಪ್ರಾರಂಭವಾಗುವವರೆಗೆ ತಾಳಿ. ನೀವು ನೂರು ಜನರನ್ನೂ ನಾನು ಕೊಲ್ಲುತ್ತೇನೆ. ದುಶ್ಶಾಸನನ ರಕ್ತ ಕುಡಿಯುವಾಗ ನಾನು ಇದನ್ನೇ ನೆನಪಿಸುತ್ತೇನೆ! ಇನ್ನು ಹದಿನಾಲ್ಕು ವರ್ಷಗಳಷ್ಟೇ. ಅಮೇಲೆ, ನಿಮ್ಮ ಪಾಲಿಗೆ ನಾನು 'ಹಸು'ವೇ, ನಿಜವಾಗಿ" ಎಂದು ಹೇಳಿ, ಸಹೋದರರೊಂದಿಗೆ ಸಿಂಹದಂತೆ ನಡೆದನು.



ಯುದಿಷ್ಠಿರನು ಹಿರಿಯರನ್ನೆಲ್ಲ ಒಬ್ಬೊಬ್ಬರನ್ನಾಗಿ ಬೀಳ್ಕೊಂಡನು. ಯಾರೂ ಏನೂ ಮಾತನಾಡಲಿಲ್ಲ. ವಿದುರನು ಮಾತ್ರ, ``ಭಗವಂತನೇ ನಿಮ್ಮನ್ನು ರಕ್ಷಿಸಿ ನಿಮ್ಮ ಪ್ರತಿಜ್ಞೆಗಳನ್ನು ನೆರವೇರುವಂತೆ ಮಾಡುವನು. ಧಾರ್ತರಾಷ್ಟ್ರರಿಗಿನ್ನು ಉಳಿಗಾಲವಿಲ್ಲ. ನೀವು ಒಳ್ಳೆಯ ಕಾಲ ಬರುವವರೆಗೆ ಕಾಯಬೇಕು. ಕುಂತಿಗೆ ವನವಾಸ ಕಷ್ಟವಾಗುವುದು; ಅವಳನ್ನು ಇಲ್ಲಿಯೇ ಬಿಟ್ಟುಹೋಗಿ. ನನ್ನ ತಾಯಿಯಂತೆ ನಾನು ಅವಳನ್ನು ನೋಡಿಕೊಳ್ಳುತ್ತೇನೆ. ನೆಮ್ಮದಿಯಿಂದ ಹೋಗಿ ಬನ್ನಿ. ಪುನಃ ಭೇಟಿಯಾಗೋಣ" ಎಂದು ಹಾರ್ದಿಕವಾಗಿ ಬೀಳ್ಕೊಟ್ಟನು. ಪಾಂಡವರು ಭೀಷ್ಮ ದ್ರೋಣರೇ ಮುಂತಾದ ಹಿರಿಯರಿಗೆ ನಮಸ್ಕರಿಸಿ ವನವಾಸಕ್ಕೆ ಹೊರಟರು.



ಇಡಿಯ ನಗರವೇ ದುಃಖತಪ್ತವಾಗಿ ಎಲ್ಲೆಲ್ಲೂ ಮೌನದ ಕಾವಳ ಕವಿದಿತ್ತು. ರಾಜಮಾರ್ಗದಲ್ಲಿ ಹೋಗುತ್ತಿದ್ದ ಪಾಂಡವರನ್ನೂ ಕೂದಲು ಬಿರಿಹೊಯ್ದುಕೊಂಡು ಕಣ್ಣೀರುಗರೆಯುತ್ತಿದ್ದ ದ್ರೌಪದಿ ಯನ್ನೂ ಪುರಜನರು ನೋಡುತ್ತಿದ್ದರು. ಮರದ ತೊಗಟೆಗಳನ್ನೂ ಕೃಷ್ಣಾಜಿನಗಳನ್ನೂ ಧರಿಸಿದ ಪಾಂಡವರನ್ನು ಕುಂತಿಯು ಬೀಳ್ಕೊಡುತ್ತಿದ್ದ ದೃಶ್ಶವು ಹೃದಯವನ್ನೇ ಕಲಕುವಂತಿತ್ತು. ಕುಂತಿಗೆ ದ್ರೌಪದಿಯನ್ನು ನೋಡಿದಾಗಲಂತೂ ದುಃಖ ತಡೆಯದಾಯಿತು. ಅವಳು ದ್ರೌಪದಿಯನ್ನು ಗಾಢವಾಗಿ ಆಲಿಂಗಿಸಿ, ``ಮಗಳೆ, ನಿನ್ನ ಈ ಸ್ಥಿತಿಗೆ ಕಾರಣರಾದ ನನ್ನ ಮಕ್ಕಳ ಮೇಲೆ ದಯವಿಡು. ನೀನು ಒಳ್ಳೆಯವಳು; ಅಲ್ಲದಿದ್ದರೆ ನಿನ್ನ ಕ್ರೋಧಾಗ್ನಿಯಲ್ಲಿ ನನ್ನ ಮಕ್ಕಳೂ ಕೌರವರೂ ಎಲ್ಲರೂ ದಗ್ಧರಾಗಿ ಹೋಗುತ್ತಿದ್ದರು. ನೀನು ಅವರನ್ನು ಪ್ರೀತಿಸುವುದರಿಂದಲೇ ನನ್ನ ಮಕ್ಕಳು ಇನ್ನೂ ಬದುಕಿದ್ದಾರೆ. ಮುಂದೆ ಒಳ್ಳೆಯ ದಿನಗಳು ಬರಲಿವೆ. ಸಹದೇವನು ಸ್ವಲ್ಪ ಸೂಕ್ಷ್ಮ; ಅವನನ್ನು ಚೆನ್ನಾಗಿ ನೋಡಿಕೋ. ನಾನು ನಿನ್ನನ್ನು ಮನಸಾರೆ ಹರಸುತ್ತೇನೆ!" ಎನ್ನಲು, ದ್ರೌಪದಿಯು ``ಅಮ್ಮಾ, ಹಾಗೆಯೇ ಆಗಲಿ" ಎಂದು ಕುಂತಿಯ ಪಾದಗಳ ಮೇಲೆ ತಲೆಯಿಟ್ಟು ನಮಸ್ಕರಿಸಿದಳು. ಕುಂತಿಯೂ ಅವರೊಡನೆ ನಡೆದು ಹೋದಳು. ಸ್ವಲ್ಪ ದೂರ ಹೋದ ಮೇಲೆ ವಿದುರನು ಅವಳನ್ನು ಸಮಾಧಾನ ಮಾಡಿ ಕರೆತಂದನು. ಪಾಂಡವರು ವೇಗವಾಗಿ ನಡೆದು ಆ ದೂಷಿತ ಹಸ್ತಿನಾಪುರದಿಂದ ಹೊರಟುಹೋದರು.



ಒಬ್ಬನೇ ಕುಳಿತಿದ್ದ ಧೃತರಾಷ್ಟ್ರನಿಗೀಗ ಮಹಾ ಭಯವುಂಟಾಯಿತು. ವಿದುರನಿಗೆ ಹೇಳಿ ಕಳುಹಿಸಿದನು. ಅವನು ಬರಲು,``ವಿದುರ, ಏನಾಗಿಹೋಯಿತು! ನನಗೆ ತುಂಬ ಭಯವಾಗುತ್ತಿದೆ. ಪಾಂಡವರು ಹೋಗುವ ಮೊದಲು ಏನು ಹೇಳಿದರು? ಅವರು ಹೇಗೆ ನಗರವನ್ನು ಬಿಟ್ಟರು? ಎಲ್ಲವನ್ನೂ ನನಗೆ ಹೇಳು" ಎಂದನು. ವಿದುರನು, "ಹಸ್ತಿನಾಪುರದ ಜನರೆಲ್ಲರೂ ಪಾಂಡವರೊಂದಿಗೆ ಕಾಡಿಗೆ ಹೋಗುವುದಕ್ಕೆ ಬಯಸಿದರು. ಯುಧಿಷ್ಠಿರನು ಅವರ ಪ್ರೀತಿಗಾಗಿ ದುಃಖಿಸುತ್ತ, ಅವರನ್ನು ಒತ್ತಾಯದಿಂದ ಹಿಂದಕ್ಕೆ ಕಳುಹಿಸಿದನು. ಕಣ್ೀರನ್ನು ಒರಸಿಕೊಳ್ಳುತ್ತ ಮನಸ್ಸಿಲ್ಲದ ಮನಸ್ಸಿನಿಂದ ಜನರು ಮನೆಗಳಿಗೆ ವಾಪಸಾಗುತ್ತಿದ್ದರು. ಕಣ್ಣುಗಳಿಂದಲೇ ಅವರು ಪಾಂಡವರನ್ನು ಅನುಸರಿಸಲು ಪ್ರಯತ್ನಿಸುತ್ತಿದ್ದರು. ಅಶ್ರುಧಾರೆಯಿಂದಾಗಿ ಅದೂ ಸಾಧ್ಯವಾಗುತ್ತಿರಲಿಲ್ಲ. ಯುಧಿಷ್ಠಿರನು ತನ್ನ ಮೇಲ್ವಸ್ತ್ರದಿಂದ ಮುಖವನ್ನು ಮುಚ್ಚಿಕೊಂಡು ತಮ್ಮಂದಿರೊಡನೆ ನಡೆದು ಹೋಗುತ್ತಿದ್ದನು. ದ್ರೌಪದಿಯು ತಲೆಕೂದಲನ್ನು ಮುಖದ ಮೇಲೂ ಭುಜಗಳ ಮೇಲೂ ಹರಡಿಕೊಂಡು ದುಃಖಿಸುತ್ತ ಹೋಗುತ್ತಿದ್ದಳು. ಗುರುವಾದ ಧೌಮ್ಯನು ರುದ್ರ ಹಾಗೂ ಯಮನನ್ನು ಸ್ತುತಿಸುವ ಸಾಮವೇದವನ್ನು ಪಠಿಸುತ್ತ, ಕುಶಾಗ್ರಗಳನ್ನು ಕೀಳುತ್ತ ಈ ಆರು ಜನರ ಜೊತೆಗೆ ಮುನ್ನಡೆಯುತ್ತಿದ್ದನು" ಎಂದನು. ರಾಜನು ``ಪಾಂಡವರ ನಡತೆಗೆ ಅರ್ಥವೇನಾದರೂ ಇದೆಯೆ?" ಎಂದು ಪ್ರಶ್ನಿಸಲು ವಿದುರನು, ``ನೀನ್ನೂ ನಿನ್ನ ಮಕ್ಕಳೂ ಧರ್ಮವನ್ನು ಮರೆಯಬಹುದು; ಆದರೆ ಯುಧಿಷ್ಠಿರನಲ್ಲ. ಅವನು ಸತ್ಪುರುಷ. ತಾನು ತನ್ನ ಕ್ರೋಧದ ಕಣ್ಣುಗಳಿಂದ ನೋಡಿದರೆ ನಗರವು ಉರಿದುಹೋಗುವುದೆಂದು ತಿಳಿದೇ ಅವನು ತನ್ನ ಮುಖವನ್ನು ಮುಚ್ಚಿಕೊಂಡಿದ್ದನು. ಹದಿಮೂರು ವರ್ಷಗಳ ನಂತರ ತಮ್ಮ ತಮ್ಮ ಗಂಡಂದಿರನ್ನೂ ಮಕ್ಕಳನ್ನೂ ಕಳೆದುಕೊಳ್ಳುವ ನಿನ್ನ ಸೊಸೆಯಂದಿರು ಹೀಗೆಯೇ ಹಸ್ತಿನಾಪುರದ ಬೀದಿಗಳಲ್ಲಿ ತಿರುಗಾಡಲಿರುವರು ಎಂಬುದನ್ನು ಸೂಚಿಸುವಂತೆ ದ್ರೌಪದಿಯು ಕೂದಲನ್ನು ಬಿರುಹೊಯ್ದುಕೊಂಡಿದ್ದಳು. ಧೃತರಾಷ್ಟ್ರನ ಮಕ್ಕಳಿಗೆ ಅಂತ್ಯಸಂಸ್ಕಾರಗಳನ್ನು ಮಾಡುವುದು ತಪ್ಪಿದ್ದಲ್ಲ ಎಂಬುದನ್ನು ಸೂಚಿಸುವಂತೆ ಧೌಮ್ಯನು ಕುಶಾಗ್ರಗಳನ್ನು ಕೀಳುತ್ತ ರುದ್ರಸಾಮಗಳನ್ನೂ ಮೃತ್ಯುಸಾಮಗಳನ್ನೂ ಪಠಿಸುತ್ತಿದ್ದನು. ಪಾಂಡವರು ಮಾತನಾಡುವುದು ಕಡಿಮೆಯಾದರೂ ಕಾರ್ಯಕ್ಷಮತೆಯುಳ್ಳವರು; ಅವರು ತಮ್ಮ ಪ್ರತಿಜ್ಞೆಗಳನ್ನು ಖಂಡಿತವಾಗಿಯೂ ಪೂರೈಸಿಕೊಳ್ಳುವರು" ಎಂದು ಹೇಳಿ ಜುಗುಪ್ಸೆಯಿಂದಲೂ ಕೋಪದಿಂದಲೂ ಅಲ್ಲಿಂದ ಹೊರಡುವಷ್ಟರಲ್ಲಿ ನಾರದನ ಆಗಮನವಾಯಿತು. ಅವನು, ``ಇನ್ನು ಹದಿನಾಲ್ಕು ವರ್ಷಗಳಲ್ಲಿ ಕೌರವರೆಲ್ಲರ ಅವಸಾನವಾಗುವುದು. ಧೃತರಾಷ್ಟ್ರ, ನೀನೂ ನಿನ್ನ ಮಕ್ಕಳೂ ನೀವು ಮಾಡಿದ ಅನ್ಯಾಯದ ಫಲವನ್ನು ಕಾಣುವಿರಿ. ಅಲ್ಲಿಯವರೆಗೆ ಅನ್ಯಾಯದಿಂದ ದೋಚಿದ ಸಿರಿಯನ್ನೂ ರಾಜ್ಯವನ್ನೂ ಅನುಭವಿಸಿರಿ! ಆದರೆ, ಕ್ಷಣಕಾಲವೂ ನಿಮಗೆ ಮನಶ್ಶಾಂತಿಯಿರುವುದಿಲ್ಲ" ಎಂದು ಹೇಳಿ ರಾಜನನ್ನು ಭವಿಷ್ಯದ ಭಯದಲ್ಲಿ ಮುಳುಗಿಸಿ ಹೊರಟುಹೋದನು.





ಖಿನ್ನತೆಯಲ್ಲಿ ಮುಳುಗಿದ್ದ ರಾಜನು ಬಹಳಹೊತ್ತು ಹಾಗೆಯೇ ಕುಳಿತುಕೊಂಡಿದ್ದನು. ಅಲ್ಲಿಗೆ ಬಂದ ಅವನ ಆಪ್ತನೂ ಸಾರಥಿಯೂ ಆದ ಸಂಜಯನು, ``ಇಡಿಯ ಲೋಕವನ್ನೇ ನಿನ್ನದಾಗಿಸಿ ಕೊಂಡಿರುವೆ. ಪಾಂಡವರ ಸ್ವತ್ತೆಲ್ಲವೂ ಈಗ ನಿನ್ನದಾಗಿದೆ. ಆದರೂ ಏಕೆ ಖಿನ್ನನಾಗಿ ಕುಳಿತಿರುವೆ?" ಎಂದು ಕೇಳಿದನು. ರಾಜನು ಪುರವನ್ನು ಬಿಡುವಾಗಿನ ಪಾಂಡವರ ನಡತೆಯನ್ನೂ ಅದನ್ನು ವಿವರಿಸಿದ ವಿದುರನ ಮಾತುಗಳನ್ನೂ, ನಾರದನು ಹೇಳಿದ ಭವಿಷ್ಯವಾಣಿಯನ್ನೂ ಹೇಳಿ ಅದರಿಂದ ತಾನು ಭಯಗೊಂಡಿರುವುದನ್ನು ತಿಳಿಸಿದನು. ಅದಕ್ಕೆ ಆ ಸಂಜಯನು,``ನಿನ್ನನ್ನು ಕಂಡರೆ ನನಗೆ ಸ್ವಲ್ಪವು ಸಹಾನುಭೂತಿಯಿಲ್ಲ. ಸಭಾಮಂಟಪದಲ್ಲಿ ನಿನ್ನ ನಡತೆಯಂತೂ ಅತ್ಯಂತ ಅಕ್ಷಮ್ಯವಾಗಿತ್ತು, ನಿನ್ನ ಮಗನದಕ್ಕಿಂತಲೂ ಹೀನವಾಗಿತ್ತು. ನಾನು ನೋಡುತ್ತಲೇ ಇದ್ದೆ. ನೀನು ವಿದುರನ ಮಾತುಗಳನ್ನು ಕಿವಿಯ ಮೇಲೇ ಹಾಕಿಕೊಳ್ಳಲಿಲ್ಲ. ಈಗ ನಿನ್ನ ಪಾಪದ ಫಲವನ್ನು ಕಾಣುವೆ. ಇಲ್ಲಿಂದ ಮುಂದೆ `ಪಾಂಡವರು ಎಂದು

ರುವರೋ, ಎಂದು ನಿನ್ನ ಮಕ್ಕಳನ್ನು ನಾಶಮಾಡುವರೋ' ಎಂಬ ಭಯದಲ್ಲಿಯೇ ನೀನು ಬದುಕಬೇಕು" ಎಂದನು. ಅಂದಿನಿಂದ ರಾಜನಿಗೆ ಮನಶ್ಶಾಂತಿಯೇ ಇಲ್ಲವಾಯಿತು. ಕ್ಷಣಮಾತ್ರವೂ ಬಿಡದೆ, ಹಗಲು ರಾತ್ರಿಯೆನ್ನದೆ ಅವನನ್ನು ಚಿಂತೆಯು ಕಾಡಲಾರಂಭಿಸಿತು. ಆದಿನ ಧೃತರಾಷ್ಟ್ರನು ಧರ್ಮಕ್ಕೆ ಬೆನ್ನು ತೋರಿಸಿದಾಗಿನಿಂದ, ಶಾಂತಿಯು ಅವನ ಹೃದಯವನ್ನು ಬಿಟ್ಟುಹೋಯಿತು.



* * * * 



ಪರಿವಿಡಿ