ಪರಿವಿಡಿ

This book is available at Ramakrishna Ashrama, Mysore.

ಸ್ತ್ರೀಪರ್ವ

ಧೃತರಾಷ್ಟ್ರನು ದುಃಖದಾಳದಲ್ಲಿ ಮುಳುಗಿಹೋಗಿದ್ದನು. ತನ್ನೆಲ್ಲ ಮಕ್ಕಳ ಸಾವಿನ ನೋವನ್ನು ಅವನು ಸಹಿಸಲಾರದವನಾಗಿದ್ದನು. ಸಂಜಯ ವಿದುರರು ಅವನಿಗೆ ಧೈರ್ಯ ತುಂಬುವುದಕ್ಕೆ ಇನ್ನಿಲ್ಲದ ಹಾಗೆ ಶ್ರಮಿಸಿದರು. ಬಹಳ ಹಿಂದೆಯೇ ಇದು ಹೀಗೆಯೇ ಆಗುವುದೆಂದೆಂದು ತಾವು ಭವಿಷ್ಯ ನುಡಿದಿದ್ದುದಾಗಿ ತಿಳಿಸಿದರು. ಸಂಜಯನು, ಈ ದುರಂತಕ್ಕೆ ನೀನೇ ಕಾರಣ ಎಂದು ನೇರವಾಗಿ ಹೇಳಿಯೇಬಿಟ್ಟನು. ರಾಜನಿಗೆ ಬೇಜಾರಾದರೂ, ತನ್ನದೇ ತಪ್ಪೆಂದು ಅವನು ವಿನಯವಾಗಿಯೇ ಒಪ್ಪಿಕೊಂಡನು. ತನ್ನ ಮೂರ್ಖ, ಅಸಮರ್ಥ ಅಣ್ಣನ ಬಗ್ಗೆ ವಿದುರನಿಗೆ ಅಯ್ಯೋ ಪಾಪ ಎನಿಸಿತು. ಅವನಿಗೆ ಜನ್ಮ ಮೃತ್ಯುಗಳ ರಹಸ್ಯವನ್ನೂ, ಆತ್ಮದ ಅವಿನಾಶಿತ್ವವನ್ನೂ ತಿಳಿಹೇಳಲು ಪ್ರಯತ್ನಿಸಿದನು. ವ್ಯಾಸನು ಬಂದು, ಧೃತರಾಷ್ಟ್ರನು ಸಮಾಧಾನ ತಂದುಕೊಂಡು ರಣರಂಗದ ಕಡೆ ಹೋಗಿಬರಬೇಕೆಂದು ತಿಳಿಸಿದನು. ಯುದ್ಧವು ಮುಗಿದುದರಿಂದ, ಈಗ ಸತ್ತವರ ಶರೀರಗಳನ್ನು ತಂದು ದಹನಮಾಡಿ, ಕರ್ಮಾಂತರಗಳನ್ನು ಮಾಡಬೇಕಾದ ಕರ್ತವ್ಯವಿರುವುದು. ಆದ್ದರಿಂದ ರಾಜನು ಒಮ್ಮೆ ರಣರಂಗಕ್ಕೆ ಹೋಗಿಬರುವುದು ಆವಶ್ಯಕ ಎಂದನು.ಅರಮನೆಯ ಹೆಂಗಸರೂ ಪುರಸ್ತ್ರೀಯರೂ ಅಂಧನೃಪನನ್ನು ಕರೆದುಕೊಂಡು ರಣರಂಗಕ್ಕೆ ನಡೆದರು. ಸೂರ್ಯನೂ ನೋಡಿಲ್ಲದ ಸ್ತ್ರೀಯರೂ ಸಹ, ತಲೆ ಬಾಚದೆ, ಕಣ್ಣೀರಿಡುತ್ತ ನಗರದ ರಸ್ತೆಗಳಲ್ಲಿ ನಡೆಯಬೇಕಾಯಿತು. ಪಾಂಡವರು ಹಸ್ತಿನಾಪುರವನ್ನು ಬಿಟ್ಟು ಹೊರಟ ದಿನವನ್ನು ವಿದುರನು ಸ್ಮರಿಸಿಕೊಂಡನು. ಈಗಾಗಿರುವುದನ್ನು ದ್ರೌಪದಿಯು ಹದಿನಾಲ್ಕು ವರ್ಷಗಳ ಹಿಂದೆಯೇ ಭವಿಷ್ಯ ನುಡಿದಿದ್ದಳು. ಆಗ ಧೌಮ್ಯನು ಮಾಡಿದ್ದಂತೆ, ಈಗ ಬ್ರಾಹ್ಮಣರು ರುದ್ರ ಮಂತ್ರಗಳನ್ನು ಪಠಿಸುತ್ತ, ರಾಜನಿಗೆ ದಾರಿ ತೋರಿಸುತ್ತಿದ್ದರು. ರಾಜಾಸ್ಥಾನದಲ್ಲಿ ಆಗ ನಡೆದ ಪಾಪವು ಈಗ ಫಲ ಕೊಡುತ್ತಿತ್ತು. ವಿದುರನು ಮಾತನಾಡದೆ ಮೌನವಾಗಿ ರಾಜನ ಜೊತೆಯಲ್ಲಿ ನಡೆಯುತ್ತಿದ್ದನು. ದಾರಿಯಲ್ಲಿ ಜೊತೆಗೂಡಿದ ಕೃಪ ಕೃತವರ್ಮ ಅಶ್ವತ್ಥಾಮರು ರಾಜನಿಗೆ ಸಮಾಧಾನದ ಮಾತುಗಳನ್ನು ಹೇಳಿದರು. ತಾವು ಪಾಂಡವ ಪಾಳೆಯದಲ್ಲಿ ನಡೆಸಿದ ಕಗ್ಗೊಲೆಯನ್ನೂ ರಾಜನಿಗೆ ವರದಿ ಮಾಡಿದರು. ಕೃಪನು ``ನಮಗೆ ಪಾಂಡವರ ಭಯ ಬಹಳವಾಗಿದೆ. ಅವರೂ ನಮ್ಮನ್ನು ಹುಡುಕುತ್ತಿದ್ದಾರೆ. ನಾವು ಹೆಚ್ಚು ಹೊತ್ತು ಇರಲಾರೆವು, ಹೋಗುತ್ತೇವೆ" ಎಂದು ಹೊರಟುಹೋದರು. ಸ್ವಲ್ಪ ದೂರ ಹೋದಮೇಲೆ ಅವರು ಪರಸ್ಪರ ಬೀಳ್ಕೊಂಡು ಬೇರೆ ಬೇರೆ ದಿಕ್ಕುಗಳಿಗೆ ಹೊರಟರು. ಕೃಪ ಹಸ್ತಿನಾವತಿಗೂ, ಕೃತವರ್ಮ ದ್ವಾರಕೆಗೂ, ಅಶ್ವತ್ಥಾಮನು ಗಂಗಾತೀರದಲ್ಲಿರುವ ವ್ಯಾಸಾಶ್ರಮಕ್ಕೂ ಹೋದರು. ಮುಂದೆ ಭೀಮನು ಅಶ್ವತ್ಥಾಮ ಅಲ್ಲಿರುವುದನ್ನು ಕಂಡುಹಿಡಿದನು. ಹೀಗೆ ಅಶ್ವತ್ಥಾಮನ ನಿರ್ಗಮನವಾದಮೇಲೆ, ಭೀಮನು ಮಣಿಯನ್ನು ತೆಗೆದುಕೊಂಡು ದ್ರೌಪದಿಯಿದ್ದಲ್ಲಿಗೆ ಧಾವಿಸಿದನು. ಕೃಷ್ಣನು ಅವಳಿಗೆ ನಡೆದುದೆಲ್ಲವನ್ನೂ ತಿಳಿಸಿದನು. ಮಣಿಯೂ ಸಿಕ್ಕು, ಕೊಲೆಗಡುಕನಿಗೆ ಶಿಕ್ಷೆಯಾದುದನ್ನು ತಿಳಿದ ದ್ರೌಪದಿಗೆ ಸ್ವಲ್ಪ ಸಮಾಧಾನವಾಯಿತು. ರಾಜನಿಗೇ ಇದು ಶೋಭಿಸುವುದೆಂದು ಹೇಳಿ ಮಣಿಯನ್ನು ಅವಳು ಯುಧಿಷ್ಠಿರನಿಗೆ ಕೊಡಲು, ಅವನೂ ಅವಳಿಗೆ ಪ್ರೀತಿಯಾಗಲೆಂದು ಅದನ್ನು ಧರಿಸಿದನು.* * * * ಪಾಂಡವರು ಹಸ್ತಿನಾಪುರದ ಕಡೆ ಹೊರಟರು. ಅವರು ಬಿಟ್ಟು ಹದಿನಾಲ್ಕು ವರ್ಷಗಳಾಗಿದ್ದವು.ಈಗ ಅವರು ಹೋಗುತ್ತಿರುವುದು ರಾಜ್ಯವಾಳುವುದಕ್ಕೆ. ಯುಧಿಷ್ಠಿರನೇ ರಾಜ. ಆದರೆ ಅಶ್ವತ್ಥಾಮನಿಂದಾಗಿ ಅವರ ಸಂತೋಷವು ಮುಕ್ಕಾಗಿತ್ತು. ಅವನು ನಡೆಸಿದ ಕಗ್ಗೊಲೆಗಳ ದುಃಖ ಅವರ ಮನಸ್ಸುಗಳನ್ನು ಮ್ಲಾನವಾಗಿಸಿತ್ತು. ಸಾತ್ಯಕಿ ಮತ್ತು ಕೃಷ್ಣ ಅವರನ್ನು ಎಚ್ಚರಿಕೆಯಿಂದ ನೋಡಿಕೊಂಡಿದ್ದರು. ಧೃತರಾಷ್ಟ್ರನು ಸ್ತ್ರೀಯರೊಂದಿಗೆ ರಣರಂಗಕ್ಕೆ ಹೋಗಿರುವನೆಂದು ತಿಳಿದ ಅವರು ಅವನನ್ನು ಭೇಟಿ ಮಾಡುವುದಕ್ಕೆಂದು ಅಲ್ಲಿಗೇ ನಡೆದರು. ರಣರಂಗದಲ್ಲಿ ರೋದಿಸುತ್ತಿದ್ದ ಸ್ತ್ರೀಸಮೂಹವು ಅವರನ್ನು ಸ್ವಾಗತಿಸಿತು. ಯುಧಿಷ್ಠಿರನು ನೇರವಾಗಿ ಧೃತರಾಷ್ಟ್ರನಿದ್ದಲ್ಲಿಗೆ ನಡೆದು ಅವನ ಪಾದಗಳಿಗೆ ನಮಸ್ಕರಿಸಿದನು. ತಾನು ಯುಧಿಷ್ಠಿರ, ಇವರು ತನ್ನ ತಮ್ಮಂದಿರು ಎಂದು ಹೇಳಿಕೊಂಡನು. ಧೃತರಾಷ್ಟ್ರನು ತೋರಿಕೆಗಾಗಿ ಅವನನ್ನು ಆಲಿಂಗಿಸಿಕೊಂಡರೂ, ತನ್ನ ಮಕ್ಕಳ ಸಾವಿಗೆ ಇವರೇ ಕಾರಣ ಎಂದಿತು ಅವನ ಮನಸ್ಸು. ಅವರನ್ನು ಪ್ರೀತಿಯಿಂದ ಆದರಿಸಲಾರದವನಾದನು. ಆದರೆ ಇತರರ ಎದುರಿಗೆ ತನ್ನ ಮನಸ್ಸುನ್ನು ಬಹಿರಂಗಗೊಳಿಸಲೂ ಆರನು. ಭೀಮನ ಮೇಲೆ ಅವನ ಹೃದಯದಲ್ಲಿ ದ್ವೇಷದ ದಾವಾನಲವೇ ಅಡಗಿತ್ತು. ಸಾಧ್ಯವಿದ್ದರೆ ಕೇವಲ ದೃಷ್ಟಿ ಮಾತ್ರದಿಂದಲೇ ಅವನನ್ನು ಸುಟ್ಟುಬಿಡುತ್ತಿದ್ದನೇನೋ.ಧೃತರಾಷ್ಟ್ರನು ಭೀಮನನ್ನು ಆಲಿಂಗಿಸಿಕೊಳ್ಳುವುದಕ್ಕಾಗೆ ಕೈಚಾಚಿದನು. ಭೀಮನೂ ಮುಂದಕ್ಕೆ ಬಂದನು. ಕೃಷ್ಣನು ಸನ್ನೆ ಮಾಡಿ ಅವನನ್ನು ತಡೆದನು. ವ್ಯಾಯಾಮಶಾಲೆಯಿಂದ ಮೊದಲೇ ತರಿಸಿಟ್ಟಿದ್ದ, ದುರ್ಯೋಧನನು ನಿತ್ಯವೂ ಅಭ್ಯಾಸಮಾಡಲು ಇಟ್ಟುಕೊಂಡಿದ್ದ, ಉಕ್ಕಿನ ಭೀಮ ಪ್ರತಿಮೆಯನ್ನು ಧೃತರಾಷ್ಟ್ರನ ಮುಂದಿರಿಸಿದನು. ವೃದ್ಧರಾಜನು ಅದನ್ನೇ ಆಲಿಂಗಿಸಿದನು. ಹಾಗೆ ಆಲಿಂಗಿಸುತ್ತಿರುವಾಗಲೇ ರಾಜನಿಗೆ ತನ್ನ ಮಕ್ಕಳನ್ನು ಕೊಂದವನು ಇವನೇ ಎಂಬ ಭಾವಸಂಚಾರವಾಯಿತು. ಅವನ ಕೈಗಳು ಆ ಉಕ್ಕಿನ ಪ್ರತಿಮೆಯನ್ನೆ ಬಲವಾಗಿ ಬಿಗಿದವು. ಉಕ್ಕಿನ ಪ್ರತಿಮೆ ಪುಡಿಪುಡಿಯಾಯಿತು. ಇದನ್ನು ನೋಡಿದ ಭೀಮನ ಜಂಘಾಬಲವೇ ಉಡುಗಿ ಹೋಯಿತು. ರಾಜನ ಶರೀರವೆಲ್ಲ ಅವನದೇ ರಕ್ತದಿಂದ ತೊಯ್ದಿತ್ತು. ಈ ಸಾಹಸದಿಂದ ರಾಜನು ಮೂರ್ಛೆ ಹೋದನು. ಸಂಜಯನು ಶೈತ್ಯೋಪಚಾರ ಮಾಡಿ ಎಬ್ಬಿಸಿದನು. ರಾಜನಿಗೆ ತಾನು ಮಾಡಿದ ಕ್ರೂರಕಾರ್ಯವೆಂತಹುದೆಂದು ಮನವರಿಕೆಯಾಗಿತ್ತು. ಪಶ್ಚಾತ್ತಾಪದಿಂದ, ``ಅಯ್ಯೋ, ಕೋಪದಲ್ಲಿ ಭೀಮನನ್ನು ಕೊಂದುಬಿಟ್ಟೆ! ನನ್ನ ತಮ್ಮ ಪಾಂಡುವಿನ ಮಗ ಭೀಮನನ್ನು ಕೊಂದುಬಿಟ್ಟೆ!'' ಎಂದು ಹಲುಬತೊಡಗಿದನು. ಅವನ ಕೋಪವೆಲ್ಲ ಕಳೆದುಹೋಯಿತೆಂದು ಕೃಷ್ಣನಿಗೆ ಮನವರಿಕೆಯಾಯಿತು. ರಾಜನ ಬಳಿಗೆ ಬಂದು, ``ನಿನಗೆ ಭೀಮನ ಮೇಲೆ ಎಷ್ಟು ಕೋಪವಿದೆ ಎಂಬುದು ನನಗೆ ಗೊತ್ತಿತ್ತು. ನಿನ್ನ ಬಾಹುಬಲವೂ ನನಗೆ ಗೊತ್ತಿತ್ತು. ಅದಕ್ಕಾಗಿಯೇ ನಾನು ಈ ಉಕ್ಕಿನ ಪ್ರತಿಮೆಯನ್ನು ಮುಂದಿಟ್ಟೆ. ನೀನು ಪುಡಿಮಾಡಿರುವುದು ಭೀಮನನ್ನಲ್ಲ, ಅವನ ಪ್ರತಿಮೆಯನ್ನು! ದುರ್ಯೋಧನನು ಮಾಡಿಸಿಟ್ಟದ್ದು. ನಿನ್ನ ದ್ವೇಷವೆಲ್ಲಾ ಈ ಪ್ರತಿಮೆಯ ಮೇಲೆ ಕಳೆದುಹೋಯಿತು ಅಲ್ಲವೆ? ಈಗ ನಿನ್ನ ತಮ್ಮನ ಮಕ್ಕಳ ಮೇಲೆ ಪ್ರೀತಿಯನ್ನು ತೋರಿಸಬಹುದಲ್ಲ? ಮನಸ್ಸನ್ನು ಧರ್ಮದ ಮೇಲೆ ನಿಲ್ಲಿಸಿ ಅವರಿಗೆ ಮಾಡಬೇಕಾದದ್ದನ್ನು ಮಾಡು. ಅವರಿಗೂ ಯುದ್ಧದಿಂದ ಪರಿತಾಪವುಂಟಾಗಿದೆ. ತಂದೆಯಂತೆ ಈಗಲಾದರೂ ಅವರನ್ನು ಸಂತೈಸು ಮಹಾರಾಜ!" ಎಂದನು. ಕೆಟ್ಟ ಯೋಚನೆಗಳಿಂದ ಮುಕ್ತನಾಗಿದ್ದ ಧೃತರಾಷ್ಟ್ರನು, ಪಾಂಡುವಿನ ಮಕ್ಕಳಿಗೆ ಒಳ್ಳೆಯವನಾಗ ಬಯಸಿ. ``ನನಗೀಗ ಪಾಂಡವರ ಬಗ್ಗೆ ಕೋಪವು ಹೋಗಿದೆ. ಅವರನ್ನು ನಾನು ನಿಜವಾದ ಪ್ರೀತಿಯಿಂದ ಆಲಿಂಗಿಸಿಕೊಳ್ಳುವೆ" ಎಂದನು. ಅಂತೆಯೇ ಮೊದಲು ಭೀಮಾರ್ಜುನರನ್ನೂ, ಅನಂತರ ನಕುಲ ಸಹದೇವರನ್ನೂ ಒಬ್ಬೊಬ್ಬರನ್ನಾಗಿ ಪ್ರೀತಿಯಿಂದ ಆಲಿಂಗಿಸಿಕೊಂಡನು. ಎಲ್ಲರೂ ಸಮಾಧಾನದ ನಿಟ್ಟುಸಿರುಬಿಟ್ಟರು.ಆದರೆ ಇನ್ನೂ ಅವರು ಅಪಾಯದಿಂದ ಪಾರಾಗಿರಲಿಲ್ಲ. ಅವರ ಮೇಲೆ ಕೋಪವಿದ್ದ ಗಾಂಧಾರಿಯನ್ನು ಇನ್ನೂ ಭೇಟಿ ಮಾಡಬೇಕಾಗಿದ್ದಿತು. ಅವಳು ಅವರನ್ನು ಶಪಿಸಬೇಕೆಂದುಕೊಂಡಿದ್ದಳು. ಅವಳ ಮನಸ್ನನ್ನು ತಿಳಿದು ಅಲ್ಲಿಗೆ ಬಂದ ವ್ಯಾಸನು, ``ಗಾಂಧಾರಿ, ನಿನ್ನ ಮನಸ್ಸಿನಲ್ಲಿ ಏನಿದೆ ಎಂಬುದು ನನಗೆ ಗೊತ್ತು. ಅದು ಸರಿಯಲ್ಲ ಮಗಳೇ. ಮಗನ ಅತಿಶಯ ಪ್ರೀತಿಯಿಂದಾಗಿ ನೀನು ಪಾಪಚಿಂತನೆ ಮಾಡುತ್ತಿರುವೆ. ಕ್ಷಮಾಶೀಲಳಾಗಲು ಪ್ರಯತ್ನಿಸು. ದುರ್ಯೋಧನ ರಣರಂಗಕ್ಕೆ ಹೊರಡುವ ಮುನ್ನ ಬೀಳ್ಕೊಡುವುದಕ್ಕೆ ಬಂದಾಗ, `ಅಮ್ಮ, ಯಶಸ್ವಿಯಾಗೆಂದು ಹರಸು. ನಿನ್ನ ಬಾಯಿಂದ ಬಂದರೆ ನಾನು ಯುದ್ಧದಲ್ಲಿ ಗೆಲ್ಲುವೆ. ಹರಸಮ್ಮ' ಎಂದು ಕೇಳಿದಾಗ ನೀನು, 'ಎಲ್ಲಿ ಧರ್ಮವೋ ಅಲ್ಲಿ ಜಯವಪ್ಪ' ಎಂದೆ. ಗಾಂಧಾರಿ, ನಿನಗೆ ಗೊತ್ತಿತ್ತು, ಅವನು ಗೆಲ್ಲಲಾರ, ಅವನು ಧರ್ಮಮಾರ್ಗದಲ್ಲಿಲ್ಲ, ಎಂದು. ಈಗ, ನೀನು ಈವರೆಗೆ ಮಾಡಿದ ಒಳಿತನ್ನೆಲ್ಲಾ ತೊಳೆದು ಬಿಡುವುದು ವಿಹಿತವಲ್ಲ. ನಿನಗಿರುವಷ್ಟು ತಾಳ್ಮೆ ಯಾರಿಗಿದೆ ಮಗಳೆ! ನೀನು ಈ ಸಿಟ್ಟನ್ನು ಬಿಡಲೇಬೇಕು. ಪಾಂಡವರು ಅದಕ್ಕೆ ಅರ್ಹರಲ್ಲ!" ಎಂದನು. ಗಾಂಧಾರಿ ಮೌನವಾಗಿ ಕೇಳಿದಳು. ಕೊನೆಗೆ ``ಅಪ್ಪ, ನಾನು ಕೋಪವನ್ನು ಬಿಟ್ಟಿದ್ದೇನೆ. ಮಕ್ಕಳ ಸಾವು ನನ್ನ ಬುದ್ಧಿಯನ್ನು ಸ್ವಲ್ಪ ಭ್ರಮಿಸುವಂತೆ ಮಾಡಿತ್ತು. ಪಾಂಡವರು ಈ ಯುದ್ಧವನ್ನು ನಡೆಸಿ ಸರಿಯಾದುದನ್ನೇ ಮಾಡಿರುವರು; ಅವರ ಮೇಲೆ ನನಗೆ ಕೋಪವಿಲ್ಲ. ನನ್ನ ಮಗನೇ ಬಯಸಿದ್ಧರಿಂದ ಅವರು ಯುದ್ಧಮಾಡಬೇಕಾಯಿತು; ಅದು ನನಗೆ ಗೊತ್ತು. ನನಗೆ ಕೋಪ ಬಂದಿರುವುದು ಅದಕ್ಕಲ್ಲ; ಭೀಮನು ತನ್ನ ತಮ್ಮನ ರಕ್ತವನ್ನೇ ಕುಡಿದನಲ್ಲ, ಅದಕ್ಕೆ. ಅವನು ದುರ್ಯೋಧನನನ್ನು ಅನ್ಯಾಯಮಾರ್ಗದಿಂದ ಕೊಂದನಲ್ಲ, ಅದಕ್ಕೆ. ರಾಜ್ಯದಾಸೆಯಿಂದ ಭೀಮನು ಹೀಗೆ ಮಾಡಿರುವನಲ್ಲಾ, ಅದು ನನ್ನನ್ನು ಸುಡುತ್ತಿದೆ" ಎಂದಳು.ಅವಳ ಮಾತನ್ನು ಕೇಳಿದ ಭೀಮನು ಹತ್ತಿರ ಬಂದು, ಕೃಷ್ಣನು ತಮಾಷೆಯನ್ನು ನೋಡುತ್ತಿರಲು, ತುಂಬ ಮೃದುವಾದ ಧ್ವನಿಯಲ್ಲಿ, ``ಅಮ್ಮ, ದುರ್ಯೋಧನನೊಡನೆ ಯುದ್ಧ ಮಾಡುವಾಗ ನಾನು ಅನ್ಯಾಯ ಮಾಡಿದೆ, ಒಪ್ಪಿಕೊಳ್ಳುತ್ತೇನೆ. ಇಲ್ಲದಿದ್ದರೆ ಅವನನ್ನು ಕೊಲ್ಲಲು ಆಗುತ್ತಿರಲಿಲ್ಲ.ನನ್ನ ಪ್ರಾಣರಕ್ಷಣೆಗಾಗಿ ನಾನು ಹಾಗೆ ಮಾಡಬೇಕಾಯಿತು. ನೀನು ಈ ನನ್ನ ತಪ್ಪನ್ನು ಕ್ಷಮಿಸಬೇಕು. ನಿನ್ನ ಮಗನಂತಹ ಯೋಧ ಮೂರು ಲೋಕಗಳಲ್ಲಿಯೂ ಇರಲಿಲ್ಲವಮ್ಮ. ನ್ಯಾಯೋಚಿತ ಯುದ್ಧದಲ್ಲಿ ಅವನನ್ನು ನಾನೇನು, ಇಂದ್ರನೂ ಕೊಲ್ಲಲು ಸಾಧ್ಯವಿರಲಿಲ್ಲ. ಆದರೆ ದುರ್ಯೋಧನನು ಪಾಪಿ; ನಮ್ಮನ್ನು ವರ್ಷಗಟ್ಟಲೆ ಅನ್ಯಾಯವಾಗಿ ಹಿಂಸಿಸಿದ. ತನ್ನಿಚ್ಛೆಗೆ ವಿರೋಧವಾಗಿ ಯುಧಿಷ್ಠಿರನನ್ನು ಈ ಯುದ್ಧದಲ್ಲಿ ತೊಡಗುವಂತೆ ಮಾಡಿದ. ನಾನು ಅವನ ತೊಡೆಯೊಡೆದುದಕ್ಕೆ ನಾನು ಮಾಡಿದ್ದ ಪ್ರತಿಜ್ಞೆಯೇ ಕಾರಣ. ದ್ರೌಪದಿಯನ್ನು ಅಪಮಾನಗೊಳಿಸಿದಾಗಲೇ ನಾನು ಹಾಗೆ ಮಾಡಿದ್ದಿದ್ದರೆ ನಿನಗೆ ಕೋಪ ಬರುತ್ತಿರಲಿಲ್ಲ; ಬದಲಿಗೆ ನಾನು ಮಾಡಿದ್ದು ಸರಿಯೆಂದೇ ಹೇಳುತ್ತಿದ್ದೆ. ಆದರೆ ಆಗ ಅಣ್ಣ ಯುಧಿಷ್ಠಿರ ನನ್ನನ್ನು ತಡೆದ. ಆ ಪ್ರತಿಜ್ಞೆಯನ್ನು ನಾನು ಪೂರೈಸಿಕೊಳ್ಳಲು ಇಷ್ಟೆಲ್ಲ ವರ್ಷ ಕಾಯಬೇಕಾಯಿತು" ಎಂದನು.ಗಾಂಧಾರಿಯು, ``ಭೀಮ, ನೀನು ನನ್ನ ಮಗ ದುರ್ಯೋಧನನನ್ನು ಲೋಕೈಕವೀರನೆಂದು ಹೊಗಳಿರುವೆ; ನಿನ್ನನ್ನು ನಾನು ಕ್ಷಮಿಸುತ್ತೇನೆ. ಆದರೆ, ನನ್ನ ಮಗ ದುಶ್ಶಾಸನನ ರಕ್ತ ಕುಡಿದೆಯಲ್ಲ! ನಿನ್ನ ತಮ್ಮನ ರಕ್ತವನ್ನು! ಅದು ಕ್ರೂರ ಕರ್ಮವಲ್ಲವೆ? ಅದಕ್ಕೇನು ಹೇಳುತ್ತಿ?" ಎಣ್ಣಲು, ಭೀಮನು, ``ಹೌದಮ್ಮ, ಅದು ಕ್ರೂರ ಕೆಲಸವೇ. ಹಾಗೆ ಮಾಡುವೆನೆಂದು ನಾನು ಯಾವುದೋ ಆವೇಶದ ಭರದಲ್ಲಿ ಪ್ರತಿಜ್ಞೆ ಮಾಡಿದ್ದೆ. ಪ್ರತಿಜ್ಞೆಯ ಪುರೈಕೆಗಾಗಿ ಹಾಗೆ ಮಾಡಿದೆ. ನನ್ನ ದೊಡ್ಡ ದೋಷವೆಂದರೆ ಉಕ್ಕಿಬರುವ ನನ್ನ ಕೋಪ. ಇದರಿಂದ ನನಗೆ ಸಾಕಾಗಿಹೋಗಿದೆ. ಅಮ್ಮ, ನೀನು ಇದನ್ನು ಕ್ಷಮಿಸಬೇಕು. ನನ್ನ ತಮ್ಮನ ರಕ್ತದ ಒಂದು ಹನಿಯನ್ನೂ ನಾನು ಕುಡಿದಿಲ್ಲ. ತುಟಿಗೆ ಮುಟ್ಟಿಸಿದೆನಷ್ಟೆ. ಇದು ರಾಧೇಯನಿಗೆ ಗೊತ್ತಿತ್ತು. ಅಮಾನುಷ ಕಾರ್ಯವಾದ ಇದಕ್ಕಾಗಿ ನೀನು ನನ್ನನ್ನು ಕ್ಷಮಿಸಬೇಕಮ್ಮ" ಎಂದನು. ಭೀಮನ ಈ ವಿನೀತ ನಡವಳಿಕೆ ಮತ್ತು ಒಳ್ಳೆಯ ಮಾತುಗಳಿಂದ ಗಾಂಧಾರಿಗೆ ಸಮಾಧಾನವಾವಾಯಿತು. ಭೀಮನ ಈ ಮುಖವನ್ನು ಕಂಡು ಕೃಷ್ಣನಿಗೆ ನಗು ತಡೆದುಕೊಳ್ಳುವುದೇ ಒಂದು ಪ್ರಯಾಸವಾಯಿತು.ಗಾಂಧಾರಿ ಈಗ ಯುಧಿಷ್ಠಿರನ ಕಡೆ ತಿರುಗಿ, ``ಎಲ್ಲಿ ಆ ರಾಜಕುಮಾರ?" ಎಂದಳು. ಅವಳ ಧ್ವನಿಯಿಂದಲೇ ಅವಳಿಗೆಷ್ಟು ಕೋಪವಿದೆಯೆಂದು ಯುಧಿಷ್ಠಿರನಿಗೆ ಅರ್ಥವಾಯಿತು. ಕೈಜೋಡಿಸಿ ನಮಸ್ಕರಿಸುತ್ತ ಹತ್ತಿರ ಬಂದು, ``ಅಮ್ಮ, ನಿನ್ನ ಮಕ್ಕಳನ್ನು ಕೊಂದ ನಾನು, ಇದೋ ಇಲ್ಲಿರುವೆ. ಲೋಕನಾಶಕ್ಕೆ ಕಾರಣನಾದ ನನ್ನನ್ನು ಶಪಿಸಿಬಿಡು ತಾಯಿ!" ಎಂದನು. ಗಾಂಧಾರಿಯು ಈಗ ಮಹಾಪ್ರಯಾಸದಿಂದ ವ್ಯಾಸನ ಮಾತನ್ನು ನೆನೆದುಕೊಂಡಳು. ತನ್ನೆರಡು ಕಣ್ಣುಗಳನ್ನೂ ರೇಷ್ಮೆ ವಸ್ತ್ರವೊಂದರಿಂದ ಕಟ್ಟಿಕೊಂಡಿದ್ದ ಅವಳು, ತನ್ನ ಏರಿಬರುತ್ತಿದ್ದ ಕೋಪವನ್ನು ತಡೆದುಕೊಳ್ಳುವುದಕ್ಕಾಗಿ, ಸರ್ಪದಂತೆ ನಿಟ್ಟಿಸಿರು ಬಿಡುತ್ತ, ಮುಖ ತಿರುಗಿಸಿಕೊಂಡಳು; ಕೊನೆಗೆ ತನ್ನನ್ನು ತಾನು ಸಂಭಾಳಿಸಿಕೊಂಡಳು. ಕೊನೆಗೂ ಅವಳ ಮನಸ್ಸಿನಲ್ಲಿ ಪುತ್ರಪ್ರೇಮದ ಮೇಲೆ ಧರ್ಮವೇ ಜಯವನ್ನು ಸಾಧಿಸಿತು. ಗಾಂಧಾರಿಯು ಪಾಂಡವರೆಲ್ಲರನ್ನೂ ಕ್ಷಮಿಸಿಬಿಟ್ಟಳು.ಅಳು ತನ್ನ ಮುಖವನ್ನು ತಿರುಗಿಸುವಾಗ, ವಸ್ತ್ರದ ಸಂದಿನಿಂದ, ಅಕಸ್ಮಾತ್ತಾಗಿ, ನಮಸ್ಕರಿಸುತ್ತಿದ್ದ ಧರ್ಮರಾಯನ ಬೆರಳುಗಳ ಮೇಲೆ ಅವಳ ದೃಷ್ಟಿ ಬಿತ್ತೆಂದೂ, ಅದರಿಂದಾಗಿ ಆ ಬೆರಳುಗಳು ಸುಟ್ಟು ಕಪ್ಪಾದುವೆಂದೂ, ಅವಳ ತಪಶ್ಶಕ್ತಿಯು ಅಂತಹುದೆಂದೂ ಹೇಳುವರು. ಇದನ್ನು ನೋಡಿದ ಅರ್ಜುನನು ಓಡಿಹೋಗಿ ಕೃಷ್ಣನ ಬೆಣ್ಣ ಹಿಂದೆ ಅಡಗಿಕೊಂಡನು. ಜಿಷ್ಣುವೆಂದೂ ಲೋಕೈಕವೀರನೆಂದೂ ಹೆಸರಾದ ಅರ್ಜುನನನ್ನು ಹೀಗೆ ಹೆದರುವಂತೆ ಮಾಡಿದ ಈ ಒಬ್ಬಳು ಸ್ತ್ರೀಯ ಶಕ್ತಿ ಅದೆಂತಹುದು ಎಂದು ಕೃಷ್ಣನು ಮನಸ್ಸಿನಲ್ಲಿಯೇ ನಕ್ಕು, ಅರ್ಜುನನ ಕಿವಿಯಲ್ಲಿ ``ಎಲಾ ಜಿಷ್ಣು!" ಎಂದು ಉಸುರಿದಾಗ, ಅರ್ಜುನನು ನಾಚಿಕೆಯಿಂದ ಕೆಂಪೇರಿದನು.* * * * ನಾರಾಯಣಾಸ್ತ್ರದ ಹಾಗೆ ಗಾಂಧಾರಿಯ ಕೋಪವೂ ಪಾಂಡವರ ತಲೆಯ ಮೇಲಿಂದ ಹಾದು ಹೋದಂತಾಯಿತು. ಇಲ್ಲಿಯೂ ಅವರನ್ನೂ ಕಾಪಾಡಿದ್ದು ಅವರ ವಿನೀತ ಭಾವವೇ. ಈಗ ಅವಳು ನಿಜವಾದ ಪ್ರೇಮದಿಂದ ಅವರನ್ನು ಆದರಿಸಿದಳು. ಅನಂತರ ಪಾಂಡವರು ಕುಂತಿಯನ್ನು ಭೇಟಿಯಾದರು. ಅವಳನ್ನು ನೋಡದೆ ಹದಿನಾಲ್ಕು ವರ್ಷಗಳಾಗಿದ್ದವು. ಕುಂತಿ ಅವರೆಲ್ಲರನ್ನೂ ಅಪ್ಪಿ ಆದರಿಸಿದಳು, ಮುಟ್ಟಿಮುಟ್ಟಿ ಆನಂದಪಟ್ಟಳು, ಯುದ್ಧದಲ್ಲಿ ಆಗಿದ್ದ ಗಾಯಗಳನ್ನು ಮೃದುವಾಗಿ ಸವರಿ ತಾಯಿಯ ಪ್ರೇಮಾನುಕಂಪದ ಔಷಧದಿಂದ ಅವುಗಳನ್ನು ವಾಸಿಮಾಡಿದಳು. ಮಹಾಯುದ್ಧ ಮುಗಿದ ಮೇಲೂ ನನ್ನೆಲ್ಲ ಮಕ್ಕಳೂ ಜೀವಸಹಿತ ಬಂದಿರುವರಲ್ಲ ಎಂದು ಆನಂದಬಾಷ್ಪವನ್ನು ಸುರಿಸಿದಳು. ದ್ರೌಪದಿಯನ್ನು ತಬ್ಬಿಕೊಂಡು ಸಮಾಧಾನ ಮಾಡಿದಳು. ದ್ರೌಪದಿಯು, ``ಅಮ್ಮ, ನಿನ್ನೆಲ್ಲಾ ಮೊಮ್ಮಕ್ಕಳೂ ಸತ್ತುಹೋಗಿರುವರು. ಅಭಿಮನ್ಯು ಸತ್ತ; ನನ್ನ ಐವರು ಮಕ್ಕಳು ಸತ್ತರು. ಅವರನ್ನು ನೀನು ನೋಡಿ ಎಷ್ಟೊ ಕಾಲವಾಗಿತ್ತಲ್ಲವೇ? ಇನ್ನೆಂದೂ ಅವರನ್ನು ನೀನು ನೋಡಲಾರೆ. ಈ ವಿಜಯ, ಈ ರಾಜ್ಯ, ಇವುಗಳಿಂದೇನು? ನನ್ನ ಮಡಿಲು ಬರಿದೋ ಬರಿದು ಅಮ್ಮ!" ಎಂದು ಕುಂತಿಯ ಮಡಿಲಲ್ಲಿ ತಲೆಯಿಟ್ಟು ಹಲುಬಿದಳು. ಕುಂತಿಯು ಅವಳನ್ನು ವಿಧವಿಧವಾಗಿ ಸಮಾಧಾನ ಮಾಡಿದಳು. ಅವರೆಲ್ಲರೂ ರಾಜನೊಡನೆ ರಣರಂಗದಲ್ಲಿ ಮುಂದೆ ನಡೆದರು. ಗಾಂಧಾರಿಯು ದ್ರೌಪದಿಯನ್ನು ಕುರಿತು, ``ಮಗಳೇ, ನನ್ನನ್ನು ನೋಡಿ ಸಮಾಧಾನ ಮಾಡಿಕೋ. ಇದೆಲ್ಲ ವಿಧಿಯ ಆಟ. ಲೋಕದ ಪ್ರಳಯ ಹತ್ತಿರವಾಗಿದೆ. ವಿದುರ ಇದನ್ನು ಬಹು ಹಿಂದೆಯೇ ಹೇಳಿದ್ದ; ಕೃಷ್ಣ ಹಸ್ತಿನಾಪುರಕ್ಕೆ ಬಂದಾಗ ಎಚ್ಚರಿಸಿದ್ದ. ವಿಧಿಯ ಕೈಗೊಂಬೆಯಾಗಿರುವ ಮನುಷ್ಯ ಕರುಡನೂ ಕಿವುಡನೂ ಆಗುತ್ತಾನೆ. ಆಗಬೇಕಾದದ್ದಾಯಿತು, ಇನ್ನು ಅತ್ತು ಫಲವೇನು? ಮಗು, ನಿನ್ನ ಮಕ್ಕಳಿಗಾಗಿ ದುಃಖಿಸಬೇಡ. ಅವರು ಸ್ವರ್ಗವನ್ನು ಸೇರಿ ಸುಖವಾಗಿರುವರು. ನಿನ್ನ ಹಾಗೆಯೇ ನಾನೂ ನನ್ನೆಲ್ಲ ಮಕ್ಕಳನ್ನೂ ಕಳೆದುಕೊಂಡಿರುವೆ. ಈಗ ಯಾರು ಯಾರನ್ನು ಸಮಾಧಾನಮಾಡಬೇಕು? ಕುರುವಂಶವೇ ನಿರ್ನಾಮವಾಗಿಹೋಯಿತು" ಎಂದಳು. ರಣರಂಗದಲ್ಲಿ ಅವರು ಮುಂದೆ ನಡೆದರು. ಅವಳ ತಪಸ್ಸಿನ ಫಲವಾಗಿ ಗಾಂಧಾರಿಗೆ ಎಲ್ಲವೂ ದಿವ್ಯದೃಷ್ಟಿಯಿಂದ ಕಾಣುತ್ತಿತ್ತು. ಭೀಕರ ದುರಂತ ದುಃಖಗಳ ದೃಶ್ಯ ದೂರದಿಂದಲೇ ಕಾಣಿಸುತ್ತಿತ್ತು. ಯೋಧರ ಹೆಂಡಂದಿರು, ತಾಯಂದಿರು, ದೇಹಗಳ ಮೇಲೆ ಬಿದ್ದು ಬಿದ್ದು ಭೋರೆಂದು ಅಳುತ್ತಿದ್ದರು. ಧೃತರಾಷ್ಟನು ಮುಂದೆ ಮುಂದೆ ಹೋಗುತ್ತಿದ್ದನು. ಗಾಂಧಾರಿಯು ಕೃಷ್ಣನೊಂದಿಗೆ ಮಾತನಾಡುತ್ತ, ತನ್ನ ಮಕ್ಕಳ ಶರೀರಗಳನ್ನು, ಅಳುತ್ತಿರುವ ತನ್ನ ಸೊಸೆಯರನ್ನು ತೋರಿಸುತ್ತ, ದುರ್ಯೋಧನನಿರುವ ಸ್ಥಳಕ್ಕೆ ಬಂದಳು. ಅಲ್ಲಿ ದುಃಖವನ್ನು ತಡೆಯಲಾರದೆ ಮೂರ್ಛೆಹೋದಳು. ಎಚ್ಚೆತ್ತು ಪುನಃ ಮೂರ್ಛೆಹೋದಳು. ಅತ್ತು ಅತ್ತು ಸುಸ್ತಾದಳು. ಮಗನ ಮುಖವನ್ನು ನೇವರಿಸಿದಳು. ರಕ್ತಹರಿದು ಗಂಟುಕಟ್ಟಿಕೊಂಡಿದ್ದ ತಲೆಗೊದಲನ್ನು ಬಿಡಿಸಿ ತಿದ್ದಿದಳು. ಕೃಷ್ಣನು ಸುಮ್ಮನೆ ನೋಡುತ್ತಿದ್ದನು. ದುರ್ಯೋಧನನ ಹೆಂಡತಿಯಂತೂ ಗಂಡನ ಹಾಗು ಮಗನ ದೇಹದ ನಡುವೆ ಕುಳಿತು ಯಾರಿಗಾಗಿ ಅಳಬೇಕೆಂದು ತೋರದೆ ಒದ್ದಾಡುತ್ತಿದ್ದಳು. ಉತ್ತರೆಯು ಅಭಿಮನ್ಯುವಿನ ದೇಹದ ಮೇಲೆ ಬಿದ್ದು ಗೋಳಾಡುತ್ತಿದ್ದಳು. ಅವರ ಮದುವೆಯಾಗಿ ಕೇವಲ ಆರು ತಿಂಗಳಾಗಿತ್ತು. ರಾಧೇಯನ ಹೆಂಡತಿ, ಶಲ್ಯನ ಹೆಂಡಂದಿರು. ಎಲ್ಲಿ ನೋಡಿದರೂ ಅಳು. ಗಾಂಧಾರಿಯ ಕೃಷ್ಣನಿಗೆ ಇಂಥ ಎಷ್ಟೋ ದೃಶ್ಯಗಳನ್ನು ತೋರಿಸಿದಳು.ಇದ್ದಕ್ಕಿದ್ದಂತೆ ಗಾಂಧಾರಿಯ ಕೋಪ ಉಲ್ಬಣವಾಯಿತು. ``ಕೃಷ್ಣ, ಇದೆಲ್ಲ ನೀನು ಉದಾಸೀನನಾಗಿದ್ದುದರ ಫಲ. ನೀನು ಇಚ್ಛಿಸಿದ್ದರೆ ಇಷ್ಟೆಲ್ಲ ಆಗದಂತೆ ತಡೆಯಬಹುದಾಗಿತ್ತು. ನೀನು ನಿಷ್ಪಕ್ಷಪಾತನಾಗಿ ಇದ್ದಿದ್ದರೆ, ಮತ್ತು ಪ್ರಯತ್ನಪಟ್ಟಿದ್ದರೆ, ಕೌರವ ಪಾಂಡವರ ನಡುವಣ ದ್ವೇಷವನ್ನು ಇಲ್ಲದ ಹಾಗೆ ಮಾಡಬಹುದಾಗಿತ್ತು, ಈ ಸರ್ವನಾಶವನ್ನು ತಡೆಯಬಹುದಾಗಿತ್ತು. ನನ್ನ ತಪಸ್ಸಿನ ಫಲವೇನಾದರೂ ಇದ್ದರೆ, ಅದನ್ನು ಬಳಸಿ ಕುರುವಂಶದ ನಾಶಕ್ಕೆ ಕಾರಣನಾದ ನಿನ್ನನ್ನು ಶಪಿಸುತ್ತೇನೆ. ದಾಯಾದಿಮತ್ಸರದಿಂದ ಕುರುವಂಶವು ನಿರ್ನಾಮವಾದಂತೆಯೇ, ಇಂದಿಗೆ ಮೂವತ್ತಾರು ವರ್ಷಗಳ ನಂತರ, ನಿಮ್ಮ ವೃಷ್ಣಿವಂಶವೂ ತನ್ನಿಂದ ತಾನೇ ದಾಯಾದಿಗಳ ನಡುವಣ ಹೋರಾಟದಿಂದ ನಾಶವಾಗಲಿ. ಇಲ್ಲಿ ಈಗ ಹೆಂಗಸರು ಹೇಗೆ ಅಳುತ್ತಿರುವರೋ ಹಾಗೆಯೇ ನಿಮ್ಮ ಹೆಂಗಸರೂ ಕಣ್ಣೀರು ಸುರಿಸಲಿ. ಇದು ಗಾಂಧಾರಿಯ ಶಾಪ" ಎಂದಳು.ಕಷ್ಣನು ನಕ್ಕು ``ಅಮ್ಮ, ವೃಷ್ಣಿವಂಶವನ್ನು ನಾಶಮಾಡಬಲ್ಲವನು ನಾನೊಬ್ಬ ಮಾತ್ರ ಎಂಬುದು ನನಗೆ ಗೊತ್ತು. ಹೊರಗಿನ ಯಾರೂ ಅವರನ್ನು ಸೋಲಿಸಲಾರರು; ಅವರವರೇ ಹೊಡೆದಾಡಿ ಸಾಯಬೇಕು. ನಿನ್ನ ಶಾಪವು ನನ್ನ ಸಮಸ್ಯೆಯನ್ನು ಹಗುರಾಗಿಸಿದೆ. ಸಂತೋಷ. ಅಮ್ಮ, ವೃಷ್ಣಿವಂಶನಾಶದ ಕೆಲಸದಲ್ಲಿ ನಿನ್ನ ಶಾಪದ ಬೆಂಬಲನ್ನಿತ್ತುದಕ್ಕಾಗಿ ನಾನು ಕೃತಜ್ಞ. ಅದು ನಮಗೆ ಆಶೀರ್ವಾದ ಎಂತಲೇ ಹೇಳಬೇಕು. ಈ ಶಾಪದಿಂದ ನಿನ್ನ ಕೋಪವು ಈಗ ಹೊರಬಿದ್ದಿದೆಯಲ್ಲವೆ? ಇನ್ನು ನೀನು ಯುಧಿಷ್ಠಿರನ ಮೇಲೆ ಸಿಟ್ಟು ಮಾಡಬಾರದು. ನಾನು ಪಾಂಡವರಿಗಾಗಿ ಏನನ್ನು ಮಾಡಲೂ ಸಿದ್ಧ. ನನ್ನ ಮನೆಯೇ ಸರ್ವನಾಶವಾಗಿ ಅವರು ಉಳಿಯುವುದಾದರೆ, ಅದಕ್ಕೂ ನಾನು ಸಿದ್ಧ. ಅಮ್ಮ, ನಾನು ಮತ್ತೊಮ್ಮೆ ಹೇಳುತ್ತಿದ್ದೇನೆ, ಪಾಂಡವರೇ ನನ್ನ ಜೀವದ ಜೀವ" ಎಂದನು. ಇದನ್ನೆಲ್ಲವನ್ನು ಕೇಳುತ್ತಿದ್ದ ಪಾಂಡವರು, ವೃಷ್ಣಿವಂಶಕ್ಕೂ ಇದೇ ಗತಿ ಕಾದಿದೆ ಎಂದು ತಿಳಿದು ಭಯಪಟ್ಟುಹೋದರು. ಆದರೆ ಕೃಷ್ಣನು ಇದನ್ನೆಲ್ಲವನ್ನೂ ನಗುನಗುತ್ತಲೇ ಹೇಳುತ್ತಿರುವನು! ತಮ್ಮ ಬಾಳ್ವೆಗಾಗಿ ಅದಣ್ಣವನು ಮಾಡುವನು! ಕೃಷ್ಣನ ಪ್ರೇಮದೆದುರು ತಾವು ತುಂಬ ಚಿಕ್ಕವರು ಎಂದು ಅವರಿಗೆ ಅನಿಸಿತು.ಕೃಷ್ಣನು ಗಾಂಧಾರಿಯನ್ನು ಕುರಿತು,``ಅಮ್ಮ, ನಿನ್ನ ಧರ್ಮಬುದ್ಧಿ ಜಾಗೃತವಾಗಲಿ. ಈ ದುಃಖ ನಿನಗೆ ಒಳ್ಳೆಯದಲ್ಲ. ಇದೆಲ್ಲವೂ ಆಗಿದ್ದು ನಿನ್ನಿಂದಲೇ ಹೊರತು ನನ್ನಿಂದಲ್ಲ. ನಿನಗೆ ದುರ್ಯೋಧನನ ಮೇಲೆ ಅತಿಶಯ ಪ್ರೀತಿ. ಅವನ ಅಹಂಕಾರವನ್ನು ಪ್ರಾರಂಭದಲ್ಲಿಯೇ ನೀನು ಮೊಟಕುಗೊಳಿಸಬೇಕಾಗಿತ್ತು. ನಿನ್ನ ತಮ್ಮ ಶಕುನಿ ಎಂಥವನೆಂದು ನಿನಗೆ ಗೊತ್ತು. ಅವನನ್ನು ಮನೆಯೊಳಗೆ ಬಿಟ್ಟುಕೊಂಡೆಯಲ್ಲ! ಈ ಔದಾಸೀನ್ಯ ನಿನ್ನದೇ ಹೊರತು ನನ್ನದಲ್ಲ. ಪಾಪದಲ್ಲಿಯೇ ಬೆಳೆಯುತ್ತ ಹೋದ ದುರ್ಯೋಧನನಿಗೆ ಪ್ರೋತ್ಸಾಹವಿತ್ತವರಾರು? ಅವನು ಪಾಂಡವರನ್ನು ಹಿಂಸಿಸತೊಡಗಿದಾಗ ಆಸ್ಥಾನದ ಹಿರಿಯರು, ನೀನು, ನಿಮಗೆ ಸಂಬಂಧವಿಲ್ಲದಂತೆ ಇದ್ದುಬಿಟ್ಟಿರಿ. ನಿಮ್ಮ ಈ ಉದಾಸೀನತೆಯನ್ನು ಈಗ ನನ್ನ ತಲೆಗೆ ಕಟ್ಟುತ್ತಿರುವಿರಿ. ನಾನು ಹಸ್ತಿನಾಪುರಕ್ಕೆ ಬಂದಾಗ ನೀನು ಇದ್ದೆಯಲ್ಲವೆ? ದುರ್ಯೋಧನನ ಪಾಂಡವದ್ವೇಷವನ್ನು ಬಿಡಿಸಲು ನಾನೆಷ್ಟು ಪ್ರಯತ್ನಮಾಡಿದೆ ಎಂಬುದು ನಿನಗೆ ತಿಳಿಯದೆ? ಆದರೂ ಔದಾಸೀನ್ಯದ ದೋಷವನ್ನು ನನ್ನ ಮೇಲೆ ಹೊರಿಸುತ್ತಿರುವೆಯಲ್ಲ? ಇದು ಸಲ್ಲದು ತಾಯಿ! ಅರಗಿನ ಮನೆಯ ಸಮಾಚಾರ ನಿನಗೆ ಗೊತ್ತಿರಲಿಲ್ಲವೆ? ಆ ಪಾಪದಿಂದ ನಿನ್ನ ಮಗನನ್ನು ನೀನು ತಡೆದು ಶಿಕ್ಷಿಸಬಹುದಿತ್ತಲ್ಲ! ನೀನೂ ನಿನ್ನ ಗಂಡನೂ ದುರ್ಯೋಧನನನ್ನು ಹಾಳುಮಾಡಿದಿರಿ; ಈಗ ಲೋಕವೆಲ್ಲ ಅವನಿಂದಾಗಿ ನಾಶವಾದಾಗ, ದೋಷವನ್ನು ನನ್ನ ಮೇಲೆ ಹೇರುತ್ತಿರುವಿರಿ.

``ಪುತ್ರವ್ಯಾಮೋಹದಿಂದ ನಿಮ್ಮಿಬ್ಬರ ದೃಷ್ಟಿ ಮಂಜಾಗಿತ್ತು. ಧೃತರಾಷ್ಟ್ರನಂತೂ ಕುರುಡ; ಆದರೆ ಧರ್ಮವಂತಳೂ ಕುಲೀನೆಯೂ ಆದ ನೀನು ನಿನ್ನ ಕಣ್ಣೆದುರಿಗೇ ಅನ್ಯಾಯವನ್ನು ಬೆಳೆಯಲು ಬಿಡಬಾರದಾಗಿತ್ತು. ಕೌರವನಾಶದಿಂದ ನನಗೇನೂ ದುಃಖವಿಲ್ಲ; ಅವರ ನಾಶವನ್ನು ಅವರೇ ತಂದುಕೊಂದರು. ನಿನ್ನ ಮಗ ಮಾಡಿದ ಪಾಪಕ್ಕೆ ಅವನಿಗೆ ಭೀಕರ ನರಕ ಪ್ರಾಪ್ತವಾಗಬೇಕಾಗಿತ್ತು; ಸಾವಿನಲ್ಲೂ ಪಾಂಡವರನ್ನು ವಂಚಿಸಿ ಅವನು ಸ್ವರ್ಗಕ್ಕೆ ಹೋದ. ಆದರೆ ಅದರಿಂದ ನಿನಗೆ ಸಂತೋಷವಾಗುತ್ತದೆ ಎಂದು ನನಗೂ ಸಂತೋಷ. ಅವನು ಸ್ವರ್ಗಕ್ಕೆ ಹೋದದ್ದು ನಿನ್ನ ಒಳ್ಳೆಯತನ ಹಾಗೂ ತಪಸ್ಸಿನಿಂದ. ಆದ್ದರಿಂದ, ಸ್ವರ್ಗದಲ್ಲಿರುವ ಮಕ್ಕಳ ಬಗ್ಗೆ ದುಃಖಪಡಬೇಡ. ನಾನು ವಿನಯವಾಗಿ ಕೇಳಿಕೊಳ್ಳುತ್ತೇನೆ, ಅದನ್ನು ತ್ಯಜಿಸಿಬಿಡು ತಾಯಿ! ದುಃಖದಿಂದ ಧರ್ಮ ಮರೆಯುತ್ತಿದೆ; ಅದರಿಂದಾಗಿಯೇ ನನ್ನನ್ನು ಬೈಯ್ಯುತ್ತಿದ್ದೀಯೆ. ಧೃತರಾಷ್ಟ್ರ ಹೀಗೆಂದಿದ್ದರೆ ನನ್ನಗೆ ಆಶ್ಚರ್ಯವಾಗುತ್ತಿರಲಿಲ್ಲ. ಆದರೆ ನೀನು? ಅಮ್ಮ, ನೀನು ಸತ್ಯವನ್ನು ಎದುರಿಸಬಲ್ಲವಳು. ಎಲ್ಲಿ, ದುಃಖವನ್ನು ಬಿಟ್ಟುಬಿಡು" ಎಂದನು. ಕೃಷ್ಣನ ಈ ನೇರ ನುಡಿಗಳ ನಂತರ ಗಾಂಧಾರಿ ಒಂದೂ ಮಾತನಾಡಲಿಲ್ಲ.* * * * ರಣರಂಗದಲ್ಲಿ ಸತ್ತು ಮಲಗಿರುವ ವೀರರಿಗೆಲ್ಲ ಕರ್ಮಾಂತರಗಳನ್ನು ಮಾಡಲು ಅಗತ್ಯ ಕ್ರಮಗಳನ್ನು ಧೃತರಾಷ್ಟ್ರನ ಆಣತಿಯಂತೆ ಧೌಮ್ಯ, ವಿದುರ, ಸಂಜಯರುಗಳು ಕೈಕೊಂಡರು. ಎಲ್ಲವೂ ಬೇಗಬೇಗನೆ ಮುಗಿದವು. ಧೃತರಾಷ್ಟ್ರ ಮತ್ತಿತರರೊಡನೆ ಯುಧಿಷ್ಠಿರನು, ಗಾಂಧಾರಿ ಕುಂತಿ ದ್ರೌಪದಿಯರೊಡಗೂಡಿ,ಸತ್ತವರಿಗಾಗಿ ತರ್ಪಣವನ್ನು ಬಿಡಲು ಗಂಗಾನದೀತೀರದ ಕಡೆಗೆ ಹೊರಟನು. ಎಲ್ಲರೂ ವಸ್ತ್ರಾಭರಣಗಳನ್ನು ತೆಗೆದಿಟ್ಟು ಮಡಿಯನ್ನುಟ್ಟು ಬರಿಗಾಲಿನಲ್ಲಿ ನಡೆದರು. ರಾಜಮನೆತನದ ದುಃಖೀಜನರ ಗುಂಪು ಹೀಗೆ ಸಾಮಾನ್ಯರಂತೆ ಹೊರಟಿತು.ಕುಂತಿಯ ಸ್ಥಿತಿ ದಯನೀಯವಾಗಿತ್ತು. ತನ್ನ ಮಗನೇ ಆದ ಅರ್ಜುನನು ಮೂರು ದಿನಗಳ ಹಿಂದೆ ರಾಧೇಯನನ್ನು ಕೊಂದಿದ್ದನು. ಪಾಂಡವ ಪಾಳೆಯದಲ್ಲಿ ಹಬ್ಬವಾಚರಿಸಿದ್ದರು. ಅದನ್ನು ಸಂಜಯ ಧೃತರಾಷ್ಟ್ರನಿಗೆ ಹೇಳುತ್ತಿದ್ದಾಗ, ಅಲ್ಲಿದ್ದ ತಾನೂ ಕೇಳಿ ತಿಳಿದಿದ್ದಳು. ಅವಳ ಹೃದಯವು ದುಃಖದಿಂದ ವಿದೀರ್ಣವಾಯಿತು. ಯಾರೊಡನೆಯಾದರೂ ಹೇಳಿಕೊಳ್ಳುವಂತೆಯೊ ಇಲ್ಲ. ಮೌನವಾಗಿ ಸಹಿಸಿದ್ದಳು. ಇಂದು ರಣರಂಗದಲ್ಲಿ ತನ್ನ ಚೊಚ್ಚಲು ಮಗನ ಶರೀರವನ್ನು ನೋಡಿದಳು. ತಲೆತಿರುಗಿ ಬೀಳುತ್ತಿದ್ದುದನ್ನು ಕಷ್ಟಪಟ್ಟು ನಿಯಂತ್ರಿಸಿಕೊಡಳು. ಕೃಷ್ಣನು ಎಲ್ಲವನ್ನು ನೋಡುತ್ತಿದನು. ರಾಧೇಯನ ಹೆಂಡತಿ ಅವನ ಶರೀರದ ಮೇಲೆ ಬಿದ್ದು ಅಳುತ್ತಿದ್ದುದನ್ನು ನೋಡಿಯೂ ಸುಮ್ಮನಿರಬೇಕಾಯಿತು. ಈಗ, ಎಲ್ಲ ರೊಡನೆ ತಾನೂ ಗತಿಸಿದವರಿಗೆ ತರ್ಪಣ ಕೊಡುವುದಕ್ಕಾಗಿ ಹೋಗುತ್ತಿರುವಳು. ವರ್ಷಗಳ ಹಿಂದೆ ಇದೇ ಗಂಗೆಯಲ್ಲಿಯೇ ಮಗುವನ್ನು ಮರದ ತೊಟ್ಟಿಲಿನಲ್ಲಿಟ್ಟು ತೇಲಿಬಿಟ್ಟವಳಲ್ಲವೆ ತಾನು? ಗಂಗೆ ಆ ದಿನ ಹೇಗೆ ಹರಿಯುತ್ತಿದ್ದಳೋ ಇಂದೂ ಹಾಗೆಯೇ ಶಾಂತವಾಗಿ ಹರಿಯುತ್ತಿರುವಳು. ನೆನ್ನೆ ಮೊನ್ನೆಯಂತೆ ಭಾಸವಾಗುತ್ತಿದೆಯಲ್ಲವೆ? ಕುಂತಿಯು ಎಲ್ಲರೂ ತರ್ಪಣ ಬಿಡುತ್ತಿರುವುದನ್ನು ನೋಡಿದಳು. ರಾಧೇಯನಿಗೆ ತರ್ಪಣ ಬಿಡುವವರು ಯಾರೂ ಇಲ್ಲ; ಮಕ್ಕಳೆಲ್ಲ ಸತ್ತಿರುವರು. ತಾನು ಅವನನ್ನು ಗಂಗೆಯಲ್ಲಿ ತೇಲಿಬಿಟ್ಟ ದಿನದಂತೆಯೇ ಇಂದೂ ಅವನು ತಬ್ಬಲಿ, ಅನಾಥ. ಕುಂತಿಗೆ ದುಃಖವನ್ನು ತಾಳಿಕೊಳ್ಳಲಾರದೆ ಹೃದಯ ಒಡೆಯುವಂತಾಯಿತು. ಅಯ್ಯೋ, ತನ್ನ ಮಗುವಿಗೆ ಎಂಥ ಅನ್ಯಾಯ ಮಾಡಿಬಿಟ್ಟೆ! ಕುಂತಿ ಸೆರಗು ಕಟ್ಟಿ, ಮೈಯನ್ನು ಸೆಟೆಸಿ, ತುಟಿ ಕಚ್ಚಿ ಹಿಡಿದಳು. ತನ್ನ ಮಗುವಿಗೆ ತಾನು ಇಷ್ಟಾದರೂ ಮಾಡಬೇಕು ಎಂದುಕೊಂಡವಳೇ ಗಟ್ಟಿಮನಸ್ಸಿನಿಂದ ಯುಧಿಷ್ಠಿರನಿದ್ದಲ್ಲಿಗೆ ಭದ್ರವಾಗಿ ಹೆಜ್ಜೆಯಿಡುತ್ತ ನಡೆದಳು.ಯುಧಿಷ್ಠಿರನು ಆಗತಾನೆ ದ್ರೌಪದಿಯ ಮಕ್ಕಳಿಗೂ ಮತ್ತಿತರರಿಗೂ ತರ್ಪಣ ಕೊಟ್ಟು ಮುಗಿಸಿದ್ದನು. ಅರ್ಜುನ ಅಳುತ್ತಳುತ್ತ ಅಭಿಮನ್ಯುವಿಗೆ ತರ್ಪಣ ಕೊಟ್ಟಿದ್ದನು. ಈಗ ಕುಂತಿ ಯುಧಿಷ್ಠಿರನ ಬೆಣ್ಣ ಮೇಲೆ ಕೈಯಿಟ್ಟಳು. ಅವನು ತಿರುಗಿ ನೋಡಿದರೆ ತನ್ನ ತಾಯಿ! ``ಏನಮ್ಮ, ಏನು ಬೇಕು? ಏಕೆ ಕರೆದೆ"? ಎಂದು ಕೇಳಿದನು. ಕುಂತಿ ವ್ಯಕ್ತವಾಗಿ ಅಳು ಹೊರಬರದಿರುವಂತೆ ಕಷ್ಟಪಟ್ಟು ಉಗುಳು ನುಂಗಿದಳು. ``ನೀನು ಇನ್ನೂ ಒಬ್ಬನಿಗೆ ತರ್ಪಣ ಕೊಡಬೇಕಾಗಿದೆಯಪ್ಪ, ಮಗನೇ!" ಎಂದಳು. ಯುಧಿಷ್ಠಿರನು ಅಚ್ಚರಿಯಿಂದ ಅಮ್ಮನನ್ನು ನೋಡಿದನು. ಕಣ್ಣೀರು ತುಳುಕಿ ಬೀಳುವುದನ್ನು ಕಷ್ಟಪಟ್ಟು ತಡೆಯುತ್ತಿರುವ ಕೆಂಪಾದ ಕಣ್ಣುಗಳು. ಅಲ್ಲಿದ್ದವರೆಲ್ಲ ತಾಯಿ ಮಗನ ನಡುವೆ ಏನು ನಡೆಯುತ್ತಿದೆ ಎಂದು ನೋಡುತ್ತಿದ್ದರು. ಯುಧಿಷ್ಠಿರನ ತಮ್ಮಂದಿರ ಮುಖದಲ್ಲಿ ಈ ಇನ್ನೊಬ್ಬ ಯಾರು ಎಂಬ ಅಚ್ಚರಿ ಮಡುಗಟ್ಟಿತು. ಸಂಗತಿಯನ್ನು ತಿಳಿದಿದ್ದ ಏಕಮಾತ್ರನಾದ ಕೃಷ್ಣನು ಸಹಾನುಭೂತಿ ತುಂಬಿದ ಕಣ್ಣುಗಳಿಂದ ಸುಮ್ಮನೆ ನೊಡುತ್ತಿದ್ದನು. ಕುಂತಿಯು ಇದುವರೆಗೂ ಗುಟ್ಟನ್ನು ಉಳಿಸಿಕೊಂಡು ಬಂದಿದ್ದಳು; ಯುದ್ಧದ ಸಮಯದಲ್ಲಿಯೂ ಬಿಟ್ಟುಕೊಟ್ಟಿರಲಿಲ್ಲ; ರಾಧೇಯ ಸತ್ತಾಗಲೂ ಯುಧಿಷ್ಠಿರ ಎದೆಯೊಡೆಯಬಹುದೆಂದು, ಯುದ್ಧವನ್ನು ತ್ಯಜಿಸಿ ಕಾಡಿಗೆ ಹೋಗಿಬಿಡಬಹುದೆಂದು, ಸುಮ್ಮನೆ ಉಳಿದಿದ್ದಳು. ಕುಂತಿ ಈಗ ಮಾಡುತ್ತಿರುವುದೇ ಸರಿ ಎಂದು ಕೊಂಡನು, ಕೇಳುತ್ತಿದ್ದ ಕೃಷ್ಣ.

ಯುಧಿಷ್ಠಿರನು, ``ಇನ್ನೂ ಒಬ್ಬ! ನನಗರ್ಥವಾಗುತ್ತಿಲ್ಲ. ಎಲ್ಲರಿಗು ನೆನಪಿನಿಂದ ಕೊಟ್ಟಿದ್ದೇನೆ. ನನಗಾಗಿ ಸತ್ತವರನ್ನು ಮರೆಯುವಷ್ಟು ಕೃತಘ್ನ ನಾನಲ್ಲ. ಇನ್ನೂ ಯಾರಿಗಮ್ಮ ನಾನು ತರ್ಪಣಕೊಡಬೇಕು?" ಎಂದು ಕೇಳಲು, ಕುಂತಿ, ``ರಾಧೇಯನಪ್ಪ. ಅವನಿಗೂ ನೀನು ತರ್ಪಣ ಕೊಡಬೇಕು" ಎಂದಳು. ಯುಧಿಷ್ಠಿರನಿಗೆ ಆಶ್ಚರ್ಯವಾಯಿತು. ``ರಾಧೇಯನೆ? ಅವನಿಗೇಕಮ್ಮ ನಾನು ತರ್ಪಣ ಕೊಡಬೇಕು? ಅವನು ಸೂತಪುತ್ರ. ಅವನಿಗೆ ಅವನ ಅಪ್ಪ ಅಧಿರಥ ಕರ್ಮಗಳನ್ನು ಮಾಡಬೇಕು. ನಾನು ಕ್ಷತ್ರಿಯ. ಸೂತನಿಗೆ ತರ್ಪಣ ಕೊಡು ಎಂದು ಏಕೆ ಹೇಳುತ್ತಿದ್ದೀ? ಅದರಲ್ಲೂ ನನ್ನ ಶತ್ರುವಾದ ರಾಧೇಯನಿಗೆ! ಏಕಮ್ಮಾ, ಏಕೆ ನಾನು ಅವನಿಗೆ ತರ್ಪಣ ಕೊಡಬೇಕು? ನಿನಗೆ ಅಷ್ಟೊಂದು ದುಃಖವೇಕೆ? ಹೇಳಮ್ಮ'' ಎಂದನು. ಹೃದಯದಾಳದ ವೇದನೆಯಿಂದ ಅರೆಕ್ಷಣಮೂಕಳಾದಂತಿದ್ದ ಕುಂತಿ ದೀರ್ಘವಾಗಿ ಉಸಿರೆಳೆದುಕೊಂಡು, ``ಯುಧಿಷ್ಠಿರ, ರಾಧೇಯ ಕ್ಷತ್ರಿಯನಪ್ಪ, ಸೂತಪುತ್ರನಲ್ಲ! ಅದಕ್ಕಾಗಿಯೇ ನೀನು ತರ್ಪಣ ಕೊಡಬೇಕು'' ಎಂದಳು. ``ಸೂತಪುತ್ರನಲ್ಲ! ರಾಧೇಯ ಸೂತಪುತ್ರನಲ್ಲ!'' ಎಂದು ಅಲ್ಲಿದ್ದ ಎಲ್ಲರೂ ಏಕಕಾಲಕ್ಕೆ ಕೂಗಿದರು. ಎಲ್ಲರಿಗೂ ಅಚ್ಚರಿಯೋ ಅಚ್ಚರಿ. ಯುಧಿಷ್ಠಿರನು ``ಅಮ್ಮ. ನಿನಗೆ ರಾಧೇಯನ ಬಗ್ಗೆ ಏನೂ ತಿಳಿಯದು! ಅವನು ಕ್ಷತ್ರಿಯನೆಂದು ಹೇಗೆ ಹೇಳುತ್ತೀ? ಎಂದರೆ ನಿನಗೆ ಅವನು ಯಾರೆಂದು ಗೊತ್ತಿರಬೇಕು. ನಾನೇಕೆ ರಾಧೇಯನಿಗೆ ತರ್ಪಣ ಕೊಡಬೇಕು? ನಿನ್ನ ಮಾತಿನಿಂದ ನನಗೆ ದಿಗ್ಭ್ರಮೆಯುಂಟಾಗಿದೆ. ಹೇಳಮ್ಮ, ರಾಧೇಯನ ತಂದೆ ಯಾರು?'' ಎಣ್ಣಲು, ಕುಂತಿಯು, ``ರಾಧೇಯ ಸೂರ್ಯದೇವನ ಮಗ. ಅವನ ತಾಯಿ ಚಿಕ್ಕ ಹುಡುಗಿಯಾಗಿದ್ದಾಗ ಸೂರ್ಯನು ಈ ಮಗುವನ್ನು ಅವಳಿಗೆ ಕೊಟ್ಟ. ಮಗು ಕವಚಕುಂಡಲಗಳೂಂದಿಗೆ ಹುಟ್ಟಿತು. ಮಗುವಿನ ತಾಯಿ ಲೋಕ ಏನೆನ್ನುವುದೋ ಎಂದು ಹೆದರಿದಳು. ನೋಡು ಅವಳಿನ್ನೂ ತಂದೆಯ ಮನೆಯಲ್ಲಿದ್ದ ಕನ್ಯೆ. ಆದ್ದರಿಂದ ಗುಟ್ಟನ್ನು ಹೃದಯದಲ್ಲೇ ಹುದುಗಿಸಿಟ್ಟುಕೊಂಡಳು. ಮಗುವನ್ನು ಮರದ ತೊಟ್ಟಿಲೊಂದರಲ್ಲಿಟ್ಟು ಇದೇ ಗಂಗೆಯಲ್ಲೇ ತೇಲಿಬಿಟ್ಟುಬಿಟ್ಟಳು. ಅಧಿರಥನಿಗೆ ಮಗು ಸಿಕ್ಕಿತು. ಅದನ್ನು ಅವನು ಹೆಂಡತಿ ರಾಧೆಗೆ ಕೊಟ್ಟ. ಅದರಿಂದಾಗಿಯೇ ಅವನಿಗೆ ರಾಧೇಯನೆಂದು ಹೆಸರಾಯಿತು. ಅದನೂ ಬೇರಾವ ಹೆಸರನ್ನೂ ಇಷ್ಟಪಡಲಿಲ್ಲ. ಆ ಮಗುವಿನ ತಾಯಿ ಒಬ್ಬ ರಾಜಕುಮಾರಿ. ಅವಳು ತನ್ನ ಚೊಚ್ಚಲ ಮಗುವಿಗೆ ಅರಿಯದೆ ಈ ಅನ್ಯಾಯವನ್ನು ಮಾಡಿಬಿಟ್ಟಳು. ಅವಳಿಗೆ ಇನ್ನೂ ಆನೇಕ ಮಕ್ಕಳಿದ್ದರೂ, ಇದರಿಂದಾಗಿ ಅವಳ ಹೃದಯ ಬರಿದೋ ಬರಿದು'' ಎಂದಳು.ಯುಧಿಷ್ಠಿರನ ಜೊತೆಗೆ ಉಳಿದೆಲ್ಲರೂ ಕುಂತಿಯ ಮಾತನ್ನು ಕೇಳುತ್ತಿದ್ದರು. ಅಚ್ಚರಿಯ ಕಥೆ ಉಳಿದೆಲ್ಲವನ್ನೂ ಮರೆಸಿಬಿಟ್ಟಿತ್ತು. ಯುಧಿಷ್ಠಿರನ್ನು, ``ಅಮ್ಮ, ರಾಧೇಯನ ತಾಯಿ ಯಾರು? ಹುಟ್ಟಿದೊಡನೆ ತನ್ನ ಮಗುವನ್ನು ಗಂಗೆಯಲ್ಲಿ ತೇಲಿಬಿಟ್ಟ ಆ ಹೃದಯಹೀನ ಹೆಂಗಸು ಯಾರು? ಆ ಮಹಾನುಭಾವನ ಜೀವನವನ್ನು ಹಾಳುಮಾಡಿದ ಆ ಹೆಂಗಸು ಯಾರು? ವಿವರಗಳನ್ನೆಲ್ಲ ಹೇಳುತ್ತಿರುವ ನಿನಗೆ ಅವಳು ಗೊತ್ತಿರಲೇಬೇಕು. ಯಾರಮ್ಮ ಅವಳು?'' ಎಂದು ಕೇಳಿದನು.ಎಲ್ಲರ ದೃಷ್ಟಿಯೂ ಕುಂತಿಯ ಕಡೆಗೆ ತಿರುಗಿತು. ಕುಂತಿಯೂ ಎಲ್ಲರನ್ನೂ ನೋಡಿ, ಕೃಷ್ಣನ ಕಡೆಗೆ ತಿರುಗಿದಳು. ಕೃಷ್ಣನ ಮುಖವು ದಯೆಯೇ ಮೂರ್ತಿವೆತ್ತಂತಿತ್ತು. ಕುಂತಿ ನೇರವಾಗಿ ಯುಧಿಷ್ಠಿರನ ಮುಖವನ್ನೇ ನೋಡುತ್ತ, ``ಆ ಹೆಂಗಸು ಇನ್ನೂ ಬದುಕಿರುವಳು. ಅವಳೇ ನಾನು; ರಾಧೇಯ ನನ್ನ ಚೊಚ್ಚಲ ಮಗ'' ಎಂದು ಹೇಳಿ ಮೂರ್ಛೆಹೋದಳು.ಧನುರ್ವಿದ್ಯಾಪ್ರದರ್ಶನದ ಸ್ವರ್ಧೆಯ ದಿನ ರಾಧೇಯನನ್ನು ನೋಡಿ ಮೂರ್ಛೆಬಿದ್ದಾಗ ಮಾಡಿದಂತೆಯೇ ಈಗಲೂ ವಿದರನು ಓಡಿಬಂದು ಕುಂತಿಗೆ ಶೈತ್ಯೋಪಚಾರ ಮಾಡಿದನು. ಯುಧಿಷ್ಠಿರನಿಗೆ ಯೋಚಿಸಲೇ ಆಗುತ್ತಿಲ್ಲ. ಎಲ್ಲರನ್ನೂ ಸುಮ್ಮನೆ ನೋಡುತ್ತ, ``ರಾಧೇಯ ನನ್ನ ಅಣ್ಣ; ನಾವು ಅವನನ್ನು ಕೊಂದೆವು!'' ಎಂದು ಅರ್ಜುನನ ಕಡೆಗೊಮ್ಮೆ ನೋಡಿದನು. ಅರ್ಜುನನು ಓಡಿಬಂದು, ``ಅಣ್ಣ, ಏನು ಮಾಡಿಬಿಟ್ಟೆ! ನಾನೇ ನನ್ನಣ್ಣನನ್ನು ಕೊಂದುಬಿಟ್ಟೆ! ಇನ್ನು ಮುಂದೆ ನಾನು ಹೇಗೆತಾನೆ ಬುದುಕಿರಲಿ?'' ಎಂದು, ನಿಲ್ಲಲಾರದೆ ಕುಳಿತು, ವಿಲವಿಲನೆ ಒದ್ದಾಡುತ್ತ ಮೈಮೇಲೆ ಪ್ರಜ್ಞೆಯಿಲ್ಲದವನಂತೆ, ``ಅಯ್ಯೋ ದೇವರೆ! ನನ್ನನನ್ನೇ ಕೊಂದು ಹೆಗ್ಗಳಿಕೆ ಹೇಳಿಕೊಳ್ಳುತ್ತಿದ್ದೆನಲ್ಲಾ!'' ಎನ್ನುತ್ತ ಮೂರ್ಛೆಹೋದನು. ಕೃಷ್ಣ ಇವರಿಬ್ಬರ ಬಳಿಗೆ ಓಡಿಬಂದನು. ಯುಧಿಷ್ಠಿರನ ದುಃಖವಂತೂ ವರ್ಣನಾತೀತವಾಗಿತ್ತು, ಯಾರಿಗಾದರೂ ಹೆದರಿಕೆ ಹುಟ್ಟಿಸುವಂತಿತ್ತು: ಕಣ್ಣುಗಳು ಕೆಂಪಡರಿ, ಭಾವೋದ್ರೇಕವನ್ನು ತಾಳಲಾರದೆ ಗಡಗಡನೆ ನಡುಗುತ್ತಿದ್ದನು. ಇದ್ದಕ್ಕಿದ್ದಂತೆ ದೊಡ್ಡದಾಗಿಬಿಟ್ಟ ಸಣ್ಣ ಮಗುವಿನಂತೆ ಕಾಣಿಸುತ್ತಿದ್ದ ಭೀಮನೂ ಅರ್ಜುನನ ಬಳಿ ಬಂದು ಕುಸಿದು ಕುಳಿತನು. ನಕುಲಸಹದೇವರೂ ಮೂಕರಂತಾಗಿದ್ದರು.ಭೀಮನಿಗೆ ಆ ಸ್ಪರ್ಧೆಯ ದಿನ ನೆನಪಾಯಿತು. ರಾಧೇಯನು ಸೂತಪುತ್ರ ಎಂದು ಗೊತ್ತಾದ ಕ್ಷಣವೇ ತಾನು, ``ಕೇಳು ಸೂತಪುತ್ರ, ನೀನು ಅರ್ಜುನನಿಂದ ಕೊಲ್ಲಲ್ಪಡಲೂ ಯೋಗ್ಯನಲ್ಲ. ಕ್ಷತ್ರಿಯನಂತೆ ಬಿಲ್ಲು ಹಿಡಿಯುವ ಯೋಗ್ಯತೆಯಾದರೂ ನಿನಗಿದೆಯೆ? ಹೋಗು, ನಿನ್ನ ಯೋಗ್ಯತೆಗನುಗುಣವಾದ ಬಾರುಕೋಲನ್ನು ಹಿಡಿದುಕೋ!'' ಎಂದಿದ್ದನು. ದುರ್ಯೋಧನನು ಆಗ ಹೇಳಿದ್ದ ಮಾತೂ ನೆನಪಾಯಿತು. ``ಈ ಯುವಕನ ಮಟ್ಟಿಗೆ, ನಿನ್ನ ಅಜ್ಞಾನವನ್ನು ಕಂಡು ನನಗೆ ಕನಿಕರವಾಗುತ್ತಿದೆ. ಕ್ಷತ್ರಿಯನಲ್ಲಿ ಮಾತ್ರವೇ ಕಂಡುಬರುವ ಗುಣಗಳು ಅವನಲ್ಲಿ ಢಾಳವಾಗಿ ಇರುವುದನ್ನು ಕಾಣೆಯಾ? ಹುಲಿಯ ಮರಿ ಎಂದಾದರೂ ಹುಲ್ಲೆಯ ಹೊಟ್ಟೆಯಲ್ಲಿ ಹುಟ್ಟುವುದೆ? ಇದನು ಕ್ಷತ್ರಿಯನೇ ಇರಬೇಕೆಂದು ನಿನಗೆ ಅನ್ನಿಸುವುದಿಲ್ಲವೆ? ನಾನೀಗ ಇವನಿಗೆ ಅಂಗರಾಜ್ಯಾಭಿಷೇಕವನ್ನು ಮಾಡುತ್ತೇನೆ. ಆದರೆ ಇವನು ಇಷ್ಟಕ್ಕೆ ಮಾತ್ರವಲ್ಲ, ಇಡೀ ಲೋಕಕ್ಕೇ ರಾಜನಾಗುವ ಅರ್ಹತೆಯುಳ್ಳವನೆಂದು ನನಗೆ ಗೊತ್ತು. ಮಹಾನ್ ಆಗಲೆಂದೇ ಹುಟ್ಟಿದವನು ಇವನು. ಅವನ ಯೋಗ್ಯತೆಯನ್ನರಿಯುವ ಯೋಗ್ಯತೆ ನಿನಗಿಲ್ಲ ಅಷ್ಟೆ!'' ದುರ್ಯೋಧನನ ಮಾತುಗಳು ಭೀಮನನ್ನು ಸುಡುತೊಡಗಿದವು. ಹೌದು, ರಾಧೇಯನ ಯೋಗ್ಯತೆಯನ್ನರಿತುಕೊಳ್ಳುವ ಯೋಗ್ಯತೆಯೇ ತಮಗೆ ಇರಲಿಲ್ಲ. ಭೀಮನು ದೇಹವು ಚೂರುಚೂರಾಗುತ್ತಿದೆಯೇನೋ ಎಂಬಂತೆ ಅಳತೊಡಗಿದನು. ಒಂದೂ ಮಾತನ್ನು ಆಡಲಿಲ್ಲ. ಕೇವಲ ಮೂಕವೇದನೆಯೊಂದನ್ನು ಬಿಟ್ಟು ಅಲ್ಲಿ ಮತ್ತೇನೂ ಇರಲಿಲ್ಲ. ನಕುಲನಿಗೆ ತಾನು ರಾಧೇಯನೊಂದಿಗೆ ಮಾಡಿದ ದ್ವಂದ್ವಯುದ್ಧದ ನೆನಪಾಯಿತು. ರಾಧೇಯನೆಂದಿದ್ದನು: ``ಒಂದು ದಿನ ನೀನು ನನ್ನೊಡನೆ ಮಾಡಿದ ಈ ದ್ವಂದ್ವಯುದ್ಧವನ್ನು ನೆನೆದು ಹೆಮ್ಮೆಪಡುತ್ತೀ. ರಾಧೇಯ ನನ್ನನ್ನು ಅಪಮಾನಿಸಿದ ಎಂದೂ ಹೆಮ್ಮೆಪಡುತ್ತೀ.'' ಹೌದು, ಅದೇ ಅಲ್ಲವೆ ನೆನಪಿನ ಐಶ್ವರ್ಯ, ಈಗ ಉಳಿದಿರುವುದು! ಸಹದೇವನಿಗೂ ರಾಧೇಯನೊಂದಿಗೆ ಮಾಡಿದ ಯುದ್ಧವನ್ನು ಮರೆಯಲಾಗಲಿಲ್ಲ. ಅವನ ತುಟಿಯ ತಿರಸ್ಕಾರದ ಕೊಂಕು, ಆ ಶೌರ್ಯದ ಹೆಮ್ಮೆ! ಆ ಧೀರಗಂಭೀರ ನಿಲುವು! ಸೂತಪುತ್ರನೇ ಅವನು! ಪಾಂಡವರೆಲ್ಲರೂ ದುಃಖಾಂಬುಧಿಯಲ್ಲಿ ಮುಳುಗಿಹೋದರು.ಶೈತ್ಯೋಪಚಾರದ ಫಲವಾಗಿ ಕುಂತಿ ಎಚ್ಚರಗೊಂಡಳು. ಪ್ರಥಮಬಾರಿಗೆ ಯುಧಿಷ್ಠಿರ ತಾಯಿಗೆ ಗಮನವನ್ನೇ ಕೊಡಲಿಲ್ಲ. ತಮಗೂ ರಾಧೇಯನಿಗೂ ಇಷ್ಟೊಂದು ಅನ್ಯಾಯ ಮಾಡಿದ ಅವಳ ಕಡೆಗೆ ನೋಡುವುದೂ ಬೇಡವೆನಿಸಿತು. ಕೃಷ್ಣಾರ್ಜುನರ ಬಳಿ ಹೋಗಿ ಕುಳಿತ. ರಾಧೇಯ ಸತ್ತದಿನದ ಒಂದೊಂದು ಘಳಿಗೆಯೂ ನೆನಪಾಯಿತು. ರಾಧೇಯನ್ನು ತಾನು ಸೂತಪುತ್ರ ಎಂದು ಕರೆದದ್ದು ನೆನಪಾಯಿತು. ಈಗ ತಾಯಿಯ ಕಡೆಗೆ ತಿರುಗಿ, ``ರಾಧೇಯನಿಗೆ ತಾನಾರೆಂದು ಗೊತ್ತಿತ್ತೆ?'' ಎಂದು ಕೇಳಿದ. ಅದಕ್ಕೆ ಕೃಷ್ಣನು, ``ಹೌದು'' ಎಂದು ಉತ್ತರಿಸಿದಾಗ ಅಚ್ಚರಿಯಿಂದ ಪಾಂಡವರೆಲ್ಲರೂ ಕೃಷ್ಣನ ಕಡೆಗೆ ತಿರುಗಿದರು. ಯುದಿಷ್ಠಿರನು, ``ನಿನಗೂ ಗೊತ್ತಿತ್ತೆ ಕೃಷ್ಣ?'' ಎಂದು ಕೇಳಿದ್ದಕ್ಕೂ, ``ಹೌದು'' ಎಂದೇ ಉತ್ತರ ಬಂದಿತು. ಇದಾದ ಮೇಲೆ ಯಾರೊಬ್ಬರಿಗೂ ಉಸಿರೆತ್ತಲಾಗಲಿಲ್ಲ ರಾಧೇಯನಿಗೆ ತಾನು ಸೂತಪುತ್ರನಲ್ಲ. ಕುಂತಿ ಸೂರ್ಯರ ಮಗ ಎಂದು ಗೊತ್ತಿತ್ತು; ಆದರೂ ತಮ್ಮಂದಿರು ತನ್ನನ್ನು ಸೂತಪುತ್ರನೆಂದು ಹಾಸ್ಯಮಾಡಲು ಅವಕಾಶಕೊಟ್ಟಿದ್ದ! ವ್ಯರ್ಥ ಕ್ರೋಧದಿಂದ ಯುಧಿಷ್ಠಿರ ಹಣೆ ಹಣೆ ಚೆಚ್ಚಿಕೊಂಡ. ``ಅಯ್ಯೋ, ರಾಧೇಯ ಸತ್ತನೆಂದು ಕೇಳಿದ ಕೂಡಲೆ ಅವನು ಸತ್ತಿರುವುದು ಹೌದೋ ಅಲ್ಲವೋ ಎಂದು ನೋಡಿಬರಲು ರಣರಂಗಕ್ಕೆ ಹೋದೆ! ಅವನು ನಿಜವಾಗಿಯೂ ಸತ್ತಿರುವುದನ್ನು ಕಂಡು ಖುಷಿಪಟ್ಟೆ! ಅಮ್ಮಾ, ನಮ್ಮನ್ನು ಅಷ್ಟೊಂದು ಪ್ರೀತಿಸುತ್ತಿದ್ದ ನೀನು ನಮಗೆ ಹೇಗೆತಾನೆ ಇಂಥಾದ್ದು ಮಾಡಿಬಿಟ್ಟೆ?''ಈಗ ಯುಧಿಷ್ಠಿರ ನೇರವಾಗಿ ತಾಯಿಯ ಮುಖ ನೋಡಿದ. ಅವಳು ದುಃಖವನ್ನು ನೋಡಿದ ಅವನ ಹೃದಯ ತುಂಬಿ ಬಂತು. ಮುಂದೆ ಒಂದೂ ಮಾತನಾಡಲಿಲ್ಲ. ಅವಳು ಅನುಭವಿಸಿದ್ದು ಸಾಕು. ಯುಧಿಷ್ಠಿರನು ಗಂಗಾನದಿಗಿಳಿದ. ಕಣ್ಣೀರಿಂದಲೀ ತರ್ಪಣ ಕೊಡುತ್ತಿರುವಂತೆ ಕಾಣಿಸಿದ. ಈ ಹೊಸ ದುಃಖದಲ್ಲಿ ಅಭಿಮನ್ಯುವಿನ ಮರಣ, ದ್ರೌಪದಿಯ ಮಕ್ಕಳ ಮರಣ ಎಲ್ಲವೂ ಹಿಮ್ಮೆಟ್ಟಿದವು. ಅಣ್ಣನನ್ನೇ ಕೊಂದಿದ್ದರು ಅವರು. ಗಂಗಾತೀರದಿಂದ ಮರಳಿ ಬರುತ್ತಿದ್ದ ಪಾಂಡವರ ಮನಸ್ಸಿನಲ್ಲಿದ್ದದ್ದು ಇದೊಂದೇ ಯೋಚನೆ. ತರ್ಪಣ ಕೊಟ್ಟಾದಮೇಲೆ ಇಲ್ಲರೂ ನಗರಕ್ಕೆ ಹಿಂದಿರುಗಿದರು. ಗಾಂಧಾರಿ, ಕುಂತಿ, ದ್ರೌಪದಿ ಎಲ್ಲರೂ ಮಕ್ಕಳನ್ನು ಕಳೆದುಕೊಂಡವರೇ. ಜೊತೆಗೆ ಬಂದ ಕೃಷ್ಣನು ಅವರ ದುಃಖಕ್ಕೆ ಅವರನ್ನು ಬಿಟ್ಟು, ಸಾತ್ಯಕಿಯೊಂದಿಗೆ ನಾಲ್ಕು ಹೆಜ್ಜೆ ಹಿಂದೆಯೇ ನಡೆದುಕೊಂಡು ಬಂದ.* * * * ಪರಿವಿಡಿ